117 ಋಷಿರ್ಸಂವಾದಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ರಾಜಧರ್ಮ ಪರ್ವ

ಅಧ್ಯಾಯ 1171

ಸಾರ

ಋಷಿ ಮತ್ತು ನಾಯಿಯ ಕಥೆ (1-44).

12117001 2ಭೀಷ್ಮ ಉವಾಚ। 12117001a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್।
12117001c ನಿದರ್ಶನಕರಂ ಲೋಕೇ ಸಜ್ಜನಾಚರಿತಂ ಸದಾ।।

ಭೀಷ್ಮನು ಹೇಳಿದನು: “ಲೋಕದಲ್ಲಿ ಸಜ್ಜನರ ಆಚರಣೆಗಳ ಕುರಿತು ನಿದರ್ಶನಕರವಾದ ಈ ಪುರಾತನ ಇತಿಹಾಸವನ್ನು ಉದಾಹರಿಸುತ್ತಾರೆ.

12117002a ಅಸ್ಯೈವಾರ್ಥಸ್ಯ ಸದೃಶಂ ಯಚ್ಚ್ರುತಂ ಮೇ ತಪೋವನೇ।
12117002c ಜಾಮದಗ್ನ್ಯಸ್ಯ ರಾಮಸ್ಯ ಯದುಕ್ತಮೃಷಿಸತ್ತಮೈಃ।।

ಇದೇ ಅರ್ಥವನ್ನು ನೀಡುವ ವಿಷಯವನ್ನು ತಪೋವನದಲ್ಲಿ ಋಷಿಸತ್ತಮರು ಜಾಮದಗ್ನಿ ರಾಮನಿಗೆ ಹೇಳಿದುದನ್ನು ನಾನು ಕೇಳಿದ್ದೆ.

12117003a ವನೇ ಮಹತಿ ಕಸ್ಮಿಂಶ್ಚಿದಮನುಷ್ಯನಿಷೇವಿತೇ।
12117003c ಋಷಿರ್ಮೂಲಫಲಾಹಾರೋ ನಿಯತೋ ನಿಯತೇಂದ್ರಿಯಃ।।

ಒಂದು ಮಹಾ ನಿರ್ಜನ ವನದಲ್ಲಿ ಮೂಲಫಲಗಳನ್ನೇ ಸೇವಿಸುತ್ತಿದ್ದ ನಿಯತಾತ್ಮ ನಿಯತೇಂದ್ರಿಯ ಋಷಿಯೋರ್ವನಿದ್ದನು.

12117004a ದೀಕ್ಷಾದಮಪರಃ ಶಾಂತಃ ಸ್ವಾಧ್ಯಾಯಪರಮಃ ಶುಚಿಃ।
12117004c ಉಪವಾಸವಿಶುದ್ಧಾತ್ಮಾ ಸತತಂ ಸತ್ಪಥೇ ಸ್ಥಿತಃ।।

ಉತ್ತಮ ದೀಕ್ಷೆಯನ್ನು ಕೈಗೊಂಡಿದ್ದ ಆ ಶಾಂತ, ಸ್ವಾಧ್ಯಾಯಪರ, ಪರಮ ಶುಚಿ, ವಿಶುದ್ಧಾತ್ಮಾ, ಉಪವಾಸವ್ರತವನ್ನು ಕೈಗೊಂಡಿದ್ದ ಅವನು ಸತತವೂ ಸತ್ಪಥದಲ್ಲಿಯೇ ಸ್ಥಿತನಾಗಿದ್ದನು.

12117005a ತಸ್ಯ ಸಂದೃಶ್ಯ ಸದ್ಭಾವಮುಪವಿಷ್ಟಸ್ಯ ಧೀಮತಃ।
12117005c ಸರ್ವಸತ್ತ್ವಾಃ ಸಮೀಪಸ್ಥಾ ಭವಂತಿ ವನಚಾರಿಣಃ।।

ಸದ್ಭಾವದಿಂದ ಅಲ್ಲಿ ಕುಳಿತಿದ್ದ ಧೀಮತನನ್ನು ಕಂಡು ವನಚಾರಿಣೀ ಸರ್ವ ಸತ್ತ್ವಗಳೂ ಅವನ ಸಮೀಪಕ್ಕೆ ಬರತೊಡಗಿದವು.

12117006a ಸಿಂಹವ್ಯಾಘ್ರಾಃ ಸಶರಭಾ ಮತ್ತಾಶ್ಚೈವ ಮಹಾಗಜಾಃ।
12117006c ದ್ವೀಪಿನಃ ಖಡ್ಗಭಲ್ಲೂಕಾ ಯೇ ಚಾನ್ಯೇ ಭೀಮದರ್ಶನಾಃ।।
12117007a ತೇ ಸುಖಪ್ರಶ್ನದಾಃ ಸರ್ವೇ ಭವಂತಿ ಕ್ಷತಜಾಶನಾಃ।
12117007c ತಸ್ಯರ್ಷೇಃ ಶಿಷ್ಯವಚ್ಚೈವ ನ್ಯಗ್ಭೂತಾಃ ಪ್ರಿಯಕಾರಿಣಃ।।

ಸಿಂಹ-ವ್ಯಾಘ್ರಗಳೂ, ಶರಭಗಳೂ, ಮದಿಸಿದ ಮಹಾಗಜಗಳೂ, ಚಿರತೆಗಳು, ಖಡ್ಗಮೃಗಗಳು, ಭಲ್ಲೂಕಗಳು ಮತ್ತು ಅನ್ಯ ಭೀಮದರ್ಶನ ಮೃಗಗಳು ಎಲ್ಲವೂ ಮಾಂಸಾಹಾರಿಗಳಾಗಿದ್ದರೂ ಆ ಋಷಿಯ ಬಳಿಬಂದು ಶಿಷ್ಯರಂತೆ ತಲೆತಗ್ಗಿಸಿ ಅವನು ಸುಖವಾಗಿದ್ದೀರಾ ಎಂದು ಕೇಳಿದುದಕ್ಕೆ ಸುಖದಿಂದಿದ್ದೇವೆ ಎಂದು ಹೇಳಿದವು.

12117008a ದತ್ತ್ವಾ ಚ ತೇ ಸುಖಪ್ರಶ್ನಂ ಸರ್ವೇ ಯಾಂತಿ ಯಥಾಗತಮ್।
12117008c ಗ್ರಾಮ್ಯಸ್ತ್ವೇಕಃ ಪಶುಸ್ತತ್ರ ನಾಜಹಾಚ್ಚ್ವಾ ಮಹಾಮುನಿಮ್।।

ಅವನ ಕುಶಲ ಪ್ರಶ್ನೆಗೆ ಉತ್ತರವನ್ನಿತ್ತು ಅವೆಲ್ಲವೂ ಎಲ್ಲಿಂದ ಬಂದಿದ್ದವೋ ಅಲ್ಲಿಗೆ ಹೋದವು. ಒಂದು ಗ್ರಾಮ್ಯ ಪ್ರಾಣಿಯು ಮಾತ್ರ ಆ ಮಹಾಮುನಿಯನ್ನು ಬಿಟ್ಟು ಹೋಗಲಿಲ್ಲ.

12117009a ಭಕ್ತೋಽನುರಕ್ತಃ ಸತತಮುಪವಾಸಕೃಶೋಽಬಲಃ।
12117009c ಫಲಮೂಲೋತ್ಕರಾಹಾರಃ ಶಾಂತಃ ಶಿಷ್ಟಾಕೃತಿರ್ಯಥಾ।।

ಅದು ಆ ಮುನಿಯ ಭಕ್ತನೂ ಅನುರಕ್ತನೂ ಆಗಿದ್ದುಕೊಂಡು, ಸತತವೂ ಫಲಮೂಲಗಳನ್ನು ಮಾತ್ರ ತಿಂದು ಉಪವಾಸಮಾಡುತ್ತಿತ್ತು. ಉಪವಾಸದಿಂದ ಕೃಶನೂ ಅಬಲನೂ ಆಗಿದ್ದ ಆ ಶಾಂತ ಪ್ರಾಣಿಯು ಶಿಷ್ಯನಂತೆಯೇ ನಡೆದುಕೊಳ್ಳುತ್ತಾ ಅಲ್ಲಿಯೇ ಉಳಿದುಕೊಂಡುಬಿಟ್ಟಿತು.

12117010a ತಸ್ಯರ್ಷೇರುಪವಿಷ್ಟಸ್ಯ ಪಾದಮೂಲೇ ಮಹಾಮುನೇಃ।
12117010c ಮನುಷ್ಯವದ್ಗತೋ ಭಾವಃ ಸ್ನೇಹಬದ್ಧೋಽಭವದ್ಭೃಶಮ್।।

ಆ ಮಹಾಮುನಿ ಋಷಿಯ ಪಾದಮೂಲದಲ್ಲಿ ಕುಳಿತುಕೊಂಡಿದ್ದ ಅದಕ್ಕೆ ತಾನೂ ಮನುಷ್ಯನೇ ಎಂಬ ಭಾವನೆಯು ಮೂಡಿತ್ತು ಮತ್ತು ಅದು ಅವನನ್ನು ಸ್ನೇಹಪಾಶದಿಂದ ಬಂಧಿಸಿಬಿಟ್ಟಿತು.

12117011a ತತೋಽಭ್ಯಯಾನ್ಮಹಾವೀರ್ಯೋ ದ್ವೀಪೀ ಕ್ಷತಜಭೋಜನಃ।
12117011c ಶ್ವಾರ್ಥಮತ್ಯಂತಸಂದುಷ್ಟಃ ಕ್ರೂರಃ ಕಾಲ ಇವಾಂತಕಃ।।
12117012a ಲೇಲಿಹ್ಯಮಾನಸ್ತೃಷಿತಃ ಪುಚ್ಚಾಸ್ಫೋಟನತತ್ಪರಃ।
12117012c ವ್ಯಾದಿತಾಸ್ಯಃ ಕ್ಷುಧಾಭಗ್ನಃ ಪ್ರಾರ್ಥಯಾನಸ್ತದಾಮಿಷಮ್।।

ಆಗ ಮಹಾವೀರ್ಯ ರಕ್ತಭೋಜೀ, ತನ್ನ ಸ್ವಾರ್ಥವನ್ನು ಸಾಧಿಸಿಕೊಳ್ಳುವುದರಲ್ಲಿಯೇ ಗುರಿಯಿಟ್ಟಿದ್ದ ಚಿರತೆಯೊಂದು ಕ್ರೂರ ಕಾಲ ಅಂತಕನಂತೆ ಬಾಯಾರಿ ಬಾಯಿಕಳೆದು ನಾಲಿಗೆಚಾಚಿ, ಬಾಲವನ್ನು ಹೊಡೆಯುತ್ತಾ, ತನ್ನ ಬಾಯಾರಿಕೆಯನ್ನು ತಣಿಸುವ ಆಮಿಷವನ್ನು ಬಯಸಿ ಆಕ್ರಮಣಮಾಡಿತು.

12117013a ತಂ ದೃಷ್ಟ್ವಾ ಕ್ರೂರಮಾಯಾಂತಂ ಜೀವಿತಾರ್ಥೀ ನರಾಧಿಪ।
12117013c ಪ್ರೋವಾಚ ಶ್ವಾ ಮುನಿಂ ತತ್ರ ಯತ್ತಚ್ಚೃಣು ಮಹಾಮತೇ।।

ನರಾಧಿಪ! ಮೇಲೇರಲು ಬರುತ್ತಿದ್ದ ಆ ಕ್ರೂರ ಪ್ರಾಣಿಯನ್ನು ನೋಡಿ ಜೀವಿತಾರ್ಥೀ ನಾಯಿಯು ಮುನಿಗೆ ಇದನ್ನು ಹೇಳಿತು. ಮಹಾಮತೇ! ಅದನ್ನು ಕೇಳು.

12117014a ಶ್ವಶತ್ರುರ್ಭಗವನ್ನತ್ರ ದ್ವೀಪೀ ಮಾಂ ಹಂತುಮಿಚ್ಚತಿ।
12117014c ತ್ವತ್ಪ್ರಸಾದಾದ್ಭಯಂ ನ ಸ್ಯಾತ್ತಸ್ಮಾನ್ಮಮ ಮಹಾಮುನೇ।।

“ಮಹಾಮುನೇ! ನಾಯಿಗಳಿಗೆ ಶತ್ರುವಾದ ಆ ಚಿರತೆಯು ನನ್ನನ್ನು ಕೊಲ್ಲಲು ಬಯಸುತ್ತಿದೆ. ನಿನ್ನ ದಯೆಯಿಂದ ನನಗೆ ಭಯವಾಗದಂತೆ ಮಾಡು.”

12117015 ಮುನಿರುವಾಚ।
12117015a ನ ಭಯಂ ದ್ವೀಪಿನಃ ಕಾರ್ಯಂ ಮೃತ್ಯುತಸ್ತೇ ಕಥಂ ಚನ।
12117015c ಏಷ ಶ್ವರೂಪರಹಿತೋ ದ್ವೀಪೀ ಭವಸಿ ಪುತ್ರಕ।।

ಮುನಿಯು ಹೇಳಿದನು: “ಈ ಚಿರತೆಯ ಮೇಲೆ ಭಯಪಡಬೇಡ! ಅದು ಎಂದೂ ನಿನ್ನ ಮೃತ್ಯುವಾಗಲಾರದು. ಪುತ್ರಕ! ನೀನೀಗಲೇ ಈ ನಾಯಿಯ ರೂಪವನ್ನು ಬಿಟ್ಟು ಚಿರತೆಯೇ ಆಗುವೆ!””

12117016 ಭೀಷ್ಮ ಉವಾಚ।
12117016a ತತಃ ಶ್ವಾ ದ್ವೀಪಿತಾಂ ನೀತೋ ಜಾಂಬೂನದನಿಭಾಕೃತಿಃ।
12117016c ಚಿತ್ರಾಂಗೋ ವಿಸ್ಫುರನ್ ಹೃಷ್ಟೋ ವನೇ ವಸತಿ ನಿರ್ಭಯಃ।।

ಭೀಷ್ಮನು ಹೇಳಿದನು: “ಆಗ ನಾಯಿಯು ಚಿರತೆಯಾಗಿ ಪರಿವರ್ತಿತಗೊಂಡಿತು. ಚಿನ್ನದಂತೆ ಥಳಥಳಿಸುವ ಆಕೃತಿಯಿದ್ದ ಆ ಚಿತ್ರಾಂಗ ಚಿರತೆಯು ಸಂತೋಷದಿಂದ ನಿರ್ಭಯವಾಗಿ ವನದಲ್ಲಿ ವಾಸಿಸತೊಡಗಿತು.

12117017a ತತೋಽಭ್ಯಯಾನ್ಮಹಾರೌದ್ರೋ ವ್ಯಾದಿತಾಸ್ಯಃ ಕ್ಷುಧಾನ್ವಿತಃ।
12117017c ದ್ವೀಪಿನಂ ಲೇಲಿಹದ್ವಕ್ತ್ರೋ ವ್ಯಾಘ್ರೋ ರುಧಿರಲಾಲಸಃ।।

ಆಗ ಬಾಯಾರಿಕೆಯಿಂದ ಬಳಲಿದ್ದ ಮಹಾರೌದ್ರ ವ್ಯಾಘ್ರವು ಆ ಚಿರತೆಯ ರಕ್ತವನ್ನು ಕುಡಿಯಲು ಬಯಸಿ ಬಾಯಿಕಳೆದು ಕಟವಾಯಿಗಳನ್ನು ನೆಕ್ಕುತ್ತಾ ಬಂದಿತು.

12117018a ವ್ಯಾಘ್ರಂ ದೃಷ್ಟ್ವಾ ಕ್ಷುಧಾಭಗ್ನಂ ದಂಷ್ಟ್ರಿಣಂ ವನಗೋಚರಮ್।
12117018c ದ್ವೀಪೀ ಜೀವಿತರಕ್ಷಾರ್ಥಮೃಷಿಂ ಶರಣಮೇಯಿವಾನ್।।

ಬಾಯಾರಿಕೆಯಿಂದ ಬಳಲಿದ್ದ ಕೋರೆದಾಡೆಗಳಿದ್ದ ಆ ವನಗೋಚರ ವ್ಯಾಘ್ರವನ್ನು ನೋಡಿ ಜೀವದ ರಕ್ಷಣಾರ್ಥವಾಗಿ ಆ ಚಿರತೆಯು ಋಷಿಯನ್ನು ಶರಣುಹೊಕ್ಕಿತು.

12117019a ತತಃ ಸಂವಾಸಜಂ ಸ್ನೇಹಮೃಷಿಣಾ ಕುರ್ವತಾ ಸದಾ।
12117019c ಸ ದ್ವೀಪೀ ವ್ಯಾಘ್ರತಾಂ ನೀತೋ ರಿಪುಭಿರ್ಬಲವತ್ತರಃ।
12117019e ತತೋ ದೃಷ್ಟ್ವಾ ಸ ಶಾರ್ದೂಲೋ ನಾಭ್ಯಹಂಸ್ತಂ ವಿಶಾಂ ಪತೇ।।

ಸಹವಾಸಜನಿತವಾದ ಉತ್ತಮ ಸ್ನೇಹವನ್ನು ಉಳಿಸಿಕೊಳ್ಳಲು ಆ ಋಷಿಯು ಚಿರತೆಯನ್ನು ಅದರ ಶತ್ರುವಿಗಿಂತಲೂ ಬಲಿಷ್ಠವಾದ ವ್ಯಾಘ್ರವನ್ನಾಗಿ ಪರಿವರ್ತಿಸಿದನು. ವಿಶಾಂಪತೇ! ಅದನ್ನು ನೋಡಿದ ಹುಲಿಯು ಹುಲಿಯಾದ ಚಿರತೆಯನ್ನು ಕೊಲ್ಲಲಿಲ್ಲ.

12117020a ಸ ತು ಶ್ವಾ ವ್ಯಾಘ್ರತಾಂ ಪ್ರಾಪ್ಯ ಬಲವಾನ್ ಪಿಶಿತಾಶನಃ।
12117020c ನ ಮೂಲಫಲಭೋಗೇಷು ಸ್ಪೃಹಾಮಪ್ಯಕರೋತ್ತದಾ।।

ವ್ಯಾಘ್ರತ್ವವನ್ನು ಪಡೆದ ಆ ನಾಯಿಯು ಬಲಶಾಲೀ ಮಾಂಸಾಹಾರಿಯಾಯಿತು. ಫಲಮೂಲಗಳನ್ನು ತಿನ್ನುವುದರಲ್ಲಿ ಅದರ ಆಸಕ್ತಿಯು ಕಡಿಮೆಯಾಯಿತು.

12117021a ಯಥಾ ಮೃಗಪತಿರ್ನಿತ್ಯಂ ಪ್ರಕಾಂಕ್ಷತಿ ವನೌಕಸಃ।
12117021c ತಥೈವ ಸ ಮಹಾರಾಜ ವ್ಯಾಘ್ರಃ ಸಮಭವತ್ತದಾ।।

ಮಹಾರಾಜ! ಮೃಗಪತಿ ಸಿಂಹವು ನಿತ್ಯವೂ ವನಚರ ಪ್ರಾಣಿಗಳ ಮಾಂಸವನ್ನು ತಿನ್ನಲು ಬಯಸುವಂತೆ ಹುಲಿಯಾದ ನಾಯಿಯೂ ಮಾಂಸಕ್ಕೆ ಹಾತೊರೆಯತೊಡಗಿತು.

12117022a ವ್ಯಾಘ್ರಸ್ತೂಟಜಮೂಲಸ್ಥಸ್ತೃಪ್ತಃ ಸುಪ್ತೋ ಹತೈರ್ಮೃಗೈಃ।
12117022c ನಾಗಶ್ಚಾಗಾತ್ತಮುದ್ದೇಶಂ ಮತ್ತೋ ಮೇಘ ಇವೋತ್ಥಿತಃ।।

ಆ ವ್ಯಾಘ್ರವು ತಾನು ಕೊಂದ ಮೃಗಗಳನ್ನು ತಿಂದು ತೃಪ್ತನಾಗಿ ಆಶ್ರಮದ ಸಮೀಪದಲ್ಲಿ ಮಲಗಿದ್ದಾಗ ಅಲ್ಲಿಗೆ ಮೇಲೆದ್ದು ಬಂದ ಮೇಘದೋಪಾದಿಯಲ್ಲಿ ಮದಿಸಿದ ಆನೆಯೊಂದು ಆಗಮಿಸಿತು.

12117023a ಪ್ರಭಿನ್ನಕರಟಃ ಪ್ರಾಂಶುಃ ಪದ್ಮೀ ವಿತತಮಸ್ತಕಃ।
12117023c ಸುವಿಷಾಣೋ ಮಹಾಕಾಯೋ ಮೇಘಗಂಭೀರನಿಸ್ವನಃ।।

ಅದರ ಗಂಡಸ್ಥಳದಿಂದ ಮದೋದಕವು ಸುರಿಯುತ್ತಿತ್ತು. ಅದರ ವಿಶಾಲ ಕುಂಭಸ್ಥಲದ ಮೇಲೆ ಕಮಲದ ಚಿಹ್ನೆಯಿತ್ತು. ಸುಂದರ ದಂತಗಳಿದ್ದ ಆ ಮಹಾಕಾಯವು ಮೇಘದಂತೆ ಗಂಭೀರವಾಗಿ ಘೀಂಗಕರಿಸುತ್ತಿತ್ತು.

12117024a ತಂ ದೃಷ್ಟ್ವಾ ಕುಂಜರಂ ಮತ್ತಮಾಯಾಂತಂ ಮದಗರ್ವಿತಮ್।
12117024c ವ್ಯಾಘ್ರೋ ಹಸ್ತಿಭಯಾತ್ತ್ರಸ್ತಸ್ತಮೃಷಿಂ ಶರಣಂ ಯಯೌ।।

ಮದಗರ್ವಿತನಾಗಿ ಮುಂದೆ ಬರುತ್ತಿದ್ದ ಆ ಮದಿಸಿದ ಆನೆಯನ್ನು ನೋಡಿ ವ್ಯಾಘ್ರವು ಆನೆಯ ಭಯದಿಂದ ನಡುಗುತ್ತಾ ಋಷಿಯ ಶರಣುಹೊಕ್ಕಿತು.

12117025a ತತೋಽನಯತ್ಕುಂಜರತಾಂ ತಂ ವ್ಯಾಘ್ರಮೃಷಿಸತ್ತಮಃ।
12117025c ಮಹಾಮೇಘೋಪಮಂ ದೃಷ್ಟ್ವಾ ತಂ ಸ ಭೀತೋಽಭವದ್ಗಜಃ।।

ಆಗ ಋಷಿಸತ್ತಮನು ಆ ವ್ಯಾಘ್ರಕ್ಕೆ ಕುಂಜರತೆಯನ್ನು ನೀಡಿದನು. ಮಹಾಮೇಘದಂತಿದ್ದ ಆ ಆನೆಯನ್ನು ನೋಡಿ, ಬಂದಿದ್ದ ಆನೆಯು ಭಯಗೊಂಡಿತು.

12117026a ತತಃ ಕಮಲಷಂಡಾನಿ ಶಲ್ಲಕೀಗಹನಾನಿ ಚ।
12117026c ವ್ಯಚರತ್ಸ ಮುದಾ ಯುಕ್ತಃ ಪದ್ಮರೇಣುವಿಭೂಷಿತಃ।।

ಅನಂತರ ಆನೆಯ ರೂಪದಲ್ಲಿದ್ದ ಆ ನಾಯಿಯು ಕಮಲಗಳ ಸಮೂಹಗಳಲ್ಲಿಯೂ ಗಹನ ಸಲ್ಲಕೀಲತೆಗಳ ಮಧ್ಯವೂ ನುಗ್ಗುತ್ತಾ ಕಮಲ ಪರಾಗದಿಂದ ವಿಭೂಷಿತವಾಗಿ ಮುದದಿಂದ ಸಂಚರಿಸುತ್ತಿತ್ತು.

12117027a ಕದಾ ಚಿದ್ರಮಮಾಣಸ್ಯ ಹಸ್ತಿನಃ ಸುಮುಖಂ ತದಾ।
12117027c ಋಷೇಸ್ತಸ್ಯೋಟಜಸ್ಥಸ್ಯ ಕಾಲೋಽಗಚ್ಚನ್ನಿಶಾನಿಶಮ್।।

ಒಮ್ಮೊಮ್ಮೆ ಆ ಸುಂದರ ಮುಖದ ಆನೆಯು ತಿರುಗಾಡುತ್ತಾ ಋಷಿಯ ಆಶ್ರಮದ ಬಳಿಯೂ ಬರುತ್ತಿತ್ತು. ಹೀಗೆ ಅನೇಕ ದಿನಗಳು ಕಳೆದುಹೋದವು.

12117028a ಅಥಾಜಗಾಮ ತಂ ದೇಶಂ ಕೇಸರೀ ಕೇಸರಾರುಣಃ।
12117028c ಗಿರಿಕಂದರಜೋ ಭೀಮಃ ಸಿಂಹೋ ನಾಗಕುಲಾಂತಕಃ।।

ಒಮ್ಮೆ ಆ ಪ್ರದೇಶಕ್ಕೆ ಎಣೆಗೆಂಪಿನ ಬಣ್ಣದ ಕೂದಲಿನ ಸಿಂಹವೊಂದು ಆಗಮಿಸಿತು. ಗಿರಿಕಂದರಗಳಲ್ಲಿ ಹುಟ್ಟಿದ್ದ ಆ ಭಯಂಕರ ಸಿಂಹವು ಆನೆಗಳ ಕುಲಗಳನ್ನೇ ನಾಶಪಡಿಸುವಂಥದ್ದಾಗಿತ್ತು.

12117029a ತಂ ದೃಷ್ಟ್ವಾ ಸಿಂಹಮಾಯಾಂತಂ ನಾಗಃ ಸಿಂಹಭಯಾಕುಲಃ।
12117029c ಋಷಿಂ ಶರಣಮಾಪೇದೇ ವೇಪಮಾನೋ ಭಯಾತುರಃ।।

ಮುಂದೆ ಬರುತ್ತಿದ್ದ ಆ ಸಿಂಹವನ್ನು ನೋಡಿ ಸಿಂಹಕ್ಕೆ ಹೆದರಿದ ಆನೆಯು ಭಯಾತುರನಾಗಿ ನಡುಗುತ್ತಾ ಋಷಿಯನ್ನು ಶರಣುಹೊಕ್ಕಿತು.

12117030a ತತಃ ಸ ಸಿಂಹತಾಂ ನೀತೋ ನಾಗೇಂದ್ರೋ ಮುನಿನಾ ತದಾ।
12117030c ವನ್ಯಂ ನಾಗಣಯತ್ಸಿಂಹಂ ತುಲ್ಯಜಾತಿಸಮನ್ವಯಾತ್।।

ಆಗ ಮುನಿಯು ಆನೆಗೆ ಸಿಂಹತ್ವವನ್ನು ನೀಡಿದನು. ತನ್ನ ಜಾತಿಯ ಸಿಂಹದಂತೆಯೇ ಆದ ಆ ಆನೆಯನ್ನು, ಬಂದಿದ್ದ ಸಿಂಹವು ಗಣನೆಗೇ ತೆಗೆದುಕೊಳ್ಳಲಿಲ್ಲ.

12117031a ದೃಷ್ಟ್ವಾ ಚ ಸೋಽನಶತ್ಸಿಂಹೋ ವನ್ಯೋ ಭೀಸನ್ನವಾಗ್ಬಲಃ।
12117031c ಸ ಚಾಶ್ರಮೇಽವಸತ್ಸಿಂಹಸ್ತಸ್ಮಿನ್ನೇವ ವನೇ ಸುಖೀ।।

ಅರಣ್ಯದ ಸಿಂಹವು ತನ್ನ ಎದುರಿಗಿದ್ದ ಸಿಂಹವನ್ನು ನೋಡಿ ಭಯಗೊಂಡು ಓಡಿ ಹೋಯಿತು. ಸಿಂಹದ ರೂಪದಲ್ಲಿದ್ದ ಆ ನಾಯಿಯು ಆಶ್ರಮದಲ್ಲಿಯೇ ವಾಸಮಾಡತೊಡಗಿತು.

12117032a ನ ತ್ವನ್ಯೇ ಕ್ಷುದ್ರಪಶವಸ್ತಪೋವನನಿವಾಸಿನಃ।
12117032c ವ್ಯದೃಶ್ಯಂತ ಭಯತ್ರಸ್ತಾ ಜೀವಿತಾಕಾಂಕ್ಷಿಣಃ ಸದಾ।।

ಜೀವವನ್ನು ಉಳಿಸಿಕೊಳ್ಳುವ ಇಚ್ಛೆಯಿದ್ದ ಮತ್ತು ಭಯಭೀತ ಕ್ಷುದ್ರ ಪಶುಗಳು ಆ ಸಿಂಹದ ಭಯದಿಂದ ಆಶ್ರಮದ ಸಮೀಪದಲ್ಲಿಯೂ ಸುಳಿದಾಡುತ್ತಿರಲಿಲ್ಲ.

12117033a ಕದಾ ಚಿತ್ಕಾಲಯೋಗೇನ ಸರ್ವಪ್ರಾಣಿವಿಹಿಂಸಕಃ।
12117033c ಬಲವಾನ್ ಕ್ಷತಜಾಹಾರೋ ನಾನಾಸತ್ತ್ವಭಯಂಕರಃ।।
12117034a ಅಷ್ಟಪಾದೂರ್ಧ್ವಚರಣಃ ಶರಭೋ ವನಗೋಚರಃ।
12117034c ತಂ ಸಿಂಹಂ ಹಂತುಮಾಗಚ್ಚನ್ಮುನೇಸ್ತಸ್ಯ ನಿವೇಶನಮ್।।

ಒಮ್ಮೆ ಕಾಲಯೋಗದಿಂದ ಸರ್ವಪ್ರಾಣಿಗಳನ್ನೂ ಹಿಂಸಿಸುವ, ಬಲಶಾಲೀ, ರಕ್ತವನ್ನು ಕುಡಿಯುವ, ನಾನಾಸತ್ತ್ವಭಯಂಕರ, ಎಂಟು ಕಾಲುಗಳಿದ್ದ, ಕಣ್ಣುಗಳು ಮೇಲ್ಮುಖವಾಗಿದ್ದ ವನಗೋಚರ ಶರಭವೊಂದು ಆ ಸಿಂಹವನ್ನು ಸಂಹರಿಸಲು ಮುನಿಯ ಆಶ್ರಮಕ್ಕೆ ಬಂದಿತು.

12117035a ತಂ ಮುನಿಃ ಶರಭಂ ಚಕ್ರೇ ಬಲೋತ್ಕಟಮರಿಂದಮ।
12117035c ತತಃ ಸ ಶರಭೋ ವನ್ಯೋ ಮುನೇಃ ಶರಭಮಗ್ರತಃ।
12117035e ದೃಷ್ಟ್ವಾ ಬಲಿನಮತ್ಯುಗ್ರಂ ದ್ರುತಂ ಸಂಪ್ರಾದ್ರವದ್ಭಯಾತ್।।

ಅರಿಂದಮ! ಆಗ ಮುನಿಯು ಆ ಸಿಂಹವನ್ನು ಬಲೋತ್ಕಟ ಶರಭವನ್ನಾಗಿ ಮಾಡಿದನು. ವನ್ಯ ಶರಭವು ಮುನಿಯ ಮುಂದಿದ್ದ ಬಲಶಾಲೀ ಅತ್ಯುಗ್ರ ಶರಭವನ್ನು ನೋಡಿ ಭಯದಿಂದ ಓಡಿಹೋಯಿತು.

12117036a ಸ ಏವಂ ಶರಭಸ್ಥಾನೇ ನ್ಯಸ್ತೋ ವೈ ಮುನಿನಾ ತದಾ।
12117036c ಮುನೇಃ ಪಾರ್ಶ್ವಗತೋ ನಿತ್ಯಂ ಶಾರಭ್ಯಂ ಸುಖಮಾಪ್ತವಾನ್।।

ಹಾಗೆ ಮುನಿಯಿಂದ ಶರಭಸ್ಥಾನದಲ್ಲಿರಿಸಲ್ಪಟ್ಟಿದ್ದ ಆ ನಾಯಿಯು ಶಾರಭ್ಯತ್ವವನ್ನು ಪಡೆದು ಮುನಿಯ ಬಳಿಯಲ್ಲಿಯೇ ವಾಸವಾಗಿದ್ದುಕೊಂಡಿತು.

12117037a ತತಃ ಶರಭಸಂತ್ರಸ್ತಾಃ ಸರ್ವೇ ಮೃಗಗಣಾ ವನಾತ್।
12117037c ದಿಶಃ ಸಂಪ್ರಾದ್ರವನ್ರಾಜನ್ ಭಯಾಜ್ಜೀವಿತಕಾಂಕ್ಷಿಣಃ।।

ರಾಜನ್! ಅಗ ಆ ಶರಭಕ್ಕೆ ಹೆದರಿದ ಸರ್ವ ಮೃಗಗಣಗಳೂ ಭಯದಿಂದ ಜೀವವನ್ನು ಉಳಿಸಿಕೊಳ್ಳಲು ಬಯಸಿ ದಿಕ್ಕುದಿಕ್ಕುಗಳಲ್ಲಿ ಓಡಿ ಹೋದವು.

12117038a ಶರಭೋಽಪ್ಯತಿಸಂದುಷ್ಟೋ ನಿತ್ಯಂ ಪ್ರಾಣಿವಧೇ ರತಃ।
12117038c ಫಲಮೂಲಾಶನಂ ಶಾಂತಂ ನೈಚ್ಚತ್ಸ ಪಿಶಿತಾಶನಃ।।

ನಿತ್ಯವೂ ಪ್ರಾಣಿವಧೆಯಲ್ಲಿಯೇ ನಿರತನಾಗಿ ಮಾಂಸಾಶಿಯಾಗಿದ್ದ ಆ ದುಷ್ಟ ಶರಭವು ಫಲಮೂಲಗಳನ್ನು ತಿನ್ನಲು ಇಚ್ಛಿಸುತ್ತಿರಲಿಲ್ಲ.

12117039a ತತೋ ರುಧಿರತರ್ಷೇಣ ಬಲಿನಾ ಶರಭೋಽನ್ವಿತಃ।
12117039c ಇಯೇಷ ತಂ ಮುನಿಂ ಹಂತುಮಕೃತಜ್ಞಃ ಶ್ವಯೋನಿಜಃ।।

ಆಗ ನಾಯಿಯಾಗಿ ಹುಟ್ಟಿದ್ದ ಆ ಬಲಶಾಲೀ ಶರಭವು ರಕ್ತದಾಹದಿಂದ ಪೀಡಿತನಾಗಿ ಕೃತಜ್ಞತೆಯಿಲ್ಲದೇ ಅದೇ ಮುನಿಯನ್ನು ಕೊಲ್ಲಲು ಬಯಸಿತು.

12117040a ತತಸ್ತೇನ ತಪಃಶಕ್ತ್ಯಾ ವಿದಿತೋ ಜ್ಞಾನಚಕ್ಷುಷಾ।
12117040c ವಿಜ್ಞಾಯ ಚ ಮಹಾಪ್ರಾಜ್ಞೋ ಮುನಿಃ ಶ್ವಾನಂ ತಮುಕ್ತವಾನ್।।

ಆಗ ತನ್ನ ತಪಃಶಕ್ತಿಯ ಜ್ಞಾನದೃಷ್ಟಿಯಿಂದ ಅದರ ಇಂಗಿತವನ್ನು ತಿಳಿದುಕೊಂಡ ಮಹಾಪ್ರಾಜ್ಞ ಮುನಿಯು ನಾಯಿಗೆ ಹೇಳಿದನು:

12117041a ಶ್ವಾ ತ್ವಂ ದ್ವೀಪಿತ್ವಮಾಪನ್ನೋ ದ್ವೀಪೀ ವ್ಯಾಘ್ರತ್ವಮಾಗತಃ।
12117041c ವ್ಯಾಘ್ರೋ ನಾಗೋ ಮದಪಟುರ್ನಾಗಃ ಸಿಂಹತ್ವಮಾಪ್ತವಾನ್।।

“ನಾಯಿಯಾಗಿದ್ದ ನೀನು ಚಿರತೆಯಾದೆ. ಚಿರತೆಯಾಗಿದ್ದವನು ಹುಲಿಯಾದೆ. ವ್ಯಾಘ್ರದಿಂದ ಆನೆಯಾದೆ ಮತ್ತು ಮದಿಸಿದ ಆನೆಯಾಗಿದ್ದವನು ಸಿಂಹತ್ವವನ್ನು ಪಡೆದುಕೊಂಡೆ.

12117042a ಸಿಂಹೋಽತಿಬಲಸಂಯುಕ್ತೋ ಭೂಯಃ ಶರಭತಾಂ ಗತಃ।
12117042c ಮಯಾ ಸ್ನೇಹಪರೀತೇನ ನ ವಿಮೃಷ್ಟಃ ಕುಲಾನ್ವಯಃ।।

ಅತಿಬಲಸಂಯುಕ್ತನಾದ ಸಿಂಹದಿಂದ ಪುನಃ ಶರಭನಾದೆ. ನೀಚ ಕುಲದಲ್ಲಿ ಹುಟ್ಟಿದ್ದರೂ ಸ್ನೇಹಬೆಳೆದುದರಿಂದ ನಿನ್ನನ್ನು ನಾನು ಪರಿತ್ಯಜಿಸಲಿಲ್ಲ.

12117043a ಯಸ್ಮಾದೇವಮಪಾಪಂ ಮಾಂ ಪಾಪ ಹಿಂಸಿತುಮಿಚ್ಚಸಿ।
12117043c ತಸ್ಮಾತ್ ಸ್ವಯೋನಿಮಾಪನ್ನಃ ಶ್ವೈವ ತ್ವಂ ಹಿ ಭವಿಷ್ಯಸಿ।।

ಯಾವುದೇ ರೀತಿಯ ಪಾಪಭಾವವೂ ಇಲ್ಲದ ನನ್ನನ್ನೇ ಪಾಪಿಯಾದ ನೀನು ಹಿಂಸಿಸಲು ಇಚ್ಛಿಸುತ್ತಿರುವೆ. ಆದುದರಿಂದ ನಿನ್ನದೇ ಯೋನಿಯನ್ನು ಪಡೆದುಕೊಂಡು ನೀನು ನಾಯಿಯೇ ಆಗುತ್ತೀಯೆ.”

12117044a ತತೋ ಮುನಿಜನದ್ವೇಷಾದ್ದುಷ್ಟಾತ್ಮಾ ಶ್ವಾಕೃತೋಽಬುಧಃ।
12117044c ಋಷಿಣಾ ಶರಭಃ ಶಪ್ತಃ ಸ್ವಂ ರೂಪಂ ಪುನರಾಪ್ತವಾನ್।।

ಋಷಿಯಿಂದ ಶಪ್ತವಾದ ಆ ದುಷ್ಟಾತ್ಮ ಶರಭವು ಮುನಿಜನರ ದ್ವೇಷದಿಂದಾಗಿ ಪುನಃ ತನ್ನ ನಾಯಿಯ ರೂಪವನ್ನು ಪಡೆದುಕೊಂಡಿತು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಶಾಂತಿ ಪರ್ವಣಿ ರಾಜಧರ್ಮ ಪರ್ವಣಿ ಋಷಿರ್ಸಂವಾದೇ ಸಪ್ತದಶಾಧಿಕಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ರಾಜಧರ್ಮ ಪರ್ವದಲ್ಲಿ ಋಷಿರ್ಸಂವಾದ ಎನ್ನುವ ನೂರಾಹದಿನೇಳನೇ ಅಧ್ಯಾಯವು.


  1. ಈ ಅಧ್ಯಾಯವನ್ನು ಎರಡು ಅಧ್ಯಾಯಗಳಲ್ಲಿಯೂ ಕೊಟ್ಟಿದ್ದಾರೆ (ಗೀತಾ ಪ್ರೆಸ್). ↩︎

  2. ದಕ್ಷಿಣಾತ್ಯ ಪಾಠದಲ್ಲಿ ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕವಿದೆ: ಯುಧಿಷ್ಠಿರ ಉವಾಚ। ನ ಸಂತಿ ಕುಲಜಾ ಯತ್ರ ಸಹಾಯಾಃ ಪಾರ್ಥಿವಸ್ಯ ತು। ಅಕುಲೀನಶ್ಚ ಕರ್ಯವ್ಯಾ ನ ವಾ ಭರತಸತ್ತಮ।। (ಗೀತಾ ಪ್ರೆಸ್). ↩︎