116

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ರಾಜಧರ್ಮ ಪರ್ವ

ಅಧ್ಯಾಯ 116

ಸಾರ

ರಾಜನಲ್ಲಿಯೂ ರಾಜಸೇವಕರಲ್ಲಿಯೂ ಇರಬೇಕಾದ ಅವಶ್ಯ ಗುಣಗಳು (1-22).

12116001 ಯುಧಿಷ್ಠಿರ ಉವಾಚ।
12116001a ಪಿತಾಮಹ ಮಹಾಪ್ರಾಜ್ಞ ಸಂಶಯೋ ಮೇ ಮಹಾನಯಮ್।
12116001c ಸ ಚ್ಚೇತ್ತವ್ಯಸ್ತ್ವಯಾ ರಾಜನ್ ಭವಾನ್ ಕುಲಕರೋ ಹಿ ನಃ।।

ಯುಧಿಷ್ಠಿರನು ಹೇಳಿದನು: “ಪಿತಾಮಹ! ಮಹಾಪ್ರಾಜ್ಞ! ರಾಜನ್! ನನ್ನಲ್ಲಿ ಈ ಒಂದು ಮಹಾ ಸಂಶಯವಿದೆ. ಅದನ್ನು ನೀನು ನಿವಾರಿಸಬಲ್ಲೆ. ಏಕೆಂದರೆ ನೀನು ನಮ್ಮ ಕುಲಕರನೇ ಅಲ್ಲವೇ?

12116002a ಪುರುಷಾಣಾಮಯಂ ತಾತ ದುರ್ವೃತ್ತಾನಾಂ ದುರಾತ್ಮನಾಮ್।
12116002c ಕಥಿತೋ ವಾಕ್ಯಸಂಚಾರಸ್ತತೋ ವಿಜ್ಞಾಪಯಾಮಿ ತೇ।।

ಅಯ್ಯಾ! ನೀನು ಈಗ ದುರಾತ್ಮ ಪುರುಷರ ದುರ್ವೃತ್ತಿಯ ಕುರಿತು ಹೇಳಿದೆಯಲ್ಲಿಯಲ್ಲವೇ? ಅದಕ್ಕೆ ಸಂಬಂಧಿಸಿದಂತೆ ಇದನ್ನು ವಿಜ್ಞಾಪಿಸುತ್ತೇನೆ.

12116003a ಯದ್ಧಿತಂ ರಾಜ್ಯತಂತ್ರಸ್ಯ ಕುಲಸ್ಯ ಚ ಸುಖೋದಯಮ್।
12116003c ಆಯತ್ಯಾಂ ಚ ತದಾತ್ವೇ ಚ ಕ್ಷೇಮವೃದ್ಧಿಕರಂ ಚ ಯತ್।।

ರಾಜತಂತ್ರಕ್ಕೆ ಹಿತವಾದ, ಕುಲಕ್ಕೆ ಸುಖೋದಯವಾದ, ಈಗ ಮತ್ತು ಮುಂದೆ ಕ್ಷೇಮಾಭಿವೃದ್ಧಿಯನ್ನು ನೀಡುವಂಥವುದು ಯಾವುದು?

12116004a ಪುತ್ರಪೌತ್ರಾಭಿರಾಮಂ ಚ ರಾಷ್ಟ್ರವೃದ್ಧಿಕರಂ ಚ ಯತ್।
12116004c ಅನ್ನಪಾನೇ ಶರೀರೇ ಚ ಹಿತಂ ಯತ್ತದ್ ಬ್ರವೀಹಿ ಮೇ।।

ಪುತ್ರಪೌತ್ರರಿಗೂ ಸುಖಕರವಾಗಿರುವ, ರಾಷ್ಟ್ರವೃದ್ಧಿಯನ್ನೂ ಮಾಡುವ, ಶರೀರದ ಅನ್ನಪಾನಗಳಲ್ಲಿ ಹಿತಕರವಾದುದು ಏನು? ಅದನ್ನು ನನಗೆ ಹೇಳು.

12116005a ಅಭಿಷಿಕ್ತೋ ಹಿ ಯೋ ರಾಜಾ ರಾಜ್ಯಸ್ಥೋ ಮಿತ್ರಸಂವೃತಃ।
12116005c ಅಸುಹೃತ್ಸಮುಪೇತೋ1 ವಾ ಸ ಕಥಂ ರಂಜಯೇತ್ ಪ್ರಜಾಃ।।

ರಾಜ್ಯಸ್ಥನಾಗಿ ಅಭಿಷಿಕ್ತನಾದ ರಾಜನು ಮಿತ್ರರಿಂದ ಅಥವಾ ಅಮಿತ್ರರಿಂದ ಸಂವೃತನಾಗಿರುತ್ತಾನೆ. ಅವನು ಹೇಗೆ ಪ್ರಜೆಗಳನ್ನು ರಂಜಿಸಬಹುದು?

12116006a ಯೋ ಹ್ಯಸತ್ಪ್ರಗ್ರಹರತಿಃ ಸ್ನೇಹರಾಗಬಲಾತ್ಕೃತಃ।
12116006c ಇಂದ್ರಿಯಾಣಾಮನೀಶತ್ವಾದಸಜ್ಜನಬುಭೂಷಕಃ।।
12116007a ತಸ್ಯ ಭೃತ್ಯಾ ವಿಗುಣತಾಂ ಯಾಂತಿ ಸರ್ವೇ ಕುಲೋದ್ಗತಾಃ।
12116007c ನ ಚ ಭೃತ್ಯಫಲೈರರ್ಥೈಃ ಸ ರಾಜಾ ಸಂಪ್ರಯುಜ್ಯತೇ।।

ಅಸದ್ವಸ್ತುಗಳ ಸಂಗ್ರಹದಲ್ಲಿಯೇ ಆಸಕ್ತನಾಗಿರುವ, ಸ್ನೇಹ-ರಾಗಗಳಿಗೆ ಅಧೀನನಾದ, ಇಂದ್ರಿಯಗಳನ್ನು ವಶಪಡಿಸಿಕೊಳ್ಳದೇ ಅಸಜ್ಜನರನ್ನೇ ಸಂಗ್ರಹಿಸಿರುವ ರಾಜನ ಸೇವಕರೆಲ್ಲರೂ ಕುಲಪ್ರಸೂತರಾಗಿದ್ದರೂ ಸದ್ಗುಣವಿಲ್ಲದವರೇ ಆಗಿರುತ್ತಾರೆ. ಆಗ ರಾಜನು ಸೇವಕರಿಂದ ಪಡೆಯಬಹುದಾದ ಫಲಗಳಿಂದ ವಂಚಿತನಾಗುತ್ತಾನೆ.

12116008a ಏತಾನ್ಮೇ ಸಂಶಯಸ್ಥಸ್ಯ ರಾಜಧರ್ಮಾನ್ಸುದುರ್ಲಭಾನ್।
12116008c ಬೃಹಸ್ಪತಿಸಮೋ ಬುದ್ಧ್ಯಾ ಭವಾನ್ ಶಂಸಿತುಮರ್ಹತಿ।।

ಹೀಗೆ ಸುದುರ್ಲಭವಾದ ರಾಜಧರ್ಮದ ಕುರಿತು ನನಗೆ ಈ ಸಂಶಯಗಳಿವೆ. ಬುದ್ಧಿಯಲ್ಲಿ ಬೃಹಸ್ಪತಿಸಮನಾಗಿರುವ ನೀನು ಹೇಳಬೇಕು.

12116009a ಶಂಸಿತಾ ಪುರುಷವ್ಯಾಘ್ರ ತ್ವಂ ನಃ ಕುಲಹಿತೇ ರತಃ।
12116009c ಕ್ಷತ್ತಾ ಚೈವ ಪಟುಪ್ರಜ್ಞೋ ಯೋ ನಃ ಶಂಸತಿ ಸರ್ವದಾ।।

ಪುರುಷವ್ಯಾಘ್ರ! ನಮ್ಮ ಕುಲದ ಹಿತದಲ್ಲಿಯೇ ನಿರತನಾಗಿರುವ ನೀನು ನಮಗೆ ಉಪದೇಶಮಾಡಬಹುದು. ಪಟುಪ್ರಜ್ಞ ಕ್ಷತ್ತನೂ ಕೂಡ ನಮಗೆ ಸರ್ವದಾ ಉಪದೇಶ ನೀಡುತ್ತಿರುತ್ತಾನೆ.

12116010a ತ್ವತ್ತಃ ಕುಲಹಿತಂ ವಾಕ್ಯಂ ಶ್ರುತ್ವಾ ರಾಜ್ಯಹಿತೋದಯಮ್।
12116010c ಅಮೃತಸ್ಯಾವ್ಯಯಸ್ಯೇವ ತೃಪ್ತಃ ಸ್ವಪ್ಸ್ಯಾಮ್ಯಹಂ ಸುಖಮ್।।

ಕುಲಹಿತವಾಗಿರುವ ಮತ್ತು ರಾಜ್ಯದ ಹಿತವನ್ನು ಹೆಚ್ಚಿಸುವ ನಿನ್ನ ಮಾತನ್ನು ಕೇಳಿ ಅಮೃತವನ್ನು ಸೇವಿಸಿದವನಷ್ಟೇ ತೃಪ್ತನಾಗಿ ನಾನು ಸುಖವಾಗಿ ನಿದ್ರಿಸುತ್ತೇನೆ.

12116011a ಕೀದೃಷಾಃ ಸಂನಿಕರ್ಷಸ್ಥಾ ಭೃತ್ಯಾಃ ಸ್ಯುರ್ವಾ ಗುಣಾನ್ವಿತಾಃ।
12116011c ಕೀದೃಶೈಃ ಕಿಂಕುಲೀನೈರ್ವಾ ಸಹ ಯಾತ್ರಾ ವಿಧೀಯತೇ।।

ಗುಣಾನ್ವಿತರಾದ ಎಂಥಹ ಸೇವಕರು ರಾಜನ ಸಮೀಪದಲ್ಲಿರಲು ಇಚ್ಛಿಸುತ್ತಾರೆ? ಯಾವ ಕುಲದಲ್ಲಿ ಹುಟ್ಟಿದ ಎಂಥವರೊಂದಿಗೆ ರಾಜನು ಯಾತ್ರೆಯನ್ನು ಕೈಗೊಳ್ಳಬಹುದು?

12116012a ನ ಹ್ಯೇಕೋ ಭೃತ್ಯರಹಿತೋ ರಾಜಾ ಭವತಿ ರಕ್ಷಿತಾ।
12116012c ರಾಜ್ಯಂ ಚೇದಂ ಜನಃ ಸರ್ವಸ್ತತ್ಕುಲೀನೋಽಭಿಶಂಸತಿ।।

ಭೃತ್ಯರಹಿತನಾದ ರಾಜನು ಒಬ್ಬನೇ ರಾಜ್ಯವನ್ನು ರಕ್ಷಿಸಲಾರನು. ಕುಲೀನರಾದ ಸರ್ವರೂ ರಾಜ್ಯವನ್ನು ಬಯಸುತ್ತಾರೆ.

12116013a 2ನ ಹಿ ಪ್ರಶಾಸ್ತುಂ ರಾಜ್ಯಂ ಹಿ ಶಕ್ಯಮೇಕೇನ ಭಾರತ। 12116013c ಅಸಹಾಯವತಾ ತಾತ ನೈವಾರ್ಥಾಃ ಕೇ ಚಿದಪ್ಯುತ।
12116013e ಲಬ್ಧುಂ ಲಬ್ಧ್ವಾ ಚಾಪಿ ಸದಾ ರಕ್ಷಿತುಂ ಭರತರ್ಷಭ।।

ಭಾರತ! ಭರತರ್ಷಭ! ರಾಜನು ಒಬ್ಬನೇ ರಾಜ್ಯವನ್ನಾಳಲು ಶಕ್ಯವಿಲ್ಲ. ಅಯ್ಯಾ! ಸಹಾಯವಿಲ್ಲದೇ ಬೇರೆ ಯಾವ ಅರ್ಥಸಿದ್ಧಿಯೂ ಸಾಧ್ಯವಾಗುವುದಿಲ್ಲ. ರಾಜ್ಯವನ್ನು ಪಡೆದುಕೊಂಡರೂ ಸಹಾಯಕರಿಲ್ಲದೇ ಅದನ್ನು ರಕ್ಷಿಸಿಕೊಳ್ಳಲೂ ಸಾಧ್ಯವಾಗುವುದಿಲ್ಲ.”

12116014 ಭೀಷ್ಮ ಉವಾಚ।
12116014a ಯಸ್ಯ ಭೃತ್ಯಜನಃ ಸರ್ವೋ ಜ್ಞಾನವಿಜ್ಞಾನಕೋವಿದಃ।
12116014c ಹಿತೈಷೀ ಕುಲಜಃ ಸ್ನಿಗ್ಧಃ ಸ ರಾಜ್ಯಫಲಮಶ್ನುತೇ।।

ಭೀಷ್ಮನು ಹೇಳಿದನು: “ಯಾರ ಭೃತ್ಯಜನರೆಲ್ಲರೂ ಜ್ಞಾನವಿಜ್ಞಾನಕೋವಿದರೂ, ಹಿತೈಷಿಗಳೂ, ಉತ್ತಮ ಕುಲೀನರೂ ಮತ್ತು ಸ್ನೇಹಪರರೂ ಆಗಿರುವರೋ ಆ ರಾಜನು ರಾಜ್ಯಫಲವನ್ನು ಭೋಗಿಸುತ್ತಾನೆ.

12116015a ಮಂತ್ರಿಣೋ ಯಸ್ಯ ಕುಲಜಾ ಅಸಂಹಾರ್ಯಾಃ ಸಹೋಷಿತಾಃ।
12116015c ನೃಪತೇರ್ಮತಿದಾಃ ಸಂತಿ ಸಂಬಂಧಜ್ಞಾನಕೋವಿದಾಃ।।
12116016a ಅನಾಗತವಿಧಾತಾರಃ ಕಾಲಜ್ಞಾನವಿಶಾರದಾಃ।
12116016c ಅತಿಕ್ರಾಂತಮಶೋಚಂತಃ ಸ ರಾಜ್ಯಫಲಮಶ್ನುತೇ।।

ಯಾರ ಮಂತ್ರಿಗಳು ಉತ್ತಮ ಕುಲೀನರೂ, ಅಸಂಹಾರ್ಯರೂ3, ಜೊತೆಗೇ ವಾಸಮಾಡುವವರೂ, ನೃಪತಿಗೆ ಬುದ್ಧಿಹೇಳುವವರೂ, ಸಂಬಂಧಜ್ಞಾನಕೋವಿದರೂ, ಮುಂದಾಗುವುದನ್ನು ತಿಳಿದು ಕಾರ್ಯಮಾಡುವವರೂ, ಕಾಲಜ್ಞಾನ ವಿಶಾರದರೂ, ಕಳೆದುಹೋದುದಕ್ಕೆ ಶೋಕಪಡದಿರುವವರೂ ಆಗಿರುತ್ತಾರೋ ಆ ರಾಜನು ರಾಜ್ಯಫಲವನ್ನು ಭೋಗಿಸುತ್ತಾನೆ.

12116017a ಸಮದುಃಖಸುಖಾ ಯಸ್ಯ ಸಹಾಯಾಃ ಸತ್ಯಕಾರಿಣಃ4
12116017c ಅರ್ಥಚಿಂತಾಪರಾ ಯಸ್ಯ ಸ ರಾಜ್ಯಫಲಮಶ್ನುತೇ।।

ಯಾರ ಸಹಾಯಕರು ಸಮದುಃಖಿಗಳೂ ಸಮಸುಖಿಗಳೂ ಆಗಿರುವರೋ, ಸತ್ಯವಾದುದನ್ನೇ ಮಾಡುವವರೋ, ರಾಜನ ಉದ್ದೇಶಗಳ ಕುರಿತೇ ಚಿಂತಿಸುವವರೋ ಆ ರಾಜನು ರಾಜ್ಯಫಲವನ್ನು ಭೋಗಿಸುತ್ತಾನೆ.

12116018a ಯಸ್ಯ ನಾರ್ತೋ ಜನಪದಃ ಸಂನಿಕರ್ಷಗತಃ ಸದಾ।
12116018c ಅಕ್ಷುದ್ರಃ ಸತ್ಪಥಾಲಂಬೀ ಸ ರಾಜ್ಯಫಲಭಾಗ್ಭವೇತ್।।

ಯಾರ ಜನಪದವು ಆರ್ತವಾಗಿಲ್ಲವೋ, ಸದಾ ಒಗ್ಗಟ್ಟಿನಲ್ಲಿಯೇ ಇರುವುದೋ, ಅಕ್ಷುದ್ರವಾಗಿದೆಯೋ ಮತ್ತು ಸತ್ಪಥವನ್ನು ಅವಲಂಬಿಸಿರುವುದೋ ಆ ರಾಜನು ರಾಜ್ಯಫಲವನ್ನು ಭೋಗಿಸುತ್ತಾನೆ.

12116019a ಕೋಶಾಕ್ಷಪಟಲಂ5 ಯಸ್ಯ ಕೋಶವೃದ್ಧಿಕರೈರ್ಜನೈಃ।
12116019c ಆಪ್ತೈಸ್ತುಷ್ಟೈಶ್ಚ ಸತತಂ ಧಾರ್ಯತೇ6 ಸ ನೃಪೋತ್ತಮಃ।।

ಯಾರ ಕೋಶವೃದ್ಧಿಕಾರಕ ಜನರು ಆಪ್ತರೂ ತುಷ್ಟರೂ ಮತ್ತು ಕೋಶವನ್ನು ವೃದ್ಧಿಸುವುದರಲ್ಲಿಯೇ ಸದಾ ನಿರತರೂ ಆಗಿರುತ್ತಾರೋ ಆ ನೃಪೋತ್ತಮನು ಸತತವೂ ರಾಜ್ಯವನ್ನಿಟ್ಟುಕೊಂಡಿರುತ್ತಾನೆ.

12116020a ಕೋಷ್ಠಾಗಾರಮಸಂಹಾರ್ಯೈರಾಪ್ತೈಃ ಸಂಚಯತತ್ಪರೈಃ।
12116020c ಪಾತ್ರಭೂತೈರಲುಬ್ಧೈಶ್ಚ ಪಾಲ್ಯಮಾನಂ ಗುಣೀಭವೇತ್।।

ಧನಲೋಭದಿಂದ ಆಕರ್ಷಿತರಾಗದ, ವಿಶ್ವಾಸಪಾತ್ರ, ಕೋಶಸಂಹಶೀಲ, ಸತ್ಪಾತ್ರ, ಲೋಭರಹಿತ ಜನರು ಧಾನ್ಯಾದಿಗಳಿಂದ ಕೂಡಿರುವ ಉಗ್ರಾಣಗಳನ್ನೂ ಬೊಕ್ಕಸವನ್ನೂ ರಕ್ಷಿಸುತ್ತಿದ್ದರೆ ಕೋಷ್ಠಾಗಾರಗಳು ಇಮ್ಮಡಿಯಾಗುತ್ತವೆ.

12116021a ವ್ಯವಹಾರಶ್ಚ ನಗರೇ ಯಸ್ಯ ಕರ್ಮಫಲೋದಯಃ।
12116021c ದೃಶ್ಯತೇ ಶಂಖಲಿಖಿತಃ ಸ ಧರ್ಮಫಲಭಾಗ್ಭವೇತ್।।

ಯಾರ ನಗರದಲ್ಲಿ ಕರ್ಮಫಲದಿಂದುಂಟಾದ ಶಂಖ-ಲಿಖಿತ ಮುನಿಗಳು7 ತೋರಿಸಿಕೊಟ್ಟಿರುವ ನ್ಯಾಯವನ್ನು ಪಾಲಿಸಲಾಗುತ್ತದೆಯೋ ಅಂತಹ ರಾಜನು ಧರ್ಮಫಲವನ್ನು ಭೋಗಿಸುತ್ತಾನೆ.

12116022a ಸಂಗೃಹೀತಮನುಷ್ಯಶ್ಚ ಯೋ ರಾಜಾ ರಾಜಧರ್ಮವಿತ್।
12116022c ಷಡ್ವರ್ಗಂ ಪ್ರತಿಗೃಹ್ಣನ್ಸ ಧರ್ಮಾತ್ ಫಲಮುಪಾಶ್ನುತೇ।।

ರಾಜಧರ್ಮವನ್ನು ತಿಳಿದ ಯಾವ ರಾಜನು ಸತ್ಪುರುಷರನ್ನು ಸಂಗ್ರಹಿಸುವನೋ ಮತ್ತು ಸಮಯಾನುಸಾರವಾಗಿ ಸಂಧಿ-ವಿಗ್ರಹಗಳೇ ಮೊದಲಾದ ಆರು ಗುಣಗಳನ್ನು ಪ್ರಯೋಗಿಸುವನೋ ಅವನು ರಾಜಧರ್ಮವನ್ನು ಪಾಲಿಸಿದ ಫಲವನ್ನು ಭೋಗಿಸುತ್ತಾನೆ.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಶಾಂತಿ ಪರ್ವಣಿ ರಾಜಧರ್ಮ ಪರ್ವಣಿ ಷೋಡಶಾಧಿಕಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ರಾಜಧರ್ಮ ಪರ್ವದಲ್ಲಿ ನೂರಾಹದಿನಾರನೇ ಅಧ್ಯಾಯವು.


  1. ಸಸುಹೃತ್ಸಮುಪೇತೋ (ಭಾರತ ದರ್ಶನ). ↩︎

  2. ಈ ಶ್ಲೋಕದ ಮೊದಲು ಭೀಷ್ಮ ಉವಾಚ। (ಭಾರತ ದರ್ಶನ). ↩︎

  3. ಧನಲೋಭಕ್ಕೆ ಒಳಗಾಗಿ ರಾಜನಿಂದ ಪ್ರತ್ಯೇಕವಾಗದಿರುವವರು (ಭಾರತ ದರ್ಶನ). ↩︎

  4. ಪ್ರಿಯಕಾರಿಣಃ (ಭಾರತ ದರ್ಶನ). ↩︎

  5. ಕೋಟಾಖ್ಯಪಟಲಂ (ಭಾರತ ದರ್ಶನ). ↩︎

  6. ಚೀಯತೇ (ಭಾರತ ದರ್ಶನ). ↩︎

  7. ಇದೇ ಶಾಂತಿಪರ್ವದ ಅಧ್ಯಾಯ 24ರಲ್ಲಿ ವ್ಯಾಸನು ಯುಧಿಷ್ಠಿರನಿಗೆ ಶಂಖ-ಲಿಖಿತರ ಆಖ್ಯಾನವನ್ನು ಹೇಳಿದ್ದನು. ↩︎