115 ಟಿಟ್ಟಿಭಕಂ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ರಾಜಧರ್ಮ ಪರ್ವ

ಅಧ್ಯಾಯ 115

ಸಾರ

ದುಷ್ಟರ ನಿಂದನೆಯನ್ನು ಸಹಿಸಿಕೊಳ್ಳುವುದರಿಂದಾಗುವ ಲಾಭವು (1-20).

12115001 ಯುಧಿಷ್ಠಿರ ಉವಾಚ।
12115001a ವಿದ್ವಾನ್ಮೂರ್ಖಪ್ರಗಲ್ಭೇನ ಮೃದುಸ್ತೀಕ್ಷ್ಣೇನ ಭಾರತ।
12115001c ಆಕ್ರುಶ್ಯಮಾನಃ ಸದಸಿ ಕಥಂ ಕುರ್ಯಾದರಿಂದಮ।।

ಯುಧಿಷ್ಠಿರನು ಹೇಳಿದನು: “ಅರಿಂದಮ! ಭಾರತ! ಉದ್ಧಟ ಮೂರ್ಖನು ತುಂಬಿದ ಸಭೆಯಲ್ಲಿ ವಿದ್ವಾಂಸನನ್ನು ಮೃದುವಾಗಿಯೋ ತೀಕ್ಷ್ಣವಾಗಿಯೋ ನಿಂದಿಸತೊಡಗಿದರೆ ವಿದ್ವಾಂಸನು ಏನು ಮಾಡಬೇಕು?”

12115002 ಭೀಷ್ಮ ಉವಾಚ।
12115002a ಶ್ರೂಯತಾಂ ಪೃಥಿವೀಪಾಲ ಯಥೈಷೋಽರ್ಥೋಽನುಗೀಯತೇ।
12115002c ಸದಾ ಸುಚೇತಾಃ ಸಹತೇ ನರಸ್ಯೇಹಾಲ್ಪಚೇತಸಃ।।

ಭೀಷ್ಮನು ಹೇಳಿದನು: “ಪೃಥಿವೀಪಾಲ! ಇದರ ಕುರಿತು ಹಿರಿಯರು ಹೇಳಿರುವ ಮಾತನ್ನು ಕೇಳು. ಉತ್ತಮ ಚೇತನರು ಸದಾ ಅಲ್ಪಚೇತಸ ನರರನ್ನು ಸಹಿಸಿಕೊಳ್ಳುತ್ತಾರೆ.

12115003a ಅರುಷ್ಯನ್ ಕ್ರುಶ್ಯಮಾನಸ್ಯ ಸುಕೃತಂ ನಾಮ ವಿಂದತಿ।
12115003c ದುಷ್ಕೃತಂ ಚಾತ್ಮನೋ ಮರ್ಷೀ ರುಷ್ಯತ್ಯೇವಾಪಮಾರ್ಷ್ಟಿ ವೈ।।

ನಿಂದಿಸುವವನ ಮೇಲೆ ಕೋಪಗೊಳ್ಳದೇ ಅವನು ಸುಕೃತನೆಂಬ ಹೆಸರನ್ನು ಪಡೆದುಕೊಳ್ಳುತ್ತಾನೆ. ಮೂರ್ಖನು ಮಾಡಿದ ನಿಂದನೆಗಳನ್ನು ಸಹಿಸಿಕೊಳ್ಳುವವನು ತನ್ನ ದುಷ್ಕೃತ-ಪಾಪಗಳನ್ನು ಕುಪಿತನಾಗಿ ನಿಂದಿಸುವ ಮೂರ್ಖನ ಮೇಲೆ ಹಾಕುತ್ತಾನೆ.

12115004a ಟಿಟ್ಟಿಭಂ ತಮುಪೇಕ್ಷೇತ ವಾಶಮಾನಮಿವಾತುರಮ್।
12115004c ಲೋಕವಿದ್ವೇಷಮಾಪನ್ನೋ ನಿಷ್ಫಲಂ ಪ್ರತಿಪದ್ಯತೇ।।

ಆತುರದಿಂದ ಕಿರುಚಾಡಿಕೊಳ್ಳುವ ಟಿಟ್ಟಿಭ ಪಕ್ಷಿಯಂತೆ ಅವನನ್ನು ಉಪೇಕ್ಷಿಸಬೇಕು. ಆಗ ಆ ಮೂರ್ಖನು ಲೋಕದ ದ್ವೇಷವನ್ನು ಪಡೆದುಕೊಂಡು ನಿಷ್ಫಲನಾಗುತ್ತಾನೆ.

12115005a ಇತಿ ಸ ಶ್ಲಾಘತೇ1 ನಿತ್ಯಂ ತೇನ ಪಾಪೇನ ಕರ್ಮಣಾ।
12115005c ಇದಮುಕ್ತೋ ಮಯಾ ಕಶ್ಚಿತ್ಸಂಮತೋ ಜನಸಂಸದಿ।
12115005e ಸ ತತ್ರ ವ್ರೀಡಿತಃ ಶುಷ್ಕೋ ಮೃತಕಲ್ಪೋಽವತಿಷ್ಠತಿ।।

ಮೂರ್ಖನಾದರೋ ತನ್ನ ಪಾಪಕರ್ಮವನ್ನು ನಿತ್ಯವೂ ಹೀಗೆ ಪ್ರಶಂಸಿಸಿಕೊಳ್ಳುತ್ತಿರುತ್ತಾನೆ: “ತುಂಬಿದ ಜನಸಂಸದಿಯಲ್ಲಿ ನಾನು ಇವನ ಕುರಿತು ಹೀಗೆ ಹೇಳಿದೆ. ಆಗ ಅಲ್ಲಿ ಅವನು ನಾಚಿದನು. ಅವನ ಮುಖವು ಒಣಗಿಹೋಯಿತು. ಮೃತನಾದವನಂತೆ ಕುಳಿತಿದ್ದನು”.

12115006a ಶ್ಲಾಘನ್ನಶ್ಲಾಘನೀಯೇನ ಕರ್ಮಣಾ ನಿರಪತ್ರಪಃ।
12115006c ಉಪೇಕ್ಷಿತವ್ಯೋ ದಾಂತೇನ2 ತಾದೃಶಃ ಪುರುಷಾಧಮಃ।।

ಹೀಗೆ ಅವನು ಅಶ್ಲಾಘನೀಯವಾಗಿದ್ದ ತನ್ನ ಕರ್ಮಗಳನ್ನೇ ಪ್ರಶಂಸಿಸಿಕೊಳ್ಳುತ್ತಾ ತಾನುಮಾಡಿದ್ದುದಕ್ಕೆ ನಾಚಿಕೊಳ್ಳುವುದಿಲ್ಲ. ಅಂತಹ ಪುರುಷಾಧಮನನ್ನು ದಾಂತನು ಉಪೇಕ್ಷಿಸಬೇಕು.

12115007a ಯದ್ಯದ್ ಬ್ರೂಯಾದಲ್ಪಮತಿಸ್ತತ್ತದಸ್ಯ ಸಹೇತ್ಸದಾ।
12115007c ಪ್ರಾಕೃತೋ ಹಿ ಪ್ರಶಂಸನ್ವಾ ನಿಂದನ್ವಾ ಕಿಂ ಕರಿಷ್ಯತಿ।
12115007e ವನೇ ಕಾಕ ಇವಾಬುದ್ಧಿರ್ವಾಶಮಾನೋ ನಿರರ್ಥಕಮ್।।

ಅಲ್ಪಮತಿಯು ಏನೇನು ಹೇಳುತ್ತಾನೋ ಎಲ್ಲವನ್ನೂ ಸದಾ ಸಹಿಸಿಕೊಳ್ಳಬೇಕು. ಪ್ರಾಕೃತನು ಮಾಡುವ ಪ್ರಶಂಸೆ ಅಥವಾ ನಿಂದನೆಯಿಂದ ಏನು ಮಾಡಬೇಕಾಗಿದೆ? ವನದಲ್ಲಿ ಕಾಗೆಯು ಕಾ ಕಾ ಎಂದು ಕೂಗಿಕೊಳ್ಳುವಂತೆ ಅಬುದ್ಧಿಯು ದೊಡ್ಡದಾಗಿ ಹೇಳುವುದು ನಿರರ್ಥಕವು.

12115008a ಯದಿ ವಾಗ್ಭಿಃ ಪ್ರಯೋಗಃ ಸ್ಯಾತ್ಪ್ರಯೋಗೇ ಪಾಪಕರ್ಮಣಃ।
12115008c ವಾಗೇವಾರ್ಥೋ ಭವೇತ್ತಸ್ಯ ನ ಹ್ಯೇವಾರ್ಥೋ ಜಿಘಾಂಸತಃ।।

ಪಾಪ ಕರ್ಮಿಯ ಮಾತುಗಳ ಪ್ರಯೋಗಕ್ಕೆ ಪ್ರತಿಯಾಗಿ ಪ್ರಯೋಗಿಸದೇ ಇದ್ದರೆ ಹಿಂಸಿಸಲು ಬಯಸಿ ಮಾತನಾಡುತ್ತಿದ್ದ ಅವನಿಗೆ ಕೇವಲ ಕಂಠಶೋಷಣೆಯ ಪ್ರಯೋಜನವು ದೊರೆಯುತ್ತದೆ.

12115009a ನಿಷೇಕಂ ವಿಪರೀತಂ ಸ ಆಚಷ್ಟೇ ವೃತ್ತಚೇಷ್ಟಯಾ।
12115009c ಮಯೂರ ಇವ ಕೌಪೀನಂ ನೃತ್ಯನ್ಸಂದರ್ಶಯನ್ನಿವ।।

ತಾನು ಚೆನ್ನಾಗಿ ಕಾಣುತ್ತಿದ್ದೇನೆಂದು ನವಿಲು ತನ್ನ ಕೌಪೀನವನ್ನೂ ತೋರಿಸಿಕೊಳ್ಳುತ್ತಾ ಕುಣಿಯುವಂತೆ ತನ್ನ ಹೇಯವರ್ತನಗಳನ್ನು ಪ್ರಕಟಿಸಿಕೊಳ್ಳುವ ಮಾತನಾಡುತ್ತಾನೆ ಮತ್ತು ದುರುಕ್ತಿಗಳನ್ನಾಡಿದ ತನ್ನ ಆತ್ಮಪ್ರಶಂಸೆಯನ್ನೂ ಮಾಡಿಕೊಳ್ಳುತ್ತಾನೆ.

12115010a ಯಸ್ಯಾವಾಚ್ಯಂ ನ ಲೋಕೇಽಸ್ತಿ ನಾಕಾರ್ಯಂ ವಾಪಿ ಕಿಂ ಚನ।
12115010c ವಾಚಂ ತೇನ ನ ಸಂದಧ್ಯಾಚ್ಚುಚಿಃ ಸಂಕ್ಲಿಷ್ಟಕರ್ಮಣಾ।।

ಅವನ ಶಬ್ದ -ಲೋಕದಲ್ಲಿ ಆಡಬಾರದ ಶಬ್ದಗಳೇ ಇಲ್ಲ. ಅಂಥವನಿಗೆ ಮಾಡಬಾರದು ಎನ್ನುವುದು ಯಾವುದೂ ಇರುವುದಿಲ್ಲ. ಶುಚಿಯಾದವನು ಅತ್ಯಂತ ಸಂದಿಗ್ಧ ಕರ್ಮವಾದರೂ ಅವನ ಮಾತನ್ನು ಸಹಿಸಿಕೊಳ್ಳಬೇಕು.

12115011a ಪ್ರತ್ಯಕ್ಷಂ ಗುಣವಾದೀ ಯಃ ಪರೋಕ್ಷಂ ತು ವಿನಿಂದಕಃ।
12115011c ಸ ಮಾನವಃ ಶ್ವವಲ್ಲೋಕೇ ನಷ್ಟಲೋಕಪರಾಯಣಃ3।।

ಪ್ರತ್ಯಕ್ಷದಲ್ಲಿ ಗುಣಗಾನಮಾಡುವವನು ಮತ್ತು ಪರೋಕ್ಷದಲ್ಲಿ ನಿಂದಿಸುವ ಮಾನವನು ಲೋಕದಲ್ಲಿ ನಾಯಿಗಳಂತೆ ಇಹ-ಪರಗಳನ್ನು ಕಳೆದುಕೊಳ್ಳುತ್ತಾನೆ.

12115012a ತಾದೃಗ್ಜನಶತಸ್ಯಾಪಿ ಯದ್ದದಾತಿ ಜುಹೋತಿ ಚ।
12115012c ಪರೋಕ್ಷೇಣಾಪವಾದೇನ ತನ್ನಾಶಯತಿ ಸ ಕ್ಷಣಾತ್।।

ಪರೋಕ್ಷದಲ್ಲಿ ಅಪವಾದ-ನಿಂದನೆಗಳನ್ನು ಹೇಳುವವನು ಎಷ್ಟೇ ಯಾಗಗಳನ್ನು ಮಾಡಿದ್ದರೂ ದಾನಗಳನ್ನು ನೀಡಿದ್ದರೂ ಅವು ಕ್ಷಣದಲ್ಲಿಯೇ ನಾಶವಾಗುತ್ತವೆ.

12115013a ತಸ್ಮಾತ್ ಪ್ರಾಜ್ಞೋ ನರಃ ಸದ್ಯಸ್ತಾದೃಶಂ ಪಾಪಚೇತಸಮ್।
12115013c ವರ್ಜಯೇತ್ಸಾಧುಭಿರ್ವರ್ಜ್ಯಂ ಸಾರಮೇಯಾಮಿಷಂ ಯಥಾ।।

ಆದುದರಿಂದ ಪ್ರಾಜ್ಞ ನರನು ಅಂತಹ ಪಾಪಚೇತಸನನ್ನು – ಸಾಧುಜನರು ನಾಯಿಯ ಮಾಂಸವನ್ನು ವರ್ಜಿಸುವಂತೆ - ಒಡನೆಯೇ ವರ್ಜಿಸಬೇಕು.

12115014a ಪರಿವಾದಂ ಬ್ರುವಾಣೋ ಹಿ ದುರಾತ್ಮಾ ವೈ ಮಹಾತ್ಮನೇ।
12115014c ಪ್ರಕಾಶಯತಿ ದೋಷಾನ್ ಸ್ವಾನ್ಸರ್ಪಃ ಫಣಮಿವೋಚ್ಚ್ರಿತಮ್।।

ಮಹಾತ್ಮನ ನಿಂದೆಯನ್ನು ಮಾಡುವ ದುರಾತ್ಮನು ತನ್ನ ಹೆಡೆಯನ್ನೇ ಎತ್ತಿ ತೋರಿಸುವ ಸರ್ಪದಂತೆ ತನ್ನದೇ ದೋಷಗಳನ್ನು ಎತ್ತಿ ತೋರಿಸುತ್ತಾನೆ.

12115015a ತಂ ಸ್ವಕರ್ಮಾಣಿ ಕುರ್ವಾಣಂ ಪ್ರತಿಕರ್ತುಂ ಯ ಇಚ್ಚತಿ।
12115015c ಭಸ್ಮಕೂಟ ಇವಾಬುದ್ಧಿಃ ಖರೋ ರಜಸಿ ಮಜ್ಜತಿ।।

ತನ್ನದೇ ಕರ್ಮದಲ್ಲಿ ತೊಡಗಿರುವ ಆ ಮೂರ್ಖನಿಗೆ ಪ್ರತೀಕಾರವನ್ನು ಮಾಡಬಯಸುವವನು ಬೂದಿಯ ಗುಡ್ಡೆಯಮೇಲೆ ಹೊರಳಾಡುವ ಮೂರ್ಖ ಕತ್ತೆಯಂತೆ ಧೂಳಿನಲ್ಲಿ ಮುಳುಗಿಹೋಗುತ್ತಾನೆ.

12115016a ಮನುಷ್ಯಶಾಲಾವೃಕಮಪ್ರಶಾಂತಂ ಜನಾಪವಾದೇ ಸತತಂ ನಿವಿಷ್ಟಮ್।
12115016c ಮಾತಂಗಮುನ್ಮತ್ತಮಿವೋನ್ನದಂತಂ ತ್ಯಜೇತ ತಂ ಶ್ವಾನಮಿವಾತಿರೌದ್ರಮ್।।

ಸತತವೂ ಜನಾಪವಾದದಲ್ಲಿ ತೊಡಗಿರುವವನು ಮನುಷ್ಯಶರೀರದಲ್ಲಿ ವಾಸಿಸುವ ತೋಳದಂತೆ ಸದಾ ಅಶಾಂತಿಯಿಂದಿರುತ್ತಾನೆ. ಮದಿಸಿದ ಆನೆಯಂತೆ ಯಾವಾಗಲೂ ಕಿರುಚಿತ್ತಿರುತ್ತಾನೆ. ರೌದ್ರ ನಾಯಿಯಂತೆ ಯಾವಾಗಲೂ ಯಾರನ್ನಾದರೂ ಕಚ್ಚಲು ಓಡುತ್ತಲೇ ಇರುತ್ತಾನೆ. ಅಂಥವನನ್ನು ಸರ್ವದಾ ತ್ಯಜಿಸಬೇಕು.

12115017a ಅಧೀರಜುಷ್ಟೇ ಪಥಿ ವರ್ತಮಾನಂ ದಮಾದಪೇತಂ ವಿನಯಾಚ್ಚ ಪಾಪಮ್।
12115017c ಅರಿವ್ರತಂ ನಿತ್ಯಮಭೂತಿಕಾಮಂ ಧಿಗಸ್ತು ತಂ ಪಾಪಮತಿಂ ಮನುಷ್ಯಮ್।।

ಹೇಡಿಗಳ ಪಥದಲ್ಲಿ ನಡೆಯುವ, ಜಿತೇಂದ್ರಿಯನಲ್ಲದ, ಅವಿನತನೂ ಪಾಪಿಷ್ಟನೂ ಆದ ನಿತ್ಯವೂ ಇತರರ ಅವನತಿಯನ್ನೇ ಬಯಸುವ ಅರಿವ್ರತ ಪಾಪಮತಿ ಮನುಷ್ಯನಿಗೆ ಧಿಕ್ಕಾರವಿರಲಿ!

12115018a ಪ್ರತ್ಯುಚ್ಯಮಾನಸ್ತು ಹಿ ಭೂಯ ಏಭಿರ್ ನಿಶಾಮ್ಯ ಮಾ ಭೂಸ್ತ್ವಮಥಾರ್ತರೂಪಃ।
12115018c ಉಚ್ಚಸ್ಯ ನೀಚೇನ ಹಿ ಸಂಪ್ರಯೋಗಂ ವಿಗರ್ಹಯಂತಿ ಸ್ಥಿರಬುದ್ಧಯೋ ಯೇ।।

ಇಂತಹ ದುಷ್ಟನಿಗೆ ಪ್ರತಿಯಾಗಿ ಮಾತನಾಡಲು ಹೊರಟವನನ್ನು ನೋಡಿ ಹೇಳಬೇಕು: “ಸ್ಥಿರಬುದ್ಧಿಯು ನೀಚಪುರುಷನೊಡನೆ ವಾಗ್ವಿವಾದದಲ್ಲಿ ತೊಡಗುವುದನ್ನು ನಿಂದಿಸುತ್ತಾರೆ.”

12115019a ಕ್ರುದ್ಧೋ ದಶಾರ್ಧೇನ ಹಿ ತಾಡಯೇದ್ವಾ ಸ ಪಾಂಸುಭಿರ್ವಾಪಕಿರೇತ್ತುಷೈರ್ವಾ।
12115019c ವಿವೃತ್ಯ ದಂತಾಂಶ್ಚ ವಿಭೀಷಯೇದ್ವಾ ಸಿದ್ಧಂ ಹಿ ಮೂರ್ಖೇ ಕುಪಿತೇ ನೃಶಂಸೇ।।

ಮೂರ್ಖನು ಕ್ರುದ್ಧನಾದರೆ ಮುಷ್ಟಿಯಿಂದ ಪ್ರಹರಿಸಬಹುದು. ಧೂಳನ್ನು ಎರಚಬಹುದು. ಬಾಯನ್ನಗಲಿಸಿ ಹಲ್ಲುಬಿಗಿದು ಹೆದರಿಸಬಹುದು. ಆದುದರಿಂದ ಸತ್ಪುರುಷರು ಅಂತವನೊಂದಿಗೆ ವಾಗ್ಯುದ್ದಕ್ಕೆ ತೊಡಗಬಾರದು.

12115020a ವಿಗರ್ಹಣಾಂ ಪರಮದುರಾತ್ಮನಾ ಕೃತಾಂ ಸಹೇತ ಯಃ ಸಂಸದಿ ದುರ್ಜನಾನ್ನರಃ।
12115020c ಪಠೇದಿದಂ ಚಾಪಿ ನಿದರ್ಶನಂ ಸದಾ ನ ವಾಙ್ಮಯಂ ಸ ಲಭತಿ ಕಿಂ ಚಿದಪ್ರಿಯಮ್।।

ತುಂಬಿದ ಸಭೆಯಲ್ಲಿ ದುರಾತ್ಮನು ಮಾಡಿದ ನಿಂದನೆಯನ್ನು ಸಹಿಸಿಕೊಂಡು ಆ ದೃಷ್ಟಾಂತವನ್ನು ಸದಾ ಹೇಳಿಕೊಳ್ಳುವ ಸತ್ಪುರುಷನು ದುಷ್ಟರ ನಿಂದನೆಯಿಂದ ದುಃಖಿತರಾಗುವುದಿಲ್ಲ.”

ಸಮಾಪ್ತಿ ಇತಿ ಶ್ರೀ ಮಹಾಭಾರತೇ ಶಾಂತಿ ಪರ್ವಣಿ ರಾಜಧರ್ಮ ಪರ್ವಣಿ ಟಿಟ್ಟಿಭಕಂ ನಾಮ ಪಂಚದಶಾಧಿಕಶತತಮೋಽಧ್ಯಾಯಃ।। ಇದು ಶ್ರೀ ಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ರಾಜಧರ್ಮ ಪರ್ವದಲ್ಲಿ ಟಿಟ್ಟಿಭಕಂ ಎನ್ನುವ ನೂರಾಹದಿನೈದನೇ ಅಧ್ಯಾಯವು.

  1. ಇತಿ ಸಂಶ್ಲಾಘತೇ (ಭಾರತ ದರ್ಶನ). ↩︎

  2. ಯತ್ನೇನ (ಭಾರತ ದರ್ಶನ). ↩︎

  3. ನಷ್ಟಲೋಕಪರಾವರಃ। (ಭಾರತ ದರ್ಶನ). ↩︎