ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ರಾಜಧರ್ಮ ಪರ್ವ
ಅಧ್ಯಾಯ 114
ಸಾರ
ಪ್ರಬಲ ಶತ್ರುವಿನ ಮುಂದೆ ವಿನೀತನಾಗಿರಬೇಕೆಂದು ಸೂಚಿಸುವ ಗಂಗೆ ಮತ್ತು ಸಮುದ್ರಗಳ ಸಂವಾದ (1-14).
12114001 ಯುಧಿಷ್ಠಿರ ಉವಾಚ।
12114001a ರಾಜಾ ರಾಜ್ಯಮನುಪ್ರಾಪ್ಯ ದುರ್ಬಲೋ ಭರತರ್ಷಭ।
12114001c ಅಮಿತ್ರಸ್ಯಾತಿವೃದ್ಧಸ್ಯ ಕಥಂ ತಿಷ್ಠೇದಸಾಧನಃ।।
ಯುಧಿಷ್ಠಿರನು ಹೇಳಿದನು: “ಭರತರ್ಷಭ! ರಾಜ್ಯವನ್ನು ಪಡೆದುಕೊಂಡಿದ್ದರೂ ದುರ್ಬಲನೂ ಮಿತ್ರರಹಿತನೂ ಅತಿವೃದ್ಧನೂ ಮತ್ತು ಸಾಧನರಹಿತನೂ ಆಗಿದ್ದರೆ ಅವನು ಬಲಶಾಲೀ ಶತ್ರುವಿನ ಮುಂದೆ ಹೇಗೆ ನಿಲ್ಲಬೇಕು?”
12114002 ಭೀಷ್ಮ ಉವಾಚ।
12114002a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್।
12114002c ಸರಿತಾಂ ಚೈವ ಸಂವಾದಂ ಸಾಗರಸ್ಯ ಚ ಭಾರತ।।
ಭೀಷ್ಮನು ಹೇಳಿದನು: “ಭಾರತ! ಇದಕ್ಕೆ ಸಂಬಂಧಿಸಿದಂತೆ ಪುರಾತನ ಇತಿಹಾಸವಾದ ಸಮುದ್ರ-ನದಿಗಳ ಸಂವಾದವನ್ನು ಉದಾಹರಿಸುತ್ತಾರೆ.
12114003a ಸುರಾರಿನಿಲಯಃ ಶಶ್ವತ್ಸಾಗರಃ ಸರಿತಾಂ ಪತಿಃ।
12114003c ಪಪ್ರಚ್ಚ ಸರಿತಃ ಸರ್ವಾಃ ಸಂಶಯಂ ಜಾತಮಾತ್ಮನಃ।।
ಸುರಾರಿಗಳಿಗೆ ಆಶ್ರಯಸ್ಥಾನನಾದ ನದಿಗಳ ಒಡೆಯ ಸಮುದ್ರನು ತನ್ನಲ್ಲಿ ಹುಟ್ಟಿದ ಸಂಶಯವನ್ನು ಹೋಗಲಾಡಿಸಲೋಸುಗ ಸರ್ವ ಸರಿತ್ತುಗಳನ್ನೂ ಪ್ರಶ್ನಿಸಿದನು:
12114004a ಸಮೂಲಶಾಖಾನ್ಪಶ್ಯಾಮಿ ನಿಹತಾಂಶ್ಚಾಯಿನೋ ದ್ರುಮಾನ್।
12114004c ಯುಷ್ಮಾಭಿರಿಹ ಪೂರ್ಣಾಭಿರನ್ಯಾಂಸ್ತತ್ರ ನ ವೇತಸಮ್।।
“ನೀವು ತುಂಬಿ ಹರಿಯುವಾಗ ದೊಡ್ಡ ದೊಡ್ಡ ವೃಕ್ಷಗಳನ್ನೇ ಬೇರು-ರೆಂಬೆಗಳ ಸಮೇತ ಕಿತ್ತು ಕೊಚ್ಚಿಸಿಕೊಂಡು ಬರುವುದನ್ನು ನಾನು ನೋಡಿದ್ದೇನೆ. ಆದರೆ ಅಲ್ಲಿರುವ ಬೆತ್ತದ ಗಿಡಗಳನ್ನು ನೀವು ಕೊಚ್ಚಿಕೊಂಡು ಬರುವುದಿಲ್ಲ.
12114005a ಅಕಾಯಶ್ಚಾಲ್ಪಸಾರಶ್ಚ ವೇತಸಃ ಕೂಲಜಶ್ಚ ವಃ।
12114005c ಅವಜ್ಞಾಯ ನಶಕ್ಯೋ ವಾ1 ಕಿಂ ಚಿದ್ವಾ ತೇನ ವಃ ಕೃತಮ್।।
ಗಾತ್ರವಿಲ್ಲದ, ಅಲ್ಪಶಕ್ತಿಯುಳ್ಳ, ಮತ್ತು ದಡದ ಬುಡದಲ್ಲಿಯೇ ಹುಟ್ಟಿ ಬೆಳೆದ ಬೆತ್ತದ ಗಿಡಗಳನ್ನು ನೀವು ಏಕೆ ಕೊಚ್ಚಿಕೊಂಡು ಬರುತ್ತಿಲ್ಲ? ಅವುಗಳ ಮೇಲಿನ ತಿರಸ್ಕಾರದಿಂದಲೋ ಅಥವಾ ನಿಮಗೆ ಅದು ಶಕ್ಯವಿಲ್ಲವೆಂದೋ?
12114006a ತದಹಂ ಶ್ರೋತುಮಿಚ್ಚಾಮಿ ಸರ್ವಾಸಾಮೇವ ವೋ ಮತಮ್।
12114006c ಯಥಾ ಕೂಲಾನಿ ಚೇಮಾನಿ ಭಿತ್ತ್ವಾ ನಾನೀಯತೇ ವಶಮ್।।
ಆ ಬೆತ್ತದ ಗಿಡಗಳನ್ನು ಕಿತ್ತು ನೀವು ಏಕೆ ಹೊತ್ತುಕೊಂಡು ಬರುತ್ತಿಲ್ಲ? ನಿಮ್ಮೆಲ್ಲರಿಂದಲೂ ನಾನು ಈ ವಿಷಯವನ್ನು ಕೇಳಬಯಸುತ್ತೇನೆ.”
12114007a ತತಃ ಪ್ರಾಹ ನದೀ ಗಂಗಾ ವಾಕ್ಯಮುತ್ತರಮರ್ಥವತ್।
12114007c ಹೇತುಮದ್ ಗ್ರಾಹಕಂ ಚೈವ ಸಾಗರಂ ಸರಿತಾಂ ಪತಿಮ್।।
ಆಗ ಗಂಗಾನದಿಯು ತನ್ನ ಗ್ರಾಹಕ ಸರಿತ್ತುಗಳ ಒಡೆಯ ಸಾಗರನಿಗೆ ಈ ಅರ್ಥವತ್ತಾದ ಉತ್ತರವನ್ನು ನೀಡಿ ಹೇಳಿದಳು:
12114008a ತಿಷ್ಠಂತ್ಯೇತೇ ಯಥಾಸ್ಥಾನಂ ನಗಾ ಹ್ಯೇಕನಿಕೇತನಾಃ।
12114008c ತತಸ್ತ್ಯಜಂತಿ ತತ್ ಸ್ಥಾನಂ ಪ್ರಾತಿಲೋಮ್ಯಾದಚೇತಸಃ।।2
“ವೃಕ್ಷಗಳು ತಮ್ಮ ತಮ್ಮ ಸ್ಥಾನಗಳಲ್ಲಿಯೇ ಬಲವಾಗಿ ನಿಂತಿರುತ್ತವೆ. ನಮ್ಮ ಪ್ರವಾಹಕ್ಕೆ ಅವು ತಲೆತಗ್ಗಿಸುವುದಿಲ್ಲ. ಪ್ರವಾಹದ ಸಮಯದಲ್ಲಿ ನಮ್ಮ ಪ್ರತಿಕೂಲವಾಗಿ ವ್ಯವಹರಿಸುವುದರಿಂದ ಆ ಮೂಢಚೇತನಗಳು ತಮ್ಮಸ್ಥಾನವನ್ನು ತ್ಯಜಿಸಬೇಕಾಗುತ್ತದೆ.
12114009a ವೇತಸೋ ವೇಗಮಾಯಾಂತಂ ದೃಷ್ಟ್ವಾ ನಮತಿ ನೇತರಃ।
12114009c ಸ ಚ ವೇಗೇಽಭ್ಯತಿಕ್ರಾಂತೇ ಸ್ಥಾನಮಾಸಾದ್ಯ ತಿಷ್ಠತಿ।।
ಬೆತ್ತದ ಗಿಡಗಳಾದರೋ ಬರುತ್ತಿರುವ ಪ್ರವಾಹದ ವೇಗವನ್ನು ಕಂಡೊಡನೆಯೇ ಬಾಗಿಕೊಂಡುಬಿಡುತ್ತವೆ. ನಮ್ಮ ಪ್ರವಾಹಕ್ಕೆ ಎದುರಾಗಿ ನಿಲ್ಲುವ ಸಾಹಸವನ್ನು ಮಾಡುವುದಿಲ್ಲ. ಪ್ರವಾಹವು ಕಡಿಮೆಯಾದೊಡನೆಯೇ ತಮ್ಮ ಸ್ಥಾನದಲ್ಲಿಯೇ ನಿಂತಿರುತ್ತವೆ.
12114010a ಕಾಲಜ್ಞಃ ಸಮಯಜ್ಞಶ್ಚ ಸದಾ ವಶ್ಯಶ್ಚ ನೋದ್ರುಮಃ3।
12114010c ಅನುಲೋಮಸ್ತಥಾಸ್ತಬ್ಧಸ್ತೇನ ನಾಭ್ಯೇತಿ ವೇತಸಃ।।
ಬೆತ್ತದ ಗಿಡಗಳು ಸದಾ ಕಾಲ-ಸಮಯಗಳನ್ನು ತಿಳಿದುಕೊಂಡಿರುತ್ತವೆ. ಮರಗಳು ಹಾಗಲ್ಲ. ನಾವು ಪ್ರವಹಿಸುವ ಕಡೆಯೇ ಅದು ಬಗ್ಗಿಕೊಂಡಿರುತ್ತದೆ. ಪ್ರವಾಹಕ್ಕೆ ಎದುರಾಗಿ ನಿಲ್ಲುವುದಿಲ್ಲ. ಆದುದರಿಂದ ಅಹಂಕಾರವಿಲ್ಲದ ಬೆತ್ತದ ಗಿಡಗಳು ನಮ್ಮೊಡನೆ ಬರುವುದಿಲ್ಲ.
12114011a ಮಾರುತೋದಕವೇಗೇನ ಯೇ ನಮಂತ್ಯುನ್ನಮಂತಿ ಚ।
12114011c ಓಷಧ್ಯಃ ಪಾದಪಾ ಗುಲ್ಮಾ ನ ತೇ ಯಾಂತಿ ಪರಾಭವಮ್।।
ಗಾಳಿಯ ಮತ್ತು ನೀರಿನ ವೇಗಕ್ಕೆ ಬಾಗುವ ಮತ್ತು ವೇಗವು ಕಡಿಮೆಯಾದೊಡನೆ ಎದ್ದು ನಿಲ್ಲುವ ಔಷಧದ ಗಿಡಗಳು, ಗುಲ್ಮಗಳು ಎಂದೂ ಪರಾಭವವನ್ನು ಹೊಂದುವುದಿಲ್ಲ.”
12114012a ಯೋ ಹಿ ಶತ್ರೋರ್ವಿವೃದ್ಧಸ್ಯ ಪ್ರಭೋರ್ವಧವಿನಾಶನೇ4।
12114012c ಪೂರ್ವಂ ನ ಸಹತೇ ವೇಗಂ ಕ್ಷಿಪ್ರಮೇವ ಸ ನಶ್ಯತಿ।।
ಹೀಗೆ ಬಲದಲ್ಲಿ ಅಧಿಕನಾದ, ಮತ್ತು ವಧ-ವಿನಾಶಗಳಲ್ಲಿ ಪ್ರಭುವೆನಿಸಿದ ಶತ್ರುವಿನ ವೇಗವನ್ನು ಮೊದಲೇ ನತಶಿರನಾಗಿ ಸಹಿಸಿಕೊಳ್ಳದವನು ಬೇಗನೇ ನಾಶಹೊಂದುತ್ತಾನೆ.
12114013a ಸಾರಾಸಾರಂ ಬಲಂ ವೀರ್ಯಮಾತ್ಮನೋ ದ್ವಿಷತಶ್ಚ ಯಃ।
12114013c ಜಾನನ್ವಿಚರತಿ ಪ್ರಾಜ್ಞೋ ನ ಸ ಯಾತಿ ಪರಾಭವಮ್।।
ತನ್ನ ಮತ್ತು ಶತ್ರುವಿನ ಸಾರಾಸಾರಗಳನ್ನೂ ಬಲವನ್ನೂ ವೀರ್ಯವನ್ನೂ ತಿಳಿದು ವಿಚಾರಿಸಿ ನಡೆದುಕೊಳ್ಳುವ ಪ್ರಾಜ್ಞನು ಪರಾಭವವನ್ನು ಹೊಂದುವುದಿಲ್ಲ.
12114014a ಏವಮೇವ ಯದಾ ವಿದ್ವಾನ್ಮನ್ಯೇತಾತಿಬಲಂ ರಿಪುಮ್।
12114014c ಸಂಶ್ರಯೇದ್ವೈತಸೀಂ ವೃತ್ತಿಮೇವಂ ಪ್ರಜ್ಞಾನಲಕ್ಷಣಮ್।।
ಹೀಗೆಯೇ ವಿದ್ವಾಂಸ ರಾಜನು ಶತ್ರುವು ತನಗಿಂತಲೂ ಅಧಿಕ ಬಲಶಾಲಿಯೆಂದು ತಿಳಿದಾಗ ತಲೆತಗ್ಗಿಸುವ ವೈತಸೀವೃತ್ತಿಯನ್ನು ಆಶ್ರಯಿಸಬೇಕು. ಇದೇ ಬುದ್ಧಿಶಾಲಿಯ ಲಕ್ಷಣವು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಶಾಂತಿ ಪರ್ವಣಿ ರಾಜಧರ್ಮ ಪರ್ವಣಿ ಸರಿತ್ಸಾಗರಸಂವಾದೇ ಚತುರ್ದಶಾಧಿಕಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ರಾಜಧರ್ಮ ಪರ್ವದಲ್ಲಿ ಸರಿತ್ಸಾಗರಸಂವಾದ ಎನ್ನುವ ನೂರಾಹದಿನಾಲ್ಕನೇ ಅಧ್ಯಾಯವು.