113 ಉಷ್ಟ್ರಗ್ರೀವೋಪಾಖ್ಯಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ರಾಜಧರ್ಮ ಪರ್ವ

ಅಧ್ಯಾಯ 113

ಸಾರ

ಆಲಸ್ಯ ಒಂಟೆಯ ಕಥೆ ಮತ್ತು ರಾಜನ ಕರ್ತ್ಯವ್ಯಗಳು (1-21)

12113001 ಯುಧಿಷ್ಠಿರ ಉವಾಚ।
12113001a ಕಿಂ ಪಾರ್ಥಿವೇನ ಕರ್ತವ್ಯಂ ಕಿಂ ಚ ಕೃತ್ವಾ ಸುಖೀ ಭವೇತ್।
12113001c ತನ್ಮಮಾಚಕ್ಷ್ವ ತತ್ತ್ವೇನ ಸರ್ವಂ ಧರ್ಮಭೃತಾಂ ವರ।।

ಯುಧಿಷ್ಠಿರನು ಹೇಳಿದನು: “ಧರ್ಮಭೃತರಲ್ಲಿ ಶ್ರೇಷ್ಠ! ಪಾರ್ಥಿವನ ಕರ್ತವ್ಯವೇನು? ಏನನ್ನು ಮಾಡುವುದರಿಂದ ಅವನು ಸುಖಿಯಾಗಿರಬಲ್ಲನು? ಸರ್ವವನ್ನೂ ತತ್ತ್ವಪೂರ್ಣವಾಗಿ ನನಗೆ ಹೇಳು.”

12113002 ಭೀಷ್ಮ ಉವಾಚ।
12113002a ಹಂತ ತೇಽಹಂ ಪ್ರವಕ್ಷ್ಯಾಮಿ ಶೃಣು ಕಾರ್ಯೈಕನಿಶ್ಚಯಮ್।
12113002c ಯಥಾ ರಾಜ್ಞೇಹ ಕರ್ತವ್ಯಂ ಯಚ್ಚ ಕೃತ್ವಾ ಸುಖೀ ಭವೇತ್।।

ಭೀಷ್ಮನು ಹೇಳಿದನು: “ನಿಲ್ಲು! ರಾಜನ ಕರ್ತವ್ಯವೇನು ಮತ್ತು ಏನನ್ನು ಮಾಡುವುದರಿಂದ ಅವನು ಸುಖಿಯಾಗಿರಬಲ್ಲನು ಎನ್ನುವುದನ್ನು ನಿಶ್ಚಯಮಾಡಿ ನಿನಗೆ ಹೇಳುತ್ತೇನೆ. ಕೇಳು.

12113003a ನ ತ್ವೇವಂ ವರ್ತಿತವ್ಯಂ ಸ್ಮ ಯಥೇದಮನುಶುಶ್ರುಮಃ।
12113003c ಉಷ್ಟ್ರಸ್ಯ ಸುಮಹದ್ವೃತ್ತಂ ತನ್ನಿಬೋಧ ಯುಧಿಷ್ಠಿರ।।

ಯುಧಿಷ್ಠಿರ! ಒಂದು ಮಹಾ ಒಂಟೆಯ ವ್ಯವಹಾರವನ್ನು ನಾನು ಕೇಳಿದ್ದೇನೆ. ಅದನ್ನು ಕೇಳು. ಅದರಂತೆ ರಾಜನು ವರ್ತಿಸಬಾರದು.

12113004a ಜಾತಿಸ್ಮರೋ ಮಹಾನುಷ್ಟ್ರಃ ಪ್ರಾಜಾಪತ್ಯಯುಗೋದ್ಭವಃ।
12113004c ತಪಃ ಸುಮಹದಾತಿಷ್ಠದರಣ್ಯೇ ಸಂಶಿತವ್ರತಃ।।

ಪ್ರಾಜಾಪತ್ಯ ಯುಗ1ದಲ್ಲಿ ಒಂದು ದೊಡ್ಡ ಒಂಟೆಯಿದ್ದಿತು. ಅದಕ್ಕೆ ಪೂರ್ವಜನ್ಮದ ಸ್ಮರಣೆಯಿದ್ದಿತ್ತು. ಆ ಸಂಶಿತವ್ರತವು ಅರಣ್ಯದಲ್ಲಿ ಒಂದು ಮಹಾತಪಸ್ಸನ್ನು ಆರಂಭಿಸಿತು.

12113005a ತಪಸಸ್ತಸ್ಯ ಚಾಂತೇ ವೈ ಪ್ರೀತಿಮಾನಭವತ್ ಪ್ರಭುಃ।
12113005c ವರೇಣ ಚಂದಯಾಮಾಸ ತತಶ್ಚೈನಂ ಪಿತಾಮಹಃ।।

ಅದರ ತಪಸ್ಸಿನ ಅಂತ್ಯದಲ್ಲಿ ಪ್ರಭು ಪಿತಾಮಹ ಬ್ರಹ್ಮನು ಪ್ರೀತಿಮಾನನಾದನು. ಆಗ ಒಂಟೆಗೆ ವರನ್ನು ಕೇಳಲು ಹೇಳಿದನು.

12113006 ಉಷ್ಟ್ರ ಉವಾಚ।
12113006a ಭಗವಂಸ್ತ್ವತ್ಪ್ರಸಾದಾನ್ಮೇ ದೀರ್ಘಾ ಗ್ರೀವಾ ಭವೇದಿಯಮ್।
12113006c ಯೋಜನಾನಾಂ ಶತಂ ಸಾಗ್ರಂ ಯಾ ಗಚ್ಚೇಚ್ಚರಿತುಂ ವಿಭೋ।।

ಒಂಟೆಯು ಹೇಳಿತು: “ವಿಭೋ! ಭಗವನ್! ನಿನ್ನ ಪ್ರಸಾದದಿಂದ ನನ್ನ ಈ ಕುತ್ತಿಗೆಯು ಉದ್ದವಾಗಲಿ. ನೂರಾರು ಯೋಜನೆಗಳ ವರೆಗೂ ನನ್ನ ಈ ಕುತ್ತಿಗೆಯು ಸಂಚರಿಸುವಂತಾಗಬೇಕು.””

12113007 ಭೀಷ್ಮ ಉವಾಚ।
12113007a ಏವಮಸ್ತ್ವಿತಿ ಚೋಕ್ತಃ ಸ ವರದೇನ ಮಹಾತ್ಮನಾ।
12113007c ಪ್ರತಿಲಭ್ಯ ವರಂ ಶ್ರೇಷ್ಠಂ ಯಯಾವುಷ್ಟ್ರಃ ಸ್ವಕಂ ವನಮ್।।

ಭೀಷ್ಮನು ಹೇಳಿದನು: “ಮಹಾತ್ಮ ವರದನು ಹಾಗೆಯೇ ಆಗಲೆಂದು ಹೇಳಿದನು. ಶ್ರೇಷ್ಠ ವರವನ್ನು ಪಡೆದು ಒಂಟೆಯು ತನ್ನ ವನಕ್ಕೆ ಬಂದಿತು.

12113008a ಸ ಚಕಾರ ತದಾಲಸ್ಯಂ ವರದಾನಾತ್ಸ ದುರ್ಮತಿಃ।
12113008c ನ ಚೈಚ್ಚಚ್ಚರಿತುಂ ಗಂತುಂ ದುರಾತ್ಮಾ ಕಾಲಮೋಹಿತಃ।।

ವರದಿಂದಾಗಿ ಆ ದುರ್ಮತಿಯು ಆಲಸ್ಯನಾದನು. ಕಾಲಮೋಹಿತನಾಗಿ ಆ ದುರಾತ್ಮನು ಎಲ್ಲಿಯೂ ಹೋಗಲು ಬಯಸಲಿಲ್ಲ.

12113009a ಸ ಕದಾ ಚಿತ್ಪ್ರಾಸಾರ್ಯೈವಂ ತಾಂ ಗ್ರೀವಾಂ ಶತಯೋಜನಾಮ್।
12113009c ಚಚಾರಾಶ್ರಾಂತಹೃದಯೋ ವಾತಶ್ಚಾಗಾತ್ತತೋ ಮಹಾನ್।।

ಒಮ್ಮೆ ಅದು ತನ್ನ ನೂರು ಯೋಜನ ಉದ್ದದ ಕುತ್ತಿಗೆಯನ್ನು ಚಾಚಿ ಸ್ವಲ್ಪವೂ ಆಯಾಸವಿಲ್ಲದೇ ಸಂಚರಿಸುತ್ತಿರುವಾಗ ದೊಡ್ಡ ಭಿರುಗಾಳಿಯು ಬೀಸತೊಡಗಿತು.

12113010a ಸ ಗುಹಾಯಾಂ ಶಿರೋಗ್ರೀವಂ ನಿಧಾಯ ಪಶುರಾತ್ಮನಃ।
12113010c ಆಸ್ತಾಥ ವರ್ಷಮಭ್ಯಾಗಾತ್ಸುಮಹತ್ ಪ್ಲಾವಯಜ್ಜಗತ್।।

ಆಗ ಆ ಪಶುವು ತನ್ನ ಕುತ್ತಿಗೆ-ಶಿರಗಳನ್ನು ಒಂದು ಗುಹೆಯಲ್ಲಿರಿಸಿಕೊಂಡಿತು. ಆಗ ಜಗತ್ತನ್ನೇ ಮುಳುಗಿಸುವಂಥಹ ಅತಿದೊಡ್ಡ ಮಳೆಯೂ ಸುರಿಯತೊಡಗಿತು.

12113011a ಅಥ ಶೀತಪರೀತಾಂಗೋ ಜಂಬುಕಃ ಕ್ಷುಚ್ಚ್ರಮಾನ್ವಿತಃ।
12113011c ಸದಾರಸ್ತಾಂ ಗುಹಾಮಾಶು ಪ್ರವಿವೇಶ ಜಲಾರ್ದಿತಃ।।

ಮಳೆಯಿಂದ ನೆನೆದು ಛಳಿಯಿಂದ ನಡುಗುತ್ತಿದ್ದ ಮತ್ತು ಹಸಿವು-ಬಾಯಾರಿಕೆಗಳಿಂದ ಬಳಲಿದ್ದ ಒಂದು ಗಂಡು ನರಿಯು ತನ್ನ ಪತ್ನಿಯೊಂದಿಗೆ ಆ ಗುಹೆಯನ್ನು ಪ್ರವೇಶಿಸಿತು.

12113012a ಸ ದೃಷ್ಟ್ವಾ ಮಾಂಸಜೀವೀ ತು ಸುಭೃಶಂ ಕ್ಷುಚ್ಚ್ರಮಾನ್ವಿತಃ।
12113012c ಅಭಕ್ಷಯತ್ತತೋ ಗ್ರೀವಾಮುಷ್ಟ್ರಸ್ಯ ಭರತರ್ಷಭ।।

ಭರತರ್ಷಭ! ಒಂಟೆಯ ಕತ್ತನ್ನು ನೋಡಿ ಅತಿಯಾಗಿ ಹಸಿದಿದ್ದ ಆ ಮಾಂಸಜೀವಿ ನರಿಯು ಅದನ್ನು ತಿನ್ನತೊಡಗಿತು.

12113013a ಯದಾ ತ್ವಬುಧ್ಯತಾತ್ಮಾನಂ ಭಕ್ಷ್ಯಮಾಣಂ ಸ ವೈ ಪಶುಃ।
12113013c ತದಾ ಸಂಕೋಚನೇ ಯತ್ನಮಕರೋದ್ ಭೃಶದುಃಖಿತಃ।।

ತನ್ನನ್ನು ಯಾರೋ ತಿನ್ನುತ್ತಿದ್ದಾರೆಂದು ತಿಳಿದೊಡನೆಯೇ ಅತ್ಯಂತ ದುಃಖಿತವಾದ ಆ ಪಶುವು ತನ್ನ ಕುತ್ತಿಗೆಯನ್ನು ಸಂಕುಚಿತಗೊಳಿಸಲು ಪ್ರಯತ್ನಿಸಿತು.

12113014a ಯಾವದೂರ್ಧ್ವಮಧಶ್ಚೈವ ಗ್ರೀವಾಂ ಸಂಕ್ಷಿಪತೇ ಪಶುಃ।
12113014c ತಾವತ್ತೇನ ಸದಾರೇಣ ಜಂಬುಕೇನ ಸ ಭಕ್ಷಿತಃ।।

ಆ ಪಶುವು ಮೇಲಕ್ಕೆ ಕೆಳಕ್ಕೆ ಮಾಡಿ ತನ್ನ ಕುತ್ತಿಗೆಯನ್ನು ಸಂಕ್ಷಿಪ್ತಗೊಳಿಸಲು ಪ್ರಯತ್ನಿಸುತ್ತಿರುವಾಗಲೇ ತನ್ನ ಪತ್ನಿಯೊಡನಿದ್ದ ನರಿಯು ಕುತ್ತಿಗೆಯನ್ನು ತಿಂದು ಹಾಕಿತು.

12113015a ಸ ಹತ್ವಾ ಭಕ್ಷಯಿತ್ವಾ ಚ ಜಂಬುಕೋಷ್ಟ್ರಂ ತತಸ್ತದಾ।
12113015c ವಿಗತೇ ವಾತವರ್ಷೇ ಚ ನಿಶ್ಚಕ್ರಾಮ ಗುಹಾಮುಖಾತ್।।

ಒಂಟೆಯನ್ನು ಕೊಂದು ಭಕ್ಷಿಸಿದ ನಂತರ, ಮಳೆ-ಗಾಳಿಗಳು ನಿಂತನಂತರ, ಆ ನರಿಯು ಗುಹೆಯಿಂದ ಹೊರಬಂದಿತು.

12113016a ಏವಂ ದುರ್ಬುದ್ಧಿನಾ ಪ್ರಾಪ್ತಮುಷ್ಟ್ರೇಣ ನಿಧನಂ ತದಾ।
12113016c ಆಲಸ್ಯಸ್ಯ ಕ್ರಮಾತ್ಪಶ್ಯ ಮಹದ್ದೋಷಮುಪಾಗತಮ್।।

ಹೀಗೆ ದುರ್ಬುದ್ಧಿ ಒಂಟೆಯು ನಿಧನವನ್ನು ಹೊಂದಿತು. ನೋಡು. ಆಲಸ್ಯದಿಂದಾಗಿ ಅದು ಮಹಾದೋಷವನ್ನು ತಂದುಕೊಂಡಿತು.

12113017a ತ್ವಮಪ್ಯೇತಂ ವಿಧಿಂ ತ್ಯಕ್ತ್ವಾ ಯೋಗೇನ ನಿಯತೇಂದ್ರಿಯಃ।
12113017c ವರ್ತಸ್ವ ಬುದ್ಧಿಮೂಲಂ ಹಿ ವಿಜಯಂ ಮನುರಬ್ರವೀತ್।।

ನೀನೂ ಕೂಡ ಈ ವಿಧಿಯನ್ನು ತೊರೆದು ಯೋಗದಿಂದ ನಿಯತೇಂದ್ರಿಯನಾಗಿರು. ವಿಜಯಕ್ಕೆ ಬುದ್ಧಿಯೇ ಮೂಲವೆಂದು ಮನುವು ಹೇಳಿದ್ದಾನೆ.

12113018a ಬುದ್ಧಿಶ್ರೇಷ್ಠಾನಿ ಕರ್ಮಾಣಿ ಬಾಹುಮಧ್ಯಾನಿ ಭಾರತ।
12113018c ತಾನಿ ಜಂಘಾಜಘನ್ಯಾನಿ ಭಾರಪ್ರತ್ಯವರಾಣಿ ಚ।।

ಭಾರತ! ಬುದ್ಧಿಯಿಂದ ಮಾಡುವ ಕರ್ಮಗಳು ಶ್ರೇಷ್ಠವಾದವು. ಬಾಹುಬಲದಿಂದ ಮಾಡುವ ಕರ್ಮಗಳು ಮಧ್ಯಮವಾದವುಗಳು. ಜಂಘಾಬಲದಿಂದ ಮಾಡುವ ಕರ್ಮಗಳು ಅಧಮಶ್ರೇಣಿಯವು. ಭಾರವನ್ನು ಹೊರುವ ಕಾರ್ಯವು ಅಧಮಾಧಮಶ್ರೇಣಿಯದು.

12113019a ರಾಜ್ಯಂ ತಿಷ್ಠತಿ ದಕ್ಷಸ್ಯ ಸಂಗೃಹೀತೇಂದ್ರಿಯಸ್ಯ ಚ। 12113019c 2ಗುಪ್ತಮಂತ್ರಶ್ರುತವತಃ ಸುಸಹಾಯಸ್ಯ ಚಾನಘ।।

ಅನಘ! ಇಂದ್ರಿಯಗಳನ್ನು ನಿಯಂತ್ರಣದಲ್ಲಿಟ್ಟುಕೊಂಡಿರುವ ದಕ್ಷನಲ್ಲಿ, ಗುಪ್ತವಾಗಿ ಸಮಾಲೋಚನೆಗಳನ್ನು ಮಾಡಿ ಸಲಹೆಗಳನ್ನು ಕೇಳುವವನಲ್ಲಿ ಮತ್ತು ಉತ್ತಮಸಹಾಯಕರನ್ನು ಹೊಂದಿದವನಲ್ಲಿ ರಾಜ್ಯವು ನಿಂತುಕೊಳ್ಳುತ್ತದೆ.

12113020a ಪರೀಕ್ಷ್ಯಕಾರಿಣೋಽರ್ಥಾಶ್ಚ ತಿಷ್ಠಂತೀಹ ಯುಧಿಷ್ಠಿರ।
12113020c ಸಹಾಯಯುಕ್ತೇನ ಮಹೀ ಕೃತ್ಸ್ನಾ ಶಕ್ಯಾ ಪ್ರಶಾಸಿತುಮ್।।

ಯುಧಿಷ್ಠಿರ! ಚೆನ್ನಾಗಿ ಪರೀಕ್ಷಿಸಿ ಕಾರ್ಯಗಳನ್ನು ಮಾಡುವವನಲ್ಲಿ ಅರ್ಥಗಳು ಸ್ಥಿರವಾಗಿ ಉಳಿಯುತ್ತವೆ. ಸಹಾಯಕರಿಂದ ಸಂಪನ್ನನಾದ ರಾಜನು ಅಖಂಡ ಭೂಮಂಡಲವನ್ನೂ ಶಾಸನಮಾಡಲು ಸಮರ್ಥನಾಗುತ್ತಾನೆ.

12113021a ಇದಂ ಹಿ ಸದ್ಭಿಃ ಕಥಿತಂ ವಿಧಿಜ್ಞೈಃ ಪುರಾ ಮಹೇಂದ್ರಪ್ರತಿಮಪ್ರಭಾವ।
12113021c ಮಯಾಪಿ ಚೋಕ್ತಂ ತವ ಶಾಸ್ತ್ರದೃಷ್ಟ್ಯಾ ತ್ವಮತ್ರ ಯುಕ್ತಃ ಪ್ರಚರಸ್ವ ರಾಜನ್।।

ರಾಜನ್! ಮಹೇಂದ್ರಪ್ರತಿಮಪ್ರಭಾವ! ಹಿಂದೆ ವಿಧಿಗಳನ್ನು ತಿಳಿದ ಸತ್ಪುರುಷರು ಇದನ್ನು ಹೇಳಿದ್ದರು. ನಾನೂ ಕೂಡ ಶಾಸ್ತ್ರಗಳಲ್ಲಿ ಕಂಡುಕೊಂಡಂತೆ ನಿನಗೆ ಈ ವಿಷಯಗಳನ್ನು ಹೇಳಿದ್ದೇನೆ. ನೀನು ಇವುಗಳನ್ನು ಅಳವಡಿಸಿಕೊಂಡು ವ್ಯವಹರಿಸು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಶಾಂತಿ ಪರ್ವಣಿ ರಾಜಧರ್ಮ ಪರ್ವಣಿ ಉಷ್ಟ್ರಗ್ರೀವೋಪಾಖ್ಯಾನೇ ತ್ರಯೋದಶಾಧಿಕಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ರಾಜಧರ್ಮ ಪರ್ವದಲ್ಲಿ ಉಷ್ಟ್ರಗ್ರೀವೋಪಾಖ್ಯಾನ ಎನ್ನುವ ನೂರಾಹದಿಮೂರನೇ ಅಧ್ಯಾಯವು.


  1. ಕೃತಯುಗ . ↩︎

  2. ಭಾರತದರ್ಶನದಲ್ಲಿ ಇದಕ್ಕೆ ಮೊದಲು ಈ ಶ್ಲೋಕಾರ್ಧವಿದೆ: ಆರ್ತಸ್ಯ ಬುದ್ಧಿಮೂಲಂ ಹಿ ವಿಜಯಂ ಮನುರಬ್ರವೀತ್। ↩︎