ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ರಾಜಧರ್ಮ ಪರ್ವ
ಅಧ್ಯಾಯ 112
ಸಾರ
ಮನುಷ್ಯರ ಸ್ವಭಾವವನ್ನು ತಿಳಿಯುವ ಬಗೆಗಿನ ವ್ಯಾಘ್ರ-ಗುಳ್ಳೇನರಿಯ ಸಂವಾದಕಥನ (1-86).
12112001 ಯುಧಿಷ್ಠಿರ ಉವಾಚ।
12112001a ಅಸೌಮ್ಯಾಃ ಸೌಮ್ಯರೂಪೇಣ ಸೌಮ್ಯಾಶ್ಚಾಸೌಮ್ಯದರ್ಶಿನಃ।
12112001c ಈದೃಶಾನ್ಪುರುಷಾಂಸ್ತಾತ ಕಥಂ ವಿದ್ಯಾಮಹೇ ವಯಮ್।।
ಯುಧಿಷ್ಠಿರನು ಹೇಳಿದನು: “ಅಸೌಮ್ಯ ಪುರುಷರು ಸೌಮ್ಯರಾಗಿಯೂ ಸೌಮ್ಯ ಪುರುಷರು ಅಸೌಮ್ಯರಾಗಿಯೂ ಕಾಣಸಿಗುತ್ತಾರೆ. ಹೀಗಿರುವಾಗ ಇವರು ಇಂಥವರೇ ಎಂದು ನಾವು ಹೇಗೆ ತಿಳಿದುಕೊಳ್ಳಬಹುದು?”
12112002 ಭೀಷ್ಮ ಉವಾಚ।
12112002a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್।
12112002c ವ್ಯಾಘ್ರಗೋಮಾಯುಸಂವಾದಂ ತಂ ನಿಬೋಧ ಯುಧಿಷ್ಠಿರ।।
ಭೀಷ್ಮನು ಹೇಳಿದನು: “ಯುಧಿಷ್ಠಿರ! ಇದಕ್ಕೆ ಸಂಬಂಧಿಸಿದಂತೆ ಪುರಾತನ ಇತಿಹಾಸವಾದ ವ್ಯಾಘ್ರ-ಗೋಮಾಯುಗಳ ಸಂವಾದವನ್ನು ಉದಾಹರಿಸುತ್ತಾರೆ. ಅದನ್ನು ಕೇಳು.
12112003a ಪುರಿಕಾಯಾಂ ಪುರಿ ಪುರಾ ಶ್ರೀಮತ್ಯಾಂ ಪೌರಿಕೋ ನೃಪಃ।
12112003c ಪರಹಿಂಸಾರುಚಿಃ ಕ್ರೂರೋ ಬಭೂವ ಪುರುಷಾಧಮಃ।।
ಹಿಂದೆ ಪುರಿಕಾ ಎಂಬ ಶ್ರೀಮಂತ ನಗರದಲ್ಲಿ ಪೌರಿಕ ಎಂಬ ನೃಪನಿದ್ದನು. ಪರರನ್ನು ಹಿಂಸಿಸುವುದರಲ್ಲಿಯೇ ಅಭಿರುಚಿಯನ್ನಿಟ್ಟುಕೊಂಡಿದ್ದ ಆ ಪುರುಷಾಧಮನು ಕ್ರೂರನಾಗಿದ್ದನು.
12112004a ಸ ತ್ವಾಯುಷಿ ಪರಿಕ್ಷೀಣೇ ಜಗಾಮಾನೀಪ್ಸಿತಾಂ ಗತಿಮ್।
12112004c ಗೋಮಾಯುತ್ವಂ ಚ ಸಂಪ್ರಾಪ್ತೋ ದೂಷಿತಃ ಪೂರ್ವಕರ್ಮಣಾ।।
ಅವನ ಆಯಸ್ಸು ಮುಗಿಯಲು ಅವನು ಯಾರೂ ಬಯಸದ ಗತಿಯನ್ನು ಹೊಂದಿದನು. ತನ್ನ ಪೂರ್ವಕರ್ಮಗಳಿಂದ ದೂಷಿತನಾದ ಅವನು ಗುಳ್ಳೇನರಿಯ ಜನ್ಮವನ್ನು ಪಡೆದುಕೊಂಡನು.
12112005a ಸಂಸ್ಮೃತ್ಯ ಪೂರ್ವಜಾತಿಂ ಸ ನಿರ್ವೇದಂ ಪರಮಂ ಗತಃ।
12112005c ನ ಭಕ್ಷಯತಿ ಮಾಂಸಾನಿ ಪರೈರುಪಹೃತಾನ್ಯಪಿ।।
ತನ್ನ ಪೂರ್ವಜನ್ಮದ ಕೃತ್ಯಗಳನ್ನು ನೆನಪಿಸಿಕೊಂಡು ಅದು ಪರಮ ಪಶ್ಚಾತ್ತಾಪವನ್ನು ಹೊಂದಿತು. “ಇನ್ನೊಬ್ಬರು ತಂದುಕೊಟ್ಟರೂ ಮಾಂಸವನ್ನು ನಾನು ತಿನ್ನುವುದಿಲ್ಲ” ಎಂದು ಆ ನರಿಯು ಘೋರ ಪ್ರತಿಜ್ಞೆಯನ್ನು ಮಾಡಿತು.
12112006a ಅಹಿಂಸ್ರಃ ಸರ್ವಭೂತೇಷು ಸತ್ಯವಾಕ್ಸುದೃಢವ್ರತಃ।
12112006c ಚಕಾರ ಚ ಯಥಾಕಾಮಮಾಹಾರಂ ಪತಿತೈಃ ಫಲೈಃ।।
ಸರ್ವಭೂತಗಳಲ್ಲಿ ಅಹಿಂಸೆಯಿಂದ ವರ್ತಿಸತೊಡಗಿತು. ಸತ್ಯವನ್ನೇ ನುಡಿಯುತ್ತಾ ದೃಢವ್ರತವಾಗಿದ್ದ ಆ ಗುಳ್ಳೇನರಿಯು ತಾವಾಗಿಯೇ ಕೆಳಕ್ಕೆ ಬಿದ್ದ ಫಲಗಳನ್ನು ಮಾತ್ರವೇ ತಿಂದು ಜೀವಿಸತೊಡಗಿತು.
12112007a ಶ್ಮಶಾನೇ ತಸ್ಯ ಚಾವಾಸೋ ಗೋಮಾಯೋಃ ಸಂಮತೋಽಭವತ್।
12112007c ಜನ್ಮಭೂಮ್ಯನುರೋಧಾಚ್ಚ ನಾನ್ಯದ್ವಾಸಮರೋಚಯತ್।।
ಶ್ಮಶಾನದಲ್ಲಿ ಹುಟ್ಟಿದ್ದ ಆ ಗುಳ್ಳೇನರಿಗೆ ಅದೇ ವಾಸಸ್ಥಾನವೂ ಆಗಿದ್ದಿತು. ತನ್ನ ಜನ್ಮಭೂಮಿಯನ್ನು ಬಿಟ್ಟು ಬೇರೆ ಎಲ್ಲಿಯೂ ಹೋಗಿ ವಾಸಿಸಲು ಅದಕ್ಕೆ ಇಷ್ಟವಾಗಿರಲಿಲ್ಲ.
12112008a ತಸ್ಯ ಶೌಚಮಮೃಷ್ಯಂತಃ ಸರ್ವೇ ತೇ ಸಹಜಾತಯಃ।
12112008c ಚಾಲಯಂತಿ ಸ್ಮ ತಾಂ ಬುದ್ಧಿಂ ವಚನೈಃ ಪ್ರಶ್ರಯೋತ್ತರೈಃ।।
ಆದರೆ ಅದರ ಶೌಚತ್ವವನ್ನು ಸಜಾತೀಯ ನರಿಗಳು ಸಹಿಸಿಕೊಳ್ಳಲಿಲ್ಲ. ಅವು ಪ್ರೇಮಪೂರ್ವಕ ಮಾತುಗಳಿಂದ ಅದರ ಬುದ್ಧಿಯನ್ನು ಬದಲಾಯಿಸಲು ಪ್ರಯತ್ನಿಸಿದವು.
12112009a ವಸನ್ ಪಿತೃವನೇ ರೌದ್ರೇ ಶೌಚಂ ಲಪ್ಸಿತುಮಿಚ್ಚಸಿ।
12112009c ಇಯಂ ವಿಪ್ರತಿಪತ್ತಿಸ್ತೇ ಯದಾ ತ್ವಂ ಪಿಶಿತಾಶನಃ।।
“ಈ ರೌದ್ರ ಶ್ಮಶಾನದಲ್ಲಿ ವಾಸಿಸುತ್ತಿರುವ ಮತ್ತು ಮಾಂಸಾಹಾರಿಯಾದ ನೀನು ಈ ಮಡಿವಂತಿಕೆಯನ್ನು ನಡೆಸಲು ಬಯಸುತ್ತಿರುವೆ. ಇದು ನಿನ್ನ ಗುಣಕ್ಕೂ ಧರ್ಮಕ್ಕೂ ವಿರುದ್ಧವಾಗಿದೆ.
12112010a ತತ್ಸಮೋ ವಾ ಭವಾಸ್ಮಾಭಿರ್ಭಕ್ಷ್ಯಾನ್ದಾಸ್ಯಾಮಹೇ ವಯಮ್।
12112010c ಭುಂಕ್ಷ್ವ ಶೌಚಂ ಪರಿತ್ಯಜ್ಯ ಯದ್ಧಿ ಭುಕ್ತಂ ತದಸ್ತಿ ತೇ1।।
ನೀನೂ ನಮ್ಮಂತೆಯೇ ಇರು. ನಾವು ನಿನಗೆ ತಿನ್ನುವುದಕ್ಕೆ ತಂದು ಕೊಡುತ್ತೇವೆ. ಈ ಮಡಿವಂತಿಕೆಯನ್ನು ತ್ಯಜಿಸಿ ನಾವು ತಂದಿದ್ದುದನ್ನು ತಿನ್ನು. ನಮಗೆ ಆಹಾರವಾಗಿದ್ದುದೇ ನಿನಗೂ ಆಗಲಿ.”
12112011a ಇತಿ ತೇಷಾಂ ವಚಃ ಶ್ರುತ್ವಾ ಪ್ರತ್ಯುವಾಚ ಸಮಾಹಿತಃ।
12112011c ಮಧುರೈಃ ಪ್ರಶ್ರಿತೈರ್ವಾಕ್ಯೈರ್ಹೇತುಮದ್ಭಿರನಿಷ್ಠುರೈಃ।।
ಅವರ ಈ ಮಾತನ್ನು ಕೇಳಿ ಸಮಾಹಿತವಾಗಿದ್ದ ಆ ನರಿಯು ವಿನಯಭರಿತ ಯುಕ್ತಿಯುಕ್ತ ಮತ್ತು ನಿಷ್ಠುರವಲ್ಲದ ಈ ಮಧುರ ಮಾತುಗಳನ್ನಾಡಿತು:
12112012a ಅಪ್ರಮಾಣಂ ಪ್ರಸೂತಿರ್ಮೇ ಶೀಲತಃ ಕ್ರಿಯತೇ ಕುಲಮ್।
12112012c ಪ್ರಾರ್ಥಯಿಷ್ಯೇ ತು ತತ್ಕರ್ಮ ಯೇನ ವಿಸ್ತೀರ್ಯತೇ ಯಶಃ।।
“ನಾನು ನರಿಯಾಗಿ ಹುಟ್ಟಿದ ಮಾತ್ರಕ್ಕೆ ಕೆಟ್ಟ ಕರ್ಮಗಳನ್ನು ಮಾಡಬೇಕು ಎನ್ನುವುದಕ್ಕೆ ಪ್ರಮಾಣವೇನೂ ಇಲ್ಲ. ಉತ್ತಮ ಶೀಲದಿಂದ ಕುಲದ ಪ್ರತಿಷ್ಠೆಯು ಹೆಚ್ಚುತ್ತದೆ. ನಾನೂ ಕೂಡ ವಂಶದ ಯಶಸ್ಸನ್ನು ಹೆಚ್ಚಿಸುವ ಕರ್ಮವನ್ನು ಮಾಡಬಯಸುತ್ತೇನೆ.
12112013a ಶ್ಮಶಾನೇ ಯದಿ ವಾಸೋ ಮೇ ಸಮಾಧಿರ್ಮೇ ನಿಶಾಮ್ಯತಾಮ್।
12112013c ಆತ್ಮಾ ಫಲತಿ ಕರ್ಮಾಣಿ ನಾಶ್ರಮೋ ಧರ್ಮಲಕ್ಷಣಮ್।।
ಶ್ಮಶಾನದಲ್ಲಿದ್ದುಕೊಂಡು ನಾನು ಈ ಮಡಿವಂತಿಕೆಯನ್ನು ಏಕೆ ಆಚರಿಸುತ್ತಿದ್ದೇನೆ ಎನ್ನುವುದಕ್ಕೆ ಈ ಸಮಾಧಾನವನ್ನು ಕೇಳಿ. ಆತ್ಮವೇ ಶುಭಕರ್ಮಗಳನ್ನು ಮಾಡಲು ಪ್ರೇರೇಪಿಸುತ್ತದೆ. ಕೇವಲ ಆಶ್ರಮವಾಸವೇ ಧರ್ಮಕ್ಕೆ ಕಾರಣವಾಗುವುದಿಲ್ಲ2.
12112014a ಆಶ್ರಮೇ ಯೋ ದ್ವಿಜಂ ಹನ್ಯಾದ್ಗಾಂ ವಾ ದದ್ಯಾದನಾಶ್ರಮೇ।
12112014c ಕಿಂ ನು ತತ್ಪಾತಕಂ ನ ಸ್ಯಾತ್ತದ್ವಾ ದತ್ತಂ ವೃಥಾ ಭವೇತ್।।
ಆಶ್ರಮದಲ್ಲಿ ದ್ವಿಜನನ್ನು ಕೊಂದರೆ ಅದು ಪಾತಕವಾಗುವುದಿಲ್ಲವೇ? ಮತ್ತು ಆಶ್ರಮದ ಹೊರಗೆ ಗೋವನ್ನು ದಾನಮಾಡಿದರೆ ಅದು ವ್ಯರ್ಥವಾಗುತ್ತದೆಯೇ?
12112015a ಭವಂತಃ ಸರ್ವಲೋಭೇನ3 ಕೇವಲಂ ಭಕ್ಷಣೇ ರತಾಃ।
12112015c ಅನುಬಂಧೇ ತು ಯೇ4 ದೋಷಾಸ್ತಾನ್ನ ಪಶ್ಯಂತಿ ಮೋಹಿತಾಃ।।
ನೀವೆಲ್ಲರೂ ಕೇವಲ ಲೋಭದಿಂದ ತಿನ್ನುವುದರಲ್ಲಿಯೇ ನಿರತರಾಗಿದ್ದೀರಿ. ಮೋಹಿತರಾದ ನೀವು ಇದರಿಂದಾಗಿ ಉಂಟಾಗುವ ದೋಷಗಳನ್ನು ಕಾಣುತ್ತಿಲ್ಲ.
12112016a ಅಪ್ರತ್ಯಯಕೃತಾಂ ಗರ್ಹ್ಯಾಮರ್ಥಾಪನಯದೂಷಿತಾಮ್।
12112016c ಇಹ ಚಾಮುತ್ರ ಚಾನಿಷ್ಟಾಂ ತಸ್ಮಾದ್ವೃತ್ತಿಂ ನ ರೋಚಯೇ।।
ನಿಮ್ಮ ಜೀವನವು ದುಃಖಮಯವಾಗಿದೆ. ಅಜ್ಞಾನಕೃತವಾಗಿದೆ. ನಿಂದನೀಯವೂ ಆಗಿದೆ. ಧರ್ಮಹಾನಿಗೆ ಕಾರಣವಾಗಿದೆ ಮತ್ತು ದೂಷಿತವಾಗಿದೆ. ಇಹಲೋಕ-ಪರಲೋಕಗಳೆರಡರಲ್ಲೂ ಅನಿಷ್ಟವನ್ನೇ ನೀಡುವಂಥಹದಾಗಿದೆ. ಆದುದರಿಂದ ನಿಮ್ಮ ವೃತ್ತಿಯು ನನಗೆ ರುಚಿಸುವುದಿಲ್ಲ.”
12112017a ತಂ ಶುಚಿಂ ಪಂಡಿತಂ ಮತ್ವಾ ಶಾರ್ದೂಲಃ ಖ್ಯಾತವಿಕ್ರಮಃ।
12112017c ಕೃತ್ವಾತ್ಮಸದೃಶಾಂ ಪೂಜಾಂ ಸಾಚಿವ್ಯೇಽವರ್ಧಯತ್ಸ್ವಯಮ್।।
ಆ ನರಿಯು ಮಡಿ ಪಂಡಿತನೆಂದು ಭಾವಿಸಿ ಖ್ಯಾತವಿಕ್ರಮ ಶಾರ್ದೂಲವೊಂದು ತನಗೆ ತಕ್ಕುದಾದ ಪೂಜೆಯನ್ನು ಸಲ್ಲಿಸಿ ಆ ನರಿಯನ್ನು ತನ್ನ ಸಚಿವನನ್ನಾಗಿ ನಿಯಮಿಸಿಕೊಂಡು ಹೇಳಿತು:
12112018a ಸೌಮ್ಯ ವಿಜ್ಞಾತರೂಪಸ್ತ್ವಂ ಗಚ್ಚ ಯಾತ್ರಾಂ ಮಯಾ ಸಹ।
12112018c ವ್ರಿಯಂತಾಮೀಪ್ಸಿತಾ ಭೋಗಾಃ ಪರಿಹಾರ್ಯಾಶ್ಚ ಪುಷ್ಕಲಾಃ।।
“ಸೌಮ್ಯ! ನಿನ್ನ ರೂಪವನ್ನು ತಿಳಿದುಕೊಂಡಿದ್ದೇನೆ. ನನ್ನೊಡನೆ ಬಾ. ನಿನಗೆ ಇಷ್ಟವಾದಂತೆ ಯಥೇಚ್ಛ ಭೋಗಗಳನ್ನು ಅನುಭವಿಸು. ನಿನಗೆ ಇಷ್ಟವಾಗಿರದೇ ಇದ್ದುದನ್ನು ಬಿಟ್ಟು ಬಿಡು.
12112019a ತೀಕ್ಷ್ಣಾ ವಯಮಿತಿ ಖ್ಯಾತಾ ಭವತೋ ಜ್ಞಾಪಯಾಮಹೇ।
12112019c ಮೃದುಪೂರ್ವಂ ಘಾತಿನಸ್ತೇ5 ಶ್ರೇಯಶ್ಚಾಧಿಗಮಿಷ್ಯತಿ।।
ನಾನು ಮಹಾಕ್ರೂರಿ ಎಂದು ಖ್ಯಾತನಾಗಿದ್ದೇನೆ. ಇದನ್ನು ನಿನ್ನ ಜ್ಞಾಪಕಕ್ಕೆ ತರುತ್ತಿದ್ದೇನೆ. ಘಾತಿಯನ್ನುಂಟುಮಾಡದೇ ಮೃದುಪೂರ್ವಕವಾಗಿದ್ದರೆ ನೀನು ಶ್ರೇಯಸ್ಸನ್ನು ಪಡೆಯುತ್ತೀಯೆ.”
12112020a ಅಥ ಸಂಪೂಜ್ಯ ತದ್ವಾಕ್ಯಂ ಮೃಗೇಂದ್ರಸ್ಯ ಮಹಾತ್ಮನಃ।
12112020c ಗೋಮಾಯುಃ ಪ್ರಶ್ರಿತಂ ವಾಕ್ಯಂ ಬಭಾಷೇ ಕಿಂ ಚಿದಾನತಃ।।
ಮಹಾತ್ಮ ಮೃಗೇಂದ್ರನ ಆ ಮಾತನ್ನು ಗೌರವಿಸಿ ಗುಳ್ಳೇನರಿಯು ತಲೆಯನ್ನು ತಗ್ಗಿಸಿಕೊಂಡು ವಿನಯಯುಕ್ತವಾದ ಈ ಮಾತನ್ನಾಡಿತು:
12112021a ಸದೃಶಂ ಮೃಗರಾಜೈತತ್ತವ ವಾಕ್ಯಂ ಮದಂತರೇ।
12112021c ಯತ್ಸಹಾಯಾನ್ಮೃಗಯಸೇ ಧರ್ಮಾರ್ಥಕುಶಲಾನ್ಶುಚೀನ್।।
“ಮೃಗರಾಜ! ನನ್ನ ಕುರಿತು ನೀನಾಡಿದ ಮಾತು ನಿನಗೆ ತಕ್ಕುದಾಗಿಯೇ ಇದೆ. ಧರ್ಮಾರ್ಥಕುಶಲರಾದ ಮತ್ತು ಶುಚರಾದ ಮಂತ್ರಿಗಳನ್ನು ಹುಡುಕುವುದು ಉಚಿತವಾಗಿಯೇ ಇದೆ.
12112022a ನ ಶಕ್ಯಮನಮಾತ್ಯೇನ ಮಹತ್ತ್ವಮನುಶಾಸಿತುಮ್।
12112022c ದುಷ್ಟಾಮಾತ್ಯೇನ ವಾ ವೀರ ಶರೀರಪರಿಪಂಥಿನಾ।।
ವೀರ! ಮಹತ್ತರವಾದ ಈ ಕಾಡನ್ನು ಮಂತ್ರಿಯಿಲ್ಲದೇ ಶಾಸನಮಾಡಲು ಶಕ್ಯವಿಲ್ಲ. ರಾಜನಿಗೇ ಶತ್ರುವಿನಂತಿರುವ ದುಷ್ಟ ಅಮಾತ್ಯನಿಂದಲೂ ಇದು ಸಾಧ್ಯವಾಗುವುದಿಲ್ಲ.
12112023a ಸಹಾಯಾನನುರಕ್ತಾಂಸ್ತು ಯತೇತಾನುಪಸಂಹಿತಾನ್6।
12112023c ಪರಸ್ಪರಮಸಂಘುಷ್ಟಾನ್ವಿಜಿಗೀಷೂನಲೋಲುಪಾನ್।।
12112024a ತಾನತೀತೋಪಧಾನ್ ಪ್ರಾಜ್ಞಾನ್ ಹಿತೇ ಯುಕ್ತಾನ್ಮನಸ್ವಿನಃ।
12112024c ಪೂಜಯೇಥಾ ಮಹಾಭಾಗಾನ್ಯಥಾಚಾರ್ಯಾನ್ಯಥಾ ಪಿತೄನ್।।
ಮಹಾಭಾಗ! ನಿನ್ನಲ್ಲಿ ಅನುರಕ್ತರಾಗಿರುವ, ಪ್ರಯತ್ನಶೀಲರಾದ, ಏಕಾಗ್ರಚಿತ್ತರಾದ, ಪಕ್ಷ-ಪ್ರತಿಪಕ್ಷಗಳ ಪರಸ್ಪರ ಸಂಪರ್ಕವಿಲ್ಲದಿರುವ, ನಿನ್ನ ವಿಜಯಾಭಿಲಾಷಿಗಳಾಗಿರುವ, ಲೋಲುಪರಲ್ಲದ, ವಂಚನಾರಹಿತರಾಗಿರುವ, ನಿನ್ನ ಹಿತದಲ್ಲಿಯೇ ನಿರತರಾಗಿರುವ ಪ್ರಾಜ್ಞ, ಮನಸ್ವೀ ಸಚಿವರನ್ನು ನೀನು ಆಚಾರ್ಯರನ್ನು ಅಥವಾ ಪಿತೃಗಳನ್ನು ಪೂಜಿಸುವಂತೆ ಪೂಜಿಸಬೇಕು.
12112025a ನ ತ್ವೇವಂ ಮಮ ಸಂತೋಷಾದ್ರೋಚತೇಽನ್ಯನ್ಮೃಗಾಧಿಪ।
12112025c ನ ಕಾಮಯೇ ಸುಖಾನ್ ಭೋಗಾನೈಶ್ವರ್ಯಂ ವಾ ತ್ವದಾಶ್ರಯಮ್।।
ಮೃಗಾಧಿಪ! ಸಂತೋಷವನ್ನಲ್ಲದೇ ಬೇರೆ ಯಾವುದನ್ನೂ ನನ್ನ ಮನಸ್ಸು ಬಯಸುವುದಿಲ್ಲ. ಸುಖಗಳನ್ನಾಗಲೀ, ಅವುಗಳ ಆಶ್ರಯಗಳಾದ ಭೋಗ-ಐಶ್ವರ್ಯಗಳನ್ನಾಗಲೀ ಆಶಿಸುವುದಿಲ್ಲ.
12112026a ನ ಯೋಕ್ಷ್ಯತಿ ಹಿ ಮೇ ಶೀಲಂ ತವ ಭೃತ್ಯೈಃ ಪುರಾತನೈಃ।
12112026c ತೇ ತ್ವಾಂ ವಿಭೇದಯಿಷ್ಯಂತಿ ದುಃಖಶೀಲಾ7 ಮದಂತರೇ।।
ನಿನ್ನ ಹಿಂದಿನ ಸೇವಕರೊಡನೆ ನನ್ನ ಶೀಲವು ಹೊಂದಿಕೊಳ್ಳುವುದಿಲ್ಲ. ದುಃಖಶೀಲರಾದ ಅವರು ನನ್ನ ಮತ್ತು ನಿನ್ನ ವಿಷಯದಲ್ಲಿ ಭೇದವನ್ನುಂಟುಮಾಡುತ್ತಾರೆ.
12112027a ಸಂಶ್ರಯಃ ಶ್ಲಾಘನೀಯಸ್ತ್ವಮನ್ಯೇಷಾಮಪಿ ಭಾಸ್ವತಾಮ್।
12112027c ಕೃತಾತ್ಮಾ ಸುಮಹಾಭಾಗಃ ಪಾಪಕೇಷ್ವಪ್ಯದಾರುಣಃ।।
ಕೃತಾತ್ಮನೂ, ಮಹಾಭಾಗನೂ, ಪಾಪಿಗಳಿಗೂ ದಯಾಪರನೂ ಆಗಿರುವ ನೀನು ನಿನ್ನನ್ನು ಶ್ಲಾಘಿಸುವ ಬಲಿಷ್ಠ ಪ್ರಾಣಿಗಳಿಗೂ ಆಶ್ರಯದಾತನಾಗಿರುವೆ.
12112028a ದೀರ್ಘದರ್ಶೀ ಮಹೋತ್ಸಾಹಃ ಸ್ಥೂಲಲಕ್ಷ್ಯೋ ಮಹಾಬಲಃ।
12112028c ಕೃತೀ ಚಾಮೋಘಕರ್ತಾಸಿ ಭಾವ್ಯೈಶ್ಚ8 ಸಮಲಂಕೃತಃ।।
ನೀನು ದೀರ್ಘದರ್ಶೀ. ಮಹಾ ಉತ್ಸಾಹವುಳ್ಳವನು. ಸ್ಪಷ್ಟ ಉದ್ದೇಶವನ್ನಿಟ್ಟುಕೊಂಡಿರುವೆ. ಮಹಾಬಲಶಾಲಿಯಾಗಿರುವೆ. ಅಮೋಘ ಕಾರ್ಯಗಳನ್ನು ಮಾಡುವವನು. ಉತ್ತಮ ಭಾವಗಳಿಂದ ಸಮಲಂಕೃತನಾಗಿರುವೆ.
12112029a ಕಿಂ ತು ಸ್ವೇನಾಸ್ಮಿ ಸಂತುಷ್ಟೋ ದುಃಖಾ ವೃತ್ತಿರನುಷ್ಠಿತಾ।
12112029c ಸೇವಾಯಾಶ್ಚಾಪಿ ನಾಭಿಜ್ಞಃ ಸ್ವಚ್ಚಂದೇನ ವನೇಚರಃ।।
ನಾನಾದರೋ ಸಂತುಷ್ಟನಾಗಿರುವೆನು. ದುಃಖಕರ ವೃತ್ತಿಯನ್ನು ಕೈಗೊಂಡಿದ್ದೇನೆ. ಸೇವೆಮಾಡುವುದನ್ನೂ ನಾನು ತಿಳಿದಿಲ್ಲ. ಸ್ವಚ್ಚಂದ ವನಚರನು ನಾನು.
12112030a ರಾಜೋಪಕ್ರೋಶದೋಷಾಶ್ಚ ಸರ್ವೇ ಸಂಶ್ರಯವಾಸಿನಾಮ್।
12112030c ವನಚರ್ಯಾ9 ಚ ನಿಃಸಂಗಾ ನಿರ್ಭಯಾ ನಿರವಗ್ರಹಾ।।
ರಾಜಾಶ್ರಯದಲ್ಲಿರುವವರಿಗೆ ರಾಜನ ಕೋಪಕ್ಕೆ ಒಳಗಾಗುವ ಸರ್ವ ದೋಷಗಳೂ ಇರುತ್ತವೆ. ನಾನಾದರೋ ನಿಃಸಂಗ, ನಿರ್ಭಯ ಮತ್ತು ನಿರವಗ್ರಹ ವನಚರನು.
12112031a ನೃಪೇಣಾಹೂಯಮಾನಸ್ಯ ಯತ್ತಿಷ್ಠತಿ ಭಯಂ ಹೃದಿ।
12112031c ನ ತತ್ತಿಷ್ಠತಿ ತುಷ್ಟಾನಾಂ ವನೇ ಮೂಲಫಲಾಶಿನಾಮ್।।
ನೃಪನು ಕರೆದಾಗ ಹೃದಯದಲ್ಲಿ ಯಾವ ಭಯವಿರುವುದೋ ಆ ಭಯವು ವನದಲ್ಲಿಯ ಫಲ-ಮೂಲಗಳನ್ನು ತಿಂದು ತೃಪ್ತರಾಗಿರುವವರಿಗೆ ಇರುವುದಿಲ್ಲ.
12112032a ಪಾನೀಯಂ ವಾ ನಿರಾಯಾಸಂ ಸ್ವಾದ್ವನ್ನಂ ವಾ ಭಯೋತ್ತರಮ್।
12112032c ವಿಚಾರ್ಯ ಖಲು ಪಶ್ಯಾಮಿ ತತ್ಸುಖಂ ಯತ್ರ ನಿರ್ವೃತಿಃ।।
ನಿರಾಯಾಸವಾಗಿ ದೊರೆಯುವ ನೀರು ಅಥವಾ ಭಯವನ್ನುಂಟುಮಡುವ ಸ್ವಾದಿಷ್ಟ ಭೋಜನ ಇವೆರಡರ ಕುರಿತು ವಿಚಾರಿಸಿದರೆ ಯಾವುದೇ ವಿಧವಾದ ಭಯವಿಲ್ಲದಿರುವುದರಲ್ಲಿ ಯೋಗ್ಯ ಸುಖವೆಂದು ನಾನು ತಿಳಿದಿರುತ್ತೇನೆ.
12112033a ಅಪರಾಧೈರ್ನ ತಾವಂತೋ ಭೃತ್ಯಾಃ ಶಿಷ್ಟಾ ನರಾಧಿಪೈಃ।
12112033c ಉಪಘಾತೈರ್ಯಥಾ ಭೃತ್ಯಾ ದೂಷಿತಾ ನಿಧನಂ ಗತಾಃ।।
ನರಾಧಿಪರು ಅಪರಾಧದ ಕಾರಣದಿಂದ ತಮ್ಮ ಸೇವಕರನ್ನು ದಂಡಿಸುವುದಿಲ್ಲ. ಕಾರ್ಯದಲ್ಲಿ ಅಸಮರ್ಥರಾಗಿರುವುದರಿಂದ ಸೇವಕರು ನಿಧನಹೊಂದುತ್ತಾರೆ.
12112034a ಯದಿ ತ್ವೇತನ್ಮಯಾ ಕಾರ್ಯಂ ಮೃಗೇಂದ್ರೋ ಯದಿ ಮನ್ಯತೇ।
12112034c ಸಮಯಂ ಕೃತಮಿಚ್ಚಾಮಿ ವರ್ತಿತವ್ಯಂ ಯಥಾ ಮಯಿ।।
ಮೃಗೇಂದ್ರ! ನಾನು ನಿನ್ನ ಈ ಕಾರ್ಯವನ್ನು ಮಾಡಬೇಕೆಂದು ನೀನು ಇಚ್ಛಿಸುವೆಯಾದರೆ ನಿನ್ನೊಂದಿಗೆ ಒಂದು ಒಪ್ಪಂದವನ್ನು ಮಾಡಿಕೊಳ್ಳಲು ಬಯಸುತ್ತೇನೆ. ಅದರಂತೆ ನೀನು ನನ್ನೊಡನೆ ವ್ಯವಹರಿಸಬೇಕು.
12112035a ಮದೀಯಾ ಮಾನನೀಯಾಸ್ತೇ ಶ್ರೋತವ್ಯಂ ಚ ಹಿತಂ ವಚಃ।
12112035c ಕಲ್ಪಿತಾ ಯಾ ಚ ತೇ ವೃತ್ತಿಃ ಸಾ ಭವೇತ್ ತವ ಸುಸ್ಥಿರಾ।।
ನೀನು ನನ್ನವರನ್ನು ಗೌರವಿಸಬೇಕು. ಹಿತವಚನಗಳನ್ನು ಕೇಳಬೇಕು. ನೀನು ನನಗೆ ಯಾವ ವೃತ್ತಿಯನ್ನು ಕಲ್ಪಿಸುತ್ತಿರುವೆಯೋ ಅದು ನಿನ್ನಲ್ಲಿ ಸುಸ್ಥಿರವಾಗಿರಬೇಕು.
12112036a ನ ಮಂತ್ರಯೇಯಮನ್ಯೈಸ್ತೇ ಸಚಿವೈಃ ಸಹ ಕರ್ಹಿ ಚಿತ್।
12112036c ನೀತಿಮಂತಃ ಪರೀಪ್ಸಂತೋ ವೃಥಾ ಬ್ರೂಯುಃ ಪರೇ ಮಯಿ।।
ನಿನ್ನ ಇತರ ಮಂತ್ರಿಗಳೊಂದಿಗೆ ನಾನು ಯಾವುದೇ ವಿಷಯದಲ್ಲಿಯೂ ಎಂದೂ ಪರಾಮರ್ಶಿಸುವುದಿಲ್ಲ. ನೀತಿಮಂತರಾದ ಅವರು ಅಸೂಯೆಯಿಂದ ನನ್ನ ಮೇಲೆ ವ್ಯರ್ಥ ಆಪಾದನೆಗಳನ್ನು ಹೊರಿಸುತ್ತಾರೆ.
12112037a ಏಕ ಏಕೇನ ಸಂಗಮ್ಯ ರಹೋ ಬ್ರೂಯಾಂ ಹಿತಂ ತವ।
12112037c ನ ಚ ತೇ ಜ್ಞಾತಿಕಾರ್ಯೇಷು ಪ್ರಷ್ಟವ್ಯೋಽಹಂ ಹಿತಾಹಿತೇ।।
ನಾನು ಏಕಾಕಿಯಾಗಿ ನೀನು ಒಬ್ಬನೇ ಇರುವಾಗ ರಹಸ್ಯದಲ್ಲಿ ನಿನ್ನ ಬಳಿಬಂದು ನಿನಗೆ ಹಿತಮಾತುಗಳನ್ನು ಹೇಳುತ್ತೇನೆ. ನೀನೂ ಕೂಡ ನಿನ್ನ ಜ್ಞಾತಿಬಾಂಧವರ ಹಿತಾಹಿತಗಳ ಕುರಿತು ನನ್ನನ್ನು ಕೇಳಬಾರದು.
12112038a ಮಯಾ ಸಂಮಂತ್ರ್ಯ ಪಶ್ಚಾಚ್ಚ ನ ಹಿಂಸ್ಯಾಃ ಸಚಿವಾಸ್ತ್ವಯಾ।
12112038c ಮದೀಯಾನಾಂ ಚ ಕುಪಿತೋ ಮಾ ತ್ವಂ ದಂಡಂ ನಿಪಾತಯೇಃ।।
ನನ್ನಿಂದ ಸಲಹೆಗಳನ್ನು ಪಡೆದನಂತರ ನಿನ್ನ ಇತರ ಮಂತ್ರಿಗಳು ಅಪರಾಧಿಗಳೆಂದು ಕಂಡುಬಂದರೂ ಅವರನ್ನು ಹಿಂಸಿಸಬಾರದು. ಹಾಗೆಯೇ ಕುಪಿತನಾಗಿ ನನ್ನವರನ್ನೂ ದಂಡಿಸಬಾರದು.”
12112039a ಏವಮಸ್ತ್ವಿತಿ ತೇನಾಸೌ ಮೃಗೇಂದ್ರೇಣಾಭಿಪೂಜಿತಃ।
12112039c ಪ್ರಾಪ್ತವಾನ್ಮತಿಸಾಚಿವ್ಯಂ ಗೋಮಾಯುರ್ವ್ಯಾಘ್ರಯೋನಿತಃ।।
ಹಾಗೆಯೇ ಆಗಲೆಂದು ಮೃಗೇಂದ್ರನು ನರಿಯನ್ನು ಗೌರವಿಸಿದನು. ಹುಲಿಯು ಆ ನರಿಯನ್ನು ಬುದ್ಧಿಸಚಿವನಾಗಿ ಪಡೆದುಕೊಂಡನು.
12112040a ತಂ ತಥಾ ಸತ್ಕೃತಂ ದೃಷ್ಟ್ವಾ ಯುಜ್ಯಮಾನಂ ಚ ಕರ್ಮಣಿ।
12112040c ಪ್ರಾದ್ವಿಷನ್ ಕೃತಸಂಘಾತಾಃ ಪೂರ್ವಭೃತ್ಯಾ ಮುಹುರ್ಮುಹುಃ।।
ಅವನು ಹಾಗೆ ಸತ್ಕೃತನಾಗಿ ಮಂತ್ರಿಯಾಗಿ ನಿಯುಕ್ತನಾದುದನ್ನು ನೋಡಿ ರಾಜನ ಮೊದಲಿದ್ದ ಸೇವಕರು ಒಟ್ಟಾಗಿ ನರಿಯನ್ನು ದ್ವೇಷಿಸತೊಡಗಿದವು.
12112041a ಮಿತ್ರಬುದ್ಧ್ಯಾ ಚ ಗೋಮಾಯುಂ ಸಾಂತ್ವಯಿತ್ವಾ ಪ್ರವೇಶ್ಯ ಚ।
12112041c ದೋಷೇಷು ಸಮತಾಂ ನೇತುಮೈಚ್ಚನ್ನಶುಭಬುದ್ಧಯಃ।।
ಆ ಅಶುಭಬುದ್ಧಿಗಳು ನರಿಯೊಂದಿಗೆ ಮಿತ್ರತ್ವವನ್ನು ತೋರಿಸುತ್ತಾ ಸಂತವಿಸಿ ಪ್ರಸನ್ನಗೊಳಿಸಿ ಅದನ್ನೂ ದೋಷಗಳಲ್ಲಿ ತಮ್ಮ ಸಮನಾಗಿ ಮಾಡುವಂತೆ ಪ್ರಯತ್ನಿಸುತ್ತಿದ್ದವು.
12112042a ಅನ್ಯಥಾ ಹ್ಯುಚಿತಾಃ ಪೂರ್ವಂ ಪರದ್ರವ್ಯಾಪಹಾರಿಣಃ।
12112042c ಅಶಕ್ತಾಃ ಕಿಂ ಚಿದಾದಾತುಂ ದ್ರವ್ಯಂ ಗೋಮಾಯುಯಂತ್ರಿತಾಃ।।
ಹಿಂದೆ ಇತರರ ದ್ರವ್ಯಗಳನ್ನು ಅಪಹರಿಸಿ ಬದುಕುತ್ತಿದ್ದ ಅವು ನರಿಯು ಬುದ್ಧಿಮಂತ್ರಿಯಾದ ನಂತರ ಅದರ ನಿಯಂತ್ರಣಕ್ಕೊಳಗಾಗಿ ಏನನ್ನೂ ಅಪಹರಿಸಲು ಶಕ್ತರಾಗಲಿಲ್ಲ.
12112043a ವ್ಯುತ್ಥಾನಂ ಚಾತ್ರ ಕಾಂಕ್ಷದ್ಭಿಃ ಕಥಾಭಿಃ ಪ್ರವಿಲೋಭ್ಯತೇ।
12112043c ಧನೇನ ಮಹತಾ ಚೈವ ಬುದ್ಧಿರಸ್ಯ ವಿಲೋಭ್ಯತೇ।।
ಹೇಗಾದರೂ ಮಾಡಿ ಆ ನರಿಯನ್ನು ಪ್ರಲೋಭಗೊಳಿಸಬೇಕೆಂದೇ ಅವು ಬಯಸುತ್ತಿದ್ದವು. ಅಪಾರ ಧನದ ಆಸೆಯನ್ನು ತೋರಿಸಿ ಅದರ ಬುದ್ಧಿಯನ್ನು ಪ್ರಲೋಭನಗೊಳಿಸಲು ಪ್ರಯತ್ನಿಸುತ್ತಿದ್ದವು.
12112044a ನ ಚಾಪಿ ಸ ಮಹಾಪ್ರಾಜ್ಞಸ್ತಸ್ಮಾದ್ಧೈರ್ಯಾಚ್ಚಚಾಲ ಹ।
12112044c ಅಥಾಸ್ಯ ಸಮಯಂ ಕೃತ್ವಾ ವಿನಾಶಾಯ ಸ್ಥಿತಾಃ ಪರೇ।।
ಆದರೆ ಮಹಾಪ್ರಾಜ್ಞ ನರಿಯು ಪ್ರಲೋಭನೆಗೊಳಗಾಗದೇ ಧೈರ್ಯದಿಂದ ಮನಸ್ಸನ್ನು ಸ್ಥಿರಗೊಳಿಸಿತು. ಆಗ ಆ ಪೂರ್ವಮಂತ್ರಿಗಳು ನರಿಯನ್ನು ವಿನಾಶಗೊಳಿಸುವ ಶಪಥವನ್ನು ಮಾಡಿದವು.
12112045a ಈಪ್ಸಿತಂ ಚ ಮೃಗೇಂದ್ರಸ್ಯ ಮಾಂಸಂ ಯತ್ತತ್ರ ಸಂಸ್ಕೃತಮ್।
12112045c ಅಪನೀಯ ಸ್ವಯಂ ತದ್ಧಿ ತೈರ್ನ್ಯಸ್ತಂ ತಸ್ಯ ವೇಶ್ಮನಿ।।
ಒಮ್ಮೆ ಅವರು ಮೃಗೇಂದ್ರನ ಇಷ್ಟವಾದ ಸಂಸ್ಕೃತ ಮಾಂಸವನ್ನು ಅದರ ಮನೆಯಿಂದ ಅಪಹರಿಸಿಕೊಂಡು ಹೋಗಿ ನರಿಯ ಮನೆಯಲ್ಲಿಟ್ಟವು.
12112046a ಯದರ್ಥಂ ಚಾಪ್ಯಪಹೃತಂ ಯೇನ ಯಚ್ಚೈವ ಮಂತ್ರಿತಮ್।
12112046c ತಸ್ಯ ತದ್ವಿದಿತಂ ಸರ್ವಂ ಕಾರಣಾರ್ಥಂ ಚ ಮರ್ಷಿತಮ್।।
ಯಾರ ಸಲಹೆಯಂತೆ ಯಾವ ಕಾರಣಕ್ಕಾಗಿ ಅದನ್ನು ಅಪಹರಿಸಲಾಯಿತು ಎನ್ನುವುದೆಲ್ಲವೂ ಅವುಗಳಿಗೆ ತಿಳಿದಿದ್ದವು. ಅದರೂ ಅವು ಸುಮ್ಮನಿದ್ದುಬಿಟ್ಟವು.
12112047a ಸಮಯೋಽಯಂ ಕೃತಸ್ತೇನ ಸಾಚಿವ್ಯಮುಪಗಚ್ಚತಾ।
12112047c ನೋಪಘಾತಸ್ತ್ವಯಾ ಗ್ರಾಹ್ಯೋ ರಾಜನ್ಮೈತ್ರೀಮಿಹೇಚ್ಚತಾ।।
ಮಂತ್ರಿತ್ವವನ್ನು ಸ್ವೀಕರಿಸುವಾಗ ನರಿಯು ಹುಲಿಯೊಂದಿಗೆ “ರಾಜನ್! ನನ್ನ ಮೈತ್ರಿಯನ್ನು ಇಚ್ಛಿಸುವೆಯಾದರೆ ಬೇರೆಯವರ ಮಾತನ್ನು ಕೇಳಿ ನನ್ನನ್ನು ಹಿಂಸಸಬಾರದು” ಎಂಬ ಒಪ್ಪಂದವನ್ನು ಮಾಡಿಕೊಂಡಿತ್ತು.
12112048a ಭೋಜನೇ ಚೋಪಹರ್ತವ್ಯೇ ತನ್ಮಾಂಸಂ ನ ಸ್ಮ ದೃಶ್ಯತೇ।
12112048c ಮೃಗರಾಜೇನ ಚಾಜ್ಞಪ್ತಂ ಮೃಗ್ಯತಾಂ ಚೋರ ಇತ್ಯುತ।।
ತನ್ನ ಭೋಜನವು ಅಪಹರಿಸಲ್ಪಟ್ಟು ಮಾಂಸವು ಕಾಣದಿರಲು ಮೃಗರಾಜನು ಸೇವಕರಿಗೆ ಕಳ್ಳನನ್ನು ಹುಡುಕುವಂತೆ ಆಜ್ಞಾಪಿಸಿದನು.
12112049a ಕೃತಕೈಶ್ಚಾಪಿ ತನ್ಮಾಂಸಂ ಮೃಗೇಂದ್ರಾಯೋಪವರ್ಣಿತಮ್।
12112049c ಸಚಿವೇನೋಪನೀತಂ ತೇ ವಿದುಷಾ ಪ್ರಾಜ್ಞಮಾನಿನಾ।।
ಮೋಸದಿಂದ ಆ ಮಾಂಸವನ್ನು ಕದ್ದಿದ್ದ ಪ್ರಾಣಿಗಳು ಮೃಗೇಂದ್ರನಿಗೆ “ತಾನೇ ಮಹಾಪ್ರಾಜ್ಞನೆಂದು ತಿಳಿದುಕೊಂಡಿರುವ ನಿನ್ನ ವಿದುಷ ಸಚಿವನು ಮಾಂಸವನ್ನು ತೆಗೆದುಕೊಂಡು ಹೋಗಿದ್ದಾನೆ” ಎಂದು ಹೇಳಿದವು.
12112050a ಸರೋಷಸ್ತ್ವಥ ಶಾರ್ದೂಲಃ ಶ್ರುತ್ವಾ ಗೋಮಾಯುಚಾಪಲಮ್।
12112050c ಬಭೂವಾಮರ್ಷಿತೋ ರಾಜಾ ವಧಂ ಚಾಸ್ಯಾಭ್ಯರೋಚಯತ್।।
ನರಿಯ ಚಪಲತೆಯ ಕುರಿತು ಕೇಳಿ ಹುಲಿಯು ಅತ್ಯಂತ ರೋಷಗೊಂಡಿತು. ಕುಪಿತನಾದ ರಾಜನು ನರಿಯ ವಧೆಯನ್ನು ಬಯಸಿದನು.
12112051a ಚಿದ್ರಂ ತು ತಸ್ಯ ತದ್ದೃಷ್ಟ್ವಾ ಪ್ರೋಚುಸ್ತೇ ಪೂರ್ವಮಂತ್ರಿಣಃ।
12112051c ಸರ್ವೇಷಾಮೇವ ಸೋಽಸ್ಮಾಕಂ ವೃತ್ತಿಭಂಗೇಷು ವರ್ತತೇ।।
ಅವನಲ್ಲಿದ್ದ ಆ ಕೋಪದ ಅವಕಾಶವನ್ನು ಕಂಡ ಪೂರ್ವಮಂತ್ರಿಗಳು ಈ ಅವಕಾಶವನ್ನು ಬಿಟ್ಟರೆ ತಮ್ಮ ಮಂತ್ರಿಪದವಿಯೇ ಹೋಗಿಬಿಡಬಹುದೆಂದು ಪುನಃ ಹೇಳಿದವು:
12112052a ಇದಂ ಚಾಸ್ಯೇದೃಶಂ ಕರ್ಮ ವಾಲ್ಲಭ್ಯೇನ ತು ರಕ್ಷ್ಯತೇ।
12112052c ಶ್ರುತಶ್ಚ ಸ್ವಾಮಿನಾ ಪೂರ್ವಂ ಯಾದೃಶೋ ನೈಷ ತಾದೃಶಃ।।
“ಇಂತಹ ಕರ್ಮವನ್ನೆಸಗಿರುವವನನ್ನು ನೀನು ಯಾವ ಕಾರಣದಿಂದ ರಕ್ಷಿಸುತ್ತಿರುವೆ? ಸ್ವಾಮಿಯು ಕೇಳಿದಂಥಹ ಯಾವ ಸದ್ಗುಣಗಳೂ ಆ ನರಿಯಲ್ಲಿಲ್ಲ.
12112053a ವಾಙ್ಮಾತ್ರೇಣೈವ ಧರ್ಮಿಷ್ಠಃ ಸ್ವಭಾವೇನ ತು ದಾರುಣಃ।
12112053c ಧರ್ಮಚ್ಚದ್ಮಾ ಹ್ಯಯಂ ಪಾಪೋ ವೃಥಾಚಾರಪರಿಗ್ರಹಃ।
12112053e ಕಾರ್ಯಾರ್ಥಂ ಭೋಜನಾರ್ಥೇಷು ವ್ರತೇಷು ಕೃತವಾನ್ ಶ್ರಮಮ್।।
ಅವನು ಕೇವಲ ಮಾತಿನಲ್ಲಿ ಧರ್ಮಿಷ್ಠನಾಗಿದ್ದಾನೆಯೇ ಹೊರತು ಸ್ವಭಾವತಃ ಅತ್ಯಂತ ದಾರುಣನಾಗಿದ್ದಾನೆ. ಈ ಪಾಪಿಯು ಧರ್ಮದ ಸೋಗನ್ನು ಹಾಕಿಕೊಂಡಿದೆ. ಆದರೆ ವೃಥಾಚಾರಗಳನ್ನು ನಡೆಸುತ್ತಿದ್ದೆ. ತನ್ನ ಕೆಲಸವನ್ನು ಮಾಡಿಕೊಳ್ಳುವ ಸಲುವಾಗಿ ಮತ್ತು ಹೊಟ್ಟೆಯನ್ನು ತುಂಬಿಸಿಕೊಳ್ಳುವ ಸಲುವಾಗಿ ಆ ನರಿಯು ವ್ರತಾದಿಗಳಲ್ಲಿ ತೊಡಗಿದೆ.”
12112054a ಮಾಂಸಾಪನಯನಂ ಜ್ಞಾತ್ವಾ ವ್ಯಾಘ್ರಸ್ತೇಷಾಂ ತು ತದ್ವಚಃ।
12112054c ಆಜ್ಞಾಪಯಾಮಾಸ ತದಾ ಗೋಮಾಯುರ್ವಧ್ಯತಾಮಿತಿ।।
ಅವರ ಮಾತಿನಿಂದ ಮಾಂಸವು ಅಪಹೃತವಾಗಿದೆಯೆಂದು ತಿಳಿದು ಹುಲಿಯು ಗುಳ್ಳೇನರಿಯನ್ನು ಕೊಲ್ಲಿ ಎಂದು ಅಜ್ಞಾಪಿಸಿದನು.
12112055a ಶಾರ್ದೂಲವಚನಂ ಶ್ರುತ್ವಾ ಶಾರ್ದೂಲಜನನೀ ತತಃ।
12112055c ಮೃಗರಾಜಂ ಹಿತೈರ್ವಾಕ್ಯೈಃ ಸಂಬೋಧಯಿತುಮಾಗಮತ್।।
ಹುಲಿಯ ಆ ಮಾತನ್ನು ಕೇಳಿ ತಾಯಿಹುಲಿಯು ಮೃಗರಾಜನಿಗೆ ಹಿತವಾಕ್ಯಗಳನ್ನು ಉಪದೇಶಿಸಲು ಅಲ್ಲಿಗೆ ಬಂದಿತು.
12112056a ಪುತ್ರ ನೈತತ್ತ್ವಯಾ ಗ್ರಾಹ್ಯಂ ಕಪಟಾರಂಭಸಂವೃತಮ್।
12112056c ಕರ್ಮಸಂಘರ್ಷಜೈರ್ದೋಷೈರ್ದುಷ್ಯತ್ಯಶುಚಿಭಿಃ ಶುಚಿಃ।।
“ಮಗನೇ! ಅವರ ಕಪಟಯುಕ್ತ ಮಾತುಗಳನ್ನು ಅಂಗೀಕರಿಸುವುದು ಯುಕ್ತವಲ್ಲ. ಕರ್ಮಸಂಘರ್ಷದ ದೋಷದಿಂದ ಅಶುಚಿಗಳು ಶುಚಿಗಳನ್ನು ದೂಷಿಸುವುದು ಸ್ವಾಭಾವಿಕ.
12112057a ನೋಚ್ಚ್ರಿತಂ ಸಹತೇ ಕಶ್ಚಿತ್ ಪ್ರಕ್ರಿಯಾ ವೈರಕಾರಿಕಾ।
12112057c ಶುಚೇರಪಿ ಹಿ ಯುಕ್ತಸ್ಯ ದೋಷ ಏವ ನಿಪಾತ್ಯತೇ।।
ಇನ್ನೊಬ್ಬರ ಶ್ರೇಯಸ್ಸನ್ನು ಯಾರೂ ಸಹಿಸಿಕೊಳ್ಳುವುದಿಲ್ಲ. ಇದು ವೈರತ್ವದಿಂದ ಮಾಡಿದ ಪ್ರಕ್ರಿಯೆಯಾಗಿದೆ. ಯಾರು ಎಷ್ಟೇ ಶುಚಿಯಾಗಿರಲಿ ಅಥವಾ ಉದ್ಯೋಗಶೀಲನಾಗಿರಲಿ ಅವನ ಮೇಲೆ ದೋಷಾರೋಪಣೆಯು ನಡೆಯುತ್ತದೆ.
12112058a 10ಲುಬ್ಧಾನಾಂ ಶುಚಯೋ ದ್ವೇಷ್ಯಾಃ ಕಾತರಾಣಾಂ ತರಸ್ವಿನಃ। 12112058c ಮೂರ್ಖಾಣಾಂ ಪಂಡಿತಾ ದ್ವೇಷ್ಯಾ ದರಿದ್ರಾಣಾಂ ಮಹಾಧನಾಃ।
12112058e ಅಧಾರ್ಮಿಕಾಣಾಂ ಧರ್ಮಿಷ್ಠಾ ವಿರೂಪಾಣಾಂ ಸುರೂಪಕಾಃ।।
ಲುಬ್ಧರಿಗೆ ಶುಚರು ದ್ವೇಷಿಗಳು. ಹೇಡಿಗಳಿಗೆ ವೀರರು ದ್ವೇಷಿಗಳು. ಮೂರ್ಖರಿಗೆ ಪಂಡಿತರು ದ್ವೇಷಿಗಳು. ದರಿದ್ರರಿಗೆ ಶ್ರೀಮಂತರು ದ್ವೇಷಿಗಳು. ಅಧಾರ್ಮಿಕರಿಗೆ ಧರ್ಮಿಷ್ಠರೂ ವಿರೂಪರಿಗೆ ಸುರೂಪಕರೂ ದ್ವೇಷ್ಯರು.
12112059a ಬಹವಃ ಪಂಡಿತಾ ಲುಬ್ಧಾಃ ಸರ್ವೇ11 ಮಾಯೋಪಜೀವಿನಃ।
12112059c ಕುರ್ಯುರ್ದೋಷಮದೋಷಸ್ಯ ಬೃಹಸ್ಪತಿಮತೇರಪಿ।।
ಅನೇಕ ಪಂಡಿತರು ಲುಬ್ಧರೂ ಮೋಸ ಜೀವಿಗಳೂ ಆಗಿರುತ್ತಾರೆ. ಬೃಹಸ್ಪತಿಯಂತಹ ಮತಿಯುಳ್ಳ ದೋಷರಹಿತರನ್ನೂ ದೋಷಿಗಳನ್ನಾಗಿ ಮಾಡುತ್ತಾರೆ.
12112060a ಶೂನ್ಯಾತ್ತಚ್ಚ ಗೃಹಾನ್ಮಾಂಸಂ ಯದದ್ಯಾಪಹೃತಂ ತವ।
12112060c ನೇಚ್ಚತೇ ದೀಯಮಾನಂ ಚ ಸಾಧು ತಾವದ್ವಿಮೃಶ್ಯತಾಮ್।।
ಒಂದು ಕಡೆ ನಿನ್ನ ಶೂನ್ಯ ಗ್ರಹದಿಂದ ಮಾಂಸದ ಅಪಹರಣವಾಗಿದೆ. ಇನ್ನೊಂದೆಡೆ ಇರುವ ಸಾಧುವ ನೀನು ಮಾಂಸವನ್ನು ಕೊಟ್ಟರೂ ತೆಗೆದುಕೊಳ್ಳಲು ಇಚ್ಛಿಸದವನಿದ್ದಾನೆ. ಇವೆರಡನ್ನೂ ಚೆನ್ನಾಗಿ ಪರಿಶೀಲಿಸಿ ನೋಡು.
12112061a ಅಸತ್ಯಾಃ ಸತ್ಯಸಂಕಾಶಾಃ ಸತ್ಯಾಶ್ಚಾಸತ್ಯದರ್ಶಿನಃ12।
12112061c ದೃಶ್ಯಂತೇ ವಿವಿಧಾ ಭಾವಾಸ್ತೇಷು ಯುಕ್ತಂ ಪರೀಕ್ಷಣಮ್।।
ಅಸತ್ಯರು ಸತ್ಯಸಂಕಾಶರಾಗಿಯೂ ಸತ್ಯವಂತರು ಅಸತ್ಯದರ್ಶಿಗಳಂತೆಯೂ ಕಾಣುತ್ತಾರೆ. ಅವರ ವಿವಿಧ ಭಾವಗಳನ್ನು ಪರೀಕ್ಷಿಸುವುದು ಯುಕ್ತವಾಗಿದೆ.
12112062a ತಲವದ್ದೃಶ್ಯತೇ ವ್ಯೋಮ ಖದ್ಯೋತೋ ಹವ್ಯವಾಡಿವ।
12112062c ನ ಚೈವಾಸ್ತಿ ತಲಂ ವ್ಯೋಮ್ನಿ ನ ಖದ್ಯೋತೇ ಹುತಾಶನಃ।।
ಆಕಾಶವು ಮೊಗಚಿ ಹಾಕಿದ ಕಡಾಯಿಯ ತಳಭಾಗದಂತೆ ತೋರುತ್ತದೆ. ಮಿಂಚುಹುಳುವು ಬೆಂಕಿಯ ಕಿಡಿಯಂತೆ ಕಾಣುತ್ತದೆ. ಆದರೆ ಆಕಾಶದಲ್ಲಿ ಕಡಾಯಿಯ ತಳಭಾಗವೂ ಇಲ್ಲ. ಮಿಂಚಿನ ಹುಳುವಿನಲ್ಲಿ ಬೆಂಕಿಯ ಕಿಡಿಯೂ ಇಲ್ಲ.
12112063a ತಸ್ಮಾತ್ ಪ್ರತ್ಯಕ್ಷದೃಷ್ಟೋಽಪಿ ಯುಕ್ತಮರ್ಥಃ ಪರೀಕ್ಷಿತುಮ್।
12112063c ಪರೀಕ್ಷ್ಯ ಜ್ಞಾಪಯನ್ ಹ್ಯರ್ಥಾನ್ನ ಪಶ್ಚಾತ್ಪರಿತಪ್ಯತೇ।।
ಆದುದರಿಂದ ಪ್ರತ್ಯಕ್ಷವಾಗಿ ಕಂಡರೂ ಪರೀಕ್ಷಿಸಿ ನೋಡಬೇಕು. ಚೆನ್ನಾಗಿ ಪರೀಕ್ಷಿಸಿ ತಿಳಿದುಕೊಂಡು ಕಾರ್ಯಮಾಡುವವನು ಪಶ್ಚಾತ್ತಾಪಪಡುವುದಿಲ್ಲ.
12112064a ನ ದುಷ್ಕರಮಿದಂ ಪುತ್ರ ಯತ್ ಪ್ರಭುರ್ಘಾತಯೇತ್ಪರಮ್।
12112064c ಶ್ಲಾಘನೀಯಾ ಚ ವರ್ಯಾ13 ಚ ಲೋಕೇ ಪ್ರಭವತಾಂ ಕ್ಷಮಾ।।
ಪುತ್ರ! ರಾಜನಿಗೆ ಇತರರನ್ನು ಸಂಹರಿಸುವುದು ಅಷ್ಟೊಂದು ದುಷ್ಕರವಾದುದೇನೂ ಅಲ್ಲ. ಪ್ರಭಾವಶಾಲಿಗಳ ಕ್ಷಮೆಯು ಲೋಕದಲ್ಲಿ ಶ್ಲಾಘನೀಯವೂ ವರಿಷ್ಠವೂ ಎನ್ನಿಸಿಕೊಳ್ಳುತ್ತದೆ.
12112065a ಸ್ಥಾಪಿತೋಽಯಂ ಪುತ್ರ ತ್ವಯಾ ಸಾಮಂತೇಷ್ವಧಿ ವಿಶ್ರುತಃ।
12112065c ದುಃಖೇನಾಸಾದ್ಯತೇ ಪಾತ್ರಂ ಧಾರ್ಯತಾಮೇಷ ತೇ ಸುಹೃತ್।।
ಪುತ್ರ! ನೀನು ಈ ನರಿಯನ್ನು ಮಂತ್ರಿಯನ್ನಾಗಿ ಸ್ಥಾಪಿಸಿರುವೆ. ಅವನು ನಿನ್ನ ಸಾಮಂತರಲ್ಲಿಯೂ ವಿಶ್ರುತನಾಗಿದ್ದಾನೆ. ಸತ್ಪಾತ್ರರು ದೊರೆಯುವುದು ಕಷ್ಟ. ನಿನ್ನ ಸುಹೃದನಾಗಿರುವ ಈ ನರಿಯನ್ನು ರಕ್ಷಿಸು.
12112066a ದೂಷಿತಂ ಪರದೋಷೈರ್ಹಿ ಗೃಹ್ಣೀತೇ ಯೋಽನ್ಯಥಾ ಶುಚಿಮ್।
12112066c ಸ್ವಯಂ ಸಂದೂಷಿತಾಮಾತ್ಯಃ ಕ್ಷಿಪ್ರಮೇವ ವಿನಶ್ಯತಿ।।
ಇತರರ ದೋಷದಿಂದ ಆಪಾದಿತನಾಗಿರುವ ಶುದ್ಧಚರಿತನನ್ನು ದಂಡಿಸಿದರೆ ದುಷ್ಟಮಂತ್ರಿಗಳೊಂದಿಗೆ ರಾಜನು ಬಹಳ ಬೇಗ ವಿನಾಶವನ್ನು ಹೊಂದುತ್ತಾನೆ.”
12112067a ತಸ್ಮಾದಥಾರಿಸಂಘಾತಾದ್ಗೋಮಾಯೋಃ ಕಶ್ಚಿದಾಗತಃ।
12112067c ಧರ್ಮಾತ್ಮಾ ತೇನ ಚಾಖ್ಯಾತಂ ಯಥೈತತ್ಕಪಟಂ ಕೃತಮ್।।
ಆ ಸಮಯಕ್ಕೆ ಸರಿಯಾಗಿ ನರಿಯ ಶತ್ರುಗಳ ಗುಂಪಿನಿಂದ ಧರ್ಮಾತ್ಮನೋರ್ವ ಪ್ರಾಣಿಯೊಂದು ಮುಂದೆಬಂದು ಕಪಟವು ಹೇಗೆ ನಡೆಯಿತೆನ್ನುವುದನ್ನು ಹೇಳಿತು.
12112068a ತತೋ ವಿಜ್ಞಾತಚಾರಿತ್ರಃ ಸತ್ಕೃತ್ಯ ಸ ವಿಮೋಕ್ಷಿತಃ।
12112068c ಪರಿಷ್ವಕ್ತಶ್ಚ ಸಸ್ನೇಹಂ ಮೃಗೇಂದ್ರೇಣ ಪುನಃ ಪುನಃ।।
ಅನಂತರ ನರಿಯ ಚಾರಿತ್ರ್ಯವನ್ನು ತಿಳಿದ ಮೃಗೇಂದ್ರನು ಅದನ್ನು ಅಪವಾದದಿಂದ ಮುಕ್ತಗೊಳಿಸಿ ಸತ್ಕರಿಸಿ ಸ್ನೇಹದಿಂದ ಪುನಃ ಪುನಃ ಆಲಂಗಿಸಿದನು.
12112069a ಅನುಜ್ಞಾಪ್ಯ ಮೃಗೇಂದ್ರಂ ತು ಗೋಮಾಯುರ್ನೀತಿಶಾಸ್ತ್ರವಿತ್।
12112069c ತೇನಾಮರ್ಷೇಣ ಸಂತಪ್ತಃ ಪ್ರಾಯಮಾಸಿತುಮೈಚ್ಚತ।।
ನೀತಿಶಾಸ್ತ್ರವನ್ನು ಅರಿತಿದ್ದ ನರಿಯಾದರೋ ಮೃಗೇಂದ್ರನ ಅನುಮತಿಯನ್ನು ಪಡೆದು ಅವನು ಕುಪಿತನಾಗಿದ್ದುದಕ್ಕೆ ಸಂತಪ್ತನಾಗಿ ಪ್ರಾಯೋಪವೇಶವನ್ನು ಮಾಡಲು ಇಚ್ಛಿಸಿತು.
12112070a ಶಾರ್ದೂಲಸ್ತತ್ರ ಗೋಮಾಯುಂ ಸ್ನೇಹಾತ್ಪ್ರಸ್ರುತಲೋಚನಃ।
12112070c ಅವಾರಯತ್ಸ ಧರ್ಮಿಷ್ಠಂ ಪೂಜಯಾ ಪ್ರತಿಪೂಜಯನ್।।
ಆಗ ಸ್ನೇಹದಿಂದ ಪ್ರಫುಲ್ಲವಾಗಿದ್ದ ಕಣ್ಣುಗಳಿಂದ ಹುಲಿಯು ಧರ್ಮಿಷ್ಠ ನರಿಯನ್ನು ಪ್ರಾಯೋಪವೇಶದಿಂದ ತಡೆಯಿತು ಮತ್ತು ಸತ್ಕಾರಗಳಿಂದ ಪೂಜಿಸಿತು.
12112071a ತಂ ಸ ಗೋಮಾಯುರಾಲೋಕ್ಯ ಸ್ನೇಹಾದಾಗತಸಂಭ್ರಮಮ್।
12112071c ಬಭಾಷೇ ಪ್ರಣತೋ ವಾಕ್ಯಂ ಬಾಷ್ಪಗದ್ಗದಯಾ ಗಿರಾ।।
ಹುಲಿಯನ್ನು ನೋಡಿ ನರಿಯು ಸ್ನೇಹದಿಂದ ಸಂಭ್ರಮಗೊಂಡು ಕಣ್ಣೀರಿನಿಂದ ಕಟ್ಟಿದ ದನಿಯಲ್ಲಿ ಈ ಪ್ರೀತಿಯ ಮಾತುಗಳನ್ನಾಡಿತು:
12112072a ಪೂಜಿತೋಽಹಂ ತ್ವಯಾ ಪೂರ್ವಂ ಪಶ್ಚಾಚ್ಚೈವ ವಿಮಾನಿತಃ।
12112072c ಪರೇಷಾಮಾಸ್ಪದಂ ನೀತೋ ವಸ್ತುಂ ನಾರ್ಹಾಮ್ಯಹಂ ತ್ವಯಿ।।
“ಮೊದಲು ನನ್ನನ್ನು ನೀನು ಪೂಜಿಸಿದೆ. ಅನಂತರ ಅವಮಾನಿಸಿದೆ. ಬೇರೆಯವರ ಮೋಸಕ್ಕೆ ಗುರಿಯಾಗುವ ಅವಕಾಶವನ್ನು ಕಲ್ಪಿಸಿದೆ. ಇನ್ನು ಮುಂದೆ ನಾನು ನಿನ್ನೊಡನೆ ಇರಲು ಯೋಗ್ಯನಿಲ್ಲ.
12112073a ಸ್ವಸಂತುಷ್ಟಾಶ್ಚ್ಯುತಾಃ ಸ್ಥಾನಾನ್ಮಾನಾತ್ ಪ್ರತ್ಯವರೋಪಿತಾಃ।
12112073c ಸ್ವಯಂ ಚೋಪಹೃತಾ ಭೃತ್ಯಾ ಯೇ ಚಾಪ್ಯುಪಹೃತಾಃ ಪರೈಃ।।
12112074a ಪರಿಕ್ಷೀಣಾಶ್ಚ ಲುಬ್ಧಾಶ್ಚ ಕ್ರೂರಾಃ ಕಾರಾಭಿತಾಪಿತಾಃ।
12112074c ಹೃತಸ್ವಾ ಮಾನಿನೋ ಯೇ ಚ ತ್ಯಕ್ತೋಪಾತ್ತಾ ಮಹೇಪ್ಸವಃ।।
12112075a ಸಂತಾಪಿತಾಶ್ಚ ಯೇ ಕೇ ಚಿದ್ವ್ಯಸನೌಘಪ್ರತೀಕ್ಷಿಣಃ।
12112075c ಅಂತರ್ಹಿತಾಃ ಸೋಪಹಿತಾಃ ಸರ್ವೇ ತೇ ಪರಸಾಧನಾಃ।।
ತಮ್ಮ ಸ್ಥಾನದಿಂದ ಚ್ಯುತರಾದವರು, ಅಸಂತುಷ್ಟರಾಗಿರುವರು, ಅಪಮಾನಿತರಾಗಿರುವವರು, ಮೊದಲು ಪುರಸ್ಕೃತರಾಗಿದ್ದು ನಂತರ ಬೇರೆಯವರ ಕಾರಣದಿಂದ ವಂಚಿತರಾದವರು, ತಮ್ಮ ಸ್ಥಾನವನ್ನು ಕಳೆದುಕೊಂಡು ಕ್ಷೀಣರಾದವರು, ಲೋಭಿಗಳು, ಕ್ರೋಧಾಭಿಭೂತರು, ಭಯಭೀತರು, ವಂಚಿಸಲ್ಪಟ್ಟವರು, ಸರ್ವಸ್ವವನ್ನೂ ಕಳೆದುಕೊಂಡಿರುವವರು, ಮಾನಿಷ್ಠರು, ಆದಾಯವು ಕಡಿಮೆಯಾದವರು, ಮಹತ್ತರ ಸ್ಥಾನವನ್ನು ಬಯಸುವವರು, ಸಂತಾಪಗೊಂಡವರು, ರಾಜನಿಗೆ ಕಷ್ಟಗಳು ಬರುವುದನ್ನೇ ಪ್ರತೀಕ್ಷಿಸುವವರು, ನಿಗೂಢರಾಗಿರುವವರು, ಮತ್ತು ಕಪಟಭಾವದಿಂದಿರುವ ಸೇವಕರೆಲ್ಲರೂ ಶತ್ರುವಿನ ಕಾರ್ಯವನ್ನು ಮಾಡುವವರೇ ಆಗುತ್ತಾರೆ.
12112076a ಅವಮಾನೇನ ಯುಕ್ತಸ್ಯ ಸ್ಥಾಪಿತಸ್ಯ ಚ ಮೇ ಪುನಃ14।
12112076c ಕಥಂ ಯಾಸ್ಯಸಿ ವಿಶ್ವಾಸಮಹಮೇಷ್ಯಾಮಿ ವಾ ಪುನಃ15।।
ಅವಮಾನಿತನಾಗಿ ಮತ್ತು ಪುನಃ ಸ್ಥಾಪಿಸನಾದ ನನ್ನಮೇಲೆ ನಿನಗೆ ಅಥವಾ ನಿನ್ನ ಮೇಲೆ ನನಗೆ ಪುನಃ ವಿಶ್ವಾಸವು ಹೇಗೆ ಉಂಟಾಗುತ್ತದೆ?
12112077a ಸಮರ್ಥ ಇತಿ ಸಂಗೃಹ್ಯ ಸ್ಥಾಪಯಿತ್ವಾ ಪರೀಕ್ಷ್ಯ ಚ।
12112077c ಕೃತಂ ಚ ಸಮಯಂ ಭಿತ್ತ್ವಾ ತ್ವಯಾಹಮವಮಾನಿತಃ।।
ಸಮರ್ಥನಿದ್ದೇನೆಂದು ನನ್ನನ್ನು ಕರೆದುಕೊಂಡು ಮಂತ್ರಿಸ್ಥಾನವನ್ನು ಕೊಟ್ಟೆ ಮತ್ತು ಪರೀಕ್ಷಿಸಿದೆ ಕೂಡ. ಮಾಡಿದ ಒಪ್ಪಂದವನ್ನು ಮುರಿದು ನನ್ನನ್ನು ಅಪಮಾನಿಸಿದೆ.
12112078a ಪ್ರಥಮಂ ಯಃ ಸಮಾಖ್ಯಾತಃ ಶೀಲವಾನಿತಿ ಸಂಸದಿ।
12112078c ನ ವಾಚ್ಯಂ ತಸ್ಯ ವೈಗುಣ್ಯಂ ಪ್ರತಿಜ್ಞಾಂ ಪರಿರಕ್ಷತಾ।।
ಮೊದಲು ಸಂಸದಿಯಲ್ಲಿ ಇವನು ಶೀಲವಂತನು ಎಂದು ಹೊಗಳಿ ಈಗ ಪ್ರತಿಜ್ಞಾರಕ್ಷಕನಾದ ನೀನು ಹೀಗೆ ದೋಷಾರೋಪಣೆಯನ್ನು ಮಾಡಬಾರದಾಗಿತ್ತು.
12112079a ಏವಂ ಚಾವಮತಸ್ಯೇಹ ವಿಶ್ವಾಸಂ ಕಿಂ ಪ್ರಯಾಸ್ಯಸಿ16।
12112079c ತ್ವಯಿ ಚೈವ ಹ್ಯವಿಶ್ವಾಸೇ ಮಮೋದ್ವೇಗೋ ಭವಿಷ್ಯತಿ।।
ಹೀಗೆ ಇಲ್ಲಿ ಅಪಮಾನಿತನಾದ ನನಗೆ ನಿನ್ನ ಮೇಲಿನ ವಿಶ್ವಾಸವು ಏಕೆ ಹಿಂದಿರುಗುತ್ತದೆ? ನಿನಗೆ ಕೂಡ ನನ್ನ ಮೇಲೆ ವಿಶ್ವಾಸವು ಬರುವುದಿಲ್ಲ. ಹೀಗಿರುವಾಗ ನನಗೆ ಉದ್ವೇಗವುಂಟಾಗುತ್ತದೆ.
12112080a ಶಂಕಿತಸ್ತ್ವಮಹಂ ಭೀತಃ ಪರೇ ಚಿದ್ರಾನುದರ್ಶಿನಃ।
12112080c ಅಸ್ನಿಗ್ಧಾಶ್ಚೈವ ದುಸ್ತೋಷಾಃ ಕರ್ಮ ಚೈತದ್ಬಹುಚ್ಚಲಮ್।।
ನೀನು ಶಂಕಿತನಾಗಿದ್ದೀಯೆ. ನಾನು ಭೀತನಾಗಿದ್ದೇನೆ. ಇತರರು ನಮ್ಮ ಸಂಬಂಧದಲ್ಲಿ ರಂಧ್ರಗಳನ್ನೇ ಹುಡುಕುತ್ತಿರುತ್ತಾರೆ. ಅವರಿಗೆ ನನ್ನಲ್ಲಿ ಸ್ನೇಹವಿಲ್ಲ. ಅವರನ್ನು ಸಂತುಷ್ಟಿಗೊಳಿಸುವುದು ನನಗೂ ಕಷ್ಟವೇ ಆಗಿದೆ. ಮಂತ್ರಿಯ ಕಾರ್ಯವೇ ಇಂತಹ ಕಪಟಗಳಿಂದ ತುಂಬಿದೆ.
12112081a ದುಃಖೇನ ಶ್ಲೇಷ್ಯತೇ ಭಿನ್ನಂ ಶ್ಲಿಷ್ಟಂ ದುಃಖೇನ ಭಿದ್ಯತೇ।
12112081c ಭಿನ್ನಶ್ಲಿಷ್ಟಾ ತು ಯಾ ಪ್ರೀತಿರ್ನ ಸಾ ಸ್ನೇಹೇನ ವರ್ತತೇ।।
ಒಡೆದುಹೋದುದನ್ನು ಪುನಃ ಒಂದಾಗಿಸುವುದು ಕಷ್ಟ. ಸ್ನೇಹಬಂಧನವೂ ಬಹಳ ಕಷ್ಟದಿಂದ ಒಡೆಯುತ್ತದೆ. ಪರಸ್ಪರರ ಪ್ರೀತಿಯು ಪದೇ ಪದೇ ಒಡೆಯುತ್ತಿದ್ದರೆ ಮತ್ತು ಸೇರುತ್ತಿದ್ದರೆ ಅಲ್ಲಿ ಸ್ನೇಹಬಂಧನವಿರುವುದಿಲ್ಲ.
12112082a ಕಶ್ಚಿದೇವ ಹಿ ಭೀತಸ್ತು17 ದೃಶ್ಯತೇ ನ ಪರಾತ್ಮನೋಃ।
12112082c ಕಾರ್ಯಾಪೇಕ್ಷಾ ಹಿ ವರ್ತಂತೇ ಭಾವಾಃ ಸ್ನಿಗ್ಧಾಸ್ತು ದುರ್ಲಭಾಃ18।।
ಭೀತನಾಗಿರುವವನು ಇನ್ನೊಬ್ಬನ ಸೇವೆಗೈಯುವುದು ಬಹಳ ವಿರಳ. ಅಂಥವರು ತಮ್ಮ ಕಾರ್ಯಸಿದ್ಧಿಗಾಗಿಯೇ ನಡೆದುಕೊಳ್ಳುತ್ತಾರೆ. ಭಾವದಲ್ಲಿ ಸ್ನೇಹದಿಂದಿರುವ ಸೇವಕರು ದುರ್ಲಭರು.
12112083a ಸುದುಃಖಂ ಪುರುಷಜ್ಞಾನಂ ಚಿತ್ತಂ ಹ್ಯೇಷಾಂ ಚಲಾಚಲಮ್।
12112083c ಸಮರ್ಥೋ ವಾಪ್ಯಶಕ್ತೋ19 ವಾ ಶತೇಷ್ವೇಕೋಽಧಿಗಮ್ಯತೇ।।
ಯೋಗ್ಯ ಪುರುಷನನ್ನು ಹುಡುಕುವುದು ಕಷ್ಟ. ಏಕೆಂದರೆ ಮನುಷ್ಯರ ಚಿತ್ತವು ಚಂಚಲವೂ ನಿಶ್ಚಲವೂ ಆಗಿರುತ್ತದೆ. ಸಮರ್ಥನೂ ಸಶಕ್ತನೂ ಆಗಿರುವವನು ನೂರರಲ್ಲಿ ಒಬ್ಬನಿರುತ್ತಾನೆ.
12112084a ಅಕಸ್ಮಾತ್ ಪ್ರಕ್ರಿಯಾ ನೃಣಾಮಕಸ್ಮಾಚ್ಚಾಪಕರ್ಷಣಮ್।
12112084c ಶುಭಾಶುಭೇ ಮಹತ್ತ್ವಂ ಚ ಪ್ರಕರ್ತುಂ ಬುದ್ಧಿಲಾಘವಾತ್।।
ಪ್ರಾಣಿಗಳಿಗೆ ಉನ್ನತಿ-ಅವನತಿಗಳು ಅಕಸ್ಮಾತ್ತಾಗಿ ಸಂಭವಿಸುತ್ತವೆ. ಅಲ್ಪಬುದ್ಧಿಯ ಕಾರಣದಿಂದ ಇತರರಿಗೆ ಒಳ್ಳೆಯದನ್ನು ಅಥವಾ ಕೆಟ್ಟದ್ದನ್ನು ಮಾಡುತ್ತೇನೆ ಎಂದು ಭಾವಿಸುತ್ತೇವೆ ಅಥವಾ ಉತ್ತಮ ಸ್ಥಾನವನ್ನು ನೀಡುತ್ತೇವೆ ಅಥವಾ ಕೆಳಕ್ಕೆ ಇಳಿಸುತ್ತೇವೆ ಎಂದು ಭಾವಿಸುತ್ತೇವೆ.”
12112085a ಏವಂ ಬಹುವಿಧಂ ಸಾಂತ್ವಮುಕ್ತ್ವಾ ಧರ್ಮಾರ್ಥಹೇತುಮತ್।
12112085c ಪ್ರಸಾದಯಿತ್ವಾ ರಾಜಾನಂ ಗೋಮಾಯುರ್ವನಮಭ್ಯಗಾತ್।।
ಹೀಗೆ ಬಹುವಿಧಾವಾಗಿ ಧರ್ಮಾರ್ಥಕಾರಕ ಸಾಂತ್ವನದ ಮಾತುಗಳನ್ನಾಡಿ ರಾಜನನ್ನು ಸಂತವಿಸಿ ನರಿಯು ವನಕ್ಕೆ ತೆರಳಿತು.
12112086a ಅಗೃಹ್ಯಾನುನಯಂ ತಸ್ಯ ಮೃಗೇಂದ್ರಸ್ಯ ಸ ಬುದ್ಧಿಮಾನ್।
12112086c ಗೋಮಾಯುಃ ಪ್ರಾಯಮಾಸೀನಸ್ತ್ಯಕ್ತ್ವಾ ದೇಹಂ ದಿವಂ ಯಯೌ।।
ಆ ಬುದ್ಧಿವಂತ ನರಿಯು ಮೃಗೇಂದ್ರನ ಅನುನಯ ಮಾತುಗಳನ್ನು ಸ್ವೀಕರಿಸದೇ ಪ್ರಾಯೋಪವೇಶವನ್ನು ಮಾಡಿ ದೇಹವನ್ನು ತ್ಯಜಿಸಿ ದಿವಕ್ಕೆ ಹೋಯಿತು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಶಾಂತಿ ಪರ್ವಣಿ ರಾಜಧರ್ಮ ಪರ್ವಣಿ ವ್ಯಾಘ್ರಗೋಮಾಯುಸಂವಾದೇ ದ್ವಾದಶಾಧಿಕಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ರಾಜಧರ್ಮ ಪರ್ವದಲ್ಲಿ ವ್ಯಾಘ್ರಗೋಮಯಸಂವಾದ ಎನ್ನುವ ನೂರಾಹನ್ನೆರಡನೇ ಅಧ್ಯಾಯವು.
-
ತದಾಸ್ತು ತೇ। ಎಂಬ ಪಾಠಾಂತರವಿದೆ (ಭಾರತ ದರ್ಶನ). ↩︎
-
ಶುಭಕರ್ಮಗಳನ್ನು ಮಾಡಲು ಸ್ಥಳವು ಮುಖ್ಯವಲ್ಲ, ಎಲ್ಲಿ ಬೇಕಾದರೂ ಶುಭಕರ್ಮಗಳನ್ನು ಮಾಡಬಹುದು. ಶುಭಕರ್ಮಗಳಿಗೆ ಪ್ರೇರಕವು ಆತ್ಮವೇ ಹೊರತು ವಾಸಭೂಮಿಯಲ್ಲ (ಭಾರತ ದರ್ಶನ). ↩︎
-
ಸ್ವಾರ್ಥಲೋಭೇನ ಎಂಬ ಪಾಠಾಂತರವಿದೆ (ಭಾರತ ದರ್ಶನ). ↩︎
-
ತ್ರಯೋ ಎಂಬ ಪಾಠಾಂತರವಿದೆ (ಭಾರತ ದರ್ಶನ). ↩︎
-
ಹಿತಂ ಚೈವ ಎಂಬ ಪಾಠಾಂತರವಿದೆ (ಭಾರತ ದರ್ಶನ). ↩︎
-
ನಯಜ್ಞಾನುಪಸಂಹಿತಾನ್। ಎಂಬ ಪಾಠಾಂತರವಿದೆ (ಭಾರತ ದರ್ಶನ). ↩︎
-
ದುಃಶೀಲಾಶ್ಚ ಎಂಬ ಪಾಠಾಂತರವಿದೆ (ಭಾರತ ದರ್ಶನ). ↩︎
-
ಭಾಗ್ಯೈಶ್ಚ ಎಂಬ ಪಾಠಾಂತರವಿದೆ (ಭಾರತ ದರ್ಶನ). ↩︎
-
ವ್ರತಚರ್ಯಾ ಎಂಬ ಪಾಠಾಂತರವಿದೆ (ಭಾರತ ದರ್ಶನ). ↩︎
-
ಭಾರತ ದರ್ಶನದಲ್ಲಿ ಇದಕ್ಕೆ ಮೊದಲು ಈ ಶ್ಲೋಕವಿದೆ: ಮುನೇರಪಿ ವನಸ್ಥಸ್ಯ ಸ್ವಾನಿ ಕರ್ಮಾಣಿ ಕುರ್ವತಃ। ಉತ್ಪಾದ್ಯಂತೇ ತ್ರಯಃ ಪಕ್ಷಾ ಮಿತ್ರೋದಾಸೀನಶತ್ರವಃ।। ↩︎
-
ಮೂರ್ಖಾ ಲುಬ್ಧಾ ಎಂಬ ಪಾಠಾಂತರವಿದೆ (ಭಾರತ ದರ್ಶನ). ↩︎
-
ಅಸಭ್ಯಾಃ ಸಭ್ಯಸಂಕಾಶಾಃ ಸಭ್ಯಾಶ್ಚಾಸಭ್ಯದರ್ಶನಾಃ। ಎಂಬ ಪಾಠಾಂತರವಿದೆ (ಭಾರತ ದರ್ಶನ). ↩︎
-
ಯಶಸ್ಯಾ ಚ ಎಂಬ ಪಾಠಾಂತರವಿದೆ (ಭಾರತ ದರ್ಶನ). ↩︎
-
ಸ್ಥಾನಭ್ರಷ್ಟಶ್ಯ ವಾ ಪುನಃ। ಎಂಬ ಪಾಠಾಂತರವಿದೆ (ಭಾರತ ದರ್ಶನ). ↩︎
-
ತಿಷ್ಠಾಮಿ ವಾ ಕಥಮ್। ಎಂಬ ಪಾಠಾಂತರವಿದೆ (ಭಾರತ ದರ್ಶನ). ↩︎
-
ವಿಶ್ವಾಸಂ ಮೇ ನ ಯಾಸ್ಯಸಿ। ಎಂಬ ಪಾಠಾಂತರವಿದೆ (ಭಾರತ ದರ್ಶನ). ↩︎
-
ಕಶ್ಚಿದೇವ ಹಿತೇ ಭರ್ತುಃ ಎಂಬ ಪಾಠಾಂತರವಿದೆ (ಭಾರತ ದರ್ಶನ). ↩︎
-
ಭಾವಸ್ನಿಗ್ಧಾಃ ಸುದುರ್ಲಭಾಃ। ಎಂಬ ಪಾಠಾಂತರವಿದೆ (ಭಾರತ ದರ್ಶನ). ↩︎
-
ವಾಪ್ಯಶಂಕೋ ಎಂಬ ಪಾಠಾಂತರವಿದೆ (ಭಾರತ ದರ್ಶನ). ↩︎