110 ಸತ್ಯಾನೃತಕವಿಭಾಗಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ರಾಜಧರ್ಮ ಪರ್ವ

ಅಧ್ಯಾಯ 110

ಸಾರ

ಸತ್ಯಾಸತ್ಯಗಳ ವಿವೇಚನೆ, ಧರ್ಮದ ಲಕ್ಷಣ ಮತ್ತು ವ್ಯವಹಾರನೀತಿಗಳು (1-26).

12110001 ಯುಧಿಷ್ಠಿರ ಉವಾಚ।
12110001a ಕಥಂ ಧರ್ಮೇ ಸ್ಥಾತುಮಿಚ್ಚನ್ನರೋ ವರ್ತೇತ ಭಾರತ।
12110001c ವಿದ್ವನ್ ಜಿಜ್ಞಾಸಮಾನಾಯ ಪ್ರಬ್ರೂಹಿ ಭರತರ್ಷಭ।।

ಯುಧಿಷ್ಠಿರನು ಹೇಳಿದನು: “ಭಾರತ! ಭರತರ್ಷಭ! ಧರ್ಮದಲ್ಲಿಯೇ ನೆಲಸಿರಲು ಇಚ್ಛಿಸುವ ನರನು ಹೇಗೆ ವರ್ತಿಸಬೇಕು? ವಿದ್ವನ್! ಇದರ ಕುರಿತು ತಿಳಿದುಕೊಳ್ಳಬೇಕೆಂದಿರುವ ನನಗೆ ಹೇಳು.

12110002a ಸತ್ಯಂ ಚೈವಾನೃತಂ ಚೋಭೇ ಲೋಕಾನಾವೃತ್ಯ ತಿಷ್ಠತಃ।
12110002c ತಯೋಃ ಕಿಮಾಚರೇದ್ರಾಜನ್ ಪುರುಷೋ ಧರ್ಮನಿಶ್ಚಿತಃ।।

ಸತ್ಯ ಮತ್ತು ಅಸತ್ಯ ಇವೆರಡೂ ಲೋಕಗಳನ್ನೇ ಆವರಿಸಿ ನಿಂತಿವೆ. ರಾಜನ್! ಧರ್ಮನಿಶ್ಚಿತನಾದ ಪುರುಷನು ಇವೆರಡರಲ್ಲಿ ಯಾವುದನ್ನು ಆಚರಿಸಬೇಕು?

12110003a ಕಿಂ ಸ್ವಿತ್ಸತ್ಯಂ ಕಿಮನೃತಂ ಕಿಂ ಸ್ವಿದ್ಧರ್ಮ್ಯಂ ಸನಾತನಮ್।
12110003c ಕಸ್ಮಿನ್ಕಾಲೇ ವದೇತ್ಸತ್ಯಂ ಕಸ್ಮಿನ್ಕಾಲೇಽನೃತಂ ವದೇತ್।।

ಸತ್ಯವು ಯಾವುದು? ಅನೃತವು ಯಾವುದು? ಯಾವುದು ಸನಾತನ ಧರ್ಮ? ಯಾವ ಕಾಲದಲ್ಲಿ ಸತ್ಯವನ್ನು ಹೇಳಬೇಕು ಮತ್ತು ಯಾವ ಕಾಲದಲ್ಲಿ ಸುಳ್ಳನ್ನು ನುಡಿಯಬೇಕು?”

12110004 ಭೀಷ್ಮ ಉವಾಚ।
12110004a ಸತ್ಯಸ್ಯ ವಚನಂ ಸಾಧು ನ ಸತ್ಯಾದ್ವಿದ್ಯತೇ ಪರಮ್।
12110004c ಯದ್ಭೂಲೋಕೇ ಸುದುರ್ಜ್ಞಾತಂ ತತ್ತೇ ವಕ್ಷ್ಯಾಮಿ ಭಾರತ।।

ಭೀಷ್ಮನು ಹೇಳಿದನು: “ಭಾರತ! ಸತ್ಯವನ್ನು ನುಡಿಯುವುದೇ ಸಾಧುವಾದುದು. ಸತ್ಯಕ್ಕಿಂತಲೂ ಶ್ರೇಷ್ಠವಾದುದು ಇನ್ನೊಂದಿಲ್ಲ. ಆದರೆ ಲೋಕದಲ್ಲಿ ಸತ್ಯವು ಏನೆಂದು ತಿಳಿದುಕೊಳ್ಳುವುದೇ ಕಷ್ಟ. ಅದನ್ನೇ ನಿನಗೆ ಹೇಳುತ್ತೇನೆ.

12110005a ಭವೇತ್ಸತ್ಯಂ ನ ವಕ್ತವ್ಯಂ ವಕ್ತವ್ಯಮನೃತಂ ಭವೇತ್।
12110005c ಯತ್ರಾನೃತಂ ಭವೇತ್ಸತ್ಯಂ ಸತ್ಯಂ ವಾಪ್ಯನೃತಂ ಭವೇತ್।।

ಎಲ್ಲಿ ಅನೃತವು ಸತ್ಯದ ಕಾರ್ಯವನ್ನು ಮಾಡುವುದೋ ಅಲ್ಲಿ ಸುಳ್ಳನ್ನೇ ಹೇಳಬೇಕಾಗುತ್ತದೆ. ಎಲ್ಲಿ ಸತ್ಯವು ಅನೃತದ ಕಾರ್ಯವನ್ನು ಮಾಡುತ್ತದೆಯೋ ಅಲ್ಲಿ ಸತ್ಯವನ್ನು ಹೇಳಬಾರದು.

12110006a ತಾದೃಶೇ ಮುಹ್ಯತೇ ಬಾಲೋ ಯತ್ರ ಸತ್ಯಮನಿಷ್ಠಿತಮ್।
12110006c ಸತ್ಯಾನೃತೇ ವಿನಿಶ್ಚಿತ್ಯ ತತೋ ಭವತಿ ಧರ್ಮವಿತ್।।

ಈ ರೀತಿ ಅನಿಷ್ಠಿತವಾದ ಸತ್ಯವನ್ನು ತಿಳಿಯದಿರುವವನು ಮೋಹಕ್ಕೊಳಗಾಗುತ್ತಾನೆ. ಸತ್ಯ-ಅನೃತಗಳನ್ನು ನಿಶ್ಚಯಿಸಿಕೊಂಡವನು ಧರ್ಮವಿದುವಾಗುತ್ತಾನೆ.

12110007a ಅಪ್ಯನಾರ್ಯೋಽಕೃತಪ್ರಜ್ಞಃ ಪುರುಷೋಽಪಿ ಸುದಾರುಣಃ।
12110007c ಸುಮಹತ್ಪ್ರಾಪ್ನುಯಾತ್ಪುಣ್ಯಂ ಬಲಾಕೋಽಂಧವಧಾದಿವ।।

ಅನಾರ್ಯನೂ ಬುದ್ಧಿಶೂನ್ಯನೂ ಮತ್ತು ಮಹಾಕ್ರೂರಿ ಪುರುಷನಾಗಿದ್ದರೂ ಅಂಧ ಪ್ರಾಣಿಯನ್ನು ಕೊಂದ ವ್ಯಾಧ ಬಲಾಕನಂತೆ1 ಮಹಾಪುಣ್ಯವನ್ನು ಪಡೆದುಕೊಳ್ಳಬಹುದು.

12110008a ಕಿಮಾಶ್ಚರ್ಯಂ ಚ ಯನ್ಮೂಢೋ ಧರ್ಮಕಾಮೋಽಪ್ಯಧರ್ಮವಿತ್।
12110008c ಸುಮಹತ್ ಪ್ರಾಪ್ನುಯಾತ್ಪಾಪಂ ಗಂಗಾಯಾಮಿವ ಕೌಶಿಕಃ।।

ಎಂಥಹ ಆಶ್ಚರ್ಯವಿದು! ಧರ್ಮಮಾರ್ಗದಲ್ಲಿಯೇ ಇರಬೇಕೆಂಬ ಇಚ್ಛೆಯಿದ್ದ ಗಂಗಾತೀರದಲ್ಲಿ ವಾಸಿಸುತ್ತಿದ್ದ ಕೌಶಿಕನೆಂಬ ಮೂರ್ಖ ತಪಸ್ವಿಯು ನಿಜವನ್ನು ಹೇಳಿಯೂ ಅಧರ್ಮದ ಫಲವನ್ನು ಪಡೆಯಬೇಕಾಯಿತು2.

12110009a ತಾದೃಶೋಽಯಮನುಪ್ರಶ್ನೋ ಯತ್ರ ಧರ್ಮಃ ಸುದುರ್ವಚಃ3
12110009c ದುಷ್ಕರಃ ಪ್ರತಿಸಂಖ್ಯಾತುಂ ತರ್ಕೇಣಾತ್ರ4 ವ್ಯವಸ್ಯತಿ।।

ನೀನು ಕೇಳಿದ ಪ್ರಶ್ನೆಯೂ ಹೀಗೆಯೇ ಇದೆ. ಧರ್ಮವನ್ನು ತಿಳಿಸಿಹೇಳುವುದು ಕಷ್ಟ. ಇದನ್ನು ಪ್ರತಿಪಾದಿಸುವುದೂ ದುಷ್ಕರವೇ ಆಗಿದೆ. ಅದು ತರ್ಕಕ್ಕೆ ಮಾತ್ರ ಸಿಲುಕುತ್ತದೆ.

12110010a ಪ್ರಭಾವಾರ್ಥಾಯ ಭೂತಾನಾಂ ಧರ್ಮಪ್ರವಚನಂ ಕೃತಮ್।
12110010c ಯತ್ ಸ್ಯಾದಹಿಂಸಾಸಂಯುಕ್ತಂ5 ಸ ಧರ್ಮ ಇತಿ ನಿಶ್ಚಯಃ।।

ಜೀವಿಗಳ ಅಭಿವೃದ್ಧಿಗಾಗಿ ಧರ್ಮಪ್ರವಚನವು ಮಾಡಲ್ಪಟ್ಟಿದೆ. ಯಾವುದು ಅಹಿಂಸಾಸಂಯುಕ್ತವಾಗಿದೆಯೋ ಅದೇ ಧರ್ಮ ಎಂದು ನಿಶ್ಚಯಿಸಲ್ಪಟ್ಟಿದೆ.

12110011a ಧಾರಣಾದ್ಧರ್ಮ ಇತ್ಯಾಹುರ್ಧರ್ಮೇಣ ವಿಧೃತಾಃ ಪ್ರಜಾಃ।
12110011c ಯತ್ ಸ್ಯಾದ್ಧಾರಣಸಂಯುಕ್ತಂ ಸ ಧರ್ಮ ಇತಿ ನಿಶ್ಚಯಃ।।

ಧಾರಣೆಯಿಂದಾಗಿ ಧರ್ಮ ಎಂದು ಹೇಳುತ್ತಾರೆ. ಧರ್ಮದಿಂದ ಪ್ರಜೆಗಳು ಮೇಲಕ್ಕೆತ್ತಲ್ಪಡುತ್ತಾರೆ. ಯಾವುದು ಧಾರಣಾ-ಪೋಷಣಾಯುಕ್ತವಾದುದೋ ಅದೇ ಧರ್ಮ ಎಂದು ನಿಶ್ಚಯಿಸಲ್ಪಟ್ಟಿದೆ.

12110012a 6ಶ್ರುತಿಧರ್ಮ ಇತಿ ಹ್ಯೇಕೇ ನೇತ್ಯಾಹುರಪರೇ ಜನಾಃ। 12110012c ನ ತು ತತ್ ಪ್ರತ್ಯಸೂಯಾಮೋ ನ ಹಿ ಸರ್ವಂ ವಿಧೀಯತೇ।।

ವೇದದಲ್ಲಿ ಹೇಳಿರುವುದೇ ಧರ್ಮವೆಂದು ಕೆಲವರ ಅಭಿಪ್ರಾಯ. ಆದರೆ ಇನ್ನು ಕೆಲವರು ಇದನ್ನು ಒಪ್ಪುವುದಿಲ್ಲ. ನಾವು ಇವೆರಡು ಅಭಿಪ್ರಾಯಗಳನ್ನೂ ದೂಷಿಸುವುದಿಲ್ಲ. ವೇದವು ಎಲ್ಲವನ್ನೂ ಹೇಳಿರುವುದಿಲ್ಲ.

12110013a ಯೇಽನ್ಯಾಯೇನ ಜಿಹೀರ್ಷಂತೋ ಧನಮಿಚ್ಚಂತಿ ಕರ್ಹಿ ಚಿತ್।
12110013c ತೇಭ್ಯಸ್ತನ್ನ ತದಾಖ್ಯೇಯಂ ಸ ಧರ್ಮ ಇತಿ ನಿಶ್ಚಯಃ।।

ಅನ್ಯಾಯದಿಂದ ಯಾರೋ ಒಬ್ಬನ ಧನವನ್ನು ಕಿತ್ತುಕೊಳ್ಳಲು ಬಯಸಿದವರಿಗೆ ಅದು ಎಲ್ಲಿದೆ ಎಂದು ಹೇಳದೇ ಇರುವುದು ಧರ್ಮವೆಂದು ನಿಶ್ಚಿತವಾಗಿದೆ.

12110014a ಅಕೂಜನೇನ ಚೇನ್ಮೋಕ್ಷೋ ನಾತ್ರ ಕೂಜೇತ್ಕಥಂ ಚನ।
12110014c ಅವಶ್ಯಂ ಕೂಜಿತವ್ಯಂ ವಾ ಶಂಕೇರನ್ವಾಪ್ಯಕೂಜನಾತ್।।
12110015a ಶ್ರೇಯಸ್ತತ್ರಾನೃತಂ ವಕ್ತುಂ ಸತ್ಯಾದಿತಿ ವಿಚಾರಿತಮ್।

ಮಾತನಾಡದೇ ಇದ್ದರೆ ಕಳ್ಳರಿಂದ ಬಿಡುಗಡೆಯಾಗುವುದಾದರೆ ಯಾವುದೇ ಮಾತನ್ನೂ ಆಡಬಾರದು. ಮಾತನಾಡಲೇ ಬೇಕಾಗಿ ಬಂದರೆ ಮತ್ತು ಕಳ್ಳರು ಶಂಕಿತರಾಗುವುದಾದರೆ ಆಗ ಸತ್ಯಕ್ಕಿಂತಲೂ ಸುಳ್ಳನ್ನು ಹೇಳುವುದೇ ಶ್ರೇಯಸ್ಕರ ಎಂಬ ವಿಚಾರವಿದೆ.

12110015c ಯಃ ಪಾಪೈಃ ಸಹ ಸಂಬಂಧಾನ್ಮುಚ್ಯತೇ ಶಪಥಾದಿತಿ।।
12110016a ನ ಚ ತೇಭ್ಯೋ ಧನಂ ದೇಯಂ ಶಕ್ಯೇ ಸತಿ ಕಥಂ ಚನ।
12110016c ಪಾಪೇಭ್ಯೋ ಹಿ ಧನಂ ದತ್ತಂ ದಾತಾರಮಪಿ ಪೀಡಯೇತ್।।

ಅಸತ್ಯ ಶಪಥಗಳಿಂದಲಾದರೂ ಪಾಪಿಗಳಿಂದ ಬಿಡಿಸಿಕೊಳ್ಳಬೇಕು. ಸಾಧ್ಯವಾದಷ್ಟು ಮಟ್ಟಿಗೆ ಅವರಿಗೆ ಧನವು ದೊರಕದಂತೆ ಮಾಡಬೇಕು. ಪಾಪಿಷ್ಠರಿಗೆ ಕೊಡುವ ಧನವು ಕೊಡುವವನನ್ನೇ ಪೀಡಿಸುತ್ತದೆ.

12110017a ಸ್ವಶರೀರೋಪರೋಧೇನ ವರಮಾದಾತುಮಿಚ್ಚತಃ।
12110017c ಸತ್ಯಸಂಪ್ರತಿಪತ್ತ್ಯರ್ಥಂ ಯೇ ಬ್ರೂಯುಃ ಸಾಕ್ಷಿಣಃ ಕ್ವ ಚಿತ್।
12110017e ಅನುಕ್ತ್ವಾ ತತ್ರ ತದ್ವಾಚ್ಯಂ ಸರ್ವೇ ತೇಽನೃತವಾದಿನಃ।।

ಜೀತದಿಂದ ಸಾಲವನ್ನು ತೀರಿಸಲು ಪ್ರಯತ್ನಿಸುತ್ತಿರುವವನಿಗೆ ಸಾಲವು ತೀರಿತೇ ಇಲ್ಲವೇ ಎಂದು ತೀರ್ಮಾನಿಸಲು ಸಾಕ್ಷಿಗಳನ್ನು ಕರೆಸಿದಾಗ ಅಲ್ಲಿ ಅವರು ಸತ್ಯವನ್ನು ಹೇಳದೇ ಇದ್ದರೆ ಅವರೆಲ್ಲರೂ ಸುಳ್ಳುಹೇಳುವವರೇ ಆಗುತ್ತಾರೆ.

12110018a ಪ್ರಾಣಾತ್ಯಯೇ ವಿವಾಹೇ ಚ ವಕ್ತವ್ಯಮನೃತಂ ಭವೇತ್।
12110018c ಅರ್ಥಸ್ಯ ರಕ್ಷಣಾರ್ಥಾಯ ಪರೇಷಾಂ ಧರ್ಮಕಾರಣಾತ್।

ಪ್ರಾಣಾಪಾಯದ ಸಮಯದಲ್ಲಿ, ವಿವಾಹದ ಸಮಯದಲ್ಲಿ, ಇತರರ ಧನವನ್ನು ರಕ್ಷಿಸುವ ಸಲುವಾಗಿ ಮತ್ತು ಧರ್ಮದ ಕಾರಣದಿಂದ ಸುಳ್ಳನ್ನು ಹೇಳಬಹುದು. ಅದಕ್ಕೆ ದೋಷವಿಲ್ಲ.

12110018e ಪರೇಷಾಂ ಧರ್ಮ7ಮಾಕಾಂಕ್ಷನ್ನೀಚಃ ಸ್ಯಾದ್ಧರ್ಮಭಿಕ್ಷುಕಃ।।
12110019a ಪ್ರತಿಶ್ರುತ್ಯ ತು ದಾತವ್ಯಂ ಶ್ವಃಕಾರ್ಯಸ್ತು ಬಲಾತ್ಕೃತಃ।

ಬೇರೊಬ್ಬನಿಗೆ ಧರ್ಮವನ್ನೆಸಗಲು ಬಯಸಿ ನೀಚನೋರ್ವನು ಭಿಕ್ಷೆಯನ್ನು ಬೇಡಿದರೆ ಕೊಡುತ್ತೇನೆ ಎಂದು ಹೇಳಿದ ನಂತರ ಭಿಕ್ಷೆಯನ್ನು ಕೊಡಲೇ ಬೇಕು. ಹಾಗೆ ಭಿಕ್ಷೆಯನ್ನು ಪಡೆದವನು ಸ್ವಾರ್ಥಕ್ಕಾಗಿ ಅದನ್ನು ಉಪಯೋಗಿಸಿಕೊಂಡರೆ ಅವನು ದಂಡ್ಯನೇ ಆಗುತ್ತಾನೆ.

12110019c ಯಃ ಕಶ್ಚಿದ್ಧರ್ಮಸಮಯಾತ್ ಪ್ರಚ್ಯುತೋಽಧರ್ಮಮಾಸ್ಥಿತಃ।। 12110020a 8ಶಠಃ ಸ್ವಧರ್ಮಮುತ್ಸೃಜ್ಯ ತಮಿಚ್ಚೇದುಪಜೀವಿತುಮ್।

12110020c ಸರ್ವೋಪಾಯೈರ್ನಿಹಂತವ್ಯಃ ಪಾಪೋ ನಿಕೃತಿಜೀವನಃ।।
12110021a ಧನಮಿತ್ಯೇವ ಪಾಪಾನಾಂ ಸರ್ವೇಷಾಮಿಹ ನಿಶ್ಚಯಃ।

ಧರ್ಮಸಾಧನದಿಂದ ಚ್ಯುತನಾಗಿ ಅಧರ್ಮವನ್ನು ಆಶ್ರಯಿಸಿದ ಮತ್ತು ಸ್ವಧರ್ಮವನ್ನು ಪರಿತ್ಯಜಿಸಿ ಪಾಪಕಾರ್ಯದಿಂದ ಜೀವನವನ್ನು ನಡೆಸುವವನನ್ನು ಸರ್ವೋಪಾಯಗಳಿಂದ ಸಂಹರಿಸಬೇಕು. ಮೋಸದಿಂದ ಜೀವಿಸುವುದು ಪಾಪವೆಂದು ತಿಳಿದರೆ ಧನವೇ ಎಲ್ಲಕ್ಕಿಂತಲೂ ಶ್ರೇಷ್ಠವೆನ್ನುವುದು ಪಾಪಿಷ್ಠರ ನಿಶ್ಚಯವಾಗಿರುತ್ತದೆ.

12110021c ಯೇಽವಿಷಹ್ಯಾ ಹ್ಯಸಂಭೋಜ್ಯಾ ನಿಕೃತ್ಯಾ ಪತನಂ ಗತಾಃ।।
12110022a ಚ್ಯುತಾ ದೇವಮನುಷ್ಯೇಭ್ಯೋ ಯಥಾ ಪ್ರೇತಾಸ್ತಥೈವ ತೇ।

ಇಂತಹ ನೀಚಪುರುಷರನ್ನು ಸತ್ಪುರುಷರು ಸಹಿಸಲಾರರು. ಅಂಥವರು ಭೋಜನಮಾಡಿಸಲೂ ಯೋಗ್ಯರಲ್ಲದವರಾಗುತ್ತಾರೆ. ವಂಚನೆಯಿಂದ ಅವರು ಪತಿತರಾಗುತ್ತಾರೆ. ಯಜ್ಞ-ತಪಸ್ಸುಗಳಿಂದ ಹೀನರಾದ ಅವರು ದೇವ-ಮನುಷ್ಯಲೋಕಗಳೆರಡರಿಂದಲೂ ಚ್ಯುತರಾಗಿ ಪ್ರೇತಗಳಂತೆ ಇರುತ್ತಾರೆ.

12110022c 9ಧನಾದಾನಾದ್ದುಃಖತರಂ10 ಜೀವಿತಾದ್ವಿಪ್ರಯೋಜನಮ್।। 12110023a ಅಯಂ ವೋ ರೋಚತಾಂ ಧರ್ಮ ಇತಿ ವಾಚ್ಯಃ ಪ್ರಯತ್ನತಃ।

ಧನನಾಶಕ್ಕಿಂತಲೂ ದುಃಖತರವಾದುದು ಜೀವನದ ವಿನಾಶ. ಆದುದರಿಂದ ಧನದ ಮೇಲಿನ ಹಂಬಲವನ್ನು ತೊರೆಯಿರಿ. ಈ ಧರ್ಮವು ನಿಮಗೆ ಇಷ್ಟವಾಗಲಿ.” ಹೀಗೆ ಪ್ರಯತ್ನಪಟ್ಟು ಹೇಳಬೇಕು.

12110023c ನ ಕಶ್ಚಿದಸ್ತಿ ಪಾಪಾನಾಂ ಧರ್ಮ ಇತ್ಯೇಷ ನಿಶ್ಚಯಃ।।
12110024a ತಥಾಗತಂ ಚ ಯೋ ಹನ್ಯಾನ್ನಾಸೌ ಪಾಪೇನ ಲಿಪ್ಯತೇ।

ಧರ್ಮವೆನ್ನುವುದೇ ಇಲ್ಲ ಎನ್ನುವುದು ಪಾಪಿಷ್ಠರ ನಿಶ್ಚಯ. ಅಂಥವರನ್ನು ಕೊಲ್ಲುವವನಿಗೆ ಪಾಪವು ಅಂಟಿಕೊಳ್ಳುವುದಿಲ್ಲ.

12110024c ಸ್ವಕರ್ಮಣಾ ಹತಂ ಹಂತಿ ಹತ ಏವ ಸ ಹನ್ಯತೇ।
12110024e ತೇಷು ಯಃ ಸಮಯಂ ಕಶ್ಚಿತ್ಕುರ್ವೀತ ಹತಬುದ್ಧಿಷು।।

ಪಾಪಿಗಳು ತಮ್ಮದೇ ಕರ್ಮಗಳಿಂದ ಹತರಾಗುತ್ತಾರೆ. ಅಂಥವರನ್ನು ಕೊಂದರೂ ಪಾಪವು ಅಂಟುವುದಿಲ್ಲ. ಹತಬುದ್ಧಿಯ ಪಾಪಿಷ್ಠರನ್ನು ಕೊಲ್ಲುವ ಪ್ರತಿಜ್ಞೆಮಾಡುವವನೇ ಧರ್ಮಾತ್ಮನು.

12110025a ಯಥಾ ಕಾಕಶ್ಚ ಗೃಧ್ರಶ್ಚ ತಥೈವೋಪಧಿಜೀವಿನಃ।
12110025c ಊರ್ಧ್ವಂ ದೇಹವಿಮೋಕ್ಷಾಂತೇ ಭವಂತ್ಯೇತಾಸು ಯೋನಿಷು।।

ಕಾಗೆ ಹದ್ದುಗಳಂತೆ ವಂಚನೆಯಿಂದ ಜೀವಿಸುವವರು ಮರಣಾನಂತರ ಆ ಯೋನಿಗಳಲ್ಲಿಯೇ ಜನ್ಮತಾಳುತ್ತಾರೆ.

12110026a ಯಸ್ಮಿನ್ಯಥಾ ವರ್ತತೇ ಯೋ ಮನುಷ್ಯಸ್ ತಸ್ಮಿಂಸ್ತಥಾ ವರ್ತಿತವ್ಯಂ ಸ ಧರ್ಮಃ।
12110026c ಮಾಯಾಚಾರೋ ಮಾಯಯಾ ವರ್ತಿತವ್ಯಃ ಸಾಧ್ವಾಚಾರಃ ಸಾಧುನಾ ಪ್ರತ್ಯುದೇಯಃ।।

ಯಾರು, ಯಾರಲ್ಲಿ ಹೇಗೆ ವ್ಯವಹರಿಸುವನೋ ಅದಕ್ಕೆ ಅನುಸಾರವಾಗಿಯೇ ಆ ಮನುಷ್ಯನೊಂದಿಗೆ ಹಾಗೆಯೇ ವ್ಯವಹರಿಸಬೇಕು. ಅದೇ ಧರ್ಮ. ಕಪಟಿಯನ್ನು ಕಪಟದಿಂದಲೇ ಬಾಧಿಸಬೇಕು. ಸದಾಚಾರಿಯನ್ನು ಸದ್ವ್ಯವಹಾರಗಳಿಂದಲೇ ಪರಿಗ್ರಹಿಸಬೇಕು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಶಾಂತಿ ಪರ್ವಣಿ ರಾಜಧರ್ಮ ಪರ್ವಣಿ ಸತ್ಯಾನೃತಕವಿಭಾಗೇ ದಶಾಧಿಕಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ರಾಜಧರ್ಮ ಪರ್ವದಲ್ಲಿ ಸತ್ಯಾನೃತಕವಿಭಾಗ ಎನ್ನುವ ನೂರಾಹತ್ತನೇ ಅಧ್ಯಾಯವು.


  1. ಕೃಷ್ಣನು ಅರ್ಜುನ-ಯುಧಿಷ್ಠಿರನಿಗೆ ಹೇಳಿದ ವ್ಯಾಧ ಬಲಾಕನ ಕಥೆಯು ಕರ್ಣಪರ್ವದ 49ನೇ ಅಧ್ಯಾಯದಲ್ಲಿ ಬಂದಿದೆ. ↩︎

  2. ಕೌಶಿಕನ ಕಥೆಯೂ ಕೃಷ್ಣನು ಅರ್ಜುನ-ಯುಧಿಷ್ಠಿರರಿಗೆ ಹೇಳಿರುವಂತೆ ಕರ್ಣಪರ್ವದ 49ನೇ ಅಧ್ಯಾಯದಲ್ಲಿ ಬಂದಿದೆ. ↩︎

  3. ಸುದುರ್ಲಭಃ (ಭಾರತ ದರ್ಶನ). ↩︎

  4. ತತ್ಕೇನಾತ್ರ (ಭಾರತ ದರ್ಶನ). ↩︎

  5. ಯಃ ಸ್ಯಾತ್ಪ್ರಭವಸಂಯುಕ್ತಃ (ಭಾರತ ದರ್ಶನ). ↩︎

  6. ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕವಿದೆ: ಅಹಿಂಸಾರ್ಥಾಯ ಭೂತಾನಾಂ ಧರ್ಮಪ್ರವಚನಂ ಕೃತಂ। ಯಃ ಸ್ಯಾದಹಿಂಸಾಸಂಪೃಕ್ತಃ ಸ ಧರ್ಮ ಇತಿ ನಿಶ್ಚಿತಃ।। (ಭಾರತ ದರ್ಶನ/ಗೀತಾ ಪ್ರೆಸ್). ಇದೂ ಅಲ್ಲದೇ ದಕ್ಷಿಣಾತ್ಯ ಪಾಠದಲ್ಲಿ ಇನ್ನೂ ಎರಡು ಅಧಿಕ ಶ್ಲೋಕಗಳಿವೆ: ಅಹಿಂಸಾ ಸತ್ಯಮಕ್ರೋಧಸ್ತಪೋ ದಾನಂ ದಮೋ ಮತಿಃ। ಅನಸೂಯಾಪ್ಯಮಾತ್ಸರ್ಯಮನಿರ್ಷ್ಯಾಂ ಶೀಲಮೇವ ಚ।। ಏಷ ಧರ್ಮಃ ಕುರುಶ್ರೇಷ್ಠ ಕಥಿತಃ ಪರಮೇಷ್ಟಿನಾ। ಬ್ರಹ್ಮಣಾ ದೇವದೇವೇನ ಅಯಂ ಚೈವ ಸನಾತನಃ। ಅಸ್ಮಿನ್ ಧರ್ಮೇ ಸ್ಥಿತೋ ರಾಜನ್ ನರೋಭದ್ರಾಣಿ ಪಶ್ಯತಿ।। (ಗೀತಾ ಪ್ರೆಸ್). ↩︎

  7. ಸಿದ್ಧಿ (ಭಾರತ ದರ್ಶನ). ↩︎

  8. ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕವಿದೆ: ದಂಡೇನೈವ ಸ ಹಂತವ್ಯಸ್ತಂ ಪಂಥಾನಂ ಸಮಾಶ್ರಿತಃ। ಚ್ಯುತಃ ಸದೈವ ಧರ್ಮೇಭ್ಯೋಽಮಾನವಂ ಧರ್ಮಮಾಸ್ಥಿತಃ।। (ಭಾರತ ದರ್ಶನ). ↩︎

  9. ನಿರ್ಯಜ್ಞಾಸ್ತಪಸಾ ಹೀನಾ ಮಾ ಸ್ಮ ತೈಃ ಸಹ ಸಂಗಮಃ। ಎಂಬ ಶ್ಲೋಕಾರ್ಧವು ಭಾರತ ದರ್ಶನದಲ್ಲಿದೆ. ↩︎

  10. ಧನನಾಶಾದ್ದುಃಖತರಂ (ಭಾರತ ದರ್ಶನ). ಧನದಾನಾದ್ದುಃಖತರಂ ಎನ್ನುವುದು ಇಲ್ಲಿ ಸರಿಯಾಗಿ ಕಾಣುತ್ತಿಲ್ಲ. ↩︎