ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ರಾಜಧರ್ಮ ಪರ್ವ
ಅಧ್ಯಾಯ 108
ಸಾರ
ಗಣತಂತ್ರದ ವರ್ಣನೆ ಮತ್ತು ಅದರ ರೀತಿ-ನೀತಿಗಳು (1-31).
12108001 ಯುಧಿಷ್ಠಿರ ಉವಾಚ।
12108001a ಬ್ರಾಹ್ಮಣಕ್ಷತ್ರಿಯವಿಶಾಂ ಶೂದ್ರಾಣಾಂ ಚ ಪರಂತಪ।
12108001c ಧರ್ಮೋ ವೃತ್ತಂ ಚ ವೃತ್ತಿಶ್ಚ ವೃತ್ತ್ಯುಪಾಯಫಲಾನಿ ಚ।।
12108002a ರಾಜ್ಞಾಂ ವೃತ್ತಂ ಚ ಕೋಶಶ್ಚ ಕೋಶಸಂಜನನಂ ಮಹತ್।
12108002c ಅಮಾತ್ಯಗುಣವೃದ್ಧಿಶ್ಚ ಪ್ರಕೃತೀನಾಂ ಚ ವರ್ಧನಮ್।।
12108003a ಷಾಡ್ಗುಣ್ಯಗುಣಕಲ್ಪಶ್ಚ ಸೇನಾನೀತಿಸ್ತಥೈವ ಚ।
12108003c ದುಷ್ಟಸ್ಯ ಚ ಪರಿಜ್ಞಾನಮದುಷ್ಟಸ್ಯ ಚ ಲಕ್ಷಣಮ್।।
12108004a ಸಮಹೀನಾಧಿಕಾನಾಂ ಚ ಯಥಾವಲ್ಲಕ್ಷಣೋಚ್ಚಯಃ।
12108004c ಮಧ್ಯಮಸ್ಯ ಚ ತುಷ್ಟ್ಯರ್ಥಂ ಯಥಾ ಸ್ಥೇಯಂ ವಿವರ್ಧತಾ।।
12108005a ಕ್ಷೀಣಸಂಗ್ರಹವೃತ್ತಿಶ್ಚ ಯಥಾವತ್ಸಂಪ್ರಕೀರ್ತಿತಾ।
12108005c ಲಘುನಾದೇಶರೂಪೇಣ ಗ್ರಂಥಯೋಗೇನ ಭಾರತ।।
ಯುಧಿಷ್ಠಿರನು ಹೇಳಿದನು: “ಪರಂತಪ! ಭಾರತ! ಇದೂವರೆಗೆ ನೀನು ಬ್ರಾಹ್ಮಣ-ಕ್ಷತ್ರಿಯ-ವೈಶ್ಯ-ಶೂದ್ರರ ಧರ್ಮ, ಆಚರಣೆ, ವೃತ್ತಿ, ಅವರ ವೃತ್ತಿ ಉಪಾಯ-ಫಲಗಳ ಕುರಿತು, ರಾಜರ ಆಚರಣೆ, ಕೋಶ, ಕೋಶವನ್ನು ಹೆಚ್ಚಿಸುವುದರ ಕುರಿತು, ಅಮಾತ್ಯಗುಣಗಳ ವೃದ್ಧಿ, ಪ್ರಕೃತಿಗಳ ವೃದ್ಧಿ, ಷಡ್ಗುಣಗಳ ಅರ್ಥ, ಸೇನಾನೀತಿ, ದುಷ್ಟರ ಪರಿಜ್ಞಾನ, ದುಷ್ಟರ ಲಕ್ಷಣ, ಸಮಾನರು-ಹೀನರು-ಅಧಿಕರ ಲಕ್ಷಣಗಳು, ಮಧ್ಯಮರನ್ನು ತೃಪ್ತಿಗೊಳಿಸುವ ಬಗೆ, ದುರ್ಬಲರನ್ನು ರಕ್ಷಿಸುವ ಬಗೆ, ಇವುಗಳ ಕುರಿತು ಲಘುವಾಗಿ ದೇಶ-ಗ್ರಂಥಗಳ ಅನುಸಾರವಾಗಿ ಹೇಳಿರುವೆ.
12108006a ವಿಜಿಗೀಷೋಸ್ತಥಾವೃತ್ತಮುಕ್ತಂ ಚೈವ ತಥೈವ ತೇ।
12108006c ಗಣಾನಾಂ ವೃತ್ತಿಮಿಚ್ಚಾಮಿ ಶ್ರೋತುಂ ಮತಿಮತಾಂ ವರ।।
ಬುದ್ಧಿವಂತರಲ್ಲಿ ಶ್ರೇಷ್ಠ! ವಿಜಯಾಭಿಲಾಷಿಗಳ ವ್ಯವಹಾರಗಳ ಕುರಿತೂ ನೀನು ಹೇಳಿದ್ದೀಯೆ. ಈಗ ನಾನು ಗಣಗಳ ಆಚರಣೆಯ ಕುರಿತು ಕೇಳಲು ಬಯಸುತ್ತೇನೆ.
12108007a ಯಥಾ ಗಣಾಃ ಪ್ರವರ್ಧಂತೇ ನ ಭಿದ್ಯಂತೇ ಚ ಭಾರತ।
12108007c ಅರೀನ್ ಹಿ ವಿಜಿಗೀಷಂತೇ ಸುಹೃದಃ ಪ್ರಾಪ್ನುವಂತಿ ಚ।।
ಭಾರತ! ಗಣಗಳು ಹೇಗೆ ವೃದ್ಧಿಸುತ್ತವೆ? ಹೇಗೆ ಒಡೆಯುವುದಿಲ್ಲ? ಶತ್ರುಗಳನ್ನು ಅವು ಹೇಗೆ ಜಯಿಸುತ್ತವೆ? ಮತ್ತು ಸುಹೃದರನ್ನು ಹೇಗೆ ಪಡೆದುಕೊಳ್ಳುತ್ತವೆ?
12108008a ಭೇದಮೂಲೋ ವಿನಾಶೋ ಹಿ ಗಣಾನಾಮುಪಲಭ್ಯತೇ।
12108008c ಮಂತ್ರಸಂವರಣಂ ದುಃಖಂ ಬಹೂನಾಮಿತಿ ಮೇ ಮತಿಃ।।
ಗಣಗಳ ವಿನಾಶಕ್ಕೆ ಭೇದವೇ ಮೂಲವೆಂದು ಕಂಡುಬರುತ್ತದೆ. ಅನೇಕರಿರುವಾಗ ಮಂತ್ರಾಲೋಚನೆಗಳನ್ನು ಗುಪ್ತವಾಗಿಡುವುದು ಕಷ್ಟವೆಂದು ನನ್ನ ಅಭಿಪ್ರಾಯವಾಗಿದೆ.
12108009a ಏತದಿಚ್ಚಾಮ್ಯಹಂ ಶ್ರೋತುಂ ನಿಖಿಲೇನ ಪರಂತಪ।
12108009c ಯಥಾ ಚ ತೇ ನ ಭಿದ್ಯೇರಂಸ್ತಚ್ಚ ಮೇ ಬ್ರೂಹಿ ಪಾರ್ಥಿವ।।
ಪರಂತಪ! ಪಾರ್ಥಿವ! ಇದನ್ನು ಸಂಪೂರ್ಣವಾಗಿ ಕೇಳಲು ಬಯಸುತ್ತೇನೆ. ಗಣಗಳು ಒಡೆದುಹೋಗದಂತೆ ಏನು ಮಾಡಬೇಕೆನ್ನುವುದನ್ನು ನನಗೆ ಹೇಳು.”
12108010 ಭೀಷ್ಮ ಉವಾಚ।
12108010a ಗಣಾನಾಂ ಚ ಕುಲಾನಾಂ ಚ ರಾಜ್ಞಾಂ ಚ ಭರತರ್ಷಭ।
12108010c ವೈರಸಂದೀಪನಾವೇತೌ ಲೋಭಾಮರ್ಷೌ ಜನಾಧಿಪ।।
ಭೀಷ್ಮನು ಹೇಳಿದನು: “ಭರತರ್ಷಭ! ಜನಾಧಿಪ! ಲೋಭ ಮತ್ತು ಅಸಹನೆ ಇವೆರಡೂ ಗಣಗಳ, ಕುಲಗಳ ಮತ್ತು ರಾಜರ ನಡುವೆ ವೈರಾಗ್ನಿಯನ್ನು ಪ್ರಜ್ವಲಿಸುತ್ತವೆ.
12108011a ಲೋಭಮೇಕೋ ಹಿ ವೃಣುತೇ ತತೋಽಮರ್ಷಮನಂತರಮ್।
12108011c ತೌ ಕ್ಷಯವ್ಯಯಸಂಯುಕ್ತಾವನ್ಯೋನ್ಯಜನಿತಾಶ್ರಯೌ।।
ಒಬ್ಬನಲ್ಲಿ ಲೋಭವುಂಟಾಗಲು ಇನ್ನೊಬ್ಬನಲ್ಲಿ ಅಸಹನೆಯು ಹುಟ್ಟುತ್ತದೆ. ಅನ್ಯೋನ್ಯರಲ್ಲಿ ಹುಟ್ಟಿದ ಇವೆರಡೂ ಸೇರಿ ಇಬ್ಬರಲ್ಲಿಯೂ ಕ್ಷಯ-ವ್ಯಯಗಳನ್ನುಂಟುಮಾಡುತ್ತದೆ1.
12108012a ಚಾರಮಂತ್ರಬಲಾದಾನೈಃ ಸಾಮದಾನವಿಭೇದನೈಃ।
12108012c ಕ್ಷಯವ್ಯಯಭಯೋಪಾಯೈಃ ಕರ್ಶಯಂತೀತರೇತರಮ್।।
ಅವರು ಪರಸ್ಪರರನ್ನು ಚಾರರು, ಗುಟ್ಟು, ಸೈನ್ಯ, ಸಾಮ-ದಾನ-ವಿಭೇದನ ಮತ್ತು ಕ್ಷಯ-ವ್ಯಯಗಳ ಉಪಾಯಗಳಿಂದ ಪೀಡಿಸುತ್ತಾರೆ.
12108013a ತತ್ರ ದಾನೇನ2 ಭಿದ್ಯಂತೇ ಗಣಾಃ ಸಂಘಾತವೃತ್ತಯಃ।
12108013c ಭಿನ್ನಾ ವಿಮನಸಃ ಸರ್ವೇ ಗಚ್ಚಂತ್ಯರಿವಶಂ ಭಯಾತ್।।
ಸಾಂಘಿಕ ಜೀವನವನ್ನು ನಡೆಸುವ ಗಣಗಳು ದಾನದಿಂದ ಒಡೆಯುತ್ತವೆ. ಒಡೆದು ವಿಮನಸ್ಕರಾಗಿ ಭಯದಿಂದ ಎಲ್ಲರೂ ಶತ್ರುಗಳ ವಶರಾಗುತ್ತಾರೆ.
12108014a ಭೇದಾದ್ಗಣಾ ವಿನಶ್ಯಂತಿ ಭಿನ್ನಾಃ ಸೂಪಜಪಾಃ ಪರೈಃ3।
12108014c ತಸ್ಮಾತ್ಸಂಘಾತಯೋಗೇಷು ಪ್ರಯತೇರನ್ಗಣಾಃ ಸದಾ।।
ಭೇದದಿಂದಲೇ ಗಣಗಳು ವಿನಾಶವಾಗುತ್ತವೆ. ಒಡೆದುಹೋದ ಗಣಗಳನ್ನು ಶತ್ರುಗಳು ಬಹುಬೇಗ ಆಕ್ರಮಣಿಸುತ್ತಾರೆ. ಆದುದರಿಂದ ಗಣಗಳು ಸದಾ ಸಂಘಟಿತರಾಗಿರಲು ಪ್ರಯತ್ನಿಸಬೇಕು.
12108015a ಅರ್ಥಾ ಹ್ಯೇವಾಧಿಗಮ್ಯಂತೇ ಸಂಘಾತಬಲಪೌರುಷಾತ್।
12108015c ಬಾಹ್ಯಾಶ್ಚ ಮೈತ್ರೀಂ ಕುರ್ವಂತಿ ತೇಷು ಸಂಘಾತವೃತ್ತಿಷು।।
ಸಂಘದ ಬಲ-ಪೌರುಷಗಳಿರುವವರು ಅನಾಯಾಸವಾಗಿ ಉದ್ದೇಶಗಳನ್ನು ಸಾಧಿಸುತ್ತಾರೆ. ಒಗ್ಗಟ್ಟಾಗಿ ಇರುವವರೊಡನೆ ಹೊರಗಿನವರೂ ಮೈತ್ರಿಯನ್ನು ಮಾಡಿಕೊಳ್ಳುತ್ತಾರೆ.
12108016a ಜ್ಞಾನವೃದ್ಧಾನ್ ಪ್ರಶಂಸಂತಃ ಶುಶ್ರೂಷಂತಃ ಪರಸ್ಪರಮ್।
12108016c ವಿನಿವೃತ್ತಾಭಿಸಂಧಾನಾಃ ಸುಖಮೇಧಂತಿ ಸರ್ವಶಃ।।
ಪರಸ್ಪರ ಶುಶ್ರೂಷೆಮಾಡುವ ಸಂಘಜೀವನವನ್ನು ಜ್ಞಾನವೃದ್ಧರು ಪ್ರಶಂಸಿಸುತ್ತಾರೆ. ಅವರು ಪರಸ್ಪರರೊಡನೆ ವಿನೀತರಾಗಿದ್ದುಕೊಂಡು ಸರ್ವಶಃ ಸುಖದಿಂದ ಇರುತ್ತಾರೆ.
12108017a ಧರ್ಮಿಷ್ಠಾನ್ ವ್ಯವಹಾರಾಂಶ್ಚ ಸ್ಥಾಪಯಂತಶ್ಚ ಶಾಸ್ತ್ರತಃ।
12108017c ಯಥಾವತ್ಸಂಪ್ರವರ್ತಂತೋ4 ವಿವರ್ಧಂತೇ ಗಣೋತ್ತಮಾಃ।।
ಉತ್ತಮ ಗಣಗಳು ಶಾಸ್ತ್ರತಃ ಧರ್ಮಿಷ್ಠ ವ್ಯವಹಾರಗಳನ್ನು ಸ್ಥಾಪಿಸಿಕೊಳ್ಳುತ್ತವೆ. ಯಥೋಚಿತವಾಗಿ ನಡೆದುಕೊಂಡು ಅಭಿವೃದ್ಧಿ ಹೊಂದುತ್ತಾರೆ.
12108018a ಪುತ್ರಾನ್ ಭ್ರಾತೃನ್ನಿಗೃಹ್ಣಂತೋ ವಿನಯೇ ಚ ಸದಾ ರತಾಃ।
12108018c ವಿನೀತಾಂಶ್ಚ ಪ್ರಗೃಹ್ಣಂತೋ ವಿವರ್ಧಂತೇ ಗಣೋತ್ತಮಾಃ।।
ಉತ್ತಮ ಗಣಗಳು ಪುತ್ರರನ್ನೂ-ತಮ್ಮಂದಿರನ್ನೂ ಸದಾ ವಿನಯದಿಂದಿರುವಂತೆ ನಿಯಂತ್ರಿಸಿ ತಿದ್ದುತ್ತಿರುತ್ತಾರೆ. ವಿನೀತರಾದವರನ್ನು ಸ್ವೀಕರಿಸುತ್ತಾರೆ ಮತ್ತು ಅಭಿವೃದ್ಧಿಹೊಂದುತ್ತಾರೆ.
12108019a ಚಾರಮಂತ್ರವಿಧಾನೇಷು ಕೋಶಸಂನಿಚಯೇಷು ಚ।
12108019c ನಿತ್ಯಯುಕ್ತಾ ಮಹಾಬಾಹೋ ವರ್ಧಂತೇ ಸರ್ವತೋ ಗಣಾಃ।।
ಮಹಾಬಾಹೋ! ಗಣಗಳು ಚಾರಮಂತ್ರವಿಧಾನಗಳಲ್ಲಿ ಮತ್ತು ಕೋಶ ಸಂಗ್ರಹದಲ್ಲಿ ನಿತ್ಯವೂ ಯುಕ್ತವಾಗಿದ್ದುಕೊಂಡು ಸರ್ವತೋಮುಖವಾಗಿ ವರ್ಧಿಸುತ್ತವೆ.
12108020a ಪ್ರಾಜ್ಞಾನ್ ಶೂರಾನ್ಮಹೇಷ್ವಾಸಾನ್ಕರ್ಮಸು ಸ್ಥಿರಪೌರುಷಾನ್।
12108020c ಮಾನಯಂತಃ ಸದಾ ಯುಕ್ತಾ ವಿವರ್ಧಂತೇ ಗಣಾ ನೃಪ।।
ನೃಪ! ಪ್ರಾಜ್ಞರನ್ನೂ, ಶೂರರನ್ನೂ, ಮಹೇಷ್ವಾಸರನ್ನೂ, ಕರ್ಮಗಳಲ್ಲಿ ನಿರತರಾದವರನ್ನೂ, ಸ್ಥಿರಪೌರುಷರನ್ನೂ ಸದಾ ಗೌರವಿಸುತ್ತಾ ಗಣಗಳು ಅಭಿವೃದ್ಧಿಹೊಂದುತ್ತವೆ.
12108021a ದ್ರವ್ಯವಂತಶ್ಚ ಶೂರಾಶ್ಚ ಶಸ್ತ್ರಜ್ಞಾಃ ಶಾಸ್ತ್ರಪಾರಗಾಃ।
12108021c ಕೃಚ್ಚ್ರಾಸ್ವಾಪತ್ಸು ಸಂಮೂಢಾನ್ಗಣಾನುತ್ತಾರಯಂತಿ ತೇ।।
ದ್ರವ್ಯವಂತರೂ, ಶೂರರೂ, ಶಸ್ತ್ರಜ್ಞರೂ, ಶಾಸ್ತ್ರಪಾರಗರೂ ಆದ ಗಣದ ಸದಸ್ಯರು ಕಷ್ಟಕರ ಆಪತ್ತನ್ನು ಹೊಂದಿ ಸಮ್ಮೂಢರಾಗುವವರನ್ನು ಉದ್ಧರಿಸುತ್ತಾರೆ.
12108022a ಕ್ರೋಧೋ ಭೇದೋ ಭಯೋ ದಂಡಃ ಕರ್ಶನಂ ನಿಗ್ರಹೋ ವಧಃ।
12108022c ನಯಂತ್ಯರಿವಶಂ ಸದ್ಯೋ ಗಣಾನ್ ಭರತಸತ್ತಮ।।
ಭರತಸತ್ತಮ! ಗಣದಲ್ಲಿ ಕ್ರೋಧ, ಭೇದ, ಭಯ, ದಂಡ, ಕರ್ಶನ, ನಿಗ್ರಹ ಮತ್ತು ವಧೆಗಳಾದರೆ ಅವು ಸದ್ಯದಲ್ಲಿಯೇ ಗಣವನ್ನು ವೈರಿವಶವನ್ನಾಗಿ ಮಾಡುತ್ತದೆ.
12108023a ತಸ್ಮಾನ್ಮಾನಯಿತವ್ಯಾಸ್ತೇ ಗಣಮುಖ್ಯಾಃ ಪ್ರಧಾನತಃ।
12108023c ಲೋಕಯಾತ್ರಾ ಸಮಾಯತ್ತಾ ಭೂಯಸೀ ತೇಷು ಪಾರ್ಥಿವ।।
ಪಾರ್ಥಿವ! ಆದುದರಿಂದ ಗಣದಲ್ಲಿ ಮುಖ್ಯರಾದವರನ್ನು ಪ್ರಧಾನಕೊಟ್ಟು ಸಮ್ಮಾನಿಸುತ್ತಿರಬೇಕು. ಏಕೆಂದರೆ ಲೋಕವ್ಯವಹಾರಗಳು ಒಟ್ಟಿಗೇ ಅವರ ಮೇಲೆ ನಿಂತಿವೆ.
12108024a ಮಂತ್ರಗುಪ್ತಿಃ ಪ್ರಧಾನೇಷು ಚಾರಶ್ಚಾಮಿತ್ರಕರ್ಶನ।
12108024c ನ ಗಣಾಃ ಕೃತ್ಸ್ನಶೋ ಮಂತ್ರಂ ಶ್ರೋತುಮರ್ಹಂತಿ ಭಾರತ।।
ಭಾರತ! ಅಮಿತ್ರಕರ್ಶನ! ಮಂತ್ರಾಲೋಚನೆ ಮತ್ತು ಚಾರರ ವಿಷಯಗಳು ಪ್ರಧಾನರಲ್ಲಿ ಮಾತ್ರ ಇರುತ್ತವೆ. ಗಣದ ಎಲ್ಲರೂ ಮಂತ್ರಾಲೋಚನೆಗಳನ್ನು ಕೇಳಲು ಅರ್ಹರಿರುವುದಿಲ್ಲ.
12108025a ಗಣಮುಖ್ಯೈಸ್ತು ಸಂಭೂಯ ಕಾರ್ಯಂ ಗಣಹಿತಂ ಮಿಥಃ।
12108025c ಪೃಥಗ್ಗಣಸ್ಯ ಭಿನ್ನಸ್ಯ ವಿಮತಸ್ಯ ತತೋಽನ್ಯಥಾ।
12108025e ಅರ್ಥಾಃ ಪ್ರತ್ಯವಸೀದಂತಿ ತಥಾನರ್ಥಾ ಭವಂತಿ ಚ।।
ಗಣದ ಹಿತಕ್ಕಾಗಿ ಗಣಮುಖ್ಯರು ಕಲೆತು ಕಾರ್ಯಗಳನ್ನು ಮಾಡಬೇಕು. ಹಾಗೆ ಮಾಡದೇ ಪ್ರತ್ಯೇಕ ಪ್ರತ್ಯೇಕವಾಗಿ ಕಾರ್ಯಮಾಡುತ್ತಿದ್ದರೆ ಮತ್ತು ಭಿನ್ನ ಮತಗಳಿದ್ದರೆ ಕಾರ್ಯಗಳು ಕೆಟ್ಟುಹೋಗುತ್ತವೆ ಮತ್ತು ಅನರ್ಥಗಳಾಗುತ್ತವೆ.
12108026a ತೇಷಾಮನ್ಯೋನ್ಯಭಿನ್ನಾನಾಂ ಸ್ವಶಕ್ತಿಮನುತಿಷ್ಠತಾಮ್।
12108026c ನಿಗ್ರಹಃ ಪಂಡಿತೈಃ ಕಾರ್ಯಃ ಕ್ಷಿಪ್ರಮೇವ ಪ್ರಧಾನತಃ।।
ಅನ್ಯೋನ್ಯ ಭಿನ್ನಾಭಿಪ್ರಾಯಗಳಿದ್ದು ಗಣದಿಂದ ಹೊರಬಂದು ಸ್ವಶಕ್ತಿಯಿಂದ ನಿಲ್ಲುವವವರನ್ನು ಪಂಡಿತರು ಬೇಗನೇ ನಿಗ್ರಹಿಸಬೇಕು. ಇದು ಪ್ರಧಾನ ಕಾರ್ಯವಾಗಿರುತ್ತದೆ.
12108027a ಕುಲೇಷು ಕಲಹಾ ಜಾತಾಃ ಕುಲವೃದ್ಧೈರುಪೇಕ್ಷಿತಾಃ।
12108027c ಗೋತ್ರಸ್ಯ ರಾಜನ್ಕುರ್ವಂತಿ5 ಗಣಸಂಭೇದಕಾರಿಕಾಮ್।।
ರಾಜನ್! ಕುಲದಲ್ಲಿ ಹುಟ್ಟಿದ ಕಲಹಗಳನ್ನು ಕುಲವೃದ್ಧರು ಉಪೇಕ್ಷಿಸಿದರೆ ಅದು ಗೋತ್ರದ ಮತ್ತು ಗಣದ ಭೇದಕ್ಕೆ ಕಾರಣವಾಗುತ್ತದೆ.
12108028a ಆಭ್ಯಂತರಂ ಭಯಂ ರಕ್ಷ್ಯಂ ಸುರಕ್ಷ್ಯಂ ಬಾಹ್ಯತೋ ಭಯಮ್।
12108028c ಅಭ್ಯಂತರಾದ್ಭಯಂ ಜಾತಂ6 ಸದ್ಯೋ ಮೂಲಂ ನಿಕೃಂತತಿ।।
ಗಣವನ್ನು ಆಂತರಿಕ ಭಯದಿಂದ ರಕ್ಷಿಸಿದರೆ ಅದು ಬಾಹ್ಯ ಭಯದಿಂದ ಸುರಕ್ಷಿತವಾಗಿರುತ್ತದೆ. ಆಂತರಿಕ ಭಯವು ಗಣದ ಮೂಲವನ್ನೇ ಕತ್ತರಿಸಿಹಾಕುತ್ತದೆ.
12108029a ಅಕಸ್ಮಾತ್ಕ್ರೋಧಲೋಭಾದ್ವಾ ಮೋಹಾದ್ವಾಪಿ ಸ್ವಭಾವಜಾತ್।
12108029c ಅನ್ಯೋನ್ಯಂ ನಾಭಿಭಾಷಂತೇ ತತ್ಪರಾಭವಲಕ್ಷಣಮ್।।
ಅಕಾಸ್ಮಾತ್ತಾದ ಕ್ರೋಧ-ಲೋಭಗಳಿಂದ ಮತ್ತು ಸ್ವಭಾವಜ ಮೋಹದ ಕಾರಣಗಳಿಂದ ಅನ್ಯೋನ್ಯರು ಮಾತನಾಡದೇ ಇದ್ದರೆ ಅದು ಗಣದ ಪರಾಭವವನ್ನು ಸೂಚಿಸುತ್ತದೆ.
12108030a ಜಾತ್ಯಾ ಚ ಸದೃಶಾಃ ಸರ್ವೇ ಕುಲೇನ ಸದೃಶಾಸ್ತಥಾ।
12108030c ನ ತು ಶೌರ್ಯೇಣ ಬುದ್ಧ್ಯಾ ವಾ ರೂಪದ್ರವ್ಯೇಣ ವಾ ಪುನಃ।।
12108031a ಭೇದಾಚ್ಚೈವ ಪ್ರಮಾದಾಚ್ಚ7 ನಾಮ್ಯಂತೇ ರಿಪುಭಿರ್ಗಣಾಃ।
12108031c ತಸ್ಮಾತ್ಸಂಘಾತಮೇವಾಹುರ್ಗಣಾನಾಂ ಶರಣಂ ಮಹತ್।।
ಸಮಾನಜಾತಿಯವರೆಲ್ಲರೂ ಮತ್ತು ಒಂದೇ ಕುಲದವರೆಲ್ಲರೂ ಸಂಘಟಿತರಾಗಿರಲು ಸಾಧ್ಯವಿದೆ. ಆದರೆ ಶೌರ್ಯ, ಬುದ್ಧಿ, ರೂಪ ಮತ್ತು ಸಂಪತ್ತಿನಲ್ಲಿ ಸಮಾನರಾಗಿರುವುದು ಸಾಧ್ಯವಿಲ್ಲ. ಈ ಭೇದಗಳ ಕಾರಣದಿಂದಲೇ ಶತ್ರುಗಳು ಪ್ರಮಾದಗೊಳಿಸಿ ಸಂಘಟನೆಯನ್ನು ಮುರಿಯಲು ಪ್ರಯತ್ನಿಸುತ್ತಾರೆ. ಆದುದರಿಂದ ಗಣಗಳು ಮಹಾ ಸಂಘಜೀವನವನ್ನೇ ಆಶ್ರಯಿಸಬೇಕು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಶಾಂತಿ ಪರ್ವಣಿ ರಾಜಧರ್ಮ ಪರ್ವಣಿ ಗಣವೃತ್ತೇ ಅಷ್ಟಾಧಿಕಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ರಾಜಧರ್ಮ ಪರ್ವದಲ್ಲಿ ಗಣವೃತ್ತ ಎನ್ನುವ ನೂರಾಎಂಟನೇ ಅಧ್ಯಾಯವು.
-
ಈ ಶ್ಲೋಕಕ್ಕೆ ಈ ರೀತಿಯ ವ್ಯಾಖ್ಯಾನವಿದೆ: “ಏಕೋ ರಾಜಾ ಲೋಭಂ ವೃಣತೇ। ಗಣಸ್ತದಾ ಅಸ್ಮಭ್ಯಂ ನ ದದಾತೀತಿ ಆಮರ್ಷಂ ವೃಣುತೇ।।” ಅರ್ಥಾತ್: ರಾಜನು ಲೋಭಿಯಾಗಿ ಪ್ರಜೆಗಳಿಗೆ ತನ್ನ ಐಶ್ವರ್ಯವನ್ನು ಕೊಡುವುದಿಲ್ಲ. ಜನಸಮೂಹವು ಅದನ್ನು ಸಹಿಸುವುದಿಲ್ಲ. ಪರಸ್ಪರ ಘರ್ಷಣೆಯಾಗುತ್ತದೆ. ಜನ-ಧನಗಳೆರಡೂ ವಿನಾಶಹೊಂದುತ್ತವೆ. ಕಡೆಗೆ ರಾಜನೂ ವಿನಾಶಹೊಂದುತ್ತಾನೆ. ಪ್ರಜೆಗಳೂ ವಿನಾಶಹೊಂದುತ್ತಾರೆ. (ಭಾರತ ದರ್ಶನ). ↩︎
-
ತತ್ರಾದಾನೇನ (ಭಾರತ ದರ್ಶನ). ↩︎
-
ಭೇದೇ ಗಣಾ ವಿನೇಶುರ್ಹಿ ಭಿನ್ನಾಸ್ತು ಸುಜಯಾಃ ಪರೈಃ। (ಭಾರತ ದರ್ಶನ). ↩︎
-
ಯಥಾವತ್ ಪ್ರತಿಪಶ್ಯಂತೋ (ಭಾರತ ದರ್ಶನ). ↩︎
-
ನಾಶಂ ಕುರ್ವಂತಿ (ಭಾರತ ದರ್ಶನ). ↩︎
-
ರಾಜನ್ (ಭಾರತ ದರ್ಶನ). ↩︎
-
ಪ್ರದಾನಾಚ್ಚ (ಭಾರತ ದರ್ಶನ). ↩︎