ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ರಾಜಧರ್ಮ ಪರ್ವ
ಅಧ್ಯಾಯ 107
ಸಾರ
ಕಾಲಕವೃಕ್ಷೀಯನು ಕೋಸಲರಾಜನಿಗೆ ವಿದೇಹರಾಜನನ್ನು ಭೇಟಿ ಮಾಡಿಸಿದುದು; ವಿದೇಹರಾಜನು ಕೋಸಲರಾಜನನ್ನು ತನ್ನ ಅಳಿಯನನ್ನಾಗಿ ಮಾಡಿಕೊಂಡಿದುದು (1-27).
12107001 ರಾಜಪುತ್ರ ಉವಾಚ।
12107001a ನ ನಿಕೃತ್ಯಾ ನ ದಂಭೇನ ಬ್ರಹ್ಮನ್ನಿಚ್ಚಾಮಿ ಜೀವಿತುಮ್।
12107001c ನಾಧರ್ಮಯುಕ್ತಾನಿಚ್ಚೇಯಮರ್ಥಾನ್ಸುಮಹತೋಽಪ್ಯಹಮ್।।
ರಾಜಪುತ್ರನು ಹೇಳಿದನು: “ಬ್ರಹ್ಮನ್! ನಾನು ಮೋಸದಿಂದ ಮತ್ತು ದಂಭದಿಂದ ಜೀವಿಸಲು ಇಚ್ಛಿಸುವುದಿಲ್ಲ. ಅಧರ್ಮವನ್ನು ಬಳಸಿ ನನಗೆ ಮಹಾ ಸಂಪತ್ತೇ ದೊರೆಯುವ ಹಾಗಿದ್ದರೂ ಅದನ್ನು ನಾನು ಬಯಸುವುದಿಲ್ಲ.
12107002a ಪುರಸ್ತಾದೇವ ಭಗವನ್ಮಯೈತದಪವರ್ಜಿತಮ್।
12107002c ಯೇನ ಮಾಂ ನಾಭಿಶಂಕೇತ ಯದ್ವಾ ಕೃತ್ಸ್ನಂ ಹಿತಂ ಭವೇತ್।।
ಭಗವನ್! ಈ ಎಲ್ಲ ದುರ್ಗುಣಗಳನ್ನೂ ಮೊದಲೇ ನಾನು ಪರಿತ್ಯಜಿಸಿದ್ದೇನೆ. ಯಾರೂ ನನ್ನ ಮೇಲೆ ಶಂಕಿಸದ ಹಾಗೆ ಇರುವಂತಹ ಮತ್ತು ಯಾವುದರಿಂದ ಎಲ್ಲವಕ್ಕೂ ಹಿತವಾಗುವುದೋ ಅದರ ಕುರಿತು ಹೇಳಬೇಕು.
12107003a ಆನೃಶಂಸ್ಯೇನ ಧರ್ಮೇಣ ಲೋಕೇ ಹ್ಯಸ್ಮಿಂಜಿಜೀವಿಷುಃ।
12107003c ನಾಹಮೇತದಲಂ ಕರ್ತುಂ ನೈತನ್ಮಯ್ಯುಪಪದ್ಯತೇ।।
ಅಹಿಂಸಾ ಧರ್ಮವನ್ನೇ ಆಶ್ರಯಿಸಿ ಲೋಕದಲ್ಲಿ ಜೀವಿಸಿರಲು ಬಯಸುತ್ತಿರುವ ನಾನು ನೀವು ಹೇಳಿದಂತೆ ಮಾಡಲಾರೆ. ಇಂತಹ ಅಧರ್ಮಮಾರ್ಗಗಳನ್ನು ಉಪದೇಶಿಸುವುದೂ ನಿನ್ನಂಥವರಿಗೆ ತಕ್ಕುದಲ್ಲ.”
12107004 ಮುನಿರುವಾಚ।
12107004a ಉಪಪನ್ನಸ್ತ್ವಮೇತೇನ ಯಥಾ ಕ್ಷತ್ರಿಯ ಭಾಷಸೇ।
12107004c ಪ್ರಕೃತ್ಯಾ ಹ್ಯುಪಪನ್ನೋಽಸಿ ಬುದ್ಧ್ಯಾ ಚಾದ್ಭುತದರ್ಶನ।।
ಮುನಿಯು ಹೇಳಿದನು: “ಕ್ಷತ್ರಿಯನಾಡುವಂತೆ ನಿನ್ನ ಗುಣಸಂಪನ್ನತೆಗೆ ಅನುರೂಪವಾಗಿಯೇ ಮಾತನಾಡಿರುವೆ. ಸ್ವಭಾವತಃ ನೀನು ಗುಣಸಂಪನ್ನನಾಗಿದ್ದೀಯೆ. ಬುದ್ಧಿಯಿಂದ ನೀನು ಅದ್ಭುತವನ್ನು ಕಂಡಿರುವೆ.
12107005a ಉಭಯೋರೇವ ವಾಮರ್ಥೇ ಯತಿಷ್ಯೇ ತವ ತಸ್ಯ ಚ।
12107005c ಸಂಶ್ಲೇಷಂ ವಾ ಕರಿಷ್ಯಾಮಿ ಶಾಶ್ವತಂ ಹ್ಯನಪಾಯಿನಮ್।।
ನೀನು ಮತ್ತು ವಿದೇಹರಾಜ ಇಬ್ಬರ ಹಿತಾರ್ಥವಾಗಿ ನಾನೀಗಲೇ ಪ್ರಯತ್ನಿಸುತ್ತೇನೆ. ನಿಮ್ಮಿಬ್ಬರ ನಡುವೆ ಶಾಶ್ವತವಾದ ಮತ್ತು ಬಿಟ್ಟುಹೋಗದ ಸಂಬಂಧವನ್ನು ಕಲ್ಪಿಸುತ್ತೇನೆ.
12107006a ತ್ವಾದೃಶಂ ಹಿ ಕುಲೇ ಜಾತಮನೃಶಂಸಂ ಬಹುಶ್ರುತಮ್।
12107006c ಅಮಾತ್ಯಂ ಕೋ ನ ಕುರ್ವೀತ ರಾಜ್ಯಪ್ರಣಯಕೋವಿದಮ್।।
ನಿನ್ನಂಥಹ ಉತ್ತಮ ಕುಲಪ್ರಸೂತ, ದಯಾಳು, ವಿದ್ವಾಂಸ, ರಾಜ್ಯವ್ಯವಹಾರಗಳಲ್ಲಿ ಕೋವಿದನನ್ನು ಯಾರು ತಾನೇ ಅಮಾತ್ಯನನ್ನಾಗಿ ಮಾಡಿಕೊಳ್ಳುವುದಿಲ್ಲ?
12107007a ಯಸ್ತ್ವಂ ಪ್ರವ್ರಜಿತೋ ರಾಜ್ಯಾದ್ವ್ಯಸನಂ ಚೋತ್ತಮಂ ಗತಃ।
12107007c ಆನೃಶಂಸ್ಯೇನ ವೃತ್ತೇನ ಕ್ಷತ್ರಿಯೇಚ್ಚಸಿ ಜೀವಿತುಮ್।।
ರಾಜ್ಯವನ್ನು ಕಳೆದುಕೊಂಡು ಮಹಾ ವ್ಯಸನದಲ್ಲಿ ಸಿಲುಕಿರುವ ನೀನು ದಯಾಪೂರ್ಣವಾದ ಕ್ಷತ್ರಿಯ ವೃತ್ತಿಯಿಂದ ಜೀವಿಸಲು ಬಯಸುತ್ತಿರುವೆ.
12107008a ಆಗಂತಾ ಮದ್ಗೃಹಂ ತಾತ ವೈದೇಹಃ ಸತ್ಯಸಂಗರಃ।
12107008c ಯಥಾಹಂ ತಂ ನಿಯೋಕ್ಷ್ಯಾಮಿ ತತ್ಕರಿಷ್ಯತ್ಯಸಂಶಯಮ್।।
ಅಯ್ಯಾ! ಸತ್ಯಸಂಗರ ವೈದೇಹನು ನನ್ನ ಆಶ್ರಮಕ್ಕೆ ಬರುವವನಿದ್ದಾನೆ. ನಾನು ಹೇಳಿದಂತೆಯೇ ಅವನು ಮಾಡುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ.””
12107009 ಭೀಷ್ಮ ಉವಾಚ।
12107009a ತತ ಆಹೂಯ ವೈದೇಹಂ ಮುನಿರ್ವಚನಮಬ್ರವೀತ್।
12107009c ಅಯಂ ರಾಜಕುಲೇ ಜಾತೋ ವಿದಿತಾಭ್ಯಂತರೋ ಮಮ।।
ಭೀಷ್ಮನು ಹೇಳಿದನು: “ಅನಂತರ ಮುನಿಯು ವೈದೇಹನನ್ನು ಕರೆದು ಹೇಳಿದನು: “ಇವನು ರಾಜಕುಲದಲ್ಲಿ ಹುಟ್ಟಿದವನು. ಇವನ ಆಂತರಿಕ ವ್ಯವಹಾರಗಳೆಲ್ಲವೂ ನನಗೆ ತಿಳಿದಿವೆ.
12107010a ಆದರ್ಶ ಇವ ಶುದ್ಧಾತ್ಮಾ ಶಾರದಶ್ಚಂದ್ರಮಾ ಇವ।
12107010c ನಾಸ್ಮಿನ್ ಪಶ್ಯಾಮಿ ವೃಜಿನಂ ಸರ್ವತೋ ಮೇ ಪರೀಕ್ಷಿತಃ।।
ಕನ್ನಡಿಯಂತೆ ಇವನು ಶುದ್ಧಾತ್ಮನು. ಶರದೃತುವಿನ ಚಂದ್ರನಂತೆ ಇದ್ದಾನೆ. ನನ್ನಿಂದ ಸರ್ವಪ್ರಕಾರದಲ್ಲಿಯೂ ಪರೀಕ್ಷಿಸಲ್ಪಟ್ಟ ಇವನಲ್ಲಿ ಸ್ವಲ್ಪವೂ ದೋಷವನ್ನು ನಾನು ಕಾಣುತ್ತಿಲ್ಲ.
12107011a ತೇನ ತೇ ಸಂಧಿರೇವಾಸ್ತು ವಿಶ್ವಸಾಸ್ಮಿನ್ಯಥಾ ಮಯಿ।
12107011c ನ ರಾಜ್ಯಮನಮಾತ್ಯೇನ ಶಕ್ಯಂ ಶಾಸ್ತುಮಮಿತ್ರಹನ್।।
ಅವನೊಂದಿಗೆ ನಿನ್ನ ಸಂಧಿಯಾಗಬೇಕು. ನನ್ನಲ್ಲಿ ಇಟ್ಟಿರುವ ವಿಶ್ವಾಸವನ್ನೇ ಅವನಲ್ಲಿಯೂ ನೀನು ಇಡಬೇಕು. ಅಮಿತ್ರಹನ್! ಅಮಾತ್ಯನಿಲ್ಲದೇ ರಾಜ್ಯಶಾಸನವನ್ನು ಮಾಡಲು ಶಕ್ಯವಿಲ್ಲ.
12107012a ಅಮಾತ್ಯಃ ಶೂರ ಏವ ಸ್ಯಾದ್ಬುದ್ಧಿಸಂಪನ್ನ ಏವ ಚ।
12107012c ತಾಭ್ಯಾಂ ಚೈವ ಭಯಂ ರಾಜ್ಞಃ ಪಶ್ಯ ರಾಜ್ಯಸ್ಯ ಯೋಜನಮ್।
12107012e ಧರ್ಮಾತ್ಮನಾಂ ಕ್ವ ಚಿಲ್ಲೋಕೇ ನಾನ್ಯಾಸ್ತಿ ಗತಿರೀದೃಶೀ।।
ಅಮಾತ್ಯನು ಶೂರನೂ ಬುದ್ಧಿಸಂಪನ್ನನ್ನೂ ಆಗಿರಬೇಕು. ಅಂಥವರಿಂದಲೇ ರಾಜನು ಭಯಪಡಬೇಕು ಮತ್ತು ಅಂಥವನನ್ನು ನೋಡಿ ರಾಜ್ಯದಲ್ಲಿ ಬಳಸಬೇಕು. ಲೋಕದಲ್ಲಿ ಧರ್ಮಾತ್ಮರಿಗೆ ಇವರಲ್ಲದೇ ಬೇರೆ ಯಾರು ಗತಿ?
12107013a ಕೃತಾತ್ಮಾ ರಾಜಪುತ್ರೋಽಯಂ ಸತಾಂ ಮಾರ್ಗಮನುಷ್ಠಿತಃ।
12107013c ಸುಸಂಗೃಹೀತಸ್ತ್ವೇವೈಷ ತ್ವಯಾ ಧರ್ಮಪುರೋಗಮಃ।
12107013e ಸಂಸೇವ್ಯಮಾನಃ ಶತ್ರೂಂಸ್ತೇ ಗೃಹ್ಣೀಯಾನ್ಮಹತೋ ಗಣಾನ್।।
ಈ ರಾಜಪುತ್ರನು ಕೃತಾತ್ಮನು. ಸಂತರ ಮಾರ್ಗದಲ್ಲಿ ನಡೆಯುವವನು. ಧರ್ಮವನ್ನೇ ಪ್ರಧಾನವನ್ನಾಗಿಟ್ಟುಕೊಂಡು ಇವನನ್ನು ಸನ್ಮಾನಪೂರ್ವಕವಾಗಿ ನಿಯಮಿಸಿಕೊಂಡರೆ ಇವನು ನಿನ್ನ ಸೇವೆಮಾಡಿ ನಿನ್ನ ಶತ್ರುಗಳ ಮಹಾಸೇನೆಯನ್ನು ಸ್ವಾಧೀಪಡಿಸಿಕೊಳ್ಳುತ್ತಾನೆ.
12107014a ಯದ್ಯಯಂ ಪ್ರತಿಯುಧ್ಯೇತ್ತ್ವಾಂ ಸ್ವಕರ್ಮ ಕ್ಷತ್ರಿಯಸ್ಯ ತತ್।
12107014c ಜಿಗೀಷಮಾಣಸ್ತ್ವಾಂ ಯುದ್ಧೇ ಪಿತೃಪೈತಾಮಹೇ ಪದೇ।।
ಒಂದು ವೇಳೆ ಇವನು ತನ್ನ ಪಿತೃ-ಪಿತಾಮಹರ ರಾಜ್ಯದ ಸಲುವಾಗಿ ಯುದ್ಧದಲ್ಲಿ ನಿನ್ನನ್ನು ಗೆಲ್ಲುವ ಇಚ್ಛೆಯಿಂದ ನಿನ್ನೊಡನೆ ಯುದ್ಧವನ್ನು ಮಾಡಿದರೂ ಅದು ಕ್ಷತ್ರಿಯನಾದ ಇವನ ಸ್ವಕರ್ಮವಾಗುತ್ತದೆ.
12107015a ತ್ವಂ ಚಾಪಿ ಪ್ರತಿಯುಧ್ಯೇಥಾ ವಿಜಿಗೀಷುವ್ರತೇ ಸ್ಥಿತಃ।
12107015c ಅಯುದ್ಧ್ವೈವ ನಿಯೋಗಾನ್ಮೇ ವಶೇ ವೈದೇಹ ತೇ ಸ್ಥಿತಃ।।
ವೈದೇಹ! ಗೆಲ್ಲುವ ವ್ರತವನ್ನೇ ಕೈಗೊಂಡಿರುವ ನೀನೂ ಕೂಡ ಇವನೊಡನೆ ಯುದ್ಧಮಾಡಬಹುದು. ಆದರೆ ನನ್ನ ನಿಯೋಗದಂತೆ ಯುದ್ಧಮಾಡದೇ ಇವನನ್ನು ನಿನ್ನ ವಶದಲ್ಲಿ ತೆಗೆದುಕೋ.
12107016a ಸ ತ್ವಂ ಧರ್ಮಮವೇಕ್ಷಸ್ವ ತ್ಯಕ್ತ್ವಾಧರ್ಮಮಸಾಂಪ್ರತಮ್।
12107016c ನ ಹಿ ಕಾಮಾನ್ನ ಚ ದ್ರೋಹಾತ್ಸ್ವಧರ್ಮಂ ಹಾತುಮರ್ಹಸಿ।।
ಅಸಾಂಪ್ರತ ಧರ್ಮವನ್ನು ತ್ಯಜಿಸಿ ಧರ್ಮದ ಮೇಲೆ ದೃಷ್ಟಿಯನ್ನಿಡು. ಕಾಮದಿಂದಾಗಲೀ ದ್ರೋಹದಿಂದಾಗಲೀ ಸ್ವಧರ್ಮವನ್ನು ತ್ಯಜಿಸಬಾರದು.
12107017a ನೈವ ನಿತ್ಯಂ ಜಯಸ್ತಾತ ನೈವ ನಿತ್ಯಂ ಪರಾಜಯಃ।
12107017c ತಸ್ಮಾದ್ಭೋಜಯಿತವ್ಯಶ್ಚ ಭೋಕ್ತವ್ಯಶ್ಚ ಪರೋ ಜನಃ।।
ಅಯ್ಯಾ! ನಿರಂತರ ಜಯವೂ ಇರುವುದಿಲ್ಲ. ನಿರಂತರ ಪರಾಜಯವೂ ಇರುವುದಿಲ್ಲ. ಇತರರನ್ನು ಜಯಿಸಿ ಅವರ ಸಂಪತ್ತನ್ನು ಉಪಭೋಗಿಸುವಂತೆ ರಾಜನಾದವನು ಇತರರಿಗೂ ತನ್ನ ಸಂಪತ್ತನ್ನು ಹಂಚಿಕೊಡಬೇಕು.
12107018a ಆತ್ಮನ್ಯೇವ ಹಿ ಸಂದೃಶ್ಯಾವುಭೌ ಜಯಪರಾಜಯೌ।
12107018c ನಿಃಶೇಷಕಾರಿಣಾಂ ತಾತ ನಿಃಶೇಷಕರಣಾದ್ಭಯಮ್।।
ಜಯ-ಅಪಜಯ ಎರಡನ್ನೂ ತನ್ನಲ್ಲಿಯೇ ಕಂಡುಕೊಳ್ಳಬೇಕು. ಮಗೂ! ಸರ್ವವನ್ನೂ ಅಪಹರಿಸಿದವನಿಗೆ ಸರ್ವವೂ ಅಪಹೃತವಾಗುವ ಭಯವಿರುತ್ತದೆ.”
12107019a ಇತ್ಯುಕ್ತಃ ಪ್ರತ್ಯುವಾಚೇದಂ ವಚನಂ ಬ್ರಾಹ್ಮಣರ್ಷಭಮ್।
12107019c ಅಭಿಪೂಜ್ಯಾಭಿಸತ್ಕೃತ್ಯ ಪೂಜಾರ್ಹಮನುಮಾನ್ಯ ಚ।।
ಹೀಗೆ ಹೇಳಿದ ಪೂಜಾರ್ಹನೂ ಮಾನ್ಯನೂ ಆದ ಆ ಬ್ರಾಹ್ಮಣರ್ಷಭನನ್ನು ಪೂಜಿಸಿ ಸತ್ಕರಿಸಿ ವಿದೇಹರಾಜನು ಉತ್ತರಿಸಿದನು:
12107020a ಯಥಾ ಬ್ರೂಯಾನ್ಮಹಾಪ್ರಾಜ್ಞೋ ಯಥಾ ಬ್ರೂಯಾದ್ಬಹುಶ್ರುತಃ।
12107020c ಶ್ರೇಯಸ್ಕಾಮೋ ಯಥಾ ಬ್ರೂಯಾದುಭಯೋರ್ಯತ್ಕ್ಷಮಂ ಭವೇತ್।।
ಮಹಾಪ್ರಾಜ್ಞನು ಆಡುವ, ಬಹುಶ್ರುತನು ಆಡುವ ಮತ್ತು ಶ್ರೇಯಸ್ಸನ್ನು ಬಯಸುವವರು ಹೇಳುವ ಮಾತುಗಳನ್ನೇ ನೀನೂ ಆಡಿದ್ದೀಯೆ. ನೀನು ಹೇಳಿದಂತೆ ನಾವಿಬ್ಬರೂ ಮಾಡುವುದು ಸರಿಯಾಗಿಯೇ ಇದೆ.
12107021a ತಥಾ ವಚನಮುಕ್ತೋಽಸ್ಮಿ ಕರಿಷ್ಯಾಮಿ ಚ ತತ್ತಥಾ।
12107021c ಏತದ್ಧಿ ಪರಮಂ ಶ್ರೇಯೋ ನ ಮೇಽತ್ರಾಸ್ತಿ ವಿಚಾರಣಾ।।
ನೀನು ಹೇಳಿದಂತೆಯೇ ಮಾಡುತ್ತೇನೆ. ಇದೇ ನನಗೆ ಪರಮ ಶ್ರೇಯಸ್ಕರವಾದುದು. ಇದರಲ್ಲಿ ವಿಚಾರಮಾಡುವುದೇನೂ ಇಲ್ಲ.”
12107022a ತತಃ ಕೌಶಲ್ಯಮಾಹೂಯ ವೈದೇಹೋ ವಾಕ್ಯಮಬ್ರವೀತ್।
12107022c ಧರ್ಮತೋ ನೀತಿತಶ್ಚೈವ ಬಲೇನ ಚ1 ಜಿತೋ ಮಯಾ।।
ಅನಂತರ ವೈದೇಹನು ಕೌಶಲ್ಯನನ್ನು ಕರೆದು ಈ ಮಾತನ್ನಾಡಿದನು: “ಧರ್ಮ, ನೀತಿ ಮತ್ತು ಬಲಗಳಿಂದ ನಾನು ಗೆದ್ದಿದ್ದೇನೆ.
12107023a ಸೋಽಹಂ ತ್ವಯಾ ತ್ವಾತ್ಮಗುಣೈರ್ಜಿತಃ ಪಾರ್ಥಿವಸತ್ತಮ।
12107023c ಆತ್ಮಾನಮನವಜ್ಞಾಯ ಜಿತವದ್ವರ್ತತಾಂ ಭವಾನ್।।
ಪಾರ್ಥಿವಸತ್ತಮ! ಆದರೆ ಈಗ ನೀನು ನಿನ್ನ ಆತ್ಮಗುಣಗಳಿಂದಲೇ ನನ್ನನ್ನು ಗೆದ್ದಿರುವೆ. ಆದುದರಿಂದ ನೀನು ಸೋತವನೆಂದು ತಿಳಿಯದೇ ಗೆದ್ದವನಂತೆಯೇ ನಡೆದುಕೋ.
12107024a ನಾವಮನ್ಯೇ ಚ ತೇ ಬುದ್ಧಿಂ ನಾವಮನ್ಯೇ ಚ ಪೌರುಷಮ್।
12107024c ನಾವಮನ್ಯೇ ಜಯಾಮೀತಿ ಜಿತವದ್ವರ್ತತಾಂ ಭವಾನ್।।
ನಿನ್ನ ಬುದ್ಧಿಯನ್ನು ಅಪಮಾನಿಸುವುದಿಲ್ಲ. ನಿನ್ನ ಪೌರುಷವನ್ನೂ ಅಪಮಾನಿಸುವುದಿಲ್ಲ. ನಾನೇ ಗೆದ್ದವನೆಂದು ನಿನ್ನನ್ನು ಅಪಮಾನಿಸುವುದಿಲ್ಲ. ನೀನು ಗೆದ್ದವನಂತೆಯೇ ವ್ಯವಹರಿಸು.
12107025a ಯಥಾವತ್ಪೂಜಿತೋ ರಾಜನ್ಗೃಹಂ ಗಂತಾಸಿ ಮೇ ಗೃಹಾತ್।
12107025c ತತಃ ಸಂಪೂಜ್ಯ ತೌ ವಿಪ್ರಂ ವಿಶ್ವಸ್ತೌ ಜಗ್ಮತುರ್ಗೃಹಾನ್।।
ರಾಜನ್! ಯಥಾವತ್ತಾಗಿ ಪೂಜಿತನಾಗಿ ನೀನು ನನ್ನ ಮನೆಗೆ ಆಗಮಿಸು.” ಅನಂತರ ಅವರಿಬ್ಬರೂ ವಿಪ್ರನನ್ನು ಸಂಪೂಜಿಸಿ ಪರಸ್ಪರರರಲ್ಲಿ ವಿಶ್ವಾಸವನ್ನಿಟ್ಟು ಅರಮನೆಗೆ ತೆರಳಿದರು.
12107026a ವೈದೇಹಸ್ತ್ವಥ ಕೌಸಲ್ಯಂ ಪ್ರವೇಶ್ಯ ಗೃಹಮಂಜಸಾ।
12107026c ಪಾದ್ಯಾರ್ಘ್ಯಮಧುಪರ್ಕೈಸ್ತಂ ಪೂಜಾರ್ಹಂ ಪ್ರತ್ಯಪೂಜಯತ್।।
ಆಗ ವೈದೇಹನು ಕೌಸಲ್ಯನನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ಪಾದ್ಯ-ಅರ್ಘ್ಯ-ಮಧುಪರ್ಕಗಳಿಂದ ಆ ಪೂಜಾರ್ಹನನ್ನು ಪೂಜಿಸಿದನು.
12107027a ದದೌ ದುಹಿತರಂ ಚಾಸ್ಮೈ ರತ್ನಾನಿ ವಿವಿಧಾನಿ ಚ।
12107027c ಏಷ ರಾಜ್ಞಾಂ ಪರೋ ಧರ್ಮಃ ಸಹ್ಯೌ ಜಯಪರಾಜಯೌ।।
ಮತ್ತು ಅವನಿಗೆ ತನ್ನ ಮಗಳನ್ನೂ ವಿವಿಧ ರತ್ನಗಳನ್ನೂ ನೀಡಿದನು. ಜಯಾಪಜಯಗಳಲ್ಲಿ ಇದೇ ರಾಜರ ಪರಮ ಧರ್ಮವು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಶಾಂತಿ ಪರ್ವಣಿ ರಾಜಧರ್ಮಪರ್ವಣಿ ಕಾಲಕವೃಕ್ಷೀಯೇ ಸಪ್ತಾಧಿಕಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ರಾಜಧರ್ಮಪರ್ವದಲ್ಲಿ ಕಾಲಕವೃಕ್ಷೀಯ ಎನ್ನುವ ನೂರಾಏಳನೇ ಅಧ್ಯಾಯವು.
-
ಲೋಕಶ್ಚ (ಭಾರತ ದರ್ಶನ). ↩︎