105 ಕಾಲಕವೃಕ್ಷೀಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ರಾಜಧರ್ಮ ಪರ್ವ

ಅಧ್ಯಾಯ 105

ಸಾರ

ರಾಜ್ಯದಿಂದಲೂ, ಸೈನಿಕರಿಂದಲೂ, ಸ್ವಜನರಿಂದಲೂ ವಂಚಿತನಾದ ಕ್ಷೇಮದರ್ಶಿಗೆ ಕಾಲಕವೃಕ್ಷೀಯನ ವೈರಾಗ್ಯೋಪದೇಶ (1-53).

12105001 ಯುಧಿಷ್ಠಿರ ಉವಾಚ।
12105001a ಧಾರ್ಮಿಕೋಽರ್ಥಾನಸಂಪ್ರಾಪ್ಯ ರಾಜಾಮಾತ್ಯೈಃ ಪ್ರಬಾಧಿತಃ।
12105001c ಚ್ಯುತಃ ಕೋಶಾಚ್ಚ ದಂಡಾಚ್ಚ ಸುಖಮಿಚ್ಚನ್ಕಥಂ ಚರೇತ್।।

ಯುಧಿಷ್ಠಿರನು ಹೇಳಿದನು: “ಧಾರ್ಮಿಕನಾಗಿದ್ದರೂ ಸಂಪತ್ತನ್ನು ಕಳೆದುಕೊಂಡ, ಆಮಾತ್ಯರಿಂದ ಬಾಧಿತನಾದ, ಕೋಶ-ಸೈನ್ಯಗಳನ್ನು ಕಳೆದುಕೊಂಡ ರಾಜನು ಸುಖವನ್ನು ಬಯಸಿ ಏನು ಮಾಡಬೇಕು?”

12105002 ಭೀಷ್ಮ ಉವಾಚ।
12105002a ಅತ್ರಾಯಂ ಕ್ಷೇಮದರ್ಶೀಯಮಿತಿಹಾಸೋಽನುಗೀಯತೇ।
12105002c ತತ್ತೇಽಹಂ ಸಂಪ್ರವಕ್ಷ್ಯಾಮಿ ತನ್ನಿಬೋಧ ಯುಧಿಷ್ಠಿರ।।

ಭೀಷ್ಮನು ಹೇಳಿದನು: “ಯುಧಿಷ್ಠಿರ! ಇದಕ್ಕೆ ಸಂಬಂಧಿಸಿದಂತೆ ಕ್ಷೇಮದರ್ಶೀಯ ಎಂಬ ಇತಿಹಾಸವನ್ನು ಹೇಳುತ್ತಾರೆ. ಅದನ್ನೇ ನಾನು ಹೇಳುತ್ತೇನೆ. ಕೇಳು.

12105003a ಕ್ಷೇಮದರ್ಶಂ ನೃಪಸುತಂ ಯತ್ರ ಕ್ಷೀಣಬಲಂ ಪುರಾ।
12105003c ಮುನಿಃ ಕಾಲಕವೃಕ್ಷೀಯ ಆಜಗಾಮೇತಿ ನಃ ಶ್ರುತಮ್।
12105003e ತಂ ಪಪ್ರಚ್ಚೋಪಸಂಗೃಹ್ಯ ಕೃಚ್ಚ್ರಾಮಾಪದಮಾಸ್ಥಿತಃ।।

ಹಿಂದೆ ನೃಪಸುತ ಕ್ಷೇಮದರ್ಶೀ ಎನ್ನುವವನು ಕ್ಷೀಣಬಲನಾಗಿದ್ದನು. ಮಹಾ ಆಪತ್ತಿನಲ್ಲಿ ಸಿಲುಕಿದ್ದ ಅವನು ಮುನಿ ಕಾಲಕವೃಕ್ಷೀಯನ ಬಳಿ ಹೋಗಿ ಸಾಷ್ಟಾಂಗ ಪ್ರಣಾಮ ಮಾಡಿ ಅವನನ್ನು ಹೀಗೆ ಪ್ರಶ್ನಿಸಿದನು ಎಂದು ಕೇಳಿದ್ದೇವೆ.

12105004a ಅರ್ಥೇಷು ಭಾಗೀ ಪುರುಷ ಈಹಮಾನಃ ಪುನಃ ಪುನಃ।
12105004c ಅಲಬ್ಧ್ವಾ ಮದ್ವಿಧೋ ರಾಜ್ಯಂ ಬ್ರಹ್ಮನ್ಕಿಂ ಕರ್ತುಮರ್ಹತಿ।।

“ಬ್ರಹ್ಮನ್! ಪುರುಷನು ಅರ್ಥಕ್ಕೆ ಭಾಗಿಯಾಗಿದ್ದಾನೆ. ಆದರೆ ಪುನಃ ಪುನಃ ಅರ್ಥವನ್ನು ಅಪೇಕ್ಷಿಸುತ್ತಿದ್ದರೂ ಅರ್ಥವನ್ನಾಗಲೀ ರಾಜ್ಯವನ್ನಾಗಲೀ ಪಡೆದುಕೊಳ್ಳಲು ಸಾಧ್ಯವಾಗದೇ ಇದ್ದ ನನ್ನಂಥವನು ಏನು ಮಾಡಬೇಕು?

12105005a ಅನ್ಯತ್ರ ಮರಣಾತ್ ಸ್ತೇಯಾದನ್ಯತ್ರ1 ಪರಸಂಶ್ರಯಾತ್।
12105005c ಕ್ಷುದ್ರಾದನ್ಯತ್ರ ಚಾಚಾರಾತ್ತನ್ಮಮಾಚಕ್ಷ್ವ ಸತ್ತಮ।।

ಸತ್ತಮ! ಆತ್ಮಹತ್ಯೆ, ಕಳ್ಳತನ, ಪರಾಶ್ರಯ ಮತ್ತು ಕ್ಷುದ್ರ ವ್ಯವಹಾರಗಳನ್ನು ಬಿಟ್ಟು ರಾಜ್ಯ-ಧನ ಸಂಪಾದನೆಗಳಿಗೆ ಬೇರೆ ಯಾವುದಾದರೂ ಉಪಾಯವಿದ್ದರೆ ಅದನ್ನು ನನಗೆ ತಿಳಿಸು.

12105006a ವ್ಯಾಧಿನಾ ಚಾಭಿಪನ್ನಸ್ಯ ಮಾನಸೇನೇತರೇಣ ವಾ।
12105006c ಬಹುಶ್ರುತಃ ಕೃತಪ್ರಜ್ಞಸ್ತ್ವದ್ವಿಧಃ ಶರಣಂ ಭವೇತ್।।

ಮಾನಸಿಕ ಮತ್ತು ಇತರ ವ್ಯಾಧಿಗಳಿಂದ ಪೀಡಿತನಾಗಿರುವ ನನಗೆ ಬಹುಶ್ರುತನೂ ಕೃತಪ್ರಜ್ಞನೂ ಆಗಿರುವ ನಿನ್ನಂಥವರೇ ಶರಣ್ಯನಾಗಬೇಕು.

12105007a ನಿರ್ವಿದ್ಯ ಹಿ ನರಃ ಕಾಮಾನ್ನಿಯಮ್ಯ2 ಸುಖಮೇಧತೇ।
12105007c ತ್ಯಕ್ತ್ವಾ ಪ್ರೀತಿಂ ಚ ಶೋಕಂ ಚ ಲಬ್ಧ್ವಾಪ್ರೀತಿಮಯಂ ವಸು।।

ಕಾಮಭೋಗಗಳಿಂದ ವೈರಾಗ್ಯವನ್ನು ಹೊಂದಿ ವಿರಕ್ತನಾದ ಮನುಷ್ಯನು ಪ್ರೀತಿ-ಶೋಕಗಳೆರಡನ್ನೂ ತ್ಯಜಿಸಿ ಜ್ಞಾನಮಯ ಐಶ್ವರ್ಯವನ್ನು ಪಡೆದುಕೊಂಡು ಸುಖಿಯಾಗುತ್ತಾನೆ.

12105008a ಸುಖಮರ್ಥಾಶ್ರಯಂ ಯೇಷಾಮನುಶೋಚಾಮಿ ತಾನಹಮ್।
12105008c ಮಮ ಹ್ಯರ್ಥಾಃ ಸುಬಹವೋ ನಷ್ಟಾಃ ಸ್ವಪ್ನ ಇವಾಗತಾಃ।।

ಸುಖವು ಧನವನ್ನೇ ಆಶ್ರಯಿಸಿದೆಯೆಂದು ಭಾವಿಸಿರುವವವರ ವಿಷಯದಲ್ಲಿ ನನಗೆ ಅನುತಾಪವಿದೆ. ನನ್ನಲ್ಲಿದ್ದ ಅಪಾರ್ಯ ಐಶ್ವರ್ಯ-ಸಂಪತ್ತು ಸ್ವಪ್ನದಲ್ಲಿ ಕಂಡ ಸಂಪತ್ತಿನಂತೆ ನಷ್ಟವಾಗಿ ಹೋದವು.

12105009a ದುಷ್ಕರಂ ಬತ ಕುರ್ವಂತಿ ಮಹತೋಽರ್ಥಾಂಸ್ತ್ಯಜಂತಿ ಯೇ।
12105009c ವಯಂ ತ್ವೇನಾನ್ಪರಿತ್ಯಕ್ತುಮಸತೋಽಪಿ ನ ಶಕ್ನುಮಃ।।

ತಮ್ಮಲ್ಲಿರುವ ಮಹಾಸಂಪತ್ತನ್ನು ತ್ಯಜಿಸುವವರು ನಿಶ್ಚಯವಾಗಿಯೂ ಅತ್ಯಂತ ದುಷ್ಕರಕಾರ್ಯವನ್ನೇ ಮಾಡುವವರು. ನನ್ನಲ್ಲಿ ಈಗ ಧನದ ಲೇಶವೂ ಉಳಿದಿಲ್ಲ. ಆದರೂ ಧನದ ಮೇಲಿನ ಮೋಹವು ಮಾತ್ರ ನನ್ನನ್ನು ಬಿಟ್ಟು ಹೋಗಿಲ್ಲ. ಧನವನ್ನು ತ್ಯಾಗಮಾಡಲೂ ನಾನು ಶಕ್ಯನಾಗಿಲ್ಲ.

12105010a ಇಮಾಮವಸ್ಥಾಂ ಸಂಪ್ರಾಪ್ತಂ ದೀನಮಾರ್ತಂ ಶ್ರಿಯಶ್ಚ್ಯುತಮ್।
12105010c ಯದನ್ಯತ್ಸುಖಮಸ್ತೀಹ ತದ್ಬ್ರಹ್ಮನ್ನನುಶಾಧಿ ಮಾಮ್।।

ಬ್ರಹ್ಮನ್! ಸಂಪತ್ತಿನಿಂದ ಚ್ಯುತನಾಗಿ ಈ ಅವಸ್ಥೆಯನ್ನು ಪಡೆದು ನಾನು ದೀನನೂ ಆರ್ತನೂ ಆಗಿದ್ದೇನೆ. ಅನ್ಯ ರೀತಿಯಲ್ಲಿ ಸುಖವು ದೊರಕುವುದಿದ್ದರೆ ಅದನ್ನು ನನಗೆ ಉಪದೇಶಿಸು!”

12105011a ಕೌಸಲ್ಯೇನೈವಮುಕ್ತಸ್ತು ರಾಜಪುತ್ರೇಣ ಧೀಮತಾ।
12105011c ಮುನಿಃ ಕಾಲಕವೃಕ್ಷೀಯಃ ಪ್ರತ್ಯುವಾಚ ಮಹಾದ್ಯುತಿಃ।।

ಧೀಮತ ಕೌಸಲ್ಯ ರಾಜಪುತ್ರನು ಹೀಗೆ ಹೇಳಲು ಮಹಾದ್ಯುತಿ ಮುನಿ ಕಾಲಕವೃಕ್ಷೀಯನು ಉತ್ತರಿಸಿದನು:

12105012a ಪುರಸ್ತಾದೇವ ತೇ ಬುದ್ಧಿರಿಯಂ ಕಾರ್ಯಾ ವಿಜಾನತಃ।
12105012c ಅನಿತ್ಯಂ ಸರ್ವಮೇವೇದಮಹಂ ಚ ಮಮ ಚಾಸ್ತಿ ಯತ್।।

“ನಿನ್ನ ಈ ಬುದ್ಧಿಯು ಮೊದಲೇ “ಇವೆಲ್ಲವೂ ಅನಿತ್ಯವಾದವು ಮತ್ತು ಇವುಗಳಲ್ಲಿ ನನ್ನದು ಎನ್ನುವುದು ಯಾವುದೂ ಇಲ್ಲ” ಎನ್ನುವ ವಿಷಯವನ್ನು ತಿಳಿದುಕೊಳ್ಳಬೇಕಾಗಿತ್ತು.

12105013a ಯತ್ಕಿಂಚಿನ್ಮನ್ಯಸೇಽಸ್ತೀತಿ ಸರ್ವಂ ನಾಸ್ತೀತಿ ವಿದ್ಧಿ ತತ್।
12105013c ಏವಂ ನ ವ್ಯಥತೇ ಪ್ರಾಜ್ಞಃ ಕೃಚ್ಚ್ರಾಮಪ್ಯಾಪದಂ ಗತಃ।।

ಯಾವುದನ್ನು ನೀನು ಇದೆ ಎಂದು ತಿಳಿದುಕೊಂಡಿರುವೆಯೋ ಅವು ಎಲ್ಲವೂ ಇಲ್ಲ ಎಂದು ತಿಳಿದುಕೋ. ಹೀಗೆ ತಿಳಿದುಕೊಂಡಿರುವವನು ಕಷ್ಟತಮ ಆಪತ್ತಿನಲ್ಲಿ ಸಿಕ್ಕಿಕೊಂಡರೂ ವ್ಯಥಿತನಾಗುವುದಿಲ್ಲ.

12105014a ಯದ್ಧಿ ಭೂತಂ ಭವಿಷ್ಯಚ್ಚ ಧ್ರುವಂ ತನ್ನ ಭವಿಷ್ಯತಿ।
12105014c ಏವಂ ವಿದಿತವೇದ್ಯಸ್ತ್ವಮಧರ್ಮೇಭ್ಯಃ ಪ್ರಮೋಕ್ಷ್ಯಸೇ।।

ಹಿಂದೆ ಇದ್ದುದು ಈಗ ಇಲ್ಲ; ಮುಂದೆ ಆಗುವುದೂ ಯಾವುದೂ ಇರುವುದಿಲ್ಲ ಎಂದು ತಿಳಿದುಕೊಂಡಿರಬೇಕಾದುದನ್ನು ತಿಳಿದುಕೊಂಡರೆ ನೀನು ಎಲ್ಲ ವಿಧದ ಅಧರ್ಮಗಳಿಂದಲೂ ಮುಕ್ತನಾಗುವೆ.

12105015a ಯಚ್ಚ ಪೂರ್ವೇ ಸಮಾಹಾರೇ ಯಚ್ಚ ಪೂರ್ವತರೇ ಪರೇ।
12105015c ಸರ್ವಂ ತನ್ನಾಸ್ತಿ ತಚ್ಚೈವ ತಜ್ಞಾತ್ವಾ ಕೋಽನುಸಂಜ್ವರೇತ್।।

ಹಿಂದೆ ನಡೆದುಹೋದುದು, ಪರಂಪರಾಗತವಾಗಿ ಬಂದುದು ಎಲ್ಲವೂ ಈಗ ಇಲ್ಲ ಎಂದು ತಿಳಿದುಕೊಂಡವ ಯಾರು ತಾನೇ ಇಂದು ಇಲ್ಲದಿರುವುದಕ್ಕೆ ಚಿಂತಿಸುತ್ತಾನೆ?

12105016a ಭೂತ್ವಾ ಚ ನ ಭವತ್ಯೇತದಭೂತ್ವಾ ಚ ಭವತ್ಯಪಿ।
12105016c ಶೋಕೇ ನ ಹ್ಯಸ್ತಿ ಸಾಮರ್ಥ್ಯಂ ಶೋಕಂ ಕುರ್ಯಾತ್ಕಥಂ ನರಃ।।

ಹಿಂದೆ ಇದ್ದುದು ಈಗ ಇಲ್ಲ. ಯಾರಲ್ಲಿ ಇಲ್ಲವೋ ಅವರಿಗೆ ದೊರಕುತ್ತದೆ. ಕಳೆದುಹೋದುದನ್ನು ಹಿಂದೆ ತಂದು ಕೊಡಲು ಶೋಕಕ್ಕೆ ಸಾಮರ್ಥ್ಯವಿಲ್ಲ. ಆದುದರಿಂದ ನರನು ಹೇಗೆ ಶೋಕಪಡುತ್ತಾನೆ?

12105017a ಕ್ವ ನು ತೇಽದ್ಯ ಪಿತಾ ರಾಜನ್ಕ್ವ ನು ತೇಽದ್ಯ ಪಿತಾಮಹಃ।
12105017c ನ ತ್ವಂ ಪಶ್ಯಸಿ ತಾನದ್ಯ ನ ತ್ವಾ ಪಶ್ಯಂತಿ ತೇಽಪಿ ಚ।।

ರಾಜನ್! ಇಂದು ನಿನ್ನ ತಂದೆಯೆಲ್ಲಿದ್ದಾನೆ? ಪಿತಾಮಹನೆಲ್ಲಿದ್ದಾನೆ? ನೀನು ಅವರನ್ನು ಈಗ ನೋಡುತ್ತಿಲ್ಲ. ಅವರೂ ನಿನ್ನನ್ನು ನೋಡುತ್ತಿಲ್ಲ ಅಲ್ಲವೇ?

12105018a ಆತ್ಮನೋಽಧ್ರುವತಾಂ ಪಶ್ಯಂಸ್ತಾಂಸ್ತ್ವಂ ಕಿಮನುಶೋಚಸಿ।
12105018c ಬುದ್ಧ್ಯಾ ಚೈವಾನುಬುಧ್ಯಸ್ವ ಧ್ರುವಂ ಹಿ ನ ಭವಿಷ್ಯಸಿ।।

ನೀನೇ ಅನಿತ್ಯನು ಎಂದು ನೋಡಿಯೂ ನೀನು ಏಕೆ ಶೋಕಿಸುತ್ತಿರುವೆ? ನಿಶ್ಚಯವಾಗಿಯೂ ನೀನು ಭವಿಷ್ಯದಲ್ಲಿ ಇರುವುದಿಲ್ಲ. ಬುದ್ಧಿಯಿಂದ ಇದನ್ನು ಯೋಚಿಸಿ ತಿಳಿದುಕೋ.

12105019a ಅಹಂ ಚ ತ್ವಂ ಚ ನೃಪತೇ ಶತ್ರವಃ ಸುಹೃದಶ್ಚ ತೇ।
12105019c ಅವಶ್ಯಂ ನ ಭವಿಷ್ಯಾಮಃ ಸರ್ವಂ ಚ ನ ಭವಿಷ್ಯತಿ।।

ನೃಪತೇ! ನಾನು, ನೀನು, ಶತ್ರುಗಳು ಮತ್ತು ಸ್ನೇಹಿತರು ಎಲ್ಲರೂ ಅವಶ್ಯವಾಗಿ ಭವಿಷ್ಯದಲ್ಲಿ ಇಲ್ಲವಾಗುತ್ತೇವೆ.

12105020a ಯೇ ತು ವಿಂಶತಿವರ್ಷಾ ವೈ ತ್ರಿಂಶದ್ವರ್ಷಾಶ್ಚ ಮಾನವಾಃ।
12105020c ಅರ್ವಾಗೇವ ಹಿ ತೇ ಸರ್ವೇ ಮರಿಷ್ಯಂತಿ ಶರಚ್ಚತಾತ್।।

ಈಗ ಇಪ್ಪತ್ತು ಮತ್ತು ಮೂವತ್ತು ವರ್ಷದ ಮನುಷ್ಯರು ಎಲ್ಲರೂ ಮುಂದಿನ ನೂರು ವರ್ಷಗಳೊಳಗೆಯೇ ಮೃತರಾಗುತ್ತಾರೆ.

12105021a ಅಪಿ ಚೇನ್ಮಹತೋ ವಿತ್ತಾದ್ವಿಪ್ರಮುಚ್ಯೇತ ಪೂರುಷಃ।
12105021c ನೈತನ್ಮಮೇತಿ ತನ್ಮತ್ವಾ ಕುರ್ವೀತ ಪ್ರಿಯಮಾತ್ಮನಃ।।

ಹೀಗಿರುವಾಗ ಅಪಾರ ಐಶ್ವರ್ಯವನ್ನು ಪಡೆದುಕೊಂಡರೂ ಇದು ನನ್ನದಲ್ಲ ಎಂದು ತಿಳಿದುಕೊಂಡು ಆತ್ಮಕಲ್ಯಾಣವನ್ನು ಮಾಡಿಕೊಳ್ಳಬೇಕು.

12105022a ಅನಾಗತಂ ಯನ್ನ ಮಮೇತಿ ವಿದ್ಯಾದ್ ಅತಿಕ್ರಾಂತಂ ಯನ್ನ ಮಮೇತಿ ವಿದ್ಯಾತ್।
12105022c ದಿಷ್ಟಂ ಬಲೀಯ ಇತಿ ಮನ್ಯಮಾನಾಸ್ ತೇ ಪಂಡಿತಾಸ್ತತ್ಸತಾಂ ಸ್ಥಾನಮಾಹುಃ।।

ಮುಂದೆ ದೊರೆಯುವುದನ್ನೂ ಅದು ನನ್ನದಲ್ಲ ಎಂದು ತಿಳಿಯಬೇಕು. ಕಳೆದುಹೋದುದೂ ನನ್ನದಲ್ಲ ಎಂದು ಭಾವಿಸಬೇಕು. ಅದೃಷ್ಟವೇ ಬಲಿಷ್ಠವಾದುದು ಎಂದು ತಿಳಿದವರು ವಿದ್ವಾಂಸರೇ ಸರಿ. ಅದೇ ಸತ್ಪುರುಷರ ಸ್ಥಾನ ಎಂದು ಹೇಳುತ್ತಾರೆ.

12105023a ಅನಾಢ್ಯಾಶ್ಚಾಪಿ ಜೀವಂತಿ ರಾಜ್ಯಂ ಚಾಪ್ಯನುಶಾಸತೇ।
12105023c ಬುದ್ಧಿಪೌರುಷಸಂಪನ್ನಾಸ್ತ್ವಯಾ ತುಲ್ಯಾಧಿಕಾ ಜನಾಃ।।

ಧನಾಡ್ಯರಲ್ಲದವರೂ ಜೀವಿಸುತ್ತಾರೆ. ರಾಜ್ಯವನ್ನೂ ಆಳುತ್ತಾರೆ. ಬುದ್ಧಿ ಪೌರುಷಗಳಲ್ಲಿ ನಿನ್ನ ಸಮನಾದವರೂ ಇದ್ದಾರೆ. ನಿನಗೆ ಮಿಗಿಲಾದವರೂ ಇದ್ದಾರೆ.

12105024a ನ ಚ ತ್ವಮಿವ ಶೋಚಂತಿ ತಸ್ಮಾತ್ತ್ವಮಪಿ ಮಾ ಶುಚಃ।
12105024c ಕಿಂ ನು ತ್ವಂ ತೈರ್ನ ವೈ ಶ್ರೇಯಾಂಸ್ತುಲ್ಯೋ ವಾ ಬುದ್ಧಿಪೌರುಷೈಃ।।

ಆದರೆ ಅವರು ನಿನ್ನಂತೆ ಶೋಕಿಸುವುದಿಲ್ಲ. ಆದುದರಿಂದ ನೀನೂ ಶೋಕಿಸಬೇಡ. ಬುದ್ಧಿ-ಪೌರುಷಗಳಲ್ಲಿ ನೀನು ಅವರಿಗಿಂತಲೂ ಅಧಿಕ ಅಥವಾ ಸಮಾನನಾಗಿಲ್ಲವೇ?”

12105025 ರಾಜಪುತ್ರ ಉವಾಚ।
12105025a ಯಾದೃಚ್ಚಿಕಂ ಮಮಾಸೀತ್ತದ್ರಾಜ್ಯಮಿತ್ಯೇವ ಚಿಂತಯೇ।
12105025c ಹ್ರಿಯತೇ ಸರ್ವಮೇವೇದಂ ಕಾಲೇನ ಮಹತಾ ದ್ವಿಜ।।

ರಾಜಪುತ್ರನು ಹೇಳಿದನು: “ದ್ವಿಜ! ಅನಾಯಾಸವಾಗಿ ನನ್ನ ವಶವಾಗಿದ್ದ ಅಖಂಡ ಸಾಮ್ರಾಜ್ಯ ಸರ್ವವನ್ನೂ ಮಹಾ ಕಾಲನು ಅಪಹರಿಸಿದನೆಂದು ಭಾವಿಸುತ್ತೇನೆ.

12105026a ತಸ್ಯೈವಂ ಹ್ರಿಯಮಾಣಸ್ಯ ಸ್ರೋತಸೇವ ತಪೋಧನ।
12105026c ಫಲಮೇತತ್ ಪ್ರಪಶ್ಯಾಮಿ ಯಥಾಲಬ್ಧೇನ ವರ್ತಯೇ।।

ತಪೋಧನ! ಪ್ರವಾಹವು ಎಲ್ಲವನ್ನೂ ಕೊಚ್ಚಿಕೊಂಡು ಹೋಗುವಂತೆ ನನ್ನ ಎಲ್ಲವೂ ಹೊರಟು ಹೋಗಿವೆ. ಯಾವುದು ಯಾವಾಗ ದೊರಕುವುದೋ ಅದರಿಂದಲೇ ಜೀವನ ನಿರ್ವಹಣೆಯನ್ನು ಮಾಡುತ್ತಿದ್ದೇನೆ.”

12105027 ಮುನಿರುವಾಚ।
12105027a ಅನಾಗತಮತೀತಂ ಚ ಯಥಾ ತಥ್ಯವಿನಿಶ್ಚಯಾತ್।
12105027c ನಾನುಶೋಚಸಿ ಕೌಸಲ್ಯ ಸರ್ವಾರ್ಥೇಷು ತಥಾ ಭವ।।

ಮುನಿಯು ಹೇಳಿದನು: “ಕೌಸಲ್ಯ! ಯಥಾತಥ್ಯವನ್ನು ನಿಶ್ಚಯಿಸಿಯಾದಮೇಲೆ ಮುಂದಾಗುವುದಕ್ಕೆ ಮತ್ತು ಆಗಿಹೋದುದಕ್ಕೆ ಶೋಕಿಸಬಾರದು. ಎಲ್ಲ ವಿಷಯಗಳಲ್ಲಿಯೂ ನೀನು ಹಾಗಾಗಬೇಕು.

12105028a ಅವಾಪ್ಯಾನ್ಕಾಮಯಸ್ವಾರ್ಥಾನ್ನಾನವಾಪ್ಯಾನ್ಕದಾ ಚನ।
12105028c ಪ್ರತ್ಯುತ್ಪನ್ನಾನನುಭವನ್ಮಾ ಶುಚಸ್ತ್ವಮನಾಗತಾನ್।।

ಪಡೆಯಬಹುದಾದುದನ್ನು ಬಯಸು. ಪಡೆಯಲಸಾಧ್ಯವಾದುದನ್ನು ಎಂದೂ ಬಯಸಬೇಡ. ನೀನು ಪಡೆದಿರುವುದನ್ನು ಉಪಭೋಗಿಸು ಮತ್ತು ಅಲಭ್ಯವಾದವುಗಳಿಗೆ ಶೋಕಿಸಬೇಡ.

12105029a ಯಥಾ ಲಬ್ಧೋಪಪನ್ನಾರ್ಥಸ್ತಥಾ ಕೌಸಲ್ಯ ರಂಸ್ಯಸೇ।
12105029c ಕಚ್ಚಿಚ್ಚುದ್ಧಸ್ವಭಾವೇನ ಶ್ರಿಯಾ ಹೀನೋ ನ ಶೋಚಸಿ।।

ಕೌಸಲ್ಯ! ಆಗ ನೀನು ಹೇಗೆ ಉಪಲಬ್ಧವಾದವುಗಳಿಂದ ಸಂತುಷ್ಟನಾಗಿದ್ದೆಯೋ ಹಾಗೆ ಈಗಲೂ ಲಭ್ಯವಾದವುಗಳಿಂದ ಸಂತುಷ್ಟನಾಗು. ಶುದ್ಧಸ್ವಭಾವದವನಾದ ನೀನು ರಾಜ್ಯನಾಶಕ್ಕಾಗಿ ಶೋಕಿಸುತ್ತಿಲ್ಲ ತಾನೇ?

12105030a ಪುರಸ್ತಾದ್ಭೂತಪೂರ್ವತ್ವಾದ್ಧೀನಭಾಗ್ಯೋ ಹಿ ದುರ್ಮತಿಃ।
12105030c ಧಾತಾರಂ ಗರ್ಹತೇ ನಿತ್ಯಂ ಲಬ್ಧಾರ್ಥಾಂಶ್ಚ ನ ಮೃಷ್ಯತೇ।।

ದುರ್ಮತಿಯಾದವನು ಹಿಂದೆ ಪಡೆದಿದ್ದ ಸಂಪತ್ತು ನಷ್ಟವಾಗಿ ಹೋದರೆ ತಾನು ಭಾಗ್ಯಹೀನನೆಂದು ಭಾವಿಸಿ ನಿತ್ಯವೂ ಧಾತಾರನನ್ನು ನಿಂದಿಸುತ್ತಿರುತ್ತಾನೆ. ಆದರೆ ಐಶ್ವರ್ಯವು ಬಂದರೆ ಅದು ದೈವಲಬ್ಧವೆಂದು ಭಾವಿಸುದಿಲ್ಲ. ಅದು ಸ್ವಪ್ರಯತ್ನದಿಂದಲೇ ಬಂದಿತೆಂದು ಭಾವಿಸುತ್ತಾನೆ.

12105031a ಅನರ್ಹಾನಪಿ ಚೈವಾನ್ಯಾನ್ಮನ್ಯತೇ ಶ್ರೀಮತೋ ಜನಾನ್।
12105031c ಏತಸ್ಮಾತ್ಕಾರಣಾದೇತದ್ದುಃಖಂ ಭೂಯೋಽನುವರ್ತತೇ।।

ಶ್ರೀಮಂತ ಜನರನ್ನು ನೋಡಿ ಅವರು ಐಶ್ವರ್ಯಕ್ಕೆ ಅನರ್ಹರೆಂದು ಭಾವಿಸುತ್ತಾನೆ. ಈರ್ಷ್ಯೆಯಿಂದ ಹುಟ್ಟಿದ ಆ ದುಃಖವು ಸದಾ ಅವನನ್ನು ಹಿಂಬಾಲಿಸುತ್ತದೆ.

12105032a ಈರ್ಷ್ಯಾತಿಚ್ಚೇದಸಂಪನ್ನಾ ರಾಜನ್ ಪುರುಷಮಾನಿನಃ।
12105032c ಕಚ್ಚಿತ್ತ್ವಂ ನ ತಥಾ ಪ್ರಾಜ್ಞ ಮತ್ಸರೀ ಕೋಸಲಾಧಿಪ।।

ರಾಜನ್! ಕೋಸಲಾಧಿಪ! ಪೌರುಷಮಾನಿನಿಗಳಾದವರು ಈ ಈರ್ಷ್ಯೆಯಿಂದ ಕೂಡಿರುತ್ತಾರೆ. ಪ್ರಾಜ್ಞ! ನೀನು ಹಾಗೆ ಮತ್ಸರಿಯಾಗಿಲ್ಲ ತಾನೇ?

12105033a ಸಹಸ್ವ ಶ್ರಿಯಮನ್ಯೇಷಾಂ ಯದ್ಯಪಿ ತ್ವಯಿ ನಾಸ್ತಿ ಸಾ।
12105033c ಅನ್ಯತ್ರಾಪಿ ಸತೀಂ ಲಕ್ಷ್ಮೀಂ ಕುಶಲಾ ಭುಂಜತೇ ಜನಾಃ3
12105033e ಅಭಿವಿಷ್ಯಂದತೇ ಶ್ರೀರ್ಹಿ ಸತ್ಯಪಿ ದ್ವಿಷತೋ ಜನಾತ್।।

ನಿನ್ನಲ್ಲಿ ಸಂಪತ್ತಿಲ್ಲದಿದ್ದರೂ ಅದು ಬೇರೆಯವರ ಬಳಿಯಲ್ಲಿರುವುದನ್ನು ಸಹನೆಯಿಂದ ಕಾಣು. ಕುಶಲ ಜನರು ಬೇರೆಯವರಲ್ಲಿರುವ ಸಂಪತ್ತನ್ನೂ ಭೋಗಿಸುತ್ತಾರೆ. ಅಸೂಯೆಯಿಂದ ಇತರನ್ನು ದ್ವೇಷಿಸುವವರು ಶ್ರೀಮಂತರಾಗಿದ್ದರೂ ಬಹು ಬೇಗ ನಾಶಹೊಂದುತ್ತಾರೆ.

12105034a ಶ್ರಿಯಂ ಚ ಪುತ್ರಪೌತ್ರಂ ಚ ಮನುಷ್ಯಾ ಧರ್ಮಚಾರಿಣಃ।
12105034c ತ್ಯಾಗಧರ್ಮವಿದೋ4 ವೀರಾಃ ಸ್ವಯಮೇವ ತ್ಯಜಂತ್ಯುತ।।

ತ್ಯಾಗಧರ್ಮವನ್ನು ತಿಳಿದಿರುವ ವೀರರು ಮತ್ತು ಧರ್ಮಚಾರೀ ಮನುಷ್ಯರು ಸಂಪತ್ತು ಮತ್ತು ಪುತ್ರ-ಪೌತ್ರರನ್ನು ತಾವಾಗಿಯೇ ತ್ಯಜಿಸುತ್ತಾರೆ.

12105035a 5ಬಹು ಸಂಕಸುಕಂ ದೃಷ್ಟ್ವಾ ವಿವಿತ್ಸಾಸಾಧನೇನ6 ಚ। 12105035c ತಥಾನ್ಯೇ ಸಂತ್ಯಜಂತ್ಯೇನಂ ಮತ್ವಾ ಪರಮದುರ್ಲಭಮ್।।

ನಿರಂತರ ಪ್ರಯತ್ನದಿಂದ ಸಂಪಾದಿಸಿದ ಧನವೂ ಅಸ್ಥಿರವಾಗಿರುತ್ತದೆ ಎನ್ನುವುದನ್ನು ತಿಳಿದು ಧನವು ಪರಮ ದುರ್ಲಭವಾದುದೆಂದು ಭಾವಿಸಿ ಅನ್ಯ ಜನರು ಧನವನ್ನೇ ತ್ಯಜಿಸುತ್ತಾರೆ.

12105036a ತ್ವಂ ಪುನಃ ಪ್ರಾಜ್ಞರೂಪಃ ಸನ್ ಕೃಪಣಂ ಪರಿತಪ್ಯಸೇ।
12105036c ಅಕಾಮ್ಯಾನ್ಕಾಮಯಾನೋಽರ್ಥಾನ್ಪರಾಚೀನಾನುಪದ್ರುತಾನ್।।

ನೀನಾದರೋ ಪ್ರಾಜ್ಞನಂತೆ ಕಾಣುವೆ. ಸುಖೋಪಭೋಗಗಳು ದೈವಾಧೀನವೆಂಬುದು ನಿನಗೆ ತಿಳಿದಿದೆ. ಐಶ್ವರ್ಯವು ಅಸ್ಥಿರ ಎನ್ನುವುದೂ ನಿನಗೆ ತಿಳಿದಿದೆ. ಆದರೂ ಅಪೇಕ್ಷಿಸಲು ಅಯೋಗ್ಯವಾದವುಗಳನ್ನು ನೀನು ಅಪೇಕ್ಷಿಸುತ್ತಿರುವೆ. ಕೃಪಣನಾಗಿ ಪರಿತಪಿಸುತ್ತಿದ್ದೀಯೆ.

12105037a ತಾಂ ಬುದ್ಧಿಮುಪಜಿಜ್ಞಾಸುಸ್ತ್ವಮೇವೈನಾನ್ ಪರಿತ್ಯಜ।
12105037c ಅನರ್ಥಾಂಶ್ಚಾರ್ಥರೂಪೇಣ ಅರ್ಥಾಂಶ್ಚಾನರ್ಥರೂಪತಃ।।

ಈ ಬುದ್ಧಿವಾದವನ್ನು ಗ್ರಹಿಸಿ ಮನನಮಾಡಿಕೊಳ್ಳಲು ಪ್ರಯತ್ನಿಸು. ಭೋಗೇಚ್ಛೆಯನ್ನು ಬಿಟ್ಟುಬಿಡು. ನಿನಗೆ ಅರ್ಥರೂಪದಲ್ಲಿ ಕಾಣುತ್ತಿರುವುದೆಲ್ಲವೂ ಅನರ್ಥಗಳೇ ಆಗಿವೆ. ಏಕೆಂದರೆ ಸಮಸ್ತ ಭೋಗಗಲೂ ಅನರ್ಥರೂಪಗಳೇ ಆಗಿವೆ.

12105038a ಅರ್ಥಾಯೈವ ಹಿ ಕೇಷಾಂ ಚಿದ್ಧನನಾಶೋ ಭವತ್ಯುತ।
12105038c ಅನಂತ್ಯಂ ತಂ ಸುಖಂ ಮತ್ವಾ ಶ್ರಿಯಮನ್ಯಃ ಪರೀಕ್ಷತೇ।।

ಅರ್ಥಸಂಪಾದನೆಯ ಸಲುವಾಗಿಯೇ ಕೆಲವರ ಧನವು ನಾಶವಾಗುತ್ತದೆ. ಇನ್ನು ಕೆಲವರು ಸಂಪತ್ತಿನಿಂದಲೇ ಅಕ್ಷಯ ಸುಖವು ದೊರೆಯುವುದೆಂದು ತಿಳಿದು ಐಶ್ವರ್ಯದ ಹಿಂದೆ ಓಡುತ್ತಿರುತ್ತಾರೆ.

12105039a ರಮಮಾಣಃ ಶ್ರಿಯಾ ಕಶ್ಚಿನ್ನಾನ್ಯಚ್ಚ್ರೇಯೋಽಭಿಮನ್ಯತೇ।
12105039c ತಥಾ ತಸ್ಯೇಹಮಾನಸ್ಯ ಸಮಾರಂಭೋ ವಿನಶ್ಯತಿ।।

ಸಂಪತ್ತಿನಿಂದ ಆನಂದಿಸುತ್ತಿರುವವನು ಸಂಪತ್ತಿಗಿಂತಲೂ ಬೇರೆ ಸುಖಸಾಧನವ್ಯಾವುದೂ ಇಲ್ಲವೆಂದೇ ಭಾವಿಸುತ್ತಾನೆ. ಹಾಗೆಯೇ ಧನವನ್ನು ಬಯಸುವವರ ಪ್ರಯತ್ನಗಳು ಪ್ರಾರಂಭದಲ್ಲಿಯೇ ನಾಶವಾಗಬಲ್ಲವು.

12105040a ಕೃಚ್ಚ್ರಾಲ್ಲಬ್ಧಮಭಿಪ್ರೇತಂ ಯದಾ ಕೌಸಲ್ಯ ನಶ್ಯತಿ।
12105040c ತದಾ ನಿರ್ವಿದ್ಯತೇ ಸೋಽರ್ಥಾತ್ ಪರಿಭಗ್ನಕ್ರಮೋ ನರಃ7।।

ಕೌಸಲ್ಯ! ಅತ್ಯಂತ ಕಷ್ಟದಿಂದ ಸಂಗ್ರಹಿಸಿದ್ದ ಧನವು ವಿನಾಶಹೊಂದಿದರೆ ಪ್ರಯತ್ನಗಳು ಭಗ್ನಗೊಂಡ ಮನುಷ್ಯನು ಧನದಿಂದ ವಿರಕ್ತನಾಗುತ್ತಾನೆ.

12105041a ಧರ್ಮಮೇಕೇಽಭಿಪದ್ಯಂತೇ ಕಲ್ಯಾಣಾಭಿಜನಾ ನರಾಃ।
12105041c ಪರತ್ರ ಸುಖಮಿಚ್ಚಂತೋ ನಿರ್ವಿದ್ಯೇಯುಶ್ಚ ಲೌಕಿಕಾತ್।।

ಮರಣಾನಂತರದ ಸುಖವನ್ನು ಬಯಸುವ ಕಲ್ಯಾಣ ಕುಲದ ಜನರು ಧರ್ಮವನ್ನು ಮಾತ್ರ ಅವಲಂಬಿಸುತ್ತಾರೆ ಮತ್ತು ಲೌಕಿಕ ವ್ಯವಹಾರಗಳಿಂದ ವಿರಕ್ತರಾಗುತ್ತಾರೆ.

12105042a ಜೀವಿತಂ ಸಂತ್ಯಜಂತ್ಯೇಕೇ ಧನಲೋಭಪರಾ ನರಾಃ।
12105042c ನ ಜೀವಿತಾರ್ಥಂ ಮನ್ಯಂತೇ ಪುರುಷಾ ಹಿ ಧನಾದೃತೇ।।

ಧನಲೋಭಪರರಾದವರು ಧನಕ್ಕಾಗಿ ಜೀವಿತವನ್ನೂ ತ್ಯಜಿಸಲು ಸಿದ್ಧರಾಗಿರುತ್ತಾರೆ. ಅಂಥವರು ಧನವಿಲ್ಲದೇ ಜೀವಿತದಲ್ಲಿ ಅರ್ಥವಿಲ್ಲ ಎಂದು ಭಾವಿಸುತ್ತಾರೆ.

12105043a ಪಶ್ಯ ತೇಷಾಂ ಕೃಪಣತಾಂ ಪಶ್ಯ ತೇಷಾಮಬುದ್ಧಿತಾಮ್।
12105043c ಅಧ್ರುವೇ ಜೀವಿತೇ ಮೋಹಾದರ್ಥತೃಷ್ಣಾಮುಪಾಶ್ರಿತಾಃ।।

ಅವರ ಕೃಪಣತೆಯನ್ನು ನೋಡು. ಅವರ ಮೂಢತನವನ್ನು ನೋಡು. ನಿಶ್ಚಿತವಾಗಿರದ ಜೀವಿತಕ್ಕಾಗಿ ಮೋಹದಿಂದ ಅರ್ಥತೃಷ್ಣೆಯನ್ನು ಅವರು ಆಶ್ರಯಿಸುತ್ತಾರೆ.

12105044a ಸಂಚಯೇ ಚ ವಿನಾಶಾಂತೇ ಮರಣಾಂತೇ ಚ ಜೀವಿತೇ।
12105044c ಸಂಯೋಗೇ ವಿಪ್ರಯೋಗಾಂತೇ ಕೋ ನು ವಿಪ್ರಣಯೇನ್ಮನಃ।।

ಸಂಗ್ರಹವು ವಿನಾಶದಲ್ಲಿ ಅಂತ್ಯವಾಗುತ್ತದೆ. ಜೀವಿತವು ಮರಣದಲ್ಲಿ ಕೊನೆಗೊಳ್ಳುತ್ತದೆ. ಸೇರುವಿಕೆಯು ವಿಯೋಗದಲ್ಲಿ ಕೊನೆಗೊಳ್ಳುತ್ತದೆ. ಹೀಗಿರುವಾಗ ಯಾರುತಾನೇ ಅವುಗಳ ಕುರಿತು ಮನಸ್ಸನ್ನು ಕೆಡಿಸಿಕೊಳ್ಳುತ್ತಾರೆ?

12105045a ಧನಂ ವಾ ಪುರುಷಂ ರಾಜನ್ಪುರುಷೋ ವಾ ಪುನರ್ಧನಮ್।
12105045c ಅವಶ್ಯಂ ಪ್ರಜಹಾತ್ಯೇತತ್ತದ್ವಿದ್ವಾನ್ ಕೋಽನುಸಂಜ್ವರೇತ್।।

ರಾಜನ್! ಮನುಷ್ಯನು ಧನವನ್ನು ಬಿಡಬಹುದು ಅಥವಾ ಧನವೂ ಮನುಷ್ಯನನ್ನು ಬಿಡಬಹುದು. ಹೀಗಿರುವಾಗ ಅದರ ಕುರಿತು ಯಾವ ವಿದ್ವಾಂಸನು ತಾನೇ ಚಿಂತಿಸುತ್ತಾನೆ?

12105046a 8ಅನ್ಯೇಷಾಮಪಿ ನಶ್ಯಂತಿ ಸುಹೃದಶ್ಚ ಧನಾನಿ ಚ। 12105046c ಪಶ್ಯ ಬುದ್ಧ್ಯಾ ಮನುಷ್ಯಾಣಾಂ ರಾಜನ್ನಾಪದಮಾತ್ಮನಃ।
12105046e ನಿಯಚ್ಚ ಯಚ್ಚ ಸಂಯಚ್ಚ ಇಂದ್ರಿಯಾಣಿ ಮನೋ ಗಿರಮ್।।

ನಿನ್ನದು ಮಾತ್ರವೇ ಅಲ್ಲ. ಬೇರೆಯವರ ಸುಹೃದರೂ ಧನಗಳೂ ನಾಶವಾಗುತ್ತವೆ. ರಾಜನ್! ಎಲ್ಲ ಮನುಷ್ಯರಿಗೂ ಒದಗಿಬರುವಂಥಹ ಆಪತ್ತೇ ನಿನಗೂ ಒದಗಿ ಬಂದಿದೆ ಎನ್ನುವುದನ್ನು ಬುದ್ಧಿಪೂರ್ವಕವಾಗಿ ವಿಚಾರಿಸಿ ನೋಡು. ಇಂದ್ರಿಯಗಳನ್ನು ಸಂಯಮದಲ್ಲಿಡು. ಮನಸ್ಸನ್ನು ವಶದಲ್ಲಿಟ್ಟುಕೋ. ಮಾತನ್ನು ಕಡಿಮೆಮಾಡಿ ಮೌನಿಯಾಗು.

12105047a ಪ್ರತಿಷಿದ್ಧಾನವಾಪ್ಯೇಷು9 ದುರ್ಲಭೇಷ್ವಹಿತೇಷು ಚ।
12105047c ಪ್ರತಿಕೃಷ್ಟೇಷು ಭಾವೇಷು ವ್ಯತಿಕೃಷ್ಟೇಷ್ವಸಂಭವೇ।
12105047e ಪ್ರಜ್ಞಾನತೃಪ್ತೋ ವಿಕ್ರಾಂತಸ್ತ್ವದ್ವಿಧೋ ನಾನುಶೋಚತಿ।।

ದುರ್ಬಲರು ಇಂದ್ರಿಯಗಳು, ಮನಸ್ಸು ಮತ್ತು ಮಾತುಗಳು ಅಹಿತವಾಗಿದ್ದರೂ ಅವುಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದಿಲ್ಲ. ನಿಕಟ ಸಂಪರ್ಕದಿಂದ ಎಲ್ಲ ವಸ್ತುಗಳೂ ದೃಷ್ಟಿಗೋಚರವಾಗುತ್ತವೆ. ದೂರವಾದನಂತರ ದೃಷ್ಟಿಗೆ ಸಿಲುಕುವುದಿಲ್ಲ. ನಾಶವಾದನಂತರ ವಸ್ತುವನ್ನು ನೋಡಲಿಕ್ಕಾಗುವುದಿಲ್ಲ. ಪ್ರಜ್ಞಾನತೃಪ್ತ ವಿಕ್ರಮಿಯು ದೃಷ್ಟಿಗೆ ಗೋಚರವಾಗದೇ ಇರುವ ಅರ್ಥಕ್ಕಾಗಿ ಶೋಕಿಸವುದಿಲ್ಲ.

12105048a ಅಲ್ಪಮಿಚ್ಚನ್ನಚಪಲೋ ಮೃದುರ್ದಾಂತಃ ಸುಸಂಶಿತಃ।
12105048c ಬ್ರಹ್ಮಚರ್ಯೋಪಪನ್ನಶ್ಚ ತ್ವದ್ವಿಧೋ ನೈವ ಮುಹ್ಯತಿ।।

ನಿನ್ನಂತೆ ಅಲ್ಪತೃಪ್ತ10, ಅಚಪಲ, ಮೃದು, ದಾಂತ, ಸುಸಂಶಿತ, ಬ್ರಹ್ಮಚಾರಿಯು ಶೋಕಪಡುವುದಿಲ್ಲ.

12105049a ನ ತ್ವೇವ ಜಾಲ್ಮೀಂ ಕಾಪಾಲೀಂ ವೃತ್ತಿಮೇಷಿತುಮರ್ಹಸಿ।
12105049c ನೃಶಂಸವೃತ್ತಿಂ ಪಾಪಿಷ್ಠಾಂ ದುಃಖಾಂ ಕಾಪುರುಷೋಚಿತಾಮ್।।

ಅಂತಹ ಸರ್ವಗುಣಸಂಪನ್ನನಾದ ನಿನಗೆ ತುಚ್ಛವೂ ಕ್ರೂರವೂ ಪಾಪಿಷ್ಠವೂ, ದುಷ್ಟವೂ, ಕಾಪುರುಷರಿಗೆ ಉಚಿತವೂ ಆದ ಕಾಪಾಲೀ11 ವೃತ್ತಿಯೂ ಯೋಗ್ಯವಲ್ಲ.

12105050a ಅಪಿ ಮೂಲಫಲಾಜೀವೋ ರಮಸ್ವೈಕೋ ಮಹಾವನೇ।
12105050c ವಾಗ್ಯತಃ ಸಂಗೃಹೀತಾತ್ಮಾ ಸರ್ವಭೂತದಯಾನ್ವಿತಃ।।

ನೀನು ಕಂದಮೂಲಫಲಗಳನ್ನೇ ತಿಂದು ಜೀವಿಸುತ್ತಾ ವಿಶಾಲ ಅರಣ್ಯದಲ್ಲಿ ಏಕಾಕಿಯಾಗಿ ಸಂಚರಿಸು. ಮಾತು, ಮನಸ್ಸು, ಇಂದ್ರಿಯಗಳನ್ನು ಸಂಯಮದಲ್ಲಿಟ್ಟುಕೊಂಡು ಸರ್ವಪ್ರಾಣಿಗಳ ವಿಷಯದಿಂದಲೂ ದಯಾಭಾವದಿಂದಿರು.

12105051a ಸದೃಶಂ ಪಂಡಿತಸ್ಯೈತದೀಷಾದಂತೇನ ದಂತಿನಾ।
12105051c ಯದೇಕೋ ರಮತೇಽರಣ್ಯೇ ಯಚ್ಚಾಪ್ಯಲ್ಪೇನ ತುಷ್ಯತಿ।।

ಪಂಡಿತನಂತೆ ನೀನೂ ಕೂಡ ಗಾಡಿಯ ಮೂಕಿಯ ಮರದ ದಂಡಕ್ಕೆ ಸಮಾನ ದಂತವನ್ನು ಹೊಂದಿರುವ ಮಹಾಗಜದಂತೆ ಏಕಾಕಿಯಾಗಿ ಸಂಚರಿಸುತ್ತಾ ಅರಣ್ಯದಲ್ಲಿ ಸಿಗುವ ಕಂದಮೂಲಫಲಗಳಿಂದಲೇ ತೃಪ್ತನಾಗಿರು.

12105052a ಮಹಾಹ್ರದಃ ಸಂಕ್ಷುಭಿತ ಆತ್ಮನೈವ ಪ್ರಸೀದತಿ। 12105052c 12ಏತದೇವಂಗತಸ್ಯಾಹಂ ಸುಖಂ ಪಶ್ಯಾಮಿ ಕೇವಲಮ್।।

ಕೆಲವೊಮ್ಮೆ ಕ್ಷೋಭೆಗೊಂಡ ಸರೋವರವು ತಾನಾಗಿಯೇ ಶಾಂತವಾಗುವಂತೆ ಕಡಡಿದ ಮನಸ್ಸೂ ಕೂಡ ತಾನಾಗಿಯೇ ಶಾಂತವಾಗುತ್ತದೆ. ಈ ತರಹದ ಜೀವನವೇ ಸುಖಮಯವೆಂದು ನಾನು ಭಾವಿಸುತ್ತೇನೆ.

12105053a ಅಸಂಭವೇ ಶ್ರಿಯೋ ರಾಜನ್ ಹೀನಸ್ಯ ಸಚಿವಾದಿಭಿಃ।
12105053c ದೈವೇ ಪ್ರತಿನಿವಿಷ್ಟೇ ಚ ಕಿಂ ಶ್ರೇಯೋ ಮನ್ಯತೇ ಭವಾನ್।।

ರಾಜನ್! ಈಗ ನಿನ್ನ ಸಂಪತ್ತು ಇಲ್ಲವಾಗಿದೆ. ಸಚಿವಾದಿಗಳಿಂದಲೂ ನೀನು ಹೀನನಾಗಿರುವೆ. ಇದರ ಜೊತೆಗೆ ದೈವವೂ ನಿನಗೆ ಪ್ರತಿಕೂಲವಾಗಿದೆ. ಇಂತಹ ಅವಸ್ಥೆಯಲ್ಲಿರುವ ನೀನು ನಾನು ಹೇಳಿದುದಕ್ಕಿಂತಲೂ ಬೇರೆ ಯಾವುದನ್ನು ಶ್ರೇಯಸ್ಕರವೆಂದು ಭಾವಿಸುತ್ತೀಯೆ?”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಶಾಂತಿ ಪರ್ವಣಿ ರಾಜಧರ್ಮ ಪರ್ವಣಿ ಕಾಲಕವೃಕ್ಷೀಯೇ ಪಂಚಾಧಿಕಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ರಾಜಧರ್ಮ ಪರ್ವದಲ್ಲಿ ಕಾಲಕವೃಕ್ಷೀಯ ಎನ್ನುವ ನೂರಾಐದನೇ ಅಧ್ಯಾಯವು.


  1. ಮರಣಾದ್ದೈನ್ಯಾದನ್ಯತ್ರ ಎಂಬ ಪಾಠಾಂತರವಿದೆ (ಭಾರತ ದರ್ಶನ). ↩︎

  2. ಕಾಮಾನ್ನಿರ್ವಿದ್ಯ ಎಂಬ ಪಾಠಾಂತರವಿದೆ (ಭಾರತ ದರ್ಶನ). ↩︎

  3. ಸದಾ (ಭಾರತ ದರ್ಶನ). ↩︎

  4. ಯೋಗಧರ್ಮವಿದೋ (ಭಾರತ ದರ್ಶನ). ↩︎

  5. ದಕ್ಷಿಣಾತ್ಯ ಪಾಠದಲ್ಲಿ ಇದಕ್ಕೆ ಮೊದಲು ಈ ಎರಡು ಅಧಿಕ ಶ್ಲೋಕಗಳಿವೆ: ತ್ಯಕ್ತಂ ಸ್ವಾಯಂಭುವೇ ವಂಶೇ ಶುಭೇನ ಭರತೇನ ಚ। ನಾನಾರತ್ನಸಮಾಕೀರ್ಣಂ ರಾಜ್ಯಂ ಸ್ಫೀತಮಿತ ಶ್ರುತಮ್।। ತಥಾನ್ಯೈರ್ಭೂಮಿಪಾಲೈಶ್ಚ ತ್ಯಕ್ತಂ ರಾಜ್ಯಂ ಮಹೋದಯಮ್। ತ್ಯಕ್ತ್ವಾ ರಾಜ್ಯಾನಿ ಸರ್ವೇ ಚ ವನೇ ವನ್ಯಫಲಾಶನಾಃ। ಗತಾಶ್ಚ ತಪಸಃ ಪಾರಂ ದುಃಖಸ್ಯಾಂತಂ ಚ ಭೂಮಿಪಾಃ।। (ಗೀತಾ ಪ್ರೆಸ್). ↩︎

  6. ವಿಧಿತ್ಸಾಸಾಧನೇನ (ಭಾರತ ದರ್ಶನ). ↩︎

  7. ದಕ್ಷಿಣಾತ್ಯ ಪಾಠದಲ್ಲಿ ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕವಿದೆ: ಅನಿತ್ಯಾಂ ತಾಂ ಶ್ರಿಯಂ ಮತ್ವಾ ಶ್ರಿಯಂ ವಾ ಕಃ ಪರೀಪ್ಸತಿ। (ಗೀತಾ ಪ್ರೆಸ್). ↩︎

  8. ದಕ್ಷಿಣಾತ್ಯ ಪಾಠದಲ್ಲಿ ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕವಿದೆ: ಅನ್ಯತ್ರೋಪನತಾ ಹ್ಯಾಪತ್ಪುರುಷಂ ತೋಷಯತ್ಯುತ। ತೇನ ಶಾಂತಿ ನ ಲಭತೇ ನಾಹಮೇವೇತಿ ಕಾರಣಾತ್।। (ಗೀತಾ ಪ್ರೆಸ್). ↩︎

  9. ಪ್ರತಿಷೇದ್ಧಾ ನ ಚಾಪ್ಯೇಷು (ಭಾರತ ದರ್ಶನ). ↩︎

  10. ಸ್ವಲ್ಪದರಲ್ಲಿಯೇ ತೃಪ್ತನಾಗುವವನು. ↩︎

  11. ಭಿಕ್ಷೆಬೇಡುವುದು . ↩︎

  12. ದಕ್ಷಿಣಾತ್ಯ ಪಾಠದಲ್ಲಿ ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕಾರ್ಧವಿದೆ: ಇತ್ಥಂ ನರೋಽಪ್ಯಾತ್ಮನೈವ ಕೃತಪ್ರಜ್ಞಃ ಪ್ರಸೀದತಿ। (ಗೀತಾ ಪ್ರೆಸ್). ↩︎