100 ವಿಜಿಗೀಷಮಾಣವೃತ್ತಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ರಾಜಧರ್ಮ ಪರ್ವ

ಅಧ್ಯಾಯ 100

ಸಾರ

ಶೂರರಿಗೆ ಸ್ವರ್ಗವೂ ಹೇಡಿಗಳಿಗೆ ನರಕವೂ ದೊರೆಯುವುದೆಂದು ಜನಕನು ತನ್ನ ಸೇನೆಗಳಿಗೆ ತೋರಿಸಿದುದು (1-18).

12100001 ಭೀಷ್ಮ ಉವಾಚ।
12100001a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್।
12100001c ಪ್ರತರ್ದನೋ ಮೈಥಿಲಶ್ಚ ಸಂಗ್ರಾಮಂ ಯತ್ರ ಚಕ್ರತುಃ।।

ಭೀಷ್ಮನು ಹೇಳಿದನು: “ಇದಕ್ಕೆ ಸಂಬಂಧಿಸಿದಂತೆ ಪುರಾತನ ಇತಿಹಾಸವಾದ ಪ್ರತರ್ದನ ಮತ್ತು ಮಿಥಿಲೇಶ್ವರನ ನಡುವೆ ನಡೆದ ಯುದ್ಧವನ್ನು ಉದಾಹರಿಸುತ್ತಾರೆ.

12100002a ಯಜ್ಞೋಪವೀತೀ ಸಂಗ್ರಾಮೇ ಜನಕೋ ಮೈಥಿಲೋ ಯಥಾ।
12100002c ಯೋಧಾನುದ್ಧರ್ಷಯಾಮಾಸ ತನ್ನಿಬೋಧ ಯುಧಿಷ್ಠಿರ।।

ಯುಧಿಷ್ಠಿರ! ಯಜ್ಞೋಪವೀತೀ ಮಿಥಿಲರಾಜ ಜನಕನು ತನ್ನ ಯೋಧರನ್ನು ಹೇಗೆ ಹುರಿದುಂಬಿಸಿದನೆನ್ನುವುದನ್ನು ಹೇಳುತ್ತೇನೆ ಕೇಳು.

12100003a ಜನಕೋ ಮೈಥಿಲೋ ರಾಜಾ ಮಹಾತ್ಮಾ ಸರ್ವತತ್ತ್ವವಿತ್।
12100003c ಯೋಧಾನ್ಸ್ವಾನ್ದರ್ಶಯಾಮಾಸ ಸ್ವರ್ಗಂ ನರಕಮೇವ ಚ।।

ಸರ್ವತತ್ತ್ವಗಳನ್ನೂ ತಿಳಿದಿದ್ದ ಮಹಾತ್ಮಾ ಮೈಥಿಲ ರಾಜಾ ಜನಕನು ಯೋಧರಿಗೆ ಸ್ವರ್ಗ-ನರಕಗಳೆರಡನ್ನೂ ತೋರಿಸಿ ಹೇಳಿದನು:

12100004a ಅಭೀತಾನಾಮಿಮೇ ಲೋಕಾ ಭಾಸ್ವಂತೋ ಹಂತ ಪಶ್ಯತ।
12100004c ಪೂರ್ಣಾ ಗಂಧರ್ವಕನ್ಯಾಭಿಃ ಸರ್ವಕಾಮದುಹೋಽಕ್ಷಯಾಃ।।

“ಅದೋ ಅಲ್ಲಿ ನೋಡಿರಿ! ನಿರ್ಭಯರಾಗಿ ಯುದ್ಧಮಾಡುವ ಯೋಧರಿಗೆ ಗಂಧರ್ವ ಕನ್ಯೆಯರಿಂದ ತುಂಬಿದ ಸರ್ವಕಾಮಗಳನ್ನೂ ಪೂರೈಸುವ ಈ ಅಕ್ಷಯ ಲೋಕಗಳು ದೊರೆಯುತ್ತವೆ.

12100005a ಇಮೇ ಪಲಾಯಮಾನಾನಾಂ ನರಕಾಃ ಪ್ರತ್ಯುಪಸ್ಥಿತಾಃ।
12100005c ಅಕೀರ್ತಿಃ ಶಾಶ್ವತೀ ಚೈವ ಪತಿತವ್ಯಮನಂತರಮ್।।

ಪಲಾಯನಮಾಡುವವರಿಗೆ ಈ ಲೋಕದಲ್ಲಿ ಶಾಶ್ವತವಾದ ಅಪಕೀರ್ತಿಯಲ್ಲದೇ ಮರಣಾನಂತರ ಈ ನರಕಗಳೂ ಲಭ್ಯವಾಗುತ್ತವೆ.

12100006a ತಾನ್ದೃಷ್ಟ್ವಾರೀನ್ವಿಜಯತೋ ಭೂತ್ವಾ ಸಂತ್ಯಾಗಬುದ್ಧಯಃ।
12100006c ನರಕಸ್ಯಾಪ್ರತಿಷ್ಠಸ್ಯ ಮಾ ಭೂತ ವಶವರ್ತಿನಃ।।

ಇವೆರಡನ್ನೂ ನೋಡಿಕೊಂಡು ತ್ಯಾಗಬುದ್ಧಿಯುಳ್ಳವರಾಗಿ ವಿಜಯವನ್ನು ಸಂಪಾದಿಸಿರಿ. ಅಪ್ರತಿಷ್ಠವಾದ ನರಕದ ವಶವರ್ತಿಗಳಾಗಬೇಡಿರಿ.

12100007a ತ್ಯಾಗಮೂಲಂ ಹಿ ಶೂರಾಣಾಂ ಸ್ವರ್ಗದ್ವಾರಮನುತ್ತಮಮ್।
12100007c ಇತ್ಯುಕ್ತಾಸ್ತೇ ನೃಪತಿನಾ ಯೋಧಾಃ ಪರಪುರಂಜಯ।।
12100008a ವ್ಯಜಯಂತ ರಣೇ ಶತ್ರೂನ್ ಹರ್ಷಯಂತೋ ಜನೇಶ್ವರಮ್।

ಶೂರರಿಗೆ ಸ್ವರ್ಗದ ಉತ್ತಮ ದ್ವಾರವು ಪ್ರಾಪ್ತವಾಗಲು ಅವರ ತ್ಯಾಗವೇ ಮೂಲಕಾರಣವಾಗಿದೆ.” ಪರಪುರಂಜಯ! ನೃಪತಿಯು ಹೀಗೆ ಹೇಳಲು ಅವನ ಯೋಧರು ರಣದಲ್ಲಿ ವಿಜಯವನ್ನು ಸಾಧಿಸಿ ಜನೇಶ್ವರನನ್ನು ಹರ್ಷಗೊಳಿಸಿದರು.

12100008c ತಸ್ಮಾದಾತ್ಮವತಾ ನಿತ್ಯಂ ಸ್ಥಾತವ್ಯಂ ರಣಮೂರ್ಧನಿ।।
12100009a ಗಜಾನಾಂ ರಥಿನೋ ಮಧ್ಯೇ ರಥಾನಾಮನು ಸಾದಿನಃ।
12100009c ಸಾದಿನಾಮಂತರಾ ಸ್ಥಾಪ್ಯಂ ಪಾದಾತಮಿಹ ದಂಶಿತಮ್।।

ಆದುದರಿಂದ ರಣಮೂರ್ಧನಿಯಲ್ಲಿ ನಿತ್ಯವೂ ಮನೋನಿಗ್ರಹವುಳ್ಳ ವ್ಯಕ್ತಿಯೇ ನಿಂತಿರಬೇಕು. ಗಜಾರೋಹಿಗಳ ಮಧ್ಯದಲ್ಲಿ ರಥಸೈನ್ಯವನ್ನು ಸ್ಥಾಪಿಸಬೇಕು. ರಥಸೈನ್ಯದ ಬಳಿ ಕುದುರೆಸವಾರರಿರಬೇಕು. ಕುದುರೆ ಸವಾರರ ಮಧ್ಯೆ ಕವಚಧಾರೀ ಅಸ್ತ್ರ-ಶಸ್ತ್ರಧಾರೀ ಪದಾತಿಗಳಿರಬೇಕು.

12100010a ಯ ಏವಂ ವ್ಯೂಹತೇ ರಾಜಾ ಸ ನಿತ್ಯಂ ಜಯತೇ ದ್ವಿಷಃ।
12100010c ತಸ್ಮಾದೇವಂ ವಿಧಾತವ್ಯಂ ನಿತ್ಯಮೇವ ಯುಧಿಷ್ಠಿರ।।

ಯುಧಿಷ್ಠಿರ! ಈ ರೀತಿ ವ್ಯೂಹರಚಿಸಿದ ರಾಜನು ನಿತ್ಯವೂ ವಿಜಯಿಯಾಗುತ್ತಾನೆ. ಆದುದರಿಂದ ನಿತ್ಯವೂ ನೀನೂ ಕೂಡ ಹೀಗೆಯೇ ವ್ಯೂಹವನ್ನು ರಚಿಸಬೇಕು.

12100011a ಸರ್ವೇ ಸುಕೃತಮಿಚ್ಚಂತಃ1 ಸುಯುದ್ಧೇನಾತಿಮನ್ಯವಃ।
12100011c ಕ್ಷೋಭಯೇಯುರನೀಕಾನಿ ಸಾಗರಂ ಮಕರಾ ಇವ।।

ಸರ್ವ ಕ್ಷತ್ರಿಯರೂ ಉತ್ತಮ ಯುದ್ಧದ ಮೂಲಕ ಪುಣ್ಯವನ್ನು ಪಡೆದುಕೊಳ್ಳಲು ಬಯಸುತ್ತಾರೆ ಮತ್ತು ಮೊಸಳೆಗಳು ಸಾಗರವನ್ನು ಹೇಗೋ ಹಾಗೆ ಸೇನೆಗಳನ್ನು ಕ್ಷೋಭೆಗೊಳಿಸುತ್ತಾರೆ.

12100012a ಹರ್ಷಯೇಯುರ್ವಿಷಣ್ಣಾಂಶ್ಚ ವ್ಯವಸ್ಥಾಪ್ಯ ಪರಸ್ಪರಮ್।
12100012c ಜಿತಾಂ ಚ ಭೂಮಿಂ ರಕ್ಷೇತ ಭಗ್ನಾನ್ನಾತ್ಯನುಸಾರಯೇತ್।।

ಸೈನಿಕರು ವಿಷಣ್ಣರಾಗಿರುವಾಗ ಪರಸ್ಪರರನ್ನು ವ್ಯವಸ್ಥಿತವಾಗಿರಿಸಿ ಹರ್ಷವನ್ನುಂಟುಮಾಡಬೇಕು. ಗೆದ್ದ ಭೂಮಿಯನ್ನು ರಕ್ಷಿಸಬೇಕು. ಪಲಾಯನಮಾಡುತ್ತಿರುವವರನ್ನು ಬಹಳ ದೂರದ ವರೆಗೆ ಬೆನ್ನಟ್ಟಿ ಹೋಗಬಾರದು.

12100013a ಪುನರಾವರ್ತಮಾನಾನಾಂ ನಿರಾಶಾನಾಂ ಚ ಜೀವಿತೇ।
12100013c ನ ವೇಗಃ ಸುಸಹೋ ರಾಜಂಸ್ತಸ್ಮಾನ್ನಾತ್ಯನುಸಾರಯೇತ್।।

ರಾಜನ್! ಜೀವಿತದಲ್ಲಿಯೇ ನಿರಾಶರಾದ ಅವರು ಅತಿ ವೇಗದಲ್ಲಿ ಹಿಂದಿರುಗಿಬಿಡಬಲ್ಲರು. ಆದುದರಿಂದ ಅವರನ್ನು ಅತಿಯಾಗಿ ಬೆನ್ನಟ್ಟಿಹೋಗಬಾರದು.

12100014a ನ ಹಿ ಪ್ರಹರ್ತುಮಿಚ್ಚಂತಿ ಶೂರಾಃ ಪ್ರಾದ್ರವತಾಂ ಭಯಾತ್।
12100014c ತಸ್ಮಾತ್ಪಲಾಯಮಾನಾನಾಂ ಕುರ್ಯಾನ್ನಾತ್ಯನುಸಾರಣಮ್।।

ಭಯದಿಂದ ಓಡಿಹೋಗುತ್ತಿರುವವರ ಮೇಲೆ ಶೂರರು ಪ್ರಹರಿಸಲು ಇಚ್ಛಿಸುವುದಿಲ್ಲ. ಆದುದರಿಂದ ಪಲಾಯನಮಾಡುವವರನ್ನು ಅತಿ ದೂರದವರೆಗೆ ಅನುಸರಿಸಬಾರದು.

12100015a ಚರಾಣಾಮಚರಾ ಹ್ಯನ್ನಮದಂಷ್ಟ್ರಾ ದಂಷ್ಟ್ರಿಣಾಮಪಿ।
12100015c ಅಪಾಣಯಃ ಪಾಣಿಮತಾಮನ್ನಂ2 ಶೂರಸ್ಯ ಕಾತರಾಃ।।

ಚರಪ್ರಾಣಿಗಳಿಗೆ ಅಚರ ಹುಲ್ಲು ಮೊದಲಾದವುಗಳು ಹೇಗೆ ಅನ್ನವೋ, ಕೋರೆದಾಡೆಗಳಿರುವ ಪ್ರಾಣಿಗಳಿಗೆ ಕೋರೆದಾಡೆಗಳಿಲ್ಲದಿರುವ ಪ್ರಾಣಿಗಳು ಹೇಗೆ ಅನ್ನವೋ, ಕೈಗಳಿಲ್ಲದವಕ್ಕೆ ಕೈಗಳಿದ್ದವು ಹೇಗೆ ಅನ್ನವೋ ಹಾಗೆ ಶೂರನಿಗೆ ಹೇಡಿಗಳೇ ಅನ್ನಪ್ರಾಯರು.

12100016a ಸಮಾನಪೃಷ್ಠೋದರಪಾಣಿಪಾದಾಃ ಪಶ್ಚಾಚ್ಚೂರಂ ಭೀರವೋಽನುವ್ರಜಂತಿ3
12100016c ಅತೋ ಭಯಾರ್ತಾಃ ಪ್ರಣಿಪತ್ಯ ಭೂಯಃ ಕೃತ್ವಾಂಜಲೀನುಪತಿಷ್ಠಂತಿ ಶೂರಾನ್।।

ಶೂರರು ಮತ್ತು ಹೇಡಿಗಳ ಹೊಟ್ಟೆ, ಪೃಷ್ಠ, ಕೈಗಳು ಮತ್ತು ಕಾಲುಗಳು ಒಂದೇ ಸಮನಾಗಿರುತ್ತವೆ. ಆದರೆ ಹೇಡಿಗಳು ಶೂರರನ್ನು ಹಿಂಬಾಲಿಸುತ್ತಾರೆ. ಭಯಾರ್ತರು ಪುನಃ ಪುನಃ ಕೈಮುಗಿದು ನಮಸ್ಕರಿಸುತ್ತಾ ಶೂರರನ್ನು ಬೇಡಿಕೊಳ್ಳುತ್ತಾರೆ.

12100017a ಶೂರಬಾಹುಷು ಲೋಕೋಽಯಂ ಲಂಬತೇ ಪುತ್ರವತ್ಸದಾ।
12100017c ತಸ್ಮಾತ್ಸರ್ವಾಸ್ವವಸ್ಥಾಸು ಶೂರಃ ಸಂಮಾನಮರ್ಹತಿ।।

ಪುತ್ರರು ತಂದೆಯನ್ನು ಹೇಗೋ ಹಾಗೆ ಈ ಲೋಕವು ಶೂರರ ಬಾಹುಗಳನ್ನು ಅವಲಂಬಿಸಿದೆ. ಆದುದರಿಂದ ಸರ್ವಾವಸ್ಥೆಗಳಲ್ಲಿ ಶೂರನನ್ನು ಸಮ್ಮಾನಿಸಬೇಕು.

12100018a ನ ಹಿ ಶೌರ್ಯಾತ್ಪರಂ ಕಿಂ ಚಿತ್ತ್ರಿಷು ಲೋಕೇಷು ವಿದ್ಯತೇ।
12100018c ಶೂರಃ ಸರ್ವಂ ಪಾಲಯತಿ ಸರ್ವಂ ಶೂರೇ ಪ್ರತಿಷ್ಠಿತಮ್।।

ಶೌರ್ಯಕ್ಕಿಂತಲೂ ಶ್ರೇಷ್ಠವಾದುದು ಮೂರು ಲೋಕಗಳಲ್ಲಿಯೂ ಇಲ್ಲ. ಶೂರನು ಸರ್ವವನ್ನು ಪಾಲಿಸುತ್ತಾನೆ ಮತ್ತು ಎಲ್ಲವೂ ಶೂರನಲ್ಲಿಯೇ ಪ್ರತಿಷ್ಠಿತವಾಗಿವೆ.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಶಾಂತಿ ಪರ್ವಣಿ ರಾಜಧರ್ಮ ಪರ್ವಣಿ ವಿಜಿಗೀಷಮಾಣವೃತ್ತೇ ಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ರಾಜಧರ್ಮ ಪರ್ವದಲ್ಲಿ ವಿಜಿಗೀಷಮಾಣವೃತ್ತ ಎನ್ನುವ ನೂರನೇ ಅಧ್ಯಾಯವು.


  1. ಜಂಭಂ (ಭಾರತ ದರ್ಶನ). ↩︎

  2. ಸ್ವರ್ಗತಿಮಿಚ್ಛಂತಿ (ಭಾರತ ದರ್ಶನ). ↩︎

  3. ಆಪಃ ಪಿಪಾಸತಾಮನ್ನಂ (ಭಾರತ ದರ್ಶನ). ↩︎