ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ರಾಜಧರ್ಮ ಪರ್ವ
ಅಧ್ಯಾಯ 99
ಸಾರ
ಸಮರದಲ್ಲಿ ನಿಧನಹೊಂದುವ ಶೂರರಿಗೆ ದೊರೆಯುವ ಲೋಕಗಳ ವರ್ಣನೆ (1-50).
12099001 ಯುಧಿಷ್ಠಿರ ಉವಾಚ।
12099001a ಕೇ ಲೋಕಾ ಯುಧ್ಯಮಾನಾನಾಂ ಶೂರಾಣಾಮನಿವರ್ತಿನಾಮ್।
12099001c ಭವಂತಿ ನಿಧನಂ ಪ್ರಾಪ್ಯ ತನ್ಮೇ ಬ್ರೂಹಿ ಪಿತಾಮಹ।।
ಯುಧಿಷ್ಠಿರನು ಹೇಳಿದನು: “ಪಿತಾಮಹ! ಯುದ್ಧಮಾಡಿ ರಣದಿಂದ ಪಲಾಯನ ಮಾಡದೇ ನಿಧನವನ್ನು ಹೊಂದುವ ಶೂರರಿಗೆ ಯಾವ ಲೋಕಗಳು ದೊರೆಯುತ್ತವೆ ಎನ್ನುವುದನ್ನು ಹೇಳು.”
12099002 ಭೀಷ್ಮ ಉವಾಚ।
12099002a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್।
12099002c ಅಂಬರೀಷಸ್ಯ ಸಂವಾದಮಿಂದ್ರಸ್ಯ ಚ ಯುಧಿಷ್ಠಿರ।।
ಭೀಷ್ಮನು ಹೇಳಿದನು: “ಯುಧಿಷ್ಠಿರ! ಇದಕ್ಕೆ ಸಂಬಂಧಿಸಿದಂತೆ ಪುರಾತನ ಇತಿಹಾಸವಾದ ಅಂಬರೀಷ-ಇಂದ್ರರ ಸಂವಾದವನ್ನು ಉದಾಹರಿಸುತ್ತಾರೆ.
12099003a ಅಂಬರೀಷೋ ಹಿ ನಾಭಾಗಃ ಸ್ವರ್ಗಂ ಗತ್ವಾ ಸುದುರ್ಲಭಮ್।
12099003c ದದರ್ಶ ಸುರಲೋಕಸ್ಥಂ ಶಕ್ರೇಣ ಸಚಿವಂ ಸಹ।।
ನಾಭಾಗ ಅಂಬರೀಷನು ಸುದುರ್ಲಭವಾದ ಸ್ವರ್ಗಕ್ಕೆ ಹೋಗಿ ಅಲ್ಲಿ ಶಕ್ರನೊಂದಿಗೆ ಸುರಲೋಕಸ್ಥನಾಗಿದ್ದ ತನ್ನ ಸಚಿವನನ್ನು ಕಂಡನು.
12099004a ಸರ್ವತೇಜೋಮಯಂ ದಿವ್ಯಂ ವಿಮಾನವರಮಾಸ್ಥಿತಮ್।
12099004c ಉಪರ್ಯುಪರಿ ಗಚ್ಚಂತಂ ಸ್ವಂ ವೈ ಸೇನಾಪತಿಂ ಪ್ರಭುಮ್।।
12099005a ಸ ದೃಷ್ಟ್ವೋಪರಿ ಗಚ್ಚಂತಂ ಸೇನಾಪತಿಮುದಾರಧೀಃ।
12099005c ಋದ್ಧಿಂ ದೃಷ್ಟ್ವಾ ಸುದೇವಸ್ಯ ವಿಸ್ಮಿತಃ ಪ್ರಾಹ ವಾಸವಮ್।।
ಸರ್ವತೇಜೋಮಯವಾದ ದಿವ್ಯ ವಿಮಾನದಲ್ಲಿ ಕುಳಿತಿದ್ದ ಮತ್ತು ಮೇಲೆ ಮೇಲೆ ಹೋಗುತ್ತಿದ್ದ, ತನಗಿಂತಲೂ ಮೇಲೆ ಹೋಗುತ್ತಿದ್ದ ತನ್ನ ಪ್ರಭು ಸೇನಾಪತಿ ಸುದೇವನ ವೃದ್ಧಿಯನ್ನು ನೋಡಿ ವಿಸ್ಮಿತನಾದ ಉದಾರಧೀ ಅಂಬರೀಷನು ಇಂದ್ರನಿಗೆ ಹೇಳಿದನು.
12099006a ಸಾಗರಾಂತಾಂ ಮಹೀಂ ಕೃತ್ಸ್ನಾಮನುಶಿಷ್ಯ ಯಥಾವಿಧಿ।
12099006c ಚಾತುರ್ವರ್ಣ್ಯೇ ಯಥಾಶಾಸ್ತ್ರಂ ಪ್ರವೃತ್ತೋ ಧರ್ಮಕಾಮ್ಯಯಾ।।
“ವಾಸವ! ನಾನು ಸಾಗರಾಂತೆ ಮಹಿಯನ್ನು ಸಂಪೂರ್ಣವಾಗಿ ಯಥಾವಿಧಿಯಾಗಿ ಆಳಿ ಯಥಾಶಾಸ್ತ್ರವಾಗಿ ಧರ್ಮದ ಕಾಮನೆಯಿಂದ ನಾಲ್ಕು ವರ್ಣದವರನ್ನೂ ಪರಿಪಾಲಿಸುವುದರಲ್ಲಿ ತತ್ಪರನಾಗಿದ್ದೆನು.
12099007a ಬ್ರಹ್ಮಚರ್ಯೇಣ ಘೋರೇಣ ಆಚಾರ್ಯಕುಲಸೇವಯಾ।
12099007c ವೇದಾನಧೀತ್ಯ ಧರ್ಮೇಣ ರಾಜಶಾಸ್ತ್ರಂ ಚ ಕೇವಲಮ್।।
ಘೋರ ಬ್ರಹ್ಮಚರ್ಯದಿಂದ ಆಚಾರ್ಯಕುಲದ ಸೇವೆಗೈದು ಧರ್ಮಪೂರ್ವಕವಾಗಿಯೇ ವೇದಗಳು ಮತ್ತು ವಿಶೇಷವಾಗಿ ರಾಜಶಾಸ್ತ್ರವನ್ನು ಪಡೆದುಕೊಂಡಿದ್ದೇನೆ.
12099008a ಅತಿಥೀನನ್ನಪಾನೇನ ಪಿತೃಂಶ್ಚ ಸ್ವಧಯಾ ತಥಾ।
12099008c ಋಷೀನ್ ಸ್ವಾಧ್ಯಾಯದೀಕ್ಷಾಭಿರ್ದೇವಾನ್ಯಜ್ಞೈರನುತ್ತಮೈಃ।।
ಅತಿಥಿಗಳನ್ನು ಅನ್ನಪಾನಗಳಿಂದಲೂ, ಪಿತೃಗಳನ್ನು ಸ್ವಧೆಯ ಮೂಲಕವೂ, ಸ್ವಾಧ್ಯಾಯದೀಕ್ಷೆಗಳಿಂದ ಋಷಿಗಳನ್ನೂ, ಮತ್ತು ಅನುತ್ತಮ ಯಜ್ಞಗಳಿಂದ ದೇವತೆಗಳನ್ನು ತೃಪ್ತಿಪಡಿಸಿದ್ದೇನೆ.
12099009a ಕ್ಷತ್ರಧರ್ಮೇ ಸ್ಥಿತೋ ಭೂತ್ವಾ ಯಥಾಶಾಸ್ತ್ರಂ ಯಥಾವಿಧಿ।
12099009c ಉದೀಕ್ಷಮಾಣಃ ಪೃತನಾಂ ಜಯಾಮಿ ಯುಧಿ ವಾಸವ।।
ವಾಸವ! ಯಥಾಶಾಸ್ತ್ರವಾಗಿ ಮತ್ತು ಯಥಾವಿಧಿಯಾಗಿ ಕ್ಷತ್ರಧರ್ಮದಲ್ಲಿಯೇ ಸ್ಥಿತನಾಗಿದ್ದುಕೊಂಡು ಚತುರಂಗ ಸೇನೆಗಳನ್ನೂ ನಿಲ್ಲಿಸಿ ಯುದ್ಧದಲ್ಲಿ ಶತ್ರುಗಳನ್ನು ಜಯಿಸಿದ್ದೇನೆ.
12099010a ದೇವರಾಜ ಸುದೇವೋಽಯಂ ಮಮ ಸೇನಾಪತಿಃ ಪುರಾ।
12099010c ಆಸೀದ್ಯೋಧಃ ಪ್ರಶಾಂತಾತ್ಮಾ ಸೋಽಯಂ ಕಸ್ಮಾದತೀವ ಮಾಮ್।।
ದೇವರಾಜ! ಈ ಸುದೇವನು ಹಿಂದೆ ನನ್ನ ಸೇನಾಪತಿಯಾಗಿದ್ದನು. ಯೋಧನೂ ಪ್ರಶಾಂತಾತ್ಮನೂ ಆಗಿದ್ದನು. ಅವನು ಹೇಗೆ ನನ್ನನ್ನು ಮೀರಿಸಿದ್ದಾನೆ?
12099011a ನಾನೇನ ಕ್ರತುಭಿರ್ಮುಖ್ಯೈರಿಷ್ಟಂ ನೈವ ದ್ವಿಜಾತಯಃ।
12099011c ತರ್ಪಿತಾ ವಿಧಿವಚ್ಚಕ್ರ ಸೋಽಯಂ ಕಸ್ಮಾದತೀವ ಮಾಮ್।।
ಅವನಾದರೋ ಮುಖ್ಯ ಯಜ್ಞಗಳಿಂದ ದೇವತೆಗಳನ್ನು ಆರಾಧಿಸಿರುವುದಿಲ್ಲ. ಬಹುದಕ್ಷಿಣೆಗಳಿಂದ ಬ್ರಾಹ್ಮಣರನ್ನೂ ವಿಧಿವತ್ತಾಗಿ ತೃಪ್ತಿಪಡಿಸಿರುವುದಿಲ್ಲ. ಅಂಥವನು ನನಗಿಂತಲೂ ಮುಂದೆ ಮುಂದೆ ಪುಣ್ಯಲೋಕಗಳಿಗೆ ಹೋಗುತ್ತಿದ್ದಾನೆ. ಇದಕ್ಕೆ ಕಾರಣವೇನು?”
12099012 1ಇಂದ್ರ ಉವಾಚ। 12099012a ಏತಸ್ಯ ವಿತತಸ್ತಾತ ಸುದೇವಸ್ಯ ಬಭೂವ ಹ।
12099012c ಸಂಗ್ರಾಮಯಜ್ಞಃ ಸುಮಹಾನ್ಯಶ್ಚಾನ್ಯೋ ಯುಧ್ಯತೇ ನರಃ।।
ಇಂದ್ರನು ಹೇಳಿದನು: “ಅಯ್ಯಾ! ಈ ಸುದೇವನು ಅತ್ಯಂತ ವಿಸ್ತಾರವಾದ ರಣಯಜ್ಞವನ್ನು ಮಾಡಿ ಮುಗಿಸಿದ್ದಾನೆ. ಬೇರೆ ಯಾವ ಮನುಷ್ಯನು ಯುದ್ಧಮಾಡಿದರೂ ಅದು ಮಹಾಸಂಗ್ರಾಮಯುದ್ಧವೇ ಆಗುತ್ತದೆ2.
12099013a ಸಂನದ್ಧೋ ದೀಕ್ಷಿತಃ ಸರ್ವೋ ಯೋಧಃ ಪ್ರಾಪ್ಯ ಚಮೂಮುಖಮ್।
12099013c ಯುದ್ಧಯಜ್ಞಾಧಿಕಾರಸ್ಥೋ ಭವತೀತಿ ವಿನಿಶ್ಚಯಃ।।
ಕವಚವನ್ನು ಧರಿಸಿ ಯಜ್ಞದ ದೀಕ್ಷೆಯನ್ನು ಕೈಗೊಂಡು ಶತ್ರುಸೇನೆಯ ಅಗ್ರಭಾಗದಲ್ಲಿ ನಿಲ್ಲುವ ಯೋಧನೂ ಸಂಗ್ರಾಮಯಜ್ಞಕ್ಕೆ ಅಧಿಕಾರಿಯಾಗುವನೆಂಬುದು ನನ್ನ ಅಭಿಪ್ರಾಯವಾಗಿದೆ.”
12099014 ಅಂಬರೀಷ ಉವಾಚ।
12099014a ಕಾನಿ ಯಜ್ಞೇ ಹವೀಂಷ್ಯತ್ರ ಕಿಮಾಜ್ಯಂ ಕಾ ಚ ದಕ್ಷಿಣಾ।
12099014c ಋತ್ವಿಜಶ್ಚಾತ್ರ ಕೇ ಪ್ರೋಕ್ತಾಸ್ತನ್ಮೇ ಬ್ರೂಹಿ ಶತಕ್ರತೋ।।
ಅಂಬರೀಷನು ಹೇಳಿದನು: “ಶತಕ್ರತೋ! ಈ ಯಜ್ಞದ ಹವಿಸ್ಸುಗಳ್ಯಾವುವು? ಆಜ್ಯವು ಯಾವುದು? ದಕ್ಷಿಣೆಯು ಯಾವುದು? ಇದರ ಋತ್ವಿಜರು ಯಾರು? ಅದನ್ನು ನನಗೆ ಹೇಳು.”
12099015 ಇಂದ್ರ ಉವಾಚ।
12099015a ಋತ್ವಿಜಃ ಕುಂಜರಾಸ್ತತ್ರ ವಾಜಿನೋಽಧ್ವರ್ಯವಸ್ತಥಾ।
12099015c ಹವೀಂಷಿ ಪರಮಾಂಸಾನಿ ರುಧಿರಂ ತ್ವಾಜ್ಯಮೇವ ಚ।।
ಇಂದ್ರನು ಹೇಳಿದನು: “ಸಂಗ್ರಾಮ ಯಜ್ಞದಲ್ಲಿ ಆನೆಗಳೇ ಋತ್ವಿಜರು. ಕುದುರೆಗಳು ಅಧ್ವರ್ಯುಗಳು. ಶತ್ರುಗಳ ಮಾಂಸವೇ ಹವಿಸ್ಸು. ರುಧಿರವೇ ಇದರ ಆಜ್ಯ.
12099016a ಸೃಗಾಲ3ಗೃಧ್ರಕಾಕೋಲಾಃ ಸದಸ್ಯಾಸ್ತತ್ರ ಸತ್ರಿಣಃ।
12099016c ಆಜ್ಯಶೇಷಂ ಪಿಬಂತ್ಯೇತೇ ಹವಿಃ ಪ್ರಾಶ್ನಂತಿ ಚಾಧ್ವರೇ।।
ಗುಳ್ಳೇನರಿ, ರಣಹದ್ದು, ಕಾಗೆ ಮತ್ತು ಇತರ ಮಾಂಸಾಶೀ ಪಕ್ಷಿಗಳೇ ಈ ಅಧ್ವರದಲ್ಲಿ ಸದಸ್ಯರು. ರಕ್ತರೂಪವಾದ ಆಜ್ಯಶೇಷವನ್ನು ಇವು ಕುಡಿಯುತ್ತವೆ. ಮಾಂಸರೂಪೀ ಹವಿಸ್ಸನ್ನು ತಿನ್ನುತ್ತವೆ.
12099017a ಪ್ರಾಸತೋಮರಸಂಘಾತಾಃ ಖಡ್ಗಶಕ್ತಿಪರಶ್ವಧಾಃ।
12099017c ಜ್ವಲಂತೋ ನಿಶಿತಾಃ ಪೀತಾಃ ಸ್ರುಚಸ್ತಸ್ಯಾಥ ಸತ್ರಿಣಃ।।
ಮೇಲಿಂದ ಮೇಲೆ ಬೀಳುವ ಪ್ರಜ್ವಲಿಸುವಷ್ಟು ಹರಿತವಾದ ಪೀತವರ್ಣದ ಪ್ರಾಸ-ತೋಮರಗಳು, ಖಡ್ಗ-ಶಕ್ತಿ-ಪರಶು ಆಯುಧಗಳು ಯಜ್ಞದೀಕ್ಷಿತನ ಸ್ರಕ್ಕುಗಳು.
12099018a ಚಾಪವೇಗಾಯತಸ್ತೀಕ್ಷ್ಣಃ ಪರಕಾಯಾವದಾರಣಃ।
12099018c ಋಜುಃ ಸುನಿಶಿತಃ ಪೀತಃ ಸಾಯಕೋಽಸ್ಯ ಸ್ರುವೋ ಮಹಾನ್।।
ಚಾಪದಿಂದ ಸರಿಯಾಗಿ ಗುರಿಯಿಟ್ಟು ವೇಗವಾಗಿ ಪ್ರಯೋಗಿಸಲ್ಪಟ್ಟ ಪರಕಾಯವನ್ನು ಛೇದಿಸುವ ತೀಕ್ಷ್ಣ ನಿಶಿತ ಪೀತವರ್ಣದ ಸಾಯಕಗಳೇ ಇದರ ಮಹಾನ್ ಸ್ರುವಗಳು.
12099019a ದ್ವೀಪಿಚರ್ಮಾವನದ್ಧಶ್ಚ ನಾಗದಂತಕೃತತ್ಸರುಃ।
12099019c ಹಸ್ತಿಹಸ್ತಗತಃ ಖಡ್ಗಃ ಸ್ಫ್ಯೋ ಭವೇತ್ತಸ್ಯ ಸಂಯುಗೇ।।
ವ್ಯಾಘ್ರಚರ್ಮದ ಕೋಶದಿಂದ ಬಂಧಿಸಿದ, ಆನೆಯ ದಂತದ ಹಿಡಿಯ, ಆನೆಯ ಸೊಂಡಿಲನ್ನೂ ಕತ್ತರಿಸಬಲ್ಲ ಖಡ್ಗವೇ ಸಂಯುಗ ಯಜ್ಞದಲ್ಲಿ ಸ್ಫ್ಯು4.
12099020a ಜ್ವಲಿತೈರ್ನಿಶಿತೈಃ ಪೀತೈಃ ಪ್ರಾಸಶಕ್ತಿಪರಶ್ವಧೈಃ।
12099020c ಶೈಕ್ಯಾಯಸಮಯೈಸ್ತೀಕ್ಷ್ಣೈರಭಿಘಾತೋ ಭವೇದ್ವಸು।।
ಒಂದೇ ಸಮನೆ ಬೀಳುವ ಪ್ರಜ್ವಲಿತ ನಿಶಿತ ಪೀತ ತೀಕ್ಷ್ಣ ಪ್ರಾಸ ಶಕ್ತಿ ಪರಶಾಯುಧಗಳೇ ದ್ರವ್ಯಗಳು.
12099021a ಆವೇಗಾದ್ಯತ್ತು ರುಧಿರಂ ಸಂಗ್ರಾಮೇ ಸ್ಯಂದತೇ ಭುವಿ।
12099021c ಸಾಸ್ಯ ಪೂರ್ಣಾಹುತಿರ್ಹೋತ್ರೇ ಸಮೃದ್ಧಾ ಸರ್ವಕಾಮಧುಕ್।।
ಸಂಗ್ರಾಮ ಭೂಮಿಯ ಮೇಲೆ ಆವೇಗದಿಂದ ಬೀಳುವ ರಕ್ತವೇ ಹೋತೃವಿನ ಸರ್ವಕಾಮಗಳನ್ನೂ ನೀಡಬಲ್ಲ ಈ ಯಜ್ಞದ ಸಮೃದ್ಧ ಪೂರ್ಣಾಹುತಿಯು.
12099022a ಚಿಂಧಿ ಭಿಂಧೀತಿ ಯಸ್ಯೈತಚ್ಚ್ರೂಯತೇ ವಾಹಿನೀಮುಖೇ।
12099022c ಸಾಮಾನಿ ಸಾಮಗಾಸ್ತಸ್ಯ ಗಾಯಂತಿ ಯಮಸಾದನೇ।।
ವಾಹಿನೀಮುಖದಲ್ಲಿ ಕೇಳಿಬರುವ ಕತ್ತರಿಸು! ಒಡೆದುಹಾಕು! ಎಂಬ ಕೂಗುಗಳೇ ಯಮಸಾದನದಲ್ಲಿ ಸಾಮಗರು ಹಾಡುವ ಸಾಮಗಳು.
12099023a ಹವಿರ್ಧಾನಂ ತು ತಸ್ಯಾಹುಃ ಪರೇಷಾಂ ವಾಹಿನೀಮುಖಮ್।
12099023c ಕುಂಜರಾಣಾಂ ಹಯಾನಾಂ ಚ ವರ್ಮಿಣಾಂ ಚ ಸಮುಚ್ಚಯಃ।
12099023e ಅಗ್ನಿಃ ಶ್ಯೇನಚಿತೋ ನಾಮ ತಸ್ಯ ಯಜ್ಞೇ ವಿಧೀಯತೇ।।
ಶತ್ರುಸೇನೆಯ ಮುಂಭಾಗವೇ ಹವಿಸ್ಸನ್ನು ನೀಡುವ ಸ್ಥಳ ಹವಿರ್ಧಾನ ಎಂದು ಹೇಳುತ್ತಾರೆ. ಆನೆಗಳು, ಕುದುರೆಗಳು ಮತ್ತು ಕವಚಧಾರಿಗಳ ಸಮುದಾಯವೇ ಆ ಯಜ್ಞದಲ್ಲಿ ಶ್ಯೇನಚಿತ ಎಂಬ ಹೆಸರಿನ ಅಗ್ನಿ ಎಂದು ತಿಳಿಯಬೇಕು.
12099024a ಉತ್ತಿಷ್ಠತಿ ಕಬಂಧೋಽತ್ರ ಸಹಸ್ರೇ ನಿಹತೇ ತು ಯಃ।
12099024c ಸ ಯೂಪಸ್ತಸ್ಯ ಶೂರಸ್ಯ ಖಾದಿರೋಽಷ್ಟಾಶ್ರಿರುಚ್ಯತೇ।।
ಸಹಸ್ರಾರು ಮಂದಿ ಹತರಾಗುತ್ತಿರಲು ಎದ್ದು ನಿಲುವ ಕಬಂಧವೇ ಆ ಶೂರನ ಎಂಟು ಕೋಣಗಳುಳ್ಳ ಕಗ್ಗಲೀ ಮರದ ಯೂಪಗಳು.
12099025a ಇಡೋಪಹೂತಂ ಕ್ರೋಶಂತಿ ಕುಂಜರಾ ಅಂಕುಶೇರಿತಾಃ।
12099025c ವ್ಯಾಘುಷ್ಟತಲನಾದೇನ ವಷಟ್ಕಾರೇಣ ಪಾರ್ಥಿವ।
12099025e ಉದ್ಗಾತಾ ತತ್ರ ಸಂಗ್ರಾಮೇ ತ್ರಿಸಾಮಾ ದುಂದುಭಿಃ ಸ್ಮೃತಃ।।
ಅಂಕುಶಗಳಿಂದ ಚುಚ್ಚಲ್ಪಟ್ಟ ಆನೆಗಳ ಆಕ್ರೋಶವೇ ಇಡೋಹ್ವಾನ. ಚಪ್ಪಾಳೆಗಳ ಶಬ್ದವೇ ವಷಟ್ಕಾರ. ಪಾರ್ಥಿವ! ಸಂಗ್ರಾಮದಲ್ಲಿ ಮೊಳಗುವ ದುಂದುಭಿಯೇ ತ್ರಿಸಾಮಗಳ ಉದ್ಗಾತವು.
12099026a ಬ್ರಹ್ಮಸ್ವೇ ಹ್ರಿಯಮಾಣೇ ಯಃ ಪ್ರಿಯಾಂ ಯುದ್ಧೇ ತನುಂ ತ್ಯಜೇತ್।
12099026c ಆತ್ಮಾನಂ ಯೂಪಮುಚ್ಚ್ರಿತ್ಯ ಸ ಯಜ್ಞೋಽನಂತದಕ್ಷಿಣಃ।।
ಬ್ರಾಹ್ಮಣನ ಸ್ವತ್ತನ್ನು ಅಪಹರಿಸಿಕೊಂಡು ಹೋಗುತ್ತಿರುವಾಗ ಯುದ್ಧದಲ್ಲಿ ಪ್ರಿಯ ತನುವನ್ನು ತ್ಯಜಿಸಿದವನು ದೇಹಸ್ವರೂಪವಾದ ಯೂಪವನ್ನು ಉತ್ಸರ್ಜನೆ ಮಾಡುವ ಯಜ್ಞದ ಅನಂತ ದಕ್ಷಿಣೆಯನ್ನು ಇತ್ತವನು.
12099027a ಭರ್ತುರರ್ಥೇ ತು ಯಃ ಶೂರೋ ವಿಕ್ರಮೇದ್ವಾಹಿನೀಮುಖೇ।
12099027c ಭಯಾನ್ನ ಚ ನಿವರ್ತೇತ ತಸ್ಯ ಲೋಕಾ ಯಥಾ ಮಮ।।
ಸ್ವಾಮಿಯ ಸಲುವಾಗಿ ವಾಹಿನೀಮುಖದಲ್ಲಿ ವಿಕ್ರಮದಿಂದ ಹೋರಾಡುವ ಮತ್ತು ಭಯದಿಂದ ಪಲಾಯನ ಮಾಡದಿದ್ದ ಶೂರನಿಗೆ ನನಗೆ ದೊರೆತ ಲೋಕಗಳೇ ದೊರೆಯುತ್ತವೆ.
12099028a ನೀಲಚಂದ್ರಾಕೃತೈಃ5 ಖಡ್ಗೈರ್ಬಾಹುಭಿಃ ಪರಿಘೋಪಮೈಃ।
12099028c ಯಸ್ಯ ವೇದಿರುಪಸ್ತೀರ್ಣಾ ತಸ್ಯ ಲೋಕಾ ಯಥಾ ಮಮ।।
ನೀಲಚಂದ್ರಾಕಾರದ ಖಡ್ಗಗಳು ಮತ್ತು ಪರಿಘೋಪಮ ಬಾಹುಗಳಿಂದ ಯಾರ ಯುದ್ಧವೇದಿಯು ತುಂಬಿಕೊಂಡಿರುವುದೋ ಅವನಿಗೆ ನನಗೆ ದೊರೆತ ಲೋಕಗಳೇ ದೊರೆಯುತ್ತವೆ.
12099029a ಯಸ್ತು ನಾವೇಕ್ಷತೇ ಕಂ ಚಿತ್ಸಹಾಯಂ ವಿಜಯೇ ಸ್ಥಿತಃ।
12099029c ವಿಗಾಹ್ಯ ವಾಹಿನೀಮಧ್ಯಂ ತಸ್ಯ ಲೋಕಾ ಯಥಾ ಮಮ।।
ಯಾರ ಸಹಾಯವನ್ನೂ ಅಪೇಕ್ಷಿಸದೇ ಶತ್ರುಸೇನೆಯ ಮಧ್ಯೆ ಹೊಕ್ಕು ವಿಜಯಕ್ಕಾಗಿ ಹೋರಾಡುವವನಿಗೆ ನನಗೆ ದೊರೆತ ಲೋಕಗಳೇ ದೊರೆಯುತ್ತವೆ.
12099030a ಯಸ್ಯ ತೋಮರಸಂಘಾಟಾ6 ಭೇರೀಮಂಡೂಕಕಚ್ಚಪಾ।
12099030c ವೀರಾಸ್ಥಿಶರ್ಕರಾ ದುರ್ಗಾ ಮಾಂಸಶೋಣಿತಕರ್ದಮಾ।।
12099031a ಅಸಿಚರ್ಮಪ್ಲವಾ ಸಿಂಧುಃ ಕೇಶಶೈವಲಶಾದ್ವಲಾ।
12099031c ಅಶ್ವನಾಗರಥೈಶ್ಚೈವ ಸಂಭಿನ್ನೈಃ ಕೃತಸಂಕ್ರಮಾ।।
12099032a ಪತಾಕಾಧ್ವಜವಾನೀರಾ ಹತವಾಹನವಾಹಿನೀ।
12099032c ಶೋಣಿತೋದಾ ಸುಸಂಪೂರ್ಣಾ ದುಸ್ತರಾ ಪಾರಗೈರ್ನರೈಃ।।
12099033a ಹತನಾಗಮಹಾನಕ್ರಾ ಪರಲೋಕವಹಾಶಿವಾ।
12099033c ಋಷ್ಟಿಖಡ್ಗಧ್ವಜಾನೂಕಾ ಗೃಧ್ರಕಘ್ಕವಡಪ್ಲವಾ।।
12099034a ಪುರುಷಾದಾನುಚರಿತಾ ಭೀರೂಣಾಂ ಕಶ್ಮಲಾವಹಾ।
12099034c ನದೀ ಯೋಧಮಹಾಯಜ್ಞೇ ತದಸ್ಯಾವಭೃಥಂ ಸ್ಮೃತಮ್।।
ಯೋಧನ ಯುದ್ಧರೂಪದ ಯಜ್ಞದಲ್ಲಿ ಪ್ರವಹಿಸುವ ರಕ್ತದ ನದಿಯೇ ಅವಭೃತಸ್ನಾನಕ್ಕೆ ಸಮಾನವಾಗಿದ್ದು ಪುಣ್ಯದಾಯಕವಾಗುತ್ತದೆ. ತೋಮರಗಳೇ ಅದರ ದಡಗಳು. ಭೇರಿಗಳೇ ಕಪ್ಪೆಗಳು ಮತ್ತು ಆಮೆಗಳು. ವೀರರ ಅಸ್ತಿಪಂಜರಗಳೇ ಆ ನದಿಯ ಬಂಡೆಗಳು. ಮಾಂಸ-ರಕ್ತಗಳ ಕೆಸರಿನಿಂದ ಆ ನದಿಯು ಅತ್ಯಂತ ದುರ್ಗಮವಾಗಿರುತ್ತದೆ. ಕತ್ತಿ -ಗುರಾಣಿಗಳು ಆ ಘೋರ ರಕ್ತನದಿಯ ನೌಕೆಗಳು. ವೀರರ ಕೇಶಗಳೇ ಹಸಿರು ಪಾಚಿಗಳು. ಕತ್ತರಿಸಲ್ಪಟ್ಟ ಸರ್ವತ್ರ ವ್ಯಾಪ್ತವಾದ ಆನೆ-ಕುದುರೆ-ರಥಗಳು ಆ ಘೋರ ನದಿಯನ್ನು ದಾಟುವ ಸೇತುವೆಗಳು. ಪತಾಕಾ-ಧ್ವಜಗಳು ನದಿಯಲ್ಲಿ ಬೆಳೆಯುವ ಜೊಂಡುಗಿಡಗಳು. ಆ ನದಿಯಲ್ಲಿ ಸತ್ತುಹೋದ ಆನೆಗಳು ತೇಲುತ್ತವೆ. ರಕ್ತವೇ ನೀರಾಗಿ ತುಂಬಿ ಹರಿಯುತ್ತಿರುವ ಆ ನದಿಯನ್ನು ದಾಟಿಹೋಗಲು ಇಚ್ಛಿಸುವ ಹೇಡಿ ಮನುಷ್ಯರಿಗೆ ಅದು ದುಸ್ತರವಾಗಿರುತ್ತದೆ. ಪರಲೋಕಕ್ಕೆ ಕೊಂಡೊಯ್ಯುವ ಆ ಮಂಗಳ ನದಿಯಲ್ಲಿ ಮೃತ ಮಹಾ ಆನೆಗಳೇ ಮೊಸಳೆಗಳು. ಋಷ್ಟಿ-ಖಡ್ಗಗಳೇ ಮಹಾ ನೌಕೆಗಳು. ಹದ್ದು-ಕಾಗೆಗಳು ದೋಣಿಗಳು. ನರಭಕ್ಷಕ ರಾಕ್ಷಸರು ಆ ನದಿಯ ಬಳಿ ಸುತ್ತಾಡುತ್ತಿರುತ್ತಾರೆ. ಹೇಡಿಗಳ ಬುದ್ಧಿಭ್ರಮೆಯನ್ನು ಹೋಗಲಾಡಿಸುವ ಸಂಗ್ರಾಮದಲ್ಲಿ ಹರಿಯುವ ಆ ನದಿಯೇ ರಣಯಜ್ಞದ ಅವಭೃತ ಸ್ನಾನ ಎಂದು ಹೇಳುತ್ತಾರೆ.
12099035a ವೇದೀ ಯಸ್ಯ ತ್ವಮಿತ್ರಾಣಾಂ ಶಿರೋಭಿರವಕೀರ್ಯತೇ।
12099035c ಅಶ್ವಸ್ಕಂಧೈರ್ಗಜಸ್ಕಂಧೈಸ್ತಸ್ಯ ಲೋಕಾ ಯಥಾ ಮಮ।।
ಯಾರ ವೇದಿಯಲ್ಲಿ ಶತ್ರುಗಳ ತಲೆಗಳು, ಕುದುರೆಗಳ ಸ್ಕಂಧಗಳು ಮತ್ತು ಆನೆಗಳ ಕುಂಭಸ್ಥಳಗಳು ಹರಡಿರುವವೋ ಅವನಿಗೆ ನನಗೆ ದೊರಕಿದ ಲೋಕಗಳಂಥಹವೇ ದೊರಕುವುದು.
12099036a ಪತ್ನೀಶಾಲಾ ಕೃತಾ ಯಸ್ಯ ಪರೇಷಾಂ ವಾಹಿನೀಮುಖಮ್।
12099036c ಹವಿರ್ಧಾನಂ ಸ್ವವಾಹಿನ್ಯಸ್ತದಸ್ಯಾಹುರ್ಮನೀಷಿಣಃ।।
ಶತ್ರುಗಳ ಸೇನಾಮುಖವನ್ನೇ ಪತ್ನೀಶಾಲೆಯನ್ನಾಗಿ ಮಾಡಿಕೊಳ್ಳುವವನ ಮತ್ತು ತನ್ನ ಸೈನ್ಯದ ಮುಖ್ಯಭಾಗವನ್ನು ಹವಿರ್ಧಾನವನ್ನಾಗಿ ಮಾಡಿಕೊಳ್ಳುವವನಿಗೆ ನನ್ನದೇ ಲೋಕಗಳು ಪ್ರಾಪ್ತವಾಗುವವೆಂದು ವಿದ್ವಾಂಸರು ಹೇಳುತ್ತಾರೆ.
12099037a ಸದಶ್ಚಾಂತರಯೋಧಾ7ಗ್ನಿರಾಗ್ನೀಧ್ರಶ್ಚೋತ್ತರಾಂ ದಿಶಮ್।
12099037c ಶತ್ರುಸೇನಾಕಲತ್ರಸ್ಯ ಸರ್ವಲೋಕಾನದೂರತಃ।।
ದಕ್ಷಿಣ ದಿಕ್ಕಿನಲ್ಲಿರುವ ಯೋಧರು ಯಾರ ರಣಯಜ್ಞದಲ್ಲಿ ಸದಸ್ಯರಾಗಿರುವರೋ ಮತ್ತು ಉತ್ತರ ದಿಕ್ಕಿನವರು ಋತ್ವಿಜರಾಗಿರುವರೋ ಮತ್ತು ಶತ್ರುಸೇನೆಯೇ ಯಾರ ಪತ್ನಿಸ್ಥಾನದಲ್ಲಿರುವುದೋ ಅವನಿಗೆ ಸಮಸ್ತಲೋಕಗಳೂ ಹತ್ತಿರದಲ್ಲಿಯೇ ಇರುತ್ತವೆ.
12099038a ಯದಾ ತೂಭಯತೋ ವ್ಯೂಹೋ ಭವತ್ಯಾಕಾಶಮಗ್ರತಃ।
12099038c ಸಾಸ್ಯ ವೇದೀ ತಥಾ ಯಜ್ಞೇ ನಿತ್ಯಂ ವೇದಾಸ್ತ್ರಯೋಽಗ್ನಯಃ।।
ಎರಡು ಸೇನಾವ್ಯೂಹಗಳ ಮಧ್ಯೆ ಇರುವ ಆಕಾಶವೇ ಆ ಯಜ್ಞದ ವೇದಿಯಾಗುತ್ತದೆ ಮತ್ತು ಅಲ್ಲಿ ನಿತ್ಯವೂ ವೇದಗಳೂ ಮೂರು ಅಗ್ನಿಗಳೂ ಇರುತ್ತವೆ.
12099039a ಯಸ್ತು ಯೋಧಃ ಪರಾವೃತ್ತಃ ಸಂತ್ರಸ್ತೋ ಹನ್ಯತೇ ಪರೈಃ।
12099039c ಅಪ್ರತಿಷ್ಠಂ ಸ ನರಕಂ ಯಾತಿ ನಾಸ್ತ್ಯತ್ರ ಸಂಶಯಃ।।
ಭಯಭೀತನಾಗಿ ಶತ್ರುಗಳಿಗೆ ಬೆನ್ನುತೋರಿಸಿ ಪಲಾಯನ ಮಾಡುವ ಮತ್ತು ಅದೇ ಸಮಯದಲ್ಲಿ ಶತ್ರುಗಳಿಂದ ಕೊಲ್ಲಲ್ಪಡುವವನು ಮತ್ತೆಲ್ಲಿಯೂ ನಿಲ್ಲದೇ ನೇರವಾಗಿ ನರಕದಲ್ಲಿಯೇ ಬೀಳುತ್ತಾನೆ. ಇದರಲ್ಲಿ ಸಂಶಯವೇ ಇಲ್ಲ.
12099040a ಯಸ್ಯ ಶೋಣಿತವೇಗೇನ ನದೀ ಸ್ಯಾತ್ಸಮಭಿಪ್ಲುತಾ।
12099040c ಕೇಶಮಾಂಸಾಸ್ಥಿಸಂಕೀರ್ಣಾ ಸ ಗಚ್ಚೇತ್ಪರಮಾಂ ಗತಿಮ್।।
ಯಾರ ರಕ್ತನದಿಯ ವೇಗದಿಂದ ವೇದಿಯು ಮುಳುಗುವುದೋ ಮತ್ತು ಯಾರ ಕೇಶ-ಮಾಂಸ-ಅಸ್ಥಿಗಳಿಂದ ವೇದಿಯು ತುಂಬಿಹೋಗುವುದೋ ಅವನು ಪರಮ ಗತಿಯನ್ನು ಹೊಂದುತ್ತಾನೆ.
12099041a ಯಸ್ತು ಸೇನಾಪತಿಂ ಹತ್ವಾ ತದ್ಯಾನಮಧಿರೋಹತಿ।
12099041c ಸ ವಿಷ್ಣುವಿಕ್ರಮಕ್ರಾಮೀ ಬೃಹಸ್ಪತಿಸಮಃ ಕ್ರತುಃ8।।
ಶತ್ರುಸೇನಾಪತಿಯನ್ನು ಸಂಹರಿಸಿ ಅವನ ರಥವನ್ನೇರುವವನ ನಡುಗೆಯನ್ನು ವಿಷ್ಣುವಿಕ್ರಮಿಯೆಂದೂ, ಕ್ರತುವನ್ನು ಬೃಹಸ್ಪತಿಯ ಸಮಾನವೆಂದೂ ಹೇಳುತ್ತಾರೆ.
12099042a ನಾಯಕಂ ವಾ ಪ್ರಮಾಣಂ ವಾ ಯೋ ವಾ ಸ್ಯಾತ್ತತ್ರ ಪೂಜಿತಃ9।
12099042c ಜೀವಗ್ರಾಹಂ ನಿಗೃಹ್ಣಾತಿ ತಸ್ಯ ಲೋಕಾ ಯಥಾ ಮಮ।।
ಶತ್ರುಪಕ್ಷದ ನಾಯಕನನ್ನಾಗಲೀ, ಅಥವಾ ಅವನ ಮಗನನ್ನೋ ಅಥವಾ ಅವರಲ್ಲಿಯೇ ಸಮ್ಮಾನಿತನಾದೊಬ್ಬನನ್ನು ಜೀವಂತ ಬಂಧಿಸುವವನಿಗೆ ನನ್ನ ಲೋಕಗಳಿಗೆ ಸಮಾನ ಲೋಕಗಳು ದೊರೆಯುತ್ತವೆ.
12099043a ಆಹವೇ ನಿಹತಂ ಶೂರಂ ನ ಶೋಚೇತ ಕದಾ ಚನ।
12099043c ಅಶೋಚ್ಯೋ ಹಿ ಹತಃ ಶೂರಃ ಸ್ವರ್ಗಲೋಕೇ ಮಹೀಯತೇ।।
ಯುದ್ಧದಲ್ಲಿ ಹತನಾದ ಶೂರನ ಕುರಿತು ಎಂದೂ ಶೋಕಿಸಬಾರದು. ಅಶೋಚ್ಯನಾದ ಆ ಹತಶೂರನು ಸರ್ಗಲೋಕದಲ್ಲಿ ಮೆರೆಯುತ್ತಾನೆ.
12099044a ನ ಹ್ಯನ್ನಂ ನೋದಕಂ ತಸ್ಯ ನ ಸ್ನಾನಂ ನಾಪ್ಯಶೌಚಕಮ್।
12099044c ಹತಸ್ಯ ಕರ್ತುಮಿಚ್ಚಂತಿ ತಸ್ಯ ಲೋಕಾನ್ ಶೃಣುಷ್ವ ಮೇ।।
ಯುದ್ಧದಲ್ಲಿ ಮಡಿದರವರಿಗೆ ಶ್ರಾದ್ಧತರ್ಪಣಗಳನ್ನು ಮಾಡಬೇಕಾಗಿಲ್ಲ. ಅವರ ಬಂಧುಗಳಿಗೆ ಸ್ನಾನಾದಿಗಳನ್ನು ಮಾಡಬೇಕಾಗುವುದಿಲ್ಲ ಏಕೆಂದರೆ ಅವರು ಅಶೌಚಿಗಳಾಗುವುದಿಲ್ಲ. ಯುದ್ಧದಲ್ಲಿ ಹತನಾದವನಿಗೆ ಎಂತಹ ಲೋಕಗಳು ಲಭಿಸುತ್ತವೆ ಎನ್ನುವುದನ್ನು ಹೇಳುತ್ತೇನೆ. ಕೇಳು.
12099045a ವರಾಪ್ಸರಃಸಹಸ್ರಾಣಿ ಶೂರಮಾಯೋಧನೇ ಹತಮ್।
12099045c ತ್ವರಮಾಣಾ ಹಿ ಧಾವಂತಿ ಮಮ ಭರ್ತಾ ಭವೇದಿತಿ।।
ಯುದ್ಧದಲ್ಲಿ ಹತನಾದ ಶೂರನನ್ನು ಸಹಸ್ರಾರು ಸುಂದರ ಅಪ್ಸರೆಯರು ಇವನು ನನ್ನ ಪತಿಯಾಗಲಿ ಎಂದು ತ್ವರೆಮಾಡಿ ಓಡಿಬಂದು ಸುತ್ತುವರೆಯುತ್ತಾರೆ.
12099046a ಏತತ್ತಪಶ್ಚ ಪುಣ್ಯಂ ಚ ಧರ್ಮಶ್ಚೈವ ಸನಾತನಃ।
12099046c ಚತ್ವಾರಶ್ಚಾಶ್ರಮಾಸ್ತಸ್ಯ ಯೋ ಯುದ್ಧೇ ನ ಪಲಾಯತೇ10।।
ಯುದ್ಧದಲ್ಲಿ ಪ್ರಾಣಬಿಡುವುದೇ ಒಂದು ತಪಸ್ಸು. ಪುಣ್ಯಕಾರ್ಯ. ಇದು ಸನಾತನ ಧರ್ಮವೂ ಕೂಡ. ಯುದ್ಧದಿಂದ ಪಲಾಯನ ಮಾಡದಿರುವವನಿಗೆ ನಾಲ್ಕೂ ಆಶ್ರಮಗಳನ್ನು ಪಾಲಿಸಿದ ಪುಣ್ಯವು ಲಭ್ಯವಾಗುತ್ತದೆ.
12099047a ವೃದ್ಧಂ ಬಲಂ ನ ಹಂತವ್ಯಂ ನೈವ ಸ್ತ್ರೀ ನ ಚ ವೈ ದ್ವಿಜಃ11।
12099047c ತೃಣಪೂರ್ಣಮುಖಶ್ಚೈವ ತವಾಸ್ಮೀತಿ ಚ ಯೋ ವದೇತ್।।
ವೃದ್ಧರನ್ನೂ, ಬಾಲಕರನ್ನೂ ಮತ್ತು ಹಾಗೆಯೇ ಸ್ತ್ರೀಯರನ್ನೂ ದ್ವಿಜರನ್ನೂ ಕೊಲ್ಲಬಾರದು. ಬಾಯಿಯಲ್ಲಿ ಹುಲ್ಲುಕಡ್ಡಿಯನ್ನು ಕಚ್ಚಿಕೊಂಡು ನಾನು ನಿನ್ನವನು ಎಂದು ಹೇಳುವವನನ್ನೂ ಕೊಲ್ಲಬಾರದು.
12099048a ಅಹಂ12 ವೃತ್ರಂ ಬಲಂ ಪಾಕಂ ಶತಮಾಯಂ ವಿರೋಚನಮ್।
12099048c ದುರಾವಾರ್ಯಂ ಚ ನಮುಚಿಂ ನೈಕಮಾಯಂ ಚ ಶಂಬರಮ್।।
12099049a ವಿಪ್ರಚಿತ್ತಿಂ ಚ ದೈತೇಯಂ ದನೋಃ ಪುತ್ರಾಂಶ್ಚ ಸರ್ವಶಃ।
12099049c ಪ್ರಹ್ರಾದಂ ಚ ನಿಹತ್ಯಾಜೌ ತತೋ ದೇವಾಧಿಪೋಽಭವಮ್।।
ವೃತ್ರ, ಬಲ, ಪಾಕ, ನೂರಾರು ಮಾಯೆಗಳಿದ್ದ ವಿರೋಚನ, ತಡೆಯಲಸಾಧ್ಯನಾದ ನಮುಚಿ, ಮಾಯಾವಿಶಾರದ ಶಂಬರ, ದೈತ್ಯ ವಿಪ್ರಚಿತ್ತಿ, ದನುವಿನ ಪುತ್ರರಾದ ಎಲ್ಲ ದಾನವರನ್ನೂ, ಪ್ರಹ್ರಾದನನ್ನೂ ಯುದ್ಧದಲ್ಲಿ ಸಂಹರಿಸಿಯೇ ನಾನು ದೇವಾಧಿಪನಾಗಿದ್ದೇನೆ.””
12099050 ಭೀಷ್ಮ ಉವಾಚ।
12099050a ಇತ್ಯೇತಚ್ಚಕ್ರವಚನಂ ನಿಶಮ್ಯ ಪ್ರತಿಗೃಹ್ಯ ಚ।
12099050c ಯೋಧಾನಾಮಾತ್ಮನಃ ಸಿದ್ಧಿಮಂಬರೀಷೋಽಭಿಪನ್ನವಾನ್।।
ಭೀಷ್ಮನು ಹೇಳಿದನು: “ಅಂಬರೀಷನು ಹೀಗೆ ಹೇಳಿದ ಶಕ್ರನ ಮಾತನ್ನು ಕೇಳಿ ಸ್ವೀಕರಿಸಿ ವೀರಯೋಧರಿಗೆ ಸ್ವತಃಸಿದ್ಧಿಯು ಪ್ರಾಪ್ತವಾಗುವುದೆನ್ನುವುದನ್ನು ಮನಗಂಡನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಶಾಂತಿ ಪರ್ವಣಿ ರಾಜಧರ್ಮ ಪರ್ವಣಿ ಇಂದ್ರಾಂಬರೀಷಸಂವಾದೇ ನವನವತಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ರಾಜಧರ್ಮ ಪರ್ವದಲ್ಲಿ ಇಂದ್ರಾಂಬರೀಷಸಂವಾದ ಎನ್ನುವ ತೊಂಭತ್ತೊಂಭತ್ತನೇ ಅಧ್ಯಾಯವು.
-
ಇದರ ನಂತರ ಈ ಒಂದು ಅಧಿಕ ಶ್ಲೋಕವಿದೆ: ಯತ್ರ ಯತ್ರ ಹತಃ ಶೂರಃ ಶತ್ರುಭಿಃ ಪರಿವಾರಿತಃ। ಅಕ್ಷಯಾನ್ಲಭತೇ ಲೋಕಾನ್ಯದಿ ದೈನ್ಯಂ ನ ಸೇವತೇ।। (ಭಾರತ ದರ್ಶನ/ಗೀತಾ ಪ್ರೆಸ್). ↩︎
-
ದಕ್ಷಿಣಾತ್ಯ ಪಾಠದಲ್ಲಿ ಇದಕ್ಕೆ ಮೊದಲು ಈ 23 ಅಧಿಕ ಶ್ಲೋಕಗಳಿವೆ: ಐಶ್ವರ್ಯಮೀದೃಶಂ ಪ್ರಾಪ್ತಃ ಸರ್ವದೇವೈಃ ಸುದರ್ಲಭಮ್। ಶಕ್ರ ಉವಾಚ। ಯದನೇನ ಕೃತಂ ಕರ್ಮ ಪ್ರತ್ಯಕ್ಷಂ ತೇ ಮಹೀಪತೇ। ಪುರಾ ಪಾಲಯತಃ ಸಮ್ಯಕ್ ಪೃಥಿವೀಂ ಧರ್ಮತೋ ನೃಪ।। ಶತ್ರವೋ ನಿರ್ಜಿತಾಃ ಸರ್ವೇ ಯೇ ತವಾಹಿತಕಾರಿಣಃ। ಸಂಯಮೋ ವಿಯಮಶ್ಚೈವ ಸುಯಮಶ್ಚ ಮಹಾಬಲಃ।। ರಾಕ್ಷಸಾ ದುರ್ಜಯಾ ಲೋಕೇ ತ್ರಯಸ್ತೇ ಯುದ್ಧದುರ್ಮದಾಃ। ಪುತ್ರಾಸ್ತೇ ಶತಶೃಂಗಸ್ಯ ರಾಕ್ಷಸಸ್ಯ ಮಹೀಪತೇ।। ಅಥ ತಸ್ಮಿನ್ ಶುಭೇ ಕಾಲೇ ತವ ಯಜ್ಞಂ ವಿತನ್ವತಃ। ಅಶ್ವಮೇಧಂ ಮಹಾಯಾಗಂ ದೇವಾನಾಂ ಹಿತಕಾಮ್ಯಯಾ।। ತಸ್ಯ ತೇ ಖಲು ವಿಘ್ನಾರ್ಥಂ ಆಗತಾ ರಾಕ್ಷಸಾಸ್ತ್ರಯಃ। ಕೋಟೀಶತಪರೀವಾರಾಂ ರಾಕ್ಷಸಾನಾಂ ಮಹಾಚಮೂಮ್।। ಪರಿಗೃಹ್ಯ ತತಃ ಸರ್ವಾಃ ಪ್ರಜಾ ಬಂದೀಕ್ರೂತಾಸ್ತವ। ವಿಹ್ವಲಾಶ್ಚ ಪ್ರಜಾಃ ಸರ್ವಾಃ ಚ ತವ ಸೈನಿಕಾಃ। ನಿರಾಕೃತಸ್ತ್ವಯಾ ಚಾಸೀತ್ಸುದೇವಃ ಸೈನ್ಯನಾಯಕಃ। ತತ್ರಾಮಾತ್ಯವಚಃ ಶ್ರುತ್ವಾ ನಿರಸ್ತಃ ಸರ್ವಕರ್ಮಸು।। ಶ್ರುತ್ವಾ ತೇಷಾಂ ವಚೋ ಭೂಯಃ ಸೋಪಧಂ ವಸುಧಾಧಿಪ। ಸರ್ವಸೈನ್ಯಸಮಾಯುಕ್ತಃ ಸುದೇವಃ ಪ್ರೇರಿತಸ್ತ್ವಯಾ।। ರಾಕ್ಷಸಾನಾಂ ವಧಾರ್ಥಾಯ ದುರ್ಜಯಾನಾಂ ನರಾಧಿಪ। ನಾಜಿತ್ವಾ ರಾಕ್ಷಸೀಂ ಸೇನಾಂ ಪುನರಾಗಮನಂ ತವ।। ಬಂದೀಮೋಕ್ಷಮಕೃತ್ವಾ ಚ ನ ಚಾಗಮನಮಿಷ್ಯತೇ। ಸುದೇವಸ್ತದ್ವಚಃ ಶ್ರುತ್ವಾ ಪ್ರಸ್ಥಾನಮಕರೋನ್ನೃಪ।। ಸಂಪ್ರಾಪ್ತಶ್ಚ ಸ ತಂ ದೇಶಂ ಯತ್ರ ಬಂದೀಕೃತಾಃ ಪ್ರಜಾಃ। ಪಶ್ಯತಿ ಸ್ಮ ಮಹಾಘೋರಂ ರಾಕ್ಷಸಾನಾಂ ಮಹಾಚಮೂಮ್।। ದೃಷ್ಟ್ವಾ ಸಂಚಿಂತಯಾಮಾಸ ಸುದೇವೋ ವಾಹಿನೀಪತಿಃ। ನೇಯಂ ಶಕ್ಯಾ ಚಮೂರ್ಜೇತುಮಪಿ ಸೇಂದ್ರೈಃ ಸುರಾಸುರೈಃ।। ನಾಂಬರೀಷಃ ಕಲಾಮೇಕಾಮೇಷಾಂ ಕ್ಷಪಯಿತುಂ ಕ್ಷಮಃ। ದಿವ್ಯಾಸ್ತ್ರಬಲಭೂಯಿಷ್ಠಃ ಕಿಮಹಂ ಪುನರೀದೃಶಃ।। ತತಃ ಸೇನಾಂ ಪುನಃ ಸರ್ವಾಂ ಪ್ರೇಷಯಾಮಾಸ ಪಾರ್ಥಿವ। ಯತ್ರ ತ್ವಂ ಸಹಿತಃ ಸರ್ವೈರ್ಮಂತ್ರಿಭಿಃ ಸೋಪಧೈರ್ನೃಪ।। ತತೋ ರುದ್ರಂ ಮಹಾದೇವಂ ಪ್ರಪನ್ನೋ ಜಗತಃ ಪತಿಮ್। ಶ್ಮಶಾನನಿಲಯಂ ದೇವಂ ತುಷ್ಟಾವ ವೃಷಭಧ್ವಜಮ್।। ಸ್ತುತ್ವಾ ಶಸ್ತ್ರಂ ಸಮಾದಾಯ ಸ್ವಶಿರಶ್ಛೇತ್ತುಮುದ್ಯತಃ। ಕಾರುಣ್ಯಾದ್ದೇವದೇವೇನ ಗೃಹೀತಸ್ತಸ್ಯ ದಕ್ಷಿಣಃ।। ಸಪಾಣಿಃ ಸಹ ಶಸ್ತ್ರೇಣ ದೃಷ್ಟ್ವಾ ಚೇದಮುವಾಚ ಹ। ರುದ್ರ ಉವಾಚ। ಕಿಮಿದಂ ಸಾಹಸಂ ಪುತ್ರ ಕರ್ತುಕಾಮೋ ವದಸ್ವ ಮೇ। ಇಂದ್ರ ಉವಾಚ। ಸ ಉವಾಚ ಮಹಾದೇವಂ ಶಿರಸಾ ತ್ವವನೀಂ ಗತಃ।। ಭಗವನ್ವಾಹಿನೀಮೇನಾಂ ರಾಕ್ಷಸಾನಾಂ ಸುರೇಶ್ವರ। ಅಶಕ್ತೋಽಹಂ ರಣೇ ಜೇತುಂ ತಸ್ಮಾತ್ ತ್ಯಕ್ಷ್ಯಾಮಿ ಜೀವಿತಮ್।। ಗತಿರ್ಭವ ಮಹಾದೇವ ಮಮಾರ್ತಸ್ಯ ಜಗತ್ಪತೇ। ನಾಗಂತವ್ಯಮಜಿತ್ವಾ ಚ ಮಾಮಾಹ ಜಗತೀಪತಿಃ।। ಅಂಬರೀಷೋ ಮಹಾದೇವ ಕ್ಷರಿತಃ ಸಚಿವೈಃ ಸಹ। ತಮುವಾಚ ಮಹಾದೇವಃ ಸುದೇವಂ ಪತಿತಂ ಕ್ಷಿತೌ। ಅಧೋಮುಖಂ ಮಹಾತ್ಮಾನಂ ಸತ್ತ್ವಾನಾಂ ಹಿತಕಾಮ್ಯಯಾ।। ಧನುರ್ವೇದಂ ಸಮಾಹೂಯ ಸಗುಣಂ ಸಹವಿಗ್ರಹಮ್। ರಥನಾಗಾಶ್ವಕಲಿಲಂ ದಿವ್ಯಾಸ್ತ್ರಸಮಲಂಕೃತಮ್।। ರಥಂ ಚ ಸುಮಹಾಭಾಗಂ ಯೇತ ತತ್ತ್ರಿಪುರಂ ಹತಮ್। ಧನುಃ ಪಿನಾಕಂ ಖಡ್ಗಂ ಚ ರೌದ್ರಮಸ್ತ್ರಂ ಚ ಶಂಕರಃ।। ನಿಜಘಾನಾಸುರಾನ್ಸರ್ವಾನ್ಯೇನ ದೇವಸ್ತ್ರಯಂಬಕಃ। ಉವಾಚ ಚ ಮಹಾದೇವಃ ಸುದೇವಂ ವಾಹಿನೀಪತಿಮ್।। ರುದ್ರ ಉವಾಚ। ರಥಾದಸ್ಮಾತ್ಸುದೇವ ತ್ವಂ ದುರ್ಜಯಸ್ತು ಸುರಾಸುರೈಃ। ಮಾಯಯಾ ಮಹಿತೋ ಭೂಮೌ ನ ಪದಂ ಕರ್ತುಮರ್ಹಸಿ।। ಅತ್ರಸ್ಥರ್ಸ್ತ್ರಿದಶಾನ್ಸರ್ವಾನ್ ಜ್ಯೇಷ್ಯಸೇ ಸರ್ವದಾನವಾನ್। ರಾಕ್ಷಸಾಶ್ಚ ಪಿಶಾಚಾಶ್ಚ ನ ಶಕ್ತಾದ್ರಷ್ಟುಮೀದೃಶಮ್।। ರಥಂ ಸೂರ್ಯಸಹಸ್ರಾಭಂ ಕಿಮು ಯೋದ್ಧುಂ ತ್ವಯಾ ಸಹ। ಇಂದ್ರ ಉವಾಚ। ಸ ಜಿತ್ವಾ ರಾಕ್ಷಸಾನ್ಸರ್ವಾನ್ ಕೃತ್ವಾಬಂದೀವಿಮೋಕ್ಷಣಮ್। ಘಾತಯಿತ್ವಾ ಚ ತಾನ್ಸರ್ವಾನ್ ಬಾಹುಯುದ್ಧೇತ್ವಯಂ ಹತಃ। ವಿಯಮಂ ಪ್ರಾಪ್ಯ ಭೂಪಾಲ ವಿಯಮಶ್ಚ ನಿಪಾತಿತಃ।। (ಗೀತಾ ಪ್ರೆಸ್). ↩︎
-
ರಾಜನಿಗೆ ಮಾತ್ರವೇ ಸಂಗ್ರಾಮಯಜ್ಞ ಮಾಡಲು ಅಧಿಕಾವಿದೆ ಎಂಬುದೇನೂ ಇಲ್ಲ. ರಾಜನ ಸೈನ್ಯದಲ್ಲಿರುವ ಒಬ್ಬ ಪದಾತಿಯೂ ಸಂಗ್ರಾಮಯಜ್ಞವನ್ನು ಮಾಡಬಹುದು. ಧರ್ಮಾನುಸಾರವಾಗಿ ಯುದ್ಧಮಾಡುತ್ತಾ ಶತ್ರುವಿಗೆ ಬೆನ್ನುತೋರಿಸದೇ ಕಡೆಯವರೆಗೂ ಯುದ್ಧಮಾಡುತ್ತಿದ್ದು ಅಸುನೀಗುವುದೇ ಸಂಗ್ರಾಮಯಜ್ಞ. ಇದನ್ನು ವೀರರಾದವರೆಲ್ಲರೂ ಆಚರಿಸಬಹುದು (ಭಾರತ ದರ್ಶನ). ↩︎
-
ಶೃಗಾಲ (ಭಾರತ ದರ್ಶನ). ↩︎
-
ಯಜ್ಞದಲ್ಲಿ ಉಪಯೋಗಿಸುವ ಕತ್ತಿಯ ರೂಪದ ಆಯುಧ (ಭಾರತ ದರ್ಶನ). ↩︎
-
ನೀಲಚರ್ಮಾವೃತೈಃ (ಭಾರತ ದರ್ಶನ). ↩︎
-
ಶೋಣಿತಸಂಘಾತಾ (ಭಾರತ ದರ್ಶನ). ↩︎
-
ಸದಸ್ಯಾ ದಕ್ಷಿಣಾ ಯೋಧಾ (ಭಾರತ ದರ್ಶನ). ↩︎
-
ಪ್ರಭುಃ (ಭಾರತ ದರ್ಶನ). ↩︎
-
ನಾಯಕಂ ತತ್ಕುಮಾರಂ ವಾ ಯೋ ವಾ ಸ್ಯಾದ್ಯತ್ರ ಪೂಜಿತಃ। (ಭಾರತ ದರ್ಶನ). ↩︎
-
ಯೋ ಯುದ್ಧಮನುಪಾಲಯೇತ್। (ಭಾರತ ದರ್ಶನ). ↩︎
-
ವೃದ್ಧಬಾಲೌ ನ ಹಂತವ್ಯೌ ನ ಚ ಸ್ತ್ರೀ ನೈವ ಪೃಷ್ಠತಃ। (ಭಾರತ ದರ್ಶನ). ↩︎