ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ರಾಜಧರ್ಮ ಪರ್ವ
ಅಧ್ಯಾಯ 95
ಸಾರ
ವಾಮದೇವನು ರಾಜ ಮತ್ತು ರಾಜ್ಯದ ಹಿತದ ಕುರಿತು ಮಾತನಾಡಿದುದು (1-13).
12095001 ವಾಮದೇವ ಉವಾಚ।
12095001a ಅಯುದ್ಧೇನೈವ ವಿಜಯಂ ವರ್ಧಯೇದ್ವಸುಧಾಧಿಪಃ।
12095001c ಜಘನ್ಯಮಾಹುರ್ವಿಜಯಂ ಯೋ ಯುದ್ಧೇನ ನರಾಧಿಪ।।
ವಾಮದೇವನು ಹೇಳಿದನು: “ವಸುಧಾಧಿಪನು ಯುದ್ಧ ಮಾಡದೆಯೇ ವಿಜಯವನ್ನು ಗಳಿಸಬೇಕು. ನರಾಧಿಪ! ಯುದ್ಧಮಾಡಿ ವಿಜಯವನ್ನು ಗಳಿಸುವುದು ಕೀಳುಮಟ್ಟದ ರಾಜನೀತಿಯೆಂದು ಹೇಳುತ್ತಾರೆ.
12095002a ನ ಚಾಪ್ಯಲಬ್ಧಂ ಲಿಪ್ಸೇತ ಮೂಲೇ ನಾತಿದೃಢೇ ಸತಿ।
12095002c ನ ಹಿ ದುರ್ಬಲಮೂಲಸ್ಯ ರಾಜ್ಞೋ ಲಾಭೋ ವಿಧೀಯತೇ।।
ರಾಜ್ಯದ ಮೂಲವು ದೃಢವಾಗಿಲ್ಲದೇ ಇದ್ದರೆ ಅಲಬ್ಧವಾದುದನ್ನು ಪಡೆದುಕೊಳ್ಳಲು ಬಯಸಬಾರದು. ಮೂಲವೇ ದುರ್ಬಲವಾಗಿದ್ದ ರಾಜನಿಗೆ ರಾಜ್ಯಲಾಭವಾಗುವುದಿಲ್ಲ.
12095003a ಯಸ್ಯ ಸ್ಫೀತೋ ಜನಪದಃ ಸಂಪನ್ನಃ ಪ್ರಿಯರಾಜಕಃ।
12095003c ಸಂತುಷ್ಟಪುಷ್ಟಸಚಿವೋ ದೃಢಮೂಲಃ ಸ ಪಾರ್ಥಿವಃ।।
ಯಾರ ಜನಪದವು ಸಂಪದ್ಭರಿತವಾಗಿದೆಯೋ, ಧನಧಾನ್ಯಗಳಿಂದ ಸಂಪನ್ನವಾಗಿದೆಯೋ ಮತ್ತು ಪ್ರಜೆಗಳು ರಾಜನನ್ನು ಪ್ರೀತಿಸುತ್ತಾರೋ ಹಾಗೂ ಯಾರಿಗೆ ಸಂತುಷ್ಟರೂ ಪುಷ್ಟರೂ ಆದ ಸಚಿವರು ಇರುವರೋ ಆ ಪಾರ್ಥಿವನ ಮೂಲವು ದೃಢವಾಗಿರುತ್ತದೆ.
12095004a ಯಸ್ಯ ಯೋಧಾಃ ಸುಸಂತುಷ್ಟಾಃ ಸಾಂತ್ವಿತಾಃ ಸೂಪಧಾಸ್ಥಿತಾಃ।
12095004c ಅಲ್ಪೇನಾಪಿ ಸ ದಂಡೇನ ಮಹೀಂ ಜಯತಿ ಭೂಮಿಪಃ।।
ಯಾರ ಯೋಧರು ಸಂತುಷ್ಟರಾಗಿರುವರೋ, ರಾಜನಿಂದ ಸಾಂತ್ವನವನ್ನು ಪಡೆಯುವರೋ, ಮತ್ತು ಶತ್ರುಗಳನ್ನು ವಂಚಿಸುವುದರಲ್ಲಿ ಚತುರರೋ ಅಂತಹ ರಾಜನು ಅಲ್ಪಸೈನ್ಯದಿಂದಲೇ ಭೂಮಂಡಲವನ್ನು ಜಯಿಸಲು ಸಮರ್ಥನಾಗುತ್ತಾನೆ.
12095005a ಪೌರಜಾನಪದಾ ಯಸ್ಯ ಸ್ವನುರಕ್ತಾಃ ಸುಪೂಜಿತಾಃ।
12095005c ಸಧನಾ ಧಾನ್ಯವಂತಶ್ಚ ದೃಢಮೂಲಃ ಸ ಪಾರ್ಥಿವಃ।।
ಯಾರ ನಗರ-ಗ್ರಾಮಗಳಲ್ಲಿ ವಾಸಿಸುವ ಜನರು ಸಮಸ್ತ ಜೀವಿಗಳ ಮೇಲೆ ದಯಾಪರರಾಗಿರುವರೋ ಧನವಂತರೂ ಧಾನವಂತರೂ ಆಗಿರುವರೋ ಆ ರಾಜನು ದೃಢಮೂಲನೆಂದು ಎನಿಸಿಕೊಳ್ಳುತ್ತಾನೆ.
12095006a ಪ್ರಭಾವಕಾಲಾವಧಿಕೌ1 ಯದಾ ಮನ್ಯೇತ ಚಾತ್ಮನಃ।
12095006c ತದಾ ಲಿಪ್ಸೇತ ಮೇಧಾವೀ ಪರಭೂಮಿಂ ಧನಾನ್ಯುತ।।
ತನ್ನ ಮೇಲ್ಗೈಯನ್ನು ತೋರಿಸಲು ಸರಿಯಾದ ಕಾಲವು ಬಂದಿದೆ ಎಂದು ತಿಳಿದೇ ಮೇಧಾವೀ ರಾಜನು ಶತ್ರುವಿನ ಭೂಮಿ-ಧನವನ್ನು ಪಡೆದುಕೊಳ್ಳಲು ಪ್ರಯತ್ನಿಸಬೇಕು.
12095007a ಭೋಗೇಷ್ವದಯಮಾನಸ್ಯ ಭೂತೇಷು ಚ ದಯಾವತಃ।
12095007c ವರ್ಧತೇ ತ್ವರಮಾಣಸ್ಯ ವಿಷಯೋ ರಕ್ಷಿತಾತ್ಮನಃ।।
ಯಾರ ಬೋಗ-ವೈಭವಗಳು ದಿನದಿನಕ್ಕೂ ಅಭಿವೃದ್ಧಿಯನ್ನು ಹೊಂದುತ್ತಿವೆಯೋ, ಯಾರು ಸಕಲಜೀವಿಗಳಲ್ಲಿಯೂ ದಯಾವಂತನಾಗಿರುವನೋ ಮತ್ತು ಯಾರು ತನ್ನನ್ನು ತಾನು ರಕ್ಷಿಸಿಕೊಂಡಿರುವನೋ ಆ ರಾಜನ ರಾಜ್ಯವು ಬೇಗನೇ ವೃದ್ಧಿಯಾಗುತ್ತದೆ.
12095008a ತಕ್ಷತ್ಯಾತ್ಮಾನಮೇವೈಷ ವನಂ ಪರಶುನಾ ಯಥಾ।
12095008c ಯಃ ಸಮ್ಯಗ್ವರ್ತಮಾನೇಷು ಸ್ವೇಷು ಮಿಥ್ಯಾ ಪ್ರವರ್ತತೇ।।
ಸದಾಚಾರಿಗಳಾದ ತನ್ನವರೊಡನೆಯೇ ಸುಳ್ಳಾಗಿ ನಡೆದುಕೊಳ್ಳುವ ರಾಜನು ಮರದ ಕಾಂಡವಿರುವ ಕೊಡಲಿಯೇ ಅರಣ್ಯದ ಮರಗಳನ್ನು ಕತ್ತರಿಸುವಂತೆ ತನ್ನನ್ನೇ ತಾನು ವಿನಾಶಮಾಡಿಕೊಳ್ಳುತ್ತಾನೆ.
12095009a ನ ವೈ ದ್ವಿಷಂತಃ ಕ್ಷೀಯಂತೇ ರಾಜ್ಞೋ ನಿತ್ಯಮಪಿ ಘ್ನತಃ2।
12095009c ಕ್ರೋಧಂ ನಿಯಂತುಂ ಯೋ ವೇದ ತಸ್ಯ ದ್ವೇಷ್ಟಾ ನ ವಿದ್ಯತೇ।।
ದ್ವೇಷಿಗಳನ್ನು ನಿತ್ಯವೂ ನಾಶಪಡಿಸುತ್ತಿದ್ದರೂ ರಾಜನ ದ್ವೇಷಿಗಳು ಕಡಿಮೆಯಾಗುವುದಿಲ್ಲ. ಯಾರು ಕ್ರೋಧವನ್ನು ನಿಯಂತ್ರಿಸಿಕೊಳ್ಳುವುದನ್ನು ತಿಳಿದುಕೊಂಡಿರುವನೋ ಅವನಿಗೆ ದ್ವೇಷವೆಂಬುದೇ ಇರುವುದಿಲ್ಲ.
12095010a ಯದಾರ್ಯಜನವಿದ್ವಿಷ್ಟಂ ಕರ್ಮ ತನ್ನಾಚರೇದ್ಬುಧಃ।
12095010c ಯತ್ಕಲ್ಯಾಣಮಭಿಧ್ಯಾಯೇತ್ತತ್ರಾತ್ಮಾನಂ ನಿಯೋಜಯೇತ್।।
ಆರ್ಯಜನರು ಯಾವುದನ್ನು ಮಾಡಬಾರದೆಂದು ಹೇಳುತ್ತಾರೋ ಅದನ್ನು ತಿಳಿದವನು ಮಾಡಲೇ ಬಾರದು. ಯಾವುದು ಎಲ್ಲರಿಗೂ ಕಲ್ಯಾಣಕಾರಿಯೋ ಅದನ್ನೇ ಮಾಡಲು ರಾಜನು ಪ್ರಯತ್ನಿಸಬೇಕು.
12095011a ನೈನಮನ್ಯೇಽವಜಾನಂತಿ ನಾತ್ಮನಾ ಪರಿತಪ್ಯತೇ।
12095011c ಕೃತ್ಯಶೇಷೇಣ ಯೋ ರಾಜಾ ಸುಖಾನ್ಯನುಬುಭೂಷತಿ।।
ಯಾವ ರಾಜನು ತನ್ನ ಕರ್ತವ್ಯಗಳನ್ನು ಸಂಪೂರ್ಣವಾಗಿ ಮಾಡ? ನಂತರ ಸುಖವನ್ನನುಭವಿಸಲು ಇಚ್ಛಿಸುವನೋ ಅವನನ್ನು ಯಾರೂ ಅನಾದರಿಸುವುದಿಲ್ಲ. ರಾಜನೂ ಪರಿತಪಿಸಬೇಕಾಗಿರುವುದಿಲ್ಲ.
12095012a ಇದಂವೃತ್ತಂ ಮನುಷ್ಯೇಷು ವರ್ತತೇ ಯೋ ಮಹೀಪತಿಃ।
12095012c ಉಭೌ ಲೋಕೌ ವಿನಿರ್ಜಿತ್ಯ ವಿಜಯೇ ಸಂಪ್ರತಿಷ್ಠತೇ।।
ಯಾವ ಮಹೀಪತಿಯು ಮನುಷ್ಯರೊಡನೆ ಈ ರೀತಿ ವರ್ತಿಸುತ್ತಾನೋ ಅವನು ಎರಡೂ ಲೋಕಗಳನ್ನು ಜಯಿಸಿ ವಿಜಯದಲ್ಲಿ ನೆಲೆಸಿರುತ್ತಾನೆ.””
12095013 ಭೀಷ್ಮ ಉವಾಚ।
12095013a ಇತ್ಯುಕ್ತೋ ವಾಮದೇವೇನ ಸರ್ವಂ ತತ್ ಕೃತವಾನ್ನೃಪಃ।
12095013c ತಥಾ ಕುರ್ವಂಸ್ತ್ವಮಪ್ಯೇತೌ ಲೋಕೌ ಜೇತಾ ನ ಸಂಶಯಃ।।
ಭೀಷ್ಮನು ಹೇಳಿದನು: “ವಾಮದೇವನು ಹೀಗೆ ಹೇಳಲು ಅವೆಲ್ಲವನ್ನೂ ನೃಪನು ಮಾಡಿದನು. ನೀನೂ ಕೂಡ ಹಾಗೆಯೇ ನಡೆದುಕೊಂಡರೆ ಎರಡೂ ಲೋಕಗಳನ್ನು ಜಯಿಸುತ್ತೀಯೆ ಎನ್ನುವುದರಲ್ಲಿ ಸಂಶಯವಿಲ್ಲ.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಶಾಂತಿ ಪರ್ವಣಿ ರಾಜಧರ್ಮ ಪರ್ವಣಿ ವಾಮದೇವಗೀತಾಸು ಪಂಚನವತಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತ ಶಾಂತಿ ಪರ್ವದ ರಾಜಧರ್ಮ ಪರ್ವದಲ್ಲಿ ವಾಮದೇವಗೀತ ಎನ್ನುವ ತೊಂಭತ್ತೈದನೇ ಅಧ್ಯಾಯವು.