ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ರಾಜಧರ್ಮ ಪರ್ವ
ಅಧ್ಯಾಯ 94
ಸಾರ
ವಾಮದೇವನು ವಸುಮನಸನಿಗೆ ರಾಜೋಚಿತ ವ್ಯವಹಾರಗಳನ್ನು ವರ್ಣಿಸಿದುದು (1-38)
12094001 ವಾಮದೇವ ಉವಾಚ।
12094001a ಯತ್ರಾಧರ್ಮಂ ಪ್ರಣಯತೇ ದುರ್ಬಲೇ ಬಲವತ್ತರಃ।
12094001c ತಾಂ ವೃತ್ತಿಮುಪಜೀವಂತಿ ಯೇ ಭವಂತಿ ತದನ್ವಯಾಃ।।
ವಾಮದೇವನು ಹೇಳಿದನು: “ಯಾವ ರಾಜ್ಯದಲ್ಲಿ ಬಲಶಾಲೀ ರಾಜನು ದುರ್ಬಲರ ಮೇಲೆ ಬಲಾತ್ಕಾರವಾಗಿ ಅಧರ್ಮದಿಂದ ವರ್ತಿಸುವನೋ ಅವನ ವೃತ್ತಿಯನ್ನು ಅವನ ಅನುಯಾಯಿಗಳೂ ಕುಟುಂಬದವರೂ ಅನುಸರಿಸುತ್ತಾರೆ.
12094002a ರಾಜಾನಮನುವರ್ತಂತೇ ತಂ ಪಾಪಾಭಿಪ್ರವರ್ತಕಮ್।
12094002c ಅವಿನೀತಮನುಷ್ಯಂ ತತ್ ಕ್ಷಿಪ್ರಂ ರಾಷ್ಟ್ರಂ ವಿನಶ್ಯತಿ।।
ಅನುಯಾಯಿಗಳು ಪಾಪಪ್ರವರ್ತಕನಾದ ರಾಜನನ್ನೇ ಅನುಸರಿಸುತ್ತಾರೆ. ಈ ರೀತಿಯ ಉದ್ದಂಡ ಮನುಷ್ಯರಿಂದಲೇ ರಾಷ್ಟ್ರವು ಕ್ಷಿಪ್ರವಾಗಿ ವಿನಾಶ ಹೊಂದುತ್ತದೆ.
12094003a ಯದ್ವೃತ್ತಿಮುಪಜೀವಂತಿ ಪ್ರಕೃತಿಸ್ಥಸ್ಯ ಮಾನವಾಃ।
12094003c ತದೇವ ವಿಷಮಸ್ಥಸ್ಯ ಸ್ವಜನೋಽಪಿ ನ ಮೃಷ್ಯತೇ।।
ರಾಜನು ಸುಖದಿಂದಿರುವಾಗ ಅವನ ಅಧರ್ಮಕಾರ್ಯಗಳನ್ನು ಪ್ರೋತ್ಸಾಹಿಸಿ ಜೀವಿಸುತ್ತಿದ್ದ ಮಾನವರು ಅದೇ ರಾಜನು ವಿಷಮಸ್ಥಿತಿಯನ್ನು ಪಡೆದಾಗ, ಕುಟುಂಬದವರೇ ಆಗಿದ್ದರೂ, ಅವನನ್ನು ಸಹಿಸಿಕೊಳ್ಳುವುದಿಲ್ಲ.
12094004a ಸಾಹಸಪ್ರಕೃತಿರ್ಯತ್ರ ಕುರುತೇ ಕಿಂ ಚಿದುಲ್ಬಣಮ್।
12094004c ಅಶಾಸ್ತ್ರಲಕ್ಷಣೋ ರಾಜಾ ಕ್ಷಿಪ್ರಮೇವ ವಿನಶ್ಯತಿ।।
ಸಾಹಸ ಪ್ರಕೃತಿಯುಳ್ಳ ಮತು ಶಾಸ್ತ್ರಗಳಂತೆ ನಡೆದುಕೊಳ್ಳದೇ ಇರುವ ರಾಜನು ಸ್ವಲ್ಪವೇ ಸಾಹಸವನ್ನು ತೋರಿಸಿದರೂ ಕ್ಷಿಪ್ರವಾಗಿ ನಾಶಹೊಂದುತ್ತಾನೆ.
12094005a ಯೋಽತ್ಯಂತಾಚರಿತಾಂ ವೃತ್ತಿಂ ಕ್ಷತ್ರಿಯೋ ನಾನುವರ್ತತೇ।
12094005c ಜಿತಾನಾಮಜಿತಾನಾಂ ಚ ಕ್ಷತ್ರಧರ್ಮಾದಪೈತಿ ಸಃ।।
ಗೆದ್ದ ಮತ್ತು ಗೆಲ್ಲದೇ ಇದ್ದವರೊಡನೆ ಅತ್ಯಂತವಾಗಿ ಆಚರಿಸಬೇಕಾದ ಕ್ಷತ್ರಿಯ ವೃತ್ತಿಯನ್ನು ಯಾರು ಅನುಸರಿಸುವುದಿಲ್ಲವೋ ಅವನು ಕ್ಷತ್ರಿಯಧರ್ಮದಿಂದ ಚ್ಯುತನಾಗುತ್ತಾನೆ.
12094006a ದ್ವಿಷಂತಂ ಕೃತಕರ್ಮಾಣಂ ಗೃಹೀತ್ವಾ ನೃಪತೀ ರಣೇ।
12094006c ಯೋ ನ ಮಾನಯತೇ ದ್ವೇಷಾತ್ ಕ್ಷತ್ರಧರ್ಮಾದಪೈತಿ ಸಃ।।
ಹಿಂದೆ ಉಪಕಾರ ಮಾಡಿದವನು ಈಗ ಶತ್ರುವಾಗಿ ರಣದಲ್ಲಿ ಸೆರೆಹಿಡಿಯಲ್ಪಟ್ಟರೆ ಯಾವ ನೃಪತಿಯು ಅವನನ್ನು ದ್ವೇಷದ ಕಾರಣದಿಂದ ಗೌರವಿಸುವುದಿಲವೋ ಅವನು ಕ್ಷತ್ರಿಯಧರ್ಮದಿಂದ ಚ್ಯುತನಾದಂತೆ.
12094007a ಶಕ್ತಃ ಸ್ಯಾತ್ಸುಮುಖೋ ರಾಜಾ ಕುರ್ಯಾತ್ಕಾರುಣ್ಯಮಾಪದಿ1।
12094007c ಪ್ರಿಯೋ ಭವತಿ ಭೂತಾನಾಂ ನ ಚ ವಿಭ್ರಶ್ಯತೇ ಶ್ರಿಯಃ।।
ರಾಜನಾದವನು ಶಕ್ತನಾಗಿರಬೇಕು. ಸುಮುಖನಾಗಿರಬೇಕು. ಆಪತ್ತು ಒದಗಿದವರಿಗೆ ಕರುಣೆಯನ್ನು ತೋರಿಸಬೇಕು. ಇರುವ ಜೀವಿಗಳಿಗೆ ಪ್ರಿಯನಾಗಿರಬೇಕು. ಅಂಥವನು ರಾಜ್ಯಶ್ರೀಯಿಂದ ಭ್ರಷ್ಟನಾಗುವುದಿಲ್ಲ.
12094008a ಅಪ್ರಿಯಂ ಯಸ್ಯ ಕುರ್ವೀತ ಭೂಯಸ್ತಸ್ಯ ಪ್ರಿಯಂ ಚರೇತ್।
12094008c ನಚಿರೇಣ ಪ್ರಿಯಃ ಸ ಸ್ಯಾದ್ಯೋಽಪ್ರಿಯಃ ಪ್ರಿಯಮಾಚರೇತ್।।
ಹಿಂದೆ ಯಾರಿಗೆ ಅಪ್ರಿಯವಾದುದನ್ನು ಮಾಡಿದ್ದನೋ ಅವನಿಗೆ ಪುನಃ ಪ್ರಿಯವಾದುದನ್ನು ಮಾಡಬೇಕು. ಹಾಗೆ ಮಾಡುವುದರಿಂದ ಸ್ವಲ್ಪವೇ ಸಮಯದಲ್ಲಿ ಅಪ್ರಿಯನಾದವನೂ ಪ್ರಿಯನಾಗುತ್ತಾನೆ.
12094009a ಮೃಷಾವಾದಂ ಪರಿಹರೇತ್ಕುರ್ಯಾತ್ ಪ್ರಿಯಮಯಾಚಿತಃ।
12094009c ನ ಚ ಕಾಮಾನ್ನ ಸಂರಂಭಾನ್ನ ದ್ವೇಷಾದ್ಧರ್ಮಮುತ್ಸೃಜೇತ್।।
ಸುಳ್ಳುಹೇಳುವುದನ್ನು ಸಂಪೂರ್ಣವಾಗಿ ಬಿಡಬೇಕು. ಯಾಚನೆ ಮಾಡದಿದ್ದರೂ ಪ್ರಿಯವಾದುದನ್ನೇ ಮಾಡಬೇಕು. ಕಾಮದಿಂದಾಗಲೀ ಕ್ರೋಧದಿಂದಾಗಲೀ ಅಥವಾ ದ್ವೇಷದಿಂದಾಗಲೀ ಧರ್ಮವನ್ನು ಬಿಡಬಾರದು.
12094010a 2ನಾಪತ್ರಪೇತ ಪ್ರಶ್ನೇಷು ನಾಭಿಭವ್ಯಾಂ ಗಿರಂ ಸೃಜೇತ್। 12094010c ನ ತ್ವರೇತ ನ ಚಾಸೂಯೇತ್ತಥಾ ಸಂಗೃಹ್ಯತೇ ಪರಃ।।
ಪ್ರಶ್ನಿಸಿದಾಗ ಉತ್ತರಿಸಲು ಸಂಕೋಚಪಡಬಾರದು. ಅಸಂಭವವಾದ ಮಾತುಗಳನ್ನು ಆಡಬಾರದು. ಅವಸರ ಮಾಡಬಾರದು. ಅಸೂಯೆಪಡಬಾರದು. ಆಗ ಶತ್ರುವನ್ನೂ ವಶಪಡಿಸಿಕೊಳ್ಳಬಹುದು.
12094011a ಪ್ರಿಯೇ ನಾತಿಭೃಶಂ ಹೃಷ್ಯೇದಪ್ರಿಯೇ ನ ಚ ಸಂಜ್ವರೇತ್।
12094011c ನ ಮುಹ್ಯೇದರ್ಥಕೃಚ್ಚ್ರೇಷು ಪ್ರಜಾಹಿತಮನುಸ್ಮರನ್।।
ಪ್ರಿಯವಾದುದು ನಡೆದಾಗ ಅತಿಯಾಗಿ ಹರ್ಷಿಸಬಾರದು. ಅಪ್ರಿಯವಾದುದು ನಡೆದಾಗ ಹೆಚ್ಚಾಗಿ ಚಿಂತಿಸಬಾರದು ಕೂಡ. ಹಣದ ಮುಗ್ಗಟ್ಟು ಒದಗಿ ಬಂದಾಗಿ ಪ್ರಜಾಹಿತವನ್ನು ಸ್ಮರಿಸಿಕೊಂಡು ಮೋಹಿತನಾಗಬಾರದು.
12094012a ಯಃ ಪ್ರಿಯಂ ಕುರುತೇ ನಿತ್ಯಂ ಗುಣತೋ ವಸುಧಾಧಿಪಃ।
12094012c ತಸ್ಯ ಕರ್ಮಾಣಿ ಸಿಧ್ಯಂತಿ ನ ಚ ಸಂತ್ಯಜ್ಯತೇ ಶ್ರಿಯಾ।।
ಗುಣವಂತನಾದ ಯಾವ ವಸುಧಾಧಿಪನು ನಿತ್ಯವೂ ಪ್ರಿಯವಾದುದನ್ನೇ ಮಾಡುತ್ತಾನೋ ಅವನ ಕರ್ಮಗಳು ಸಿದ್ಧಿಸುತ್ತವೆ. ಮತ್ತು ಶ್ರೀಯು ಅವನನ್ನು ತ್ಯಜಿಸುವುದಿಲ್ಲ.
12094013a ನಿವೃತ್ತಂ ಪ್ರತಿಕೂಲೇಭ್ಯೋ ವರ್ತಮಾನಮನುಪ್ರಿಯೇ।
12094013c ಭಕ್ತಂ ಭಜೇತ ನೃಪತಿಸ್ತದ್ವೈ ವೃತ್ತಂ ಸತಾಮಿಹ।।
ತನಗೆ ಪ್ರತಿಕೂಲವಾದನ್ನೇ ಮಾಡುವ ಮತ್ತು ನಿತ್ಯವೂ ಪ್ರಿಯವನ್ನೇ ಮಾಡುವ ಸೇವಕನ ಕುರಿತು ನೃಪತಿಯಾದವನು ಗಮನವಿಟ್ಟು ಅನುರಕ್ತನಾಗಿರಬೇಕು.
12094014a ಅಪ್ರಕೀರ್ಣೇಂದ್ರಿಯಂ ಪ್ರಾಜ್ಞಮತ್ಯಂತಾನುಗತಂ ಶುಚಿಮ್।
12094014c ಶಕ್ತಂ ಚೈವಾನುರಕ್ತಂ ಚ ಯುಂಜ್ಯಾನ್ಮಹತಿ ಕರ್ಮಣಿ।।
ರಾಜನಾದವನು ತನ್ನನ್ನು ಅತಿಯಾಗಿ ಅನುಸರಿಸಿ ನಡೆಯುತ್ತಿರುವ ಮತ್ತು ತನ್ನಲ್ಲಿಯೇ ಅನುರಕ್ತನಾಗಿರುವ ಜಿತೇಂದ್ರಿಯನೂ ಪ್ರಾಜ್ಞನೂ ಮತ್ತು ಶುಚಿಯೂ ಆದವನನ್ನು ದೊಡ್ಡ ದೊಡ್ಡ ಕೆಲಸಗಳಿಗೆ ನಿಯೋಜಿಸಬೇಕು,
12094015a ಏವಮೇವ ಗುಣೈರ್ಯುಕ್ತೋ ಯೋ ನ ರಜ್ಯತಿ ಭೂಮಿಪಮ್।
12094015c ಭರ್ತುರರ್ಥೇಷ್ವಸೂಯಂತಂ ನ ತಂ ಯುಂಜೀತ ಕರ್ಮಣಿ।।
ಈ ಗುಣಗಳಿಂದ ಕೂಡಿರುವ, ಭೂಮಿಪನನ್ನು ರಂಜಿಸಲು ಸಮರ್ಥನಾಗಿರುವ, ಒಡೆಯನ ಆರ್ಥಿಕ ವಿಷಯದಲ್ಲಿ ಅಪ್ರಮತ್ತನಾಗಿರದವನನ್ನು ಧನದ ವ್ಯವಸ್ಥೆಗೆ ನಿಯೋಜಿಸಬೇಕು.
12094016a ಮೂಢಮೈಂದ್ರಿಯಕಂ ಲುಬ್ಧಮನಾರ್ಯಚರಿತಂ ಶಠಮ್।
12094016c ಅನತೀತೋಪಧಂ ಹಿಂಸ್ರಂ ದುರ್ಬುದ್ಧಿಮಬಹುಶ್ರುತಮ್।।
12094017a ತ್ಯಕ್ತೋಪಾತ್ತಂ ಮದ್ಯರತಂ ದ್ಯೂತಸ್ತ್ರೀಮೃಗಯಾಪರಮ್।
12094017c ಕಾರ್ಯೇ ಮಹತಿ ಯೋ ಯುಂಜ್ಯಾದ್ಧೀಯತೇ ಸ ನೃಪಃ ಶ್ರಿಯಃ।।
ಮೂಢ, ಇಂದ್ರಿಯಲೋಲುಪ, ಲೋಭಿ, ದುರಾಚಾರಿ, ಶಠ, ಕಪಟಿ, ಹಿಂಸಕ, ದುರ್ಬುದ್ಧಿ, ಶಾಸ್ತ್ರಜ್ಞಾನಶೂನ್ಯ, ಸ್ವಭಾವತಃ ಉದಾತ್ತನಾಗಿಲ್ಲದವನು, ಮದ್ಯಪಾನಾಸಕ್ತ, ಜೂಜಾಡುವ ಸ್ತ್ರೀಲಂಪಟ ಮತ್ತು ಬೇಟೆಯಾಡುವುದರಲ್ಲಿಯೇ ಆಸಕ್ತಿಯಿರುವವನನ್ನು ಮಹತ್ವದ ಕಾರ್ಯಗಳಲ್ಲಿ ನಿಯಮಿಸುವ ರಾಜನು ಬಹಳ ಬೇಗ ಲಕ್ಷ್ಮಿಯಿಂದ ವಿಹೀನನಾಗುತ್ತಾನೆ.
12094018a ರಕ್ಷಿತಾತ್ಮಾ ತು ಯೋ ರಾಜಾ ರಕ್ಷ್ಯಾನ್ಯಶ್ಚಾನುರಕ್ಷತಿ।
12094018c ಪ್ರಜಾಶ್ಚ ತಸ್ಯ ವರ್ಧಂತೇ ಧ್ರುವಂ ಚ ಮಹದಶ್ನುತೇ।।
ಯಾವ ರಾಜನು ತನ್ನನ್ನು ರಕ್ಷಿಸಿಕೊಳ್ಳುತ್ತಾ ಪ್ರಜೆಗಳನ್ನು ರಕ್ಷಿಸುವನೋ ಅವನ ಪ್ರಜೆಗಳು ಅಭಿವೃದ್ಧಿ ಹೊಂದುತ್ತಾರೆ. ರಾಜನು ಮಹತ್ತಾದ ಫಲವನ್ನು ಪಡೆದುಕೊಳ್ಳುತ್ತಾನೆ.
12094019a ಯೇ ಕೇ ಚಿದ್ಭೂಮಿಪತಯಸ್ತಾನ್ಸರ್ವಾನನ್ವವೇಕ್ಷಯೇತ್।
12094019c ಸುಹೃದ್ಭಿರನಭಿಖ್ಯಾತೈಸ್ತೇನ ರಾಜಾ ನ ರಿಷ್ಯತೇ।।
ಯಾವ ರಾಜನು ತನ್ನ ಅಜ್ಞಾತರಾಗಿರುವ ಸುಹೃದರ ಮೂಲಕ ಸಮಸ್ತ ಭೂಪತಿಗಳ ವಿಷಯಗಳನ್ನೂ ತಿಳಿದುಕೊಳ್ಳುವನೋ ಅವನು ಎಲ್ಲ ರಾಜರನ್ನೂ ಅತಿಶಯಿಸುತ್ತಾನೆ.
12094020a ಅಪಕೃತ್ಯ ಬಲಸ್ಥಸ್ಯ ದೂರಸ್ಥೋಽಸ್ಮೀತಿ ನಾಶ್ವಸೇತ್।
12094020c ಶ್ಯೇನಾನುಚರಿತೈರ್ಹ್ಯೇತೇ ನಿಪತಂತಿ ಪ್ರಮಾದ್ಯತಃ।।
ಬಲಿಷ್ಠ ಶತ್ರುವಿಗೆ ತೊಂದರೆ ಕೊಟ್ಟು ಅವನು ನನಗೇನೂ ಮಾಡಲಾರ ಎಂದು ನಂಬಿ ರಾಜನು ನಿಶ್ಚಿಂತನಾಗಿರಬಾರದು. ಅವರು ಗಿಡುಗದಂತೆ ಅವನು ಅಜಾಗರೂಕನಾಗಿರುವಾಗಲೇ ಎರಗಿ ಬೀಳುತ್ತಾರೆ.
12094021a ದೃಢಮೂಲಸ್ತ್ವದುಷ್ಟಾತ್ಮಾ ವಿದಿತ್ವಾ ಬಲಮಾತ್ಮನಃ।
12094021c ಅಬಲಾನ್ ಅಭಿಯುಂಜೀತ ನ ತು ಯೇ ಬಲವತ್ತರಾಃ।।
ಅದುಷ್ಟಾತ್ಮ ರಾಜನು ರಾಷ್ಟ್ರದಲ್ಲಿ ತನ್ನ ಅಧಿಕಾರವನ್ನು ಭದ್ರಪಡಿಸಿಕೊಂಡು ತನ್ನ ಬಲವೇನು ಎಂದು ಚೆನ್ನಾಗಿ ಅರಿತುಕೊಂಡು ತನಗಿಂತಲೂ ದುರ್ಬಲರಾದವನ್ನು ಮಾತ್ರ ಆಕ್ರಮಿಸಬೇಕು. ತನಗಿಂತಲೂ ಬಲಿಷ್ಠನಾದವನ ಮೇಲೆ ಯುದ್ಧಕ್ಕೆ ಹೋಗಲೇ ಬಾರದು.
12094022a ವಿಕ್ರಮೇಣ ಮಹೀಂ ಲಬ್ಧ್ವಾ ಪ್ರಜಾ ಧರ್ಮೇಣ ಪಾಲಯನ್।
12094022c ಆಹವೇ ನಿಧನಂ ಕುರ್ಯಾದ್ರಾಜಾ ಧರ್ಮಪರಾಯಣಃ।।
ವಿಕ್ರಮದಿಂದ ಮಹಿಯನ್ನು ಪಡೆದುಕೊಂಡು, ಧರ್ಮದಿಂದ ಪ್ರಜೆಗಳನ್ನು ಪಾಲಿಸಿ, ಯುದ್ಧದಲ್ಲಿ ನಿಧನಹೊಂದುವ ರಾಜನು ಧರ್ಮಪರಾಯಣನು.
12094023a ಮರಣಾಂತಮಿದಂ ಸರ್ವಂ ನೇಹ ಕಿಂ ಚಿದನಾಮಯಮ್।
12094023c ತಸ್ಮಾದ್ಧರ್ಮೇ ಸ್ಥಿತೋ ರಾಜಾ ಪ್ರಜಾ ಧರ್ಮೇಣ ಪಾಲಯೇತ್।।
ಈ ಪ್ರಪಂಚದಲ್ಲಿ ಎಲ್ಲರೂ ಮರಣದಲ್ಲಿಯೇ ಅಂತ್ಯರಾಗುತ್ತಾರೆ. ಯಾರೂ ರೋಗರಹಿತರಾಗಿರುವುದಿಲ್ಲ ಅಥವಾ ಅವಿನಾಶಿಯಾಗಿರುವುದಿಲ್ಲ. ಆದುದರಿಂದ ರಾಜನಾದವನು ಧರ್ಮಮಾರ್ಗದಲ್ಲಿದ್ದುಕೊಂಡೇ ಪ್ರಜೆಗಳನ್ನು ಧರ್ಮದಿಂದ ಪರಿಪಾಲನೆ ಮಾಡಬೇಕು.
12094024a ರಕ್ಷಾಧಿಕರಣಂ ಯುದ್ಧಂ ತಥಾ ಧರ್ಮಾನುಶಾಸನಮ್।
12094024c ಮಂತ್ರಚಿಂತ್ಯಂ ಸುಖಂ ಕಾಲೇ ಪಂಚಭಿರ್ವರ್ಧತೇ ಮಹೀ।।
ರಕ್ಷಣೆಗೆ ಬೇಕಾದುದನ್ನು ಮಾಡುವುದು, ಯುದ್ಧ, ಧರ್ಮಾನುಶಾಸನ, ಮಂತ್ರಾಲೋಚನೆ, ಯಥಾಕಾಲದಲ್ಲಿ ಎಲ್ಲರಿಗೂ ಸುಖವನ್ನು ನೀಡುವುದು – ಈ ಐದು ಕಾರ್ಯಗಳಿಂದ ರಾಜ್ಯವು ಅಭಿವೃದ್ಧಿಹೊಂದುತ್ತದೆ.
12094025a ಏತಾನಿ ಯಸ್ಯ ಗುಪ್ತಾನಿ ಸ ರಾಜಾ ರಾಜಸತ್ತಮ।
12094025c ಸತತಂ ವರ್ತಮಾನೋಽತ್ರ ರಾಜಾ ಭುಂಕ್ತೇ3 ಮಹೀಮಿಮಾಮ್।।
ಇವುಗಳನ್ನು ಗುಪ್ತವಾಗಿ ಯಾರು ಮಾಡುತ್ತಾನೋ ಆ ರಾಜನೇ ಸಾಜಸತ್ತಮನಾಗುತ್ತಾನೆ. ಈ ಐದು ಕಾರ್ಯಗಳನ್ನೂ ಮಾಡುವ ರಾಜನು ಈ ಮಹಿಯನ್ನು ಭೋಗಿಸುತ್ತಾನೆ.
12094026a ನೈತಾನ್ಯೇಕೇನ ಶಕ್ಯಾನಿ ಸಾತತ್ಯೇನಾನ್ವವೇಕ್ಷಿತುಮ್।
12094026c ಏತೇಷ್ವಾಪ್ತಾನ್ಪ್ರತಿಷ್ಠಾಪ್ಯ ರಾಜಾ ಭುಂಕ್ತೇ ಮಹೀಂ ಚಿರಮ್।।
ರಾಜನೊಬ್ಬನೇ ಇವೆಲ್ಲವನ್ನೂ ಮಾಡಲು ಶಲ್ಯನಿಲ್ಲ. ಆದುದರಿಂದ ಅವನು ಎಲ್ಲ ಅಧಿಕಾರಗಳನ್ನೂ ಯೋಗ್ಯ ಅಧಿಕಾರಿಗಳಲ್ಲಿ ಪ್ರತಿಷ್ಠಾಪಿಸಿದ ರಾಜನು ಚಿರಕಾಲದ ವರೆಗೆ ರಾಜ್ಯವನ್ನು ಭೋಗಿಸುತ್ತಾನೆ.
12094027a ದಾತಾರಂ ಸಂವಿಭಕ್ತಾರಂ ಮಾರ್ದವೋಪಗತಂ ಶುಚಿಮ್।
12094027c ಅಸಂತ್ಯಕ್ತಮನುಷ್ಯಂ ಚ ತಂ ಜನಾಃ ಕುರ್ವತೇ ಪ್ರಿಯಮ್।।
ದಾನಶೀಲನಾದ, ಸರಿಯಾಗಿ ವಿಭಜಿಸಿ ಭೋಗಿಸುವ, ಮೃದುಸ್ವಭಾವದ, ಶುಚಿಯಾದ ಮತ್ತು ಯಾವುದೇ ಕಾರಣಗಳಿಮ್ದಲೂ ಪ್ರಜೆಗಳನ್ನು ತ್ಯಾಗಮಾಡದ ರಾಜನನ್ನು ಜನರು ಪ್ರೀತಿಸುತ್ತಾರೆ.
12094028a ಯಸ್ತು ನಿಃಶ್ರೇಯಸಂ ಜ್ಞಾತ್ವಾ ಜ್ಞಾನಂ ತತ್ ಪ್ರತಿಪದ್ಯತೇ।
12094028c ಆತ್ಮನೋ ಮತಮುತ್ಸೃಜ್ಯ ತಂ ಲೋಕೋಽನುವಿಧೀಯತೇ।।
ಕಲ್ಯಾಣಮಯ ಉಪದೇಶವನ್ನು ಕೇಳಿದನಂತರವೂ ತನ್ನ ಅಭಿಪ್ರಾಯವೇ ಸರಿ ಎಂಬ ದುರಾಗ್ರಹವನ್ನು ತೊರೆದು ನಿಜವಾದ ಜ್ಞಾನವನ್ನು ಪಡೆದುಕೊಳ್ಳುವ ರಾಜನನ್ನು ಲೋಕವೇ ಅನುಸರಿಸುತ್ತದೆ.
12094029a ಯೋಽರ್ಥಕಾಮಸ್ಯ ವಚನಂ ಪ್ರಾತಿಕೂಲ್ಯಾನ್ನ ಮೃಷ್ಯತೇ।
12094029c ಶೃಣೋತಿ ಪ್ರತಿಕೂಲಾನಿ ವಿಮನಾ ನಚಿರಾದಿವ।।
12094030a ಅಗ್ರಾಮ್ಯಚರಿತಾಂ ಬುದ್ಧಿಮತ್ಯಂತಂ ಯೋ ನ ಬುಧ್ಯತೇ।
12094030c ಜಿತಾನಾಮಜಿತಾನಾಂ ಚ ಕ್ಷತ್ರಧರ್ಮಾದಪೈತಿ ಸಃ।।
ತನ್ನ ಅಭಿಪ್ರಾಯಕ್ಕೆ ವಿರೋಧವಾಗಿದೆ ಎಂಬ ಕಾರಣದಿಂದ ತನ್ನ ಅರ್ಥಸಿದ್ಧಿಯನ್ನು ಅಪೇಕ್ಷಿಸುವ ಸುಹೃದನ ಮಾತನ್ನು ಯಾವ ರಾಜನು ಸಹಿಸುವುದಿಲ್ಲವೋ, ತನ್ನ ಅರ್ಥಸಿದ್ಧಿಗೆ ಪ್ರತಿಕೂಲ ಮಾತುಗಳನ್ನೇ ಕೇಳುವನೋ, ಸರ್ವಕಾಲದಲ್ಲಿಯೂ ವಿಮನಸ್ಕನಾಗಿರುವನೋ, ವಿದ್ವಾಂಸರಿಂದಲೂ-ಶಿಷ್ಟರಿಂದಲೂ ಆಚರಿಸಲ್ಪಟ್ಟ ಸದ್ವೃತ್ತಿಯನ್ನು ಯಾರು ನಿತ್ಯವೂ ಸೇವಿಸುವುದಿಲ್ಲವೋ, ಮತ್ತು ತಾನು ಗೆದ್ದ ಮತ್ತು ತಾನು ಸೋತ ರಾಜರುಗಳೊಡನೆ ಪರಂಪರಾಗತವಾದ ಸಂಪ್ರದಾಯಗಳನ್ನು ಅನುಷ್ಠಾನಕ್ಕೆ ತರುವುದಿಲ್ಲವೋ ಆ ರಾಜನು ಕ್ಷತ್ರಿಯಧರ್ಮದಿಂದ ಚ್ಯುತನಾದಂತೆ.
12094031a ಮುಖ್ಯಾನಮಾತ್ಯಾನ್ಯೋ ಹಿತ್ವಾ ನಿಹೀನಾನ್ಕುರುತೇ ಪ್ರಿಯಾನ್।
12094031c ಸ ವೈ ವ್ಯಸನಮಾಸಾದ್ಯ ಗಾಧಮಾರ್ತೋ ನ ವಿಂದತಿ।।
ಮುಖ್ಯ ಅಮಾತ್ಯರನ್ನು ತ್ಯಜಿಸಿ ಹೀನರೊಂದಿಗೆ ಸ್ನೇಹಬೆಳೆಸುವ ರಾಜನು ಸಂಕಟವೆಂಬ ಸಮುದ್ರದಲ್ಲಿ ಬಿದ್ದು ಯಾರ ಆಶ್ರಯವೂ ಇಲ್ಲದೇ ಪೀಡಿತರಾಗುತ್ತಾನೆ.
12094032a ಯಃ ಕಲ್ಯಾಣಗುಣಾಂಜ್ಞಾತೀನ್ ದ್ವೇಷಾನ್ನೈವಾಭಿಮನ್ಯತೇ।
12094032c ಅದೃಢಾತ್ಮಾ ದೃಢಕ್ರೋಧೋ ನಾಸ್ಯಾರ್ಥೋ ರಮತೇಽಂತಿಕೇ।।
ಕಲ್ಯಾಣಗುಣಸಂಪನ್ನರಾದ ಜ್ಞಾತಿಬಾಂಧವರನ್ನು ದ್ವೇಷಿಸಿ ಸಮ್ಮಾನಿಸದಿರುವ, ಚಂಚಲ ಚಿತ್ತನೂ ದೃಢವಾದ ರೋಷವುಳ್ಳವನೂ ಆಗಿರುವ ರಾಜನು ಮೃತ್ಯುವಿನ ಸಮೀಪದಲ್ಲಿಯೇ ಇರುತ್ತಾನೆ.
12094033a ಅಥ ಯೋ ಗುಣಸಂಪನ್ನಾನ್ ಹೃದಯಸ್ಯಾಪ್ರಿಯಾನಪಿ।
12094033c ಪ್ರಿಯೇಣ ಕುರುತೇ ವಶ್ಯಾಂಶ್ಚಿರಂ ಯಶಸಿ ತಿಷ್ಠತಿ।।
ತನ್ನ ಹೃದಯಕ್ಕೆ ಅಪ್ರಿಯರೆಂದು ಕಂಡರೂ ಗುಣಸಂಪನ್ನರಾದವರನ್ನು ಪ್ರೀತಿಪೂರ್ವಕವಾಗಿ ತನ್ನವರನ್ನಾಗಿರಿಸಿಕೊಂಡ ರಾಜನು ಬಹುಕಾಲದ ವರೆಗೆ ಯಶಸ್ವಿಯಾಗಿರುತ್ತಾನೆ.
12094034a ನಾಕಾಲೇ ಪ್ರಣಯೇದರ್ಥಾನ್ನಾಪ್ರಿಯೇ ಜಾತು ಸಂಜ್ವರೇತ್।
12094034c ಪ್ರಿಯೇ ನಾತಿಭೃಶಂ ಹೃಷ್ಯೇದ್ಯುಜ್ಯೇತಾರೋಗ್ಯಕರ್ಮಣಿ।।
ರಾಜನಾದವನು ಅಕಾಲದಲ್ಲಿ ಧನಸಂಗ್ರಹಕ್ಕೆ ಪ್ರಯತ್ನಿಸಬಾರದು. ಅಪ್ರಿಯವಾದದ್ದು ನಡೆದುಹೋದರೂ ಅದರ ಕುರಿತು ಚಿಂತಾಮಗ್ನನಾಗಿರಬಾರದು. ಪ್ರಿಯವಾದುದು ನಡೆದರೆ ಅತಿಯಾಗಿ ಹಿಗ್ಗಲೂ ಬಾರದು. ನಿರೋಗಿಯಾಗಿ ಸುದೃಢನಾಗಿರಲು ಪ್ರಯತ್ನಿಸಬೇಕು.
12094035a ಕೇ ಮಾನುರಕ್ತಾ ರಾಜಾನಃ ಕೇ ಭಯಾತ್ಸಮುಪಾಶ್ರಿತಾಃ।
12094035c ಮಧ್ಯಸ್ಥದೋಷಾಃ ಕೇ ಚೈಷಾಮಿತಿ ನಿತ್ಯಂ ವಿಚಿಂತಯೇತ್।।
ಯಾವ ರಾಜರು ತನ್ನಲ್ಲಿ ಅನುರಕ್ತರಾಗಿದ್ದಾರೆ, ಯಾರು ಭಯದಿಂದ ತನ್ನನ್ನು ಆಶ್ರಯಿಸಿದ್ದಾರೆ, ಯಾರು ಮಧ್ಯಸ್ಥರು, ಯಾರು ಶತ್ರುಗಳು – ಈ ವಿಷಯಗಳನ್ನು ರಾಜನು ಸದಾ ಚಿಂತಿಸುತ್ತಿರಬೇಕು.
12094036a ನ ಜಾತು ಬಲವಾನ್ ಭೂತ್ವಾ ದುರ್ಬಲೇ ವಿಶ್ವಸೇತ್ಕ್ವ ಚಿತ್।
12094036c ಭಾರುಂಡಸದೃಶಾ ಹ್ಯೇತೇ ನಿಪತಂತಿ ಪ್ರಮಾದ್ಯತಃ।।
ತಾನು ಬಲಿಷ್ಠನಾಗಿದ್ದರೂ ದುರ್ಬಲ ರಾಜರ ಮೇಲೆ ವಿಶ್ವಾಸವನ್ನಿಡಬಾರದು. ಗಂಡಭೇರುಂಡ ಪಕ್ಷಿಯಂತಿರುವ ಅವರು ಅಪ್ರಮತ್ತನಾಗಿರುವಾಗಲೇ ಮೇಲೆ ಬೀಳುತ್ತಾರೆ.
12094037a ಅಪಿ ಸರ್ವೈರ್ಗುಣೈರ್ಯುಕ್ತಂ ಭರ್ತಾರಂ ಪ್ರಿಯವಾದಿನಮ್।
12094037c ಅಭಿದ್ರುಹ್ಯತಿ ಪಾಪಾತ್ಮಾ ತಸ್ಮಾದ್ಧಿ ವಿಭಿಷೇಜ್ಜನಾತ್।।
ಸರ್ವಗುಣ ಸಂಪನ್ನನ್ನಾದ ಪ್ರಿಯವಾದಿನಿಯಾದ ಒಡೆಯನಿಗೆ ವಿನಾಕಾರಣ ದ್ರೋಹವನ್ನೆಸಗುವ ಪಾಪಾತ್ಮನು ಸರ್ವಗುಣಗಳಿಂದ ಯುಕ್ತನಾಗಿದ್ದರೂ ಅವನ ಮೇಲೆ ವಿಶ್ವಾಸವಿಡಬಾರದು.
12094038a ಏತಾಂ ರಾಜೋಪನಿಷದಂ ಯಯಾತಿಃ ಸ್ಮಾಹ ನಾಹುಷಃ।
12094038c ಮನುಷ್ಯವಿಜಯೇ ಯುಕ್ತೋ ಹಂತಿ ಶತ್ರೂನನುತ್ತಮಾನ್।।
ಈ ರಾಜೋಪನಿಷತ್ತನ್ನು ನಹುಷನ ಮಗ ಯಯಾತಿಯು ಹೇಳಿದ್ದನು. ಇದನ್ನು ಕೇಳಿದವನು ಮನುಷ್ಯವಿಜಯದಲ್ಲಿ ಯುಕ್ತನಾಗಿ ಶತ್ರುಗಳನ್ನು ನಾಶಪಡಿಸುತ್ತಾನೆ.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ವಾಮದೇವಗೀತಾಸು ಚತುರ್ನವತಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ವಾಮದೇವಗೀತ ಎನ್ನುವ ತೊಂಭತ್ನಾಲ್ಕನೇ ಅಧ್ಯಾಯವು.