ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ರಾಜಧರ್ಮ ಪರ್ವ
ಅಧ್ಯಾಯ 93
ಸಾರ
ರಾಜಧರ್ಮದ ಕುರಿತು ವಸುಮನಸನಿಗೆ ವಾಮದೇವನ ಉಪದೇಶ (1-19).
12093001 ಯುಧಿಷ್ಠಿರ ಉವಾಚ।
12093001a ಕಥಂ ಧರ್ಮೇ ಸ್ಥಾತುಮಿಚ್ಚನ್ರಾಜಾ ವರ್ತೇತ ಧಾರ್ಮಿಕಃ।
12093001c ಪೃಚ್ಚಾಮಿ ತ್ವಾ ಕುರುಶ್ರೇಷ್ಠ ತನ್ಮೇ ಬ್ರೂಹಿ ಪಿತಾಮಹ।।
ಯುಧಿಷ್ಠಿರನು ಹೇಳಿದನು: “ಧಾರ್ಮಿಕನಾದ ರಾಜನು ಹೇಗೆ ತಾನೇ ಧರ್ಮದಲ್ಲಿಯೇ ನೆಲೆಸಿ ನಡೆದುಕೊಳ್ಳಬಹುದು? ಕುರುಶ್ರೇಷ್ಠ! ಪಿತಾಮಹ! ನಿನ್ನನ್ನು ಕೇಳುತ್ತಿರುವ ನನಗೆ ಹೇಳು.”
12093002 ಭೀಷ್ಮ ಉವಾಚ।
12093002a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್।
12093002c ಗೀತಂ ದೃಷ್ಟಾರ್ಥತತ್ತ್ವೇನ ವಾಮದೇವೇನ ಧೀಮತಾ।।
ಭೀಷ್ಮನು ಹೇಳಿದನು: “ಇದರ ಕುರಿತು ಪುರಾತನ ಇತಿಹಾಸವಾದ ಧೀಮತ ವಾಮದೇವನು ಅರ್ಥತ್ತತ್ತ್ವಗಳನ್ನು ತೋರಿಸಿದ ಗೀತೆಯನ್ನು ಉದಾಹರಿಸುತ್ತಾರೆ.
12093003a ರಾಜಾ ವಸುಮನಾ ನಾಮ ಕೌಸಲ್ಯೋ ಬಲವಾನ್ ಶುಚಿಃ।
12093003c ಮಹರ್ಷಿಂ ಪರಿಪಪ್ರಚ್ಚ ವಾಮದೇವಂ ಯಶಸ್ವಿನಮ್।।
ಬಲವಂತನೂ ಶುಚಿಯೂ ಆಗಿದ್ದ ವಸುಮನಾ ಎಂಬ ಹೆಸರಿನ ಕೋಸಲದ ರಾಜನು ಯಶಸ್ವಿ ಮಹರ್ಷಿ ವಾಮದೇವನನ್ನು ಪ್ರಶ್ನಿಸಿದನು:
12093004a ಧರ್ಮಾರ್ಥಸಹಿತಂ ವಾಕ್ಯಂ ಭಗವನ್ನನುಶಾಧಿ ಮಾಮ್।
12093004c ಯೇನ ವೃತ್ತೇನ ವೈ ತಿಷ್ಠನ್ನ ಚ್ಯವೇಯಂ ಸ್ವಧರ್ಮತಃ।।
“ಭಗವನ್! ಧಾರ್ಮಾರ್ಥ ಸಹಿತ ಮಾತುಗಳಿಂದ ನನಗೆ ಆದೇಶವನ್ನು ನೀಡಿ. ಯಾವ ವರ್ತನೆಯಿಂದ ನಡೆದುಕೊಂಡರೆ ನಾನು ಸ್ವಧರ್ಮದಿಂದ ಚ್ಯುತನಾಗದೇ ಸ್ಥಿರನಾಗಿರಬಹುದು?”
12093005a ತಮಬ್ರವೀದ್ವಾಮದೇವಸ್ತಪಸ್ವೀ ಜಪತಾಂ ವರಃ।
12093005c ಹೇಮವರ್ಣಮುಪಾಸೀನಂ ಯಯಾತಿಮಿವ ನಾಹುಷಮ್।।
ಆಗ ಜಪಿಗಳಲ್ಲಿ ಶ್ರೇಷ್ಠ ತಪಸ್ವೀ ವಾಮದೇವನು ನಾಹುಷ ಯಯಾತಿಯಂತೆ ಕುಳಿತಿದ್ದ ಹೇಮವರ್ಣದ ವಸುಮನನಿಗೆ ಹೇಳಿದನು:
12093006a ಧರ್ಮಮೇವಾನುವರ್ತಸ್ವ ನ ಧರ್ಮಾದ್ವಿದ್ಯತೇ ಪರಮ್।
12093006c ಧರ್ಮೇ ಸ್ಥಿತಾ ಹಿ ರಾಜಾನೋ ಜಯಂತಿ ಪೃಥಿವೀಮಿಮಾಮ್।।
“ಧರ್ಮವನ್ನೇ ಅನುಸರಿಸು. ಧರ್ಮಕ್ಕಿಂತಲೂ ಶ್ರೇಷ್ಠವಾದುದು ಇಲ್ಲ. ಧರ್ಮದಲ್ಲಿ ಸ್ಥಿತನಾದ ರಾಜನು ಈ ಪೃಥ್ವಿಯನ್ನು ಜಯಿಸುತ್ತಾನೆ.
12093007a ಅರ್ಥಸಿದ್ಧೇಃ ಪರಂ ಧರ್ಮಂ ಮನ್ಯತೇ ಯೋ ಮಹೀಪತಿಃ।
12093007c ಋತಾಂ ಚ ಕುರುತೇ ಬುದ್ಧಿಂ ಸ ಧರ್ಮೇಣ ವಿರೋಚತೇ।।
ಅರ್ಥಸಿದ್ಧಿಗಿಂತಲೂ ಧರ್ಮಸಿದ್ಧಿಯೇ ಹಿರಿದಾದುದೆಂದು ಭಾವಿಸುವ ಮತ್ತು ಋತನಾಗಿರುವ ಮನಸ್ಸುಮಾಡಿರುವವನು ಧರ್ಮದಿಂದ ಪ್ರಕಾಶಿಸುತ್ತಾನೆ.
12093008a ಅಧರ್ಮದರ್ಶೀ ಯೋ ರಾಜಾ ಬಲಾದೇವ ಪ್ರವರ್ತತೇ।
12093008c ಕ್ಷಿಪ್ರಮೇವಾಪಯಾತೋಽಸ್ಮಾದುಭೌ ಪ್ರಥಮಮಧ್ಯಮೌ।।
ಧರ್ಮವನ್ನು ಗಮನಿಸದೇ ಯಾವ ರಾಜನು ಕೇವಲ ಬಲವನ್ನುಪಯೋಗಿಸಿ ನಡೆದುಕೊಳ್ಳುತ್ತಾನೋ ಅವನನ್ನು ಮೊದಲನೆಯ ಧರ್ಮ ಮತ್ತು ಮಧ್ಯಮ ಅರ್ಥ ಇವೆರಡೂ ತೊರೆಯುತ್ತವೆ.
12093009a ಅಸತ್ಪಾಪಿಷ್ಠಸಚಿವೋ ವಧ್ಯೋ ಲೋಕಸ್ಯ ಧರ್ಮಹಾ।
12093009c ಸಹೈವ ಪರಿವಾರೇಣ ಕ್ಷಿಪ್ರಮೇವಾವಸೀದತಿ।।
ಅಸತ್ಪುರುಷರೂ ಪಾಪಿಷ್ಠರೂ ಆದ ಸಚಿವರ ಸಹಾಯದಿಂದ ಧರ್ಮವನ್ನು ನಾಶಗೊಳಿಸುವ ರಾಜನು ಲೋಕದಲ್ಲಿ ವಧೆಗೆ ಅರ್ಹನಾಗುತ್ತಾನೆ. ಪರಿವಾರಸಮೇತನಾಗಿ ಬಹಳ ಬೇಗ ವಿನಾಶವನ್ನು ಹೊಂದುತ್ತಾನೆ.
12093010a ಅರ್ಥಾನಾಮನನುಷ್ಠಾತಾ ಕಾಮಚಾರೀ ವಿಕತ್ಥನಃ।
12093010c ಅಪಿ ಸರ್ವಾಂ ಮಹೀಂ ಲಬ್ಧ್ವಾ ಕ್ಷಿಪ್ರಮೇವ ವಿನಶ್ಯತಿ।।
ಅರ್ಥಸಿದ್ಧಿಗೆ ಪ್ರಯತ್ನಿಸದ, ಸ್ವೇಚ್ಛಾಚಾರಿಯಾದ ಮತ್ತು ಆತ್ಮಪ್ರಶಂಸೆಯನ್ನೇ ಮಾಡಿಕೊಳ್ಳುವ ರಾಜನು ಮಹಿಯಲ್ಲವನ್ನು ಪಡೆದಿದ್ದರೂ ಬೇಗನೇ ನಾಶಹೊಂದುತ್ತಾನೆ.
12093011a ಅಥಾದದಾನಃ ಕಲ್ಯಾಣಮನಸೂಯುರ್ಜಿತೇಂದ್ರಿಯಃ।
12093011c ವರ್ಧತೇ ಮತಿಮಾನ್ರಾಜಾ ಸ್ರೋತೋಭಿರಿವ ಸಾಗರಃ।।
ಕಲ್ಯಾಣವಾದುದ್ದನ್ನು ಗ್ರಹಿಸುವ ಮತ್ತು ಮಾಡುವ, ಅನಸೂಯನೂ ಜಿತೇಂದ್ರಿಯನೂ ಆದ ಮತಿಮಂತ ರಾಜನು ನದಿಗಳಿಂದ ಸಾಗರವು ಹೇಗೋ ಹಾಗೆ ಅಭಿವೃದ್ಧಿ ಹೊಂದುತ್ತಾನೆ.
12093012a ನ ಪೂರ್ಣೋಽಸ್ಮೀತಿ ಮನ್ಯೇತ ಧರ್ಮತಃ ಕಾಮತೋಽರ್ಥತಃ।
12093012c ಬುದ್ಧಿತೋ ಮಿತ್ರತಶ್ಚಾಪಿ ಸತತಂ ವಸುಧಾಧಿಪಃ।।
ವಸುಧಾಧಿಪನು ಯಾವಾಗಲೂ ಧರ್ಮದ ವಿಷಯದಲ್ಲಿ, ಕಾಮದ ವಿಷಯದಲ್ಲಿ, ಅರ್ಥದ ವಿಷಯದಲ್ಲಿ, ಬುದ್ಧಿಯ ವಿಷಯದಲ್ಲಿ ಮತ್ತು ಮಿತ್ರರ ವಿಷಯದಲ್ಲಿ ಸಂಪನ್ನನಾಗಿದ್ದರೂ ಪೂರ್ಣನಾಗಿರುವೆನೆಂದು ಭಾವಿಸಬಾರದು.
12093013a ಏತೇಷ್ವೇವ ಹಿ ಸರ್ವೇಷು ಲೋಕಯಾತ್ರಾ ಪ್ರತಿಷ್ಠಿತಾ।
12093013c ಏತಾನಿ ಶೃಣ್ವಽಲ್ಲಭತೇ ಯಶಃ ಕೀರ್ತಿಂ ಶ್ರಿಯಃ ಪ್ರಜಾಃ।।
ರಾಜನ ಲೋಕಯಾತ್ರೆಯು ಇವೆಲ್ಲವುಗಳನ್ನೇ ಅವಂಬಿಸಿದೆ. ಇವುಗಳನ್ನು ಕೇಳಿದವನಿಗೆ ಯಶಸ್ಸು, ಕೀರ್ತಿ, ಸಂಪತ್ತು ಮತ್ತು ಪ್ರಜೆಗಳು ದೊರಕುತ್ತಾರೆ.
12093014a ಏವಂ ಯೋ ಧರ್ಮಸಂರಂಭೀ ಧರ್ಮಾರ್ಥಪರಿಚಿಂತಕಃ।
12093014c ಅರ್ಥಾನ್ಸಮೀಕ್ಷ್ಯಾರಭತೇ ಸ ಧ್ರುವಂ ಮಹದಶ್ನುತೇ।।
ಹೀಗೆ ಧರ್ಮದಲ್ಲಿ ಆಸಕ್ತಿಯುಳ್ಳವನಾಗಿ ಧರ್ಮಾರ್ಥ ಪರಿಚಿಂತಕನಾಗಿ ಅರ್ಥಗಳನ್ನು ಸಮೀಕ್ಷಿಸಿ ಸೇವಿಸುವ ರಾಜನು ನಿಶ್ಚಯವಾಗಿಯೂ ಮಹಾಫಲವನ್ನು ಪಡೆದುಕೊಳ್ಳುತ್ತಾನೆ.
12093015a ಅದಾತಾ ಹ್ಯನತಿಸ್ನೇಹೋ ದಂಡೇನಾವರ್ತಯನ್ ಪ್ರಜಾಃ।
12093015c ಸಾಹಸಪ್ರಕೃತೀ ರಾಜಾ ಕ್ಷಿಪ್ರಮೇವ ವಿನಶ್ಯತಿ।।
ದುಃಸಾಹಸಿಯಾದ, ದಾನಶೀಲನಲ್ಲದ, ಸ್ನೇಹಶೂನ್ಯನಾದ ಮತ್ತು ಪ್ರಜೆಗಳನ್ನು ದಂಡಿಸುವ ರಾಜನು ಕ್ಷಿಪ್ರವಾಗಿ ನಾಶಹೊಂದುತ್ತಾನೆ.
12093016a ಅಥ ಪಾಪಂ ಕೃತಂ ಬುದ್ಧ್ಯಾ ನ ಚ ಪಶ್ಯತ್ಯಬುದ್ಧಿಮಾನ್।
12093016c ಅಕೀರ್ತ್ಯಾಪಿ ಸಮಾಯುಕ್ತೋ ಮೃತೋ ನರಕಮಶ್ನುತೇ।।
ತಾನು ಪಾಪ ಮಾಡಿದ್ದೇನೆಂದು ತಿಳಿದೂ ಪಶ್ಚಾತ್ತಾಪ ಪಡದಿರುವ ಮೂಢನು ಈ ಲೋಕದಲ್ಲಿ ಅಕೀರ್ತಿಯನ್ನು ಪಡೆಯುವುದಲ್ಲದೇ ಮೃತನಾದ ನಂತರ ನರಕಕ್ಕೆ ಹೋಗುತ್ತಾನೆ.
12093017a ಅಥ ಮಾನಯಿತುರ್ದಾತುಃ ಶುಕ್ಲಸ್ಯ ರಸವೇದಿನಃ251।
12093017c ವ್ಯಸನಂ ಸ್ವಮಿವೋತ್ಪನ್ನಂ ವಿಜಿಘಾಂಸಂತಿ ಮಾನವಾಃ।।
ಎಲ್ಲರನ್ನು ಗೌರವಿಸುವ, ದಾನಶೀಲನಾದ ಮತ್ತು ಸತ್ತ್ವಗುಣಾನ್ವಿತ ರಾಜನಿಗೆ ವ್ಯಸನವು ಬಂದೊದಗಿದಾಗ ಅವನ ಪ್ರಜೆಗಳು ತಮಗೇ ಆ ವ್ಯಸನವು ಬಂದೊದಗಿದೆಯೋ ಎಂಬಂತೆ ಒಟ್ಟಾಗಿ ನಿವಾರಿಸುತ್ತಾರೆ.
12093018a ಯಸ್ಯ ನಾಸ್ತಿ ಗುರುರ್ಧರ್ಮೇ ನ ಚಾನ್ಯಾನನುಪೃಚ್ಚತಿ।
12093018c ಸುಖತಂತ್ರೋಽರ್ಥಲಾಭೇಷು ನ ಚಿರಂ ಮಹದಶ್ನುತೇ।।
ಯಾರಿಗೆ ಧರ್ಮವನ್ನು ತಿಳಿಸುವ ಗುರುವಿಲ್ಲವೋ, ಯಾರು ಧರ್ಮದ ವಿಷಯದಲ್ಲಿ ಇತರರನ್ನು ಕೇಳಿ ತಿಳಿದುಕೊಳ್ಳುವುದಿಲ್ಲವೋ ಮತ್ತು ಯಾರು ಅರ್ಥಲಾಭವಾದಾಗ ಸುಖಪಡುವುದರಲ್ಲಿಯೇ ತೊಡಗಿರುವನೋ ಅವನು ಬಹುಕಾಲ ಸುಖಿಯಾಗಿರಲಾರನು.
12093019a ಗುರುಪ್ರಧಾನೋ ಧರ್ಮೇಷು ಸ್ವಯಮರ್ಥಾನ್ವವೇಕ್ಷಿತಾ।
12093019c ಧರ್ಮಪ್ರಧಾನೋ ಲೋಕೇಷು ಸುಚಿರಂ ಮಹದಶ್ನುತೇ।।
ಧರ್ಮದ ವಿಷಯದಲ್ಲಿ ಗುರುವನ್ನೇ ಪ್ರಧಾನನನ್ನಾಗಿರಿಸಿಕೊಂಡಿರುವ, ಅರ್ಥದ ವಿಷಯದಲ್ಲಿ ತಾನೇ ಧರ್ಮವನ್ನು ಪ್ರಧಾನವಾಗಿರಿಸಿಕೊಳ್ಳುವ ರಾಜನು ಲೋಕದಲ್ಲಿ ಬಹುಕಾಲ ಸುಖದಿಂದಿರುತ್ತಾನೆ.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಶಾಂತಿ ಪರ್ವಣಿ ರಾಜಧರ್ಮ ಪರ್ವಣಿ ವಾಮದೇವಗೀತಾಸು ತ್ರಿನವತಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದ ಶಾಂತಿ ಪರ್ವದ ರಾಜಧರ್ಮ ಪರ್ವದಲ್ಲಿ ವಾಮದೇವಗೀತ ಎನ್ನುವ ತೊಂಭತ್ಮೂರನೇ ಅಧ್ಯಾಯವು.