ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ರಾಜಧರ್ಮ ಪರ್ವ
ಅಧ್ಯಾಯ 92
ಸಾರ
ರಾಜನ ಕರ್ತ್ಯವ್ಯಗಳ ಕುರಿತು ಉತಥ್ಯನು ಮಾಂಧಾತನಿಗೆ ಉಪದೇಶಿಸಿದುದು (1-56).
12092001 ಉತಥ್ಯ ಉವಾಚ।
12092001a ಕಾಲವರ್ಷೀ ಚ ಪರ್ಜನ್ಯೋ ಧರ್ಮಚಾರೀ ಚ ಪಾರ್ಥಿವಃ।
12092001c ಸಂಪದ್ಯದೈಷಾ ಭವತಿ ಸಾ ಬಿಭರ್ತಿ ಸುಖಂ ಪ್ರಜಾಃ।।
ಉತಥ್ಯನು ಹೇಳಿದನು: “ಪರ್ಜನ್ಯನು ಕಾಲಕ್ಕೆ ತಕ್ಕಂತೆ ಮಳೆಗರೆಯಬೇಕು. ಪಾರ್ಥಿವನು ಧರ್ಮಚಾರಿಯಾಗಿರಬೇಕು. ಧರ್ಮ ಸಂಪತ್ತು ಹೀಗಿರುವಾಗ ಪ್ರಜೆಗಳು ಸುಖದಿಂದ ಪರಿಪಾಲಿತರಾಗಿರುತ್ತಾರೆ.
12092002a ಯೋ ನ ಜಾನಾತಿ ನಿರ್ಹಂತುಂ ವಸ್ತ್ರಾಣಾಂ ರಜಕೋ ಮಲಮ್।
12092002c ರಕ್ತಾನಿ ವಾ ಶೋಧಯಿತುಂ ಯಥಾ ನಾಸ್ತಿ ತಥೈವ ಸಃ।।
ಬಟ್ಟೆಯ ಕೊಳೆಯನ್ನು ತೆಗೆದುಹಾಕುವುದನ್ನು ತಿಳಿಯದಿರುವ ಮತ್ತು ಕೆಂಪು ಬಣ್ಣದ ಬಟ್ಟೆಯನ್ನು ಹೊಳೆಯುವಂತೆ ಮಾಡಲು ಅರಿಯದಿರುವ ಅಗಸನು ಇದ್ದರೂ ಒಂದೇ ಇಲ್ಲದಿದ್ದರೂ ಒಂದೇ.
12092003a ಏವಮೇವ ದ್ವಿಜೇಂದ್ರಾಣಾಂ ಕ್ಷತ್ರಿಯಾಣಾಂ ವಿಶಾಮಪಿ।
12092003c ಶೂದ್ರಾಶ್ಚತುರ್ಣಾಂ ವರ್ಣಾನಾಂ ನಾನಾಕರ್ಮಸ್ವವಸ್ಥಿತಾಃ।।
ಹಾಗೆಯೇ ಬ್ರಾಹ್ಮಣರಾಗಲೀ, ಕ್ಷತ್ರಿಯರಾಗಲೀ, ವೈಶ್ಯರಾಗಲೀ ಮತ್ತು ಶೂದ್ರರಾಗಲೀ ಅವರವರ ವರ್ಣದ ಕರ್ಮಗಳನ್ನು ತಿಳಿದವರಾಗಿರಬೇಕು. ಇಲ್ಲದಿದ್ದರೆ ಇವರೆಲ್ಲರೂ ನಿಷ್ಪ್ರಯೋಜಕರಾಗುತ್ತಾರೆ.
12092004a ಕರ್ಮ ಶೂದ್ರೇ ಕೃಷಿರ್ವೈಶ್ಯೇ ದಂಡನೀತಿಶ್ಚ ರಾಜನಿ।
12092004c ಬ್ರಹ್ಮಚರ್ಯಂ ತಪೋ ಮಂತ್ರಾಃ ಸತ್ಯಂ ಚಾಪಿ ದ್ವಿಜಾತಿಷು।।
ಶೂದ್ರನಲ್ಲಿ ಸೇವೆ, ವೈಶ್ಯನಲ್ಲಿ ಕೃಷಿ, ರಾಜನಲ್ಲಿ ದಂಡನೀತಿ, ಬ್ರಾಹ್ಮಣನಲ್ಲಿ ಬ್ರಹ್ಮಚರ್ಯ, ತಪಸ್ಸು, ಸತ್ಯನಿಷ್ಠೆ ಮತ್ತು ವೇದಾಧ್ಯಯನಗಳು ಪ್ರಧಾನ ಕರ್ತವ್ಯಗಳಾಗಿವೆ.
12092005a ತೇಷಾಂ ಯಃ ಕ್ಷತ್ರಿಯೋ ವೇದ ವಸ್ತ್ರಾಣಾಮಿವ ಶೋಧನಮ್।
12092005c ಶೀಲದೋಷಾನ್ವಿನಿರ್ಹಂತುಂ ಸ ಪಿತಾ ಸ ಪ್ರಜಾಪತಿಃ।।
ಯಾವ ಕ್ಷತ್ರಿಯನು – ಅಗಸನು ವಸ್ತ್ರಗಳ ಕೊಳೆಯನ್ನು ತೆಗೆದು ಶುದ್ಧಗೊಳಿಸುವಂತೆ – ಇತರರ ಶೀಲದಲ್ಲಿರುವ ದೋಷಗಳನ್ನು ಹೋಗಲಾಡಿಸಿ ಶುದ್ಧಚಾರಿತ್ರ್ಯವನ್ನು ಮೈಗೂಡಿಸಿಕೊಳ್ಳುವಂತೆ ಮಾಡಲು ಸಮರ್ಥನಾಗುತ್ತಾನೋ ಅವನೇ ಪ್ರಜೆಗಳಿಗೆ ಪಿತೃಸಮಾನನಾಗುತ್ತಾನೆ. ಅಧಿಪತಿಯೂ ಅವನೇ ಆಗುತ್ತಾನೆ.
12092006a ಕೃತಂ ತ್ರೇತಾ ದ್ವಾಪರಶ್ಚ ಕಲಿಶ್ಚ ಭರತರ್ಷಭ।
12092006c ರಾಜವೃತ್ತಾನಿ ಸರ್ವಾಣಿ ರಾಜೈವ ಯುಗಮುಚ್ಯತೇ।।
ಭರತರ್ಷಭ! ಕೃತ, ತ್ರೇತ, ದ್ವಾಪರ ಮತ್ತು ಕಲಿ ಯುಗಗಳು ಎಲ್ಲವೂ ರಾಜನ ಆಚರಣೆಯನ್ನೇ ಅನುಸರಿಸಿ ಪರಿವರ್ತನೆ ಹೊಂದುತ್ತವೆ. ರಾಜನೇ ಯುಗಸ್ವರೂಪನೆಂದು ಹೇಳುತ್ತಾರೆ.
12092007a ಚಾತುರ್ವರ್ಣ್ಯಂ ತಥಾ ವೇದಾಶ್ಚಾತುರಾಶ್ರಮ್ಯಮೇವ ಚ।
12092007c ಸರ್ವಂ ಪ್ರಮುಹ್ಯತೇ ಹ್ಯೇತದ್ಯದಾ ರಾಜಾ ಪ್ರಮಾದ್ಯತಿ।।
ರಾಜನು ಪ್ರಮತ್ತನಾದರೆ ಚಾತುರ್ವರ್ಣಗಳೂ, ವೇದಗಳೂ, ನಾಲ್ಕು ಆಶ್ರಮಗಳು ಎಲ್ಲವೂ ಪ್ರಮೋಹಕ್ಕೊಳಗಾಗುತ್ತವೆ.
12092008a ರಾಜೈವ ಕರ್ತಾ ಭೂತಾನಾಂ ರಾಜೈವ ಚ ವಿನಾಶಕಃ।
12092008c ಧರ್ಮಾತ್ಮಾ ಯಃ ಸ ಕರ್ತಾ ಸ್ಯಾದಧರ್ಮಾತ್ಮಾ ವಿನಾಶಕಃ।।
ರಾಜನೇ ಭೂತಗಳ ಕರ್ತೃ. ರಾಜನೇ ಭೂತಗಳ ವಿನಾಶಕ. ಅವನು ಧರ್ಮಾತ್ಮನಾಗಿದ್ದರೆ ಕರ್ತೃವಾಗುತ್ತಾನೆ. ಅಧರ್ಮಾತ್ಮನಾಗಿದ್ದರೆ ವಿನಾಶಕನಾಗುತ್ತಾನೆ.
12092009a ರಾಜ್ಞೋ ಭಾರ್ಯಾಶ್ಚ ಪುತ್ರಾಶ್ಚ ಬಾಂಧವಾಃ ಸುಹೃದಸ್ತಥಾ।
12092009c ಸಮೇತ್ಯ ಸರ್ವೇ ಶೋಚಂತಿ ಯದಾ ರಾಜಾ ಪ್ರಮಾದ್ಯತಿ।।
ರಾಜನು ಪ್ರಮತ್ತನಾದರೆ ರಾಜನ ಭಾರ್ಯೆಯರೂ, ಪುತ್ರರೂ, ಬಾಂಧವರೂ, ಸುಹೃದಯರೂ ಎಲ್ಲರೂ ಒಟ್ಟಿಗೇ ಶೋಕಕ್ಕೊಳಗಾಗುತ್ತಾರೆ.
12092010a ಹಸ್ತಿನೋಽಶ್ವಾಶ್ಚ ಗಾವಶ್ಚಾಪ್ಯುಷ್ಟ್ರಾಶ್ವತರಗರ್ದಭಾಃ।
12092010c ಅಧರ್ಮವೃತ್ತೇ ನೃಪತೌ ಸರ್ವೇ ಸೀದಂತಿ ಪಾರ್ಥಿವ।।
ಪಾರ್ಥಿವ! ನೃಪತಿಯು ಅಧರ್ಮದಲ್ಲಿ ನಡೆದುಕೊಂಡರೆ ಆನೆಗಳು, ಕುದುರೆಗಳು, ಗೋವುಗಳು, ಒಂಟೆಗಳು, ಹೇಸರಗತ್ತೆಗಳು ಎಲ್ಲವೂ ನಾಶಹೊಂದುತ್ತವೆ.
12092011a ದುರ್ಬಲಾರ್ಥಂ ಬಲಂ ಸೃಷ್ಟಂ ಧಾತ್ರಾ ಮಾಂಧಾತರುಚ್ಯತೇ।
12092011c ಅಬಲಂ ತನ್ಮಹದ್ಭೂತಂ ಯಸ್ಮಿನ್ಸರ್ವಂ ಪ್ರತಿಷ್ಠಿತಮ್।।
ಮಾಂಧಾತಾ! ದುರ್ಬಲರಿಗಾಗಿಯೇ ಧಾತ್ರುವು ಬಲವನ್ನು ಸೃಷ್ಟಿಸಿದನೆಂದು ಹೇಳುತ್ತಾರೆ. ಯಾವುದರ ಮೇಲೆ ಎಲ್ಲವೂ ಪ್ರತಿಷ್ಠಿತವಾಗಿವೆಯೋ ಆ ಮಹಾಭೂತಗಣಗಳು ಅಬಲವಾದವುಗಳು.
12092012a ಯಚ್ಚ ಭೂತಂ ಸ ಭಜತೇ ಭೂತಾ ಯೇ ಚ ತದನ್ವಯಾಃ।
12092012c ಅಧರ್ಮಸ್ಥೇ ಹಿ ನೃಪತೌ ಸರ್ವೇ ಸೀದಂತಿ ಪಾರ್ಥಿವ।।
ಪಾರ್ಥಿವ! ನೃಪತಿಯು ಅಧರ್ಮಿಯಾದರೆ ಅವನನ್ನು ಸೇವಿಸುವ ಮತ್ತು ಅವನನ್ನೇ ಆಶ್ರಯಿಸಿರುವ ಭೂತಗಳೆಲ್ಲವೂ ದುಃಖಪಡುತ್ತವೆ.
12092013a ದುರ್ಬಲಸ್ಯ ಹಿ ಯಚ್ಚಕ್ಷುರ್ಮುನೇರಾಶೀವಿಷಸ್ಯ ಚ।
12092013c ಅವಿಷಹ್ಯತಮಂ ಮನ್ಯೇ ಮಾ ಸ್ಮ ದುರ್ಬಲಮಾಸದಃ।।
ದುರ್ಬಲನ, ಮುನಿಯ ಮತ್ತು ಸರ್ಪದ ದೃಷ್ಟಿಗಳನ್ನು ತಡೆದುಕೊಳ್ಳುವುದು ಅಸಾಧ್ಯವೆಂದು ನಾನು ಭಾವಿಸುತ್ತೇನೆ. ಆದುದರಿಂದ ದುರ್ಬಲರನ್ನು ಎಂದೂ ಪೀಡಿಸಬಾರದು.
12092014a ದುರ್ಬಲಾಂಸ್ತಾತ ಬುಧ್ಯೇಥಾ ನಿತ್ಯಮೇವಾವಿಮಾನಿತಾನ್।
12092014c ಮಾ ತ್ವಾಂ ದುರ್ಬಲಚಕ್ಷೂಂಷಿ ಪ್ರದಹೇಯುಃ ಸಬಾಂಧವಮ್।।
ಅಯ್ಯಾ! ದುರ್ಬಲರು ಅಪಮಾನಿತರಾಗದಂತೆ ಸರ್ವದಾ ನೋಡಿಕೊಂಡಿರಬೇಕು. ಅಪಮಾನಿತ ದುರ್ಬಲರ ಕ್ರೂರ ದೃಷ್ಟಿಗಳು ಬಂಧುಗಳ ಸಮೇತ ನಿನ್ನನ್ನು ಸುಟ್ಟುಹಾಕದಿರಲಿ!
12092015a ನ ಹಿ ದುರ್ಬಲದಗ್ಧಸ್ಯ ಕುಲೇ ಕಿಂ ಚಿತ್ಪ್ರರೋಹತಿ।
12092015c ಆಮೂಲಂ ನಿರ್ದಹತ್ಯೇವ ಮಾ ಸ್ಮ ದುರ್ಬಲಮಾಸದಃ।।
ದುರ್ಬಲರ ಕ್ರೂರದೃಷ್ಟಿಯಿಂದ ಸುಟ್ಟುಹೋದವನ ಕುಲದಲ್ಲಿ ಅಂಕುರವೇ ಇಲ್ಲವಾಗುತ್ತದೆ. ಅದು ಆಮೂಲವಾಗಿ ಕುಲವನ್ನು ಸುಟ್ಟುಬಿಡುತ್ತದೆ. ಆದುದರಿಂದ ದುರ್ಬಲನನ್ನೆಂದಿಗೂ ಸಂಕಟಪಡಿಸಬೇಡ.
12092016a ಅಬಲಂ ವೈ ಬಲಾಚ್ಚ್ರೇಯೋ ಯಚ್ಚಾತಿಬಲವದ್ಬಲಮ್।
12092016c ಬಲಸ್ಯಾಬಲದಗ್ಧಸ್ಯ ನ ಕಿಂ ಚಿದವಶಿಷ್ಯತೇ।।
ಬಲಿಷ್ಠನಿಗಿಂತಲೂ ಅಬಲನೇ ಶ್ರೇಷ್ಠನು. ಅಬಲನ ಬಲವು ಬಲಿಷ್ಠನ ಬಲಕ್ಕಿಂತಲೂ ಅತಿಯಾದುದು. ಅಬಲನು ಬಲಶಾಲಿಯ ಕುಲವನ್ನೇ ನಿಃಶೇಷವಾಗಿ ಸುಟ್ಟುಹಾಕಿಬಿಡಬಲ್ಲನು.
12092017a ವಿಮಾನಿತೋ ಹತೋತ್ಕ್ರುಷ್ಟಸ್ತ್ರಾತಾರಂ ಚೇನ್ನ ವಿಂದತಿ।
12092017c ಅಮಾನುಷಕೃತಸ್ತತ್ರ ದಂಡೋ ಹಂತಿ ನರಾಧಿಪಮ್।।
ಅಪಮಾನಿತ, ಹಿಂಸಿತ ಮತ್ತು ರಕ್ಷಣೆಗಾಗಿ ಕೂಗಿಕೊಳ್ಳುವ ದುರ್ಬಲನು ರಾಜನನ್ನು ರಕ್ಷಕನನ್ನಾಗಿ ಪಡೆಯದೇ ಇದ್ದರೆ ಅಮಾನುಷ ದಂಡವೇ ನರಾಧಿಪನನ್ನು ಸಂಹರಿಸುತ್ತದೆ.
12092018a ಮಾ ಸ್ಮ ತಾತ ಬಲೇ ಸ್ಥೇಯಾ ಬಾಧಿಷ್ಠಾ ಮಾಪಿ ದುರ್ಬಲಮ್1।
12092018c ಮಾ ತ್ವಾ ದುರ್ಬಲಚಕ್ಷೂಂಷಿ ಧಕ್ಷ್ಯಂತ್ಯಗ್ನಿರಿವಾಶ್ರಯಮ್।।
ಅಯ್ಯಾ! ಬಲಶಾಲಿಯೆಂದು ದುರ್ಬಲನನ್ನು ಬಾಧಿಸಬೇಡ. ಅಗ್ನಿಯು ಆಶ್ರಯಭೂತವಾದ ಮರವನ್ನೇ ಸುಟ್ಟುಭಸ್ಮಮಾಡುವಂತೆ ದುರ್ಬಲರ ಕ್ರೂರದೃಷ್ಟಿಗಳು ನಿನ್ನನ್ನು ಸುಟ್ಟು ಭಸ್ಮಮಾಡದಿರಲಿ.
12092019a ಯಾನಿ ಮಿಥ್ಯಾಭಿಶಸ್ತಾನಾಂ ಪತಂತ್ಯಶ್ರೂಣಿ ರೋದತಾಮ್।
12092019c ತಾನಿ ಪುತ್ರಾನ್ಪಶೂನ್ ಘ್ನಂತಿ ತೇಷಾಂ ಮಿಥ್ಯಾಭಿಶಾಸತಾಮ್।।
ಮಿಥ್ಯಾಪವಾದವನ್ನು ಅನುಭವಿಸುವವರ ರೋದನದಿಂದ ಬೀಳುವ ಕಣ್ಣೀರು ಮಿಥ್ಯಾಪವಾದವನ್ನು ಹೊರಿಸಿದವರ ಮಕ್ಕಳನ್ನೂ ಪುತ್ರರನ್ನೂ ನಾಶಮಾಡುತ್ತವೆ.
12092020a ಯದಿ ನಾತ್ಮನಿ ಪುತ್ರೇಷು ನ ಚೇತ್ಪೌತ್ರೇಷು ನಪ್ತೃಷು।
12092020c ನ ಹಿ ಪಾಪಂ ಕೃತಂ ಕರ್ಮ ಸದ್ಯಃ ಫಲತಿ ಗೌರಿವ।।
ಭೂಮಿಯಲ್ಲಿ ಬಿತ್ತಿದ ಬೀಜವು ಹೇಗೋ ಹಾಗೆ ಮಾಡಿದ ಪಾಪಕರ್ಮವು ಕೂಡಲೇ ಫಲಕೊಡದಿರಬಹುದು. ಪಾಪಮಾಡಿದವನಿಗಲ್ಲದಿದ್ದರೆ ಅವನ ಪುತ್ರ ಅಥವಾ ಪೌತ್ರರಿಗೆ ಫಲವನ್ನು ನೀಡುತ್ತದೆ.
12092021a ಯತ್ರಾಬಲೋ ವಧ್ಯಮಾನಸ್ತ್ರಾತಾರಂ ನಾಧಿಗಚ್ಚತಿ।
12092021c ಮಹಾನ್ದೈವಕೃತಸ್ತತ್ರ ದಂಡಃ ಪತತಿ ದಾರುಣಃ।।
ಅಬಲನು ವಧಿಸಲ್ಪಡುತ್ತಿರುವಾಗ ತ್ರಾತಾರನನ್ನು ಹೊಂದದೇ ಇದ್ದರೆ ದೈವಕೃತ ಮಹಾ ದಾರುಣ ದಂಡವು ರಕ್ಷಣೆಯನ್ನು ಕೊಡಬೇಕಾಗಿದ್ದವನ ಮೇಲೆಯೇ ಬೀಳುತ್ತದೆ.
12092022a ಯುಕ್ತಾ ಯದಾ ಜಾನಪದಾ ಭಿಕ್ಷಂತೇ ಬ್ರಾಹ್ಮಣಾ ಇವ।
12092022c ಅಭೀಕ್ಷ್ಣಂ ಭಿಕ್ಷುದೋಷೇಣ ರಾಜಾನಂ ಘ್ನಂತಿ ತಾದೃಶಾಃ।।
ಜನಪದದ ಎಲ್ಲರೂ ಬ್ರಾಹ್ಮಣರಂತೆ ಭಿಕ್ಷುರೂಪದಿಂದ ಭಿಕ್ಷೆಬೀಡಲು ತೊಡಗಿದರೆ ಅಂಥಹ ಸ್ಥಿತಿಗೆ ಕಾರಣನಾದ ರಾಜನು ವಿನಾಶಹೊಂದುತ್ತಾನೆ.
12092023a ರಾಜ್ಞೋ ಯದಾ ಜನಪದೇ ಬಹವೋ ರಾಜಪೂರುಷಾಃ।
12092023c ಅನಯೇನೋಪವರ್ತಂತೇ ತದ್ರಾಜ್ಞಃ ಕಿಲ್ಬಿಷಂ ಮಹತ್।।
ರಾಜನ ಅನೇಕ ಅಧಿಕಾರಿಗಳೇ ಜನಪದದಲ್ಲಿ ಅನ್ಯಾಯವಾಗಿ ನಡೆದುಕೊಂಡರೆ ಆಗ ಮಹಾರಾಜಕಿಲ್ಬಿಷವು ಪರಿಣಮಿಸುತ್ತದೆ.
12092024a ಯದಾ ಯುಕ್ತಾ ನಯಂತ್ಯರ್ಥಾನ್ಕಾಮಾದರ್ಥವಶೇನ ವಾ।
12092024c ಕೃಪಣಂ ಯಾಚಮಾನಾನಾಂ ತದ್ರಾಜ್ಞೋ ವೈಶಸಂ ಮಹತ್।।
ಕೃಪಣರಾಗಿ ಯಾಚಿಸುತ್ತಿದ್ದವರ ಧನವನ್ನು ಯುಕ್ತಿಯಿಂದಲೋ ಸ್ವೇಚ್ಛೆಯಿಂದಲೋ ಅಥವಾ ಲೋಭದಿಂದಲೋ ಕಸಿದುಕೊಂಡಿದ್ದೇ ಆದರೆ ಅದು ರಾಜನ ಮಹಾವಿನಾಶವನ್ನು ಸೂಚಿಸುತ್ತದೆ.
12092025a ಮಹಾವೃಕ್ಷೋ ಜಾಯತೇ ವರ್ಧತೇ ಚ ತಂ ಚೈವ ಭೂತಾನಿ ಸಮಾಶ್ರಯಂತಿ।
12092025c ಯದಾ ವೃಕ್ಷಶ್ಚಿದ್ಯತೇ ದಹ್ಯತೇ ವಾ ತದಾಶ್ರಯಾ ಅನಿಕೇತಾ ಭವಂತಿ।।
ಹುಟ್ಟಿ ಬೆಳೆದ ಮಹಾವೃಕ್ಷವೊಂದು ಅನೇಕ ಭೂತಗಳಿಗೆ ಆಶ್ರಯವನ್ನು ನೀಡುತ್ತಿರುತ್ತದೆ. ಯಾವಾಗ ಆ ವೃಕ್ಷವು ಕಡಿಯಲ್ಪಡುತ್ತದೆಯೋ ಅಥವಾ ಸುಟ್ಟುಹೋಗುತ್ತದೆಯೋ ಆಗ ಅದರ ಆಶ್ರಯದಲ್ಲಿದ್ದ ಎಲ್ಲವೂ ಆಶ್ರಯರಹಿತವಾಗುತ್ತವೆ.
12092026a ಯದಾ ರಾಷ್ಟ್ರೇ ಧರ್ಮಮಗ್ರ್ಯಂ ಚರಂತಿ ಸಂಸ್ಕಾರಂ ವಾ ರಾಜಗುಣಂ ಬ್ರುವಾಣಾಃ।
12092026c ತೈರೇವಾಧರ್ಮಶ್ಚರಿತೋ ಧರ್ಮಮೋಹಾತ್ ತೂರ್ಣಂ ಜಹ್ಯಾತ್ಸುಕೃತಂ ದುಷ್ಕೃತಂ ಚ।।
ರಾಷ್ಟ್ರದಲ್ಲಿ ಧರ್ಮವೇ ಪ್ರಧಾನವಾಗಿ ನಡೆಯುತ್ತಿರುವಾಗ ಸಂಸ್ಕಾರವಂತರು ರಾಜನ ಗುಣಗಾನ ಮಾಡುತ್ತಾರೆ. ಅದೇ ರಾಷ್ಟ್ರದಲ್ಲಿ ಧರ್ಮದ ಗೊಂದಲದಿಂದ ಅಧರ್ಮವು ನಡೆಯುತ್ತಿದ್ದಾಗ ಆ ದುಷ್ಕೃತವು ಬೇಗನೇ ರಾಜನ ಸುಕೃತವನ್ನೂ ನಾಶಪಡಿಸುತ್ತದೆ.
12092027a ಯತ್ರ ಪಾಪಾ ಜ್ಞಾಯಮಾನಾಶ್ಚರಂತಿ ಸತಾಂ ಕಲಿರ್ವಿಂದತಿ ತತ್ರ ರಾಜ್ಞಃ।
12092027c ಯದಾ ರಾಜಾ ಶಾಸ್ತಿ ನರಾನ್ನಶಿಷ್ಯಾನ್ ನ ತದ್ರಾಜ್ಯಂ ವರ್ಧತೇ ಭೂಮಿಪಾಲ।।
ಭೂಮಿಪಾಲ! ಎಲ್ಲಿ ಪಾಪಿಗಳು ಬಹಿರಂಗವಾಗಿ ಓಡಾಡುತ್ತಾ ಸತ್ಪುರುಷರನ್ನು ಪೀಡಿಸುತ್ತಾರೋ ಅಲ್ಲಿಯ ರಾಜನು ಕಲಿ ಎಂದು ತಿಳಿಯುತ್ತಾರೆ. ಯಾವಾಗ ರಾಜನು ಪಾಪಿಷ್ಟರನ್ನು ಶಿಕ್ಷಿಸುವುದಿಲ್ಲವೋ ಆಗ ರಾಜ್ಯವು ಅಭಿವೃದ್ಧಿಯನ್ನು ಹೊಂದುವುದಿಲ್ಲ.
12092028a ಯಶ್ಚಾಮಾತ್ಯಂ ಮಾನಯಿತ್ವಾ ಯಥಾರ್ಹಂ ಮಂತ್ರೇ ಚ ಯುದ್ಧೇ ಚ ನೃಪೋ ನಿಯುಂಜ್ಯಾತ್।
12092028c ಪ್ರವರ್ಧತೇ ತಸ್ಯ ರಾಷ್ಟ್ರಂ ನೃಪಸ್ಯ ಭುಂಕ್ತೇ ಮಹೀಂ ಚಾಪ್ಯಖಿಲಾಂ ಚಿರಾಯ।।
ಯಾವ ನೃಪನು ಅಮಾತ್ಯರನ್ನು ಗೌರವಿಸಿ ಯಥಾರ್ಹವಾಗಿ ಅವರನ್ನು ಮಂತ್ರಾಲೋಚನೆ ಮತ್ತು ಯುದ್ಧಗಳಲ್ಲಿ ನಿಯೋಜಿಸಿಕೊಳ್ಳುತ್ತಾನೋ ಅಂಥಹ ನೃಪನ ರಾಷ್ಟ್ರವು ವೃದ್ಧಿಯಾಗುತ್ತದೆ. ಮತ್ತು ಅವನು ಅಖಿಲ ಮಹಿಯನ್ನೂ ಬಹುಕಾಲ ಭೋಗಿಸುತ್ತಾನೆ.
12092029a ಅತ್ರಾಪಿ ಸುಕೃತಂ ಕರ್ಮ ವಾಚಂ ಚೈವ ಸುಭಾಷಿತಾಮ್।
12092029c ಸಮೀಕ್ಷ್ಯ ಪೂಜಯನ್ರಾಜಾ ಧರ್ಮಂ ಪ್ರಾಪ್ನೋತ್ಯನುತ್ತಮಮ್।।
ಅವರ ಸುಕೃತ ಕರ್ಮ ಮತ್ತು ಸುಭಾಷಿತ ಮಾತುಗಳನ್ನು ಸಮೀಕ್ಷಿಸಿ ಪೂಜಿಸುವ ರಾಜನು ಅನುತ್ತಮ ಧರ್ಮವನ್ನು ಪಡೆದುಕೊಳ್ಳುತ್ತಾನೆ.
12092030a ಸಂವಿಭಜ್ಯ ಯದಾ ಭುಂಕ್ತೇ ನ ಚಾನ್ಯಾನವಮನ್ಯತೇ।
12092030c ನಿಹಂತಿ ಬಲಿನಂ ದೃಪ್ತಂ ಸ ರಾಜ್ಞೋ ಧರ್ಮ ಉಚ್ಯತೇ।।
ಸಂಪತ್ತನ್ನು ಸರಿಯಾಗಿ ವಿಭಜಿಸಿ ಉಪಭೋಗಿಸುವುದು, ಅನ್ಯರನ್ನು ಅಪಮಾನಿಸದಿರುವುದು, ಮದಾಂಧ ಬಲಿಷ್ಠರನ್ನು ಸಂಹರಿಸುವುದು – ಇದು ರಾಜಧರ್ಮವೆಂದೆನಿಸಿಕೊಳ್ಳುತ್ತದೆ.
12092031a ತ್ರಾಯತೇ ಹಿ ಯದಾ ಸರ್ವಂ ವಾಚಾ ಕಾಯೇನ ಕರ್ಮಣಾ।
12092031c ಪುತ್ರಸ್ಯಾಪಿ ನ ಮೃಷ್ಯೇಚ್ಚ ಸ ರಾಜ್ಞೋ ಧರ್ಮ ಉಚ್ಯತೇ।।
ಮಾತು, ಶರೀರ ಮತ್ತು ಕಾರ್ಯಗಳಿಂದ ಎಲ್ಲವನ್ನೂ ರಕ್ಷಿಸುವುದು ಮತ್ತು ಮಗನ ಅಪರಾಧವನ್ನೂ ಕ್ಷಮಿಸದಿರುವುದು – ಇದು ರಾಜಧರ್ಮವೆಂದೆನಿಸಿಕೊಳ್ಳುತ್ತದೆ.
12092032a 2ಯದಾ ಶಾರಣಿಕಾನ್ರಾಜಾ ಪುತ್ರವತ್ಪರಿರಕ್ಷತಿ। 12092032c ಭಿನತ್ತಿ ನ ಚ ಮರ್ಯಾದಾಂ ಸ ರಾಜ್ಞೋ ಧರ್ಮ ಉಚ್ಯತೇ।।
ಶರಣುಬಂದವರನ್ನು ರಾಜನು ಪುತ್ರರಂತೆ ಪರಿರಕ್ಷಿಸುತ್ತಾನೆ. ಮತ್ತು ಅವನು ಮರ್ಯಾದೆಗಳನ್ನು ಮೀರಿ ನಡೆದುಕೊಳ್ಳುವುದಿಲ್ಲ. ಇದು ರಾಜಧರ್ಮವೆನಿಸಿಕೊಳ್ಳುತ್ತದೆ.
12092033a ಯದಾಪ್ತದಕ್ಷಿಣೈರ್ಯಜ್ಞೈರ್ಯಜತೇ ಶ್ರದ್ಧಯಾನ್ವಿತಃ।
12092033c ಕಾಮದ್ವೇಷಾವನಾದೃತ್ಯ ಸ ರಾಜ್ಞೋ ಧರ್ಮ ಉಚ್ಯತೇ।।
ಕಾಮದ್ವೇಷಗಳನ್ನು ಅನಾದರಿಸಿ ಶದ್ಧಾನ್ವಿತನಾಗಿ ಆಪ್ತದಕ್ಷಿಣೆಗಳಿಂದ ಯಜ್ಞಗಳನ್ನು ಯಜಿಸುವುದು ರಾಜಧರ್ಮವೆನಿಸಿಕೊಳ್ಳುತ್ತದೆ.
12092034a ಕೃಪಣಾನಾಥವೃದ್ಧಾನಾಂ ಯದಾಶ್ರು ವ್ಯಪಮಾರ್ಷ್ಟಿ ವೈ।
12092034c ಹರ್ಷಂ ಸಂಜನಯನ್ನೃಣಾಂ ಸ ರಾಜ್ಞೋ ಧರ್ಮ ಉಚ್ಯತೇ।।
ದೀನರು, ಅನಾಥರು ಮತ್ತು ವೃದ್ಧರ ಕಣ್ಣೀರನ್ನು ಒರೆಸಿ ಅವರಿಗೆ ಹರ್ಷವನ್ನುಂಟುಮಾಡುವುದು ರಾಜಧರ್ಮವೆನಿಸಿಕೊಳ್ಳುತ್ತದೆ.
12092035a ವಿವರ್ಧಯತಿ ಮಿತ್ರಾಣಿ ತಥಾರೀಂಶ್ಚಾಪಕರ್ಷತಿ।
12092035c ಸಂಪೂಜಯತಿ ಸಾಧೂಂಶ್ಚ ಸ ರಾಜ್ಞೋ ಧರ್ಮ ಉಚ್ಯತೇ।।
ಮಿತ್ರರನ್ನು ಹೆಚ್ಚಿಸಿಕೊಳ್ಳುವುದು, ಶತ್ರುಗಳನ್ನು ಕಡಿಮೆಮಾಡಿಕೊಳ್ಳುವುದು ಮತ್ತು ಸಾಧುಗಳನ್ನು ಪೂಜಿಸುವುದು -ಇವು ರಾಜಧರ್ಮವೆಂದೆನಿಸಿಕೊಳ್ಳುತ್ತವೆ.
12092036a ಸತ್ಯಂ ಪಾಲಯತಿ ಪ್ರಾಪ್ತ್ಯಾ ನಿತ್ಯಂ ಭೂಮಿಂ ಪ್ರಯಚ್ಚತಿ।
12092036c ಪೂಜಯತ್ಯತಿಥೀನ್ ಭೃತ್ಯಾನ್ಸ ರಾಜ್ಞೋ ಧರ್ಮ ಉಚ್ಯತೇ।।
ಸತ್ಯವನ್ನು ಪಾಲಿಸುವುದು, ನಿತ್ಯವೂ ಭೂದಾನಮಾಡುವುದು, ಅತಿಥಿಗಳನ್ನು ಮತ್ತು ಭರಣ-ಪೋಷಣೆ ಮಾಡಬೇಕಾದವರನ್ನು ಗೌರವಿಸುವುದು ಇವು ರಾಜಧರ್ಮಗಳೆಂದೆನಿಸಿಕೊಳ್ಳುತ್ತವೆ.
12092037a ನಿಗ್ರಹಾನುಗ್ರಹೌ ಚೋಭೌ ಯತ್ರ ಸ್ಯಾತಾಂ ಪ್ರತಿಷ್ಠಿತೌ।
12092037c ಅಸ್ಮಿಽಲ್ಲೋಕೇ ಪರೇ ಚೈವ ರಾಜಾ ತತ್ಪ್ರಾಪ್ನುತೇ ಫಲಮ್।।
ನಿಗ್ರಹ ಮತ್ತು ಅನುಗ್ರಹ ಇವೆರಡೂ ಯಾರಲ್ಲಿ ಪ್ರತಿಷ್ಠಿತವಾಗಿವೆಯೋ ಆ ರಾಜನು ಇಹ-ಪರಗಳೆರಡರಲ್ಲೂ ಉತ್ತಮ ಫಲವನ್ನು ಪಡೆದುಕೊಳ್ಳುತ್ತಾನೆ.
12092038a ಯಮೋ ರಾಜಾ ಧಾರ್ಮಿಕಾಣಾಂ ಮಾಂಧಾತಃ ಪರಮೇಶ್ವರಃ।
12092038c ಸಂಯಚ್ಚನ್ಭವತಿ ಪ್ರಾಣಾನ್ನಸಂಯಚ್ಚಂಸ್ತು ಪಾಪಕಃ।।
ಮಾಂಧಾತಾ! ರಾಜನು ದುಷ್ಟರಿಗೆ ಯಮನಂತಿರುತ್ತಾನೆ ಮತ್ತು ಧಾರ್ಮಿಕರಿಗೆ ಪರಮೇಶ್ವರನಂತಿರುತ್ತಾನೆ. ಇಂದ್ರಿಯಗಳನ್ನು ನಿಗ್ರಹಿಸಿಕೊಂಡಿರುವವರೆಗೆ ಅವನು ಶಾಸನಮಾಡಲು ಸಮರ್ಥನಾಗಿರುತ್ತಾನೆ. ಇಂದ್ರಿಯಗಳಿಗೆ ದಾಸನಾದಾಗ ಪತಿತನಾಗುತ್ತಾನೆ.
12092039a ಋತ್ವಿಕ್ಪುರೋಹಿತಾಚಾರ್ಯಾನ್ಸತ್ಕೃತ್ಯಾನವಮನ್ಯ ಚ।
12092039c ಯದಾ ಸಮ್ಯಕ್ ಪ್ರಗೃಹ್ಣಾತಿ ಸ ರಾಜ್ಞೋ ಧರ್ಮ ಉಚ್ಯತೇ।।
ಋತ್ವಿಜರನ್ನೂ ಪುರೋಹಿತರನ್ನೂ ಆಚಾರ್ಯರನ್ನೂ ಸತ್ಕರಿಸಿ ಅಪಮಾನಿಸದೇ ಬರಮಾಡಿಕೊಳ್ಳುವುದು ರಾಜಧರ್ಮವೆಂದೆನಿಸಿಕೊಳ್ಳುವುದು.
12092040a ಯಮೋ ಯಚ್ಚತಿ ಭೂತಾನಿ ಸರ್ವಾಣ್ಯೇವಾವಿಶೇಷತಃ।
12092040c ತಸ್ಯ ರಾಜ್ಞಾನುಕರ್ತವ್ಯಂ ಯಂತವ್ಯಾ ವಿಧಿವತ್ಪ್ರಜಾಃ।।
ಯಮನು ಹೇಗೆ ಸರ್ವ ಭೂತಗಳಲ್ಲಿಯೂ ವ್ಯತ್ಯಾಸಮಾಡದೇ ನಿಯಂತ್ರಿಸುತ್ತಾನೋ ಹಾಗೆ ವಿಧಿವತ್ತಾಗಿ ಪ್ರಜೆಗಳನ್ನು ನಿಯಂತ್ರಿಸುವುದು ರಾಜನ ಕರ್ತವ್ಯವು.
12092041a ಸಹಸ್ರಾಕ್ಷೇಣ ರಾಜಾ ಹಿ ಸರ್ವ ಏವೋಪಮೀಯತೇ।
12092041c ಸ ಪಶ್ಯತಿ ಹಿ ಯಂ ಧರ್ಮಂ ಸ ಧರ್ಮಃ ಪುರುಷರ್ಷಭ।।
ಪುರುಷರ್ಷಭ! ಆದುದರಿಂದಲೇ ರಾಜನನ್ನು ಸಹಸ್ರಾಕ್ಷ ಇಂದ್ರನಿಗೆ ಹೋಲಿಸುತ್ತಾರೆ. ಅವನು ಯಾವುದನ್ನು ಧರ್ಮವೆಂದು ತಿಳಿಯುತ್ತಾನೋ ಅದೇ ಧರ್ಮವೆನಿಸಿಕೊಳ್ಳುತ್ತದೆ.
12092042a ಅಪ್ರಮಾದೇನ ಶಿಕ್ಷೇಥಾಃ ಕ್ಷಮಾಂ ಬುದ್ಧಿಂ ಧೃತಿಂ ಮತಿಮ್।
12092042c ಭೂತಾನಾಂ ಸತ್ತ್ವಜಿಜ್ಞಾಸಾಂ ಸಾಧ್ವಸಾಧು ಚ ಸರ್ವದಾ।।
ನೀನು ಅಪ್ರಮತ್ತನಾಗಿದ್ದುಕೊಂಡು ಕ್ಷಮೆ, ಬುದ್ಧಿ, ಧೃತಿ ಮತ್ತು ಮತಿಯನ್ನು ಯಾವಾಗ ಹೇಗೆ ಉಪಯೋಗಿಸಬೇಕೆನ್ನುವುದನ್ನು ಕಲಿಯಬೇಕು. ಭೂತಗಳಿಗೆ ಯಾವುದು ಒಳ್ಳೆಯದು ಮತ್ತು ಒಳ್ಳೆಯಲ್ಲ ಎನ್ನುವುದನ್ನು ಸರ್ವದಾ ತಿಳಿದುಕೊಳ್ಳುತ್ತಿರಬೇಕು.
12092043a ಸಂಗ್ರಹಃ ಸರ್ವಭೂತಾನಾಂ ದಾನಂ ಚ ಮಧುರಾ ಚ ವಾಕ್।
12092043c ಪೌರಜಾನಪದಾಶ್ಚೈವ ಗೋಪ್ತವ್ಯಾಃ ಸ್ವಾ ಯಥಾ ಪ್ರಜಾಃ।।
ಸರ್ವಭೂತಗಳಿಂದ ವಿಶ್ವಾಸ ಸಂಪಾದನೆ, ದಾನ ಮತ್ತು ಮಧುರವಾದ ಮಾತು ಹಾಗು ಪೌರಜಾನಪದರನ್ನು ತನ್ನ ಮಕ್ಕಳಂತೆಯೇ ರಕ್ಷಿಸುವುದು ಇವುಗಳನ್ನು ಮಾಡುತ್ತಿರಬೇಕು.
12092044a ನ ಜಾತ್ವದಕ್ಷೋ ನೃಪತಿಃ ಪ್ರಜಾಃ ಶಕ್ನೋತಿ ರಕ್ಷಿತುಮ್।
12092044c ಭಾರೋ ಹಿ ಸುಮಹಾಂಸ್ತಾತ ರಾಜ್ಯಂ ನಾಮ ಸುದುಷ್ಕರಮ್।।
ಅಯ್ಯಾ! ಅದಕ್ಷನಾದ ನೃಪತಿಯು ಪ್ರಜೆಗಳನ್ನು ರಕ್ಷಿಸಲು ಶಕ್ಯನಾಗುವುದಿಲ್ಲ. ಆದುದರಿಂದ ರಾಜ್ಯದ ಇನ್ನೊಂದು ಹೆಸರು ಮಹತ್ತರ ಜವಾಬ್ದಾರಿ ಮತ್ತು ನಿರ್ವಹಿಸಲು ಕಷ್ಟಕರವಾದುದು ಎಂದಿದೆ.
12092045a ತದ್ದಂಡವಿನ್ನೃಪಃ ಪ್ರಾಜ್ಞಃ ಶೂರಃ ಶಕ್ನೋತಿ ರಕ್ಷಿತುಮ್।
12092045c ನ ಹಿ ಶಕ್ಯಮದಂಡೇನ ಕ್ಲೀಬೇನಾಬುದ್ಧಿನಾಪಿ ವಾ।।
ದಂಡನೀತಿಯನ್ನು ತಿಳಿದಿರುವ ಪ್ರಾಜ್ಞ ಶೂರನೇ ಪ್ರಜೆಗಳನ್ನು ರಕ್ಷಿಸಲು ಶಕ್ಯನಾಗಿರುತ್ತಾನೆ. ದಂಡನೆ ನೀಡದ ಅಬುದ್ಧಿ ಹೇಡಿಗೆ ಪ್ರಜೆಗಳನ್ನು ರಕ್ಷಿಸಲು ಶಕ್ಯವಾಗುವುದಿಲ್ಲ.
12092046a ಅಭಿರೂಪೈಃ ಕುಲೇ ಜಾತೈರ್ದಕ್ಷೈರ್ಭಕ್ತೈರ್ಬಹುಶ್ರುತೈಃ।
12092046c ಸರ್ವಾ ಬುದ್ಧೀಃ ಪರೀಕ್ಷೇಥಾಸ್ತಾಪಸಾಶ್ರಮಿಣಾಮಪಿ।।
ರೂಪವಂತರು, ಸತ್ಕುಲಪ್ರಸೂತರು, ದಕ್ಷರು, ಭಕ್ತರು ಮತ್ತು ಬಹುಶ್ರುತರಿಂದ ಆಶ್ರಮವಾಸಿಗಳನ್ನೂ ಸೇರಿ ಎಲ್ಲರ ಬುದ್ಧಿಗಳನ್ನು ಪರೀಕ್ಷಿಸಬೇಕು.
12092047a ತತಸ್ತ್ವಂ ಸರ್ವಭೂತಾನಾಂ ಧರ್ಮಂ ವೇತ್ಸ್ಯಸಿ ವೈ ಪರಮ್।
12092047c ಸ್ವದೇಶೇ ಪರದೇಶೇ ವಾ ನ ತೇ ಧರ್ಮೋ ವಿನಶ್ಯತಿ।।
ಹಾಗೆ ಮಾಡುವುದರಿಂದ ನೀನು ಸರ್ವಭೂತಗಳ ಪರಮ ಧರ್ಮವನ್ನು ತಿಳಿದುಕೊಳ್ಳುತ್ತೀಯೆ. ಸ್ವದೇಶವಾಗಲೀ ಪರದೇಶವಾಗಲೀ ನಿನ್ನ ಧರ್ಮವು ನಾಶವಾಗುವುದಿಲ್ಲ.
12092048a ಧರ್ಮಶ್ಚಾರ್ಥಶ್ಚ ಕಾಮಶ್ಚ ಧರ್ಮ ಏವೋತ್ತರೋ ಭವೇತ್।
12092048c ಅಸ್ಮಿಽಲ್ಲೋಕೇ ಪರೇ ಚೈವ ಧರ್ಮವಿತ್ಸುಖಮೇಧತೇ।।
ಧರ್ಮ-ಅರ್ಥ-ಕಾಮಗಳಲ್ಲಿ ಧರ್ಮವೇ ಉತ್ತಮವಾದುದು. ಈ ಲೋಕದಲ್ಲಿ ಮತ್ತು ಪರಲೋಕದಲ್ಲಿ ಕೂಡ ಧರ್ಮವೇ ಸುಖವನ್ನು ನೀಡುತ್ತದೆ.
12092049a ತ್ಯಜಂತಿ ದಾರಾನ್ಪ್ರಾಣಾಂಶ್ಚ ಮನುಷ್ಯಾಃ ಪ್ರತಿಪೂಜಿತಾಃ।
12092049c ಸಂಗ್ರಹಶ್ಚೈವ ಭೂತಾನಾಂ ದಾನಂ ಚ ಮಧುರಾ ಚ ವಾಕ್।।
12092050a ಅಪ್ರಮಾದಶ್ಚ ಶೌಚಂ ಚ ತಾತ ಭೂತಿಕರಂ ಮಹತ್।
12092050c ಏತೇಭ್ಯಶ್ಚೈವ ಮಾಂಧಾತಃ ಸತತಂ ಮಾ ಪ್ರಮಾದಿಥಾಃ।।
ಅಯ್ಯಾ! ಮಾಂಧಾತಾ! ನೀನು ಸಮ್ಮಾನಿಸಿದ ಮನುಷ್ಯರು ನಿನಗಾಗಿ ಪತ್ನಿಯರು ಮತ್ತು ಪ್ರಾಣಗಳನ್ನೂ ತೊರೆಯುತ್ತಾರೆ. ಪ್ರಜಾಸಂಗ್ರಹ, ದಾನ, ಮಧುರ ಮಾತು, ಅಪ್ರಮತ್ತತೆ ಮತ್ತು ಶೌಚ ಇವು ಮಹತ್ತರ ಐಶ್ವರ್ಯವನ್ನುಂಟುಮಾಡುತ್ತವೆ. ಇವುಗಳಿಂದ ನೀನು ಎಂದೂ ಚ್ಯುತನಾಗಬಾರದು.
12092051a ಅಪ್ರಮತ್ತೋ ಭವೇದ್ರಾಜಾ ಚಿದ್ರದರ್ಶೀ ಪರಾತ್ಮನೋಃ।
12092051c ನಾಸ್ಯ ಚಿದ್ರಂ ಪರಃ ಪಶ್ಯೇಚ್ಚಿದ್ರೇಷು ಪರಮನ್ವಿಯಾತ್।।
ರಾಜನು ಅಪ್ರಮತ್ತನಾಗಿರಬೇಕು. ತನ್ನಲ್ಲಿ ಮತ್ತು ಇತರರಲ್ಲಿರುವ ದುರ್ಬಲತೆಗಳನ್ನು ಕಂಡುಕೊಂಡಿರಬೇಕು. ಆದರೆ ತನ್ನಲ್ಲಿರುವ ದೌರ್ಬಲ್ಯವು ಪರರಿಗೆ ಕಾಣದಂತಿರಬೇಕು. ಶತ್ರುಗಳ ದೌರ್ಬಲ್ಯದ ಮೇಲೆ ಗಮವವಿಟ್ಟಿರಬೇಕು.
12092052a ಏತದ್ವೃತ್ತಂ ವಾಸವಸ್ಯ ಯಮಸ್ಯ ವರುಣಸ್ಯ ಚ।
12092052c ರಾಜರ್ಷೀಣಾಂ ಚ ಸರ್ವೇಷಾಂ ತತ್ತ್ವಮಪ್ಯನುಪಾಲಯ।।
ಇಂತರ ವರ್ತನೆಯು ವಾಸವ, ಯಮ, ವರುಣ ಮತ್ತು ರಾಜರ್ಷಿಗಳಲ್ಲಿವೆ. ಎಲ್ಲರೂ ಪರಿಪಾಲಿಸುತ್ತಿದ್ದ ಈ ರಾಜಧರ್ಮವನ್ನು ನೀನೂ ಪರಿಪಾಲಿಸು.
12092053a ತತ್ಕುರುಷ್ವ ಮಹಾರಾಜ ವೃತ್ತಂ ರಾಜರ್ಷಿಸೇವಿತಮ್।
12092053c ಆತಿಷ್ಠ ದಿವ್ಯಂ ಪಂಥಾನಮಹ್ನಾಯ ಭರತರ್ಷಭ।।
ಮಹಾರಾಜಾ! ಭರತರ್ಷಭ! ರಾಜರ್ಷಿಸೇವಿತವಾದ ಈ ವರ್ತನೆಯಂತೆಯೇ ನಡೆದುಕೋ. ದಿವ್ಯ ಮಾರ್ಗವನ್ನು ಆಶ್ರಯಿಸು.
12092054a ಧರ್ಮವೃತ್ತಂ ಹಿ ರಾಜಾನಂ ಪ್ರೇತ್ಯ ಚೇಹ ಚ ಭಾರತ।
12092054c ದೇವರ್ಷಿಪಿತೃಗಂಧರ್ವಾಃ ಕೀರ್ತಯಂತ್ಯಮಿತೌಜಸಃ।।
ಭಾರತ! ಧರ್ಮವ್ರತ ರಾಜನ ಕೀರ್ತಿಯನ್ನು ಅವನ ಮರಣಾನಂತರ ದೇವರ್ಷಿ-ಪಿತೃ-ಗಂಧರ್ವರು ಗಾನಮಾಡುತ್ತಿರುತ್ತಾರೆ.””
12092055 ಭೀಷ್ಮ ಉವಾಚ।
12092055a ಸ ಏವಮುಕ್ತೋ ಮಾಂಧಾತಾ ತೇನೋತಥ್ಯೇನ ಭಾರತ।
12092055c ಕೃತವಾನವಿಶಂಕಸ್ತದೇಕಃ ಪ್ರಾಪ ಚ ಮೇದಿನೀಮ್।।
ಭೀಷ್ಮನು ಹೇಳಿದನು: “ಭಾರತ! ಉತಥ್ಯನು ಹೀಗೆ ಹೇಳಲು ಮಾಂಧಾತನು ಸಂದೇಹರಹಿತನಾಗಿ ಅವನು ಹೇಳಿದಂತೆಯೇ ಮಾಡಿ ಈ ಭೂಮಂಡಲಕ್ಕೆ ಏಕಚಕ್ರಾಧಿಪತಿಯಾದನು.
12092056a ಭವಾನಪಿ ತಥಾ ಸಮ್ಯಙ್ಮಾಂಧಾತೇವ ಮಹೀಪತಿಃ।
12092056c ಧರ್ಮಂ ಕೃತ್ವಾ ಮಹೀಂ ರಕ್ಷನ್ಸ್ವರ್ಗೇ ಸ್ಥಾನಮವಾಪ್ಸ್ಯಸಿ।।
ನೀನೂ ಕೂಡ ಮಹೀಪತಿ ಮಾಂಧಾತನಂತೆ ಉತ್ತಮನಾಗಿ ಧರ್ಮವನ್ನಾಚರಿಸಿ ಮಹಿಯನ್ನು ರಕ್ಷಿಸಿ ಸ್ವರ್ಗದಲ್ಲಿ ಸ್ಥಾನವನ್ನು ಪಡೆದುಕೊಳ್ಳುತ್ತೀಯೆ.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಶಾಂತಿ ಪರ್ವಣಿ ರಾಜಧರ್ಮ ಪರ್ವಣಿ ಉತಥ್ಯಗೀತಾಸು ದ್ವಿನವತಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತ ಶಾಂತಿ ಪರ್ವದ ರಾಜಧರ್ಮ ಪರ್ವದಲ್ಲಿ ಉತಥ್ಯಗೀತ ಎನ್ನುವ ತೊಂಭತ್ತೆರಡನೇ ಅಧ್ಯಾಯವು.
-
ಮಾ ಸ್ಮತಾತ ರಣೇ ಸ್ಥಿತ್ವಾ ಭುಂಜೀಥಾ ದುರ್ಬಲಂ ಜನಮ್। (ಭಾರತ ದರ್ಶನ). ↩︎
-
ಇದಕ್ಕೆ ಮೊದಲು ಈ ಮೂರು ಶ್ಲೋಕಗಳಿವೆ: ಸಂವಿಭಜ್ಯ ಯದಾ ಭುಂಕ್ತೇ ನೃಪತಿರ್ದುರ್ಬಲಾನ್ನರಾನ್। ತದಾ ಭವಂತಿ ಬಲಿನಃ ಸ ರಾಜ್ಞೋ ಧರ್ಮ ಉಚ್ಯತೇ।। ಯದಾ ರಕ್ಷತಿ ರಾಷ್ಟ್ರಾಣಿ ಯದಾ ದಸ್ಯೂನಪೋಹತಿ। ಯದಾ ಜಯತಿ ಸಂಗ್ರಾಮೇ ಸ ರಾಜ್ಞೋ ಧರ್ಮ ಉಚ್ಯತೇ।। ಪಾಪಮಾಚರತೋ ಯತ್ರ ಕರ್ಮಣಾ ವ್ಯಾಹೃತೇನ ವಾ। ಪ್ರಿಯಸ್ಯಾಪಿ ನ ಮೃಷ್ಯೇತ ಸ ರಾಜ್ಞೋ ಧರ್ಮ ಉಚ್ಯತೇ।। (ಭಾರತದರ್ಶನ/ಗೀತಾ ಪ್ರೆಸ್). ↩︎