090 ರಾಷ್ಟ್ರಗುಪ್ತಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ರಾಜಧರ್ಮ ಪರ್ವ

ಅಧ್ಯಾಯ 90

ಸಾರ

ರಾಜನ ಕರ್ತವ್ಯಗಳು (1-26).

12090001 ಭೀಷ್ಮ ಉವಾಚ।
12090001a ವನಸ್ಪತೀನ್ ಭಕ್ಷ್ಯಫಲಾನ್ನ ಚಿಂದ್ಯುರ್ವಿಷಯೇ ತವ।
12090001c ಬ್ರಾಹ್ಮಣಾನಾಂ ಮೂಲಫಲಂ ಧರ್ಮ್ಯಮಾಹುರ್ಮನೀಷಿಣಃ।।

ಭೀಷ್ಮನು ಹೇಳಿದನು: “ನಿನ್ನ ರಾಜ್ಯದಲ್ಲಿ ತಿನ್ನುವ ಹಣ್ಣುಗಳನ್ನು ನೀಡುವ ವನಸ್ಪತಿಗಳನ್ನು ಕಡಿಯದಿರಲಿ. ಫಲ-ಮೂಲಗಳು ಬ್ರಾಹ್ಮಣರಿಗೆ ಸೇರಿದ್ದವು ಎಂದು ಧರ್ಮವನ್ನು ತಿಳಿದವರು ಹೇಳುತ್ತಾರೆ.

12090002a ಬ್ರಾಹ್ಮಣೇಭ್ಯೋಽತಿರಿಕ್ತಂ ಚ ಭುಂಜೀರನ್ನಿತರೇ ಜನಾಃ।
12090002c ನ ಬ್ರಾಹ್ಮಣೋಪರೋಧೇನ ಹರೇದನ್ಯಃ ಕಥಂ ಚನ।।

ಬ್ರಾಹ್ಮಣರು ಸೇವಿಸಿ ಅಧಿಕವಾಗಿರುವ ಮೂಲ-ಫಲಗಳನ್ನು ಇತರ ಜನರು ಭುಂಜಿಸಬೇಕು. ಬ್ರಾಹ್ಮಣರಿಂದ ಇದನ್ನು ಕಸಿದುಕೊಳ್ಳುವ ಅಪರಾಧವನ್ನು ಎಂದೂ ಮಾಡಬಾರದು.

12090003a ವಿಪ್ರಶ್ಚೇತ್ತ್ಯಾಗಮಾತಿಷ್ಠೇದಾಖ್ಯಾಯಾವೃತ್ತಿಕರ್ಶಿತಃ।
12090003c ಪರಿಕಲ್ಪ್ಯಾಸ್ಯ ವೃತ್ತಿಃ ಸ್ಯಾತ್ಸದಾರಸ್ಯ ನರಾಧಿಪ।।

ನರಾಧಿಪ! ಸ್ವವೃತ್ತಿಯಿಂದ ಜೀವನವನ್ನು ನಡೆಸಲು ಅಶಕ್ಯನಾಗಿ ದೇಶವನ್ನು ತ್ಯಜಿಸಿ ಅನ್ಯ ದೇಶಕ್ಕೆ ಹೊರಟರೆ ಪರಿವಾರ ಸಹಿತ ಅವನನ್ನು ತಡೆದು ವೃತ್ತಿಯನ್ನು ಕಲ್ಪಿಸಿಕೊಡುವುದು ರಾಜನ ಕರ್ತವ್ಯವಾಗಿರುತ್ತದೆ.

12090004a ಸ ಚೇನ್ನೋಪನಿವರ್ತೇತ ವಾಚ್ಯೋ ಬ್ರಾಹ್ಮಣಸಂಸದಿ।
12090004c ಕಸ್ಮಿನ್ನಿದಾನೀಂ ಮರ್ಯಾದಾಮಯಂ ಲೋಕಃ ಕರಿಷ್ಯತಿ।।

ಆದರೂ ಅವನು ಹಿಂದಿರುಗದಿದ್ದರೆ ಬ್ರಾಹ್ಮಣಸಂಸದಿಯಲ್ಲಿ ಅವನನ್ನು ಉದ್ದೇಶಿಸಿ “ನೀನು ಹೀಗೆ ಮಾಡಿದರೆ ನನ್ನ ಪ್ರಜೆಗಳು ಯಾರನ್ನಾಶ್ರಯಿಸಿ ಧರ್ಮದ ಮರ್ಯಾದೆಯನ್ನು ಪರಿಪಾಲಿಸುವರು?” ಎಂದು ಕೇಳಿಕೊಳ್ಳಬೇಕು.

12090005a ಅಸಂಶಯಂ ನಿವರ್ತೇತ ನ ಚೇದ್ವಕ್ಷ್ಯತ್ಯತಃ ಪರಮ್।
12090005c ಪೂರ್ವಂ ಪರೋಕ್ಷಂ ಕರ್ತವ್ಯಮೇತತ್ಕೌಂತೇಯ ಶಾಸನಮ್।।

ಕೌಂತೇಯ! ಆಗ ಅವನು ನಿಃಸಂಶಯವಾಗಿಯೂ ಹಿಂದಿರುಗುತ್ತಾನೆ. ಆಗಲೂ ಹಿಂದಿರುಗದೇ ಇದ್ದರೆ ಅವನಿಗೆ ಇನ್ನೊಮ್ಮೆ “ಹಿಂದೆ ನಾನೇನಾದರೂ ಪರೋಕ್ಷವಾಗಿ ಅಪರಾಧಗೈದಿದ್ದರೆ ಅದನ್ನು ಕ್ಷಮಿಸಬೇಕು” ಎಂದು ಕೇಳಿಕೊಳ್ಳಬೇಕು. ಇದು ರಾಜ ಶಾಸನದ ಕರ್ತವ್ಯವಾಗಿರುತ್ತದೆ.

12090006a ಆಹುರೇತಜ್ಜನಾ ಬ್ರಹ್ಮನ್ನ ಚೈತಚ್ಚ್ರದ್ದಧಾಮ್ಯಹಮ್।
12090006c ನಿಮಂತ್ರ್ಯಶ್ಚ ಭವೇದ್ಭೋಗೈರವೃತ್ತ್ಯಾ ಚೇತ್ತದಾಚರೇತ್।।

ಬ್ರಾಹ್ಮಣರಿಗೆ ಭೋಗವಸ್ತುಗಳನ್ನು ನೀಡಬೇಕು ಮತ್ತು ವೃತ್ತಿಯನ್ನು ಮಾಡಿಕೊಡಬೇಕು ಎಂದು ಜನರು ಹೇಳುತ್ತಾರೆ. ಆದರೆ ಅದರಲ್ಲಿ ನನಗೆ ಶ್ರದ್ಧೆಯಿಲ್ಲ1.

12090007a ಕೃಷಿಗೋರಕ್ಷ್ಯವಾಣಿಜ್ಯಂ ಲೋಕಾನಾಮಿಹ ಜೀವನಮ್।
12090007c ಊರ್ಧ್ವಂ ಚೈವ ತ್ರಯೀ ವಿದ್ಯಾ ಸಾ ಭೂತಾನ್ ಭಾವಯತ್ಯುತ।।

ಕೃಷಿ, ಗೋರಕ್ಷೆ ಮತ್ತು ವಾಣಿಜ್ಯಗಳು ಈ ಲೋಕದಲ್ಲಿ ಜೀವನಕ್ಕೆ ಆಧಾರಭೂತಗಳಾಗಿವೆ. ಮೂರು ವೇದಗಳು ಊರ್ಧ್ವಲೋಕದಲ್ಲಿ ಮನುಷ್ಯನ ರಕ್ಷಣೆಗೆ ಸಾಧಕಗಳಾಗಿವೆ. ಆ ಮೂರು ವೇದಗಳೂ ಯಜ್ಞಗಳ ಮೂಲಕ ಪ್ರಾಣಿಗಳ ಉತ್ಪತ್ತಿ-ವೃದ್ಧಿಗಳಿಗೆ ಕಾರಣಗಳಾಗಿವೆ.

12090008a ತಸ್ಯಾಂ ಪ್ರಯತಮಾನಾಯಾಂ ಯೇ ಸ್ಯುಸ್ತತ್ಪರಿಪಂಥಿನಃ।
12090008c ದಸ್ಯವಸ್ತದ್ವಧಾಯೇಹ ಬ್ರಹ್ಮಾ ಕ್ಷತ್ರಮಥಾಸೃಜತ್।।

ಅಧ್ಯಯನ-ಅಧ್ಯಾಪನಗಳಿಗೆ ಮತ್ತು ವೇದೋಕ್ತ ಯಜ್ಞ-ಯಾಗಾದಿಗಳಿಗೆ ಬಾಧೆಯನ್ನುಂಟುಮಾಡುವವರೇ ದಸ್ಯುಗಳು. ದಸ್ಯುಗಳ ವಧೆಗಾಗಿಯೇ ಬ್ರಹ್ಮನು ಕ್ಷತ್ರಿಯರನ್ನು ಸೃಷ್ಟಿಸಿದ್ದಾನೆ.

12090009a ಶತ್ರೂನ್ ಜಹಿ ಪ್ರಜಾ ರಕ್ಷ ಯಜಸ್ವ ಕ್ರತುಭಿರ್ನೃಪ।
12090009c ಯುಧ್ಯಸ್ವ ಸಮರೇ ವೀರೋ ಭೂತ್ವಾ ಕೌರವನಂದನ।।

ನೃಪ! ಕೌರವನಂದನ! ಶತ್ರುಗಳನ್ನು ಸಂಹರಿಸು. ಪ್ರಜೆಗಳನ್ನು ರಕ್ಷಿಸು. ಕ್ರತುಗಳನ್ನು ಯಾಜಿಸು. ವೀರನಾಗಿ ಸಮರದಲ್ಲಿ ಯುದ್ಧಮಾಡು.

12090010a ಸಂರಕ್ಷ್ಯಾನ್ ಪಾಲಯೇದ್ರಾಜಾ ಯಃ ಸ ರಾಜಾರ್ಯಕೃತ್ತಮಃ।
12090010c ಯೇ ಕೇ ಚಿತ್ತಾನ್ನ ರಕ್ಷಂತಿ ತೈರರ್ಥೋ ನಾಸ್ತಿ ಕಶ್ಚನ।।

ಸಂರಕ್ಷಿಸಬೇಕಾದವರನ್ನು ಪಾಲಿಸುವ ರಾಜನು ರಾಜರಲ್ಲಿಯೇ ಆರ್ಯನೆನಿಸಿಕೊಳ್ಳುತ್ತಾನೆ. ರಕ್ಷಿಸಬೇಕಾದವರನ್ನು ರಕ್ಷಿಸದೇ ಇರುವ ರಾಜನಿಂದ ಜಗತ್ತಿಗೆ ಯಾವ ವಿಧವಾದ ಪ್ರಯೋಜನವೂ ಇಲ್ಲ.

12090011a ಸದೈವ ರಾಜ್ಞಾ ಬೋದ್ಧವ್ಯಂ2 ಸರ್ವಲೋಕಾದ್ಯುಧಿಷ್ಠಿರ।
12090011c ತಸ್ಮಾದ್ಧೇತೋರ್ಹಿ ಭುಂಜೀತ ಮನುಷ್ಯಾನೇವ ಮಾನವಃ।।

ಯುಧಿಷ್ಠಿರ! ರಾಜನಾದವನು ಸದೈವ ಸರ್ವಪ್ರಜೆಗಳನೂ ತಿಳಿದುಕೊಂಡಿರಬೇಕು. ಆ ಕಾರಣಕ್ಕಾಗಿಯೇ ಆ ಮಾನವಶ್ರೇಷ್ಠನು ಎಲ್ಲ ಕಡೆ ಗುಪ್ತಚಾರರನ್ನು ನಿಯಮಿಸಿಕೊಂಡಿರುತ್ತಾನೆ.

12090012a ಅಂತರೇಭ್ಯಃ ಪರಾನ್ರಕ್ಷನ್ ಪರೇಭ್ಯಃ ಪುನರಂತರಾನ್।
12090012c ಪರಾನ್ಪರೇಭ್ಯಃ ಸ್ವಾನ್ ಸ್ವೇಭ್ಯಃ ಸರ್ವಾನ್ಪಾಲಯ ನಿತ್ಯದಾ।।

ನಿನ್ನ ಅಂತರಂಗದ ಮನುಷ್ಯರಿಂದ ಬಹಿರಂಗದ ಮನುಷ್ಯರನ್ನು ರಕ್ಷಿಸು. ಹೊರಗಡೆಯವರಿಂದ ಒಳಗಿನ ಜನರನ್ನು ರಕ್ಷಿಸು. ಬಹಿರಂಗದ ಪ್ರಜೆಗಳನ್ನು ಶತ್ರುಗಳಿಂದ ರಕ್ಷಿಸು. ಅಂತರಂಗದ ಜನರಲ್ಲಿಯೇ ಬೇಧ-ಭಾವವುಂಟಾಗಬಹುದು. ಹೀಗೆ ನಿನಗೆ ಸಂಬಂಧಿಸಿದ ಎಲ್ಲರನ್ನೂ ಮತ್ತು ಪ್ರಜೆಗಳನ್ನೂ ರಕ್ಷಿಸು.

12090013a ಆತ್ಮಾನಂ ಸರ್ವತೋ ರಕ್ಷನ್ರಾಜಾ ರಕ್ಷೇತ ಮೇದಿನೀಮ್।
12090013c ಆತ್ಮಮೂಲಮಿದಂ ಸರ್ವಮಾಹುರ್ಹಿ ವಿದುಷೋ ಜನಾಃ।।

ರಾಜನಾದವನು ಮೊದಲು ಸರ್ವಪ್ರಕಾರಗಳಿಂದಲೂ ಆತ್ಮರಕ್ಷಣೆಯನ್ನು ಮಾಡಿಕೊಳ್ಳಬೇಕು. ನಂತರ ರಾಜ್ಯವನ್ನು ರಕ್ಷಿಸಬೇಕು. ಇವೆಲ್ಲವೂ ಆತ್ಮಮೂಲವಾಗಿವೆ ಎಂದು ವಿದ್ವಾಂಸರು ಹೇಳುತ್ತಾರೆ.

12090014a ಕಿಂ ಚಿದ್ರಂ ಕೋಽನುಷಂಗೋ ಮೇ ಕಿಂ ವಾಸ್ತ್ಯವಿನಿಪಾತಿತಮ್।
12090014c ಕುತೋ ಮಾಮಾಸ್ರವೇದ್ದೋಷ ಇತಿ ನಿತ್ಯಂ ವಿಚಿಂತಯೇತ್।।

ನನ್ನಲ್ಲಿ ಯಾವ ದೌರ್ಬಲ್ಯಗಳಿವೆ? ನನ್ನಲ್ಲಿ ಯಾವರೀತಿಯ ದುರ್ವ್ಯಸನಗಳಿವೆ? ನನಗೆ ನಿಜವಾಗಿಯೂ ಪ್ರಜೆಗಳನ್ನು ರಕ್ಷಿಸುವುದರಲ್ಲಿ ಆಸಕ್ತಿಯಿದೆಯೇ? ಅದಕ್ಕೆ ಕಾರ್ಯವಿಧಾನವಿದೆಯೇ? ಇನ್ನೂ ದೂರವಾಗದೇ ಇರುವ ಯಾವ ವ್ಯಸನಗಳು ನನ್ನಲ್ಲಿವೆ? ಇವುಗಳ ಕುರಿತು ರಾಜನಾದವನು ನಿತ್ಯವೂ ಚಿಂತಿಸುತ್ತಿರಬೇಕು.

12090015a ಗುಪ್ತೈಶ್ಚಾರೈರನುಮತೈಃ ಪೃಥಿವೀಮನುಚಾರಯೇತ್।
12090015c ಸುನೀತಂ ಯದಿ ಮೇ ವೃತ್ತಂ ಪ್ರಶಂಸಂತಿ ನ ವಾ ಪುನಃ।
12090015e ಕಚ್ಚಿದ್ರೋಚೇಜ್ಜನಪದೇ ಕಚ್ಚಿದ್ರಾಷ್ಟ್ರೇ ಚ ಮೇ ಯಶಃ।।

“ನಾನು ನಡೆಸಿರುವ ವ್ಯವವಹಾರಗಳನ್ನು ಜನರು ಪುನಃ ಪುನಃ ಪ್ರಶಂಸಿಸುತ್ತಿರುವರೇ? ಕೆಲವು ಜನಪದಗಳಲ್ಲಿ ಮಾತ್ರ ಜನರು ನನ್ನನ್ನು ಪ್ರಶಂಸಿಸುತ್ತಾರೆಯೇ? ಅಥವಾ ರಾಷ್ಟ್ರಾದ್ಯಂತ ಜನರು ನನ್ನನ್ನು ಬಯಸುತ್ತಾರೆಯೇ?” ಎನ್ನುವುದನ್ನು ತಿಳಿದುಕೊಳ್ಳಲು ರಾಜನಾದವನು ವಿಶ್ವಾಸಪಾತ್ರ ಗುಪ್ತಚಾರರನ್ನು ಭೂಮಂಡಲದ ಎಲ್ಲಕಡೆ ಕಳುಹಿಸಬೇಕು.

12090016a ಧರ್ಮಜ್ಞಾನಾಂ ಧೃತಿಮತಾಂ ಸಂಗ್ರಾಮೇಷ್ವಪಲಾಯಿನಾಮ್।
12090016c ರಾಷ್ಟ್ರಂ ಚ ಯೇಽನುಜೀವಂತಿ ಯೇ ಚ ರಾಜ್ಞೋಽನುಜೀವಿನಃ।।
12090017a ಅಮಾತ್ಯಾನಾಂ ಚ ಸರ್ವೇಷಾಂ ಮಧ್ಯಸ್ಥಾನಾಂ ಚ ಸರ್ವಶಃ।
12090017c ಯೇ ಚ ತ್ವಾಭಿಪ್ರಶಂಸೇಯುರ್ನಿಂದೇಯುರಥ ವಾ ಪುನಃ।
12090017e ಸರ್ವಾನ್ಸುಪರಿಣೀತಾಂಸ್ತಾನ್ಕಾರಯೇತ ಯುಧಿಷ್ಠಿರ।।

ಯುಧಿಷ್ಠಿರ! ನಿನ್ನ ಪ್ರಶಂಸೆಮಾಡುವ ಮತ್ತು ನಿಂದನೆಯನ್ನು ಮಾಡುವ ಎಲ್ಲ ಧರ್ಮಜ್ಞರನ್ನೂ, ಧೈರ್ಯಶಾಲಿಗಳನ್ನೂ, ಸಂಗ್ರಾಮದಲ್ಲಿ ಪಲಾಯನಮಾಡದಿರುವವರನ್ನೂ, ನಿನ್ನ ರಾಷ್ಟ್ರದಲ್ಲಿಯೇ ಉಪಜೀವನವನ್ನು ನಡೆಸುತ್ತಿರುವವರನ್ನೂ, ರಾಜನನ್ನೇ ಆಶ್ರಯಿಸಿ ಜೀವಿಸಿರುವವರನ್ನೂ, ಅಮಾತ್ಯರನ್ನೂ, ಮಧ್ಯಸ್ಥರನ್ನೂ – ಎಲ್ಲರನ್ನೂ ನೀನು ಯಥಾಯೋಗ್ಯವಾಗಿ ಸತ್ಕರಿಸಬೇಕು.

12090018a ಏಕಾಂತೇನ ಹಿ ಸರ್ವೇಷಾಂ ನ ಶಕ್ಯಂ ತಾತ ರೋಚಿತುಮ್।
12090018c ಮಿತ್ರಾಮಿತ್ರಮಥೋ ಮಧ್ಯಂ ಸರ್ವಭೂತೇಷು ಭಾರತ।।

ಅಯ್ಯಾ! ಭಾರತ! ಒಬ್ಬನೇ ಎಲ್ಲರಿಗೂ ಇಷ್ಟವಾಗಲು ಶಕ್ಯವಿಲ್ಲ. ಎಲ್ಲ ಜೀವಿಗಳಿಗೂ ಮಿತ್ರ, ಅಮಿತ್ರ ಮತ್ತು ಮಧ್ಯಸ್ಥ ಎನ್ನುವವರು ಇದ್ದೇ ಇರುತ್ತಾರೆ.

12090019a ತುಲ್ಯಬಾಹುಬಲಾನಾಂ ಚ ಗುಣೈರಪಿ ನಿಷೇವಿನಾಮ್।
12090019c ಕಥಂ ಸ್ಯಾದಧಿಕಃ ಕಶ್ಚಿತ್ಸ ತು ಭುಂಜೀತ ಮಾನವಾನ್।।

ಬಾಹುಬಲದಲ್ಲಿ ಸಮಾನನಾಗಿದ್ದರೂ ಮತ್ತು ಗುಣಗಳು ಒಂದೇ ಆಗಿದ್ದರೂ ಒಬ್ಬರು ಮಾತ್ರ ಹೇಗೆ ಎಲ್ಲರನ್ನೂ ಶಾಸನ ಮಾಡುತ್ತಾನೆ?

12090020a ಯೇ ಚರಾ ಹ್ಯಚರಾನದ್ಯುರದಂಷ್ಟ್ರಾನ್ದಂಷ್ಟ್ರಿಣಸ್ತಥಾ।
12090020c ಆಶೀವಿಷಾ ಇವ ಕ್ರುದ್ಧಾ ಭುಜಗಾ ಭುಜಗಾನಿವ।।

ಯಾವರೀತಿಯಲ್ಲಿ ಕೋಪಗೊಂಡ ವಿಷಸರ್ಪಗಳು ಇತರ ಚಿಕ್ಕ ಹಾವುಗಳನ್ನು ನುಂಗಿಹಾಕುತ್ತವೆಯೋ, ಚಲಿಸುವ ಪ್ರಾಣಿಗಳು ಚಲಿಸದಿರುವ ವಸ್ತುಗಳನ್ನು ನುಂಗಿಹಾಕುತ್ತವೆಯೋ, ಕೋರೆದಾಡೆಗಳಿರುವ ಪ್ರಾಣಿಗಳು ಕೋರೆದಾಡೆಗಳಿಲ್ಲದ ಪ್ರಾಣಿಗಳನ್ನು ತಿನ್ನುತ್ತವೆಯೋ ಹಾಗೆ ಪ್ರಬಲರಾದವರು ದುರ್ಬಲರಾದವರ ಮೇಲೆ ಅಧಿಕಾರವನ್ನು ನಡೆಸುತ್ತಾರೆ.

12090021a ಏತೇಭ್ಯಶ್ಚಾಪ್ರಮತ್ತಃ ಸ್ಯಾತ್ಸದಾ ಯತ್ತೋ ಯುಧಿಷ್ಠಿರ।
12090021c ಭಾರುಂಡಸದೃಶಾ ಹ್ಯೇತೇ ನಿಪತಂತಿ ಪ್ರಮಾದ್ಯತಃ।।

ಯುಧಿಷ್ಠಿರ! ಪ್ರಯತ್ನಶೀಲ ರಾಜನು ಇವೆಲ್ಲವುಗಳಿಂದ ಸದಾ ಅಪ್ರಮತ್ತನಾಗಿರಬೇಕು. ರಾಜನು ಪ್ರಮಾದಕ್ಕೊಳಗಾದರೆ ಗಂಡಭೇರುಂಡ ಸಮಾನ ಶತ್ರುಗಳು ರಾಜನ ಮೇಲೆ ಆಕ್ರಮಣ ಮಾಡುತ್ತಾರೆ.

12090022a ಕಚ್ಚಿತ್ತೇ ವಣಿಜೋ ರಾಷ್ಟ್ರೇ ನೋದ್ವಿಜಂತೇ ಕರಾರ್ದಿತಾಃ।
12090022c ಕ್ರೀಣಂತೋ ಬಹು ವಾಲ್ಪೇನ ಕಾಂತಾರಕೃತನಿಶ್ರಮಾಃ।।

ಕಾಡುಮೇಡುಗಳಲ್ಲಿ ಅಲೆದು ಶ್ರಮಪಟ್ಟು ದೊಡ್ಡ ಅಥವಾ ಅಲ್ಪ ಪ್ರಮಾಣದಲ್ಲಿ ಮಾರಾಟಮಾಡುವ ವಣಿಜರು ನಿನ್ನ ರಾಷ್ಟ್ರದಲ್ಲಿ ತೆರಿಗೆಯ ಭಾರದಿಂದ ಉದ್ವಿಗ್ನರಾಗುತ್ತಿಲ್ಲ ತಾನೇ?

12090023a ಕಚ್ಚಿತ್ಕೃಷಿಕರಾ ರಾಷ್ಟ್ರಂ ನ ಜಹತ್ಯತಿಪೀಡಿತಾಃ।
12090023c ಯೇ ವಹಂತಿ ಧುರಂ ರಾಜ್ಞಾಂ ಸಂಭರಂತೀತರಾನಪಿ।।

ಕೃಷಿಕರು ಅತಿಯಾಗಿ ಪೀಡಿತರಾಗಿ ನಿನ್ನ ರಾಷ್ಟ್ರವನ್ನು ಬಿಟ್ಟು ಹೋಗುತ್ತಿಲ್ಲ ತಾನೇ? ಏಕೆಂದರೆ ಅವರು ರಾಜನ ಭಾರವನ್ನು ಹೊರುತ್ತಾರೆ. ಪ್ರಜೆಗಳನ್ನೂ ಪಾಲಿಸುತ್ತಾರೆ.

12090024a ಇತೋ ದತ್ತೇನ ಜೀವಂತಿ ದೇವಾಃ ಪಿತೃಗಣಾಸ್ತಥಾ।
12090024c ಮನುಷ್ಯೋರಗರಕ್ಷಾಂಸಿ ವಯಾಂಸಿ ಪಶವಸ್ತಥಾ।।

ಇವರು ನೀಡುವ ಧಾನ್ಯಾದಿಗಳಿಂದಲೇ ದೇವತೆಗಳು, ಪಿತೃಗಳು, ಮನುಷ್ಯರು, ಉರಗ-ರಾಕ್ಷಸರು, ಪಶು-ಪಕ್ಷಿಗಳು ಎಲ್ಲವೂ ಜೀವನವನ್ನು ನಡೆಸುತ್ತವೆ.

12090025a ಏಷಾ ತೇ ರಾಷ್ಟ್ರವೃತ್ತಿಶ್ಚ ರಾಷ್ಟ್ರಗುಪ್ತಿಶ್ಚ ಭಾರತ।
12090025c ಏತಮೇವಾರ್ಥಮಾಶ್ರಿತ್ಯ ಭೂಯೋ ವಕ್ಷ್ಯಾಮಿ ಪಾಂಡವ।।

ಭಾರತ! ಪಾಂಡವ! ಇವು ರಾಷ್ಟ್ರದಲ್ಲಿ ನಡೆದುಕೊಳ್ಳುವ ಮತ್ತು ರಾಷ್ಟ್ರವನ್ನು ರಕ್ಷಿಸುವ ವಿಧಾನಗಳು. ಇದಕ್ಕೆ ಸಂಬಂಧಿಸಿದಂತೆ ಮುಂದೆಯೂ ಹೇಳುತ್ತೇನೆ.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ರಾಷ್ಟ್ರಗುಪ್ತೌ ನವತಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ರಾಷ್ಟ್ರಗುಪ್ತ ಎನ್ನುವ ತೊಂಭತ್ತನೇ ಅಧ್ಯಾಯವು.


  1. ಏಕೆಂದರೆ ಬ್ರಾಹ್ಮಣರು ಭೋಗಾಸಕ್ತರಲ್ಲ. ಜೀವನದ ವಿಷಯವಾಗಿಯೂ ಅವರು ಹೆಚ್ಚು ಯೋಚಿಸುವವರಲ್ಲ. ↩︎

  2. ಯೋದ್ಧವ್ಯಂ ಎಂಬ ಪಾಠಾಂತರವಿದೆ (ಭಾರತ ದರ್ಶನ). ↩︎