085 ಇಂದ್ರಬೃಹಸ್ಪತಿಸಂವಾದಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ರಾಜಧರ್ಮ ಪರ್ವ

ಅಧ್ಯಾಯ 85

ಸಾರ

ಸಾಂತ್ವನದ ಮಹತ್ವವನ್ನು ಪ್ರತಿಪಾದಿಸುವ ಶಕ್ರ-ಬೃಹಸ್ಪತಿ ಸಂವಾದ (1-11).

12085001 ಭೀಷ್ಮ ಉವಾಚ।
12085001a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್।
12085001c ಬೃಹಸ್ಪತೇಶ್ಚ ಸಂವಾದಂ ಶಕ್ರಸ್ಯ ಚ ಯುಧಿಷ್ಠಿರ।।

ಭೀಷ್ಮನು ಹೇಳಿದನು: “ಯುಧಿಷ್ಠಿರ! ಇದಕ್ಕೆ ಸಂಬಂಧಿಸಿದಂತೆ ಪುರಾತನ ಇತಿಹಾಸವಾದ ಬೃಹಸ್ಪತಿಯೊಡನೆ ಶಕ್ರನ ಸಂವಾದವನ್ನು ಉದಾಹರಿಸುತ್ತಾರೆ.

12085002 ಶಕ್ರ ಉವಾಚ।
12085002a ಕಿಂ ಸ್ವಿದೇಕಪದಂ ಬ್ರಹ್ಮನ್ಪುರುಷಃ ಸಮ್ಯಗಾಚರನ್।
12085002c ಪ್ರಮಾಣಂ ಸರ್ವಭೂತಾನಾಂ ಯಶಶ್ಚೈವಾಪ್ನುಯಾನ್ಮಹತ್।।

ಶಕ್ರನು ಹೇಳಿದನು: “ಬ್ರಹ್ಮನ್! ಪುರುಷನು ಯಾವುದನ್ನು ಚೆನ್ನಾಗಿ ಆಚರಿಸಿ ಸರ್ವಪ್ರಾಣಿಗಳಿಗೂ ಪ್ರಿಯನಾಗುವನೋ ಮತ್ತು ಶಾಶ್ವತ ಮಹಾ ಯಶಸ್ಸನ್ನು ಗಳಿಸುವನೋ ಅಂಥಹ ಒಂದು ಪದವು ಯಾವುದಿರಬಹುದು?”

12085003 ಬೃಹಸ್ಪತಿರುವಾಚ।
12085003a ಸಾಂತ್ವಮೇಕಪದಂ ಶಕ್ರ ಪುರುಷಃ ಸಮ್ಯಗಾಚರನ್।
12085003c ಪ್ರಮಾಣಂ ಸರ್ವಭೂತಾನಾಂ ಯಶಶ್ಚೈವಾಪ್ನುಯಾನ್ಮಹತ್।।

ಬೃಹಸ್ಪತಿಯು ಹೇಳಿದನು: “ಶಕ್ರ! ’ಸಾಂತ್ವನ’ ಎನ್ನುವುದೇ ಆ ಒಂದು ಪದವು ಯಾವುದರನ್ನು ಚೆನ್ನಾಗಿ ಆಚರಿಸುವುದರಿಂದ ಪುರುಷನು ಸರ್ವಪ್ರಾಣಿಗಳ ಪ್ರಿಯನಾಗುತ್ತಾನೆ ಮತ್ತು ಶಾಶ್ವತ ಮಹಾಯಶಸ್ಸನ್ನು ಗಳಿಸುತ್ತಾನೆ.

12085004a ಏತದೇಕಪದಂ ಶಕ್ರ ಸರ್ವಲೋಕಸುಖಾವಹಮ್।
12085004c ಆಚರನ್ಸರ್ವಭೂತೇಷು ಪ್ರಿಯೋ ಭವತಿ ಸರ್ವದಾ।।

ಶಕ್ರ! ಈ ಒಂದು ಪದವೇ ಸರ್ವಲೋಕಗಳಿಗೂ ಸುಖದಾಯಕವಾಗಿದೆ. ಎಲ್ಲಪ್ರಾಣಿಗಳೊಡನೆಯೂ ಅದೊಂದನ್ನು ಆಚರಿಸಿದ್ದೇ ಆದರೆ ಅಂಥವನು ಸರ್ವದಾ ಪ್ರಿಯನಾಗುತ್ತಾನೆ.

12085005a ಯೋ ಹಿ ನಾಭಾಷತೇ ಕಿಂ ಚಿತ್ಸತತಂ ಭ್ರುಕುಟೀಮುಖಃ।
12085005c ದ್ವೇಷ್ಯೋ ಭವತಿ ಭೂತಾನಾಂ ಸ ಸಾಂತ್ವಮಿಹ ನಾಚರನ್।।

ಸತತವೂ ಮುಖಗಂಟಿಕ್ಕಿಕೊಂಡು ಏನನ್ನೂ ಮಾತನಾಡದವನು ಸಾಂತ್ವನವನ್ನು ಆಚರಿಸದೇ ಇರುವುದರಿಂದ ಸರ್ವಜೀವಿಗಳಿಗಳ ದ್ವೇಷಿಯಾಗುತ್ತಾನೆ.

12085006a ಯಸ್ತು ಪೂರ್ವಮಭಿಪ್ರೇಕ್ಷ್ಯ ಪೂರ್ವಮೇವಾಭಿಭಾಷತೇ।
12085006c ಸ್ಮಿತಪೂರ್ವಾಭಿಭಾಷೀ ಚ ತಸ್ಯ ಲೋಕಃ ಪ್ರಸೀದತಿ।।

ಮೊದಲು ನೋಡಿ ಮೊದಲು ಮಾತನಾಡಿಸುವ ಮತ್ತು ನಸುನಗುತ್ತಾ ಮಾತನಾಡುವವನನ ಕುರಿತು ಲೋಕವು ಪ್ರಸನ್ನವಾಗಿರುತ್ತದೆ.

12085007a ದಾನಮೇವ ಹಿ ಸರ್ವತ್ರ ಸಾಂತ್ವೇನಾನಭಿಜಲ್ಪಿತಮ್।
12085007c ನ ಪ್ರೀಣಯತಿ ಭೂತಾನಿ ನಿರ್ವ್ಯಂಜನಮಿವಾಶನಮ್।।

ಉಪ್ಪಿನಕಾಯಿ, ಪಲ್ಯ ಮೊದಲಾದ ವ್ಯಂಜನಗಳಿಲ್ಲದೇ ಊಟವು ಹೇಗೆ ಋಚಿಸುವುದಿಲ್ಲವೋ ಹಾಗೆ ಸಾಂತ್ವನದ ಮಾತುಗಳಿಲ್ಲದ ದಾನವು ಯಾರಿಗೂ ಸಂತೋಷವನ್ನುಂಟುಮಾಡುವುದಿಲ್ಲ.

12085008a ಅದಾತಾ ಹ್ಯಪಿ ಭೂತಾನಾಂ1 ಮಧುರಾಮೀರಯನ್ಗಿರಮ್।
12085008c ಸರ್ವಲೋಕಮಿಮಂ ಶಕ್ರ ಸಾಂತ್ವೇನ ಕುರುತೇ ವಶೇ।।

ಶಕ್ರ! ದಾನಮಾಡದಿದ್ದರೂ ಜೀವಿಗಳೊಡನೆ ಮಧುರ ಸ್ವರದಲ್ಲಿ ಮಾತನಾಡುವವನು ಈ ಸರ್ವ ಲೋಕಗಳನ್ನೂ ಸಾಂತ್ವನದಿಂದ ಗೆಲ್ಲುತ್ತಾನೆ.

12085009a ತಸ್ಮಾತ್ಸಾಂತ್ವಂ ಪ್ರಕರ್ತವ್ಯಂ ದಂಡಮಾಧಿತ್ಸತಾಮಿಹ।
12085009c ಫಲಂ ಚ ಜನಯತ್ಯೇವಂ ನ ಚಾಸ್ಯೋದ್ವಿಜತೇ ಜನಃ।।

ಆದುದರಿಂದ ಶಿಕ್ಷೆಯನ್ನು ವಿಧಿಸಲು ಬಯಸಿದರೂ ತಪ್ಪಿತಸ್ಥನಿಗೆ ರಾಜನು ಸಾಂತ್ವನವನ್ನು ನೀಡಬೇಕು. ಇದರಿಂದ ಫಲವಿದೆ. ಅಂಥವನಿಂದ ಜನರು ಉದ್ವಿಗ್ನರಾಗುವುದಿಲ್ಲ.

12085010a ಸುಕೃತಸ್ಯ ಹಿ ಸಾಂತ್ವಸ್ಯ ಶ್ಲಕ್ಷ್ಣಸ್ಯ ಮಧುರಸ್ಯ ಚ।
12085010c ಸಮ್ಯಗಾಸೇವ್ಯಮಾನಸ್ಯ ತುಲ್ಯಂ ಜಾತು ನ ವಿದ್ಯತೇ।।

ಸಾಂತ್ವನ ಮತ್ತು ಸ್ನೇಹಪೂರ್ವಕ ಮಧುರ ಮಾತು ಇವೆರಡು ಸುಕೃತಗಳು. ಬೇರೆಯಾವುದರಿಂದಲೂ ಜನರನ್ನು ಸಂಗ್ರಹಿಸಲು ಸಾಧ್ಯವಿಲ್ಲ.””

12085011 ಭೀಷ್ಮ ಉವಾಚ।
12085011a ಇತ್ಯುಕ್ತಃ ಕೃತವಾನ್ಸರ್ವಂ ತಥಾ ಶಕ್ರಃ ಪುರೋಧಸಾ।
12085011c ತಥಾ ತ್ವಮಪಿ ಕೌಂತೇಯ ಸಮ್ಯಗೇತತ್ಸಮಾಚರ।।

ಭೀಷ್ಮನು ಹೇಳಿದನು: “ಇದನ್ನು ಕೇಳಿ ಶಕ್ರನು ಪುರೋಹಿತನು ಹೇಳಿದುದೆಲ್ಲವನ್ನೂ ಮಾಡಿದನು. ಕೌಂತೇಯ! ನೀನೂ ಕೂಡ ಹಾಗೆಯೇ ಇದನ್ನು ಚೆನ್ನಾಗಿ ಆಚರಿಸು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಶಾಂತಿ ಪರ್ವಣಿ ರಾಜಧರ್ಮ ಪರ್ವಣಿ ಇಂದ್ರಬೃಹಸ್ಪತಿಸಂವಾದೇ ಪಂಚಾಶೀತಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತ ಶಾಂತಿ ಪರ್ವದ ರಾಜಧರ್ಮ ಪರ್ವದಲ್ಲಿ ಇಂದ್ರಬೃಹಸ್ಪತಿಸಂವಾದ ಎನ್ನುವ ಎಂಭತ್ತೈದನೇ ಅಧ್ಯಾಯವು.


  1. ಅದಾನಾದಪಿ ಭೂತಾನಾಂ ಎಂಬ ಪಾಠಾಂತರವಿದೆ. ↩︎