084 ಸಭ್ಯಾದಿಲಕ್ಷಣಕಥನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ರಾಜಧರ್ಮ ಪರ್ವ

ಅಧ್ಯಾಯ 84

ಸಾರ

ಸಭಾಸದರೇ ಮೊದಲಾದವರ ಲಕ್ಷಣ; ಗುಪ್ತಸಮಾಲೋಚನೆಗೆ ಅರ್ಹ ಮತ್ತು ಅನರ್ಹ ಅಧಿಕಾರಿಗಳ ವರ್ಣನೆ; ಗುಪ್ರಸಮಾಲೋಚನೆಯ ವಿಧಿ ಮತ್ತು ಸ್ಥಾನ (1-57).

12084001 1ಭೀಷ್ಮ ಉವಾಚ। 12084001a ಹ್ರೀನಿಷೇಧಾಃ ಸದಾ ಸಂತಃ ಸತ್ಯಾರ್ಜವಸಮನ್ವಿತಾಃ।
12084001c ಶಕ್ತಾಃ ಕಥಯಿತುಂ ಸಮ್ಯಕ್ತೇ ತವ ಸ್ಯುಃ ಸಭಾಸದಃ।।

ಭೀಷ್ಮನು ಹೇಳಿದನು: “ಲಜ್ಜಾಶೀಲರೂ, ಜಿತೇಂದ್ರಿಯರೂ, ಸತ್ಯನಿಷ್ಟರೂ, ಸರಳ ಸ್ವಭಾವದವರೂ, ವಿಷಯಗಳನ್ನು ಚೆನ್ನಾಗಿ ಪ್ರತಿಪಾದಿಸಿ ಹೇಳಲು ಸಮರ್ಥರೂ ಆದವರೇ ನಿನ್ನ ಸಭಾಸದರಾಗಿರಬೇಕು.

12084002a ಅತ್ಯಾಢ್ಯಾಂಶ್ಚಾತಿಶೂರಾಂಶ್ಚ ಬ್ರಾಹ್ಮಣಾಂಶ್ಚ ಬಹುಶ್ರುತಾನ್।
12084002c ಸುಸಂತುಷ್ಟಾಂಶ್ಚ ಕೌಂತೇಯ ಮಹೋತ್ಸಾಹಾಂಶ್ಚ ಕರ್ಮಸು।।
12084003a ಏತಾನ್ಸಹಾಯಾಽಲ್ಲಿಪ್ಸೇಥಾಃ ಸರ್ವಾಸ್ವಾಪತ್ಸು ಭಾರತ।

ಕೌಂತೇಯ! ಭಾರತ! ಅಮಾತ್ಯರು, ಮಹಾಶೂರರು, ಬಹುಶ್ರುತ ಬ್ರಾಹ್ಮಣರು, ನಿತ್ಯಸಂತುಷ್ಟರು, ಮತ್ತು ಕಾರ್ಯಗಳಲ್ಲಿ ಮಹೋತ್ಸಾಹವಿರುವವರು – ಇವರನ್ನು ಎಲ್ಲ ಆಪತ್ತುಗಳಲ್ಲಿ ಸಹಾಯಕರನ್ನಾಗಿ ಅಪೇಕ್ಷಿಸಬೇಕು.

12084003c ಕುಲೀನಃ ಪೂಜಿತೋ ನಿತ್ಯಂ ನ ಹಿ ಶಕ್ತಿಂ ನಿಗೂಹತಿ।।
12084004a ಪ್ರಸನ್ನಂ ಹ್ಯಪ್ರಸನ್ನಂ ವಾ ಪೀಡಿತಂ ಹೃತಮೇವ ವಾ।
12084004c ಆವರ್ತಯತಿ ಭೂಯಿಷ್ಠಂ ತದೇಕೋ ಹ್ಯನುಪಾಲಿತಃ।।

ನಿತ್ಯವೂ ಪೂಜಿತನಾದ ಕುಲೀನನು ತನ್ನ ಶಕ್ತಿಯನ್ನು ಮರೆಮಾಚುವುದಿಲ್ಲ. ರಾಜನು ಪ್ರಸನ್ನನಾಗಿರಲಿ, ಅಪ್ರಸನ್ನನಾಗಿರಲಿ, ಪೀಡಿತನಾಗಿರಲಿ ಅಥವಾ ಆಹತನೇ ಆಗಿರಲಿ – ಅವನು ರಾಜನ ಅನುಸರಣೆಯನ್ನೇ ಮಾಡುತ್ತಿರುತ್ತಾನೆ. ಅಂಥವನೇ ಸುಹೃದನಾಗಲು ಯೋಗ್ಯನು.

12084005a ಕುಲೀನಾ ದೇಶಜಾಃ ಪ್ರಾಜ್ಞಾ ರೂಪವಂತೋ ಬಹುಶ್ರುತಾಃ।
12084005c ಪ್ರಗಲ್ಭಾಶ್ಚಾನುರಕ್ತಾಶ್ಚ ತೇ ತವ ಸ್ಯುಃ ಪರಿಚ್ಚದಾಃ।।

ನಿನ್ನ ಪರಿಚ್ಚದರು (ಸೇನಾಪತಿಯ ಮೊದಲಾದವರು) ಸತ್ಕುಲ ಪ್ರಸೂತರಾಗಿರಬೇಕು. ನಿನ್ನ ದೇಶದಲ್ಲಿಯೇ ಹುಟ್ಟಿದವರಾಗಿರಬೇಕು. ಪ್ರಾಜ್ಞರೂ, ರೂಪವಂತರೂ, ಬಹುಶ್ರುತರೂ ಆಗಿರಬೇಕು. ಪ್ರತಿಭಾನ್ವಿತರಾಗಿರಬೇಕು ಮತ್ತು ನಿನ್ನಲ್ಲಿ ಅನುರಕ್ತರಾಗಿರಬೇಕು.

12084006a ದೌಷ್ಕುಲೇಯಾಶ್ಚ ಲುಬ್ಧಾಶ್ಚ ನೃಶಂಸಾ ನಿರಪತ್ರಪಾಃ।
12084006c ತೇ ತ್ವಾಂ ತಾತ ನಿಷೇವೇಯುರ್ಯಾವದಾರ್ದ್ರಕಪಾಣಯಃ।।

ಮಗೂ! ದುಷ್ಟ ಕುಲದಲ್ಲಿ ಹುಟ್ಟಿದವರು, ಲುಬ್ಧರು, ಕ್ರೂರರು ಮತ್ತು ನಾಚಿಕೆಯಿಲ್ಲದವರು ಊಟಮಾಡಿ ಕೈತೊಳೆದನಂತರ ಕೈ ಒದ್ದೆಯಾಗಿರುವವರೆಗೆ ಮಾತ್ರ ನಿನ್ನ ಸೇವೆಮಾಡುತ್ತಾರೆ.

12084007a ಅರ್ಥಮಾನಾರ್ಘ್ಯಸತ್ಕಾರೈರ್ಭೋಗೈರುಚ್ಚಾವಚೈಃ ಪ್ರಿಯಾನ್।
12084007c ಯಾನರ್ಥಭಾಜೋ ಮನ್ಯೇಥಾಸ್ತೇ ತೇ ಸ್ಯುಃ ಸುಖಭಾಗಿನಃ।।

ನಿನ್ನ ಪ್ರಿಯರೆಂದು ಯಾರನ್ನು ನೀನು ತಿಳಿದುಕೊಂಡಿರುವೆಯೋ ಅವರನ್ನು ಸನ್ಮಾನ-ಅರ್ಘ್ಯ-ಸತ್ಕಾರಗಳಿಂದಲೂ ನಾನಾವಿಧದ ಭೋಗಗಳಿಂದಲೂ ಸಂತುಷ್ಟಿಗೊಳಿಸಬೇಕು. ನಿನ್ನ ಪ್ರಿಯ ಜನರು ಧನ-ಸುಖಗಳಲ್ಲಿ ನಿನ್ನ ಸಹಭಾಗಿಗಳಾಗಿರಬೇಕು.

12084008a ಅಭಿನ್ನವೃತ್ತಾ ವಿದ್ವಾಂಸಃ ಸದ್ವೃತ್ತಾಶ್ಚರಿತವ್ರತಾಃ।
12084008c ನ ತ್ವಾಂ ನಿತ್ಯಾರ್ಥಿನೋ ಜಹ್ಯುರಕ್ಷುದ್ರಾಃ ಸತ್ಯವಾದಿನಃ।।

ಒಂದೇ ತರನೆ ನಡೆದುಕೊಳ್ಳುವ, ವಿದ್ವಾಂಸ, ಉತ್ತಮ ನಡೆತೆಯುಳ್ಳ, ವ್ರತಾನುಷ್ಠಾನಗಳನ್ನು ಮಾಡುವ ಸತ್ಯವಾದೀ ಅಕ್ಷುದ್ರರು ನಿತ್ಯವೂ ನಿನ್ನನ್ನು ಯಾವ ಕಾರಣಕ್ಕೂ ಬಿಟ್ಟುಹೋಗುವುದಿಲ್ಲ.

12084009a ಅನಾರ್ಯಾ ಯೇ ನ ಜಾನಂತಿ ಸಮಯಂ ಮಂದಚೇತಸಃ।
12084009c ತೇಭ್ಯಃ ಪ್ರತಿಜುಗುಪ್ಸೇಥಾ ಜಾನೀಯಾಃ ಸಮಯಚ್ಯುತಾನ್।।

ಅನಾರ್ಯರೂ, ಪ್ರತಿಜ್ಞಾಪಾಲನೆಯನ್ನು ತಿಳಿಯದ ಮಂದಚೇತಸರು, ಪ್ರತಿಜ್ಞಾಪಾಲನೆಯನ್ನು ಉಲ್ಲಂಘಿಸುವವರು - ಇವರಿಂದ ನೀನು ನಿನ್ನನ್ನು ರಕ್ಷಿಸಿಕೊಳ್ಳಬೇಕು.

12084010a ನೈಕಮಿಚ್ಚೇದ್ಗಣಂ ಹಿತ್ವಾ ಸ್ಯಾಚ್ಚೇದನ್ಯತರಗ್ರಹಃ।
12084010c ಯಸ್ತ್ವೇಕೋ ಬಹುಭಿಃ ಶ್ರೇಯಾನ್ಕಾಮಂ ತೇನ ಗಣಂ ತ್ಯಜೇತ್।।

ಒಬ್ಬನೇ ಇರುವ ಪಕ್ಷವನ್ನು ಬಿಟ್ಟು ಬಹುಜನರಿರುವ ಪಕ್ಷವನ್ನು ಆರಿಸಿಕೊಳ್ಳಬೇಕು. ಆದರೆ ಅವನೊಬ್ಬನೇ ಅನೇಕರಿಗಿಂತ ಉತ್ತಮನಾಗಿದ್ದರೆ ಅವನ ಪಕ್ಷವನ್ನು ಆರಿಸಿ ಬಹುಜನರ ಪಕ್ಷವನ್ನು ತ್ಯಜಿಸಬೇಕು.

12084011a ಶ್ರೇಯಸೋ ಲಕ್ಷಣಂ ಹ್ಯೇತದ್ವಿಕ್ರಮೋ ಯಸ್ಯ ದೃಶ್ಯತೇ।
12084011c ಕೀರ್ತಿಪ್ರಧಾನೋ ಯಶ್ಚ ಸ್ಯಾತ್ಸಮಯೇ ಯಶ್ಚ ತಿಷ್ಠತಿ।।
12084012a ಸಮರ್ಥಾನ್ಪೂಜಯೇದ್ಯಶ್ಚ ನಾಸ್ಪರ್ಧ್ಯೈಃ ಸ್ಪರ್ಧತೇ ಚ ಯಃ।
12084012c ನ ಚ ಕಾಮಾದ್ಭಯಾತ್ಕ್ರೋಧಾಲ್ಲೋಭಾದ್ವಾ ಧರ್ಮಮುತ್ಸೃಜೇತ್।।
12084013a ಅಮಾನೀ ಸತ್ಯವಾಕ್ ಶಕ್ತೋ ಜಿತಾತ್ಮಾ ಮಾನ್ಯಮಾನಿತಾ।
12084013c ಸ ತೇ ಮಂತ್ರಸಹಾಯಃ ಸ್ಯಾತ್ಸರ್ವಾವಸ್ಥಂ ಪರೀಕ್ಷಿತಃ।।

ಯಾರ ಪರಾಕ್ರಮವು ಪ್ರತ್ಯಕ್ಷಪ್ರಮಾಣದಿಂದ ಸಿದ್ಧವಾಗಿದೆಯೋ, ಯಾರಿಗೆ ಕೀರ್ತಿಯೇ ಪ್ರಧಾನವಾಗಿರುವುದೋ, ಯಾರು ಪ್ರತಿಜ್ಞೆಯನ್ನು ಪರಿಪಾಲಿಸುವನೋ, ಯಾರು ಸಮರ್ಥರನ್ನು ಗೌರವಿಸುವನೋ, ತನಗೆ ಸಮಾನರಲ್ಲದವರೊಡನೆ ಯಾರು ಸ್ಪರ್ಧಿಸುವುದಿಲ್ಲವೋ, ಕಾಮ-ಭಯ-ಕ್ರೋಧ-ಲೋಭಗಳಿಂದ ಯಾರು ಧರ್ಮವನ್ನು ತ್ಯಜಿಸುವುದಿಲ್ಲವೋ, ಯಾರಲ್ಲಿ ದುರಭಿಮಾನವಿಲ್ಲವೋ ಅಂಥಹ ಸತ್ಯನಿಷ್ಠ, ಕ್ಷಮಾವಂತ, ಜಿತೇಂದ್ರಿಯ ಮತ್ತು ಮಾನಿಷ್ಠನು ಸರ್ವಾವಸ್ಥೆಗಳಲ್ಲಿ ಪರೀಕ್ಷೆಗೊಳಗಾದ ನಂತರ ರಾಜನೊಂದಿಗೆ ಮಂತ್ರಾಲೋಚನೆಗೆ ಅರ್ಹನಾಗುತ್ತಾನೆ.

12084014a ಕುಲೀನಃ ಸತ್ಯಸಂಪನ್ನಸ್ತಿತಿಕ್ಷುರ್ದಕ್ಷ ಆತ್ಮವಾನ್।
12084014c ಶೂರಃ ಕೃತಜ್ಞಃ ಸತ್ಯಶ್ಚ ಶ್ರೇಯಸಃ ಪಾರ್ಥ ಲಕ್ಷಣಮ್।।

ಪಾರ್ಥ! ಕುಲೀನ, ಸತ್ಯಸಂಪನ್ನ, ಸಹನಶೀಲ, ದಕ್ಷ, ಜಿತೇಂದ್ರಿಯ, ಶೂರ, ಕೃತಜ್ಞ, ಸತ್ಯವಂತ ಇವು ಶ್ರೇಷ್ಠ ಪುರುಷನ ಲಕ್ಷಣವು.

12084015a ತಸ್ಯೈವಂ ವರ್ತಮಾನಸ್ಯ ಪುರುಷಸ್ಯ ವಿಜಾನತಃ।
12084015c ಅಮಿತ್ರಾಃ ಸಂಪ್ರಸೀದಂತಿ ತತೋ ಮಿತ್ರೀಭವಂತ್ಯಪಿ।।

ಇಂತಹ ಸದ್ಗುಣಸಂಪನ್ನ ವಿದ್ವಾಂಸ ಪುರುಷನೊಂದಿಗೆ ಶತ್ರುಗಳೂ ಪ್ರಸನ್ನಾರಾಗಿ ಅವನೊಡನೆ ಮೈತ್ರಿಯನ್ನು ಬೆಳೆಸುತ್ತಾರೆ.

12084016a ಅತ ಊರ್ಧ್ವಮಮಾತ್ಯಾನಾಂ ಪರೀಕ್ಷೇತ ಗುಣಾಗುಣಾನ್।
12084016c ಸಂಯತಾತ್ಮಾ ಕೃತಪ್ರಜ್ಞೋ ಭೂತಿಕಾಮಶ್ಚ ಭೂಮಿಪಃ।।

ಇದರ ನಂತರ ಸಂಯತಾತ್ಮ ಕೃತಪ್ರಜ್ಞ ಐಶ್ವರ್ಯಕಾಮೀ ಭೂಮಿಪನು ಅಮಾತ್ಯರ ಗುಣಾಗುಣಗಳನ್ನು ಪರೀಕ್ಷಿಸಬೇಕು.

12084017a ಸಂಬದ್ಧಾಃ ಪುರುಷೈರಾಪ್ತೈರಭಿಜಾತೈಃ ಸ್ವದೇಶಜೈಃ।
12084017c ಅಹಾರ್ಯೈರವ್ಯಭೀಚಾರೈಃ ಸರ್ವತಃ ಸುಪರೀಕ್ಷಿತೈಃ।।

ಸಂಬಂಧಿಗಳೂ, ಆಪ್ತರೂ, ಸತ್ಕುಲಪ್ರಸೂತರೂ, ಸ್ವದೇಶದಲ್ಲಿ ಹುಟ್ಟಿದವರೂ ಮತ್ತು ಲಂಚತೆಗೆದುಕೊಳ್ಳುವವರೂ ವ್ಯಭಿಚಾರವಿಲ್ಲದವರೂ ಆದವರ ಮೂಲಕ ಮಂತ್ರಿಯಾಗುವವನನ್ನು ಸರ್ವತಃ ಚೆನ್ನಾಗಿ ಪರೀಕ್ಷಿಸಬೇಕು.

12084018a ಯೋಧಾಃ ಸ್ರೌವಾಸ್ತಥಾ ಮೌಲಾಸ್ತಥೈವಾನ್ಯೇಽಪ್ಯವಸ್ಕೃತಾಃ।
12084018c ಕರ್ತವ್ಯಾ ಭೂತಿಕಾಮೇನ ಪುರುಷೇಣ ಬುಭೂಷತಾ।।

ಯೋಧರೂ, ವೇದಗಳನ್ನು ಪಾಲಿಸುವವರೂ, ಉತ್ತಮ ಪರಂಪರೆಯುಳ್ಳವರೂ, ಅಹಂಕಾರ ರಹಿತರೂ ಆಗಿರುವವರನ್ನು ಐಶ್ವರ್ಯಕಾಮೀ ರಾಜನು ಮಂತ್ರಿಗಳನ್ನಾಗಿ ಮಾಡಿಕೊಳ್ಳಬೇಕು.

12084019a ಯೇಷಾಂ ವೈನಯಿಕೀ ಬುದ್ಧಿಃ ಪ್ರಕೃತಾ ಚೈವ ಶೋಭನಾ।
12084019c ತೇಜೋ ಧೈರ್ಯಂ ಕ್ಷಮಾ ಶೌಚಮನುರಾಗ ಸ್ಥಿತಿರ್ಧೃತಿಃ।।
12084020a ಪರೀಕ್ಷಿತಗುಣಾನ್ನಿತ್ಯಂ ಪ್ರೌಢಭಾವಾನ್ಧುರಂಧರಾನ್।
12084020c ಪಂಚೋಪಧಾವ್ಯತೀತಾಂಶ್ಚ ಕುರ್ಯಾದ್ರಾಜಾರ್ಥಕಾರಿಣಃ।।

ನಿತ್ಯ ಪರೀಕ್ಷೆಗಳಿಂದ ಸ್ಥಿರಪಡಿಸಿಕೊಂಡು ರಾಜನ ಕಾರ್ಯನಿರ್ವಹಣೆಯಲ್ಲಿ ಪ್ರೌಢರಾಗಿರುವ, ರಾಜ್ಯಭಾರವನ್ನು ಹೊರಲು ಸಮರ್ಥರಾಗಿರುವ, ಮತ್ತು ನಿಷ್ಕಪಟಿಗಳಾದ, ವಿನಯಬುದ್ಧಿಯಿರುವ, ಸರಳಸ್ವಭಾವವಿರುವ, ತೇಜಸ್ಸು-ಧೈರ್ಯ-ಕ್ಷಮೆ-ಪವಿತ್ರತೆ-ಪ್ರೇಮ-ಸ್ಥಿರಬುದ್ಧಿಗಳಿರುವವನನ್ನು ರಾಜನು ಅರ್ಥಸಚಿವನನ್ನಾಗಿ ನಿಯಮಿಸಿಕೊಳ್ಳಬೇಕು.

12084021a ಪರ್ಯಾಪ್ತವಚನಾನ್ವೀರಾನ್ಪ್ರತಿಪತ್ತಿವಿಶಾರದಾನ್।
12084021c ಕುಲೀನಾನ್ಸತ್ಯಸಂಪನ್ನಾನಿಂಗಿತಜ್ಞಾನನಿಷ್ಠುರಾನ್।।
12084022a ದೇಶಕಾಲವಿಧಾನಜ್ಞಾನ್ಭರ್ತೃಕಾರ್ಯಹಿತೈಷಿಣಃ।
12084022c ನಿತ್ಯಮರ್ಥೇಷು ಸರ್ವೇಷು ರಾಜಾ ಕುರ್ವೀತ ಮಂತ್ರಿಣಃ।।

ಮಾತಿನಲ್ಲಿ ಕುಶಲರಾಗಿರುವ, ವೀರ, ಕಾರ್ಯನಿರ್ವಹಣಾವಿಶಾರದರಾಗಿರುವ, ಕುಲೀನ, ಸತ್ಯಸಂಪನ್ನ, ಇಂಗಿತಜ್ಞ, ದಯಾಳು, ದೇಶ-ಕಾಲವಿಧಾನಗಳನ್ನು ತಿಳಿದಿರುವ, ಒಡೆಯನ ಹಿತೈಷಿಗಳೂ ಕಾರ್ಯಕರ್ತರೂ ಆಗಿರುವವರನ್ನು ಸರ್ವಾರ್ಥಸಿದ್ಧಿಗಾಗಿ ಮಂತ್ರಿಗಳನ್ನಾಗಿ ನಿಯೋಜಿಸಿಕೊಳ್ಳಬೇಕು.

12084023a ಹೀನತೇಜಾ ಹ್ಯಸಂಹೃಷ್ಟೋ ನೈವ ಜಾತು ವ್ಯವಸ್ಯತಿ।
12084023c ಅವಶ್ಯಂ ಜನಯತ್ಯೇವ ಸರ್ವಕರ್ಮಸು ಸಂಶಯಾನ್।।

ತೇಜೋಹೀನ ಮಂತ್ರಿಯ ಸಹವಾಸದಿಂದ ರಾಜನು ಸಂತೋಷದಿಂದಿರುವುದಿಲ್ಲ. ಅಂಥಹ ಮಂತ್ರಿಯು ಅವಶ್ಯವಾಗಿಯೂ ಸರ್ವಕರ್ಮಗಳಲ್ಲಿ ಸಂಶಯವನ್ನೇ ಉಂಟುಮಾಡುತ್ತಾನೆ.

12084024a ಏವಮಲ್ಪಶ್ರುತೋ ಮಂತ್ರೀ ಕಲ್ಯಾಣಾಭಿಜನೋಽಪ್ಯುತ।
12084024c ಧರ್ಮಾರ್ಥಕಾಮಯುಕ್ತೋಽಪಿ ನಾಲಂ ಮಂತ್ರಂ ಪರೀಕ್ಷಿತುಮ್।।

ಹೀಗೆ ಅಲ್ಪಶ್ರುತ ಮಂತ್ರಿಯು ಸತ್ಕುಲಪ್ರಸೂತನಾಗಿದ್ದರೂ, ಧರ್ಮಾರ್ಥಕಾಮಗಳನ್ನು ತಿಳಿದವನಾಗಿದ್ದರೂ ರಹಸ್ಯವಿಷಯಗಳನ್ನು ಪರಿಶೀಲಿಸಲು ಸಮರ್ಥನಾಗುವುದಿಲ್ಲ.

12084025a ತಥೈವಾನಭಿಜಾತೋಽಪಿ ಕಾಮಮಸ್ತು ಬಹುಶ್ರುತಃ।
12084025c ಅನಾಯಕ ಇವಾಚಕ್ಷುರ್ಮುಹ್ಯತ್ಯೂಹ್ಯೇಷು ಕರ್ಮಸು।।

ಹಾಗೆಯೇ ಸತ್ಕುಲಪ್ರಸೂತನಾಗಿರದಿದ್ದರೂ ಬಹುಶ್ರುತನು ಮಂತ್ರಿಯಾಗಬಲ್ಲನೇ? ಇಲ್ಲ. ಏಕೆಂದರೆ ಕೈಹಿಡಿದು ನಡೆಸುವವರಿಲ್ಲದೆ ಕುರುಡುನಂತೆ ಅವನು ಸಣ್ಣಪುಟ್ಟ ಕಾರ್ಯಗಳಲ್ಲಿಯೂ ಮೋಹಗೊಂಡು ಭ್ರಾಂತನಾಗುತ್ತಾನೆ.

12084026a ಯೋ ವಾ ಹ್ಯಸ್ಥಿರಸಂಕಲ್ಪೋ ಬುದ್ಧಿಮಾನಾಗತಾಗಮಃ।
12084026c ಉಪಾಯಜ್ಞೋಽಪಿ ನಾಲಂ ಸ ಕರ್ಮ ಯಾಪಯಿತುಂ ಚಿರಮ್।।

ಸ್ಥಿರಸಂಕಲ್ಪವಿಲ್ಲದಿರುವುದೂ ಮಂತ್ರಿಯಾದವನಿಗೆ ಮಹಾದೋಷವೇ ಸರಿ. ಅಸ್ಥಿರಸಂಕಲ್ಪನು ಉಪಾಯಜ್ಞನೂ ಬುದ್ಧಿವಂತನೂ ಶಾಸ್ತ್ರಜ್ಞನೇ ಆಗಿರಲಿ ಅವನು ಯಾವುದೇ ಕೆಲಸವನ್ನು ಮಾಡಿಮುಗಿಸಲು ಬಹಳ ಸಮಯವನ್ನು ತೆಗೆದುಕೊಳ್ಳುತ್ತಾನೆ.

12084027a ಕೇವಲಾತ್ಪುನರಾಚಾರಾತ್ಕರ್ಮಣೋ ನೋಪಪದ್ಯತೇ।
12084027c ಪರಿಮರ್ಶೋ ವಿಶೇಷಾಣಾಮಶ್ರುತಸ್ಯೇಹ ದುರ್ಮತೇಃ।।

ದುರ್ಮತಿಯೂ ಅಶ್ರುತನೂ ಆಗಿರುವವನು ವಿಶೇಷಕಾರ್ಯಗಳ ನಿರ್ವಹಣೆಯಲ್ಲಿ ಮಾಡುವ ಪರಾಮರ್ಶೆಯು ಯುಕ್ತಿಸಂಗತವಾಗಿರುವುದಿಲ್ಲ.

12084028a ಮಂತ್ರಿಣ್ಯನನುರಕ್ತೇ ತು ವಿಶ್ವಾಸೋ ನ ಹಿ ವಿದ್ಯತೇ।
12084028c ತಸ್ಮಾದನನುರಕ್ತಾಯ ನೈವ ಮಂತ್ರಂ ಪ್ರಕಾಶಯೇತ್।।

ರಾಜನಲ್ಲಿ ಅನುರಕ್ತನಾಗಿರದ ಮಂತ್ರಿಯು ವಿಶ್ವಸನೀಯನಾಗಿರುವುದಿಲ್ಲ. ಆದುದರಿಂದ ಅನುರಕ್ತನಾಗಿಲ್ಲದಿರುವವನಲ್ಲಿ ರಹಸ್ಯಗಳನ್ನು ಹೊರಗೆಡಹಬಾರದು.

12084029a ವ್ಯಥಯೇದ್ಧಿ ಸ ರಾಜಾನಂ ಮಂತ್ರಿಭಿಃ ಸಹಿತೋಽನೃಜುಃ।
12084029c ಮಾರುತೋಪಹತಚ್ಚಿದ್ರೈಃ ಪ್ರವಿಶ್ಯಾಗ್ನಿರಿವ ದ್ರುಮಮ್।।

ಕಪಟ ಮಂತ್ರಿಯು ರಾಜರಹಸ್ಯವನ್ನು ತಿಳಿದುಕೊಂಡರೆ ಇತರ ಮಂತ್ರಿಗಳೊಡನೆ ಕೂಡಿಕೊಂಡು ಮರದ ಪೊಟರೆಯಲ್ಲಿದ್ದ ಅಗ್ನಿಯು ಗಾಳಿಯ ಸಹಾಯದಿಂದ ಆ ಮರವನ್ನೇ ಸುಟ್ಟುಬಿಡುವಂತೆ ರಾಜನನ್ನು ಬಹಳವಾಗಿ ಪೀಡಿಸುತ್ತಾನೆ.

12084030a ಸಂಕ್ರುಧ್ಯತ್ಯೇಕದಾ ಸ್ವಾಮೀ ಸ್ಥಾನಾಚ್ಚೈವಾಪಕರ್ಷತಿ।
12084030c ವಾಚಾ ಕ್ಷಿಪತಿ ಸಂರಬ್ಧಸ್ತತಃ ಪಶ್ಚಾತ್ಪ್ರಸೀದತಿ।।

ಒಮ್ಮೆ ರಾಜನು ಕ್ರುದ್ಧನಾಗಿ ಮಂತ್ರಿಯನ್ನು ಅವನ ಸ್ಥಾನದಿಂದ ತೆಗೆದುಹಾಕಬಹುದು. ರೋಷಪೂರಿತನಾಗಿ ನಿಂದಿಸಬಹುದು. ಕಡೆಯಲ್ಲಿ ಪ್ರಸನ್ನನೂ ಆಗಬಹುದು.

12084031a ತಾನಿ ತಾನ್ಯನುರಕ್ತೇನ ಶಕ್ಯಾನ್ಯನುತಿತಿಕ್ಷಿತುಮ್।
12084031c ಮಂತ್ರಿಣಾಂ ಚ ಭವೇತ್ಕ್ರೋಧೋ ವಿಸ್ಫೂರ್ಜಿತಮಿವಾಶನೇಃ।।

ರಾಜನ ಅಂತಹ ಸ್ವಭಾವವನ್ನು ಅವನಲ್ಲಿ ಅನುರಕ್ತನಾಗಿರುವ ಮಂತ್ರಿಯೇ ಸಹಿಸಿಕೊಳ್ಳಬಲ್ಲನು. ಅನುರಾಗವಿಲ್ಲದ ಮಂತ್ರಿಯ ಕೋಪವು ಅಂಥಹ ಸಂದರ್ಭಗಳಲ್ಲಿ ಸಿಡಿಲಿಗೆ ಸಮಾನವಾಗಿ ಭಯಂಕರವಾಗಿರುತ್ತದೆ.

12084032a ಯಸ್ತು ಸಂಹರತೇ2 ತಾನಿ ಭರ್ತುಃ ಪ್ರಿಯಚಿಕೀರ್ಷಯಾ।
12084032c ಸಮಾನಸುಖದುಃಖಂ ತಂ ಪೃಚ್ಚೇದರ್ಥೇಷು ಮಾನವಮ್।।

ಒಡೆಯನಿಗೆ ಪ್ರಿಯವಾದುದನ್ನು ಮಾಡಲು ಬಯಸಿ ರಾಜನ ಕ್ಷಣರುಷ್ಟ-ಕ್ಷಣತುಷ್ಟ ಸ್ವಭಾವವನ್ನು ಸಹಿಸಿಕೊಳ್ಳುವವನು ರಾಜನಲ್ಲಿ ಅನುರಕ್ತನಾಗಿರುವವನೆಂದು ತಿಳಿದುಕೊಳ್ಳಬೇಕು. ರಾಜನ ಸುಖ-ದುಃಕಗಳನ್ನು ತನ್ನ ಸುಖ-ದುಃಖಗಳಿಗೆ ಸಮಾನವೆಂದು ಭಾವಿಸುವ ಮನುಷ್ಯನೊಡನೆ ಎಲ್ಲ ವಿಷಯಗಳಲ್ಲಿಯೂ ಸಮಾಲೋಚನೆ ಮಾಡಬೇಕು.

12084033a ಅನೃಜುಸ್ತ್ವನುರಕ್ತೋಽಪಿ ಸಂಪನ್ನಶ್ಚೇತರೈರ್ಗುಣೈಃ।
12084033c ರಾಜ್ಞಃ ಪ್ರಜ್ಞಾನಯುಕ್ತೋಽಪಿ ನ ಮಂತ್ರಂ ಶ್ರೋತುಮರ್ಹತಿ।।

ರಾಜನಲ್ಲಿ ಅನುರಕ್ತನಾಗಿದ್ದರೂ, ಇತರ ಗುಣಗಳಿಂದ ಸಂಪನ್ನನಾಗಿದ್ದರೂ, ಪ್ರಜ್ಞಾನಯುಕ್ತನಾಗಿದ್ದರೂ ಮಂತ್ರಿಯು ಕಪಟಿಯಾಗಿದ್ದರೆ ಅವನು ರಾಜರಹಸ್ಯಗಳನ್ನು ಕೇಳಲು ಅನರ್ಹನಾಗುತ್ತಾನೆ.

12084034a ಯೋಽಮಿತ್ರೈಃ ಸಹ ಸಂಬದ್ಧೋ ನ ಪೌರಾನ್ಬಹು ಮನ್ಯತೇ।
12084034c ಸ ಸುಹೃತ್ತಾದೃಶೋ ರಾಜ್ಞೋ ನ ಮಂತ್ರಂ ಶ್ರೋತುಮರ್ಹತಿ।।

ಯಾರಿಗೆ ಶತ್ರುಗಳೊಡನೆ ಸಂಬಂಧವಿರುವುದೋ, ಪ್ರಜೆಗಳ ಯೋಗ-ಕ್ಷೇಮಗಳು ಮುಖ್ಯವೆಂದು ಭಾವಿಸುವುದಿಲ್ಲವೊ ಅಂಥವರು ರಾಜರಹಸ್ಯಗಳನ್ನು ಕೇಳಲು ಅನರ್ಹರಾಗುತ್ತಾರೆ.

12084035a ಅವಿದ್ವಾನಶುಚಿಃ ಸ್ತಬ್ಧಃ ಶತ್ರುಸೇವೀ ವಿಕತ್ಥನಃ।
12084035c ಸ ಸುಹೃತ್ಕ್ರೋಧನೋ ಲುಬ್ಧೋ ನ ಮಂತ್ರಂ ಶ್ರೋತುಮರ್ಹತಿ।।

ವಿದ್ವಾಂಸನಲ್ಲದ, ಅಶುಚಿ, ಸ್ತಬ್ಧ, ಶತ್ರುಸೇವೀ, ಆತ್ಮಶ್ಲಾಘೀ, ಕ್ರೋಧನ ಮತ್ತು ಲುಬ್ಧನು ರಾಜರಹಸ್ಯಗಳನ್ನು ಕೇಳಲು ಅನರ್ಹರಾಗುತ್ತಾರೆ.

12084036a ಆಗಂತುಶ್ಚಾನುರಕ್ತೋಽಪಿ ಕಾಮಮಸ್ತು ಬಹುಶ್ರುತಃ।
12084036c ಸತ್ಕೃತಃ ಸಂವಿಭಕ್ತೋ ವಾ ನ ಮಂತ್ರಂ ಶ್ರೋತುಮರ್ಹತಿ।।

ರಾಜನಲ್ಲಿ ಅನುರಕ್ತನಾಗಿದ್ದರೂ, ಬಹುಶ್ರುತನಾಗಿದ್ದರೂ, ಸತ್ಕೃತನೂ ಸಂವಿಭಕ್ತನೂ ಆಗಿದ್ದರೂ ಹೊರದೇಶದಿಂದ ಬಂದವನಾಗಿದ್ದರೆ ಅವನು ರಾಜರಹಸ್ಯಗಳನ್ನು ಕೇಳಲು ಅನರ್ಹನಾಗುತ್ತಾನೆ.

12084037a 3ಯಸ್ತ್ವಲ್ಪೇನಾಪಿ ಕಾರ್ಯೇಣ ಸಕೃದಾಕ್ಷಾರಿತೋ ಭವೇತ್। 12084037c ಪುನರನ್ಯೈರ್ಗುಣೈರ್ಯುಕ್ತೋ ನ ಮಂತ್ರಂ ಶ್ರೋತುಮರ್ಹತಿ।।

ಅತ್ಯಲ್ಪ ಅನುಚಿತ ಕಾರ್ಯಕ್ಕಾಗಿಯಾದರೂ ದಂಡನೆಗೀಡಾಗಿ ನಿರ್ಧನನಾದವನು ಮಿತ್ರನೇ ಆಗಿದ್ದರೂ ಮತ್ತು ಸಕಲಗುಣಸಂಪನ್ನನೇ ಆಗಿದ್ದರೂ ರಾಜರಹಸ್ಯಗಳನ್ನು ಕೇಳಲು ಅನರ್ಹನಾಗುತ್ತಾನೆ.

12084038a ಕೃತಪ್ರಜ್ಞಶ್ಚ ಮೇಧಾವೀ ಬುಧೋ ಜಾನಪದಃ ಶುಚಿಃ।
12084038c ಸರ್ವಕರ್ಮಸು ಯಃ ಶುದ್ಧಃ ಸ ಮಂತ್ರಂ ಶ್ರೋತುಮರ್ಹತಿ।।

ಕೃತಪ್ರಜ್ಞನೂ, ಮೇಧಾವಿಯೂ, ಬುದ್ಧಿವಂತನೋ, ಸ್ವದೇಶದವನೋ, ಶುಚಿಯೋ, ಸರ್ವಕರ್ಮಗಳಲ್ಲಿ ಶುದ್ಧನೋ ಅವನು ರಾಜರಹಸ್ಯಗಳನ್ನು ಕೇಳಲು ಅರ್ಹನಾಗುತ್ತಾನೆ.

12084039a ಜ್ಞಾನವಿಜ್ಞಾನಸಂಪನ್ನಃ ಪ್ರಕೃತಿಜ್ಞಃ ಪರಾತ್ಮನೋಃ।
12084039c ಸುಹೃದಾತ್ಮಸಮೋ ರಾಜ್ಞಃ ಸ ಮಂತ್ರಂ ಶ್ರೋತುಮರ್ಹತಿ।।

ಜ್ಞಾನವಿಜ್ಞಾನಸಂಪನ್ನ, ತನ್ನ ಕಡೆಯ ಮತ್ತು ಶತ್ರುಗಳ ಕಡೆಯವರ ಸ್ವಭಾವವನ್ನು ತಿಳಿದಿರುವ, ರಾಜನ ಆತ್ಮಸಮ ಸುಹೃದನು ರಾಜರಹಸ್ಯಗಳನ್ನು ಕೇಳಲು ಅರ್ಹನಾಗುತ್ತಾನೆ.

12084040a ಸತ್ಯವಾಕ್ ಶೀಲಸಂಪನ್ನೋ ಗಂಭೀರಃ ಸತ್ರಪೋ ಮೃದುಃ।
12084040c ಪಿತೃಪೈತಾಮಹೋ ಯಃ ಸ್ಯಾತ್ಸ ಮಂತ್ರಂ ಶ್ರೋತುಮರ್ಹತಿ।।

ಸತ್ಯವಾಗ್ಮಿ, ಶೀಲಸಂಪನ್ನ, ಗಂಭಿರ, ಲಜ್ಜಾಶೀಲ, ಮೃದು, ಮತ್ತು ಯಾರ ತಂದೆ-ತಾತಂದಿರೂ ರಾಜಸೇವೆಯಲ್ಲಿ ನಿರತರಾಗಿದ್ದರೋ ಅವನು ರಾಜರಹಸ್ಯಗಳನ್ನು ಕೇಳಲು ಅರ್ಹನಾಗುತ್ತಾನೆ.

12084041a ಸಂತುಷ್ಟಃ ಸಂಮತಃ ಸತ್ಯಃ ಶೌಟೀರೋ ದ್ವೇಷ್ಯಪಾಪಕಃ।
12084041c ಮಂತ್ರವಿತ್ಕಾಲವಿಚ್ಚೂರಃ ಸ ಮಂತ್ರಂ ಶ್ರೋತುಮರ್ಹತಿ।।

ಸಂತುಷ್ಟನೂ, ಸಮ್ಮತನೂ, ಸತ್ಯನೂ, ಶೂರನೂ, ಪಾಪವನ್ನು ದ್ವೇಷಿಸುವವನೂ, ಮಂತ್ರಾಲೋಚನೆಮಾಡಲು ತಿಳಿದಿರುವ, ಕಾಲವನ್ನು ತಿಳಿದಿರುವ, ಶೂರನು ರಾಜರಹಸ್ಯಗಳನ್ನು ಕೇಳಲು ಅರ್ಹನಾಗುತ್ತಾನೆ.

12084042a ಸರ್ವಲೋಕಂ ಸಮಂ ಶಕ್ತಃ ಸಾಂತ್ವೇನ ಕುರುತೇ ವಶೇ।
12084042c ತಸ್ಮೈ ಮಂತ್ರಃ ಪ್ರಯೋಕ್ತವ್ಯೋ ದಂಡಮಾಧಿತ್ಸತಾ ನೃಪ।।

ದಂಡಧಾರಿಯಾಗಿ ಪ್ರಜಾಪಾಲನೆಯಲ್ಲಿ ನಿರತನಾದ ನೃಪನು ಸರ್ವಲೋಕಗಳನ್ನೂ ಸಾಂತ್ವನದಿಂದಲೇ ವಶೀಕರಿಸಬಲ್ಲವನಲ್ಲಿ ಮಂತ್ರಾಲೋಚನೆ ಮಾಡಬೇಕು.

12084043a ಪೌರಜಾನಪದಾ ಯಸ್ಮಿನ್ವಿಶ್ವಾಸಂ ಧರ್ಮತೋ ಗತಾಃ।
12084043c ಯೋದ್ಧಾ ನಯವಿಪಶ್ಚಿಚ್ಚ ಸ ಮಂತ್ರಂ ಶ್ರೋತುಮರ್ಹತಿ।।

ಪುರ-ಗ್ರಾಮೀಣಜನರು ಯಾರಲ್ಲಿ ಧರ್ಮತಃ ವಿಶ್ವಾಸವನ್ನಿಟ್ಟಿರುವರೋ, ಯಾರು ಯುದ್ಧದಲ್ಲಿ ಕುಶಲನಾಗಿರುವನೋ ಮತ್ತು ನೀತಿ ಶಾಸ್ತ್ರವನ್ನು ತಿಳಿದಿರುವನೋ ಅವನು ರಾಜರಹಸ್ಯವನ್ನು ಕೇಳಲು ಅರ್ಹನಾಗುತ್ತಾನೆ.

12084044a ತಸ್ಮಾತ್ಸರ್ವೈರ್ಗುಣೈರ್ಏತೈರುಪಪನ್ನಾಃ ಸುಪೂಜಿತಾಃ।
12084044c ಮಂತ್ರಿಣಃ ಪ್ರಕೃತಿಜ್ಞಾಃ ಸ್ಯುಸ್ತ್ರ್ಯವರಾ ಮಹದೀಪ್ಸವಃ।।

ಆದುದರಿಂದ ಈ ಸರ್ವಗುಣಸಂಪನ್ನರಾದ ಸುಪೂಜಿತರಾದ, ಪ್ರಜೆಗಳ ಸ್ವಭಾವ-ಗುಣಗಳನ್ನು ತಿಳಿದುಕೊಂಡಿರುವ, ಮಹಾತ್ವಾಕಾಂಕ್ಷಿಗಳಾದ ಕನಿಷ್ಠ ಮೂರಾದರೂ ಮಂತ್ರಿಗಳನ್ನಾಗಿ ಮಾಡಿಕೊಂಡಿರಬೇಕು.

12084045a ಸ್ವಾಸು ಪ್ರಕೃತಿಷು ಚಿದ್ರಂ ಲಕ್ಷಯೇರನ್ಪರಸ್ಯ ಚ।
12084045c ಮಂತ್ರಿಣೋ ಮಂತ್ರಮೂಲಂ ಹಿ ರಾಜ್ಞೋ ರಾಷ್ಟ್ರಂ ವಿವರ್ಧತೇ।।

ತಮ್ಮ ಮತ್ತು ಶತ್ರುಗಳ ಪ್ರಕೃತಿಗಳಲ್ಲಿ ದೋಷಗಳನ್ನು ಹುಡುಕುತ್ತಿರಬೇಕು. ಅಂಥಹ ಮಂತ್ರಿಗಳ ಸಲಹೆಗಳೇ ರಾಜನ ರಾಷ್ಟ್ರವನ್ನು ವರ್ಧಿಸುತ್ತದೆ.

12084046a ನಾಸ್ಯ ಚಿದ್ರಂ ಪರಃ ಪಶ್ಯೇಚ್ಚಿದ್ರೇಷು ಪರಮನ್ವಿಯಾತ್।
12084046c ಗೂಹೇತ್ಕೂರ್ಮ ಇವಾಂಗಾನಿ ರಕ್ಷೇದ್ವಿವರಮಾತ್ಮನಃ।।

ತಮ್ಮಲ್ಲಿರುವ ದೋಷಗಳನ್ನು ಶತ್ರುಗಳಿಗೆ ಕಾಣದಂತೆ ಆಮೆಯು ತನ್ನ ಅವಯವಗಳನ್ನು ಒಳಕ್ಕೆ ಸೆಳೆದುಕೊಂಡು ಮುಚ್ಚಿಕೊಳ್ಳುವಂತೆ ಮುಚ್ಚಿಕೊಂಡಿರಬೇಕು.

12084047a ಮಂತ್ರಗ್ರಾಹಾ4 ಹಿ ರಾಜ್ಯಸ್ಯ ಮಂತ್ರಿಣೋ ಯೇ ಮನೀಷಿಣಃ।
12084047c ಮಂತ್ರಸಂಹನನೋ ರಾಜಾ ಮಂತ್ರಾಂಗಾನೀತರೋ ಜನಃ।।

ಬುದ್ಧಿವಂತ ಮಂತ್ರಿಗಳೇ ರಾಜನ ರಹಸ್ಯಗಳನ್ನು ಹಿಡಿದಿಟ್ಟುಕೊಂಡಿರುತ್ತಾರೆ. ಮಂತ್ರಾಲೋಚನೆಯೇ ರಾಜನ ದೇಹ. ಇತರ ಜನರು ಅದರ ಅಂಗಗಳು.

12084048a ರಾಜ್ಯಂ ಪ್ರಣಿಧಿಮೂಲಂ ಹಿ ಮಂತ್ರಸಾರಂ ಪ್ರಚಕ್ಷತೇ।
12084048c ಸ್ವಾಮಿನಂ ತ್ವನುವರ್ತಂತಿ ವೃತ್ತ್ಯರ್ಥಮಿಹ ಮಂತ್ರಿಣಃ।।

ಗುಪ್ತಚಾರರೇ ರಾಜ್ಯದ ಅಭಿವೃದ್ದಿಗೆ ಮೂಲಕಾರಣರೆಂದು ಹೇಳುತ್ತಾರೆ. ಮಂತ್ರಿಗಳಾದರೋ ತಮ್ಮ ಜೀವಿಕೆಗಾಗಿ ರಾಜನನ್ನೇ ಅವಲಂಬಿಸಿರುತ್ತಾರೆ.

12084049a ಸ ವಿನೀಯ ಮದಕ್ರೋಧೌ ಮಾನಮೀರ್ಷ್ಯಾಂ ಚ ನಿರ್ವೃತಃ।
12084049c ನಿತ್ಯಂ ಪಂಚೋಪಧಾತೀತೈರ್ಮಂತ್ರಯೇತ್ಸಹ ಮಂತ್ರಿಭಿಃ।।

ಮದ-ಕ್ರೋಧಗಳನ್ನು ತೊರೆದು, ಮಾನ-ಈರ್ಷ್ಯೆಗಳಿಂದ ನಿರ್ವೃತ್ತನಾಗಿ ನಿತ್ಯವೂ ಐದು ವಿಷಯಗಳನ್ನು5 ಪರೀಕ್ಷಿಸಿ ಮಂತ್ರಿಗಳೊಂದಿಗೆ ಸಮಾಲೋಚನೆ ಮಾಡಬೇಕು.

12084050a ತೇಷಾಂ ತ್ರಯಾಣಾಂ ವಿವಿಧಂ ವಿಮರ್ಶಂ ಬುಧ್ಯೇತ ಚಿತ್ತಂ ವಿನಿವೇಶ್ಯ ತತ್ರ।
12084050c ಸ್ವನಿಶ್ಚಯಂ ತಂ ಪರನಿಶ್ಚಯಂ ಚ ನಿವೇದಯೇದುತ್ತರಮಂತ್ರಕಾಲೇ।।

ಮಂತ್ರಾಲೋಚನೆಯಲ್ಲಿರುವ ಮೂರು ಮಂತ್ರಿಗಳ ಪ್ರತ್ಯೇಕ ಸಲಹೆಗಳನ್ನು ಕೇಳಿ, ತಾನೂ ಸಹ ಆ ವಿಷಯವನ್ನು ಚೆನ್ನಾಗಿ ಮಥಿಸಿ, ತನ್ನ ಮತ್ತು ಮಂತ್ರಿಗಳಿತ್ತಿರುವ ಸಲಹೆಗಳನ್ನು ಕ್ರೋಢೀಕರಿಸಿ, ಆಚಾರ್ಯ ಅಥವಾ ಪುರೋಹಿತನೊಂದಿಗೆ ಸಮಾಲೋಚನೆ ಮಾಡುವಾಗ ಅವರ ಮುಂದಿಡಬೇಕು.

12084051a ಧರ್ಮಾರ್ಥಕಾಮಜ್ಞಮುಪೇತ್ಯ ಪೃಚ್ಚೇದ್ ಯುಕ್ತೋ ಗುರುಂ ಬ್ರಾಹ್ಮಣಮುತ್ತಮಾರ್ಥಮ್।
12084051c ನಿಷ್ಠಾ ಕೃತಾ ತೇನ ಯದಾ ಸಹ ಸ್ಯಾತ್ ತಂ ತತ್ರ ಮಾರ್ಗಂ ಪ್ರಣಯೇದಸಕ್ತಮ್।।

ಸಾವಧಾನಚಿತ್ತನಾಗಿ ಧರ್ಮಾರ್ಥಕಾಮಗಳಲ್ಲಿ ನಿಷ್ಣಾತ ಬ್ರಾಹ್ಮಣಗುರುವಿನ ಬಳಿಹೋಗಿ ಉತ್ತರಾರ್ಥವಾಗಿ ಪ್ರಶ್ನಿಸಬೇಕು. ಗುರುವಿನ ಅಂತ್ಯನಿರ್ಧಾರವು ನಾಲ್ವರ ಅಭಿಪ್ರಾಯಗಳಿಗೂ ಹೊಂದಿಕೊಂಡಿದ್ದರೆ ಕೂಡಲೇ ಆ ಮಂತ್ರಾಲೋಚನೆಯ ನಿರ್ಧಾರವನ್ನು ಕಾರ್ಯರೂಪಕ್ಕೆ ತರಬೇಕು.

12084052a ಏವಂ ಸದಾ ಮಂತ್ರಯಿತವ್ಯಮಾಹುರ್ ಯೇ ಮಂತ್ರತತ್ತ್ವಾರ್ಥವಿನಿಶ್ಚಯಜ್ಞಾಃ।
12084052c ತಸ್ಮಾತ್ತ್ವಮೇವಂ ಪ್ರಣಯೇಃ ಸದೈವ ಮಂತ್ರಂ ಪ್ರಜಾಸಂಗ್ರಹಣೇ ಸಮರ್ಥಮ್।।

ಸದಾ ಹೀಗೆಯೇ ಮಂತ್ರಾಲೋಚನೆ ಮಾಡಬೇಕೆಂದು ಮಂತ್ರತತ್ವಾರ್ಥವಿನಿಶ್ಚಯ ತಜ್ಞರು ಹೇಳುತ್ತಾರೆ. ಪ್ರಜಾಸಂಗ್ರಹಣೆಗೆ ಸಮರ್ಥವಾದ ವಿಷಯಗಳನ್ನೇ ಸದಾ ಮಂತ್ರಾಲೋಚನೆಯ ವಿಷಯವನ್ನಾಗಿ ಆರಿಸಿಕೊಳ್ಳಬೇಕು.

12084053a ನ ವಾಮನಾಃ ಕುಬ್ಜಕೃಶಾ ನ ಖಂಜಾ ನಾಂಧಾ ಜಡಾಃ ಸ್ತ್ರೀ ನ ನಪುಂಸಕಂ ಚ।
12084053c ನ ಚಾತ್ರ ತಿರ್ಯಘ್ನ ಪುರೋ ನ ಪಶ್ಚಾನ್ ನೋರ್ಧ್ವಂ ನ ಚಾಧಃ ಪ್ರಚರೇತ ಕಶ್ಚಿತ್।।

ರಹಸ್ಯ ಮಂತ್ರಾಲೋಚನೆ ನಡೆಯುವಾಗ ಅದರ ಹಿಂದೆ-ಮುಂದೆ, ಎಡ-ಬಲಭಾಗಗಳಲ್ಲಿ, ಮೇಲೆ-ಕೆಳಗೆ – ವಾಮನರೂ, ಕುಬ್ಜರೂ, ಕೃಶರೂ, ಕುಂಟರೂ, ಕುರುಡರೂ, ಜಡರೂ, ಸ್ತ್ರೀಯರೂ, ನಪುಂಸಕರೂ ಸುಳಿದಾಡಬಾರದು.

12084054a ಆರುಹ್ಯ ವಾತಾಯನಮೇವ ಶೂನ್ಯಂ ಸ್ಥಲಂ ಪ್ರಕಾಶಂ ಕುಶಕಾಶಹೀನಮ್।
12084054c ವಾಗಂಗದೋಷಾನ್ಪರಿಹೃತ್ಯ ಮಂತ್ರಂ ಸಂಮಂತ್ರಯೇತ್ಕಾರ್ಯಮಹೀನಕಾಲಮ್।।

ಅರಮನೆಯ ಉಪ್ಪರಿಗೆಯ ಮೇಲೆ, ಅಥವಾ ನಿರ್ಜನ ವಿಶಾಲಬೆಳಕಿರುವ, ಜಂಡುಹುಲ್ಲು-ದರ್ಭೆ-ಗರಿಕೆಗಳಿಲ್ಲದಿರುವ ಬಯಲು ಪ್ರದೇಶದಲ್ಲಿಯಾದರೂ ಕುಳಿತು ಕೆಲಸಕ್ಕೆ ಬಾರದ ಅಂಗಚೇಷ್ಟೆಗಳನ್ನು ಬಿಟ್ಟು ಮುಂದಿನ ಕಾರ್ಯಗಳ ವಿಷಯವಾಗಿ ರಾಜನು ಮಂತ್ರಿಗಳೊಡನೆ ಸಮಾಲೋಚಿಸಬೇಕು.

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಶಾಂತಿ ಪರ್ವಣಿ ರಾಜಧರ್ಮ ಪರ್ವಣಿ ಸಭ್ಯಾದಿಲಕ್ಷಣಕಥನೇ ಚತುರಶೀತಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತ ಶಾಂತಿ ಪರ್ವದ ರಾಜಧರ್ಮ ಪರ್ವದಲ್ಲಿ ಸಭ್ಯಾದಿಲಕ್ಷಣಕಥನ ಎನ್ನುವ ಎಂಭತ್ನಾಲ್ಕನೇ ಅಧ್ಯಾಯವು.


  1. ಇದಕ್ಕೆ ಮೊದಲು ಭಾರತದರ್ಶನದಲ್ಲಿ ಈ ಅಧಿಕ ಶ್ಲೋಕವಿದೆ: ಯುಧಿಷ್ಠಿರ ಉವಾಚ। ಸಭಾಸದಃ ಸಹಾಯಾಶ್ಚ ಸುಹೃದಶ್ಚ ವಿಶಾಂಪತೇ। ಪರಿಚ್ಛದಾಸ್ತಥಾಮಾತ್ಯಾಃ ಕೀದೃಶಾಃ ಸ್ಯುಃ ಪಿತಾಮಹ।। ಅರ್ಥಾತ್ ಯುಧಿಷ್ಠಿರನು ಹೇಳಿದನು: “ವಿಶಾಂಪತೇ! ಪಿತಾಮಹ! ರಾಜನ ಸಭಾಸದರೂ, ಸಹಾಯಕರೂ, ಸುಹೃದರೂ, ಪರಿಚ್ಛದರೂ, ಅಮಾತ್ಯರೂ ಎಂಥವರಾಗಿರಬೇಕು?” ↩︎

  2. ಸಂಸಹತೇ ಎಂಬ ಪಾಠಾಂತರವಿದೆ. ↩︎

  3. ಇದಕ್ಕೆ ಮೊದಲು ಭಾರತ ದರ್ಶನದಲ್ಲಿ ಈ ಶ್ಲೋಕವಿದೆ: ವಿಧರ್ಮತೋ ವಿಪ್ರಕೃತಃ ಪಿತಾ ಯಸ್ಯಾಭವತ್ಪುರಾ। ಸತ್ಕೃತಃ ಸ್ಥಾಪಿತಃ ಸೋಽಪಿ ನ ಮಂತ್ರಃ ಶ್ರೋತುಮರ್ಹತಿ।। ↩︎

  4. ಮಂತ್ರಗೂಢಾ ಹಿ ಎಂಬ ಪಾಠಾಂತರವಿದೆ. ↩︎

  5. ಕಾಯಕ, ವಾಚಕ, ಮಾನಸಿಕ, ಕರ್ಮಕೃತ ಮತ್ತು ಸಂಕೇತಜನಿತ – ಇವು ಆ ಐದು ವಿಷಯಗಳು. ↩︎