082 ವಾಸುದೇವನಾರದಸಂವಾದಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ರಾಜಧರ್ಮ ಪರ್ವ

ಅಧ್ಯಾಯ 82

ಸಾರ

ಜ್ಞಾತಿ-ಬಾಂಧವರೊಡನೆ ಹೇಗೆ ವ್ಯವಹರಿಸಬೇಕು ಎನ್ನುವುದರ ಕುರಿತು ವಾಸುದೇವ-ನಾರದ ಸಂವಾದ (1-30).

12082001 ಯುಧಿಷ್ಠಿರ ಉವಾಚ।
12082001a ಏವಮಗ್ರಾಹ್ಯಕೇ ತಸ್ಮಿನ್ ಜ್ಞಾತಿಸಂಬಂಧಿಮಂಡಲೇ।
12082001c ಮಿತ್ರೇಷ್ವಮಿತ್ರೇಷ್ವಪಿ ಚ ಕಥಂ ಭಾವೋ ವಿಭಾವ್ಯತೇ।।

ಯುಧಿಷ್ಠಿರನು ಹೇಳಿದನು: “ಪರಸ್ಪರ ಸ್ಪರ್ಧೆಯ ಕಾರಣದಿಂದ ಜ್ಞಾತಿಸಂಬಂಧಿಮಂಡಲದವರನ್ನು ಹತೋಟಿಯಲ್ಲಿಟ್ಟುಕೊಂಡಿರಲು ಸಾಧ್ಯವಾಗುವುದಿಲ್ಲ. ಒಂದು ಪಕ್ಷದವರನ್ನು ಆದರಿಸಿದರೆ ಇನ್ನೊಂದು ಪಕ್ಷದವರು ಕೋಪಗೊಳ್ಳುತ್ತಾರೆ. ಮಿತ್ರರು ಶತ್ರುಗಳೂ ಆಗಬಲ್ಲರು. ಇಂಥಹ ಸಂದರ್ಭದಲ್ಲಿ ಎಲ್ಲರ ಮನಸ್ಸನ್ನೂ ಹೇಗೆ ವಶೀಕರಿಸಿಕೊಳ್ಳಬಹುದು?”

12082002 ಭೀಷ್ಮ ಉವಾಚ।
12082002a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್।
12082002c ವಾಸುದೇವಸ್ಯ ಸಂವಾದಂ ಸುರರ್ಷೇರ್ನಾರದಸ್ಯ ಚ।।

ಭೀಷ್ಮನು ಹೇಳಿದನು: “ಇದಕ್ಕೆ ಸಂಬಂಧಿಸಿದಂತೆ ಪುರಾತನ ಇತಿಹಾಸವಾಗಿರುವ ವಾಸುದೇವ ಮತ್ತು ಸುರರ್ಷಿ ನಾರದರ ಸಂವಾದವನ್ನು ಉದಾಹರಿಸುತ್ತಾರೆ.

12082003 ವಾಸುದೇವ ಉವಾಚ।
12082003a ನಾಸುಹೃತ್ಪರಮಂ ಮಂತ್ರಂ ನಾರದಾರ್ಹತಿ ವೇದಿತುಮ್।
12082003c ಅಪಂಡಿತೋ ವಾಪಿ ಸುಹೃತ್ಪಂಡಿತೋ ವಾಪಿ ನಾತ್ಮವಾನ್।।

ವಾಸುದೇವನು ಹೇಳಿದನು: “ನಾರದ! ಗುಹ್ಯ ವಿಷಯಗಳನ್ನು ಸುಹೃದನಲ್ಲದವನು ತಿಳಿಯಲು ಯೋಗ್ಯನಲ್ಲ. ಒಂದು ವೇಳೆ ಸುಹೃದನು ಅಪಂಡಿತನಾಗಿದ್ದರೆ ಅವನೂ ಗುಹ್ಯ ವಿಷಯಗಳನ್ನು ತಿಳಿಯಲು ಯೋಗ್ಯನಲ್ಲ. ವಿದ್ಯಾವಂತನೂ ಸುಹೃದನೂ ಆಗಿದ್ದರೂ ಜಿತೇಂದ್ರಿಯನಲ್ಲದವನು ಗೋಪನೀಯ ವಿಷಯಗಳನ್ನು ತಿಳಿದುಕೊಳ್ಳಲು ಯೋಗ್ಯನಲ್ಲ.

12082004a ಸ ತೇ ಸೌಹೃದಮಾಸ್ಥಾಯ ಕಿಂ ಚಿದ್ವಕ್ಷ್ಯಾಮಿ ನಾರದ।
12082004c ಕೃತ್ಸ್ನಾಂ ಚ ಬುದ್ಧಿಂ ಸಂಪ್ರೇಕ್ಷ್ಯ ಸಂಪೃಚ್ಚೇ ತ್ರಿದಿವಂಗಮ।।

ಮೂರು ಲೋಕಗಳನ್ನೂ ಸಂಚರಿಸುವ ನಾರದ! ನಮ್ಮ ಸೌಹಾರ್ದತೆಯಿಂದ ನಾನು ನಿನ್ನಲ್ಲಿ ಕೆಲವು ಮಾತುಗಳನ್ನಾಡುತ್ತೇನೆ. ಮತ್ತೊಬ್ಬನ ಬುದ್ಧಿಬಲವನ್ನು ಸಂಪೂರ್ಣವಾಗಿ ತಿಳಿದೇ ಅವನನ್ನು ಪ್ರಶ್ನಿಸಬೇಕು.

12082005a ದಾಸ್ಯಮೈಶ್ವರ್ಯವಾದೇನ ಜ್ಞಾತೀನಾಂ ವೈ ಕರೋಮ್ಯಹಮ್।
12082005c ಅರ್ಧಭೋಕ್ತಾಸ್ಮಿ ಭೋಗಾನಾಂ ವಾಗ್ದುರುಕ್ತಾನಿ ಚ ಕ್ಷಮೇ।।

ನಾನು ನನ್ನ ಪ್ರಭುತ್ವವನ್ನು ಪ್ರದರ್ಶಿಸಿ ಜ್ಞಾತಿ-ಬಾಂಧವರನ್ನು ದಾಸರನ್ನಾಗಿಸಲು ಬಯಸುವುದಿಲ್ಲ. ಅರ್ಧ ಭೋಗಗಳನ್ನೇ ನಾನು ಭೋಗಿಸುತ್ತೇನೆ. ಆದರೂ ಅವರು ನನ್ನ ವಿಷಯದಲ್ಲಿ ಕೆಟ್ಟಮಾತನ್ನಾಡಿದರೆ ಅದನ್ನೂ ಕ್ಷಮಿಸುತ್ತೇನೆ.

12082006a ಅರಣೀಮಗ್ನಿಕಾಮೋ ವಾ ಮಥ್ನಾತಿ ಹೃದಯಂ ಮಮ।
12082006c ವಾಚಾ ದುರುಕ್ತಂ ದೇವರ್ಷೇ ತನ್ಮೇ ದಹತಿ ನಿತ್ಯದಾ।।

ದೇವರ್ಷೇ! ಅಗ್ನಿಯನ್ನು ಹುಟ್ಟಿಸಲು ಯಾವ ರೀತಿಯಲ್ಲಿ ಮಥಿಸಲಾಗುತ್ತದೆಯೋ ಹಾಗೆಯೇ ನನ್ನ ಹೃದಯವನ್ನೂ ಕೂಡ ನಿತ್ಯವೂ ಈ ಕೆಟ್ಟ ಮಾತುಗಳು ಸುಡುತ್ತಿವೆ.

12082007a ಬಲಂ ಸಂಕರ್ಷಣೇ ನಿತ್ಯಂ ಸೌಕುಮಾರ್ಯಂ ಪುನರ್ಗದೇ।
12082007c ರೂಪೇಣ ಮತ್ತಃ ಪ್ರದ್ಯುಮ್ನಃ ಸೋಽಸಹಾಯೋಽಸ್ಮಿ ನಾರದ।।

ನಾರದ! ಸಂಕರ್ಷಣನಲ್ಲಿ ನಿತ್ಯವೂ ಬಲವಿದೆ. ಪುನಃ ಗದನಲ್ಲಿ ಸೌಕುಮಾರ್ಯತ್ವವಿದೆ. ಪ್ರದ್ಯುಮ್ನನು ತನ್ನ ರೂಪದಿಂದ ಮತ್ತನಾಗಿದ್ದಾನೆ. ಆದುದರಿಂದ ನಾನು ಅಸಹಾಯಕನಾಗಿದ್ದೇನೆ.

12082008a ಅನ್ಯೇ ಹಿ ಸುಮಹಾಭಾಗಾ ಬಲವಂತೋ ದುರಾಸದಾಃ।
12082008c ನಿತ್ಯೋತ್ಥಾನೇನ ಸಂಪನ್ನಾ ನಾರದಾಂಧಕವೃಷ್ಣಯಃ।।

ನಾರದ! ಅನ್ಯ ಅಂಧಕ-ವೃಷ್ಣಿಗಳೂ ಕೂಡ ಮಹಾಭಾಗರು. ಬಲವಂತರು. ದುರಾಸದರು. ನಿತ್ಯವೂ ಉದ್ಯೋಗಶೀಲ ಸಂಪನ್ನರು.

12082009a ಯಸ್ಯ ನ ಸ್ಯುರ್ನ ವೈ ಸ ಸ್ಯಾದ್ಯಸ್ಯ ಸ್ಯುಃ ಕೃಚ್ಚ್ರಮೇವ ತತ್।
12082009c ದ್ವಾಭ್ಯಾಂ ನಿವಾರಿತೋ ನಿತ್ಯಂ ವೃಣೋಮ್ಯೇಕತರಂ ನ ಚ।।

ಅವರು ಯಾರ ಕಡೆ ಸೇರುವುದಿಲ್ಲವೋ ಅವರು ನಾಶವಾದಂತಯೇ ಸರಿ. ಅವರು ಯಾರ ಕಡೆ ಇದ್ದಾರೋ ಅವರು ಎಷ್ಟೇ ಕಷ್ಟದಲ್ಲಿರಲಿ ವಿಜಯಿಗಳಾಗುತ್ತಾರೆ. ಆದರೆ ಆಹುಕ-ಅಕ್ರೂರರು ಪರಸ್ಪರ ಬದ್ಧವೈರಿಗಳಾಗಿದ್ದಾರೆ. ಇನ್ನೊಬ್ಬರ ಕಡೆ ಹೋಗಬಾರದೆಂದು ಇಬ್ಬರಿಂದಲೂ ನಿತ್ಯವೂ ತಡೆಯಲ್ಪಟ್ಟ ನಾನು ಯಾವ ಪಕ್ಷವನ್ನೂ ಸೇರದೇ ಸುಮ್ಮನಿದ್ದುಬಿಟ್ಟಿದ್ದೇನೆ.

12082010a ಸ್ಯಾತಾಂ ಯಸ್ಯಾಹುಕಾಕ್ರೂರೌ ಕಿಂ ನು ದುಃಖತರಂ ತತಃ।
12082010c ಯಸ್ಯ ವಾಪಿ ನ ತೌ ಸ್ಯಾತಾಂ ಕಿಂ ನು ದುಃಖತರಂ ತತಃ।।

ಇಂಥಹ ಆಹುಕ-ಅಕ್ರೂರರ ಬಂಧುಗಳಿಗೆ ಇದಕ್ಕಿಂತಲೂ ದುಃಖತರವಾದುದು ಬೇರೆ ಯಾವುದಿದೆ? ಅವರ ಸುಹೃದರಿಗೂ ಅದಕ್ಕಿಂತಲೂ ಹೆಚ್ಚಿನ ದುಃಖವು ಬೇರೆ ಯಾವುದಿದೆ?

12082011a ಸೋಽಹಂ ಕಿತವಮಾತೇವ ದ್ವಯೋರಪಿ ಮಹಾಮುನೇ।
12082011c ಏಕಸ್ಯ ಜಯಮಾಶಂಸೇ ದ್ವಿತೀಯಸ್ಯಾಪರಾಜಯಮ್।।

ಮಹಾಮುನೇ! ನಾನಾದರೋ ಇಬ್ಬರು ಜೂಜುಗಾರ ಮಕ್ಕಳಲ್ಲಿ ಒಬ್ಬನಿಗೆ ಜಯವಾಗಲೆಂದು ಆಶೀರ್ವಾದವನ್ನಿತ್ತು ಇನ್ನೊಬ್ಬನಿಗೆ ಪರಾಜಯವಾಗದಿರಲೆಂದು ಆಶೀರ್ವಾದವನ್ನಿಡುವ ತಾಯಿಯಂತೆ ಇದ್ದುಬಿಡುತ್ತೇನೆ.

12082012a ಮಮೈವಂ ಕ್ಲಿಶ್ಯಮಾನಸ್ಯ ನಾರದೋಭಯತಃ ಸದಾ।
12082012c ವಕ್ತುಮರ್ಹಸಿ ಯಚ್ಚ್ರೇಯೋ ಜ್ಞಾತೀನಾಮಾತ್ಮನಸ್ತಥಾ।।

ನಾರದ! ಹೀಗೆ ಎರಡೂ ಕಡೆಗಳಿಂದ ಕಷ್ಟಕ್ಕೀಡಾಗಿರುವ ನಾನು ನನ್ನ ಜ್ಞಾತಿಬಾಂಧವರಿಗೆ ಶ್ರೇಯಸ್ಸುಂಟಾಗುವ ಹಾಗೆ ಏನನ್ನು ಮಾಡಬಹುದೆಂದು ಹೇಳಬೇಕು.”

12082013 ನಾರದ ಉವಾಚ।
12082013a ಆಪದೋ ದ್ವಿವಿಧಾಃ ಕೃಷ್ಣ ಬಾಹ್ಯಾಶ್ಚಾಭ್ಯಂತರಾಶ್ಚ ಹ।
12082013c ಪ್ರಾದುರ್ಭವಂತಿ ವಾರ್ಷ್ಣೇಯ ಸ್ವಕೃತಾ ಯದಿ ವಾನ್ಯತಃ।।

ನಾರದನು ಹೇಳಿದನು: “ವಾರ್ಷ್ಣೇಯ! ಕೃಷ್ಣ! ಆಪತ್ತುಗಳಲ್ಲಿ ಎರಡು ವಿಧ: ಬಾಹ್ಯ (ಹೊರಗಿನದ್ದು) ಮತ್ತು ಅಭ್ಯಂತರ (ಒಳಗಿದ್ದುದು). ಇವು ಸ್ವಕೃತವಾಗಿರಬಹುದು ಅಥವಾ ಅನ್ಯರು ಮಾಡಿದ್ದಿರದಾಗಿರಬಹುದು.

12082014a ಸೇಯಮಾಭ್ಯಂತರಾ ತುಭ್ಯಮಾಪತ್ಕೃಚ್ಚ್ರಾ ಸ್ವಕರ್ಮಜಾ।
12082014c ಅಕ್ರೂರಭೋಜಪ್ರಭವಾಃ ಸರ್ವೇ ಹ್ಯೇತೇ ತದನ್ವಯಾಃ।।

ಅಕ್ರೂರ ಮತ್ತು ಭೋಜರಿಂದ ನಿನಗೆ ಉಂಟಾಗಿರುವ ಈ ಕಷ್ಟವು ಅಭಂತರವಾಗಿದೆ ಮತ್ತು ಸ್ವಕೃತವಾಗಿದ್ದಾಗಿದೆ. ಏಕೆಂದರೆ ಇವರಿಬ್ಬರೂ ನಿನ್ನ ವಂಶದವರೇ ಆಗಿದ್ದಾರೆ.

12082015a ಅರ್ಥಹೇತೋರ್ಹಿ ಕಾಮಾದ್ವಾದ್ವಾರಾ ಬೀಭತ್ಸಯಾಪಿ ವಾ।
12082015c ಆತ್ಮನಾ ಪ್ರಾಪ್ತಮೈಶ್ವರ್ಯಮನ್ಯತ್ರ ಪ್ರತಿಪಾದಿತಮ್।।

ಇದು ಸಂಪತ್ತಿನ ಕಾರಣದಿಂದಲೇ ಸಂಭವಿಸಿದೆ. ನಿನ್ನದೇ ಇಚ್ಛೆಯಿಂದಲೋ ಅಥವಾ ಬೇರೆಯವರು ನಿಂದಿಸಬಹುದೆಂಬ ಭಯದಿಂದಲೋ ನೀನು ನಿನಗೆ ಪ್ರಾಪ್ತವಾಗಿದ್ದ ಐಶ್ವರ್ಯವನ್ನು ಬೇರೆಯವರಿಗೆ ಕೊಟ್ಟುಬಿಟ್ಟಿರುವೆ!

12082016a ಕೃತಮೂಲಮಿದಾನೀಂ ತಜ್ಜಾತಶಬ್ದಂ ಸಹಾಯವತ್।
12082016c ನ ಶಕ್ಯಂ ಪುನರಾದಾತುಂ ವಾಂತಮನ್ನಮಿವ ತ್ವಯಾ।।

ಸಹಾಯವೆಂದು ಹೇಳಿ ನೀನು ಕೊಟ್ಟಿದ ಸಂಪತ್ತು ಅವರಲ್ಲಿ ದೃಢವಾಗಿ ಬೇರುಬಿಟ್ಟಿದೆ. ವಾಂತಿಮಾಡಿದ ಅನ್ನವನ್ನು ಪುನಃ ಸೇವಿಸಲು ಸಾಧ್ಯವಾಗದಂತೆ ಅವರಲ್ಲಿರುವ ಸಂಪತ್ತನ್ನು ಪುನಃ ತೆಗೆದುಕೊಳ್ಳಲು ನಿನಗೆ ಸಾಧ್ಯವಾಗುವುದಿಲ್ಲ.

12082017a ಬಭ್ರೂಗ್ರಸೇನಯೋ ರಾಜ್ಯಂ ನಾಪ್ತುಂ ಶಕ್ಯಂ ಕಥಂ ಚನ।
12082017c ಜ್ಞಾತಿಭೇದಭಯಾತ್ಕೃಷ್ಣ ತ್ವಯಾ ಚಾಪಿ ವಿಶೇಷತಃ।।

ಕೃಷ್ಣ! ಜ್ಞಾತಿಗಳಲ್ಲಿ ಭೇದವುಂಟಾಗಬಹುದೆಂಬ ಭಯದಿಂದ ಬಭ್ರು ಮತ್ತು ಉಗ್ರಸೇನರ ರಾಜ್ಯವನ್ನು ಎಂದೂ ಹಿಂತೆಗೆದುಕೊಳ್ಳಲು, ಅದರಲ್ಲೂ ವಿಶೇಷವಾಗಿ ನಿನ್ನಿಂದ, ಸಾಧ್ಯವಿಲ್ಲ.

12082018a ತಚ್ಚೇತ್ಸಿಧ್ಯೇತ್ಪ್ರಯತ್ನೇನ ಕೃತ್ವಾ ಕರ್ಮ ಸುದುಷ್ಕರಮ್।
12082018c ಮಹಾಕ್ಷಯವ್ಯಯಂ ವಾ ಸ್ಯಾದ್ವಿನಾಶೋ ವಾ ಪುನರ್ಭವೇತ್।।

ಒಂದು ವೇಳೆ ಬಹಳ ಪ್ರಯತ್ನದಿಂದ ಅತ್ಯಂತ ದುಷ್ಕರ ಬಹುಜನಸಂಹಾರಕ ಯುದ್ಧವನ್ನು ಮಾಡಿ ರಾಜ್ಯವನ್ನು ಪಡೆದುಕೊಳ್ಳಬಹುದು. ಆದರೆ ಅದರಿಂದ ಅಪಾರ ಧನವ್ಯಯವಾಗುತ್ತದೆ. ಸರ್ವವಿನಾಶವಾಗುತ್ತದೆ.

12082019a ಅನಾಯಸೇನ ಶಸ್ತ್ರೇಣ ಮೃದುನಾ ಹೃದಯಚ್ಚಿದಾ।
12082019c ಜಿಹ್ವಾಮುದ್ಧರ ಸರ್ವೇಷಾಂ ಪರಿಮೃಜ್ಯಾನುಮೃಜ್ಯ ಚ।।

ಆದುದರಿಂದ ಹೃದಯವನ್ನು ಭೇದಿಸುವ ಮೃದುವಾದ ಲೋಹದ್ದಲ್ಲದ ಶಸ್ತ್ರದಿಂದ ನಿನ್ನ ಜ್ಞಾತಿಯವರ ನಾಲಿಗೆಯನ್ನು ಕ್ಷಮೆ, ಸರಳತೆ ಮುಂತಾದ ಗುಣಗಳಿಂದ ಪರಿಮಾರ್ಜನಗೊಳಿಸಿ ಸೇವಾ-ಸತ್ಕಾರಗಳಿಂದ ಅನುಮಾರ್ಜನಗೊಳಿಸಿ ತೆಗೆದುಹಾಕು.”

12082020 ವಾಸುದೇವ ಉವಾಚ।
12082020a ಅನಾಯಸಂ ಮುನೇ ಶಸ್ತ್ರಂ ಮೃದು ವಿದ್ಯಾಮಹಂ ಕಥಮ್।
12082020c ಯೇನೈಷಾಮುದ್ಧರೇ ಜಿಹ್ವಾಂ ಪರಿಮೃಜ್ಯಾನುಮೃಜ್ಯ ಚ।।

ವಾಸುದೇವನು ಹೇಳಿದನು: “ಮುನೇ! ಲೋಹದ್ದಲ್ಲದ ಮೃದು ಶಸ್ತ್ರವು ಯಾವುದೆಂದು ಹೇಗೆ ತಿಳಿಯಬಲ್ಲೆನು? ಅಂತಹ ಅಲೋಹ ಶಸ್ತ್ರದಿಂದ ನಾನು ಹೇಗೆ ನನ್ನ ಜ್ಞಾತಿಗಳವರ ಮಾತನ್ನು ನಿಲ್ಲಿಸಬಲ್ಲೆನು?”

12082021 ನಾರದ ಉವಾಚ।
12082021a ಶಕ್ತ್ಯಾನ್ನದಾನಂ ಸತತಂ ತಿತಿಕ್ಷಾ ದಮ ಆರ್ಜವಮ್।
12082021c ಯಥಾರ್ಹಪ್ರತಿಪೂಜಾ ಚ ಶಸ್ತ್ರಮೇತದನಾಯಸಮ್।।

ನಾರದನು ಹೇಳಿದನು: “ಯಥಾಶಕ್ತಿ ಸತತ ಅನ್ನದಾನ, ಕ್ಷಮೆ, ಸರಳತೆ, ಕೋಮಲತೆ, ಯಥಾಯೋಗ್ಯ ಪೂಜಾ-ಸತ್ಕಾರಗಳು ಇವು ಅಲೋಹಶಸ್ತ್ರಗಳು.

12082022a ಜ್ಞಾತೀನಾಂ ವಕ್ತುಕಾಮಾನಾಂ ಕಟೂನಿ ಚ ಲಘೂನಿ ಚ।
12082022c ಗಿರಾ ತ್ವಂ ಹೃದಯಂ ವಾಚಂ ಶಮಯಸ್ವ ಮನಾಂಸಿ ಚ।।

ಜ್ಞಾತಿಗಳೇನಾದರೂ ನಿನ್ನ ವಿಷಯದಲ್ಲಿ ಕಟುವಾದ ಮತ್ತು ತುಚ್ಛವಾಗಿ ಮಾತನಾಡ ಬಯಸಿದರೆ ಆ ಸಮಯದಲ್ಲಿ ನೀನು ಸುಮಧುರ ಮಾತುಗಳಿಂದ ಅವರ ಕಠೋರ ಹೃದಯವನ್ನೂ, ಕಟು ವಾಕ್ಯಗಳನ್ನೂ ಉದ್ರಿಕ್ತ ಮನಸ್ಸನ್ನೂ ಶಮನಗೊಳಿಸು.

12082023a ನಾಮಹಾಪುರುಷಃ ಕಶ್ಚಿನ್ನಾನಾತ್ಮಾ ನಾಸಹಾಯವಾನ್।
12082023c ಮಹತೀಂ ಧುರಮಾದತ್ತೇ ತಾಮುದ್ಯಮ್ಯೋರಸಾ ವಹ।।

ಮಹಾಪುರುಷನಾಗಿರದವನು, ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳದವನು ಮತ್ತು ಅಸಹಾಯಕನಾದವನು ಮಹಾಭಾರವನ್ನು ಹೊರಲಾರನು. ನೀನು ಅವೆಲ್ಲವೂ ಆಗಿರುವುದರಿಂದ ಈ ಮಹಾಭಾರವನ್ನು ಹೊರು.

12082024a ಸರ್ವ ಏವ ಗುರುಂ ಭಾರಮನಡ್ವಾನ್ವಹತೇ ಸಮೇ।
12082024c ದುರ್ಗೇ ಪ್ರತೀಕಃ ಸುಗವೋ ಭಾರಂ ವಹತಿ ದುರ್ವಹಮ್।।

ಎಲ್ಲ ಎತ್ತುಗಳೂ ಸಮಪ್ರದೇಶದಲ್ಲಿ ಭಾರವನ್ನು ಹೊರುತ್ತವೆ. ಆದರೆ ದುರ್ಗಮ ಪ್ರದೇಶಗಳಲ್ಲಿ ಹೊರಲು ಕಷ್ಟವಾದ ಭಾರವನ್ನು ಮಹಾಬಲಿಷ್ಟ ಎತ್ತೇ ಹೊರಬಲ್ಲದು.

12082025a ಭೇದಾದ್ವಿನಾಶಃ ಸಂಘಾನಾಂ ಸಂಘಮುಖ್ಯೋಽಸಿ ಕೇಶವ।
12082025c ಯಥಾ ತ್ವಾಂ ಪ್ರಾಪ್ಯ ನೋತ್ಸೀದೇದಯಂ ಸಂಘಸ್ತಥಾ ಕುರು।।

ಕೇಶವ! ನೀನು ಯಾವ ಸಂಘದ ಮುಖ್ಯನಾಗಿರುವೆಯೋ ಆ ಸಂಘಗಳಲ್ಲಿದ್ದವರ ಭೇದದಿಂದ ವಿನಾಶವಾಗುತ್ತದೆ. ಸಂಖಮುಖ್ಯನನ್ನಾಗಿ ನಿನ್ನನ್ನು ಪಡೆದ ಸಂಘವು ಒಡೆಯದಂತೆ ನೀನು ಮಾಡು.

12082026a ನಾನ್ಯತ್ರ ಬುದ್ಧಿಕ್ಷಾಂತಿಭ್ಯಾಂ ನಾನ್ಯತ್ರೇಂದ್ರಿಯನಿಗ್ರಹಾತ್।
12082026c ನಾನ್ಯತ್ರ ಧನಸಂತ್ಯಾಗಾದ್ಗಣಃ ಪ್ರಾಜ್ಞೇಽವತಿಷ್ಠತೇ।।

ಬುದ್ಧಿ, ಕ್ಷಮೆ ಮತ್ತು ಇಂದ್ರಿಯನಿಗ್ರಹಗಳಲ್ಲದೇ ಮತ್ತು ಧನಸಂತ್ಯಾಗವಲ್ಲದೇ ಬೇರೆ ಯಾವುದರಿಂದಲೂ ಗಣವು ಪ್ರಾಜ್ಞನ ಆಜ್ಞೆಯನ್ನು ಸ್ವೀಕರಿಸುವಂತೆ ಮಾಡಲು ಸಾಧ್ಯವಿಲ್ಲ.

12082027a ಧನ್ಯಂ ಯಶಸ್ಯಮಾಯುಷ್ಯಂ ಸ್ವಪಕ್ಷೋದ್ಭಾವನಂ ಶುಭಮ್।
12082027c ಜ್ಞಾತೀನಾಮವಿನಾಶಃ ಸ್ಯಾದ್ಯಥಾ ಕೃಷ್ಣ ತಥಾ ಕುರು।।

ಕೃಷ್ಣ! ಸ್ವಪಕ್ಷದವರಿಗೆ ಅಭಿವೃದ್ಧಿಯನ್ನು ತರುವುದು ಧನ್ಯವೂ, ಯಶಸ್ಕರವೂ, ಆಯುಷ್ಕರವೂ ಆಗಿದೆ. ನಿನ್ನ ಜ್ಞಾತಿಗಳ ವಿನಾಶವಾಗದಂತೆ ಮಾಡು.

12082028a ಆಯತ್ಯಾಂ ಚ ತದಾತ್ವೇ ಚ ನ ತೇಽಸ್ತ್ಯವಿದಿತಂ ಪ್ರಭೋ।
12082028c ಷಾಡ್ಗುಣ್ಯಸ್ಯ ವಿಧಾನೇನ ಯಾತ್ರಾಯಾನವಿಧೌ ತಥಾ।।

ಪ್ರಭೋ! ಈಗ ಮತ್ತು ಮುಂದೆ ಮಾಡಬೇಕಾದ ಕಾರ್ಯಗಳು ನಿನಗೆ ತಿಳಿದೇ ಇವೆ. ಷಡ್ಗುಣ1ಗಳ ವಿಧಾನಗಳ ಪ್ರಯೋಗವನ್ನೂ, ಯಾತ್ರಾಯಾನ ವಿಧಿಗಳ ಪ್ರಯೋಗವನ್ನೂ ನೀನು ತಿಳಿದಿರುವೆ.

12082029a ಮಾಧವಾಃ ಕುಕುರಾ ಭೋಜಾಃ ಸರ್ವೇ ಚಾಂಧಕವೃಷ್ಣಯಃ।
12082029c ತ್ವಯ್ಯಾಸಕ್ತಾ ಮಹಾಬಾಹೋ ಲೋಕಾ ಲೋಕೇಶ್ವರಾಶ್ಚ ಯೇ।।
12082030a ಉಪಾಸತೇ ಹಿ ತ್ವದ್ಬುದ್ಧಿಮೃಷಯಶ್ಚಾಪಿ ಮಾಧವ।

ಮಹಾಬಾಹೋ! ಮಾಧವ! ಮಾಧವರು, ಕುಕರರು, ಭೋಜರು, ಸರ್ವ ಅಂಧಕ-ವೃಷ್ಣಿಗಳೂ ನಿನ್ನಲ್ಲಿಯೇ ಆಸಕ್ತರಾಗಿದ್ದಾರೆ. ಲೋಕೇಶ್ವರರೂ, ಋಷಿಗಳೂ ನಿನ್ನ ಬುದ್ಧಿಯನ್ನೂ ಉಪಾಸಿಸುತ್ತಾರೆ.

12082030c ತ್ವಂ ಗುರುಃ ಸರ್ವಭೂತಾನಾಂ ಜಾನೀಷೇ ತ್ವಂ ಗತಾಗತಮ್।
12082030e ತ್ವಾಮಾಸಾದ್ಯ ಯದುಶ್ರೇಷ್ಠಮೇಧಂತೇ ಜ್ಞಾತಿನಃ ಸುಖಮ್।।

ನೀನು ಸರ್ವಭೂತಗಳ ಗುರುವಾಗಿರುವೆ. ಆಗಿಹೋಗಿರುವವು ಮತ್ತು ಮುಂದೆ ಆಗುವವು ನಿನಗೆ ತಿಳಿದಿವೆ. ಯದುಶ್ರೇಷ್ಠ! ನಿನ್ನನ್ನು ಆಶ್ರಯಿಸಿ ನಿನ್ನ ಜ್ಞಾತಿಗಳು ಸುಖವನ್ನು ಹೊಂದುತ್ತಾರೆ.””

ಸಮಾಪ್ತಿ ಇತಿ ಶ್ರೀ ಮಹಾಭಾರತೇ ಶಾಂತಿ ಪರ್ವಣಿ ರಾಜಧರ್ಮ ಪರ್ವಣಿ ವಾಸುದೇವನಾರದಸಂವಾದೇ ದ್ವ್ಯಶೀತಿತಮೋಽಧ್ಯಾಯಃ।। ಇದು ಶ್ರೀ ಮಹಾಭಾರತ ಶಾಂತಿ ಪರ್ವದ ರಾಜಧರ್ಮ ಪರ್ವದಲ್ಲಿ ವಾಸುದೇವನಾರದಸಂವಾದ ಎನ್ನುವ ಎಂಭತ್ತೆರಡನೇ ಅಧ್ಯಾಯವು.

  1. ಸಂಧಿ, ವಿಗ್ರಹ, ಯಾನ, ಆಸನ, ದ್ವಿಧೀಭಾವ, ಮತ್ತು ಸಮಾಶ್ರಯ ಇವು ಷಡ್ಗುಣಗಳು. ↩︎