ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ರಾಜಧರ್ಮ ಪರ್ವ
ಅಧ್ಯಾಯ 78
ಸಾರ
ಕೇಕಯರಾಜ-ರಾಕ್ಷಸ ಸಂವಾದ (1-34).
12078001 ಯುಧಿಷ್ಠಿರ ಉವಾಚ।
12078001a ಕೇಷಾಂ ರಾಜಾ ಪ್ರಭವತಿ ವಿತ್ತಸ್ಯ ಭರತರ್ಷಭ।
12078001c ಕಯಾ ಚ ವೃತ್ತ್ಯಾ ವರ್ತೇತ ತನ್ಮೇ ಬ್ರೂಹಿ ಪಿತಾಮಹ।।
ಯುಧಿಷ್ಠಿರನು ಹೇಳಿದನು: “ಭರತರ್ಷಭ! ಪಿತಾಮಹ! ಯಾರ ವಿತ್ತದ ಮೇಲೆ ರಾಜನ ಅಧಿಕಾರವಿರುತ್ತದೆ? ರಾಜನು ಯಾವ ವೃತ್ತಿಯನ್ನು ಅವಲಂಬಿಸಿರಬೇಕು? ಅದನ್ನು ನನಗೆ ಹೇಳು.”
12078002 ಭೀಷ್ಮ ಉವಾಚ।
12078002a ಅಬ್ರಾಹ್ಮಣಾನಾಂ ವಿತ್ತಸ್ಯ ಸ್ವಾಮೀ ರಾಜೇತಿ ವೈದಿಕಮ್।
12078002c ಬ್ರಾಹ್ಮಣಾನಾಂ ಚ ಯೇ ಕೇ ಚಿದ್ವಿಕರ್ಮಸ್ಥಾ ಭವಂತ್ಯುತ।।
ಭೀಷ್ಮನು ಹೇಳಿದನು: “ಬ್ರಾಹ್ಮಣನಲ್ಲದವರೆಲ್ಲರ ವಿತ್ತದ ಸ್ವಾಮಿಯು ರಾಜನೆಂದು ವೇದಸಿದ್ಧಾಂತ. ತಮ್ಮ ಕರ್ಮಗಳಲ್ಲಿ ತೊಡಗಿರದೇ ಇದ್ದ ಬ್ರಾಹ್ಮಣರ ಸ್ವತ್ತೂ ರಾಜನದ್ದೇ ಎಂದು ಹೇಳುತ್ತಾರೆ.
12078003a ವಿಕರ್ಮಸ್ಥಾಶ್ಚ ನೋಪೇಕ್ಷ್ಯಾ ವಿಪ್ರಾ ರಾಜ್ಞಾ ಕಥಂ ಚನ।
12078003c ಇತಿ ರಾಜ್ಞಾಂ ಪುರಾವೃತ್ತಮಭಿಜಲ್ಪಂತಿ ಸಾಧವಃ।।
ತಮ್ಮ ಕರ್ಮಗಳಲ್ಲಿ ತೊಡಗಿರದೇ ಇರುವ ಬ್ರಾಹ್ಮಣರನ್ನು ಎಂದೂ ರಾಜನು ಉಪೇಕ್ಷಿಸಬಾರದು. ಇದು ಹಿಂದಿನ ರಾಜರುಗಳ ನಡತೆ ಎಂದು ಸಾಧುಗಳು ಹೇಳುತ್ತಿರುತ್ತಾರೆ.
12078004a ಯಸ್ಯ ಸ್ಮ ವಿಷಯೇ ರಾಜ್ಞಃ ಸ್ತೇನೋ ಭವತಿ ವೈ ದ್ವಿಜಃ।
12078004c ರಾಜ್ಞ ಏವಾಪರಾಧಂ ತಂ ಮನ್ಯಂತೇ ಕಿಲ್ಬಿಷಂ ನೃಪ।।
ರಾಜ್ಯದಲ್ಲಿ ಬ್ರಾಹ್ಮಣನು ಕಳ್ಳನಾಗುವುದಕ್ಕೆ ರಾಜನೇ ಅಪರಾಧಿ ಎಂದೂ ಅವನಿಗೇ ಆ ಪಾಪವು ತಗಲುತ್ತದೆಯೆಂದೂ ಅಭಿಪ್ರಾಯವಿದೆ.
12078005a ಅಭಿಶಸ್ತಮಿವಾತ್ಮಾನಂ ಮನ್ಯಂತೇ ತೇನ ಕರ್ಮಣಾ।
12078005c ತಸ್ಮಾದ್ರಾಜರ್ಷಯಃ ಸರ್ವೇ ಬ್ರಾಹ್ಮಣಾನನ್ವಪಾಲಯನ್।।
ಆಗಿನ ಕಾಲದ ರಾಜರೂ ಕೂಡ ಬ್ರಾಹ್ಮಣರು ಧರ್ಮಭ್ರಷ್ಟರಾಗಲು ತಾವೇ ಕಾರಣರೆಂದು ತಿಳಿದುಕೊಳ್ಳುತ್ತಿದ್ದರು. ಆದುದರಿಂದ ರಾಜರ್ಷಿಗಳು ಎಲ್ಲ ಬ್ರಾಹ್ಮಣರನ್ನೂ, ಧರ್ಮಭ್ರಷ್ಟರಾಗದ ರೀತಿಯಲ್ಲಿ ಪರಿಪಾಲಿಸುತ್ತಿದ್ದರು.
12078006a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್।
12078006c ಗೀತಂ ಕೇಕಯರಾಜೇನ ಹ್ರಿಯಮಾಣೇನ ರಕ್ಷಸಾ।।
ಇದಕ್ಕೆ ಸಂಬಂಧಿಸಿದಂತೆ ಪುರಾತನ ಇತಿಹಾಸವಾಗಿರುವ ರಾಕ್ಷಸನಿಂದ ಅಪಹರಿಸಲ್ಪಟ್ಟ ಕೇಕಯರಾಜನ ಗೀತೆಯನ್ನು ಉದಾಹರಿಸುತ್ತಾರೆ.
12078007a ಕೇಕಯಾನಾಮಧಿಪತಿಂ ರಕ್ಷೋ ಜಗ್ರಾಹ ದಾರುಣಮ್।
12078007c ಸ್ವಾಧ್ಯಾಯೇನಾನ್ವಿತಂ ರಾಜನ್ನರಣ್ಯೇ ಸಂಶಿತವ್ರತಮ್।।
ರಾಜನ್! ಅರಣ್ಯದಲ್ಲಿ ಸಂಶಿತವ್ರತನಾಗಿ ಸ್ವಾಧ್ಯಾಯ ನಿರತನಾಗಿದ್ದ ಕೇಕಯರ ಅಧಿಪತಿಯನ್ನು ಓರ್ವ ದಾರುಣ ರಾಕ್ಷಸನು ಹಿಡಿದುಕೊಂಡನು.
12078008 ರಾಜೋವಾಚ।
12078008a ನ ಮೇ ಸ್ತೇನೋ ಜನಪದೇ ನ ಕದರ್ಯೋ ನ ಮದ್ಯಪಃ।
12078008c ನಾನಾಹಿತಾಗ್ನಿರ್ನಾಯಜ್ವಾ ಮಾಮಕಾಂತರಮಾವಿಶಃ।।
ರಾಜನು ಹೇಳಿದನು: “ನನ್ನ ಜನಪದದಲ್ಲಿ ಕಳ್ಳನಿಲ್ಲ, ನೀಚನಿಲ್ಲ. ಮದ್ಯಪಾನ ಮಾಡುವವನೂ ಇಲ್ಲ. ಅಗ್ನಿಹೋತ್ರವನ್ನು ಮಾಡದವನು, ಯಜ್ಞವನ್ನು ಮಾಡದವನು ಯಾರೂ ಇಲ್ಲ. ಹೀಗಿದ್ದರೂ ನೀನು ನನ್ನ ದೇಹವನ್ನು ಪ್ರವೇಶಿಸಿರುವೆ!
12078009a ನ ಚ ಮೇ ಬ್ರಾಹ್ಮಣೋಽವಿದ್ವಾನ್ನಾವ್ರತೀ ನಾಪ್ಯಸೋಮಪಃ।
12078009c ನಾನಾಹಿತಾಗ್ನಿರ್ವಿಷಯೇ ಮಾಮಕಾಂತರಮಾವಿಶಃ।।
ನನ್ನ ರಾಜ್ಯದಲ್ಲಿ ವಿದ್ವಾಂಸನಲ್ಲದ ಬ್ರಾಹ್ಮಣನಿಲ್ಲ. ಉತ್ತಮ ವ್ರತಾನುಷ್ಠಾನಗಳನ್ನು ಮಾಡದವನು ಇಲ್ಲ. ಯಜ್ಞದಲ್ಲಿ ಸೋಮಪಾನವನ್ನು ಮಾಡದವನಿಲ್ಲ. ಅಗ್ನಿಯಿಲ್ಲದೇ ಇರುವವನಿಲ್ಲ. ಯಜ್ಞಮಾಡದವನಿಲ್ಲ. ಹೀಗಿದ್ದರೂ ನೀನು ನನ್ನ ಶರೀರವನ್ನು ಪ್ರವೇಶಿಸಿರುವೆ!
12078010a ನಾನಾಪ್ತದಕ್ಷಿಣೈರ್ಯಜ್ಞೈರ್ಯಜಂತೇ ವಿಷಯೇ ಮಮ।
12078010c ಅಧೀತೇ ನಾವ್ರತೀ ಕಶ್ಚಿನ್ಮಾಮಕಾಂತರಮಾವಿಶಃ।।
ನನ್ನ ರಾಜ್ಯದಲ್ಲಿ ನಾನಾ ಆಪ್ತದಕ್ಷಿಣೆಗಳಿಂದ ಯಜ್ಞಗಳನ್ನು ಯಜಿಸುತ್ತಾರೆ. ಬ್ರಹ್ಮಚರ್ಯವ್ರತಧಾರಿಯಾಗದೇ ಯಾರೂ ವೇದಗಳನ್ನು ಕಲಿಯುವುದಿಲ್ಲ. ಹೀಗಿದ್ದರೂ ನೀನು ನನ್ನ ಶರೀರವನ್ನು ಏಕೆ ಪ್ರವೇಶಿಸಿರುವೆ?
12078011a ಅಧೀಯತೇಽಧ್ಯಾಪಯಂತಿ ಯಜಂತೇ ಯಾಜಯಂತಿ ಚ।
12078011c ದದತಿ ಪ್ರತಿಗೃಹ್ಣಂತಿ ಷಟ್ಸು ಕರ್ಮಸ್ವವಸ್ಥಿತಾಃ।।
12078012a ಪೂಜಿತಾಃ ಸಂವಿಭಕ್ತಾಶ್ಚ ಮೃದವಃ ಸತ್ಯವಾದಿನಃ।
12078012c ಬ್ರಾಹ್ಮಣಾ ಮೇ ಸ್ವಕರ್ಮಸ್ಥಾ ಮಾಮಕಾಂತರಮಾವಿಶಃ।।
ನನ್ನ ಬ್ರಾಹ್ಮಣರು ಸ್ವಕರ್ಮಸ್ಥರಾಗಿ ಅಧ್ಯಯನ, ಅಧ್ಯಾಪನ, ಯಜನ, ಯಾಜನ, ದಾನ ಮತ್ತು ಪ್ರತಿಗ್ರಹಣ ಈ ಆರು ಕರ್ಮಗಳಲ್ಲಿ ನಿರತರಾಗಿದ್ದಾರೆ. ಅವರು ಸತ್ಕರಿಸಲ್ಪಟ್ಟಿದ್ದಾರೆ. ಅವರು ಮೃದುಸ್ವಭಾವದವರು ಮತ್ತು ಸತ್ಯವಾದಿಗಳು. ಹೀಗಿದ್ದರೂ ನೀನು ನನ್ನ ಶರೀರವನ್ನು ಏಕೆ ಪ್ರವೇಶಿಸಿರುವೆ?
12078013a ನ ಯಾಚಂತೇ ಪ್ರಯಚ್ಚಂತಿ ಸತ್ಯಧರ್ಮವಿಶಾರದಾಃ।
12078013c ನಾಧ್ಯಾಪಯಂತ್ಯಧೀಯಂತೇ ಯಜಂತೇ ನ ಚ ಯಾಜಕಾಃ।।
12078014a ಬ್ರಾಹ್ಮಣಾನ್ಪರಿರಕ್ಷಂತಿ ಸಂಗ್ರಾಮೇಷ್ವಪಲಾಯಿನಃ।
12078014c ಕ್ಷತ್ರಿಯಾ ಮೇ ಸ್ವಕರ್ಮಸ್ಥಾ ಮಾಮಕಾಂತರಮಾವಿಶಃ।।
ನನ್ನ ರಾಜ್ಯದ ಸತ್ಯಧರ್ಮವಿಶಾರದ ಕ್ಷತ್ರಿಯರು ಸ್ವಕರ್ಮದಲ್ಲಿ ನಿರತರಾಗಿದ್ದು ದಾನವನ್ನು ಕೇಳುವುದಿಲ್ಲ, ದಾನವನ್ನು ಕೊಡುತ್ತಾರೆ. ಅಧ್ಯಯನ ಮಾಡುತ್ತಾರೆ, ಅಧ್ಯಾಪನ ಮಾಡಿಸುವುದಿಲ್ಲ. ಯಜಿಸುತ್ತಾರೆ. ಯಾಜಕರಲ್ಲ. ಬ್ರಾಹ್ಮಣರನ್ನು ಪರಿರಕ್ಷಿಸುತ್ತಾರೆ ಮತ್ತು ಸಂಗ್ರಾಮದಿಂದ ಹಿಮ್ಮೆಟ್ಟುವುದಿಲ್ಲ. ಹೀಗಿದ್ದರೂ ನೀನು ನನ್ನ ಶರೀರವನ್ನು ಏಕೆ ಪ್ರವೇಶಿಸಿರುವೆ?
12078015a ಕೃಷಿಗೋರಕ್ಷವಾಣಿಜ್ಯಮುಪಜೀವಂತ್ಯಮಾಯಯಾ।
12078015c ಅಪ್ರಮತ್ತಾಃ ಕ್ರಿಯಾವಂತಃ ಸುವ್ರತಾಃ ಸತ್ಯವಾದಿನಃ।।
12078016a ಸಂವಿಭಾಗಂ ದಮಂ ಶೌಚಂ ಸೌಹೃದಂ ಚ ವ್ಯಪಾಶ್ರಿತಾಃ।
12078016c ಮಮ ವೈಶ್ಯಾಃ ಸ್ವಕರ್ಮಸ್ಥಾ ಮಾಮಕಾಂತರಮಾವಿಶಃ।।
ನನ್ನ ದೇಶದ ವೈಶ್ಯರು ಸ್ವಕರ್ಮಗಳಲ್ಲಿ ನಿರತರಾಗಿದ್ದು ಮೋಸಮಾಡದೇ ಕೃಷಿ-ಗೋರಕ್ಷಣೆ-ವಾಣಿಜ್ಯಗಳಿಂದ ಉಪಜೀವನವನ್ನು ನಡೆಸುತ್ತಾರೆ. ಅವರು ಅಪ್ರಮತ್ತರೂ, ಕ್ರಿಯಾವಂತರೂ, ಸುವ್ರತರೂ ಸತ್ಯವಾದಿಗಳೂ ಆಗಿದ್ದಾರೆ. ಹಂಚಿಕೊಳ್ಳುವುದನ್ನೂ, ದಮ-ಶೌಚಗಳನ್ನೂ, ಸೌಹಾರ್ದತೆಯನ್ನೂ ಆಶ್ರಯಿಸಿದ್ದಾರೆ. ಹೀಗಿದ್ದರೂ ನೀನು ನನ್ನ ಶರೀರವನ್ನು ಏಕೆ ಪ್ರವೇಶಿಸಿರುವೆ?
12078017a ತ್ರೀನ್ವರ್ಣಾನನುತಿಷ್ಠಂತಿ ಯಥಾವದನಸೂಯಕಾಃ।
12078017c ಮಮ ಶೂದ್ರಾಃ ಸ್ವಕರ್ಮಸ್ಥಾ ಮಾಮಕಾಂತರಮಾವಿಶಃ।।
ನನ್ನ ರಾಜ್ಯದ ಶೂದ್ರರು ಸ್ವಕರ್ಮಗಳಲ್ಲಿ ನಿರತರಾಗಿ ಅಸೂಯೆಯಿಲ್ಲದೇ ಮೂರು ವರ್ಣದವರನ್ನೂ ಸೇವೆಗೈಯುತ್ತಾರೆ. ಹೀಗಿದ್ದರೂ ನೀನು ನನ್ನ ಶರೀರವನ್ನು ಏಕೆ ಪ್ರವೇಶಿಸಿರುವೆ?
12078018a ಕೃಪಣಾನಾಥವೃದ್ಧಾನಾಂ ದುರ್ಬಲಾತುರಯೋಷಿತಾಮ್।
12078018c ಸಂವಿಭಕ್ತಾಸ್ಮಿ ಸರ್ವೇಷಾಂ ಮಾಮಕಾಂತರಮಾವಿಶಃ।।
ನಾನು ಕೃಪಣರು, ಅನಾಥರು, ವೃದ್ಧರು, ದುರ್ಬಲರು, ರೋಗಿಗಳು ಮತ್ತು ಸ್ತ್ರೀಯರಿಗೆ ಅನ್ನ-ವಸ್ತ್ರಾದಿಗಳನ್ನಿತ್ತು ರಕ್ಷಿಸುತ್ತೇನೆ. ಹೀಗಿದ್ದರೂ ನೀನು ನನ್ನ ಶರೀರವನ್ನು ಏಕೆ ಪ್ರವೇಶಿಸಿರುವೆ?
12078019a ಕುಲದೇಶಾದಿಧರ್ಮಾಣಾಂ ಪ್ರಥಿತಾನಾಂ ಯಥಾವಿಧಿ।
12078019c ಅವ್ಯುಚ್ಚೇತ್ತಾಸ್ಮಿ ಸರ್ವೇಷಾಂ ಮಾಮಕಾಂತರಮಾವಿಶಃ।।
ಕುಲ, ದೇಶ ಮತ್ತು ಜಾತಿ ಧರ್ಮಗಳನ್ನು ಯಥಾವಿಧಿಯಾಗಿ ಪಾಲಿಸಿಕೊಂಡು ಮತ್ತು ಯಾರೂ ಅದರಿಂದ ಚ್ಯುತಿಯಾಗದಂತೆ ನೋಡಿಕೊಳ್ಳುತ್ತಾ ಬಂದಿದ್ದೇನೆ. ಹೀಗಿದ್ದರೂ ನನ್ನ ಶರೀರವನ್ನು ನೀನು ಪ್ರವೇಶಿಸಿರುವೆ.
12078020a ತಪಸ್ವಿನೋ ಮೇ ವಿಷಯೇ ಪೂಜಿತಾಃ ಪರಿಪಾಲಿತಾಃ।
12078020c ಸಂವಿಭಕ್ತಾಶ್ಚ ಸತ್ಕೃತ್ಯ ಮಾಮಕಾಂತರಮಾವಿಶಃ।।
ನನ್ನ ದೇಶದಲ್ಲಿರುವ ತಪಸ್ವಿಗಳನ್ನು ನಾನು ಪೂಜಿಸುತ್ತೇನೆ ಮತ್ತು ಪರಿಪಾಲಿಸುತ್ತೇನೆ. ಎಲ್ಲರಿಗೂ ಬೇಕಾದುದನ್ನು ಕೊಟ್ಟು ಸತ್ಕರಿಸಿದ್ದೇನೆ. ಹೀಗಿದ್ದರೂ ನೀನು ನನ್ನ ಶರೀರವನ್ನು ಏಕೆ ಪ್ರವೇಶಿಸಿರುವೆ?
12078021a ನಾಸಂವಿಭಜ್ಯ ಭೋಕ್ತಾಸ್ಮಿ ನ ವಿಶಾಮಿ ಪರಸ್ತ್ರಿಯಮ್।
12078021c ಸ್ವತಂತ್ರೋ ಜಾತು ನ ಕ್ರೀಡೇ ಮಾಮಕಾಂತರಮಾವಿಶಃ।।
ದೇವತೆ-ಪಿತೃ-ಅತಿಥಿಗಳಿಗೆ ನೀಡದೇ ನಾನು ಊಟಮಾಡುವುದಿಲ್ಲ. ಪರಸ್ತ್ರೀಯರನ್ನು ಸೇರುವುದಿಲ್ಲ. ಸ್ವಚ್ಛಂದನಾಗಿ ಕ್ರೀಡಿಸುವುದಿಲ್ಲ. ಹೀಗಿದ್ದರೂ ನೀನು ನನ್ನ ಶರೀರವನ್ನು ಏಕೆ ಪ್ರವೇಶಿಸಿರುವೆ?
12078022a ನಾಬ್ರಹ್ಮಚಾರೀ ಭಿಕ್ಷಾವಾನ್ಭಿಕ್ಷುರ್ವಾಬ್ರಹ್ಮಚಾರಿಕಃ।
12078022c ಅನೃತ್ವಿಜಂ ಹುತಂ ನಾಸ್ತಿ ಮಾಮಕಾಂತರಮಾವಿಶಃ।।
ಬ್ರಹ್ಮಚಾರಿಯಾಗಿರದವನು ಭಿಕ್ಷೆ ಬೇಡುವುದಿಲ್ಲ. ಭಿಕ್ಷುವು ಬ್ರಹ್ಮಚರ್ಯವನ್ನು ಪಾಲಿಸದೇ ಇರುವುದಿಲ್ಲ. ಋತ್ವಿಜನಲ್ಲದವನು ಹೋಮಕಾರ್ಯಗಳನ್ನು ನಡೆಸುವುದಿಲ್ಲ. ಹೀಗಿದ್ದರೂ ನೀನು ನನ್ನ ಶರೀರವನ್ನು ಏಕೆ ಪ್ರವೇಶಿಸಿರುವೆ?
12078023a ನಾವಜಾನಾಮ್ಯಹಂ ವೃದ್ಧಾನ್ನ ವೈದ್ಯಾನ್ನ ತಪಸ್ವಿನಃ।
12078023c ರಾಷ್ಟ್ರೇ ಸ್ವಪತಿ ಜಾಗರ್ಮಿ ಮಾಮಕಾಂತರಮಾವಿಶಃ।।
ವೃದ್ಧರು, ವಿದ್ವಾಂಸರು ಮತ್ತು ತಪಸ್ವಿಗಳನ್ನು ನಾನು ಅವಹೇಳನ ಮಾಡುವುದಿಲ್ಲ. ರಾಷ್ಟ್ರವು ನಿದ್ದೆಮಾಡುತ್ತಿರುವಾಗ ನಾನು ಜಾಗೃತನಾಗಿರುತ್ತೇನೆ. ಹೀಗಿದ್ದರೂ ನೀನು ನನ್ನ ಶರೀರವನ್ನು ಏಕೆ ಪ್ರವೇಶಿಸಿರುವೆ?
12078024a ವೇದಾಧ್ಯಯನಸಂಪನ್ನಸ್ತಪಸ್ವೀ ಸರ್ವಧರ್ಮವಿತ್।
12078024c ಸ್ವಾಮೀ ಸರ್ವಸ್ಯ ರಾಜ್ಯಸ್ಯ ಶ್ರೀಮಾನ್ಮಮ ಪುರೋಹಿತಃ।।
ನನ್ನ ಪುರೋಹಿತನು ವೇದಾಧ್ಯಯಸಂಪನ್ನನು. ತಪಸ್ವಿಯು. ಸರ್ವಧರ್ಮವಿದುವು. ರಾಜ್ಯದ ಎಲ್ಲವುಗಳ ಸ್ವಾಮಿ ಶ್ರೀಮಾನನು.
12078025a ದಾನೇನ ದಿವ್ಯಾನಭಿವಾಂಚಾಮಿ ಲೋಕಾನ್ ಸತ್ಯೇನಾಥೋ ಬ್ರಾಹ್ಮಣಾನಾಂ ಚ ಗುಪ್ತ್ಯಾ।
12078025c ಶುಶ್ರೂಷಯಾ ಚಾಪಿ ಗುರೂನುಪೈಮಿ ನ ಮೇ ಭಯಂ ವಿದ್ಯತೇ ರಾಕ್ಷಸೇಭ್ಯಃ।।
ದಾನದಿಂದ ದಿವ್ಯ ಲೋಕಗಳನ್ನು ಬಯಸುತ್ತೇನೆ. ಅನಾಥ ಬ್ರಾಹ್ಮಣರನ್ನು ರಕ್ಷಿಸಿ ಸತ್ಯನಾಗಿದ್ದೇನೆ. ಶುಶ್ರೂಷೆಗಳಿಂದ ಗುರುಗಳನ್ನು ಪ್ರೀತಗೊಳಿಸಿದ್ದೇನೆ. ರಾಕ್ಷಸರಿಂದ ನನಗೆ ಭಯವೆನ್ನುವುದು ಇಲ್ಲ.
12078026a ನ ಮೇ ರಾಷ್ಟ್ರೇ ವಿಧವಾ ಬ್ರಹ್ಮಬಂಧುರ್ ನ ಬ್ರಾಹ್ಮಣಃ ಕೃಪಣೋ ನೋತ ಚೋರಃ।
12078026c ನ ಪಾರಜಾಯೀ ನ ಚ ಪಾಪಕರ್ಮಾ ನ ಮೇ ಭಯಂ ವಿದ್ಯತೇ ರಾಕ್ಷಸೇಭ್ಯಃ।।
ನನ್ನ ರಾಷ್ಟ್ರದಲ್ಲಿ ವಿಧವೆಯಿಲ್ಲ. ಅಧಮ ಬ್ರಾಹ್ಮಣನಿಲ್ಲ. ಬ್ರಾಹ್ಮಣರಲ್ಲಿ ಯಾರೂ ಕೃಪಣರೂ, ಕಳ್ಳರೂ, ಜೂಜುಗಾರನಾಗಲೀ, ಅನಧಿಕಾರಿಗಳಿಗೆ ಯಜ್ಞಮಾಡಿಸುವುದನ್ನಾಗಲೀ, ಪಾಪಕರ್ಮಗಳನ್ನು ಮಾಡುವವನಾಗಲೀ ಇಲ್ಲ. ಆದುದರಿಂದ ರಾಕ್ಷಸರಿಂದ ನನಗೆ ಭಯವೆನ್ನುವುದೇ ಇಲ್ಲ.
12078027a ನ ಮೇ ಶಸ್ತ್ರೈರನಿರ್ಭಿನ್ನಮಂಗೇ ದ್ವ್ಯಂಗುಲಮಂತರಮ್।
12078027c ಧರ್ಮಾರ್ಥಂ ಯುಧ್ಯಮಾನಸ್ಯ ಮಾಮಕಾಂತರಮಾವಿಶಃ।।
ಧರ್ಮಕ್ಕಾಗಿ ಯುದ್ಧಮಾಡುತ್ತಿರುವಾಗ ನನ್ನ ಶರೀರದಿಂದ ಶಸ್ತ್ರಗಳಿಂದ ಗಾಯಗೊಳ್ಳದಿರುವ ಎರಡು ಅಂಗುಲ ಪ್ರದೇಶವೂ ಇಲ್ಲ. ಹೀಗಿದ್ದರೂ ನೀನು ನನ್ನ ಶರೀರವನ್ನು ಏಕೆ ಪ್ರವೇಶಿಸಿರುವೆ?
12078028a ಗೋಬ್ರಾಹ್ಮಣೇ ಚ ಯಜ್ಞೇ ಚ ನಿತ್ಯಂ ಸ್ವಸ್ತ್ಯಯನಂ ಮಮ।
12078028c ಆಶಾಸತೇ ಜನಾ ರಾಷ್ಟ್ರೇ ಮಾಮಕಾಂತರಮಾವಿಶಃ।।
ನನ್ನ ರಾಷ್ಟ್ರದಲ್ಲಿ ಎಲ್ಲರೂ ಗೋಬ್ರಾಹ್ಮಣರಿಗೆ ಮತ್ತು ಯಜ್ಞಗಳಿಗೆ ನಿತ್ಯವೂ ಮಂಗಳಾಶಾಸನೆಗಳನ್ನು ಹೇಳುತ್ತಾರೆ. ಹೀಗಿದ್ದರೂ ನೀನು ನನ್ನ ಶರೀರವನ್ನು ಏಕೆ ಪ್ರವೇಶಿಸಿರುವೆ?”
12078029 ರಾಕ್ಷಸ ಉವಾಚ।
12078029a ಯಸ್ಮಾತ್ಸರ್ವಾಸ್ವವಸ್ಥಾಸು ಧರ್ಮಮೇವಾನ್ವವೇಕ್ಷಸೇ।
12078029c ತಸ್ಮಾತ್ಪ್ರಾಪ್ನುಹಿ ಕೈಕೇಯ ಗೃಹಾನ್ಸ್ವಸ್ತಿ ವ್ರಜಾಮ್ಯಹಮ್।।
ರಾಕ್ಷಸನು ಹೇಳಿದನು: “ಕೈಕೇಯ! ಸರ್ವ ಅವಸ್ಥೆಗಳಲ್ಲಿ ನೀನು ಧರ್ಮವನ್ನೇ ಕಾಣುತ್ತಿರುವೆ. ಆದುದರಿಂದ ನೀನು ಕುಶಲನಾಗಿ ನಿನ್ನ ಮನೆಗೆ ಹೋಗಬಹುದು. ನಾನು ಹೋಗುತ್ತೇನೆ.
12078030a ಯೇಷಾಂ ಗೋಬ್ರಾಹ್ಮಣಾ ರಕ್ಷ್ಯಾಃ ಪ್ರಜಾ ರಕ್ಷ್ಯಾಶ್ಚ ಕೇಕಯ।
12078030c ನ ರಕ್ಷೋಭ್ಯೋ ಭಯಂ ತೇಷಾಂ ಕುತ ಏವ ತು ಮಾನುಷಾತ್1।।
ಕೇಕಯ! ಯಾವ ರಾಜನು ಗೋಬ್ರಾಹ್ಮಣರನ್ನು ರಕ್ಷಿಸಿ ಪ್ರಜೆಗಳನ್ನೂ ರಕ್ಷಿಸುತ್ತಾನೋ ಅಂಥವನಿಗೆ ರಾಕ್ಷಸರಿಂದ ಭಯವಿಲ್ಲದಿರುವಾಗ ಮನುಷ್ಯರಿಂದ ಭಯವು ಹೇಗೆತಾನೇ ಉಂಟಾದೀತು?
12078031a ಯೇಷಾಂ ಪುರೋಗಮಾ ವಿಪ್ರಾ ಯೇಷಾಂ ಬ್ರಹ್ಮಬಲಂ ಬಲಮ್।
12078031c ಪ್ರಿಯಾತಿಥ್ಯಾಸ್ತಥಾ ದಾರಾಸ್ತೇ ವೈ ಸ್ವರ್ಗಜಿತೋ ನರಾಃ।।
ಯಾರ ಮುಂದೆ ಬ್ರಾಹ್ಮಣರಿದ್ದಾರೋ, ಯಾರಿಗೆ ಎಲ್ಲಕ್ಕಿಂತ ಹೆಚ್ಚಿನ ಬಲವು ಬ್ರಾಹ್ಮಣನೇ ಆಗಿರುವನೋ, ಯಾರ ರಾಜ್ಯದಲ್ಲಿ ನಾಗರೀಕರು ಅತಿಥಿಪ್ರಿಯರಾಗಿರುವರೋ ಅಂತಹ ರಾಜನು ನಿಶ್ಚಯವಾಗಿಯೂ ಸ್ವರ್ಗವನ್ನು ಜಯಿಸುತ್ತಾನೆ.””
12078032 ಭೀಷ್ಮ ಉವಾಚ।
12078032a ತಸ್ಮಾದ್ದ್ವಿಜಾತೀನ್ರಕ್ಷೇತ ತೇ ಹಿ ರಕ್ಷಂತಿ ರಕ್ಷಿತಾಃ।
12078032c ಆಶೀರೇಷಾಂ ಭವೇದ್ರಾಜ್ಞಾಂ ರಾಷ್ಟ್ರಂ ಸಮ್ಯಕ್ಪ್ರವರ್ಧತೇ।।
ಭೀಷ್ಮನು ಹೇಳಿದನು: “ಆದುದರಿಂದ ಬ್ರಾಹ್ಮಣರನ್ನು ರಕ್ಷಿಸಬೇಕೆಂದು ತಿಳಿದುಕೋ. ಬ್ರಾಹ್ಮಣರನ್ನು ರಕ್ಷಿಸಿದವರನ್ನು ಅವರು ರಕ್ಷಿಸುತ್ತಾರೆ. ರಾಜನಿಗೆ ಅವರ ಆಶೀರ್ವಾದಗಳು ದೊರೆಯುತ್ತವೆ ಮತ್ತು ರಾಷ್ಟ್ರವು ಚೆನ್ನಾಗಿ ಅಭಿವೃದ್ಧಿಗೊಳ್ಳುತ್ತದೆ.
12078033a ತಸ್ಮಾದ್ರಾಜ್ಞಾ ವಿಶೇಷೇಣ ವಿಕರ್ಮಸ್ಥಾ ದ್ವಿಜಾತಯಃ।
12078033c ನಿಯಮ್ಯಾಃ ಸಂವಿಭಜ್ಯಾಶ್ಚ ಪ್ರಜಾನುಗ್ರಹಕಾರಣಾತ್।।
ಆದುದರಿಂದ ರಾಜನಾದವನು ಪ್ರಜಾನುಗ್ರಹ ಕಾರಣದಿಂದ ವಿಶೇಷವಾಗಿ ಸ್ವಕರ್ಮದಲ್ಲಿ ತೊಡಗಿರದ ಬ್ರಾಹ್ಮಣರನ್ನು ನಿಯಂತ್ರಿಸಿ ಅವರನ್ನು ಬೇರ್ಪಡಿಸಬೇಕು.
12078034a ಯ ಏವಂ ವರ್ತತೇ ರಾಜಾ ಪೌರಜಾನಪದೇಷ್ವಿಹ।
12078034c ಅನುಭೂಯೇಹ ಭದ್ರಾಣಿ ಪ್ರಾಪ್ನೋತೀಂದ್ರಸಲೋಕತಾಮ್।।
ಪೌರಜನಪದರೊಂದಿಗೆ ಹೀಗೆ ವರ್ತಿಸುವ ರಾಜನು ಇಲ್ಲಿ ಮಂಗಳರೂಪ ಸುಖವನ್ನೂ ಅವಸಾನಾನಂತರದಲ್ಲಿ ಇಂದ್ರಲೋಕವನ್ನೂ ಪಡೆಯುತ್ತಾನೆ.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಶಾಂತಿ ಪರ್ವಣಿ ರಾಜಧರ್ಮ ಪರ್ವಣಿ ಕೈಕೇಯೋಪಾಖ್ಯಾನೇ ಅಷ್ಟಸಪ್ತತಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತ ಶಾಂತಿ ಪರ್ವದ ರಾಜಧರ್ಮ ಪರ್ವದಲ್ಲಿ ಕೈಕೇಯೋಪಾಖ್ಯಾನ ಎನ್ನುವ ಎಪ್ಪತ್ತೆಂಟನೇ ಅಧ್ಯಾಯವು.
-
ಪಾವಕಾತ್ ಎಂಬ ಪಾಠಾಂತರವಿದೆ. ↩︎