ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ರಾಜಧರ್ಮ ಪರ್ವ
ಅಧ್ಯಾಯ 76
ಸಾರ
12076001 ಯುಧಿಷ್ಠಿರ ಉವಾಚ।
12076001a ಯಯಾ ವೃತ್ತ್ಯಾ ಮಹೀಪಾಲೋ ವಿವರ್ಧಯತಿ ಮಾನವಾನ್।
12076001c ಪುಣ್ಯಾಂಶ್ಚ ಲೋಕಾಂಜಯತಿ ತನ್ಮೇ ಬ್ರೂಹಿ ಪಿತಾಮಹ।।
ಯುಧಿಷ್ಠಿರನು ಹೇಳಿದನು: “ಪಿತಾಮಹ! ಮಹೀಪಾಲನು ಹೇಗೆ ನಡೆದುಕೊಂಡರೆ ಪ್ರಜೆಗಳ ವೃದ್ಧಿಯಾಗುತ್ತದೆ? ಮತ್ತು ಪುಣ್ಯ ಲೋಕಗಳನ್ನು ಜಯಿಸಬಲ್ಲ? ಇದನ್ನು ನನಗೆ ಹೇಳು.”
12076002 ಭೀಷ್ಮ ಉವಾಚ।
12076002a ದಾನಶೀಲೋ ಭವೇದ್ರಾಜಾ ಯಜ್ಞಶೀಲಶ್ಚ ಭಾರತ।
12076002c ಉಪವಾಸತಪಃಶೀಲಃ ಪ್ರಜಾನಾಂ ಪಾಲನೇ ರತಃ।।
ಭೀಷ್ಮನು ಹೇಳಿದನು: “ಭಾರತ! ರಾಜನಾದವನು ದಾನಶೀಲನೂ ಯಜ್ಞಶೀಲನೂ ಆಗಿರಬೇಕು. ಉಪವಾಸ ಮತ್ತು ತಪಃಶೀಲನಾಗಿ ಪ್ರಜೆಗಳ ಪಾಲನೆಯಲ್ಲಿಯೇ ನಿರತನಾಗಿರಬೇಕು.
12076003a ಸರ್ವಾಶ್ಚೈವ ಪ್ರಜಾ ನಿತ್ಯಂ ರಾಜಾ ಧರ್ಮೇಣ ಪಾಲಯೇತ್।
12076003c ಉತ್ಥಾನೇನಾಪ್ರಮಾದೇನ ಪೂಜಯೇಚ್ಚೈವ ಧಾರ್ಮಿಕಾನ್।।
ಸರ್ವ ಪ್ರಜೆಗಳನ್ನು ರಾಜನು ನಿತ್ಯವೂ ಧರ್ಮದಿಂದ ಪಾಲಿಸಬೇಕು. ಧಾರ್ಮಿಕರನ್ನು ಅಪ್ರಮಾದದಿಂದ ಮೇಲೆದ್ದು ಪೂಜಿಸಬೇಕು.
12076004a ರಾಜ್ಞಾ ಹಿ ಪೂಜಿತೋ ಧರ್ಮಸ್ತತಃ ಸರ್ವತ್ರ ಪೂಜ್ಯತೇ।
12076004c ಯದ್ಯದಾಚರತೇ ರಾಜಾ ತತ್ಪ್ರಜಾನಾಂ ಹಿ ರೋಚತೇ।।
ರಾಜನಿಂದ ಪೂಜಿಸಲ್ಪಟ್ಟ ಧರ್ಮವು ಸರ್ವತ್ರ ಪೂಜಿಸಲ್ಪಡುತ್ತದೆ. ಆಗ ರಾಜನು ಆಚರಿಸಿದುದೆಲ್ಲವೂ ಪ್ರಜೆಗಳಿಗೆ ಹಿತವೆನಿಸುತ್ತವೆ.
12076005a ನಿತ್ಯಮುದ್ಯತದಂಡಶ್ಚ ಭವೇನ್ಮೃತ್ಯುರಿವಾರಿಷು।
12076005c ನಿಹನ್ಯಾತ್ಸರ್ವತೋ ದಸ್ಯೂನ್ನ ಕಾಮಾತ್ಕಸ್ಯ ಚಿತ್ ಕ್ಷಮೇತ್।।
ನಿತ್ಯವೂ ದಂಡವನ್ನು ಎತ್ತಿ ಹಿಡಿದು ಶತ್ರುಗಳಿಗೆ ಮೃತ್ಯುವಿನಂತಿರಬೇಕು. ಎಲ್ಲಕಡೆ ಎಲ್ಲ ದಸ್ಯುಗಳನ್ನೂ ಸಂಹರಿಸಬೇಕು. ಯಾರಿಗೂ ಕ್ಷಮೆಯನ್ನು ನೀಡಬಾರದು.
12076006a ಯಂ ಹಿ ಧರ್ಮಂ ಚರಂತೀಹ ಪ್ರಜಾ ರಾಜ್ಞಾ ಸುರಕ್ಷಿತಾಃ।
12076006c ಚತುರ್ಥಂ ತಸ್ಯ ಧರ್ಮಸ್ಯ ರಾಜಾ ಭಾರತ ವಿಂದತಿ।।
ಭಾರತ! ರಾಜನಿಂದ ಸುರಕ್ಷಿತರಾದ ಪ್ರಜೆಗಳು ಇಲ್ಲಿ ಯಾವ ಧರ್ಮಕರ್ಮಗಳನ್ನು ಮಾಡುತ್ತಾರೋ ಅದರ ನಾಲ್ಕನೆಯ ಒಂದು ಭಾಗವು ರಾಜನಿಗೆ ಸೇರುತ್ತದೆ.
12076007a ಯದಧೀತೇ ಯದ್ಯಜತೇ ಯದ್ದದಾತಿ ಯದರ್ಚತಿ।
12076007c ರಾಜಾ ಚತುರ್ಥಭಾಕ್ತಸ್ಯ ಪ್ರಜಾ ಧರ್ಮೇಣ ಪಾಲಯನ್।।
ಪ್ರಜೆಗಳನ್ನು ಧರ್ಮದಿಂದ ಪಾಲಿಸಿದ ರಾಜನಿಗೆ ಅವರು ಅಧ್ಯಯನ ಮಾಡುವುದರ, ಯಜ್ಞಗಳ, ದಾನಗಳ ಮತ್ತು ಪೂಜೆಗಳ ನಾಲ್ಕನೆಯ ಒಂದು ಭಾಗವು ದೊರೆಯುತ್ತದೆ.
12076008a ಯದ್ರಾಷ್ಟ್ರೇಽಕುಶಲಂ ಕಿಂ ಚಿದ್ರಾಜ್ಞೋಽರಕ್ಷಯತಃ ಪ್ರಜಾಃ।
12076008c ಚತುರ್ಥಂ ತಸ್ಯ ಪಾಪಸ್ಯ ರಾಜಾ ಭಾರತ ವಿಂದತಿ।।
ಭಾರತ! ಯಾವ ರಾಷ್ಟ್ರದಲ್ಲಿ ರಾಜನು ಪ್ರಜೆಗಳನ್ನು ರಕ್ಷಿಸುವುದಿಲ್ಲವೋ ಮತ್ತು ಪ್ರಜೆಗಳು ಅಕುಶಲರಾಗಿರುವರೋ ಆ ರಾಷ್ಟ್ರದಲ್ಲಿ ಪ್ರಜೆಗಳು ಮಾಡುವ ಪಾಪಕರ್ಮಗಳ ಫಲಗಳ ನಾಲ್ಕನೆಯ ಒಂದು ಭಾಗವು ರಾಜನಿಗೂ ದೊರೆಯುತ್ತದೆ.
12076009a ಅಪ್ಯಾಹುಃ ಸರ್ವಮೇವೇತಿ ಭೂಯೋಽರ್ಧಮಿತಿ ನಿಶ್ಚಯಃ।
12076009c ಕರ್ಮಣಃ ಪೃಥಿವೀಪಾಲ ನೃಶಂಸೋಽನೃತವಾಗಪಿ।
12076009e ತಾದೃಶಾತ್ಕಿಲ್ಬಿಷಾದ್ರಾಜಾ ಶೃಣು ಯೇನ ಪ್ರಮುಚ್ಯತೇ।।
ಕೆಲವರು ಪಾಪಗಳೆಲ್ಲವೂ ರಾಜನಿಗೇ ಸೇರುತ್ತವೆ ಎನ್ನುತ್ತಾರೆ. ಇನ್ನು ಕೆಲವರು ಅರ್ಧ ಪಾಪವೇ ರಾಜನಿಗೆ ಸೇರುತ್ತದೆ ಎನ್ನುತ್ತಾರೆ. ಪೃಥಿವೀಪಾಲನು ತನ್ನ ಕರ್ಮದಿಂದ ಕ್ರೂರಿಯೆಂದೂ ಮಿಥ್ಯಾವಾದಿಯೆಂದು ಕರೆಯಲ್ಪಡುತ್ತಾನೆ. ಅಂಥಹ ಪಾಪಗಳಿಂದ ರಾಜನು ಹೇಗೆ ಮುಕ್ತನಾಗಬಲ್ಲ ಎನ್ನುವುದನ್ನು ಕೇಳು.
12076010a ಪ್ರತ್ಯಾಹರ್ತುಮಶಕ್ಯಂ ಸ್ಯಾದ್ಧನಂ ಚೋರೈರ್ಹೃತಂ ಯದಿ।
12076010c ಸ್ವಕೋಶಾತ್ತತ್ಪ್ರದೇಯಂ ಸ್ಯಾದಶಕ್ತೇನೋಪಜೀವತಾ।।
ಒಂದು ವೇಳೆ ಕಳ್ಳರು ಕದಿದುಕೊಂಡು ಹೋದ ಧನವನ್ನು ತಿರುಗಿ ಪಡೆಯಲು ಸಾಧ್ಯವಾಗದೇ ಇದ್ದರೆ ರಾಜನಾದವನು ಧನವನ್ನು ಕಳೆದುಕೊಂಡವನ ಉಪಜೀವನವನ್ನು ನಡೆಸಲು ತನ್ನ ಕೋಶದಿಂದಲೇ ಅಷ್ಟು ಧನವನ್ನು ಕೊಡಬೇಕು.
12076011a ಸರ್ವವರ್ಣೈಃ ಸದಾ ರಕ್ಷ್ಯಂ ಬ್ರಹ್ಮಸ್ವಂ ಬ್ರಾಹ್ಮಣಾಸ್ತಥಾ।
12076011c ನ ಸ್ಥೇಯಂ ವಿಷಯೇ ತೇಷು ಯೋಽಪಕುರ್ಯಾದ್ದ್ವಿಜಾತಿಷು।।
ಬ್ರಾಹ್ಮಣರನ್ನು ಮತ್ತು ಬ್ರಾಹ್ಮಣರ ಸ್ವತ್ತನ್ನು ಇತರ ವರ್ಣದವರು ಸದಾ ರಕ್ಷಿಸಬೇಕು. ಬ್ರಾಹ್ಮಣರಿಗೆ ಅಪಕಾರವನ್ನು ಮಾಡುವವರನ್ನು ರಾಜನು ತನ್ನ ದೇಶದಲ್ಲಿ ಇಟ್ಟುಕೊಳ್ಳಬಾರದು.
12076012a ಬ್ರಹ್ಮಸ್ವೇ ರಕ್ಷ್ಯಮಾಣೇ ಹಿ ಸರ್ವಂ ಭವತಿ ರಕ್ಷಿತಮ್।
12076012c ತೇಷಾಂ ಪ್ರಸಾದೇ ನಿರ್ವೃತ್ತೇ ಕೃತಕೃತ್ಯೋ ಭವೇನ್ನೃಪಃ।।
ಬ್ರಾಹ್ಮಣರು ರಕ್ಷಿತರಾದರೆ ಸರ್ವವೂ ರಕ್ಷಿತವಾಗಿರುತ್ತದೆ. ಅವರ ಪ್ರಸಾದದಿಂದಲೇ ನೃಪನು ಕೃತಕೃತ್ಯನಾಗುತ್ತಾನೆ.
12076013a ಪರ್ಜನ್ಯಮಿವ ಭೂತಾನಿ ಮಹಾದ್ರುಮಮಿವ ದ್ವಿಜಾಃ।
12076013c ನರಾಸ್ತಮುಪಜೀವಂತಿ ನೃಪಂ ಸರ್ವಾರ್ಥಸಾಧಕಮ್।।
ಜೀವಿಗಳು ಮಳೆಗರೆಯುವ ಮೋಡಗಳನ್ನು ಮತ್ತು ಪಕ್ಷಿಗಳು ಮಹಾವೃಕ್ಷವನ್ನು ಹೇಗೋ ಹಾಗೆ ಸರ್ವಾರ್ಥಸಾಧಕ ನೃಪನನ್ನು ಮನುಷ್ಯರು ಅವಲಂಬಿಸಿ ಜೀವಿಸುತ್ತಾರೆ.
12076014a ನ ಹಿ ಕಾಮಾತ್ಮನಾ ರಾಜ್ಞಾ ಸತತಂ ಶಠಬುದ್ಧಿನಾ।
12076014c ನೃಶಂಸೇನಾತಿಲುಬ್ಧೇನ ಶಕ್ಯಾಃ ಪಾಲಯಿತುಂ ಪ್ರಜಾಃ।।
ಕಾಮಾತ್ಮನಾಗಿ ಸತತವೂ ಕಾಮವಸ್ತುಗಳ ಕುರಿತು ಯೋಜಿಸುವ, ಕ್ರೂರಿ ಮತ್ತು ಅತಿ ಲುಬ್ಧ ರಾಜನು ಪ್ರಜೆಗಳನ್ನು ಪಾಲಿಸಲು ಶಕ್ಯನಾಗುವುದಿಲ್ಲ.”
12076015 ಯುಧಿಷ್ಠಿರ ಉವಾಚ।
12076015a ನಾಹಂ ರಾಜ್ಯಸುಖಾನ್ವೇಷೀ ರಾಜ್ಯಮಿಚ್ಚಾಮ್ಯಪಿ ಕ್ಷಣಮ್।
12076015c ಧರ್ಮಾರ್ಥಂ ರೋಚಯೇ ರಾಜ್ಯಂ ಧರ್ಮಶ್ಚಾತ್ರ ನ ವಿದ್ಯತೇ।।
ಯುಧಿಷ್ಠಿರನು ಹೇಳಿದನು: “ನಾನು ರಾಜ್ಯಸುಖವನ್ನು ಅರಸುತ್ತಿಲ್ಲ. ಒಂದು ಕ್ಷಣಕ್ಕಾದರೂ ರಾಜ್ಯವನ್ನು ಇಚ್ಛಿಸುವುದಿಲ್ಲ. ಧರ್ಮಸಿದ್ಧಿಗಾಗಿ ನಾನು ರಾಜ್ಯವನ್ನು ಇಷ್ಟಪಡುತ್ತೇನೆ. ಆದರೆ ಅದರಿಂದಲೂ ಧರ್ಮದ ಸಿದ್ಧಿಯಾಗುವುದಿಲ್ಲ.
12076016a ತದಲಂ ಮಮ ರಾಜ್ಯೇನ ಯತ್ರ ಧರ್ಮೋ ನ ವಿದ್ಯತೇ।
12076016c ವನಮೇವ ಗಮಿಷ್ಯಾಮಿ ತಸ್ಮಾದ್ಧರ್ಮಚಿಕೀರ್ಷಯಾ।।
ಯಾವುದರಿಂದ ಧರ್ಮಸಿದ್ಧಿಯಾಗುವುದಿಲ್ಲವೋ ಆ ರಾಜ್ಯವು ನನಗೆ ಬೇಡ. ಆದುದರಿಂದ ಧರ್ಮವನ್ನು ಬಯಸಿ ನಾನು ವನಕ್ಕೇ ಹೋಗುತ್ತೇನೆ.
12076017a ತತ್ರ ಮೇಧ್ಯೇಷ್ವರಣ್ಯೇಷು ನ್ಯಸ್ತದಂಡೋ ಜಿತೇಂದ್ರಿಯಃ।
12076017c ಧರ್ಮಮಾರಾಧಯಿಷ್ಯಾಮಿ ಮುನಿರ್ಮೂಲಫಲಾಶನಃ।।
ಪವಿತ್ರ ಆ ಅರಣ್ಯಗಳಲ್ಲಿ ದಂಡವನ್ನು ಕೆಳಗಿರಿಸಿ ಜಿತೇಂದ್ರಿಯನಾಗಿ ಫಲ-ಮೂಲಗಳನ್ನು ತಿಂದುಕೊಂಡು ಮುನಿಯಂತೆ ಧರ್ಮವನ್ನು ಆರಾಧಿಸುತ್ತೇನೆ.”
12076018 ಭೀಷ್ಮ ಉವಾಚ।
12076018a ವೇದಾಹಂ ತವ ಯಾ ಬುದ್ಧಿರಾನೃಶಂಸ್ಯಗುಣೈವ ಸಾ।
12076018c ನ ಚ ಶುದ್ಧಾನೃಶಂಸ್ಯೇನ ಶಕ್ಯಂ ಮಹದುಪಾಸಿತುಮ್।।
ಭೀಷ್ಮನು ಹೇಳಿದನು: “ನಿನ್ನ ಬುದ್ಧಿಯು ದಯಾಪೂರ್ಣಗುಣಗಳಿಂದ ಕೂಡಿದೆಯೆನ್ನುವುದನ್ನು ನಾನು ಅರಿತಿದ್ದೇನೆ. ಸಂಪೂರ್ಣ ದಯಾಪೂರ್ಣನಾಗಿರುವವನಿಗೆ ರಾಜ್ಯಭಾರವನ್ನು ಮಾಡಲು ಸಾಧ್ಯವಾಗುವುದಿಲ್ಲ. ಆದರೆ ನಿನಗೆ ರಾಜ್ಯಭಾರದಿಂದ ತಪ್ಪಿಸಿಕೊಳ್ಳಲೂ ಸಾಧ್ಯವಿಲ್ಲ.
12076019a ಅಪಿ ತು ತ್ವಾ ಮೃದುಂ ದಾಂತಮತ್ಯಾರ್ಯಮತಿಧಾರ್ಮಿಕಮ್।
12076019c ಕ್ಲೀಬಂ ಧರ್ಮಘೃಣಾಯುಕ್ತಂ ನ ಲೋಕೋ ಬಹು ಮನ್ಯತೇ।।
ನೀನು ಅತ್ಯಂತ ಮೃದುವಾಗಿದ್ದರೂ, ಮಹಾ ಸತ್ಪುರುಷನಾಗಿದ್ದರೂ, ಅತ್ಯಂತ ಧರ್ಮಾತ್ಮನಾಗಿದ್ದರೂ, ರಾಜಧರ್ಮಕ್ಕೆ ವಿರುದ್ಧವಾಗಿರುವುದರಿಂದ ನಿನ್ನನ್ನು ಲೋಕದ ಬಹುಜನರು ನಪುಂಸಕನೆಂದೇ ಭಾವಿಸುತ್ತಾರೆ. ನಿನ್ನನ್ನು ಪ್ರಜೆಗಳು ಗೌರವಿಸುವುದಿಲ್ಲ.
12076020a ರಾಜಧರ್ಮಾನವೇಕ್ಷಸ್ವ ಪಿತೃಪೈತಾಮಹೋಚಿತಾನ್।
12076020c ನೈತದ್ರಾಜ್ಞಾಮಥೋ ವೃತ್ತಂ ಯಥಾ ತ್ವಂ ಸ್ಥಾತುಮಿಚ್ಚಸಿ।।
ನಿನ್ನ ಪಿತೃ-ಪಿತಾಮಹರ ರಾಜಧರ್ಮಗಳನ್ನು ನೋಡಿಕೊಂಡು ನಿನಗೆ ಉಚಿತವಾದುದನ್ನು ಮಾಡು. ನೀನು ಏನು ಮಾಡಲು ಬಯಸುತ್ತಿರುವೆಯೋ ಅದು ರಾಜರ ವರ್ತನೆಯಲ್ಲ.
12076021a ನ ಹಿ ವೈಕ್ಲವ್ಯಸಂಸೃಷ್ಟಮಾನೃಶಂಸ್ಯಮಿಹಾಸ್ಥಿತಃ।
12076021c ಪ್ರಜಾಪಾಲನಸಂಭೂತಂ ಪ್ರಾಪ್ತಾ ಧರ್ಮಫಲಂ ಹ್ಯಸಿ।।
ಆದರೆ ವ್ಯಾಕುಲತೆಯಿಂದ ಹುಟ್ಟಿರುವ ನಿನ್ನ ಈ ದಯಾಪೂರ್ಣತೆಯು ಪ್ರಜಾಪಾಲನೆಯಿಂದ ದೊರೆಯುವ ಧರ್ಮಫಲವನ್ನು ನೀನು ಪಡೆಯಲಾರೆ.
12076022a ನ ಹ್ಯೇತಾಮಾಶಿಷಂ ಪಾಂಡುರ್ನ ಚ ಕುಂತ್ಯನ್ವಯಾಚತ।
12076022c ನ ಚೈತಾಂ ಪ್ರಾಜ್ಞತಾಂ ತಾತ ಯಯಾ ಚರಸಿ ಮೇಧಯಾ।।
ಮಗೂ! ನಿನ್ನ ಪ್ರಜ್ಞೆ ಮತ್ತು ಬುದ್ಧಿಯಿಂದ ವಿವೇಚಿಸಿ ನೀನು ಏನನ್ನು ಮಾಡಲು ಹೊರಟಿರುವೆಯೋ ಅದನ್ನು ನಿನ್ನಿಂದ ಪಾಂಡುವಾಗಲೀ ಕುಂತಿಯಾಗಲೀ ಆಶಿಸಿರಲಿಲ್ಲ.
12076023a ಶೌರ್ಯಂ ಬಲಂ ಚ ಸತ್ತ್ವಂ ಚ ಪಿತಾ ತವ ಸದಾಬ್ರವೀತ್।
12076023c ಮಾಹಾತ್ಮ್ಯಂ ಬಲಮೌದಾರ್ಯಂ ತವ ಕುಂತ್ಯನ್ವಯಾಚತ।।
ನಿನ್ನ ತಂದೆಯು “ನನ್ನ ಈ ಮಗನು ಶೂರನೂ, ಬಲಶಾಲಿಯೂ ಮತ್ತು ಸತ್ಯನಿಷ್ಠನಾಗಿರಬೇಕು” ಎಂದು ಸದಾ ಹೇಳುತ್ತಿದ್ದನು. ಕುಂತಿಯು ನಿನ್ನಿಂದ ಮಹಾತ್ಮೆ, ಬಲ ಮತ್ತು ಔದಾರ್ಯಗಳನ್ನು ಬಯಸಿದ್ದಳು.
12076024a ನಿತ್ಯಂ ಸ್ವಾಹಾ ಸ್ವಧಾ ನಿತ್ಯಮುಭೇ ಮಾನುಷದೈವತೇ।
12076024c ಪುತ್ರೇಷ್ವಾಶಾಸತೇ ನಿತ್ಯಂ ಪಿತರೋ ದೈವತಾನಿ ಚ।।
ಪಿತೃಗಳು ಪುತ್ರರಿಂದ ನಿತ್ಯವೂ ಮನುಷ್ಯ-ದೇವತೆಗಳಿಬ್ಬರಿಗೂ ಸ್ವಾಹಾ-ಸ್ವಧಾಗಳನ್ನು ಬಯಸುತ್ತಾರೆ.
12076025a ದಾನಮಧ್ಯಯನಂ ಯಜ್ಞಃ ಪ್ರಜಾನಾಂ ಪರಿಪಾಲನಮ್।
12076025c ಧರ್ಮಮೇತಮಧರ್ಮಂ ವಾ ಜನ್ಮನೈವಾಭ್ಯಜಾಯಿಥಾಃ।।
ದಾನ, ಅಧ್ಯಯನ, ಯಜ್ಞ, ಪ್ರಜೆಗಳ ಪರಿಪಾಲನೆ – ಇವು ಜನ್ಮದಿಂದಲೇ ನಿನ್ನೊಡನೆ ಹುಟ್ಟಿಕೊಂಡ ಕರ್ಮಗಳು. ಇದು ಅಧರ್ಮವೆಂದು ಬಿಟ್ಟುಬಿಡುವುದು ಅಧರ್ಮವೇ ಆಗುತ್ತದೆ.
12076026a ಕಾಲೇ ಧುರಿ ನಿಯುಕ್ತಾನಾಂ ವಹತಾಂ ಭಾರ ಆಹಿತೇ।
12076026c ಸೀದತಾಮಪಿ ಕೌಂತೇಯ ನ ಕೀರ್ತಿರವಸೀದತಿ।।
ಕೌಂತೇಯ! ನೊಗಕ್ಕೆ ಕಟ್ಟಿದ ಎತ್ತು ಮಹಾ ಭಾರವನ್ನು ಹೊರದೇ ಮುಗ್ಗರಿಸಿ ಬೀಳಬಹುದು. ಆದರೂ ಅದರ ಕೀರ್ತಿಯು ಕಡಿಮೆಯಾಗುವುದಿಲ್ಲ. ಹಾಗೆಯೇ ನೀನೂ ಕೂಡ ರಾಜ್ಯಭಾರದ ಜವಾಬ್ದಾರಿಯಿಂದ ಕುಸಿಯಬಹುದು. ಆದರೆ ನಿನ್ನ ಕೀರ್ತಿಯು ಕಡಿಮೆಯಾಗುವುದಿಲ್ಲ.
12076027a ಸಮಂತತೋ ವಿನಿಯತೋ ವಹತ್ಯಸ್ಖಲಿತೋ ಹಿ ಯಃ।
12076027c ನಿರ್ದೋಷಕರ್ಮವಚನಾತ್ಸಿದ್ಧಿಃ ಕರ್ಮಣ ಏವ ಸಾ।।
ಎಲ್ಲ ಕಡೆಗಳಿಂದಲೂ ಮನಸ್ಸು-ಇಂದ್ರಿಯಗಳನ್ನು ಸ್ವಾಧೀನಪಡಿಸಿಕೊಂಡು ಅಸ್ಖಲಿತವಾಗಿ ತನ್ನ ಮೇಲಿರುವ ಜವಾಬ್ಧಾರಿಯನ್ನು ಹೊರುವವನು ನಿರ್ದೋಷಿಯಾಗುತ್ತಾನೆ. ಏಕೆಂದರೆ ಕರ್ಮಗಳಿಂದಲೇ ಸಿದ್ಧಿಯು ದೊರೆಯುತ್ತದೆ.
12076028a ನೈಕಾಂತವಿನಿಪಾತೇನ ವಿಚಚಾರೇಹ ಕಶ್ಚನ।
12076028c ಧರ್ಮೀ ಗೃಹೀ ವಾ ರಾಜಾ ವಾ ಬ್ರಹ್ಮಚಾರ್ಯಥ ವಾ ಪುನಃ।।
ಧಾರ್ಮಿಕನಾಗಿರಲಿ, ಗೃಹಸ್ಥನಾಗಿರಲಿ, ರಾಜನಾಗಿರಲಿ ಅಥವಾ ಬ್ರಹ್ಮಚಾರಿಯಾಗಿರಲಿ ತಾನು ಮಾಡಬೇಕಾದ ಕರ್ಮಗಳನ್ನು ಸಂಪೂರ್ಣವಾಗಿ ಮಾಡಲು ಸಾಧ್ಯವಿಲ್ಲ. ಧರ್ಮಕಾರ್ಯಗಳಲ್ಲಿ ಯಾವುದಾದರೂ ನ್ಯೂನತೆಯು ಇದ್ದೇ ಇರುತ್ತದೆ.
12076029a ಅಲ್ಪಂ ತು ಸಾಧುಭೂಯಿಷ್ಠಂ ಯತ್ಕರ್ಮೋದಾರಮೇವ ತತ್।
12076029c ಕೃತಮೇವಾಕೃತಾಚ್ಚ್ರೇಯೋ ನ ಪಾಪೀಯೋಽಸ್ತ್ಯಕರ್ಮಣಃ।।
ಕಾರ್ಯವು ಅಲ್ಪವಾಗಿದ್ದರೂ ಸಾರಭೂಯಿಷ್ಠವಾಗಿದ್ದರೆ ಅದು ಮಹಾ ಕಾರ್ಯವೆಂದೇ ಹೇಳಿಸಿಕೊಳ್ಳುತ್ತದೆ. ಕರ್ಮವನ್ನು ಮಾಡದೇ ಇರುವುದಕ್ಕಿಂತ ಕರ್ಮವನ್ನು ಮಾಡುವುದೇ ಶ್ರೇಯಸ್ಕರ. ಏಕೆಂದರೆ ಕರ್ಮಗಳನ್ನೇ ಮಾಡದಿರುವವನಷ್ಟು ಪಾಪಿಷ್ಠನು ಬೇರೊಬ್ಬನಿಲ್ಲ.
12076030a ಯದಾ ಕುಲೀನೋ ಧರ್ಮಜ್ಞಃ ಪ್ರಾಪ್ನೋತ್ಯೈಶ್ವರ್ಯಮುತ್ತಮಮ್।
12076030c ಯೋಗಕ್ಷೇಮಸ್ತದಾ ರಾಜನ್ಕುಶಲಾಯೈವ ಕಲ್ಪತೇ।।
ಕುಲೀನ, ಧರ್ಮಜ್ಞ, ಮತ್ತು ಉತ್ತಮ ಐಶ್ವರ್ಯವನ್ನು ಹೊಂದಿದವನು ರಾಜ್ಯಾಧಿಕಾರವನ್ನು ವಹಿಸಿಕೊಂಡರೆ ರಾಜನ ಯೋಗ-ಕ್ಷೇಮಗಳು ರಾಜ್ಯದ ಒಳ್ಳೆಯದಕ್ಕೇ ಆಗುತ್ತದೆ.
12076031a ದಾನೇನಾನ್ಯಂ ಬಲೇನಾನ್ಯಮನ್ಯಂ ಸೂನೃತಯಾ ಗಿರಾ।
12076031c ಸರ್ವತಃ ಪರಿಗೃಹ್ಣೀಯಾದ್ರಾಜ್ಯಂ ಪ್ರಾಪ್ಯೇಹ ಧಾರ್ಮಿಕಃ।।
ಧಾರ್ಮಿಕ ರಾಜನು ರಾಜ್ಯವನ್ನು ಪಡೆದುಕೊಂಡು ಕೆಲವರನ್ನು ದಾನಗಳಿಂದ, ಇತರರನ್ನು ಬಲದಿಂದ ಮತ್ತು ಕೆಲವರನ್ನು ಸುಮಧುರ ಮಾತುಗಲ ಮೂಲಕ ಎಲ್ಲಕಡೆಗಳಿಂದಲೂ ತನ್ನ ಅಧೀನರನ್ನಾಗಿ ಮಾಡಿಕೊಳ್ಳಬೇಕು.
12076032a ಯಂ ಹಿ ವೈದ್ಯಾಃ ಕುಲೇ ಜಾತಾ ಅವೃತ್ತಿಭಯಪೀಡಿತಾಃ।
12076032c ಪ್ರಾಪ್ಯ ತೃಪ್ತಾಃ ಪ್ರತಿಷ್ಠಂತಿ ಧರ್ಮಃ ಕೋಽಭ್ಯಧಿಕಸ್ತತಃ।।
ವೃತ್ತಿಯಿಲ್ಲದೇ ಭಯಪೀಡಿತರಾದ ಉತ್ತಮ ಕುಲದಲ್ಲಿ ಹುಟ್ಟಿದ ವಿದ್ವಾಂಸರು ಯಾರನ್ನು ಸೇರಿ ತೃಪ್ತರಾಗುತ್ತಾರೋ ಅಂಥಹ ರಾಜನ ಧರ್ಮಕ್ಕಿಂತಲೂ ಅಧಿಕ ಧರ್ಮವು ಯಾವುದಿದೆ?”
12076033 ಯುಧಿಷ್ಠಿರ ಉವಾಚ।
12076033a ಕಿಂ ನ್ವತಃ ಪರಮಂ ಸ್ವರ್ಗ್ಯಂ ಕಾ ನ್ವತಃ ಪ್ರೀತಿರುತ್ತಮಾ।
12076033c ಕಿಂ ನ್ವತಃ ಪರಮೈಶ್ವರ್ಯಂ ಬ್ರೂಹಿ ಮೇ ಯದಿ ಮನ್ಯಸೇ।।
ಯುಧಿಷ್ಠಿರನು ಹೇಳಿದನು: “ಸ್ವರ್ಗಪ್ರಾಪ್ತಿಗೆ ಶ್ರೇಷ್ಠ ಸಾಧನವು ಯಾವುದು? ಅದರಿಂದ ಎಂತಹ ಪ್ರಸನ್ನತೆಯುಂಟಾಗುತ್ತದೆ? ಅದಕ್ಕಿಂತಲೂ ಅತಿಶಯ ಪರಮೈಶ್ವರ್ಯವು ಯಾವುದು? ನಿನಗೆ ಅನಿಸಿದರೆ ಇದರ ಕುರಿತು ನನಗೆ ಹೇಳು.”
12076034 ಭೀಷ್ಮ ಉವಾಚ।
12076034a ಯಸ್ಮಿನ್ಪ್ರತಿಷ್ಠಿತಾಃ ಸಮ್ಯಕ್ಕ್ಷೇಮಂ ವಿಂದಂತಿ ತತ್ಕ್ಷಣಮ್।
12076034c ಸ ಸ್ವರ್ಗಜಿತ್ತಮೋಽಸ್ಮಾಕಂ ಸತ್ಯಮೇತದ್ಬ್ರವೀಮಿ ತೇ।।
ಭೀಷ್ಮನು ಹೇಳಿದನು: “ನೆಲೆಯಿಲ್ಲದವನಿಗೆ ಒಂದು ಕ್ಷಣಕ್ಕಾಗಿಯಾದರೂ ಸಮಾಧಾನ ಹೊಂದಿ ಕ್ಷೇಮದಿಂದಿದ್ದರೆ ಆ ರಾಜನು ಸ್ವರ್ಗವನ್ನು ಜಯಿಸುವವರಲ್ಲಿ ಶ್ರೇಷ್ಠನಾಗುತ್ತಾನೆ. ಈ ವಿಷಯದಲ್ಲಿ ನಾನು ಸತ್ಯವನ್ನೇ ಹೇಳುತ್ತಿದ್ದೇನೆ.
12076035a ತ್ವಮೇವ ಪ್ರೀತಿಮಾಂಸ್ತಸ್ಮಾತ್ಕುರೂಣಾಂ ಕುರುಸತ್ತಮ।
12076035c ಭವ ರಾಜಾ ಜಯ ಸ್ವರ್ಗಂ ಸತೋ ರಕ್ಷಾಸತೋ ಜಹಿ।।
ಕುರುಸತ್ತಮ! ಕುರುಗಳಿಗೆ ನೀನೇ ಪ್ರೀತಿಮಾನನು. ರಾಜನಾಗು. ಸ್ವರ್ಗವನ್ನು ಜಯಿಸು. ಸತ್ಪುರುಷರನ್ನು ರಕ್ಷಿಸು. ದುಷ್ಟರನ್ನು ಸಂಹರಿಸು.
12076036a ಅನು ತ್ವಾ ತಾತ ಜೀವಂತು ಸುಹೃದಃ ಸಾಧುಭಿಃ ಸಹ।
12076036c ಪರ್ಜನ್ಯಮಿವ ಭೂತಾನಿ ಸ್ವಾದುದ್ರುಮಮಿವಾಂಡಜಾಃ।।
ಮಗೂ! ಜೀವಿಗಳು ಮೋಡಗಳ ಮೇಲೆ ಮತ್ತು ಪಕ್ಷಿಗಳು ಫಲಗಳಿರುವ ಮರವನ್ನು ಹೇಗೆ ಆಶ್ರಯಿಸಿರುತ್ತವೆಯೋ ನಿನ್ನ ಸುಹೃದಯರು ಮತ್ತು ಸಾಧುಗಳೊಂದಿಗೆ ನೀನು ಜೀವಿಸು.
12076037a ಧೃಷ್ಟಂ ಶೂರಂ ಪ್ರಹರ್ತಾರಮನೃಶಂಸಂ ಜಿತೇಂದ್ರಿಯಮ್।
12076037c ವತ್ಸಲಂ ಸಂವಿಭಕ್ತಾರಮನು ಜೀವಂತು ತ್ವಾಂ ಜನಾಃ।।
ಭಯರಹಿತನಾದ ಶೂರ, ಪ್ರಹಾರಕುಶಲ, ದಯಾಳುವಾದ, ಜಿತೇಂದ್ರಿಯನಾದ, ಪ್ರಜಾವತ್ಸಲನಾದ ಮತ್ತು ದಾನಶೀಲ ರಾಜನ ಆಶ್ರಯವನ್ನು ಪಡೆದ ಪ್ರಜೆಗಳು ತಮ್ಮ ಜೀವನಿರ್ವಹಣೆಯನ್ನು ಮಾಡುತ್ತಾರೆ.”