ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ರಾಜಧರ್ಮ ಪರ್ವ
ಅಧ್ಯಾಯ 75
ಸಾರ
ಬ್ರಹ್ಮ-ಕ್ಷತ್ರರ ಸಂಬಂಧದ ಕುರಿತಾದ ಮುಚುಕುಂದೋಽಪಾಖ್ಯಾನ (1-22).
12075001 ಭೀಷ್ಮ ಉವಾಚ।
12075001a ಯೋಗಕ್ಷೇಮೋ ಹಿ ರಾಷ್ಟ್ರಸ್ಯ ರಾಜನ್ಯಾಯತ್ತ ಉಚ್ಯತೇ।
12075001c ಯೋಗಕ್ಷೇಮಶ್ಚ ರಾಜ್ಞೋಽಪಿ ಸಮಾಯತ್ತಃ ಪುರೋಹಿತೇ।।
ಭೀಷ್ಮನು ಹೇಳಿದನು: “ರಾಷ್ಟ್ರದ ಯೋಗ-ಕ್ಷೇಮಗಳು ರಾಜನನ್ನು ಅವಲಂಬಿಸಿದೆ ಎಂದು ಹೇಳುತ್ತಾರೆ. ರಾಜನ ಯೋಗ-ಕ್ಷೇಮಗಳು ಪುರೋಹಿತನ ಮೇಲೆ ಅವಲಂಬಿಸಿದೆ.
12075002a ಯತಾದೃಷ್ಟಂ ಭಯಂ ಬ್ರಹ್ಮ ಪ್ರಜಾನಾಂ ಶಮಯತ್ಯುತ।
12075002c ದೃಷ್ಟಂ ಚ ರಾಜಾ ಬಾಹುಭ್ಯಾಂ ತದ್ರಾಷ್ಟ್ರಂ ಸುಖಮೇಧತೇ।।
ಪ್ರಜೆಗಳ ಕಾಣದ ಭಯವನ್ನು ಬ್ರಾಹ್ಮಣನು ಶಾಂತಗೊಳಿಸಿದರೆ ಮತ್ತು ಕಾಣುವ ಭಯವನ್ನು ತನ್ನ ಬಾಹುಗಳಿಂದ ಶಾಂತಗೊಳಿಸಿದರೆ ಆ ರಾಷ್ಟ್ರವು ಸುಖವನ್ನು ಪಡೆಯುತ್ತದೆ.
12075003a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್।
12075003c ಮುಚುಕುಂದಸ್ಯ ಸಂವಾದಂ ರಾಜ್ಞೋ ವೈಶ್ರವಣಸ್ಯ ಚ।।
ಇದಕ್ಕೆ ಸಂಬಂಧಿಸಿದಂತೆ ಪುರಾತನ ಇತಿಹಾಸವಾದ ರಾಜಾ ಮುಚುಕುಂದ ಮತ್ತು ವೈಶ್ರವಣರ ಸಂವಾದವನ್ನು ಉದಾಹರಿಸುತ್ತಾರೆ.
12075004a ಮುಚುಕುಂದೋ ವಿಜಿತ್ಯೇಮಾಂ ಪೃಥಿವೀಂ ಪೃಥಿವೀಪತಿಃ।
12075004c ಜಿಜ್ಞಾಸಮಾನಃ ಸ್ವಬಲಮಭ್ಯಯಾದಲಕಾಧಿಪಮ್।।
ಪೃಥಿವೀಪತಿ ಮುಚುಕುಂದನು ಈ ಪೃಥ್ವಿಯನ್ನು ಗೆದ್ದು ತನ್ನ ಸೇನಾಬಲದ ಕುರಿತು ಜಿಜ್ಞಾಸೆ ಮಾಡುತ್ತಾ ಅಲಕಾಧಿಪ ಕುಬೇರನ ಬಳಿ ಹೋದನು.
12075005a ತತೋ ವೈಶ್ರವಣೋ ರಾಜಾ ರಕ್ಷಾಂಸಿ ಸಮವಾಸೃಜತ್।
12075005c ತೇ ಬಲಾನ್ಯವಮೃದ್ನಂತಃ ಪ್ರಾಚರಂಸ್ತಸ್ಯ ನೈರೃತಾಃ।।
ಆಗ ರಾಜಾ ವೈಶ್ರವಣನು ರಾಕ್ಷಸರನ್ನು ಸೃಷ್ಟಿಸಿದನು. ಆ ನೈರೃತರು ಮುಚುಕುಂದನ ಸೇನೆಯನ್ನು ಕ್ಷಣಮಾತ್ರದಲ್ಲಿ ಸದೆಬಡಿದರು.
12075006a ಸ ಹನ್ಯಮಾನೇ ಸೈನ್ಯೇ ಸ್ವೇ ಮುಚುಕುಂದೋ ನರಾಧಿಪಃ।
12075006c ಗರ್ಹಯಾಮಾಸ ವಿದ್ವಾಂಸಂ ಪುರೋಹಿತಮರಿಂದಮಃ।।
ತನ್ನ ಸೇನೆಯು ನಾಶವಾಗುತ್ತಿರಲು ನರಾಧಿಪ ಅರಿಂದಮ ಮುಚುಕುಂದನು ತನ್ನ ಪುರೋಹಿತ ವಿದ್ವಾಂಸನನ್ನು ನಿಂದಿಸತೊಡಗಿದನು.
12075007a ತತ ಉಗ್ರಂ ತಪಸ್ತಪ್ತ್ವಾ ವಸಿಷ್ಠೋ ಬ್ರಹ್ಮವಿತ್ತಮಃ।
12075007c ರಕ್ಷಾಂಸ್ಯಪಾವಧೀತ್ತತ್ರ ಪಂಥಾನಂ ಚಾಪ್ಯವಿಂದತ।।
ಆಗ ಬ್ರಹ್ಮವಿತ್ತಮ ವಸಿಷ್ಠನು ಉಗ್ರ ತಪಸ್ಸನ್ನು ತಪಿಸಿ ರಾಕ್ಷಸಸೇನೆಯನ್ನು ಧ್ವಂಸಮಾಡಿ ಮುಚುಕುಂದನ ವಿಜಯಕ್ಕೆ ಅವಕಾಶಮಾಡಿಕೊಟ್ಟರು.
12075008a ತತೋ ವೈಶ್ರವಣೋ ರಾಜಾ ಮುಚುಕುಂದಮದರ್ಶಯತ್।
12075008c ವಧ್ಯಮಾನೇಷು ಸೈನ್ಯೇಷು ವಚನಂ ಚೇದಮಬ್ರವೀತ್।।
ಆಗ ರಾಜಾ ವೈಶ್ರವಣನು ಮುಚುಕುಂದನನ್ನು ಕಂಡನು. ತನ್ನ ಸೇನೆಗಳು ವಧಿಸಲ್ಪಡುತ್ತಿರಲು ಈ ಮಾತನ್ನಾಡಿದನು:
12075009a ತ್ವತ್ತೋ ಹಿ ಬಲಿನಃ ಪೂರ್ವೇ ರಾಜಾನಃ ಸಪುರೋಹಿತಾಃ।
12075009c ನ ಚೈವಂ ಸಮವರ್ತಂಸ್ತೇ ಯಥಾ ತ್ವಮಿಹ ವರ್ತಸೇ।।
“ಈ ಹಿಂದೆಯೂ ಅನೇಕ ಬಲಶಾಲೀ ರಾಜರು ತಮ್ಮ ಪುರೋಹಿತರೊಂದಿಗೆ ಇಲ್ಲಿಗೆ ಬಂದಿದ್ದರು. ಆದರೆ ನೀನು ಈಗ ವರ್ತಿಸಿದ ರೀತಿಯಲ್ಲಿ ವರ್ತಿಸಲಿಲ್ಲ.
12075010a ತೇ ಖಲ್ವಪಿ ಕೃತಾಸ್ತ್ರಾಶ್ಚ ಬಲವಂತಶ್ಚ ಭೂಮಿಪಾಃ।
12075010c ಆಗಮ್ಯ ಪರ್ಯುಪಾಸಂತೇ ಮಾಮೀಶಂ ಸುಖದುಃಖಯೋಃ।।
ಆ ಭೂಮಿಪರು ಕೃತಾಸ್ತ್ರರೂ ಬಲವಂತರಾಗಿದ್ದರೂ ಇಲ್ಲಿಗೆ ಬಂದು ನನ್ನನ್ನು ಸುಖದುಃಖಗಳ ಈಶನೆಂದು ಆರಾಧಿಸುತ್ತಿದ್ದರು.
12075011a ಯದ್ಯಸ್ತಿ ಬಾಹುವೀರ್ಯಂ ತೇ ತದ್ದರ್ಶಯಿತುಮರ್ಹಸಿ।
12075011c ಕಿಂ ಬ್ರಾಹ್ಮಣಬಲೇನ ತ್ವಮತಿಮಾತ್ರಂ ಪ್ರವರ್ತಸೇ।।
ಒಂದು ವೇಳೆ ನೀನು ನಿನ್ನ ಬಾಹುಬಲವನ್ನು ನನಗೆ ಪ್ರದರ್ಶಿಸಲು ಬಯಸುವೆಯಾದರೆ ಬ್ರಾಹ್ಮಣಬಲದಲ್ಲಿ ನೀನು ನನಗಿಂತ ಹೆಚ್ಚಿನವನೆಂದು ಎಂದು ಏಕೆ ನಡೆದುಕೊಳ್ಳುತ್ತಿರುವೆ?”
12075012a ಮುಚುಕುಂದಸ್ತತಃ ಕ್ರುದ್ಧಃ ಪ್ರತ್ಯುವಾಚ ಧನೇಶ್ವರಮ್।
12075012c ನ್ಯಾಯಪೂರ್ವಮಸಂರಬ್ಧಮಸಂಭ್ರಾಂತಮಿದಂ ವಚಃ।।
ಆಗ ಕ್ರುದ್ಧ ಮುಚುಕುಂದನು ಧನೇಶ್ವರನಿಗೆ ನ್ಯಾಯಪೂರ್ವಕವೂ, ಕ್ರೋಧರಹಿತವೂ, ಮತ್ತು ಗಾಭರಿಗೊಳ್ಳದೇ ಈ ಮಾತನ್ನಾಡಿದನು:
12075013a ಬ್ರಹ್ಮಕ್ಷತ್ರಮಿದಂ ಸೃಷ್ಟಮೇಕಯೋನಿ ಸ್ವಯಂಭುವಾ।
12075013c ಪೃಥಗ್ಬಲವಿಧಾನಂ ಚ1 ತಲ್ಲೋಕಂ ಪರಿರಕ್ಷತಿ।।
“ಬ್ರಾಹ್ಮಣ-ಕ್ಷತ್ರಿಯರ ಜನ್ಮಸ್ಥಾನವು ಸ್ವಯಂಭು ಬ್ರಹ್ಮನೊಬ್ಬನೇ. ಈ ಎರಡೂ ಬಲಗಳು ಬೇರೆಬೇರೆಯಾದರೆ ಲೋಕಗಳನ್ನು ರಕ್ಷಿಸಲಾರವು.
12075014a ತಪೋಮಂತ್ರಬಲಂ ನಿತ್ಯಂ ಬ್ರಾಹ್ಮಣೇಷು ಪ್ರತಿಷ್ಠಿತಮ್।
12075014c ಅಸ್ತ್ರಬಾಹುಬಲಂ ನಿತ್ಯಂ ಕ್ಷತ್ರಿಯೇಷು ಪ್ರತಿಷ್ಠಿತಮ್।।
ತಪೋಮಂತ್ರಬಲವು ನಿತ್ಯವೂ ಬ್ರಾಹ್ಮಣರಲ್ಲಿ ಇರುತ್ತದೆ. ಅಸ್ತ್ರಬಾಹುಬಲವು ನಿತ್ಯವೂ ಕ್ಷತ್ರಿಯರಲ್ಲಿ ಇರುತ್ತದೆ.
12075015a ತಾಭ್ಯಾಂ ಸಂಭೂಯ ಕರ್ತವ್ಯಂ ಪ್ರಜಾನಾಂ ಪರಿಪಾಲನಮ್।
12075015c ತಥಾ ಚ ಮಾಂ ಪ್ರವರ್ತಂತಂ ಗರ್ಹಯಸ್ಯಲಕಾಧಿಪ।।
ಅಲಕಾಧಿಪ! ಅವರಿಬ್ಬರೂ ಕೂಡಿಕೊಂಡೇ ಪ್ರಜೆಗಳ ಪರಿಪಾಲನೆಯನ್ನು ಮಾಡಬೇಕು. ಅದರಂತೆಯೇ ನಡೆದುಕೊಳ್ಳುತ್ತಿರುವ ನನ್ನನ್ನು ಏಕೆ ನಿಂದಿಸುತ್ತಿದ್ದೀಯೆ?”
12075016a ತತೋಽಬ್ರವೀದ್ವೈಶ್ರವಣೋ ರಾಜಾನಂ ಸಪುರೋಹಿತಮ್।
12075016c ನಾಹಂ ರಾಜ್ಯಮನಿರ್ದಿಷ್ಟಂ ಕಸ್ಮೈ ಚಿದ್ವಿದಧಾಮ್ಯುತ।।
ಬಳಿಕ ವೈಶ್ರವಣನು ಪುರೋಹಿತನೊಂದಿಗಿದ್ದ ರಾಜನಿಗೆ ಹೇಳಿದನು: “ನಾನು ಈ ರಾಜ್ಯವನ್ನು ಅನಿರ್ದಿಷ್ಟ ಯಾರಿಗಾದರೂ ಎಂದೂ ಕೊಡುವುದಿಲ್ಲ.
12075017a ನಾಚ್ಚಿಂದೇ ಚಾಪಿ ನಿರ್ದಿಷ್ಟಮಿತಿ ಜಾನೀಹಿ ಪಾರ್ಥಿವ।
12075017c ಪ್ರಶಾಧಿ ಪೃಥಿವೀಂ ವೀರ ಮದ್ದತ್ತಾಮಖಿಲಾಮಿಮಾಮ್।।
ಪಾರ್ಥಿವ! ಆದರೂ ನಿನಗೆ ನಿರ್ದಿಷ್ಟವಾದ ಈ ಅಖಿಲ ಭೂಮಿಯನ್ನು ನಿನಗೆ ನೀಡುತ್ತಿದ್ದೇನೆ. ವೀರ! ಈ ಭೂಮಿಯನ್ನು ಆಳು.”
12075018 ಮುಚುಕುಂದ ಉವಾಚ।
12075018a ನಾಹಂ ರಾಜ್ಯಂ ಭವದ್ದತ್ತಂ ಭೋಕ್ತುಮಿಚ್ಚಾಮಿ ಪಾರ್ಥಿವ।
12075018c ಬಾಹುವೀರ್ಯಾರ್ಜಿತಂ ರಾಜ್ಯಮಶ್ನೀಯಾಮಿತಿ ಕಾಮಯೇ।।
ಮುಚುಕುಂದನು ಹೇಳಿದನು: “ಪಾರ್ಥಿವ! ನೀನು ದಾನ ಮಾಡಿದ ಭೂಮಿಯನ್ನು ಭೋಗಿಸಲು ಬಯಸುವುದಿಲ್ಲ. ಬಾಹುವೀರ್ಯದಿಂದಲೇ ಜಯಿಸಲ್ಪಟ್ಟ ರಾಜ್ಯವನ್ನು ಭೋಗಿಸಲು ಬಯಸುತ್ತೇನೆ.””
12075019 ಭೀಷ್ಮ ಉವಾಚ।
12075019a ತತೋ ವೈಶ್ರವಣೋ ರಾಜಾ ವಿಸ್ಮಯಂ ಪರಮಂ ಯಯೌ।
12075019c ಕ್ಷತ್ರಧರ್ಮೇ ಸ್ಥಿತಂ ದೃಷ್ಟ್ವಾ ಮುಚುಕುಂದಮಸಂಭ್ರಮಮ್।।
ಭೀಷ್ಮನು ಹೇಳಿದನು: “ಆಗ ರಾಜಾ ವೈಶ್ರವಣನು ವ್ಯಾಕುಲವಿಲ್ಲದೇ ಕ್ಷತ್ರಧರ್ಮದಲ್ಲಿ ಸ್ಥಿತನಾಗಿದ್ದ ಮುಚುಕುಂದನನ್ನು ನೋಡಿ ಪರಮ ವಿಸ್ಮಿತನಾದನು.
12075020a ತತೋ ರಾಜಾ ಮುಚುಕುಂದಃ ಸೋಽನ್ವಶಾಸದ್ವಸುಂಧರಾಮ್।
12075020c ಬಾಹುವೀರ್ಯಾರ್ಜಿತಾಂ ಸಮ್ಯಕ್ಕ್ಷತ್ರಧರ್ಮಮನುವ್ರತಃ।।
ಬಳಿಕ ಉತ್ತಮ ಕ್ಷತ್ರಧರ್ಮದಲ್ಲಿ ನಿರತನಾಗಿದ್ದ ರಾಜಾ ಮುಚುಕುಂದನು ತನ್ನ ಬಾಹುವೀರ್ಯಗಳಿಂದ ಗೆದ್ದ ವಸುಂಧರೆಯನ್ನು ಆಳಿದನು.
12075021a ಏವಂ ಯೋ ಬ್ರಹ್ಮವಿದ್ರಾಜಾ ಬ್ರಹ್ಮಪೂರ್ವಂ ಪ್ರವರ್ತತೇ।
12075021c ಜಯತ್ಯವಿಜಿತಾಮುರ್ವೀಂ ಯಶಶ್ಚ ಮಹದಶ್ನುತೇ।।
ಹೀಗೆ ಮೊದಲು ಬ್ರಾಹ್ಮಣನ ಆಶ್ರಯವನ್ನು ಪಡೆದು ಅವನ ಸಹಾಯದಿಂದ ರಾಜಕಾರ್ಯದಲ್ಲಿ ಪ್ರವೃತ್ತನಾಗುವ ರಾಜನು ಹಿಂದೆ ಜಯಿಸಲಸಾಧ್ಯವಾಗಿದ್ದ ರಾಜ್ಯವನ್ನೂ ಜಯಿಸುತ್ತಾನೆ ಮತ್ತು ಮಹಾ ಯಶಸ್ಸನ್ನು ಪಡೆಯುತ್ತಾನೆ.
12075022a ನಿತ್ಯೋದಕೋ ಬ್ರಾಹ್ಮಣಃ ಸ್ಯಾನ್ನಿತ್ಯಶಸ್ತ್ರಶ್ಚ ಕ್ಷತ್ರಿಯಃ।
12075022c ತಯೋರ್ಹಿ ಸರ್ವಮಾಯತ್ತಂ ಯತ್ಕಿಂ ಚಿಜ್ಜಗತೀಗತಮ್।।
ಬ್ರಾಹ್ಮಣನು ನಿತ್ಯವೂ ಉದಕಪಾತ್ರೆಯನ್ನು ಧರಿಸಿರಬೇಕು. ಕ್ಷತ್ರಿಯನು ನಿತ್ಯವೂ ಶಸ್ತ್ರಧಾರಿಯಾಗಿರಬೇಕು. ಈ ಜಗತ್ತಿನಲ್ಲಿ ಏನೆಲ್ಲ ಇವೆಯೋ ಅವೆಲ್ಲವೂ ಅವರಿಬ್ಬರ ಅಧೀನದಲ್ಲಿಯೇ ಇರುತ್ತದೆ.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ಮುಚುಕುಂದೋಪಾಖ್ಯಾನೇ ಪಂಚಸಪ್ತತಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಮುಚುಕುಂದೋಪಾಖ್ಯಾನ ಎನ್ನುವ ಎಪ್ಪತ್ತೈದನೇ ಅಧ್ಯಾಯವು.
-
ಪೃಥಗ್ಬಲವಿಧಾನಂ ತನ್ನ। ಎಂಬ ಪಾಠಾಂತರವಿದೆ. ↩︎