ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ರಾಜಧರ್ಮ ಪರ್ವ
ಅಧ್ಯಾಯ 71
ಸಾರ
ರಾಜನಲ್ಲಿರಬೇಕಾದ 36 ಗುಣಗಳ ವರ್ಣನೆ (1-14).
12071001 ಯುಧಿಷ್ಠಿರ ಉವಾಚ।
12071001a ಕೇನ ವೃತ್ತೇನ ವೃತ್ತಜ್ಞ ವರ್ತಮಾನೋ ಮಹೀಪತಿಃ।
12071001c ಸುಖೇನಾರ್ಥಾನ್ಸುಖೋದರ್ಕಾನಿಹ ಚ ಪ್ರೇತ್ಯ ಚಾಪ್ನುಯಾತ್।।
ಯುಧಿಷ್ಠಿರನು ಹೇಳಿದನು: “ವೃತ್ತಜ್ಞ! ಯಾವ ವರ್ತನೆಗಳಿಂದ ನಡೆದುಕೊಂಡು ಮಹೀಪತಿಯು ಇಹದಲ್ಲಿ ಮತ್ತು ಪರದಲ್ಲಿ ಸುಖನೀಡುವಂತಹ ವಸ್ತುಗಳನ್ನು ಅನಾಯಾಸವಾಗಿ ಪಡೆದುಕೊಳ್ಳಬಹುದು?”
12071002 ಭೀಷ್ಮ ಉವಾಚ।
12071002a ಇಯಂ ಗುಣಾನಾಂ ಷಟ್ತ್ರಿಂಶತ್ಷಟ್ತ್ರಿಂಶದ್ಗುಣಸಂಯುತಾ।
12071002c ಯಾನ್ಗುಣಾಂಸ್ತು ಗುಣೋಪೇತಃ ಕುರ್ವನ್ಗುಣಮವಾಪ್ನುಯಾತ್।।
ಭೀಷ್ಮನು ಹೇಳಿದನು: “ಯಾವ ಗುಣಗಳನ್ನು ಹೊಂದಿರುವುದರಿಂದ ಮತ್ತು ಕಾರ್ಯಗಳನ್ನು ಮಾಡುವುದರಿಂದ ರಾಜನು ಉತ್ಕರ್ಷವನ್ನು ಹೊಂದುತ್ತಾನೋ ಅವುಗಳ ಸಂಖ್ಯೆಯು ಮೂವತ್ತಾರು.
12071003a ಚರೇದ್ಧರ್ಮಾನಕಟುಕೋ ಮುಂಚೇತ್ಸ್ನೇಹಂ ನ ನಾಸ್ತಿಕಃ।
12071003c ಅನೃಶಂಸಶ್ಚರೇದರ್ಥಂ ಚರೇತ್ಕಾಮಮನುದ್ಧತಃ।।
(1) ಯಾರೊಡನೆಯು ಕಟುಮಾತುಗಳನ್ನಾಡದೇ ಧರ್ಮವನ್ನು ಆಚರಿಸುವುದು (2) ನಾಸ್ತಿಕನಾಗಿರದೇ ಎಲ್ಲರೊಡನೆ ಸ್ನೇಹದಿಂದಿರುವುದು (3) ದಯಾಪರನಾಗಿದ್ದುಕೊಂಡೇ ಅರ್ಥವನ್ನು ಸಂಪಾದಿಸವುದು (4) ಲೋಕಮರ್ಯಾದೆಯನ್ನು ಅತಿಕ್ರಮಿಸದೇ ವಿಷಯಸುಖಗಳನ್ನು ಅನುಭವಿಸುವುದು
12071004a ಪ್ರಿಯಂ ಬ್ರೂಯಾದಕೃಪಣಃ ಶೂರಃ ಸ್ಯಾದವಿಕತ್ಥನಃ।
12071004c ದಾತಾ ನಾಪಾತ್ರವರ್ಷೀ ಸ್ಯಾತ್ಪ್ರಗಲ್ಭಃ ಸ್ಯಾದನಿಷ್ಠುರಃ।।
(5) ಕೃಪಣತೆಯಿಲ್ಲದೇ ಪ್ರಿಯಮಾತುಗಳನ್ನೇ ಆಡುವುದು (6) ಶೂರನಾಗಿದ್ದರೂ ಆತ್ಮಪ್ರಶಂಸೆಯನ್ನು ಮಾಡಿಕೊಳ್ಳದೇ ಇರುವುದು (7) ದಾನಶೀಲನಾಗಿದ್ದುಕೊಂಡು ಅಪಾತ್ರರಿಗೆ ದಾನಮಾಡದ ಇರುವುದು (8) ಸಾಹಸಿಯಾಗಿರವುದು, ದಯಾಪರನಾಗಿರವುದು ಮತ್ತ ನಿಷ್ಠುರಮಾತುಗಳನ್ನಾಡದಿರುವುದು
12071005a ಸಂದಧೀತ ನ ಚಾನಾರ್ಯೈರ್ವಿಗೃಹ್ಣೀಯಾನ್ನ ಬಂಧುಭಿಃ।
12071005c ನಾನಾಪ್ತೈಃ ಕಾರಯೇಚ್ಚಾರಂ ಕುರ್ಯಾತ್ಕಾರ್ಯಮಪೀಡಯಾ।।
(9) ಅನಾರ್ಯರೊಡನೆ ಸಂಬಂಧವನ್ನಿಟ್ಟುಕೊಳ್ಳದೇ ಇರುವುದು (10) ಬಂಧುಗಳೊಡನೆ ಜಗಳವಾಡದೇ ಇರುವುದು (11) ರಾಜನಲ್ಲಿ ಭಕ್ತಿಯಿಲ್ಲದಿರುವವನನ್ನು ಗೂಢಚರನನ್ನಾಗಿಟ್ಟುಕೊಳ್ಳದೇ ಇರುವುದು (12) ಯಾರಿಗೂ ಪೀಡೆಯಾಗದ ರೀತಿಯಲ್ಲಿ ರಾಜಕಾರ್ಯಗಳನ್ನು ಸಾಧಿಸಿಕೊಳ್ಳುವುದು
12071006a ಅರ್ಥಾನ್ಬ್ರೂಯಾನ್ನ ಚಾಸತ್ಸು ಗುಣಾನ್ಬ್ರೂಯಾನ್ನ ಚಾತ್ಮನಃ।
12071006c ಆದದ್ಯಾನ್ನ ಚ ಸಾಧುಭ್ಯೋ ನಾಸತ್ಪುರುಷಮಾಶ್ರಯೇತ್।।
(13) ದುಷ್ಟರಿಗೆ ಅಭೀಷ್ಟ ರಾಜಕಾರ್ಯಗಳನ್ನು ಹೇಳದಿರುವುದು (14) ತನ್ನ ಗುಣಗಳನ್ನು ತಾನೇ ಹೊಗಳಿಕೊಳ್ಳದಿರುವುದು (15) ಸಾಧು-ಸತ್ಪುರುಷರಿಂದ ರಾಜಕಾಣಿಕೆಯನ್ನು ತೆಗೆದುಕೊಳ್ಳದೇ ಇರುವುದು (16) ನೀಚರನ್ನು ಆಶ್ರಯಿಸದೇ ಇರುವುದು
12071007a ನಾಪರೀಕ್ಷ್ಯ ನಯೇದ್ದಂಡಂ ನ ಚ ಮಂತ್ರಂ ಪ್ರಕಾಶಯೇತ್।
12071007c ವಿಸೃಜೇನ್ನ ಚ ಲುಬ್ಧೇಭ್ಯೋ ವಿಶ್ವಸೇನ್ನಾಪಕಾರಿಷು।।
(17) ಪರಕ್ಷಿಸದೆಯೇ ದಂಡನೆಯನ್ನು ನೀಡದಿರುವುದು (18) ಮಂತ್ರಾಲೋಚನೆಗಳನ್ನು ಬಹಿರಂಗ ಪಡಿಸದೇ ಇರುವುದು (19) ಲೋಭಿಗಳಿಗೆ ಹಣವನ್ನು ಕೊಡದೇ ಇರುವುದು (20) ಒಮ್ಮೆ ಅಪಕಾರ ಮಾಡಿದವರ ಮೇಲೆ ಪುನಃ ವಿಶ್ವಾಸವನ್ನಿಡದಿರುವುದು
12071008a ಅನೀರ್ಷುರ್ಗುಪ್ತದಾರಃ ಸ್ಯಾಚ್ಚೋಕ್ಷಃ ಸ್ಯಾದಘೃಣೀ ನೃಪಃ।
12071008c ಸ್ತ್ರಿಯಂ ಸೇವೇತ ನಾತ್ಯರ್ಥಂ ಮೃಷ್ಟಂ ಭುಂಜೀತ ನಾಹಿತಮ್।।
(21) ಪರಸ್ಪರರು ಅಸೂಯೆಪಡದಂತೆ ಪತ್ನಿಯರನ್ನು ನೋಡಿಕೊಳ್ಳುವುದು (22) ದಕ್ಷತೆ (23) ಸ್ತ್ರೀಯರಲ್ಲಿ ಹೆಚ್ಚು ಅನುರಕ್ತನಾಗದೇ ಇರುವುದು (24) ಶುದ್ಧವಾದ ಮತ್ತು ರುಚಿಕರ ಭೋಜನವನ್ನೇ ಮಾಡುವುದು
12071009a ಅಸ್ತಬ್ಧಃ ಪೂಜಯೇನ್ಮಾನ್ಯಾನ್ಗುರೂನ್ಸೇವೇದಮಾಯಯಾ।
12071009c ಅರ್ಚೇದ್ದೇವಾನ್ನ ದಂಭೇನ ಶ್ರಿಯಮಿಚ್ಚೇದಕುತ್ಸಿತಾಮ್।।
(25) ಆಡಂಬರ ತೋರಿಸದೇ ವಿನಯ ಭಾವದಿಂದ ಮಹನೀಯರನ್ನು ಪೂಜಿಸುವುದು (26) ಕಪಟವಿಲ್ಲದೇ ಗುರುಜನರ ಸೇವೆಮಾಡುವುದು (27) ದಂಭಾಹಂಕಾರ ರಹಿತನಾಗಿ ದೇವತೆಗಳನ್ನು ಪೂಜಿಸುವುದು (28) ದೋಷರಹಿತ ಸಂಪತ್ತಿನ ಸಂಗ್ರಹದಲ್ಲಿಯೇ ಆಸಕ್ತನಾಗಿರುವುದು
12071010a ಸೇವೇತ ಪ್ರಣಯಂ ಹಿತ್ವಾ ದಕ್ಷಃ ಸ್ಯಾನ್ನ ತ್ವಕಾಲವಿತ್।
12071010c ಸಾಂತ್ವಯೇನ್ನ ಚ ಭೋಗಾರ್ಥಮನುಗೃಹ್ಣನ್ನ ಚಾಕ್ಷಿಪೇತ್।।
(29) ಪಕ್ಷಪಾತವಿಲ್ಲದೇ ಪ್ರಜೆಗಳನ್ನು ಪಾಲಿಸುವುದು (30) ದಕ್ಷನಾಗಿರುವುದು, ಕಾಲ-ದೇಶಗಳಿಗನುಗುಣವಾಗಿ ಕಾರ್ಯಗಳನ್ನು ಕೈಗೊಳ್ಳುವುದು (31) ಆಸೆಯಿಟ್ಟುಕೊಂಡು ಬಂದಿರುವವನಿಗೆ ಏನನ್ನೂ ಕೊಡದೇ ಕೇವಲ ಸಾಂತ್ವನಮಾತುಗಳನ್ನಾಡಿ ಕಳುಹಿಸದೇ ಇರುವುದು (32) ಕೃಪೆದೋರುವಾಗ ನಿಂದಿಸದೇ ಇರುವುದು
12071011a ಪ್ರಹರೇನ್ನ ತ್ವವಿಜ್ಞಾಯ ಹತ್ವಾ ಶತ್ರೂನ್ನ ಶೇಷಯೇತ್।
12071011c ಕ್ರೋಧಂ ಕುರ್ಯಾನ್ನ ಚಾಕಸ್ಮಾನ್ಮೃದುಃ ಸ್ಯಾನ್ನಾಪಕಾರಿಷು।।
(33) ತಿಳಿಯದೇ ಶತ್ರುವೆಂದು ಯಾರನ್ನೂ ಪ್ರಹರಿಸದೇ ಇರುವುದು (34) ಸಂಬಂಧಿಯಾಗಿದ್ದರೂ ಶತ್ರುವನ್ನು ಸಂಹರಿಸಿದ ನಂತರ ಶೋಕಿಸದೇ ಇರುವುದು (35) ಕಾರಣವಿಲ್ಲದೇ ಯಾರಮೇಲೂ ಕೋಪಿಸಿಕೊಳ್ಳದೇ ಇರುವುದು ಮತ್ತು (36) ಪಾಪಿಗಳ ವಿಷಯದಲ್ಲ ಮೃದುವಾಗಿರದೇ ಇರುವುದು.
12071012a ಏವಂ ಚರಸ್ವ ರಾಜ್ಯಸ್ಥೋ ಯದಿ ಶ್ರೇಯ ಇಹೇಚ್ಚಸಿ।
12071012c ಅತೋಽನ್ಯಥಾ ನರಪತಿರ್ಭಯಮೃಚ್ಚತ್ಯನುತ್ತಮಮ್।।
ಇಲ್ಲಿ ಶ್ರೇಯಸ್ಸನ್ನು ಬಯಸುವೆಯಾದರೆ ರಾಜ್ಯಸ್ಥನಾಗಿ ಹೀಗೆಯೇ ನಡೆದುಕೋ. ಅನ್ಯಥಾ ನರಪತಿಯು ಭಯವನ್ನು ತಂದುಕೊಳ್ಳತ್ತಾನೆ ಮತ್ತು ಸುದಾರುಣ ಆಪತ್ತಿಗೆ ಗುರಿಯಾಗುತ್ತಾನೆ.
12071013a ಇತಿ ಸರ್ವಾನ್ಗುಣಾನೇತಾನ್ಯಥೋಕ್ತಾನ್ಯೋಽನುವರ್ತತೇ।
12071013c ಅನುಭೂಯೇಹ ಭದ್ರಾಣಿ ಪ್ರೇತ್ಯ ಸ್ವರ್ಗೇ ಮಹೀಯತೇ।।
ಈ ಎಲ್ಲ ಗುಣಗಳನ್ನೂ ಕಾರ್ಯರೂಪಕ್ಕೆ ತರುವ ರಾಜನು ಇಲ್ಲ ಸಕಲವಿಧದ ಕಲ್ಯಾಣಗಳಿಗೂ ಪಾತ್ರನಾಗಿ ಅವಸಾನಾನಂತರ ಸ್ವರ್ಗಲೋಕದಲ್ಲಿ ವಿರಾಜಿಸುತ್ತಾನೆ.”
12071014 ವೈಶಂಪಾಯನ ಉವಾಚ 12071014a ಇದಂ ವಚಃ ಶಾಂತನವಸ್ಯ ಶುಶ್ರುವಾನ್ ಯುಧಿಷ್ಠಿರಃ ಪಾಂಡವಮುಖ್ಯಸಂವೃತಃ।
12071014c ತದಾ ವವಂದೇ ಚ ಪಿತಾಮಹಂ ನೃಪೋ ಯಥೋಕ್ತಮೇತಚ್ಚ ಚಕಾರ ಬುದ್ಧಿಮಾನ್।।
ವೈಶಂಪಾಯನನು ಹೇಳಿದನು: “ಪಾಂಡವಮುಖ್ಯರೊಂದಿಗೆ ಸುತ್ತುವರೆಯಲ್ಪಟ್ಟ ಯುಧಿಷ್ಠಿರನ ಶಾಂತನವನ ಈ ಮಾತುಗಳನ್ನು ಕೇಳಿದನು. ನೃಪನು ಪಿತಾಮಹನಿಗೆ ವಂದಿಸಿದನು ಮತ್ತು ಆ ಬುದ್ಧಿಮಾನನು ಅವನು ಹೇಳಿದಂತೆಯೇ ಮಾಡಿದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಶಾಂತಿ ಪರ್ವಣಿ ರಾಜಧರ್ಮ ಪರ್ವಣಿ ಏಕಸಪ್ತತಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತ ಶಾಂತಿ ಪರ್ವದ ರಾಜಧರ್ಮ ಪರ್ವದಲ್ಲಿ ಎಪ್ಪತ್ತೊಂದನೇ ಅಧ್ಯಾಯವು.