ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ರಾಜಧರ್ಮ ಪರ್ವ
ಅಧ್ಯಾಯ 70
ಸಾರ
ದಂಡನೀತಿ (1-32).
12070001 ಯುಧಿಷ್ಠಿರ ಉವಾಚ।
12070001a ದಂಡನೀತಿಶ್ಚ ರಾಜಾ ಚ ಸಮಸ್ತೌ ತಾವುಭಾವಪಿ।
12070001c ಕಸ್ಯ ಕಿಂ ಕುರ್ವತಃ ಸಿದ್ಧ್ಯೈ ತನ್ಮೇ ಬ್ರೂಹಿ ಪಿತಾಮಹ।।
ಯುಧಿಷ್ಠಿರನು ಹೇಳಿದನು: “ಪಿತಾಮಹ! ದಂಡನೀತಿ ಮತ್ತು ರಾಜ – ಇವೆರಡೂ ಸೇರಿದರೆ ರಾಜನೀತಿಯಾಗುತ್ತದೆ. ಯಾರಿಗೆ ಏನನ್ನು ಮಾಡಿದರೆ ರಾಜನೀತಿಯು ಸಿದ್ಧಿಸುವುದು ಎನ್ನುವುದನ್ನು ಹೇಳು.”
12070002 ಭೀಷ್ಮ ಉವಾಚ।
12070002a ಮಹಾಭಾಗ್ಯಂ ದಂಡನೀತ್ಯಾಃ ಸಿದ್ಧೈಃ ಶಬ್ದೈಃ ಸಹೇತುಕೈಃ।
12070002c ಶೃಣು ಮೇ ಶಂಸತೋ ರಾಜನ್ಯಥಾವದಿಹ ಭಾರತ।।
ಭೀಷ್ಮನು ಹೇಳಿದನು: “ರಾಜನ್! ಭಾರತ! ದಂಡನೀತಿಯ ಮಹಾಭಾಗ್ಯದಕುರಿತು ಸಿದ್ಧ ಶಬ್ಧಗಳಿಂದ ಕಾರಣಗಳೊಂದಿಗೆ ಹೇಳುವ ನನ್ನನ್ನು ಕೇಳು.
12070003a ದಂಡನೀತಿಃ ಸ್ವಧರ್ಮೇಭ್ಯಶ್ಚಾತುರ್ವರ್ಣ್ಯಂ ನಿಯಚ್ಚತಿ।
12070003c ಪ್ರಯುಕ್ತಾ ಸ್ವಾಮಿನಾ ಸಮ್ಯಗಧರ್ಮೇಭ್ಯಶ್ಚ ಯಚ್ಚತಿ।।
ದಂಡನೀತಿಯು ನಾಲ್ಕು ವರ್ಣದವರೂ ಸ್ವರ್ಧರ್ಮಗಳಲ್ಲಿ ನಿರತರಾಗಿರುವುದನ್ನು ನಿಯಂತ್ರಿಸುತ್ತದೆ. ಒಡೆಯನಿಂದ ಚೆನ್ನಾಗಿ ಬಳಸಲ್ಪಟ್ಟ ಇದು ಎಲ್ಲ ರೀತಿಯ ಅಧರ್ಮಗಳನ್ನೂ ನಾಶಗೊಳಿಸುತ್ತದೆ.
12070004a ಚಾತುರ್ವರ್ಣ್ಯೇ ಸ್ವಧರ್ಮಸ್ಥೇ ಮರ್ಯಾದಾನಾಮಸಂಕರೇ।
12070004c ದಂಡನೀತಿಕೃತೇ ಕ್ಷೇಮೇ ಪ್ರಜಾನಾಮಕುತೋಭಯೇ।।
ನಾಲ್ಕುವರ್ಣದವರನ್ನೂ ಸ್ವಧರ್ಮದಲ್ಲಿ ನಿರತರಾಗಿರುವಂತೆ ಮತ್ತು ಮರ್ಯಾದೆಗಳ ಸಂಕರವಾಗದಂತೆ ದಂಡನೀತಿಯನ್ನು ಬಳಸಿ ಪ್ರಜೆಗಳ ಕ್ಷೇಮವನ್ನು ನೋಡಿಕೊಂಡಾಗ ಅವರಿಗೆ ಭಯವೆನ್ನುವುದೇ ಇರುವುದಿಲ್ಲ.
12070005a ಸೋಮೇ ಪ್ರಯತ್ನಂ ಕುರ್ವಂತಿ ತ್ರಯೋ ವರ್ಣಾ ಯಥಾವಿಧಿ।
12070005c ತಸ್ಮಾದ್ದೇವಮನುಷ್ಯಾಣಾಂ1 ಸುಖಂ ವಿದ್ಧಿ ಸಮಾಹಿತಮ್।।
ಮೂರು ವರ್ಣದವರೂ ಯಥಾವಿಧಿಯಾಗಿ ಯಜ್ಞಾದಿಗಳಿಗೆ ಪ್ರಯತ್ನಿಸುತ್ತಿರಲು ದೇವ-ಮನುಷ್ಯರ ಸುಖವು ಸಮಾಹಿತವಾಗಿದೆ ಎಂದು ತಿಳಿದುಕೋ.
12070006a ಕಾಲೋ ವಾ ಕಾರಣಂ ರಾಜ್ಞೋ ರಾಜಾ ವಾ ಕಾಲಕಾರಣಮ್।
12070006c ಇತಿ ತೇ ಸಂಶಯೋ ಮಾ ಭೂದ್ರಾಜಾ ಕಾಲಸ್ಯ ಕಾರಣಮ್।।
ರಾಜನಿಗೆ ಕಾಲವು ಕಾರಣವೋ ಅಥವಾ ರಾಜನು ಬಂದಿರುವ ಕಾಲಕ್ಕೆ ಕಾರಣವೋ? ಎನ್ನುವುದರಲ್ಲಿ ಸಂಶಯತಾಳಬೇಡ. ರಾಜನೇ ಬಂದಿರುವ ಕಾಲಕ್ಕೆ ಕಾರಣನು.
12070007a ದಂಡನೀತ್ಯಾ ಯದಾ ರಾಜಾ ಸಮ್ಯಕ್ಕಾರ್ತ್ಸ್ನ್ಯೇನ ವರ್ತತೇ।
12070007c ತದಾ ಕೃತಯುಗಂ ನಾಮ ಕಾಲಃ ಶ್ರೇಷ್ಠಃ ಪ್ರವರ್ತತೇ।।
ದಂಡನೀತಿಯನ್ನು ಅಳವಡಿಸಿಕೊಂಡು ರಾಜನು ಯಾವಾಗ ಎಲ್ಲರೊಡನೆಯೂ ಸಮನಾಗಿ ವರ್ತಿಸುತ್ತಾನೋ ಆಗ ಶ್ರೇಷ್ಠವಾದ ಕೃತಯುಗ ಎಂಬ ಕಾಲವು ನಡೆಯುತ್ತದೆ.
12070008a ಭವೇತ್ಕೃತಯುಗೇ ಧರ್ಮೋ ನಾಧರ್ಮೋ ವಿದ್ಯತೇ ಕ್ವ ಚಿತ್।
12070008c ಸರ್ವೇಷಾಮೇವ ವರ್ಣಾನಾಂ ನಾಧರ್ಮೇ ರಮತೇ ಮನಃ।।
ಕೃತಯುಗದಲ್ಲಿ ಧರ್ಮವೇ ನಡೆಯುತ್ತದೆ. ಅಧರ್ಮವೆನ್ನುವುದೇ ಯಾರಿಗೂ ತಿಳಿದಿರುವುದಿಲ್ಲ. ಎಲ್ಲ ವರ್ಣದವರ ಮನಸ್ಸೂ ಅಧರ್ಮದಲ್ಲಿ ರಮಿಸುವುದಿಲ್ಲ.
12070009a ಯೋಗಕ್ಷೇಮಾಃ ಪ್ರವರ್ತಂತೇ ಪ್ರಜಾನಾಂ ನಾತ್ರ ಸಂಶಯಃ।
12070009c ವೈದಿಕಾನಿ ಚ ಕರ್ಮಾಣಿ ಭವಂತ್ಯವಿಗುಣಾನ್ಯುತ।।
ಪ್ರಜೆಗಳ ಯೋಗ-ಕ್ಷೇಮಗಳು ನಡೆಯುತ್ತಿರುತ್ತವೆ ಎನ್ನುವುದರಲ್ಲಿ ಸಂಶಯವಿಲ್ಲ. ಉತ್ತಮ ಗುಣಯುಕ್ತ ವೈದಿಕ ಕರ್ಮಗಳು ನಡೆಯುತ್ತಿರುತ್ತವೆ.
12070010a ಋತವಶ್ಚ ಸುಖಾಃ ಸರ್ವೇ ಭವಂತ್ಯುತ ನಿರಾಮಯಾಃ।
12070010c ಪ್ರಸೀದಂತಿ ನರಾಣಾಂ ಚ ಸ್ವರವರ್ಣಮನಾಂಸಿ ಚ।।
ಎಲ್ಲ ಋತುಗಳೂ ಎಲ್ಲರಿಗೂ ಸುಖವಾಗಿಯೇ ಇರುತ್ತವೆ. ಎಲ್ಲರೂ ನಿರಾಮಯರಾಗಿರುತ್ತಾರೆ. ಸ್ವರ-ವರ್ಣ-ಮನಸ್ಸುಗಳು ಮನುಷ್ಯರಿಗೆ ಪ್ರಸನ್ನವಾಗಿರುತ್ತವೆ.
12070011a ವ್ಯಾಧಯೋ ನ ಭವಂತ್ಯತ್ರ ನಾಲ್ಪಾಯುರ್ದೃಶ್ಯತೇ ನರಃ।
12070011c ವಿಧವಾ ನ ಭವಂತ್ಯತ್ರ ನೃಶಂಸೋ ನಾಭಿಜಾಯತೇ।।
ವ್ಯಾಧಿಗಳು ಇರುವುದಿಲ್ಲ. ಅಲ್ಪಾಯು ನರನು ಅಲ್ಲಿ ಕಾಣಬರುವುದಿಲ್ಲ. ಅಲ್ಲಿ ವಿಧವೆಯರಿರುವುದಿಲ್ಲ. ಕ್ರೂರಿಯು ಹುಟ್ಟುವುದೇ ಇಲ್ಲ.
12070012a ಅಕೃಷ್ಟಪಚ್ಯಾ ಪೃಥಿವೀ ಭವಂತ್ಯೋಷಧಯಸ್ತಥಾ।
12070012c ತ್ವಕ್ಪತ್ರಫಲಮೂಲಾನಿ ವೀರ್ಯವಂತಿ ಭವಂತಿ ಚ।।
ಕೃಷಿಮಾಡದೇ ಬೆಳೆಗಳು ಬೆಳೆಯುತ್ತವೆ. ಔಷಧಿಗಳು ತಾವಾಗಿಯೇ ಬೆಳೆಯುತ್ತವೆ. ತೊಗಟೆಗಳೂ, ಎಲೆಗಳೂ, ಫಲಗಳೂ ಮತ್ತು ಬೇರುಗಳೂ ವೀರ್ಯವತ್ತಾಗಿರುತ್ತವೆ.
12070013a ನಾಧರ್ಮೋ ವಿದ್ಯತೇ ತತ್ರ ಧರ್ಮ ಏವ ತು ಕೇವಲಃ।
12070013c ಇತಿ ಕಾರ್ತಯುಗಾನೇತಾನ್ಗುಣಾನ್ವಿದ್ಧಿ ಯುಧಿಷ್ಠಿರ।।
ಯುಧಿಷ್ಠಿರ! ಆಗ ಅಧರ್ವವೆನ್ನುವುದೇ ಇರುವುದಿಲ್ಲ. ಕೇವಲ ಧರ್ಮ ಮಾತ್ರ ಇರುತ್ತದೆ. ಇದು ಕೃತಯುಗದ ಗುಣಗಳೆಂದು ತಿಳಿ.
12070014a ದಂಡನೀತ್ಯಾ ಯದಾ ರಾಜಾ ತ್ರೀನಂಶಾನನುವರ್ತತೇ।
12070014c ಚತುರ್ಥಮಂಶಮುತ್ಸೃಜ್ಯ ತದಾ ತ್ರೇತಾ ಪ್ರವರ್ತತೇ।।
ಯಾವಾಗ ರಾಜನು ದಂಡನೀತಿಯ ನಾಲ್ಕನೆಯ ಅಂಶವನ್ನು ಬಿಟ್ಟು ಮೂರು ಅಂಶಗಳನ್ನು ಮಾತ್ರ ಅನುಸರಿಸುತ್ತಾನೆಯೋ ಆಗ ತ್ರೇತಾಯುಗವು ಪ್ರಾರಂಭವಾಗುತ್ತದೆ.
12070015a ಅಶುಭಸ್ಯ ಚತುರ್ಥಾಂಶಸ್ತ್ರೀನಂಶನನುವರ್ತತೇ।
12070015c ಕೃಷ್ಟಪಚ್ಯೈವ ಪೃಥಿವೀ ಭವಂತ್ಯೋಷಧಯಸ್ತಥಾ।।
ಸಂಪೂರ್ಣ ನಾಲ್ಕೂ ಅಂಶಗಳನ್ನು ಬಳಸದೇ ದಂಡನೀತಿಯ ಮೂರೇ ಅಂಶಗಳನ್ನು ಬಳಸಿದ ಆ ಕಾಲದಲ್ಲಿ ಬೆಳೆ ಮತ್ತು ಔಷಧಿಗಳನ್ನು ಬೆಳೆಯಲು ಕೃಷಿಮಾಡಬೇಕಾಗುತ್ತದೆ.
12070016a ಅರ್ಧಂ ತ್ಯಕ್ತ್ವಾ ಯದಾ ರಾಜಾ ನೀತ್ಯರ್ಧಮನುವರ್ತತೇ।
12070016c ತತಸ್ತು ದ್ವಾಪರಂ ನಾಮ ಸ ಕಾಲಃ ಸಂಪ್ರವರ್ತತೇ।।
ಯಾವಾಗ ರಾಜನು ದಂಡನೀತಿಯ ಅರ್ಧವನ್ನು ತ್ಯಜಿಸಿ ಇನ್ನೊಂದು ಅರ್ಧವನ್ನು ಮಾತ್ರ ಅನುಸರಿಸುತ್ತಾನೋ ಆಗ ದ್ವಾಪರ ಎಂಬ ಹೆಸರಿನ ಕಾಲವಾಗಿ ಪರಿವರ್ತನೆಯಾಗುತ್ತದೆ.
12070017a ಅಶುಭಸ್ಯ ತದಾ ಅರ್ಧಂ ದ್ವಾವಂಶಾವನುವರ್ತತೇ।
12070017c ಕೃಷ್ಟಪಚ್ಯೈವ ಪೃಥಿವೀ ಭವತ್ಯಲ್ಪಫಲಾ ತಥಾ।।
ಸಂಪೂರ್ಣ ದಂಡನೀತಿಯಲ್ಲದೇ ಅರ್ಧವನ್ನೇ ಅನುಸರಿಸುವ ಕಾಲದಲ್ಲಿ ಭೂಮಿಯಲ್ಲಿ ಕೃಷಿಮಾಡಬೇಕಲ್ಲದೇ ಅದು ಅಲ್ಪ ಫಲವನ್ನೇ ನೀಡುತ್ತದೆ.
12070018a ದಂಡನೀತಿಂ ಪರಿತ್ಯಜ್ಯ ಯದಾ ಕಾರ್ತ್ಸ್ನ್ಯೇನ ಭೂಮಿಪಃ।
12070018c ಪ್ರಜಾಃ ಕ್ಲಿಶ್ನಾತ್ಯಯೋಗೇನ ಪ್ರವಿಶ್ಯತಿ ತದಾ ಕಲಿಃ।।
ಯಾವಾಗ ಭೂಮಿಪನು ದಂಡನೀತಿಯನ್ನು ಸಂಪೂರ್ಣವಾಗಿ ಪರಿತ್ಯಜಿಸಿ ಅನ್ಯಾಯಮಾರ್ಗಗಳಿಂದ ಪ್ರಜೆಗಳಿಗೆ ಕಷ್ಟಗಳನ್ನು ಕೊಡುತ್ತಾನೋ ಆಗ ಕಲಿಯ ಪ್ರವೇಶವಾಗುತ್ತದೆ.
12070019a ಕಲಾವಧರ್ಮೋ ಭೂಯಿಷ್ಠಂ ಧರ್ಮೋ ಭವತಿ ತು ಕ್ವ ಚಿತ್।
12070019c ಸರ್ವೇಷಾಮೇವ ವರ್ಣಾನಾಂ ಸ್ವಧರ್ಮಾಚ್ಚ್ಯವತೇ ಮನಃ।।
ಕಲಿಕಾಲದಲ್ಲಿ ಅಧರ್ಮವೇ ಹೆಚ್ಚಾಗಿರುತ್ತದೆ. ಧರ್ಮವೆನ್ನುವುದು ಎಲ್ಲಿಯೂ ಇರುವುದಿಲ್ಲ. ಸರ್ವ ವರ್ಣದವರಿಗೂ ತಮ್ಮ ಧರ್ಮದಲ್ಲಿ ಮನಸ್ಸಿರುವುದಿಲ್ಲ.
12070020a ಶೂದ್ರಾ ಭೈಕ್ಷೇಣ ಜೀವಂತಿ ಬ್ರಾಹ್ಮಣಾಃ ಪರಿಚರ್ಯಯಾ।
12070020c ಯೋಗಕ್ಷೇಮಸ್ಯ ನಾಶಶ್ಚ ವರ್ತತೇ ವರ್ಣಸಂಕರಃ।।
ಶೂದ್ರರು ಭಿಕ್ಷೆಬೇಡಿ ಜೀವಿಸುತ್ತಾರೆ. ಬ್ರಾಹ್ಮಣರು ಸೇವಕರಾಗಿ ಜೀವಿಸುತ್ತಾರೆ. ಯೋಗಕ್ಷೇಮಗಳು ನಾಶವಾಗಿ ವರ್ಣಸಂಕರವಾಗುತ್ತದೆ.
12070021a ವೈದಿಕಾನಿ ಚ ಕರ್ಮಾಣಿ ಭವಂತಿ ವಿಗುಣಾನ್ಯುತ।
12070021c ಋತವೋ ನಸುಖಾಃ ಸರ್ವೇ ಭವಂತ್ಯಾಮಯಿನಸ್ತಥಾ।।
ವೈದಿಕ ಕರ್ಮಗಳಲ್ಲಿ ಗುಣವಿರುವಿದಿಲ್ಲ. ಎಲ್ಲ ಋತುಗಳೂ ಎಲ್ಲರಿಗೂ ಸುಖವನ್ನು ನೀಡುವುದಿಲ್ಲ. ಮನುಷ್ಯರು ರೋಗಿಗಳೂ ಆಗುತ್ತಾರೆ.
12070022a ಹ್ರಸಂತಿ ಚ ಮನುಷ್ಯಾಣಾಂ ಸ್ವರವರ್ಣಮನಾಂಸ್ಯುತ।
12070022c ವ್ಯಾಧಯಶ್ಚ ಭವಂತ್ಯತ್ರ ಮ್ರಿಯಂತೇ ಚಾಗತಾಯುಷಃ।।
ಮನುಷ್ಯರ ಸ್ವರ-ವರ್ಣ-ಮನಸ್ಸುಗಳು ಸಂಕುಚಿತಗೊಳ್ಳುತ್ತವೆ. ವ್ಯಾಧಿಗಳು ನಡೆಯುತ್ತವೆ. ಚಿಕ್ಕ ವಯಸ್ಸಿನಲ್ಲಿಯೇ ಸಾಯುತ್ತಾರೆ.
12070023a ವಿಧವಾಶ್ಚ ಭವಂತ್ಯತ್ರ ನೃಶಂಸಾ ಜಾಯತೇ ಪ್ರಜಾ।
12070023c ಕ್ವ ಚಿದ್ವರ್ಷತಿ ಪರ್ಜನ್ಯಃ ಕ್ವ ಚಿತ್ಸಸ್ಯಂ ಪ್ರರೋಹತಿ।।
ವಿಧವೆಯರಾಗುತ್ತಾರೆ. ಪ್ರಜೆಗಳು ಕ್ರೂರಿಗಳಾಗಿ ಹುಟ್ಟುತ್ತಾರೆ. ಕೆಲವು ಕಡೆ ಮಾತ್ರ ಮಳೆಸುರಿಯುತ್ತದೆ ಮತ್ತು ಕೆಲ ಕಡೆಗಳಲ್ಲಿ ಮಾತ್ರ ಕೃಷಿಗಳನ್ನು ಮಾಡಬಹುದು.
12070024a ರಸಾಃ ಸರ್ವೇ ಕ್ಷಯಂ ಯಾಂತಿ ಯದಾ ನೇಚ್ಚತಿ ಭೂಮಿಪಃ।
12070024c ಪ್ರಜಾಃ ಸಂರಕ್ಷಿತುಂ ಸಮ್ಯಗ್ದಂಡನೀತಿಸಮಾಹಿತಃ।।
ಉತ್ತಮ ದಂಡನೀತಿಯನ್ನು ಸಂಪೂರ್ಣವಾಗಿ ಬಳಸಿ ಪ್ರಜೆಗಳನ್ನು ರಕ್ಷಿಸಲು ರಾಜನು ಬಯಸದೇ ಇದ್ದಾಗ ರಸಗಳೆಲ್ಲವೂ ನಾಶಹೊಂದುತ್ತವೆ.
12070025a ರಾಜಾ ಕೃತಯುಗಸ್ರಷ್ಟಾ ತ್ರೇತಾಯಾ ದ್ವಾಪರಸ್ಯ ಚ।
12070025c ಯುಗಸ್ಯ ಚ ಚತುರ್ಥಸ್ಯ ರಾಜಾ ಭವತಿ ಕಾರಣಮ್।।
ರಾಜನಾದವನು ಕೃತಯುಗ, ತ್ರೇತಾಯುಗ ಮತ್ತು ದ್ವಾಪರ ಯುಗಗಳನ್ನು ಸೃಷ್ಟಿಸುತ್ತಾನೆ. ಈ ನಾಲ್ಕು ಯುಗಗಳಿಗೆ ರಾಜನೇ ಕಾರಣನಾಗುತ್ತಾನೆ.
12070026a ಕೃತಸ್ಯ ಕರಣಾದ್ರಾಜಾ ಸ್ವರ್ಗಮತ್ಯಂತಮಶ್ನುತೇ।
12070026c ತ್ರೇತಾಯಾಃ ಕರಣಾದ್ರಾಜಾ ಸ್ವರ್ಗಂ ನಾತ್ಯಂತಮಶ್ನುತೇ।।
ಕೃತಯುಗವನ್ನು ಮಾಡಿದ ರಾಜನು ಅಕ್ಷಯ ಸ್ವರ್ಗವನ್ನು ಪಡೆದುಕೊಳ್ಳುತ್ತಾನೆ. ತ್ರೇತಾಯುಗವನ್ನು ನಿರ್ಮಿಸಿದ ರಾಜನಿಗೆ ಅಕ್ಷಯ ಸ್ವರ್ಗವು ದೊರಕುವುದಿಲ್ಲ.
12070027a ಪ್ರವರ್ತನಾದ್ದ್ವಾಪರಸ್ಯ ಯಥಾಭಾಗಮುಪಾಶ್ನುತೇ।
12070027c ಕಲೇಃ ಪ್ರವರ್ತನಾದ್ರಾಜಾ ಪಾಪಮತ್ಯಂತಮಶ್ನುತೇ।।
ಕಾಲವನ್ನು ದ್ವಾಪರಯುಗವನ್ನಾಗಿ ಪರಿವರ್ತಿಸಿದ ರಾಜನಿಗೆ ಸ್ವಲ್ಪವೇ ಪುಣ್ಯವು ದೊರೆಯುತ್ತದೆ. ಕಲಿಯುಗವನ್ನಾಗಿ ಪರಿವರ್ತಿಸಿದ ರಾಜನು ಅತ್ಯಂತ ಪಾಪವನ್ನು ಪಡೆದುಕೊಳ್ಳುತ್ತಾನೆ.
12070028a ತತೋ ವಸತಿ ದುಷ್ಕರ್ಮಾ ನರಕೇ ಶಾಶ್ವತೀಃ ಸಮಾಃ।
12070028c ಪ್ರಜಾನಾಂ ಕಲ್ಮಷೇ ಮಗ್ನೋಽಕೀರ್ತಿಂ ಪಾಪಂ ಚ ವಿಂದತಿ।।
ಅಂತಹ ದುಷ್ಕರ್ಮಿಯು ಪ್ರಜೆಗಳ ಪಾಪಗಳಲ್ಲಿ ಮುಳುಗಿಹೋಗಿ ಅಕೀರ್ತಿಯನ್ನೂ ಪಾಪವನ್ನೂ ಪಡೆದುಕೊಂಡು ಶಾಶ್ವತಕಾಲ ನರಕದಲ್ಲಿ ವಾಸಿಸುತ್ತಾನೆ.
12070029a ದಂಡನೀತಿಂ ಪುರಸ್ಕೃತ್ಯ ವಿಜಾನನ್ ಕ್ಷತ್ರಿಯಃ ಸದಾ।
12070029c ಅನವಾಪ್ತಂ ಚ ಲಿಪ್ಸೇತ ಲಬ್ಧಂ ಚ ಪರಿಪಾಲಯೇತ್।।
ಕ್ಷತ್ರಿಯನಾದವನು ಸದಾ ತಿಳಿದುಕೊಂಡು ದಂಡನೀತಿಯನ್ನು ಮುಂಡಿಟ್ಟುಕೊಂಡು ಇಲ್ಲದಿದ್ದುದನ್ನು ಪಡೆದುಕೊಳ್ಳಬೇಕು ಮತ್ತು ಇದ್ದುದನ್ನು ರಕ್ಷಿಸಿಕೊಳ್ಳಬೇಕು.
12070030a ಲೋಕಸ್ಯ ಸೀಮಂತಕರೀ ಮರ್ಯಾದಾ ಲೋಕಭಾವನೀ।
12070030c ಸಮ್ಯಙ್ನೀತಾ ದಂಡನೀತಿರ್ಯಥಾ ಮಾತಾ ಯಥಾ ಪಿತಾ।।
ಲೋಕಳನ್ನು ಅವುಗಳ ಗಡಿಯೊಳಗೆ ಇರುವಂತೆ ಮಾಡುವ, ಧರ್ಮಮರ್ಯಾದೆಗಳನ್ನು ಮೀರದಂತೆ ನೋಡಿಕೊಳ್ಳುವ, ಮತ್ತು ಚೆನ್ನಾಗಿ ನಡೆಸಿದ ದಂಡನೀತಿಯೇ ತಂದೆ-ತಾಯಿಯರಂತೆ ಪ್ರಜೆಗಳನ್ನು ಪಾಲಿಸುತ್ತದೆ.
12070031a ಯಸ್ಯಾಂ ಭವಂತಿ ಭೂತಾನಿ ತದ್ವಿದ್ಧಿ ಭರತರ್ಷಭ।
12070031c ಏಷ ಏವ ಪರೋ ಧರ್ಮೋ ಯದ್ರಾಜಾ ದಂಡನೀತಿಮಾನ್।।
ಭರತರ್ಷಭ! ದಂಡನೀತಿಯಿಂದಲೇ ಪ್ರಾಣಿಗಳು ಆಗುತ್ತವೆ ಎನ್ನುವುದನ್ನು ತಿಳಿದುಕೋ. ಇದೇ ರಾಜನಾದವನ ಪರಮ ಧರ್ಮ.
12070032a ತಸ್ಮಾತ್ಕೌರವ್ಯ ಧರ್ಮೇಣ ಪ್ರಜಾಃ ಪಾಲಯ ನೀತಿಮಾನ್।
12070032c ಏವಂವೃತ್ತಃ ಪ್ರಜಾ ರಕ್ಷನ್ಸ್ವರ್ಗಂ ಜೇತಾಸಿ ದುರ್ಜಯಮ್।।
ಕೌರವ್ಯ! ಆದುದರಿಂದ ಧರ್ಮದಿಂದ ನೀತಿಮಂತನಾಗಿದ್ದುಕೊಂಡು ಪ್ರಜೆಗಳನ್ನು ಪಾಲಿಸು. ಹೀಗೆ ನಡೆದುಕೊಂಡು ಪ್ರಜೆಗಳನ್ನು ರಕ್ಷಿಸಿ ದುರ್ಜಯ ಸ್ವರ್ಗವನ್ನೂ ಗೆಲ್ಲುತ್ತೀಯೆ.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ಸಪ್ತತಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಎಪ್ಪತ್ತನೇ ಅಧ್ಯಾಯವು.
-
ತಸ್ಮಾದೇವಮನುಷ್ಯಾಣಾಂ ಎಂಬ ಪಾಠಾಂತರವಿದೆ. ↩︎