ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ರಾಜಧರ್ಮ ಪರ್ವ
ಅಧ್ಯಾಯ 67
ಸಾರ
ಮನುರಾಜಕರಣೋಪನ್ಯಾಸ (1-37).
12067001 ಯುಧಿಷ್ಠಿರ ಉವಾಚ।
12067001a ಚಾತುರಾಶ್ರಮ್ಯ ಉಕ್ತೋಽತ್ರ ಚಾತುರ್ವರ್ಣ್ಯಸ್ತಥೈವ ಚ।
12067001c ರಾಷ್ಟ್ರಸ್ಯ ಯತ್ಕೃತ್ಯತಮಂ ತನ್ಮೇ ಬ್ರೂಹಿ ಪಿತಾಮಹ।।
ಯುಧಿಷ್ಠಿರನು ಹೇಳಿದನು: “ಪಿತಾಮಹ! ನಾಲ್ಕು ಆಶ್ರಮಗಳ ಕುರಿತೂ ಮತ್ತು ನಾಲ್ಕು ವರ್ಣಗಳ ಕುರಿತೂ ನೀನು ಹೇಳಿದ್ದೀಯೆ. ಈಗ ರಾಷ್ಟ್ರದ ಮುಖ್ಯ ಕರ್ತವ್ಯವೇನೆಂದು ನನಗೆ ಹೇಳು.”
12067002 ಭೀಷ್ಮ ಉವಾಚ।
12067002a ರಾಷ್ಟ್ರಸ್ಯೈತತ್ಕೃತ್ಯತಮಂ ರಾಜ್ಞ ಏವಾಭಿಷೇಚನಮ್।
12067002c ಅನಿಂದ್ರಮಬಲಂ ರಾಷ್ಟ್ರಂ ದಸ್ಯವೋಽಭಿಭವಂತಿ ಚ।।
ಭೀಷ್ಮನು ಹೇಳಿದನು: “ರಾಜನನ್ನು ಅಭಿಷೇಕಿಸುವುದೇ ರಾಷ್ಟ್ರದ ಮುಖ್ಯ ಕರ್ತವ್ಯ. ರಾಜನಿಲ್ಲದ ರಾಷ್ಟ್ರವು ಬಲಹೀನವಾಗುತ್ತದೆ. ದಸ್ಯುಗಳ ವಶವಾಗುತ್ತದೆ.
12067003a ಅರಾಜಕೇಷು ರಾಷ್ಟ್ರೇಷು ಧರ್ಮೋ ನ ವ್ಯವತಿಷ್ಠತೇ।
12067003c ಪರಸ್ಪರಂ ಚ ಖಾದಂತಿ ಸರ್ವಥಾ ಧಿಗರಾಜಕಮ್।।
ರಾಜನಿಲ್ಲದ ರಾಷ್ಟ್ರದಲ್ಲಿ ಧರ್ಮವು ಉಳಿಯುವುದಿಲ್ಲ. ಪರಸ್ಪರರನ್ನು ನುಂಗಿಹಾಕುತ್ತಾರೆ. ಅರಾಜಕತೆಯನ್ನು ಸರ್ವಥಾ ಧಿಕ್ಕರಿಸಬೇಕು.
12067004a ಇಂದ್ರಮೇನಂ ಪ್ರವೃಣುತೇ ಯದ್ರಾಜಾನಮಿತಿ ಶ್ರುತಿಃ।
12067004c ಯಥೈವೇಂದ್ರಸ್ತಥಾ ರಾಜಾ ಸಂಪೂಜ್ಯೋ ಭೂತಿಮಿಚ್ಚತಾ।।
ಪ್ರಜೆಗಳು ರಾಜನನ್ನು ವರಣಮಾಡಿದಾಗ ಇಂದ್ರನನ್ನೇ ಅವರು ವರಣಮಾಡಿದಂತೆ ಎಂಬ ಶೃತಿವಾಕ್ಯವಿದೆ. ಆದುದರಿಂದ ಶ್ರೇಯಸ್ಸನ್ನು ಇಚ್ಛಿಸುವವರು ರಾಜನನ್ನು ಇಂದ್ರನೆಂದು ತಿಳಿದೇ ಪೂಜಿಸುತ್ತಾರೆ.
12067005a ನಾರಾಜಕೇಷು ರಾಷ್ಟ್ರೇಷು ವಸ್ತವ್ಯಮಿತಿ ವೈದಿಕಮ್।
12067005c ನಾರಾಜಕೇಷು ರಾಷ್ಟ್ರೇಷು ಹವ್ಯಮಗ್ನಿರ್ವಹತ್ಯಪಿ।।
ರಾಜನಿಲ್ಲದ ರಾಷ್ಟ್ರದಲ್ಲಿ ವೈದಿಕ ಧರ್ಮವು ವಾಸಿಸುವುದಿಲ್ಲ. ರಾಜನಿಲ್ಲದ ರಾಷ್ಟ್ರದಲ್ಲಿ ಅಗ್ನಿಯು ಹವಿಸ್ಸುಗಳನ್ನು ಒಯ್ಯುವುದಿಲ್ಲ.
12067006a ಅಥ ಚೇದಭಿವರ್ತೇತ ರಾಜ್ಯಾರ್ಥೀ ಬಲವತ್ತರಃ।
12067006c ಅರಾಜಕಾನಿ ರಾಷ್ಟ್ರಾಣಿ ಹತರಾಜಾನಿ ವಾ ಪುನಃ।।
12067007a ಪ್ರತ್ಯುದ್ಗಮ್ಯಾಭಿಪೂಜ್ಯಃ ಸ್ಯಾದೇತದತ್ರ ಸುಮಂತ್ರಿತಮ್।
12067007c ನ ಹಿ ಪಾಪಾತ್ಪಾಪತರಮಸ್ತಿ ಕಿಂ ಚಿದರಾಜಕಾತ್।।
ರಾಜನಿಲ್ಲದಿರುವ ಅಥವಾ ರಾಜನು ಹತನಾಗಿರುವ ರಾಷ್ಟ್ರವನ್ನು ಬಲವತ್ತರ ರಾಜ್ಯಾರ್ಥಿಯು ಆಕ್ರಮಣಿಸಿದರೆ ಅವನನ್ನು ಪೂಜಿಸಿ ಸ್ವಾಗತಿಸುವುದೇ ರಾಷ್ಟ್ರದ ಜನರಿಗೆ ಉತ್ತಮವಾದುದು ಎಂಬ ಸಲಹೆಯಿದೆ. ಅರಾಜಕತೆಯ ಪಾಪಕ್ಕಿಂತ ಹೆಚ್ಚಿನ ಪಾಪವು ಇಲ್ಲ.
12067008a ಸ ಚೇತ್ಸಮನುಪಶ್ಯೇತ ಸಮಗ್ರಂ ಕುಶಲಂ ಭವೇತ್।
12067008c ಬಲವಾನ್ಹಿ ಪ್ರಕುಪಿತಃ ಕುರ್ಯಾನ್ನಿಃಶೇಷತಾಮಪಿ।।
ಅವನು ಅವರನ್ನು ಒಳ್ಳೆಯದಾಗಿಯೇ ನೋಡಿಕೊಳ್ಳಬಹುದು. ಸಮಗ್ರವೂ ಕುಶಲವಾಗಬಹುದು. ಕೋಪಿಷ್ಠನಾದ ಬಲವಾನನು ರಾಷ್ಟ್ರವನ್ನು ನಿಃಶೇಷವನ್ನಾಗಿಯೂ ಮಾಡಬಹುದು.
12067009a ಭೂಯಾಂಸಂ ಲಭತೇ ಕ್ಲೇಶಂ ಯಾ ಗೌರ್ಭವತಿ ದುರ್ದುಹಾ।
12067009c ಸುದುಹಾ ಯಾ ತು ಭವತಿ ನೈವ ತಾಂ ಕ್ಲೇಶಯಂತ್ಯುತ।।
ಸುಲಭವಾಗಿ ಹಾಲುಕೊಡದ ಗೋವನ್ನು ಬಹಳವಾಗಿ ಕಾಡಿಸಿ ಹಾಲುಕರೆಯುತ್ತಾರೆ. ಹಾಗೆಯೇ ಸುಲಭವಾಗಿ ಹಾಲುಕೊಡುವ ಗೋವನ್ನು ಯಾವ ರೀತಿಯಲ್ಲಿಯೂ ಕಾಡಿಸುವುದಿಲ್ಲ1.
12067010a ಯದತಪ್ತಂ ಪ್ರಣಮತಿ ನ ತತ್ಸಂತಾಪಯಂತ್ಯುತ।
12067010c ಯಚ್ಚ ಸ್ವಯಂ ನತಂ ದಾರು ನ ತತ್ಸಂನಾಮಯಂತ್ಯಪಿ।।
ಯಾವುದು ಕಾಯಿಸದೆಯೇ ಬಗ್ಗುವುದೋ ಅದನ್ನು ಕಾಯಿಸುವುದಿಲ್ಲ. ಸ್ವಯಂ ಬಗ್ಗಿರುವ ಕೋಲನ್ನು ಯಾರೂ ಪುನಃ ಬಗ್ಗಿಸಲು ಪ್ರಯತ್ನಿಸುವುದಿಲ್ಲ.
12067011a ಏತಯೋಪಮಯಾ ಧೀರಃ ಸಂನಮೇತ ಬಲೀಯಸೇ।
12067011c ಇಂದ್ರಾಯ ಸ ಪ್ರಣಮತೇ ನಮತೇ ಯೋ ಬಲೀಯಸೇ।।
ಈ ಉಪಮೆಗಳಂತೆ ಬುದ್ಧಿವಂತನು ಬಲಿಷ್ಟನಾದವನಿಗೆ ಬಗ್ಗಿ ನಡೆಯಬೇಕು. ಬಲಿಷ್ಠನಿಗೆ ವಿನಮ್ರನಾಗಿರುವವನು ಇಂದ್ರನಿಗೆ ಪ್ರಮಾಣಮಾಡಿದಂತೆಯೇ ಆಗುತ್ತದೆ.
12067012a ತಸ್ಮಾದ್ರಾಜೈವ ಕರ್ತವ್ಯಃ ಸತತಂ ಭೂತಿಮಿಚ್ಚತಾ।
12067012c ನ ಧನಾರ್ಥೋ ನ ದಾರಾರ್ಥಸ್ತೇಷಾಂ ಯೇಷಾಮರಾಜಕಮ್।।
ಆದುದರಿಂದ ಸತತವೂ ಏಳ್ಗೆಯನ್ನು ಬಯಸುವವರಿಗೆ ರಾಜನನ್ನು ಪಡೆಯುವುದೇ ಕರ್ತವ್ಯ. ರಾಜನಿಲ್ಲದಿರುವ ರಾಷ್ಟ್ರದವರಿಗೆ ತಮ್ಮ ಧನದಿಂದಾಗಲೀ ಪತ್ನಿಯಿಂದಾಗಲೀ ಯಾವ ಪ್ರಯೋಜನವೂ ಇರುವುದಿಲ್ಲ.
12067013a ಪ್ರೀಯತೇ ಹಿ ಹರನ್ಪಾಪಃ ಪರವಿತ್ತಮರಾಜಕೇ।
12067013c ಯದಾಸ್ಯ ಉದ್ಧರಂತ್ಯನ್ಯೇ ತದಾ ರಾಜಾನಮಿಚ್ಚತಿ।।
ರಾಜನಿಲ್ಲದಿರುವ ದೇಶದಲ್ಲಿ ಪಾಪಿಗಳು ಪರವಿತ್ತವನ್ನು ಅಪಹರಿಸಿಯೇ ಸಂತೋಷದಿಂದಿರುತ್ತಾರೆ. ಆದರೆ ಅವನಿಗಿಂತಲೂ ಬಲಿಷ್ಠನು ಅದನ್ನು ಅವನಿಂದ ಕಸಿದುಕೊಳ್ಳಲು ಬಂದಾಗ ಅವನೂ ರಾಜನನ್ನೇ ಬಯಸುತ್ತಾನೆ.
12067014a ಪಾಪಾ ಅಪಿ ತದಾ ಕ್ಷೇಮಂ ನ ಲಭಂತೇ ಕದಾ ಚನ।
12067014c ಏಕಸ್ಯ ಹಿ ದ್ವೌ ಹರತೋ ದ್ವಯೋಶ್ಚ ಬಹವೋಽಪರೇ।।
ರಾಜನಿಲ್ಲದ ದೇಶದಲ್ಲಿ ಪಾಪಿಗಳಿಗೂ ಕ್ಷೇಮವೆನ್ನುವುದಿರುವುದಿಲ್ಲ. ಒಬ್ಬನದ್ದನ್ನು ಇಬ್ಬರು ಅಪಹರಿಸುತ್ತಾರೆ. ಇಬ್ಬರದ್ದನ್ನು ಇನ್ನು ಅನೇಕರು ಸೇರಿ ಅಪಹರಿಸುತ್ತಾರೆ.
12067015a ಅದಾಸಃ ಕ್ರಿಯತೇ ದಾಸೋ ಹ್ರಿಯಂತೇ ಚ ಬಲಾತ್ಸ್ತ್ರಿಯಃ।
12067015c ಏತಸ್ಮಾತ್ಕಾರಣಾದ್ದೇವಾಃ ಪ್ರಜಾಪಾಲಾನ್ಪ್ರಚಕ್ರಿರೇ।।
ದಾಸರಲ್ಲದವರನ್ನು ದಾಸರನ್ನಾಗಿ ಮಾಡಲಾಗುತ್ತದೆ. ಸ್ತ್ರೀಯರನ್ನು ಬಲಾತ್ಕಾರವಾಗಿ ಅಪಹರಿಸಲಾಗುತ್ತದೆ. ಈ ಕಾರಣಗಳಿಂದಲೇ ದೇವತೆಗಳು ಪ್ರಜಾಪಾಲಕರನ್ನು ಸೃಷ್ಟಿಸಿದರು.
12067016a ರಾಜಾ ಚೇನ್ನ ಭವೇಲ್ಲೋಕೇ ಪೃಥಿವ್ಯಾಂ ದಂಡಧಾರಕಃ।
12067016c ಶೂಲೇ ಮತ್ಸ್ಯಾನಿವಾಪಕ್ಷ್ಯನ್ದುರ್ಬಲಾನ್ಬಲವತ್ತರಾಃ।।
ಈ ಲೋಕದಲ್ಲಿ ದಂಡಧಾರಕನಾದ ರಾಜನೆನ್ನುವನು ಇಲ್ಲದೇ ಹೋಗಿದ್ದರೆ ದೊಡ್ಡ ಮೀನುಗಳು ಸಣ್ಣ ಮೀನುಗಳನ್ನು ತಿಂದುಹಾಕುವಂತೆ ಈ ಭೂಮಿಯಲ್ಲಿ ದುರ್ಬಲರನ್ನು ಬಲವಂತರು ನಾಶಪಡಿಸುತ್ತಿದ್ದರು.
12067017a ಅರಾಜಕಾಃ ಪ್ರಜಾಃ ಪೂರ್ವಂ ವಿನೇಶುರಿತಿ ನಃ ಶ್ರುತಮ್।
12067017c ಪರಸ್ಪರಂ ಭಕ್ಷಯಂತೋ ಮತ್ಸ್ಯಾ ಇವ ಜಲೇ ಕೃಶಾನ್।।
ಹಿಂದೆ ಅರಾಜಕತೆಯಿಂದಾಗಿ ಪ್ರಜೆಗಳು ನೀರಿನಲ್ಲಿರುವ ಮೀನುಗಳಂತೆ ಪರಸ್ಪರ ದುರ್ಬಲರನ್ನು ತಿಂದು ನಾಶಹೊಂದಿದರೆಂದು ಕೇಳಿದ್ದೇವೆ.
12067018a ತಾಃ ಸಮೇತ್ಯ ತತಶ್ಚಕ್ರುಃ ಸಮಯಾನಿತಿ ನಃ ಶ್ರುತಮ್।
12067018c ವಾಕ್ಕ್ರೂರೋ ದಂಡಪುರುಷೋ ಯಶ್ಚ ಸ್ಯಾತ್ಪಾರದಾರಿಕಃ।
12067018e ಯಶ್ಚ ನ ಸ್ವಮಥಾದದ್ಯಾತ್ತ್ಯಾಜ್ಯಾ ನಸ್ತಾದೃಶಾ ಇತಿ।।
ಆಗ ಅಳಿದುಳಿದವರು ಒಂದಾಗಿ ತಮ್ಮ ಒಳಿತಿಗಾಗಿ ಈ ನಿಯಮಗಳನ್ನು ಮಾಡಿಕೊಂಡರೆಂದು ಕೇಳಿದ್ದೇವೆ: “ನಮ್ಮಲ್ಲಿ ಯಾರು ಕ್ರೂರವಾಗಿ ಮಾತನಾಡುವವರೋ, ಅತ್ಯಂತ ಕಠೋರವಾಗಿ ಶಿಕ್ಷಿಸುವವರೋ, ಇತರರ ಸ್ತ್ರೀಯನ್ನು ಸೇರುವರೋ ಮತ್ತು ಪರರ ಸ್ವತ್ತನ್ನು ಅಪಹರಿಸುವರೋ ಅವರೆಲ್ಲರನ್ನೂ ಬಹಿಷ್ಕರಿಸೋಣ!”
12067019a ವಿಶ್ವಾಸನಾರ್ಥಂ ವರ್ಣಾನಾಂ ಸರ್ವೇಷಾಮವಿಶೇಷತಃ।
12067019c ತಾಸ್ತಥಾ ಸಮಯಂ ಕೃತ್ವಾ ಸಮಯೇ ನಾವತಸ್ಥಿರೇ।।
ಹೀಗೆ ವಿಶ್ವಾಸಾರ್ಥವಾಗಿ ನಿಯಮಮಾಡಿಕೊಂಡು ಸರ್ವ ವರ್ಣದವರೂ ದುಷ್ಟರನ್ನು ದೂರಮಾಡಿ ಕೆಲವು ಸಮಯ ಸುಖದಿಂದಲೇ ಇದ್ದರು. ಆದರೆ ಆ ಒಪ್ಪಂದವು ಹೆಚ್ಚುಕಾಲ ನಿಲ್ಲಲಿಲ್ಲ.
12067020a ಸಹಿತಾಸ್ತಾಸ್ತದಾ ಜಗ್ಮುರಸುಖಾರ್ತಾಃ ಪಿತಾಮಹಮ್।
12067020c ಅನೀಶ್ವರಾ ವಿನಶ್ಯಾಮೋ ಭಗವನ್ನೀಶ್ವರಂ ದಿಶ।।
12067021a ಯಂ ಪೂಜಯೇಮ ಸಂಭೂಯ ಯಶ್ಚ ನಃ ಪರಿಪಾಲಯೇತ್।
12067021c ತಾಭ್ಯೋ ಮನುಂ ವ್ಯಾದಿದೇಶ ಮನುರ್ನಾಭಿನನಂದ ತಾಃ।।
ಆಗ ದುಃಖಪೀಡಿತರಾದ ಅವರು ಒಟ್ಟಿಗೇ ಪಿತಾಮಹನ ಬಳಿಹೋಗಿ ಹೇಳಿದರು: “ಭಗವನ್! ಒಡೆಯನಿಲ್ಲದೇ ನಾವು ವಿನಾಶಹೊಂದುತ್ತಿದ್ದೇವೆ. ಯಾರು ಶಾಸಮಾಡಲು ಸಮರ್ಥನೋ, ಯಾರನ್ನು ನಾವು ಪೂಜಿಸಬಲ್ಲೆವೋ ಯಾರು ನಮ್ಮನ್ನು ಪರಿಪಾಲಿಸುವವನೋ ಅಂಥಹ ರಾಜನನ್ನು ತೋರಿಸು!” ಆಗ ಭಗವಾನನು ಮನುವಿಗೆ ರಾಜನಾಗುವಂತೆ ನಿರ್ದೇಶಿಸಿದನು. ಆದರೆ ಮನುವು ಆ ಪ್ರಜೆಗಳನ್ನು ಸ್ವೀಕರಿಸಲಿಲ್ಲ.
12067022 ಮನುರುವಾಚ।
12067022a ಬಿಭೇಮಿ ಕರ್ಮಣಃ ಕ್ರೂರಾದ್ರಾಜ್ಯಂ ಹಿ ಭೃಶದುಷ್ಕರಮ್।
12067022c ವಿಶೇಷತೋ ಮನುಷ್ಯೇಷು ಮಿಥ್ಯಾವೃತ್ತಿಷು ನಿತ್ಯದಾ।।
ಮನುವು ಹೇಳಿದನು: “ಜನರು ಮಾಡುವ ಪಾಪಕರ್ಮಗಳ ವಿಷಯವಾಗಿ ನಾನು ಬಹಳ ಭಯಪಡುತ್ತೇನೆ. ರಾಜ್ಯಭಾರಮಾಡುವುದು ಅತ್ಯಂತ ಕಷ್ಟಕರವಾದುದು. ಅದರಲ್ಲಿಯೂ ನಿತ್ಯವೂ ಮಿಥ್ಯಾಚಾರದಲ್ಲಿ ತೊಡಗಿರುವ ಮನುಷ್ಯರ ಮೇಲೆ ಅಧಿಕಾರ ನಡೆಸುವುದು ಅತ್ಯಂತ ಕಠಿನವಾದುದು.””
12067023 ಭೀಷ್ಮ ಉವಾಚ।
12067023a ತಮಬ್ರುವನ್ಪ್ರಜಾ ಮಾ ಭೈಃ ಕರ್ಮಣೈನೋ ಗಮಿಷ್ಯತಿ।
12067023c ಪಶೂನಾಮಧಿಪಂಚಾಶದ್ಧಿರಣ್ಯಸ್ಯ ತಥೈವ ಚ।।
12067023e ಧಾನ್ಯಸ್ಯ ದಶಮಂ ಭಾಗಂ ದಾಸ್ಯಾಮಃ ಕೋಶವರ್ಧನಮ್।।
ಭೀಷ್ಮನು ಹೇಳಿದನು: “ಆಗ ಪ್ರಜೆಗಳು ಅವನಿಗೆ ಹೇಳಿದರು: “ಹೆದರಬೇಡ! ಪಾಪಕರ್ಮಿಗಳ ಪಾಪವು ರಾಜನಿಗೆ ತಗಲುವುದಿಲ್ಲ. ನಿನ್ನ ಭಂಡಾರವನ್ನು ವೃದ್ಧಿಗೊಳಿಸಲು ಐವತ್ತರಲ್ಲಿ ಒಂದು ಹಸುವನ್ನೂ, ಐವತ್ತರಲ್ಲಿ ಒಂದು ಸುವರ್ಣ ನಾಣ್ಯವನ್ನೂ, ಧಾನ್ಯದ ಹತ್ತನೇ ಒಂದು ಭಾಗವನ್ನೂ ಕೊಡುತ್ತೇವೆ.
12067024a 2ಮುಖ್ಯೇನ ಶಸ್ತ್ರಪತ್ರೇಣ ಯೇ ಮನುಷ್ಯಾಃ ಪ್ರಧಾನತಃ। 12067024c ಭವಂತಂ ತೇಽನುಯಾಸ್ಯಂತಿ ಮಹೇಂದ್ರಮಿವ ದೇವತಾಃ।।
ಮಹೇಂದ್ರನನ್ನು ದೇವತೆಗಳು ಹೇಗೋ ಹಾಗೆ ಪ್ರಧಾನ ಪುರುಷರು ಪ್ರಮುಖ ಶಸ್ತ್ರಗಳನ್ನು ಹಿಡಿದು ನಿನ್ನನ್ನು ಅನುಸರಿಸಿ ಬರುತ್ತಾರೆ.
12067025a ಸ ತ್ವಂ ಜಾತಬಲೋ ರಾಜನ್ದುಷ್ಪ್ರಧರ್ಷಃ ಪ್ರತಾಪವಾನ್।
12067025c ಸುಖೇ ಧಾಸ್ಯಸಿ ನಃ ಸರ್ವಾನ್ಕುಬೇರ ಇವ ನೈರೃತಾನ್।।
ರಾಜನ್! ಹೀಗೆ ಬಲಶಾಲಿಯೂ, ಪ್ರತಾಪವಂತನೂ, ಅನ್ಯರಿಗೆ ಎದುರಿಸಲು ಅಸಾಧ್ಯನೂ ಆಗಿ ನೀನು ನೈರೃತರನ್ನು ಕುಬೇರನು ಹೇಗೋ ಹಾಗೆ ನಮ್ಮೆಲ್ಲರನ್ನೂ ಸುಖವಾಗಿ ರಕ್ಷಿಸುತ್ತೀಯೆ.
12067026a ಯಂ ಚ ಧರ್ಮಂ ಚರಿಷ್ಯಂತಿ ಪ್ರಜಾ ರಾಜ್ಞಾ ಸುರಕ್ಷಿತಾಃ।
12067026c ಚತುರ್ಥಂ ತಸ್ಯ ಧರ್ಮಸ್ಯ ತ್ವತ್ಸಂಸ್ಥಂ ನೋ ಭವಿಷ್ಯತಿ।।
ರಾಜನಿಂದ ಸುರಕ್ಷಿತರಾದ ಪ್ರಜೆಗಳು ಎಷ್ಟು ಧರ್ಮದಲ್ಲಿ ನಡೆದುಕೊಳ್ಳುತ್ತಾರೋ ಆ ಧರ್ಮದ ನಾಲ್ಕನೆಯ ಒಂದು ಭಾಗವು ನಿನ್ನ ಪಾಲಾಗುತ್ತದೆ.
12067027a ತೇನ ಧರ್ಮೇಣ ಮಹತಾ ಸುಖಲಬ್ಧೇನ ಭಾವಿತಃ।
12067027c ಪಾಹ್ಯಸ್ಮಾನ್ಸರ್ವತೋ ರಾಜನ್ದೇವಾನಿವ ಶತಕ್ರತುಃ।।
ರಾಜನ್! ಸುಖವಾಗಿ ಲಬ್ಧವಾಗುವ ಆ ಮಹಾ ಧರ್ಮದಿಂದ ಭಾವಿತನಾಗಿ ದೇವತೆಗಳನ್ನು ಶತುಕ್ರತುವು ಹೇಗೋ ಹಾಗೆ ನಮ್ಮನ್ನು ಸರ್ವತಃ ರಕ್ಷಿಸು.
12067028a ವಿಜಯಾಯಾಶು ನಿರ್ಯಾಹಿ ಪ್ರತಪನ್ರಶ್ಮಿಮಾನಿವ।
12067028c ಮಾನಂ ವಿಧಮ ಶತ್ರೂಣಾಂ ಧರ್ಮೋ ಜಯತು ನಃ ಸದಾ।।
ಸೂರ್ಯನಂತೆ ಶತ್ರುಗಳನ್ನು ಸುಡುತ್ತಾ ವಿಜಯಯಾತ್ರೆಗೆ ಹೊರಡು. ಶತ್ರುಗಳ ಮಾನವನ್ನು ಒಡೆದುಹಾಕು. ಸದಾ ಧರ್ಮವು ಜಯಿಸಲಿ!”
12067029a ಸ ನಿರ್ಯಯೌ ಮಹಾತೇಜಾ ಬಲೇನ ಮಹತಾ ವೃತಃ।
12067029c ಮಹಾಭಿಜನಸಂಪನ್ನಸ್ತೇಜಸಾ ಪ್ರಜ್ವಲನ್ನಿವ।।
ಆಗ ಅವನು ಮಹಾತೇಜಸ್ಸಿನಿಂದ ಮಹಾ ಸೇನೆಯಿಂದ ಸುತ್ತುವರೆಯಲ್ಪಟ್ಟು ಮಹಾಭಿಜನಸಂಪನ್ನನಾಗಿ ತೇಜಸ್ಸಿನಿಂದ ಪ್ರಜ್ವಲಿಸುತ್ತಾ ಹೊರಟನು.
12067030a ತಸ್ಯ ತಾಂ ಮಹಿಮಾಂ ದೃಷ್ಟ್ವಾ ಮಹೇಂದ್ರಸ್ಯೇವ ದೇವತಾಃ।
12067030c ಅಪತತ್ರಸಿರೇ ಸರ್ವೇ ಸ್ವಧರ್ಮೇ ಚ ದಧುರ್ಮನಃ।।
ಮಹೇಂದ್ರನ ಮಹಿಮೆಯನ್ನು ನೋಡಿ ದೇವತೆಗಳು ಹೇಗೋ ಹಾಗೆ ಅವನ ಆ ಮಹಿಮೆಯನ್ನು ನೋಡಿ ಬೆದರಿ ಸರ್ವರೂ ಸ್ವಧರ್ಮದಲ್ಲಿ ನಿರತರಾಗಿರಲು ನಿಶ್ಚಯಿಸಿದರು.
12067031a ತತೋ ಮಹೀಂ ಪರಿಯಯೌ ಪರ್ಜನ್ಯ ಇವ ವೃಷ್ಟಿಮಾನ್।
12067031c ಶಮಯನ್ಸರ್ವತಃ ಪಾಪಾನ್ಸ್ವಕರ್ಮಸು ಚ ಯೋಜಯನ್।।
ಬಳಿಕ ಮನುವು ಮಳೆಗರೆಯುವ ಮೇಘದಂತೆ ಪಾಪಿಗಳನ್ನು ಉಪಶಮನಗೊಳಿಸುತ್ತಾ, ಎಲ್ಲಕಡೆ ಎಲ್ಲರನ್ನೂ ಸ್ವಕರ್ಮದಲ್ಲಿ ತೊಡಗಿಸುತ್ತಾ ಇಡೀ ಭೂಮಿಯಲ್ಲಿ ಸಂಚರಿಸಿದನು.
12067032a ಏವಂ ಯೇ ಭೂತಿಮಿಚ್ಚೇಯುಃ ಪೃಥಿವ್ಯಾಂ ಮಾನವಾಃ ಕ್ವ ಚಿತ್।
12067032c ಕುರ್ಯೂ ರಾಜಾನಮೇವಾಗ್ರೇ ಪ್ರಜಾನುಗ್ರಹಕಾರಣಾತ್।।
ಹೀಗೆ ಭೂಮಿಯಲ್ಲಿ ಅಭಿವೃದ್ಧಿಯನ್ನು ಬಯಸುವ ಮಾನವರು ಎಲ್ಲಕ್ಕಿಂತಲೂ ಮೊದಲು ಪ್ರಜಾನುಗ್ರಹದ ಕಾರಣಕ್ಕಾಗಿ ರಾಜನನ್ನು ನಿಯೋಜಿಸಿಕೊಳ್ಳಬೇಕು.
12067033a ನಮಸ್ಯೇಯುಶ್ಚ ತಂ ಭಕ್ತ್ಯಾ ಶಿಷ್ಯಾ ಇವ ಗುರುಂ ಸದಾ।
12067033c ದೇವಾ ಇವ ಸಹಸ್ರಾಕ್ಷಂ ಪ್ರಜಾ ರಾಜಾನಮಂತಿಕೇ।।
ಶಿಷ್ಯರು ಸದಾ ಗುರುವನ್ನು ಹೇಗೋ ಹಾಗೆ ಮತ್ತು ದೇವತೆಗಳು ಸಹಸ್ರಾಕ್ಷನನ್ನು ಹೇಗೋ ಹಾಗೆ ಪ್ರಜೆಗಳು ರಾಜನ ಬಳಿಸಾರಿ ನಮಸ್ಕರಿಸುತ್ತಾರೆ.
12067034a ಸತ್ಕೃತಂ ಸ್ವಜನೇನೇಹ ಪರೋಽಪಿ ಬಹು ಮನ್ಯತೇ।
12067034c ಸ್ವಜನೇನ ತ್ವವಜ್ಞಾತಂ ಪರೇ ಪರಿಭವಂತ್ಯುತ।।
ಸ್ವಜನರಿಂದ ಸತ್ಕೃತನಾದವನನ್ನು ಇತರರೂ ಕೂಡ ಗೌರವಿಸುತ್ತಾರೆ. ಸ್ವಜನರಿಂದಲೇ ತಿರಸ್ಕೃತನಾದವನನ್ನು ಇತರರೂ ಅನಾದರಿಸುತ್ತಾರೆ.
12067035a ರಾಜ್ಞಃ ಪರೈಃ ಪರಿಭವಃ ಸರ್ವೇಷಾಮಸುಖಾವಹಃ।
12067035c ತಸ್ಮಾಚ್ಚತ್ರಂ ಚ ಪತ್ರಂ ಚ ವಾಸಾಂಸ್ಯಾಭರಣಾನಿ ಚ।।
12067036a ಭೋಜನಾನ್ಯಥ ಪಾನಾನಿ ರಾಜ್ಞೇ ದದ್ಯುರ್ಗೃಹಾಣಿ ಚ।
12067036c ಆಸನಾನಿ ಚ ಶಯ್ಯಾಶ್ಚ ಸರ್ವೋಪಕರಣಾನಿ ಚ।।
ಶತ್ರುಗಳಿಂದ ಪರಾಜಿತನಾದ ರಾಜನು ಸರ್ವರಿಗೂ ಅಸುಖವನ್ನು ತರುತ್ತಾನೆ. ಆದುದರಿಂದ ರಾಜನಿಗೆ ಚತ್ರ, ವಾಹನ, ವಸ್ತ್ರಗಳು, ಆಭರಣಗಳು, ಭೋಜನ, ಅನ್ಯ ಪಾನೀಯಗಳು ಮತ್ತು ಗೃಹಗಳನ್ನು ನೀಡಬೇಕು.
12067037a ಗುಪ್ತಾತ್ಮಾ ಸ್ಯಾದ್ದುರಾಧರ್ಷಃ ಸ್ಮಿತಪೂರ್ವಾಭಿಭಾಷಿತಾ।
12067037c ಆಭಾಷಿತಶ್ಚ ಮಧುರಂ ಪ್ರತಿಭಾಷೇತ ಮಾನವಾನ್।।
ಹೀಗೆ ಪ್ರಜೆಗಳಿಂದ ರಕ್ಷಿತನಾದ ರಾಜನು ಇತರರಿಗೆ ದುರಾಧರ್ಷನಾಗುತ್ತಾನೆ. ನಗುಮುಖದಿಂದಲೇ ಪ್ರಜೆಗಳೊಂದಿಗೆ ಮಾತನಾಡುತ್ತಾನೆ. ರಾಜನಾದವನು ಪ್ರಜೆಗಳಿಗೆ ಮಧುರ ಮಾತುಗಳಿಂದಲೇ ಉತ್ತರಿಸಬೇಕು.
12067038a ಕೃತಜ್ಞೋ ದೃಢಭಕ್ತಿಃ ಸ್ಯಾತ್ಸಂವಿಭಾಗೀ ಜಿತೇಂದ್ರಿಯಃ।
12067038c ಈಕ್ಷಿತಃ ಪ್ರತಿವೀಕ್ಷೇತ ಮೃದು ಚರ್ಜು ಚ ವಲ್ಗು ಚ।।
ರಾಜನಾದವನು ಪ್ರಜೆಗಳಿಗೆ ಕೃತಜ್ಞನಾಗಿರಬೇಕು. ಪ್ರಜೆಗಳಲ್ಲಿ ದೃಢ ಭಕ್ತಿಯನ್ನಿಟ್ಟುಕೊಂಡಿರಬೇಕು. ಅವರೊಂದಿಗೆ ಹಂಚಿಕೊಳ್ಳಬೇಕು. ಜಿತೇಂದ್ರಿಯನಾಗಿರಬೇಕು. ತನ್ನ ಕಡೆ ನೋಡುವವರನ್ನು ತಾನೂ ನೋಡಬೇಕು. ಮೃದುವಾಗಿರಬೇಕು. ಮಾಧುರ್ಯದಿಂದ ಮತ್ತು ಸರಳತೆಯಿಂದ ಮಾತನಾಡಬೇಕು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ರಾಷ್ಟ್ರೇರಾಜಕರಣಾವಶ್ಯಕಸ್ಯಕಥನೇ ಸಪ್ತಷಷ್ಠಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ರಾಷ್ಟ್ರದಲ್ಲಿ ರಾಜನನ್ನು ಮಾಡಿಕೊಳ್ಳುವ ಅವಶ್ಯಕತೆಯ ಕಥನ ಎನ್ನುವ ಅರವತ್ತೇಳನೇ ಅಧ್ಯಾಯವು.