ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ರಾಜಧರ್ಮ ಪರ್ವ
ಅಧ್ಯಾಯ 66
ಸಾರ
ಚತುರಾಶ್ರಮ್ಯವಿಧಾಃ (1-37).
12066001 ಯುಧಿಷ್ಠಿರ ಉವಾಚ।
12066001a ಶ್ರುತಾ ಮೇ ಕಥಿತಾಃ ಪೂರ್ವೈಶ್ಚತ್ವಾರೋ ಮಾನವಾಶ್ರಮಾಃ।
12066001c ವ್ಯಾಖ್ಯಾನಮೇಷಾಮಾಚಕ್ಷ್ವ ಪೃಚ್ಚತೋ ಮೇ ಪಿತಾಮಹ।।
ಯುಧಿಷ್ಠಿರನು ಹೇಳಿದನು: “ಪಿತಾಮಹ! ಈ ಹಿಂದೆ ನೀನು ಹೇಳಿದ ನಾಲ್ಕು ಮಾನವಾಶ್ರಮಗಳ ಕುರಿತು ನಾನು ಕೇಳಿದೆ. ಈಗ ನನಗೆ ಅವುಗಳ ವ್ಯಾಖ್ಯಾನಗಳನ್ನು ಹೇಳು. ನಾನು ಕೇಳುತ್ತಿದ್ದೇನೆ.”
12066002 ಭೀಷ್ಮ ಉವಾಚ।
12066002a ವಿದಿತಾಃ ಸರ್ವ ಏವೇಹ ಧರ್ಮಾಸ್ತವ ಯುಧಿಷ್ಠಿರ।
12066002c ಯಥಾ ಮಮ ಮಹಾಬಾಹೋ ವಿದಿತಾಃ ಸಾಧುಸಂಮತಾಃ।।
ಭೀಷ್ಮನು ಹೇಳಿದನು: “ಯುಧಿಷ್ಠಿರ! ಮಹಾಬಾಹೋ! ಸಾಧುಸಮ್ಮತವಾದ ಈ ಧರ್ಮಗಳು ನನಗೆ ಹೇಗೆ ತಿಳಿದಿವೆಯೋ ಹಾಗೆ ನಿನಗೂ ಕೂಡ ತಿಳಿದಿವೆ.
12066003a ಯತ್ತು ಲಿಂಗಾಂತರಗತಂ ಪೃಚ್ಚಸೇ ಮಾಂ ಯುಧಿಷ್ಠಿರ।
12066003c ಧರ್ಮಂ ಧರ್ಮಭೃತಾಂ ಶ್ರೇಷ್ಠ ತನ್ನಿಬೋಧ ನರಾಧಿಪ।।
ಯುಧಿಷ್ಠಿರ! ನರಾಧಿಪ! ಧರ್ಮಭೃತರಲ್ಲಿ ಶ್ರೇಷ್ಠ! ಬೇರೆಯೇ ಚಿಹ್ನೆಗಳನ್ನು ಧರಿಸಿರುವ ಧರ್ಮಗಳ ಕುರಿತು ನನ್ನನ್ನು ಕೇಳುತ್ತಿದ್ದೀಯೆ. ಅದನ್ನು ಕೇಳು.
12066004a ಸರ್ವಾಣ್ಯೇತಾನಿ ಕೌಂತೇಯ ವಿದ್ಯಂತೇ ಮನುಜರ್ಷಭ।
12066004c ಸಾಧ್ವಾಚಾರಪ್ರವೃತ್ತಾನಾಂ ಚಾತುರಾಶ್ರಮ್ಯಕರ್ಮಣಾಮ್।।
ಕೌಂತೇಯ! ಮನುಜರ್ಷಭ! ಇವೆಲ್ಲವೂ ಉತ್ತಮ ಆಚಾರಪ್ರವೃತ್ತರಾಗಿರುವ ಮತ್ತು ನಾಲ್ಕು ಆಶ್ರಮಕರ್ಮಿಗಳಾದ ಸಾಧುಗಳಿಗೆ ತಿಳಿದಿರುತ್ತವೆ.
12066005a ಅಕಾಮದ್ವೇಷಯುಕ್ತಸ್ಯ ದಂಡನೀತ್ಯಾ ಯುಧಿಷ್ಠಿರ।
12066005c ಸಮೇಕ್ಷಿಣಶ್ಚ ಭೂತೇಷು ಭೈಕ್ಷಾಶ್ರಮಪದಂ ಭವೇತ್।।
ಯುಧಿಷ್ಠಿರ! ಕಾಮ-ದ್ವೇಷರಹಿತನಾಗಿ ದಂಡನೀತಿಯನ್ನನುಸರಿಸಿ, ಸರ್ವಭೂತಗಳನ್ನೂ ಸಮದೃಷ್ಟಿಯಿಂದ ಕಾಣುವ ರಾಜನಿಗೂ ಕೂಡ ಭೈಕ್ಷಾಶ್ರಮದ (ಸಂನ್ಯಾಸಾಶ್ರಮದ) ಫಲವು ದೊರೆಯುತ್ತದೆ.
12066006a ವೇತ್ತ್ಯಾದಾನವಿಸರ್ಗಂ ಯೋ ನಿಗ್ರಹಾನುಗ್ರಹೌ ತಥಾ।
12066006c ಯಥೋಕ್ತವೃತ್ತೇರ್ವೀರಸ್ಯ ಕ್ಷೇಮಾಶ್ರಮಪದಂ ಭವೇತ್।।
ದಾನ ಮತ್ತು ತ್ಯಾಗಗಳನ್ನು ತಿಳಿದುಕೊಂಡಿರುವ, ಇಂದ್ರಿಯನಿಗ್ರಹ ಮತ್ತು ಜೀವಿಗಳಿಗೆ ಅನುಗ್ರಹ ಇವುಗಳ ಕುರಿತು ತಿಳಿದುಕೊಂಡಿರುವ, ಮತ್ತು ಮೊದಲು ಹೇಳಿದಂತೆ ನಡೆದುಕೊಳ್ಳುವ ವೀರನಿಗೆ ಕ್ಷೇಮಾಶ್ರಮದ (ಗೃಹಸ್ಥಾಶ್ರಮದ) ಫಲವು ದೊರೆಯುತ್ತದೆ.
12066007a 1ಜ್ಞಾತಿಸಂಬಂಧಿಮಿತ್ರಾಣಿ ವ್ಯಾಪನ್ನಾನಿ ಯುಧಿಷ್ಠಿರ। 12066007c ಸಮಭ್ಯುದ್ಧರಮಾಣಸ್ಯ ದೀಕ್ಷಾಶ್ರಮಪದಂ ಭವೇತ್।।
ಯುಧಿಷ್ಠಿರ! ಸಂಕಟದಲ್ಲಿರುವ ದಾಯಾದಿಗಳನ್ನೂ, ಸಂಬಂಧಿಗಳನ್ನೂ ಮತ್ತು ಮಿತ್ರರನ್ನೂ ಉದ್ಧರಿಸುವ ಕ್ಷತ್ರಿಯನಿಗೆ ದೀಕ್ಷಾಶ್ರಮದ (ವಾನಪ್ರಸ್ಥಾನಾಶ್ರಮದ) ಫಲವು ಲಭಿಸುತ್ತದೆ.
12066008a 2ಆಹ್ನಿಕಂ ಭೂತಯಜ್ಞಾಂಶ್ಚ ಪಿತೃಯಜ್ಞಾಂಶ್ಚ ಮಾನುಷಾನ್। 12066008c ಕುರ್ವತಃ ಪಾರ್ಥ ವಿಪುಲಾನ್ವನ್ಯಾಶ್ರಮಪದಂ ಭವೇತ್।।
ಪಾರ್ಥ! ಆಹ್ನಿಕ, ಭೂತಯಜ್ಞ, ಪಿತೃಯಜ್ಞ ಮತ್ತು ಮನುಷ್ಯಯಜ್ಞಗಳನ್ನು ಮಾಡುವ ಕ್ಷತ್ರಿಯನಿಗೆ ವನ್ಯಾಶ್ರಮದ (ವಾನಪ್ರಸ್ಥಾಶ್ರಮದ) ಫಲವು ಲಭಿಸುತ್ತದೆ.
12066009a 3ಪಾಲನಾತ್ಸರ್ವಭೂತಾನಾಂ ಸ್ವರಾಷ್ಟ್ರಪರಿಪಾಲನಾತ್। 12066009c ದೀಕ್ಷಾ ಬಹುವಿಧಾ ರಾಜ್ಞೋ ವನ್ಯಾಶ್ರಮಪದಂ ಭವೇತ್।।
ಸರ್ವಭೂತಗಳ ಪಾಲನೆಯಿಂದ, ಸ್ವರಾಷ್ಟ್ರದ ಪರಿಪಾಲನೆಯಿಂದ, ಮತ್ತು ಬಹುವಿಧದ ಯಜ್ಞದೀಕ್ಷೆಗಳನ್ನು ಕೈಗೊಳ್ಳುವುದರಿಂದ ರಾಜನಿಗೆ ವಾನಪ್ರಸ್ಥಾಶ್ರಮದ ಫಲವು ಲಭಿಸುತ್ತದೆ.
12066010a ವೇದಾಧ್ಯಯನನಿತ್ಯತ್ವಂ ಕ್ಷಮಾಥಾಚಾರ್ಯಪೂಜನಮ್।
12066010c ತಥೋಪಾಧ್ಯಾಯಶುಶ್ರೂಷಾ ಬ್ರಹ್ಮಾಶ್ರಮಪದಂ ಭವೇತ್।।
ನಿತ್ಯವೇದಾಧ್ಯಯನ, ಕ್ಷಮೆ, ಆಚಾರ್ಯಪೂಜನ, ಮತ್ತು ಉಪಾಧ್ಯಾಯಶುಶ್ರೂಷೆಯಿಂದ ಕ್ಷತ್ರಿಯನಿಗೆ ಬ್ರಹ್ಮಾಶ್ರಮಿಯ (ಸಂನ್ಯಾಸಿಯ) ಫಲವು ಲಭಿಸುತ್ತದೆ.
12066011a 4ಅಜಿಹ್ಮಮಶಠಂ ಮಾರ್ಗಂ ಸೇವಮಾನಸ್ಯ ಭಾರತ। 12066011c ಸರ್ವದಾ ಸರ್ವಭೂತೇಷು ಬ್ರಹ್ಮಾಶ್ರಮಪದಂ ಭವೇತ್।।
ಭಾರತ! ಸರ್ವಭೂತಗಳೊಂದಿಗೂ ಯಾವಾಗಲೂ ಋಜುತ್ವದಿಂದ ಮತ್ತು ನಿಷ್ಕಪಟತೆಯಿಂದ ವರ್ತಿಸುವ ಕ್ಷತ್ರಿಯನು ಸಂನ್ಯಾಸಾಶ್ರಮಿಯ ಫಲವನ್ನು ಪಡೆಯುತ್ತಾನೆ.
12066012a ವಾನಪ್ರಸ್ಥೇಷು ವಿಪ್ರೇಷು ತ್ರೈವಿದ್ಯೇಷು ಚ ಭಾರತ।
12066012c ಪ್ರಯಚ್ಚತೋಽರ್ಥಾನ್ವಿಪುಲಾನ್ವನ್ಯಾಶ್ರಮಪದಂ ಭವೇತ್।।
ಭಾರತ! ವಾನಪ್ರಸ್ಥದಲ್ಲಿರುವ ಮತ್ತು ಮೂರುವೇದಗಳನ್ನು ತಿಳಿದಿರುವ ವಿಪ್ರರಿಗೆ ವಿಪುಲ ಧನವನ್ನು ದಾನಮಾಡುವ ಕ್ಷತ್ರಿಯನಿಗೆ ವಾನಪ್ರಸ್ಥಾಶ್ರಮದ ಫಲವು ದೊರೆಯುತ್ತದೆ.
12066013a ಸರ್ವಭೂತೇಷ್ವನುಕ್ರೋಶಂ ಕುರ್ವತಸ್ತಸ್ಯ ಭಾರತ।
12066013c ಆನೃಶಂಸ್ಯಪ್ರವೃತ್ತಸ್ಯ ಸರ್ವಾವಸ್ಥಂ ಪದಂ ಭವೇತ್।।
ಭಾರತ! ಸರ್ವಭೂತಗಳ ಕುರಿತೂ ಅನುಕಂಪ ತೋರಿಸುವ ಮತ್ತು ಕ್ರೂರನಾಗಿ ವರ್ತಿಸದ ಅವನಿಗೆ ಎಲ್ಲ ಆಶ್ರಮಗಳ ಫಲವು ದೊರೆಯುತ್ತದೆ.
12066014a ಬಾಲವೃದ್ಧೇಷು ಕೌರವ್ಯ ಸರ್ವಾವಸ್ಥಂ ಯುಧಿಷ್ಠಿರ।
12066014c ಅನುಕ್ರೋಶಂ ವಿದಧತಃ ಸರ್ವಾವಸ್ಥಂ ಪದಂ ಭವೇತ್।।
ಕೌರವ್ಯ! ಯುಧಿಷ್ಠಿರ! ಎಲ್ಲ ಸಮಯಗಳಲ್ಲಿಯೂ ಬಾಲಕ-ವೃದ್ಧರ ಕುರಿತು ಅನುಕಂಪ ತೋರಿಸುವ ಕ್ಷತ್ರಿಯನಿಗೆ ಎಲ್ಲ ಆಶ್ರಮಗಳ ವಿವಿಧ ಫಲಗಳೂ ದೊರೆಯುತ್ತವೆ.
12066015a ಬಲಾತ್ಕೃತೇಷು ಭೂತೇಷು ಪರಿತ್ರಾಣಂ ಕುರೂದ್ವಹ।
12066015c ಶರಣಾಗತೇಷು ಕೌರವ್ಯ ಕುರ್ವನ್ಗಾರ್ಹಸ್ಥ್ಯಮಾವಸೇತ್।।
ಕರೂದ್ವಹ! ಕೌರವ್ಯ! ಬಲಾತ್ಕಾರಕ್ಕೊಳಗಾದ ಮತ್ತು ಶರಣಾಗತರ ಸಂರಕ್ಷಣೆ ಮಾಡುತ್ತಾ ಕ್ಷತ್ರಿಯನು ಗೃಹಸ್ಥಾಶ್ರಮದಲ್ಲಿರಬೇಕು.
12066016a ಚರಾಚರಾಣಾಂ ಭೂತಾನಾಂ ರಕ್ಷಾಮಪಿ ಚ ಸರ್ವಶಃ।
12066016c ಯಥಾರ್ಹಪೂಜಾಂ ಚ ಸದಾ ಕುರ್ವನ್ಗಾರ್ಹಸ್ಥ್ಯಮಾವಸೇತ್।।
ಸದಾ ಎಲ್ಲಕಡೆ ಚರಾಚರ ಭೂತಗಳ ರಕ್ಷಣೆ ಮತ್ತು ಯಥಾರ್ಹವಾಗಿ ಪೂಜೆಗಳನ್ನು ಮಾಡುತ್ತಾ ಕ್ಷತ್ರಿಯನು ಗೃಹಸ್ಥಾಶ್ರಮದಲ್ಲಿರಬೇಕು.
12066017a ಜ್ಯೇಷ್ಠಾನುಜ್ಯೇಷ್ಠಪತ್ನೀನಾಂ ಭ್ರಾತೃಣಾಂ ಪುತ್ರನಪ್ತೃಣಾಮ್।
12066017c ನಿಗ್ರಹಾನುಗ್ರಹೌ ಪಾರ್ಥ ಗಾರ್ಹಸ್ಥ್ಯಮಿತಿ ತತ್ತಪಃ।।
ಪಾರ್ಥ! ಹಿರಿಯ ಪತ್ನಿಯಾಗಲೀ, ಕಿರಿಯ ಪತ್ನಿಯಾಗಲೀ, ಸಹೋದರರಾಗಲೀ, ಮಕ್ಕಳು-ಮೊಮ್ಮಕ್ಕಳಾಗಲೀ ಅವರಿಗೆ ನಿಗ್ರಹ-ಅನುಗ್ರಹಗಳನ್ನು ಮಾಡುತ್ತಿರಬೇಕು. ಇದೇ ಗೃಹಸ್ಥಾಶ್ರಮದ ತಪಸ್ಸು.
12066018a ಸಾಧೂನಾಮರ್ಚನೀಯಾನಾಂ ಪ್ರಜಾಸು ವಿದಿತಾತ್ಮನಾಮ್।
12066018c ಪಾಲನಂ ಪುರುಷವ್ಯಾಘ್ರ ಗೃಹಾಶ್ರಮಪದಂ ಭವೇತ್।।
ಪುರುಷವ್ಯಾಘ್ರ! ಸಾಧುಗಳ ಮತ್ತು ಆತ್ಮಜ್ಞಾನಿ ಪ್ರಜೆಗಳ ಅರ್ಚನೆ- ಪಾಲನೆಗಳನ್ನು ಮಾಡುವುದರಿಂದ ಗೃಹಸ್ಥಾಶ್ರಮದ ಫಲವು ದೊರೆಯುತ್ತದೆ.
12066019a ಆಶ್ರಮಸ್ಥಾನಿ ಸರ್ವಾಣಿ ಯಸ್ತು ವೇಶ್ಮನಿ ಭಾರತ।
12066019c ಆದದೀತೇಹ ಭೋಜ್ಯೇನ ತದ್ಗಾರ್ಹಸ್ಥ್ಯಂ ಯುಧಿಷ್ಠಿರ।।
ಭಾರತ! ಯುಧಿಷ್ಠಿರ! ಆಶ್ರಮಸ್ಥರಾಗಿರುವ ಸರ್ವರನ್ನೂ ಮನೆಗೆ ಕರೆತಂದು ಭೋಜನಾದಿಗಳಿಂದ ತೃಪ್ತಿಗೊಳಿಸುವುದೇ ಗೃಹಸ್ಥಧರ್ಮ.
12066020a ಯಃ ಸ್ಥಿತಃ ಪುರುಷೋ ಧರ್ಮೇ ಧಾತ್ರಾ ಸೃಷ್ಟೇ ಯಥಾರ್ಥವತ್।
12066020c ಆಶ್ರಮಾಣಾಂ ಸ ಸರ್ವೇಷಾಂ ಫಲಂ ಪ್ರಾಪ್ನೋತ್ಯನುತ್ತಮಮ್।।
ಧಾತೃವು ಸೃಷ್ಟಿಸಿದ ಧರ್ಮದಲ್ಲಿ ಯಥಾರ್ಥವಾಗಿ ನಡೆದುಕೊಳ್ಳುವ ಪುರುಷನು ಸರ್ವ ಆಶ್ರಮಗಳ ಅನುತ್ತಮ ಫಲಗಳನ್ನು ಪಡೆಯುತ್ತಾನೆ.
12066021a ಯಸ್ಮಿನ್ನ ನಶ್ಯಂತಿ ಗುಣಾಃ ಕೌಂತೇಯ ಪುರುಷೇ ಸದಾ।
12066021c ಆಶ್ರಮಸ್ಥಂ ತಮಪ್ಯಾಹುರ್ನರಶ್ರೇಷ್ಠಂ ಯುಧಿಷ್ಠಿರ।।
ಕೌಂತೇಯ! ಯುಧಿಷ್ಠಿರ! ಯಾವ ಪುರುಷನ ಸದ್ಗುಣಗಳು ಸದಾ ನಶಿಸದೇ ಇರುವುದೋ ಆ ಆಶ್ರಮಸ್ಥ ಪುರುಷನನ್ನು ನರಶ್ರೇಷ್ಠನೆಂದು ಕರೆಯುತ್ತಾರೆ.
12066022a ಸ್ಥಾನಮಾನಂ ವಯೋಮಾನಂ ಕುಲಮಾನಂ ತಥೈವ ಚ।
12066022c ಕುರ್ವನ್ವಸತಿ ಸರ್ವೇಷು ಹ್ಯಾಶ್ರಮೇಷು ಯುಧಿಷ್ಠಿರ।।
ಯುಧಿಷ್ಠಿರ! ಸ್ಥಾನಕ್ಕೆ ತಕ್ಕುದಾದ ಸನ್ಮಾನ, ವಯಸ್ಸಿಗೆ ತಕ್ಕುದಾದ ಸನ್ಮಾನ ಮತ್ತು ಕುಲಕ್ಕೆ ತಕ್ಕುದಾದ ಸನ್ಮಾನ ಇವುಗಳನ್ನು ಮಾಡುವವನು ಸರ್ವ ಆಶ್ರಮಗಳ ಫಲಗಳನ್ನು ಪಡೆಯುತ್ತಾನೆ.
12066023a ದೇಶಧರ್ಮಾಂಶ್ಚ ಕೌಂತೇಯ ಕುಲಧರ್ಮಾಂಸ್ತಥೈವ ಚ।
12066023c ಪಾಲಯನ್ಪುರುಷವ್ಯಾಘ್ರ ರಾಜಾ ಸರ್ವಾಶ್ರಮೀ ಭವೇತ್।।
ಕೌಂತೇಯ! ಪುರುಷವ್ಯಾಘ್ರ! ದೇಶಧರ್ಮಗಳು ಮತ್ತು ಕುಲಧರ್ಮಗಳನ್ನು ಪಾಲಿಸುವ ರಾಜನು ಸರ್ವ ಆಶ್ರಮಗಳನ್ನೂ ಪಾಲಿಸಿದಂತಾಗುತ್ತದೆ.
12066024a ಕಾಲೇ ವಿಭೂತಿಂ ಭೂತಾನಾಮುಪಹಾರಾಂಸ್ತಥೈವ ಚ।
12066024c ಅರ್ಹಯನ್ಪುರುಷವ್ಯಾಘ್ರ ಸಾಧೂನಾಮಾಶ್ರಮೇ ವಸೇತ್।।
ಪುರುಷವ್ಯಾಘ್ರ! ಆಗಾಗ ಐಶ್ವರ್ಯ ಮತ್ತು ಉಪಹಾರಗಳನ್ನು ಅರ್ಹರಾದವರಿಗೆ ನೀಡುವವನಿಗೆ ಸಾಧುಗಳ ಆಶ್ರಮ (ಸಂನ್ಯಾಸಾಶ್ರಮದ) ಫಲವು ಲಭಿಸುತ್ತದೆ.
12066025a ದಶಧರ್ಮಗತಶ್ಚಾಪಿ ಯೋ ಧರ್ಮಂ ಪ್ರತ್ಯವೇಕ್ಷತೇ।
12066025c ಸರ್ವಲೋಕಸ್ಯ ಕೌಂತೇಯ ರಾಜಾ ಭವತಿ ಸೋಽಽಶ್ರಮೀ।।
ಕೌಂತೇಯ! ದಶಧರ್ಮಗಳನ್ನು ಅನುಸರಿಸಿ ಧರ್ಮವನ್ನು ರಕ್ಷಿಸುವವನು ಸರ್ವಲೋಕಗಳ ರಾಜನಾಗುತ್ತಾನೆ ಮತ್ತು ಸರ್ವ ಆಶ್ರಮಗಳ ಫಲಗಳನ್ನು ಪಡೆಯುತ್ತಾನೆ,
12066026a ಯೇ ಧರ್ಮಕುಶಲಾ ಲೋಕೇ ಧರ್ಮಂ ಕುರ್ವಂತಿ ಸಾಧವಃ।
12066026c ಪಾಲಿತಾ ಯಸ್ಯ ವಿಷಯೇ ಪಾದೋಽಂಶಸ್ತಸ್ಯ ಭೂಪತೇಃ।।
ಯಾರ ರಾಜ್ಯದಲ್ಲಿ ಧರ್ಮಕುಶಲರಾದ ಸಾಧುಗಳ ಧರ್ಮವು ರಕ್ಷಿಸಲ್ಪಡುತ್ತದೆಯೋ ಅವರ ಆರನೆಯ ಒಂದು ಭಾಗವು ಆ ರಾಜನಿಗೂ ದೊರೆಯುತ್ತದೆ.
12066027a ಧರ್ಮಾರಾಮಾನ್ಧರ್ಮಪರಾನ್ಯೇ ನ ರಕ್ಷಂತಿ ಮಾನವಾನ್।
12066027c ಪಾರ್ಥಿವಾಃ ಪುರುಷವ್ಯಾಘ್ರ ತೇಷಾಂ ಪಾಪಂ ಹರಂತಿ ತೇ।।
ಪುರುಷವ್ಯಾಘ್ರ! ಧರ್ಮದಲ್ಲಿಯೇ ರಮಿಸುವ ಧರ್ಮಪರಾಯಣರಾದ ಮಾನವರನ್ನು ರಕ್ಷಿಸದ ಪಾರ್ಥಿವನು ಅವರ ಪಾಪಗಳೆಲ್ಲವನ್ನೂ ಪಡೆದುಕೊಳ್ಳುತ್ತಾನೆ.
12066028a ಯೇ ಚ ರಕ್ಷಾಸಹಾಯಾಃ ಸ್ಯುಃ ಪಾರ್ಥಿವಾನಾಂ ಯುಧಿಷ್ಠಿರ।
12066028c ತೇ ಚೈವಾಂಶಹರಾಃ ಸರ್ವೇ ಧರ್ಮೇ ಪರಕೃತೇಽನಘ।।
ಯುಧಿಷ್ಠಿರ! ಅನಘ! ಧರ್ಮರಕ್ಷಣೆಯಲ್ಲಿ ಪಾರ್ಥಿವರಿಗೆ ಸಹಾಯಮಾಡುವವರಿಗೂ ಇತರರು ಮಾಡುವ ಸರ್ವ ಧರ್ಮಕಾರ್ಯಗಳ ಫಲದ ಅಂಶವು ದೊರೆಯುತ್ತದೆ.
12066029a ಸರ್ವಾಶ್ರಮಪದೇ ಹ್ಯಾಹುರ್ಗಾರ್ಹಸ್ಥ್ಯಂ ದೀಪ್ತನಿರ್ಣಯಮ್।
12066029c ಪಾವನಂ ಪುರುಷವ್ಯಾಘ್ರ ಯಂ ವಯಂ ಪರ್ಯುಪಾಸ್ಮಹೇ।।
ಪುರುಷವ್ಯಾಘ್ರ! ನಾವು ಯಾವ ಧರ್ಮವನ್ನು ಉಪಾಸಿಸುತ್ತಿರುವೆವೋ ಆ ಗೃಹಸ್ಥಾಶ್ರಮ ಧರ್ಮವೇ ಸರ್ವ ಆಶ್ರಮಪದಗಳಲ್ಲಿ ಪಾವನವೂ ಶ್ರೇಷ್ಠವೂ ಆಗಿರುವುದೆಂದು ನಿರ್ಣಯಿಸಿ ಹೇಳಿದ್ದಾರೆ.
12066030a ಆತ್ಮೋಪಮಸ್ತು ಭೂತೇಷು ಯೋ ವೈ ಭವತಿ ಮಾನವಃ।
12066030c ನ್ಯಸ್ತದಂಡೋ ಜಿತಕ್ರೋಧಃ ಸ ಪ್ರೇತ್ಯ ಲಭತೇ ಸುಖಮ್।।
ಎಲ್ಲವನ್ನೂ ತನಗೆ ಸಮಾನವೆಂದು ಯಾರು ಭಾವಿಸುವವನೋ, ದಂಡವನ್ನು ಯಾರು ತ್ಯಜಿಸುವವನೋ ಮತ್ತು ಕ್ರೋಧವನ್ನು ಯಾರು ಗೆಲ್ಲುವವನೋ ಅವನಿಗೆ ಇಹದಲ್ಲಿಯೂ ಪರದಲ್ಲಿಯೂ ಸುಖವುಂಟಾಗುತ್ತದೆ.
12066031a ಧರ್ಮೋತ್ಥಿತಾ ಸತ್ತ್ವವೀರ್ಯಾ ಧರ್ಮಸೇತುವಟಾಕರಾ।
12066031c ತ್ಯಾಗವಾತಾಧ್ವಗಾ ಶೀಘ್ರಾ ನೌಸ್ತ್ವಾ ಸಂತಾರಯಿಷ್ಯತಿ।।
ಧರ್ಮರೂಪದ ಸಮುದ್ರದಲ್ಲಿ ತೇಲುತ್ತಿರುವ ರಾಜಧರ್ಮವೆಂಬ ನೌಕೆಗೆ ಸತ್ತ್ವಗುಣವೇ ನಾವಿಕ, ಧರ್ಮಶಾಸ್ತ್ರವೇ ನೌಕೆಯನ್ನು ಬಂಧಿಸುವ ರಜ್ಜು. ತ್ಯಾಗರೂಪದಿಂದ ಬೀಸುವ ಗಾಳಿಯಿಂದ ಪ್ರೇರಿತವಾಗಿ ಅದು ಸಂಸಾರರೂಪವಾದ ಸಮುದ್ರವನ್ನು ಶೀಘ್ರವಾಗಿ ದಾಟಿಸುತ್ತದೆ.
12066032a ಯದಾ ನಿವೃತ್ತಃ ಸರ್ವಸ್ಮಾತ್ಕಾಮೋ ಯೋಽಸ್ಯ ಹೃದಿ ಸ್ಥಿತಃ।
12066032c ತದಾ ಭವತಿ ಸತ್ತ್ವಸ್ಥಸ್ತತೋ ಬ್ರಹ್ಮ ಸಮಶ್ನುತೇ।।
ಸರ್ವಕಾಮನೆಗಳಿಂದ ನಿವೃತ್ತನಾಗಿ ಹೃದಯದಲ್ಲಿ ಸ್ಥಿತನಾಗಿರುವಾಗ ಸತ್ತ್ವಸ್ಥನೆನಿಸಿಕೊಂಡು ಬ್ರಹ್ಮವನ್ನು ಸಾಕ್ಷಾತ್ಕರಿಸಿಕೊಳ್ಳುತ್ತಾನೆ.
12066033a ಸುಪ್ರಸನ್ನಸ್ತು ಭಾವೇನ ಯೋಗೇನ ಚ ನರಾಧಿಪ।
12066033c ಧರ್ಮಂ ಪುರುಷಶಾರ್ದೂಲ ಪ್ರಾಪ್ಸ್ಯಸೇ ಪಾಲನೇ ರತಃ।।
ನರಾಧಿಪ! ಪುರುಷಶಾರ್ದೂಲ! ಸುಪ್ರಸನ್ನ ಭಾವದ ಯೋಗದಿಂದ ಪಾಲನೆಮಾಡುತ್ತಿರುವ ರಾಜನು ಧರ್ಮವನ್ನು ಪರಿಪಾಲಿಸಿದ ಫಲವನ್ನು ಹೊಂದುತ್ತಾನೆ.
12066034a ವೇದಾಧ್ಯಯನಶೀಲಾನಾಂ ವಿಪ್ರಾಣಾಂ ಸಾಧುಕರ್ಮಣಾಮ್।
12066034c ಪಾಲನೇ ಯತ್ನಮಾತಿಷ್ಠ ಸರ್ವಲೋಕಸ್ಯ ಚಾನಘ।।
ಅನಘ! ವೇದಾಧ್ಯಯನ ಶೀಲರಾದ ವಿಪ್ರರ, ಸಾಧುಕರ್ಮಿಗಳ ಮತ್ತು ಸರ್ವಲೋಕದ ಪಾಲನೆಗೆ ಪ್ರಯತ್ನಿಸು!
12066035a ವನೇ ಚರತಿ ಯೋ ಧರ್ಮಮಾಶ್ರಮೇಷು ಚ ಭಾರತ।
12066035c ರಕ್ಷಯಾ ತಚ್ಚತಗುಣಂ ಧರ್ಮಂ ಪ್ರಾಪ್ನೋತಿ ಪಾರ್ಥಿವಃ।।
ಭಾರತ! ವನದಲ್ಲಿ ಸಂಚರಿಸುವ ಆಶ್ರಮಧರ್ಮವನ್ನು ಪಾಲಿಸುವುದಕ್ಕಿಂತ ಎಷ್ಟೋ ಗುಣ ಹೆಚ್ಚು ಫಲವನ್ನು ಧರ್ಮರಕ್ಷಣೆಮಾಡುವ ಪಾರ್ಥಿವನು ಪಡೆಯುತ್ತಾನೆ.
12066036a ಏಷ ತೇ ವಿವಿಧೋ ಧರ್ಮಃ ಪಾಂಡವಶ್ರೇಷ್ಠ ಕೀರ್ತಿತಃ।
12066036c ಅನುತಿಷ್ಠ ತ್ವಮೇನಂ ವೈ ಪೂರ್ವೈರ್ದೃಷ್ಟಂ ಸನಾತನಮ್।।
ಪಾಂಡವಶ್ರೇಷ್ಠ! ಇಗೋ ನಿನಗೆ ವಿವಿಧ ಧರ್ಮಗಳ ಕುರಿತು ಹೇಳಿದ್ದೇನೆ. ನಮ್ಮ ಪೂರ್ವಜರು ಆಚರಿಸಿಕೊಂಡು ಬಂದಿರುವ ಈ ಸನಾತನ ಧರ್ಮವನ್ನು ನೀನೂ ಅನುಷ್ಠಾನ ಮಾಡು.
12066037a ಚಾತುರಾಶ್ರಮ್ಯಮೇಕಾಗ್ರಃ ಚಾತುರ್ವರ್ಣ್ಯಂ ಚ ಪಾಂಡವ।
12066037c ಧರ್ಮಂ ಪುರುಷಶಾರ್ದೂಲ ಪ್ರಾಪ್ಸ್ಯಸೇ ಪಾಲನೇ ರತಃ।।
ಪಾಂಡವ! ಪುರುಷಶಾರ್ದೂಲ! ನಾಲ್ಕು ಆಶ್ರಮದವರೂ ನಾಲ್ಕು ವರ್ಣದವರೂ ಪಡೆದುಕೊಳ್ಳುವ ಪುಣ್ಯವನ್ನು ಧರ್ಮಪಾಲನೆಯಲ್ಲಿ ನಿರತನಾಗಿರುವ ರಾಜನು ಪಡೆದುಕೊಳ್ಳುತ್ತಾನೆ.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ಚಾತುರಾಶ್ರಮ್ಯವಿಧೌ ಷಟ್ ಷಷ್ಠಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಚಾತುರಾಶ್ರಮ್ಯವಿಧ ಎನ್ನುವ ಅರವತ್ತಾರನೇ ಅಧ್ಯಾಯವು.
-
ಇದಕ್ಕೆ ಮೊದಲು ಭಾರತದರ್ಶನದಲ್ಲಿ ಈ ಶ್ಲೋಕವಿದೆ: ಅರ್ಹಾನ್ ಪೂಜಯತೋ ನಿತ್ಯಂ ಸಂವಿಭಾಗೇನ ಪಾಂಡವ। ಸರ್ವತಸ್ತಸ್ಯ ಕೌಂತೇಯ ಭೈಕ್ಷಾಶ್ರಮಪದಂ ಭವೇತ್।। ಅರ್ಥಾತ್ ಪಾಂಡವ! ಕೌಂತೇಯ! ಪೂಜಾರ್ಹರನ್ನು ಅವರ ಅಭೀಷ್ಟ ವಸ್ತುಪ್ರದಾನಗಳಿಂದ ನಿತ್ಯವೂ ಸನ್ಮಾನಿಸುವ ಕ್ಷತ್ರಿಯನಿಗೆ ಬ್ರಹ್ಮಚರ್ಯಾಶ್ರಮಿಯ ಫಲವು ಲಭಿಸುತ್ತದೆ. ↩︎
-
ಭಾರತ ದರ್ಶನದಲ್ಲಿ ಇದಕ್ಕೆ ಮೊದಲು ಈ ಶ್ಲೋಕವಿದೆ: ಲೋಕಮುಖ್ಯೇಷ ಸತ್ಕಾರಂ ಲಿಂಗಮುಖ್ಯೇಷು ಚಾಸಕೃತ್। ಕುರ್ವತಸ್ತಸ್ಯ ಕೌಂತೇಯ ವನ್ಯಾಶ್ರಮಪದಂ ಭವೇತ್।। ಅರ್ಥಾತ್ ಲೋಕದ ಶ್ರೇಷ್ಠರಿಗೂ, ವರ್ಣಾಶ್ರಮಧರ್ಮಿಗಳಿಗೂ ನಿರಂತರ ಸತ್ಕರಿಸುವ ಕ್ಷತ್ರಿಯನಿಗೆ ವಾನಪ್ರಸ್ಥಾಶ್ರಮದ ಫಲವು ಲಭಿಸುತ್ತದೆ. ↩︎
-
ಭಾರತದರ್ಶನದಲ್ಲಿ ಇದಕ್ಕೆ ಮೊದಲು ಈ ಎರಡು ಶ್ಲೋಕಗಳಿವೆ: (೧) ಸಂವಿಭಾಗೇನ ಭೂತಾನಾಮತಿಥೀನಾಂ ತಥಾರ್ಚನಾತ್। ದೇವಯಜ್ಞೈಶ್ಚ ರಾಜೇಂದ್ರ ವನ್ಯಾಶ್ರಮಪದಂ ಭವೇತ್।। ಅರ್ಥಾತ್ ರಾಜೇಂದ್ರ! ಯಥಾಭಾಗವಾಗಿ ಪ್ರಾಣಿಗಳು ಮತ್ತು ಅತಿಥಿಗಳ ಅರ್ಚನೆಯಿಂದ ಮತ್ತು ದೇವಯಜ್ಞಗಳಿಂದ ಕ್ಷತ್ರಿಯನಿಗೆ ವಾನಪ್ರಸ್ಥಾಶ್ರಮದ ಫಲವು ಲಭಿಸುತ್ತದೆ. (೨) ಮರ್ದನಂ ಪರರಾಷ್ಟ್ರಾಣಾಂ ಶಿಷ್ಟಾರ್ಥಂ ಸತ್ಯವಿಕ್ರಮ। ಕುರ್ವತಃ ಪುರುಷವ್ಯಾಘ್ರ ವನ್ಯಾಶ್ರಮಪದಂ ಲಭೇತ್।। ಅರ್ಥಾತ್ ಸತ್ಯವಿಕ್ರಮ! ಪುರುಷವ್ಯಾಘ್ರ! ಶಿಷ್ಟಾಚಾರಗಳನ್ನು ಸ್ಥಾಪಿಸಲೋಸುಗ ಪರರಾಷ್ಟ್ರಗಳನ್ನು ಸದೆಬಡಿಯುವುದರಿಂದ ಕ್ಷತ್ರಿಯನಿಗೆ ವಾನಪ್ರಸ್ಥಾಶ್ರಮದ ಫಲವು ಲಭಿಸುತ್ತದೆ. ↩︎
-
ಭಾರತದರ್ಶನದಲ್ಲಿ ಇದಕ್ಕೆ ಮೊದಲು ಈ ಎರಡು ಶ್ಲೋಕಗಳಿವೆ: (೧) ಆಹ್ನಿಕಂ ಜಪಮಾನಸ್ಯ ದೇವಾನ್ ಪೂಜಯತೇ ಸದಾ। ಧರ್ಮೇಣ ಪುರುಷವ್ಯಾಘ್ರ ಧರ್ಮಾಶ್ರಮಪದಂ ಭವೇತ್।। ಅರ್ಥಾತ್ ಸದಾ ಅಹ್ನೀಕ-ಜಪಗಳನ್ನು ಮಾಡುವ ಮತ್ತು ಧರ್ಮಪೂರ್ವಕವಾಗಿ ದೇವತೆಗಳನ್ನು ಪೂಜಿಸುವ ಕ್ಷತ್ರಿಯನಿಗೆ ಗೃಹಸ್ಥಾಶ್ರಮಿಯ ಫಲವು ಲಭಿಸುತ್ತದೆ. (೨) ಮೃತ್ಯುರ್ವಾ ರಕ್ಷಣಂ ವೇತಿ ಯಸ್ಯ ರಾಜ್ಞೋ ವಿನಿಶ್ಚಯಃ। ಪ್ರಾಣದ್ಯೂತೇ ತತಸ್ತಸ್ಯ ಬ್ರಹ್ಮಾಶ್ರಮಪದಂ ಭವೇತ್।। ಅರ್ಥಾತ್ ಮೃತ್ಯು ಅಥವಾ ರಾಷ್ಟರಕ್ಷಣೆ ಎಂದು ನಿಶ್ಚಯಿಸಿ ಪ್ರಾಣವನ್ನೇ ಪಣವನ್ನಾಗಿಟ್ಟು ಯುದ್ಧಮಾಡುವ ಕ್ಷತ್ರಿಯನಿಗೆ ಸಂನ್ಯಾಸಾಶ್ರಮಿಯ ಫಲವು ಲಭಿಸುತ್ತದೆ. ↩︎