064 ವರ್ಣಾಶ್ರಮಧರ್ಮಕಥನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ರಾಜಧರ್ಮ ಪರ್ವ

ಅಧ್ಯಾಯ 64

ಸಾರ

ಇಂದ್ರ-ಮಾಂಧಾತ ಸಂವಾದ (1-29).

12064001 ಭೀಷ್ಮ ಉವಾಚ।
12064001a ಚಾತುರಾಶ್ರಮ್ಯಧರ್ಮಾಶ್ಚ ಜಾತಿಧರ್ಮಾಶ್ಚ ಪಾಂಡವ।
12064001c ಲೋಕಪಾಲೋತ್ತರಾಶ್ಚೈವ ಕ್ಷಾತ್ರೇ ಧರ್ಮೇ ವ್ಯವಸ್ಥಿತಾಃ।।

ಭೀಷ್ಮನು ಹೇಳಿದನು: “ಪಾಂಡವ! ನಾಲ್ಕು ಆಶ್ರಮಧರ್ಮಗಳೂ, ಜಾತಿಧರ್ಮಗಳೂ, ಲೋಕಪಾಲಧರ್ಮಗಳೂ ಕ್ಷಾತ್ರಧರ್ಮದಲ್ಲಿಯೇ ಪ್ರತಿಷ್ಠಿತಗೊಂಡಿವೆ.

12064002a ಸರ್ವಾಣ್ಯೇತಾನಿ ಧರ್ಮಾಣಿ ಕ್ಷಾತ್ರೇ ಭರತಸತ್ತಮ।
12064002c ನಿರಾಶಿಷೋ ಜೀವಲೋಕೇ ಕ್ಷಾತ್ರೇ ಧರ್ಮೇ ವ್ಯವಸ್ಥಿತಾಃ1।।

ಭರತಸತ್ತಮ! ಈ ಎಲ್ಲ ಧರ್ಮಗಳೂ ಕ್ಷಾತ್ರಧರ್ಮವನ್ನವಲಂಬಿಸಿವೆ. ಕ್ಷಾತ್ರಧರ್ಮವು ಅವ್ಯವಸ್ಥಿತವಾದರೆ ಜೀವಲೋಕಗಳು ನಿರಾಶೆಗೊಳ್ಳುತ್ತವೆ.

12064003a ಅಪ್ರತ್ಯಕ್ಷಂ ಬಹುದ್ವಾರಂ ಧರ್ಮಮಾಶ್ರಮವಾಸಿನಾಮ್।
12064003c ಪ್ರರೂಪಯಂತಿ ತದ್ಭಾವಮಾಗಮೈರೇವ ಶಾಶ್ವತಮ್।।

ಆಶ್ರಮವಾಸಿಗಳ ಧರ್ಮಗಳು ಅಪ್ರತ್ಯಕ್ಷವಾಗಿವೆ ಮತ್ತು ಅವುಗಳಿಗೆ ಬಹುದ್ವಾರಗಳಿವೆ. ಆಗಮಗಳೇ ಅವುಗಳ ಶಾಶ್ವತ ಭಾವಗಳನ್ನು ರೂಪಿಸುತ್ತವೆ.

12064004a ಅಪರೇ ವಚನೈಃ ಪುಣ್ಯೈರ್ವಾದಿನೋ ಲೋಕನಿಶ್ಚಯಮ್।
12064004c ಅನಿಶ್ಚಯಜ್ಞಾ ಧರ್ಮಾಣಾಮದೃಷ್ಟಾಂತೇ ಪರೇ ರತಾಃ।।

ಕೆಲವರು ಲೋಕನಿಶ್ಚಯವನ್ನು ಪುಣ್ಯವೇದವಚನಗಳ ಮೂಲಕ ಹೇಳುತ್ತಾರ. ಇತರರು ನಿಶ್ಚಯಗಳನ್ನು ತೆಗೆದುಕೊಳ್ಳಲಾರದೇ ಧರ್ಮಗಳನ್ನು ಕಂಡುಕೊಳ್ಳುವುದಿಲ್ಲ.

12064005a ಪ್ರತ್ಯಕ್ಷಸುಖಭೂಯಿಷ್ಠಮಾತ್ಮಸಾಕ್ಷಿಕಮಚ್ಚಲಮ್।
12064005c ಸರ್ವಲೋಕಹಿತಂ ಧರ್ಮಂ ಕ್ಷತ್ರಿಯೇಷು ಪ್ರತಿಷ್ಠಿತಮ್।।

ಪ್ರತ್ಯಕ್ಷವೂ, ಅಧಿಕ ಸುಖಮಯವೂ, ಆತ್ಮಸಾಕ್ಷಿಕವೂ, ಕಪಟರಹಿತವೂ ಮತ್ತು ಸರ್ವಲೋಕಹಿತವೂ ಆಗಿರುವ ಧರ್ಮವು ಕ್ಷತ್ರಿಯರಲ್ಲಿ ಪ್ರತಿಷ್ಠಿತಗೊಂಡಿದೆ.

12064006a ಧರ್ಮಾಶ್ರಮವ್ಯವಸಿನಾಂ ಬ್ರಾಹ್ಮಣಾನಾಂ ಯುಧಿಷ್ಠಿರ।
12064006c ಯಥಾ ತ್ರಯಾಣಾಂ ವರ್ಣಾನಾಂ ಸಂಖ್ಯಾತೋಪಶ್ರುತಿಃ ಪುರಾ।
12064006e ರಾಜಧರ್ಮೇಷ್ವನುಪಮಾ ಲೋಕ್ಯಾ ಸುಚರಿತೈರಿಹ।।

ಯುಧಿಷ್ಠಿರ! ಆಶ್ರಮಧರ್ಮಗಳನ್ನು ಆಚರಿಸುತ್ತಿರುವ ಬ್ರಾಹ್ಮಣರ ಪ್ರಕಾರ, ಹಿಂದೆ ಹೇಳಿದಂತೆ ಮೂರು ವರ್ಣಗಳು ಹೇಗೆ ರಾಜಧರ್ಮದಲ್ಲಿ ಲೀನವಾಗುತ್ತವೆಯೋ ಹಾಗೆ ಲೋಕದಲ್ಲಿರುವ ಸುಚರಿತ್ರಗಳೆಲ್ಲವೂ ರಾಜಧರ್ಮದಲ್ಲಿಯೇ ಇರುತ್ತವೆ.

12064007a ಉದಾಹೃತಂ ತೇ ರಾಜೇಂದ್ರ ಯಥಾ ವಿಷ್ಣುಂ ಮಹೌಜಸಮ್।
12064007c ಸರ್ವಭೂತೇಶ್ವರಂ ದೇವಂ ಪ್ರಭುಂ ನಾರಾಯಣಂ ಪುರಾ।
12064007e ಜಗ್ಮುಃ ಸುಬಹವಃ ಶೂರಾ ರಾಜಾನೋ ದಂಡನೀತಯೇ।।

ರಾಜೇಂದ್ರ! ಇದರ ಕುರಿತು ಒಂದು ಉದಾಹರಣೆಯಿದೆ. ಹಿಂದೆ ದಂಡನೀತಿಗಾಗಿ ಅನೇಕ ಶೂರ ರಾಜರು ಸರ್ವಭೂತೇಶ್ವರ ದೇವ ಪ್ರಭು ನಾರಾಯಣನಲ್ಲಿಗೆ ಹೋದರು.

12064008a ಏಕೈಕಮಾತ್ಮನಃ ಕರ್ಮ ತುಲಯಿತ್ವಾಶ್ರಮೇ ಪುರಾ।
12064008c ರಾಜಾನಃ ಪರ್ಯುಪಾತಿಷ್ಠನ್ದೃಷ್ಟಾಂತವಚನೇ ಸ್ಥಿತಾಃ।।

ಅದಕ್ಕೆ ಮೊದಲು ರಾಜರು ವರ್ಣಾಶ್ರಮ ಧರ್ಮಕ್ಕನುಗುಣವಾಗಿ ತಾವು ಮಾಡಿದ ಒಂದೊಂದು ಕರ್ಮವನ್ನೂ ದಂಡನೀತಿಯೊಡನೆ ತುಲನೆ ಮಾಡಿದ್ದರು. ಆದರೆ ಅವರ ಸಂಶಯವು ಪರಿಹಾರವಾಗಿರಲಿಲ್ಲ.

12064009a ಸಾಧ್ಯಾ ದೇವಾ ವಸವಶ್ಚಾಶ್ವಿನೌ ಚ ರುದ್ರಾಶ್ಚ ವಿಶ್ವೇ ಮರುತಾಂ ಗಣಾಶ್ಚ।
12064009c ಸೃಷ್ಟಾಃ ಪುರಾ ಆದಿದೇವೇನ ದೇವಾ ಕ್ಷಾತ್ರೇ ಧರ್ಮೇ ವರ್ತಯಂತೇ ಚ ಸಿದ್ಧಾಃ।।

ಹಿಂದೆ ಆದಿದೇವ ವಿಷ್ಣುವಿನಿಂದ ಸೃಷ್ಟಿಸಲ್ಪಟ್ಟ ಸಾಧ್ಯರು, ದೇವತೆಗಳು, ವಸುಗಳು, ಅಶ್ವಿನರು, ರುದ್ರರು, ವಿಶ್ವೇದೇವರು, ಸಿದ್ಧರು ಮತ್ತು ಮರುದ್ಗಣಗಳು ಕ್ಷಾತ್ರಧರ್ಮದಂತೆಯೇ ನಡೆದುಕೊಳ್ಳುತ್ತಾರೆ.

12064010a ಅತ್ರ ತೇ ವರ್ತಯಿಷ್ಯಾಮಿ ಧರ್ಮಮರ್ಥವಿನಿಶ್ಚಯಮ್।
12064010c ನಿರ್ಮರ್ಯಾದೇ ವರ್ತಮಾನೇ ದಾನವೈಕಾಯನೇ ಕೃತೇ।।
12064010e ಬಭೂವ ರಾಜಾ ರಾಜೇಂದ್ರ ಮಾಂಧಾತಾ ನಾಮ ವೀರ್ಯವಾನ್।।

ರಾಜೇಂದ್ರ! ಅದರ ಕುರಿತಾದ ಧರ್ಮನಿಶ್ಚಯವನ್ನು ನಿನಗೆ ಹೇಳುತ್ತೇನೆ. ಕೃತಯುಗದಲ್ಲಿ ಈ ಅಖಂಡ ವಿಶ್ವವು ದಾನವರ ವಶವಾಗಿ ಮರ್ಯಾದೆಗಳಿಲ್ಲದೇ ನಡೆಯುತ್ತಿರಲು ಮಾಂಧಾತ ಎಂಬ ವೀರ್ಯವಾನ್ ರಾಜನಾದನು.

12064011a ಪುರಾ ವಸುಮತೀಪಾಲೋ ಯಜ್ಞಂ ಚಕ್ರೇ ದಿದೃಕ್ಷಯಾ।
12064011c ಅನಾದಿಮಧ್ಯನಿಧನಂ ದೇವಂ ನಾರಾಯಣಂ ಪ್ರತಿ।।

ಹಿಂದೆ ಆ ವಸುಮತೀಪಾಲಕನು ಅನಾದಿಮಧ್ಯನಿಧನ ದೇವ ನಾರಾಯಣನನ್ನು ಕಾಣಲೋಸುಗ ಒಂದು ಯಜ್ಞವನ್ನು ನಡೆಸಿದನು.

12064012a ಸ ರಾಜಾ ರಾಜಶಾರ್ದೂಲ ಮಾಂಧಾತಾ ಪರಮೇಷ್ಠಿನಃ।
12064012c ಜಗ್ರಾಹ ಶಿರಸಾ ಪಾದೌ ಯಜ್ಞೇ ವಿಷ್ಣೋರ್ಮಹಾತ್ಮನಃ।।

ರಾಜಶಾರ್ದೂಲ! ಆ ಯಜ್ಞದಲ್ಲಿ ರಾಜಾ ಮಾಂಧಾತನು ಪರಮೇಷ್ಠಿ ಮಹಾತ್ಮ ವಿಷ್ಣುವಿನ ಪಾದಗಳಲ್ಲಿ ತನ್ನ ಶಿರಸ್ಸನ್ನಿಟ್ಟನು.

12064013a ದರ್ಶಯಾಮಾಸ ತಂ ವಿಷ್ಣೂ ರೂಪಮಾಸ್ಥಾಯ ವಾಸವಮ್।
12064013c ಸ ಪಾರ್ಥಿವೈರ್ವೃತಃ ಸದ್ಭಿರರ್ಚಯಾಮಾಸ ತಂ ಪ್ರಭುಮ್।।

ಆಗ ವಿಷ್ಣುವು ವಾಸವ ಇಂದ್ರನ ರೂಪವನ್ನು ಧರಿಸಿ ಆ ರಾಜನಿಗೆ ಕಾಣಿಸಿಕೊಂಡನು. ರಾಜನಾದರೋ ಪ್ರಭುವನ್ನು ಉತ್ತಮವಾಗಿ ಅರ್ಚಿಸಿದನು.

12064014a ತಸ್ಯ ಪಾರ್ಥಿವಸಂಘಸ್ಯ ತಸ್ಯ ಚೈವ ಮಹಾತ್ಮನಃ।
12064014c ಸಂವಾದೋಽಯಂ ಮಹಾನಾಸೀದ್ವಿಷ್ಣುಂ ಪ್ರತಿ ಮಹಾದ್ಯುತೇ।।

ಮಹಾದ್ಯುತೇ! ಆಗ ಆ ಪಾರ್ಥಿವಶ್ರೇಷ್ಠ ಮಾಂಧಾತನಿಗೂ ಮಹಾತ್ಮ ಇಂದ್ರನಿಗೂ ವಿಷ್ಣುವಿನ ಕುರಿತಾದ ಈ ಸಂವಾದವು ನಡೆಯಿತು.

12064015 ಇಂದ್ರ ಉವಾಚ
12064015a ಕಿಮಿಷ್ಯತೇ ಧರ್ಮಭೃತಾಂ ವರಿಷ್ಠ ಯದ್ದ್ರಷ್ಟುಕಾಮೋಽಸಿ ತಮಪ್ರಮೇಯಮ್।
12064015c ಅನಂತಮಾಯಾಮಿತಸತ್ತ್ವವೀರ್ಯಂ ನಾರಾಯಣಂ ಹ್ಯಾದಿದೇವಂ ಪುರಾಣಮ್।।

ಇಂದ್ರನು ಹೇಳಿದನು: “ಧರ್ಮಭೃತರಲ್ಲಿ ವರಿಷ್ಠ! ಆದಿದೇವನೂ, ಪುರಾಣನೂ, ಅಮಿತ ಸತ್ತ್ವವೀರ್ಯನೂ, ಅನಂತಮಾಯೆಗಳುಳ್ಳವನೂ, ಅಪ್ರಮೇಯನೂ ಆದ ನಾರಾಯಣನನ್ನು ಕಾಣಲು ಏಕೆ ಬಯಸುತ್ತಿರುವೆ?

12064016a ನಾಸೌ ದೇವೋ ವಿಶ್ವರೂಪೋ ಮಯಾಪಿ ಶಕ್ಯೋ ದ್ರಷ್ಟುಂ ಬ್ರಹ್ಮಣಾ ವಾಪಿ ಸಾಕ್ಷಾತ್।
12064016c ಯೇಽನ್ಯೇ ಕಾಮಾಸ್ತವ ರಾಜನ್ಹೃದಿಸ್ಥಾ ದಾಸ್ಯಾಮಿ ತಾಂಸ್ತ್ವಂ ಹಿ ಮರ್ತ್ಯೇಷು ರಾಜಾ।।

ಆ ದೇವ ವಿಶ್ವರೂಪನನ್ನು ನಾನಾಗಲೀ ಸಾಕ್ಷಾತ್ ಬ್ರಹ್ಮನೇ ಆಗಲಿ ನೋಡಲು ಶಕ್ಯರಿಲ್ಲ. ರಾಜನ್! ಮನುಷ್ಯರಲ್ಲಿ ರಾಜನಾಗಿರುವ ನಿನಗೆ ಅನ್ಯ ಕಾಮನೆಗಳು ಹೃದಯಸ್ಥವಾಗಿದ್ದರೆ ಅವುಗಳನ್ನು ನಾನೇ ದಯಪಾಲಿಸುತ್ತೇನೆ.

12064017a ಸತ್ಯೇ ಸ್ಥಿತೋ ಧರ್ಮಪರೋ ಜಿತೇಂದ್ರಿಯಃ ಶೂರೋ ದೃಢಂ ಪ್ರೀತಿರತಃ ಸುರಾಣಾಮ್।
12064017c ಬುದ್ಧ್ಯಾ ಭಕ್ತ್ಯಾ ಚೋತ್ತಮಶ್ರದ್ಧಯಾ ಚ ತತಸ್ತೇಽಹಂ ದದ್ಮಿ ವರಂ ಯಥೇಷ್ಟಮ್।।

ಸತ್ಯನಿಷ್ಠನಾಗಿರುವ, ಧರ್ಮಪರನೂ ಜಿತೇಂದ್ರಿಯನೂ ಆಗಿರುವ, ಶೂರನೂ ದೃಢನೂ, ಸುರರ ಪ್ರೀತಿರತನೂ ಆಗಿರುವ, ಉತ್ತಮ ಬುದ್ಧಿ-ಭಕ್ತಿ-ಶ್ರದ್ಧೆಗಳಿರುವ ನಿನಗೆ ಇಷ್ಟವಾದ ವರವನ್ನು ನಾನೇ ನೀಡುತ್ತೇನೆ.”

12064018 ಮಾಂಧಾತೋವಾಚ 12064018a ಅಸಂಶಯಂ ಭಗವನ್ನಾದಿದೇವಂ ದ್ರಕ್ಷ್ಯಾಮ್ಯಹಂ ಶಿರಸಾಹಂ ಪ್ರಸಾದ್ಯ।
12064018c ತ್ಯಕ್ತ್ವಾ ಭೋಗಾನ್ಧರ್ಮಕಾಮೋ ಹ್ಯರಣ್ಯಮ್ ಇಚ್ಚೇ ಗಂತುಂ ಸತ್ಪಥಂ ಲೋಕಜುಷ್ಟಮ್।।

ಮಾಂಧಾತನು ಹೇಳಿದನು: “ಭಗವನ್! ನಿನ್ನ ಅಡಿದಾವರೆಗಳಲ್ಲಿಯೇ ಶಿರಸ್ಸನ್ನಿಟ್ಟು ಪ್ರಸನ್ನಗೊಳಿಸಿ ನಾನು ಆದಿದೇವನನ್ನು ಕಾಣುತ್ತೇನೆ. ಇದರಲ್ಲಿ ಸಂದೇಹವಿಲ್ಲ. ಭೋಗಗಳನ್ನು ತ್ಯಜಿಸಿ ಧರ್ಮಕಾಮನಾಗಿ ನಾನು ಲೋಕದ ಸತ್ಪುರುಷರ ಅಂತಿಮ ಮಾರ್ಗವಾದ ಅರಣ್ಯವನ್ನು ಸೇರಲು ಬಯಸುತ್ತೇನೆ.

12064019a ಕ್ಷಾತ್ರಾದ್ಧರ್ಮಾದ್ವಿಪುಲಾದಪ್ರಮೇಯಾಲ್ ಲೋಕಾಃ ಪ್ರಾಪ್ತಾಃ ಸ್ಥಾಪಿತಂ ಸ್ವಂ ಯಶಶ್ಚ।
12064019c ಧರ್ಮೋ ಯೋಽಸಾವಾದಿದೇವಾತ್ಪ್ರವೃತ್ತೋ ಲೋಕಜ್ಯೇಷ್ಠಸ್ತಂ ನ ಜಾನಾಮಿ ಕರ್ತುಮ್।।

ಕ್ಷಾತ್ರಧರ್ಮದಿಂದ ವಿಪುಲ ಅಪ್ರಮೇಯ ಲೋಕಗಳನ್ನು ಪಡೆದುಕೊಂಡಿದ್ದೇನೆ ಮತ್ತು ನನ್ನ ಯಶಸ್ಸನ್ನೂ ಲೋಕಗಳಲ್ಲಿ ಸ್ಥಾಪಿಸಿದ್ದೇನೆ. ಆದರೆ ಆ ಲೋಕಜ್ಯೇಷ್ಠ ಆದಿದೇವನಿಂದ ಪ್ರವೃತ್ತವಾದ ಮೋಕ್ಷಧರ್ಮವನ್ನು ನಡೆಸಲು ನನಗೆ ತಿಳಿದಿಲ್ಲ.”

12064020 ಇಂದ್ರ ಉವಾಚ
12064020a ಅಸೈನಿಕೋಽಧರ್ಮಪರಶ್ಚರೇಥಾಃ ಪರಾಂ ಗತಿಂ ಲಪ್ಸ್ಯಸೇ ಚಾಪ್ರಮತ್ತಃ। 2 12064020c ಕ್ಷಾತ್ರೋ ಧರ್ಮೋ ಹ್ಯಾದಿದೇವಾತ್ಪ್ರವೃತ್ತಃ ಪಶ್ಚಾದನ್ಯೇ ಶೇಷಭೂತಾಶ್ಚ ಧರ್ಮಾಃ।।

ಇಂದ್ರನು ಹೇಳಿದನು: “ಕ್ಷಾತ್ರಧರ್ಮವು ಆದಿದೇವನಿಂದಲೇ ಪ್ರವೃತ್ತಗೊಂಡಿತು. ಅದರ ನಂತರವೇ ಉಳಿದ ಅನ್ಯ ಧರ್ಮಗಳು ಹುಟ್ಟಿಕೊಂಡವು.

12064021a ಶೇಷಾಃ ಸೃಷ್ಟಾ ಹ್ಯಂತವಂತೋ ಹ್ಯನಂತಾಃ ಸುಪ್ರಸ್ಥಾನಾಃ ಕ್ಷತ್ರಧರ್ಮಾವಿಶಿಷ್ಟಾಃ।
12064021c ಅಸ್ಮಿನ್ಧರ್ಮೇ ಸರ್ವಧರ್ಮಾಃ ಪ್ರವಿಷ್ಟಾಸ್ ತಸ್ಮಾದ್ಧರ್ಮಂ ಶ್ರೇಷ್ಠಮಿಮಂ ವದಂತಿ।।

ಅನಂತರ ಹುಟ್ಟಿದ ಶೇಷಧರ್ಮಗಳು ಕಾಲಾನುಗುಣವಾಗಿ ಕ್ಷಯಿಸುತ್ತವೆ. ಉತ್ತಮ ಸಂಪ್ರದಾಯಗಳಿರುವ ಕ್ಷತ್ರಧರ್ಮವೇ ವಿಶಿಷ್ಠವಾದುದು. ಈ ಧರ್ಮದಲ್ಲಿ ಸರ್ವಧರ್ಮಗಳೂ ಸೇರಿಕೊಂಡಿವೆ. ಆದುದರಿಂದ ಇದನ್ನು ಶ್ರೇಷ್ಠಧರ್ಮವೆಂದು ಹೇಳುತ್ತಾರೆ.

12064022a ಕರ್ಮಣಾ ವೈ ಪುರಾ ದೇವಾ ಋಷಯಶ್ಚಾಮಿತೌಜಸಃ।
12064022c ತ್ರಾತಾಃ ಸರ್ವೇ ಪ್ರಮಥ್ಯಾರೀನ್ಕ್ಷತ್ರಧರ್ಮೇಣ ವಿಷ್ಣುನಾ।।

ಹಿಂದೆ ಅಮಿತೌಜಸ ವಿಷ್ಣುವು ಕ್ಷತ್ರಧರ್ಮವನ್ನನುಸರಿಸಿಯೇ ಅರಿಗಳನ್ನು ಸದೆಬಡಿದು ಸರ್ವ ದೇವತೆಗಳನ್ನೂ ಋಷಿಗಳನ್ನೂ ಸಂರಕ್ಷಿಸುವ ಕಾರ್ಯವನ್ನೆಸಗಿದನು.

12064023a ಯದಿ ಹ್ಯಸೌ ಭಗವಾನ್ನಾಹನಿಷ್ಯದ್ ರಿಪೂನ್ಸರ್ವಾನ್ವಸುಮಾನಪ್ರಮೇಯಃ।
12064023c ನ ಬ್ರಾಹ್ಮಣಾ ನ ಚ ಲೋಕಾದಿಕರ್ತಾ ನ ಸದ್ಧರ್ಮಾ ನಾದಿಧರ್ಮಾ ಭವೇಯುಃ।।

ಒಂದುವೇಳೆ ಆ ವಸುಮಾನ ಅಪ್ರಮೇಯ ಭಗವಂತನು ರಿಪುಗಳೆಲ್ಲರನ್ನೂ ಸಂಹರಿಸದೇ ಇದ್ದಿದ್ದರೆ ಲೋಕದ ಆದಿಕರ್ತ ಬ್ರಹ್ಮನಾಗಲೀ, ಬ್ರಾಹ್ಮಣರಾಗಲೀ, ಸದ್ಧರ್ಮವಾಗಲೀ ಆದಿಧರ್ಮವಾಗಲೀ ಇರುತ್ತಿರಲಿಲ್ಲ.

12064024a ಇಮಾಮುರ್ವೀಂ ನ ಜಯೇದ್ವಿಕ್ರಮೇಣ ದೇವಶ್ರೇಷ್ಠೋಽಸೌ ಪುರಾ ಚೇದಮೇಯಃ।
12064024c ಚಾತುರ್ವರ್ಣ್ಯಂ ಚಾತುರಾಶ್ರಮ್ಯಧರ್ಮಾಃ ಸರ್ವೇ ನ ಸ್ಯುರ್ಬ್ರಹ್ಮಣೋ ವೈ ವಿನಾಶಾತ್।।

ದೇವಶ್ರೇಷ್ಠನು ಹಿಂದೆ ತನ್ನ ವಿಕ್ರಮದಿಂದ ಈ ಉರ್ವಿಯನ್ನು ಗೆಲ್ಲದೇ ಇದ್ದಿದ್ದರೆ ಬ್ರಾಹ್ಮಣರ ವಿನಾಶದಿಂದಾಗಿ ಚಾತುರ್ವರ್ಣ ಧರ್ಮಗಳಾಗಲೀ ಚತುರಾಶ್ರಮ ಧರ್ಮಗಳಾಗಲೀ ಯಾವುದೂ ಇರುತ್ತಿರಲಿಲ್ಲ.

12064025a ದೃಷ್ಟಾ ಧರ್ಮಾಃ ಶತಧಾ ಶಾಶ್ವತೇನ ಕ್ಷಾತ್ರೇಣ ಧರ್ಮೇಣ ಪುನಃ ಪ್ರವೃತ್ತಾಃ। 3 12064025c ಯುಗೇ ಯುಗೇ ಹ್ಯಾದಿಧರ್ಮಾಃ ಪ್ರವೃತ್ತಾ ಲೋಕಜ್ಯೇಷ್ಠಂ ಕ್ಷತ್ರಧರ್ಮಂ ವದಂತಿ।।

ನೂರಾರು ಚೂರುಗಳಾಗಿ ಹೋಗಿದ್ದ ಧರ್ಮಗಳು ಶಾಶ್ವತ ಕ್ಷಾತ್ರಧರ್ಮದಿಂದ ಪುನಃ ಪ್ರವೃತ್ತಗೊಂಡಿರುವುದನ್ನು ನೋಡಿದ್ದೇವೆ. ಯುಗಯುಗಗಳಲ್ಲಿಯೂ ಈ ಆದಿಧರ್ಮ ಕ್ಷತ್ರಿಯಧರ್ಮವು ಹುಟ್ಟುತ್ತದೆ. ಆದುದರಿಂದ ಲೋಕದಲ್ಲಿ ಕ್ಷತ್ರಧರ್ಮವೇ ಜ್ಯೇಷ್ಠವೆಂದು ಹೇಳುತ್ತಾರೆ.

12064026a ಆತ್ಮತ್ಯಾಗಃ ಸರ್ವಭೂತಾನುಕಂಪಾ ಲೋಕಜ್ಞಾನಂ ಮೋಕ್ಷಣಂ ಪಾಲನಂ ಚ।
12064026c ವಿಷಣ್ಣಾನಾಂ ಮೋಕ್ಷಣಂ ಪೀಡಿತಾನಾಂ ಕ್ಷಾತ್ರೇ ಧರ್ಮೇ ವಿದ್ಯತೇ ಪಾರ್ಥಿವಾನಾಮ್।।

ಆತ್ಮತ್ಯಾಗ, ಸರ್ವಭೂತಗಳ ಮೇಲಿನ ಅನುಕಂಪ, ಲೋಕಜ್ಞಾನ, ಪೀಡಿತರನ್ನು ಪೀಡೆಯಿಂದ ಬಿಡುಗಡೆಗೊಳಿಸುವುದು, ಇವು ಪಾರ್ಥಿವರ ಕ್ಷಾತ್ರಧರ್ಮವೆಂದು ತಿಳಿಯಲ್ಪಟ್ಟಿವೆ.

12064027a ನಿರ್ಮರ್ಯಾದಾಃ ಕಾಮಮನ್ಯುಪ್ರವೃತ್ತಾ ಭೀತಾ ರಾಜ್ಞೋ ನಾಧಿಗಚ್ಚಂತಿ ಪಾಪಮ್।
12064027c ಶಿಷ್ಟಾಶ್ಚಾನ್ಯೇ ಸರ್ವಧರ್ಮೋಪಪನ್ನಾಃ ಸಾಧ್ವಾಚಾರಾಃ ಸಾಧು ಧರ್ಮಂ ಚರಂತಿ।।

ಮರ್ಯಾದೆಯಿಲ್ಲದಿರುವವರು ಮತ್ತು ಕಾಮ-ಕೋಪ ಪ್ರವೃತ್ತರಾದವರು ರಾಜನ ಭೀತಿಯಿಂದ ಪಾಪವನ್ನೆಸಗುವುದಿಲ್ಲ. ಅನ್ಯ ಶಿಷ್ಟಾಚಾರಿಗಳು ಸರ್ವಧರ್ಮ ಸಂಪನ್ನರಾಗಿ ಉತ್ತಮ ಆಚಾರ, ಸಾಧುಧರ್ಮಗಳನ್ನು ನಡೆಸುತ್ತಾರೆ.

12064028a ಪುತ್ರವತ್ಪರಿಪಾಲ್ಯಾನಿ ಲಿಂಗಧರ್ಮೇಣ4 ಪಾರ್ಥಿವೈಃ।
12064028c ಲೋಕೇ ಭೂತಾನಿ ಸರ್ವಾಣಿ ವಿಚರಂತಿ ನ ಸಂಶಯಃ।।

ಪಾರ್ಥಿವರು ಅವರ ಲಿಂಗಧರ್ಮದಿಂದ ಪ್ರಜೆಗಳನ್ನು ಪುತ್ರರಂತೆ ಪಾಲಿಸುತ್ತಾರೆ. ಆದುದರಿಂದಲೇ ಲೋಕದಲ್ಲಿ ಪ್ರಾಣಿಗಳೆಲ್ಲವೂ ನಿರ್ಭಯದಿಂದ ಸಂಚರಿಸುತ್ತವೆ ಎನ್ನುವುದರಲ್ಲಿ ಸಂಶಯವೇ ಇಲ್ಲ.

12064029a ಸರ್ವಧರ್ಮಪರಂ ಕ್ಷತ್ರಂ ಲೋಕಜ್ಯೇಷ್ಠಂ ಸನಾತನಮ್।
12064029c ಶಶ್ವದಕ್ಷರಪರ್ಯಂತಮಕ್ಷರಂ ಸರ್ವತೋಮುಖಮ್।।

ಸರ್ವಧರ್ಮಗಳಿಗೂ ಶ್ರೇಷ್ಠವಾದುದು ಕ್ಷತ್ರಿಯಧರ್ಮ. ಇದು ಲೋಕದಲ್ಲಿಯೇ ಹಿರಿಯದು. ಸನಾತನವು. ಇದು ನಿತ್ಯ, ಅವಿನಾಶಿ, ಮೋಕ್ಷದಾಯಕ ಮತ್ತು ಸರ್ವತೋಮುಖ ಧರ್ಮ.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ವರ್ಣಾಶ್ರಮಧರ್ಮಕಥನೇ ಚತುಃಷಷ್ಠಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ವರ್ಣಾಶ್ರಮಧರ್ಮಕಥನ ಎನ್ನುವ ಅರವತ್ನಾಲ್ಕನೇ ಅಧ್ಯಾಯವು.


  1. ನಿರಾಶಿಷೋ ಜೀವಲೋಕಾಃ ಕ್ಷತ್ರಧರ್ಮೇಽವ್ಯವಸ್ಥಿತೇ। ಎಂಬ ಪಾಠಾಂತರವಿದೆ (ಭಾರತ ದರ್ಶನ). ↩︎

  2. ಅಸೈನಿಕಾ ಧರ್ಮಪರಾಶ್ಚ ಧರ್ಮೇ ಪರಾಂ ಗತಿಂ ನ ನಯಂತೇ ಹ್ಯಯುಕ್ತಮ್। ಅರ್ಥಾತ್ ಸೈನ್ಯಗಳಿಲ್ಲದ ವಾನಪ್ರಸ್ಥಾಶ್ರಮ ಧರ್ಮವನ್ನು ಅನುಸರಿಸುವ ಕ್ಷತ್ರಿಯನು ಪರಮ ಗತಿಯನ್ನು ಹೊಂದುವುದಿಲ್ಲ ಎನ್ನುವುದು ಯುಕ್ತವಲ್ಲ ಎಂಬ ಪಾಠಾಂತರವಿದೆ. ↩︎

  3. ನಷ್ಟಾ ಧರ್ಮಾಃ ಶತಧಾ ಶಾಶ್ವತಾಸ್ತೇ ಕ್ಷಾತ್ರೇಣ ಧರ್ಮೇಣ ಪುನಃ ಪ್ರವೃದ್ಧಾಃ। ಅರ್ಥಾತ್ ಧರ್ಮಗಳು ನೂರಾರು ಬಾರಿ ವಿನಷ್ಟವಾಗಿವೆ. ಆದರೆ ಕ್ಷಾತ್ರಧರ್ಮದಿಂದ ಅವುಗಳ ಪುನರುದ್ಧಾರವೂ ಆಗಿದೆ ಎಂಬ ಪಾಠಾಂತರವಿದೆ. ↩︎

  4. ರಾಜಧರ್ಮೇಣ ಎಂಬ ಪಾಠಾಂತರವಿದೆ. ↩︎