059 ಸೂತ್ರಾಧ್ಯಾಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ರಾಜಧರ್ಮ ಪರ್ವ

ಅಧ್ಯಾಯ 59

ಸಾರ

ಸೂತ್ರಾಧ್ಯಾಯ (1-141).

12059001 ವೈಶಂಪಾಯನ ಉವಾಚ।
12059001a ತತಃ ಕಾಲ್ಯಂ ಸಮುತ್ಥಾಯ ಕೃತಪೌರ್ವಾಹ್ಣಿಕಕ್ರಿಯಾಃ।
12059001c ಯಯುಸ್ತೇ ನಗರಾಕಾರೈ ರಥೈಃ ಪಾಂಡವಯಾದವಾಃ।।

ವೈಶಂಪಾಯನನು ಹೇಳಿದನು: “ಅನಂತರ ಬೆಳಗಾಗುತ್ತಲೇ ಎದ್ದು ಪೂರ್ವಾಹ್ಣಿಕಕ್ರಿಯೆಗಳನ್ನು ಮಾಡಿ ಪಾಂಡವ-ಯಾದವರು ನಗರಾಕಾರದ ರಥಗಳಲ್ಲಿ ಕುಳಿತು ಹೊರಟರು.

12059002a ಪ್ರಪದ್ಯ ಚ ಕುರುಕ್ಷೇತ್ರಂ ಭೀಷ್ಮಮಾಸಾದ್ಯ ಚಾನಘಮ್।
12059002c ಸುಖಾಂ ಚ ರಜನೀಂ ಪೃಷ್ಟ್ವಾ ಗಾಂಗೇಯಂ ರಥಿನಾಂ ವರಮ್।।

ಕುರುಕ್ಷೇತ್ರವನ್ನು ತಲುಪಿ ಅನಘ ಭೀಷ್ಮನ ಬಳಿಸಾರಿ ರಥಿಗಳಲ್ಲಿ ಶ್ರೇಷ್ಠ ಗಾಂಗೇಯನನ್ನು “ರಾತ್ರಿಯು ಸುಖವಾಗಿತ್ತೇ?” ಎಂದು ಪ್ರಶ್ನಿಸಿದರು.

12059003a ವ್ಯಾಸಾದೀನಭಿವಾದ್ಯರ್ಷೀನ್ಸರ್ವೈಸ್ತೈಶ್ಚಾಭಿನಂದಿತಾಃ।
12059003c ನಿಷೇದುರಭಿತೋ ಭೀಷ್ಮಂ ಪರಿವಾರ್ಯ ಸಮಂತತಃ।।

ವ್ಯಾಸಾದಿ ಋಷಿಗಳಿಗೆ ನಮಸ್ಕರಿಸಿ, ಅವರೆಲ್ಲರಿಂದಲೂ ಅಭಿನಂದಿತರಾಗಿ ಭೀಷ್ಮನ ಸುತ್ತಲೂ ಕುಳಿತುಕೊಂಡರು.

12059004a ತತೋ ರಾಜಾ ಮಹಾತೇಜಾ ಧರ್ಮರಾಜೋ ಯುಧಿಷ್ಠಿರಃ।
12059004c ಅಬ್ರವೀತ್ಪ್ರಾಂಜಲಿರ್ಭೀಷ್ಮಂ ಪ್ರತಿಪೂಜ್ಯಾಭಿವಾದ್ಯ ಚ।।

ಆಗ ಮಹಾತೇಜಸ್ವೀ ರಾಜಾ ಧರ್ಮರಾಜ ಯುಧಿಷ್ಠಿರನು ಕೈಮುಗಿದು ಭೀಷ್ಮನನ್ನು ಪ್ರಶ್ನಿಸಿದನು:

12059005a ಯ ಏಷ ರಾಜಾ-ರಾಜೇತಿ ಶಬ್ದಶ್ಚರತಿ ಭಾರತ।
12059005c ಕಥಮೇಷ ಸಮುತ್ಪನ್ನಸ್ತನ್ಮೇ ಬ್ರೂಹಿ ಪಿತಾಮಹ।।

“ಭಾರತ! ಪಿತಾಮಹ! ಈ ರಾಜಾ-ರಾಜಾ ಎನ್ನುವ ಶಬ್ಧವು ಬಳಕೆಯಲ್ಲಿದೆಯಲ್ಲಾ ಆ ಶಬ್ಧವು ಹೇಗೆ ಹುಟ್ಟಿಕೊಂಡಿತು ಎನ್ನುವುದನ್ನು ನನಗೆ ಹೇಳು!

12059006a ತುಲ್ಯಪಾಣಿಶಿರೋಗ್ರೀವಸ್ತುಲ್ಯಬುದ್ಧೀಂದ್ರಿಯಾತ್ಮಕಃ।
12059006c ತುಲ್ಯದುಃಖಸುಖಾತ್ಮಾ ಚ ತುಲ್ಯಪೃಷ್ಠಭುಜೋದರಃ।।
12059007a ತುಲ್ಯಶುಕ್ರಾಸ್ಥಿಮಜ್ಜಶ್ಚ ತುಲ್ಯಮಾಂಸಾಸೃಗೇವ ಚ।
12059007c ನಿಃಶ್ವಾಸೋಚ್ಚ್ವಾಸತುಲ್ಯಶ್ಚ ತುಲ್ಯಪ್ರಾಣಶರೀರವಾನ್।।
12059008a ಸಮಾನಜನ್ಮಮರಣಃ ಸಮಃ ಸರ್ವಗುಣೈರ್ನೃಣಾಮ್।
12059008c ವಿಶಿಷ್ಟಬುದ್ಧೀನ್ಶೂರಾಂಶ್ಚ ಕಥಮೇಕೋಽಧಿತಿಷ್ಠತಿ।।

ಒಬ್ಬನೇ ಹೇಗೆ ಬುದ್ಧಿಯಲ್ಲಿ ವಿಶಿಷ್ಠರಾಗಿರುವ, ಶೂರರಾಗಿರುವ, ತನ್ನಂತೆಯೇ ಕೈಗಳು, ತಲೆ, ಕುತ್ತಿಗೆಗಳಿರುವ, ತನ್ನದಂಥಹ ಬುದ್ಧಿ-ಇಂದ್ರಿಯಗಳೂ ಇರುವ, ತನ್ನಂತೆಯೇ ದುಃಖ-ಸುಖಗಳನ್ನು ಅನುಭವಿಸುವ, ತನ್ನಂತೆಯೇ ಬೆನ್ನು-ಭುಜ-ಉದರಗಳನ್ನು ಹೊಂದಿರುವ; ತನ್ನಂತೆಯೇ ವೀರ್ಯ-ಮೂಳೆ-ಮಜ್ಜೆಗಳನ್ನು ಹೊಂದಿರುವ, ತನ್ನಂತೆಯೇ ಮಾಂಸ-ರಕ್ತಗಳಿರುವ, ತನ್ನಂತೆಯೇ ಉಚ್ಛಾಸ-ನಿಃಶ್ವಾಸಗಳಿರುವ, ತನ್ನಂತೆಯೇ ಪ್ರಾಣ-ಶರೀರಗಳನ್ನು ಪಡೆದಿರುವ, ಜನ್ಮ-ಮರಣಗಳಲ್ಲಿಯೂ ತನಗೆ ಸಮಾನರಾಗಿರುವ, ಸರ್ವಗುಣಗಳಲ್ಲಿಯೂ ತನ್ನಂತೆಯೇ ಇರುವ ಎಲ್ಲ ಮನುಷ್ಯರನ್ನೂ ಆಳುತ್ತಾನೆ?

12059009a ಕಥಮೇಕೋ ಮಹೀಂ ಕೃತ್ಸ್ನಾಂ ವೀರಶೂರಾರ್ಯಸಂಕುಲಾಮ್।
12059009c ರಕ್ಷತ್ಯಪಿ ಚ ಲೋಕೋಽಸ್ಯ ಪ್ರಸಾದಮಭಿವಾಂಚತಿ।।

ಒಬ್ಬನೇ ವೀರ-ಶೂರ-ಆರ್ಯ ಸಂಕುಲಗಳಿಂದ ಕೂಡಿರುವ ಈ ಇಡೀ ಮಹಿಯನ್ನು ರಕ್ಷಿಸುವವನಾದರೂ ಈ ಲೋಕದ ಜನರ ಮೆಚ್ಚುಗೆಯನ್ನು ಏಕೆ ಬಯಸುತ್ತಿರುತ್ತಾನೆ?

12059010a ಏಕಸ್ಯ ಚ ಪ್ರಸಾದೇನ ಕೃತ್ಸ್ನೋ ಲೋಕಃ ಪ್ರಸೀದತಿ।
12059010c ವ್ಯಾಕುಲೇನಾಕುಲಃ ಸರ್ವೋ ಭವತೀತಿ ವಿನಿಶ್ಚಯಃ।।

ಅವನೊಬ್ಬನು ಪ್ರಸನ್ನನಾಗಿದ್ದರೆ ಲೋಕವೆಲ್ಲವೂ ಪ್ರಸನ್ನವಾಗಿರುತ್ತದೆ. ಅವನೇನಾದರೂ ವ್ಯಾಕುಲಗೊಂಡರೆ ಸರ್ವವೂ ವ್ಯಾಕುಲಗೊಳ್ಳುತ್ತದೆ. ಇದು ಹೀಗೆಯೇ ನಿಶ್ಚಿತವಾಗಿದೆ.

12059011a ಏತದಿಚ್ಚಾಮ್ಯಹಂ ಸರ್ವಂ ತತ್ತ್ವೇನ ಭರತರ್ಷಭ।
12059011c ಶ್ರೋತುಂ ತನ್ಮೇ ಯಥಾತತ್ತ್ವಂ ಪ್ರಬ್ರೂಹಿ ವದತಾಂ ವರ।।

ಭರತರ್ಷಭ! ಮಾತನಾಡುವವರಲ್ಲಿ ಶ್ರೇಷ್ಠ! ಈ ವಿಷಯವನ್ನು ಯಥಾವತ್ತಾಗಿ ನಿನ್ನಿಂದ ಕೇಳ ಬಯಸುತ್ತೇನೆ. ಇದನ್ನು ಸಂಪೂರ್ಣವಾಗಿ ಯಥಾತತ್ತ್ವವಾಗಿ ಹೇಳು.

12059012a ನೈತತ್ಕಾರಣಮಲ್ಪಂ ಹಿ ಭವಿಷ್ಯತಿ ವಿಶಾಂ ಪತೇ।
12059012c ಯದೇಕಸ್ಮಿನ್ಜಗತ್ಸರ್ವಂ ದೇವವದ್ಯಾತಿ ಸಂನತಿಮ್।।

ವಿಶಾಂಪತೇ! ಒಬ್ಬನನ್ನೇ ಈ ಸರ್ವ ಜಗತ್ತೂ ದೇವರಿಗೆ ಸಮಾನನಾಗಿ ಕಂಡುಕೊಂಡು ತಲೆತಗ್ಗಿಸುತ್ತದೆಯೆಂದರೆ ಇದಕ್ಕೆ ಕಾರಣ ಅಲ್ಪವಾಗಿರಲಾರದು!”

12059013 ಭೀಷ್ಮ ಉವಾಚ।
12059013a ನಿಯತಸ್ತ್ವಂ ನರಶ್ರೇಷ್ಠ ಶೃಣು ಸರ್ವಮಶೇಷತಃ।
12059013c ಯಥಾ ರಾಜ್ಯಂ ಸಮುತ್ಪನ್ನಮಾದೌ ಕೃತಯುಗೇಽಭವತ್।।

ಭೀಷ್ಮನು ಹೇಳಿದನು: “ನರಶ್ರೇಷ್ಠ! ಕೃತಯುಗದಲ್ಲಿ ಮೊಟ್ಟಮೊದಲನೆಯದಾಗಿ ರಾಜ ಮತ್ತು ರಾಜ್ಯವು ಹೇಗೆ ಹುಟ್ಟಿಕೊಂಡವೆನ್ನುವುದನ್ನು ಎಲ್ಲವನ್ನೂ ಸಂಪೂರ್ಣವಾಗಿ, ನಿಯತನಾಗಿ ಕೇಳು.

12059014a ನೈವ ರಾಜ್ಯಂ ನ ರಾಜಾಸೀನ್ನ ದಂಡೋ ನ ಚ ದಾಂಡಿಕಃ।
12059014c ಧರ್ಮೇಣೈವ ಪ್ರಜಾಃ ಸರ್ವಾ ರಕ್ಷಂತಿ ಚ ಪರಸ್ಪರಮ್।।

ಆಗ ರಾಜ್ಯವೆಂಬುದೂ ಇರಲಿಲ್ಲ; ರಾಜನೆನ್ನುವವನೂ ಇರಲಿಲ್ಲ. ದಂಡವೂ ಇರಲಿಲ್ಲ; ದಂಡಿಸುವವನೂ ಇರಲಿಲ್ಲ. ಎಲ್ಲ ಪ್ರಜೆಗಳೂ ಧರ್ಮದಿಂದ ಪರಸ್ಪರರನ್ನು ರಕ್ಷಿಸಿಕೊಂಡಿದ್ದರು.

12059015a ಪಾಲಯಾನಾಸ್ತಥಾನ್ಯೋನ್ಯಂ ನರಾ ಧರ್ಮೇಣ ಭಾರತ।
12059015c ಖೇದಂ ಪರಮಮಾಜಗ್ಮುಸ್ತತಸ್ತಾನ್ಮೋಹ ಆವಿಶತ್।।

ಭಾರತ! ಹೀಗೆ ನರಧರ್ಮದ ಪ್ರಕಾರ ಅನ್ಯೋನ್ಯರನ್ನು ಪಾಲಿಸುತ್ತಿರಲು, ಅವರಲ್ಲಿ ಪರಮ ಖೇದವುಂಟಾಯಿತು ಮತ್ತು ಮೋಹವು ಆವರಿಸಿತು.

12059016a ತೇ ಮೋಹವಶಮಾಪನ್ನಾ ಮಾನವಾ ಮನುಜರ್ಷಭ।
12059016c ಪ್ರತಿಪತ್ತಿವಿಮೋಹಾಚ್ಚ ಧರ್ಮಸ್ತೇಷಾಮನೀನಶತ್।।

ಮನುಜರ್ಷಭ! ಮೋಹವಶಕ್ಕೆ ಸಿಲುಕಿದ ಆ ಮಾನವರಲ್ಲಿ ಕರ್ತವ್ಯಪ್ರಜ್ಞೆಯೇ ದೂರವಾಯಿತು ಮತ್ತು ಧರ್ಮಾಚರಣೆಯು ಅಳಿದುಹೋಯಿತು.

12059017a ನಷ್ಟಾಯಾಂ ಪ್ರತಿಪತ್ತೌ ತು ಮೋಹವಶ್ಯಾ ನರಾಸ್ತದಾ।
12059017c ಲೋಭಸ್ಯ ವಶಮಾಪನ್ನಾಃ ಸರ್ವೇ ಭಾರತಸತ್ತಮ।।

ಭಾರತಸತ್ತಮ! ಮೋಹವಶರಾಗಿ ಕರ್ತ್ಯವ್ಯವಿವೇಕವನ್ನೇ ಕಳೆದುಕೊಂಡಿದ್ದ ಮನುಷ್ಯರು ಎಲ್ಲರೂ ಲೋಭದ ವಶರಾದರು.

12059018a ಅಪ್ರಾಪ್ತಸ್ಯಾಭಿಮರ್ಶಂ ತು ಕುರ್ವಂತೋ ಮನುಜಾಸ್ತತಃ।
12059018c ಕಾಮೋ ನಾಮಾಪರಸ್ತತ್ರ ಸಮಪದ್ಯತ ವೈ ಪ್ರಭೋ।।

ಪ್ರಭೋ! ದೊರಕದೇ ಇರುವ ವಸ್ತುಗಳನ್ನು ಪಡೆಯಲು ಪ್ರಯತ್ನಿಸುತ್ತಿರುವ ಆ ಮನುಷ್ಯರನ್ನು ಆಗ ಕಾಮ ಎಂಬ ಹೆಸರಿನ ಇನ್ನೊಂದು ಶತ್ರುವು ಆಕ್ರಮಿಸಿತು.

12059019a ತಾಂಸ್ತು ಕಾಮವಶಂ ಪ್ರಾಪ್ತಾನ್ರಾಗೋ ನಾಮ ಸಮಸ್ಪೃಶತ್।
12059019c ರಕ್ತಾಶ್ಚ ನಾಭ್ಯಜಾನಂತ ಕಾರ್ಯಾಕಾರ್ಯಂ ಯುಧಿಷ್ಠಿರ।।

ಕಾಮವಶರಾದ ಅವರನ್ನು ರಾಗ ಎನ್ನುವ ಇನ್ನೊಂದು ಭೂತವೂ ಆವರಿಸಿಕೊಂಡಿತು. ಯುಧಿಷ್ಠಿರ! ರಾಗವಶರಾದ ಅವರು ಕಾರ್ಯ-ಅಕಾರ್ಯಗಳನ್ನು ತಿಳಿಯುತ್ತಿರಲಿಲ್ಲ.

12059020a ಅಗಮ್ಯಾಗಮನಂ ಚೈವ ವಾಚ್ಯಾವಾಚ್ಯಂ ತಥೈವ ಚ।
12059020c ಭಕ್ಷ್ಯಾಭಕ್ಷ್ಯಂ ಚ ರಾಜೇಂದ್ರ ದೋಷಾದೋಷಂ ಚ ನಾತ್ಯಜನ್।।

ರಾಜೇಂದ್ರ! ಯಾರೊಡನೆ ಸೇರಬಾರದೋ ಅವರೊಡನೆ ಸೇರುತ್ತಿದ್ದರು; ಏನನ್ನು ಮಾತನಾಡಬಾರದೋ ಅದನ್ನೇ ಮಾತನಾಡುತ್ತಿದ್ದರು, ಮತ್ತು ದೋಷ-ಅದೋಷಗಳು, ಭಕ್ಷ್ಯ-ಅಭಕ್ಷ್ಯಗಳು ಯಾವುದನ್ನೂ ತಿರಸ್ಕರಿಸುತ್ತಿರಲಿಲ್ಲ.

12059021a ವಿಪ್ಲುತೇ ನರಲೋಕೇಽಸ್ಮಿಂಸ್ತತೋ ಬ್ರಹ್ಮ ನನಾಶ ಹ।
12059021c ನಾಶಾಚ್ಚ ಬ್ರಹ್ಮಣೋ ರಾಜನ್ಧರ್ಮೋ ನಾಶಮಥಾಗಮತ್।।

ಹೀಗೆ ನರಲೋಕದಲ್ಲಿ ಕ್ಷೋಭೆಯುಂಟಾಗಲು, ಬ್ರಹ್ಮಜ್ಞಾನವು ನಾಶವಾಯಿತು. ರಾಜನ್! ಬ್ರಹ್ಮಜ್ಞಾನವು ನಾಶವಾಗಲು ಧರ್ಮನಾಶವೂ ಪ್ರಾರಂಭವಾಯಿತು.

12059022a ನಷ್ಟೇ ಬ್ರಹ್ಮಣಿ ಧರ್ಮೇ ಚ ದೇವಾಸ್ತ್ರಾಸಮಥಾಗಮನ್।
12059022c ತೇ ತ್ರಸ್ತಾ ನರಶಾರ್ದೂಲ ಬ್ರಹ್ಮಾಣಂ ಶರಣಂ ಯಯುಃ।।

ಬ್ರಹ್ಮ ವಿದ್ಯೆ ಮತ್ತು ಧರ್ಮವು ನಶಿಸಲು, ದೇವತೆಗಳಲ್ಲಿ ಭಯವುಂಟಾಯಿತು. ನರಶಾರ್ದೂಲ! ಭಯಭೀತರಾದ ಅವರು ಬ್ರಹ್ಮನ ಶರಣು ಹೋದರು.

12059023a ಪ್ರಪದ್ಯ ಭಗವಂತಂ ತೇ ದೇವಾ ಲೋಕಪಿತಾಮಹಮ್।
12059023c ಊಚುಃ ಪ್ರಾಂಜಲಯಃ ಸರ್ವೇ ದುಃಖಶೋಕಭಯಾರ್ದಿತಾಃ।।

ದುಃಖ-ಶೋಕ-ಭಯಾರ್ದಿತರಾದ ಆ ಎಲ್ಲ ದೇವತೆಗಳೂ ಕೈಮುಗಿದು ಲೋಕಪಿತಾಮಹ ಭಗವಂತನನ್ನು ಪ್ರಾರ್ಥಿಸುತ್ತಾ ಕೇಳಿಕೊಂಡರು:

12059024a ಭಗವನ್ನರಲೋಕಸ್ಥಂ ನಷ್ಟಂ ಬ್ರಹ್ಮ ಸನಾತನಮ್।
12059024c ಲೋಭಮೋಹಾದಿಭಿರ್ಭಾವೈಸ್ತತೋ ನೋ ಭಯಮಾವಿಶತ್।।

“ಭಗವನ್! ನರಲೋಕದಲ್ಲಿದ್ದ ಸನಾತನ ಬ್ರಹ್ಮವಿದ್ಯೆಯು ನಷ್ಟವಾಗಿ ಹೋಗಿದೆ. ಮನುಷ್ಯರು ಲೋಭ-ಮೋಹಾದಿ ಭಾವಗಳಿಗೆ ಸಿಲುಕಿದುದರಿಂದ ನಮ್ಮನ್ನು ಭಯವು ಆವರಿಸಿಬಿಟ್ಟಿದೆ.

12059025a ಬ್ರಹ್ಮಣಶ್ಚ ಪ್ರಣಾಶೇನ ಧರ್ಮೋಽಪ್ಯನಶದೀಶ್ವರ।
12059025c ತತಃ ಸ್ಮ ಸಮತಾಂ ಯಾತಾ ಮರ್ತ್ಯೈಸ್ತ್ರಿಭುವನೇಶ್ವರ।।

ಈಶ್ವರ! ತ್ರಿಭುವನೇಶ್ವರ! ಬ್ರಹ್ಮಜ್ಞಾನದ ನಾಶದಿಂದಾಗಿ ಧರ್ಮವೂ ಕೂಡ ನಶಿಸಿ ಹೋಗುತ್ತಿದೆ. ಇದರಿಂದಾಗಿ ನಾವೂ ಕೂಡ ಮನುಷ್ಯರಿಗೆ ಸಮನಾಗಿಬಿಟ್ಟಿದ್ದೇವೆ!

12059026a ಅಧೋ ಹಿ ವರ್ಷಮಸ್ಮಾಕಂ ಮರ್ತ್ಯಾಸ್ತೂರ್ಧ್ವಪ್ರವರ್ಷಿಣಃ।
12059026c ಕ್ರಿಯಾವ್ಯುಪರಮಾತ್ತೇಷಾಂ ತತೋಽಗಚ್ಚಾಮ ಸಂಶಯಮ್।।

ಮಳೆ-ಬೆಳೆಗಳನ್ನು ಕೆಳಗೆ ಸುರಿಸುತ್ತಿರುವ ನಮಗೆ ಮರ್ತ್ಯರು ಯಜ್ಞಾದಿಗಳ ಮೂಲಕ ಹವಿಸ್ಸನ್ನು ಮೇಲ್ಮುಖವಾಗಿ ಸುರಿಸುತ್ತಿದ್ದರು. ಈಗ ಅವರು ಯಜ್ಞಾದಿ ಕಾರ್ಯಗಳನ್ನೇ ನಿಲ್ಲಿಸಿದುದರಿಂದ ನಮಗೆ ಸಂಶಯವಾಗ ತೊಡಗಿದೆ!

12059027a ಅತ್ರ ನಿಃಶ್ರೇಯಸಂ ಯನ್ನಸ್ತದ್ಧ್ಯಾಯಸ್ವ ಪಿತಾಮಹ।
12059027c ತ್ವತ್ಪ್ರಭಾವಸಮುತ್ಥೋಽಸೌ ಪ್ರಭಾವೋ ನೋ ವಿನಶ್ಯತಿ।।

ಪಿತಾಮಹ! ಈಗ ನಮಗೆ ಶ್ರೇಯಸ್ಸು ಯಾವುದರಿಂದಾಗುವುದೋ ಅದರ ಕುರಿತು ನೀನೇ ಚಿಂತಿಸು! ನಿನ್ನ ಪ್ರಭಾವದಿಂದಲೇ ಪ್ರಾಪ್ತವಾಗಿರುವ ನಮ್ಮ ಈ ದೈವಪ್ರಭಾವವು ಯಾವುದೇ ಕಾರಣದಿಂದಲೂ ವಿನಾಶಹೊಂದಬಾರದು!”

12059028a ತಾನುವಾಚ ಸುರಾನ್ಸರ್ವಾನ್ಸ್ವಯಂಭೂರ್ಭಗವಾಂಸ್ತತಃ।
12059028c ಶ್ರೇಯೋಽಹಂ ಚಿಂತಯಿಷ್ಯಾಮಿ ವ್ಯೇತು ವೋ ಭೀಃ ಸುರರ್ಷಭಾಃ।।

ಆಗ ಭಗವಾನ್ ಸ್ವಯಂಭುವು ಆ ಸರ್ವ ಸುರರಿಗೆ ಉತ್ತರಿಸಿದನು: “ಸುರರ್ಷಭರೇ! ನಿಮ್ಮ ಶ್ರೇಯಸ್ಸಿಗಾಗಿ ನಾನು ಯೋಚಿಸುತ್ತೇನೆ. ನಿಮ್ಮ ಭಯವನ್ನು ದೂರಮಾಡಿಕೊಳ್ಳಿ!”

12059029a ತತೋಽಧ್ಯಾಯಸಹಸ್ರಾಣಾಂ ಶತಂ ಚಕ್ರೇ ಸ್ವಬುದ್ಧಿಜಮ್।
12059029c ಯತ್ರ ಧರ್ಮಸ್ತಥೈವಾರ್ಥಃ ಕಾಮಶ್ಚೈವಾನುವರ್ಣಿತಃ।।

ಆಗ ಬ್ರಹ್ಮನು ತನ್ನ ಬುದ್ಧಿಗೆ ತೋಚಿದಂತೆ, ಧರ್ಮ-ಅರ್ಥ-ಕಾಮಗಳನ್ನು ವರ್ಣಿಸುವ ಒಂದು ಲಕ್ಷ ಅಧ್ಯಾಯಗಳನ್ನು ರಚಿಸಿದನು.

12059030a ತ್ರಿವರ್ಗ ಇತಿ ವಿಖ್ಯಾತೋ ಗಣ ಏಷ ಸ್ವಯಂಭುವಾ।
12059030c ಚತುರ್ಥೋ ಮೋಕ್ಷ ಇತ್ಯೇವ ಪೃಥಗರ್ಥಃ ಪೃಥಗ್ಗಣಃ।।

ಸ್ವಯಂಭುವಿನ ಈ ಸಮೂಹಗ್ರಂಥವು ತ್ರಿವರ್ಗ ಎಂದು ವಿಖ್ಯಾತವಾಯಿತು. ಬೇರೆಯದೇ ಅರ್ಥವುಳ್ಳ ನಾಲ್ಕನೆಯ ಮೋಕ್ಷ ಎನ್ನುವ ಪ್ರಕರಣವು ಇನ್ನೊಂದು ಪ್ರತ್ಯೇಕ ಸಂಹಿತವು.

12059031a ಮೋಕ್ಷಸ್ಯಾಪಿ ತ್ರಿವರ್ಗೋಽನ್ಯಃ ಪ್ರೋಕ್ತಃ ಸತ್ತ್ವಂ ರಜಸ್ತಮಃ।
12059031c ಸ್ಥಾನಂ ವೃದ್ಧಿಃ ಕ್ಷಯಶ್ಚೈವ ತ್ರಿವರ್ಗಶ್ಚೈವ ದಂಡಜಃ।।

ಮೋಕ್ಷದಲ್ಲಿಯೂ ಸತ್ತ್ವ-ರಜ-ತಮಗಳೆಂಬ ಮೂರು ವರ್ಗಗಳಿವೆಯೆಂದು ಹೇಳುತ್ತಾರೆ. ದಂಡದಿಂದ ಹುಟ್ಟಿದ ತ್ರಿವರ್ಗಗಳು ಸ್ಥಾನ, ವೃದ್ಧಿ ಮತ್ತು ಕ್ಷಯಗಳು1.

12059032a ಆತ್ಮಾ ದೇಶಶ್ಚ ಕಾಲಶ್ಚಾಪ್ಯುಪಾಯಾಃ ಕೃತ್ಯಮೇವ ಚ।
12059032c ಸಹಾಯಾಃ ಕಾರಣಂ ಚೈವ ಷಡ್ವರ್ಗೋ ನೀತಿಜಃ ಸ್ಮೃತಃ।।

ಇದರಲ್ಲಿರುವ ಆತ್ಮ, ದೇಶ, ಕಾಲ, ಉಪಾಯ, ಕರ್ತವ್ಯ ಮತ್ತು ಸಹಾಯ – ಈ ಷಡ್ವರ್ಗಗಳ ನೀತಿಯೇ ಸರ್ವೋನ್ನತಿಗೆ ಕಾರಣವಾಗುತ್ತದೆಯೆಂದು ಹೇಳುತ್ತಾರೆ.

12059033a ತ್ರಯೀ ಚಾನ್ವೀಕ್ಷಿಕೀ ಚೈವ ವಾರ್ತಾ ಚ ಭರತರ್ಷಭ।
12059033c ದಂಡನೀತಿಶ್ಚ ವಿಪುಲಾ ವಿದ್ಯಾಸ್ತತ್ರ ನಿದರ್ಶಿತಾಃ।।

ಭರತರ್ಷಭ! ಇದರಲ್ಲಿ ತ್ರಯೀ2, ಅನ್ವೀಕ್ಷಿಕೀ3, ವಾರ್ತೆ4 ಮತ್ತು ದಂಡನೀತಿ – ಈ ವಿಪುಲ ವಿದ್ಯೆಗಳ ನಿರೂಪಣೆಯಿದೆ.

12059034a ಅಮಾತ್ಯರಕ್ಷಾಪ್ರಣಿಧೀ ರಾಜಪುತ್ರಸ್ಯ ರಕ್ಷಣಮ್।
12059034c ಚಾರಶ್ಚ ವಿವಿಧೋಪಾಯಃ ಪ್ರಣಿಧಿಶ್ಚ ಪೃಥಗ್ವಿಧಃ।।
12059035a ಸಾಮ ಚೋಪಪ್ರದಾನಂ ಚ ಭೇದೋ ದಂಡಶ್ಚ ಪಾಂಡವ।
12059035c ಉಪೇಕ್ಷಾ ಪಂಚಮೀ ಚಾತ್ರ ಕಾರ್ತ್ಸ್ನ್ಯೇನ ಸಮುದಾಹೃತಾ।।

ಪಾಂಡವ! ಇದರಲ್ಲಿ ಮಂತ್ರಿಗಳ ರಕ್ಷಣೆ, ರಾಜದೂತರು ಮತ್ತು ರಾಜಪುತ್ರರ ರಕ್ಷಣೆ. ಚಾರರ ವಿವಿಧ ಉಪಾಯಗಳು, ಬೇರೆ ಬೇರೆ ವಿಧದ ಗುಪ್ತಚರರು, ಸಾಮ, ದಾನ, ಭೇದ, ದಂಡ ಮತ್ತು ಉಪೇಕ್ಷೆ ಈ ಐದು ಉಪಾಯಗಳು ಇವೆಲ್ಲವೂ ವಿಸ್ತಾರವಾಗಿ ವರ್ಣಿತವಾಗಿವೆ.

12059036a ಮಂತ್ರಶ್ಚ ವರ್ಣಿತಃ ಕೃತ್ಸ್ನಸ್ತಥಾ ಭೇದಾರ್ಥ ಏವ ಚ।
12059036c ವಿಭ್ರಂಶಶ್ಚೈವ ಮಂತ್ರಸ್ಯ ಸಿದ್ಧ್ಯಸಿದ್ಧ್ಯೋಶ್ಚ ಯತ್ಫಲಮ್।।

ಇದರಲ್ಲಿ ಮಂತ್ರಾಲೋಚನೆ ಮತ್ತು ಭೇದಗಳ ಅರ್ಥವನ್ನು ಸಂಪೂರ್ಣವಾಗಿ – ಮಂತ್ರಾಲೋಚನೆಯು ಬಹಿರಂಗವಾದರೆ ಮತ್ತು ಭೇದವು ಸಿದ್ಧಿಯಾದರೆ ದೊರೆಯುವ ಫಲಗಳೂ – ವರ್ಣಿತವಾಗಿವೆ.

12059037a ಸಂಧಿಶ್ಚ ವಿವಿಧಾಭಿಖ್ಯೋ ಹೀನೋ ಮಧ್ಯಸ್ತಥೋತ್ತಮಃ।
12059037c ಭಯಸತ್ಕಾರವಿತ್ತಾಖ್ಯಃ ಕಾರ್ತ್ಸ್ನ್ಯೇನ ಪರಿವರ್ಣಿತಃ।।

ಇದರಲ್ಲಿ ಸಂಧಿಯ ವಿವಿಧ ಪ್ರಕಾರಗಳು – ಭಯದಿಂದ ಮಾಡಿಕೊಂಡ ಹೀನ ಸಂಧಿ, ಸತ್ಕಾರವನ್ನು ಪಡೆದು ಮಾಡಿಕೊಂಡ ಮಧ್ಯಮ ಸಂಧಿ, ಮತ್ತು ವಿತ್ತವನ್ನು ಪಡೆದು ಮಾಡಿಕೊಂಡ ಉತ್ತಮ ಸಂಧಿ – ಈ ಮೊದಲಾದ ಹೀನ, ಮಧ್ಯಮ ಮತ್ತು ಉತ್ತಮ ಸಂಧಿಗಳ ಕುರಿತು ಸಂಪೂರ್ಣ ವರ್ಣನೆಯಿದೆ.

12059038a ಯಾತ್ರಾಕಾಲಾಶ್ಚ ಚತ್ವಾರಸ್ತ್ರಿವರ್ಗಸ್ಯ ಚ ವಿಸ್ತರಃ।
12059038c ವಿಜಯೋ ಧರ್ಮಯುಕ್ತಶ್ಚ ತಥಾರ್ಥವಿಜಯಶ್ಚ ಹ।।
12059039a ಆಸುರಶ್ಚೈವ ವಿಜಯಸ್ತಥಾ ಕಾರ್ತ್ಸ್ನ್ಯೇನ ವರ್ಣಿತಃ।
12059039c ಲಕ್ಷಣಂ ಪಂಚವರ್ಗಸ್ಯ ತ್ರಿವಿಧಂ ಚಾತ್ರ ವರ್ಣಿತಮ್।।

ಇದರಲ್ಲಿ ದಂಡ ಯಾತ್ರೆಯ ನಾಲ್ಕು ಕಾಲಗಳೂ5, ವಿಜಯದ ನಾಲ್ಕು ವರ್ಗಗಳೂ – ಧರ್ಮ ವಿಜಯ, ಅರ್ಥ ವಿಜಯ ಮತ್ತು ಆಸುರ ವಿಜಯ – ವಿಸ್ತಾರವಾಗಿ ವರ್ಣಿತಗೊಂಡಿವೆ. ಮತ್ತು ಪಂಚವರ್ಗಗಳ6 ಲಕ್ಷಣಗಳೂ, ಮೂರು ವಿಧಗಳೂ7 ವರ್ಣಿತವಾಗಿವೆ.

12059040a ಪ್ರಕಾಶಶ್ಚಾಪ್ರಕಾಶಶ್ಚ ದಂಡೋಽಥ ಪರಿಶಬ್ದಿತಃ।
12059040c ಪ್ರಕಾಶೋಽಷ್ಟವಿಧಸ್ತತ್ರ ಗುಹ್ಯಸ್ತು ಬಹುವಿಸ್ತರಃ।।

ಇದರಲ್ಲಿ ಪ್ರಕಾಶ ಮತ್ತು ಅಪ್ರಕಾಶ ಈ ಎರಡೂ ಸೇನಾದಂಡಗಳ ಕುರಿತು, ಎಂಟು ವಿಧದ ಪ್ರಕಾಶ ಸೇನಾದಂಡಗಳು ಮತ್ತು ಗುಪ್ತ ಸೇನಾದಂಡದ ಕುರಿತು ಬಹಳ ವಿಸ್ತಾರವಾಗಿ ವಿವರಿಸಲ್ಪಟ್ಟಿದೆ.

12059041a ರಥಾ ನಾಗಾ ಹಯಾಶ್ಚೈವ ಪಾದಾತಾಶ್ಚೈವ ಪಾಂಡವ।
12059041c ವಿಷ್ಟಿರ್ನಾವಶ್ಚರಾಶ್ಚೈವ ದೇಶಿಕಾಃ ಪಥಿ ಚಾಷ್ಟಕಮ್।।
12059042a ಅಂಗಾನ್ಯೇತಾನಿ ಕೌರವ್ಯ ಪ್ರಕಾಶಾನಿ ಬಲಸ್ಯ ತು।
12059042c ಜಂಗಮಾಜಂಗಮಾಶ್ಚೋಕ್ತಾಶ್ಚೂರ್ಣಯೋಗಾ ವಿಷಾದಯಃ।।

ಪಾಂಡವ! ಕೌರವ್ಯ! ರಥಗಳು, ಆನೆಗಳು, ಕುದುರೆಗಳು, ಪದಾತಿಗಳು, ಭಾರವನ್ನು ಹೊರುವವರು, ನಾವಿಕರು, ಗೂಢಚಾರರು ಮತ್ತು ದೇಶಿಕಾಚಾರ್ಯರು – ಇವೇ ಪ್ರಕಾಶ ಸೇನಾದಂಡದ ಎಂಟು ಅಂಗಗಳು. ಚಲಿಸುವ ಸರ್ಪಾದಿಗಳಿಂದ ತಯಾರಾದ ಮತ್ತು ಚಲಿಸದ ಮರ-ಗಿಡ-ಬಳ್ಳಿಗಳಿಂದ ತಯಾರಾದ ವಿಷ ಇವೇ ಮೊದಲಾದವುಗಳು ಗುಪ್ತ ಸೇನೆಯ ಅಂಗಗಳು.

12059043a ಸ್ಪರ್ಶೇ ಚಾಭ್ಯವಹಾರ್ಯೇ ಚಾಪ್ಯುಪಾಂಶುರ್ವಿವಿಧಃ ಸ್ಮೃತಃ।
12059043c ಅರಿರ್ಮಿತ್ರಮುದಾಸೀನ ಇತ್ಯೇತೇಽಪ್ಯನುವರ್ಣಿತಾಃ।।

ವಿಷಾದಿ ಗುಪ್ತ ಸೇನಾಂಗವಿಷಯಗಳನ್ನು ಆಯುಧ ಅಥವಾ ವಸ್ತ್ರದ ಮೂಲಕ ಶತ್ರುವಿಗೆ ಸ್ಪರ್ಶವಾಗುವಂತೆ ಮಾಡಬೇಕು ಅಥವಾ ಶತ್ರುವಿನ ಭೋಜನಾದಿಗಳಲ್ಲಿ ಬೆರೆಸಬೇಕು ಎಂದು ಹೇಳಿದ್ದಾರೆ. ಅಲ್ಲದೇ ಈ ನೀತಿ ಶಾಸ್ತ್ರದಲ್ಲಿ ಅರಿ, ಮಿತ್ರ ಮತ್ತು ಉದಾಸೀನ ಇವರ ಬಗ್ಗೆಯ ವರ್ಣನೆಯೂ ಇದೆ.

12059044a ಕೃತ್ಸ್ನಾ ಮಾರ್ಗಗುಣಾಶ್ಚೈವ ತಥಾ ಭೂಮಿಗುಣಾಶ್ಚ ಹ।
12059044c ಆತ್ಮರಕ್ಷಣಮಾಶ್ವಾಸಃ ಸ್ಪಶಾನಾಂ ಚಾನ್ವವೇಕ್ಷಣಮ್।।

ಇದರಲ್ಲಿ ಗ್ರಹ-ನಕ್ಷತ್ರಗಳ ಸಮಸ್ತ ಮಾರ್ಗಗುಣಗಳು8 ಮತ್ತು ಭೂಮಿಯ ಗುಣಗಳು9, ಆತ್ಮರಕ್ಷಣೆಯ ವಿಧಾನಗಳು, ಆಶ್ವಾಸನೆ, ರಥಾದಿಗಳ ನಿರ್ಮಾಣ ಮತ್ತು ಇವುಗಳ ನಿರೀಕ್ಷೆ ಇವುಗಳ ಕುರಿತು ವರ್ಣನೆಯಿದೆ.

12059045a ಕಲ್ಪನಾ ವಿವಿಧಾಶ್ಚಾಪಿ ನೃನಾಗರಥವಾಜಿನಾಮ್।
12059045c ವ್ಯೂಹಾಶ್ಚ ವಿವಿಧಾಭಿಖ್ಯಾ ವಿಚಿತ್ರಂ ಯುದ್ಧಕೌಶಲಮ್।।
12059046a ಉತ್ಪಾತಾಶ್ಚ ನಿಪಾತಾಶ್ಚ ಸುಯುದ್ಧಂ ಸುಪಲಾಯನಮ್।
12059046c ಶಸ್ತ್ರಾಣಾಂ ಪಾಯನಜ್ಞಾನಂ ತಥೈವ ಭರತರ್ಷಭ।।

ಭರತರ್ಷಭ! ಅದರಲ್ಲಿ ನರ-ನಾಗ-ರಥ-ವಾಜಿಗಳ ವಿವಿಧ ವ್ಯೂಹಗಳ ಕಲ್ಪನೆಗಳು ಮತ್ತು ವಿವಿಧ ವಿಚಿತ್ರ ಯುದ್ಧಕೌಶಲಗಳು ಹೇಳಲ್ಪಟ್ಟಿವೆ. ಹಾಗೆಯೇ ಮೇಲಕ್ಕೆ ಹಾರುವುದು, ಕೆಳಕ್ಕೆ ಬೀಳುವುದು, ಎದುರಿಸಿ ಯುದ್ಧಮಾಡುವುದು, ಉತ್ತಮವಾಗಿ ಪಲಾಯನ ಮಾಡುವುದು, ಶಸ್ತ್ರಗಳನ್ನು ಹರಿತಹೊಳಿಸುವ ವಿಧಾನ ಇವುಗಳ ವರ್ಣನೆಯೂ ಇದೆ.

12059047a ಬಲವ್ಯಸನಮುಕ್ತಂ ಚ ತಥೈವ ಬಲಹರ್ಷಣಮ್।
12059047c ಪೀಡನಾಸ್ಕಂದಕಾಲಶ್ಚ ಭಯಕಾಲಶ್ಚ ಪಾಂಡವ।।

ಪಾಂಡವ! ಸೇನೆಗೆ ಬಂದೊದಗುವ ವ್ಯಸನಗಳು, ಸೇನೆಯನ್ನು ಹರ್ಷಗೊಳಿಸುವುದು, ಪೀಡೆಗೊಳಗಾದಾಗ ಬೇರೆ ವಾಸಿಸುವ ಸಮಯ, ಭಯದ ಕಾಲ ಇವುಗಳ ವರ್ಣನೆಯೂ ಇದೆ.

12059048a ತಥಾ ಖಾತವಿಧಾನಂ ಚ ಯೋಗಸಂಚಾರ ಏವ ಚ।
12059048c ಚೌರಾಟವ್ಯಬಲೈಶ್ಚೋಗ್ರೈಃ ಪರರಾಷ್ಟ್ರಸ್ಯ ಪೀಡನಮ್।।
12059049a ಅಗ್ನಿದೈರ್ಗರದೈಶ್ಚೈವ ಪ್ರತಿರೂಪಕಚಾರಕೈಃ।
12059049c ಶ್ರೇಣಿಮುಖ್ಯೋಪಜಾಪೇನ ವೀರುಧಶ್ಚೇದನೇನ ಚ।।
12059050a ದೂಷಣೇನ ಚ ನಾಗಾನಾಮಾಶಂಕಾಜನನೇನ ಚ।
12059050c ಆರೋಧನೇನ ಭಕ್ತಸ್ಯ ಪಥಶ್ಚೋಪಾರ್ಜನೇನ ಚ।।

ಕಂದಕಗಳನ್ನು ತೋಡುವ ಕ್ರಮ, ಸಜ್ಜಾದ ಸೇನೆಯ ಪ್ರಯಾಣಕ್ರಮ, ಕಾಡುಜನರು ಮತ್ತು ಕಳ್ಳಕಾಕರ ಮೂಲಕ ಶತ್ರುರಾಜ್ಯಕ್ಕೆ ಪೀಡೆಯನ್ನುಂಟುಮಾಡುವುದು, ಬೆಂಕಿ-ವಿಷ-ಕೃತ್ರಿಮ ದೂತರಿಂದ ಶತ್ರುಗಳಿಗೆ ಹಾನಿಯನ್ನುಂಟುಮಾಡುವುದು, ಮಂತ್ರಿಮುಖ್ಯರ ವೇಷಧಾರಿಗಳನ್ನು ಕಳುಹಿಸಿ ಶತ್ರುಗಳನ್ನು ಮೋಸಗೊಳಿಸುವುದು, ಶತ್ರುಸೇನೆಗಳ ಮುಖ್ಯರೊಳಗೆ ಭಿನ್ನಾಭಿಪ್ರಾಯಗಳನ್ನುಂಟುಮಾಡುವುದು, ಬೆಳೆದುನಿಂತಿರುವ ಫಸಲನ್ನು ಕತ್ತರಿಸುವುದು, ಶತ್ರುಪಕ್ಷದ ಆನೆಗಳನ್ನು ರೇಗಿಸುವುದು, ಶತ್ರುರಾಜ್ಯದ ಪ್ರಜೆಗಳಿಗೆ ಆತಂಕವನ್ನುಂಟುಮಾಡುವುದು, ಶತ್ರುಪಕ್ಷದ ಮುಖ್ಯನನ್ನು ವಿಶೇಷವಾಗಿ ಪುರಸ್ಕರಿಸಿ ತನ್ನ ಕಡೆಗೆ ಒಲಿಸಿಕೊಳ್ಳುವುದು – ಈ ವಿಷಯಗಳೂ ಬ್ರಹ್ಮನ ನೀತಿಶಾಸ್ತ್ರದಲ್ಲಿ ವಿವರಿಸಲಾಗಿದೆ.

12059051a ಸಪ್ತಾಂಗಸ್ಯ ಚ ರಾಜ್ಯಸ್ಯ ಹ್ರಾಸವೃದ್ಧಿಸಮಂಜಸಮ್।
12059051c ದೂತಸಾಮರ್ಥ್ಯಯೋಗಶ್ಚ ರಾಷ್ಟ್ರಸ್ಯ ಚ ವಿವರ್ಧನಮ್।।
12059052a ಅರಿಮಧ್ಯಸ್ಥಮಿತ್ರಾಣಾಂ ಸಮ್ಯಕ್ಚೋಕ್ತಂ ಪ್ರಪಂಚನಮ್।
12059052c ಅವಮರ್ದಃ ಪ್ರತೀಘಾತಸ್ತಥೈವ ಚ ಬಲೀಯಸಾಮ್।।

ರಾಜ್ಯದ ಏಳು ಅಂಗಗಳ ಕ್ಷಯ, ವೃದ್ಧಿ ಮತ್ತು ಸಮತ್ವಗಳು; ದೂತನ ಸಾಮರ್ಥ್ಯ-ಸಹಯೋಗಗಳಿಂದ ರಾಷ್ಟ್ರದ ವೃದ್ಧಿ; ಶತ್ರು-ಮಧ್ಯಸ್ಥ-ಮಿತ್ರರ ವಿಸ್ತಾರ ವಿವೇಚನೆ; ಬಲಶಾಲಿ ಶತ್ರುಗಳ ಉಪಾಯಗಳನ್ನು ಭಂಗಗೊಳಿಸಿ ಸೋಲಿಸುವುದು ಇವೆಲ್ಲವುಗಳ ಕುರಿತು ಬ್ರಹ್ಮನ ನೀತಿಶಾಸ್ತ್ರದಲ್ಲಿ ವಿವರಿಸಲಾಗಿದೆ.

12059053a ವ್ಯವಹಾರಃ ಸುಸೂಕ್ಷ್ಮಶ್ಚ ತಥಾ ಕಂಟಕಶೋಧನಮ್।
12059053c ಶಮೋ ವ್ಯಾಯಾಮಯೋಗಶ್ಚ ಯೋಗೋ ದ್ರವ್ಯಸ್ಯ ಸಂಚಯಃ।।
12059054a ಅಭೃತಾನಾಂ ಚ ಭರಣಂ ಭೃತಾನಾಂ ಚಾನ್ವವೇಕ್ಷಣಮ್।
12059054c ಅರ್ಥಕಾಲೇ ಪ್ರದಾನಂ ಚ ವ್ಯಸನೇಷ್ವಪ್ರಸಂಗಿತಾ।।

ಶಾಸನ ಸಂಬಂಧದ ಅತಿಸೂಕ್ಷ್ಮ ವ್ಯವಹಾರ; ರಾಷ್ಟ್ರಕಂಟಕರನ್ನು ಶೋಧಿಸಿ ಶಾಂತಗೊಳಿಸುವುದು; ವ್ಯಾಯಮಯೋಗ, ದ್ರವ್ಯಗಳ ಸಂಗ್ರಹ ಯೋಗ; ನಿರ್ಗತಿಕರ ಭರಣ-ಪೋಷಣೆಗಳು; ಭರಣ-ಪೋಷಣಾಕಾರ್ಯಗಳ ಮೇಲ್ವಿಚಾರಣೆ; ಕಾಲಕಾಲಕ್ಕೆ ಸಂಪತ್ತಿನ ದಾನ; ಮತ್ತು ವ್ಯಸನಗಳ ಕುರಿತು ಬ್ರಹ್ಮನ ನೀತಿಶಾಸ್ತ್ರದಲ್ಲಿ ವಿವರಿಸಲಾಗಿದೆ.

12059055a ತಥಾ ರಾಜಗುಣಾಶ್ಚೈವ ಸೇನಾಪತಿಗುಣಾಶ್ಚ ಯೇ।
12059055c ಕಾರಣಸ್ಯ ಚ ಕರ್ತುಶ್ಚ ಗುಣದೋಷಾಸ್ತಥೈವ ಚ।।

ಹಾಗೆಯೇ ರಾಜನ ಗುಣಗಳು, ಸೇನಾಪತಿಯ ಗುಣಗಳು, ಕರ್ತವ್ಯಗಳ ಕಾರಣ-ಗುಣ-ದೋಷಗಳನ್ನೂ ಬ್ರಹ್ಮನ ನೀತಿಶಾಸ್ತ್ರದಲ್ಲಿ ವಿವರಿಸಲಾಗಿದೆ.

12059056a ದುಷ್ಟೇಂಗಿತಂ ಚ ವಿವಿಧಂ ವೃತ್ತಿಶ್ಚೈವಾನುಜೀವಿನಾಮ್।
12059056c ಶಂಕಿತತ್ವಂ ಚ ಸರ್ವಸ್ಯ ಪ್ರಮಾದಸ್ಯ ಚ ವರ್ಜನಮ್।।
12059057a ಅಲಬ್ಧಲಿಪ್ಸಾ ಲಬ್ಧಸ್ಯ ತಥೈವ ಚ ವಿವರ್ಧನಮ್।
12059057c ಪ್ರದಾನಂ ಚ ವಿವೃದ್ಧಸ್ಯ ಪಾತ್ರೇಭ್ಯೋ ವಿಧಿವತ್ತಥಾ।।
12059058a ವಿಸರ್ಗೋಽರ್ಥಸ್ಯ ಧರ್ಮಾರ್ಥಮರ್ಥಾರ್ಥಂ ಕಾಮಹೇತುನಾ।
12059058c ಚತುರ್ಥೋ ವ್ಯಸನಾಘಾತೇ ತಥೈವಾತ್ರಾನುವರ್ಣಿತಃ।।

ವಿವಿಧ ದುಷ್ಟ ಆಸೆಗಳು; ತನ್ನನ್ನೇ ಅವಲಂಬಿಸಿರುವವರಿಗೆ ವಹಿಸಿಕೊಡಬಹುದಾದ ಕಾರ್ಯಭಾರಗಳು; ಎಲ್ಲವನ್ನೂ ಶಂಕಿಸುವುದು; ಪ್ರಮಾದದ ವರ್ಜನೆ; ಲಭಿಸದೇ ಇರುವುದನ್ನು ಪಡೆದುಕೊಳ್ಳುವುದು ಮತ್ತು ಅದನ್ನು ವೃದ್ಧಿಗೊಳಿಸುವುದು; ವೃದ್ಧಿಯಾದುದನ್ನು ಪಾತ್ರರಿಗೆ ವಿಧಿವತ್ತಾಗಿ ದಾನಮಾಡುವುದು; ಧರ್ಮ-ಅರ್ಥ-ಕಾಮಗಳಿಗೆ ಮತ್ತು ನಾಲ್ಕನೆಯದಾಗಿ ವ್ಯಸನವೊದಗಿದಾಗ ಅದನ್ನು ಪರಿಹರಿಸಲು ಸಂಪತ್ತನ್ನು ವಿನಿಯೋಗಿಸುವುದು ಇವೆಲ್ಲವೂ ಬ್ರಹ್ಮನ ನೀತಿಶಾಸ್ತ್ರದಲ್ಲಿ ವರ್ಣಿತವಾಗಿವೆ.

12059059a ಕ್ರೋಧಜಾನಿ ತಥೋಗ್ರಾಣಿ ಕಾಮಜಾನಿ ತಥೈವ ಚ।
12059059c ದಶೋಕ್ತಾನಿ ಕುರುಶ್ರೇಷ್ಠ ವ್ಯಸನಾನ್ಯತ್ರ ಚೈವ ಹ।।

ಕುರುಶ್ರೇಷ್ಠ! ಕಾಮ-ಕ್ರೋಧಗಳಿಂದ ಹುಟ್ಟುವ ಹತ್ತು ಉಗ್ರ ವ್ಯಸನಗಳ ಕುರಿತು ಇದರಲ್ಲಿ ವರ್ಣಿಸಲಾಗಿದೆ.

12059060a ಮೃಗಯಾಕ್ಷಾಸ್ತಥಾ ಪಾನಂ ಸ್ತ್ರಿಯಶ್ಚ ಭರತರ್ಷಭ।
12059060c ಕಾಮಜಾನ್ಯಾಹುರಾಚಾರ್ಯಾಃ ಪ್ರೋಕ್ತಾನೀಹ ಸ್ವಯಂಭುವಾ।।

ಸ್ವಯಂಭುವು ಇದರಲ್ಲಿ ಆಚಾರ್ಯರು ಹೇಳುವ ಬೇಟೆ, ಜೂಜು, ಮದ್ಯಪಾನ, ಸ್ತ್ರೀಸಂಗ ಈ ನಾಲ್ಕು ಕಾಮಜನ್ಯ ವ್ಯಸನಗಳನ್ನು ವರ್ಣಿಸಿದ್ದಾನೆ.

12059061a ವಾಕ್ಪಾರುಷ್ಯಂ ತಥೋಗ್ರತ್ವಂ ದಂಡಪಾರುಷ್ಯಮೇವ ಚ।
12059061c ಆತ್ಮನೋ ನಿಗ್ರಹಸ್ತ್ಯಾಗೋಽಥಾರ್ಥದೂಷಣಮೇವ ಚ।।

ಹಾಗೆಯೇ ಕ್ರೂರವಾದ ಮಾತು, ಉಗ್ರತೆ, ಕಠಿಣವಾಗಿ ದಂಡಿಸುವುದು, ತನ್ನನ್ನೇ ದಂಡಿಸಿಕೊಳ್ಳುವುದು, ಬಂಧು-ಬಳಗದವರನ್ನು ತ್ಯಜಿಸುವುದು, ಸಂಪತ್ತನ್ನು ದೂಷಿಸುವುದು – ಈ ಆರು ಕ್ರೋಧಜನ್ಯ ವ್ಯಸನಗಳ ವರ್ಣನೆಯೂ ಬ್ರಹ್ಮನ ನೀತಿಶಾಸ್ತ್ರದಲ್ಲಿದೆ.

12059062a ಯಂತ್ರಾಣಿ ವಿವಿಧಾನ್ಯೇವ ಕ್ರಿಯಾಸ್ತೇಷಾಂ ಚ ವರ್ಣಿತಾಃ।
12059062c ಅವಮರ್ದಃ ಪ್ರತೀಘಾತಃ ಕೇತನಾನಾಂ ಚ ಭಂಜನಮ್।।
12059063a ಚೈತ್ಯದ್ರುಮಾಣಾಮಾಮರ್ದೋ ರೋಧಃಕರ್ಮಾಂತನಾಶನಮ್।
12059063c ಅಪಸ್ಕರೋಽಥ ಗಮನಂ ತಥೋಪಾಸ್ಯಾ ಚ ವರ್ಣಿತಾ।।

ವಿವಿಧ ಯಂತ್ರಗಳೂ ಮತ್ತು ಅವುಗಳ ಕ್ರಿಯೆಗಳೂ ಇಲ್ಲಿ ವರ್ಣಿತವಾಗಿವೆ. ಶತ್ರುರಾಷ್ಟ್ರವನ್ನು ಧ್ವಂಸಗೊಳಿಸುವುದು; ಶತ್ರುವಿಗೆ ಆಘಾತವನ್ನುಂಟುಮಾಡುವುದು; ಕಟ್ಟಡಗಳ ನಾಶ; ಚೈತ್ಯ-ವೃಕ್ಷಗಳನ್ನು ಧ್ವಂಸಗೊಳಿಸುವುದು; ರಾಜಭವನವನ್ನು ನಾಲ್ಕೂ ಕಡೆಗಳಿಂದ ಮುತ್ತಿಗೆ ಹಾಕುವುದು ಇವುಗಳ ಉಪಾಯ-ವಿಧಾನಗಳ ಕುರಿತಾದ ವರ್ಣನೆಗಳಿವೆ.

12059064a ಪಣವಾನಕಶಂಖಾನಾಂ ಭೇರೀಣಾಂ ಚ ಯುಧಾಂ ವರ।
12059064c ಉಪಾರ್ಜನಂ ಚ ದ್ರವ್ಯಾಣಾಂ ಪರಮರ್ಮ ಚ ತಾನಿ ಷಟ್।।

ಯೋದ್ಧರಲ್ಲಿ ಶ್ರೇಷ್ಠ! ಇದರಲ್ಲಿ ಮದ್ದಳೆ, ನಗಾರಿ, ಶಂಖ, ಭೇರಿ ಇವುಗಳನ್ನು ಬಾರಿಸುವ ಕ್ರಮ; ಆರು ದ್ರವ್ಯಗಳನ್ನು10 ಸಂಪಾದಿಸುವ ಮತ್ತು ಶತ್ರುವಿನ ಈ ಆರು ದ್ರವ್ಯಗಳನ್ನು ನಾಶಪಡಿಸುವ ವಿಧಾನಗಳ ವರ್ಣನೆಯೂ ಇದೆ.

12059065a ಲಬ್ಧಸ್ಯ ಚ ಪ್ರಶಮನಂ ಸತಾಂ ಚೈವ ಹಿ ಪೂಜನಮ್।
12059065c ವಿದ್ವದ್ಭಿರೇಕೀಭಾವಶ್ಚ ಪ್ರಾತರ್ಹೋಮವಿಧಿಜ್ಞತಾ।। 11 12059066a ಮಂಗಲಾಲಂಭನಂ ಚೈವ ಶರೀರಸ್ಯ ಪ್ರತಿಕ್ರಿಯಾ।
12059066c ಆಹಾರಯೋಜನಂ ಚೈವ ನಿತ್ಯಮಾಸ್ತಿಕ್ಯಮೇವ ಚ।।

ಪಡೆದುಕೊಂಡ ರಾಷ್ಟ್ರದಲ್ಲಿ ಶಾಂತಿಯ ಸ್ಥಾಪನೆ; ಸತ್ಪುರುಷರ ಪೂಜನ; ವಿದ್ವಾಂಸರೊಡನೆ ಏಕೀಭಾವದಿಂದಿರುವುದು; ಪ್ರಾತಃಕಾಲದಲ್ಲಿ ಮಾಡುವ ಹೋಮ, ಮಂಗಲ ವಸ್ತುಗಳನ್ನು ಮುಟ್ಟುವುದು; ಶರೀರದ ಸಿಂಗಾರ; ಆಹಾರಯೋಜನೆ ಮತ್ತು ನಿತ್ಯವೂ ಆಸ್ತಿಕ್ಯಭಾವದಿಂದಿರುವುದು ಇವುಗಳ ಕುರಿತ ಜ್ಞಾನವೂ ಬ್ರಹ್ಮನ ನೀತಿಶಾಸ್ತ್ರದಲ್ಲಿ ದೊರೆಯುತ್ತದೆ.

12059067a ಏಕೇನ ಚ ಯಥೋತ್ಥೇಯಂ ಸತ್ಯತ್ವಂ ಮಧುರಾ ಗಿರಃ।
12059067c ಉತ್ಸವಾನಾಂ ಸಮಾಜಾನಾಂ ಕ್ರಿಯಾಃ ಕೇತನಜಾಸ್ತಥಾ।।

ಏಕಾಂಗಿಯಾಗಿದ್ದರೂ ಉನ್ನತನಾಗುವುದು; ಉತ್ಸವ ಮತ್ತು ಸಮಾಜದಲ್ಲಿ ಆಡಬೇಕಾದ ಸತ್ಯ-ಮಧುರ ಮಾತು-ಕ್ರಿಯೆ ಇವುಗಳ ಉಲ್ಲೇಖವೂ ಬ್ರಹ್ಮನ ನೀತಿಶಾಸ್ತ್ರದಲ್ಲಿದೆ.

12059068a ಪ್ರತ್ಯಕ್ಷಾ ಚ ಪರೋಕ್ಷಾ ಚ ಸರ್ವಾಧಿಕರಣೇಷು ಚ।
12059068c ವೃತ್ತಿರ್ಭರತಶಾರ್ದೂಲ ನಿತ್ಯಂ ಚೈವಾನ್ವವೇಕ್ಷಣಮ್।।

ಭರತಶಾರ್ದೂಲ! ಎಲ್ಲ ಅಧಿಕಾರಿಗಳ ವೃತ್ತಿಗಳ ಕುರಿತು ಪ್ರತ್ಯಕ್ಷವಾಗಲೀ ಅಥವಾ ಪರೋಕ್ಷವಾಗಲೀ ನಿತ್ಯವೂ ತಿಳಿದುಕೊಂಡು ಮೇಲ್ವಿಚಾರಣೆ ಮಾಡುವುದರ ಕುರಿತೂ ಬ್ರಹ್ಮನ ನೀತಿಶಾಸ್ತ್ರದಲ್ಲಿ ವರ್ಣನೆಯಿದೆ.

12059069a ಅದಂಡ್ಯತ್ವಂ ಚ ವಿಪ್ರಾಣಾಂ ಯುಕ್ತ್ಯಾ ದಂಡನಿಪಾತನಮ್।
12059069c ಅನುಜೀವಿಸ್ವಜಾತಿಭ್ಯೋ ಗುಣೇಷು ಪರಿರಕ್ಷಣಮ್।।

ವಿಪ್ರರನ್ನು ದಂಡಿಸದೇ ಇರುವುದು; ಯುಕ್ತಿಪೂರ್ವಕವಾಗಿ ದಂಡನೆಯನ್ನು ನೀಡುವುದು; ಅನುಯಾಯಿಗಳು, ಸ್ವಜಾತಿಯವರು ಮತ್ತು ಗುಣವಂತರ ರಕ್ಷಣೆ ಇವುಗಳ ಕುರಿತೂ ಬ್ರಹ್ಮನ ನೀತಿಶಾಸ್ತ್ರದಲ್ಲಿ ವರ್ಣನೆಯಿದೆ.

12059070a ರಕ್ಷಣಂ ಚೈವ ಪೌರಾಣಾಂ ಸ್ವರಾಷ್ಟ್ರಸ್ಯ ವಿವರ್ಧನಮ್।
12059070c ಮಂಡಲಸ್ಥಾ ಚ ಯಾ ಚಿಂತಾ ರಾಜನ್ದ್ವಾದಶರಾಜಿಕಾ।।
12059071a ದ್ವಾಸಪ್ತತಿಮತಿಶ್ಚೈವ ಪ್ರೋಕ್ತಾ ಯಾ ಚ ಸ್ವಯಂಭುವಾ।
12059071c ದೇಶಜಾತಿಕುಲಾನಾಂ ಚ ಧರ್ಮಾಃ ಸಮನುವರ್ಣಿತಾಃ।।

ರಾಜನ್! ಪೌರರ ರಕ್ಷಣೆ; ಸ್ವರಾಷ್ಟ್ರದ ಅಭಿವೃದ್ಧಿ; ಮಂಡಲಸ್ಥರಾಗಿರುವ ದ್ವಾದಶರಾಜಿಕರ12 ಕುರಿತಾದ ಚಿಂತೆ; ಶರೀರಕ್ಕಿರುವ ಎಪ್ಪತ್ತೆರಡು ಚಿಕಿತ್ಸೆಗಳು; ಮತ್ತು ದೇಶ-ಜಾತಿ-ಕುಲಗಳ ಧರ್ಮಗಳು ಇವೆಲ್ಲವುಗಳನ್ನೂ ಸ್ವಯಂಭುವು ವರ್ಣಿಸಿದ್ದಾನೆ.

12059072a ಧರ್ಮಶ್ಚಾರ್ಥಶ್ಚ ಕಾಮಶ್ಚ ಮೋಕ್ಷಶ್ಚಾತ್ರಾನುವರ್ಣಿತಃ।
12059072c ಉಪಾಯಶ್ಚಾರ್ಥಲಿಪ್ಸಾ ಚ ವಿವಿಧಾ ಭೂರಿದಕ್ಷಿಣಾಃ।।

ಭೂರಿದಕ್ಷಿಣ! ಈ ಗ್ರಂಥದಲ್ಲಿ ಧರ್ಮ-ಅರ್ಥ-ಕಾಮ-ಮೋಕ್ಷಗಳನ್ನು ಪಡೆಯುವ ವಿವಿಧ ಉಪಾಯಗಳೂ ವರ್ಣಿತವಾಗಿವೆ.

12059073a ಮೂಲಕರ್ಮಕ್ರಿಯಾ ಚಾತ್ರ ಮಾಯಾ ಯೋಗಶ್ಚ ವರ್ಣಿತಃ।
12059073c ದೂಷಣಂ ಸ್ರೋತಸಾಮತ್ರ ವರ್ಣಿತಂ ಚ ಸ್ಥಿರಾಂಭಸಾಮ್।।

ಇದರಲ್ಲಿ ಮೂಲಕರ್ಮಕ್ರಿಯೆಗಳು, ಮಾಯೆಯನ್ನು ಬಳಸುವುದು, ಹರಿಯುವ ಮತ್ತು ನಿಂತನೀರಿನ ದೂಷಣೆ ಇವುಗಳ ಕುರಿತಾದ ವರ್ಣನೆಯೂ ಇದೆ.

12059074a ಯೈರ್ಯೈರುಪಾಯೈರ್ಲೋಕಶ್ಚ ನ ಚಲೇದಾರ್ಯವರ್ತ್ಮನಃ।
12059074c ತತ್ಸರ್ವಂ ರಾಜಶಾರ್ದೂಲ ನೀತಿಶಾಸ್ತ್ರೇಽನುವರ್ಣಿತಮ್।।

ರಾಜಶಾರ್ದೂಲ! ಯಾವ ಯಾವ ಉಪಾಯಗಳಿಂದ ಈ ಲೋಕವು ಸನ್ಮಾರ್ಗದಿಂದ ವಿಚಲಿತವಾಗುವುದಿಲ್ಲವೋ ಆ ಎಲ್ಲವನ್ನೂ ಈ ನೀತಿಶಾಸ್ತ್ರದಲ್ಲಿ ವರ್ಣಿಸಲಾಗಿದೆ.

12059075a ಏತತ್ಕೃತ್ವಾ ಶುಭಂ ಶಾಸ್ತ್ರಂ ತತಃ ಸ ಭಗವಾನ್ಪ್ರಭುಃ।
12059075c ದೇವಾನುವಾಚ ಸಂಹೃಷ್ಟಃ ಸರ್ವಾನ್ಶಕ್ರಪುರೋಗಮಾನ್।।

ಈ ಶುಭ ಶಾಸ್ತ್ರವನ್ನು ರಚಿಸಿ ಭಗವಾನ್ ಪ್ರಭುವು ಸಂಹೃಷ್ಟನಾಗಿ ಶಕ್ರನನ್ನೇ ಮುಂದಿಟ್ಟುಕೊಂಡಿದ್ದ ಸರ್ವ ದೇವತೆಗಳಿಗೂ ಹೇಳಿದನು:

12059076a ಉಪಕಾರಾಯ ಲೋಕಸ್ಯ ತ್ರಿವರ್ಗಸ್ಥಾಪನಾಯ ಚ।
12059076c ನವನೀತಂ ಸರಸ್ವತ್ಯಾ ಬುದ್ಧಿರೇಷಾ ಪ್ರಭಾವಿತಾ।।

“ಲೋಕದ ಉಪಕಾರಕ್ಕಾಗಿ ಮತ್ತು ತ್ರಿವರ್ಗಗಳ ಸ್ಥಾಪನೆಗಾಗಿ ಸರಸ್ವತಿಯಿಂದ ನನ್ನ ಬುದ್ಧಿಯಲ್ಲಿ ಈ ನವನೀತವು ಪ್ರಕಾಶಗೊಂಡಿದೆ.

12059077a ದಂಡೇನ ಸಹಿತಾ ಹ್ಯೇಷಾ ಲೋಕರಕ್ಷಣಕಾರಿಕಾ।
12059077c ನಿಗ್ರಹಾನುಗ್ರಹರತಾ ಲೋಕಾನನು ಚರಿಷ್ಯತಿ।।

ದಂಡಶಾಸ್ತ್ರವನ್ನು ಹೊಂದಿರುವ ಇದು ಲೋಕರಕ್ಷಣೆಗೆ ಕಾರಣವಾಗುತ್ತದೆ. ನಿಗ್ರಹ-ಅನುಗ್ರಹಗಳನ್ನು ವರ್ಣಿಸುವ ಇದು ಲೋಕಗಳಲ್ಲಿ ಪ್ರಚಲಿತವಾಗುತ್ತದೆ.

12059078a ದಂಡೇನ ನೀಯತೇ ಚೇಯಂ ದಂಡಂ ನಯತಿ ಚಾಪ್ಯುತ।
12059078c ದಂಡನೀತಿರಿತಿ ಪ್ರೋಕ್ತಾ ತ್ರೀಽಲ್ಲೋಕಾನನುವರ್ತತೇ।।

ದಂಡದ ಮೂಲಕ ಲೋಕವನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯಬಹುದು. ಮತ್ತು ದಂಡವೇ ಲೋಕವನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯುತ್ತದೆ. ದಂಡನೀತಿಯೆಂದು ಕರೆಯಲ್ಪಡುವ ಈ ನೀತಿಶಾಸ್ತ್ರವು ಮೂರು ಲೋಕಗಳನ್ನೂ ವ್ಯಾಪಿಸಿದೆ.

12059079a ಷಾಡ್ಗುಣ್ಯಗುಣಸಾರೈಷಾ ಸ್ಥಾಸ್ಯತ್ಯಗ್ರೇ ಮಹಾತ್ಮಸು।
12059079c ಮಹತ್ತ್ವಾತ್ತಸ್ಯ ದಂಡಸ್ಯ ನೀತಿರ್ವಿಸ್ಪಷ್ಟಲಕ್ಷಣಾ।।

ಆರುಗುಣಗಳ ಸಾರವು ಇದರಲ್ಲಿದೆ. ಮಹಾತ್ಮರ ಪ್ರಕಾರ ಇದರ ಸ್ಥಾನವು ಅತ್ಯುನ್ನತವಾಗಿದೆ. ದಂಡನೀತಿಯ ಸ್ಪಷ್ಟಲಕ್ಷಣಗಳೇ ಇದರ ಮಹತ್ತ್ವ.”

12059080a ನಯಚಾರಶ್ಚ ವಿಪುಲೋ ಯೇನ ಸರ್ವಮಿದಂ ತತಮ್।
12059080c ಆಗಮಶ್ಚ ಪುರಾಣಾನಾಂ ಮಹರ್ಷೀಣಾಂ ಚ ಸಂಭವಃ।।
12059081a ತೀರ್ಥವಂಶಶ್ಚ ವಂಶಶ್ಚ ನಕ್ಷತ್ರಾಣಾಂ ಯುಧಿಷ್ಠಿರ।
12059081c ಸಕಲಂ ಚಾತುರಾಶ್ರಮ್ಯಂ ಚಾತುರ್ಹೋತ್ರಂ ತಥೈವ ಚ।।
12059082a ಚಾತುರ್ವರ್ಣ್ಯಂ ತಥೈವಾತ್ರ ಚಾತುರ್ವೇದ್ಯಂ ಚ ವರ್ಣಿತಮ್।
12059082c ಇತಿಹಾಸೋಪವೇದಾಶ್ಚ ನ್ಯಾಯಃ ಕೃತ್ಸ್ನಶ್ಚ ವರ್ಣಿತಃ।।

ಯುಧಿಷ್ಠಿರ! ಸಂಪೂರ್ಣ ಶಿಷ್ಟಾಚಾರಗಳೆಲ್ಲವೂ; ಆಗಮ-ಪುರಾಣ ಮತ್ತು ಮಹರ್ಷಿಗಳ ಹುಟ್ಟು; ತೀರ್ಥಕ್ಷೇತ್ರಗಳ ವಂಶ, ನಕ್ಷತ್ರಗಳ ವಂಶ, ಚತುರಾಶ್ರಮಗಳ ಸಕಲವೂ; ನಾಲ್ಕು ಹೋತ್ರಗಳೂ, ಇತಿಹಾಸ-ಉಪವೇದಗಳು ಮತ್ತು ನ್ಯಾಯ ಇವೆಲ್ಲವೂ ಇದರಲ್ಲಿ ಸಂಪೂರ್ಣವಾಗಿ ವರ್ಣಿತಗೊಂಡಿವೆ.

12059083a ತಪೋ ಜ್ಞಾನಮಹಿಂಸಾ ಚ ಸತ್ಯಾಸತ್ಯೇ ನಯಃ ಪರಃ।
12059083c ವೃದ್ಧೋಪಸೇವಾ ದಾನಂ ಚ ಶೌಚಮುತ್ಥಾನಮೇವ ಚ।।
12059084a ಸರ್ವಭೂತಾನುಕಂಪಾ ಚ ಸರ್ವಮತ್ರೋಪವರ್ಣಿತಮ್।
12059084c ಭುವಿ ವಾಚೋಗತಂ ಯಚ್ಚ ತಚ್ಚ ಸರ್ವಂ ಸಮರ್ಪಿತಮ್।।

ತಪಸ್ಸು, ಜ್ಞಾನ, ಅಹಿಂಸೆ, ಸತ್ಯ, ಅಸತ್ಯ ಮತ್ತು ನ್ಯಾಯ, ವೃದ್ಧರ ಸೇವೆ, ದಾನ, ಶೌಚ, ಉತ್ಥಾನ, ಸರ್ವಭೂತಾನುಕಂಪ, ಇವೆಲ್ಲವೂ ಇದರಲ್ಲಿ ವರ್ಣಿತವಾಗಿವೆ. ಭುವಿಯಲ್ಲಿ ಮಾತನಾಡಲು ಏನೆಲ್ಲ ಇವೆಯೋ ಅವೆಲ್ಲವೂ ಇದರಲ್ಲಿವೆ.

12059085a ತಸ್ಮಿನ್ಪೈತಾಮಹೇ ಶಾಸ್ತ್ರೇ ಪಾಂಡವೈತದಸಂಶಯಮ್।
12059085c ಧರ್ಮಾರ್ಥಕಾಮಮೋಕ್ಷಾಶ್ಚ ಸಕಲಾ ಹ್ಯತ್ರ ಶಬ್ದಿತಾಃ।।

ಪಾಂಡವ! ಪಿತಾಮಹನ ಈ ಶಾಸ್ತ್ರದಲ್ಲಿ ನಿಸ್ಸಂಶಯವಾಗಿಯು ಧರ್ಮ-ಅರ್ಥ-ಕಾಮ-ಮೋಕ್ಷಗಳ ಕುರಿತಾದ ಎಲ್ಲವೂ ವರ್ಣಿತವಾಗಿವೆ.

12059086a ತತಸ್ತಾಂ ಭಗವಾನ್ನೀತಿಂ ಪೂರ್ವಂ ಜಗ್ರಾಹ ಶಂಕರಃ।
12059086c ಬಹುರೂಪೋ ವಿಶಾಲಾಕ್ಷಃ ಶಿವಃ ಸ್ಥಾಣುರುಮಾಪತಿಃ।।

ಮೊದಲು ಆ ನೀತಿಶಾಸ್ತ್ರವನ್ನು ಭಗವಾನ್ ಶಂಕರ ಬಹುರೂಪ ವಿಶಾಲಾಕ್ಷ ಶಿವ ಸ್ಥಾಣು ಉಮಾಪತಿಯು ಪ್ರತಿಗ್ರಹಿಸಿದನು.

12059087a ಯುಗಾನಾಮಾಯುಷೋ ಹ್ರಾಸಂ ವಿಜ್ಞಾಯ ಭಗವಾನ್ಶಿವಃ।
12059087c ಸಂಚಿಕ್ಷೇಪ ತತಃ ಶಾಸ್ತ್ರಂ ಮಹಾರ್ಥಂ ಬ್ರಹ್ಮಣಾ ಕೃತಮ್।।

ಯುಗಗಳ ಆಯಸ್ಸು ಕಡಿಮೆಯಾಗುತ್ತದೆಯೆಂದು ತಿಳಿದ ಭಗವಾನ್ ಶಿವನು ಮಹಾರ್ಥವುಳ್ಳ ಬ್ರಹ್ಮಕೃತ ಆ ಶಾಸ್ತ್ರವನ್ನು ಸಂಕ್ಷಿಪ್ತಗೊಳಿಸಿದನು.

12059088a ವೈಶಾಲಾಕ್ಷಮಿತಿ ಪ್ರೋಕ್ತಂ ತದಿಂದ್ರಃ ಪ್ರತ್ಯಪದ್ಯತ।
12059088c ದಶಾಧ್ಯಾಯಸಹಸ್ರಾಣಿ ಸುಬ್ರಹ್ಮಣ್ಯೋ ಮಹಾತಪಾಃ।।

ವೈಶಾಲಾಕ್ಷವೆಂದು ಕರೆಯಲ್ಪಟ್ಟ ಹತ್ತು ಸಾವಿರ ಅಧ್ಯಾಯಗಳುಳ್ಳ ಅದನ್ನು ಮಹಾತಪಸ್ವಿ ಸುಬ್ರಹ್ಮಣ್ಯ ಇಂದ್ರನು ಪಡೆದುಕೊಂಡನು.

12059089a ಭಗವಾನಪಿ ತಚ್ಚಾಸ್ತ್ರಂ ಸಂಚಿಕ್ಷೇಪ ಪುರಂದರಃ।
12059089c ಸಹಸ್ರೈಃ ಪಂಚಭಿಸ್ತಾತ ಯದುಕ್ತಂ ಬಾಹುದಂತಕಮ್।।

ಭಗವಾನ್ ಪುರಂದರನು ಅದನ್ನು ಇನ್ನೂ ಸಂಕ್ಷೇಪಗೊಳಿಸಿದನು. ಅಯ್ಯಾ! ಐದು ಸಾವಿರ ಅಧ್ಯಾಯಗಳಿದ್ದ ಅದು ಬಾಹುದಂತಕ ಎಂದಾಯಿತು.

12059090a ಅಧ್ಯಾಯಾನಾಂ ಸಹಸ್ರೈಸ್ತು ತ್ರಿಭಿರೇವ ಬೃಹಸ್ಪತಿಃ।
12059090c ಸಂಚಿಕ್ಷೇಪೇಶ್ವರೋ ಬುದ್ಧ್ಯಾ ಬಾರ್ಹಸ್ಪತ್ಯಂ ತದುಚ್ಯತೇ।।

ಈಶ್ವರ ಬೃಹಸ್ಪತಿಯು ತನ್ನ ಬುದ್ಧಿಯಿಂದ ಅದನ್ನು ಮೂರು ಸಾವಿರ ಅಧ್ಯಾಯಗಳಿದ್ದುದನ್ನು ಮಾಡಿ ಇನ್ನೂ ಸಂಕ್ಷೇಪಿಸಿದನು. ಅದನ್ನು ಬಾರ್ಹಸ್ಪತ್ಯ ಎಂದು ಕರೆಯುತ್ತಾರೆ.

12059091a ಅಧ್ಯಾಯಾನಾಂ ಸಹಸ್ರೇಣ ಕಾವ್ಯಃ ಸಂಕ್ಷೇಪಮಬ್ರವೀತ್।
12059091c ತಚ್ಚಾಸ್ತ್ರಮಮಿತಪ್ರಜ್ಞೋ ಯೋಗಾಚಾರ್ಯೋ ಮಹಾತಪಾಃ।।

ಆ ಶಾಸ್ತ್ರವನ್ನು ಯೋಗಾಚಾರ್ಯ ಮಹಾತಪಸ್ವಿ ಅಮಿತಪ್ರಜ್ಞ ಕಾವ್ಯನು ಒಂದು ಸಾವಿರ ಅಧ್ಯಾಯಗಳಾಗಿ ಸಂಕ್ಷೇಪಿಸಿದನು.

12059092a ಏವಂ ಲೋಕಾನುರೋಧೇನ ಶಾಸ್ತ್ರಮೇತನ್ಮಹರ್ಷಿಭಿಃ।
12059092c ಸಂಕ್ಷಿಪ್ತಮಾಯುರ್ವಿಜ್ಞಾಯ ಮರ್ತ್ಯಾನಾಂ ಹ್ರಾಸಿ ಪಾಂಡವ।।

ಪಾಂಡವ! ಹೀಗೆ ಲೋಕದಲ್ಲಿ ಮನುಷ್ಯರ ಆಯುಃ ಪ್ರಮಾಣವು ಕಡಿಮೆಯಾಗುತ್ತಿರುವುದನ್ನು ಮನಗಂಡ ಮಹರ್ಷಿಗಳು ಬ್ರಹ್ಮರಚಿತ ನೀತಿಶಾಸ್ತ್ರವನ್ನು ಲೋಕಹಿತಕ್ಕಾಗಿ ಸಂಕ್ಷಿಪ್ತಗೊಳಿಸುತ್ತಾ ಬಂದಿದ್ದಾರೆ.

12059093a ಅಥ ದೇವಾಃ ಸಮಾಗಮ್ಯ ವಿಷ್ಣುಮೂಚುಃ ಪ್ರಜಾಪತಿಮ್।
12059093c ಏಕೋ ಯೋಽರ್ಹತಿ ಮರ್ತ್ಯೇಭ್ಯಃ ಶ್ರೈಷ್ಠ್ಯಂ ತಂ ವೈ ಸಮಾದಿಶ।।

ಒಮ್ಮೆ ದೇವತೆಗಳು ಪ್ರಜಾಪತಿ ವಿಷ್ಣುವಿನ ಬಳಿಸಾರಿ “ಮನುಷ್ಯರಲ್ಲಿ ಶ್ರೇಷ್ಠನೆನಿಸಿಕೊಳ್ಳಲು ಅರ್ಹನಾದವನು ಯಾರು ಎನ್ನುವುದನ್ನು ತಿಳಿಸಿಕೊಡು!” ಎಂದು ಕೇಳಿಕೊಂಡರು.

12059094a ತತಃ ಸಂಚಿಂತ್ಯ ಭಗವಾನ್ದೇವೋ ನಾರಾಯಣಃ ಪ್ರಭುಃ।
12059094c ತೈಜಸಂ ವೈ ವಿರಜಸಂ ಸೋಽಸೃಜನ್ಮಾನಸಂ ಸುತಮ್।।

ಆಗ ಭಗವಾನ್ ದೇವ ನಾರಾಯಣ ಪ್ರಭುವು ಸ್ವಲ್ಪ ಹೊತ್ತು ಯೋಚಿಸಿ ತನ್ನ ತೇಜಸ್ಸಿನಿಂದ ವಿರಜಸನೆಂಬ ಮಾನಸ ಪುತ್ರನನ್ನು ಸೃಷ್ಟಿಸಿದನು.

12059095a ವಿರಜಾಸ್ತು ಮಹಾಭಾಗ ವಿಭುತ್ವಂ ಭುವಿ ನೈಚ್ಚತ।
12059095c ನ್ಯಾಸಾಯೈವಾಭವದ್ಬುದ್ಧಿಃ ಪ್ರಣೀತಾ ತಸ್ಯ ಪಾಂಡವ।।

ಮಹಾಭಾಗ! ಪಾಂಡವ! ಆದರೆ ವಿರಜಸನು ಭುವಿಯ ವಿಭುತ್ವವನ್ನು ಬಯಸಲಿಲ್ಲ. ಅವನ ಬುದ್ಧಿಯು ಸಂನ್ಯಾಸದಲ್ಲಿಯೇ ತೊಡಗಿಕೊಂಡಿತ್ತು.

12059096a ಕೀರ್ತಿಮಾಂಸ್ತಸ್ಯ ಪುತ್ರೋಽಭೂತ್ಸೋಽಪಿ ಪಂಚಾತಿಗೋಽಭವತ್।
12059096c ಕರ್ದಮಸ್ತಸ್ಯ ಚ ಸುತಃ ಸೋಽಪ್ಯತಪ್ಯನ್ಮಹತ್ತಪಃ।।

ಅವನಿಗೆ ಕೀರ್ತಿಮಾನನೆಂಬ ಮಗನು ಹುಟ್ಟಿದನು. ಆದರೆ ಅವನೂ ಪಂಚತತ್ತ್ವಗಳಿಗೂ ಅತೀತವಾದ ಅಧ್ಯಾತ್ಮವನ್ನೇ ಅನುಸರಿಸಿದನು. ಅವನ ಮಗ ಕರ್ದಮನೂ ಕೂಡ ಮಹಾತಪಸ್ಸಿನಲ್ಲಿಯೇ ನಿರತನಾದನು.

12059097a ಪ್ರಜಾಪತೇಃ ಕರ್ದಮಸ್ಯ ಅನಂಗೋ ನಾಮ ವೈ ಸುತಃ।
12059097c ಪ್ರಜಾನಾಂ ರಕ್ಷಿತಾ ಸಾಧುರ್ದಂಡನೀತಿವಿಶಾರದಃ।।

ಪ್ರಜಾಪತಿ ಕರ್ದಮನ ಮಗನ ಹೆಸರು ಅನಂಗ. ಅವನು ಪ್ರಜೆಗಳ ರಕ್ಷಕನೂ, ಸಾಧುವೂ, ದಂಡನೀತಿ ವಿಶಾರದನೂ ಆಗಿದ್ದನು.

12059098a ಅನಂಗಪುತ್ರೋಽತಿಬಲೋ ನೀತಿಮಾನಧಿಗಮ್ಯ ವೈ।
12059098c ಅಭಿಪೇದೇ ಮಹೀರಾಜ್ಯಮಥೇಂದ್ರಿಯವಶೋಽಭವತ್।।

ಅನಂಗನ ಮಗನು ಅತಿಬಲನು. ಅವನು ನೀತಿಶಾಸ್ತ್ರದಲ್ಲಿ ಪಾರಂಗತನಾಗಿದ್ದನು. ಅವನು ಮಹೀರಾಜ್ಯವನ್ನು ಆಳಿದನು. ಆದರೆ ಅವನು ಇಂದ್ರಿಯಗಳಿಗೆ ವಶನಾಗಿಬಿಟ್ಟಿದ್ದನು.

12059099a ಮೃತ್ಯೋಸ್ತು ದುಹಿತಾ ರಾಜನ್ಸುನೀಥಾ ನಾಮ ಮಾನಸೀ।
12059099c ಪ್ರಖ್ಯಾತಾ ತ್ರಿಷು ಲೋಕೇಷು ಯಾ ಸಾ ವೇನಮಜೀಜನತ್।।

ರಾಜನ್! ಮೃತ್ಯುವಿಗೆ ಸುನೀಥಾ ಎಂಬ ಹೆಸರಿನ ಮಾನಸ ಪುತ್ರಿಯಿದ್ದಳು. ಮೂರು ಲೋಕಗಳಲ್ಲಿಯೂ ವಿಖ್ಯಾತಳಾಗಿದ್ದ ಅವಳು ಅತಿಬಲನ ಮಗ ವೇನನಿಗೆ ಜನ್ಮವಿತ್ತಳು.

12059100a ತಂ ಪ್ರಜಾಸು ವಿಧರ್ಮಾಣಂ ರಾಗದ್ವೇಷವಶಾನುಗಮ್।
12059100c ಮಂತ್ರಪೂತೈಃ ಕುಶೈರ್ಜಘ್ನುರೃಷಯೋ ಬ್ರಹ್ಮವಾದಿನಃ।।

ರಾಗ-ದ್ವೇಷಗಳ ವಶಕ್ಕೆ ಸಿಲುಕಿ, ಪ್ರಜೆಗಳಲ್ಲಿ ಅಧರ್ಮವನ್ನೆಸಗುತ್ತಿದ್ದ ಅವನನ್ನು ಬ್ರಹ್ಮವಾದಿ ಋಷಿಗಳು ಮಂತ್ರಪೂತ ದರ್ಭೆಗಳಿಂದ ಸಂಹರಿಸಿದರು.

12059101a ಮಮಂಥುರ್ದಕ್ಷಿಣಂ ಚೋರುಮೃಷಯಸ್ತಸ್ಯ ಮಂತ್ರತಃ।
12059101c ತತೋಽಸ್ಯ ವಿಕೃತೋ ಜಜ್ಞೇ ಹ್ರಸ್ವಾಂಗಃ ಪುರುಷೋ ಭುವಿ।।

ಅನಂತರ ಋಷಿಗಳು ಮಂತ್ರಪೂರ್ವಕವಾಗಿ ಅವನ ಎಡತೊಡೆಯನ್ನು ಮಥಿಸಿದರು. ಅದರಿಂದ ಆಗ ಭುವಿಯಲ್ಲಿ ವಿಕೃತನಾಗಿದ್ದ ಕುಬ್ಜ ಪುರುಷನೊಬ್ಬನು ಜನಿಸಿದನು.

12059102a ದಗ್ಧಸ್ಥಾಣುಪ್ರತೀಕಾಶೋ ರಕ್ತಾಕ್ಷಃ ಕೃಷ್ಣಮೂರ್ಧಜಃ।
12059102c ನಿಷೀದೇತ್ಯೇವಮೂಚುಸ್ತಮೃಷಯೋ ಬ್ರಹ್ಮವಾದಿನಃ।।

ಸುಟ್ಟ ಕಲ್ಲಿನಂತೆ ತೋರುತ್ತಿದ್ದ, ಕೆಂಪುಕಣ್ಣಿನ ಮತ್ತು ಕಪ್ಪು ತಲೆಗೂದಲಿನ ಅವನಿಗೆ ಬ್ರಹ್ಮವಾದಿ ಋಷಿಗಳು “ಕುಳಿತುಕೋ!” ಎಂದು ಹೇಳಿದರು.

12059103a ತಸ್ಮಾನ್ನಿಷಾದಾಃ ಸಂಭೂತಾಃ ಕ್ರೂರಾಃ ಶೈಲವನಾಶ್ರಯಾಃ।
12059103c ಯೇ ಚಾನ್ಯೇ ವಿಂಧ್ಯನಿಲಯಾ ಮ್ಲೇಚ್ಚಾಃ ಶತಸಹಸ್ರಶಃ।।

ಅವನಿಂದಲೇ ಪರ್ವತ-ವನಗಳನ್ನು ಆಶ್ರಯಿಸಿದ ಕ್ರೂರ ನಿಷಾದರು ಮತ್ತು ವಿಂಧ್ಯಾಚಲ ನಿವಾಸಿಗಳಾದ ಅನ್ಯ ನೂರಾರು ಸಹಸ್ರಾರು ಮ್ಲೇಚ್ಛರೂ ಹುಟ್ಟಿದರು.

12059104a ಭೂಯೋಽಸ್ಯ ದಕ್ಷಿಣಂ ಪಾಣಿಂ ಮಮಂಥುಸ್ತೇ ಮಹರ್ಷಯಃ।
12059104c ತತಃ ಪುರುಷ ಉತ್ಪನ್ನೋ ರೂಪೇಣೇಂದ್ರ ಇವಾಪರಃ।।

ಮಹರ್ಷಿಗಳು ಪುನಃ ವೇನನ ಬಲಗೈಯನ್ನು ಕಡೆದರು. ಆಗ ಅದರಿಂದ ಇಂದ್ರನ ರೂಪವುಳ್ಳ ಇನ್ನೊಬ್ಬ ಪುರುಷನು ಉತ್ಪನ್ನನಾದನು.

12059105a ಕವಚೀ ಬದ್ಧನಿಸ್ತ್ರಿಂಶಃ ಸಶರಃ ಸಶರಾಸನಃ।
12059105c ವೇದವೇದಾಂಗವಿಚ್ಚೈವ ಧನುರ್ವೇದೇ ಚ ಪಾರಗಃ।।

ಕವಚವನ್ನು ಧರಿಸಿ, ಖಡ್ಗವನ್ನು ಸೊಂಟಕ್ಕೆ ಕಟ್ಟಿಕೊಂಡು, ಧನುಸ್ಸು-ಬಾಣಗಳನ್ನು ಹಿಡಿದಿದ್ದ ಅವನು ವೇದವೇದಾಂಗವಿದುವೂ ಧನುರ್ವೇದ ಪಾರಂಗತನೂ ಆಗಿದ್ದನು.

12059106a ತಂ ದಂಡನೀತಿಃ ಸಕಲಾ ಶ್ರಿತಾ ರಾಜನ್ನರೋತ್ತಮಮ್।
12059106c ತತಃ ಸ ಪ್ರಾಂಜಲಿರ್ವೈನ್ಯೋ ಮಹರ್ಷೀಂಸ್ತಾನುವಾಚ ಹ।।

ರಾಜನ್! ಆ ನರೋತ್ತಮನನ್ನು ಸಕಲ ದಂಡನೀತಿಗಳೂ ಆಶ್ರಯಿಸಿದವು. ಅನಂತರ ಆ ವೈನ್ಯನು ಮಹರ್ಷಿಗಳಿಗೆ ಕೈಮುಗಿದು ಹೇಳಿದನು:

12059107a ಸುಸೂಕ್ಷ್ಮಾ ಮೇ ಸಮುತ್ಪನ್ನಾ ಬುದ್ಧಿರ್ಧರ್ಮಾರ್ಥದರ್ಶಿನೀ।
12059107c ಅನಯಾ ಕಿಂ ಮಯಾ ಕಾರ್ಯಂ ತನ್ಮೇ ತತ್ತ್ವೇನ ಶಂಸತ।।

“ಧರ್ಮಾರ್ಥಗಳನ್ನು ಕಾಣುವ ಸೂಕ್ಷ್ಮ ಬುದ್ಧಿಯು ನನ್ನಲ್ಲಿ ಪ್ರಾದುರ್ಭವಿಸಿದೆ. ಇದರಿಂದ ನಾನು ಏನು ಕಾರ್ಯವನ್ನು ಮಾಡಬೇಕು ಎನ್ನುವುದನ್ನು ಯಥಾವತ್ತಾಗಿ ಹೇಳಿರಿ!

12059108a ಯನ್ಮಾಂ ಭವಂತೋ ವಕ್ಷ್ಯಂತಿ ಕಾರ್ಯಮರ್ಥಸಮನ್ವಿತಮ್।
12059108c ತದಹಂ ವೈ ಕರಿಷ್ಯಾಮಿ ನಾತ್ರ ಕಾರ್ಯಾ ವಿಚಾರಣಾ।।

ನೀವು ನನಗೆ ಅರ್ಥಸಮನ್ವಿತವಾದ ಯಾವ ಕಾರ್ಯದ ಕುರಿತು ಹೇಳುತ್ತೀರೋ ಅದನ್ನೇ ನಾನು ಮಾಡುತ್ತೇನೆ. ಅದರ ಕುರಿತು ವಿಚಾರಿಸಬೇಕಾಗಿಲ್ಲ!”

12059109a ತಮೂಚುರಥ ದೇವಾಸ್ತೇ ತೇ ಚೈವ ಪರಮರ್ಷಯಃ।
12059109c ನಿಯತೋ ಯತ್ರ ಧರ್ಮೋ ವೈ ತಮಶಂಕಃ ಸಮಾಚರ।।

ಆಗ ದೇವತೆಗಳೂ ಪರಮಋಷಿಗಳೂ ಅವನಿಗೆ ಹೇಳಿದರು: “ಯಾವುದರಲ್ಲಿ ಧರ್ಮವು ನಿಯತವಾಗಿದೆಯೋ ಶಂಕೆಯಿಲ್ಲದೇ ಅದರಂತೆ ನಡೆದುಕೋ!

12059110a ಪ್ರಿಯಾಪ್ರಿಯೇ ಪರಿತ್ಯಜ್ಯ ಸಮಃ ಸರ್ವೇಷು ಜಂತುಷು।
12059110c ಕಾಮಕ್ರೋಧೌ ಚ ಲೋಭಂ ಚ ಮಾನಂ ಚೋತ್ಸೃಜ್ಯ ದೂರತಃ।।

ಪ್ರಿಯ-ಅಪ್ರಿಯವೆಂಬ ವಿಚಾರವನ್ನು ಪರಿತ್ಯಜಿಸಿ, ಕಾಮ-ಕ್ರೋಧ ಮತ್ತು ಲೋಭ-ಮಾನಗಳನ್ನು ದೂರ ಬಿಸುಟು ಸರ್ವ ಜಂತುಗಳ ಕುರಿತೂ ಸಮಭಾವದಿಂದಿರು!

12059111a ಯಶ್ಚ ಧರ್ಮಾತ್ಪ್ರವಿಚಲೇಲ್ಲೋಕೇ ಕಶ್ಚನ ಮಾನವಃ।
12059111c ನಿಗ್ರಾಹ್ಯಸ್ತೇ ಸ ಬಾಹುಭ್ಯಾಂ ಶಶ್ವದ್ಧರ್ಮಮವೇಕ್ಷತಃ।।

ಯಾವಾಗಲೂ ಧರ್ಮವನ್ನೇ ಕಾಣುವ ನೀನು ಲೋಕದಲ್ಲಿ ಯಾವುದೇ ಮಾನವನು ಈ ಧರ್ಮವನ್ನು ಉಲ್ಲಂಘಿಸಿ ನಡೆದುಕೊಂಡರೆ ಅವನನ್ನು ನಿನ್ನ ಬಾಹುಗಳಿಂದ ನಿಗ್ರಹಿಸು.

12059112a ಪ್ರತಿಜ್ಞಾಂ ಚಾಧಿರೋಹಸ್ವ ಮನಸಾ ಕರ್ಮಣಾ ಗಿರಾ।
12059112c ಪಾಲಯಿಷ್ಯಾಮ್ಯಹಂ ಭೌಮಂ ಬ್ರಹ್ಮ ಇತ್ಯೇವ ಚಾಸಕೃತ್।।

ಅಲ್ಲದೇ ಈ ಪ್ರತಿಜ್ಞೆಯನ್ನೂ ಕೈಗೊಳ್ಳು: “ಮನಸ್ಸು, ಮಾತು ಮತ್ತು ಕರ್ಮಗಳಿಂದ ನಾನು ಈ ಭೂಮಿಯಲ್ಲಿ ಬ್ರಹ್ಮವಿದ್ಯೆಯನ್ನು ಪಾಲಿಸುತ್ತೇನೆ!

12059113a ಯಶ್ಚಾತ್ರ ಧರ್ಮನೀತ್ಯುಕ್ತೋ ದಂಡನೀತಿವ್ಯಪಾಶ್ರಯಃ।
12059113c ತಮಶಂಕಃ ಕರಿಷ್ಯಾಮಿ ಸ್ವವಶೋ ನ ಕದಾ ಚನ।।

ದಂಡನೀತಿಯಲ್ಲಿ ಧರ್ಮವೆಂದು ಏನು ಹೇಳಲ್ಪಟ್ಟಿದೆಯೋ ಅದನ್ನು ಶಂಕಿಸದೇ ಪಾಲಿಸುತ್ತೇನೆ. ನಾನು ಎಂದೂ ಸ್ವ-ವಶನಾಗುವುದಿಲ್ಲ!”

12059114a ಅದಂಡ್ಯಾ ಮೇ ದ್ವಿಜಾಶ್ಚೇತಿ ಪ್ರತಿಜಾನೀಷ್ವ ಚಾಭಿಭೋ।
12059114c ಲೋಕಂ ಚ ಸಂಕರಾತ್ಕೃತ್ಸ್ನಾತ್ತ್ರಾತಾಸ್ಮೀತಿ ಪರಂತಪ।।

ವಿಭೋ! ಪರಂತಪ! “ದ್ವಿಜರನ್ನು ದಂಡಿಸುವುದಿಲ್ಲ ಮತ್ತು ಲೋಕವನ್ನು ಸಂಕರದಿಂದ ಕಾಪಾಡುತ್ತೇನೆ!” ಎಂದೂ ಪ್ರತಿಜ್ಞೆಮಾಡು!”

12059115a ವೈನ್ಯಸ್ತತಸ್ತಾನುವಾಚ ದೇವಾನೃಷಿಪುರೋಗಮಾನ್।
12059115c ಬ್ರಾಹ್ಮಣಾ ಮೇ ಸಹಾಯಾಶ್ಚೇದೇವಮಸ್ತು ಸುರರ್ಷಭಾಃ।।

ಆಗ ವೈನ್ಯನು ಋಷಿಗಳನ್ನು ಮುಂದಿರಿಸಿಕೊಂಡು ಇದ್ದ ದೇವತೆಗಳಿಗೆ “ಬ್ರಾಹ್ಮಣರು ಮತ್ತು ಸುರರ್ಷಭ ದೇವತೆಗಳು ನನ್ನ ಸಹಾಯಕರಾಗಿರಬೇಕು!” ಎಂದು ಕೇಳಿಕೊಂಡನು.

12059116a ಏವಮಸ್ತ್ವಿತಿ ವೈನ್ಯಸ್ತು ತೈರುಕ್ತೋ ಬ್ರಹ್ಮವಾದಿಭಿಃ।
12059116c ಪುರೋಧಾಶ್ಚಾಭವತ್ತಸ್ಯ ಶುಕ್ರೋ ಬ್ರಹ್ಮಮಯೋ ನಿಧಿಃ।।

ಆ ಬ್ರಹ್ಮವಾದಿಗಳು ವೈನ್ಯನಿಗೆ ಹಾಗೆಯೇ ಆಗಲೆಂದು ಹೇಳಲು, ಬ್ರಹ್ಮಮಯ ನಿಧಿ ಶುಕ್ರನು ಅವನ ಪುರೋಹಿತನಾದನು.

12059117a ಮಂತ್ರಿಣೋ ವಾಲಖಿಲ್ಯಾಸ್ತು ಸಾರಸ್ವತ್ಯೋ ಗಣೋ ಹ್ಯಭೂತ್।
12059117c ಮಹರ್ಷಿರ್ಭಗವಾನ್ಗರ್ಗಸ್ತಸ್ಯ ಸಾಂವತ್ಸರೋಽಭವತ್।।

ವಾಲಖಿಲ್ಯರೂ ಸಾರಸ್ವತ ಗಣಗಳೂ ಮಂತ್ರಿಗಳಾದರು. ಮಹರ್ಷಿ ಭಗವಾನ್ ಗರ್ಗನು ಅವನು ಜ್ಯೋತಿಷಿಯಾದನು.

12059118a ಆತ್ಮನಾಷ್ಟಮ ಇತ್ಯೇವ ಶ್ರುತಿರೇಷಾ ಪರಾ ನೃಷು।
12059118c ಉತ್ಪನ್ನೌ ಬಂದಿನೌ ಚಾಸ್ಯ ತತ್ಪೂರ್ವೌ ಸೂತಮಾಗಧೌ।।

ಇವನು ಆತ್ಮರಲ್ಲಿ ಅಷ್ಟಮನೆಂದು ನರರಲ್ಲಿ ಪ್ರಖ್ಯಾತನಾದನು. ಅವನ ಮೊದಲೇ ಸೂತ-ಮಾಗಧರೆಂಬ ಸ್ತುತಿಪಾಠಕರು ಹುಟ್ಟಿದ್ದರು.

12059119a ಸಮತಾಂ ವಸುಧಾಯಾಶ್ಚ ಸ ಸಮ್ಯಗುಪಪಾದಯತ್।
12059119c ವೈಷಮ್ಯಂ ಹಿ ಪರಂ ಭೂಮೇರಾಸೀದಿತಿ ಹ ನಃ ಶ್ರುತಮ್।।

ವೈನ್ಯನು ಹಳ್ಳ-ತಿಟ್ಟುಗಳಿಂದ ಕೂಡಿದ್ದ ಭೂಮಿಯನ್ನು ಸಮತಟ್ಟಾಗಿ ಮಾಡಿದನೆಂದು ಕೇಳಿದ್ದೇವೆ.

12059120a ಸ ವಿಷ್ಣುನಾ ಚ ದೇವೇನ ಶಕ್ರೇಣ ವಿಬುಧೈಃ ಸಹ।
12059120c ಋಷಿಭಿಶ್ಚ ಪ್ರಜಾಪಾಲ್ಯೇ ಬ್ರಹ್ಮಣಾ ಚಾಭಿಷೇಚಿತಃ।।

ವಿಷ್ಣು, ಋಷಿಗಳು, ಪ್ರಜಾಪತಿಗಳು, ಬ್ರಾಹ್ಮಣರು ಮತ್ತು ವಿಬುಧರೊಂದಿಗೆ ದೇವ ಶಕ್ರನು ಅವನನ್ನು ಅಭಿಷೇಕಿಸಿದನು.

12059121a ತಂ ಸಾಕ್ಷಾತ್ಪೃಥಿವೀ ಭೇಜೇ ರತ್ನಾನ್ಯಾದಾಯ ಪಾಂಡವ।
12059121c ಸಾಗರಃ ಸರಿತಾಂ ಭರ್ತಾ ಹಿಮವಾಂಶ್ಚಾಚಲೋತ್ತಮಃ।।

ಪಾಂಡವ! ಸಾಕ್ಷಾತ್ ಪೃಥ್ವಿ, ಸರಿತಾಪತಿ ಸಾಗರ ಮತ್ತು ಅಚಲೋತ್ತಮ ಹಿಮವಾನರು ಅವನಿಗೆ ರತ್ನಗಳನ್ನಿತ್ತು ಸೇವೆಸಲ್ಲಿಸಿದರು.

12059122a ಶಕ್ರಶ್ಚ ಧನಮಕ್ಷಯ್ಯಂ ಪ್ರಾದಾತ್ತಸ್ಯ ಯುಧಿಷ್ಠಿರ।
12059122c ರುಕ್ಮಂ ಚಾಪಿ ಮಹಾಮೇರುಃ ಸ್ವಯಂ ಕನಕಪರ್ವತಃ।।

ಯುಧಿಷ್ಠಿರ! ಶಕ್ರನು ಅಕ್ಷಯ ಧನವನ್ನೂ, ಕನಕ ಪರ್ವತ ಸ್ವಯಂ ಮಹಾಮೇರುವು ಚಿನ್ನವನ್ನೂ ಅವನಿಗೆ ನೀಡಿದರು.

12059123a ಯಕ್ಷರಾಕ್ಷಸಭರ್ತಾ ಚ ಭಗವಾನ್ನರವಾಹನಃ।
12059123c ಧರ್ಮೇ ಚಾರ್ಥೇ ಚ ಕಾಮೇ ಚ ಸಮರ್ಥಂ ಪ್ರದದೌ ಧನಮ್।।

ಯಕ್ಷ-ರಾಕ್ಷಸರ ಒಡೆಯ, ನರವಾಹನ ಕುಬೇರನೂ ಕೂಡ ಅವನ ಧರ್ಮ-ಅರ್ಥ-ಕಾಮಗಳನ್ನು ಪೂರೈಸುವಷ್ಟು ಧನವನ್ನಿತ್ತನು.

12059124a ಹಯಾ ರಥಾಶ್ಚ ನಾಗಾಶ್ಚ ಕೋಟಿಶಃ ಪುರುಷಾಸ್ತಥಾ।
12059124c ಪ್ರಾದುರ್ಬಭೂವುರ್ವೈನ್ಯಸ್ಯ ಚಿಂತನಾದೇವ ಪಾಂಡವ।।

ಪಾಂಡವ! ವೈನ್ಯನು ಯೋಚಿಸಿದಂತಷ್ಟು ಕುದುರೆಗಳು, ರಥಗಳು, ಆನೆಗಳು, ಮತ್ತು ಕೋಟಿಗಟ್ಟಲೆ ಸೈನಿಕರು ಆವಿರ್ಭವಿಸಿದರು.

12059124E ನ ಜರಾ ನ ಚ ದುರ್ಭಿಕ್ಷಂ ನಾಧಯೋ ವ್ಯಾಧಯಸ್ತಥಾ 12059125a ಸರೀಸೃಪೇಭ್ಯಃ ಸ್ತೇನೇಭ್ಯೋ ನ ಚಾನ್ಯೋನ್ಯಾತ್ಕದಾ ಚನ।
12059125c ಭಯಮುತ್ಪದ್ಯತೇ ತತ್ರ ತಸ್ಯ ರಾಜ್ಞೋಽಭಿರಕ್ಷಣಾತ್।।

ಅವನ ರಾಜ್ಯಭಾರದ ರಕ್ಷಣೆಯಲ್ಲಿ ಯಾರಿಗೂ ಮುಪ್ಪಿರಲಿಲ್ಲ. ದುರ್ಭಿಕ್ಷವಿರಲಿಲ್ಲ. ಮಾನಸಿಕ ಮತ್ತು ಶಾರೀರಿಕ ವ್ಯಾಧಿಗಳಿರಲಿಲ್ಲ. ಸರ್ಪಗಳಿಂದಾಗಲೀ ಕಳ್ಳಕಾಕರಿಂದಾಗಲೀ, ಮತ್ತು ಅನ್ಯೋನ್ಯರಿಂದಾಗಲೀ ಯಾರಿಗೂ ಭಯವೆನ್ನುವುದೇ ಇರಲಿಲ್ಲ.

12059126a ತೇನೇಯಂ ಪೃಥಿವೀ ದುಗ್ಧಾ ಸಸ್ಯಾನಿ ದಶ ಸಪ್ತ ಚ।
12059126c ಯಕ್ಷರಾಕ್ಷಸನಾಗೈಶ್ಚಾಪೀಪ್ಸಿತಂ ಯಸ್ಯ ಯಸ್ಯ ಯತ್।।

ಅವನು ಪೃಥ್ವಿಯಿಂದ ಹದಿನೇಳು ಸಸ್ಯಗಳನ್ನು ಕರೆದನು. ಯಕ್ಷ-ರಾಕ್ಷಸ-ನಾಗರಿಗೆ, ಅವರವರು ಬಯಸಿದಂಥಹ ವಸ್ತುಗಳನ್ನು ಕೂಡ ಭೂಮಿಯಿಂದ ಕರೆದನು.

12059127a ತೇನ ಧರ್ಮೋತ್ತರಶ್ಚಾಯಂ ಕೃತೋ ಲೋಕೋ ಮಹಾತ್ಮನಾ।
12059127c ರಂಜಿತಾಶ್ಚ ಪ್ರಜಾಃ ಸರ್ವಾಸ್ತೇನ ರಾಜೇತಿ ಶಬ್ದ್ಯತೇ।।

ಆ ಮಹಾತ್ಮನು ಲೋಕದಲ್ಲಿ ಧರ್ಮದ ಪ್ರಾಧಾನ್ಯತೆಯನ್ನು ಪ್ರತಿಷ್ಠಾಪಿಸಿದನು. ಯಾರು ಸರ್ವ ಪ್ರಜೆಗಳನ್ನೂ ರಂಜಿಸುತ್ತಾನೆಯೋ ಅವನನ್ನೇ ರಾಜನೆಂದು ಕರೆಯುತ್ತಾರೆ.

12059128a ಬ್ರಾಹ್ಮಣಾನಾಂ ಕ್ಷತತ್ರಾಣಾತ್ತತಃ ಕ್ಷತ್ರಿಯ ಉಚ್ಯತೇ।
12059128c ಪ್ರಥಿತಾ ಧನತಶ್ಚೇಯಂ13 ಪೃಥಿವೀ ಸಾಧುಭಿಃ ಸ್ಮೃತಾ।।

ಬ್ರಾಹ್ಮಣರು ನಾಶಗೊಳ್ಳದಂತೆ ರಕ್ಷಿಸುವವನಿಗೆ ಕ್ಷತ್ರಿಯ ಎಂದು ಹೇಳುತ್ತಾರೆ. ಇವನಿಂದ ಧನವುಳ್ಳಂತಾದುದರಿಂದ ಸಾಧುಗಳು ಇದನ್ನು ಪೃಥ್ವಿ ಎಂದು ಕರೆಯತೊಡಗಿದರು.

12059129a ಸ್ಥಾಪನಂ ಚಾಕರೋದ್ವಿಷ್ಣುಃ ಸ್ವಯಮೇವ ಸನಾತನಃ।
12059129c ನಾತಿವರ್ತಿಷ್ಯತೇ ಕಶ್ಚಿದ್ರಾಜಂಸ್ತ್ವಾಮಿತಿ ಪಾರ್ಥಿವ।।

“ಪಾರ್ಥಿವ! ನಿನ್ನನ್ನು ಅತಿಕ್ರಮಿಸಿ ಯಾರೂ ನಡೆದುಕೊಳ್ಳುವುದಿಲ್ಲ!” ಎಂದು ಸ್ವಯಂ ಸನಾತನ ವಿಷ್ಣುವೇ ಅವನನ್ನು ಸ್ಥಾಪಿಸಿದನು.

12059130a ತಪಸಾ ಭಗವಾನ್ವಿಷ್ಣುರಾವಿವೇಶ ಚ ಭೂಮಿಪಮ್।
12059130c ದೇವವನ್ನರದೇವಾನಾಂ ನಮತೇ ಯಜ್ಜಗನ್ನೃಪ।।

ತಪಸ್ಸಿನಿಂದ ವಿಷ್ಣುವು ಆ ಭೂಮಿಪನನ್ನು ಪ್ರವೇಶಿಸಿದನು. ನೃಪ! ಆಗ ಇಡೀ ಜಗತ್ತು ದೇವತೆಯೋ ಎನ್ನುವಂತೆ ಆ ನರದೇವನನ್ನು ಸಮಸ್ಕರಿಸಿತು.

12059131a ದಂಡನೀತ್ಯಾ ಚ ಸತತಂ ರಕ್ಷಿತಂ ತಂ ನರೇಶ್ವರ।
12059131c ನಾಧರ್ಷಯತ್ತತಃ ಕಶ್ಚಿಚ್ಚಾರನಿತ್ಯಾಚ್ಚ ದರ್ಶನಾತ್।।

ನರೇಶ್ವರ! ನಿತ್ಯವೂ ಚಾರರನ್ನು ಕಾಣುತ್ತಾ ದಂಡನೀತಿಯಿಂದ ಸತತವೂ ರಕ್ಷಿತವಾದ ಅವನ ಆ ರಾಜ್ಯವನ್ನು ಯಾರೂ ಉಲ್ಲಂಘಿಸಲಾಗುತ್ತಿರಲಿಲ್ಲ.

12059132a ಆತ್ಮನಾ ಕರಣೈಶ್ಚೈವ ಸಮಸ್ಯೇಹ ಮಹೀಕ್ಷಿತಃ।
12059132c ಕೋ ಹೇತುರ್ಯದ್ವಶೇ ತಿಷ್ಠೇಲ್ಲೋಕೋ ದೈವಾದೃತೇ ಗುಣಾತ್।।

ಮಹೀಕ್ಷಿತನು ಆತ್ಮ ಮತ್ತು ಕರ್ಮಗಳ ಮೂಲಕ ಸರ್ವಸಮಭಾವದಿಂದ ಇರಬೇಕು. ಲೋಕವು ಒಬ್ಬನ ಅಧೀನದಲ್ಲಿರಬೇಕಾದರೆ ಅವನಲ್ಲಿರುವ ದೈವಗುಣಗಳಲ್ಲದೇ ಬೇರೆ ಯಾವ ಕಾರಣವಿರಲು ಸಾಧ್ಯ?

12059133a ವಿಷ್ಣೋರ್ಲಲಾಟಾತ್ಕಮಲಂ ಸೌವರ್ಣಮಭವತ್ತದಾ।
12059133c ಶ್ರೀಃ ಸಂಭೂತಾ ಯತೋ ದೇವೀ ಪತ್ನೀ ಧರ್ಮಸ್ಯ ಧೀಮತಃ।।

ಆಗ ವಿಷ್ಣುವಿನ ಲಲಾಟದಿಂದ ಸುವರ್ಣಮಯ ಕಮಲವು ಉದ್ಭವಿಸಿತು. ಅದರಿಂದ ಧೀಮತ ಧರ್ಮನ ಪತ್ನಿ ಶ್ರೀಯು ಹುಟ್ಟಿದಳು.

12059134a ಶ್ರಿಯಃ ಸಕಾಶಾದರ್ಥಶ್ಚ ಜಾತೋ ಧರ್ಮೇಣ ಪಾಂಡವ।
12059134c ಅಥ ಧರ್ಮಸ್ತಥೈವಾರ್ಥಃ ಶ್ರೀಶ್ಚ ರಾಜ್ಯೇ ಪ್ರತಿಷ್ಠಿತಾ।।

ಪಾಂಡವ! ಧರ್ಮದಿಂದ ಶ್ರೀಯಲ್ಲಿ ಅರ್ಥವು ಹುಟ್ಟಿಕೊಂಡಿತು. ಹಾಗೆ ರಾಜ್ಯದಲ್ಲಿ ಧರ್ಮ, ಅರ್ಥ ಮತ್ತು ಶ್ರೀಗಳು ಪ್ರತಿಷ್ಠಿತಗೊಂಡವು.

12059135a ಸುಕೃತಸ್ಯ ಕ್ಷಯಾಚ್ಚೈವ ಸ್ವರ್ಲೋಕಾದೇತ್ಯ ಮೇದಿನೀಮ್।
12059135c ಪಾರ್ಥಿವೋ ಜಾಯತೇ ತಾತ ದಂಡನೀತಿವಶಾನುಗಃ।।

ಮಗೂ! ಸ್ವರ್ಲೋಕದಲ್ಲಿದ್ದವನ ಸುಕೃತಗಳು ಕ್ಷಯಿಸಿದ ನಂತರ ಅವನು ಮೇದಿನಿಯ ಮೇಲೆ ದಂಡನೀತಿಯ ವಶಾನುಗನಾದ ಪಾರ್ಥಿವನಾಗಿ ಹುಟ್ಟುತ್ತಾನೆ.

12059136a ಮಹತ್ತ್ವೇನ ಚ ಸಂಯುಕ್ತೋ ವೈಷ್ಣವೇನ ನರೋ ಭುವಿ।
12059136c ಬುದ್ಧ್ಯಾ ಭವತಿ ಸಂಯುಕ್ತೋ ಮಾಹಾತ್ಮ್ಯಂ ಚಾಧಿಗಚ್ಚತಿ।।

ಆ ನರನು ಭುವಿಯಲ್ಲಿ ವೈಷ್ಣವ ಮಹತ್ತ್ವದಿಂದ ಸಂಯುಕ್ತನಾಗಿ ಬುದ್ಧಿಸಂಪನ್ನನಾಗಿ ವಿಶೇಷ ಹಿರಿಮೆಯನ್ನೂ ಹೊಂದುತ್ತಾನೆ.

12059137a ಸ್ಥಾಪನಾಮಥ ದೇವಾನಾಂ ನ ಕಶ್ಚಿದತಿವರ್ತತೇ।
12059137c ತಿಷ್ಠತ್ಯೇಕಸ್ಯ ಚ ವಶೇ ತಂ ಚೇದನುವಿಧೀಯತೇ।।

ದೇವತೆಗಳಿಂದ ಸ್ಥಾಪಿತನಾದ ರಾಜನನ್ನು ಯಾರೂ ಅತಿಕ್ರಮಿಸುವುದಿಲ್ಲ. ಒಬ್ಬನೇ ವಶದಲ್ಲಿ ಎಲ್ಲರೂ ಇರುತ್ತಾರೆ. ಯಾರೂ ಅವನಿಗೆ ಆಜ್ಞೆಮಾಡುವುದಿಲ್ಲ.

12059138a ಶುಭಂ ಹಿ ಕರ್ಮ ರಾಜೇಂದ್ರ ಶುಭತ್ವಾಯೋಪಕಲ್ಪತೇ।
12059138c ತುಲ್ಯಸ್ಯೈಕಸ್ಯ ಯಸ್ಯಾಯಂ ಲೋಕೋ ವಚಸಿ ತಿಷ್ಠತಿ।।

ರಾಜೇಂದ್ರ! ಶುಭಕರ್ಮಗಳು ಶುಭಪಲಗಳಿಂದಲೇ ಕೂಡಿರುತ್ತವೆ. ಎಲ್ಲರಂತೆ ಇವನ ಅವಯವಗಳಿದ್ದರೂ ಲೋಕವು ಅವನ ಮಾತಿನಂತೆ ನಡೆಯುತ್ತದೆ.

12059139a ಯೋ ಹ್ಯಸ್ಯ ಮುಖಮದ್ರಾಕ್ಷೀತ್ಸೋಮ್ಯ ಸೋಽಸ್ಯ ವಶಾನುಗಃ।
12059139c ಸುಭಗಂ ಚಾರ್ಥವಂತಂ ಚ ರೂಪವಂತಂ ಚ ಪಶ್ಯತಿ।।

ಅವನ ಸೌಮ್ಯ ಮುಖವನ್ನು ನೋಡಿ, ಅವನು ಸೌಭಾಗ್ಯಶಾಲಿಯೂ, ಧನವಂತನಾಗಿಯೂ, ರೂಪವಂತನಾಗಿಯೂ ಇರುವುದರಿಂದ ಜನರು ಅವನ ವಶವರ್ತಿಯಾಗಿರುತ್ತಾರೆ.

12059140a ತತೋ ಜಗತಿ ರಾಜೇಂದ್ರ ಸತತಂ ಶಬ್ದಿತಂ ಬುಧೈಃ।
12059140c ದೇವಾಶ್ಚ ನರದೇವಾಶ್ಚ ತುಲ್ಯಾ ಇತಿ ವಿಶಾಂ ಪತೇ।।

ರಾಜೇಂದ್ರ! ವಿಶಾಂಪತೇ! ಅನಂತರ ಜಗತ್ತಿನಲ್ಲಿ ತಿಳಿದವರು ದೇವತೆಗಳೂ ಮತ್ತು ರಾಜರೂ ಸಮಾನರು ಎಂದು ಹೇಳತೊಡಗಿದರು.

12059141a ಏತತ್ತೇ ಸರ್ವಮಾಖ್ಯಾತಂ ಮಹತ್ತ್ವಂ ಪ್ರತಿ ರಾಜಸು।
12059141c ಕಾರ್ತ್ಸ್ನ್ಯೇನ ಭರತಶ್ರೇಷ್ಠ ಕಿಮನ್ಯದಿಹ ವರ್ತತಾಮ್।।

ಭರತಶ್ರೇಷ್ಠ! ರಾಜರ ಮಹತ್ವದ ಕುರಿತು ನಿನಗೆ ಎಲ್ಲವನ್ನೂ ಅಮೂಲಾಗ್ರವಾಗಿ ಹೇಳಿದ್ದೇನೆ. ಇದರ ಕುರಿತು ಇನ್ನು ಏನನ್ನು ಹೇಳಬೇಕು?””

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ಸೂತ್ರಾಧ್ಯಾಯೇ ಏಕೋನಷಷ್ಠಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಸೂತ್ರಾಧ್ಯಾಯ ಎನ್ನುವ ಐವತ್ತೊಂಭತ್ತನೇ ಅಧ್ಯಾಯವು.


  1. ದಂಡಾತ್ ಸ್ಥಾನಂ-ಸಾಮ್ಯಂ ವಣಿಜಾಂ ಅರ್ಥಾತ್ ವರ್ತಕರು ಒಂದೇ ಸ್ಥಿತಿಯಲ್ಲಿರುವಂತೆ ಮಾಡುವುದು, ಹೆಚ್ಚಿನ ಲಾಭವನ್ನು ಪಡೆಯದಂತೆ ತೆರಿಗೆ ಮೊದಲಾದುವುಗಳನ್ನು ಹಾಕಿ ಸ್ತಿಮಿತದಲ್ಲಿಡುವುದು; ವೃದ್ಧಿ ತಪಸ್ವಿನಾಂ ಅರ್ಥಾತ್ ತಪಸ್ವಿಗಳ ವೃದ್ಧಿ ಮತ್ತು ಕ್ಷಯಶ್ಚೋರಾಣಾಂ ಅರ್ಥಾತ್ ಕಳ್ಳಕಾಕರ ವಿನಾಶ – ಇವು ದಂಡಜನ್ಯವಾದ ತ್ರಿವರ್ಗಗಳು. ↩︎

  2. ಕರ್ಮಕಾಂಡ . ↩︎

  3. ಜ್ಞಾನಕಾಂಡ . ↩︎

  4. ಕೃಷಿ, ಗೋರಕ್ಷಣೆ ಮತ್ತು ವಾಣಿಜ್ಯ ↩︎

  5. ಶತ್ರುವಿನ ಮೇಲೆ ಯುದ್ಧಕ್ಕೆ ಹೊರಡಲು ಇರುವ ನಾಲ್ಕು ಕಾಲವಿಶೇಷಗಳು: (೧) ತನ್ನ ಮಿತ್ರನ ವೃದ್ಧಿ (೨) ತನ್ನ ರಾಜ್ಯದ ಧನಕೋಶವನ್ನು ತುಂಬಿಸುವುದು (೩) ಶತ್ರುವಿನ ಮಿತ್ರನ ನಾಶ (೪) ಶತ್ರುವಿನ ಧನಕೋಶದ ನಾಶ. ↩︎

  6. ಮಂತ್ರಿ, ರಾಷ್ಟ್ರ, ದುರ್ಗ, ಸೈನ್ಯ ಮತ್ತು ಕೋಶ - ಇವು ಪಂಚವರ್ಗಗಳು. ↩︎

  7. ಪಂಚವರ್ಗಗಳ ಪ್ರತಿಯೊಂದರಲ್ಲಿಯೂ ಇರುವ ಉತ್ತಮ, ಮಧ್ಯಮ ಮತ್ತು ಅಧಮಗಳೆಂಬ ವಿಧಗಳು. ↩︎

  8. ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಹೋಗುವುದರಿಂದ ಉಂಟಾಗುವ ಮಾರ್ಪಾಡುಗಳು ↩︎

  9. ಭೂಮಿಯ ೮೪ ಗುಣಗಳು ಅಥವಾ ಬಲಗಳು. ↩︎

  10. ಮಣಿ, ಪಶು, ಭೂಮಿ, ವಸ್ತ್ರ, ದಾಸ-ದಾಸಿಯರು ಮತ್ತು ಸುವರ್ಣ ಇವುಗಳೇ ಷಟ್ ದ್ರವ್ಯಗಳು. ↩︎

  11. ವಿದ್ವದ್ಭಿರೇಕೀಭಾವಶ್ಚ ದಾನಹೋಮವಿಧಿಜ್ಞತಾ। ಎಂಬ ಪಾಠಾಂತರವಿದೆ. ↩︎

  12. ಹನ್ನೆರಡು ರಾಜರ ಸಮೂಹ. ನಾಲ್ಕು ದಿಕ್ಕುಗಳಲ್ಲಿಯೂ ಇರುವ ನಾಲ್ವರು ಶತ್ರುರಾಜರು, ನಾಲ್ವರು ಮಿತ್ರರಾಜರು ಮತ್ತು ನಾಲ್ವರು ಉದಾಸೀನರಾಜರು – ಒಟ್ಟು ಹನ್ನೆರಡು ರಾಜರು. ↩︎

  13. ಧರ್ಮತಶ್ಚೇಯಂ ಅರ್ಥಾತ್ ಧರ್ಮದ ಮೂಲಕವಾಗಿಯೇ ಈ ಭೂಮಿಯನ್ನು ಖ್ಯಾತಿಗೊಳಿಸಿದುದರಿಂದ ಎಂಬ ಪಾಠಾಂತರವಿದೆ (ಭಾರತ ದರ್ಶನ). ↩︎