ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ರಾಜಧರ್ಮ ಪರ್ವ
ಅಧ್ಯಾಯ 58
ಸಾರ
ಯುಧಿಷ್ಠಿರಾದಿ ಸ್ವಸ್ಥಾನಗಮನ (1-30).
12058001 ಭೀಷ್ಮ ಉವಾಚ।
12058001a ಏತತ್ತೇ ರಾಜಧರ್ಮಾಣಾಂ ನವನೀತಂ ಯುಧಿಷ್ಠಿರ।
12058001c ಬೃಹಸ್ಪತಿರ್ಹಿ ಭಗವಾನ್ನಾನ್ಯಂ ಧರ್ಮಂ ಪ್ರಶಂಸತಿ।।
ಭೀಷ್ಮನು ಹೇಳಿದನು: “ಯುಧಿಷ್ಠಿರ! ನಾನು ಈಗ ಹೇಳಲಿರುವುದು ರಾಜಧರ್ಮಗಳನ್ನು ಕಡೆದು ತೆಗೆದ ಬೆಣ್ಣೆಯಂಥಹ ವಿಷಯಗಳು. ಏಕೆಂದರೆ ಬೃಹಸ್ಪತಿಯೂ ಅನ್ಯ ಧರ್ಮಗಳನ್ನು ಪ್ರಶಂಸಿಸುವುದಿಲ್ಲ.
12058002a ವಿಶಾಲಾಕ್ಷಶ್ಚ ಭಗವಾನ್ಕಾವ್ಯಶ್ಚೈವ ಮಹಾತಪಾಃ।
12058002c ಸಹಸ್ರಾಕ್ಷೋ ಮಹೇಂದ್ರಶ್ಚ ತಥಾ ಪ್ರಾಚೇತಸೋ ಮನುಃ।।
12058003a ಭರದ್ವಾಜಶ್ಚ ಭಗವಾಂಸ್ತಥಾ ಗೌರಶಿರಾ ಮುನಿಃ।
12058003c ರಾಜಶಾಸ್ತ್ರಪ್ರಣೇತಾರೋ ಬ್ರಹ್ಮಣ್ಯಾ ಬ್ರಹ್ಮವಾದಿನಃ।।
12058004a ರಕ್ಷಾಮೇವ ಪ್ರಶಂಸಂತಿ ಧರ್ಮಂ ಧರ್ಮಭೃತಾಂ ವರ।
12058004c ರಾಜ್ಞಾಂ ರಾಜೀವತಾಮ್ರಾಕ್ಷ ಸಾಧನಂ ಚಾತ್ರ ವೈ ಶೃಣು।।
ಧರ್ಮಭೃತರಲ್ಲಿ ಶ್ರೇಷ್ಠನೇ! ಭಗವಾನ್ ವಿಶಾಲಾಕ್ಷ, ಮಹಾತಪಸ್ವಿ ಕಾವ್ಯ, ಸಹಸ್ರಾಕ್ಷ ಮಹೇಂದ್ರ, ಪ್ರಾಚೇತಸ ಮನು, ಭಗವಾನ್ ಭರದ್ವಾಜ, ಮುನಿ ಗೌರಶಿರ – ಈ ಎಲ್ಲ ರಾಜಶಾಸ್ತ್ರಪ್ರಣೇತಾರರೂ, ಬ್ರಹ್ಮಣ್ಯರೂ ಮತ್ತು ಬ್ರಹ್ಮವಾದಿಗಳೂ ರಕ್ಷಣೆಯೇ ರಾಜಧರ್ಮವೆಂದು ಪ್ರಶಂಸಿಸುತ್ತಾರೆ. ಕಮಲದಂತಹ ಕೆಂಪು ಕಣ್ಣುಗಳುಳ್ಳವನೇ! ರಾಜರು ಇದನ್ನು ಹೇಗೆ ಸಾಧಿಸಬೇಕೆನ್ನುವುದನ್ನು ಹೇಳುತ್ತೇನೆ ಕೇಳು.
12058005a ಚಾರಶ್ಚ ಪ್ರಣಿಧಿಶ್ಚೈವ ಕಾಲೇ ದಾನಮಮತ್ಸರಃ।
12058005c ಯುಕ್ತ್ಯಾದಾನಂ ನ ಚಾದಾನಮಯೋಗೇನ ಯುಧಿಷ್ಠಿರ।।
ಯುಧಿಷ್ಠಿರ! ಗುಪ್ತಚಾರರನ್ನೂ ಪ್ರತ್ಯಕ್ಷ ಚಾರರನ್ನೂ ಇಟ್ಟುಕೊಂಡಿರಬೇಕು. ಮತ್ಸರವಿಲ್ಲದೇ ಅವರಿಗೆ ಕಾಲ ಕಾಲಕ್ಕೆ ವೇತನಗಳನ್ನು ಕೊಡಬೇಕು. ಯುಕ್ತಿಯಿಂದ ಮತ್ತು ಜನರಿಗೆ ತೊಂದರೆಯುಂಟಾಗದ ರೀತಿಯಲ್ಲಿ ತೆರಿಗೆಗಳನ್ನು ತೆಗೆದುಕೊಳ್ಳಬೇಕು.
12058006a ಸತಾಂ ಸಂಗ್ರಹಣಂ ಶೌರ್ಯಂ ದಾಕ್ಷ್ಯಂ ಸತ್ಯಂ ಪ್ರಜಾಹಿತಮ್।
12058006c ಅನಾರ್ಜವೈರಾರ್ಜವೈಶ್ಚ ಶತ್ರುಪಕ್ಷಸ್ಯ ಭೇದನಮ್।।
ಸತ್ಪುರುಷರನ್ನು ಸಂಗ್ರಹಿಸಿಟ್ಟುಕೊಂಡಿರಬೇಕು. ಶೂರನಾಗಿರಬೇಕು. ಕಾರ್ಯದಕ್ಷನಾಗಿರಬೇಕು. ಸತ್ಯನಿಷ್ಟನೂ ಪ್ರಜೆಗಳ ಹಿತಕಾರಿಯೂ ಆಗಿರಬೇಕು. ಸರಳ ಅಥವಾ ಕಠಿನ ಮಾರ್ಗಗಳಿಂದ ಶತ್ರುಪಕ್ಷವನ್ನು ಭೇದಿಸಬೇಕು.
12058007a ಸಾಧೂನಾಮಪರಿತ್ಯಾಗಃ ಕುಲೀನಾನಾಂ ಚ ಧಾರಣಮ್।
12058007c ನಿಚಯಶ್ಚ ನಿಚೇಯಾನಾಂ ಸೇವಾ ಬುದ್ಧಿಮತಾಮಪಿ।।
ಸತ್ಪುರುಷರರನ್ನು ಪರಿತ್ಯಜಿಸಬಾರದು. ಕುಲೀನರ ಭರಣೆ-ಪೋಷಣೆ ಮಾಡಬೇಕು. ಯೋಗ್ಯ ವಸ್ತುಗಳನ್ನು ಸಂಗ್ರಹಿಸಬೇಕು. ಬುದ್ಧಿವಂತರ ಸೇವೆ ಮಾಡುತ್ತಿರಬೇಕು.
12058008a ಬಲಾನಾಂ ಹರ್ಷಣಂ ನಿತ್ಯಂ ಪ್ರಜಾನಾಮನ್ವವೇಕ್ಷಣಮ್।
12058008c ಕಾರ್ಯೇಷ್ವಖೇದಃ ಕೋಶಸ್ಯ ತಥೈವ ಚ ವಿವರ್ಧನಮ್।।
ಸೇನೆಗಳು ಯಾವಾಗಲೂ ಹರ್ಷಿತರಾಗಿರುವಂತೆ ನೋಡಿಕೊಳ್ಳಬೇಕು. ಪ್ರಜೆಗಳ ಕಷ್ಟ-ಸುಖಗಳನ್ನು ಪರಿಶೀಲಿಸುತ್ತಿರಬೇಕು. ಪ್ರಜೆಗಳ ಕುರಿತಾಗಿ ಮಾಡುವ ಕಾರ್ಯಗಳನ್ನು ಮಾಡುವಾಗ ಖೇದಿಸಬಾರದು. ಕೋಶವನ್ನು ತುಂಬಿಸುತ್ತಲೇ ಇರಬೇಕು.
12058009a ಪುರಗುಪ್ತಿರವಿಶ್ವಾಸಃ ಪೌರಸಂಘಾತಭೇದನಮ್।
12058009c ಕೇತನಾನಾಂ ಚ ಜೀರ್ಣಾನಾಮವೇಕ್ಷಾ ಚೈವ ಸೀದತಾಮ್।।
ಪುರದ ರಕ್ಷಣೆಯ ಕುರಿತು ಯಾರಮೇಲೂ ವಿಶ್ವಾಸವನ್ನಿಡಬಾರದು. ಪೌರರು ಶತ್ರುವಿನೊಡನೆ ಸಂಪರ್ಕವನ್ನಿಟ್ಟುಕೊಂಡಿದ್ದರೆ ಅದನ್ನು ಭೇದಿಸಬೇಕು. ಜೀರ್ಣಾವಸ್ಥೆಯಲ್ಲಿರುವ ಕಟ್ಟಡಗಳ ಜೀರ್ಣೋದ್ಧಾರ ಮಾಡುತ್ತಿರಬೇಕು.
12058010a ದ್ವಿವಿಧಸ್ಯ ಚ ದಂಡಸ್ಯ ಪ್ರಯೋಗಃ ಕಾಲಚೋದಿತಃ।
12058010c ಅರಿಮಧ್ಯಸ್ಥಮಿತ್ರಾಣಾಂ ಯಥಾವಚ್ಚಾನ್ವವೇಕ್ಷಣಮ್।।
ಕಾಲಕ್ಕೆ ಸರಿಯಾಗಿ ಎರಡು ರೀತಿಯ ದಂಡವನ್ನು ಪ್ರಯೋಗಿಸಬೇಕು – ಶರೀರ ದಂಡ ಮತ್ತು ಆರ್ಥಿಕ ದಂಡ. ಮಿತ್ರರ್ಯಾರು, ಶತ್ರುಗಳ್ಯಾರು ಮತ್ತು ಮಧ್ಯಸ್ಥರ್ಯಾರು ಎಂದು ಯಾವಾಗಲೂ ಪರಿಶೀಲಿಸುತ್ತಿರಬೇಕು.
12058011a ಉಪಜಾಪಶ್ಚ ಭೃತ್ಯಾನಾಮಾತ್ಮನಃ ಪರದರ್ಶನಾತ್।
12058011c ಅವಿಶ್ವಾಸಃ ಸ್ವಯಂ ಚೈವ ಪರಸ್ಯಾಶ್ವಾಸನಂ ತಥಾ।।
ಸೇವಕರು ತನ್ನ ಕುರಿತು ಶತ್ರುಗಳಿಗೆ ತಿಳಿಸದಿರುವಂತೆ ಜಾಗರೂಕನಾಗಿರಬೇಕು. ಯಾರಲ್ಲಿಯೂ ವಿಶ್ವಾಸವನ್ನಿಡಬಾರದು. ಶರಣಾಗತರಾದ ಶತ್ರುಗಳಿಗೆ ಆಶ್ವಾಸನೆಯನ್ನು ನೀಡಬೇಕು.
12058012a ನೀತಿಧರ್ಮಾನುಸರಣಂ ನಿತ್ಯಮುತ್ಥಾನಮೇವ ಚ।
12058012c ರಿಪೂಣಾಮನವಜ್ಞಾನಂ ನಿತ್ಯಂ ಚಾನಾರ್ಯವರ್ಜನಮ್।।
ನೀತಿ ಧರ್ಮವನ್ನು ಅನುಸರಿಸಬೇಕು. ನಿತ್ಯವೂ ಉದ್ಯೋಗಶೀಲನಾಗಿರಬೇಕು. ಶತ್ರುಗಳ ಕುರಿತು ಅಜ್ಞಾನಿಯಾಗಿರಬಾರದು. ನಿತ್ಯವೂ ಅನಾರ್ಯರನ್ನು ವರ್ಜಿಸಬೇಕು.
12058013a ಉತ್ಥಾನಂ ಹಿ ನರೇಂದ್ರಾಣಾಂ ಬೃಹಸ್ಪತಿರಭಾಷತ।
12058013c ರಾಜಧರ್ಮಸ್ಯ ಯನ್ಮೂಲಂ ಶ್ಲೋಕಾಂಶ್ಚಾತ್ರ ನಿಬೋಧ ಮೇ।।
ಉದ್ಯೋಗಶೀಲತೆಯೇ ನರೇಂದ್ರರ ರಾಜಧರ್ಮದ ಮೂಲ. ಇದರ ಕುರಿತು ಬೃಹಸ್ಪತಿಯು ಹೇಳಿರುವ ಶ್ಲೋಕಗಳನ್ನು ಕೇಳು.
12058014a ಉತ್ಥಾನೇನಾಮೃತಂ ಲಬ್ಧಮುತ್ಥಾನೇನಾಸುರಾ ಹತಾಃ।
12058014c ಉತ್ಥಾನೇನ ಮಹೇಂದ್ರೇಣ ಶ್ರೈಷ್ಠ್ಯಂ ಪ್ರಾಪ್ತಂ ದಿವೀಹ ಚ।।
“ಉದ್ಯೋಗಶೀಲತೆಯಿಂದಲೇ ಅಮೃತವು ದೊರೆಯಿತು. ಉದ್ಯೋಗಶೀಲತೆಯಿಂದಲೇ ಅಸುರರು ಹತರಾದರು. ಉದ್ಯೋಗಶೀಲತೆಯಿಂದಲೇ ಮಹೇಂದ್ರನು ದೇವ ಮತ್ತು ಈ ಲೋಕಗಳಲ್ಲಿ ಶ್ರೇಷ್ಠತೆಯನ್ನು ಪಡೆದುಕೊಂಡನು.
12058015a ಉತ್ಥಾನಧೀರಃ ಪುರುಷೋ ವಾಗ್ಧೀರಾನಧಿತಿಷ್ಠತಿ।
12058015c ಉತ್ಥಾನಧೀರಂ ವಾಗ್ಧೀರಾ ರಮಯಂತ ಉಪಾಸತೇ।।
ಉದ್ಯೋಗಧೀರನಾದ ಪುರುಷನು ವಾಗ್ಧೀರರಿಗಿಂತಲೂ ಹೆಚ್ಚಿನವನು. ವಾಗ್ಧೀರರು ಉದ್ಯೋಗಧೀರರನ್ನೇ ರಮಿಸುತ್ತಿರುತ್ತಾರೆ ಮತ್ತು ಪೂಜಿಸುತ್ತಿರುತ್ತಾರೆ.”
12058016a ಉತ್ಥಾನಹೀನೋ ರಾಜಾ ಹಿ ಬುದ್ಧಿಮಾನಪಿ ನಿತ್ಯಶಃ।
12058016c ಧರ್ಷಣೀಯೋ ರಿಪೂಣಾಂ ಸ್ಯಾದ್ಭುಜಂಗ ಇವ ನಿರ್ವಿಷಃ।।
ಉದ್ಯೋಗಶೀಲನಲ್ಲದ ರಾಜನು ಬುದ್ಧಿವಂತನೇ ಆಗಿದ್ದರೂ ವಿಷರಹಿತ ಸರ್ಪದಂತೆ ನಿತ್ಯವೂ ಶತ್ರುಗಳ ಆಕ್ರಮಣಕ್ಕೆ ಈಡಾಗುತ್ತಾನೆ.
12058017a ನ ಚ ಶತ್ರುರವಜ್ಞೇಯೋ ದುರ್ಬಲೋಽಪಿ ಬಲೀಯಸಾ।
12058017c ಅಲ್ಪೋಽಪಿ ಹಿ ದಹತ್ಯಗ್ನಿರ್ವಿಷಮಲ್ಪಂ ಹಿನಸ್ತಿ ಚ।।
ರಾಜನಾಗಿರುವವನು ಶತ್ರುಗಳ ಕುರಿತು ಅಜ್ಞಾನಿಯಾಗಿರಬಾರದು. ಅಲ್ಪವಾದರೂ ಅಗ್ನಿಯು ಸುಡುತ್ತದೆ ಮತ್ತು ವಿಷವು ಅಲ್ಪವಾಗಿದ್ದರೂ ಕೊಲ್ಲುತ್ತದೆ. ಹಾಗೆ ದುರ್ಬಲನಾಗಿ ಕಾಣುವ ಶತ್ರುವು ಮುಂದೆ ಪ್ರಬಲನಾಗಬಹುದು.
12058018a ಏಕಾಶ್ವೇನಾಪಿ ಸಂಭೂತಃ ಶತ್ರುರ್ದುರ್ಗಸಮಾಶ್ರಿತಃ।
12058018c ತಂ ತಂ ತಾಪಯತೇ ದೇಶಮಪಿ ರಾಜ್ಞಃ ಸಮೃದ್ಧಿನಃ।।
ಸಮೃದ್ಧ ರಾಜನ ದೇಶವನ್ನು ಒಂದೇ ಸೇನಾಂಗವನ್ನು ಇಟ್ಟುಕೊಂಡ ಶತ್ರುವೂ ದುರ್ಗವನ್ನು ಗೆದ್ದು ಪರಿತಾಪಕ್ಕೀಡುಮಾಡಬಹುದು.
12058019a ರಾಜ್ಞೋ ರಹಸ್ಯಂ ಯದ್ವಾಕ್ಯಂ ಜಯಾರ್ಥಂ ಲೋಕಸಂಗ್ರಹಃ।
12058019c ಹೃದಿ ಯಚ್ಚಾಸ್ಯ ಜಿಹ್ಮಂ ಸ್ಯಾತ್ಕಾರಣಾರ್ಥಂ ಚ ಯದ್ಭವೇತ್।।
12058020a ಯಚ್ಚಾಸ್ಯ ಕಾರ್ಯಂ ವೃಜಿನಮಾರ್ಜವೇನೈವ ಧಾರ್ಯತೇ।
12058020c ದಂಭನಾರ್ಥಾಯ ಲೋಕಸ್ಯ ಧರ್ಮಿಷ್ಠಾಮಾಚರೇತ್ಕ್ರಿಯಾಮ್।।
ರಾಜನ ರಹಸ್ಯ ಮಾತು, ವಿಜಯಕ್ಕಾಗಿ ಮಾಡಿದ ಲೋಕಸಂಗ್ರಹ, ಹೃದಯದಲ್ಲಿರುವ ದುರುದ್ದೇಶ, ವಿಜಯಕ್ಕಾಗಿ ನಡೆದು ಹೋದ ದುಷ್ಕಾರ್ಯ, ಮತ್ತು ಮಾಡಿದ ಸಮಯಕ್ಕೆ ತಕ್ಕುದಲ್ಲದ ಕಾರ್ಯ – ಇವುಗಳನ್ನು ರಾಜನಾದವನು ಅತ್ಯಂತ ಸರಳತೆಯಿಂದಲೇ ಧಾರಣೆಮಾಡಬೇಕು. ಲೋಕದಲ್ಲಿ ಪ್ರತಿಷ್ಠೆಗಾಗಿ ಅವನು ಧರ್ಮಿಷ್ಠನಾಗಿಯೇ ನಡೆದಕೊಳ್ಳಬೇಕು.
12058021a ರಾಜ್ಯಂ ಹಿ ಸುಮಹತ್ತಂತ್ರಂ ದುರ್ಧಾರ್ಯಮಕೃತಾತ್ಮಭಿಃ।
12058021c ನ ಶಕ್ಯಂ ಮೃದುನಾ ವೋಢುಮಾಘಾತಸ್ಥಾನಮುತ್ತಮಮ್।। 1
ರಾಜ್ಯಭಾರವು ಒಂದು ಮಹಾ ತಂತ್ರ. ಅಕೃತಾತ್ಮರಿಗೆ ಇದು ಕಷ್ಟದ ಕೆಲಸ. ಮೃದುತ್ವದಿಂದ ಈ ಜವಾಬ್ಧಾರಿಯನ್ನು ಹೊತ್ತುಕೊಳ್ಳುವುದು ಶಕ್ಯವಿಲ್ಲ. ಈ ಉತ್ತಮ ಸ್ಥಾನದಲ್ಲಿ ಆಘಾತಗಳಿರುತ್ತವೆ.
12058022a ರಾಜ್ಯಂ ಸರ್ವಾಮಿಷಂ ನಿತ್ಯಮಾರ್ಜವೇನೇಹ ಧಾರ್ಯತೇ।
12058022c ತಸ್ಮಾನ್ಮಿಶ್ರೇಣ ಸತತಂ ವರ್ತಿತವ್ಯಂ ಯುಧಿಷ್ಠಿರ।।
ರಾಜ್ಯವೆನ್ನುವುದು ಎಲ್ಲರಿಗೂ ಆಸೆಹುಟ್ಟಿಸುವಂಥಹುದು. ಆದರೆ ನಿತ್ಯವೂ ಸರಳಸ್ವಭಾವವಿರುವವನು ಮಾತ್ರ ಇದರ ಹೊಣೆಯನ್ನು ಹೊರಬಲ್ಲನು. ಯುಧಿಷ್ಠಿರ! ಆದುದರಿಂದ ರಾಜನಾದವನು ಸತತವೂ ಮಿಶ್ರರೀತಿಯಲ್ಲಿ - ಅಂದರೆ ಕ್ರೂರಿಗಳಿಗೆ ಕ್ರೂರಿಯಾಗಿಯೂ ಮೃದುಜನರಿಗೆ ಮೃದುವಾಗಿಯೂ – ವರ್ತಿಸಬೇಕಾಗುತ್ತದೆ.
12058023a ಯದ್ಯಪ್ಯಸ್ಯ ವಿಪತ್ತಿಃ ಸ್ಯಾದ್ರಕ್ಷಮಾಣಸ್ಯ ವೈ ಪ್ರಜಾಃ।
12058023c ಸೋಽಪ್ಯಸ್ಯ ವಿಪುಲೋ ಧರ್ಮ ಏವಂವೃತ್ತಾ ಹಿ ಭೂಮಿಪಾಃ।।
ಧರ್ಮದಿಂದ ಪ್ರಜಾರಕ್ಷಣೆಯನ್ನು ಮಾಡುತ್ತಿರುವ ರಾಜನಿಗೆ ಒಂದುವೇಳೆ ವಿಪತ್ತಿಯು ಬಂದೊದಗಿದರೂ ಅದು ಅವನಿಗೆ ವಿಪುಲ ಧರ್ಮವನ್ನೇ ನೀಡುತ್ತದೆ. ಹೀಗೆಯೇ ಹಿಂದಿನ ಭೂಮಿಪರೆಲ್ಲರೂ ನಡೆದುಕೊಂಡು ಬಂದಿದ್ದಾರೆ.
12058024a ಏಷ ತೇ ರಾಜಧರ್ಮಾಣಾಂ ಲೇಶಃ ಸಮನುವರ್ಣಿತಃ।
12058024c ಭೂಯಸ್ತೇ ಯತ್ರ ಸಂದೇಹಸ್ತದ್ ಬ್ರೂಹಿ ವದತಾಂ ವರ।।
ಮಾತನಾಡುವವರಲ್ಲಿ ಶ್ರೇಷ್ಠನೇ! ನಾನು ಈ ವರೆಗೆ ಲೇಶಮಾತ್ರವೇ ರಾಜಧರ್ಮಗಳನ್ನು ವರ್ಣಿಸಿದ್ದೇನೆ. ಇದರಲ್ಲಿ ಏನಾದರೂ ಸಂದೇಹವಿದ್ದರೆ ಕೇಳು. ಮತ್ತೆ ಹೇಳುತ್ತೇನೆ.””
12058025 ವೈಶಂಪಾಯನ ಉವಾಚ।
12058025a ತತೋ ವ್ಯಾಸಶ್ಚ ಭಗವಾನ್ದೇವಸ್ಥಾನೋಽಶ್ಮನಾ ಸಹ।
12058025c ವಾಸುದೇವಃ ಕೃಪಶ್ಚೈವ ಸಾತ್ಯಕಿಃ ಸಂಜಯಸ್ತಥಾ।।
12058026a ಸಾಧು ಸಾಧ್ವಿತಿ ಸಂಹೃಷ್ಟಾಃ ಪುಷ್ಯಮಾಣೈರಿವಾನನೈಃ।
12058026c ಅಸ್ತುವಂಸ್ತೇ ನರವ್ಯಾಘ್ರಂ ಭೀಷ್ಮಂ ಧರ್ಮಭೃತಾಂ ವರಮ್।।
ವೈಶಂಪಾಯನನು ಹೇಳಿದನು: “ಆಗ ಭಗವಾನ್ ವ್ಯಾಸ, ಅಶ್ಮನೊಂದಿಗೆ ದೇವಸ್ಥಾನ, ವಾಸುದೇವ, ಕೃಪ, ಸಾತ್ಯಕಿ ಮತ್ತು ಸಂಜಯರು ಸಂಹೃಷ್ಟರಾಗಿ ಅರಳಿದ ಕಮಲಗಳಂತಿದ್ದ ಮುಖಗಳಿಂದ “ಸಾಧು! ಸಾಧು!” ಎಂದು ಧರ್ಮಭೃತರಲ್ಲಿ ಶ್ರೇಷ್ಠ ನರವ್ಯಾಘ್ರ ಭೀಷ್ಮನನ್ನು ಕೊಂಡಾಡಿದರು.
12058027a ತತೋ ದೀನಮನಾ ಭೀಷ್ಮಮುವಾಚ ಕುರುಸತ್ತಮಃ।
12058027c ನೇತ್ರಾಭ್ಯಾಮಶ್ರುಪೂರ್ಣಾಭ್ಯಾಂ ಪಾದೌ ತಸ್ಯ ಶನೈಃ ಸ್ಪೃಶನ್।।
ಕುರುಸತ್ತಮ ಯುಧಿಷ್ಠಿರನು ದೀನಮನಸ್ಕನಾಗಿ ಕಂಬನಿದುಂಬಿದ ಕಣ್ಣುಗಳಿಂದ ಭೀಷ್ಮನ ಪಾದಗಳೆರಡನ್ನೂ ಮೃದುವಾಗಿ ಸ್ಪರ್ಶಿಸಿ ಹೇಳಿದನು:
12058028a ಶ್ವ ಇದಾನೀಂ ಸ್ವಸಂದೇಹಂ ಪ್ರಕ್ಷ್ಯಾಮಿ ತ್ವಂ ಪಿತಾಮಹ।
12058028c ಉಪೈತಿ ಸವಿತಾಪ್ಯಸ್ತಂ ರಸಮಾಪೀಯ ಪಾರ್ಥಿವಮ್।।
“ಪಿತಾಮಹ! ಸವಿತು ಸೂರ್ಯನು ಭೂಮಿಯ ರಸಗಳನ್ನು ಕುಡಿದು ಹೋಗುತ್ತಿದ್ದಾನೆ. ನಾಳೆ ನನ್ನ ಸಂದೇಹಗಳನ್ನು ನಿನ್ನಲ್ಲಿ ಕೇಳಿ ತಿಳಿದುಕೊಳ್ಳುತ್ತೇನೆ!”
12058029a ತತೋ ದ್ವಿಜಾತೀನಭಿವಾದ್ಯ ಕೇಶವಃ ಕೃಪಶ್ಚ ತೇ ಚೈವ ಯುಧಿಷ್ಠಿರಾದಯಃ।
12058029c ಪ್ರದಕ್ಷಿಣೀಕೃತ್ಯ ಮಹಾನದೀಸುತಂ ತತೋ ರಥಾನಾರುರುಹುರ್ಮುದಾ ಯುತಾಃ।।
ಅನಂತರ ಬ್ರಾಹ್ಮಣರಿಗೆ ಅಭಿವಂದಿಸಿ ಕೇಶವ, ಕೃಪ, ಯುಧಿಷ್ಠಿರಾದಿಗಳು ಮಹಾನದೀಸುತನಿಗೆ ಪ್ರದಕ್ಷಿಣೆಗೈದು ಸಂತೋಷದಿಂದ ರಥಗಳನ್ನೇರಿದರು.
12058030a ದೃಷದ್ವತೀಂ ಚಾಪ್ಯವಗಾಹ್ಯ ಸುವ್ರತಾಃ ಕೃತೋದಕಾರ್ಯಾಃ ಕೃತಜಪ್ಯಮಂಗಲಾಃ।
12058030c ಉಪಾಸ್ಯ ಸಂಧ್ಯಾಂ ವಿಧಿವತ್ಪರಂತಪಾಸ್ ತತಃ ಪುರಂ ತೇ ವಿವಿಶುರ್ಗಜಾಹ್ವಯಮ್।।
ಆ ಸುವ್ರತ ಪರಂತಪರು ದೃಷದ್ವತೀ ನದಿಯಲ್ಲಿ ಉದಕಕಾರ್ಯಗಳನ್ನು ಮಾಡಿ. ಮಂಗಲ ಜಪಗಳನ್ನು ಮಾಡಿ, ವಿಧಿವತ್ತಾಗಿ ಸಂಧ್ಯಾವಂದನೆಗಳನ್ನು ಮಾಡಿ ನಂತರ ಗಜಾಹ್ವಯ ಪುರವನ್ನು ಪ್ರವೇಶಿಸಿದರು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ಯುಧಿಷ್ಠಿರಾದಿಸ್ವಸ್ಥಾನಗಮನೇ ಅಷ್ಠಪಂಚಶತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಯುಧಿಷ್ಠಿರಾದಿಗಳ ಸ್ವಸ್ಥಾನಗಮನ ಎನ್ನುವ ಐವತ್ತೆಂಟನೇ ಅಧ್ಯಾಯವು.
-
ನ ಶಕ್ಯಂ ವೃದುನಾ ವೋಢುಮಾಯಾಸಸ್ಥಾನಮುತ್ತಮಮ್। ಅರ್ಥಾತ್ ಮೃದುಸ್ವಭಾವದಿಂದ ರಾಜ್ಯವನ್ನು ಭರಿಸಲು ಶಕ್ಯವಿಲ್ಲ. ರಾಜ್ಯವನ್ನು ಆಳುವುದೆಂಬುದು ಅತ್ಯಂತ ಪರಿಶ್ರಮದಿಂದಲೇ ಸಾಧ್ಯವಾಗಬಲ್ಲ ಕಾರ್ಯವು ಎಂಬ ಪಾಠಾಂತರವಿದೆ. ↩︎