057

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ರಾಜಧರ್ಮ ಪರ್ವ

ಅಧ್ಯಾಯ 57

ಸಾರ

12057001 ಭೀಷ್ಮ ಉವಾಚ।
12057001a ನಿತ್ಯೋದ್ಯುಕ್ತೇನ ವೈ ರಾಜ್ಞಾ ಭವಿತವ್ಯಂ ಯುಧಿಷ್ಠಿರ।
12057001c ಪ್ರಶಾಮ್ಯತೇ ಚ ರಾಜಾ ಹಿ ನಾರೀವೋದ್ಯಮವರ್ಜಿತಃ।।

ಭೀಷ್ಮನು ಹೇಳಿದನು: “ಯುಧಿಷ್ಠಿರ! ರಾಜನು ನಿತ್ಯವೂ ಉದ್ಯೋಗಶೀಲನಾಗಿರಬೇಕು. ಗೃಹಕೃತ್ಯಗಳಲ್ಲಿ ಅನಾಸಕ್ತಳಾದ ನಾರಿಯಂತೆ ನಿರುದ್ಯೋಗಿಯಾದ ರಾಜನು ಪ್ರಶಂಸೆಗೆ ಪಾತ್ರನಾಗುವುದಿಲ್ಲ.

12057002a ಭಗವಾನುಶನಾ ಚಾಹ ಶ್ಲೋಕಮತ್ರ ವಿಶಾಂ ಪತೇ।
12057002c ತಮಿಹೈಕಮನಾ ರಾಜನ್ಗದತಸ್ತ್ವಂ ನಿಬೋಧ ಮೇ।।

ವಿಶಾಂಪತೇ! ಇದಕ್ಕೆ ಸಂಬಂಧಿಸಿದಂತೆ ಭಗವಾನ್ ಉಶನನು ಒಂದು ಶ್ಲೋಕವನ್ನು ಹೇಳಿದ್ದಾನೆ. ರಾಜನ್! ನಿನಗೆ ಅದನ್ನು ಹೇಳುತ್ತೇನೆ. ಏಕಾಗ್ರಚಿತ್ತನಾಗಿ ಕೇಳು.

12057003a ದ್ವಾವೇತೌ ಗ್ರಸತೇ ಭೂಮಿಃ ಸರ್ಪೋ ಬಿಲಶಯಾನಿವ।
12057003c ರಾಜಾನಂ ಚಾವಿರೋದ್ಧಾರಂ ಬ್ರಾಹ್ಮಣಂ ಚಾಪ್ರವಾಸಿನಮ್।।

“ಬಿಲದಲ್ಲಿರುವ ಇಲಿ-ಕಪ್ಪೆಗಳನ್ನು ಸರ್ಪವು ನುಂಗಿಬಿಡುವಂತೆ ಶತ್ರುಗಳೊಡನೆ ಯುದ್ಧಮಾಡದಿರುವ ರಾಜ ಮತ್ತು ದೇಶಸಂಚಾರ ಮಾಡದಿರುವ ಬ್ರಾಹ್ಮಣ ಇಬ್ಬರನ್ನೂ ಭೂಮಿಯು ನುಂಗಿಹಾಕುತ್ತದೆ.”

12057004a ತದೇತನ್ನರಶಾರ್ದೂಲ ಹೃದಿ ತ್ವಂ ಕರ್ತುಮರ್ಹಸಿ।
12057004c ಸಂಧೇಯಾನಪಿ ಸಂಧತ್ಸ್ವ ವಿರೋಧ್ಯಾಂಶ್ಚ ವಿರೋಧಯ।।

ನರಶಾರ್ದೂಲ! ಆದುದರಿಂದ ಇದನ್ನು ನೀನು ಹೃದ್ಗತಮಾಡಿಕೊಳ್ಳಬೇಕು. ಸಂಧಿಗೆ ಯೋಗ್ಯರಾದವರೊಡನೆ ಸಂಧಿಮಾಡಿಕೋ ಮತ್ತು ವಿರೋಧಿಸಬೇಕಾದವರನ್ನು ವಿರೋಧಿಸು.

12057005a ಸಪ್ತಾಂಗೇ ಯಶ್ಚ ತೇ ರಾಜ್ಯೇ ವೈಪರೀತ್ಯಂ ಸಮಾಚರೇತ್।
12057005c ಗುರುರ್ವಾ ಯದಿ ವಾ ಮಿತ್ರಂ ಪ್ರತಿಹಂತವ್ಯ ಏವ ಸಃ।।

ರಾಜ್ಯದ ಸಪ್ತಾಂಗ1ಗಳಿಗೆ ವಿರುದ್ಧವಾಗಿ ಯಾರು ನಡೆದುಕೊಳ್ಳುತ್ತಾರೋ ಅವನನ್ನು, ಗುರುವಾಗಿರಲಿ ಅಥವಾ ಮಿತ್ರನಾಗಿರಲಿ, ಸಂಹರಿಸಲೇ ಬೇಕು.

12057006a ಮರುತ್ತೇನ ಹಿ ರಾಜ್ಞಾಯಂ ಗೀತಃ ಶ್ಲೋಕಃ ಪುರಾತನಃ।
12057006c ರಾಜ್ಯಾಧಿಕಾರೇ ರಾಜೇಂದ್ರ ಬೃಹಸ್ಪತಿಮತಃ ಪುರಾ।।

ರಾಜೇಂದ್ರ! ಬೃಹಸ್ಪತಿಯ ಅಭಿಪ್ರಾಯದಂತೆ ರಾಜಾಧಿಕಾರದ ವಿಷಯದಲ್ಲಿ ಹಿಂದೆ ಮರುತ್ತನು ಹೇಳಿದ ಈ ಪುರಾತನ ಶ್ಲೋಕವನ್ನು ಉದಾಹರಿಸುತ್ತೇನೆ.

12057007a ಗುರೋರಪ್ಯವಲಿಪ್ತಸ್ಯ ಕಾರ್ಯಾಕಾರ್ಯಮಜಾನತಃ।
12057007c ಉತ್ಪಥಪ್ರತಿಪನ್ನಸ್ಯ ಪರಿತ್ಯಾಗೋ ವಿಧೀಯತೇ।।

“ದುರಹಂಕಾರದಿಂದ ಯಾವುದನ್ನು ಮಾಡಬೇಕು ಮತ್ತು ಯಾವುದನ್ನು ಮಾಡಬಾರದು ಎಂದು ತಿಳಿಯದೇ ತಪ್ಪು ಹಾದಿಯನ್ನು ಹಿಡಿದಿರುವವನು ಆಚಾರ್ಯನೇ ಆಗಿದ್ದರೂ ಪರಿತ್ಯಜಿಸಬೇಕೆಂದು ಹೇಳುತ್ತಾರೆ.”

12057008a ಬಾಹೋಃ ಪುತ್ರೇಣ ರಾಜ್ಞಾ ಚ ಸಗರೇಣೇಹ ಧೀಮತಾ।
12057008c ಅಸಮಂಜಾಃ ಸುತೋ ಜ್ಯೇಷ್ಠಸ್ತ್ಯಕ್ತಃ ಪೌರಹಿತೈಷಿಣಾ।।

ಬಾಹುವಿನ ಮಗ, ಧೀಮಂತ ರಾಜ ಸಗರನು ತನ್ನ ಜ್ಯೇಷ್ಠ ಪುತ್ರ ಅಸಮಂಜಸನನ್ನು ಪೌರರ ಹಿತವನ್ನು ಬಯಸಿ ತ್ಯಜಿಸಿದನು.

12057009a ಅಸಮಂಜಾಃ ಸರಯ್ವಾಂ ಪ್ರಾಕ್ಪೌರಾಣಾಂ ಬಾಲಕಾನ್ನೃಪ।
12057009c ನ್ಯಮಜ್ಜಯದತಃ ಪಿತ್ರಾ ನಿರ್ಭರ್ತ್ಸ್ಯ ಸ ವಿವಾಸಿತಃ।।

ನೃಪ! ಅಸಮಂಜಸನು ಪೌರರ ಬಾಲಕರನ್ನು ಸರಯೂ ನದಿಯಲ್ಲಿ ಮುಳುಗಿಸಿಬಿಡುತ್ತಿದ್ದನು. ಆದುದರಿಂದ ಅವನ ತಂದೆಯು ಅವನನ್ನು ರಾಜ್ಯದಿಂದ ಹೊರಗಟ್ಟಿದನು.

12057010a ಋಷಿಣೋದ್ದಾಲಕೇನಾಪಿ ಶ್ವೇತಕೇತುರ್ಮಹಾತಪಾಃ।
12057010c ಮಿಥ್ಯಾ ವಿಪ್ರಾನುಪಚರನ್ಸಂತ್ಯಕ್ತೋ ದಯಿತಃ ಸುತಃ।।

ಋಷಿ ಉದ್ದಾಲಕನೂ ಕೂಡ ತನ್ನ ಪ್ರಿಯ ಮಗ ಮಹಾತಪಸ್ವಿ ಶ್ವೇತಕೇತುವನ್ನು ವಿಪ್ರರೊಡನೆ ವಂಚನೆಯಿಂದ ವರ್ತಿಸಿದುದರಿಂದ ತ್ಯಜಿಸಿದನು.

12057011a ಲೋಕರಂಜನಮೇವಾತ್ರ ರಾಜ್ಞಾಂ ಧರ್ಮಃ ಸನಾತನಃ।
12057011c ಸತ್ಯಸ್ಯ ರಕ್ಷಣಂ ಚೈವ ವ್ಯವಹಾರಸ್ಯ ಚಾರ್ಜವಮ್।।

ಪ್ರಜಾರಂಜನೆ, ಸತ್ಯದ ರಕ್ಷಣೆ ಮತ್ತು ವ್ಯವಹಾರಗಳಲ್ಲಿ ಸರಳತೆ ಇವೇ ರಾಜನ ಸನಾತನ ಧರ್ಮವಾಗಿದೆ.

12057012a ನ ಹಿಂಸ್ಯಾತ್ಪರವಿತ್ತಾನಿ ದೇಯಂ ಕಾಲೇ ಚ ದಾಪಯೇತ್।
12057012c ವಿಕ್ರಾಂತಃ ಸತ್ಯವಾಕ್ಕ್ಷಾಂತೋ ನೃಪೋ ನ ಚಲತೇ ಪಥಃ।।

ಪರರ ಸ್ವತ್ತನ್ನು ನಾಶಗೊಳಿಸಬಾರದು. ಕೊಡಬೇಕಾದುದನ್ನು ಕಾಲಕ್ಕೆ ಸರಿಯಾಗಿ ಕೊಟ್ಟುಬಿಡಬೇಕು. ಪರಾಕ್ರಮಿಯಾದ, ಸತ್ಯವಾಗ್ಮಿಯಾದ, ಮತ್ತು ದಯಾಪರನಾದ ರಾಜನು ಧರ್ಮಮಾರ್ಗದಿಂದ ವಿಚಲಿತನಾಗುವುದಿಲ್ಲ.

12057013a ಗುಪ್ತಮಂತ್ರೋ ಜಿತಕ್ರೋಧೋ ಶಾಸ್ತ್ರಾರ್ಥಗತನಿಶ್ಚಯಃ।
12057013c ಧರ್ಮೇ ಚಾರ್ಥೇ ಚ ಕಾಮೇ ಚ ಮೋಕ್ಷೇ ಚ ಸತತಂ ರತಃ।।
12057014a ತ್ರಯ್ಯಾ ಸಂವೃತರಂಧ್ರಶ್ಚ ರಾಜಾ ಭವಿತುಮರ್ಹತಿ।
12057014c ವೃಜಿನಸ್ಯ ನರೇಂದ್ರಾಣಾಂ ನಾನ್ಯತ್ಸಂವರಣಾತ್ಪರಮ್।।

ಗುಪ್ತವಾಗಿ ಮಂತ್ರಾಲೋಚನೆ ಮಾಡುವವನು, ಕ್ರೋಧವನ್ನು ಜಯಿಸಿದವನು, ಶಾಸ್ತ್ರಗಳ ಅರ್ಥ-ನಿಶ್ಚಯಗಳನ್ನು ಅರಿತವನು, ಸತತವೂ ಧರ್ಮ-ಅರ್ಥ-ಕಾಮ-ಮೋಕ್ಷಗಳಲ್ಲಿ ನಿರತನಾದವನು, ಮೂರು ವೇದಗಳ ರಹಸ್ಯವನ್ನು ತಿಳಿದಿರುವವನು, ಗುಪ್ತಾಲೋಚನೆಗಳನ್ನು ಗೌಪ್ಯವಾಗಿಯೇ ಇಟ್ಟಿರುವವನು ರಾಜನಾಗಲು ಯೋಗ್ಯನಾಗುತ್ತಾನೆ. ನರೇಂದ್ರರಿಗೆ ಪ್ರಜಾಪಾಲನೆಯ ಹೊರತಾಗಿ ಬೇರೆ ಪರಮ ಧರ್ಮವೇ ಇಲ್ಲ.

12057015a ಚಾತುರ್ವರ್ಣ್ಯಸ್ಯ ಧರ್ಮಾಶ್ಚ ರಕ್ಷಿತವ್ಯಾ ಮಹೀಕ್ಷಿತಾ।
12057015c ಧರ್ಮಸಂಕರರಕ್ಷಾ ಹಿ ರಾಜ್ಞಾಂ ಧರ್ಮಃ ಸನಾತನಃ।।

ಭೂಮಿಯಲ್ಲಿ ಚಾತುರ್ವರ್ಣ್ಯಗಳ ಧರ್ಮಗಳನ್ನು ರಕ್ಷಿಸಬೇಕು. ಧರ್ಮವನ್ನು ಸಂಕರದಿಂದ ರಕ್ಷಿಸುವುದೇ ರಾಜನ ಸನಾತನ ಧರ್ಮವು.

12057016a ನ ವಿಶ್ವಸೇಚ್ಚ ನೃಪತಿರ್ನ ಚಾತ್ಯರ್ಥಂ ನ ವಿಶ್ವಸೇತ್।
12057016c ಷಾಡ್ಗುಣ್ಯಗುಣದೋಷಾಂಶ್ಚ ನಿತ್ಯಂ ಬುದ್ಧ್ಯಾವಲೋಕಯೇತ್।।

ನೃಪತಿಯು ಯಾರಲ್ಲಿಯೂ ವಿಶ್ವಾಸವನ್ನಿಡಬಾರದು. ವಿಶ್ವಾಸಕ್ಕೆ ಪಾತ್ರರಾದವರೊಡನೆಯೂ ಅತಿಯಾದ ವಿಶ್ವಾಸವನ್ನಿಡಬಾರದು. ಆರು ವಿಷಯಗಳಲ್ಲಿ2 ಗುಣ-ದೋಷಗಳಿವೆಯೇ ಎನ್ನುವುದದ್ನ್ನು ತನ್ನ ಬುದ್ಧಿಯಿಂದ ನಿತ್ಯವೂ ಪರಿಶೀಲಿಸುತ್ತಿರಬೇಕು.

12057017a ದ್ವಿಟ್ಚಿದ್ರದರ್ಶೀ ನೃಪತಿರ್ನಿತ್ಯಮೇವ ಪ್ರಶಸ್ಯತೇ।
12057017c ತ್ರಿವರ್ಗವಿದಿತಾರ್ಥಶ್ಚ ಯುಕ್ತಚಾರೋಪಧಿಶ್ಚ ಯಃ।।

ನಿತ್ಯವೂ ಶತ್ರುಗಳ ನ್ಯೂನತೆಗಳನ್ನು ತಿಳಿದುಕೊಳ್ಳುವ, ಧರ್ಮ-ಅರ್ಥ-ಕಾಮಗಳೆಂಬ ತ್ರಿವರ್ಗಗಳ ಅರ್ಥವನ್ನು ತಿಳಿದುಕೊಂಡಿರುವ, ಮತ್ತು ಚಾರರನ್ನು ಬಳಸುತ್ತಿರುವ ನೃಪತಿಯು ಪ್ರಶಂಸೆಗೆ ಪಾತ್ರನಾಗುತ್ತಾನೆ.

12057018a ಕೋಶಸ್ಯೋಪಾರ್ಜನರತಿರ್ಯಮವೈಶ್ರವಣೋಪಮಃ।
12057018c ವೇತ್ತಾ ಚ ದಶವರ್ಗಸ್ಯ ಸ್ಥಾನವೃದ್ಧಿಕ್ಷಯಾತ್ಮನಃ।।

ನ್ಯಾಯದಲ್ಲಿ ಯಮನಂತೆಯೂ ಕೋಶವನ್ನು ತುಂಬುವುದರಲ್ಲಿ ವೈಶ್ರವಣನಂತೆಯೂ ಇರಬೇಕು. ಸ್ಥಾನ, ವೃದ್ಧಿ ಮತ್ತು ಕ್ಷಯಗಳಿಗೆ ಕಾರಣಗಳಾದ ದಶವರ್ಗಗಳನ್ನೂ3 ತಿಳಿದುಕೊಂಡಿರಬೇಕು.

12057019a ಅಭೃತಾನಾಂ ಭವೇದ್ಭರ್ತಾ ಭೃತಾನಾಂ ಚಾನ್ವವೇಕ್ಷಕಃ।
12057019c ನೃಪತಿಃ ಸುಮುಖಶ್ಚ ಸ್ಯಾತ್ಸ್ಮಿತಪೂರ್ವಾಭಿಭಾಷಿತಾ।।

ಭರಣ-ಪೋಷಣೆಗಳಿಲ್ಲದವರಿಗೆ ರಾಜನು ಭರಣ-ಪೋಷಕನಾಗಿರಬೇಕು. ಸೇವಕರ ಮೇಲ್ವಿಚಾರಣೆ ಮಾಡುತ್ತಿರಬೇಕು. ರಾಜನಾದವನು ಪ್ರಸನ್ನಮುಖನಾಗಿರಬೇಕು. ಮಾತನಾಡುವಾಗ ಮಂದಸ್ಮಿತನಾಗಿರಬೇಕು.

12057020a ಉಪಾಸಿತಾ ಚ ವೃದ್ಧಾನಾಂ ಜಿತತಂದ್ರೀರಲೋಲುಪಃ।
12057020c ಸತಾಂ ವೃತ್ತೇ ಸ್ಥಿತಮತಿಃ ಸಂತೋ ಹ್ಯಾಚಾರದರ್ಶಿನಃ।।

ವೃದ್ಧರ ಸೇವೆಯನ್ನು ಮಾಡಬೇಕು. ಆಲಸ್ಯವನ್ನು ಜಯಿಸಬೇಕು. ವ್ಯಸನಲೋಲುಪನಾಗಿರಬಾರದು. ಸತ್ಪುರುಷರ ನಡತೆಗಳಲ್ಲಿಯೇ ಸ್ಥಿರವಾಗಿ ಬುದ್ಧಿಯನ್ನಿರಿಸಿರಬೇಕು. ಏಕೆಂದರೆ ಸಂತರೇ ಆಚಾರಗಳನ್ನು ತೋರಿಸಿಕೊಡುವವರು.

12057021a ನ ಚಾದದೀತ ವಿತ್ತಾನಿ ಸತಾಂ ಹಸ್ತಾತ್ಕದಾ ಚನ।
12057021c ಅಸದ್ಭ್ಯಸ್ತು ಸಮಾದದ್ಯಾತ್ಸದ್ಭ್ಯಃ ಸಂಪ್ರತಿಪಾದಯೇತ್।।

ಸತ್ಪುರುಷರ ಕೈಯಿಂದ ಎಂದೂ ಧನವನ್ನು ತೆಗೆದುಕೊಳ್ಳಬಾರದು. ಅಸಾಧುಪುರುಷರಿಂದ ಧನವನ್ನು ಸಂಗ್ರಹಿಸಿ, ಸತ್ಪುರುಷರಲ್ಲಿ ದಾನಮಾಡಬೇಕು.

12057022a ಸ್ವಯಂ ಪ್ರಹರ್ತಾದಾತಾ ಚ ವಶ್ಯಾತ್ಮಾ ವಶ್ಯಸಾಧನಃ।
12057022c ಕಾಲೇ ದಾತಾ ಚ ಭೋಕ್ತಾ ಚ ಶುದ್ಧಾಚಾರಸ್ತಥೈವ ಚ।।

ಸ್ವಯಂ ತಾನೇ ದಂಡಿಸಬೇಕು. ದಾನಶೀಲನಾಗಿರಬೇಕು. ಮನಸ್ಸನ್ನು ತನ್ನ ಹತೋಟಿಯಲ್ಲಿಟ್ಟುಕೊಂಡಿರಬೇಕು. ಸಾಧನಗಳನ್ನು ಹೊಂದಿರಬೇಕು. ಕಾಲಕಾಲಕ್ಕೆ ದಾನಗಳನ್ನು ನೀಡುತ್ತಿರಬೇಕು. ಶುದ್ಧಾಚಾರಗಳಿಂದ ಭೋಗಿಸಲೂ ಬೇಕು.

12057023a ಶೂರಾನ್ಭಕ್ತಾನಸಂಹಾರ್ಯಾನ್ಕುಲೇ ಜಾತಾನರೋಗಿಣಃ।
12057023c ಶಿಷ್ಟಾನ್ಶಿಷ್ಟಾಭಿಸಂಬಂಧಾನ್ಮಾನಿನೋ ನಾವಮಾನಿನಃ।।
12057024a ವಿದ್ಯಾವಿದೋ ಲೋಕವಿದಃ ಪರಲೋಕಾನ್ವವೇಕ್ಷಕಾನ್।
12057024c ಧರ್ಮೇಷು ನಿರತಾನ್ಸಾಧೂನಚಲಾನಚಲಾನಿವ।।
12057025a ಸಹಾಯಾನ್ಸತತಂ ಕುರ್ಯಾದ್ರಾಜಾ ಭೂತಿಪುರಸ್ಕೃತಃ।
12057025c ತೈಸ್ತುಲ್ಯಶ್ಚ ಭವೇದ್ಭೋಗೈಶ್ಚತ್ರಮಾತ್ರಾಜ್ಞಯಾಧಿಕಃ।।

ಶೂರರನ್ನೂ, ಭಕ್ತರನ್ನೂ, ಲೋಭಕ್ಕೆ ಒಳಗಾಗದವರನ್ನೂ, ಸತ್ಕುಲದಲ್ಲಿ ಜನಿಸಿದವರನ್ನೂ, ನಿರೋಗಿಗಳನ್ನೂ, ಶಿಷ್ಟರನ್ನೂ, ಶಿಷ್ಟರ ಬಂಧುಗಳನ್ನೂ, ಮಾನನಿಷ್ಟರನ್ನೂ, ಬೇರೆಯವರನ್ನು ಅಪಮಾನಿಸದವರನ್ನೂ, ವಿದ್ಯಾವಂತರನ್ನೂ, ಲೋಕವ್ಯವಹಾರಗಳನ್ನು ತಿಳಿದುಕೊಂಡಿರುವವರನ್ನೂ, ಪುಣ್ಯಲೋಕಾಪೇಕ್ಷಿಗಳನ್ನೂ, ಧರ್ಮದಲ್ಲಿ ನಿರತರಾದವರನ್ನೂ, ಸತ್ಪುರುಷರನ್ನೂ, ಪರ್ವತದಂತೆ ಸ್ಥಿರವಾಗಿರುವವರನ್ನೂ ರಾಜನಾದವನು ತನ್ನ ಸಹಾಯಕರನಾಗಿ ಇಟ್ಟುಕೊಂಡಿರಬೇಕು. ಅವರನ್ನು ಪುರಸ್ಕರಿಸುತ್ತಿರಬೇಕು. ತನ್ನಲ್ಲಿರುವಂತಹ ಸುಖ-ಭೋಗಗಳನ್ನು ಅವರಿಗೂ ಒದಗಿಸಿಕೊಡಬೇಕು. ಶ್ವೇತ ಛತ್ರ ಮತ್ತು ಆಜ್ಞೆ ಈ ಎರಡರಲ್ಲಿ ಮಾತ್ರ ಅವರಿಗಿಂತ ರಾಜನು ಅಧಿಕನಾಗಿರಬೇಕು.

12057026a ಪ್ರತ್ಯಕ್ಷಾ ಚ ಪರೋಕ್ಷಾ ಚ ವೃತ್ತಿಶ್ಚಾಸ್ಯ ಭವೇತ್ಸದಾ।
12057026c ಏವಂ ಕೃತ್ವಾ ನರೇಂದ್ರೋ ಹಿ ನ ಖೇದಮಿಹ ವಿಂದತಿ।।

ಪ್ರತ್ಯಕ್ಷ್ಯದಲ್ಲಾಗಲೀ ಪರೋಕ್ಷದಲ್ಲಾಗಲೀ ಇವರೊಂದಿಗೆ ರಾಜನ ವರ್ತನೆಯು ಒಂದೇ ಸಮನಾಗಿರಬೇಕು. ಹೀಗೆ ಮಾಡಿದ ನರೇಂದ್ರನು ಇಲ್ಲಿ ಖೇದವನ್ನೇ ಹೊಂದುವುದಿಲ್ಲ.

12057027a ಸರ್ವಾತಿಶಂಕೀ ನೃಪತಿರ್ಯಶ್ಚ ಸರ್ವಹರೋ ಭವೇತ್।
12057027c ಸ ಕ್ಷಿಪ್ರಮನೃಜುರ್ಲುಬ್ಧಃ ಸ್ವಜನೇನೈವ ಬಾಧ್ಯತೇ।।

ಎಲ್ಲರನ್ನೂ ಅತಿಯಾಗಿ ಶಂಕಿಸುವ ರಾಜನು ಎಲ್ಲವನ್ನೂ ಕಳೆದುಕೊಳ್ಳುತ್ತಾನೆ. ಕಪಟಿಯೂ ಲುಬ್ಧನೂ ಆದ ರಾಜನು ಬೇಗನೆ ಸ್ವಜನರ ಬಾಧೆಗೊಳಗಾಗುತ್ತಾನೆ.

12057028a ಶುಚಿಸ್ತು ಪೃಥಿವೀಪಾಲೋ ಲೋಕಚಿತ್ತಗ್ರಹೇ ರತಃ।
12057028c ನ ಪತತ್ಯರಿಭಿರ್ಗ್ರಸ್ತಃ ಪತಿತಶ್ಚಾವತಿಷ್ಠತೇ।।

ಶುಚಿಯಾಗಿರುವ ಮತ್ತು ಪ್ರಜೆಗಳ ಚಿತ್ತವನ್ನು ಆಕರ್ಶಿಸುವುದರಲ್ಲಿ ನಿರತನಾಗಿರುವ ಪೃಥ್ವೀಪಾಲನು ಅರಿಗಳಿಂದ ಪತನಹೊಂದುವುದಿಲ್ಲ. ಒಂದುವೇಳೆ ಶತ್ರುಗಳಿಂದ ಕೆಳಗುರುಳಿಸಲ್ಪಟ್ಟರೂ ಬೇಗನೆ ರಾಜ್ಯವನ್ನು ಪಡೆದುಕೊಳ್ಳುತ್ತಾನೆ.

12057029a ಅಕ್ರೋಧನೋಽಥಾವ್ಯಸನೀ ಮೃದುದಂಡೋ ಜಿತೇಂದ್ರಿಯಃ।
12057029c ರಾಜಾ ಭವತಿ ಭೂತಾನಾಂ ವಿಶ್ವಾಸ್ಯೋ ಹಿಮವಾನಿವ।।

ಕ್ರೋಧವಿಲ್ಲದ, ವ್ಯಸನಗಳಿಲ್ಲದ, ಮೃದುವಾಗಿ ಶಿಕ್ಷಿಸುವ, ಜಿತೇಂದ್ರಿಯನಾದ ರಾಜನು ಹಿಮವತ್ಪರ್ವತದಂತೆ ಪ್ರಜೆಗಳ ವಿಶ್ವಾಸವನ್ನು ಗಳಿಸುತ್ತಾನೆ.

12057030a ಪ್ರಾಜ್ಞೋ ನ್ಯಾಯಗುಣೋಪೇತಃ ಪರರಂಧ್ರೇಷು ತತ್ಪರಃ।
12057030c ಸುದರ್ಶಃ ಸರ್ವವರ್ಣಾನಾಂ ನಯಾಪನಯವಿತ್ತಥಾ।।
12057031a ಕ್ಷಿಪ್ರಕಾರೀ ಜಿತಕ್ರೋಧಃ ಸುಪ್ರಸಾದೋ ಮಹಾಮನಾಃ।
12057031c ಅರೋಗಪ್ರಕೃತಿರ್ಯುಕ್ತಃ ಕ್ರಿಯಾವಾನವಿಕತ್ಥನಃ।।
12057032a ಆರಬ್ಧಾನ್ಯೇವ ಕಾರ್ಯಾಣಿ ನ ಪರ್ಯವಸಿತಾನಿ ಚ।
12057032c ಯಸ್ಯ ರಾಜ್ಞಃ ಪ್ರದೃಶ್ಯಂತೇ ಸ ರಾಜಾ ರಾಜಸತ್ತಮಃ।।

ಪ್ರಾಜ್ಞನೂ, ನ್ಯಾಯಗುಣೋಪೇತನೂ, ಶತ್ರುಗಳ ನ್ಯೂನತೆಗಳನ್ನು ತಿಳಿದುಕೊಳ್ಳುವುದರಲ್ಲಿ ತತ್ಪರನಾದವನೂ, ಸರ್ವವರ್ಣದವರನ್ನೂ ಚೆನ್ನಾಗಿ ನೋಡಿಕೊಳ್ಳುವವನೂ, ಸುನೀತಿ-ದುರ್ನೀತಿಗಳನ್ನು ಅರಿತವನೂ, ಕಾರ್ಯಗಳನ್ನು ಕ್ಷಿಪ್ರವಾಗಿ ಪೂರೈಸುವವನೂ, ಕ್ರೋಧವನ್ನು ಗೆದ್ದವನೂ, ಪ್ರಸನ್ನನೂ, ವಿಶಾಲಹೃದಯಿಯೂ, ಅರೋಗಪ್ರಕೃತಿಯುಳ್ಳವನೂ, ಕ್ರಿಯಾಶೀಲನೂ, ಆತ್ಮಪ್ರಶಂಸೆ ಮಾಡಿಕೊಳ್ಳದವನೂ, ಆರಂಭಿಸಿದ ಕಾರ್ಯಗಳನ್ನು ಮುಗಿಸುವ ರಾಜನೆಂದು ತೋರಿಸಿಕೊಡುವವನೂ ಆದ ರಾಜನು ಸರ್ವಶ್ರೇಷ್ಠ ರಾಜನಾಗುತ್ತಾನೆ.

12057033a ಪುತ್ರಾ ಇವ ಪಿತುರ್ಗೇಹೇ ವಿಷಯೇ ಯಸ್ಯ ಮಾನವಾಃ।
12057033c ನಿರ್ಭಯಾ ವಿಚರಿಷ್ಯಂತಿ ಸ ರಾಜಾ ರಾಜಸತ್ತಮಃ।।

ತಂದೆಯ ಮನೆಯಲ್ಲಿ ಮಕ್ಕಳು ಹೇಗೋ ಹಾಗೆ ಯಾರ ರಾಜ್ಯದಲ್ಲಿ ಪ್ರಜೆಗಳು ನಿರ್ಭಯರಾಗಿ ಜೀವನವನ್ನು ನಡೆಸುತ್ತಿರುತ್ತಾರೋ ಆ ರಾಜನು ಸರ್ವಶ್ರೇಷ್ಠ ರಾಜನೆನಿಸಿಕೊಳ್ಳುತ್ತಾನೆ.

12057034a ಅಗೂಢವಿಭವಾ ಯಸ್ಯ ಪೌರಾ ರಾಷ್ಟ್ರನಿವಾಸಿನಃ।
12057034c ನಯಾಪನಯವೇತ್ತಾರಃ ಸ ರಾಜಾ ರಾಜಸತ್ತಮಃ।।

ಯಾರ ರಾಷ್ಟ್ರದಲ್ಲಿ ವಾಸಿಸಿರುವ ಪ್ರಜೆಗಳು ತಮ್ಮಲ್ಲಿರುವ ವೈಭವವನ್ನು ಬಹಿರಂಗವಾಗಿಯೇ ತೋರಿಸಿಕೊಳ್ಳುತ್ತಾರೆಯೋ ಮತ್ತು ನ್ಯಾಯ-ಅನ್ಯಾಯಗಳನ್ನು ತಿಳಿದಿರುತ್ತಾರೋ ಆ ರಾಜನೇ ರಾಜಸತ್ತಮನು.

12057035a ಸ್ವಕರ್ಮನಿರತಾ ಯಸ್ಯ ಜನಾ ವಿಷಯವಾಸಿನಃ।
12057035c ಅಸಂಘಾತರತಾ ದಾಂತಾಃ ಪಾಲ್ಯಮಾನಾ ಯಥಾವಿಧಿ।।
12057036a ವಶ್ಯಾ ನೇಯಾ ವಿನೀತಾಶ್ಚ ನ ಚ ಸಂಘರ್ಷಶೀಲಿನಃ।
12057036c ವಿಷಯೇ ದಾನರುಚಯೋ ನರಾ ಯಸ್ಯ ಸ ಪಾರ್ಥಿವಃ।।

ಯಾರ ರಾಜ್ಯದಲ್ಲಿ ವಾಸಿಸಿರುವ ಜನರು ತಮ್ಮ ತಮ್ಮ ಕರ್ಮಗಳಲ್ಲಿ ನಿರತರಾಗಿ, ಪರಸ್ಪರರನ್ನು ದ್ವೇಷಿಸದೇ, ಜಿತೇಂದ್ರಿಯರಾಗಿ ಯಥಾವಿಧಿಯಾಗಿ ಪರಿಪಾಲಿಸಲ್ಪಟ್ಟಿರುವರೋ, ನ್ಯಾಯದ ವಶದಲ್ಲಿದ್ದುಕೊಂಡು ವಿನೀತರಾಗಿ, ಸಂಘರ್ಷಶೀಲರಾಗಿರದೇ ಇರುತ್ತಾರೋ, ಯಾರ ರಾಜ್ಯದಲ್ಲಿ ಜನರು ದಾನಮಾಡುವುದರಲ್ಲಿ ರುಚಿಯನ್ನಿಟ್ಟುಕೊಂಡಿರುತ್ತಾರೋ ಅವನೇ ಪಾರ್ಥಿವನೆನಿಸಿಕೊಳ್ಳುತ್ತಾನೆ.

12057037a ನ ಯಸ್ಯ ಕೂಟಕಪಟಂ ನ ಮಾಯಾ ನ ಚ ಮತ್ಸರಃ।
12057037c ವಿಷಯೇ ಭೂಮಿಪಾಲಸ್ಯ ತಸ್ಯ ಧರ್ಮಃ ಸನಾತನಃ।।

ಯಾವ ಭೂಮಿಪಾಲನ ರಾಜ್ಯದಲ್ಲಿ ಕೂಟ (ಸುಳ್ಳು), ಕಪಟ, ಮಾಯೆ, ಮತ್ಸರಗಳಿಲ್ಲವೋ ಅವನ ಧರ್ಮವೇ ಸನಾತನ ಧರ್ಮವು.

12057038a ಯಃ ಸತ್ಕರೋತಿ ಜ್ಞಾನಾನಿ ನೇಯಃ ಪೌರಹಿತೇ ರತಃ।
12057038c ಸತಾಂ ಧರ್ಮಾನುಗಸ್ತ್ಯಾಗೀ ಸ ರಾಜಾ ರಾಜ್ಯಮರ್ಹತಿ।।

ಯಾವ ರಾಜನು ಜ್ಞಾನ-ಜ್ಞಾನಿಗಳನ್ನು ಸತ್ಕರಿಸುತ್ತಾನೋ, ಪೌರರ ಹಿತದಲ್ಲಿ ನಿರತನಾಗಿರುತ್ತಾನೋ ಆ ರಾಜನು ರಾಜ್ಯಕ್ಕೆ ಅರ್ಹನಾಗುತ್ತಾನೆ.

12057039a ಯಸ್ಯ ಚಾರಶ್ಚ ಮಂತ್ರಶ್ಚ ನಿತ್ಯಂ ಚೈವ ಕೃತಾಕೃತೇ।
12057039c ನ ಜ್ಞಾಯತೇ ಹಿ ರಿಪುಭಿಃ ಸ ರಾಜಾ ರಾಜ್ಯಮರ್ಹತಿ।।

ಯಾವ ರಾಜನು ನಿತ್ಯವೂ ಮಾಡುವ ಗೂಢಾಚರಿ ಮತ್ತು ಗುಪ್ತ ಸಮಾಲೋಚನೆಗಳು ಶತ್ರುಗಳಿಗೆ ತಿಳಿಯುವುದಿಲ್ಲವೋ ಅಂಥಹ ರಾಜನೇ ರಾಜ್ಯಭಾರಮಾಡಲು ಅರ್ಹನೆನಿಸಿಕೊಳ್ಳುತ್ತಾನೆ.

12057040a ಶ್ಲೋಕಶ್ಚಾಯಂ ಪುರಾ ಗೀತೋ ಭಾರ್ಗವೇಣ ಮಹಾತ್ಮನಾ।
12057040c ಆಖ್ಯಾತೇ ರಾಮಚರಿತೇ ನೃಪತಿಂ ಪ್ರತಿ ಭಾರತ।।

ಭಾರತ! ಹಿಂದೆ ಮಹಾತ್ಮ ಭಾರ್ಗವ ರಾಮನು ನೃಪತಿಯ ಕುರಿತಾಗಿ ಹೇಳಿದ ಗೀತೆಯ ಈ ಶ್ಲೋಕವನ್ನು ಕೇಳು.

12057041a ರಾಜಾನಂ ಪ್ರಥಮಂ ವಿಂದೇತ್ತತೋ ಭಾರ್ಯಾಂ ತತೋ ಧನಮ್।
12057041c ರಾಜನ್ಯಸತಿ ಲೋಕಸ್ಯ ಕುತೋ ಭಾರ್ಯಾ ಕುತೋ ಧನಮ್।।

“ಮೊದಲು ರಾಜನನ್ನು ಪಡೆದುಕೊಳ್ಳಬೇಕು. ಅನಂತರ ಪತ್ನಿ ಮತ್ತು ಧನಗಳನ್ನು ಪಡೆದುಕೊಳ್ಳಬೇಕು. ಲೋಕದಲ್ಲಿ ರಾಜನೇ ಇಲ್ಲದಿದ್ದರೆ ಪತ್ನಿಯು ಏಕೆ? ಧನವು ಏಕೆ?”

12057042a ತದ್ರಾಜನ್ರಾಜಸಿಂಹಾನಾಂ ನಾನ್ಯೋ ಧರ್ಮಃ ಸನಾತನಃ।
12057042c ಋತೇ ರಕ್ಷಾಂ ಸುವಿಸ್ಪಷ್ಟಾಂ ರಕ್ಷಾ ಲೋಕಸ್ಯ ಧಾರಣಮ್।।

ರಾಜನ್! ಆದುದರಿಂದ ರಾಜಸಿಂಹರಿಗೆ ಸ್ಪಷ್ಟವಾಗಿ ಲೋಕದ ಧಾರಣೆಯನ್ನು ರಕ್ಷಿಸುವುದನ್ನು ಬಿಟ್ಟು ಬೇರೆ ಯಾವ ಸನಾತನ ಧರ್ಮವೂ ಇರುವುದಿಲ್ಲ.

12057043a ಪ್ರಾಚೇತಸೇನ ಮನುನಾ ಶ್ಲೋಕೌ ಚೇಮಾವುದಾಹೃತೌ।
12057043c ರಾಜಧರ್ಮೇಷು ರಾಜೇಂದ್ರ ತಾವಿಹೈಕಮನಾಃ ಶೃಣು।।

ಪ್ರಚೇತಸನ ಮಗ ಮನುವು ರಾಜಧರ್ಮದ ಕುರಿತು ಈ ಎರಡು ಶ್ಲೋಕಗಳನ್ನು ಹೇಳಿದ್ದಾನೆ. ರಾಜೇಂದ್ರ! ಅವೆರಡನ್ನೂ ಏಕಾಗ್ರಮನಸ್ಸಿನಿಂದ ಕೇಳು.

12057044a ಷಡೇತಾನ್ಪುರುಷೋ ಜಹ್ಯಾದ್ಭಿನ್ನಾಂ ನಾವಮಿವಾರ್ಣವೇ।
12057044c ಅಪ್ರವಕ್ತಾರಮಾಚಾರ್ಯಮನಧೀಯಾನಮೃತ್ವಿಜಮ್।।
12057045a ಅರಕ್ಷಿತಾರಂ ರಾಜಾನಂ ಭಾರ್ಯಾಂ ಚಾಪ್ರಿಯವಾದಿನೀಮ್।
12057045c ಗ್ರಾಮಕಾಮಂ ಚ ಗೋಪಾಲಂ ವನಕಾಮಂ ಚ ನಾಪಿತಮ್।।

“ಸಮುದ್ರದಲ್ಲಿ ಒಡೆದುಹೋದ ನಾವೆಯನ್ನು ತ್ಯಜಿಸುವಂತೆ ಈ ಆರು ಪುರುಷರನ್ನು ತ್ಯಜಿಸಬೇಕು: ಉಪದೇಶಿಸದ ಆಚಾರ್ಯ, ವೇದಾಧ್ಯಯನ ಮಾಡಿರದ ಋತ್ವಿಜ, ರಕ್ಷಿಸದೇ ಇರುವ ರಾಜ, ಅಪ್ರಿಯವಾಗಿ ಮಾತನಾಡುವ ಪತ್ನಿ, ಗ್ರಾಮದಲ್ಲಿಯೇ ಇರುವ ಗೋಪಾಲಕ ಮತ್ತು ಅರಣ್ಯದಲ್ಲಿಯೇ ವಾಸಿಸಲಿಚ್ಛಿಸುವ ನಾಪಿತ ಅಥವಾ ಕ್ಷೌರಕ.””

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ಸಪ್ತಪಂಚಶತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಐವತ್ತೇಳನೇ ಅಧ್ಯಾಯವು.


  1. ಸ್ವಾಮಿ, ಅಮಾತ್ಯ, ಸುಹೃತ್, ಕೋಶ, ರಾಷ್ಟ್ರ, ದುರ್ಗ ಮತ್ತು ಬಲಗಳೇ ರಾಜ್ಯದ ಸಪ್ತಾಂಗಗಳು. ↩︎

  2. ಸಂಧಿ, ವಿಗ್ರಹ, ಯಾನ, ಆಸನ, ದ್ವೈಧೀಭಾವ, ಮತ್ತು ಸಮಾಶ್ರಯಗಳು – ಇವು ಆರು ವಿಷಯಗಳು. ↩︎

  3. ಮಂತ್ರಿ, ರಾಷ್ಟ್ರ, ದುರ್ಗ, ಕೋಶ ಮತ್ತು ದಂಡ – ಈ ಐದನ್ನು ಪ್ರಕೃತಿ ಎಂದು ಕರೆಯುತ್ತಾರೆ. ತನ್ನ ಕಡೆಯ ಈ ಐದು ಮತ್ತು ಶತ್ರುಗಳ ಕಡೆಯ ಈ ಐದು ಸೇರಿ ದಶವರ್ಗವಾಗುತ್ತದೆ. ↩︎