ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ರಾಜಧರ್ಮ ಪರ್ವ
ಅಧ್ಯಾಯ 56
ಸಾರ
12056001 ವೈಶಂಪಾಯನ ಉವಾಚ।
12056001a ಪ್ರಣಿಪತ್ಯ ಹೃಷೀಕೇಶಮಭಿವಾದ್ಯ ಪಿತಾಮಹಮ್।
12056001c ಅನುಮಾನ್ಯ ಗುರೂನ್ಸರ್ವಾನ್ಪರ್ಯಪೃಚ್ಚದ್ಯುಧಿಷ್ಠಿರಃ।।
ವೈಶಂಪಾಯನನು ಹೇಳಿದನು: “ಹೃಷೀಕೇಶನಿಗೆ ನಮಸ್ಕರಿಸಿ, ಪಿತಾಮಹನಿಗೂ ಅಭಿವಾದನ ಮಾಡಿ, ಸರ್ವ ಗುರುಗಳ ಅನುಮತಿಯನ್ನೂ ಪಡೆದು ಯುಧಿಷ್ಠಿರನು ಭೀಷ್ಮನನ್ನು ಪ್ರಶ್ನಿಸಿದನು:
12056002a ರಾಜ್ಯಂ ವೈ ಪರಮೋ ಧರ್ಮ ಇತಿ ಧರ್ಮವಿದೋ ವಿದುಃ।
12056002c ಮಹಾಂತಮೇತಂ ಭಾರಂ ಚ ಮನ್ಯೇ ತದ್ಬ್ರೂಹಿ ಪಾರ್ಥಿವ।।
“ಪಾರ್ಥಿವ! ರಾಜನಿಗೆ ರಾಜ್ಯವೇ ಪರಮ ಧರ್ಮವೆಂದು ಧರ್ಮವನ್ನು ತಿಳಿದವರು ಹೇಳುತ್ತಾರೆ. ಆದರೆ ಈ ರಾಜಧರ್ಮವು ಅತ್ಯಂತ ದೊಡ್ಡ ಹೊಣೆಯೆಂದು ನನಗನ್ನಿಸುತ್ತದೆ. ಅದರ ಕುರಿತು ಹೇಳು!
12056003a ರಾಜಧರ್ಮಾನ್ವಿಶೇಷೇಣ ಕಥಯಸ್ವ ಪಿತಾಮಹ।
12056003c ಸರ್ವಸ್ಯ ಜೀವಲೋಕಸ್ಯ ರಾಜಧರ್ಮಾಃ ಪರಾಯಣಮ್।।
ಪಿತಾಮಹ! ವಿಶೇಷವಾಗಿ ರಾಜಧರ್ಮಗಳ ಕುರಿತೇ ಹೇಳು! ಲೋಕದ ಸರ್ವ ಜೀವಿಗಳಿಗೆ ರಾಜಧರ್ಮಗಳೇ ಆಶ್ರಯಸ್ಥಾನವಾಗಿವೆ.
12056004a ತ್ರಿವರ್ಗೋಽತ್ರ ಸಮಾಸಕ್ತೋ ರಾಜಧರ್ಮೇಷು ಕೌರವ।
12056004c ಮೋಕ್ಷಧರ್ಮಶ್ಚ ವಿಸ್ಪಷ್ಟಃ ಸಕಲೋಽತ್ರ ಸಮಾಹಿತಃ।।
ಕೌರವ! ರಾಜಧರ್ಮಗಳಲ್ಲಿ ಧರ್ಮ-ಅರ್ಥ-ಕಾಮಗಳೆಂಬ ತ್ರಿವರ್ಗಗಳೂ ಸೇರಿಕೊಂಡಿವೆ. ಸಕಲ ಮೋಕ್ಷಧರ್ಮವೂ ಇದರಲ್ಲಿಯೇ ಸೇರಿಕೊಂಡಿದೆ.
12056005a ಯಥಾ ಹಿ ರಶ್ಮಯೋಽಶ್ವಸ್ಯ ದ್ವಿರದಸ್ಯಾಂಕುಶೋ ಯಥಾ।
12056005c ನರೇಂದ್ರಧರ್ಮೋ ಲೋಕಸ್ಯ ತಥಾ ಪ್ರಗ್ರಹಣಂ ಸ್ಮೃತಮ್।।
ಕುದುರೆಗಳಿಗೆ ಕಡಿವಾಣಗಳು ಹೇಗೋ ಮತ್ತು ಆನೆಗೆ ಅಂಕುಶವು ಹೇಗೋ ಹಾಗೆ ರಾಜಧರ್ಮವು ಲೋಕವನ್ನು ಹತೋಟಿಯಲ್ಲಿಟ್ಟುಕೊಳ್ಳಲು ಅವಶ್ಯಕವೆಂದು ಹೇಳುತ್ತಾರೆ.
12056006a ಅತ್ರ ವೈ ಸಂಪ್ರಮೂಢೇ ತು ಧರ್ಮೇ ರಾಜರ್ಷಿಸೇವಿತೇ।
12056006c ಲೋಕಸ್ಯ ಸಂಸ್ಥಾ ನ ಭವೇತ್ಸರ್ವಂ ಚ ವ್ಯಾಕುಲಂ ಭವೇತ್।।
ರಾಜರ್ಷಿಗಳು ನಡೆದುಕೊಂಡು ಬಂದಿರುವ ಈ ಧರ್ಮದ ವಿಷಯದಲ್ಲಿ ವಿಮೋಹಗೊಂಡರೆ ಲೋಕದ ವ್ಯವಸ್ಥೆಯೇ ಅಸ್ತವ್ಯಸ್ತವಾಗುತ್ತದೆ. ಎಲ್ಲವೂ ವ್ಯಾಕುಲಗೊಳ್ಳುತ್ತವೆ.
12056007a ಉದಯನ್ಹಿ ಯಥಾ ಸೂರ್ಯೋ ನಾಶಯತ್ಯಾಸುರಂ ತಮಃ।
12056007c ರಾಜಧರ್ಮಾಸ್ತಥಾಲೋಕ್ಯಾಮಾಕ್ಷಿಪಂತ್ಯಶುಭಾಂ ಗತಿಮ್।।
ಸೂರ್ಯನು ಉದಯಿಸುತ್ತಿದ್ದಂತೆಯೇ ಅಮಂಗಳಕರ ಕತ್ತಲೆಯು ನಾಶವಾಗುವಂತೆ ರಾಜಧರ್ಮದಿಂದ ಲೋಕದ ಅಮಂಗಳಕರ ಅಪ್ರಕಾಶ ಮಾರ್ಗವು ದೂರವಾಗುತ್ತದೆ.
12056008a ತದಗ್ರೇ ರಾಜಧರ್ಮಾಣಾಮರ್ಥತತ್ತ್ವಂ ಪಿತಾಮಹ।
12056008c ಪ್ರಬ್ರೂಹಿ ಭರತಶ್ರೇಷ್ಠ ತ್ವಂ ಹಿ ಬುದ್ಧಿಮತಾಂ ವರಃ।।
ಪಿತಾಮಹ! ಭರತಶ್ರೇಷ್ಠ! ನೀನು ಬುದ್ಧಿವಂತರಲ್ಲಿಯೇ ಶ್ರೇಷ್ಠನಾಗಿರುವೆ! ಆದುದರಿಂದ ಮೊದಲು ನನಗೆ ರಾಜಧರ್ಮಗಳನ್ನು ತತ್ತ್ವಾರ್ಥಗಳೊಂದಿಗೆ ಹೇಳಿ ತಿಳಿಸು!
12056009a ಆಗಮಶ್ಚ ಪರಸ್ತ್ವತ್ತಃ ಸರ್ವೇಷಾಂ ನಃ ಪರಂತಪ।
12056009c ಭವಂತಂ ಹಿ ಪರಂ ಬುದ್ಧೌ ವಾಸುದೇವೋಽಭಿಮನ್ಯತೇ।।
ಪರಂತಪ! ಅನಂತರ ಆಗಮಗಳ ತತ್ತ್ವಗಳೆಲ್ಲವನ್ನೂ ಹೇಳು. ನೀನು ಪರಮ ಬುದ್ಧಿಯುಳ್ಳವನು ಎಂದು ವಾಸುದೇವನ ಅಭಿಪ್ರಾಯವಾಗಿದೆ!”
12056010 ಭೀಷ್ಮ ಉವಾಚ।
12056010a ನಮೋ ಧರ್ಮಾಯ ಮಹತೇ ನಮಃ ಕೃಷ್ಣಾಯ ವೇಧಸೇ।
12056010c ಬ್ರಾಹ್ಮಣೇಭ್ಯೋ ನಮಸ್ಕೃತ್ಯ ಧರ್ಮಾನ್ವಕ್ಷ್ಯಾಮಿ ಶಾಶ್ವತಾನ್।।
ಭೀಷ್ಮನು ಹೇಳಿದನು: “ಮಹತ್ತರ ಧರ್ಮಕ್ಕೆ ನಮಸ್ಕಾರ! ವಿಶ್ವದ ಸೃಷ್ಟಿಗೆ ಕಾರಣನಾದ ಕೃಷ್ಣನಿಗೆ ನಮಸ್ಕಾರ! ಬ್ರಾಹ್ಮಣರಿಗೆ ನಮಸ್ಕರಿಸಿ ಶಾಶ್ವತ ಧರ್ಮಗಳ ಕುರಿತು ಹೇಳುತ್ತೇನೆ.
12056011a ಶೃಣು ಕಾರ್ತ್ಸ್ನ್ಯೇನ ಮತ್ತಸ್ತ್ವಂ ರಾಜಧರ್ಮಾನ್ಯುಧಿಷ್ಠಿರ।
12056011c ನಿರುಚ್ಯಮಾನಾನ್ನಿಯತೋ ಯಚ್ಚಾನ್ಯದಭಿವಾಂಚಸಿ।।
ಯುಧಿಷ್ಠಿರ! ನನ್ನಿಂದ ರಾಜಧರ್ಮಗಳ ಕುರಿತು ಸಂಪೂರ್ಣವಾಗಿ ಕೇಳು. ನಾನು ಹೇಳುವಾಗ ಕೂಡ ಮಧ್ಯದಲ್ಲಿ ನೀನು ಬೇಕಾದ ಪ್ರಶ್ನೆಗಳನ್ನು ಕೇಳಬಹುದು!
12056012a ಆದಾವೇವ ಕುರುಶ್ರೇಷ್ಠ ರಾಜ್ಞಾ ರಂಜನಕಾಮ್ಯಯಾ।
12056012c ದೇವತಾನಾಂ ದ್ವಿಜಾನಾಂ ಚ ವರ್ತಿತವ್ಯಂ ಯಥಾವಿಧಿ।।
ಕುರುಶ್ರೇಷ್ಠ! ಮೊಟ್ಟಮೊದಲನೆಯದಾಗಿ ರಾಜನು ಯಥಾವಿಧಿಯಾಗಿ ದೇವತೆಗಳನ್ನು ಮತ್ತು ದ್ವಿಜರನ್ನು ತೃಪ್ತಿಗೊಳಿಸುವಂತೆ ನಡೆದುಕೊಳ್ಳಬೇಕು.
12056013a ದೈವತಾನ್ಯರ್ಚಯಿತ್ವಾ ಹಿ ಬ್ರಾಹ್ಮಣಾಂಶ್ಚ ಕುರೂದ್ವಹ।
12056013c ಆನೃಣ್ಯಂ ಯಾತಿ ಧರ್ಮಸ್ಯ ಲೋಕೇನ ಚ ಸ ಮಾನ್ಯತೇ।।
ಕುರೂದ್ವಹ! ದೇವತೆಗಳನ್ನು ಮತ್ತು ಬ್ರಾಹ್ಮಣರನ್ನು ಅರ್ಚಿಸಿದ ರಾಜನು ಧರ್ಮದ ಋಣದಿಂದ ಮುಕ್ತನಾಗುತ್ತಾನೆ ಮತ್ತು ಲೋಕದಲ್ಲಿ ಮಾನ್ಯನಾಗುತ್ತಾನೆ.
12056014a ಉತ್ಥಾನೇ ಚ ಸದಾ ಪುತ್ರ ಪ್ರಯತೇಥಾ ಯುಧಿಷ್ಠಿರ।
12056014c ನ ಹ್ಯುತ್ಥಾನಮೃತೇ ದೈವಂ ರಾಜ್ಞಾಮರ್ಥಪ್ರಸಿದ್ಧಯೇ।।
ಮಗೂ ಯುಧಿಷ್ಠಿರ! ಸದಾ ಪುರುಷಾರ್ಥಗಳ ಸಿದ್ಧಿಗಾಗಿ ಪ್ರಯತ್ನಶೀಲನಾಗಿರಬೇಕು! ಪುರುಷಪ್ರಯತ್ನವಿಲ್ಲದೇ ರಾಜರಿಗೆ ಕೇವಲ ದೈವವು ಮಾತ್ರ ಪುರುಷಾರ್ಥಗಳನ್ನು ಅನುಗ್ರಹಿಸುವುದಿಲ್ಲ.
12056015a ಸಾಧಾರಣಂ ದ್ವಯಂ ಹ್ಯೇತದ್ದೈವಮುತ್ಥಾನಮೇವ ಚ।
12056015c ಪೌರುಷಂ ಹಿ ಪರಂ ಮನ್ಯೇ ದೈವಂ ನಿಶ್ಚಿತ್ಯಮುಚ್ಯತೇ।।
ಸಾಧಾರಣವಾಗಿ ಅದೃಷ್ಟ ಮತ್ತು ಪುರುಷಪ್ರಯತ್ನ ಇವೆರಡೂ ಕಾರ್ಯದ ಸಿದ್ಧಿಗೆ ಕಾರಣಗಳೆನಿಸಿಕೊಳ್ಳುತ್ತವೆ. ಆದರೆ ಇವೆರಡರಲ್ಲಿ ಪುರುಷಪ್ರಯತ್ನವೇ ಶ್ರೇಷ್ಠವೆಂದು ನನಗನ್ನಿಸುತ್ತದೆ. ಏಕೆಂದರೆ ಅದೃಷ್ಟವು ಮೊದಲೇ ನಿಶ್ಚಿತವಾಗಿಬಿಟ್ಟಿರುತ್ತದೆ.
12056016a ವಿಪನ್ನೇ ಚ ಸಮಾರಂಭೇ ಸಂತಾಪಂ ಮಾ ಸ್ಮ ವೈ ಕೃಥಾಃ।
12056016c ಘಟತೇ ವಿನಯಸ್ತಾತ ರಾಜ್ಞಾಮೇಷ ನಯಃ ಪರಃ।।
ಮಗೂ! ಪ್ರಾರಂಭಿಸಿದ ಕಾರ್ಯವು ಸಿದ್ಧಿಯಾಗದಿದ್ದರೂ ಸಂತಾಪಪಡಬಾರದು. ಒಂದು ಉಪಾಯವು ಫಲಿಸದಿದ್ದರೆ ಇನ್ನೊಂದು ಉಪಾಯವನ್ನು ಬಳಸಬೇಕಾಗುತ್ತದೆ.
12056017a ನ ಹಿ ಸತ್ಯಾದೃತೇ ಕಿಂ ಚಿದ್ರಾಜ್ಞಾಂ ವೈ ಸಿದ್ಧಿಕಾರಣಮ್।
12056017c ಸತ್ಯೇ ಹಿ ರಾಜಾ ನಿರತಃ ಪ್ರೇತ್ಯ ಚೇಹ ಚ ನಂದತಿ।।
ಸತ್ಯವನ್ನು ಬಿಟ್ಟು ಬೇರೆ ಯಾವುದೂ ರಾಜನ ಸಿದ್ಧಿಗೆ ಕಾರಣವಾಗುವುದಿಲ್ಲ. ಸತ್ಯದಲ್ಲಿಯೇ ನಿರತನಾದ ರಾಜನು ಇಹದಲ್ಲಿಯೂ ಪರದಲ್ಲಿಯೂ ಸುಖವನ್ನು ಅನುಭವಿಸುತ್ತಾನೆ.
12056018a ಋಷೀಣಾಮಪಿ ರಾಜೇಂದ್ರ ಸತ್ಯಮೇವ ಪರಂ ಧನಮ್।
12056018c ತಥಾ ರಾಜ್ಞಃ ಪರಂ ಸತ್ಯಾನ್ನಾನ್ಯದ್ವಿಶ್ವಾಸಕಾರಣಮ್।।
ರಾಜೇಂದ್ರ! ಋಷಿಗಳಿಗೆ ಕೂಡ ಸತ್ಯವೇ ಪರಮ ಧನವು. ಹಾಗೆಯೇ ರಾಜರಿಗೆ ಸತ್ಯವನ್ನು ಬಿಟ್ಟರೆ ಬೇರೆ ಯಾವುದೂ ಪ್ರಜೆಗಳ ವಿಶ್ವಾಸಕ್ಕೆ ಕಾರಣವಾಗುವುದಿಲ್ಲ.
12056019a ಗುಣವಾನ್ಶೀಲವಾನ್ದಾಂತೋ ಮೃದುರ್ಧರ್ಮ್ಯೋ ಜಿತೇಂದ್ರಿಯಃ।
12056019c ಸುದರ್ಶಃ ಸ್ಥೂಲಲಕ್ಷ್ಯಶ್ಚ ನ ಭ್ರಶ್ಯೇತ ಸದಾ ಶ್ರಿಯಃ।।
ಗುಣವಂತನೂ, ಶೀಲವಂತನೂ, ಇಂದ್ರಿಯಗಳನ್ನು ಹತೋಟಿಯಲ್ಲಿಟ್ಟುಕೊಂಡಿರುವವನೂ, ವೃದುಸ್ವಭಾವದವನೂ, ದಾನಮಾಡುವ ಉದಾರಬುದ್ಧಿಯುಳ್ಳವನೂ, ಸ್ಥೂಲಲಕ್ಷ್ಯನೂ ಆದ ರಾಜನು ಯಾವಾಗಲೂ ಶ್ರೀಯಿಂದ ಭ್ರಷ್ಟನಾಗುವುದಿಲ್ಲ.
12056020a ಆರ್ಜವಂ ಸರ್ವಕಾರ್ಯೇಷು ಶ್ರಯೇಥಾಃ ಕುರುನಂದನ।
12056020c ಪುನರ್ನಯವಿಚಾರೇಣ ತ್ರಯೀಸಂವರಣೇನ ಚ।।
ಕುರುನಂದನ! ಸರ್ವಕಾರ್ಯಗಳಲ್ಲಿ ಸರಳತೆಯನ್ನು ಬಳಸಬೇಕು. ಆದರೆ ನೀತಿಶಾಸ್ತ್ರದ ಪರಾಮರ್ಶೆಯಂತೆ ಮೂರನ್ನು1 ಮಾತ್ರ ಗುಟ್ಟಾಗಿಡಬೇಕು.
12056021a ಮೃದುರ್ಹಿ ರಾಜಾ ಸತತಂ ಲಂಘ್ಯೋ ಭವತಿ ಸರ್ವಶಃ।
12056021c ತೀಕ್ಷ್ಣಾಚ್ಚೋದ್ವಿಜತೇ ಲೋಕಸ್ತಸ್ಮಾದುಭಯಮಾಚರ।।
ರಾಜನು ಮೃದುಸ್ವಭಾವದವನಾಗಿರಬೇಕು. ಆದರೆ ಎಲ್ಲ ಸಂದರ್ಭಗಳಲ್ಲಿಯೂ ಮೃದುವಾಗಿದ್ದರೆ ಎಲ್ಲರೂ ಅವನನ್ನು ಉಲ್ಲಂಘಿಸಬಹುದು. ಹೀಗೆಂದು ರಾಜನು ಸದಾ ಕ್ರೂರಿಯೂ ಆಗಿರಬಾರದು. ಸರ್ವದಾ ಕ್ರೂರಿಯಾಗಿದ್ದರೆ ಜನರು ಉದ್ವಿಗ್ನರಾಗುತ್ತಾರೆ.
12056022a ಅದಂಡ್ಯಾಶ್ಚೈವ ತೇ ನಿತ್ಯಂ ವಿಪ್ರಾಃ ಸ್ಯುರ್ದದತಾಂ ವರ।
12056022c ಭೂತಮೇತತ್ಪರಂ ಲೋಕೇ ಬ್ರಾಹ್ಮಣಾ ನಾಮ ಭಾರತ।।
ಭಾರತ! ದಾನಿಗಳಲ್ಲಿ ಶ್ರೇಷ್ಠನೇ! ನೀನು ಎಂದೂ ಬ್ರಾಹ್ಮಣರನ್ನು ದಂಡಿಸಬಾರದು. ಏಕೆಂದರೆ ಬ್ರಾಹ್ಮಣನೆಂಬುವನೇ ಲೋಕದ ಜೀವಿಗಳಲ್ಲಿ ಶ್ರೇಷ್ಠನು.
12056023a ಮನುನಾ ಚಾಪಿ ರಾಜೇಂದ್ರ ಗೀತೌ ಶ್ಲೋಕೌ ಮಹಾತ್ಮನಾ।
12056023c ಧರ್ಮೇಷು ಸ್ವೇಷು ಕೌರವ್ಯ ಹೃದಿ ತೌ ಕರ್ತುಮರ್ಹಸಿ।।
ರಾಜೇಂದ್ರ! ಕೌರವ್ಯ! ಈ ಧರ್ಮದ ಕುರಿತು ಮನುವು ಈ ಎರಡು ಶ್ಲೋಕಗಳನ್ನು ಹೇಳಿದ್ದಾನೆ. ಇವೆರಡನ್ನು ನೀನು ಹೃದ್ಗತಮಾಡಿಕೊಳ್ಳಬೇಕು.
12056024a ಅದ್ಭ್ಯೋಽಗ್ನಿರ್ಬ್ರಹ್ಮತಃ ಕ್ಷತ್ರಮಶ್ಮನೋ ಲೋಹಮುತ್ಥಿತಮ್।
12056024c ತೇಷಾಂ ಸರ್ವತ್ರಗಂ ತೇಜಃ ಸ್ವಾಸು ಯೋನಿಷು ಶಾಮ್ಯತಿ।।
“ಅಗ್ನಿಯು ನೀರಿನಿಂದ, ಕ್ಷತ್ರಿಯನು ಬ್ರಾಹ್ಮಣನಿಂದ ಮತ್ತು ಲೋಹವು ಕಲ್ಲಿನಿಂದ ಹುಟ್ಟಿವೆ. ಸರ್ವತ್ರವೂ ತಮ್ಮ ತೇಜಸ್ಸನ್ನು ಬೀರುವ ಅಗ್ನಿ, ಕ್ಷತ್ರಿಯ ಮತ್ತು ಲೋಹಗಳು ಅವುಗಳ ಜನ್ಮಸ್ಥಾನಗಳಲ್ಲಿ ಪ್ರಭಾವ ಬೀರುವುದಿಲ್ಲ ಮಾತ್ರವಲ್ಲದೇ ಅವುಗಳಲ್ಲಿ ವಿನಾಶವನ್ನೇ ಹೊಂದುತ್ತವೆ.
12056025a ಅಯೋ ಹಂತಿ ಯದಾಶ್ಮಾನಮಗ್ನಿಶ್ಚಾಪೋಽಭಿಪದ್ಯತೇ।
12056025c ಬ್ರಹ್ಮ ಚ ಕ್ಷತ್ರಿಯೋ ದ್ವೇಷ್ಟಿ ತದಾ ಸೀದಂತಿ ತೇ ತ್ರಯಃ।।
ಕಲ್ಲನ್ನು ಒಡೆಯಲು ಹೋದ ಲೋಹವು ಮೊಂಡಾಗುತ್ತದೆ. ನೀರನ್ನು ಸುಡಲು ಹೋದರೆ ಅಗ್ನಿಯೇ ಆರಿಹೋಗುತ್ತದೆ. ಕ್ಷತ್ರಿಯನು ಬ್ರಾಹ್ಮಣನನ್ನು ದ್ವೇಷಿಸಿದರೆ ನಾಶವಾಗುತ್ತಾನೆ. ಹೀಗೆ ಈ ಮೂರೂ ನಾಶಹೊಂದುತ್ತವೆ.”
12056026a ಏತಜ್ಞಾತ್ವಾ ಮಹಾರಾಜ ನಮಸ್ಯಾ ಏವ ತೇ ದ್ವಿಜಾಃ।
12056026c ಭೌಮಂ ಬ್ರಹ್ಮ ದ್ವಿಜಶ್ರೇಷ್ಠಾ ಧಾರಯಂತಿ ಶಮಾನ್ವಿತಾಃ।।
ಮಹಾರಾಜ! ಇದನ್ನು ಅರಿತುಕೊಂಡು ನೀನು ದ್ವಿಜರ ಕುರಿತು ಪೂಜ್ಯಭಾವವನ್ನೇ ತಾಳಿಕೊಂಡಿರಬೇಕು. ಶಮಾನ್ವಿತರಾದ ಬ್ರಾಹ್ಮಣರು ಭೂಮಿಯಲ್ಲಿ ಬ್ರಹ್ಮವನ್ನೇ ಧರಿಸಿಕೊಂಡಿರುತ್ತಾರೆ.
12056027a ಏವಂ ಚೈವ ನರವ್ಯಾಘ್ರ ಲೋಕತಂತ್ರವಿಘಾತಕಾಃ।
12056027c ನಿಗ್ರಾಹ್ಯಾ ಏವ ಸತತಂ ಬಾಹುಭ್ಯಾಂ ಯೇ ಸ್ಯುರೀದೃಶಾಃ।।
ನರವ್ಯಾಘ್ರ! ಆದರೆ ಬ್ರಾಹ್ಮಣರು ಲೋಕತಂತ್ರವನ್ನು ನಾಶಗೊಳಿಸುವವರಾಗಿದ್ದರೆ ಅವರನ್ನು ಸತತವಾಗಿ ಬಾಹುಬಲದಿಂದ ನಿಗ್ರಹಿಸಬೇಕು.
12056028a ಶ್ಲೋಕೌ ಚೋಶನಸಾ ಗೀತೌ ಪುರಾ ತಾತ ಮಹರ್ಷಿಣಾ।
12056028c ತೌ ನಿಬೋಧ ಮಹಾಪ್ರಾಜ್ಞ ತ್ವಮೇಕಾಗ್ರಮನಾ ನೃಪ।।
ಮಗೂ! ನೃಪ! ಮಹಾಪ್ರಾಜ್ಞ! ಇದರ ಕುರಿತಾಗಿ ಹಿಂದೆ ಮಹರ್ಷಿ ಉಶನಸನು ಈ ಎರಡು ಶ್ಲೋಕ ಗೀತೆಗಳನ್ನು ರಚಿಸಿದ್ದಾನೆ. ಅವುಗಳನ್ನು ಏಕಾಗ್ರಚಿತ್ತನಾಗಿ ಕೇಳು!
12056029a ಉದ್ಯಮ್ಯ ಶಸ್ತ್ರಮಾಯಾಂತಮಪಿ ವೇದಾಂತಗಂ ರಣೇ।
12056029c ನಿಗೃಹ್ಣೀಯಾತ್ಸ್ವಧರ್ಮೇಣ ಧರ್ಮಾಪೇಕ್ಷೀ ನರೇಶ್ವರಃ।।
“ಶಸ್ತ್ರಗಳನ್ನೆತ್ತಿ ವೇದಾಂತಗನು ರಣದಲ್ಲಿ ಬಂದರೆ ಧರ್ಮಾಪೇಕ್ಷೀ ನರೇಶ್ವರನು ಸ್ವಧರ್ಮವನ್ನನುಸರಿಸಿ ಅವನನ್ನು ಸಂಹರಿಸಬೇಕು.
12056030a ವಿನಶ್ಯಮಾನಂ ಧರ್ಮಂ ಹಿ ಯೋ ರಕ್ಷತಿ ಸ ಧರ್ಮವಿತ್।
12056030c ನ ತೇನ ಭ್ರೂಣಹಾ ಸ ಸ್ಯಾನ್ಮನ್ಯುಸ್ತಂ ಮನುಮೃಚ್ಚತಿ।।
ವಿನಾಶವಾಗುತ್ತಿರುವ ಧರ್ಮವನ್ನು ರಕ್ಷಿಸುವವನೇ ಧರ್ಮವಿದುವು. ಆಗ ರಾಜನು ಆ ಬ್ರಾಹ್ಮಣನನ್ನು ಕೊಂದಂತಾಗುವುದಿಲ್ಲ. ಕೋಪವೇ ಬ್ರಾಹ್ಮಣನ ನಾಶಕ್ಕೆ ಕಾರಣವೆನಿಸುತ್ತದೆ.”
12056031a ಏವಂ ಚೈವ ನರಶ್ರೇಷ್ಠ ರಕ್ಷ್ಯಾ ಏವ ದ್ವಿಜಾತಯಃ।
12056031c ಸ್ವಪರಾದ್ಧಾನಪಿ ಹಿ ತಾನ್ವಿಷಯಾಂತೇ ಸಮುತ್ಸೃಜೇತ್।।
ನರಶ್ರೇಷ್ಠ! ಹೀಗಿದ್ದರೂ ಬ್ರಾಹ್ಮಣರನ್ನು ರಕ್ಷಿಸಲೇ ಬೇಕು. ಅಪರಾಧವನ್ನೆಸಗಿದ ಬ್ರಾಹ್ಮಣನನ್ನು ರಾಜ್ಯದಿಂದ ಗಡಿಪಾರು ಮಾಡಬೇಕು.
12056032a ಅಭಿಶಸ್ತಮಪಿ ಹ್ಯೇಷಾಂ ಕೃಪಾಯೀತ ವಿಶಾಂ ಪತೇ।
12056032c ಬ್ರಹ್ಮಘ್ನೇ ಗುರುತಲ್ಪೇ ಚ ಭ್ರೂಣಹತ್ಯೇ ತಥೈವ ಚ।।
12056033a ರಾಜದ್ವಿಷ್ಟೇ ಚ ವಿಪ್ರಸ್ಯ ವಿಷಯಾಂತೇ ವಿಸರ್ಜನಮ್।
12056033c ವಿಧೀಯತೇ ನ ಶಾರೀರಂ ಭಯಮೇಷಾಂ ಕದಾ ಚನ।।
ವಿಶಾಂಪತೇ! ಮಹಾಪಾಪಿಗಳಾದ ಬ್ರಾಹ್ಮಣರ ಮೇಲೂ ಕೃಪೆಯನ್ನೇ ತೋರಬೇಕು. ಬ್ರಹ್ಮಹತ್ಯೆ ಮಾಡಿದ, ಗುರುಪತ್ನೀಸಮಾಗಮ ಮಾಡಿದ, ಭ್ರೂಣಹತ್ಯೆ ಮಾಡಿದ ಮತ್ತು ರಾಜದ್ರೋಹವನ್ನೆಸಗಿದ ವಿಪ್ರನನ್ನು ರಾಜ್ಯದ ಹೊರಗೆ ಕಳುಹಿಸಬೇಕು. ಶಾರೀರಕ ಶಿಕ್ಷೆಯ ಭಯವನ್ನು ಮಾತ್ರ ಯಾವಾಗಲೂ ವಿಧಿಸಬಾರದು.
12056034a ದಯಿತಾಶ್ಚ ನರಾಸ್ತೇ ಸ್ಯುರ್ನಿತ್ಯಂ ಪುರುಷಸತ್ತಮ2।
12056034c ನ ಕೋಶಃ ಪರಮೋ ಹ್ಯನ್ಯೋ ರಾಜ್ಞಾಂ ಪುರುಷಸಂಚಯಾತ್।।
ಪುರುಷಸತ್ತಮ! ಅಂಥವನು ನಿತ್ಯವೂ ಜನರ ಪ್ರಿಯನಾಗಿರುತ್ತಾನೆ. ರಾಜನಾದವನಿಗೆ ಪ್ರಜೆಗಳ ಪ್ರೀತಿಸಂಚಯವೇ ಉತ್ತಮ ಧನಸಂಗ್ರಹವೆಂದು ಭಾವಿಸಬೇಕು.
12056035a ದುರ್ಗೇಷು ಚ ಮಹಾರಾಜ ಷಟ್ಸು ಯೇ ಶಾಸ್ತ್ರನಿಶ್ಚಿತಾಃ।
12056035c ಸರ್ವೇಷು ತೇಷು ಮನ್ಯಂತೇ ನರದುರ್ಗಂ ಸುದುಸ್ತರಮ್।।
ಮಹಾರಾಜ! ಆರು ದುರ್ಗ3ಗಳಲ್ಲಿ ಮನುಷ್ಯದುರ್ಗವೇ ಎಲ್ಲ ದುರ್ಗಗಳಿಗಿಂತ ದುಸ್ತರವಾದುದೆಂದು ಶಾಸ್ತ್ರನಿಶ್ಚಿತವಾಗಿದೆ.
12056036a ತಸ್ಮಾನ್ನಿತ್ಯಂ ದಯಾ ಕಾರ್ಯಾ ಚಾತುರ್ವರ್ಣ್ಯೇ ವಿಪಶ್ಚಿತಾ।
12056036c ಧರ್ಮಾತ್ಮಾ ಸತ್ಯವಾಕ್ಚೈವ ರಾಜಾ ರಂಜಯತಿ ಪ್ರಜಾಃ।।
ಆದುದರಿಂದ ರಾಜನು ನಿತ್ಯವೂ ಚಾತುರ್ವಣ್ಯಗಳ ಮೇಲೆ ದಯಾಪರನಾಗಿರಬೇಕು. ಸತ್ಯವಾಕ್ಯ ಧರ್ಮಾತ್ಮ ರಾಜನು ಪ್ರಜೆಗಳನ್ನು ರಂಜಿಸುತ್ತಾನೆ.
12056037a ನ ಚ ಕ್ಷಾಂತೇನ ತೇ ಭಾವ್ಯಂ ನಿತ್ಯಂ ಪುರುಷಸತ್ತಮ।
12056037c ಅಧರ್ಮ್ಯೋ ಹಿ ಮೃದೂ ರಾಜಾ ಕ್ಷಮಾವಾನಿವ ಕುಂಜರಃ।।
ಪುರುಷಸತ್ತಮ! ಆದರೆ ನೀನು ನಿತ್ಯವೂ ಕ್ಷಮಾವಂತನಾಗಿರಕೂಡದು. ಮೃದುವಾಗಿರುವುದು ಆನೆಗೆ ಹೇಗೋ ಹಾಗೆ ಸದಾ ಕ್ಷಮಾವಂತನಾಗಿರುವುದು ರಾಜನಿಗೂ ಅಧರ್ಮ.
12056038a ಬಾರ್ಹಸ್ಪತ್ಯೇ ಚ ಶಾಸ್ತ್ರೇ ವೈ ಶ್ಲೋಕಾ ವಿನಿಯತಾಃ ಪುರಾ।
12056038c ಅಸ್ಮಿನ್ನರ್ಥೇ ಮಹಾರಾಜ ತನ್ಮೇ ನಿಗದತಃ ಶೃಣು।।
ಮಹಾರಾಜ! ಇದೇ ಅರ್ಥಕೊಡುವ ಶ್ಲೋಕಗಳನ್ನು ಹಿಂದೆ ಬೃಹಸ್ಪತಿಯು ತನ್ನ ಶಾಸ್ತ್ರದಲ್ಲಿ ಹೇಳಿದ್ದನು. ಅದನ್ನು ಪುನಃ ಕೇಳು.
12056039a ಕ್ಷಮಮಾಣಂ ನೃಪಂ ನಿತ್ಯಂ ನೀಚಃ ಪರಿಭವೇಜ್ಜನಃ।
12056039c ಹಸ್ತಿಯಂತಾ ಗಜಸ್ಯೇವ ಶಿರ ಏವಾರುರುಕ್ಷತಿ।।
“ಮಾವಟಿಗನು ಆನೆಯ ಶಿರವನ್ನೇ ಏರಿ ಕುಳಿತುಕೊಳ್ಳುವಂತೆ ಕ್ಷಮಾವಂತನಾದ ನೃಪನನ್ನು ನೀಚ ಜನರು ನಿತ್ಯವೂ ತಿರಸ್ಕರಿಸುತ್ತಿರುತ್ತಾರೆ.”
12056040a ತಸ್ಮಾನ್ನೈವ ಮೃದುರ್ನಿತ್ಯಂ ತೀಕ್ಷ್ಣೋ ವಾಪಿ ಭವೇನ್ನೃಪಃ।
12056040c ವಸಂತೇಽರ್ಕ ಇವ ಶ್ರೀಮಾನ್ನ ಶೀತೋ ನ ಚ ಘರ್ಮದಃ।।
ವಸಂತ ಋತುವಿನಲ್ಲಿ ಶ್ರೀಮಾನ್ ಸೂರ್ಯನು ಅತ್ಯಂತ ಶೀತಲನೂ ಪ್ರಖರನೂ ಆಗಿರುವುದಿಲ್ಲವೋ ಹಾಗೆ ನೃಪನೂ ಕೂಡ ನಿತ್ಯವೂ ಅತ್ಯಂತ ಮೃದುವಾಗಿಯೂ ತೀಕ್ಷ್ಣನಾಗಿಯೂ ಇರಬಾರದು.
12056041a ಪ್ರತ್ಯಕ್ಷೇಣಾನುಮಾನೇನ ತಥೌಪಮ್ಯೋಪದೇಶತಃ।
12056041c ಪರೀಕ್ಷ್ಯಾಸ್ತೇ ಮಹಾರಾಜ ಸ್ವೇ ಪರೇ ಚೈವ ಸರ್ವದಾ।।
ಮಹಾರಾಜ! ಪ್ರತ್ಯಕ್ಷ್ಯ4, ಅನುಮಾನ5, ಉಪಮಾನ6 ಮತ್ತು ಉಪದೇಶ7ಗಳಿಂದ ಸರ್ವದಾ ತನ್ನವರು ಯಾರು ಮತ್ತು ಶತ್ರುಗಳು ಯಾರು ಎನ್ನುವುದನ್ನು ಪರೀಕ್ಷಿಸುತ್ತಿರಬೇಕು.
12056042a ವ್ಯಸನಾನಿ ಚ ಸರ್ವಾಣಿ ತ್ಯಜೇಥಾ ಭೂರಿದಕ್ಷಿಣ।
12056042c ನ ಚೈವ ನ ಪ್ರಯುಂಜೀತ ಸಂಗಂ ತು ಪರಿವರ್ಜಯೇತ್।।
ಭೂರಿದಕ್ಷಿಣ! ಎಲ್ಲ ವ್ಯಸನಗಳನ್ನೂ8 ತ್ಯಜಿಸಿಬಿಡಬೇಕು. ಆದರೆ ಇವುಗಳಲ್ಲಿ ಕೆಲವನ್ನು ಕೆಲವು ಸಮಯಗಳಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ಅವುಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ಇಟ್ಟುಕೊಂಡಿರಬಾರದು.
12056043a ನಿತ್ಯಂ ಹಿ ವ್ಯಸನೀ ಲೋಕೇ ಪರಿಭೂತೋ ಭವತ್ಯುತ।
12056043c ಉದ್ವೇಜಯತಿ ಲೋಕಂ ಚಾಪ್ಯತಿದ್ವೇಷೀ ಮಹೀಪತಿಃ।।
ನಿತ್ಯವೂ ವ್ಯಸನಿಯಾಗಿದ್ದುಕೊಂಡು ಬೇರೆಯವರನ್ನು ಸದಾ ದ್ವೇಷಿಸುತ್ತಾ ಲೋಕವನ್ನೇ ಉದ್ವೇಗಗೊಳಿಸುವ ರಾಜನು ಜನರ ತಿರಸ್ಕಾರಕ್ಕೆ ಪಾತ್ರನಾಗುತ್ತಾನೆ.
12056044a ಭವಿತವ್ಯಂ ಸದಾ ರಾಜ್ಞಾ ಗರ್ಭಿಣೀಸಹಧರ್ಮಿಣಾ।
12056044c ಕಾರಣಂ ಚ ಮಹಾರಾಜ ಶೃಣು ಯೇನೇದಮಿಷ್ಯತೇ।।
ಮಹಾರಾಜ! ರಾಜನಾದವನು ಸದಾ ಗರ್ಭಿಣೀ ಸ್ತ್ರೀಯಂತೆ ವ್ಯವಹರಿಸಬೇಕು. ಇದಕ್ಕೆ ಕಾರಣವನ್ನು ಹೇಳುತ್ತೇನೆ, ಕೇಳು.
12056045a ಯಥಾ ಹಿ ಗರ್ಭಿಣೀ ಹಿತ್ವಾ ಸ್ವಂ ಪ್ರಿಯಂ ಮನಸೋಽನುಗಮ್।
12056045c ಗರ್ಭಸ್ಯ ಹಿತಮಾಧತ್ತೇ ತಥಾ ರಾಜ್ಞಾಪ್ಯಸಂಶಯಮ್।।
12056046a ವರ್ತಿತವ್ಯಂ ಕುರುಶ್ರೇಷ್ಠ ನಿತ್ಯಂ ಧರ್ಮಾನುವರ್ತಿನಾ।
12056046c ಸ್ವಂ ಪ್ರಿಯಂ ಸಮಭಿತ್ಯಜ್ಯ ಯದ್ಯಲ್ಲೋಕಹಿತಂ ಭವೇತ್।।
ಕುರುಶ್ರೇಷ್ಠ! ಗರ್ಭಿಣೀ ಸ್ತ್ರೀಯು ಹೇಗೆ ತನ್ನ ಮನೋಕಾಮನೆಗಳನ್ನು ದೂರೀಕರಿಸಿ ಗರ್ಭಸ್ಥವಾಗಿರುವ ಶಿಶುವಿನ ಹಿತದಲ್ಲಿಯೇ ಆಸಕ್ತಳಾಗಿರುವಳೋ ಹಾಗೆ ರಾಜನೂ ಕೂಡ ನಿಸ್ಸಂಶಯವಾಗಿ ತನ್ನ ಸಂತೋಷವನ್ನು ದೂರೀಕರಿಸಿ ಲೋಕಹಿತಕ್ಕಾಗಿ ನಿತ್ಯವೂ ಧರ್ಮನಿರತನಾಗಿರಬೇಕು.
12056047a ನ ಸಂತ್ಯಾಜ್ಯಂ ಚ ತೇ ಧೈರ್ಯಂ ಕದಾ ಚಿದಪಿ ಪಾಂಡವ।
12056047c ಧೀರಸ್ಯ ಸ್ಪಷ್ಟದಂಡಸ್ಯ ನ ಹ್ಯಾಜ್ಞಾ ಪ್ರತಿಹನ್ಯತೇ।।
ಪಾಂಡವ! ರಾಜನು ಎಂದೂ ತನ್ನ ಧೈರ್ಯವನ್ನು ತೊರೆಯಬಾರದು. ಧೀರನಾದ ಮತ್ತು ಸ್ಪಷ್ಟವಾದ ಶಿಕ್ಷೆಯನ್ನು ನೀಡುವವನ ಆಜ್ಞೆಗಳನ್ನು ಯಾರೂ ಉಲ್ಲಂಘಿಸುವುದಿಲ್ಲ.
12056048a ಪರಿಹಾಸಶ್ಚ ಭೃತ್ಯೈಸ್ತೇ ನ ನಿತ್ಯಂ ವದತಾಂ ವರ।
12056048c ಕರ್ತವ್ಯೋ ರಾಜಶಾರ್ದೂಲ ದೋಷಮತ್ರ ಹಿ ಮೇ ಶೃಣು।।
ವಾಗ್ಮಿಗಳಲ್ಲಿ ಶ್ರೇಷ್ಠನೇ! ಸೇವಕರೊಡನೆ ನಿತ್ಯವೂ ಪರಿಹಾಸಗಳಲ್ಲಿ ತೊಡಗಬಾರದು. ಇದು ರಾಜನ ಕರ್ತ್ಯವ್ಯ. ರಾಜಶಾರ್ದೂಲ! ಇದರಲ್ಲಿ ದೋಷವೇನೆನ್ನುವುದನ್ನು ಕೇಳು.
12056049a ಅವಮನ್ಯಂತಿ ಭರ್ತಾರಂ ಸಂಹರ್ಷಾದುಪಜೀವಿನಃ।
12056049c ಸ್ವೇ ಸ್ಥಾನೇ ನ ಚ ತಿಷ್ಠಂತಿ ಲಂಘಯಂತಿ ಹಿ ತದ್ವಚಃ।।
ರಾಜನ ಆಶ್ರಯದಿಂದಲೇ ಜೀವನವನ್ನು ನಡೆಸುವ ಸೇವಕರು ನಿಕಟ ಸಂಪರ್ಕದಿಂದಾಗಿ ತಮ್ಮ ಒಡೆಯನನ್ನೇ ಕೀಳುಭಾವನೆಯಿಂದ ಕಾಣುತ್ತಾರೆ. ಅವನಿಗೆ ಮರ್ಯಾದೆಯನ್ನು ಕೊಡದೇ, ಅವರು ತಮ್ಮ ಕೆಲಸಗಳನ್ನೂ ಶ್ರದ್ಧೆಯಿಂದ ಮಾಡುವುದಿಲ್ಲ. ಅವನ ಆಜ್ಞೆಯನ್ನೂ ಉಲ್ಲಂಘಿಸುತ್ತಾರೆ.
12056050a ಪ್ರೇಷ್ಯಮಾಣಾ ವಿಕಲ್ಪಂತೇ ಗುಹ್ಯಂ ಚಾಪ್ಯನುಯುಂಜತೇ।
12056050c ಅಯಾಚ್ಯಂ ಚೈವ ಯಾಚಂತೇಽಭೋಜ್ಯಾನ್ಯಾಹಾರಯಂತಿ ಚ।।
ಒಂದು ಕೆಲಸಕ್ಕೆ ಕಳುಹಿಸಿದರೆ ಬೇರೆಯದನ್ನೇ ಮಾಡಿಬರುತ್ತಾರೆ. ಗುಟ್ಟುಗಳನ್ನು ಬಯಲುಮಾಡುತ್ತಾರೆ. ಕೇಳಬಾರದವುಗಳನ್ನು ಕೇಳುತ್ತಾರೆ. ರಾಜನ ಭೋಜನವನ್ನೂ ಊಟಮಾಡುತ್ತಾರೆ.
12056051a ಕ್ರುಧ್ಯಂತಿ ಪರಿದೀಪ್ಯಂತಿ ಭೂಮಿಮಧ್ಯಾಸತೇಽಸ್ಯ ಚ।
12056051c ಉತ್ಕೋಚೈರ್ವಂಚನಾಭಿಶ್ಚ ಕಾರ್ಯಾಣ್ಯನುವಿಹಂತಿ ಚ।।
ರಾಜನು ಸಲಿಗೆಯಲ್ಲಿರುವ ಸೇವಕರು ಕುಪಿತರಾಗುತ್ತಾರೆ. ರಾಜನ ಆಸನದಲ್ಲಿಯೇ ಕುಳಿತುಕೊಳ್ಳಲು ನೋಡುತ್ತಾರೆ. ರಾಜನಿರುವನೆಂಬ ಪರಿವೆಯೇ ಇಲ್ಲದೇ ಜೋರಾಗಿ ಮಾತನಾಡುತ್ತಾರೆ. ಲಂಚ-ಮೋಸಗಳಿಂದ ರಾಜನ ಕಾರ್ಯಗಳನ್ನು ಹಾಳುಮಾಡುತ್ತಾರೆ.
12056052a ಜರ್ಜರಂ ಚಾಸ್ಯ ವಿಷಯಂ ಕುರ್ವಂತಿ ಪ್ರತಿರೂಪಕೈಃ।
12056052c ಸ್ತ್ರೀರಕ್ಷಿಭಿಶ್ಚ ಸಜ್ಜಂತೇ ತುಲ್ಯವೇಷಾ ಭವಂತಿ ಚ।।
ರಾಜಾಜ್ಞೆಯ ನಕಲುಗಳನ್ನು ತಮಗೆ ಇಚ್ಛೆಬಂದಂತೆ ಹೊರಡಿಸಿ ದೇಶವನ್ನು ಶಿಥಿಲಗೊಳಿಸುತ್ತಾರೆ. ಪಹರೆಯವರ ಸ್ತ್ರೀವೇಷವನ್ನೇ ಧರಿಸಿ ಅಂತಃಪುರದ ಒಳಗೆ ಹೋಗುತ್ತಾರೆ.
12056053a ವಾತಂ ಚ ಷ್ಠೀವನಂ ಚೈವ ಕುರ್ವತೇ ಚಾಸ್ಯ ಸಂನಿಧೌ।
12056053c ನಿರ್ಲಜ್ಜಾ ನರಶಾರ್ದೂಲ ವ್ಯಾಹರಂತಿ ಚ ತದ್ವಚಃ।।
ನರಶಾರ್ದೂಲ! ರಾಜನು ಸಲಿಗೆಯಿಂದಿದ್ದ ಸೇವಕರು ಅವನ ಸನ್ನಿಧಿಯಲ್ಲಿಯೇ ಆಕಳಿಸುತ್ತಾರೆ ಮತ್ತು ಉಗುಳುತ್ತಾರೆ. ನಾಚಿಕೆಗೆಟ್ಟವರಾಗಿ ರಾಜನ ಮಾತುಗಳನ್ನು ಹೊರಹಾಕುತ್ತಾರೆ.
12056054a ಹಯಂ ವಾ ದಂತಿನಂ ವಾಪಿ ರಥಂ ನೃಪತಿಸಂಮತಮ್।
12056054c ಅಧಿರೋಹಂತ್ಯನಾದೃತ್ಯ ಹರ್ಷುಲೇ ಪಾರ್ಥಿವೇ ಮೃದೌ।।
ಹಾಸ್ಯಪ್ರವೃತ್ತಿಯವನೂ ಅತಿಮೃದುಸ್ವಭಾವದವನೂ ಆದ ರಾಜನ ಸೇವಕರು ರಾಜನಿಗೆಂದಿರುವ ಕುದುರೆ, ಆನೆ ಅಥವಾ ರಥವನ್ನು ಅವನನ್ನೇ ಅನಾದರಿಸಿ ತಮಗಾಗಿ ಬಳಸಿಕೊಳ್ಳುತ್ತಾರೆ ಕೂಡ.
12056055a ಇದಂ ತೇ ದುಷ್ಕರಂ ರಾಜನ್ನಿದಂ ತೇ ದುರ್ವಿಚೇಷ್ಟಿತಮ್।
12056055c ಇತ್ಯೇವಂ ಸುಹೃದೋ ನಾಮ ಬ್ರುವಂತಿ ಪರಿಷದ್ಗತಾಃ।।
ಗಣ್ಯರಿರುವ ರಾಜಸಭೆಯಲ್ಲಿಯೂ ಅವರು ಸ್ನೇಹಿತರಂತೆ ಅತಿ ಸಲುಗೆಯಿಂದ “ರಾಜನ್! ಇದು ನಿನಗೆ ಕಷ್ಟವಾದುದು! ನೀನು ಮಾಡಿದ ಇದು ಸರಿಯಲ್ಲ!” ಎಂದು ಹೇಳುತ್ತಿರುತ್ತಾರೆ.
12056056a ಕ್ರುದ್ಧೇ ಚಾಸ್ಮಿನ್ಹಸಂತ್ಯೇವ ನ ಚ ಹೃಷ್ಯಂತಿ ಪೂಜಿತಾಃ।
12056056c ಸಂಘರ್ಷಶೀಲಾಶ್ಚ ಸದಾ ಭವಂತ್ಯನ್ಯೋನ್ಯಕಾರಣಾತ್।।
ರಾಜನು ಕ್ರುದ್ಧನಾದರೆ ಇವರು ನಗುತ್ತಾರೆ. ರಾಜನು ಗೌರವಿಸಿದರೆ ಸಂತೋಷಪಡುವುದಿಲ್ಲ. ಸ್ವಾರ್ಥಕ್ಕಾಗಿ ಸದಾ ಸಂಘರ್ಷಶೀಲರಾಗಿಯೇ ಇರುತ್ತಾರೆ.
12056057a ವಿಸ್ರಂಸಯಂತಿ ಮಂತ್ರಂ ಚ ವಿವೃಣ್ವಂತಿ ಚ ದುಷ್ಕೃತಮ್।
12056057c ಲೀಲಯಾ ಚೈವ ಕುರ್ವಂತಿ ಸಾವಜ್ಞಾಸ್ತಸ್ಯ ಶಾಸನಮ್।।
ಗುಪ್ತಸಮಾಲೋಚನೆಗಳನ್ನು ಬಹಿರಂಗಗೊಳಿಸುತ್ತಾರೆ. ಮಾಡಿದ ತಪ್ಪುಗಳನ್ನು ಹೊರಹಾಕುತ್ತಾರೆ. ರಾಜಶಾಸನವನ್ನು ಮತ್ತು ಆಜ್ಞೆಯನ್ನು ಕೂಡ ಆಟವೋ ಎನ್ನುವಂತೆ ಅಸಡ್ಡೆಯಿಂದ ಮಾಡುತ್ತಾರೆ.
12056057e ಅಲಂಕರಣಭೋಜ್ಯಂ ಚ ತಥಾ ಸ್ನಾನಾನುಲೇಪನಮ್।
12056058a ಹೇಲಮಾನಾ ನರವ್ಯಾಘ್ರ ಸ್ವಸ್ಥಾಸ್ತಸ್ಯೋಪಶೃಣ್ವತೇ।।
ರಾಜನ ಅಲಂಕಾರ, ಭೋಜನ, ಸ್ನಾನ ಮತ್ತು ಗಂಧಾನುಲೇಪನಗಳ ವಿಷಯಗಳಲ್ಲಿಯೂ ಸೇವಕರು ಅವನಿಗೆ ಕೇಳಿಸುವಂತೆಯೇ ನಿರ್ಭಯರಾಗಿ ಕುತ್ಸಿತ ಮಾತುಗಳನ್ನಾಡುತ್ತಿರುತ್ತಾರೆ.
12056058c ನಿಂದಂತಿ ಸ್ವಾನಧೀಕಾರಾನ್ಸಂತ್ಯಜಂತಿ ಚ ಭಾರತ।
12056059a ನ ವೃತ್ತ್ಯಾ ಪರಿತುಷ್ಯಂತಿ ರಾಜದೇಯಂ ಹರಂತಿ ಚ।।
ಭಾರತ! ವಹಿಸಿಕೊಟ್ಟಿರುವ ಕಾರ್ಯಗಳನ್ನು ದೂಷಿಸುತ್ತಾರೆ. ವಹಿಸಿದ ಕಾರ್ಯಗಳನ್ನು ಪೂರೈಸದೇ ಮಧ್ಯದಲ್ಲಿಯೇ ಬಿಟ್ಟುಬಿಡುತ್ತಾರೆ. ವೇತನದಲ್ಲಿ ತೃಪ್ತಿಯಿರುವುದಿಲ್ಲ. ರಾಜನು ಕೊಟ್ಟ ದಾನಗಳನ್ನೂ ಕದಿಯುತ್ತಾರೆ.
12056059c ಕ್ರೀಡಿತುಂ ತೇನ ಚೇಚ್ಚಂತಿ ಸಸೂತ್ರೇಣೇವ ಪಕ್ಷಿಣಾ।
12056059E ಅಸ್ಮತ್ಪ್ರಣೇಯೋ ರಾಜೇತಿ ಲೋಕೇ ಚೈವ ವದಂತ್ಯುತ।।
ದಾರಕ್ಕೆ ಕಟ್ಟಿದ ಪಕ್ಷಿಯಂತೆ ರಾಜನನ್ನು ಆಡಿಸಲು ಬಯಸುತ್ತಾರೆ. ರಾಜನು ನಾನು ಹೇಳಿದಂತೆ ಕೇಳುತ್ತಾನೆ ಎಂದು ಜನರೊಂದಿಗೆ ಆಡಿಕೊಳ್ಳುತ್ತಿರುತ್ತಾರೆ.
12056060a ಏತೇ ಚೈವಾಪರೇ ಚೈವ ದೋಷಾಃ ಪ್ರಾದುರ್ಭವಂತ್ಯುತ।
12056060c ನೃಪತೌ ಮಾರ್ದವೋಪೇತೇ ಹರ್ಷುಲೇ ಚ ಯುಧಿಷ್ಠಿರ।।
ಯುಧಿಷ್ಠಿರ! ರಾಜನು ಅತಿಮೃದುವಾಗಿಯೂ ಹಾಸ್ಯಪ್ರವೃತ್ತಿಯುಳ್ಳವನಾಗಿಯೂ ಇದ್ದರೆ ಇದಕ್ಕೂ ಮೀರಿ ಇತರ ದೋಷಗಳೂ ಉಂಟಾಗುತ್ತವೆ.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ಷಟ್ ಪಂಚಶತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಐವತ್ತಾರನೇ ಅಧ್ಯಾಯವು.
-
ತನ್ನಲ್ಲಿರುವ ನ್ಯೂನತೆಗಳು, ಸೇನಾಪತಿಗಳೊಡನೆ ಮಾಡುವ ಗುಪ್ತ ಸಮಾಲೋಚನೆಗಳು ಮತ್ತು ಶತ್ರುಪಕ್ಷದಲ್ಲಿರುವ ನ್ಯೂನತೆಗಳನ್ನು ಕಂಡುಹಿಡಿಯುವ ಉಪಾಯಗಳು – ಈ ಮೂರನ್ನು ಗೌಪ್ಯವಾಗಿಡಬೇಕು. ↩︎
-
ದಯಿತಾಶ್ಚ ನರಾಸ್ತೇ ಸ್ಯುರ್ಭಕ್ತಿಮಂತೋ ದ್ವಿಜೇಷು ಯೇ। ಅರ್ಥಾತ್: ಬ್ರಾಹ್ಮಣರಲ್ಲಿ ಭಕ್ತಿಭಾವವುಳ್ಳ ರಾಜರು ಪ್ರಜೆಗಳಿಗೂ ಪ್ರೀತಿಪಾತ್ರರಾಗಿರುತ್ತಾರೆ ಎಂಬ ಪಾಠಾಂತರವಿದೆ (ಭಾರತ ದರ್ಶನ). ↩︎
-
ಮರುಭೂಮಿ, ನೀರು, ಪೃಥ್ವೀ, ಅರಣ್ಯ, ಪರ್ವತ ಮತ್ತು ಮನುಷ್ಯ – ಇವುಗಳೇ ಆರು ದುರ್ಗಗಳು. ↩︎
-
ಪ್ರತ್ಯಕ್ಷ ಪ್ರಮಾಣವೆಂದರೆ ಉಪಕಾರ-ಅಪಕಾರಾದಿಗಳು. ↩︎
-
ಅನುಮಾನವೆಂದರೆ ನೇತ್ರವಕ್ತ್ರವಿಕಾರೇಣ ಜ್ಞಾಯತೇಽಂತರ್ಗತಂ ಮನಃ – ಕಣ್ಣು, ಮುಖಗಳ ವಿಕಾರದಿಂದಲೇ ಮನಸ್ಸಿನ ಇಂಗಿತವನ್ನು ತಿಳಿಯುವುದು. ↩︎
-
ಉಪಮಾನ ಪ್ರಮಾಣವೆಂದರೆ ಹೋಲಿಕೆಯಿಂದ ವಿಷಯಗಳನ್ನು ತಿಳಿಯುವುದು. ↩︎
-
ಉಪದೇಶವೆಂದರೆ ಆಪ್ತರು ಹೇಳುವ ಮಾತುಗಳಿಂದ ನಿರ್ಧರಿಸುವುದು. ↩︎
-
ವ್ಯಸನಗಳು ಹದಿನೆಂಟು. ಕಾಮಜ ವ್ಯಸನಗಳು ಹತ್ತು ಮತ್ತು ಕ್ರೋಧಜ ವ್ಯಸನಗಳು ಎಂಟು. ಬೇಟೆಯಾಡುವುದು, ಜೂಜಾಡುವುದು, ಹಗಲಿನಲ್ಲಿ ಮಲಗುವುದು, ಇತರರನ್ನು ಯಾವಾಗಲೂ ನಿಂದಿಸುತ್ತಿರುವುದು, ಸರ್ವದ ಸ್ತ್ರೀ-ಸಹವಾಸದಲ್ಲಿಯೇ ಇರುವುದು, ಮದದಿಂದ ಕೊಬ್ಬಿರುವವನಂತೆ ವ್ಯವಹರಿಸುವುದು, ವಾದ್ಯ-ಗೀತ-ನೃತ್ಯಗಳಲ್ಲಿಯೇ ಸರ್ವದಾ ಆಸಕ್ತನಾಗಿರುವುದು, ಮತ್ತು ಸುರಾಪಾನಮಾಡುವುದು – ಇವು ಹತ್ತು ಕಾಮಜ ವ್ಯಸನಗಳು. ಚಾಡಿಕೋರತನ, ಸಾಹಸ, ದ್ರೋಹ, ಈರ್ಷ್ಯೆ, ಇತರರಲ್ಲಿ ದೋಷವನ್ನೆಣಿಸುವುದು, ಪುರುಷಾರ್ಥಗಳನ್ನು ದೂಷಿಸುವುದು, ಕಠಿನವಾದ ಮಾತು, ಉಗ್ರವಾದ ಶಿಕ್ಷೆಯನ್ನು ವಿಧಿಸುವುದ್ – ಇವು ಎಂಟೂ ಕ್ರೋಧಜ ವ್ಯಸನಗಳು. ಮೃಗಯಾಕ್ಷಾ ದಿವಾಸ್ವಾಪಃ ಪರಿವಾರಸ್ತ್ರಿಯೋಮದಃ। ತೌರ್ಯತ್ರಿಕಂ ವೃಥಾ ಪಾನಂ ಕಾಮಜೋ ದಶಮೋ ಗುಣಃ।। ಪೈಶುನ್ಯಂ ಸಾಹಸಂ ಕ್ರೋಧಂ ಈರ್ಷ್ಯಾಸೂಯಾರ್ಥದೂಷಣಮ್। ವಾಗ್ದಂಡಜಂ ಚ ಪಾರುಷ್ಯಂ ಕ್ರೋಧಜೋಽಇ ಗುಣೋಽಷ್ಟಕಃ।। ↩︎