055 ಯುಧಿಷ್ಠಿರಾಶಾಸನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ರಾಜಧರ್ಮ ಪರ್ವ

ಅಧ್ಯಾಯ 55

ಸಾರ

ಯುಧಿಷ್ಠಿರಾಶಾಸನ (1-).

12055001 ವೈಶಂಪಾಯನ ಉವಾಚ।
12055001a ಅಥಾಬ್ರವೀನ್ಮಹಾತೇಜಾ ವಾಕ್ಯಂ ಕೌರವನಂದನಃ।
12055001c ಹಂತ ಧರ್ಮಾನ್ಪ್ರವಕ್ಷ್ಯಾಮಿ ದೃಢೇ ವಾಙ್ಮನಸೀ ಮಮ।।
12055001E ತವ ಪ್ರಸಾದಾದ್ಗೋವಿಂದ ಭೂತಾತ್ಮಾ ಹ್ಯಸಿ ಶಾಶ್ವತಃ।।

ವೈಶಂಪಾಯನನು ಹೇಳಿದನು: “ಆಗ ಮಹಾತೇಜಸ್ವಿ ಕೌರವನಂದನನು ಹೇಳಿದನು: “ಗೋವಿಂದ! ಈಗ ನಾನು ಧರ್ಮಗಳ ಪ್ರವಚನವನ್ನು ಮಾಡುತ್ತೇನೆ. ನೀನು ಸರ್ವಭೂತಗಳ ಶಾಶ್ವತ ಆತ್ಮನಾಗಿರುವೆ. ನಿನ್ನ ಪ್ರಸಾದದಿಂದ ನನ್ನ ಮನಸ್ಸು ಮಾತುಗಳೂ ದೃಢವಾಗಿವೆ.

12055002a ಯುಧಿಷ್ಠಿರಸ್ತು ಮಾಂ ರಾಜಾ ಧರ್ಮಾನ್ಸಮನುಪೃಚ್ಚತು।
12055002c ಏವಂ ಪ್ರೀತೋ ಭವಿಷ್ಯಾಮಿ ಧರ್ಮಾನ್ವಕ್ಷ್ಯಾಮಿ ಚಾನಘ।।

ಅನಘ! ರಾಜಾ ಯುಧಿಷ್ಠಿರನು ನನ್ನಲ್ಲಿ ಧರ್ಮಗಳ ಕುರಿತು ಪ್ರಶ್ನಿಸಲಿ. ಅದರಿಂದ ನಾನು ಪ್ರೀತನಾಗುತ್ತೇನೆ. ಧರ್ಮಗಳನ್ನು ಹೇಳುತ್ತೇನೆ.

12055003a ಯಸ್ಮಿನ್ರಾಜರ್ಷಭೇ ಜಾತೇ ಧರ್ಮಾತ್ಮನಿ ಮಹಾತ್ಮನಿ।
12055003c ಅಹೃಷ್ಯನ್ನೃಷಯಃ ಸರ್ವೇ ಸ ಮಾಂ ಪೃಚ್ಚತು ಪಾಂಡವಃ।।

ಯಾರು ಹುಟ್ಟಿದಾಗ ಸರ್ವ ಋಷಿಗಳೂ ಹರ್ಷಿತರಾದರೋ ಆ ಧರ್ಮಾತ್ಮ ಮಹಾತ್ಮ ಪಾಂಡವ ರಾಜರ್ಷಭನು ನನ್ನಲ್ಲಿ ಪ್ರಶ್ನಿಸಲಿ!

12055004a ಸರ್ವೇಷಾಂ ದೀಪ್ತಯಶಸಾಂ ಕುರೂಣಾಂ ಧರ್ಮಚಾರಿಣಾಮ್।
12055004c ಯಸ್ಯ ನಾಸ್ತಿ ಸಮಃ ಕಶ್ಚಿತ್ಸ ಮಾಂ ಪೃಚ್ಚತು ಪಾಂಡವಃ।।

ಯಾರು ಎಲ್ಲ ಧರ್ಮಚಾರೀ ಕುರುಗಳ ಯಶಸ್ಸನ್ನು ಬೆಳಗಿಸಿದನೋ ಮತ್ತು ಯಾರಿಗೆ ಸಮನಾದವರು ಬೇರೆ ಯಾರೂ ಇಲ್ಲವೋ ಆ ಪಾಂಡವನು ನನ್ನಲ್ಲಿ ಪ್ರಶ್ನಿಸಲಿ!

12055005a ಧೃತಿರ್ದಮೋ ಬ್ರಹ್ಮಚರ್ಯಂ ಕ್ಷಮಾ ಧರ್ಮಶ್ಚ ನಿತ್ಯದಾ।
12055005c ಯಸ್ಮಿನ್ನೋಜಶ್ಚ ತೇಜಶ್ಚ ಸ ಮಾಂ ಪೃಚ್ಚತು ಪಾಂಡವಃ।।

ಯಾರಲ್ಲಿ ನಿತ್ಯವೂ ಧೃತಿ, ದಮ, ಬ್ರಹ್ಮಚರ್ಯ, ಕ್ಷಮೆ, ಧರ್ಮ, ಓಜಸ್ಸು ಮತ್ತು ತೇಜಸ್ಸುಗಳು ನೆಲಸಿವೆಯೋ ಆ ಪಾಂಡವನು ನನ್ನಲ್ಲಿ ಪ್ರಶ್ನಿಸಲಿ!

12055006a ಸತ್ಯಂ ದಾನಂ ತಪಃ ಶೌಚಂ ಶಾಂತಿರ್ದಾಕ್ಷ್ಯಮಸಂಭ್ರಮಃ।
12055006c ಯಸ್ಮಿನ್ನೇತಾನಿ ಸರ್ವಾಣಿ ಸ ಮಾಂ ಪೃಚ್ಚತು ಪಾಂಡವಃ।।

ಯಾರಲ್ಲಿ ಸತ್ಯ, ದಾನ, ತಪಸ್ಸು, ಶೌಚ, ಶಾಂತಿ, ದಕ್ಷತೆ ಮತ್ತು ಅಸಂಭ್ರಮ ಈ ಸರ್ವ ಗುಣಗಳೂ ಇವೆಯೋ ಆ ಪಾಂಡವನು ನನ್ನಲ್ಲಿ ಪ್ರಶ್ನಿಸಲಿ!

12055007a ಯೋ ನ ಕಾಮಾನ್ನ ಸಂರಂಭಾನ್ನ ಭಯಾನ್ನಾರ್ಥಕಾರಣಾತ್।
12055007c ಕುರ್ಯಾದಧರ್ಮಂ ಧರ್ಮಾತ್ಮಾ ಸ ಮಾಂ ಪೃಚ್ಚತು ಪಾಂಡವಃ।।

ಯಾರು ಕಾಮ, ಕ್ರೋಧ, ಭಯ ಮತ್ತು ಅರ್ಥಕ್ಕಾಗಿ ಅಧರ್ಮವನ್ನು ಎಸಗಲಿಲ್ಲವೋ ಆ ಧರ್ಮಾತ್ಮ ಪಾಂಡವನು ನನ್ನಲ್ಲಿ ಪ್ರಶ್ನಿಸಲಿ!

12055008a ಸಂಬಂಧಿನೋಽತಿಥೀನ್ಭೃತ್ಯಾನ್ಸಂಶ್ರಿತೋಪಾಶ್ರಿತಾಂಶ್ಚ ಯಃ।
12055008c ಸಂಮಾನಯತಿ ಸತ್ಕೃತ್ಯ ಸ ಮಾಂ ಪೃಚ್ಚತು ಪಾಂಡವಃ।।

ಸಂಬಂಧಿಗಳನ್ನೂ, ಅತಿಥಿಗಳನ್ನೂ, ಸೇವಕರನ್ನೂ, ಮತ್ತು ಆಶ್ರಿತರನ್ನು ಸತ್ಕರಿಸಿ ಸನ್ಮಾನಿಸುವ ಪಾಂಡವನು ನನ್ನಲ್ಲಿ ಪ್ರಶ್ನಿಸಲಿ!

12055009a ಸತ್ಯನಿತ್ಯಃ ಕ್ಷಮಾನಿತ್ಯೋ ಜ್ಞಾನನಿತ್ಯೋಽತಿಥಿಪ್ರಿಯಃ।
12055009c ಯೋ ದದಾತಿ ಸತಾಂ ನಿತ್ಯಂ ಸ ಮಾಂ ಪೃಚ್ಚತು ಪಾಂಡವಃ।।

ಸತ್ಯನಿತ್ಯನೂ, ಕ್ಷಮಾನಿತ್ಯನೂ, ಜ್ಞಾನನಿತ್ಯನೂ, ಅತಿಥಿಪ್ರಿಯನೂ, ಸದಾ ಸತ್ಪುರುಷರಿಗೆ ದಾನನೀಡುವವನೂ ಆದ ಪಾಂಡವನು ನನ್ನಲ್ಲಿ ಪ್ರಶ್ನಿಸಲಿ!

12055010a ಇಜ್ಯಾಧ್ಯಯನನಿತ್ಯಶ್ಚ ಧರ್ಮೇ ಚ ನಿರತಃ ಸದಾ।
12055010c ಶಾಂತಃ ಶ್ರುತರಹಸ್ಯಶ್ಚ ಸ ಮಾಂ ಪೃಚ್ಚತು ಪಾಂಡವಃ।।

ನಿತ್ಯವೂ ಅಧ್ಯಯನ-ಯಾಗಗಳಲ್ಲಿ ಮತ್ತು ಸದಾ ಧರ್ಮದಲ್ಲಿ ನಿರತನಾಗಿರುವ, ಶ್ರುತಿಗಳ ರಹಸ್ಯಗಳನ್ನು ತಿಳಿದಿರುವ ಶಾಂತ ಪಾಂಡವನು ನನ್ನಲ್ಲಿ ಪ್ರಶ್ನಿಸಲಿ!”

12055011 ವಾಸುದೇವ ಉವಾಚ।
12055011a ಲಜ್ಜಯಾ ಪರಯೋಪೇತೋ ಧರ್ಮಾತ್ಮಾ ಸ ಯುಧಿಷ್ಠಿರಃ।
12055011c ಅಭಿಶಾಪಭಯಾದ್ಭೀತೋ ಭವಂತಂ ನೋಪಸರ್ಪತಿ।।

ವಾಸುದೇವನು ಹೇಳಿದನು: “ಧರ್ಮಾತ್ಮ ಯುಧಿಷ್ಠಿರನು ಅತ್ಯಂತ ಲಜ್ಜಿತನಾಗಿದ್ದಾನೆ. ಅಭಿಶಾಪದ ಭಯದಿಂದ ಭೀತನಾಗಿ ಅವನು ನಿನ್ನ ಸಮೀಪಕ್ಕೆ ಬರುತ್ತಿಲ್ಲ.

12055012a ಲೋಕಸ್ಯ ಕದನಂ ಕೃತ್ವಾ ಲೋಕನಾಥೋ ವಿಶಾಂ ಪತೇ।
12055012c ಅಭಿಶಾಪಭಯಾದ್ಭೀತೋ ಭವಂತಂ ನೋಪಸರ್ಪತಿ।।

ಜನಸಂಹಾರದ ಕದನವನ್ನು ಮಾಡಿದ ಲೋಕನಾಥ ವಿಶಾಂಪತಿಯು ಅಭಿಶಾಪದ ಭಯದಿಂದ ಭೀತನಾಗಿ ನಿನ್ನ ಸಮೀಪಕ್ಕೆ ಬರುತ್ತಿಲ್ಲ.

12055013a ಪೂಜ್ಯಾನ್ಮಾನ್ಯಾಂಶ್ಚ ಭಕ್ತಾಂಶ್ಚ ಗುರೂನ್ಸಂಬಂಧಿಬಾಂಧವಾನ್।
12055013c ಅರ್ಘ್ಯಾರ್ಹಾನಿಷುಭಿರ್ಹತ್ವಾ ಭವಂತಂ ನೋಪಸರ್ಪತಿ।।

ಅರ್ಘ್ಯಾದಿಗಳನ್ನಿತ್ತು ಸತ್ಕರಿಸಲು ಅರ್ಹರಾದ ಪೂಜ್ಯರನ್ನೂ, ಮಾನ್ಯರನ್ನೂ, ಭಕ್ತರನ್ನೂ, ಗುರುಗಳನ್ನೂ, ಸಂಬಂಧಿ-ಬಾಂಧವರನ್ನೂ ಬಾಣಗಳಿಂದ ಸಂಹರಿಸಿದ ಕಾರಣದಿಂದ ಅವನು ನಿನ್ನ ಸಮೀಪಕ್ಕೆ ಬರುತ್ತಿಲ್ಲ.”

12055014 ಭೀಷ್ಮ ಉವಾಚ।
12055014a ಬ್ರಾಹ್ಮಣಾನಾಂ ಯಥಾ ಧರ್ಮೋ ದಾನಮಧ್ಯಯನಂ ತಪಃ।
12055014c ಕ್ಷತ್ರಿಯಾಣಾಂ ತಥಾ ಕೃಷ್ಣ ಸಮರೇ ದೇಹಪಾತನಮ್।।

ಭೀಷ್ಮನು ಹೇಳಿದನು: “ಕೃಷ್ಣ! ಬ್ರಾಹ್ಮಣರಿಗೆ ದಾನ-ಅಧ್ಯಯನ-ತಪಸ್ಸುಗಳು ಹೇಗೆ ಧರ್ಮವೋ ಹಾಗೆ ಸಮರದಲ್ಲಿ ಶಸ್ತ್ರಗಳ ಮೂಲಕ ಸಂಹರಿಸುವುದು ಕ್ಷತ್ರಿಯರ ಧರ್ಮ!

12055015a ಪಿತೃನ್ಪಿತಾಮಹಾನ್ಪುತ್ರಾನ್ಗುರೂನ್ಸಂಬಂಧಿಬಾಂಧವಾನ್।
12055015c ಮಿಥ್ಯಾಪ್ರವೃತ್ತಾನ್ಯಃ ಸಂಖ್ಯೇ ನಿಹನ್ಯಾದ್ಧರ್ಮ ಏವ ಸಃ।।

ಮಿಥ್ಯರಾಗಿ ನಡೆದುಕೊಳ್ಳುವ ಪಿತೃಗಳನ್ನು, ಪಿತಾಮಹರನ್ನು, ಪುತ್ರರನ್ನು, ಗುರುಗಳನ್ನು ಮತ್ತು ಸಂಬಂಧಿ-ಬಾಂಧವರನ್ನು ಯುದ್ಧದಲ್ಲಿ ಸಂಹರಿಸುವುದು ಅವನಿಗೆ ಧರ್ಮವೇ ಆಗಿದೆ.

12055016a ಸಮಯತ್ಯಾಗಿನೋ ಲುಬ್ಧಾನ್ಗುರೂನಪಿ ಚ ಕೇಶವ।
12055016c ನಿಹಂತಿ ಸಮರೇ ಪಾಪಾನ್ಕ್ಷತ್ರಿಯೋ ಯಃ ಸ ಧರ್ಮವಿತ್।।

ಕೇಶವ! ಲುಬ್ಧರಾಗಿ ಒಪ್ಪಂದಗಳನ್ನು ತ್ಯಜಿಸುವ ಪಾಪಿ ಗುರುಗಳನ್ನೂ ಕೂಡ ಸಮರದಲ್ಲಿ ಸಂಹರಿಸುವ ಕ್ಷತ್ರಿಯನು ಧರ್ಮವಿದುವೇ ಆಗಿರುತ್ತಾನೆ.

12055017a ಆಹೂತೇನ ರಣೇ ನಿತ್ಯಂ ಯೋದ್ಧವ್ಯಂ ಕ್ಷತ್ರಬಂಧುನಾ।
12055017c ಧರ್ಮ್ಯಂ ಸ್ವರ್ಗ್ಯಂ ಚ ಲೋಕ್ಯಂ ಚ ಯುದ್ಧಂ ಹಿ ಮನುರಬ್ರವೀತ್।।

ಕ್ಷತ್ರಬಂಧುವು ರಣಕ್ಕೆ ಆಹ್ವಾನಿಸಿದಾಗ ನಿತ್ಯವೂ ಯುದ್ಧಮಾಡಬೇಕು. ಕ್ಷತ್ರಿಯನಿಗೆ ಯುದ್ಧವೇ ಧರ್ಮ, ಸ್ವರ್ಗ ಮತ್ತು ಯಶಸ್ಸನ್ನು ಉಂಟುಮಾಡುವವು ಎಂದು ಮನುವೇ ಹೇಳಿದ್ದಾನೆ.””

12055018 ವೈಶಂಪಾಯನ ಉವಾಚ।
12055018a ಏವಮುಕ್ತಸ್ತು ಭೀಷ್ಮೇಣ ಧರ್ಮರಾಜೋ ಯುಧಿಷ್ಠಿರಃ।
12055018c ವಿನೀತವದುಪಾಗಮ್ಯ ತಸ್ಥೌ ಸಂದರ್ಶನೇಽಗ್ರತಃ।।

ವೈಶಂಪಾಯನನು ಹೇಳಿದನು: “ಭೀಷ್ಮನು ಹೀಗೆ ಹೇಳಲು ಧರ್ಮರಾಜ ಯುಧಿಷ್ಠಿರನು ವಿನೀತನಾಗಿ ಭೀಷ್ಮನ ಸಮೀಪಕ್ಕೆ ಹೋಗಿ ಅವನ ದೃಷ್ಟಿಗೆ ಅಭಿಮುಖನಾಗಿ ನಿಂತುಕೊಂಡನು.

12055019a ಅಥಾಸ್ಯ ಪಾದೌ ಜಗ್ರಾಹ ಭೀಷ್ಮಶ್ಚಾಭಿನನಂದ ತಮ್।
12055019c ಮೂರ್ಧ್ನಿ ಚೈನಮುಪಾಘ್ರಾಯ ನಿಷೀದೇತ್ಯಬ್ರವೀತ್ತದಾ।।

ಅವನು ಭೀಷ್ಮನ ಎರಡು ಪಾದಗಳನ್ನೂ ಹಿಡಿದು ನಮಸ್ಕರಿಸಿದನು. ಭೀಷ್ಮನು ಯುಧಿಷ್ಠಿರನ ನೆತ್ತಿಯನ್ನು ಆಘ್ರಾಣಿಸಿ, ಆಶ್ವಾಸನೆಯನ್ನಿತ್ತು, ಕುಳಿತುಕೊಳ್ಳಲು ಹೇಳಿದನು.

12055020a ತಮುವಾಚಾಥ ಗಾಂಗೇಯ ಋಷಭಃ ಸರ್ವಧನ್ವಿನಾಮ್।
12055020c ಪೃಚ್ಚ ಮಾಂ ತಾತ ವಿಸ್ರಬ್ಧಂ ಮಾ ಭೈಸ್ತ್ವಂ ಕುರುಸತ್ತಮ।।

ಕುರುಸತ್ತಮ! ಆಗ ಸರ್ವಧನ್ವಿಗಳ ಋಷಭ ಗಾಂಗೇಯನು “ಮಗೂ! ನಿರ್ಭಯನಾಗಿ ಶ್ರದ್ಧೆಯಿಂದ ನನ್ನನ್ನು ಪ್ರಶ್ನಿಸು! ಭಯಪಡಬೇಡ!” ಎಂದನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ಯುಧಿಷ್ಠಿರಾಶಾಸನೇ ಪಂಚಪಂಚಶತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಯುಧಿಷ್ಠಿರಾಶಾಸನ ಎನ್ನುವ ಐವತ್ತೈದನೇ ಅಧ್ಯಾಯವು.