ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ರಾಜಧರ್ಮ ಪರ್ವ
ಅಧ್ಯಾಯ 54
ಸಾರ
ಕೃಷ್ಣವಾಕ್ಯ (1-).
12054001 ಜನಮೇಜಯ ಉವಾಚ।
12054001a ಧರ್ಮಾತ್ಮನಿ ಮಹಾಸತ್ತ್ವೇ ಸತ್ಯಸಂಧೇ ಜಿತಾತ್ಮನಿ।
12054001c ದೇವವ್ರತೇ ಮಹಾಭಾಗೇ ಶರತಲ್ಪಗತೇಽಚ್ಯುತೇ।।
12054002a ಶಯಾನೇ ವೀರಶಯನೇ ಭೀಷ್ಮೇ ಶಂತನುನಂದನೇ।
12054002c ಗಾಂಗೇಯೇ ಪುರುಷವ್ಯಾಘ್ರೇ ಪಾಂಡವೈಃ ಪರ್ಯುಪಸ್ಥಿತೇ।।
12054003a ಕಾಃ ಕಥಾಃ ಸಮವರ್ತಂತ ತಸ್ಮಿನ್ವೀರಸಮಾಗಮೇ।
12054003c ಹತೇಷು ಸರ್ವಸೈನ್ಯೇಷು ತನ್ಮೇ ಶಂಸ ಮಹಾಮುನೇ।।
ಜನಮೇಜಯನು ಹೇಳಿದನು: “ಮಹಾಮುನೇ! ವೀರಸಮಾಗಮದಲ್ಲಿ ಸರ್ವಸೇನೆಗಳು ಹತಗೊಂಡ ನಂತರ ಆ ಧರ್ಮಾತ್ಮ, ಮಹಾಸತ್ತ್ವಯುತ, ಸತ್ಯಸಂಧ, ಜಿತಾತ್ಮ, ಮಹಾಭಾಗ, ಅಚ್ಯುತ, ಶರತಲ್ಪಗತ, ಮತ್ತು ವೀರಶಯನನಾಗಿದ್ದ ಶಂತನುನಂದನ ಗಾಂಗೇಯ ದೇವವ್ರತ ಭೀಷ್ಮ ಹಾಗೂ ಪಾಂಡವರು ಒಟ್ಟಿಗೇ ಕುಳಿತುಕೊಂಡಿರಲು, ಯಾವ ಮಾತುಕಥೆಗಳು ನಡೆದವು? ಅದನ್ನು ನನಗೆ ಹೇಳಬೇಕು!”
12054004 ವೈಶಂಪಾಯನ ಉವಾಚ।
12054004a ಶರತಲ್ಪಗತೇ ಭೀಷ್ಮೇ ಕೌರವಾಣಾಂ ಧುರಂಧರೇ।
12054004c ಆಜಗ್ಮುಋಷಯಃ ಸಿದ್ಧಾ ನಾರದಪ್ರಮುಖಾ ನೃಪ।।
ವೈಶಂಪಾಯನನು ಹೇಳಿದನು: “ನೃಪ! ಶರತಲ್ಪಗತನಾಗಿರುವ ಕೌರವರ ಧುರಂಧರ ಭೀಷ್ಮನ ಬಳಿ ನಾರದಪ್ರಮುಖ ಋಷಿಗಳು ಮತ್ತು ಸಿದ್ಧರು ಆಗಮಿಸಿದರು.
12054005a ಹತಶಿಷ್ಟಾಶ್ಚ ರಾಜಾನೋ ಯುಧಿಷ್ಠಿರಪುರೋಗಮಾಃ।
12054005c ಧೃತರಾಷ್ಟ್ರಶ್ಚ ಕೃಷ್ಣಶ್ಚ ಭೀಮಾರ್ಜುನಯಮಾಸ್ತಥಾ।।
12054006a ತೇಽಭಿಗಮ್ಯ ಮಹಾತ್ಮಾನೋ ಭರತಾನಾಂ ಪಿತಾಮಹಮ್।
12054006c ಅನ್ವಶೋಚಂತ ಗಾಂಗೇಯಮಾದಿತ್ಯಂ ಪತಿತಂ ಯಥಾ।।
ಮಹಾತ್ಮ ಯುಧಿಷ್ಠಿರನೇ ಮೊದಲಾದ ಅಳಿದುಳಿದ ರಾಜರು, ಧೃತರಾಷ್ಟ್ರ, ಕೃಷ್ಣ, ಭೀಮಾರ್ಜುನರು, ಯಮಳರು ಕೆಳಗೆ ಬಿದ್ದ ಸೂರ್ಯನಂತಿದ್ದ ಭಾರತರ ಪಿತಾಮಹ ಗಾಂಗೇಯನ ಬಳಿಸಾರಿ ಶೋಕಿಸಿದರು.
12054007a ಮುಹೂರ್ತಮಿವ ಚ ಧ್ಯಾತ್ವಾ ನಾರದೋ ದೇವದರ್ಶನಃ।
12054007c ಉವಾಚ ಪಾಂಡವಾನ್ಸರ್ವಾನ್ಹತಶಿಷ್ಟಾಂಶ್ಚ ಪಾರ್ಥಿವಾನ್।।
ದೇವದರ್ಶನ ನಾರದನು ಮುಹೂರ್ತಕಾಲ ಧ್ಯಾನಿಸಿ ಪಾಂಡವರೆಲ್ಲರನ್ನೂ ಮತ್ತು ಅಳಿದುಳಿದ ಪಾರ್ಥಿವರನ್ನೂ ಉದ್ದೇಶಿಸಿ ಹೇಳಿದನು.
12054008a ಪ್ರಾಪ್ತಕಾಲಂ ಚ ಆಚಕ್ಷೇ ಭೀಷ್ಮೋಽಯಮನುಯುಜ್ಯತಾಮ್।
12054008c ಅಸ್ತಮೇತಿ ಹಿ ಗಾಂಗೇಯೋ ಭಾನುಮಾನಿವ ಭಾರತ।।
“ಭಾರತ! ಅಸ್ತಮಿಸುವ ಸೂರ್ಯನಂತಿರುವ ಗಾಂಗೇಯನೊಡನೆ ಸಂಭಾಷಣೆಗೆ ತೊಡಗುವ ಸಮಯವು ಪ್ರಾಪ್ತವಾಗಿದೆ.
12054009a ಅಯಂ ಪ್ರಾಣಾನುತ್ಸಿಸೃಕ್ಷುಸ್ತಂ ಸರ್ವೇಽಭ್ಯೇತ್ಯ ಪೃಚ್ಚತ।
12054009c ಕೃತ್ಸ್ನಾನ್ಹಿ ವಿವಿಧಾನ್ಧರ್ಮಾಂಶ್ಚಾತುರ್ವರ್ಣ್ಯಸ್ಯ ವೇತ್ತ್ಯಯಮ್।।
ಇವನು ಪ್ರಾಣಗಳನ್ನು ತೊರೆಯುವ ಮೊದಲು ಎಲ್ಲವನ್ನೂ ಕೇಳಬೇಕು. ಏಕೆಂದರೆ ಇವನು ಚಾತುರ್ವರ್ಣಗಳ ವಿವಿಧ ಧರ್ಮಗಳನ್ನೂ ಸಂಪೂರ್ಣವಾಗಿ ತಿಳಿದಿರುತ್ತಾನೆ.
12054010a ಏಷ ವೃದ್ಧಃ ಪುರಾ ಲೋಕಾನ್ಸಂಪ್ರಾಪ್ನೋತಿ ತನುತ್ಯಜಾಮ್।
12054010c ತಂ ಶೀಘ್ರಮನುಯುಂಜಧ್ವಂ ಸಂಶಯಾನ್ಮನಸಿ ಸ್ಥಿತಾನ್।।
ಈ ವೃದ್ಧನು ತನುವನ್ನು ತ್ಯಜಿಸಿ ಲೋಕಗಳಿಗೆ ತೆರಳುವ ಮೊದಲೇ ಶೀಘ್ರವಾಗಿ ಮನಸ್ಸಿನಲ್ಲಿರುವ ಸಂಶಯಗಳನ್ನು ಕೇಳಬೇಕು!”
12054011a ಏವಮುಕ್ತಾ ನಾರದೇನ ಭೀಷ್ಮಮೀಯುರ್ನರಾಧಿಪಾಃ।
12054011c ಪ್ರಷ್ಟುಂ ಚಾಶಕ್ನುವಂತಸ್ತೇ ವೀಕ್ಷಾಂ ಚಕ್ರುಃ ಪರಸ್ಪರಮ್।।
ಭೀಷ್ಮನ ಕುರಿತು ನಾರದನು ಹೀಗೆ ಹೇಳಲು ಅಲ್ಲಿದ್ದ ನರಾಧಿಪರು ಏನನ್ನೂ ಕೇಳಲು ಶಕ್ತರಾಗದೇ ಪರಸ್ಪರರನ್ನು ನೋಡತೊಡಗಿದರು.
12054012a ಅಥೋವಾಚ ಹೃಷೀಕೇಶಂ ಪಾಂಡುಪುತ್ರೋ ಯುಧಿಷ್ಠಿರಃ।
12054012c ನಾನ್ಯಸ್ತ್ವದ್ದೇವಕೀಪುತ್ರ ಶಕ್ತಃ ಪ್ರಷ್ಟುಂ ಪಿತಾಮಹಮ್।।
ಆಗ ಪಾಂಡುಪುತ್ರ ಯುಧಿಷ್ಠಿರನು ಹೃಷೀಕೇಶನಿಗೆ ಹೇಳಿದನು: “ದೇವಕೀಪುತ್ರ! ನಿನ್ನನ್ನು ಬಿಟ್ಟು ಬೇರೆ ಯಾರೂ ಪಿತಾಮಹನನ್ನು ಪ್ರಶ್ನಿಸಲು ಶಕ್ತರಿಲ್ಲ!
12054013a ಪ್ರವ್ಯಾಹಾರಯ ದುರ್ಧರ್ಷ ತ್ವಮಗ್ರೇ ಮಧುಸೂದನ।
12054013c ತ್ವಂ ಹಿ ನಸ್ತಾತ ಸರ್ವೇಷಾಂ ಸರ್ವಧರ್ಮವಿದುತ್ತಮಃ।।
ಮಧುಸೂದನ! ದುರ್ಧರ್ಷ! ನೀನೇ ಮುಂದೆನಿಂತು ವ್ಯವಹರಿಸು! ಏಕೆಂದರೆ ಅಯ್ಯಾ! ನೀನೇ ಎಲ್ಲರ ಎಲ್ಲ ಧರ್ಮಗಳನ್ನೂ ತಿಳಿದಿರುವೆ!”
12054014a ಏವಮುಕ್ತಃ ಪಾಂಡವೇನ ಭಗವಾನ್ಕೇಶವಸ್ತದಾ।
12054014c ಅಭಿಗಮ್ಯ ದುರಾಧರ್ಷಂ ಪ್ರವ್ಯಾಹಾರಯದಚ್ಯುತಃ।।
ಪಾಂಡವನು ಹೀಗೆ ಹೇಳಲು ಭಗವಾನ್ ಅಚ್ಯುತ ಕೇಶವನು ದುರಾಧರ್ಷ ಭೀಷ್ಮನ ಬಳಿಸಾರಿ ಮಾತನಾಡಿದನು:
12054015 ವಾಸುದೇವ ಉವಾಚ।
12054015a ಕಚ್ಚಿತ್ಸುಖೇನ ರಜನೀ ವ್ಯುಷ್ಟಾ ತೇ ರಾಜಸತ್ತಮ।
12054015c ವಿಸ್ಪಷ್ಟಲಕ್ಷಣಾ ಬುದ್ಧಿಃ ಕಚ್ಚಿಚ್ಚೋಪಸ್ಥಿತಾ ತವ।।
ವಾಸುದೇವನು ಹೇಳಿದನು: “ರಾಜಸತ್ತಮ! ನೀನು ರಾತ್ರಿಯನ್ನು ಸುಖವಾಗಿ ಕಳೆದೆಯಲ್ಲವೇ? ನಿನ್ನ ಬುದ್ಧಿಯು ಸ್ಥಿರವಾಗಿ, ಸ್ಪಷ್ಟವಾಗಿ ಕಾಣುತ್ತಿದೆ ತಾನೇ?
12054016a ಕಚ್ಚಿಜ್ಞಾನಾನಿ ಸರ್ವಾಣಿ ಪ್ರತಿಭಾಂತಿ ಚ ತೇಽನಘ।
12054016c ನ ಗ್ಲಾಯತೇ ಚ ಹೃದಯಂ ನ ಚ ತೇ ವ್ಯಾಕುಲಂ ಮನಃ।।
ಅನಘ! ಸರ್ವ ಜ್ಞಾನಗಳೂ ನಿನಗೆ ಹೊಳೆಯುತ್ತಿವೆ ತಾನೇ? ಹೃದಯದಲ್ಲಿ ದುಃಖವಿಲ್ಲ ತಾನೇ? ಮನಸ್ಸು ವ್ಯಾಕುಲಗೊಂಡಿಲ್ಲ ತಾನೇ?”
12054017 ಭೀಷ್ಮ ಉವಾಚ।
12054017a ದಾಹೋ ಮೋಹಃ ಶ್ರಮಶ್ಚೈವ ಕ್ಲಮೋ ಗ್ಲಾನಿಸ್ತಥಾ ರುಜಾ।
12054017c ತವ ಪ್ರಸಾದಾದ್ಗೋವಿಂದ ಸದ್ಯೋ ವ್ಯಪಗತಾನಘ।।
ಭೀಷ್ಮನು ಹೇಳಿದನು: “ಗೋವಿಂದ! ಅನಘ! ನಿನ್ನ ಪ್ರಸಾದದಿಂದ ಬಾಯಾರಿಕೆ, ಮೋಹ, ಸುಸ್ತು, ನೋವು, ದುಃಖ ಮತ್ತು ರುಜಿನಗಳು ಸದ್ಯ ಹೊರಟುಹೋಗಿವೆ!
12054018a ಯಚ್ಚ ಭೂತಂ ಭವಿಷ್ಯಚ್ಚ ಭವಚ್ಚ ಪರಮದ್ಯುತೇ।
12054018c ತತ್ಸರ್ವಮನುಪಶ್ಯಾಮಿ ಪಾಣೌ ಫಲಮಿವಾಹಿತಮ್।।
ಪರಮದ್ಯುತೇ! ಕೈಯಲ್ಲಿರುವ ಫಲದಂತೆ ಭೂತ-ಭವ್ಯ-ವರ್ತಮಾನಗಳನ್ನು ಸ್ವಚ್ಛವಾಗಿ ಕಾಣುತ್ತಿದ್ದೇನೆ.
12054019a ವೇದೋಕ್ತಾಶ್ಚೈವ ಯೇ ಧರ್ಮಾ ವೇದಾಂತನಿಹಿತಾಶ್ಚ ಯೇ।
12054019c ತಾನ್ಸರ್ವಾನ್ಸಂಪ್ರಪಶ್ಯಾಮಿ ವರದಾನಾತ್ತವಾಚ್ಯುತ।।
ಅಚ್ಯುತ! ನಿನ್ನ ವರದಾನದಿಂದ ವೇದಗಳು ಹೇಳಿರುವ ಧರ್ಮಗಳೂ, ವೇದಾಂತಗಳ ನಿಶ್ಚಯಗಳೂ ಎಲ್ಲವನ್ನೂ ನಾನು ಕಾಣುತ್ತಿದ್ದೇನೆ.
12054020a ಶಿಷ್ಟೈಶ್ಚ ಧರ್ಮೋ ಯಃ ಪ್ರೋಕ್ತಃ ಸ ಚ ಮೇ ಹೃದಿ ವರ್ತತೇ।
12054020c ದೇಶಜಾತಿಕುಲಾನಾಂ ಚ ಧರ್ಮಜ್ಞೋಽಸ್ಮಿ ಜನಾರ್ದನ।।
ಶಿಷ್ಟರು ಯಾವುದನ್ನು ಧರ್ಮವೆಂದು ಕರೆಯುತ್ತಾರೆಯೋ ಅದೂ ಕೂಡ ನನ್ನ ಹೃದಯದಲ್ಲಿ ಪ್ರತಿಷ್ಠಿತವಾಗಿದೆ. ಜನಾರ್ದನ! ದೇಶ-ಜಾತಿ-ಕುಲಗಳ ಧರ್ಮಗಳನ್ನೂ ತಿಳಿದಿರುತ್ತೇನೆ.
12054021a ಚತುರ್ಷ್ವಾಶ್ರಮಧರ್ಮೇಷು ಯೋಽರ್ಥಃ ಸ ಚ ಹೃದಿ ಸ್ಥಿತಃ।
12054021c ರಾಜಧರ್ಮಾಂಶ್ಚ ಸಕಲಾನವಗಚ್ಚಾಮಿ ಕೇಶವ।।
ಕೇಶವ! ನಾಲ್ಕು ಆಶ್ರಮಧರ್ಮಗಳೂ ಅವುಗಳ ಅರ್ಥಗಳೂ ನನ್ನ ಹೃದಯದಲ್ಲಿ ನೆಲೆಸಿವೆ. ಸಕಲ ರಾಜಧರ್ಮಗಳನ್ನೂ ತಿಳಿದುಕೊಂಡಿದ್ದೇನೆ.
12054022a ಯತ್ರ ಯತ್ರ ಚ ವಕ್ತವ್ಯಂ ತದ್ವಕ್ಷ್ಯಾಮಿ ಜನಾರ್ದನ।
12054022c ತವ ಪ್ರಸಾದಾದ್ಧಿ ಶುಭಾ ಮನೋ ಮೇ ಬುದ್ಧಿರಾವಿಶತ್।।
ಜನಾರ್ದನ! ಯಾವ ಯಾವ ವಿಷಯದ ಕುರಿತು ಹೇಳಬೇಕೋ ಅದನ್ನು ನಾನು ಹೇಳುತ್ತೇನೆ. ನಿನ್ನ ಪ್ರಸಾದದಿಂದ ನನ್ನ ನಿರ್ಮಲ ಮನಸ್ಸನ್ನು ಶುಭ ಬುದ್ಧಿಯು ಪ್ರವೇಶಿಸಿದೆ.
12054023a ಯುವೇವ ಚಾಸ್ಮಿ ಸಂವೃತ್ತಸ್ತ್ವದನುಧ್ಯಾನಬೃಂಹಿತಃ।
12054023c ವಕ್ತುಂ ಶ್ರೇಯಃ ಸಮರ್ಥೋಽಸ್ಮಿ ತ್ವತ್ಪ್ರಸಾದಾಜ್ಜನಾರ್ದನ।।
ಜನಾರ್ದನ! ಸದಾ ನಿನ್ನನ್ನೇ ಧ್ಯಾನಿಸುತ್ತಿರುವ ನಾನು ವೃದ್ಧನಾದರೂ ಯುವಕನಂತಾಗಿಬಿಟ್ಟಿದ್ದೇನೆ. ನಿನ್ನ ಪ್ರಸಾದದಿಂದ ಶ್ರೇಯವಾದುದನ್ನು ಹೇಳಲು ಸಮರ್ಥನಾಗಿದ್ದೇನೆ.
12054024a ಸ್ವಯಂ ಕಿಮರ್ಥಂ ತು ಭವಾನ್ಶ್ರೇಯೋ ನ ಪ್ರಾಹ ಪಾಂಡವಮ್।
12054024c ಕಿಂ ತೇ ವಿವಕ್ಷಿತಂ ಚಾತ್ರ ತದಾಶು ವದ ಮಾಧವ।।
ಮಾಧವ! ಆದರೆ ಸ್ವಯಂ ನೀನೇ ಪಾಂಡವರಿಗೆ ಶ್ರೇಯವಾದುದನ್ನು ಏಕೆ ಹೇಳುತ್ತಿಲ್ಲ? ನಾನೇ ಅವುಗಳನ್ನು ಹೇಳಬೇಕೆನ್ನುವುದರಲ್ಲಿ ನಿನ್ನ ಉದ್ದೇಶವಾದರೂ ಏನು ಅದನ್ನು ಬೇಗನೇ ಹೇಳು!”
12054025 ವಾಸುದೇವ ಉವಾಚ।
12054025a ಯಶಸಃ ಶ್ರೇಯಸಶ್ಚೈವ ಮೂಲಂ ಮಾಂ ವಿದ್ಧಿ ಕೌರವ।
12054025c ಮತ್ತಃ ಸರ್ವೇಽಭಿನಿರ್ವೃತ್ತಾ ಭಾವಾಃ ಸದಸದಾತ್ಮಕಾಃ।।
ವಾಸುದೇವನು ಹೇಳಿದನು: “ಕೌರವ! ಎಲ್ಲರ ಶ್ರೇಯಸ್ಸು ಮತ್ತು ಯಶಸ್ಸುಗಳಿಗೆ ನಾನೇ ಮೂಲನೆಂದು ತಿಳಿ. ಪ್ರಪಂಚದಲ್ಲಿರುವ ಸತ್ ಮತ್ತು ಅಸತ್ ಎಲ್ಲ ಭಾವಗಳೂ ನನ್ನಿಂದಲೇ ಪ್ರಾದುರ್ಭವಿಸಿವೆ.
12054026a ಶೀತಾಂಶುಶ್ಚಂದ್ರ ಇತ್ಯುಕ್ತೇ ಕೋ ಲೋಕೇ ವಿಸ್ಮಯಿಷ್ಯತಿ।
12054026c ತಥೈವ ಯಶಸಾ ಪೂರ್ಣೇ ಮಯಿ ಕೋ ವಿಸ್ಮಯಿಷ್ಯತಿ।।
ಚಂದ್ರನು ಶೀತಲಕಿರಣಗಳನ್ನು ಹೊಂದಿದ್ದಾನೆ ಎಂದು ಹೇಳಿದರೆ ಲೋಕದಲ್ಲಿ ಯಾರುತಾನೇ ವಿಸ್ಮಯಗೊಳ್ಳುತ್ತಾರೆ? ಹಾಗೆಯೇ ಯಶಸ್ಸಿನಿಂದ ಪೂರ್ಣನಾಗಿರುವ ನಾನು ಉಪದೇಶನೀಡಿದರೆ ಯಾರುತಾನೇ ವಿಸ್ಮಯಗೊಳ್ಳುತ್ತಾರೆ?
12054027a ಆಧೇಯಂ ತು ಮಯಾ ಭೂಯೋ ಯಶಸ್ತವ ಮಹಾದ್ಯುತೇ।
12054027c ತತೋ ಮೇ ವಿಪುಲಾ ಬುದ್ಧಿಸ್ತ್ವಯಿ ಭೀಷ್ಮ ಸಮಾಹಿತಾ।।
ಮಹಾದ್ಯುತೇ! ಭೀಷ್ಮ! ಈ ಜಗತ್ತಿನಲ್ಲಿ ನಿನ್ನ ಯಶಸ್ಸನ್ನು ಇನ್ನೂ ಹೆಚ್ಚಿಸಬೇಕೆಂಬುದೇ ನನ್ನ ಆಶಯವಾಗಿದೆ. ಆದುದರಿಂದ ನನ್ನ ವಿಪುಲ ಬುದ್ಧಿಯನ್ನು ನಿನ್ನಲ್ಲಿಯೇ ಒಂದುಗೂಡಿಸಿದ್ದೇನೆ.
12054028a ಯಾವದ್ಧಿ ಪೃಥಿವೀಪಾಲ ಪೃಥಿವೀ ಸ್ಥಾಸ್ಯತೇ ಧ್ರುವಾ।
12054028c ತಾವತ್ತವಾಕ್ಷಯಾ ಕೀರ್ತಿರ್ಲೋಕಾನನು ಚರಿಷ್ಯತಿ।।
ಪೃಥಿವೀಪಾಲ! ಎಲ್ಲಿಯವರೆಗೆ ಈ ಪೃಥ್ವಿಯು ಸ್ಥಿರವಾಗಿ ನಿಂತಿರುವುದೋ ಅಲ್ಲಿಯವರೆಗೆ ನಿನ್ನ ಅಕ್ಷಯ ಕೀರ್ತಿಯು ಲೋಕಗಳಲ್ಲಿ ವ್ಯಾಪ್ತವಾಗಿರುತ್ತದೆ.
12054029a ಯಚ್ಚ ತ್ವಂ ವಕ್ಷ್ಯಸೇ ಭೀಷ್ಮ ಪಾಂಡವಾಯಾನುಪೃಚ್ಚತೇ।
12054029c ವೇದಪ್ರವಾದಾ ಇವ ತೇ ಸ್ಥಾಸ್ಯಂತಿ ವಸುಧಾತಲೇ।।
ಭೀಷ್ಮ! ಪಾಂಡವನು ಕೇಳಿದುದಕ್ಕೆ ನೀನು ಏನನ್ನು ಹೇಳುತ್ತೀಯೋ ಅದು ವಸುಧಾತಲದಲ್ಲಿ ವೇದವಾಖ್ಯವಾಗಿ ನಿಲ್ಲುತ್ತದೆ.
12054030a ಯಶ್ಚೈತೇನ ಪ್ರಮಾಣೇನ ಯೋಕ್ಷ್ಯತ್ಯಾತ್ಮಾನಮಾತ್ಮನಾ।
12054030c ಸ ಫಲಂ ಸರ್ವಪುಣ್ಯಾನಾಂ ಪ್ರೇತ್ಯ ಚಾನುಭವಿಷ್ಯತಿ।।
ನಿನ್ನ ಮಾತುಗಳನ್ನು ಪ್ರಮಾಣಭೂತವನ್ನಾಗಿಟ್ಟುಕೊಂಡು ಯಾರು ತನ್ನ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾನೆಯೋ ಅವನು ಆ ಸರ್ವಪುಣ್ಯಗಳ ಫಲಗಳನ್ನೂ ಮರಣಾನಂತರದಲ್ಲಿ ಪಡೆದುಕೊಳ್ಳುತ್ತಾನೆ.
12054031a ಏತಸ್ಮಾತ್ಕಾರಣಾದ್ಭೀಷ್ಮ ಮತಿರ್ದಿವ್ಯಾ ಮಯಾ ಹಿ ತೇ।
12054031c ದತ್ತಾ ಯಶೋ ವಿಪ್ರಥೇತ ಕಥಂ ಭೂಯಸ್ತವೇತಿ ಹ।।
ಭೀಷ್ಮ! ಈ ಕಾರಣದಿಂದಲೇ ನಿನ್ನ ಯಶಸ್ಸನ್ನು ಹೇಗೆ ಹೆಚ್ಚಿಸಬೇಕು ಎಂದು ಆಲೋಚಿಸಿ, ನನ್ನ ದಿವ್ಯ ಮತಿಯನ್ನು ನಿನಗೆ ಇತ್ತಿದ್ದೇನೆ.
12054032a ಯಾವದ್ಧಿ ಪ್ರಥತೇ ಲೋಕೇ ಪುರುಷಸ್ಯ ಯಶೋ ಭುವಿ।
12054032c ತಾವತ್ತಸ್ಯಾಕ್ಷಯಂ ಸ್ಥಾನಂ ಭವತೀತಿ ವಿನಿಶ್ಚಿತಮ್।।
ಎಲ್ಲಿಯವರೆಗೆ ಪುರುಷನ ಯಶಸ್ಸು ಭುವಿಯ ಜನರಲ್ಲಿ ಹರಡಿರುತ್ತದೆಯೋ ಅಲ್ಲಿಯವರೆಗೆ ಅವನ ಸ್ಥಾನವು ಅಕ್ಷಯವಾಗಿರುತ್ತದೆ ಎನ್ನುವುದು ನಿಶ್ಚಿತವಾಗಿದೆ.
12054033a ರಾಜಾನೋ ಹತಶಿಷ್ಟಾಸ್ತ್ವಾಂ ರಾಜನ್ನಭಿತ ಆಸತೇ।
12054033c ಧರ್ಮಾನನುಯುಯುಕ್ಷಂತಸ್ತೇಭ್ಯಃ ಪ್ರಬ್ರೂಹಿ ಭಾರತ।।
ರಾಜನ್! ಭಾರತ! ಅಳಿದುಳಿದ ರಾಜರು ನಿನ್ನಿಂದ ಧರ್ಮವನ್ನು ತಿಳಿದುಕೊಳ್ಳಬೇಕೆಂಬ ಇಚ್ಛೆಯಿಂದ ನಿನ್ನ ಸುತ್ತಲೂ ಕುಳಿತಿದ್ದಾರೆ. ಅವರೆಲ್ಲರಿಗೂ ಉಪದೇಶಿಸು!
12054034a ಭವಾನ್ಹಿ ವಯಸಾ ವೃದ್ಧಃ ಶ್ರುತಾಚಾರಸಮನ್ವಿತಃ।
12054034c ಕುಶಲೋ ರಾಜಧರ್ಮಾಣಾಂ ಪೂರ್ವೇಷಾಮಪರಾಶ್ಚ ಯೇ।।
ನೀನು ವಯಸ್ಸಿನಲ್ಲಿ ವೃದ್ಧನಾಗಿರುವೆ. ಶಾಸ್ತ್ರಜ್ಞಾನ ಮತ್ತು ಸದಾಚಾರಗಳಿಂದ ಕೂಡಿರುವೆ. ಹಿಂದಿದ್ದ ಮತ್ತು ಮುಂದೆ ಬೇಕಾಗುವ ರಾಜಧರ್ಮಗಳಲ್ಲಿ ಕುಶಲನಾಗಿರುವೆ.
12054035a ಜನ್ಮಪ್ರಭೃತಿ ತೇ ಕಶ್ಚಿದ್ವೃಜಿನಂ ನ ದದರ್ಶ ಹ।
12054035c ಜ್ಞಾತಾರಮನುಧರ್ಮಾಣಾಂ ತ್ವಾಂ ವಿದುಃ ಸರ್ವಪಾರ್ಥಿವಾಃ।।
ಜನ್ಮಪ್ರಭೃತಿ ನಿನ್ನಲ್ಲಿ ಯಾವುದೇ ದೋಷವನ್ನೂ ಕಂಡಿಲ್ಲ. ನೀನು ಸರ್ವಧರ್ಮಗಳನ್ನು ತಿಳಿದಿರುವೆ ಎಂದು ಸರ್ವಪಾರ್ಥಿವರೂ ಅರಿತಿದ್ದಾರೆ.
12054036a ತೇಭ್ಯಃ ಪಿತೇವ ಪುತ್ರೇಭ್ಯೋ ರಾಜನ್ಬ್ರೂಹಿ ಪರಂ ನಯಮ್।
12054036c ಋಷಯಶ್ಚ ಹಿ ದೇವಾಶ್ಚ ತ್ವಯಾ ನಿತ್ಯಮುಪಾಸಿತಾಃ।।
ರಾಜನ್! ತಂದೆಯು ಮಕ್ಕಳಿಗೆ ಉಪದೇಶಿಸುವಂತೆ ಇವರಿಗೆ ಪರಮ ನೀತಿಯನ್ನು ಉಪದೇಶಿಸು. ಋಷಿಗಳನ್ನೂ ದೇವತೆಗಳನ್ನೂ ನೀನು ನಿತ್ಯವೂ ಉಪಾಸಿಸಿರುವೆ.
12054037a ತಸ್ಮಾದ್ವಕ್ತವ್ಯಮೇವೇಹ ತ್ವಯಾ ಪಶ್ಯಾಮ್ಯಶೇಷತಃ।
12054037c ಧರ್ಮಾನ್ಶುಶ್ರೂಷಮಾಣೇಭ್ಯಃ ಪೃಷ್ಟೇನ ಚ ಸತಾ ಪುನಃ।।
12054038a ವಕ್ತವ್ಯಂ ವಿದುಷಾ ಚೇತಿ ಧರ್ಮಮಾಹುರ್ಮನೀಷಿಣಃ।
12054038c ಅಪ್ರತಿಬ್ರುವತಃ ಕಷ್ಟೋ ದೋಷೋ ಹಿ ಭವತಿ ಪ್ರಭೋ।।
ಆದುದರಿಂದ ಇವರಿಗೆ ನೀನು ಸಂಪೂರ್ಣವಾಗಿ ಉಪದೇಶಿಸಬೇಕೆಂದು ನನಗನ್ನಿಸುತ್ತದೆ. ಧರ್ಮವನ್ನು ತಿಳಿಯಲು ಇಚ್ಛೆಯುಳ್ಳವರು ವಿದುಷನನ್ನು ಕೇಳಿದರೆ ಆ ಧರ್ಮವನ್ನು ತಿಳಿಸಬೇಕೆಂದು ಮನೀಷಿಣರು ಹೇಳುತ್ತಾರೆ. ಪ್ರಭೋ! ಹಾಗೆ ಹೇಳದೇ ಇದ್ದವನಿಗೆ ಕಷ್ಟವೂ ದೋಷವೂ ಆಗುತ್ತದೆ.
12054039a ತಸ್ಮಾತ್ಪುತ್ರೈಶ್ಚ ಪೌತ್ರೈಶ್ಚ ಧರ್ಮಾನ್ಪೃಷ್ಟಃ ಸನಾತನಾನ್।
12054039c ವಿದ್ವಾಜ್ಜಿಜ್ಞಾಸಮಾನೈಸ್ತ್ವಂ ಪ್ರಬ್ರೂಹಿ ಭರತರ್ಷಭ।।
ಭರತರ್ಷಭ! ಆದುದರಿಂದ ಸನಾತನ ಧರ್ಮದ ಕುರಿತು ಕೇಳುತ್ತಿರುವ ನಿನ್ನ ಪುತ್ರ-ಪೌತ್ರರಿಗೆ ವಿದ್ವಾನನೂ ಜಿಜ್ಞಾಸೆಮಾಡಬಲ್ಲನೂ ಆದ ನೀನು ಉಪದೇಶಿಸು!””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ಕೃಷ್ಣವಾಕ್ಯೇ ಚತುಃಪಂಚಶತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಕೃಷ್ಣವಾಕ್ಯ ಎನ್ನುವ ಐವತ್ನಾಲ್ಕನೇ ಅಧ್ಯಾಯವು.