ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ರಾಜಧರ್ಮ ಪರ್ವ
ಅಧ್ಯಾಯ 53
ಸಾರ
ಭೀಷ್ಮಾಭಿಗಮನ (1-).
12053001 ವೈಶಂಪಾಯನ ಉವಾಚ।
12053001a ತತಃ ಪ್ರವಿಶ್ಯ ಭವನಂ ಪ್ರಸುಪ್ತೋ ಮಧುಸೂದನಃ।
12053001c ಯಾಮಮಾತ್ರಾವಶೇಷಾಯಾಂ ಯಾಮಿನ್ಯಾಂ ಪ್ರತ್ಯಬುಧ್ಯತ।।
ವೈಶಂಪಾಯನನು ಹೇಳಿದನು: “ಅನಂತರ ಮಧುಸೂದನನು ಭವನವನ್ನು ಪ್ರವೇಶಿಸಿ ಮಲಗಿದನು. ರಾತ್ರಿಯು ಕಳೆಯಲು ಇನ್ನೂ ಅರ್ಧ ಯಾಮವಿರುವಾಗಲೇ ಅವನು ಎದ್ದನು.
12053002a ಸ ಧ್ಯಾನಪಥಮಾಶ್ರಿತ್ಯ ಸರ್ವಜ್ಞಾನಾನಿ ಮಾಧವಃ।
12053002c ಅವಲೋಕ್ಯ ತತಃ ಪಶ್ಚಾದ್ದಧ್ಯೌ ಬ್ರಹ್ಮ ಸನಾತನಮ್।।
ಮಾಧವನು ಧ್ಯಾನಮಾರ್ಗವನ್ನಾಶ್ರಯಿಸಿ ಸರ್ವಜ್ಞಾನಗಳನ್ನೂ ಕಂಡು ಅನಂತರ ಸನಾತನಬ್ರಹ್ಮನನ್ನು ಧ್ಯಾನಿಸಿದನು.
12053003a ತತಃ ಶ್ರುತಿಪುರಾಣಜ್ಞಾಃ ಶಿಕ್ಷಿತಾ ರಕ್ತಕಂಠಿನಃ।
12053003c ಅಸ್ತುವನ್ವಿಶ್ವಕರ್ಮಾಣಂ ವಾಸುದೇವಂ ಪ್ರಜಾಪತಿಮ್।।
ಆಗ ಶ್ರುತಿಪುರಾಣಗಳನ್ನು ತಿಳಿದಿದ್ದ, ವಿದ್ಯಾವಂತ, ಸುಂದರ ಕಂಠವುಳ್ಳವರು ಆ ವಿಶ್ವಕರ್ಮಿ ಪ್ರಜಾಪತಿ ವಾಸುದೇವನನ್ನು ಸ್ತುತಿಸಿದರು.
12053004a ಪಠಂತಿ ಪಾಣಿಸ್ವನಿಕಾಸ್ತಥಾ ಗಾಯಂತಿ ಗಾಯನಾಃ।
12053004c ಶಂಖಾನಕಮೃದಂಗಾಂಶ್ಚ ಪ್ರವಾದ್ಯಂತ ಸಹಸ್ರಶಃ।।
ಕೈಗಳಿಂದ ತಾಳಹಾಕುತ್ತಾ ಭಜನೆ ಮಾಡುತ್ತಿದ್ದರು. ಮಧುರ ಕಂಠದಲ್ಲಿ ಗಾಯನ ಹಾಡುತ್ತಿದ್ದರು. ಸಹಸ್ರಾರು ಶಂಖ-ಆನಕ-ಮೃದಂತಗಳನ್ನು ಮೊಳಗಿಸಿದರು.
12053005a ವೀಣಾಪಣವವೇಣೂನಾಂ ಸ್ವನಶ್ಚಾತಿಮನೋರಮಃ।
12053005c ಪ್ರಹಾಸ ಇವ ವಿಸ್ತೀರ್ಣಃ ಶುಶ್ರುವೇ ತಸ್ಯ ವೇಶ್ಮನಃ।।
ಅತಿಮನೋರಮ ವೀಣೆ-ಪಣವ-ವೇಣುಗಳ ಧ್ವನಿಗಳು, ಅವನ ಭವನವೇ ಸಂತೋಷದಿಂದ ನಗುತ್ತಿದೆಯೋ ಎನ್ನುವಂತೆ ಬಹು ವಿಸ್ತೀರ್ಣದವರೆಗೆ ಕೇಳಿಬರುತ್ತಿತ್ತು.
12053006a ತಥಾ ಯುಧಿಷ್ಠಿರಸ್ಯಾಪಿ ರಾಜ್ಞೋ ಮಂಗಲಸಂಹಿತಾಃ।
12053006c ಉಚ್ಚೇರುರ್ಮಧುರಾ ವಾಚೋ ಗೀತವಾದಿತ್ರಸಂಹಿತಾಃ।।
ಹಾಗೆಯೇ ರಾಜಾ ಯುಧಿಷ್ಠಿರನಲ್ಲಿಯೂ ಮಂಗಲಕರ ಮಧುರ ವಾಚನ-ಗೀತ-ವಾದ್ಯಗಳ ಮೇಳಗಳು ಕೇಳಿಬಂದವು.
12053007a ತತ ಉತ್ಥಾಯ ದಾಶಾರ್ಹಃ ಸ್ನಾತಃ ಪ್ರಾಂಜಲಿರಚ್ಯುತಃ।
12053007c ಜಪ್ತ್ವಾ ಗುಹ್ಯಂ ಮಹಾಬಾಹುರಗ್ನೀನಾಶ್ರಿತ್ಯ ತಸ್ಥಿವಾನ್।।
ಬಳಿಕ ಮಹಾಬಾಹು ಅಚ್ಯುತ ದಾಶಾರ್ಹನು ಎದ್ದು, ಸ್ನಾನಮಾಡಿ, ಕೈಮುಗಿದು ರಹಸ್ಯವಾಗಿ ಜಪಿಸಿ, ಅಗ್ನಿಯನ್ನು ಪೂಜಿಸಿದನು.
12053008a ತತಃ ಸಹಸ್ರಂ ವಿಪ್ರಾಣಾಂ ಚತುರ್ವೇದವಿದಾಂ ತಥಾ।
12053008c ಗವಾಂ ಸಹಸ್ರೇಣೈಕೈಕಂ ವಾಚಯಾಮಾಸ ಮಾಧವಃ।।
ಅನಂತರ ಮಾಧವನು ನಾಲ್ಕುವೇದಗಳ ವಿದ್ವಾಂಸರಾದ ಸಹಸ್ರ ವಿಪ್ರರಿಗೆ ಒಬ್ಬೊಬ್ಬರಿಗೂ ಒಂದೊಂದು ಸಾವಿರ ಗೋವುಗಳನ್ನು ದಾನಮಾಡಿ, ಸ್ವಸ್ತಿವಾಚನ ಮಾಡಿಸಿಕೊಂಡನು.
12053009a ಮಂಗಲಾಲಂಭನಂ ಕೃತ್ವಾ ಆತ್ಮಾನಮವಲೋಕ್ಯ ಚ।
12053009c ಆದರ್ಶೇ ವಿಮಲೇ ಕೃಷ್ಣಸ್ತತಃ ಸಾತ್ಯಕಿಮಬ್ರವೀತ್।।
ಅನಂತರ ಕೃಷ್ಣನು ಮಂಗಲದ್ರವ್ಯಗಳನ್ನು ಸ್ಪರ್ಷಿಸಿ, ಶುಭ್ರ ಕನ್ನಡಿಯಲ್ಲಿ ತನ್ನನ್ನು ನೋಡಿಕೊಂಡು, ಸಾತ್ಯಕಿಗೆ ಹೇಳಿದನು:
12053010a ಗಚ್ಚ ಶೈನೇಯ ಜಾನೀಹಿ ಗತ್ವಾ ರಾಜನಿವೇಶನಮ್।
12053010c ಅಪಿ ಸಜ್ಜೋ ಮಹಾತೇಜಾ ಭೀಷ್ಮಂ ದ್ರಷ್ಟುಂ ಯುಥಿಷ್ಠಿರಃ।।
“ಶೈನೇಯ! ಹೋಗು! ರಾಜನಿವೇಶನಕ್ಕೆ ಹೋಗಿ ಮಹಾತೇಜಸ್ವಿ ಭೀಷ್ಮನನ್ನು ಕಾಣಲು ಯುಧಿಷ್ಠಿರನು ಸಿದ್ಧನಾಗಿದ್ದನೆಯೋ ಎಂದು ತಿಳಿ!”
12053011a ತತಃ ಕೃಷ್ಣಸ್ಯ ವಚನಾತ್ಸಾತ್ಯಕಿಸ್ತ್ವರಿತೋ ಯಯೌ।
12053011c ಉಪಗಮ್ಯ ಚ ರಾಜಾನಂ ಯುಧಿಷ್ಠಿರಮುವಾಚ ಹ।।
ಕೃಷ್ಣನ ಆ ಮಾತಿನಂತೆ ಸಾತ್ಯಕಿಯು ಬೇಗನೇ ರಾಜ ಯುಧಿಷ್ಠಿರನಲ್ಲಿಗೆ ಹೋಗಿ ಹೇಳಿದನು:
12053012a ಯುಕ್ತೋ ರಥವರೋ ರಾಜನ್ವಾಸುದೇವಸ್ಯ ಧೀಮತಃ।
12053012c ಸಮೀಪಮಾಪಗೇಯಸ್ಯ ಪ್ರಯಾಸ್ಯತಿ ಜನಾರ್ದನಃ।।
“ರಾಜನ್! ಧೀಮತ ವಾಸುದೇವನ ಶ್ರೇಷ್ಠ ರಥವು ಸಿದ್ಧವಾಗಿದೆ. ಜನಾರ್ದನನು ಆಪಗೇಯನ ಸಮೀಪಕ್ಕೆ ಹೋಗುತ್ತಿದ್ದಾನೆ.
12053013a ಭವತ್ಪ್ರತೀಕ್ಷಃ ಕೃಷ್ಣೋಽಸೌ ಧರ್ಮರಾಜ ಮಹಾದ್ಯುತೇ।
12053013c ಯದತ್ರಾನಂತರಂ ಕೃತ್ಯಂ ತದ್ಭವಾನ್ಕರ್ತುಮರ್ಹತಿ।।
ಮಹಾದ್ಯುತೇ! ಧರ್ಮರಾಜ! ಕೃಷ್ಣನು ನಿನ್ನ ಪ್ರತೀಕ್ಷೆಯಲ್ಲಿಯೇ ಇದ್ದಾನೆ. ಇದರ ನಂತರ ಏನನ್ನು ಮಾಡಬೇಕಾಗಿದೆಯೋ ಅದನ್ನು ನೀನು ಮಾಡಬೇಕು!”
12053014 ಯುಧಿಷ್ಠಿರ ಉವಾಚ।
12053014a ಯುಜ್ಯತಾಂ ಮೇ ರಥವರಃ ಫಲ್ಗುನಾಪ್ರತಿಮದ್ಯುತೇ।
12053014c ನ ಸೈನಿಕೈಶ್ಚ ಯಾತವ್ಯಂ ಯಾಸ್ಯಾಮೋ ವಯಮೇವ ಹಿ।।
ಯುಧಿಷ್ಠಿರನು ಹೇಳಿದನು: “ಅಪ್ರತಿಮದ್ಯುತೇ! ಫಲ್ಗುನ! ನನ್ನ ಶ್ರೇಷ್ಠ ರಥವನ್ನು ಸಿದ್ಧಪಡಿಸು! ಸೈನಿಕರು ಯಾರೂ ಹೋಗುವುದಿಲ್ಲ. ನಾವು ಮಾತ್ರ ಅಲ್ಲಿಗೆ ಹೋಗೋಣ!
12053015a ನ ಚ ಪೀಡಯಿತವ್ಯೋ ಮೇ ಭೀಷ್ಮೋ ಧರ್ಮಭೃತಾಂ ವರಃ।
12053015c ಅತಃ ಪುರಃಸರಾಶ್ಚಾಪಿ ನಿವರ್ತಂತು ಧನಂಜಯ।।
ಧರ್ಮಭೃತರಲ್ಲಿ ಶ್ರೇಷ್ಠ ಭೀಷ್ಮನನ್ನು ನಾವು ಪೀಡಿಸಬಾರದು. ಆದುದರಿಂದ ಧನಂಜಯ! ನಮ್ಮ ಹಿಂದೆ ಮತ್ತು ಮುಂದೆ ಸಾಗುವ ಸೇನೆಗಳು ಇಲ್ಲಿಯೇ ನಿಲ್ಲಲಿ!
12053016a ಅದ್ಯಪ್ರಭೃತಿ ಗಾಂಗೇಯಃ ಪರಂ ಗುಹ್ಯಂ ಪ್ರವಕ್ಷ್ಯತಿ।
12053016c ತತೋ ನೇಚ್ಚಾಮಿ ಕೌಂತೇಯ ಪೃಥಗ್ಜನಸಮಾಗಮಮ್।।
ಇಂದಿನಿಂದ ಗಾಂಗೇಯನು ಪರಮ ಗುಹ್ಯ ಮಾತುಗಳನ್ನು ಹೇಳುತ್ತಾನೆ. ಕೌಂತೇಯ! ಆದುದರಿಂದ ಅಲ್ಲಿಗೆ ಸಾಮಾನ್ಯ ಜನರು ಬಂದು ಸೇರುವುದನ್ನು ನಾನು ಇಚ್ಛಿಸುವುದಿಲ್ಲ!””
12053017 ವೈಶಂಪಾಯನ ಉವಾಚ।
12053017a ತದ್ವಾಕ್ಯಮಾಕರ್ಣ್ಯ ತಥಾ ಕುಂತೀಪುತ್ರೋ ಧನಂಜಯಃ।
12053017c ಯುಕ್ತಂ ರಥವರಂ ತಸ್ಮಾ ಆಚಚಕ್ಷೇ ನರರ್ಷಭ।।
ವೈಶಂಪಾಯನನು ಹೇಳಿದನು: “ನರರ್ಷಭ! ಅವನ ಆ ಮಾತನ್ನು ಕೇಳಿ ಕುಂತೀಪುತ್ರ ಧನಂಜಯನು ಶ್ರೇಷ್ಠರಥವು ಸಿದ್ಧವಾಗಿದೆಯೆಂದು ತಿಳಿಸಿದನು.
12053018a ತತೋ ಯುಧಿಷ್ಠಿರೋ ರಾಜಾ ಯಮೌ ಭೀಮಾರ್ಜುನಾವಪಿ।
12053018c ಭೂತಾನೀವ ಸಮಸ್ತಾನಿ ಯಯುಃ ಕೃಷ್ಣನಿವೇಶನಮ್।।
ಅನಂತರ ರಾಜಾ ಯುಧಿಷ್ಠಿರ, ಯಮಳರೀರ್ವರು ಮತ್ತು ಭೀಮಾರ್ಜುನರು ಐವರು ಪಂಚಭೂತಗಳೋಪಾದಿಯಲ್ಲಿ, ಒಂದಾಗಿ ಕೃಷ್ಣನ ಭವನಕ್ಕೆ ಆಗಮಿಸಿದರು.
12053019a ಆಗಚ್ಚತ್ಸ್ವಥ ಕೃಷ್ಣೋಽಪಿ ಪಾಂಡವೇಷು ಮಹಾತ್ಮಸು।
12053019c ಶೈನೇಯಸಹಿತೋ ಧೀಮಾನ್ರಥಮೇವಾನ್ವಪದ್ಯತ।।
ಮಹಾತ್ಮ ಪಾಂಡವರು ಬಂದಕೂಡಲೇ ಧೀಮಾನ್ ಕೃಷ್ಣನೂ ಕೂಡ ಶೈನೇಯನೊಡನೆ ರಥವನ್ನೇರಿದನು.
12053020a ರಥಸ್ಥಾಃ ಸಂವಿದಂ ಕೃತ್ವಾ ಸುಖಾಂ ಪೃಷ್ಟ್ವಾ ಚ ಶರ್ವರೀಮ್।
12053020c ಮೇಘಘೋಷೈ ರಥವರೈಃ ಪ್ರಯಯುಸ್ತೇ ಮಹಾರಥಾಃ।।
ರಥದಲ್ಲಿ ಕುಳಿತು, ರಾತ್ರಿಯು ಸುಖಕರವಾಗಿತ್ತೇ ಎಂದು ಮುಂತಾದ ಸಂವಾದಗಳನ್ನು ಗೈಯುತ್ತಾ, ಗುಡುಗಿನಂತೆ ಮೊಳಗುತ್ತಿದ್ದ ಶ್ರೇಷ್ಠರಥಗಳಲ್ಲಿ ಆ ಮಹಾರಥರು ಪ್ರಯಾಣಿಸಿದರು.
12053021a ಮೇಘಪುಷ್ಪಂ ಬಲಾಹಂ ಚ ಸೈನ್ಯಂ ಸುಗ್ರೀವಮೇವ ಚ।
12053021c ದಾರುಕಶ್ಚೋದಯಾಮಾಸ ವಾಸುದೇವಸ್ಯ ವಾಜಿನಃ।।
ಮೇಘಪುಷ್ಪ, ಬಲಾಹಕ, ಸೈನ್ಯ ಮತ್ತು ಸುಗ್ರೀವರೆಂಬ ವಾಸುದೇವನ ಕುದುರೆಗಳನ್ನು ದಾರುಕನು ನಡೆಸಿದನು.
12053022a ತೇ ಹಯಾ ವಾಸುದೇವಸ್ಯ ದಾರುಕೇಣ ಪ್ರಚೋದಿತಾಃ।
12053022c ಗಾಂ ಖುರಾಗ್ರೈಸ್ತಥಾ ರಾಜಽಲ್ಲಿಖಂತಃ ಪ್ರಯಯುಸ್ತದಾ।।
ರಾಜನ್! ದಾರುಕನಿಂದ ಪ್ರಚೋದಿತಗೊಂಡ ವಾಸುದೇವನ ಕುದುರೆಗಳು ಗೊರಸುಗಳ ಅಗ್ರಭಾಗದಿಂದ ಭೂಮಿಯನ್ನು ಗೀರುತ್ತಾ ಬಹಳ ಬೇಗ ಧಾವಿಸಿದವು.
12053023a ತೇ ಗ್ರಸಂತ ಇವಾಕಾಶಂ ವೇಗವಂತೋ ಮಹಾಬಲಾಃ।
12053023c ಕ್ಷೇತ್ರಂ ಧರ್ಮಸ್ಯ ಕೃತ್ಸ್ನಸ್ಯ ಕುರುಕ್ಷೇತ್ರಮವಾತರನ್।।
ಆ ವೇಗವುಳ್ಳ ಮಹಾಬಲಶಾಲೀ ಕುದುರೆಗಳು ಆಕಾಶವನ್ನೇ ನುಂಗಿಹಾಕುವವೋ ಎನ್ನುವಂತೆ ಸಾಗಿ ಸಮಸ್ತ ಧರ್ಮಕ್ಕೂ ಕ್ಷೇತ್ರವಾದ ಕುರುಕ್ಷೇತ್ರಕ್ಕೆ ಬಂದು ತಲುಪಿದವು.
12053024a ತತೋ ಯಯುರ್ಯತ್ರ ಭೀಷ್ಮಃ ಶರತಲ್ಪಗತಃ ಪ್ರಭುಃ।
12053024c ಆಸ್ತೇ ಬ್ರಹ್ಮರ್ಷಿಭಿಃ ಸಾರ್ಧಂ ಬ್ರಹ್ಮಾ ದೇವಗಣೈರ್ಯಥಾ।।
ಅನಂತರ ಅವರು ದೇವಗಣಗಳೊಂದಿಗೆ ಇದ್ದ ಬ್ರಹ್ಮನಂತೆ ಬ್ರಹ್ಮರ್ಷಿಗಳೊಂದಿಗೆ ಶರತಲ್ಪದಲ್ಲಿ ಮಲಗಿದ್ದ ಪ್ರಭು ಭೀಷ್ಮನಿದ್ದಲ್ಲಿಗೆ ಬಂದರು.
12053025a ತತೋಽವತೀರ್ಯ ಗೋವಿಂದೋ ರಥಾತ್ಸ ಚ ಯುಧಿಷ್ಠಿರಃ।
12053025c ಭೀಮೋ ಗಾಂಡೀವಧನ್ವಾ ಚ ಯಮೌ ಸಾತ್ಯಕಿರೇವ ಚ।।
12053025e ಋಷೀನಭ್ಯರ್ಚಯಾಮಾಸುಃ ಕರಾನುದ್ಯಮ್ಯ ದಕ್ಷಿಣಾನ್।।
ಆಗ ಗೋವಿಂದ, ಯುಧಿಷ್ಠಿರ, ಭೀಮ, ಗಾಂಡೀವಧನ್ವಿ, ಯಮಳರು ಮತ್ತು ಸಾತ್ಯಕಿಯರು ರಥದಿಂದಿಳಿದು ಬಲಗೈಗಳನ್ನೆತ್ತಿ ಅಲ್ಲಿದ್ದ ಋಷಿಗಳನ್ನು ಗೌರವಿಸಿದರು.
12053026a ಸ ತೈಃ ಪರಿವೃತೋ ರಾಜಾ ನಕ್ಷತ್ರೈರಿವ ಚಂದ್ರಮಾಃ।
12053026c ಅಭ್ಯಾಜಗಾಮ ಗಾಂಗೇಯಂ ಬ್ರಹ್ಮಾಣಮಿವ ವಾಸವಃ।।
ನಕ್ಷತ್ರಗಳಿಂದ ಪರಿವೃತನಾದ ಚಂದ್ರನಂತೆ ಅವರಿಂದ ಪರಿವೃತನಾದ ರಾಜ ಯುಧಿಷ್ಠಿರನು ವಾಸವನು ಬ್ರಹ್ಮನ ಬಳಿಸಾರುವಂತೆ ಗಾಂಗೇಯನ ಬಳಿಸಾರಿದನು.
12053027a ಶರತಲ್ಪೇ ಶಯಾನಂ ತಮಾದಿತ್ಯಂ ಪತಿತಂ ಯಥಾ।
12053027c ದದರ್ಶ ಸ ಮಹಾಬಾಹುರ್ಭಯಾದಾಗತಸಾಧ್ವಸಃ।।
ಕೆಳಗೆ ಬಿದ್ದಿದ್ದ ಆದಿತ್ಯನಂತೆ ಶರತಲ್ಪದಲ್ಲಿ ಮಲಗಿದ್ದ ಅವನನ್ನು ನೋಡಿ ಮಹಾಬಾಹು ಯುಧಿಷ್ಠಿರನು ಭಯದಿಂದ ಕೂಡಲೇ ಅವನನ್ನು ಎದುರಿಸಲಿಲ್ಲ.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ಭೀಷ್ಮಾಭಿಗಮನೇ ತ್ರಿಪಂಚಶತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಭೀಷ್ಮಾಭಿಗಮನ ಎನ್ನುವ ಐವತ್ಮೂರನೇ ಅಧ್ಯಾಯವು.