052 ಯುಧಿಷ್ಠಿರಾದ್ಯಾಗಮನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ರಾಜಧರ್ಮ ಪರ್ವ

ಅಧ್ಯಾಯ 52

ಸಾರ

ಯುಧಿಷ್ಠಿರಾದ್ಯಾಗಮನ (1-34).

12052001 ವೈಶಂಪಾಯನ ಉವಾಚ।
12052001a ತತಃ ಕೃಷ್ಣಸ್ಯ ತದ್ವಾಕ್ಯಂ ಧರ್ಮಾರ್ಥಸಹಿತಂ ಹಿತಮ್।
12052001c ಶ್ರುತ್ವಾ ಶಾಂತನವೋ ಭೀಷ್ಮಃ ಪ್ರತ್ಯುವಾಚ ಕೃತಾಂಜಲಿಃ।।

ವೈಶಂಪಾಯನನು ಹೇಳಿದನು: “ಅನಂತರ ಕೃಷ್ಣನ ಆ ಧರ್ಮಾರ್ಥಸಂಹಿತ ಹಿತಕರ ಮಾತನ್ನು ಕೇಳಿ ಶಾಂತನವ ಭೀಷ್ಮನು ಕೈಮುಗಿದು ಉತ್ತರಿಸಿದನು:

12052002a ಲೋಕನಾಥ ಮಹಾಬಾಹೋ ಶಿವ ನಾರಾಯಣಾಚ್ಯುತ।
12052002c ತವ ವಾಕ್ಯಮಭಿಶ್ರುತ್ಯ ಹರ್ಷೇಣಾಸ್ಮಿ ಪರಿಪ್ಲುತಃ।।

“ಲೋಕನಾಥ! ಮಹಾಬಾಹೋ! ಶಿವ! ನಾರಾಯಣ! ಅಚ್ಯುತ! ನಿನ್ನ ಮಾತನ್ನು ಕೇಳಿ ನಾನು ಹರ್ಷದಲ್ಲಿ ಮುಳುಗಿಹೋಗಿದ್ದೇನೆ!

12052003a ಕಿಂ ಚಾಹಮಭಿಧಾಸ್ಯಾಮಿ ವಾಕ್ಪತೇ ತವ ಸಂನಿಧೌ।
12052003c ಯದಾ ವಾಚೋಗತಂ ಸರ್ವಂ ತವ ವಾಚಿ ಸಮಾಹಿತಮ್।।

ನಿನ್ನ ಸನ್ನಿಧಿಯಲ್ಲಿ ನಾನು ಏನನ್ನು ತಾನೇ ಹೇಳಬಲ್ಲೆ? ಮಾತಿನಿಂದ ತಿಳಿಸಬಹುದಾದ ಎಲ್ಲವೂ ನಿನ್ನ ಮಾತಿನಲ್ಲಿಯೇ ಅಡಗಿವೆ!

12052004a ಯದ್ಧಿ ಕಿಂ ಚಿತ್ಕೃತಂ ಲೋಕೇ ಕರ್ತವ್ಯಂ ಕ್ರಿಯತೇ ಚ ಯತ್।
12052004c ತ್ವತ್ತಸ್ತನ್ನಿಃಸೃತಂ ದೇವ ಲೋಕಾ ಬುದ್ಧಿಮಯಾ ಹಿ ತೇ।।

ದೇವ! ಈ ಲೋಕದಲ್ಲಿ ಯತ್ಕಿಂಚಿತ್ ಏನಾದರೂ ನಡೆದರೆ ಮತ್ತು ಯಾರಾದರೂ ಕರ್ತವ್ಯಗಳನ್ನು ಮಾಡಿದರೆ ಅದು ನಿನ್ನಿಂದಲೇ ಮಾಡಿಸಲ್ಪಟ್ಟಿರುತ್ತವೆ. ಏಕೆಂದರೆ ನೀನು ಬುದ್ಧಿಮಯನಾಗಿರುವೆ.

12052005a ಕಥಯೇದ್ದೇವಲೋಕಂ ಯೋ ದೇವರಾಜಸಮೀಪತಃ।
12052005c ಧರ್ಮಕಾಮಾರ್ಥಶಾಸ್ತ್ರಾಣಾಂ ಸೋಽರ್ಥಾನ್ಬ್ರೂಯಾತ್ತವಾಗ್ರತಃ।।

ನಿನ್ನ ಎದಿರು ಧರ್ಮ-ಕಾಮ-ಅರ್ಥಶಾಸ್ತ್ರಗಳ ಅರ್ಥಗಳನ್ನು ತಿಳಿಸುವವನು ದೇವರಾಜನ ಬಳಿಹೋಗಿ ದೇವಲೋಕದ ವರ್ಣನೆಯನ್ನು ಮಾಡುವವನಂತೆ!

12052006a ಶರಾಭಿಘಾತಾದ್ವ್ಯಥಿತಂ ಮನೋ ಮೇ ಮಧುಸೂದನ।
12052006c ಗಾತ್ರಾಣಿ ಚಾವಸೀದಂತಿ ನ ಚ ಬುದ್ಧಿಃ ಪ್ರಸೀದತಿ।।

ಮಧುಸೂದನ! ಶರಸಮೂಹಗಳ ಘಾತದಿಂದ ನನ್ನ ಮನಸ್ಸು ವ್ಯಥಿತಗೊಂಡಿದೆ. ಅಂಗಾಂಗಗಳು ಶಿಥಿಲಗೊಂಡಿವೆ. ನನ್ನ ಬುದ್ಧಿಯೂ ಕುಸಿಯುತ್ತಿದೆ!

12052007a ನ ಚ ಮೇ ಪ್ರತಿಭಾ ಕಾ ಚಿದಸ್ತಿ ಕಿಂ ಚಿತ್ಪ್ರಭಾಷಿತುಮ್।
12052007c ಪೀಡ್ಯಮಾನಸ್ಯ ಗೋವಿಂದ ವಿಷಾನಲಸಮೈಃ ಶರೈಃ।।

ಗೋವಿಂದ! ವಿಷ-ಅಗ್ನಿಗಳ ಸಮಾನ ಶರಗಳಿಂದ ಪೀಡಿತನಾದ ನನಗೆ ಏನನ್ನು ಮಾತನಾಡಲೂ ತೋಚುತ್ತಿಲ್ಲ!

12052008a ಬಲಂ ಮೇಧಾಃ ಪ್ರಜರತಿ ಪ್ರಾಣಾಃ ಸಂತ್ವರಯಂತಿ ಚ।
12052008c ಮರ್ಮಾಣಿ ಪರಿತಪ್ಯಂತೇ ಭ್ರಾಂತಂ ಚೇತಸ್ತಥೈವ ಚ।।

ಬಲವು ಕುಂದುತ್ತಿದೆ. ಪ್ರಾಣಗಳು ಹೊರಟುಹೋಗಲು ತ್ವರೆಮಾಡುತ್ತಿವೆ. ಮರ್ಮಸ್ಥಳಗಳು ಪರಿತಪಿಸುತ್ತಿವೆ. ಜೇತನವು ಭ್ರಾಂತವಾಗಿದೆ!

12052009a ದೌರ್ಬಲ್ಯಾತ್ಸಜ್ಜತೇ ವಾಙ್ಮೇ ಸ ಕಥಂ ವಕ್ತುಮುತ್ಸಹೇ।
12052009c ಸಾಧು ಮೇ ತ್ವಂ ಪ್ರಸೀದಸ್ವ ದಾಶಾರ್ಹಕುಲನಂದನ।।

ದಾಶಾರ್ಹಕುಲನಂದನ! ದೌರ್ಬಲ್ಯದಿಂದಾಗಿ ನನ್ನ ಮಾತು ತೊದಲುತ್ತಿದೆ. ಹೇಗೆ ತಾನೇ ನಾನು ಮಾತನಾಡಲಿ? ನನಗೆ ಒಳ್ಳೆಯದಾಗಲು ಅನುಗ್ರಹಿಸು!

12052010a ತತ್ಕ್ಷಮಸ್ವ ಮಹಾಬಾಹೋ ನ ಬ್ರೂಯಾಂ ಕಿಂ ಚಿದಚ್ಯುತ।
12052010c ತ್ವತ್ಸಂನಿಧೌ ಚ ಸೀದೇತ ವಾಚಸ್ಪತಿರಪಿ ಬ್ರುವನ್।।

ಮಹಾಬಾಹೋ! ನನ್ನನ್ನು ಕ್ಷಮಿಸು! ಅಚ್ಯುತ! ನಿನ್ನ ಸನ್ನಿಧಿಯಲ್ಲಿ ಮಾತನಾಡಲು ಬೃಹಸ್ಪತಿಯೂ ಕೂಡ ಹಿಂಜರಿಯುತ್ತಾನೆ. ಇನ್ನು ನನ್ನ ಗತಿಯೇನು?

12052011a ನ ದಿಶಃ ಸಂಪ್ರಜಾನಾಮಿ ನಾಕಾಶಂ ನ ಚ ಮೇದಿನೀಮ್।
12052011c ಕೇವಲಂ ತವ ವೀರ್ಯೇಣ ತಿಷ್ಠಾಮಿ ಮಧುಸೂದನ।।

ಮಧುಸೂದನ! ದಿಕ್ಕುಗಳು ತೋಚುತ್ತಿಲ್ಲ. ಆಕಾಶ-ಮೇದಿನಿಗಳೂ ತೋಚುತ್ತಿಲ್ಲ. ಕೇವಲ ನಿನ್ನ ವೀರ್ಯವನ್ನು ಅವಲಂಬಿಸಿದ್ದೇನೆ ಅಷ್ಟೇ!

12052012a ಸ್ವಯಮೇವ ಪ್ರಭೋ ತಸ್ಮಾದ್ಧರ್ಮರಾಜಸ್ಯ ಯದ್ಧಿತಮ್।
12052012c ತದ್ಬ್ರವೀಹ್ಯಾಶು ಸರ್ವೇಷಾಮಾಗಮಾನಾಂ ತ್ವಮಾಗಮಃ।।

ಪ್ರಭೋ! ಆದುದರಿಂದ ಧರ್ಮರಾಜನಿಗೆ ಹಿತವಾದುದನ್ನು ಸ್ವಯಂ ನೀನೇ ಹೇಳು! ನೀನು ಯಾವ ಸರ್ವ ಆಗಮಗಳ ಸ್ಥಾನವಾಗಿರುವೆಯೋ ಅದನ್ನೇ ಹೇಳು!

12052013a ಕಥಂ ತ್ವಯಿ ಸ್ಥಿತೇ ಲೋಕೇ ಶಾಶ್ವತೇ ಲೋಕಕರ್ತರಿ।
12052013c ಪ್ರಬ್ರೂಯಾನ್ಮದ್ವಿಧಃ ಕಶ್ಚಿದ್ಗುರೌ ಶಿಷ್ಯ ಇವ ಸ್ಥಿತೇ।।

ಲೋಕದಲ್ಲಿ ಶಾಶ್ವತನಾಗಿರುವ, ಲೋಕಗಳನ್ನು ನಿರ್ಮಿಸಿರುವ ನೀನೇ ಇಲ್ಲಿರುವಾಗ ಗುರುವಿನ ಎದಿರು ಶಿಷ್ಯನಂತಿರುವ ನನ್ನಂಥವನು ಹೇಗೆ ತಾನೇ ಬೋಧಿಸಬಲ್ಲನು?”

12052014 ವಾಸುದೇವ ಉವಾಚ।
12052014a ಉಪಪನ್ನಮಿದಂ ವಾಕ್ಯಂ ಕೌರವಾಣಾಂ ಧುರಂಧರೇ।
12052014c ಮಹಾವೀರ್ಯೇ ಮಹಾಸತ್ತ್ವೇ ಸ್ಥಿತೇ ಸರ್ವಾರ್ಥದರ್ಶಿನಿ।।

ವಾಸುದೇವನು ಹೇಳಿದನು: “ಕೌರವರ ಧುರಂಧರನೇ! ಮಹಾವೀರ್ಯದಲ್ಲಿ ಮತ್ತು ಮಹಾಸತ್ತ್ವದಲ್ಲಿ ನೆಲೆಸಿರುವ ಸರ್ವಾರ್ಥದರ್ಶಿನಿಯಾದ ನೀನು ಹೇಳಿದುದು ಯೋಗ್ಯವಾಗಿಯೇ ಇದೆ.

12052015a ಯಚ್ಚ ಮಾಮಾತ್ಥ ಗಾಂಗೇಯ ಬಾಣಘಾತರುಜಂ ಪ್ರತಿ।
12052015c ಗೃಹಾಣಾತ್ರ ವರಂ ಭೀಷ್ಮ ಮತ್ಪ್ರಸಾದಕೃತಂ ವಿಭೋ।।

ಗಾಂಗೇಯ! ಭೀಷ್ಮ! ವಿಭೋ! ಬಾಣಾಘಾತದಿಂದ ಯಾತನೆಯನ್ನು ಅನುಭವಿಸುತ್ತಿರುವೆಯೆಂದು ನನಗೆ ಹೇಳಿದೆಯಲ್ಲವೇ? ಅದರ ಉಪಶಮನಕ್ಕಾಗಿ ಪ್ರಸನ್ನಚಿತ್ತನಾಗಿ ನಾನು ನೀಡುವ ಈ ವರವನ್ನು ಸ್ವೀಕರಿಸು!

12052016a ನ ತೇ ಗ್ಲಾನಿರ್ನ ತೇ ಮೂರ್ಚಾ ನ ದಾಹೋ ನ ಚ ತೇ ರುಜಾ।
12052016c ಪ್ರಭವಿಷ್ಯಂತಿ ಗಾಂಗೇಯ ಕ್ಷುತ್ಪಿಪಾಸೇ ನ ಚಾಪ್ಯುತ।।

ಗಾಂಗೇಯ! ನಿನಗೆ ದಣಿವಾಗಲೀ, ಮೂರ್ಛೆಯಾಗಲೀ, ಉರಿಯಾಗಲೀ, ರೋಗ-ರುಜಿನಗಳಾಗಲೀ, ಹಸಿವು ಬಾಯಾರಿಕೆಗಳಾಗಲೀ ಆಗುವುದಿಲ್ಲ!

12052017a ಜ್ಞಾನಾನಿ ಚ ಸಮಗ್ರಾಣಿ ಪ್ರತಿಭಾಸ್ಯಂತಿ ತೇಽನಘ।
12052017c ನ ಚ ತೇ ಕ್ವ ಚಿದಾಸಕ್ತಿರ್ಬುದ್ಧೇಃ ಪ್ರಾದುರ್ಭವಿಷ್ಯತಿ।।

ಅನಘ! ಸಮಗ್ರ ಜ್ಞಾನಗಳೂ ನಿನ್ನಲ್ಲಿ ಪ್ರಕಾಶಗೊಳ್ಳುತ್ತವೆ. ನಿನ್ನ ಬುದ್ಧಿಯು ಯಾವುದರಲ್ಲಿಯೂ ಆಸಕ್ತಿಯನ್ನು ಇಟ್ಟುಕೊಳ್ಳುವುದಿಲ್ಲ.

12052018a ಸತ್ತ್ವಸ್ಥಂ ಚ ಮನೋ ನಿತ್ಯಂ ತವ ಭೀಷ್ಮ ಭವಿಷ್ಯತಿ।
12052018c ರಜಸ್ತಮೋಭ್ಯಾಂ ರಹಿತಂ ಘನೈರ್ಮುಕ್ತ ಇವೋಡುರಾಟ್।।

ಭೀಷ್ಮ! ನಿನ್ನ ಮನಸ್ಸು ನಿತ್ಯವೂ, ಮೋಡಗಳಿಂದ ಮುಕ್ತನಾದ ಚಂದ್ರನಂತೆ, ರಜಸ್ಸು-ತಮೋ ಗುಣಗಳಿಂದ ರಹಿತವಾಗಿ, ಸತ್ತ್ವದಲ್ಲಿಯೇ ನೆಲೆಸಿರುತ್ತದೆ.

12052019a ಯದ್ಯಚ್ಚ ಧರ್ಮಸಂಯುಕ್ತಮರ್ಥಯುಕ್ತಮಥಾಪಿ ವಾ।
12052019c ಚಿಂತಯಿಷ್ಯಸಿ ತತ್ರಾಗ್ರ್ಯಾ ಬುದ್ಧಿಸ್ತವ ಭವಿಷ್ಯತಿ।।

ನೀನು ಯಾವ ಧರ್ಮಸಂಯುಕ್ತವಾದ ಅಥವಾ ಅರ್ಥಯುಕ್ತವಾದ ವಿಷಯಗಳ ಕುರಿತು ಯೋಚಿಸುತ್ತೀಯೋ ಅವುಗಳು ನಿನ್ನ ಬುದ್ಧಿಯ ಮುಂದೆ ಸ್ಫುರಿಸುತ್ತಿರುತ್ತವೆ.

12052020a ಇಮಂ ಚ ರಾಜಶಾರ್ದೂಲ ಭೂತಗ್ರಾಮಂ ಚತುರ್ವಿಧಮ್।
12052020c ಚಕ್ಷುರ್ದಿವ್ಯಂ ಸಮಾಶ್ರಿತ್ಯ ದ್ರಕ್ಷ್ಯಸ್ಯಮಿತವಿಕ್ರಮ।।

ರಾಜಶಾರ್ದೂಲ! ಅಮಿತವಿಕ್ರಮಿ! ಈ ದಿವ್ಯದೃಷ್ಟಿಯನ್ನು ಪಡೆದು ಅದರಿಂದ ನೀನು ನಾಲ್ಕೂ137 ವಿಧದ ಪ್ರಾಣಿಗಳ ನೈಜಸ್ವರೂಪಗಳನ್ನು ಕಾಣಲು ಶಕ್ತನಾಗುವೆ.

12052021a ಚತುರ್ವಿಧಂ ಪ್ರಜಾಜಾಲಂ ಸಂಯುಕ್ತೋ ಜ್ಞಾನಚಕ್ಷುಷಾ।
12052021c ಭೀಷ್ಮ ದ್ರಕ್ಷ್ಯಸಿ ತತ್ತ್ವೇನ ಜಲೇ ಮೀನ ಇವಾಮಲೇ।।

ಭೀಷ್ಮ! ಜ್ಞಾನದೃಷ್ಟಿಯಿಂದ ಸಂಪನ್ನನಾದ ನಿನಗೆ ಸಂಸಾರಬಂಧನದಲ್ಲಿ ಸಿಕ್ಕಿಹಾಕಿಕೊಂಡಿರುವ ಸಂಪೂರ್ಣ ಜೀವಸಮುದಾಯಗಳೂ ತಿಳಿನೀರಿನಲ್ಲಿರುವ ಮೀನುಗಳಂತೆ ಸ್ವಚ್ಛವಾಗಿ ಕಾಣುತ್ತವೆ!””

12052022 ವೈಶಂಪಾಯನ ಉವಾಚ।
12052022a ತತಸ್ತೇ ವ್ಯಾಸಸಹಿತಾಃ ಸರ್ವ ಏವ ಮಹರ್ಷಯಃ।
12052022c ಋಗ್ಯಜುಃಸಾಮಸಂಯುಕ್ತೈರ್ವಚೋಭಿಃ ಕೃಷ್ಣಮರ್ಚಯನ್।।

ವೈಶಂಪಾಯನನು ಹೇಳಿದನು: “ಆಗ ವ್ಯಾಸಸಹಿತರಾದ ಸರ್ವ ಮಹರ್ಷಿಗಳೂ ಋಗ್ಯಜುಃಸಾಮಸಂಯುಕ್ತ ಸ್ತೋತ್ರಗಳಿಂದ ಕೃಷ್ಣನನ್ನು ಅರ್ಚಿಸಿದರು.

12052023a ತತಃ ಸರ್ವಾರ್ತವಂ ದಿವ್ಯಂ ಪುಷ್ಪವರ್ಷಂ ನಭಸ್ತಲಾತ್।
12052023c ಪಪಾತ ಯತ್ರ ವಾರ್ಷ್ಣೇಯಃ ಸಗಾಂಗೇಯಃ ಸಪಾಂಡವಃ।।

ಆಗ ವಾರ್ಷ್ಣೇಯ, ಗಾಂಗೇಯ ಮತ್ತು ಪಾಂಡವರಿರುವ ಸ್ಥಳದಲ್ಲಿ ನಭಸ್ತಲದಿಂದ ಸರ್ವಋತುಗಳ ದಿವ್ಯ ಪುಷ್ಪವೃಷ್ಟಿಯಾಯಿತು.

12052024a ವಾದಿತ್ರಾಣಿ ಚ ದಿವ್ಯಾನಿ ಜಗುಶ್ಚಾಪ್ಸರಸಾಂ ಗಣಾಃ।
12052024c ನ ಚಾಹಿತಮನಿಷ್ಟಂ ವಾ ಕಿಂ ಚಿತ್ತತ್ರ ವ್ಯದೃಶ್ಯತ।।

ದಿವ್ಯವಾದ್ಯಗಳು ಮೊಳಗಿದವು. ಅಪ್ಸರಗಣಗಳು ಹಾಡಿದರು. ಅಲ್ಲಿ ಯಾವುದೇ ರೀತಿಯ ಅನಿಷ್ಟ ದೃಶ್ಯಗಳೂ ಕಾಣಿಸಲಿಲ್ಲ.

12052025a ವವೌ ಶಿವಃ ಸುಖೋ ವಾಯುಃ ಸರ್ವಗಂಧವಹಃ ಶುಚಿಃ।
12052025c ಶಾಂತಾಯಾಂ ದಿಶಿ ಶಾಂತಾಶ್ಚ ಪ್ರಾವದನ್ಮೃಗಪಕ್ಷಿಣಃ।।

ಶೀತಲವಾದ, ಮಂಗಳಕರ, ಸುಖಕರ, ಪವಿತ್ರ ಸುಗಂಧಯುಕ್ತ ಗಾಳಿಯು ಬೀಸತೊಡಗಿತು. ದಿಕ್ಕುಗಳು ಪ್ರಶಾಂತವಾದವು. ಉತ್ತರದಿಕ್ಕಿನಲ್ಲಿ ಶಂತ ಮೃಗಪಕ್ಷಿಗಳು ಧ್ವನಿಗೈಯುತ್ತಿದ್ದವು.

12052026a ತತೋ ಮುಹೂರ್ತಾದ್ಭಗವಾನ್ಸಹಸ್ರಾಂಶುರ್ದಿವಾಕರಃ।
12052026c ದಹನ್ವನಮಿವೈಕಾಂತೇ ಪ್ರತೀಚ್ಯಾಂ ಪ್ರತ್ಯದೃಶ್ಯತ।।

ಸ್ವಲ್ಪವೇ ಸಮಯದಲ್ಲಿ ಪಶ್ಚಿಮದಲ್ಲಿ ಸಹಸ್ರಾಂಶು ಭಗವಾನ್ ದಿವಾಕರನು ಏಕಾಂತದಲ್ಲಿ ವನವನ್ನು ದಹಿಸುತ್ತಿರುವನೋ ಎನ್ನುವಂತೆ ತೋರಿದನು.

12052027a ತತೋ ಮಹರ್ಷಯಃ ಸರ್ವೇ ಸಮುತ್ಥಾಯ ಜನಾರ್ದನಮ್।
12052027c ಭೀಷ್ಮಮಾಮಂತ್ರಯಾಂ ಚಕ್ರೂ ರಾಜಾನಂ ಚ ಯುಧಿಷ್ಠಿರಮ್।।

ಆಗ ಎಲ್ಲ ಮಹರ್ಷಿಗಳೂ ಎದ್ದು ಜನಾರ್ದನ, ಭೀಷ್ಮ ಮತ್ತು ರಾಜಾ ಯುಧಿಷ್ಠಿರನ ಅನುಮತಿಯನ್ನು ಕೇಳಿದರು.

12052028a ತತಃ ಪ್ರಣಾಮಮಕರೋತ್ಕೇಶವಃ ಪಾಂಡವಸ್ತಥಾ।
12052028c ಸಾತ್ಯಕಿಃ ಸಂಜಯಶ್ಚೈವ ಸ ಚ ಶಾರದ್ವತಃ ಕೃಪಃ।।

ಅನಂತರ ಕೇಶವ, ಪಾಂಡವ, ಸಾತ್ಯಕಿ, ಸಂಜಯ ಮತ್ತು ಶಾರದ್ವತ ಕೃಪರು ಅವರಿಗೆ ಪ್ರಣಾಮಗೈದರು.

12052029a ತತಸ್ತೇ ಧರ್ಮನಿರತಾಃ ಸಮ್ಯಕ್ತೈರಭಿಪೂಜಿತಾಃ।
12052029c ಶ್ವಃ ಸಮೇಷ್ಯಾಮ ಇತ್ಯುಕ್ತ್ವಾ ಯಥೇಷ್ಟಂ ತ್ವರಿತಾ ಯಯುಃ।।

ಆಗ ಅವರಿಂದ ಅಭಿಪೂಜಿತರಾದ ಆ ಧರ್ಮನಿರತರು “ನಾಳೆ ಸೇರೋಣ!” ಎಂದು ಹೇಳಿ ಇಷ್ಟವಾದಲ್ಲಿಗೆ ತೆರಳಿದರು.

12052030a ತಥೈವಾಮಂತ್ರ್ಯ ಗಾಂಗೇಯಂ ಕೇಶವಸ್ತೇ ಚ ಪಾಂಡವಾಃ।
12052030c ಪ್ರದಕ್ಷಿಣಮುಪಾವೃತ್ಯ ರಥಾನಾರುರುಹುಃ ಶುಭಾನ್।।

ಹಾಗೆಯೇ ಕೇಶವ ಮತ್ತು ಪಾಂಡವರು ಗಾಂಗೇಯನಿಂದ ಬೀಳ್ಕೊಂಡು ಅವನಿಗೆ ಪ್ರದಕ್ಷಿಣೆ ಮಾಡಿ ಶುಭ ರಥಗಳನ್ನೇರಿದರು.

12052031a ತತೋ ರಥೈಃ ಕಾಂಚನದಂತಕೂಬರೈರ್ ಮಹೀಧರಾಭೈಃ ಸಮದೈಶ್ಚ ದಂತಿಭಿಃ।
12052031c ಹಯೈಃ ಸುಪರ್ಣೈರಿವ ಚಾಶುಗಾಮಿಭಿಃ ಪದಾತಿಭಿಶ್ಚಾತ್ತಶರಾಸನಾದಿಭಿಃ।।
12052032a ಯಯೌ ರಥಾನಾಂ ಪುರತೋ ಹಿ ಸಾ ಚಮೂಸ್ ತಥೈವ ಪಶ್ಚಾದತಿಮಾತ್ರಸಾರಿಣೀ।
12052032c ಪುರಶ್ಚ ಪಶ್ಚಾಚ್ಚ ಯಥಾ ಮಹಾನದೀ ಪುರರ್ಕ್ಷವಂತಂ ಗಿರಿಮೇತ್ಯ ನರ್ಮದಾ।।

ಪರ್ವತಗಳಂತಿದ್ದ ಮದಿಸಿದ ಆನೆಗಳಿಂದಲೂ, ಪಕ್ಷಿಗಳಂತೆ ಶೀಘ್ರಗಾಮಿಗಳಾಗಿದ್ದ ಕುದುರೆಗಳಿಂದಲೂ, ಧನುಸ್ಸು ಮೊದಲಾದ ಆಯುಧಗಳನ್ನು ಹಿಡಿದಿದ್ದ ಪದಾತಿಗಳಿಂದಲೂ ಕೂಡಿದ್ದ ಸೇನೆಯು ಕಾಂಚನ-ದಂತಗಳ ನೂಕಿಗಳಿದ್ದ ರಥಗಳ ಮುಂದೆ ಮತ್ತು ಹಿಂದೆ ಬಹಳ ದೂರದವರೆಗೆ – ಮಹಾನದೀ ನರ್ಮದೆಯು ಋಕ್ಷಪರ್ವತದ ಸಮೀಪಕ್ಕೆ ಹೋಗಿ ಪೂರ್ವ-ಪಶ್ಚಿಮದಿಕ್ಕುಗಳಲ್ಲಿ ಹರಿದು ಹೋಗುವಂತೆ – ಸಾಗುತ್ತಿದ್ದಿತು.

12052033a ತತಃ ಪುರಸ್ತಾದ್ಭಗವಾನ್ನಿಶಾಕರಃ ಸಮುತ್ಥಿತಸ್ತಾಮಭಿಹರ್ಷಯಂಶ್ಚಮೂಮ್।
12052033c ದಿವಾಕರಾಪೀತರಸಾಸ್ತಥೌಷಧೀಃ ಪುನಃ ಸ್ವಕೇನೈವ ಗುಣೇನ ಯೋಜಯನ್।।

ಆಗ ಪೂರ್ವ ದಿಕ್ಕಿನಲ್ಲಿ ಭಗವಾನ್ ನಿಶಾಕರ ಚಂದ್ರನು ಉದಯಿಸಿ ಆ ಸೇನೆಯಗಳಿಗೆ ಹರ್ಷವನ್ನಿತ್ತನು. ದಿವಾಕರನಿಂದ ಬಾಡಿಹೋಗಿದ್ದ ಔಷಧೀ ಲತೆಗಳನ್ನು ಚಂದ್ರನು ಪುನಃ ತನ್ನ ಕಿರಣಗಳಿಂದ ಗುಣಯುಕ್ತವನ್ನಾಗಿ ಮಾಡುತ್ತಿದ್ದನು.

12052034a ತತಃ ಪುರಂ ಸುರಪುರಸಂನಿಭದ್ಯುತಿ ಪ್ರವಿಶ್ಯ ತೇ ಯದುವೃಷಪಾಂಡವಾಸ್ತದಾ।
12052034c ಯಥೋಚಿತಾನ್ಭವನವರಾನ್ಸಮಾವಿಶಝ್ ಶ್ರಮಾನ್ವಿತಾ ಮೃಗಪತಯೋ ಗುಹಾ ಇವ।।

ಆಗ ಯದುವೃಷಭ-ಪಾಂಡವರು ಸುರಪುರದಂತೆ ಬೆಳಗುತ್ತಿದ್ದ ಪುರವನ್ನು ಪ್ರವೇಶಿಸಿ, ಬಳಲಿದ ಸಿಂಹಗಳು ಗುಹೆಯನ್ನು ಪ್ರವೇಶಿಸುವಂತೆ, ಯಥೋಚಿತ ಶ್ರೇಷ್ಠ ಭವನಗಳನ್ನು ಪ್ರವೇಶಿಸಿದರು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ಯುಧಿಷ್ಠಿರಾದ್ಯಾಗಮನೇ ದ್ವಿಪಂಚಶತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಯುಧಿಷ್ಠಿರಾದಿಗಳ ಗಮನ ಎನ್ನುವ ಐವತ್ತೆರಡನೇ ಅಧ್ಯಾಯವು.