ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ರಾಜಧರ್ಮ ಪರ್ವ
ಅಧ್ಯಾಯ 51
ಸಾರ
12051001 ವೈಶಂಪಾಯನ ಉವಾಚ।
12051001a ಶ್ರುತ್ವಾ ತು ವಚನಂ ಭೀಷ್ಮೋ ವಾಸುದೇವಸ್ಯ ಧೀಮತಃ।
12051001c ಕಿಂ ಚಿದುನ್ನಾಮ್ಯ ವದನಂ ಪ್ರಾಂಜಲಿರ್ವಾಕ್ಯಮಬ್ರವೀತ್।।
ವೈಶಂಪಾಯನನು ಹೇಳಿದನು: “ವಾಸುದೇವನ ಆ ಮಾತನ್ನು ಕೇಳಿದ ಧೀಮಂತ ಭೀಷ್ಮನು ತನ್ನ ಮುಖವನ್ನು ಸ್ವಲ್ಪವೇ ಮೇಲಕ್ಕೆತ್ತಿ ಕೈಜೋಡಿಸಿ ಹೇಳಿದನು:
12051002a ನಮಸ್ತೇ ಭಗವನ್ವಿಷ್ಣೋ ಲೋಕಾನಾಂ ನಿಧನೋದ್ಭವ।
12051002c ತ್ವಂ ಹಿ ಕರ್ತಾ ಹೃಷೀಕೇಶ ಸಂಹರ್ತಾ ಚಾಪರಾಜಿತಃ।।
“ಭಗವನ್! ವಿಷ್ಣುವೇ! ಲೋಕಗಳ ಉದ್ಭವ ಮತ್ತು ನಿಧನ! ನಿನಗೆ ನಮಸ್ಕಾರವು! ಹೃಷೀಕೇಶ! ನೀನೇ ಕರ್ತ, ಸಂಹರ್ತ ಮತ್ತು ಅಪರಾಜಿತ!
12051003a ವಿಶ್ವಕರ್ಮನ್ನಮಸ್ತೇಽಸ್ತು ವಿಶ್ವಾತ್ಮನ್ವಿಶ್ವಸಂಭವ।
12051003c ಅಪವರ್ಗೋಽಸಿ ಭೂತಾನಾಂ ಪಂಚಾನಾಂ ಪರತಃ ಸ್ಥಿತಃ।।
ವಿಶ್ವಕರ್ಮನೇ! ವಿಶ್ವಾತ್ಮನೇ! ವಿಶ್ವಸಂಭವನೇ! ನಿನಗೆ ನಮಸ್ಕಾರಗಳು! ನೀನು ಪಂಚಭೂತಗಳಿಗೂ ಅತೀತನಾಗಿದ್ದು ಪ್ರಾಣಿಗಳ ಮೋಕ್ಷಸ್ವರೂಪನಾಗಿರುವೆ!
12051004a ನಮಸ್ತೇ ತ್ರಿಷು ಲೋಕೇಷು ನಮಸ್ತೇ ಪರತಸ್ತ್ರಿಷು।
12051004c ಯೋಗೇಶ್ವರ ನಮಸ್ತೇಽಸ್ತು ತ್ವಂ ಹಿ ಸರ್ವಪರಾಯಣಮ್।।
ಮೂರು ಲೋಕಗಳಲ್ಲಿಯೂ ವ್ಯಾಪಕನಾಗಿರುವ ನಿನಗೆ ನಮಸ್ಕರಿಸುತ್ತೇನೆ. ಮೂರು ಗುಣಗಳಿಗೂ ಅತೀತನಾಗಿರುವ ನಿನಗೆ ನಮಸ್ಕರಿಸುತ್ತೇನೆ. ಯೋಗೇಶ್ವರ! ಸರ್ವಕ್ಕೂ ಪರಾಯಣನಾಗಿರುವ ನಿನಗೆ ನಮಸ್ಕರಿಸುತ್ತೇನೆ.
12051005a ಮತ್ಸಂಶ್ರಿತಂ ಯದಾತ್ಥ ತ್ವಂ ವಚಃ ಪುರುಷಸತ್ತಮ।
12051005c ತೇನ ಪಶ್ಯಾಮಿ ತೇ ದಿವ್ಯಾನ್ಭಾವಾನ್ಹಿ ತ್ರಿಷು ವರ್ತ್ಮಸು।।
ಪುರುಷಸತ್ತಮ! ನೀನು ನನಗೆ ಸಂಬಂಧಿಸಿದಂತೆ ಕೆಲವು ಮಾತುಗಳನ್ನಾಡಿರುವೆ! ಇದರಿಂದಾಗಿ ಮೂರು ಲೋಕಗಳಲ್ಲಿಯೂ ವ್ಯಾಪ್ತನಾಗಿರುವ ನಿನ್ನ ದಿವ್ಯತೆಯನ್ನು ಕಾಣುತ್ತಿದ್ದೇನೆ.
12051006a ತಚ್ಚ ಪಶ್ಯಾಮಿ ತತ್ತ್ವೇನ ಯತ್ತೇ ರೂಪಂ ಸನಾತನಮ್।
12051006c ಸಪ್ತ ಮಾರ್ಗಾ ನಿರುದ್ಧಾಸ್ತೇ ವಾಯೋರಮಿತತೇಜಸಃ।।
ವಾಯುವಿನ ಏಳು ಮಾರ್ಗಗಳನ್ನೂ ತಡೆದಿರುವ ಅಮಿತತೇಜಸ್ವೀ ನಿನ್ನ ಸನಾತನ ರೂಪವನ್ನು ತತ್ತ್ವತಃ ನಾನು ಕಾಣುತ್ತಿದ್ದೇನೆ.
12051007a ದಿವಂ ತೇ ಶಿರಸಾ ವ್ಯಾಪ್ತಂ ಪದ್ಭ್ಯಾಂ ದೇವೀ ವಸುಂಧರಾ।
12051007c ದಿಶೋ ಭುಜೌ ರವಿಶ್ಚಕ್ಷುರ್ವೀರ್ಯೇ ಶಕ್ರಃ ಪ್ರತಿಷ್ಠಿತಃ।।
ನಿನ್ನ ಶಿರಸ್ಸು ಸ್ವರ್ಗದಿಂದ ವ್ಯಾಪ್ತವಾಗಿದೆ. ಪಾದಗಳು ದೇವೀ ವಸುಂಧರೆಯಿಂದ ವ್ಯಾಪ್ತವಾಗಿವೆ. ನಿನ್ನ ಭುಜಗಳಲ್ಲಿ ದಿಕ್ಕುಗಳೂ, ಕಣ್ಣುಗಳಲ್ಲಿ ರವಿಯೂ ಮತ್ತು ವೀರ್ಯದಲ್ಲಿ ಶಕ್ರನೂ ಪ್ರತಿಷ್ಠಿತಗೊಂಡಿದ್ದಾರೆ.
12051008a ಅತಸೀಪುಷ್ಪಸಂಕಾಶಂ ಪೀತವಾಸಸಮಚ್ಯುತಮ್।
12051008c ವಪುರ್ಹ್ಯನುಮಿಮೀಮಸ್ತೇ ಮೇಘಸ್ಯೇವ ಸವಿದ್ಯುತಃ।।
ಅಗಸೇ ಹೂವಿನಂತೆ ಶ್ಯಾಮಲವರ್ಣದವನೂ, ಪೀತಾಂಬರವನ್ನು ಧರಿಸಿರುವವನೂ, ಧರ್ಮದಿಂದ ಚ್ಯುತನಾಗದೇ ಇರುವವನೂ ಆದ ನೀನು ನನಗೆ ಮಿಂಚುಗಳಿಂದ ಕೂಡಿರುವ ಕಾಲಮೇಘದಂತೆ ತೋರುತ್ತಿರುವೆ!
12051009a ತ್ವತ್ಪ್ರಪನ್ನಾಯ ಭಕ್ತಾಯ ಗತಿಮಿಷ್ಟಾಂ ಜಿಗೀಷವೇ।
12051009c ಯಚ್ಚ್ರೇಯಃ ಪುಂಡರೀಕಾಕ್ಷ ತದ್ಧ್ಯಾಯಸ್ವ ಸುರೋತ್ತಮ।।
ಪುಂಡರೀಕಾಕ್ಷ! ಸುರೋತ್ತಮ! ಸದ್ಗತಿಯನ್ನು ಬಯಸಿ ನಿನ್ನನ್ನೇ ಶರಣುಹೊಂದಿರುವ ಈ ಭಕ್ತನಿಗೆ ಯಾವುದು ಶ್ರೇಯಸ್ಸೆಂದು ನೀನೇ ಹೇಳು!”
12051010 ವಾಸುದೇವ ಉವಾಚ।
12051010a ಯತಃ ಖಲು ಪರಾ ಭಕ್ತಿರ್ಮಯಿ ತೇ ಪುರುಷರ್ಷಭ।
12051010c ತತೋ ವಪುರ್ಮಯಾ ದಿವ್ಯಂ ತವ ರಾಜನ್ಪ್ರದರ್ಶಿತಮ್।।
ವಾಸುದೇವನು ಹೇಳಿದನು: “ಪುರುಷರ್ಷಭ! ರಾಜನ್! ನಿನಗೆ ನನ್ನಲ್ಲಿ ಪರಮ ಭಕ್ತಿಯಿರುವುದರಿಂದಲೇ ನಾನು ನಿನಗೆ ನನ್ನ ದಿವ್ಯ ರೂಪವನ್ನು ತೋರಿಸಿರುವೆನು!
12051011a ನ ಹ್ಯಭಕ್ತಾಯ ರಾಜೇಂದ್ರ ಭಕ್ತಾಯಾನೃಜವೇ ನ ಚ।
12051011c ದರ್ಶಯಾಮ್ಯಹಮಾತ್ಮಾನಂ ನ ಚಾದಾಂತಾಯ ಭಾರತ।।
ರಾಜೇಂದ್ರ! ಭಾರತ! ನನ್ನ ಭಕ್ತನಲ್ಲದವನಿಗೆ, ಭಕ್ತನಾಗಿದ್ದರೂ ಕುಟಿಲಸ್ವಭಾವವಿದ್ದವನಿಗೆ ಮತ್ತು ಮನಃಶಾಂತಿಯಿಲ್ಲದವನಿಗೆ ನನ್ನ ಈ ದಿವ್ಯರೂಪವನ್ನು ತೋರಿಸುವುದಿಲ್ಲ.
12051012a ಭವಾಂಸ್ತು ಮಮ ಭಕ್ತಶ್ಚ ನಿತ್ಯಂ ಚಾರ್ಜವಮಾಸ್ಥಿತಃ।
12051012c ದಮೇ ತಪಸಿ ಸತ್ಯೇ ಚ ದಾನೇ ಚ ನಿರತಃ ಶುಚಿಃ।।
ನೀನಾದರೋ ನನ್ನ ಭಕ್ತನಾಗಿರುವೆ. ನಿತ್ಯವೂ ಸರಳಸ್ವಭಾವದಿಂದಿರುವೆ. ನಿತ್ಯವೂ ನೀನು ಜಿತೇಂದ್ರಿಯ ಮತ್ತು ಶುಚಿಯಾಗಿದ್ದುಕೊಂಡು ಸತ್ಯ-ದಾನಗಳಲ್ಲಿ ನಿರತನಾಗಿರುವೆ!
12051013a ಅರ್ಹಸ್ತ್ವಂ ಭೀಷ್ಮ ಮಾಂ ದ್ರಷ್ಟುಂ ತಪಸಾ ಸ್ವೇನ ಪಾರ್ಥಿವ।
12051013c ತವ ಹ್ಯುಪಸ್ಥಿತಾ ಲೋಕಾ ಯೇಭ್ಯೋ ನಾವರ್ತತೇ ಪುನಃ।।
ಭೀಷ್ಮ! ಪಾರ್ಥಿವ! ನಿನ್ನ ತಪಸ್ಸಿನಿಂದಲೇ ನೀನು ನನ್ನನ್ನು ನೋಡಲು ಅರ್ಹನಾಗಿರುವೆ. ಯಾವಲೋಕಗಳಿಂದ ನೀನು ಪುನಃ ಹಿಂದಿರುಗುವುದಿಲ್ಲವೋ ಅಂಥಹ ಉತ್ತಮ ಲೋಕಕ್ಕೇ ನೀನು ತೆರಳುತ್ತೀಯೆ.
12051014a ಪಂಚಾಶತಂ ಷಟ್ಚ ಕುರುಪ್ರವೀರ ಶೇಷಂ ದಿನಾನಾಂ ತವ ಜೀವಿತಸ್ಯ।
12051014c ತತಃ ಶುಭೈಃ ಕರ್ಮಫಲೋದಯೈಸ್ತ್ವಂ ಸಮೇಷ್ಯಸೇ ಭೀಷ್ಮ ವಿಮುಚ್ಯ ದೇಹಮ್।।
ಕುರುಪ್ರವೀರ! ಭೀಷ್ಮ! ನಿನ್ನ ಜೀವಿತದಲ್ಲಿ ಇನ್ನು ಐವತ್ತಾರು ದಿನಗಳು ಮಾತ್ರವೇ ಉಳಿದಿವೆ. ಅದರ ನಂತರ ನಿನ್ನ ಶುಭಕರ್ಮಗಳ ಫಲವಾಗಿ ಈ ದೇಹವನ್ನು ವಿಸರ್ಜಿಸಿ ಉತ್ತಮ ಲೋಕವನ್ನು ಪಡೆಯುವೆ!
12051015a ಏತೇ ಹಿ ದೇವಾ ವಸವೋ ವಿಮಾನಾನ್ಯ್ ಆಸ್ಥಾಯ ಸರ್ವೇ ಜ್ವಲಿತಾಗ್ನಿಕಲ್ಪಾಃ।
12051015c ಅಂತರ್ಹಿತಾಸ್ತ್ವಾಂ ಪ್ರತಿಪಾಲಯಂತಿ ಕಾಷ್ಠಾಂ ಪ್ರಪದ್ಯಂತಮುದಕ್ಪತಂಗಮ್।।
ಪ್ರಜ್ವಲಿಸುತ್ತಿರುವ ಅಗ್ನಿಗಳಂತಿರುವ ಈ ದೇವತೆಗಳು ಮತ್ತು ವಸುಗಳು ವಿಮಾನಸ್ಥರಾಗಿ, ಯಾರಿಗೂ ಕಾಣದಂತೆ, ಸೂರ್ಯನು ಉತ್ತರಕ್ಕೆ ತೆರಳುವುದನ್ನೇ ಕಾಯುತ್ತಿದ್ದಾರೆ ಮತ್ತು ನಿನ್ನ ಪ್ರತ್ಯಾಗಮನವನ್ನು ಎದಿರುನೋಡುತ್ತಿದ್ದಾರೆ!
12051016a ವ್ಯಾವೃತ್ತಮಾತ್ರೇ ಭಗವತ್ಯುದೀಚೀಂ ಸೂರ್ಯೇ ದಿಶಂ ಕಾಲವಶಾತ್ಪ್ರಪನ್ನೇ।
12051016c ಗಂತಾಸಿ ಲೋಕಾನ್ಪುರುಷಪ್ರವೀರ ನಾವರ್ತತೇ ಯಾನುಪಲಭ್ಯ ವಿದ್ವಾನ್।।
ಪುರುಷಪ್ರವೀರ! ಭಗವಾನ್ ಸೂರ್ಯನು ಕಾಲವಶನಾಗಿ ದಕ್ಷಿಣಾಯನದಿಂದ ಹಿಂದಿರುಗಿದ ಕೂಡಲೇ ಉತ್ತರಾಯಣಕ್ಕೆ ಕಾಲಿಟ್ಟೊಡನೆಯೇ ನೀನು ಲೋಕಗಳಿಗೆ ತೆರಳುತ್ತೀಯೆ ಮತ್ತು ವಿದ್ವಾನರಂತೆ ಆ ಲೋಕಗಳನ್ನು ಪಡೆದು ಮರಳಿ ಬರುವುದಿಲ್ಲ.
12051017a ಅಮುಂ ಚ ಲೋಕಂ ತ್ವಯಿ ಭೀಷ್ಮ ಯಾತೇ ಜ್ಞಾನಾನಿ ನಂಕ್ಷ್ಯಂತ್ಯಖಿಲೇನ ವೀರ।
12051017c ಅತಃ ಸ್ಮ ಸರ್ವೇ ತ್ವಯಿ ಸಂನಿಕರ್ಷಂ ಸಮಾಗತಾ ಧರ್ಮವಿವೇಚನಾಯ।।
ಭೀಷ್ಮ! ವೀರ! ಈ ಲೋಕದಿಂದ ನೀನು ಹೊರಟು ಹೋಗಲು ನಿನ್ನಲ್ಲಿರುವ ಅಖಿಲ ಜ್ಞಾನಗಳು ನಷ್ಟವಾಗಿ ಹೋಗುತ್ತವೆ. ಆದುದರಿಂದಲೇ ಇವರೆಲ್ಲರೂ ಧರ್ಮದ ಕುರುತಾದ ಚರ್ಚೆಗಾಗಿಯೇ ನಿನ್ನ ಬಳಿ ಬಂದು ಸೇರಿದ್ದಾರೆ.
12051018a ತಜ್ಜ್ಞಾತಿಶೋಕೋಪಹತಶ್ರುತಾಯ ಸತ್ಯಾಭಿಸಂಧಾಯ ಯುಧಿಷ್ಠಿರಾಯ।
12051018c ಪ್ರಬ್ರೂಹಿ ಧರ್ಮಾರ್ಥಸಮಾಧಿಯುಕ್ತಮ್ ಅರ್ಥ್ಯಂ ವಚೋಽಸ್ಯಾಪನುದಾಸ್ಯ ಶೋಕಮ್।।
ಜ್ಞಾತಿವಧೆಯ ಶೋಕದಿಂದಾಗಿ ಶಾಸ್ತ್ರಜ್ಞಾನವನ್ನು ಸಂಪೂರ್ಣವಾಗಿ ಕಳೆದುಕೊಂಡಿರುವ ಸತ್ಯಸಂಧ ಯುಧಿಷ್ಠಿರನಿಗೆ ಧರ್ಮಾರ್ಥಸಮಾಧಿಯುಕ್ತವಾದ ಅರ್ಥಬದ್ಧವಾದ ಮಾತುಗಳನ್ನಾಡಿ ಅವನ ಶೋಕವನ್ನು ಹೋಗಲಾಡಿಸು!””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ಕೃಷ್ಣವಾಕ್ಯೇ ಏಕಪಂಚಶತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಕೃಷ್ಣವಾಕ್ಯ ಎನ್ನುವ ಐವತ್ತೊಂದನೇ ಅಧ್ಯಾಯವು.