ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ರಾಜಧರ್ಮ ಪರ್ವ
ಅಧ್ಯಾಯ 50
ಸಾರ
ಕೃಷ್ಣವಾಕ್ಯ (1-36).
12050001 ವೈಶಂಪಾಯನ ಉವಾಚ।
12050001a ತತೋ ರಾಮಸ್ಯ ತತ್ಕರ್ಮ ಶ್ರುತ್ವಾ ರಾಜಾ ಯುಧಿಷ್ಠಿರಃ।
12050001c ವಿಸ್ಮಯಂ ಪರಮಂ ಗತ್ವಾ ಪ್ರತ್ಯುವಾಚ ಜನಾರ್ದನಮ್।।
ವೈಶಂಪಾಯನನು ಹೇಳಿದನು: “ರಾಮನ ಆ ಕರ್ಮದ ಕುರಿತು ಕೇಳಿದ ರಾಜಾ ಯುಧಿಷ್ಠಿರನು ಪರಮ ವಿಸ್ಮಿತನಾಗಿ ಜನಾರ್ದನನಲ್ಲಿ ಪುನಃ ಕೇಳಿದನು:
12050002a ಅಹೋ ರಾಮಸ್ಯ ವಾರ್ಷ್ಣೇಯ ಶಕ್ರಸ್ಯೇವ ಮಹಾತ್ಮನಃ।
12050002c ವಿಕ್ರಮೋ ಯೇನ ವಸುಧಾ ಕ್ರೋಧಾನ್ನಿಃಕ್ಷತ್ರಿಯಾ ಕೃತಾ।।
“ಆಹಾ ಮಹಾತ್ಮ ರಾಮನ ವಿಕ್ರಮವೇ! ವಾರ್ಷ್ಣೇಯ! ಶಕ್ರನಂಥಹ ವಿಕ್ರಮವಿದ್ದ ಅವನು ಕ್ರೋಧದಿಂದ ಈ ವಸುಧೆಯನ್ನು ನಿಃಕ್ಷತ್ರಿಯರನ್ನಾಗಿ ಮಾಡಿದನು!
12050003a ಗೋಭಿಃ ಸಮುದ್ರೇಣ ತಥಾ ಗೋಲಾಂಗೂಲರ್ಕ್ಷವಾನರೈಃ।
12050003c ಗುಪ್ತಾ ರಾಮಭಯೋದ್ವಿಗ್ನಾಃ ಕ್ಷತ್ರಿಯಾಣಾಂ ಕುಲೋದ್ವಹಾಃ।।
ಆದರೆ ರಾಮನ ಭಯದಿಂದ ಉದ್ವಿಗ್ನರಾಗಿದ್ದ ಕ್ಷತ್ರಿಯರ ಕುಲೋದ್ಧಾರಕರನ್ನು ಗೋವುಗಳು, ಸಮುದ್ರ, ಗೋಲಾಂಗೂಲ ವಾನರರು ಮತ್ತು ಕರಡಿಗಳು ರಹಸ್ಯದಿಂದ ರಕ್ಷಿಸಿದವು.
12050004a ಅಹೋ ಧನ್ಯೋ ಹಿ ಲೋಕೋಽಯಂ ಸಭಾಗ್ಯಾಶ್ಚ ನರಾ ಭುವಿ।
12050004c ಯತ್ರ ಕರ್ಮೇದೃಶಂ ಧರ್ಮ್ಯಂ ದ್ವಿಜೇನ ಕೃತಮಚ್ಯುತ।।
ಆಹಾ! ಈ ಲೋಕವೇ ಧನ್ಯವಾಯಿತು! ಭುವಿಯ ನರರೂ ಭಾಗ್ಯವಂತರೇ! ಅಚ್ಯುತ! ಆ ದ್ವಿಜನು ತನ್ನ ಈ ಕರ್ಮದಿಂದ ಧರ್ಮವನ್ನು ಸ್ಥಾಪಿಸಿದನು!”
12050005a ತಥಾ ಯಾಂತೌ ತದಾ ತಾತ ತಾವಚ್ಯುತಯುಧಿಷ್ಠಿರೌ।
12050005c ಜಗ್ಮತುರ್ಯತ್ರ ಗಾಂಗೇಯಃ ಶರತಲ್ಪಗತಃ ಪ್ರಭುಃ।।
ಮಗೂ! ಹೀಗೆ ಅಚ್ಯುತ-ಯುಧಿಷ್ಠಿರರು ಪರಸ್ಪರರಲ್ಲಿ ಮಾತನಾಡಿಕೊಳ್ಳುತ್ತಾ ಪ್ರಭು ಗಾಂಗೇಯನು ಶರತಲ್ಪತನಾಗಿದ್ದಲ್ಲಿಗೆ ಬಂದರು.
12050006a ತತಸ್ತೇ ದದೃಶುರ್ಭೀಷ್ಮಂ ಶರಪ್ರಸ್ತರಶಾಯಿನಮ್।
12050006c ಸ್ವರಶ್ಮಿಜಾಲಸಂವೀತಂ ಸಾಯಂಸೂರ್ಯಮಿವಾನಲಮ್।।
ಅಲ್ಲಿ ಅವರು ಶರಶಯನದಲ್ಲಿ ಮಲಗಿ ತನ್ನದೇ ರಶ್ಮಿಗಳ ಜಾಲದಿಂದ ಪ್ರಕಾಶಿಸುತ್ತಿದ್ದ ಸಾಯಂಕಾಲದ ಸೂರ್ಯನ ತೇಜಸ್ಸಿನಿಂದ ಬೆಳಗುತ್ತಿದ್ದ ಭೀಷ್ಮನನ್ನು ನೋಡಿದರು.
12050007a ಉಪಾಸ್ಯಮಾನಂ ಮುನಿಭಿರ್ದೇವೈರಿವ ಶತಕ್ರತುಮ್।
12050007c ದೇಶೇ ಪರಮಧರ್ಮಿಷ್ಠೇ ನದೀಮೋಘವತೀಮನು।।
ಓಘವತೀ ನದಿಯ ತೀರದಲ್ಲಿ, ದೇವತೆಗಳಿಂದ ಶತಕ್ರತುವು ಹೇಗೋ ಹಾಗೆ ಮುನಿಗಳಿಂದ ಉಪಾಸನೆಗೊಳ್ಳುತ್ತಿರುವ ಆ ಪರಮಧರ್ಮಿಷ್ಟನನ್ನು ನೋಡಿದರು.
12050008a ದೂರಾದೇವ ತಮಾಲೋಕ್ಯ ಕೃಷ್ಣೋ ರಾಜಾ ಚ ಧರ್ಮರಾಟ್।
12050008c ಚತ್ವಾರಃ ಪಾಂಡವಾಶ್ಚೈವ ತೇ ಚ ಶಾರದ್ವತಾದಯಃ।।
12050009a ಅವಸ್ಕಂದ್ಯಾಥ ವಾಹೇಭ್ಯಃ ಸಂಯಮ್ಯ ಪ್ರಚಲಂ ಮನಃ।
12050009c ಏಕೀಕೃತ್ಯೇಂದ್ರಿಯಗ್ರಾಮಮುಪತಸ್ಥುರ್ಮಹಾಮುನೀನ್।।
ದೂರದಿಂದಲೇ ಅವನನ್ನು ನೋಡಿದ ಕೃಷ್ಣ, ರಾಜಾ ಧರ್ಮರಾಜ, ನಾಲ್ವರು ಪಾಂಡವರು, ಮತ್ತು ಶಾರದ್ವತರೇ ಮೊದಲಾದವರು, ಅವರವರ ವಾಹನಗಳಿಂದ ಕೆಳಕ್ಕಿಳಿದು, ಚಂಚಲ ಮನಸ್ಸನ್ನು ನಿಯಂತ್ರಿಸಿಕೊಂಡು, ಇಂದ್ರಿಯಗ್ರಾಮಗಳನ್ನು ಏಕೀಕರಿಸಿಕೊಂಡು ಆ ಮಹಾಮುನಿಗಳ ಬಳಿಬಂದರು.
12050010a ಅಭಿವಾದ್ಯ ಚ ಗೋವಿಂದಃ ಸಾತ್ಯಕಿಸ್ತೇ ಚ ಕೌರವಾಃ।
12050010c ವ್ಯಾಸಾದೀಂಸ್ತಾನೃಷೀನ್ಪಶ್ಚಾದ್ಗಾಂಗೇಯಮುಪತಸ್ಥಿರೇ।।
ವ್ಯಾಸನೇ ಮೊದಲಾದ ಋಷಿಗಳನ್ನು ಅಭಿವಾದಿಸಿದ ನಂತರ ಗೋವಿಂದ, ಸಾತ್ಯಕಿ ಮತ್ತು ಕೌರವರು ಗಾಂಗೇಯನ ಬಳಿಸಾರಿದರು.
12050011a ತಪೋವೃದ್ಧಿಂ ತತಃ ಪೃಷ್ಟ್ವಾ ಗಾಂಗೇಯಂ ಯದುಕೌರವಾಃ।
12050011c ಪರಿವಾರ್ಯ ತತಃ ಸರ್ವೇ ನಿಷೇದುಃ ಪುರುಷರ್ಷಭಾಃ।।
ಗಾಂಗೇಯನ ತಪೋವೃದ್ಧಿಯ ಕುರಿತು ಕೇಳಿ ಪುರುಷರ್ಷಭ ಯದು-ಕೌರವರು ಎಲ್ಲರೂ ಅವನನ್ನು ಸುತ್ತುವರೆದು ಕುಳಿತುಕೊಂಡರು.
12050012a ತತೋ ನಿಶಮ್ಯ ಗಾಂಗೇಯಂ ಶಾಮ್ಯಮಾನಮಿವಾನಲಮ್।
12050012c ಕಿಂ ಚಿದ್ದೀನಮನಾ ಭೀಷ್ಮಮಿತಿ ಹೋವಾಚ ಕೇಶವಃ।।
ಆಗ ಆರಿಹೋಗುತ್ತಿರುವ ಯಜ್ಞೇಶ್ವರನಂತಿದ್ದ ಗಾಂಗೇಯನನ್ನು ನೋಡಿ ಕೇಶವನು ಸ್ವಲ್ಪ ದೀನಮನಸ್ಕನಾಗಿ “ಭೀಷ್ಮ!” ಎಂದು ಹೇಳಿದನು.
12050013a ಕಚ್ಚಿಜ್ಞಾನಾನಿ ತೇ ರಾಜನ್ಪ್ರಸನ್ನಾನಿ ಯಥಾ ಪುರಾ।
12050013c ಕಚ್ಚಿದವ್ಯಾಕುಲಾ ಚೈವ ಬುದ್ಧಿಸ್ತೇ ವದತಾಂ ವರ।।
“ಮಾತನಾಡುವವರಲ್ಲಿ ಶ್ರೇಷ್ಠನೇ! ರಾಜನ್! ನಿನ್ನ ಜ್ಞಾನಗಳೆಲ್ಲವೂ ಹಿಂದಿನಂತೆಯೇ ಪ್ರಸನ್ನವಾಗಿವೆಯಲ್ಲವೇ? ನಿನ್ನ ಬುದ್ಧಿಗೆ ಯಾವುದೇ ವ್ಯಾಕುಲಗಳೂ ಇಲ್ಲ ತಾನೇ?
12050014a ಶರಾಭಿಘಾತದುಃಖಾತ್ತೇ ಕಚ್ಚಿದ್ಗಾತ್ರಂ ನ ದೂಯತೇ।
12050014c ಮಾನಸಾದಪಿ ದುಃಖಾದ್ಧಿ ಶಾರೀರಂ ಬಲವತ್ತರಮ್।।
ಶರಗಳ ಅಭಿಘಾತದಿಂದ ನಿನ್ನ ಶರೀರವು ನೊಂದು ದುಃಖಿಸುತ್ತಿಲ್ಲ ತಾನೇ? ಏಕೆಂದರೆ ಮಾನಸಿಕ ದುಃಖಕ್ಕಿಂತಲೂ ಶಾರೀರಿಕ ದುಃಖವೇ ಅಧಿಕವಾಗಿರುತ್ತದೆ.
12050015a ವರದಾನಾತ್ಪಿತುಃ ಕಾಮಂ ಚಂದಮೃತ್ಯುರಸಿ ಪ್ರಭೋ।
12050015c ಶಂತನೋರ್ಧರ್ಮಶೀಲಸ್ಯ ನ ತ್ವೇತಚ್ಚಮಕಾರಣಮ್।।
ಪ್ರಭೋ! ಧರ್ಮಶೀಲನಾದ ನಿನ್ನ ತಂದೆಯ ವರದಾನದಿಂದ ನೀನು ಇಚ್ಛಾಮರಣಿಯಾಗಿರುವೆ! ಆದರೆ ಅದು ನಿನ್ನ ಶಾಂತಿಗೆ ಕಾರಣವಾಗಲಾರದು!
12050016a ಸುಸೂಕ್ಷ್ಮೋಽಪೀಹ ದೇಹೇ ವೈ ಶಲ್ಯೋ ಜನಯತೇ ರುಜಮ್।
12050016c ಕಿಂ ಪುನಃ ಶರಸಂಘಾತೈಶ್ಚಿತಸ್ಯ ತವ ಭಾರತ।।
ಭಾರತ! ಮುಳ್ಳು ಅತ್ಯಂತ ಸೂಕ್ಷ್ಮವಾಗಿದ್ದರೂ ಶರೀರವನ್ನು ಸೇರಿಕೊಂಡು ಹೆಚ್ಚು ನೋವನ್ನುಂಟುಮಾಡುತ್ತದೆ. ಹೀಗಿರುವಾಗ ಬಾಣಗಳ ಸಮೂಹಗಳಿಂದಲೇ ಚುಚ್ಚಲ್ಪಟ್ಟಿರುವ ನಿನ್ನ ವಿಷಯದಲ್ಲಿ ಹೇಳತಕ್ಕದ್ದೇನಿದೆ?
12050017a ಕಾಮಂ ನೈತತ್ತವಾಖ್ಯೇಯಂ ಪ್ರಾಣಿನಾಂ ಪ್ರಭವಾಪ್ಯಯೌ।
12050017c ಭವಾನ್ಹ್ಯುಪದಿಶೇಚ್ಚ್ರೇಯೋ ದೇವಾನಾಮಪಿ ಭಾರತ।।
ಭಾರತ! ಹುಟ್ಟು-ಸಾವುಗಳು ಪ್ರಾಣಿಗಳಿಗೆ ಇರತಕ್ಕವೇ ಎನ್ನುವ ಉಪದೇಶವನ್ನು ನಿನಗೆ ನೀಡಲು ನಾನು ಬಯಸುತ್ತಿಲ್ಲ. ಏಕೆಂದರೆ ನೀನು ದೇವತೆಗಳಿಗೂ ಉಪದೇಶನೀಡಲು ಸಮರ್ಥನಾಗಿರುವೆ!
12050018a ಯದ್ಧಿ ಭೂತಂ ಭವಿಷ್ಯಚ್ಚ ಭವಚ್ಚ ಪುರುಷರ್ಷಭ।
12050018c ಸರ್ವಂ ತಜ್ಞಾನವೃದ್ಧಸ್ಯ ತವ ಪಾಣಾವಿವಾಹಿತಮ್।।
ಪುರುಷರ್ಷಭ! ಜ್ಞಾನವೃದ್ಧನಾದ ನಿನ್ನಲ್ಲಿ ಭೂತ-ಭವಿಷ್ಯ-ವರ್ತಮಾನಗಳೆಲ್ಲವೂ, ಶಾಸ್ತ್ರ-ವೇದ-ಪುರಾಣ-ಇತಿಹಾಸಗಳೆಲ್ಲವೂ ಪ್ರತಿಷ್ಠಿತವಾಗಿವೆ.
12050019a ಸಂಸಾರಶ್ಚೈವ ಭೂತಾನಾಂ ಧರ್ಮಸ್ಯ ಚ ಫಲೋದಯಃ।
12050019c ವಿದಿತಸ್ತೇ ಮಹಾಪ್ರಾಜ್ಞ ತ್ವಂ ಹಿ ಬ್ರಹ್ಮಮಯೋ ನಿಧಿಃ।।
ಮಹಾಪ್ರಾಜ್ಞ! ಪ್ರಾಣಿಗಳ ಸಂಸಾರ ಮತ್ತು ಧರ್ಮದ ಫಲಾನುಭವಗಳನ್ನು ನೀನು ಅರಿತುಕೊಂಡಿದ್ದೀಯೆ. ನೀನು ಬ್ರಹ್ಮಮಯ ನಿಧಿಯಾಗಿರುವೆ!
12050020a ತ್ವಾಂ ಹಿ ರಾಜ್ಯೇ ಸ್ಥಿತಂ ಸ್ಫೀತೇ ಸಮಗ್ರಾಂಗಮರೋಗಿಣಮ್।
12050020c ಸ್ತ್ರೀಸಹಸ್ರೈಃ ಪರಿವೃತಂ ಪಶ್ಯಾಮೀಹೋರ್ಧ್ವರೇತಸಮ್।।
ಸಮೃದ್ಧ ರಾಜ್ಯದಲ್ಲಿ ನೀನು ನಿನ್ನ ಎಲ್ಲ ಅಂಗಾಂಗಳೂ ಸದೃಢವಾಗಿದ್ದು, ಅರೋಗಿಯಾಗಿದ್ದು, ಸಹಸ್ರಾರು ಸ್ತ್ರೀಯರಿಂದ ಪರಿವೃತನಾಗಿದ್ದರೂ, ಊರ್ಧ್ವರೇತಸ್ಕನಾಗಿ ಬ್ರಹ್ಮಚರ್ಯೆಯನ್ನು ಪಾಲಿಸಿದುದನ್ನು ನಾನು ಕಂಡಿದ್ದೇನೆ.
12050021a ಋತೇ ಶಾಂತನವಾದ್ಭೀಷ್ಮಾತ್ತ್ರಿಷು ಲೋಕೇಷು ಪಾರ್ಥಿವ।
12050021c ಸತ್ಯಸಂಧಾನ್ಮಹಾವೀರ್ಯಾಚ್ಚೂರಾದ್ಧರ್ಮೈಕತತ್ಪರಾತ್।।
12050022a ಮೃತ್ಯುಮಾವಾರ್ಯ ತರಸಾ ಶರಪ್ರಸ್ತರಶಾಯಿನಃ।
12050022c ನಿಸರ್ಗಪ್ರಭವಂ ಕಿಂ ಚಿನ್ನ ಚ ತಾತಾನುಶುಶ್ರುಮ।।
ಪಾರ್ಥಿವ! ಈ ಶರಶಯನದಲ್ಲಿ ಮಲಗಿರುವ ಸತ್ಯಸಂಧ, ಮಹಾವೀರ್ಯ, ಶೂರ. ಧರ್ಮದಲ್ಲಿಯೇ ತತ್ಪರನಾಗಿರುವ ಶಾಂತನವ ಭೀಷ್ಮನೊಬ್ಬನನ್ನು ಬಿಟ್ಟು ಮೃತ್ಯುವನ್ನೂ ತಡೆದು ನಿಲ್ಲಿಸಬಲ್ಲ ಮತ್ತೊಬ್ಬನನ್ನು ಈ ಮೂರುಲೋಕಗಳಲ್ಲಿಯೂ ಎಲ್ಲಿಯಾದರೂ ಹುಟ್ಟಿರುವನೆಂಬುದನ್ನು ನಾನು ಇದೂವರೆಗೂ ಕೇಳಿರುವುದಿಲ್ಲ!
12050023a ಸತ್ಯೇ ತಪಸಿ ದಾನೇ ಚ ಯಜ್ಞಾಧಿಕರಣೇ ತಥಾ।
12050023c ಧನುರ್ವೇದೇ ಚ ವೇದೇ ಚ ನಿತ್ಯಂ ಚೈವಾನ್ವವೇಕ್ಷಣೇ।।
12050024a ಅನೃಶಂಸಂ ಶುಚಿಂ ದಾಂತಂ ಸರ್ವಭೂತಹಿತೇ ರತಮ್।
12050024c ಮಹಾರಥಂ ತ್ವತ್ಸದೃಶಂ ನ ಕಂ ಚಿದನುಶುಶ್ರುಮ।।
ಸತ್ಯ, ತಪಸ್ಸು, ದಾನ, ಯಜ್ಞಾನುಷ್ಠಾನ, ಧನುರ್ವೇದ, ವೇದ, ನಿತ್ಯವೂ ಪ್ರಜೆಗಳ ಪರಿಪಾಲನೆ ಇವುಗಳಲ್ಲಿ ನಿನಗೆ ಸಮನಾದ ದಯಾವಂತ, ಶುಚಿ, ಜಿತೇಂದ್ರಿಯ, ಸರ್ವಭೂತಹಿತರತ, ಮಹಾರಥನ ಕುರಿತು ಇದೂವರೆಗೆ ನಾನು ಕೇಳಿಲ್ಲ!
12050025a ತ್ವಂ ಹಿ ದೇವಾನ್ಸಗಂಧರ್ವಾನ್ಸಸುರಾಸುರರಾಕ್ಷಸಾನ್।
12050025c ಶಕ್ತ ಏಕರಥೇನೈವ ವಿಜೇತುಂ ನಾತ್ರ ಸಂಶಯಃ।।
ನೀನು ಒಂದೇ ರಥದಲ್ಲಿ ಗಂಧರ್ವ-ಸುರ-ಅಸುರ-ರಾಕ್ಷಸರೊಂದಿಗೆ ದೇವತೆಗಳನ್ನು ಜಯಿಸಲು ಶಕ್ತನೆನ್ನುವುದರಲ್ಲಿ ಸಂಶಯವೇ ಇಲ್ಲ.
12050026a ತ್ವಂ ಹಿ ಭೀಷ್ಮ ಮಹಾಬಾಹೋ ವಸೂನಾಂ ವಾಸವೋಪಮಃ।
12050026c ನಿತ್ಯಂ ವಿಪ್ರೈಃ ಸಮಾಖ್ಯಾತೋ ನವಮೋಽನವಮೋ ಗುಣೈಃ।।
ಭೀಷ್ಮ! ಮಹಾಬಾಹೋ! ವಸುಗಳಲ್ಲಿ ನೀನು ಇಂದ್ರಸಮಾನನು. ವಿಪ್ರರು ನಿತ್ಯವೂ ನಿನ್ನನ್ನು ಅಷ್ಟವಸುಗಳ ಅಂಶದಿಂದ ಹುಟ್ಟಿದ ಒಂಭತ್ತನೆಯವನೆಂದೂ, ಗುಣಗಳಲ್ಲಿ ನಿನ್ನ ಸಮನಾಗಿರುವವರು ಯಾರೂ ಇಲ್ಲವೆಂದೂ ವರ್ಣಿಸುತ್ತಾರೆ.
12050027a ಅಹಂ ಹಿ ತ್ವಾಭಿಜಾನಾಮಿ ಯಸ್ತ್ವಂ ಪುರುಷಸತ್ತಮ।
12050027c ತ್ರಿದಶೇಷ್ವಪಿ ವಿಖ್ಯಾತಃ ಸ್ವಶಕ್ತ್ಯಾ ಸುಮಹಾಬಲಃ।।
ಪುರುಷಸತ್ತಮ! ನೀನು ಯಾರೆಂದು ನಾನು ಚೆನ್ನಾಗಿ ತಿಳಿದುಕೊಂಡಿದ್ದೇನೆ. ನಿನ್ನ ಶಕ್ತಿ ಮತ್ತು ಮಹಾಬಲಗಳಿಂದ ನೀನು ದೇವತೆಗಳಲ್ಲಿಯೂ ವಿಖ್ಯಾತನಾಗಿರುವೆ!
12050028a ಮನುಷ್ಯೇಷು ಮನುಷ್ಯೇಂದ್ರ ನ ದೃಷ್ಟೋ ನ ಚ ಮೇ ಶ್ರುತಃ।
12050028c ಭವತೋ ಯೋ ಗುಣೈಸ್ತುಲ್ಯಃ ಪೃಥಿವ್ಯಾಂ ಪುರುಷಃ ಕ್ವ ಚಿತ್।।
ಮನುಷ್ಯೇಂದ್ರ! ಈ ಭೂಮಿಯ ಮನುಷ್ಯರಲ್ಲಿ ನಿನ್ನ ಸಮಾನ ಗುಣಗಳುಳ್ಳ ಬೇರೆ ಯಾವ ಪುರುಷನನ್ನೂ ನಾನು ನೋಡಲೂ ಇಲ್ಲ ಮತ್ತು ಕೇಳಲೂ ಇಲ್ಲ.
12050029a ತ್ವಂ ಹಿ ಸರ್ವೈರ್ಗುಣೈ ರಾಜನ್ದೇವಾನಪ್ಯತಿರಿಚ್ಯಸೇ।
12050029c ತಪಸಾ ಹಿ ಭವಾನ್ಶಕ್ತಃ ಸ್ರಷ್ಟುಂ ಲೋಕಾಂಶ್ಚರಾಚರಾನ್।।
ರಾಜನ್! ನೀನು ಸರ್ವಗುಣಗಳಿಂದಲೂ ದೇವತೆಗಳನ್ನೂ ಅತಿಶಯಿಸಿರುವೆ. ನಿನ್ನ ತಪಸ್ಸಿನಿಂದ ನೀನು ಲೋಕಗಳನ್ನೂ ಚರಾಚರಗಳನ್ನೂ ಸೃಷ್ಟಿಸಲು ಶಕ್ತನಾಗಿರುವೆ.
12050030a ತದಸ್ಯ ತಪ್ಯಮಾನಸ್ಯ ಜ್ಞಾತೀನಾಂ ಸಂಕ್ಷಯೇಣ ವೈ।
12050030c ಜ್ಯೇಷ್ಠಸ್ಯ ಪಾಂಡುಪುತ್ರಸ್ಯ ಶೋಕಂ ಭೀಷ್ಮ ವ್ಯಪಾನುದ।।
ಭೀಷ್ಮ! ಜ್ಞಾತಿಬಾಂಧವರ ಸಂಕ್ಷಯದಿಂದ ತಪಿಸುತ್ತಿರುವ ಈ ಜ್ಯೇಷ್ಠ ಪಾಂಡುಪುತ್ರನ ಶೋಕವನ್ನು ನೀನು ನಿವಾರಿಸು!
12050031a ಯೇ ಹಿ ಧರ್ಮಾಃ ಸಮಾಖ್ಯಾತಾಶ್ಚಾತುರ್ವರ್ಣ್ಯಸ್ಯ ಭಾರತ।
12050031c ಚಾತುರಾಶ್ರಮ್ಯಸಂಸೃಷ್ಟಾಸ್ತೇ ಸರ್ವೇ ವಿದಿತಾಸ್ತವ।।
ಭಾರತ! ನಾಲ್ಕು ಆಶ್ರಮಧರ್ಮಗಳಿಂದ ಕೂಡಿರುವ ಚಾತುರ್ವರ್ಣಗಳ ಧರ್ಮಗಳೆಲ್ಲವೂ ನಿನಗೆ ಸಂಪೂರ್ಣವಾಗಿ ತಿಳಿದಿವೆ.
12050032a ಚಾತುರ್ವೇದ್ಯೇ ಚ ಯೇ ಪ್ರೋಕ್ತಾಶ್ಚಾತುರ್ಹೋತ್ರೇ ಚ ಭಾರತ।
12050032c ಸಾಂಖ್ಯೇ ಯೋಗೇ ಚ ನಿಯತಾ ಯೇ ಚ ಧರ್ಮಾಃ ಸನಾತನಾಃ।।
12050033a ಚಾತುರ್ವರ್ಣ್ಯೇನ ಯಶ್ಚೈಕೋ ಧರ್ಮೋ ನ ಸ್ಮ ವಿರುಧ್ಯತೇ।
12050033c ಸೇವ್ಯಮಾನಃ ಸ ಚೈವಾದ್ಯೋ ಗಾಂಗೇಯ ವಿದಿತಸ್ತವ।।
ಭಾರತ! ಗಾಂಗೇಯ! ನಾಲ್ಕು ವೇದಗಳಲ್ಲಿ ಹೇಳಿರುವ ನಾಲ್ಕು ಹೋತೃಗಳ ಕರ್ತವ್ಯಗಳನ್ನೂ, ಸಾಂಖ್ಯಯೋಗವನ್ನೂ, ನಾಲ್ಕೂ ವರ್ಣಗಳವರಿಗೆ ನಿಯಮಿಸಲ್ಪಟ್ಟಿರುವ ಸನಾತನ ಧರ್ಮಗಳನ್ನೂ, ಆದರೆ ಯಾವುದಕ್ಕೂ ವಿರುದ್ಧವಾಗಿರದ ಹಾಗೆ ನಡೆದುಕೊಳ್ಳುವ ಏಕೈಕ ಧರ್ಮವೇನಿದೆಯೋ ಅದನ್ನೂ ನೀನು ತಿಳಿದಿರುವೆ.
12050034a ಇತಿಹಾಸಪುರಾಣಂ ಚ ಕಾರ್ತ್ಸ್ನ್ಯೇನ ವಿದಿತಂ ತವ।
12050034c ಧರ್ಮಶಾಸ್ತ್ರಂ ಚ ಸಕಲಂ ನಿತ್ಯಂ ಮನಸಿ ತೇ ಸ್ಥಿತಮ್।।
ಇತಿಹಾಸ-ಪುರಾಣಗಳು ಸಂಪೂರ್ಣವಾಗಿ ನಿನಗೆ ತಿಳಿದಿವೆ. ಸಕಲ ಧರ್ಮಶಾಸ್ತ್ರಗಳೂ ನಿನ್ನ ಮನಸ್ಸಿನಲ್ಲಿ ನೆಲೆಸಿಬಿಟ್ಟಿವೆ.
12050035a ಯೇ ಚ ಕೇ ಚನ ಲೋಕೇಽಸ್ಮಿನ್ನರ್ಥಾಃ ಸಂಶಯಕಾರಕಾಃ।
12050035c ತೇಷಾಂ ಚೇತ್ತಾ ನಾಸ್ತಿ ಲೋಕೇ ತ್ವದನ್ಯಃ ಪುರುಷರ್ಷಭ।।
ಪುರುಷರ್ಷಭ! ಸಂಶಯಾಸ್ಪದವಾದ ಯಾವುದಾದರೂ ಕೆಲವು ವಿಷಯಗಳು ಲೋಕದಲ್ಲಿದ್ದರೆ ಅವುಗಳನ್ನೂ ನಿವಾರಿಸಲು ಈ ಲೋಕದಲ್ಲಿ ನಿನ್ನನ್ನು ಬಿಟ್ಟು ಬೇರೆ ಯಾರೂ ಇಲ್ಲ.
12050036a ಸ ಪಾಂಡವೇಯಸ್ಯ ಮನಃಸಮುತ್ಥಿತಂ ನರೇಂದ್ರ ಶೋಕಂ ವ್ಯಪಕರ್ಷ ಮೇಧಯಾ।
12050036c ಭವದ್ವಿಧಾ ಹ್ಯುತ್ತಮಬುದ್ಧಿವಿಸ್ತರಾ ವಿಮುಹ್ಯಮಾನಸ್ಯ ಜನಸ್ಯ ಶಾಂತಯೇ।।
ನರೇಂದ್ರ! ಈ ಪಾಂಡವೇಯನ ಮನಸ್ಸಿನಲ್ಲಿ ಹುಟ್ಟಿಕೊಂಡಿರುವ ಶೋಕವನ್ನು ನಿನ್ನ ಬುದ್ಧಿಶಕ್ತಿಯಿಂದ ದೂರಮಾಡು! ಮೋಹಗೊಂಡಿರುವ ಜನರನ್ನು ಶಾಂತಗೊಳಿಸಲು ನಿನ್ನಂಥಹ ಉತ್ತಮ ವಿಶಾಲ ಬುದ್ಧಿಯುಳ್ಳವನಿಗೆ ಮಾತ್ರ ಸಾಧ್ಯ!””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ಕೃಷ್ಣವಾಕ್ಯೇ ಪಂಚಶತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಕೃಷ್ಣವಾಕ್ಯ ಎನ್ನುವ ಐವತ್ತನೇ ಅಧ್ಯಾಯವು.