ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ರಾಜಧರ್ಮ ಪರ್ವ
ಅಧ್ಯಾಯ 48
ಸಾರ
ಜಾಮದಗ್ನೇಯೋಽಪಖ್ಯಾನ (1-15).
12048001 ವೈಶಂಪಾಯನ ಉವಾಚ।
12048001a ತತಃ ಸ ಚ ಹೃಷೀಕೇಶಃ ಸ ಚ ರಾಜಾ ಯುಧಿಷ್ಠಿರಃ।
12048001c ಕೃಪಾದಯಶ್ಚ ತೇ ಸರ್ವೇ ಚತ್ವಾರಃ ಪಾಂಡವಾಶ್ಚ ಹ।।
12048002a ರಥೈಸ್ತೇ ನಗರಾಕಾರೈಃ ಪತಾಕಾಧ್ವಜಶೋಭಿತೈಃ।
12048002c ಯಯುರಾಶು ಕುರುಕ್ಷೇತ್ರಂ ವಾಜಿಭಿಃ ಶೀಘ್ರಗಾಮಿಭಿಃ।।
ವೈಶಂಪಾಯನನು ಹೇಳಿದನು: “ಅನಂತರ ಹೃಷೀಕೇಶ, ರಾಜಾ ಯುಧಿಷ್ಠಿರ, ನಾಲ್ವರು ಪಾಂಡವರು, ಮತ್ತು ಕೃಪನೇ ಮೊದಲಾದವರೆಲ್ಲರೂ ಶೀಘ್ರ ಕುದುರೆಗಳನ್ನು ಕಟ್ಟಿದ, ಪತಾಕೆ-ಧ್ವಜಗಳಿಂದ ಶೋಭಿಸುತ್ತಿರುವ, ನಗರಗಳ ಆಕಾರದ ರಥಗಳಲ್ಲಿ ಕುಳಿತು ಕುರುಕ್ಷೇತ್ರಕ್ಕೆ ಪ್ರಯಾಣಿಸಿದರು.
12048003a ತೇಽವತೀರ್ಯ ಕುರುಕ್ಷೇತ್ರಂ ಕೇಶಮಜ್ಜಾಸ್ಥಿಸಂಕುಲಮ್।
12048003c ದೇಹನ್ಯಾಸಃ ಕೃತೋ ಯತ್ರ ಕ್ಷತ್ರಿಯೈಸ್ತೈರ್ಮಹಾತ್ಮಭಿಃ।।
ಮಹಾತ್ಮ ಕ್ಷತ್ರಿಯರು ಎಲ್ಲಿ ದೇಹಗಳನ್ನು ತೊರೆದಿದ್ದರೋ ಆ ತಲೆಗೂದಲು-ಮಜ್ಜೆ-ಮೂಳೆಗಳ ಸಮಾಕುಲವಾಗಿದ್ದ ಕುರುಕ್ಷೇತ್ರದಲ್ಲಿ ಅವರು ಇಳಿದರು.
12048004a ಗಜಾಶ್ವದೇಹಾಸ್ಥಿಚಯೈಃ ಪರ್ವತೈರಿವ ಸಂಚಿತಮ್।
12048004c ನರಶೀರ್ಷಕಪಾಲೈಶ್ಚ ಶಂಖೈರಿವ ಸಮಾಚಿತಮ್।।
ಅಲ್ಲಿ ಆನೆ-ಕುದುರೆಗಳ ದೇಹಗಳೂ ಮೂಳೆಗಳೂ ಪರ್ವತಗಳೋಪಾದಿಯಲ್ಲಿ ಬಿದ್ದಿದ್ದವು. ಅಲ್ಲಿ ಬಿದ್ದಿದ್ದ ಮನುಷ್ಯರ ತಲೆಬುರುಡೆಗಳು ಶಂಖಗಳಂತೆ ತೋರುತ್ತಿದ್ದವು.
12048005a ಚಿತಾಸಹಸ್ರೈರ್ನಿಚಿತಂ ವರ್ಮಶಸ್ತ್ರಸಮಾಕುಲಮ್।
12048005c ಆಪಾನಭೂಮಿಂ ಕಾಲಸ್ಯ ತದಾ ಭುಕ್ತೋಜ್ಜಿತಾಮಿವ।।
ಸಹಸ್ರಾರು ಚಿತೆಗಳು ಉರಿಯುತ್ತಿದ್ದವು. ಕವಚ-ಆಯುಧಗಳು ರಾಶಿ-ರಾಶಿಯಾಗಿ ಬಿದ್ದಿದ್ದವು. ಆಗ ಕುರುಕ್ಷೇತ್ರವು ಕಾಲನ ಪಾನಭೂಮಿಯಂತೆ ತೋರುತ್ತಿತ್ತು. ಅಲ್ಲಲ್ಲಿ ಬಿದ್ದಿದ್ದ ಮಜ್ಜೆ-ಅಸ್ತಿಗಳು ಕಾಲನು ತಿಂದು ಉಳಿಸಿದ ಎಂಜಲಿನಂತೆ ತೋರುತ್ತಿದ್ದವು.
12048006a ಭೂತಸಂಘಾನುಚರಿತಂ ರಕ್ಷೋಗಣನಿಷೇವಿತಮ್।
12048006c ಪಶ್ಯಂತಸ್ತೇ ಕುರುಕ್ಷೇತ್ರಂ ಯಯುರಾಶು ಮಹಾರಥಾಃ।।
ಭೂತಗಣಗಳು ಸಂಚರಿಸುತ್ತಿದ್ದ ಮತ್ತು ರಾಕ್ಷಸಗಣಗಳಿಂದ ಸಂಸೇವಿಸಲ್ಪಟ್ಟ ಕುರುಕ್ಷೇತ್ರವನ್ನು ನೋಡುತ್ತಾ ಆ ಮಹಾರಥರು ಸಾಗಿದರು.
12048007a ಗಚ್ಚನ್ನೇವ ಮಹಾಬಾಹುಃ ಸರ್ವಯಾದವನಂದನಃ।
12048007c ಯುಧಿಷ್ಠಿರಾಯ ಪ್ರೋವಾಚ ಜಾಮದಗ್ನ್ಯಸ್ಯ ವಿಕ್ರಮಮ್।।
ಹಾಗೆ ಸಾಗುತ್ತಿರುವಾಗ ಸರ್ವಯಾದವರ ನಂದನ, ಮಹಾಬಾಹು ಕೃಷ್ಣನು ಯುಧಿಷ್ಠಿರನಿಗೆ ಜಾಮದಗ್ನಿ ಪರಶುರಾಮನ ವಿಕ್ರಮದ ಕುರಿತು ಹೇಳಿದನು:
12048008a ಅಮೀ ರಾಮಹ್ರದಾಃ ಪಂಚ ದೃಶ್ಯಂತೇ ಪಾರ್ಥ ದೂರತಃ।
12048008c ಯೇಷು ಸಂತರ್ಪಯಾಮಾಸ ಪೂರ್ವಾನ್ಕ್ಷತ್ರಿಯಶೋಣಿತೈಃ।।
“ಪಾರ್ಥ! ಇಗೋ ದೂರದಲ್ಲಿ ಕಾಣುತ್ತಿರುವ ಈ ಐದು ಸರೋವರಗಳಲ್ಲಿ ಹಿಂದೆ ರಾಮನು ಕ್ಷತ್ರಿಯರ ರಕ್ತದಿಂದ ತರ್ಪಣಗಳನ್ನಿತ್ತಿದ್ದನು.
12048009a ತ್ರಿಃಸಪ್ತಕೃತ್ವೋ ವಸುಧಾಂ ಕೃತ್ವಾ ನಿಃಕ್ಷತ್ರಿಯಾಂ ಪ್ರಭುಃ।
12048009c ಇಹೇದಾನೀಂ ತತೋ ರಾಮಃ ಕರ್ಮಣೋ ವಿರರಾಮ ಹ।।
ಪ್ರಭು ರಾಮನು ಇಪ್ಪತ್ತೊಂದು ಬಾರಿ ಭೂಮಿಯನ್ನು ನಿಃಕ್ಷತ್ರಿಯರನ್ನಾಗಿ ಮಾಡಿ ಇಲ್ಲಿಯೇ ಆ ಕರ್ಮದಿಂದ ವಿರತನಾದನು.”
12048010 ಯುಧಿಷ್ಠಿರ ಉವಾಚ 12048010a ತ್ರಿಃಸಪ್ತಕೃತ್ವಃ ಪೃಥಿವೀ ಕೃತಾ ನಿಃಕ್ಷತ್ರಿಯಾ ತದಾ।
12048010c ರಾಮೇಣೇತಿ ಯದಾತ್ಥ ತ್ವಮತ್ರ ಮೇ ಸಂಶಯೋ ಮಹಾನ್।।
ಯುಧಿಷ್ಠಿರನು ಹೇಳಿದನು: “ರಾಮನು ಇಪ್ಪತ್ತೊಂದು ಬಾರಿ ಪೃಥ್ವಿಯನ್ನು ನಿಃಕ್ಷತ್ರಿಯರನ್ನಾಗಿಸಿದನೆಂದು ಹೇಳಿದೆಯಲ್ಲಾ! ಅದರ ಕುರಿತು ಒಂದು ಮಹಾ ಸಂಶಯವು ನನ್ನಲ್ಲಿದೆ.
12048011a ಕ್ಷತ್ರಬೀಜಂ ಯದಾ ದಗ್ಧಂ ರಾಮೇಣ ಯದುಪುಂಗವ।
12048011c ಕಥಂ ಭೂಯಃ ಸಮುತ್ಪತ್ತಿಃ ಕ್ಷತ್ರಸ್ಯಾಮಿತವಿಕ್ರಮ।।
ಅಮಿತವಿಕ್ರಮಿ! ಯದುಪುಂಗವ! ರಾಮನಿಂದ ಕ್ಷತ್ರಬೀಜವು ಭಸ್ಮವಾದ ನಂತರ ಪುನಃ ಹೇಗೆ ಕ್ಷತ್ರಿಯರ ಉತ್ಪತ್ತಿಯಾಯಿತು?
12048012a ಮಹಾತ್ಮನಾ ಭಗವತಾ ರಾಮೇಣ ಯದುಪುಂಗವ।
12048012c ಕಥಮುತ್ಸಾದಿತಂ ಕ್ಷತ್ರಂ ಕಥಂ ವೃದ್ಧಿಂ ಪುನರ್ಗತಮ್।।
ಯದುಪುಂಗವ! ಮಹಾತ್ಮಾ ಭಗವನ್ ರಾಮನು ಯಾವ ಕಾರಣದಿಂದ ಕ್ಷತ್ರಿಯರನ್ನು ವಿನಾಶಗೊಳಿಸಿದನು? ಪುನಃ ಕ್ಷತ್ರಿಯರ ವೃದ್ಧಿಯು ಹೇಗಾಯಿತು?
12048013a ಮಹಾಭಾರತಯುದ್ಧೇ ಹಿ ಕೋಟಿಶಃ ಕ್ಷತ್ರಿಯಾ ಹತಾಃ।
12048013c ತಥಾಭೂಚ್ಚ ಮಹೀ ಕೀರ್ಣಾ ಕ್ಷತ್ರಿಯೈರ್ವದತಾಂ ವರ।।
ಮಾತನಾಡುವವರಲ್ಲಿ ಶ್ರೇಷ್ಠನೇ! ಮಹಾಭಾರತ ಯುದ್ಧದಲ್ಲಿ ಹೇಗೆ ಕೋಟಿಗಟ್ಟಲೆ ಕ್ಷತ್ರಿಯರು ಹತರಾದರೋ ಹಾಗೆ ಆಗಲೂ ಕೂಡ ಈ ಭೂಮಿಯು ಕ್ಷತ್ರಿಯರ ಮೃತದೇಹಗಳಿಂದ ತುಂಬಿಹೋಗಿದ್ದಿರಬಹುದು!
12048014a ಏವಂ ಮೇ ಚಿಂಧಿ ವಾರ್ಷ್ಣೇಯ ಸಂಶಯಂ ತಾರ್ಕ್ಷ್ಯಕೇತನ।
12048014c ಆಗಮೋ ಹಿ ಪರಃ ಕೃಷ್ಣ ತ್ವತ್ತೋ ನೋ ವಾಸವಾನುಜ।।
ವಾರ್ಷ್ಣೇಯ! ಗರುಡಧ್ವಜ! ಕೃಷ್ಣ! ವಾಸವಾನುಜ! ನನ್ನ ಈ ಸಂಶಯವನ್ನು ಹೋಗಲಾಡಿಸು! ನೀನೇ ಸರ್ವ ಆಗಮಗಳ ನಿಗಮ. ನಿನ್ನ ಹೊರತಾದ ಶಾಸ್ತ್ರಗಳ್ಯಾವುವೂ ಇಲ್ಲ!””
12048015 ವೈಶಂಪಾಯನ ಉವಾಚ।
12048015a ತತೋ ವ್ರಜನ್ನೇವ ಗದಾಗ್ರಜಃ ಪ್ರಭುಃ ಶಶಂಸ ತಸ್ಮೈ ನಿಖಿಲೇನ ತತ್ತ್ವತಃ।
12048015c ಯುಧಿಷ್ಠಿರಾಯಾಪ್ರತಿಮೌಜಸೇ ತದಾ ಯಥಾಭವತ್ ಕ್ಷತ್ರಿಯಸಂಕುಲಾ ಮಹೀ।।
ವೈಶಂಪಾಯನನು ಹೇಳಿದನು: “ಅನಂತರ ಗದಾಗ್ರಜ ಪ್ರಭು ಕೃಷ್ಣನು ಅಪ್ರತಿಮ ತೇಜಸ್ವೀ ಯುಧಿಷ್ಠಿರನಿಗೆ ಭೂಮಿಯಲ್ಲಿ ಕ್ಷತ್ರಿಯಸಂಕುಲಗಳ ವಿನಾಶವು ಹೇಗಾಯಿತೆನ್ನುವುದನ್ನು ಸಂಪೂರ್ಣವಾಗಿ ಅರ್ಥವತ್ತಾಗಿ ಹೇಳಿದನು.
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ರಾಮೋಪಾಖ್ಯಾನೇ ಅಷ್ಠಚತ್ವಾರಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ರಾಮೋಪಾಖ್ಯಾನ ಎನ್ನುವ ನಲ್ವತ್ತೆಂಟನೇ ಅಧ್ಯಾಯವು.