ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ರಾಜಧರ್ಮ ಪರ್ವ
ಅಧ್ಯಾಯ 47
ಸಾರ
ಭೀಷ್ಮಸ್ತವರಾಜಃ (1-72).
12047001 ಜನಮೇಜಯ ಉವಾಚ।
12047001a ಶರತಲ್ಪೇ ಶಯಾನಸ್ತು ಭರತಾನಾಂ ಪಿತಾಮಹಃ।
12047001c ಕಥಮುತ್ಸೃಷ್ಟವಾನ್ದೇಹಂ ಕಂ ಚ ಯೋಗಮಧಾರಯತ್।।
ಜನಮೇಜಯನು ಹೇಳಿದನು: “ಶರತಲ್ಪದಲ್ಲಿ ಮಲಗಿದ್ದ ಭರತರ ಪಿತಾಮಹ ಭೀಷ್ಮನು ಹೇಗೆ ದೇಹತ್ಯಾಗ ಮಾಡಿದನು ಮತ್ತು ಆಗ ಅವನು ಯಾವ ಯೋಗಧಾರಣೆ ಮಾಡಿದ್ದನು?”
12047002 ವೈಶಂಪಾಯನ ಉವಾಚ।
12047002a ಶೃಣುಷ್ವಾವಹಿತೋ ರಾಜನ್ಶುಚಿರ್ಭೂತ್ವಾ ಸಮಾಹಿತಃ।
12047002c ಭೀಷ್ಮಸ್ಯ ಕುರುಶಾರ್ದೂಲ ದೇಹೋತ್ಸರ್ಗಂ ಮಹಾತ್ಮನಃ।।
ವೈಶಂಪಾಯನನು ಹೇಳಿದನು: “ರಾಜನ್! ಕುರುಶಾರ್ದೂಲ! ಶುಚಿಯಾಗಿ ಏಕಮನಸ್ಕನಾಗಿ ಸಾವಧಾನದಿಂದ ಮಹಾತ್ಮ ಭೀಷ್ಮನ ದೇಹತ್ಯಾಗದ ಕುರಿತು ಕೇಳು.
12047003a ನಿವೃತ್ತಮಾತ್ರೇ ತ್ವಯನ ಉತ್ತರೇ ವೈ ದಿವಾಕರೇ।
12047003c ಸಮಾವೇಶಯದಾತ್ಮಾನಮಾತ್ಮನ್ಯೇವ ಸಮಾಹಿತಃ।।
ದಿವಾಕರನು ಉತ್ತರಾಯಣಕ್ಕೆ ತಿರುಗಿದೊಡನೆಯೇ ಭೀಷ್ಮನು ಏಕಾಗ್ರಚಿತ್ತನಾಗಿ ತನ್ನ ಮನಸ್ಸನ್ನು ಬುದ್ಧಿಯೊಡನೆ ಮತ್ತು ಬುದ್ಧಿಯನ್ನು ಆತ್ಮನಲ್ಲಿ ಲೀನಗೊಳಿಸಿದನು.
12047004a ವಿಕೀರ್ಣಾಂಶುರಿವಾದಿತ್ಯೋ ಭೀಷ್ಮಃ ಶರಶತೈಶ್ಚಿತಃ।
12047004c ಶಿಶ್ಯೇ ಪರಮಯಾ ಲಕ್ಷ್ಮ್ಯಾ ವೃತೋ ಬ್ರಾಹ್ಮಣಸತ್ತಮೈಃ।।
12047005a ವ್ಯಾಸೇನ ವೇದಶ್ರವಸಾ ನಾರದೇನ ಸುರರ್ಷಿಣಾ।
12047005c ದೇವಸ್ಥಾನೇನ ವಾತ್ಸ್ಯೇನ ತಥಾಶ್ಮಕಸುಮಂತುನಾ।।
12047006a ಏತೈಶ್ಚಾನ್ಯೈರ್ಮುನಿಗಣೈರ್ಮಹಾಭಾಗೈರ್ಮಹಾತ್ಮಭಿಃ।
12047006c ಶ್ರದ್ಧಾದಮಪುರಸ್ಕಾರೈರ್ವೃತಶ್ಚಂದ್ರ ಇವ ಗ್ರಹೈಃ।।
ನೂರಾರು ಬಾಣಗಳಿಂದ ಚುಚ್ಚಲ್ಪಟ್ಟ ಭೀಷ್ಮನು ಕಿರಣಗಳನ್ನು ಪಸರಿಸುವ ಸೂರ್ಯನಂತೆಯೂ; ವೇದಗಳನ್ನು ತಿಳಿದಿದ್ದ ವ್ಯಾಸ, ಸುರರ್ಷಿ ನಾರದ, ದೇವಸ್ಥಾನ, ವಾತ್ಸ್ಯ, ಅಶ್ಮಕ, ಸುಮಂತು ಮತ್ತು ಇನ್ನೂ ಅನೇಕ ಮಹಾತ್ಮ ಮಹಾಭಾಗ ಮುನಿಗಣಗಳು, ಶ್ರದ್ಧೆ-ಶಮೋಪೇತರಾದ ಬ್ರಾಹ್ಮಣಸತ್ತಮರಿಂದ ಸುತ್ತುವರೆಯಲ್ಪಟ್ಟು, ಗ್ರಹಗಳಿಂದ ಸುತ್ತುವರೆಯಲ್ಪಟ್ಟ ಚಂದ್ರನಂತೆ ಅಪಾರ ಕಾಂತಿಯಿಂದ ಪ್ರಕಾಶಿಸುತ್ತಿದ್ದನು.
12047007a ಭೀಷ್ಮಸ್ತು ಪುರುಷವ್ಯಾಘ್ರಃ ಕರ್ಮಣಾ ಮನಸಾ ಗಿರಾ।
12047007c ಶರತಲ್ಪಗತಃ ಕೃಷ್ಣಂ ಪ್ರದಧ್ಯೌ ಪ್ರಾಂಜಲಿಃ ಸ್ಥಿತಃ।।
ಶರತಲ್ಪದಲ್ಲಿ ಮಲಗಿದ್ದ ಪುರುಷವ್ಯಾಘ್ರ ಭೀಷ್ಮನಾದರೋ ಕೈಮುಗಿದು ಕರ್ಮ-ಮನಸ್ಸು-ವಾಣಿಗಳ ಮೂಲಕ ಕೃಷ್ಣನನ್ನು ಧ್ಯಾನಿಸತೊಡಗಿದನು.
12047008a ಸ್ವರೇಣ ಪುಷ್ಟನಾದೇನ ತುಷ್ಟಾವ ಮಧುಸೂದನಮ್।
12047008c ಯೋಗೇಶ್ವರಂ ಪದ್ಮನಾಭಂ ವಿಷ್ಣುಂ ಜಿಷ್ಣುಂ ಜಗತ್ಪತಿಮ್।।
ಅವನು ಪುಷ್ಟನಾದದ ಸ್ವರದಲ್ಲಿ ಮಧುಸೂದನ, ಯೋಗೇಶ್ವರ, ಪದ್ಮನಾಭ, ಜಿಷ್ಣು, ಜಗತ್ಪತಿ ವಿಷ್ಣುವನ್ನು ಸ್ತುತಿಸತೊಡಗಿದನು.
12047009a ಕೃತಾಂಜಲಿಃ ಶುಚಿರ್ಭೂತ್ವಾ ವಾಗ್ವಿದಾಂ ಪ್ರವರಃ ಪ್ರಭುಮ್।
12047009c ಭೀಷ್ಮಃ ಪರಮಧರ್ಮಾತ್ಮಾ ವಾಸುದೇವಮಥಾಸ್ತುವತ್।।
ಶುಚಿಯಾಗಿ ಆ ವಾಗ್ವಿದರಲ್ಲಿ ಶ್ರೇಷ್ಠ ಪರಮಧರ್ಮಾತ್ಮ ಭೀಷ್ಮನು ಪ್ರಭು ವಾಸುದೇವನನ್ನು ಈ ರೀತಿ ಸ್ತುತಿಸಿದನು:
12047010a ಆರಿರಾಧಯಿಷುಃ ಕೃಷ್ಣಂ ವಾಚಂ ಜಿಗಮಿಷಾಮಿ ಯಾಮ್।
12047010c ತಯಾ ವ್ಯಾಸಸಮಾಸಿನ್ಯಾ ಪ್ರೀಯತಾಂ ಪುರುಷೋತ್ತಮಃ।।
“ವಿವರವಾದ ಮತ್ತು ಸಂಕ್ಷೇಪವಾದ ಯಾವ ವಾಣಿಯಿಂದ ಕೃಷ್ಣನನ್ನು ಆರಾಧಿಸುವೆನೋ ಅದರಿಂದಲೇ ಆ ಪುರುಷೋತ್ತಮನು ಸುಪ್ರೀತನಾಗಲಿ!
12047011a ಶುಚಿಃ ಶುಚಿಷದಂ1 ಹಂಸಂ ತತ್ಪರಃ ಪರಮೇಷ್ಠಿನಮ್।
12047011c ಯುಕ್ತ್ವಾ ಸರ್ವಾತ್ಮನಾತ್ಮಾನಂ ತಂ ಪ್ರಪದ್ಯೇ ಪ್ರಜಾಪತಿಮ್।।
ಶುಚಿಯಾಗಿ ತತ್ಪರನಾಗಿ ನನ್ನ ಸರ್ವವನ್ನೂ ಆತ್ಮನಲ್ಲಿ ಯೋಜಿಸಿ ಆ ಶುಚಿಷದ, ಹಂಸ, ಪರಮೇಷ್ಟಿ, ಪ್ರಜಾಪತಿಯನ್ನು ಶರಣುಹೋಗುತ್ತೇನೆ.
12047012a 2ಯಸ್ಮಿನ್ವಿಶ್ವಾನಿ ಭೂತಾನಿ ತಿಷ್ಠಂತಿ ಚ ವಿಶಂತಿ ಚ। 12047012c ಗುಣಭೂತಾನಿ ಭೂತೇಶೇ ಸೂತ್ರೇ ಮಣಿಗಣಾ ಇವ।।
12047013a ಯಸ್ಮಿನ್ನಿತ್ಯೇ ತತೇ ತಂತೌ ದೃಢೇ ಸ್ರಗಿವ ತಿಷ್ಠತಿ।
12047013c ಸದಸದ್ಗ್ರಥಿತಂ ವಿಶ್ವಂ ವಿಶ್ವಾಂಗೇ ವಿಶ್ವಕರ್ಮಣಿ।।
12047014a ಹರಿಂ ಸಹಸ್ರಶಿರಸಂ ಸಹಸ್ರಚರಣೇಕ್ಷಣಮ್।
12047014c ಪ್ರಾಹುರ್ನಾರಾಯಣಂ ದೇವಂ ಯಂ ವಿಶ್ವಸ್ಯ ಪರಾಯಣಮ್।।
12047015a ಅಣೀಯಸಾಮಣೀಯಾಂಸಂ ಸ್ಥವಿಷ್ಠಂ ಚ ಸ್ಥವೀಯಸಾಮ್।
12047015c ಗರೀಯಸಾಂ ಗರಿಷ್ಠಂ ಚ ಶ್ರೇಷ್ಠಂ ಚ ಶ್ರೇಯಸಾಮಪಿ।।
12047016a ಯಂ ವಾಕೇಷ್ವನುವಾಕೇಷು ನಿಷತ್ಸೂಪನಿಷತ್ಸು ಚ।
12047016c ಗೃಣಂತಿ ಸತ್ಯಕರ್ಮಾಣಂ ಸತ್ಯಂ ಸತ್ಯೇಷು ಸಾಮಸು।।
12047017a ಚತುರ್ಭಿಶ್ಚತುರಾತ್ಮಾನಂ ಸತ್ತ್ವಸ್ಥಂ ಸಾತ್ವತಾಂ ಪತಿಮ್।
12047017c ಯಂ ದಿವ್ಯೈರ್ದೇವಮರ್ಚಂತಿ ಗುಹ್ಯೈಃ ಪರಮನಾಮಭಿಃ।। 12047018a 3ಯಂ ದೇವಂ ದೇವಕೀ ದೇವೀ ವಸುದೇವಾದಜೀಜನತ್। 12047018c ಭೌಮಸ್ಯ ಬ್ರಹ್ಮಣೋ ಗುಪ್ತ್ಯೈ ದೀಪ್ತಮಗ್ನಿಮಿವಾರಣಿಃ।।
12047019a ಯಮನನ್ಯೋ ವ್ಯಪೇತಾಶೀರಾತ್ಮಾನಂ ವೀತಕಲ್ಮಷಮ್।
12047019c ಇಷ್ಟ್ವಾನಂತ್ಯಾಯ ಗೋವಿಂದಂ ಪಶ್ಯತ್ಯಾತ್ಮನ್ಯವಸ್ಥಿತಮ್।।
12047020a ಪುರಾಣೇ ಪುರುಷಃ ಪ್ರೋಕ್ತೋ ಬ್ರಹ್ಮಾ ಪ್ರೋಕ್ತೋ ಯುಗಾದಿಷು।
12047020c ಕ್ಷಯೇ ಸಂಕರ್ಷಣಃ ಪ್ರೋಕ್ತಸ್ತಮುಪಾಸ್ಯಮುಪಾಸ್ಮಹೇ।।
ದಾರದಲ್ಲಿ ಪೋಣಿಸಲ್ಪಟ್ಟ ಮಣಿಗಳಂತೆ ವಿಶ್ವ-ಭೂತಗಳು ಯಾರಲ್ಲಿ ನೆಲೆಸಿ ಸೇರಿಕೊಂಡಿವೆಯೋ ಅವನನ್ನು; ಗಟ್ಟಿಯಾದ ದಾರದಿಂದ ಕಟ್ಟಲ್ಪಟ್ಟ ಹೂವಿನ ಮಾಲೆಯಂತೆ ಯಾರಲ್ಲಿ ಈ ವಿಶ್ವವೇ ದೃಢವಾಗಿ ನಿಂತಿರುವುದೋ ಆ ವಿಶ್ವಾಂಗ ವಿಶ್ವಕರ್ಮಿಯನ್ನು; ವಿಶ್ವಪರಾಯಣನೂ, ಸಹಸ್ರಶಿರಸ್ಸುಗಳುಳ್ಳವನೂ, ಸಹಸ್ರಚರಣಗಳುಳ್ಳವನೂ, ಸಹಸ್ರಾಕ್ಷನೂ, ಮತ್ತು ನಾರಾಯಣನೆಂದು ಕರೆಯಲ್ಪಡುವ ದೇವನನ್ನೂ; ಸೂಕ್ಷ್ಮಗಳಲ್ಲಿ ಸೂಕ್ಷ್ಮನೂ, ಸ್ಥೂಲಗಳಲ್ಲಿ ಸ್ಥೂಲನೂ, ಭಾರವಾದವುಗಳಿಗಿಂತ ಭಾರವಾದವನೂ, ಶ್ರೇಷ್ಠವಾದವುಗಳಲ್ಲಿ ಶ್ರೇಷ್ಠನೂ ಆಗಿರುವವನನ್ನು; ವಾಕ್4, ಅನುವಾಕ್5, ನಿಷತ್6, ಉಪನಿಷತ್ತು ಮತ್ತು ಸತ್ಯ ಸಾಮ7ಗಳಲ್ಲಿ ಯಾರನ್ನು ಸತ್ಯಕರ್ಮನೆಂದು ವರ್ಣಿಸುತ್ತಾರೋ ಅವನನ್ನು; ನಾಲ್ಕರಿಂದಾದ ಚತುರಾತ್ಮನನ್ನು8, ಸತ್ಯದಲ್ಲಿ ನೆಲೆಸಿರುವ ಸಾತ್ವತರ ಒಡೆಯನನ್ನೂ, ದಿವ್ಯವೂ ಗುಹ್ಯವೂ ಆದ ಪರಮ ನಾಮಗಳಿಂದ ಯಾರನ್ನು ಅರ್ಚಿಸುತ್ತಾರೋ ಆ ದೇವನನ್ನು; ಭೂಮಿಯಲ್ಲಿ ಬ್ರಹ್ಮಜ್ಞಾನವನ್ನ ರಕ್ಷಿಸಲು ಅರಣಿಯ ಮಂಥನದಿಂದ ಪ್ರಜ್ವಲಿಸವ ಅಗ್ನಿಯನ್ನು ಹುಟ್ಟಿಸುವಂತೆ ದೇವಕೀ ದೇವೀ ಮತ್ತು ವಸುದೇವರು ಹುಟ್ಟಿಸಿದ ದೇವನನ್ನು; ಅನಂತ ಮೋಕ್ಷವನ್ನು ಬಯಸಿ, ಕಾಮನೆಗಳನ್ನು ತ್ಯಜಿಸಿ, ಅನನ್ಯಭಾವದಿಂದ ಆತ್ಮನಲ್ಲಿ ವ್ಯವಸ್ಥಿತನಾಗಿರವ ಯಾರನ್ನು ಕಾಣುತ್ತಾರೋ ಆ ಕಲ್ಮಷರಹಿತ ಗೋವಿಂದನನ್ನು; ಪುರಾಣಗಳಲ್ಲಿ ಪುರುಷನೆಂದೂ, ಯುಗಾದಿಗಳಲ್ಲಿ ಬ್ರಹ್ಮನೆಂದೂ, ಲಯಕಾಲಗಳಲ್ಲಿ ಸಂಕರ್ಷಣನೆಂದೂ ಕರೆಯಲ್ಪಡುವ ಆದ ಆ ಉಪಾಸ್ಯ ಕೃಷ್ಣನನ್ನು ಉಪಾಸಿಸುತ್ತೇನೆ.
12047021a ಅತಿವಾಯ್ವಿಂದ್ರಕರ್ಮಾಣಮತಿಸೂರ್ಯಾಗ್ನಿತೇಜಸಮ್।
12047021c ಅತಿಬುದ್ಧೀಂದ್ರಿಯಾತ್ಮಾನಂ ತಂ ಪ್ರಪದ್ಯೇ ಪ್ರಜಾಪತಿಮ್।।
ಯಾರು ಇಂದ್ರ-ವಾಯುಗಳನ್ನೂ ಮೀರಿಸಿದ ಕಾರ್ಯಗಳನ್ನು ಮಾಡುವನೋ, ಯಾರ ತೇಜಸ್ಸು ಸೂರ್ಯನ ತೇಜಸ್ಸಿಗಿಂತಲೂ ಅಧಿಕವಾಗಿರುವುದೋ, ಇಂದ್ರಿಯ-ಮನಸ್ಸು-ಬುದ್ಧಿಗಳಿಗೂ ಯಾರು ಅತೀತನಾಗಿರುವನೋ ಆ ಪ್ರಜಾಪತಿಗೆ ಶರಣು ಹೋಗುತ್ತೇನೆ.
12047022a ಯಂ ವೈ ವಿಶ್ವಸ್ಯ ಕರ್ತಾರಂ ಜಗತಸ್ತಸ್ಥುಷಾಂ ಪತಿಮ್।
12047022c ವದಂತಿ ಜಗತೋಽಧ್ಯಕ್ಷಮಕ್ಷರಂ ಪರಮಂ ಪದಮ್।।
ಯಾರನ್ನು ವಿಶ್ವಕರ್ತಾರನೆಂದೂ, ಜಗತ್ತಿನಲ್ಲಿರುವುಗಳಿಗೆ ಒಡೆಯನೆಂದೂ, ಜಗತ್ತಿನ ಅಧ್ಯಕ್ಷನೆಂದೂ ಕರೆಯುತ್ತಾರೋ ಆ ಅಕ್ಷರ ಪರಮಪದನಿಗೆ ನಮಸ್ಕಾರಗಳು.
12047023a ಹಿರಣ್ಯವರ್ಣಂ ಯಂ ಗರ್ಭಮದಿತಿರ್ದೈತ್ಯನಾಶನಮ್।
12047023c ಏಕಂ ದ್ವಾದಶಧಾ ಜಜ್ಞೇ ತಸ್ಮೈ ಸೂರ್ಯಾತ್ಮನೇ ನಮಃ।।
ಅದಿತಿಯ ಗರ್ಭದಲ್ಲಿ ಉದಿಸಿ ದೈತ್ಯರನ್ನು ನಾಶಪಡಿಸಿದ, ಒಬ್ಬನಾಗಿದ್ದರೂ ಹನ್ನೆರಡಾಗಿ ಜನಿಸಿದ, ಚಿನ್ನದ ಕಾಂತಿಯನ್ನು ಹೊಂದಿರುವ ಸೂರ್ಯಾತ್ಮನಿಗೆ ನಮಸ್ಕರಿಸುತ್ತೇನೆ.
12047024a ಶುಕ್ಲೇ ದೇವಾನ್ಪಿತೃನ್ಕೃಷ್ಣೇ ತರ್ಪಯತ್ಯಮೃತೇನ ಯಃ।
12047024c ಯಶ್ಚ ರಾಜಾ ದ್ವಿಜಾತೀನಾಂ ತಸ್ಮೈ ಸೋಮಾತ್ಮನೇ ನಮಃ।।
ಶುಕ್ಲಪಕ್ಷಗಳಲ್ಲಿ ದೇವತೆಗಳನ್ನೂ ಕೃಷ್ಣಪಕ್ಷಗಳಲ್ಲಿ ಪಿತೃಗಳನ್ನೂ ಅಮೃತದಿಂದ ತೃಪ್ತಿಪಡಿಸುವ, ದ್ವಿಜಾತಿಯವರ ರಾಜ ಸೋಮಾತ್ಮನಿಗೆ ನಮಸ್ಕರಿಸುತ್ತೇನೆ.
12047025a ಮಹತಸ್ತಮಸಃ ಪಾರೇ ಪುರುಷಂ ಜ್ವಲನದ್ಯುತಿಮ್।
12047025c ಯಂ ಜ್ಞಾತ್ವಾ ಮೃತ್ಯುಮತ್ಯೇತಿ ತಸ್ಮೈ ಜ್ಞೇಯಾತ್ಮನೇ ನಮಃ।।
ಮಹಾ ತಪಸ್ಸಿನ ಆಚೆ ಬೆಳಕಿನಿಂದ ಪ್ರಜ್ಚಲಿಸುತ್ತಿರುವ ಯಾವ ಪುರುಷನನ್ನು ತಿಳಿದು ಮೃತ್ಯುವನ್ನು ಅತಿಕ್ರಮಿಸಬಹುದೋ ಆ ಜ್ಞೇಯಾತ್ಮನಿಗೆ ನಮಸ್ಕರಿಸುತ್ತೇನೆ.
12047026a ಯಂ ಬೃಹಂತಂ ಬೃಹತ್ಯುಕ್ಥೇ ಯಮಗ್ನೌ ಯಂ ಮಹಾಧ್ವರೇ।
12047026c ಯಂ ವಿಪ್ರಸಂಘಾ ಗಾಯಂತಿ ತಸ್ಮೈ ವೇದಾತ್ಮನೇ ನಮಃ।।
ಮಹಾ ಉಕ್ಥಯಜ್ಞದಲ್ಲಿ ಬೃಹಂತನೆಂದೂ, ಮಹಾಧ್ವರದಲ್ಲಿ ಅಗ್ನಿಯೆಂದೂ ಯಾರನ್ನು ವಿಪ್ರಸಂಘಗಳು ಹಾಡುತ್ತಾರೋ ಆ ವೇದಾತ್ಮನಿಗೆ ನಮಸ್ಕರಿಸುತ್ತೇನೆ.
12047027a ಋಗ್ಯಜುಃಸಾಮಧಾಮಾನಂ ದಶಾರ್ಧಹವಿರಾಕೃತಿಮ್।
12047027c ಯಂ ಸಪ್ತತಂತುಂ ತನ್ವಂತಿ ತಸ್ಮೈ ಯಜ್ಞಾತ್ಮನೇ ನಮಃ।।
ಋಗ್ಯಜುಃಸಾಮಗಳನ್ನೇ ಆಶ್ರಯಿಸಿ, ಐದು ವಿಧದ ಹವಿಸ್ಸು9ಗಳನ್ನು ಹೊಂದಿರುವ, ಗಾಯತ್ರಿಯೇ ಮೊದಲಾದ ಐದು ಛಂದಸ್ಸುಗಳೇ ತಂತುಗಳಾಗಿರುವ ಯಜ್ಞವನ್ನು ಯಾರಕುರಿತು ಮಾಡುತ್ತಾರೋ ಆ ಯಜ್ಞಾತ್ಮನಿಗೆ ನಮಸ್ಕರಿಸುತ್ತೇನೆ.
12047028a 10ಯಃ ಸುಪರ್ಣೋ ಯಜುರ್ನಾಮ ಚಂದೋಗಾತ್ರಸ್ತ್ರಿವೃಚ್ಚಿರಾಃ।
12047028c ರಥಂತರಬೃಹತ್ಯಕ್ಷಸ್ತಸ್ಮೈ ಸ್ತೋತ್ರಾತ್ಮನೇ ನಮಃ।।
ಯಜುಸ್ಸೆಂಬ ಹೆಸರನ್ನೂ, ಛಂಧಸ್ಸುಗಳೆಂಬ ಅಂಗಾಂಗಗಳನ್ನೂ, ಋಗ್ಯಜುಸ್ಸಾಮಾತ್ಮಿಕ ಯಜ್ಞವೆಂಬ ಶಿರಸ್ಸನ್ನೂ, ರಥಂತರ ಮತ್ತು ಬೃಹತ್ ಗಳನ್ನು ಪ್ರೀತಿವಾಕ್ಯಗಳನ್ನೂ ಹೊಂದಿರುವ ಸುಪರ್ಣ ಎನ್ನುವ ಸ್ತೋತ್ರಾತ್ಮನಿಗೆ ನಮಸ್ಕರಿಸುತ್ತೇನೆ.
12047029a ಯಃ ಸಹಸ್ರಸವೇ ಸತ್ರೇ ಜಜ್ಞೇ ವಿಶ್ವಸೃಜಾಮೃಷಿಃ।
12047029c ಹಿರಣ್ಯವರ್ಣಃ ಶಕುನಿಸ್ತಸ್ಮೈ ಹಂಸಾತ್ಮನೇ ನಮಃ।।
ಪ್ರಜಾಪತಿಗಳ ಸಹಸ್ರವರ್ಷಪರ್ಯಂತದ ಯಜ್ಞದಲ್ಲಿ ಸುವರ್ಣಮಯ ರೆಕ್ಕೆಗಳ ಪಕ್ಷಿಯ ರೂಪವನ್ನು ಧರಿಸಿ ಪ್ರಕಟವಾದ ಆ ಋಷಿ ಹಂಸಾತ್ಮನಿಗೆ ನಮಸ್ಕರಿಸುತ್ತೇನೆ.
12047030a ಪದಾಂಗಂ ಸಂಧಿಪರ್ವಾಣಂ ಸ್ವರವ್ಯಂಜನಲಕ್ಷಣಮ್।
12047030c ಯಮಾಹುರಕ್ಷರಂ ನಿತ್ಯಂ ತಸ್ಮೈ ವಾಗಾತ್ಮನೇ ನಮಃ।।
ಶ್ಲೋಕಪಾದಗಳ ಸಮೂಹಗಳೇ ಅವಯವಗಳಾಗಿರುವ, ಪದಗಳ ಸಂಧಿಗಳೇ ಗಿಣ್ಣುಗಳಾಗಿರುವ, ಸ್ವರಾಕ್ಷರ-ವ್ಯಂಜನಗಳೇ ಅಲಂಕಾರಪ್ರಾಯವಾಗಿರುವ ದಿವ್ಯಾಕ್ಷರ ಎಂಬ ಹೆಸರಿನಿಂದ ಕರೆಯಲ್ಪಡುವ ವಾಗಾತ್ಮನಿಗೆ ನಮಸ್ಕರಿಸುತ್ತೇನೆ.
12047031a 11ಯಶ್ಚಿನೋತಿ ಸತಾಂ ಸೇತುಮೃತೇನಾಮೃತಯೋನಿನಾ।
12047031c ಧರ್ಮಾರ್ಥವ್ಯವಹಾರಾಂಗೈಸ್ತಸ್ಮೈ ಸತ್ಯಾತ್ಮನೇ ನಮಃ।।
ಧರ್ಮಾರ್ಥವ್ಯವಹಾರಗಳೆಂಬ ಅಂಗಗಳಿಂದಲೂ, ಅಮೃತಯೋನಿ ಸತ್ಯದಿಂದಲೂ ಸತ್ಪುರುಷರು ಅಮರತ್ವವನ್ನು ಹೊಂದಲು ಸೇತುವೆಯನ್ನು ಕಲ್ಪಿಸಿಕೊಡುವ ಸತ್ಯಾತ್ಮನಿಗೆ ನಮಸ್ಕರಿಸುತ್ತೇನೆ.
12047032a ಯಂ ಪೃಥಗ್ಧರ್ಮಚರಣಾಃ ಪೃಥಗ್ಧರ್ಮಫಲೈಷಿಣಃ।
12047032c ಪೃಥಗ್ಧರ್ಮೈಃ ಸಮರ್ಚಂತಿ ತಸ್ಮೈ ಧರ್ಮಾತ್ಮನೇ ನಮಃ।।
ಪ್ರತ್ಯೇಕ ಧರ್ಮಾಚರಣೆಗಳುಳ್ಳವರು, ಪ್ರತ್ಯೇಕ ಧರ್ಮಗಳ ಫಲವನ್ನು ಅಪೇಕ್ಷಿಸುವವರು ಯಾರನ್ನು ಪ್ರತ್ಯೇಕ ಧರ್ಮಗಳಿಂದ ಅರ್ಚಿಸುತ್ತಾರೋ ಆ ಧರ್ಮಾತ್ಮನಿಗೆ ನಮಸ್ಕರಿಸುತ್ತೇನೆ.
12047033a 12ಯಂ ತಂ ವ್ಯಕ್ತಸ್ಥಮವ್ಯಕ್ತಂ ವಿಚಿನ್ವಂತಿ ಮಹರ್ಷಯಃ।
12047033c ಕ್ಷೇತ್ರೇ ಕ್ಷೇತ್ರಜ್ಞಮಾಸೀನಂ ತಸ್ಮೈ ಕ್ಷೇತ್ರಾತ್ಮನೇ ನಮಃ।।
ವ್ಯಕ್ತವಾದವುಗಳಲ್ಲಿ ಅವ್ಯಕ್ತನಾಗಿರುವ ಅಥವಾ ಬುದ್ಧಿಯಲ್ಲಿರುವ ಯಾವ ಕ್ಷೇತ್ರಜ್ಞನನ್ನು ಮಹರ್ಷಿಗಳು ಹುಡುಕುತ್ತಾರೆಯೋ ಆ ಕ್ಷೇತ್ರಾತ್ಮನಿಗೆ ನಮಸ್ಕರಿಸುತ್ತೇನೆ.
12047034a ಯಂ ದೃಗಾತ್ಮಾನಮಾತ್ಮಸ್ಥಂ13 ವೃತಂ ಷೋಡಶಭಿರ್ಗುಣೈಃ।
12047034c ಪ್ರಾಹುಃ ಸಪ್ತದಶಂ ಸಾಂಖ್ಯಾಸ್ತಸ್ಮೈ ಸಾಂಖ್ಯಾತ್ಮನೇ ನಮಃ।।
ಹದಿನಾರು ಗುಣ14ಗಳಿಂದ ಆವೃತನಾಗಿರುವ ಹದಿನೇಳನೆಯದಾಗಿ ಆತ್ಮಾ ಎಂದು ಸಾಂಖ್ಯರು ಕರೆಯುವ ಆ ಆತ್ಮಸ್ಥ ಸಾಂಖ್ಯಾತ್ಮನಿಗೆ ನಮಸ್ಕರಿಸುತ್ತೇನೆ.
12047035a ಯಂ ವಿನಿದ್ರಾ ಜಿತಶ್ವಾಸಾಃ ಸತ್ತ್ವಸ್ಥಾಃ ಸಂಯತೇಂದ್ರಿಯಾಃ।
12047035c ಜ್ಯೋತಿಃ ಪಶ್ಯಂತಿ ಯುಂಜಾನಾಸ್ತಸ್ಮೈ ಯೋಗಾತ್ಮನೇ ನಮಃ।।
ನಿದ್ರೆಯಿಲ್ಲದೇ ಶ್ವಾಸಗಳನ್ನು ನಿಯಂತ್ರಿಸಿ ಇಂದ್ರಿಯಗಳನ್ನು ಸಂಯಮದಲ್ಲಿಟ್ಟುಕೊಂಡು ಸತ್ತ್ವದಲ್ಲಿಯೇ ನೆಲೆಸಿಕೊಂಡು ಮನಸ್ಸನ್ನು ಬುದ್ಧಿಯಲ್ಲಿ ಲೀನಗೊಳಿಸಿದ ಯೋಗಿಗಳು ಯಾವ ಜ್ಯೋತಿಯನ್ನು ಕಾಣುತ್ತಾರೋ ಆ ಯೋಗಾತ್ಮನಿಗೆ ನಮಸ್ಕರಿಸುತ್ತೇನೆ.
12047036a ಅಪುಣ್ಯಪುಣ್ಯೋಪರಮೇ ಯಂ ಪುನರ್ಭವನಿರ್ಭಯಾಃ।
12047036c ಶಾಂತಾಃ ಸಂನ್ಯಾಸಿನೋ ಯಾಂತಿ ತಸ್ಮೈ ಮೋಕ್ಷಾತ್ಮನೇ ನಮಃ।।
ಪುಣ್ಯ-ಪಾಪಗಳು ಕ್ಷಯಹೊಂದಿದ ನಂತರ ಪುನಃ ಹುಟ್ಟು-ಸಾವುಗಳ ಭಯವಿಲ್ಲದ ಶಾಂತ ಸಂನ್ಯಾಸಿಗಳು ಯಾರನ್ನು ಸೇರುತ್ತಾರೆಯೋ ಆ ಮೋಕ್ಷಾತ್ಮನಿಗೆ ನಮಸ್ಕರಿಸುತ್ತೇನೆ.
12047037a ಯೋಽಸೌ ಯುಗಸಹಸ್ರಾಂತೇ ಪ್ರದೀಪ್ತಾರ್ಚಿರ್ವಿಭಾವಸುಃ।
12047037c ಸಂಭಕ್ಷಯತಿ ಭೂತಾನಿ ತಸ್ಮೈ ಘೋರಾತ್ಮನೇ ನಮಃ।।
ಸಹಸ್ರಯುಗಗಳ ಅಂತ್ಯದಲ್ಲಿ ಧಗಧಗಿಸುವ ಜ್ವಾಲೆಗಳೊಂದಿಗೆ ಪ್ರಳಯಾಗ್ನಿಯ ರೂಪವನ್ನು ಹೊಂದಿ ಎಲ್ಲವನ್ನೂ ಭಕ್ಷಿಸುವ ಘೋರಾತ್ಮನಿಗೆ ನಮಸ್ಕರಿಸುತ್ತೇನೆ.
12047038a ಸಂಭಕ್ಷ್ಯ ಸರ್ವಭೂತಾನಿ ಕೃತ್ವಾ ಚೈಕಾರ್ಣವಂ ಜಗತ್।
12047038c ಬಾಲಃ ಸ್ವಪಿತಿ ಯಶ್ಚೈಕಸ್ತಸ್ಮೈ ಮಾಯಾತ್ಮನೇ ನಮಃ।।
ಇರುವ ಎಲ್ಲವನ್ನೂ ಭಕ್ಷಿಸಿ ಜಗತ್ತನ್ನು ಜಲಮಯವನ್ನಾಗಿಸಿ ಅದರ ಮೇಲೆ ಬಾಲಕನಾಗಿ ಮಲಗುವ ಆ ಮಾಯಾತ್ಮನಿಗೆ ನಮಸ್ಕರಿಸುತ್ತೇನೆ.
12047039a 15ಸಹಸ್ರಶಿರಸೇ ತಸ್ಮೈ ಪುರುಷಾಯಾಮಿತಾತ್ಮನೇ।
12047039c ಚತುಃಸಮುದ್ರಪರ್ಯಾಯಯೋಗನಿದ್ರಾತ್ಮನೇ ನಮಃ।।
ನಾಲ್ಕು ಸಮುದ್ರಗಳನ್ನೂ ಒಂದುಗೂಡಿಸಿ ಹಾಸಿಗೆಯನ್ನಾಗಿಸಿಕೊಂಡು ಅದರ ಮೇಲೆ ಮಲಗುವ ಆ ಸಹಸ್ರಶಿರಸ, ಪುರುಷ, ಅಮಿತಾತ್ಮ, ಯೋಗನಿದ್ರಾತ್ಮನಿಗೆ ನಮಸ್ಕರಿಸುತ್ತೇನೆ.
12047040a ಅಜಸ್ಯ ನಾಭಾವಧ್ಯೇಕಂ ಯಸ್ಮಿನ್ವಿಶ್ವಂ ಪ್ರತಿಷ್ಠಿತಮ್।
12047040c ಪುಷ್ಕರಂ ಪುಷ್ಕರಾಕ್ಷಸ್ಯ ತಸ್ಮೈ ಪದ್ಮಾತ್ಮನೇ ನಮಃ।।
ಹುಟ್ಟೇ ಇಲ್ಲದ ಮತ್ತು ಇಲ್ಲದಿರುವಂತಾಗದ ಯಾರ ಮೇಲೆ ಈ ವಿಶ್ವವು ಪ್ರತಿಷ್ಠಿತವಾಗಿದೆಯೋ ಆ ಪುಷ್ಕರ ಪುಷ್ಕರಾಕ್ಷ ಪದ್ಮಾತ್ಮನಿಗೆ ನಮಸ್ಕರಿಸುತ್ತೇನೆ.
12047041a ಯಸ್ಯ ಕೇಶೇಷು ಜೀಮೂತಾ ನದ್ಯಃ ಸರ್ವಾಂಗಸಂಧಿಷು।
12047041c ಕುಕ್ಷೌ ಸಮುದ್ರಾಶ್ಚತ್ವಾರಸ್ತಸ್ಮೈ ತೋಯಾತ್ಮನೇ ನಮಃ।।
ಯಾರ ಕೇಶರಾಶಿಗಳಲ್ಲಿ ಮೇಘಗಳಿವೆಯೋ, ಯಾರ ಸರ್ವಾಂಗಸಂಧಿಗಳಲ್ಲಿ ನದಿಗಳಿವೆಯೋ, ಮತ್ತು ಯಾರ ಹೊಟ್ಟೆಯಲ್ಲಿ ನಾಲ್ಕೂ ಸಮುದ್ರಗಳಿವೆಯೋ ಆ ತೋಯಾತ್ಮನಿಗೆ ನಮಸ್ಕರಿಸುತ್ತೇನೆ.
12047042a 16ಯುಗೇಷ್ವಾವರ್ತತೇ ಯೋಽಂಶೈರ್ದಿನರ್ತ್ವನಯಹಾಯನೈಃ।
12047042c ಸರ್ಗಪ್ರಲಯಯೋಃ ಕರ್ತಾ ತಸ್ಮೈ ಕಾಲಾತ್ಮನೇ ನಮಃ।।
ಯಾರು ಯುಗಯುಗದಲ್ಲಿಯೂ ಯೋಗಮಾಯೆಯಿಂದ ಅವತರಿಸುವನೋ, ಮಾಸ-ಋತು-ಆಯನ-ಸಂವತ್ಸರಗಳು ಉರುಳಿದಂತೆ ಸೃಷ್ಟಿ-ಲಯಗಳನ್ನ ನಡೆಸುತ್ತಾನೋ ಆ ಕಾಲಾತ್ಮನಿಗೆ ನಮಸ್ಕರಿಸುತ್ತೇನೆ.
12047043a ಬ್ರಹ್ಮ ವಕ್ತ್ರಂ ಭುಜೌ ಕ್ಷತ್ರಂ ಕೃತ್ಸ್ನಮೂರೂದರಂ ವಿಶಃ।
12047043c ಪಾದೌ ಯಸ್ಯಾಶ್ರಿತಾಃ ಶೂದ್ರಾಸ್ತಸ್ಮೈ ವರ್ಣಾತ್ಮನೇ ನಮಃ।।
ಯಾರಿಗೆ ಬ್ರಾಹ್ಮಣನೇ ಮುಖನಾಗಿರುವನೋ, ಸಮಸ್ತ ಕ್ಷತ್ರಿಯರೂ ಭುಜಗಳಾಗಿರುವರೋ, ವೈಶ್ಯರು ಹೊಟ್ಟೆ-ತೊಡೆಗಳಾಗಿರುವರೋ ಮತ್ತು ಯಾರ ಪಾದಗಳಲ್ಲಿ ಶೂದ್ರರು ಆಶ್ರಿತರಾಗಿರುವರೋ ಆ ವರ್ಣಾತ್ಮನಿಗೆ ನಮಸ್ಕರಿಸುತ್ತೇನೆ.
12047044a ಯಸ್ಯಾಗ್ನಿರಾಸ್ಯಂ ದ್ಯೌರ್ಮೂರ್ಧಾ ಖಂ ನಾಭಿಶ್ಚರಣೌ ಕ್ಷಿತಿಃ।
12047044c ಸೂರ್ಯಶ್ಚಕ್ಷುರ್ದಿಶಃ ಶ್ರೋತ್ರೇ ತಸ್ಮೈ ಲೋಕಾತ್ಮನೇ ನಮಃ।।
ಯಾರಿಗೆ ಅಗ್ನಿಯು ಮುಖನಾಗಿರುವನೋ, ಸ್ವರ್ಗವು ತಲೆಯಾಗಿರುವುದೋ, ಆಕಾಶವು ನಾಭಿಯಾಗಿರುವುದೋ, ಭೂಮಿಯು ಪಾದಗಳಾಗಿರುವುದೋ, ಸೂರ್ಯನೇ ಕಣ್ಣಾಗಿರುವನೋ, ಮತ್ತು ದಿಕ್ಕುಗಳೇ ಕಿವಿಗಳಾಗಿರುವವೋ ಆ ಲೋಕಾತ್ಮನಿಗೆ ನಮಸ್ಕರಿಸುತ್ತೇನೆ.
12047045a ವಿಷಯೇ ವರ್ತಮಾನಾನಾಂ ಯಂ ತಂ ವೈಶೇಷಿಕೈರ್ಗುಣೈಃ।
12047045c ಪ್ರಾಹುರ್ವಿಷಯಗೋಪ್ತಾರಂ ತಸ್ಮೈ ಗೋಪ್ತ್ರಾತ್ಮನೇ ನಮಃ।।
ವೈಶೇಷಿಕ ಗುಣಗಳಿಂದ ಆಕರ್ಷಿತರಾಗಿ ವಿಷಯಸುಖಗಳಲ್ಲಿಯೇ ಇರುವವರನ್ನು ವಿಷಯಗಳಿಂದ ರಕ್ಷಿಸುವವನೆಂದು ಯಾರನ್ನು ಕರೆಯುತ್ತಾರೋ ಆ ಗೋಪ್ತ್ರಾತ್ಮನಿಗೆ ನಮಸ್ಕರಿಸುತ್ತೇನೆ.
12047046a ಅನ್ನಪಾನೇಂಧನಮಯೋ ರಸಪ್ರಾಣವಿವರ್ಧನಃ।
12047046c ಯೋ ಧಾರಯತಿ ಭೂತಾನಿ ತಸ್ಮೈ ಪ್ರಾಣಾತ್ಮನೇ ನಮಃ।।
ಅನ್ನ-ಪಾನಗಳೆಂಬ ಇಂಧನರೂಪನಾಗಿ ರಸ-ಪ್ರಾಣಗಳನ್ನು ವೃದ್ಧಿಪಡಿಸುತ್ತಾ ಯಾರು ಪ್ರಾಣಿಗಳನ್ನು ಧರಿಸಿರುವನೋ ಆ ಪ್ರಾಣಾತ್ಮನಿಗೆ ನಮಸ್ಕರಿಸುತ್ತೇನೆ.
12047047a ಪರಃ ಕಾಲಾತ್ಪರೋ ಯಜ್ಞಾತ್ಪರಃ ಸದಸತೋಶ್ಚ ಯಃ।
12047047c ಅನಾದಿರಾದಿರ್ವಿಶ್ವಸ್ಯ ತಸ್ಮೈ ವಿಶ್ವಾತ್ಮನೇ ನಮಃ।।
ಯಾರು ಕಾಲಾತೀತನಾಗಿ, ಯಜ್ಞಾತೀತನಾಗಿ, ಪರಕ್ಕಿಂತಲೂ ಅತ್ಯಂತ ಶ್ರೇಷ್ಠನಾಗಿ, ಆದ್ಯಂತರಹಿತನಾಗಿ, ವಿಶ್ವಕ್ಕೇ ಆದಿಭೂತನಾಗಿರುವನೋ ಆ ವಿಶ್ವಾತ್ಮನಿಗೆ ನಮಸ್ಕರಿಸುತ್ತೇನೆ.
12047048a 17ಯೋ ಮೋಹಯತಿ ಭೂತಾನಿ ಸ್ನೇಹರಾಗಾನುಬಂಧನೈಃ।
12047048c ಸರ್ಗಸ್ಯ ರಕ್ಷಣಾರ್ಥಾಯ ತಸ್ಮೈ ಮೋಹಾತ್ಮನೇ ನಮಃ।।
ಯಾರು ಸೃಷ್ಟಿಪರಂಪರೆಯ ರಕ್ಷಣಾರ್ಥವಾಗಿ ಎಲ್ಲ ಪ್ರಾಣಿಗಳನ್ನೂ ಸ್ನೇಹಪಾಶಗಳ ಬಂಧನಗಳಿಂದ ವಿಮೋಹಗೊಳಿಸುತ್ತಾನೆಯೋ ಆ ಮೋಹಾತ್ಮನಿಗೆ ನಮಸ್ಕರಿಸುತ್ತೇನೆ.
12047049a ಆತ್ಮಜ್ಞಾನಮಿದಂ ಜ್ಞಾನಂ ಜ್ಞಾತ್ವಾ ಪಂಚಸ್ವವಸ್ಥಿತಮ್।
12047049c ಯಂ ಜ್ಞಾನಿನೋಽಧಿಗಚ್ಚಂತಿ ತಸ್ಮೈ ಜ್ಞಾನಾತ್ಮನೇ ನಮಃ।।
ಈ ಆತ್ಮಜ್ಞಾನವು ಅನ್ನಮಯ-ಪ್ರಾಣಮಯ-ಮನೋಮಯ-ವಿಜ್ಞಾನಮಯ-ಆನಂದಮಯಗಳೆಂಬ ಐದು ಕೋಶಗಳಲ್ಲಿರುವುದೆನ್ನುವುದನ್ನು ತಿಳಿದು ಜ್ಞಾನಯೋಗದ ಮೂಲಕ ಯೋಗಿಗಳು ಯಾರನ್ನು ಸಾಕ್ಷಾತ್ಕರಿಸಿಕೊಳ್ಳುವರೋ ಆ ಜ್ಞಾನಾತ್ಮನಿಗೆ ನಮಸ್ಕರಿಸುತ್ತೇನೆ.
12047050a ಅಪ್ರಮೇಯಶರೀರಾಯ ಸರ್ವತೋಽನಂತಚಕ್ಷುಷೇ।
12047050c ಅಪಾರಪರಿಮೇಯಾಯ ತಸ್ಮೈ ಚಿಂತ್ಯಾತ್ಮನೇ18 ನಮಃ।।
ಯಾರು ಅಳತೆಗೆ ವಿಷಯವಾಗದೇ ಇರುವ ಶರೀರವನ್ನು ಹೊಂದಿರುವನೋ, ಯಾರ ಬುದ್ಧಿರೂಪೀ ಕಣ್ಣುಗಳು ಸರ್ವತ್ರ ವ್ಯಾಪಿಸಿರುವವೋ, ಯಾರಲ್ಲಿ ಅನಂತ ವಿಷಯಗಳ ಸಮಾವೇಶವಿರುವುದೋ, ಯಾರ ತುದಿಯನ್ನು ಕಾಣಲು ಸಾಧ್ಯವಿಲ್ಲವೋ ಆ ಚಿಂತ್ಯಾತ್ಮನಿಗೆ ನಮಸ್ಕರಿಸುತ್ತೇನೆ.
12047051a ಜಟಿನೇ ದಂಡಿನೇ ನಿತ್ಯಂ ಲಂಬೋದರಶರೀರಿಣೇ।
12047051c ಕಮಂಡಲುನಿಷಂಗಾಯ ತಸ್ಮೈ ಬ್ರಹ್ಮಾತ್ಮನೇ ನಮಃ।।
ಜಟೆಯನ್ನೂ-ದಂಡವನ್ನೂ ಧರಿಸಿರುವ, ಲಂಬೋದರ ಶರೀರೀ, ಯಾವಾಗಲೂ ಕಮಂಡಲುವನ್ನು ಹಿಡಿದಿರುವ ಬ್ರಹ್ಮಾತ್ಮನಿಗೆ ನಮಸ್ಕರಿಸುತ್ತೇನೆ.
12047052a ಶೂಲಿನೇ ತ್ರಿದಶೇಶಾಯ ತ್ರ್ಯಂಬಕಾಯ ಮಹಾತ್ಮನೇ।
12047052c ಭಸ್ಮದಿಗ್ಧೋರ್ಧ್ವಲಿಂಗಾಯ ತಸ್ಮೈ ರುದ್ರಾತ್ಮನೇ ನಮಃ।।
ಶೂಲಿಯೂ, ತ್ರಿದಶೇಶನೂ, ತ್ಯಂಬಕನೂ, ಮಹಾತ್ಮನೂ, ಭಸ್ಮದಿಗ್ಧನೂ, ಊರ್ಧ್ವಲಿಂಗನೂ ಆದ ರುದ್ರಾತ್ಮನಿಗೆ ನಮಸ್ಕರಿಸುತ್ತೇನೆ.
12047053a 19ಪಂಚಭೂತಾತ್ಮಭೂತಾಯ20 ಭೂತಾದಿನಿಧನಾತ್ಮನೇ। 12047053c ಅಕ್ರೋಧದ್ರೋಹಮೋಹಾಯ ತಸ್ಮೈ ಶಾಂತಾತ್ಮನೇ ನಮಃ।।
ಪ್ರಾಣಿಗಳಲ್ಲಿ ಪಂಚಭೂತಾತ್ಮನಾಗಿರುವ, ಪ್ರಾಣಿಗಳ ಹುಟ್ಟು-ಸಾವುಗಳಿಗೆ ಕಾರಣನಾಗಿರುವ, ಯಾರಲ್ಲಿ ಕ್ರೋಧ-ದ್ರೋಹ-ಮೋಹಗಳಿಲ್ಲವೋ ಆ ಶಾಂತಾತ್ಮನಿಗೆ ನಮಸ್ಕರಿಸುತ್ತೇನೆ.
12047054a ಯಸ್ಮಿನ್ಸರ್ವಂ ಯತಃ ಸರ್ವಂ ಯಃ ಸರ್ವಂ ಸರ್ವತಶ್ಚ ಯಃ।
12047054c ಯಶ್ಚ ಸರ್ವಮಯೋ ನಿತ್ಯಂ ತಸ್ಮೈ ಸರ್ವಾತ್ಮನೇ ನಮಃ।।
ಯಾರಲ್ಲಿ ಸರ್ವವೂ ಇರುವವೋ, ಯಾರಿಂದ ಈ ಎಲ್ಲವೂ ಸೃಷ್ಟಿಸಲ್ಪಟ್ಟಿರುವವೋ, ಯಾರು ಎಲ್ಲದರಲ್ಲಿಯೂ ಇರುವನೋ, ಯಾರು ಎಲ್ಲ ಕಡೆಗಳಲ್ಲಿಯೂ ಇರುವನೋ ಆ ಸರ್ವಮಯ ಸರ್ವಾತ್ಮನಿಗೆ ನಮಸ್ಕರಿಸುತ್ತೇನೆ.
12047055a ವಿಶ್ವಕರ್ಮನ್ನಮಸ್ತೇಽಸ್ತು ವಿಶ್ವಾತ್ಮನ್ವಿಶ್ವಸಂಭವ।
12047055c ಅಪವರ್ಗೋಽಸಿ ಭೂತಾನಾಂ ಪಂಚಾನಾಂ ಪರತಃ ಸ್ಥಿತಃ।।
ವಿಶ್ವವನ್ನು ರಚಿಸಿರುವವನೇ! ವಿಶ್ವಾತ್ಮನೇ! ವಿಶ್ವಸಂಭವನೇ! ನಿನಗೆ ನಮಸ್ಕಾರ! ಪಂಚಭೂತಗಳಿಗೂ ಅತೀತನಾದ ನೀನು ಪ್ರಾಣಿಗಳಿಗೆ ಮೋಕ್ಷದಾಯಕನಾಗಿರುವೆ!
12047056a ನಮಸ್ತೇ ತ್ರಿಷು ಲೋಕೇಷು ನಮಸ್ತೇ ಪರತಸ್ತ್ರಿಷು।
12047056c ನಮಸ್ತೇ ದಿಕ್ಷು ಸರ್ವಾಸು ತ್ವಂ ಹಿ ಸರ್ವಪರಾಯಣಮ್।।
ಮೂರುಲೋಕಗಳಲ್ಲಿಯೂ ವ್ಯಾಪಿಸಿರುವ ನಿನಗೆ ನಮಸ್ಕಾರ! ಈ ಮೂರು ಲೋಕಗಳ ಆಚೆಯೂ ಇರುವ ನಿನಗೆ ನಮಸ್ಕಾರ! ಎಲ್ಲ ದಿಕ್ಕುಗಳಲ್ಲಿಯೂ ವ್ಯಾಪಿಸಿರುವ ನಿನಗೆ ನಮಸ್ಕಾರ! ಸರ್ವರ ಪರಾಯಣನಾಗಿರುವ ನಿನಗೆ ನಮಸ್ಕಾರ!
12047057a ನಮಸ್ತೇ ಭಗವನ್ವಿಷ್ಣೋ ಲೋಕಾನಾಂ ಪ್ರಭವಾಪ್ಯಯ।
12047057c ತ್ವಂ ಹಿ ಕರ್ತಾ ಹೃಷೀಕೇಶ ಸಂಹರ್ತಾ ಚಾಪರಾಜಿತಃ।।
ಭಗವನ್ ವಿಷ್ಣೋ! ಲೋಕಗಳ ಉತ್ಪತ್ತಿ-ವಿನಾಶಗಳ ಕರ್ತನೇ! ನಿನಗೆ ನಮಸ್ಕಾರ! ಹೃಷೀಕೇಶ! ನೀನೇ ಸೃಷ್ಟಿಕರ್ತನೂ ಸಂಹಾರಕರ್ತನೂ ಆಗಿರುವೆ. ಯಾರಿಂದಲೂ ನಿನಗೆ ಪರಾಜಯವಿಲ್ಲ!
12047058a ತೇನ ಪಶ್ಯಾಮಿ ತೇ ದಿವ್ಯಾನ್ಭಾವಾನ್ಹಿ ತ್ರಿಷು ವರ್ತ್ಮಸು।
12047058c ತಚ್ಚ ಪಶ್ಯಾಮಿ ತತ್ತ್ವೇನ ಯತ್ತೇ ರೂಪಂ ಸನಾತನಮ್।।
ಮೂರು ಲೋಕಗಳಲ್ಲಿಯೂ ವ್ಯಾಪ್ತವಾಗಿರುವ ನಿನ್ನ ದಿವ್ಯತೆ ಭಾವಗಳನ್ನು ನಾನು ಕಾಣಲಾರೆನು. ಆದರೆ ತತ್ತ್ವದೃಷ್ಟಿಯಿಂದ ನಿನ್ನ ಸನಾತನ ರೂಪವನ್ನು ಕಾಣುತ್ತಿದ್ದೇನೆ.
12047059a ದಿವಂ ತೇ ಶಿರಸಾ ವ್ಯಾಪ್ತಂ ಪದ್ಭ್ಯಾಂ ದೇವೀ ವಸುಂಧರಾ।
12047059c ವಿಕ್ರಮೇಣ ತ್ರಯೋ ಲೋಕಾಃ ಪುರುಷೋಽಸಿ ಸನಾತನಃ।।
ಆಕಾಶವು ನಿನ್ನ ಶಿರಸ್ಸಿನಿಂದ ವ್ಯಾಪ್ತವಾಗಿದೆ. ದೇವೀ ವಸುಂಧರೆಯು ನಿನ್ನ ಪಾದಗಳಿಂದ ವ್ಯಾಪ್ತಳಾಗಿದ್ದಾಳೆ. ಮೂರು ಲೋಕಗಳೂ ನಿನ್ನ ವಿಕ್ರಮದಿಂದ ವ್ಯಾಪ್ತವಾಗಿದೆ. ನೀನು ಸನಾತನ ಪುರುಷ!
12047060a 21ಅತಸೀಪುಷ್ಪಸಂಕಾಶಂ ಪೀತವಾಸಸಮಚ್ಯುತಮ್। 12047060c ಯೇ ನಮಸ್ಯಂತಿ ಗೋವಿಂದಂ ನ ತೇಷಾಂ ವಿದ್ಯತೇ ಭಯಮ್।।
ಅಗಸೇ ಹೂವಿನ ಕಾಂತಿಯನ್ನು ಹೊಂದಿರುವ, ಪೀತವಾಸಸ, ಅಚ್ಯುತ ಗೋವಿಂದನನ್ನು ಯಾರು ನಮಸ್ಕರಿಸುತ್ತಾರೋ ಅವರಿಗೆ ಭಯವೆನ್ನುವುದೇ ತಿಳಿಯದು.
12047061a 22ಯಥಾ ವಿಷ್ಣುಮಯಂ ಸತ್ಯಂ ಯಥಾ ವಿಷ್ಣುಮಯಂ ಹವಿಃ। 12047061c ಯಥಾ ವಿಷ್ಣುಮಯಂ ಸರ್ವಂ ಪಾಪ್ಮಾ ಮೇ ನಶ್ಯತಾಂ ತಥಾ।।
ಸತ್ಯವು ಹೇಗೆ ವಿಷ್ಣುಮಯವಾಗಿರುವುದೋ, ಜಗತ್ತು ಹೇಗೆ ವಿಷ್ಣುಮಯವಾಗಿರುವುದೋ, ಸರ್ವವೂ ಹೇಗೆ ವಿಷ್ಣುಮಯವಾಗಿರುವುದೋ ಹಾಗೆ ಈ ಸತ್ಯದ ಪ್ರಭಾವದಿಂದ ನನ್ನ ಸಕಲ ಪಾಪಗಳೂ ನಾಶಹೊಂದಲಿ.
12047062a ತ್ವಾಂ ಪ್ರಪನ್ನಾಯ ಭಕ್ತಾಯ ಗತಿಮಿಷ್ಟಾಂ ಜಿಗೀಷವೇ।
12047062c ಯಚ್ಚ್ರೇಯಃ ಪುಂಡರೀಕಾಕ್ಷ ತದ್ಧ್ಯಾಯಸ್ವ ಸುರೋತ್ತಮ।।
ಸುರೋತ್ತಮ! ಪುಂಡರೀಕಾಕ್ಷ! ನಿನ್ನನ್ನೇ ಅನನ್ಯಶರಣನಾಗಿ ಶರಣುಹೊಂದಿರುವ ಭಕ್ತನಾದ ಅಭೀಷ್ಟ ಗತಿಯನ್ನು ಇಚ್ಛಿಸುತ್ತಿರುವ ನನಗೆ ಯಾವುದು ಶ್ರೇಯಸ್ಕರವೆನ್ನುವುದನ್ನು ನೀನೇ ಯೋಚಿಸಿ ನಿರ್ಧರಿಸು!
12047063a ಇತಿ ವಿದ್ಯಾತಪೋಯೋನಿರಯೋನಿರ್ವಿಷ್ಣುರೀಡಿತಃ।
12047063c ವಾಗ್ಯಜ್ಞೇನಾರ್ಚಿತೋ ದೇವಃ ಪ್ರೀಯತಾಂ ಮೇ ಜನಾರ್ದನಃ।।
ಈ ರೀತಿ ವಿದ್ಯೆ-ತಪಸ್ಸುಗಳಿಗೆ ಜನ್ಮಸ್ಥಾನನಾದ ಅಯೋನಿಜ ಭಗವಂತ ವಿಷ್ಣುವು ನನ್ನಿಂದ ಸ್ತುತಿಸಲ್ಪಟ್ಟು ದೇವ ಜನಾರ್ದನನು ನನ್ನಮೇಲೆ ಪ್ರಸನ್ನನಾಗಲಿ!”
12047064a 23ಏತಾವದುಕ್ತ್ವಾ ವಚನಂ ಭೀಷ್ಮಸ್ತದ್ಗತಮಾನಸಃ। 12047064c ನಮ ಇತ್ಯೇವ ಕೃಷ್ಣಾಯ ಪ್ರಣಾಮಮಕರೋತ್ತದಾ।।
ಈ ಮಾತನ್ನು ಹೇಳಿ ಕೃಷ್ಣನಲ್ಲಿಯೇ ಮನಸ್ಸಿಟ್ಟು ಭೀಷ್ಮನು “ನಮಃ ಕೃಷ್ಣಾಯ!” ಎಂದು ಹೇಳಿ ಪ್ರಣಾಮ ಮಾಡಿದನು.
12047065a ಅಭಿಗಮ್ಯ ತು ಯೋಗೇನ ಭಕ್ತಿಂ ಭೀಷ್ಮಸ್ಯ ಮಾಧವಃ।
12047065c ತ್ರೈಕಾಲ್ಯದರ್ಶನಂ ಜ್ಞಾನಂ ದಿವ್ಯಂ ದಾತುಂ ಯಯೌ ಹರಿಃ।।
ತನ್ನ ಯೋಗಬಲದಿಂದ ಭೀಷ್ಮನ ಭಕ್ತಿಯನ್ನು ತಿಳಿದುಕೊಂಡ ಮಾಧವ ಹರಿಯು ಅವನಿಗೆ ತ್ರಿಕಾಲದೃಷ್ಟಿಯ ದಿವ್ಯ ಜ್ಞಾನವನ್ನು ನೀಡಲು ಹೊರಟನು.
12047066a ತಸ್ಮಿನ್ನುಪರತೇ ಶಬ್ದೇ ತತಸ್ತೇ ಬ್ರಹ್ಮವಾದಿನಃ।
12047066c ಭೀಷ್ಮಂ ವಾಗ್ಭಿರ್ಬಾಷ್ಪಕಂಠಾಸ್ತಮಾನರ್ಚುರ್ಮಹಾಮತಿಮ್।।
ಭೀಷ್ಮನ ಸ್ತೋತ್ರವು ನಿಲ್ಲಲು ಸುತ್ತಲೂ ನೆರೆದಿದ್ದ ಬ್ರಹ್ಮವಾದಿಗಳು ಆನಂದಭಾಷ್ಪದಿಂದ ಕೂಡಿದವರಾಗಿ ಗದ್ಗದಧ್ವನಿಯಲ್ಲಿ ಭೀಷ್ಮನನ್ನು ಪ್ರಶಂಸಿಸಿದರು.
12047067a ತೇ ಸ್ತುವಂತಶ್ಚ ವಿಪ್ರಾಗ್ರ್ಯಾಃ ಕೇಶವಂ ಪುರುಷೋತ್ತಮಮ್।
12047067c ಭೀಷ್ಮಂ ಚ ಶನಕೈಃ ಸರ್ವೇ ಪ್ರಶಶಂಸುಃ ಪುನಃ ಪುನಃ।।
ಕೇಶವ ಪುರುಷೋತ್ತಮನನ್ನು ಸ್ತುತಿಸುತ್ತಿದ್ದ ಆ ವಿಪ್ರಾಗ್ರ್ಯರು ಎಲ್ಲರೂ ಮೆಲ್ಲನೆ ಪುನಃ ಪುನಃ ಭೀಷ್ಮನನ್ನು ಪ್ರಶಂಸಿಸಿದರು.
12047068a ವಿದಿತ್ವಾ ಭಕ್ತಿಯೋಗಂ ತು ಭೀಷ್ಮಸ್ಯ ಪುರುಷೋತ್ತಮಃ।
12047068c ಸಹಸೋತ್ಥಾಯ ಸಂಹೃಷ್ಟೋ ಯಾನಮೇವಾನ್ವಪದ್ಯತ।।
ಭೀಷ್ಮನ ಭಕ್ತಿಯೋಗವನ್ನು ಅರಿತ ಪುರುಷೋತ್ತಮನು ಸಂಹೃಷ್ಟನಾಗಿ ತಕ್ಷಣವೇ ಮೇಲೆದ್ದು ರಥವನ್ನೇರಿ ಕುಳಿತುಕೊಂಡನು.
12047069a ಕೇಶವಃ ಸಾತ್ಯಕಿಶ್ಚೈವ ರಥೇನೈಕೇನ ಜಗ್ಮತುಃ।
12047069c ಅಪರೇಣ ಮಹಾತ್ಮಾನೌ ಯುಧಿಷ್ಠಿರಧನಂಜಯೌ।।
ಕೇಶವ-ಸಾತ್ಯಕಿಯರು ಒಂದು ರಥದಲ್ಲಿ ಮತ್ತು ಇನ್ನೊಂದು ರಥದಲ್ಲಿ ಮಹಾತ್ಮ ಯುಧಿಷ್ಠಿರ-ಧನಂಜಯರು ಹೊರಟರು.
12047070a ಭೀಮಸೇನೋ ಯಮೌ ಚೋಭೌ ರಥಮೇಕಂ ಸಮಾಸ್ಥಿತೌ।
12047070c ಕೃಪೋ ಯುಯುತ್ಸುಃ ಸೂತಶ್ಚ ಸಂಜಯಶ್ಚಾಪರಂ ರಥಮ್।।
ಭೀಮಸೇನ ಮತ್ತು ನಕುಲ-ಸಹದೇವರು ಒಂದೇ ರಥದಲ್ಲಿ ಕುಳಿತಿದ್ದರು. ಕೃಪ, ಯುಯುತ್ಸು, ಮತ್ತು ಸೂತ ಸಂಜಯರು ಇನ್ನೊಂದು ರಥದಲ್ಲಿದ್ದರು.
12047071a ತೇ ರಥೈರ್ನಗರಾಕಾರೈಃ ಪ್ರಯಾತಾಃ ಪುರುಷರ್ಷಭಾಃ।
12047071c ನೇಮಿಘೋಷೇಣ ಮಹತಾ ಕಂಪಯಂತೋ ವಸುಂಧರಾಮ್।।
ಆ ಪುರುಷರ್ಷಭರು ನಗರಾಕಾರದ ರಥಗಳಲ್ಲಿ ಕುಳಿತು ರಥಚಕ್ರಗಳ ಘೋಷದಿಂದ ಭೂಮಿಯನ್ನೇ ನಡುಗಿಸುತ್ತಾ ಪ್ರಯಾಣಮಾಡಿದರು.
12047072a ತತೋ ಗಿರಃ ಪುರುಷವರಸ್ತವಾನ್ವಿತಾ ದ್ವಿಜೇರಿತಾಃ ಪಥಿ ಸುಮನಾಃ ಸ ಶುಶ್ರುವೇ।
12047072c ಕೃತಾಂಜಲಿಂ ಪ್ರಣತಮಥಾಪರಂ ಜನಂ ಸ ಕೇಶಿಹಾ ಮುದಿತಮನಾಭ್ಯನಂದತ।।
ಆಗ ಪುರುಷೋತ್ತಮನು ಮಾರ್ಗದಲ್ಲಿ ಅನೇಕ ಬ್ರಾಹ್ಮಣರು ಸುಮನಸ್ಕರಾಗಿ ಸ್ತುತಿಸುತ್ತಿದ್ದುದನ್ನು ಕೇಳಿದನು. ಕೇಶಿಹಂತಕ ಕೃಷ್ಣನು ಆನಂದತುಂದಿಲನಾಗಿ ಕೈಮುಗಿದು ಪ್ರಣಾಮಮಾಡುತ್ತಿದ್ದ ಇತರ ಜನರನ್ನು ಅಭಿನಂದಿಸಿದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ಭೀಷ್ಮಸ್ತವರಾಜೇ ಸಪ್ತಚತ್ವಾರಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಭೀಷ್ಮಸ್ತವರಾಜ ಎನ್ನುವ ನಲ್ವತ್ತೇಳನೇ ಅಧ್ಯಾಯವು.
-
ಶುಚಿಂ ಶುಚಿಪದಂ ಎನ್ನುವ ಪಾಠಾಂತರವಿದೆ (ಭಾರತ ದರ್ಶನ) ↩︎
-
ಭಾರತದರ್ಶನದಲ್ಲಿ ಇದರ ಮೊದಲು ಈ ಕೆಳಗಿನ ಮೂರು ಶ್ಲೋಕಗಳು ಸೇರಿಕೊಂಡಿವೆ: (೧) ಅನಾದ್ಯಂತಂ ಪರಂ ಬ್ರಹ್ಮ ನ ದೇವಾನರ್ಷಯೋ ವಿದುಃ। ಏಕೋ ಯಂ ವೇದ ಭಗವಾನ್ ಧಾತಾ ನಾರಾಯಣೋ ಹರಿಃ।। ಅರ್ಥಾತ್: ಆದಿ-ಅಂತ್ಯಗಳಿಲ್ಲದಿರುವ, ಪ್ರರಬ್ರಹ್ಮ ಸ್ವರೂಪನನ್ನು ದೇವತೆಗಳಾಗಲೀ ಋಷಿಗಳಾಗಲಿ ತಿಳಿದುಕೊಂಡಿಲ್ಲ. ಎಲ್ಲರ ಧಾರಣೆ-ಪೋಷಣೆಗಳನ್ನೂ ಮಾಡುವ ನಾರಾಯಣ ಅಥವಾ ಹರಿಯು ಏಕಮಾತ್ರನು. (೨) ನಾರಾಣಾದೃಷಿಗಣಾಸ್ತಥಾ ಸಿದ್ಧಮಹೋರಗಾಃ। ದೇವಾ ದೇವರ್ಷಯಶ್ಚೈವ ಯಂ ವಿದುಃ ಪರಮವ್ಯಯಂ।। ಅರ್ಥಾತ್: ಆ ನಾರಾಯಣನಿಂದಲೇ ಋಷಿಗಣಗಳು, ಸಿದ್ಧರೂ, ಮಹಾಸರ್ಪಗಳೂ, ದೇವತೆಗಳೂ, ಮತ್ತು ದೇವರ್ಷಿಗಳೂ ಆವಿರ್ಭವಿಸಿರುತ್ತಾರೆ ಮತ್ತು ಅವನನ್ನು ಪರಮ ಅವ್ಯಯನೆಂದು ತಿಳಿದುಕೊಂಡಿರುತ್ತಾರೆ. (೩) ದೇವದಾನವಗಂಧರ್ವಾ ಯಕ್ಷರಾಕ್ಷಸಪನ್ನಗಾಃ। ಯಂ ನ ಜಾನಂತಿ ಕೋ ಹ್ಯೇಷ ಕುತೋ ವಾ ಭಗವಾನಿತಿ।। ಅರ್ಥಾತ್: ದೇವ-ದಾನವ ಗಂಧರ್ವರಾಗಲೀ, ಯಕ್ಷ-ರಾಕ್ಷಸ-ಪನ್ನಗಗಳಾಗಲೀ ಈ ಭಗವಂತನು ಯಾರು ಮತ್ತು ಎಲ್ಲಿಂದ ಬಂದನು ಎನ್ನುವದನ್ನು ಅರಿತಿಲ್ಲ. ↩︎
-
ಭಾರತದರ್ಶನದಲ್ಲಿ ಈ ಶ್ಲೋಕದ ಮೊದಲು ಇನ್ನೊಂದು ಶ್ಲೋಕವಿದೆ: ಯಸ್ಮಿನ್ನಿತ್ಯಂ ತಪಸ್ತಪ್ತಂ ಯದಂಗೇಷ್ವನುತಿಷ್ಠತಿ। ಸರ್ವಾತ್ಮಾ ಸರ್ವವಿತ್ಸರ್ವಃ ಸರ್ವಜ್ಞಃ ಸರ್ವಭಾವನಃ।। ಅರ್ಥತ್: ಯಾರ ಅನುಗ್ರಹಕ್ಕಾಗಿ ನಿರಂತರ ತಪಸ್ಸನ್ನಾಚರಿಸುವರೋ, ಯಾರು ಎಲ್ಲರ ಹೃದಯಗಳಲ್ಲಿ ವಿರಾಜಮಾನನಾಗಿರುವನೋ, ಯಾರು ಸಮಸ್ತರ ಆತ್ಮಸ್ವರೂಪನೋ, ಅಂತಹ ಸರ್ವಜ್ಞ, ಸರ್ವಭಾವನ, ಸರ್ವನೂ ಆಗಿರುವವನನ್ನು ಶರಣುಹೋಗುತ್ತೇನೆ. ↩︎
-
ಕರ್ಮಾಂಗಗಳಿಗೆ ಸಂಬಂಧಿಸಿದ ವೇದ ಮಂತ್ರಗಳು ↩︎
-
ಮಂತ್ರಾರ್ಥಗಳನ್ನು ವಿವರಿಸುವ ಬ್ರಾಹ್ಮಣವೇ ಇತ್ಯಾದಿಗಳು ↩︎
-
ದೇವತಾದಿಗಳನ್ನು ಸ್ತುತಿಸುವ ಮಂತ್ರಗಳು ↩︎
-
ಜ್ಯೇಷ್ಠ ಸಾಮ ↩︎
-
ಪರಮಾತ್ಮ-ಜೀವ-ಮನಸ್ಸು-ಅಹಂಕಾರಗಳೆಂಬ ನಾಲ್ಕು ತತ್ತ್ವಗಳಿಂದ ವಾಸುದೇವ-ಸಂಕರ್ಷಣ-ಪ್ರದ್ಯುಮ್ನ-ಅನಿರುದ್ಧರೆಂಬ ನಾಲ್ಕು ರೂಪಗಳನ್ನು ತಾಳಿರುವವನು ↩︎
-
ಧಾನಾಕರಂಭ-ಪರಿವಾಪ-ಪುರೋಡಾಶ-ಪಯಸ್ಯ ಇವು ಐದು ವಿಧದ ಹವಿಸ್ಸುಗಳು. ↩︎
-
ಇದಕ್ಕೆ ಮೊದಲು ಭಾರತ ದರ್ಶನದಲ್ಲಿ ಈ ಶ್ಲೋಕವಿದೆ: ಚತುರ್ಭಿಶ್ಚ ಚತುರ್ಭಿಶ್ಚ ದ್ವಾಭ್ಯಾಂ ಪಂಚಭಿರೇವ ಚ। ಹೂಯತೇ ಚ ಪುನರ್ದ್ವಾಭ್ಯಾಂ ತಸ್ಮೈ ಹೋಮಾತ್ಮನೇ ನಮಃ।। ಅರ್ಥಾತ್: ಆಶ್ರಾವಯ ಎಂಬ ನಾಲ್ಕು ಅಕ್ಷರಗಳು, ಅಸ್ತುಶ್ರೌಷಟ್ ಎಂಬ ನಾಲ್ಕು ಅಕ್ಷರಗಳು, ಯಜ ಎಂಬ ಎರಡಕ್ಷರಗಳು, ಯೇ ಯಜಾಮಹೇ ಎಂಬ ಐದು ಅಕ್ಷರಗಳು, ವಷಟ್ ಎಂಬ ಎರಡಕ್ಷರಗಳು – ಒಟ್ಟು ಹದಿನೇಳು ಅಕ್ಷರಗಳ ಮಂತ್ರದಿಂದ ಹೋಮಮಾಡಲ್ಪಡುವ ಹೋಮಾತ್ಮನಿಗೆ ನಮಸ್ಕರಿಸತ್ತೇನ. ↩︎
-
ಭಾರತದರ್ಶನದಲ್ಲಿ ಇದಕ್ಕೆ ಮೊದಲು ಈ ಎರಡು ಶ್ಲೋಕಗಳಿವೆ: (೧) ಯಜ್ಞಾಂಗೋ ಯೋ ವರಾಹೋ ವೈ ಭೂತ್ವಾ ಗಾಮುಜ್ಜಹಾರ ಹ। ಲೋಕತ್ರಯಹಿತಾರ್ಥಾಯ ತಸ್ಮೈ ವೀರಾತ್ಮನೇ ನಮಃ।। ಅರ್ಥಾತ್: ಯಾರು ಮೂರುಲೋಕಗಳ ಹಿತಾರ್ಥವಾಗಿ ಯಜ್ಞಮಯ ವರಾಹರೂಪವನ್ನು ಧರಿಸಿ ಪೃಥ್ವಿಯನ್ನು ರಸಾತಲದಿಂದ ಮೇಲಕ್ಕೆತ್ತಿದನೋ ಆ ವೀರ್ಯಾತ್ಮನಿಗೆ ನಮಸ್ಕರಿಸುತ್ತೇನೆ. (೨) ಯಃ ಶೇತೇ ಯಾಗಮಾಸ್ಥಾಯ ಪರ್ಯಂಕೇ ನಾಗಭೂಷಿತೇ। ಫಣಾಸಹಸ್ರರಚಿತೇ ತಸ್ಮೈ ನಿದ್ರಾತ್ಮನೇ ನಮಃ।। ಅರ್ಥಾತ್: ಯಾರು ಯೋಗಮಾಯೆಯನ್ನಾಶ್ರಯಿಸಿ ಶೇಷನಾಗನ ಸಾವಿರ ಹೆಡೆಗಳಿಂದ ರಚಿತವಾದ ದಿವ್ಯಮಂಚದ ಮೇಲೆ ಪವಡಿಸಿರುವನೋ ಆ ನಿದ್ರಾತ್ಮನಿಗೆ ನಮಸ್ಕರಿಸುತ್ತೇನೆ. ↩︎
-
ಭಾರತದರ್ಶನದಲ್ಲಿ ಇದಕ್ಕೆ ಮೊದಲು ಈ ಶ್ಲೋಕವಿದೆ: ಯತಃ ಸರ್ವೇ ಪ್ರಸೂಯಂತೇ ಹ್ಯನಂಗಾತ್ಮಾಂಗದೇಹಿನಃ। ಉನ್ಮಾದಃ ಸರ್ವಭೂತಾನಾಂ ತಸ್ಮೈ ಕಾಮಾತ್ಮನೇ ನಮಃ।। ಅರ್ಥಾತ್: ಯಾವ ಅನಂಗದೇಹಿಯಿಂದ ಎಲ್ಲರೂ ಸಂತಾನವನ್ನು ಪಡೆಯುತ್ತಾರೋ ಆ ಸರ್ವಪ್ರಾಣಿಗಳನ್ನೂ ಉನ್ಮತ್ತರನ್ನಾಗಿಸುವ ಕಾಮಾತ್ಮನಿಗೆ ನಮಸ್ಕರಿಸುತ್ತೇನೆ. ↩︎
-
ಯಂ ತ್ರಿಧಾತ್ಮಾನಮಾತ್ಮಸ್ಥಂ ಅರ್ಥಾತ್ ಆತ್ಮನಲ್ಲಿರುವ ಸತ್ವ-ರಜಸ್ಸು-ತಮೋ ಎಂಬ ಮೂರು ಗುಣಗಳಿಂದ ಕೂಡಿದವನು ಎನ್ನುವ ಪಾಠಂತರವಿದೆ (ಭಾರತ ದರ್ಶನ). ↩︎
-
ಹನ್ನೊಂದು ಇಂದ್ರಿಯಗಳು (ಐದು ಜ್ಞಾನೇಂದ್ರಿಯಗಳು (ಶ್ರೋತ್ರ, ತ್ವಕ್ಕು, ಜಕ್ಷುಸು, ಜಿಹ್ವಾ, ಮತ್ತು ನಾಸಿಕ); ಐದು ಕರ್ಮೇಂದ್ರಿಯಗಳು (ವಾಕ್ಕು, ಪಾಣಿ, ಪಾದ, ಪಾಯು ಮತ್ತು ಉಪಸ್ಥ); ಮತ್ತು ಮನಸ್ಸು) ಮತ್ತು ಪಂಚಭೂತಗಳು (ಪೃಥ್ವೀ, ಆಪ್, ತೇಜಸ್ಸು, ವಾಯು, ಆಕಾಶ) – ಒಟ್ಟು ಹದಿನಾರು. ↩︎
-
ಇದಕ್ಕೆ ಮೊದಲು ಭಾರತದರ್ಶನದಲ್ಲಿ ಈ ಶ್ಲೋಕವಿದೆ: ತದ್ಯಸ್ಯ ನಾಭ್ಯಾಂ ಸಂಭೂತಂ ಯಸ್ಮಿನ್ವಿಶ್ವಂ ಪ್ರತಿಷ್ಠಿತಂ। ಪುಷ್ಕರೇ ಪುಷ್ಕರಾಕ್ಷಸ್ಯ ತಸ್ಮೈ ಪದ್ಮಾತ್ಮನೇ ನಮಃ।। ಅರ್ಥಾತ್: ಯಾರ ನಾಭಿಯಿಂದ ಕಮಲವು ಹುಟ್ಟಿತೋ ಮತ್ತು ಆ ಕಮಲದಲ್ಲಿಯೇ ವಿಶ್ವವು ಪ್ರತಿಷ್ಠಿತವಾಗಿರುವುದೋ ಆ ಪುಷ್ಕರಾಕ್ಷ ಪದ್ಮಾತ್ಮನಿಗೆ ನಮಸ್ಕರಿಸುತ್ತೇನೆ. ↩︎
-
ಇದಕ್ಕೆ ಮೊದಲು ಭಾರತದರ್ಶನದಲ್ಲಿ ಈ ಐದು ಶ್ಲೋಕಗಳಿವೆ: (೧) ಯಸ್ಮಾತ್ಸರ್ವಾಃ ಪ್ರಸೂಯಂತೇ ಸರ್ಗಪ್ರಲಯವಿಕ್ರಿಯಾಃ। ಯಸ್ಮಿಂಶ್ಚೈವ ಪ್ರಲೀಯಂತೇ ತಸ್ಮೈ ಹೇತ್ವಾತ್ಮನೇ ನಮಃ।। ಅರ್ಥಾತ್: ಸೃಷ್ಟಿ-ಪ್ರಳಯ ರೂಪದ ಸಮಸ್ತ ವಿಕಾರಗಳೂ ಯಾರಿಂದ ಹುಟ್ಟುತ್ತವೆಯೋ, ಮತ್ತು ಅಂತ್ಯದಲ್ಲಿ ಯಾರಲ್ಲಿ ಲೀನಗೊಳ್ಳುತ್ತವೆಯೋ ಆ ಹೇತ್ವಾತ್ಮ(ಎಲ್ಲಕ್ಕೂ ಕಾರಣನಾದವ) ನಿಗೆ ನಮಸ್ಕರಿಸುತ್ತೇನೆ. (೨) ಯೋ ನಿಷಣ್ಣೋ ಭವೇದ್ರಾತ್ರೌ ದಿವಾ ಭವತಿ ವಿಷ್ಠಿತಃ। ಇಷ್ಟಾನಿಷ್ಟಸ್ಯ ಚ ದ್ರಷ್ಟಾ ತಸ್ಮೈ ದ್ರಷ್ಟಾತ್ಮನೇ ನಮಃ।। ಅರ್ಥಾತ್: ಯಾರು ರಾತ್ರಿಯಲ್ಲಿ ಪ್ರಾಣಿಗಳೆಲ್ಲವೂ ಮಲಗಿ ನಿದ್ರಿಸುತ್ತಿರುವಾಗ ಎಲ್ಲರ ಹೃದಯಗಳಲ್ಲಿಯೂ ಇರುವ ತಾನು ಮಾತ್ರ ಜಾಗ್ರತನಾಗಿಯೇ ಇರುವನೋ, ಯಾರು ಹಗಲಿನಲ್ಲಿ ಪ್ರಾಣಿಗಳ ಕರ್ಮಗಳಿಗೆ ಸಾಕ್ಷಿಯಾಗಿರುವನೋ ಮತ್ತು ಯಾರು ಸದಾಕಾಲ ಪ್ರಾಣಿಗಳ ಇಷ್ಟಾನಿಷ್ಟಗಳನ್ನು ಗಮನಿಸುತ್ತಿರುವನೋ ಆ ದ್ರಷ್ಟಾತ್ಮನಿಗೆ ನಮಸ್ಕರಿಸುತ್ತೇನೆ. (೩) ಅಕುಂಠಂ ಸರ್ವಕಾರ್ಯೇಷು ಧರ್ಮಕಾರ್ಯಾರ್ಥಮುದ್ಯತಂ। ವೈಕುಂಠಂ ಸ್ಯ ಚ ತದ್ರೂಪಂ ತಸ್ಮೈ ಕಾರ್ಯಾತ್ಮನೇ ನಮಃ।। ಅರ್ಥಾತ್: ಅಡಗಡೆಗಳಿಲ್ಲದೇ ಸರ್ವಕಾರ್ಯಗಳನ್ನು ಮಾಡುವ, ಧರ್ಮಾರ್ಥಕಾರ್ಯಗಳಲ್ಲಿಯೇ ತೊಡಗಿರುವ, ಮತ್ತು ವೈಕುಂಠರೂಪನಾಗಿರುವ ಕಾರ್ಯಾತ್ಮನಿಗೆ ನಮಸ್ಕರಿಸುತ್ತೇನೆ. (೪) ತ್ರಿಃಸಪ್ತಕೃತ್ವೋ ಯಃ ಕ್ಷತ್ರಂ ಧರ್ಮವ್ಯುತ್ಕ್ರಾಂತಗೌರವಂ। ಕ್ರುದ್ಧೋ ನಿಜಘ್ನೇ ಸಮರೇ ತಸ್ಮೈ ಶೌರ್ಯಾತ್ಮನೇ ನಮಃ।। ಅರ್ಥಾತ್: ಕ್ರುದ್ಧನಾಗಿ ಯಾರು ಧರ್ಮಗೌರವವನ್ನು ಉಲ್ಲಂಘಿಸಿದ ಕ್ಷತ್ರಿಯ ಸಮೂಹವನ್ನು ಇಪ್ಪತ್ತೊಂದು ಬಾರಿ ಸಂಹರಿಸಿದನೋ ಆ ಶೌರ್ಯಾತ್ಮನಿಗೆ ನಮಸ್ಕರಿಸುತ್ತೇನೆ. (೫) ವಿಭಜ್ಯ ಪಂಚದಾತ್ಮಾನಂ ವಾಯುರ್ಭೂತ್ವಾ ಶರೀರಗಃ। ಯಶ್ಚೇಷ್ಟಯತಿ ಭೂತಾನಿ ತಸ್ಮೈ ವಾಯ್ವಾತ್ಮನೇ ನಮಃ।। ಅರ್ಥಾತ್: ಯಾರ ವಾಯುಸ್ವರೂಪವನ್ನ ತಾಳಿ ಎಲ್ಲ ಪ್ರಾಣಿಗಳ ಶರೀರಗಳನ್ನೂ ಪ್ರವೇಶಿಸಿ ತನ್ನನ್ನು ಪ್ರಾಣ-ಅಪಾನ-ವ್ಯಾನ-ಉದಾನ-ಸಮಾನಗಳೆಂದು ಐದು ಪ್ರಕಾರವಾಗಿ ವಿಭಾಗಿಸಿಕೊಂಡು ಕ್ರಿಯಾಶೀಲರನ್ನಾಗಿ ಮಾಡುತ್ತಾನೋ ಆ ವಾಯ್ವಾತ್ಮನಿಗೆ ನಮಸ್ಕರಿಸುತ್ತೇನೆ. ↩︎
-
ಇದಕ್ಕೆ ಮೊದಲು ಭಾರತದರ್ಶನದಲ್ಲಿ ಈ ನಾಲ್ಕು ಶ್ಲೋಕಗಳಿವೆ: (೧) ಪ್ರಾಣಾನಾಂ ಧಾರಣಾರ್ಥಾಯ ಯೋಽನ್ನಂ ಭುಂಕ್ತೇ ಚತುರ್ವಿಧಮ್। ಅಂತರ್ಭೂತಃ ಪಚತ್ಯಗ್ನಿಸ್ತಸ್ಮೈ ಪಾಕಾತ್ಮನೇ ನಮಃ।। ಪ್ರಾಣಗಳನ್ನು ಧರಿಸಿರಲು ಚತುರ್ವಿಧ ಆಹಾರವನ್ನು ಸೇವಿಸುವ ಮತ್ತು ತಾನೇ ಪ್ರಾಣಿಗಳಲ್ಲಿ ಜಠರಾಗ್ನಿಯಾಗಿ ಆಹಾರವನ್ನು ಪಚನಮಾಡುವ ಆ ಪಾಕಾತ್ಮನಿಗೆ ನಮಸ್ಕರಿಸುತ್ತೇನೆ. (೨) ಪಿಂಗೇಕ್ಷಣಸಟಂ ಯಸ್ಯ ರೂಪಂ ದಂಷ್ಟ್ರಾನಖಾಯುಧಂ। ದಾನವೇಂದ್ರಾಂತಕರಣಂ ತಸ್ಮೈ ದೃಪ್ತಾತ್ಮನೇ ನಮಃ।। ಅರ್ಥಾತ್: ಯಾರ ಕಣ್ಣು-ಕೇಸರಗಳು ಹಳದೀ ಬಣ್ಣದ್ದಾಗಿತ್ತೋ, ಯಾರ ಆಯುಧಗಳು ಕೋರೆದಾಡೆ-ಉಗುರುಗಳಾಗಿದ್ದವೋ ಮತ್ತು ಯಾರು ದಾನವೇಂದ್ರ ಹಿರಣ್ಯಕಶಿಪುವನ್ನು ಅಂತ್ಯಗೊಳಿಸಿದನೋ ಆ ದೃಪ್ತಾತ್ಮನಿಗೆ ನಮಸ್ಕರಿಸುತ್ತೇನೆ. (೩) ಯಂ ನ ದೇವಾ ನ ಗಂಧರ್ವಾ ನ ದೈತ್ಯಾ ನ ಚ ದಾನವಾಃ। ತತ್ತ್ವತೋ ಹಿ ವಿಜಾನಂತಿ ತಸ್ಮೈ ಸೂಕ್ಷಾತ್ಮನೇ ನಮಃ।। ಅರ್ಥಾತ್: ಯಾರನ್ನು ದೇವತೆಗಳಾಗಲೀ, ಗಂಧರ್ವರಾಗಲೀ, ದೈತ್ಯರಾಗಲೀ, ದಾನವರಾಗಲೀ ತತ್ತ್ವತಃ ಅರಿಯಲಾರರೋ ಆ ಸೂಕ್ಷ್ಮಾತ್ಮನಿಗೆ ನಮಸ್ಕರಿಸುತ್ತೇನೆ. (೪) ರಸಾತಲಗತಃ ಶ್ರೀಮಾನನಂತೋ ಭಗವಾನ್ವಿಭುಃ। ಜಗದ್ಧಾರಯತೇ ಕೃತ್ಸಂ ತಸ್ಮೈ ವೀರಾತ್ಮನೇ ನಮಃ।। ಅರ್ಥಾತ್: ರಸಾತಲಕ್ಕೆ ಹೋಗಿ ಇಡೀ ಜಗತ್ತನ್ನೂ ಹೊತ್ತಿರುವ ಶ್ರೀಮಾನ್ ಅನಂತ, ಭಗವಾನ್, ವಿಭು ವೀರಾತ್ಮನಿಗೆ ನಮಸ್ಕರಿಸುತ್ತೇನೆ. ↩︎
-
ದಿವ್ಯಾತ್ಮನೇ ನಮಃ ಎನ್ನುವ ಪಾಠಾಂತರವಿದೆ. ↩︎
-
ಭಾರತದರ್ಶನದಲ್ಲಿ ಇದಕ್ಕೆ ಮೊದಲು ಈ ಶ್ಲೋಕವಿದೆ: ಚಂದ್ರಾರ್ಧಕೃತಶೀರ್ಷಾಯ ವ್ಯಾಲಯಜ್ಞೋಪವಿತಿನೇ। ಪಿನಾಕಶೂಲಹಸ್ತಾಯ ತಸ್ಮೈ ಉಗ್ರಾತ್ಮನೇ ನಮಃ।। ಅರ್ಥಾತ್: ಯಾರ ತಲೆಯಲ್ಲಿ ಅರ್ಧಚಂದ್ರನ ಮುಕುಟವಿರುವುದೋ, ಯಾರು ಸರ್ಪವನ್ನೇ ಯಜ್ಞೋಪವೀತವನ್ನಾಗಿ ಧರಿಸಿರುವನೋ, ಯಾರ ಕೈಯಲ್ಲಿ ಪಿನಾಕವೂ ತ್ರಿಶೂಲವೂ ಇರುವವೋ ಆ ಉಗ್ರಾತ್ಮನಿಗೆ ನಮಸ್ಕರಿಸುತ್ತೇನೆ. ↩︎
-
ಸರ್ವಭೂತಾತ್ಮಭೂತಾಯ ಎಂಬ ಪಾಠಾಂತರವಿದೆ. ↩︎
-
ಭಾರತದರ್ಶನದಲ್ಲಿ ಇದಕ್ಕೆ ಮೊದಲು ಈ ಶ್ಲೋಕವಿದೆ: ದಿಶೋ ಭುಜಾ ರವಿಶ್ಚಕ್ಷುರ್ವೀರ್ಯೇ ಶುಕ್ರಃ ಪ್ರತಿಷ್ಠಿತಃ। ಸಪ್ತ ಮಾರ್ಗಾನಿರುದ್ಧಾಸ್ತೇ ವಾಯೋರಮಿತತೇಜಸಃ।। ಅರ್ಥಾತ್: ದಿಕ್ಕುಗಳೇ ನಿನ್ನ ಭುಜಗಳು. ಸೂರ್ಯನೇ ನಿನ್ನ ಕಣ್ಣುಗಳಲ್ಲಿದ್ದಾನೆ. ಶುಕ್ರನು ನಿನ್ನ ವೀರ್ಯದಲ್ಲಿದ್ದಾನೆ. ಅಮಿತತೇಜಸ್ವೀ ವಾಯುವಿನ ಏಳು ಮಾರ್ಗಗಳನ್ನೂ ನೀನು ತಡೆದಿರುವೆ. ↩︎
-
ಭಾರತದರ್ಶನದಲ್ಲಿ ಇದಕ್ಕೆ ಮೊದಲು ಈ ಐದು ಶ್ಲೋಕಗಳಿವೆ: (೧) ಏಕೋಽಪಿ ಕೃಷ್ಣಸ್ಯ ಕೃತಃ ಪ್ರಣಾಮೋ। ದಶಾಶ್ವಮೇಧಾವಭೃಥೇನ ತುಲ್ಯಃ।। ದಶಾಶ್ವಮೇಧೀ ಪುನರೇತಿ ಜನ್ಮ। ಕೃಷ್ಣಪ್ರಣಾಮೀ ನ ಪುನರ್ಭವಾಯ।। ಅರ್ಥಾತ್: ಕೃಷ್ಣನಿಗೆ ಮಾಡಿದ ಒಂದೇ ಪ್ರಣಾಮವು ಹತ್ತು ಅಶ್ವಮೇಧಯಾಗಗಳ ಅವಭೃಥಸ್ನಾನವನ್ನು ಮಾಡಿದ ಫಲಕ್ಕೆ ಸಮನಾಗಿದೆ. ಆದರೆ ಒಂದೇ ವ್ಯತ್ಯಾಸ. ಹತ್ತು ಅಶ್ವಮೇಧಯಾಗಗಳನ್ನು ಮಾಡಿದವನಿಗೆ ಪುನರ್ಜನ್ಮವು ತಪ್ಪಿದ್ದಲ್ಲ. ಕೃಷ್ಣನಿಗೆ ಪ್ರಣಾಮ ಮಾಡಿದವನಿಗೆ ಪುನರ್ಜನ್ಮವೇ ಇಲ್ಲ. (೨) ಕೃಷ್ಣವ್ರತಾಃ ಕೃಷ್ಣ ಮನುಸ್ಮರಂತೋ। ರಾತ್ರೌ ಚ ಕೃಷ್ಣಂ ಪುನರುತ್ಥಿತಾ ಯೇ।। ತೇ ಕೃಷ್ಣದೇಹಾಃ ಪ್ರವಿಶಂತಿ ಕೃಷ್ಣ। ಮಾಜ್ಯಂ ಯಥಾಮಂತ್ರಹುತಂ ಹುತಾಶೇ।। ಅರ್ಥಾತ್: ಕೃಷ್ಣನನ್ನೇ ವ್ರತವನ್ನಾಗಿಟ್ಟುಕೊಂಡಿರುವ, ಕೃಷ್ಣನನ್ನೇ ಧ್ಯಾನಿಸುತ್ತಿರುವ, ರಾತ್ರಿಯಲ್ಲಿ ಕೃಷ್ಣ ಮತ್ತು ಬೆಳಿಗ್ಗೆ ಎದ್ದಾಗ ಕೃಷ್ಣ ಎಂದು ಸ್ಮರಿಸಿಕೊಳ್ಳುತ್ತಿರುವವರು ಕೃಷ್ಣನ ದೇಹವನ್ನೇ ಪ್ರವೇಶಿಸುತ್ತಾರೆ. ಮಂತ್ರಪೂರ್ವಕವಾಗಿ ಅಗ್ನಿಯಲ್ಲಿ ಹೋಮಮಾಡಲ್ಪಟ್ಟ ಆಜ್ಯವು ಯಜ್ಞೇಶ್ವರನಲ್ಲಿಯೇ ಲೀನವಾಗುವಂತೆ ಕೃಷ್ಣನಲ್ಲಿಯೇ ಲೀನರಾಗುತ್ತಾರೆ. (೩) ನಮೋ ನರಕಸಂತ್ರಾಸರಕ್ಷಾಮಂಡಲಕಾರಿಣೇ। ಸಂಸಾರನಿಮ್ನಗಾವರ್ತತರಿಕಾಷ್ಠಾಯ ವಿಷ್ಣವೇ।। ಅರ್ಥಾತ್: ನರಕಭಯಪೀಡಿತರಿಗೆ ರಕ್ಷಾಮಂಡಲವನ್ನು ರಚಿಸುವವನೇ! ಸಂಸಾರವೆಂಬ ಹೊಳೆಯಲ್ಲಿ ಸುಳಿಯನ್ನು ದಾಟಲಿಚ್ಛಿಸುವವರಿಗೆ ತೆಪ್ಪದ ರೂಪದಲ್ಲಿರುವವನೇ! ಮಹಾವಿಷ್ಣುವೇ! ನಿನಗೆ ನಮಸ್ಕರಿಸುತ್ತೇನೆ. (೪) ನಮೋ ಬ್ರಹ್ಮಣ್ಯದೇವಾಯ ಗೋಬ್ರಾಹ್ಮಣಹಿತಕರಾಯ ಚ। ಜಗದ್ಧಿತಾಯ ಕೃಷ್ಣಾಯ ಗೋವಿಂದಾಯ ನಮೋ ನಮಃ।। ಅರ್ಥಾತ್: ಬ್ರಹ್ಮಕ್ಕೆ (ತಪಸ್ಸು, ವೇದ, ಬ್ರಾಹ್ಮಣ ಮತ್ತು ಜ್ಞಾನಗಳಿಗೆ) ಹಿತನಾಗಿರುವ, ಜಗತ್ತಿಗೆ ಹಿತವನ್ನುಂಟುಮಾಡಲು ಗೋ-ಬ್ರಾಹ್ಮಣರಿಗೆ ಹಿತವನ್ನುಂಟುಮಾಡುವ ಕೃಷ್ಣ ಗೋವಿಂದನಿಗೆ ನಮಸ್ಕರಿಸುತ್ತೇನೆ. (೫) ಪ್ರಾಣಕಾಂತಾರಪಾಥೇಯಂ ಸಂಸಾರೋಚ್ಛೇದಭೇಷಜಂ। ದುಃಖಶೋಕಪರಿತ್ರಾಣಂ ಹರಿರಿತ್ಯಕ್ಷರದ್ವಯಂ।। ಅರ್ಥಾತ್: ಹರಿ ಎಂಬ ಎರಡಕ್ಷರವು ಪ್ರಾಣಪ್ರಯಾಣಸಮಯದಲ್ಲಿ ನಡುಗಾಡಿನ ಬುತ್ತಿಯ ರೂಪದಲ್ಲಿರುತ್ತದೆ. ಸಂಸಾರವೆಂಬ ರೋಗದ ನಿವಾರಣೆಗೆ ಔಷಧಪ್ರಾಯವಾಗಿದೆ. ಸಕಲವಿಧದ ದುಃಖ-ಶೋಕಗಳನ್ನೂ ಪರಿಹರಿಸಿ ರಕ್ಷಣೆ ನೀಡುತ್ತದೆ. ↩︎
-
ಭಾರತದರ್ಶನದಲ್ಲಿ ಇದಕ್ಕೆ ಮೊದಲು ಈ ಶ್ಲೋಕವಿದೆ: ನಾರಾಯಣಃ ಪರಂ ಬ್ರಹ್ಮ ನಾರಾಯಣಪರಂ ತಪಃ। ನಾರಾಯಣಃ ಪರೋ ದೇವಃ ಸರ್ವಂ ನಾರಾಯಣಂ ಸದಾ।। ಅರ್ಥಾತ್: ನಾರಾಯಣನೇ ಪರಬ್ರಹ್ಮನು. ನಾರಾಯಣನೇ ಪರಮ ತಪಸ್ಸು. ನಾರಾಯಣನೇ ಎಲ್ಲ ದೇವತೆಗಳಲ್ಲಿಯೂ ಶ್ರೇಷ್ಠ ದೇವನು. ಸರ್ವವೂ ನಾರಾಯಣನೇ!” ↩︎