ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ರಾಜಧರ್ಮ ಪರ್ವ
ಅಧ್ಯಾಯ 46
ಸಾರ
ಮಹಾಪುರುಷಸ್ತವ (1-35).
12046001 ಯುಧಿಷ್ಠಿರ ಉವಾಚ।
12046001a ಕಿಮಿದಂ ಪರಮಾಶ್ಚರ್ಯಂ ಧ್ಯಾಯಸ್ಯಮಿತವಿಕ್ರಮ।
12046001c ಕಚ್ಚಿಲ್ಲೋಕತ್ರಯಸ್ಯಾಸ್ಯ ಸ್ವಸ್ತಿ ಲೋಕಪರಾಯಣ।।
ಯುಧಿಷ್ಠಿರನು ಹೇಳಿದನು: “ಅಮಿತವಿಕ್ರಮ! ಪರಮಾಶ್ಚರ್ಯ! ನೀನು ಯಾರಕುರಿತು ಧ್ಯಾನಮಗ್ನನಾಗಿರುವೆ? ಲೋಕಪರಾಯಣ! ಮೂರು ಲೋಕಗಳೂ ಕುಶಲವಾಗಿವೆ ತಾನೆ?
12046002a ಚತುರ್ಥಂ ಧ್ಯಾನಮಾರ್ಗಂ ತ್ವಮಾಲಂಬ್ಯ ಪುರುಷೋತ್ತಮ।
12046002c ಅಪಕ್ರಾಂತೋ ಯತೋ ದೇವ ತೇನ ಮೇ ವಿಸ್ಮಿತಂ ಮನಃ।।
ಪುರುಷೋತ್ತಮ! ದೇವ! ನಾಲ್ಕನೆಯ ಧ್ಯಾನಮಾರ್ಗವನ್ನು ಆಶ್ರಯಿಸಿ ಅಪಕ್ರಾಂತನಾಗಿರುವ ನೀನು ನನ್ನ ಮನಸ್ಸನು ವಿಸ್ಮಯಗೊಳಿಸಿರುವೆ!
12046003a ನಿಗೃಹೀತೋ ಹಿ ವಾಯುಸ್ತೇ ಪಂಚಕರ್ಮಾ ಶರೀರಗಃ।
12046003c ಇಂದ್ರಿಯಾಣಿ ಚ ಸರ್ವಾಣಿ ಮನಸಿ ಸ್ಥಾಪಿತಾನಿ ತೇ।।
ಶರೀರದಲ್ಲಿ ಪಂಚಕರ್ಮಗಳನ್ನು ಮಾಡುವ ವಾಯುವನ್ನು ನೀನು ನಿಗ್ರಹಿಸಿರುವೆ. ನಿನ್ನ ಇಂದ್ರಿಯಗಳೆಲ್ಲವನ್ನೂ ಮನಸ್ಸಿನಲ್ಲಿ ಸ್ಥಾಪಿಸಿಕೊಂಡಿರುವೆ.
12046004a ಇಂದ್ರಿಯಾಣಿ ಮನಶ್ಚೈವ ಬುದ್ಧೌ ಸಂವೇಶಿತಾನಿ ತೇ।
12046004c ಸರ್ವಶ್ಚೈವ ಗಣೋ ದೇವ ಕ್ಷೇತ್ರಜ್ಞೇ ತೇ ನಿವೇಶಿತಃ।।
ಇಂದ್ರಿಯ-ಮನಸ್ಸುಗಳನ್ನು ಬುದ್ಧಿಯಲ್ಲಿ ಲೀನಗೊಳಿಸಿರುವೆ. ದೇವ! ಸರ್ವಗಣಗಳೂ ನಿನ್ನ ಆತ್ಮನಲ್ಲಿ ಲೀನವಾಗಿವೆ.
12046005a ನೇಂಗಂತಿ ತವ ರೋಮಾಣಿ ಸ್ಥಿರಾ ಬುದ್ಧಿಸ್ತಥಾ ಮನಃ।
12046005c ಸ್ಥಾಣುಕುಡ್ಯಶಿಲಾಭೂತೋ ನಿರೀಹಶ್ಚಾಸಿ ಮಾಧವ।।
ಮಾಧವ! ನಿನ್ನ ರೋಮಗಳು ನಿಮಿರಿನಿಂತಿವೆ. ನಿನ್ನ ಮನಸ್ಸು-ಬುದ್ಧಿಗಳು ಸ್ಥಿರವಾಗಿವೆ. ಕಟ್ಟಿಗೆ, ಗೋಡೆ ಮತ್ತು ಶಿಲೆಗಳಂತೆ ನಿಶ್ಚೇಷ್ಟನಾಗಿರುವೆ!
12046006a ಯಥಾ ದೀಪೋ ನಿವಾತಸ್ಥೋ ನಿರಿಂಗೋ ಜ್ವಲತೇಽಚ್ಯುತ।
12046006c ತಥಾಸಿ ಭಗವನ್ದೇವ ನಿಶ್ಚಲೋ ದೃಢನಿಶ್ಚಯಃ।।
ದೇವ! ಗಾಳಿಯಿಲ್ಲದ ಸ್ಥಳದಲ್ಲಿ ದೀಪವೂ ಆತ್ತಿತ್ತ ಅಗಲದೇ ಹೇಗೆ ಒಂದೇ ಸಮನೆ ಉರಿಯುತ್ತಿರುತ್ತದೆಯೋ ಹಾಗೆ ನೀನು ದೃಢನಿಶ್ಚಯನಾಗಿ ಶಿಲಾಮೂರ್ತಿಯಂತೆ ಕುಳಿತಿರುವೆ!
12046007a ಯದಿ ಶ್ರೋತುಮಿಹಾರ್ಹಾಮಿ ನ ರಹಸ್ಯಂ ಚ ತೇ ಯದಿ।
12046007c ಚಿಂಧಿ ಮೇ ಸಂಶಯಂ ದೇವ ಪ್ರಪನ್ನಾಯಾಭಿಯಾಚತೇ।।
ದೇವ! ಈ ರಹಸ್ಯವನ್ನು ಕೇಳಲು ನಾನು ಅರ್ಹನಾಗಿದ್ದರೆ ನಮಸ್ಕರಿಸಿ ಕೇಳಿಕೊಳ್ಳುತ್ತಿರುವ ನನ್ನ ಈ ಸಂಶಯವನ್ನು ದೂರಮಾಡು!
12046008a ತ್ವಂ ಹಿ ಕರ್ತಾ ವಿಕರ್ತಾ ಚ ತ್ವಂ ಕ್ಷರಂ ಚಾಕ್ಷರಂ ಚ ಹಿ।
12046008c ಅನಾದಿನಿಧನಶ್ಚಾದ್ಯಸ್ತ್ವಮೇವ ಪುರುಷೋತ್ತಮ।।
ಪುರುಷೋತ್ತಮ! ನೀನೇ ಕರ್ತ, ನೀನೇ ವಿಕರ್ತ. ನಾಶಹೊಂದುವವನೂ ನೀನೇ. ಅವಿನಾಶಿಯಾಗಿರುವವನೂ ನೀನೇ. ಆದಿ-ಅಂತ್ಯಗಳಿಲ್ಲದವನೂ ನೀನೇ!
12046009a ತ್ವತ್ಪ್ರಪನ್ನಾಯ ಭಕ್ತಾಯ ಶಿರಸಾ ಪ್ರಣತಾಯ ಚ।
12046009c ಧ್ಯಾನಸ್ಯಾಸ್ಯ ಯಥಾತತ್ತ್ವಂ ಬ್ರೂಹಿ ಧರ್ಮಭೃತಾಂ ವರ।।
ಧರ್ಮಭೃತರಲ್ಲಿ ಶ್ರೇಷ್ಠನೇ! ಭಕ್ತಿಯಿಂದ ನಿನಗೆ ಶರಣುಬಂದಿರುವ ಮತ್ತು ಶಿರಸಾ ನಮಸ್ಕರಿಸುತ್ತಿರುವ ನನಗೆ ಈ ಧ್ಯಾನದ ತತ್ತ್ವವನ್ನು ಯಥಾವತ್ತಾಗಿ ಹೇಳು!””
12046010 ವೈಶಂಪಾಯನ ಉವಾಚ।
12046010a ತತಃ ಸ್ವಗೋಚರೇ ನ್ಯಸ್ಯ ಮನೋ ಬುದ್ಧೀಂದ್ರಿಯಾಣಿ ಚ।
12046010c ಸ್ಮಿತಪೂರ್ವಮುವಾಚೇದಂ ಭಗವಾನ್ವಾಸವಾನುಜಃ।।
ವೈಶಂಪಾಯನನು ಹೇಳಿದನು: “ಆಗ ಭಗವಾನ್ ವಾಸವಾನುಜನು ಮನಸ್ಸು-ಬುದ್ಧಿ-ಇಂದ್ರಿಯಗಳನ್ನು ತಮ್ಮ ತಮ್ಮ ಸ್ಥಾನಗಳಲ್ಲಿ ಇರಿಸಿ ಮಂದಹಾಸಬೀರುತ್ತಾ ಈ ಮಾತನ್ನಾಡಿದನು:
12046011a ಶರತಲ್ಪಗತೋ ಭೀಷ್ಮಃ ಶಾಮ್ಯನ್ನಿವ ಹುತಾಶನಃ।
12046011c ಮಾಂ ಧ್ಯಾತಿ ಪುರುಷವ್ಯಾಘ್ರಸ್ತತೋ ಮೇ ತದ್ಗತಂ ಮನಃ।।
“ಆರಿಹೋಗುತ್ತಿರುವ ಅಗ್ನಿಯಂತಿರುವ, ಶರತಲ್ಪದಲ್ಲಿ ಮಲಗಿರುವ ಪುರುಷವ್ಯಾಘ್ರ ಭೀಷ್ಮನು ನನ್ನನ್ನು ಧ್ಯಾನಿಸುತ್ತಿದ್ದಾನೆ. ಅವನಲ್ಲಿಯೇ ನನ್ನ ಮನಸ್ಸು ಹೋಗಿತ್ತು.
12046012a ಯಸ್ಯ ಜ್ಯಾತಲನಿರ್ಘೋಷಂ ವಿಸ್ಫೂರ್ಜಿತಮಿವಾಶನೇಃ।
12046012c ನ ಸಹೇದ್ದೇವರಾಜೋಽಪಿ ತಮಸ್ಮಿ ಮನಸಾ ಗತಃ।।
ಮಿಂಚಿನಂತೆ ಹೊರಹೊಮ್ಮುತ್ತಿದ್ದ ಯಾರ ಧನುಸ್ಸಿನ ಟೇಂಕಾರವನ್ನು ದೇವರಾಜನೂ ಕೂಡ ಸಹಿಸಲಸಾಧ್ಯವಾಗಿತ್ತೋ ಆ ಭೀಷ್ಮನ ಕಡೆ ನನ್ನ ಮನಸ್ಸು ಹರಿದು ಹೋಗಿತ್ತು.
12046013a ಯೇನಾಭಿದ್ರುತ್ಯ ತರಸಾ ಸಮಸ್ತಂ ರಾಜಮಂಡಲಮ್।
12046013c ಊಢಾಸ್ತಿಸ್ರಃ ಪುರಾ ಕನ್ಯಾಸ್ತಮಸ್ಮಿ ಮನಸಾ ಗತಃ।।
ಹಿಂದೆ ಸಮಸ್ತ ರಾಜಮಂಡಲವನ್ನೂ ಪರಾಜಯಗೊಳಿಸಿ ಮೂವರು ಕನ್ಯೆಯರನ್ನು ಯಾರು ಕರೆದುಕೊಂಡು ಹೋಗಿದ್ದನೋ ಆ ಬೀಷ್ಮನ ಕಡೆ ನನ್ನ ಮನಸ್ಸು ಹರಿದು ಹೋಗಿತ್ತು.
12046014a ತ್ರಯೋವಿಂಶತಿರಾತ್ರಂ ಯೋ ಯೋಧಯಾಮಾಸ ಭಾರ್ಗವಮ್।
12046014c ನ ಚ ರಾಮೇಣ ನಿಸ್ತೀರ್ಣಸ್ತಮಸ್ಮಿ ಮನಸಾ ಗತಃ।।
ಇಪ್ಪತ್ತು ಮೂರು ರಾತ್ರಿ ಭಾರ್ಗವನೊಂದಿಗೆ ಯುದ್ಧಮಾಡಿ ಯಾರು ರಾಮನಿಂದ ಪರಾಜಯಗೊಳ್ಳಲಿಲ್ಲವೋ ಅವನ ಕಡೆ ನನ್ನ ಮನಸ್ಸು ಹರಿದು ಹೋಗಿತ್ತು.
12046015a ಯಂ ಗಂಗಾ ಗರ್ಭವಿಧಿನಾ ಧಾರಯಾಮಾಸ ಪಾರ್ಥಿವಮ್।
12046015c ವಸಿಷ್ಠಶಿಷ್ಯಂ ತಂ ತಾತ ಮನಸಾಸ್ಮಿ ಗತೋ ನೃಪ।।
ನೃಪ! ಅಯ್ಯಾ! ಗಂಗೆಯು ಯಾರನ್ನು ಗರ್ಭವಿಧಾನದಲ್ಲಿ ಧರಿಸಿದ್ದಳೋ ಆ ವಸಿಷ್ಠಶಿಷ್ಯ ಪಾರ್ಥಿವ ಭೀಷ್ಮನ ಕಡೆ ನನ್ನ ಮನಸ್ಸು ಹರಿದು ಹೋಗಿತ್ತು.
12046016a ದಿವ್ಯಾಸ್ತ್ರಾಣಿ ಮಹಾತೇಜಾ ಯೋ ಧಾರಯತಿ ಬುದ್ಧಿಮಾನ್।
12046016c ಸಾಂಗಾಂಶ್ಚ ಚತುರೋ ವೇದಾಂಸ್ತಮಸ್ಮಿ ಮನಸಾ ಗತಃ।।
ಮಹಾತೇಜಸ್ಸುಳ್ಳ ದಿವ್ಯಾಸ್ತ್ರಗಳನ್ನೂ, ಅಂಗಗಳ ಸಹಿತ ನಾಲ್ಕು ವೇದಗಳನ್ನೂ ಧಾರಣೆಮಾಡಿಕೊಂಡಿರುವ ಆ ಬುದ್ಧಿಮಾನ್ ಭೀಷ್ಮನ ಕಡೆ ನನ್ನ ಮನಸ್ಸು ಹರಿದು ಹೋಗಿತ್ತು.
12046017a ರಾಮಸ್ಯ ದಯಿತಂ ಶಿಷ್ಯಂ ಜಾಮದಗ್ನ್ಯಸ್ಯ ಪಾಂಡವ।
12046017c ಆಧಾರಂ ಸರ್ವವಿದ್ಯಾನಾಂ ತಮಸ್ಮಿ ಮನಸಾ ಗತಃ।।
ಪಾಂಡವ! ಜಾಮದಗ್ನ್ಯ ರಾಮನ ಪ್ರಿಯ ಶಿಷ್ಯ ಮತ್ತು ಸರ್ವ ವಿದ್ಯೆಗಳ ಆಧಾರ ಭೀಷ್ಮನ ಕಡೆ ನನ್ನ ಮನಸ್ಸು ಹರಿದು ಹೋಗಿತ್ತು.
12046018a ಏಕೀಕೃತ್ಯೇಂದ್ರಿಯಗ್ರಾಮಂ ಮನಃ ಸಂಯಮ್ಯ ಮೇಧಯಾ।
12046018c ಶರಣಂ ಮಾಮುಪಾಗಚ್ಚತ್ತತೋ ಮೇ ತದ್ಗತಂ ಮನಃ।।
ಇಂದ್ರಿಯಸಮೂಹಗಳನ್ನು ಮನಸ್ಸಿನಲ್ಲಿ ಏಕೀಕರಿಸಿ, ಮನಸ್ಸನ್ನು ಬುದ್ಧಿಯಲ್ಲಿ ಲೀನಗೊಳಿಸಿ ನನ್ನಲ್ಲಿ ಶರಣುಬಂದಿರುವ ಬೀಷ್ಮನ ಕಡೆ ನನ್ನ ಮನಸ್ಸು ಹರಿದು ಹೋಗಿತ್ತು.
12046019a ಸ ಹಿ ಭೂತಂ ಚ ಭವ್ಯಂ ಚ ಭವಚ್ಚ ಪುರುಷರ್ಷಭ।
12046019c ವೇತ್ತಿ ಧರ್ಮಭೃತಾಂ ಶ್ರೇಷ್ಠಸ್ತತೋ ಮೇ ತದ್ಗತಂ ಮನಃ।।
ಪುರುಷರ್ಷಭ! ಭೂತ-ಭವ್ಯ-ಭವಿಷ್ಯತ್ತುಗಳನ್ನು ತಿಳಿದಿರುವ ಆ ಧರ್ಮಭೃತರಲ್ಲಿ ಶ್ರೇಷ್ಠ ಭೀಷ್ಮನ ಕಡೆ ನನ್ನ ಮನಸ್ಸು ಹರಿದು ಹೋಗಿತ್ತು.
12046020a ತಸ್ಮಿನ್ಹಿ ಪುರುಷವ್ಯಾಘ್ರೇ ಕರ್ಮಭಿಃ ಸ್ವೈರ್ದಿವಂ ಗತೇ।
12046020c ಭವಿಷ್ಯತಿ ಮಹೀ ಪಾರ್ಥ ನಷ್ಟಚಂದ್ರೇವ ಶರ್ವರೀ।।
ಆ ಪುರುಷವ್ಯಾಘ್ರನು ತನ್ನ ಸತ್ಕರ್ಮಗಳ ಫಲವಾಗಿ ಸ್ವರ್ಗಕ್ಕೆ ಹೋಗಿಬಿಟ್ಟರೆ ಈ ಭೂಮಿಯು ಚಂದ್ರನಿಲ್ಲದ ರಾತ್ರಿಯಂತಾಗುತ್ತದೆ.
12046021a ತದ್ಯುಧಿಷ್ಠಿರ ಗಾಂಗೇಯಂ ಭೀಷ್ಮಂ ಭೀಮಪರಾಕ್ರಮಮ್।
12046021c ಅಭಿಗಮ್ಯೋಪಸಂಗೃಹ್ಯ ಪೃಚ್ಚ ಯತ್ತೇ ಮನೋಗತಮ್।।
ಯುಧಿಷ್ಠಿರ! ಆ ಭೀಮಪರಾಕ್ರಮಿ ಭೀಷ್ಮ ಗಾಂಗೇಯನ ಬಳಿಹೋಗಿ, ಅವನ ಪಾದಗಳನ್ನು ಹಿಡಿದು, ನಿನ್ನ ಮನಸ್ಸಿನಲ್ಲಿರುವ ಸಂದೇಹಗಳನ್ನು ಕೇಳು.
12046022a ಚಾತುರ್ವೇದ್ಯಂ ಚಾತುರ್ಹೋತ್ರಂ ಚಾತುರಾಶ್ರಮ್ಯಮೇವ ಚ।
12046022c ಚಾತುರ್ವರ್ಣ್ಯಸ್ಯ ಧರ್ಮಂ ಚ ಪೃಚ್ಚೈನಂ ಪೃಥಿವೀಪತೇ।।
ಪೃಥಿವೀಪತೇ! ಅವನನ್ನು ಕೇಳಿ ಚತುರ್ವೇದಗಳನ್ನೂ, ಚತುರ್ಹೋತ್ರಗಳನ್ನೂ1, ಚತುರಾಶ್ರಮಗಳನ್ನೂ2, ಚಾತುರ್ವರ್ಣ್ಯಗಳ ಧರ್ಮಗಳನ್ನೂ ಕೇಳಿ ತಿಳಿದುಕೋ!
12046023a ತಸ್ಮಿನ್ನಸ್ತಮಿತೇ ಭೀಷ್ಮೇ ಕೌರವಾಣಾಂ ಧುರಂಧರೇ।
12046023c ಜ್ಞಾನಾನ್ಯಲ್ಪೀಭವಿಷ್ಯಂತಿ ತಸ್ಮಾತ್ತ್ವಾಂ ಚೋದಯಾಮ್ಯಹಮ್।।
ಕೌರವರ ದುರಂಧರ ಆ ಭೀಷ್ಮನು ಅಸ್ತಂಗತನಾಗಲು ಸಕಲ ಜ್ಞಾನಗಳೂ ಅವನೊಡನೆ ಅಸ್ತಮಿಸಿಬಿಡುತ್ತವೆ. ಆದುದರಿಂದ ನಿನ್ನನ್ನು ನಾನು ಈ ರೀತಿ ಪ್ರಚೋದಿಸುತ್ತಿದ್ದೇನೆ.”
12046024a ತಚ್ಚ್ರುತ್ವಾ ವಾಸುದೇವಸ್ಯ ತಥ್ಯಂ ವಚನಮುತ್ತಮಮ್।
12046024c ಸಾಶ್ರುಕಂಠಃ ಸ ಧರ್ಮಜ್ಞೋ ಜನಾರ್ದನಮುವಾಚ ಹ।।
ವಾಸುದೇವನ ಆ ಅರ್ಥವತ್ತಾದ ಉತ್ತಮ ಮಾತನ್ನು ಕೇಳಿ, ಕಣ್ಣೀರಿನಿಂದ ಗಂಟಲು ಕಟ್ಟಿದ ಧರ್ಮಜ್ಞ ಯುಧಿಷ್ಠಿರನು ಜನಾರ್ದನನಿಗೆ ಹೇಳಿದನು:
12046025a ಯದ್ಭವಾನಾಹ ಭೀಷ್ಮಸ್ಯ ಪ್ರಭಾವಂ ಪ್ರತಿ ಮಾಧವ।
12046025c ತಥಾ ತನ್ನಾತ್ರ ಸಂದೇಹೋ ವಿದ್ಯತೇ ಮಮ ಮಾನದ।।
“ಮಾಧವ! ಮಾನದ! ಭೀಷ್ಮನ ಪ್ರಭಾವದ ಕುರಿತು ನೀನು ಏನು ಹೇಳಿದೆಯೋ ಅದರಲ್ಲಿ ನನಗೆ ಸ್ವಲ್ಪವೂ ಸಂದೇಹವಿಲ್ಲ.
12046026a ಮಹಾಭಾಗ್ಯಂ ಹಿ ಭೀಷ್ಮಸ್ಯ ಪ್ರಭಾವಶ್ಚ ಮಹಾತ್ಮನಃ।
12046026c ಶ್ರುತಂ ಮಯಾ ಕಥಯತಾಂ ಬ್ರಾಹ್ಮಣಾನಾಂ ಮಹಾತ್ಮನಾಮ್।।
ಮಹಾಭಾಗ್ಯ ಮಹಾತ್ಮ ಭೀಷ್ಮನ ಪ್ರಭಾವದ ಕುರಿತು ಮಹಾತ್ಮ ಬ್ರಾಹ್ಮಣರು ಹೇಳುತ್ತಿದ್ದುದನ್ನು ನಾನು ಕೇಳಿದ್ದೇನೆ.
12046027a ಭವಾಂಶ್ಚ ಕರ್ತಾ ಲೋಕಾನಾಂ ಯದ್ಬ್ರವೀತ್ಯರಿಸೂದನ।
12046027c ತಥಾ ತದನಭಿಧ್ಯೇಯಂ ವಾಕ್ಯಂ ಯಾದವನಂದನ।।
ಅರಿಸೂದನ! ಯಾದವನಂದನ! ಲೋಕಗಳ ಕರ್ತೃವಾದ ನೀನೂ ಕೂಡ ಇದನ್ನೇ ಹೇಳುತ್ತಿರುವೆಯಾದರೆ ಅದರ ಕುರಿತು ಪುನಃ ಯೋಚಿಸಬೇಕಾದುದೇ ಇಲ್ಲ!
12046028a ಯತಸ್ತ್ವನುಗ್ರಹಕೃತಾ ಬುದ್ಧಿಸ್ತೇ ಮಯಿ ಮಾಧವ।
12046028c ತ್ವಾಮಗ್ರತಃ ಪುರಸ್ಕೃತ್ಯ ಭೀಷ್ಮಂ ಪಶ್ಯಾಮಹೇ ವಯಮ್।।
ಮಾಧವ! ನಿನ್ನಲ್ಲಿ ನನಗೆ ಅನುಗ್ರಹಿಸುವ ಮನಸ್ಸಿದ್ದರೆ ನಿನ್ನನ್ನು ಮುಂದೆಮಾಡಿಕೊಂಡು ಭೀಷ್ಮನನ್ನು ನೋಡಬೇಕೆಂಬ ಮನಸ್ಸಾಗುತ್ತಿದೆ.
12046029a ಆವೃತ್ತೇ ಭಗವತ್ಯರ್ಕೇ ಸ ಹಿ ಲೋಕಾನ್ಗಮಿಷ್ಯತಿ।
12046029c ತ್ವದ್ದರ್ಶನಂ ಮಹಾಬಾಹೋ ತಸ್ಮಾದರ್ಹತಿ ಕೌರವಃ।।
ಭಗವಾನ್ ಸೂರ್ಯನು ಉತ್ತರಾಯಣಕ್ಕೆ ತಿರುಗಿದೊಡನೆಯೇ ಅವನು ಲೋಕಗಳಿಗೆ ಹೊರಟುಹೋಗುತ್ತಾನೆ. ಆದುದರಿಂದ ಮಹಾಬಾಹೋ! ಆ ಕೌರವನು ನಿನ್ನ ದರ್ಶನಕ್ಕೆ ಅರ್ಹನಾಗಿದ್ದಾನೆ.
12046030a ತವ ಹ್ಯಾದ್ಯಸ್ಯ ದೇವಸ್ಯ ಕ್ಷರಸ್ಯೈವಾಕ್ಷರಸ್ಯ ಚ।
12046030c ದರ್ಶನಂ ತಸ್ಯ ಲಾಭಃ ಸ್ಯಾತ್ತ್ವಂ ಹಿ ಬ್ರಹ್ಮಮಯೋ ನಿಧಿಃ।।
ಇಂದು ಅವನಿಗೆ ಕ್ಷರಾಕ್ಷರ ದೇವ ನಿನ್ನ ದರ್ಶನದ ಲಾಭವಾಗಲಿ. ಏಕೆಂದರೆ ನೀನು ಬ್ರಹ್ಮಮಯನೂ ಜ್ಞಾನನಿಧಿಯೂ ಆಗಿರುವೆ!”
12046031a ಶ್ರುತ್ವೈತದ್ಧರ್ಮರಾಜಸ್ಯ ವಚನಂ ಮಧುಸೂದನಃ।
12046031c ಪಾರ್ಶ್ವಸ್ಥಂ ಸಾತ್ಯಕಿಂ ಪ್ರಾಹ ರಥೋ ಮೇ ಯುಜ್ಯತಾಮಿತಿ।।
ಧರ್ಮರಾಜನ ಮಾತನ್ನು ಕೇಳಿದ ಮಧುಸೂದನನು ಪಕ್ಕದಲ್ಲಿಯೇ ನಿಂತಿದ್ದ ಸಾತ್ಯಕಿಗೆ ರಥವನ್ನು ಹೂಡಲು ಹೇಳಿದನು.
12046032a ಸಾತ್ಯಕಿಸ್ತೂಪನಿಷ್ಕ್ರಮ್ಯ ಕೇಶವಸ್ಯ ಸಮೀಪತಃ।
12046032c ದಾರುಕಂ ಪ್ರಾಹ ಕೃಷ್ಣಸ್ಯ ಯುಜ್ಯತಾಂ ರಥ ಇತ್ಯುತ।।
ಸಾತ್ಯಕಿಯು ಕೇಶವನ ಸಮೀಪದಿಂದ ಹೋಗಿ ದಾರುಕನಿಗೆ ಕೃಷ್ಣನ ರಥವನ್ನು ಸಿದ್ಧಗೊಳಿಸುವಂತೆ ಹೇಳಿದನು.
12046033a ಸ ಸಾತ್ಯಕೇರಾಶು ವಚೋ ನಿಶಮ್ಯ ರಥೋತ್ತಮಂ ಕಾಂಚನಭೂಷಿತಾಂಗಮ್।
12046033c ಮಸಾರಗಲ್ವರ್ಕಮಯೈರ್ವಿಭಂಗೈರ್ ವಿಭೂಷಿತಂ ಹೇಮಪಿನದ್ಧಚಕ್ರಮ್।।
12046034a ದಿವಾಕರಾಂಶುಪ್ರಭಮಾಶುಗಾಮಿನಂ ವಿಚಿತ್ರನಾನಾಮಣಿರತ್ನಭೂಷಿತಮ್।
12046034c ನವೋದಿತಂ ಸೂರ್ಯಮಿವ ಪ್ರತಾಪಿನಂ ವಿಚಿತ್ರತಾರ್ಕ್ಷ್ಯಧ್ವಜಿನಂ ಪತಾಕಿನಮ್।।
12046035a ಸುಗ್ರೀವಸೈನ್ಯಪ್ರಮುಖೈರ್ವರಾಶ್ವೈರ್ ಮನೋಜವೈಃ ಕಾಂಚನಭೂಷಿತಾಂಗೈಃ।
12046035c ಸುಯುಕ್ತಮಾವೇದಯದಚ್ಯುತಾಯ ಕೃತಾಂಜಲಿರ್ದಾರುಕೋ ರಾಜಸಿಂಹ।।
ರಾಜಸಿಂಹ! ಸಾತ್ಯಕಿಯ ಮಾತನ್ನು ಕೇಳಿದ ದಾರುಕನು ಕಾಂಚನಗಳಿಂದ ಭೂಷಿತವಾದ, ಮರಕತ-ಸೂರ್ಯಕಾಂತ-ಚಂದ್ರಕಾಂತ ಮಣಿಗಳ ಕಾಂತಿಯಿಂದ ಕೂಡಿದ್ದ, ಸುವರ್ಣದ ಪಟ್ಟಿಗಳನ್ನು ಸುತ್ತಿದ್ದ ಚಕ್ರಗಳಿದ್ದ, ಸೂರ್ಯಕಿರಣಗಳಂತೆ ಹೊಳೆಯುತ್ತಿದ್ದ, ನಾನಾ ವಿಚಿತ್ರ ಮಣಿರತ್ನಗಳಿಂದ ವಿಭೂಷಿತವಾಗಿದ್ದ, ಉದಯಿಸುತ್ತಿರುವ ಸೂರ್ಯನಂತೆ ಬೆಳಗುತ್ತಿದ್ದ, ವಿಚಿತ್ರ ಗರುಡಧ್ವಜ-ಪತಾಕೆಗಳುಳ್ಳ, ಅಂಗಾಂಗಳಲ್ಲಿ ಸುವರ್ಣಗಳಿಂದ ಅಲಂಕರಿಸಲ್ಪಟ್ಟ ಮನೋವೇಗದ ಸುಗ್ರೀವ-ಸೈನ್ಯಪ್ರಮುಖ ಶ್ರೇಷ್ಠ ಅಶ್ವಗಳನ್ನು ಕಟ್ಟಿದ್ದ ರಥವನ್ನು ಸಿದ್ಧಪಡಿಸಿ ಬಂದು ಕೈಮುಗಿದು ಅಚ್ಯುತನಿಗೆ ನಿವೇದಿಸಿದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ಮಹಾಪುರುಷಸ್ತವೇ ಷಟ್ ಚತ್ವಾರಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಮಹಾಪುರುಷಸ್ತವ ಎನ್ನುವ ನಲ್ವತ್ತಾರನೇ ಅಧ್ಯಾಯವು.