044 ಗೃಹವಿಭಾಗಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ರಾಜಧರ್ಮ ಪರ್ವ

ಅಧ್ಯಾಯ 44

ಸಾರ

ಗೃಹವಿಭಾಗ (1-16).

12044001 ವೈಶಂಪಾಯನ ಉವಾಚ।
12044001a ತತೋ ವಿಸರ್ಜಯಾಮಾಸ ಸರ್ವಾಃ ಪ್ರಕೃತಯೋ ನೃಪಃ।
12044001c ವಿವಿಶುಶ್ಚಾಭ್ಯನುಜ್ಞಾತಾ ಯಥಾಸ್ವಾನಿ ಗೃಹಾಣಿ ಚ।।

ಅನಂತರ ನೃಪನು ಪ್ರಜೆಗಳೆಲ್ಲರನ್ನೂ ಬೀಳ್ಕೊಟ್ಟನು. ಅವನ ಅಪ್ಪಣೆಪಡೆದು ಅವರು ತಮ್ಮ ತಮ್ಮ ಮನೆಗಳಿಗೆ ಹೋದರು.

12044002a ತತೋ ಯುಧಿಷ್ಠಿರೋ ರಾಜಾ ಭೀಮಂ ಭೀಮಪರಾಕ್ರಮಮ್।
12044002c ಸಾಂತ್ವಯನ್ನಬ್ರವೀದ್ಧೀಮಾನರ್ಜುನಂ ಯಮಜೌ ತಥಾ।।

ಅನಂತರ ರಾಜಾ ಯುಧಿಷ್ಠಿರನು ಭೀಮಪರಾಕ್ರಮಿ ಭೀಮನನ್ನು ಸಂತವಿಸುತ್ತಾ ಅರ್ಜುನ ಮತ್ತು ಯಮಳರಿಗೆ ಹೇಳಿದನು:

12044003a ಶತ್ರುಭಿರ್ವಿವಿಧೈಃ ಶಸ್ತ್ರೈಃ ಕೃತ್ತದೇಹಾ ಮಹಾರಣೇ।
12044003c ಶ್ರಾಂತಾ ಭವಂತಃ ಸುಭೃಶಂ ತಾಪಿತಾಃ ಶೋಕಮನ್ಯುಭಿಃ।।

“ಮಹಾರಣದಲ್ಲಿ ಶತ್ರುಗಳ ವಿವಿಧ ಶಸ್ತ್ರಗಳಿಂದ ನಿಮ್ಮ ಶರೀರಗಳು ಗಾಯಗೊಂಡಿವೆ. ಶೋಕ-ಕ್ರೋಧಗಳಿಂದ ತಪಿಸಿ ಬಳಲಿದ್ದೀರಿ.

12044004a ಅರಣ್ಯೇ ದುಃಖವಸತೀರ್ಮತ್ಕೃತೇ ಪುರುಷೋತ್ತಮಾಃ।
12044004c ಭವದ್ಭಿರನುಭೂತಾಶ್ಚ ಯಥಾ ಕುಪುರುಷೈಸ್ತಥಾ।।

ಪುರುಷೋತ್ತಮರಾದ ನೀವು ನನ್ನಿಂದಾಗಿ ಅರಣ್ಯದಲ್ಲಿ, ಭಾಗ್ಯಹೀನರಂತೆ ವಾಸಿಸಿ ದುಃಖಗಳನ್ನು ಅನುಭವಿಸಿದಿರಿ.

12044005a ಯಥಾಸುಖಂ ಯಥಾಜೋಷಂ ಜಯೋಽಯಮನುಭೂಯತಾಮ್।
12044005c ವಿಶ್ರಾಂತಾಽಲ್ಲಬ್ಧವಿಜ್ಞಾನಾನ್ಶ್ವಃ ಸಮೇತಾಸ್ಮಿ ವಃ ಪುನಃ।।

ಯಥಾಸುಖವಾಗಿ ಯಥೇಚ್ಛೆಯಿಂದ ಈ ಜಯವನ್ನು ಅನಂದಿಸಿರಿ! ಸಂಪೂರ್ಣ ವಿಶ್ರಾಂತಿಯನ್ನು ಪಡೆದು ಸ್ವಸ್ಥಚಿತ್ತರಾದನಂತರ ನಾಳೆ ಪುನಃ ನಿಮ್ಮೊಡನೆ ಸೇರುತ್ತೇನೆ.”

12044006a ತತೋ ದುರ್ಯೋಧನಗೃಹಂ ಪ್ರಾಸಾದೈರುಪಶೋಭಿತಮ್।
12044006c ಬಹುರತ್ನಸಮಾಕೀರ್ಣಂ ದಾಸೀದಾಸಸಮಾಕುಲಮ್।।
12044007a ಧೃತರಾಷ್ಟ್ರಾಭ್ಯನುಜ್ಞಾತಂ ಭ್ರಾತ್ರಾ ದತ್ತಂ ವೃಕೋದರಃ।
12044007c ಪ್ರತಿಪೇದೇ ಮಹಾಬಾಹುರ್ಮಂದರಂ ಮಘವಾನಿವ।।

ಅನಂತರ ಧೃತರಾಷ್ಟ್ರನ ಅನುಮತಿಯನ್ನು ಪಡೆದು ಅವನು ಪ್ರಾಸಾದಗಳಿಂದ ಶೋಭಿಸುತ್ತಿದ್ದ, ಅನೇಕ ರತ್ನಗಳಿಂದ ಕೂಡಿದ್ದ, ದಾಸೀ-ದಾಸರ ಗುಂಪುಗಳಿದ್ದ ದುರ್ಯೋಧನನ ಅರಮನೆಯನ್ನು ಸಹೋದರ ವೃಕೋದರನಿಗಿತ್ತನು. ಮಂದರವನ್ನು ಇಂದ್ರನು ಹೇಗೋ ಹಾಗೆ ಮಹಾಬಾಹು ಭೀಮಸೇನನು ಅದನ್ನು ಸ್ವೀಕರಿಸಿದನು.

12044008a ಯಥಾ ದುರ್ಯೋಧನಗೃಹಂ ತಥಾ ದುಃಶಾಸನಸ್ಯ ಚ।
12044008c ಪ್ರಾಸಾದಮಾಲಾಸಂಯುಕ್ತಂ ಹೇಮತೋರಣಭೂಷಿತಮ್।।
12044009a ದಾಸೀದಾಸಸುಸಂಪೂರ್ಣಂ ಪ್ರಭೂತಧನಧಾನ್ಯವತ್।
12044009c ಪ್ರತಿಪೇದೇ ಮಹಾಬಾಹುರರ್ಜುನೋ ರಾಜಶಾಸನಾತ್।।

ದುರ್ಯೋಧನನ ಅರಮನೆಯಂತೆಯೇ ಪ್ರಾಸಾದಗಳ ಸಾಲುಗಳಿಂದ ಕೂಡಿದ್ದ, ಹೇಮತೋರಣಭೂಷಿತವಾದ, ದಾಸೀ-ದಾಸರಿಂದ ಸಂಪೂರ್ಣವಾಗಿದ್ದ, ಧನ-ಧಾನ್ಯಗಳಿಂದ ಸಮೃದ್ಧವಾಗಿದ್ದ ದುಃಶಾಸನನ ಅರಮನೆಯನ್ನು ರಾಜಶಾಸನದಂತೆ ಮಹಾಬಾಹು ಅರ್ಜುನನು ಪಡೆದುಕೊಂಡನು.

12044010a ದುರ್ಮರ್ಷಣಸ್ಯ ಭವನಂ ದುಃಶಾಸನಗೃಹಾದ್ವರಮ್।
12044010c ಕುಬೇರಭವನಪ್ರಖ್ಯಂ ಮಣಿಹೇಮವಿಭೂಷಿತಮ್।।
12044011a ನಕುಲಾಯ ವರಾರ್ಹಾಯ ಕರ್ಶಿತಾಯ ಮಹಾವನೇ।
12044011c ದದೌ ಪ್ರೀತೋ ಮಹಾರಾಜ ಧರ್ಮರಾಜೋ ಯುಧಿಷ್ಠಿರಃ।।

ಮಹಾರಾಜ! ದುಃಶಾಸನನ ಅರಮನೆಗಿಂತಲೂ ಶ್ರೇಷ್ಠವಾಗಿದ್ದ, ಕುಬೇರಭವನದಂತಿದ್ದ, ಮಣಿಹೇಮವಿಭೂಷಿತವಾಗಿದ್ದ ದುರ್ಮರ್ಷಣನ ಅರಮನೆಯನ್ನು ಮಹಾವನದಲ್ಲಿ ಅನೇಕ ಕಷ್ಟಗಳನ್ನನುಭವಿಸಿ, ಬಹುಮಾನಕ್ಕೆ ಯೋಗ್ಯನಾಗಿದ್ದ ನಕುಲನಿಗೆ ಧರ್ಮರಾಜ ಯುಧಿಷ್ಠಿರನು ಪ್ರೀತಿಯಿಂದ ಕೊಟ್ಟನು.

12044012a ದುರ್ಮುಖಸ್ಯ ಚ ವೇಶ್ಮಾಗ್ರ್ಯಂ ಶ್ರೀಮತ್ಕನಕಭೂಷಿತಮ್।
12044012c ಪೂರ್ಣಂ ಪದ್ಮದಲಾಕ್ಷೀಣಾಂ ಸ್ತ್ರೀಣಾಂ ಶಯನಸಂಕುಲಮ್।।
12044013a ಪ್ರದದೌ ಸಹದೇವಾಯ ಸತತಂ ಪ್ರಿಯಕಾರಿಣೇ।
12044013c ಮುಮುದೇ ತಚ್ಚ ಲಬ್ಧ್ವಾ ಸ ಕೈಲಾಸಂ ಧನದೋ ಯಥಾ।।

ಕಾಂತಿಯುಕ್ತವಾಗಿದ್ದ, ಕನಕಭೂಷಿತ, ಪದ್ಮದಲಯತಾಕ್ಷೀ ಸ್ತ್ರೀಯರ ಶಯನಮಂದಿರಗಳಿಂದ ಸಂಪನ್ನವಾಗಿದ್ದ ದುರ್ಮುಖನ ಅಗ್ರ ಅರಮನೆಯನ್ನು ಯುಧಿಷ್ಠಿರನು ಸತತವೂ ಪ್ರಿಯಕಾರಣಿಯಾಗಿದ್ದ ಸಹದೇವನಿಗೆ ಕೊಟ್ಟನು. ಕೈಲಾಸವನ್ನು ಪಡೆದ ಕುಬೇರನಂತೆ ಆ ಅರಮನೆಯನ್ನು ಪಡೆದ ಸಹದೇವನು ಮುದಿತನಾದನು.

12044014a ಯುಯುತ್ಸುರ್ವಿದುರಶ್ಚೈವ ಸಂಜಯಶ್ಚ ಮಹಾದ್ಯುತಿಃ।
12044014c ಸುಧರ್ಮಾ ಚೈವ ಧೌಮ್ಯಶ್ಚ ಯಥಾಸ್ವಂ ಜಗ್ಮುರಾಲಯಾನ್।।

ಯುಯುತ್ಸು, ವಿದುರ, ಮಹಾದ್ಯುತಿ ಸಂಜಯ, ಸುಧರ್ಮಾ ಮತ್ತು ಧೌಮ್ಯರು ತಾವು ಹಿಂದೆ ವಾಸಮಾಡುತ್ತಿದ್ದ ಮನೆಗಳಿಗೇ ತೆರಳಿದರು.

12044015a ಸಹ ಸಾತ್ಯಕಿನಾ ಶೌರಿರರ್ಜುನಸ್ಯ ನಿವೇಶನಮ್।
12044015c ವಿವೇಶ ಪುರುಷವ್ಯಾಘ್ರೋ ವ್ಯಾಘ್ರೋ ಗಿರಿಗುಹಾಮಿವ।।

ಸಾತ್ಯಕಿಯೊಂದಿಗೆ ಪುರುಷವ್ಯಾಘ್ರ ಶೌರಿಯು, ಗಿರಿಗುಹೆಯನ್ನು ಪ್ರವೇಶಿಸುವ ವ್ಯಾಘ್ರದಂತೆ, ಅರ್ಜುನನ ಅರಮನೆಯನ್ನು ಪ್ರವೇಶಿಸಿದನು.

12044016a ತತ್ರ ಭಕ್ಷಾನ್ನಪಾನೈಸ್ತೇ ಸಮುಪೇತಾಃ ಸುಖೋಷಿತಾಃ।
12044016c ಸುಖಪ್ರಬುದ್ಧಾ ರಾಜಾನಮುಪತಸ್ಥುರ್ಯುಧಿಷ್ಠಿರಮ್।।

ಅಲ್ಲಿ ಭಕ್ಷಾನ್ನ ಪಾನೀಯಗಳಿಂದ ತೃಪ್ತರಾಗಿ, ಸುಖವಾಗಿ ರಾತ್ರಿಯನ್ನು ಕಳೆದು, ಸುಖಿಗಳಾಗಿಯೇ ಎಚ್ಚೆತ್ತು ರಾಜ ಯುಧಿಷ್ಠಿರನ ಬಳಿ ಹೋದರು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ಗೃಹವಿಭಾಗೇ ಚತುಶ್ಚತ್ವಾರಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಗೃಹವಿಭಾಗ ಎನ್ನುವ ನಲ್ವತ್ನಾಲ್ಕನೇ ಅಧ್ಯಾಯವು.