ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ರಾಜಧರ್ಮ ಪರ್ವ
ಅಧ್ಯಾಯ 43
ಸಾರ
ಕೃಷ್ಣನಾಮಶತಸ್ತುತಿ (1-17).
12043001 ವೈಶಂಪಾಯನ ಉವಾಚ।
12043001a ಅಭಿಷಿಕ್ತೋ ಮಹಾಪ್ರಾಜ್ಞೋ ರಾಜ್ಯಂ ಪ್ರಾಪ್ಯ ಯುಧಿಷ್ಠಿರಃ।
12043001c ದಾಶಾರ್ಹಂ ಪುಂಡರೀಕಾಕ್ಷಮುವಾಚ ಪ್ರಾಂಜಲಿಃ ಶುಚಿಃ।।
ವೈಶಂಪಾಯನನು ಹೇಳಿದನು: “ರಾಜ್ಯವನ್ನು ಪಡೆದು ಅಭಿಷಿಕ್ತನಾದ ಮಹಾಪ್ರಾಜ್ಞ ಯುಧಿಷ್ಠಿರನು ಶುಚಿಯಾಗಿ ಕೈಮುಗಿದು ದಾಶಾರ್ಹ ಪುಂಡರೀಕಾಕ್ಷನಿಗೆ ಹೇಳಿದನು:
12043002a ತವ ಕೃಷ್ಣ ಪ್ರಸಾದೇನ ನಯೇನ ಚ ಬಲೇನ ಚ।
12043002c ಬುದ್ಧ್ಯಾ ಚ ಯದುಶಾರ್ದೂಲ ತಥಾ ವಿಕ್ರಮಣೇನ ಚ।।
12043003a ಪುನಃ ಪ್ರಾಪ್ತಮಿದಂ ರಾಜ್ಯಂ ಪಿತೃಪೈತಾಮಹಂ ಮಯಾ।
12043003c ನಮಸ್ತೇ ಪುಂಡರೀಕಾಕ್ಷ ಪುನಃ ಪುನರರಿಂದಮ।।
“ಕೃಷ್ಣ! ಯದುಶಾರ್ದೂಲ! ನಿನ್ನ ಪ್ರಸಾದದಿಂದ, ನೀತಿ-ಬಲಗಳಿಂದ, ಬುದ್ಧಿ-ವಿಕ್ರಮಗಳಿಂದ ನಾನು ಪಿತೃ-ಪಿತಾಮಹರ ಈ ರಾಜ್ಯವನ್ನು ಪುನಃ ಪಡೆದುಕೊಂಡಿದ್ದೇನೆ. ಪುಂಡರೀಕಾಕ್ಷ! ಅರಿಂದಮ! ಪುನಃ ಪುನಃ ನಿನಗೆ ನಮಸ್ಕರಿಸುತ್ತೇನೆ.
12043004a ತ್ವಾಮೇಕಮಾಹುಃ ಪುರುಷಂ ತ್ವಾಮಾಹುಃ ಸಾತ್ವತಾಂ ಪತಿಮ್।
12043004c ನಾಮಭಿಸ್ತ್ವಾಂ ಬಹುವಿಧೈಃ ಸ್ತುವಂತಿ ಪರಮರ್ಷಯಃ।।
ನಿನ್ನನ್ನು ಏಕನೆಂದೂ, ಪುರುಷನೆಂದೂ, ಸಾತ್ವತರ ಪತಿಯೆಂದೂ ಪರಮಋಷಿಗಳು ಅನೇಕ ನಾಮಗಳಿಂದ ಬಹುವಿಧಗಳಲ್ಲಿ ಸ್ತುತಿಸುತ್ತಾರೆ!
12043005a ವಿಶ್ವಕರ್ಮನ್ನಮಸ್ತೇಽಸ್ತು ವಿಶ್ವಾತ್ಮನ್ವಿಶ್ವಸಂಭವ।
12043005c ವಿಷ್ಣೋ ಜಿಷ್ಣೋ ಹರೇ ಕೃಷ್ಣ ವೈಕುಂಠ ಪುರುಷೋತ್ತಮ।।
ವಿಶ್ವಕರ್ಮ! ವಿಶ್ವಾತ್ಮನ್! ವಿಶ್ವಸಂಭವ! ವಿಷ್ಣು! ಜಿಷ್ಣು! ಹರಿ! ಕೃಷ್ಣ! ವೈಕುಂಠ! ಪುರುಷೋತ್ತಮ! ನಿನಗೆ ನಮಸ್ಕಾರ!
12043006a ಅದಿತ್ಯಾಃ ಸಪ್ತರಾತ್ರಂ ತು ಪುರಾಣೇ ಗರ್ಭತಾಂ ಗತಃ।
12043006c ಪೃಶ್ನಿಗರ್ಭಸ್ತ್ವಮೇವೈಕಸ್ತ್ರಿಯುಗಂ ತ್ವಾಂ ವದಂತ್ಯಪಿ।।
ಹಿಂದೆ ನೀನು ಏಳು ಬಾರಿ ಅದಿತಿಯ ಗರ್ಭದಲ್ಲಿ ಅವತರಿಸಿದೆ1! ನೀನೊಬ್ಬನೇ ಪೃಶ್ನಿಗರ್ಭ2ನೆಂದು ಕರೆಯಿಸಿಕೊಂಡಿರುವೆ! ತ್ರಿಯುಗ3ನೆಂದೂ ನಿನ್ನನ್ನು ಕರೆಯುತ್ತಾರೆ!
12043007a ಶುಚಿಶ್ರವಾ ಹೃಷೀಕೇಶೋ ಘೃತಾರ್ಚಿರ್ಹಂಸ ಉಚ್ಯಸೇ।
12043007c ತ್ರಿಚಕ್ಷುಃ ಶಂಭುರೇಕಸ್ತ್ವಂ ವಿಭುರ್ದಾಮೋದರೋಽಪಿ ಚ।।
ನಿನ್ನನ್ನು ಶುಚಿಶ್ರವ4, ಹೃಷೀಕೇಶ5, ಘೃತಾರ್ಚಿ6, ಹಂಸ ಎಂದು ಕರೆಯುತ್ತಾರೆ. ಮುಕ್ಕಣ್ಣ ಶಂಭು ಮತ್ತು ನೀನು ಒಂದೇ ಆಗಿರುವಿರಿ! ನೀನು ವಿಭು7 ಮತ್ತು ದಾಮೋದರ8!
12043008a ವರಾಹೋಽಗ್ನಿರ್ಬೃಹದ್ಭಾನುರ್ವೃಷಣಸ್ತಾರ್ಕ್ಷ್ಯಲಕ್ಷಣಃ।
12043008c ಅನೀಕಸಾಹಃ ಪುರುಷಃ ಶಿಪಿವಿಷ್ಟ ಉರುಕ್ರಮಃ।।
12043009a ವಾಚಿಷ್ಠ ಉಗ್ರಃ ಸೇನಾನೀಃ ಸತ್ಯೋ ವಾಜಸನಿರ್ಗುಹಃ।
12043009c ಅಚ್ಯುತಶ್ಚ್ಯಾವನೋಽರೀಣಾಂ ಸಂಕೃತಿರ್ವಿಕೃತಿರ್ವೃಷಃ।।
12043010a ಕೃತವರ್ತ್ಮಾ ತ್ವಮೇವಾದ್ರಿರ್ವೃಷಗರ್ಭೋ ವೃಷಾಕಪಿಃ।
12043010c ಸಿಂಧುಕ್ಷಿದೂರ್ಮಿಸ್ತ್ರಿಕಕುತ್ತ್ರಿಧಾಮಾ ತ್ರಿವೃದಚ್ಯುತಃ।।
ನೀನೇ ವರಾಹ, ಅಗ್ನಿ, ಬೃಹದ್ಭಾನು9, ವೃಷಣ10, ತಾರ್ಕ್ಷ್ಯಲಕ್ಷಣ11, ಅನೀಕಸಾಹ12, ಪುರುಷ13, ಶಿಪಿವಿಷ್ಟ14, ಉರುಕ್ರಮ15, ವಾಚಿಷ್ಠ, ಉಗ್ರ, ಸೇನಾನೀ, ಸತ್ಯ, ವಾಜಸನಿ16, ಗುಹ, ಅಚ್ಯುತ, ಅರಿಗಳ ವಿನಾಶಕ, ಸಂಕೃತಿ17, ವಿಕೃತಿ18, ವೃಷ19, ಕೃತವರ್ತ್ಮಾ20, ಅದ್ರಿ21, ವೃಷಗರ್ಭ22, ವೃಷಾಕಪಿ23, ಸಿಂಧುಕ್ಷಿದೂರ್ಮಿ24, ತ್ರಿಕಕು25, ತ್ರಿಧಾಮ, ತ್ರಿವೃದಚ್ಯುತ26!
12043011a ಸಮ್ರಾಡ್ವಿರಾಟ್ಸ್ವರಾಟ್ಚೈವ ಸುರರಾಡ್ಧರ್ಮದೋ ಭವಃ।
12043011c ವಿಭುರ್ಭೂರಭಿಭೂಃ ಕೃಷ್ಣಃ ಕೃಷ್ಣವರ್ತ್ಮಾ ತ್ವಮೇವ ಚ।।
ನೀನೇ ಸಾಮ್ರಾಟ, ವಿರಾಟ, ಸ್ವರಾಟ, ಮತ್ತು ಸುರರಾಜ! ನೀನೇ ಧರ್ಮದ, ಭವ27, ವಿಭು28, ಭೂ, ಅಭಿಭು. ಕೃಷ್ಣ29, ಕೃಷ್ಣವರ್ತ್ಮಾ30!
12043012a ಸ್ವಿಷ್ಟಕೃದ್ಭಿಷಗಾವರ್ತಃ ಕಪಿಲಸ್ತ್ವಂ ಚ ವಾಮನಃ।
12043012c ಯಜ್ಞೋ ಧ್ರುವಃ ಪತಂಗಶ್ಚ ಜಯತ್ಸೇನಸ್ತ್ವಮುಚ್ಯಸೇ।।
ನಿನ್ನನ್ನು ಸ್ವಿಷ್ಟಕೃತು31ವೆಂದೂ, ಭಿಷಗಾವರ್ತ32ನೆಂದೂ, ಕಪಿಲ, ವಾಮನ, ಯಜ್ಞ, ಧ್ರುವ, ಪತಂಗ33, ಮತ್ತು ಜಯತ್ಸೇನನೆಂದೂ ಕರೆಯುತ್ತಾರೆ.
12043013a ಶಿಖಂಡೀ ನಹುಷೋ ಬಭ್ರುರ್ದಿವಸ್ಪೃಕ್ತ್ವಂ ಪುನರ್ವಸುಃ।
12043013c ಸುಬಭ್ರುರುಕ್ಷೋ ರುಕ್ಮಸ್ತ್ವಂ ಸುಷೇಣೋ ದುಂದುಭಿಸ್ತಥಾ।।
12043014a ಗಭಸ್ತಿನೇಮಿಃ ಶ್ರೀಪದ್ಮಂ ಪುಷ್ಕರಂ ಪುಷ್ಪಧಾರಣಃ।
12043014c ಋಭುರ್ವಿಭುಃ ಸರ್ವಸೂಕ್ಷ್ಮಸ್ತ್ವಂ ಸಾವಿತ್ರಂ ಚ ಪಠ್ಯಸೇ।।
ನಿನ್ನನ್ನು ಶಿಖಂಡೀ34, ನಹುಷ, ಬಭ್ರು35, ದಿವಸ್ಪೃಕ್36, ಪುನರ್ವಸು37, ಸುಬಭ್ರು38, ಸುಷೇಣ39, ದುಂದುಭಿ40, ಗಭಸ್ತಿನೇಮಿ41, ಶ್ರೀಪದ್ಮ, ಪುಷ್ಕರ, ಪುಷ್ಪಧಾರೀ, ಋಭು, ವಿಭು, ಸರ್ವಸೂಕ್ಷ್ಮ, ಸಾವಿತ್ರ ಎಂದೂ ಕರೆಯುತ್ತಾರೆ.
12043015a ಅಂಭೋನಿಧಿಸ್ತ್ವಂ ಬ್ರಹ್ಮಾ ತ್ವಂ ಪವಿತ್ರಂ ಧಾಮ ಧನ್ವ ಚ।
12043015c ಹಿರಣ್ಯಗರ್ಭಂ ತ್ವಾಮಾಹುಃ ಸ್ವಧಾ ಸ್ವಾಹಾ ಚ ಕೇಶವ।।
ನೀನು ಅಂಭೋನಿಧಿ42ಯು. ನೀನು ಬ್ರಹ್ಮ, ಪವಿತ್ರ ಧಾಮ ಮತ್ತು ಧನ್ವ. ಕೇಶವ! ನಿನ್ನನ್ನು ಹಿರಣ್ಯಗರ್ಭನೆಂದೂ, ಸ್ವಧಾ ಮತ್ತು ಸ್ವಾಹಾ ಎಂದೂ ಕರೆಯುತ್ತಾರೆ.
12043016a ಯೋನಿಸ್ತ್ವಮಸ್ಯ ಪ್ರಲಯಶ್ಚ ಕೃಷ್ಣ ತ್ವಮೇವೇದಂ ಸೃಜಸಿ ವಿಶ್ವಮಗ್ರೇ।
12043016c ವಿಶ್ವಂ ಚೇದಂ ತ್ವದ್ವಶೇ ವಿಶ್ವಯೋನೇ ನಮೋಽಸ್ತು ತೇ ಶಾರ್ಙ್ಗಚಕ್ರಾಸಿಪಾಣೇ।।
ಕೃಷ್ಣ! ಯಾವುದರ ಯೋನಿ ಮತ್ತು ಪ್ರಲಯನೂ ನೀನಾಗಿರುವೆಯೋ ಆ ವಿಶ್ವವನ್ನು ಮೊದಲು ನೀನೇ ಸೃಷ್ಟಿಸುವೆ. ವಿಶ್ವಯೋನೇ! ಈ ವಿಶ್ವವು ನಿನ್ನದೇ ವಶದಲ್ಲಿದ್ದೆ. ಶಾರ್ಙ್ಗ-ಚಕ್ರ-ಖಡ್ಗಪಾಣಿಯೇ! ನಿನಗೆ ನಮಸ್ಕಾರವು!”
12043017a ಏವಂ ಸ್ತುತೋ ಧರ್ಮರಾಜೇನ ಕೃಷ್ಣಃ ಸಭಾಮಧ್ಯೇ ಪ್ರೀತಿಮಾನ್ಪುಷ್ಕರಾಕ್ಷಃ।
12043017c ತಮಭ್ಯನಂದದ್ಭಾರತಂ ಪುಷ್ಕಲಾಭಿರ್ ವಾಗ್ಭಿರ್ಜ್ಯೇಷ್ಠಂ ಪಾಂಡವಂ ಯಾದವಾಗ್ರ್ಯಃ।।
ಸಭಾಮಧ್ಯದಲ್ಲಿ ಧರ್ಮರಾಜನು ಹೀಗೆ ಸ್ತುತಿಸಲು ಪ್ರಸನ್ನನಾದ ಯಾದವಾಗ್ರ್ಯ ಪುಷ್ಕರಾಕ್ಷ ಕೃಷ್ಣನು ಜ್ಯೇಷ್ಠ ಪಾಂಡವ ಭಾರತನನ್ನು ಉತ್ತಮ ಮಾತುಗಳಿಂದ ಅಭಿನಂದಿಸಿದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ವಾಸುದೇವಸ್ತುತೌ ತ್ರಿಚತ್ವಾರಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ವಾಸುದೇವಸ್ತುತಿ ಎನ್ನುವ ನಲ್ವತ್ಮೂರನೇ ಅಧ್ಯಾಯವು.
-
ಸಪ್ತಧಾ ವಿಷ್ಣ್ವಾಖ್ಯ ಆದಿತ್ಯೋ ವಾಮನಶ್ಚೇತಿ ದ್ವೇಧಾ ಆದಿತ್ಯಾಮೇವ ಜನ್ಮ। ತತಃ ಆದಿತೇಃ ರೂಪಾಂತರೇಷು ಪೃಶ್ನಿಪ್ರಭೃತಿಷು ಕ್ರಮಾತ್ಪೃಶ್ನಿಗರ್ಭ ಪರಶುರಾಮಃ ದಾಶರಥೀರಾಮಃ ಯಾದವೌ ರಾಮಕೃಷ್ಣೌ ಚೇತಿ ಸರ್ವೇಷು ಗರ್ಭೇಷು ಏಕ ಏವ ತ್ವಂ ನ ತು ಪ್ರತಿಗರ್ಭಂ ಭಿನ್ನಃ - ಅರ್ಥಾತ್ ಆದಿತ್ಯ ಮತ್ತು ವಾಮನನಾಗಿ ಎರಡು ಬಾರಿ ಅದಿತಿಯಲ್ಲಿ ಗರ್ಭಸ್ಥನಾಗಿದ್ದನೆಂದೂ, ಅದಿತಿಯ ಪೃಶ್ನಿಯೇ ಮೊದಲಾದ ಜನ್ಮಾಂತರಗಳಲ್ಲಿ ಪರಶುರಾಮ, ರಾಮ, ಬಲರಾಮ ಮತ್ತು ಕೃಷ್ಣರಾಗಿ ಹುಟ್ಟಿದವನು ಒಬ್ಬನೇ ಎಂದು ವ್ಯಾಖ್ಯಾನಕಾರರು ಅರ್ಥೈಸಿದ್ದಾರೆ. (ಭಾರತ ದರ್ಶನ, ಸಂಪುಟ 21, ಪುಟಸಂಖ್ಯೆ 365-366). ↩︎
-
ಪೃಶ್ನಿಯು ಕೃಷ್ಣನ ತಾಯಿ ದೇವಕಿಯು ತನ್ನ ಪೂರ್ವ ಜನ್ಮದಲ್ಲಿ ಸುತಪ ಎಂಬ ಪ್ರಜಾಪತಿಯಾಗಿದ್ದ ವಸುದೇವನ ಪತ್ನಿಯಾಗಿದ್ದಳು. ಆದುದರಿಂದ ಕೃಷ್ಣನಿಗೆ ಪೃಶ್ಣಿಗರ್ಭನೆಂಬ ಹೆಸರು. ವಸುದೇವ-ದೇವಕಿಯರು ಸುತಪ-ಪೃಶ್ನಿಯರಾಗಿದ್ದಾಗ ಉಗ್ರ ತಪಸ್ಸನ್ನಾಚರಿಸಿ ಪರಮಾತ್ಮನಲ್ಲಿ ಅವನಂಥಹ ಪುತ್ರನಾಗಬೇಕೆಂದು ಬೇಡಿಕೊಂಡಿದ್ದರು. ↩︎
-
್ರಿಯುಗಂ ಎನ್ನುವುದಕ್ಕೆ ವ್ಯಾಖ್ಯಾನಕಾರರು ಮೂರು ಯುಗ್ಮಗಳು ಇರುವಂಥವನು ಎಂದು ಅರ್ಥೈಸಿದ್ದಾರೆ. ಧರ್ಮ-ಜ್ಞಾನ-ವೈರಾಗ್ಯ-ಐಶ್ವರ್ಯ-ಶ್ರೀ-ಯಶಸ್ಸು ಇವೇ ಆ ಮೂರು ಯುಗ್ಮಗಳು. (ಭಾರತ ದರ್ಶನ, ಸಂಪುಟ 21, ಪುಟಸಂಖ್ಯೆ 367). ↩︎
-
ನಿನ್ನ ಕೀರ್ತಿಯು ಪರಮಪವಿತ್ರವಾದುದು. ↩︎
-
ಇಂದ್ರಿಯಗಳ ಪ್ರೇರಕ ↩︎
-
ಘೃತದಿಂದ ಹತ್ತಿ ಉರಿಯುವ ಯಜ್ಞೇಶ್ವರ ↩︎
-
ಸರ್ವತ್ರವ್ಯಾಪಕ . ↩︎
-
ಕೃಷ್ಣನ ತುಂಟತನವನ್ನು ತಡೆಯಲಾರದೇ ಯಶೋದೆಯು ಹಗ್ಗದಿಂದ ಅವನ ಹೊಟ್ಟೆಯನ್ನು ಕಟ್ಟಿ ಆ ಹಗ್ಗವನ್ನು ಒರಳುಕಲ್ಲಿಗೆ ಕಟ್ಟಿದುದರಿಂದ ಕೃಷ್ಣನಿಗೆ ದಾಮೋದರನೆಂಬ ಹೆಸರಾಯಿತು. ↩︎
-
ಸೂರ್ಯ . ↩︎
-
ಧರ್ಮ . ↩︎
-
ಗರುಡಧ್ವಜ . ↩︎
-
ಸೇನೆಗಳನ್ನು ಸಹಿಸಿಕೊಳ್ಳತಕ್ಕವನು ↩︎
-
ಅಂತರ್ಯಾಮಿ ಪರಮಾತ್ಮ ↩︎
-
ಎಲ್ಲರಲ್ಲಿಯೂ ಆತ್ಮರೂಪನಾಗಿರುವವನು ↩︎
-
ವಾಮನ . ↩︎
-
ಅನ್ನದಾತ . ↩︎
-
ಸಂಸ್ಕಾರ ಸಂಪನ್ನ ↩︎
-
ಸಂಸ್ಕಾರಗಳಿಲ್ಲದವನು . ↩︎
-
ಧರ್ಮ . ↩︎
-
ಯಜ್ಞಸ್ವರೂಪ . ↩︎
-
ಎಲ್ಲಕ್ಕೂ ಮೂಲ ಕಾರಣನು ↩︎
-
ಧರ್ಮಗರ್ಭ . ↩︎
-
ಹರಿ-ಹರ ರೂಪಿ ↩︎
-
ಸಮುದ್ರಸ್ವರೂಪಿ . ↩︎
-
ಕರ್ಮಮಾಡಲು ಯೋಗ್ಯವಾದ ಪೂರ್ವೋತ್ತರ ಮತ್ತು ಈಶಾನ್ಯ ದಿಕ್ಕುಗಳ ಸ್ವರೂಪಿ ↩︎
-
ಸ್ವರ್ಗದಿಂದ ಚ್ಯುತನಾಗಿ ಅವತರಿಸಿದವನು ↩︎
-
ಎಲ್ಲವುಗಳ ಉತ್ಪತ್ತಿ ಕಾರಣ ↩︎
-
ಸರ್ವತ್ರ ವ್ಯಾಪೀ ↩︎
-
ಎಲ್ಲವನ್ನೂ ತನ್ನ ಕಡೆಗೆ ಆಕರ್ಷಿಸಿಕೊಳ್ಳುವ ↩︎
-
ಅಗ್ನಿ . ↩︎
-
ಸಕಲಾಭಿಷ್ಟಗಳನ್ನೂ ನೆರವೇರಿಸಿಕೊಡುವವನು ↩︎
-
ಅಶ್ವಿನೀ ದೇವತೆಗಳ ತಂದೆ ಸೂರ್ಯ ↩︎
-
ಗರುಡ . ↩︎
-
ನವಿಲುಗರಿಯನ್ನು ಧರಿಸಿದವನು ↩︎
-
ಭೂಮಿಯನ್ನು ಧರಿಸಿರುವ ಅನಂತರೂಪೀ ↩︎
-
ಒಂದೇ ಕಾಲಿನಲ್ಲಿ ಆಕಾಶವನ್ನು ಅಳೆದವನು ↩︎
-
ಬ್ರಹ್ಮಾದಿದೇವತೆಗಳಲಿ ಅಂತರಾತ್ಮರೂಪನಾಗಿ ಪುನಃ ವಾಸಮಾಡುವವನು ↩︎
-
ಕಂದುಬಣ್ಣದವನು . ↩︎
-
ಯಜ್ಞದಲ್ಲಿ ಹೇರಳ ಸುವರ್ಣವನ್ನು ದಕ್ಷಿಣೆಯಾಗಿ ಕೊಟ್ಟವನು ↩︎
-
ದುಂದುಭಿ ಎನ್ನುವ ರಾಕ್ಷಸನನ್ನು ಸಂಹರಿಸಿದವನು ↩︎
-
ಕಿರಣಗಳೇ ರಥದ ಚಕ್ರಗಳಾಗಿರುವ ಸೂರ್ಯ ↩︎
-
ಸಮುದ್ರ . ↩︎