ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ರಾಜಧರ್ಮ ಪರ್ವ
ಅಧ್ಯಾಯ 41
ಸಾರ
ಭೀಮಾದಿಕರ್ಮನಿಯೋಗ (1-18).
12041001 ವೈಶಂಪಾಯನ ಉವಾಚ।
12041001a ಪ್ರಕೃತೀನಾಂ ತು ತದ್ವಾಕ್ಯಂ ದೇಶಕಾಲೋಪಸಂಹಿತಮ್।
12041001c ಶ್ರುತ್ವಾ ಯುಧಿಷ್ಠಿರೋ ರಾಜಾಥೋತ್ತರಂ ಪ್ರತ್ಯಭಾಷತ।।
ವೈಶಂಪಾಯನನು ಹೇಳಿದನು: “ಪ್ರಜೆಗಳ ದೇಶ-ಕಾಲೋಚಿತವಾದ ಆ ಮಾತುಗಳನ್ನು ಕೇಳಿ ರಾಜಾ ಯುಧಿಷ್ಠಿರನು ಉತ್ತರಪೂರ್ವಕವಾಗಿ ಈ ಮಾತನ್ನಾಡಿದನು:
12041002a ಧನ್ಯಾಃ ಪಾಂಡುಸುತಾ ಲೋಕೇ ಯೇಷಾಂ ಬ್ರಾಹ್ಮಣಪುಂಗವಾಃ।
12041002c ತಥ್ಯಾನ್ವಾಪ್ಯಥ ವಾತಥ್ಯಾನ್ಗುಣಾನಾಹುಃ ಸಮಾಗತಾಃ।।
“ಇಲ್ಲಿ ಸೇರಿರುವ ಬ್ರಾಹ್ಮಣಪುಂಗವರು ನಮ್ಮಲ್ಲಿರುವ ಗುಣಾವಗುಣಗಳನ್ನು ಗಮನಿಸದೇ ಕೇವಲ ಪ್ರೀತಿಯಿಂದ ನಮ್ಮನ್ನು ಗುಣವಂತರೆಂದೇ ಪ್ರಶಂಸಿಸಿರುವುದರಿಂದ ಪಾಂಡುಪುತ್ರರಾದ ನಾವೇ ಈ ಲೋಕದಲ್ಲಿ ಧನ್ಯರು!
12041003a ಅನುಗ್ರಾಹ್ಯಾ ವಯಂ ನೂನಂ ಭವತಾಮಿತಿ ಮೇ ಮತಿಃ।
12041003c ಯತ್ರೈವಂ ಗುಣಸಂಪನ್ನಾನಸ್ಮಾನ್ಬ್ರೂಥ ವಿಮತ್ಸರಾಃ।।
ನಾವು ನಿಮ್ಮೆಲ್ಲರ ಅನುಗ್ರಹಕ್ಕೆ ಪಾತ್ರರಾಗಿದ್ದೇವೆಂದು ನನ್ನ ಅಭಿಪ್ರಾಯವಾಗಿದೆ. ಅಸೂಯಾರಹಿತರಾದ ನೀವು ನಮ್ಮನ್ನು ಗುಣಸಂಪನ್ನರೆಂದು ಹೇಳಿದ್ದೀರಿ.
12041004a ಧೃತರಾಷ್ಟ್ರೋ ಮಹಾರಾಜಃ ಪಿತಾ ನೋ ದೈವತಂ ಪರಮ್।
12041004c ಸಾಶನೇಽಸ್ಯ ಪ್ರಿಯೇ ಚೈವ ಸ್ಥೇಯಂ ಮತ್ಪ್ರಿಯಕಾಂಕ್ಷಿಭಿಃ।।
ಮಹಾರಾಜ ಧೃತರಾಷ್ಟ್ರನು ನನ್ನ ಪಿತನೂ ಪರಮ ದೈವವೂ ಆಗಿದ್ದಾನೆ. ನನಗೆ ಪ್ರಿಯವನ್ನುಂಟುಮಾಡಲು ಅಪೇಕ್ಷಿಸುವವರು ಅವನ ಶಾಸನದಂತೆಯೇ ನಡೆದುಕೊಳ್ಳಬೇಕು.
12041005a ಏತದರ್ಥಂ ಹಿ ಜೀವಾಮಿ ಕೃತ್ವಾ ಜ್ಞಾತಿವಧಂ ಮಹತ್।
12041005c ಅಸ್ಯ ಶುಶ್ರೂಷಣಂ ಕಾರ್ಯಂ ಮಯಾ ನಿತ್ಯಮತಂದ್ರಿಣಾ।।
ಈ ಮಹಾ ಜ್ಞಾತಿವಧೆಯನ್ನು ಮಾಡಿ ನಾನು ಇವನ ಸಲುವಾಗಿಯೇ ಜೀವಿಸಿರುತ್ತೇನೆ. ಆಲಸನಾಗಿರದೇ ನಿತ್ಯವೂ ಇವನ ಶುಶ್ರೂಷಣೆಯನ್ನು ಮಾಡುವುದೇ ನನ್ನ ಕಾರ್ಯವಾಗಿದೆ.
12041006a ಯದಿ ಚಾಹಮನುಗ್ರಾಹ್ಯೋ ಭವತಾಂ ಸುಹೃದಾಂ ತತಃ।
12041006c ಧೃತರಾಷ್ಟ್ರೇ ಯಥಾಪೂರ್ವಂ ವೃತ್ತಿಂ ವರ್ತಿತುಮರ್ಹಥ।।
ನಾನು ಸುಹೃದಯರಾದ ನಿಮ್ಮ ಅನುಗ್ರಹಕ್ಕೆ ಪಾತ್ರನಾಗಿರುವುದೇ ಆದರೆ ಧೃತರಾಷ್ಟ್ರನ ವಿಷಯದಲ್ಲಿ ನೀವು ಹಿಂದೆ ಹೇಗೆ ನಡೆದುಕೊಳ್ಳುತ್ತಿದ್ದರೋ ಈಗಲೂ ಹಾಗೆಯೇ ನಡೆದುಕೊಳ್ಳಬೇಕು.
12041007a ಏಷ ನಾಥೋ ಹಿ ಜಗತೋ ಭವತಾಂ ಚ ಮಯಾ ಸಹ।
12041007c ಅಸ್ಯೈವ ಪೃಥಿವೀ ಕೃತ್ಸ್ನಾ ಪಾಂಡವಾಃ ಸರ್ವ ಏವ ಚ।
12041007e ಏತನ್ಮನಸಿ ಕರ್ತವ್ಯಂ ಭವದ್ಭಿರ್ವಚನಂ ಮಮ।।
ನನಗೆ, ನಿಮಗೆ ಮತ್ತು ಈ ಜಗತ್ತಿಗೆ ಇವನೇ ಒಡೆಯನು. ಈ ಇಡೀ ಪೃಥ್ವಿ, ಪಾಂಡವರೆಲ್ಲರೂ ಮತ್ತು ನೀವೂ ಇದನ್ನು ಮನಸ್ಸಿನಲ್ಲಿಟ್ಟುಕೊಂಡು ನಡೆದುಕೊಳ್ಳಬೇಕೆಂದು ನಾನು ಕೇಳಿಕೊಳ್ಳುತ್ತಿದ್ದೇನೆ.”
12041008a ಅನುಗಮ್ಯ ಚ ರಾಜಾನಂ ಯಥೇಷ್ಟಂ ಗಮ್ಯತಾಮಿತಿ।
12041008c ಪೌರಜಾನಪದಾನ್ಸರ್ವಾನ್ವಿಸೃಜ್ಯ ಕುರುನಂದನಃ।
12041008e ಯೌವರಾಜ್ಯೇನ ಕೌರವ್ಯೋ ಭೀಮಸೇನಮಯೋಜಯತ್।।
ರಾಜರು ಮತ್ತು ಪೌರಜನಪದದ ಎಲ್ಲರೂ ಇಷ್ಟಬಂದಂತೆ ಹೋಗಬಹುದೆಂದು ಕುರುನಂದನನು ಅನುಮತಿಯನ್ನಿತ್ತನು. ಕೌರವ್ಯನು ಭೀಮಸೇನನನ್ನು ಯುವರಾಜನನ್ನಾಗಿ ನಿಯಮಿಸಿಕೊಂಡನು.
12041009a ಮಂತ್ರೇ ಚ ನಿಶ್ಚಯೇ ಚೈವ ಷಾಡ್ಗುಣ್ಯಸ್ಯ ಚ ಚಿಂತನೇ।
12041009c ವಿದುರಂ ಬುದ್ಧಿಸಂಪನ್ನಂ ಪ್ರೀತಿಮಾನ್ವೈ ಸಮಾದಿಶತ್।।
ಗುಪ್ತಸಲಹೆಗಳಿಗೆ ಮತ್ತು ನಿರ್ಧಾರಗಳಿಗೆ ಮತ್ತು ಆರುಗುಣ68ಗಳ ವಿಷಯವಾಗಿ ಸಮಾಲೋಚಿಸಲು ಪ್ರೀತಿಪಾತ್ರನಾದ ಬುದ್ಧಿಸಂಪನ್ನ ವಿದುರನನ್ನು ನಿಯಮಿಸಿಕೊಂಡನು.
12041010a ಕೃತಾಕೃತಪರಿಜ್ಞಾನೇ ತಥಾಯವ್ಯಯಚಿಂತನೇ।
12041010c ಸಂಜಯಂ ಯೋಜಯಾಮಾಸ ಋದ್ಧಮೃದ್ಧೈರ್ಗುಣೈರ್ಯುತಮ್।।
ಮಾಡಬೇಕಾದ ಮತ್ತು ಮಾಡಬಾರದ ಕಾರ್ಯಗಳ ಕುರಿತು ಪರಿಜ್ಞಾನವನ್ನು ನೀಡಲು ಮತ್ತು ಆದಾಯ-ವೆಚ್ಚಗಳ ಕುರಿತು ಸಮಾಲೋಚಿಸಲು ವೃದ್ಧ-ಪ್ರಾಮಾಣಿಕ ಗುಣ ಸಂಪನ್ನನಾದ ಸಂಜಯನನ್ನು ನಿಯೋಜಿಸಿದನು.
12041011a ಬಲಸ್ಯ ಪರಿಮಾಣೇ ಚ ಭಕ್ತವೇತನಯೋಸ್ತಥಾ।
12041011c ನಕುಲಂ ವ್ಯಾದಿಶದ್ರಾಜಾ ಕರ್ಮಿಣಾಮನ್ವವೇಕ್ಷಣೇ।।
ಬಲದ ಅಳತೆಗೂ, ಭತ್ಯ-ವೇತನಗಳ ವಿತರಣೆಗೂ ಮತ್ತು ಕಾರ್ಮಿಕರ ಮೇಲ್ವಿಚಾರಣೆಗೂ ರಾಜನು ನಕುಲನನ್ನು ನಿಯಮಿಸಿಕೊಂಡನು.
12041012a ಪರಚಕ್ರೋಪರೋಧೇ ಚ ದೃಪ್ತಾನಾಂ ಚಾವಮರ್ದನೇ।
12041012c ಯುಧಿಷ್ಠಿರೋ ಮಹಾರಾಜಃ ಫಲ್ಗುನಂ ವ್ಯಾದಿದೇಶ ಹ।।
ಶತ್ರುಗಳ ಆಕ್ರಮಣಕ್ಕೂ ದರ್ಪದಲ್ಲಿರುವವರನ್ನು ಮರ್ದಿಸುವುದಕ್ಕೂ ಮಹಾರಾಜ ಯುಧಿಷ್ಠಿರನು ಫಲ್ಗುನನನ್ನು ನಿಯೋಜಿಸಿದನು.
12041013a ದ್ವಿಜಾನಾಂ ವೇದಕಾರ್ಯೇಷು ಕಾರ್ಯೇಷ್ವನ್ಯೇಷು ಚೈವ ಹಿ।
12041013c ಧೌಮ್ಯಂ ಪುರೋಧಸಾಂ ಶ್ರೇಷ್ಠಂ ವ್ಯಾದಿದೇಶ ಪರಂತಪಃ।।
ದ್ವಿಜರ ವೇದಕಾರ್ಯಗಳಿಗೆ ಮತ್ತು ಅನ್ಯ ಕಾರ್ಯಗಳಿಗೆ ಪುರೋಹಿತ ಧೌಮ್ಯನನ್ನು ಆ ಪರಂತಪನು ನಿಯಮಿಸಿಕೊಂಡನು.
12041014a ಸಹದೇವಂ ಸಮೀಪಸ್ಥಂ ನಿತ್ಯಮೇವ ಸಮಾದಿಶತ್।
12041014c ತೇನ ಗೋಪ್ಯೋ ಹಿ ನೃಪತಿಃ ಸರ್ವಾವಸ್ಥೋ ವಿಶಾಂ ಪತೇ।।
ವಿಶಾಂಪತೇ! ನೃಪತಿಯು ಸಹದೇವನನ್ನು ನಿತ್ಯವೂ ಸಮೀಪದಲ್ಲಿದ್ದುಕೊಂಡು ತನ್ನನ್ನು ರಕ್ಷಿಸುವ ಕಾರ್ಯವನ್ನು ವಹಿಸಿದನು.
12041015a ಯಾನ್ಯಾನಮನ್ಯದ್ಯೋಗ್ಯಾಂಶ್ಚ ಯೇಷು ಯೇಷ್ವಿಹ ಕರ್ಮಸು।
12041015c ತಾಂಸ್ತಾಂಸ್ತೇಷ್ವೇವ ಯುಯುಜೇ ಪ್ರೀಯಮಾಣೋ ಮಹೀಪತಿಃ।।
ಅನಂತರ ಪ್ರಸನ್ನಚಿತ್ತನಾದ ಮಹೀಪತಿಯು ಯಾರ್ಯಾರು ಯಾವ್ಯಾವ ಕರ್ಮಗಳಲ್ಲಿ ಸಮರ್ಥರೆಂದು ತಿಳಿದು ಅದರಂತೆಯೇ ಕಾರ್ಯಗಳನ್ನು ವಹಿಸಿಕೊಟ್ಟನು.
12041016a ವಿದುರಂ ಸಂಜಯಂ ಚೈವ ಯುಯುತ್ಸುಂ ಚ ಮಹಾಮತಿಮ್।
12041016c ಅಬ್ರವೀತ್ಪರವೀರಘ್ನೋ ಧರ್ಮಾತ್ಮಾ ಧರ್ಮವತ್ಸಲಃ।।
ಪರವೀರಘ್ನ ಧರ್ಮಾತ್ಮಾ ಧರ್ಮವತ್ಸಲ ಯುಧಿಷ್ಠಿರನು ವಿದುರ-ಸಂಜಯ ಮತ್ತು ಮಹಾಮತಿ ಯುಯುತ್ಸುವಿಗೆ ಈ ರೀತಿ ಹೇಳಿದನು:
12041017a ಉತ್ಥಾಯೋತ್ಥಾಯ ಯತ್ಕಾರ್ಯಮಸ್ಯ ರಾಜ್ಞಃ ಪಿತುರ್ಮಮ।
12041017c ಸರ್ವಂ ಭವದ್ಭಿಃ ಕರ್ತವ್ಯಮಪ್ರಮತ್ತೈರ್ಯಥಾತಥಮ್।।
“ಬೆಳಗಾದೊಡನೆಯೇ ಎದ್ದು ಈ ನನ್ನ ತಂದೆ ರಾಜನ ಕಾರ್ಯವೆಲ್ಲವನ್ನೂ ಯಥಾವತ್ತಾಗಿ ಮಾಡಿಕೊಡಬೇಕಾಗಿರುವುದು ನಿಮ್ಮೆಲ್ಲರ ಕರ್ತವ್ಯವಾಗಿರುತ್ತದೆ.
12041018a ಪೌರಜಾನಪದಾನಾಂ ಚ ಯಾನಿ ಕಾರ್ಯಾಣಿ ನಿತ್ಯಶಃ।
12041018c ರಾಜಾನಂ ಸಮನುಜ್ಞಾಪ್ಯ ತಾನಿ ಕಾರ್ಯಾಣಿ ಧರ್ಮತಃ।।
ಪೌರ-ಜನಪದರ ಎಲ್ಲ ಕಾರ್ಯಗಳನ್ನೂ ರಾಜನ ಅಪ್ಪಣೆಯಂತೆ ನಿತ್ಯವೂ ಪೂರ್ಣಗೊಳಿಸುವುದೂ ನಿಮ್ಮ ಕರ್ತವ್ಯವಾಗಿರುತ್ತದೆ.””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ಭೀಮಾದಿಕರ್ಮನಿಯೋಗೇ ಏಕಚತ್ವಾರಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಭೀಮಾದಿಕರ್ಮನಿಯೋಗ ಎನ್ನುವ ನಲ್ವತ್ತೊಂದನೇ ಅಧ್ಯಾಯವು.