039 ಚಾರ್ವಾಕವಧಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ರಾಜಧರ್ಮ ಪರ್ವ

ಅಧ್ಯಾಯ 39

ಸಾರ

ಚರ್ವಾಕಚರಿತ ಕಥನ (1-49).

12039001 ವೈಶಂಪಾಯನ ಉವಾಚ।
12039001a ಪ್ರವೇಶನೇ ತು ಪಾರ್ಥಾನಾಂ ಜನಸ್ಯ ಪುರವಾಸಿನಃ।
12039001c ದಿದೃಕ್ಷೂಣಾಂ ಸಹಸ್ರಾಣಿ ಸಮಾಜಗ್ಮುರ್ಬಹೂನ್ಯಥ।।

ವೈಶಂಪಾಯನನು ಹೇಳಿದನು: “ಪಾರ್ಥರು ಪ್ರವೇಶಿಸುತ್ತಿದ್ದಂತೆ ಅವರನ್ನು ನೋಡಲು ಸಹಸ್ರಾರು ಪುರವಾಸೀ ಜನರು ಬಂದು ಸೇರಿದರು.

12039002a ಸ ರಾಜಮಾರ್ಗಃ ಶುಶುಭೇ ಸಮಲಂಕೃತಚತ್ವರಃ।
12039002c ಯಥಾ ಚಂದ್ರೋದಯೇ ರಾಜನ್ವರ್ಧಮಾನೋ ಮಹೋದಧಿಃ।।

ರಾಜನ್! ಚಂದ್ರೋದಯದ ಸಮಯದಲ್ಲಿ ಉಕ್ಕಿಬರುವ ಸಮುದ್ರದಂತೆ ಸಿಂಗರಿಸಿದ ರಾಜಮಾರ್ಗದ ಚೌಕವು ಅಸಂಖ್ಯಾತ ಜನಸ್ತೋಮದಿಂದ ಶೋಭಿಸುತ್ತಿತ್ತು.

12039003a ಗೃಹಾಣಿ ರಾಜಮಾರ್ಗೇ ತು ರತ್ನವಂತಿ ಬೃಹಂತಿ ಚ।
12039003c ಪ್ರಾಕಂಪಂತೇವ ಭಾರೇಣ ಸ್ತ್ರೀಣಾಂ ಪೂರ್ಣಾನಿ ಭಾರತ।।

ರಾಜಮಾರ್ಗದಲ್ಲಿದ್ದ ವಿಶಾಲ ರತ್ನಖಚಿತ ಭವನಗಳು ಸ್ತ್ರೀಯರಿಂದ ತುಂಬಿಹೋಗಿ ಅವರ ಭಾರದಿಂದ ಕಂಪಿಸುತ್ತಿವೆಯೋ ಎಂಬಂತೆ ತೋರುತ್ತಿದ್ದವು.

12039004a ತಾಃ ಶನೈರಿವ ಸವ್ರೀಡಂ ಪ್ರಶಶಂಸುರ್ಯುಧಿಷ್ಠಿರಮ್।
12039004c ಭೀಮಸೇನಾರ್ಜುನೌ ಚೈವ ಮಾದ್ರೀಪುತ್ರೌ ಚ ಪಾಂಡವೌ।।

ಆ ಸ್ತ್ರೀಯರು ನಾಚಿಕೊಂಡು ಮೆಲ್ಲನೇ ಯುಧಿಷ್ಠಿರನನ್ನು, ಭೀಮಸೇನ-ಅರ್ಜುನರನ್ನು ಮತ್ತು ಇಬ್ಬರು ಮಾದ್ರೀಪುತ್ರ ಪಾಂಡವರನ್ನು ಪ್ರಶಂಸಿಸುತ್ತಿದ್ದರು.

12039005a ಧನ್ಯಾ ತ್ವಮಸಿ ಪಾಂಚಾಲಿ ಯಾ ತ್ವಂ ಪುರುಷಸತ್ತಮಾನ್।
12039005c ಉಪತಿಷ್ಠಸಿ ಕಲ್ಯಾಣಿ ಮಹರ್ಷೀನಿವ ಗೌತಮೀ।।
12039006a ತವ ಕರ್ಮಾಣ್ಯಮೋಘಾನಿ ವ್ರತಚರ್ಯಾ ಚ ಭಾಮಿನಿ।
12039006c ಇತಿ ಕೃಷ್ಣಾಂ ಮಹಾರಾಜ ಪ್ರಶಶಂಸುಸ್ತದಾ ಸ್ತ್ರಿಯಃ।।

“ಪಾಂಚಾಲೀ! ಕಲ್ಯಾಣೀ! ಮಹರ್ಷಿಗಳನ್ನು ಸೇವಿಸುತ್ತಿದ್ದ ಗೌತಮಿಯಂತೆ67 ಈ ಪುರುಷಸತ್ತಮರನ್ನು ಸೇವಿಸುತ್ತಿದ್ದ ನೀನೇ ಧನ್ಯಳು! ಭಾಮಿನೀ! ನೀನು ಮಾಡಿರುವ ವ್ರತಚರ್ಯೆಗಳೂ ಕರ್ಮಗಳೂ ಅಮೋಘವಾದವುಗಳು!” ಮಹಾರಾಜ! ಹೀಗೆ ಸ್ತ್ರೀಯರು ಕೃಷ್ಣೆಯನ್ನು ಪ್ರಶಂಸಿಸುತ್ತಿದ್ದರು.

12039007a ಪ್ರಶಂಸಾವಚನೈಸ್ತಾಸಾಂ ಮಿಥಃಶಬ್ದೈಶ್ಚ ಭಾರತ।
12039007c ಪ್ರೀತಿಜೈಶ್ಚ ತದಾ ಶಬ್ದೈಃ ಪುರಮಾಸೀತ್ಸಮಾಕುಲಮ್।।

ಭಾರತ! ರಹಸ್ಯವಾಗಿ ಆಡಿಕೊಳ್ಳುತ್ತಿದ್ದ ಆ ಪ್ರಶಂಸೆಯ ಮಾತುಗಳಿಂದಲೂ ಪ್ರೀತಿಯುಕ್ತ ಮಾತುಗಳಿಂದಲೂ ಆ ಪುರವು ತುಂಬಿಹೋಗಿತ್ತು.

12039008a ತಮತೀತ್ಯ ಯಥಾಯುಕ್ತಂ ರಾಜಮಾರ್ಗಂ ಯುಧಿಷ್ಠಿರಃ।
12039008c ಅಲಂಕೃತಂ ಶೋಭಮಾನಮುಪಾಯಾದ್ರಾಜವೇಶ್ಮ ಹ।।

ಯಥಾಯುಕ್ತವಾಗಿ ರಾಜಮಾರ್ಗವನ್ನು ದಾಟಿ, ಶೋಭಾಯಮಾನವಾಗಿ ಅಲಂಕೃತಗೊಂಡಿದ್ದ ರಾಜಭವನವನ್ನು ಯುಧಿಷ್ಠಿರನು ಪ್ರವೇಶಿಸಿದನು.

12039009a ತತಃ ಪ್ರಕೃತಯಃ ಸರ್ವಾಃ ಪೌರಜಾನಪದಾಸ್ತಥಾ।
12039009c ಊಚುಃ ಕಥಾಃ ಕರ್ಣಸುಖಾಃ ಸಮುಪೇತ್ಯ ತತಸ್ತತಃ।।

ಆಗ ಎಲ್ಲ ಸಾಮಾನ್ಯ ಜನರೂ, ಪೌರಜನರೂ ಅಲ್ಲಲ್ಲಿ ಸೇರಿಕೊಂಡು ಕರ್ಣಾನಂದಕರವಾದ ಮಾತುಗಳನ್ನಾಡುತ್ತಿದ್ದರು:

12039010a ದಿಷ್ಟ್ಯಾ ಜಯಸಿ ರಾಜೇಂದ್ರ ಶತ್ರೂನ್ಶತ್ರುನಿಸೂದನ।
12039010c ದಿಷ್ಟ್ಯಾ ರಾಜ್ಯಂ ಪುನಃ ಪ್ರಾಪ್ತಂ ಧರ್ಮೇಣ ಚ ಬಲೇನ ಚ।।

“ರಾಜೇಂದ್ರ! ಶತ್ರುನಿಸೂದನ! ಸೌಭಾಗ್ಯವಶಾತ್ ನೀನು ಶತ್ರುಗಳನ್ನು ಜಯಿಸಿರುವೆ. ಸೌಭಾಗ್ಯವಶಾತ್ ನೀನು ಪುನಃ ಧರ್ಮ-ಬಲಗಳನ್ನುಪಯೋಗಿಸಿ ರಾಜ್ಯವನ್ನು ಪಡೆದಿರುವೆ!

12039011a ಭವ ನಸ್ತ್ವಂ ಮಹಾರಾಜ ರಾಜೇಹ ಶರದಾಂ ಶತಮ್।
12039011c ಪ್ರಜಾಃ ಪಾಲಯ ಧರ್ಮೇಣ ಯಥೇಂದ್ರಸ್ತ್ರಿದಿವಂ ನೃಪ।।

ಮಹಾರಾಜ! ನೀನು ನೂರು ವರ್ಷಗಳ ಪರ್ಯಂತವಾಗಿ ನಮ್ಮ ರಾಜನಾಗಿರು. ನೃಪ! ಇಂದ್ರನು ದಿವವನ್ನು ಹೇಗೋ ಹಾಗೆ ಧರ್ಮದಿಂದ ಪ್ರಜೆಗಳನ್ನು ಪಾಲಿಸು!”

12039012a ಏವಂ ರಾಜಕುಲದ್ವಾರಿ ಮಂಗಲೈರಭಿಪೂಜಿತಃ।
12039012c ಆಶೀರ್ವಾದಾನ್ದ್ವಿಜೈರುಕ್ತಾನ್ಪ್ರತಿಗೃಹ್ಯ ಸಮಂತತಃ।।

ರಾಜಭವನದ ದ್ವಾರದಲ್ಲಿ ಈ ರೀತಿ ಮಂಗಲದ್ರವ್ಯಗಳಿಂದ ಪೂಜಿತನಾಗಿ ಅವನು ಎಲ್ಲಕಡೆಗಳಿಂದ ಬರುತ್ತಿದ್ದ ದ್ವಿಜರ ಆಶೀರ್ವಾದಗಳನ್ನು ಸ್ವೀಕರಿಸಿದನು.

12039013a ಪ್ರವಿಶ್ಯ ಭವನಂ ರಾಜಾ ದೇವರಾಜಗೃಹೋಪಮಮ್।
12039013c ಶ್ರುತ್ವಾ ವಿಜಯಸಂಯುಕ್ತಂ ರಥಾತ್ಪಶ್ಚಾದವಾತರತ್।।

ದೇವರಾಜನ ಭವನದಂತಿದ್ದ ರಾಜಭವನವನ್ನು ಪ್ರವೇಶಿಸಿ ವಿಜಯ ಘೋಷಗಳಿಂದ ಸಂಯುಕ್ತವಾಗಿದ್ದ ರಥದಿಂದ ಕೆಳಕ್ಕಿಳಿದನು.

12039014a ಪ್ರವಿಶ್ಯಾಭ್ಯಂತರಂ ಶ್ರೀಮಾನ್ದೈವತಾನ್ಯಭಿಗಮ್ಯ ಚ।
12039014c ಪೂಜಯಾಮಾಸ ರತ್ನೈಶ್ಚ ಗಂಧೈರ್ಮಾಲ್ಯೈಶ್ಚ ಸರ್ವಶಃ।।

ಶ್ರೀಯಿಂದ ಬೆಳಗುತ್ತಿದ್ದ ಅರಮನೆಯ ಒಳಭಾಗವನ್ನು ಪ್ರವೇಶಿಸಿ ಅವನು ಕುಲದೇವತೆಗಳ ಸನ್ನಿಧಿಗೆ ಹೋಗಿ ದೇವತೆಗಳೆಲ್ಲರನ್ನೂ ರತ್ನ-ಗಂಧ-ಮಾಲೆಗಳಿಂದ ಪೂಜಿಸಿದನು.

12039015a ನಿಶ್ಚಕ್ರಾಮ ತತಃ ಶ್ರೀಮಾನ್ಪುನರೇವ ಮಹಾಯಶಾಃ।
12039015c ದದರ್ಶ ಬ್ರಾಹ್ಮಣಾಂಶ್ಚೈವ ಸೋಽಭಿರೂಪಾನುಪಸ್ಥಿತಾನ್।।

ಶ್ರೀಮಂತನೂ ಮಹಾಯಶಸ್ವಿಯೂ ಆಗಿದ್ದ ಅವನು ಪುನಃ ರಾಜಭವನದಿಂದ ಹೊರಟು ಎದುರಿಗೆ ನೆರೆದಿದ್ದ ಬ್ರಾಹ್ಮಣರನ್ನು ನೋಡಿದನು.

12039016a ಸ ಸಂವೃತಸ್ತದಾ ವಿಪ್ರೈರಾಶೀರ್ವಾದವಿವಕ್ಷುಭಿಃ।
12039016c ಶುಶುಭೇ ವಿಮಲಶ್ಚಂದ್ರಸ್ತಾರಾಗಣವೃತೋ ಯಥಾ।।

ಆಶೀರ್ವದಿಸಲು ಅಲ್ಲಿಗೆ ಬಂದು ಸೇರಿದ್ದ ವಿಪ್ರರಿಂದ ಪರಿವೃತನಾದ ಅವನು ವಿಮಲ ಆಕಾಶದಲ್ಲಿ ತಾರಾಗಣಗಳಿಂದ ಸುತ್ತುವರೆಯಲ್ಪಟ್ಟ ಚಂದ್ರನಂತೆ ಶೋಭಿಸಿದನು.

12039017a ತಾನ್ಸ ಸಂಪೂಜಯಾಮಾಸ ಕೌಂತೇಯೋ ವಿಧಿವದ್ದ್ವಿಜಾನ್।
12039017c ಧೌಮ್ಯಂ ಗುರುಂ ಪುರಸ್ಕೃತ್ಯ ಜ್ಯೇಷ್ಠಂ ಪಿತರಮೇವ ಚ।।
12039018a ಸುಮನೋಮೋದಕೈ ರತ್ನೈರ್ಹಿರಣ್ಯೇನ ಚ ಭೂರಿಣಾ।
12039018c ಗೋಭಿರ್ವಸ್ತ್ರೈಶ್ಚ ರಾಜೇಂದ್ರ ವಿವಿಧೈಶ್ಚ ಕಿಮಿಚ್ಚಕೈಃ।।

ರಾಜೇಂದ್ರ! ಕೌಂತೇಯನು ಗುರು ಧೌಮ್ಯ ಮತ್ತು ದೊಡ್ಡಪ್ಪರನ್ನು ಮುಂದಿಟ್ಟುಕೊಂಡು ಆ ದ್ವಿಜರನ್ನು ಪುಷ್ಪಗಳಿಂದಲೂ, ಮೋದಕಗಳಿಂದಲೂ, ರತ್ನ-ಹಿರಣ್ಯಗಳಿಂದಲೂ, ಗೋವುಗಳಿಂದಲೂ ಮತ್ತು ವಿವಿಧ ವಸ್ತುಗಳಿಂದಲೂ ಪೂಜಿಸಿದನು.

12039019a ತತಃ ಪುಣ್ಯಾಹಘೋಷೋಽಭೂದ್ದಿವಂ ಸ್ತಬ್ಧ್ವೇವ ಭಾರತ।
12039019c ಸುಹೃದಾಂ ಹರ್ಷಜನನಃ ಪುಣ್ಯಃ ಶ್ರುತಿಸುಖಾವಹಃ।।

ಭಾರತ! ಆಗ ಆಕಾಶವನ್ನೇ ಸ್ತಬ್ಧಗೊಳಿಸುವಂಥಹ ಪುಣ್ಯಾಹ ಘೋಷವು ಕೇಳಿಬಂದಿತು. ಸುಹೃದಯರಿಗೆ ಕೇಳಿದರೆ ಪುಣ್ಯವನ್ನೂ ಹರ್ಷವನ್ನೂ ತರುವ ಘೋಷಗಳು ಕೇಳಿಬಂದವು.

12039020a ಹಂಸವನ್ನೇದುಷಾಂ ರಾಜನ್ದ್ವಿಜಾನಾಂ ತತ್ರ ಭಾರತೀ।
12039020c ಶುಶ್ರುವೇ ವೇದವಿದುಷಾಂ ಪುಷ್ಕಲಾರ್ಥಪದಾಕ್ಷರಾ।।

ರಾಜನ್! ಅಲ್ಲಿ ಹಂಸಗಳಂತೆ ಘೋಷಿಸುತ್ತಿದ್ದ ವೇದವಿದುಷ ದ್ವಿಜರ ಶ್ರೇಷ್ಠ ಪದಾಕ್ಷರಸಂಪನ್ನ ವಾಣಿಯು ಎಲ್ಲರಿಗೂ ಸ್ಪಷ್ಟವಾಗಿ ಕೇಳಿಬರುತ್ತಿತ್ತು.

12039021a ತತೋ ದುಂದುಭಿನಿರ್ಘೋಷಃ ಶಂಖಾನಾಂ ಚ ಮನೋರಮಃ।
12039021c ಜಯಂ ಪ್ರವದತಾಂ ತತ್ರ ಸ್ವನಃ ಪ್ರಾದುರಭೂನ್ನೃಪ।।

ನೃಪ! ಆಗ ಮನೋರಮ ದುಂದುಭಿ ಮತ್ತು ಶಂಖಗಳ ನಿರ್ಘೋಷವೂ ಜಯಕಾರ ಧ್ವನಿಯೂ ಕೇಳಿಬಂದವು.

12039022a ನಿಃಶಬ್ದೇ ಚ ಸ್ಥಿತೇ ತತ್ರ ತತೋ ವಿಪ್ರಜನೇ ಪುನಃ।
12039022c ರಾಜಾನಂ ಬ್ರಾಹ್ಮಣಚ್ಚದ್ಮಾ ಚಾರ್ವಾಕೋ ರಾಕ್ಷಸೋಽಬ್ರವೀತ್।।

ಆಗ ಅಲ್ಲಿ ವಿಪ್ರಜನರು ಪುನಃ ನಿಃಷಬ್ಧರಾಗಲು ಬ್ರಾಹ್ಮಣ ವೇಷಧರಿಸಿದ್ದ ರಾಕ್ಷಸ ಚಾರ್ವಾಕನು ರಾಜನನ್ನು ಉದ್ದೇಶಿಸಿ ಹೇಳಿದನು.

12039023a ತತ್ರ ದುರ್ಯೋಧನಸಖಾ ಭಿಕ್ಷುರೂಪೇಣ ಸಂವೃತಃ।
12039023c ಸಾಂಖ್ಯಃ ಶಿಖೀ ತ್ರಿದಂಡೀ ಚ ಧೃಷ್ಟೋ ವಿಗತಸಾಧ್ವಸಃ।।

ಆ ದುರ್ಯೋಧನನ ಸಖನು ಭಿಕ್ಷುವಿನ ರೂಪವನ್ನು ಧರಿಸಿ ಅಕ್ಷಮಾಲೆಯನ್ನು ಹಿಡಿದು ಶಿಖಾಧಾರಿಯಾಗಿ ತ್ರಿದಂಡವನ್ನು ಹಿಡಿದು ಧೈರ್ಯಶಾಲಿಯಾಗಿ ತನ್ನ ನಿಜರೂಪವನ್ನು ಮರೆಸಿಕೊಂಡಿದ್ದನು.

12039024a ವೃತಃ ಸರ್ವೈಸ್ತದಾ ವಿಪ್ರೈರಾಶೀರ್ವಾದವಿವಕ್ಷುಭಿಃ।
12039024c ಪರಂಸಹಸ್ರೈ ರಾಜೇಂದ್ರ ತಪೋನಿಯಮಸಂಸ್ಥಿತೈಃ।।
12039025a ಸ ದುಷ್ಟಃ ಪಾಪಮಾಶಂಸಮ್ಪಾಂಡವಾನಾಂ ಮಹಾತ್ಮನಾಮ್।
12039025c ಅನಾಮಂತ್ರ್ಯೈವ ತಾನ್ವಿಪ್ರಾಂಸ್ತಮುವಾಚ ಮಹೀಪತಿಮ್।।

ರಾಜೇಂದ್ರ! ಆಶೀರ್ವಾದವನ್ನು ನೀಡಲು ಬಂದಿದ್ದ ಆ ಎಲ್ಲ ತಪೋನಿಯಮ ಸಂಸ್ಥಿತ ಸಹಸ್ರಾರು ವಿಪ್ರರ ಮಧ್ಯದಿಂದ ಮಹಾತ್ಮ ಪಾಂಡವರಿಗೆ ಕೇಡನ್ನೇ ಬಯಸುತ್ತಿದ್ದ ಆ ದುಷ್ಟನು ಮುಂದೆ ಬಂದು ವಿಪ್ರರ ಅನುಮತಿಯನ್ನು ಕೇಳದೇ ಮಹೀಪತಿಗೆ ಹೇಳತೊಡಗಿದನು.

12039026a ಇಮೇ ಪ್ರಾಹುರ್ದ್ವಿಜಾಃ ಸರ್ವೇ ಸಮಾರೋಪ್ಯ ವಚೋ ಮಯಿ।
12039026c ಧಿಗ್ಭವಂತಂ ಕುನೃಪತಿಂ ಜ್ಞಾತಿಘಾತಿನಮಸ್ತು ವೈ।।

“ಈ ಎಲ್ಲ ದ್ವಿಜರೂ ನಿನಗೆ ಇದನ್ನು ಹೇಳುವ ಭಾರವನ್ನು ನನಗೆ ವಹಿಸಿದ್ದಾರೆ. ಜ್ಞಾತಿಬಾಂಧವರನ್ನು ಸಂಹರಿಸಿದ ಕುನೃಪತಿ ನಿನಗೆ ಧಿಕ್ಕಾರ!

12039027a ಕಿಂ ತೇ ರಾಜ್ಯೇನ ಕೌಂತೇಯ ಕೃತ್ವೇಮಂ ಜ್ಞಾತಿಸಂಕ್ಷಯಮ್।
12039027c ಘಾತಯಿತ್ವಾ ಗುರೂಂಶ್ಚೈವ ಮೃತಂ ಶ್ರೇಯೋ ನ ಜೀವಿತಮ್।।

ಕೌಂತೇಯ! ಕುಲನಾಶವನ್ನು ಮಾಡಿರುವ ನಿನಗೆ ಈ ರಾಜ್ಯದಿಂದ ಏನು ಪ್ರಯೋಜನ? ಗುರುಜನರನ್ನೂ ಸಂಹರಿಸಿದ ನಿನಗೆ ಬದುಕಿರುವುದಕ್ಕಿಂತಲೂ ಮರಣವೇ ಶ್ರೇಯಸ್ಕರವಾದುದು!”

12039028a ಇತಿ ತೇ ವೈ ದ್ವಿಜಾಃ ಶ್ರುತ್ವಾ ತಸ್ಯ ಘೋರಸ್ಯ ರಕ್ಷಸಃ।
12039028c ವಿವ್ಯಥುಶ್ಚುಕ್ರುಶುಶ್ಚೈವ ತಸ್ಯ ವಾಕ್ಯಪ್ರಧರ್ಷಿತಾಃ।।

ಆ ಘೋರ ರಾಕ್ಷಸನ ಕಠೋರ ಮಾತನ್ನು ಕೇಳಿ ದ್ವಿಜರು ವ್ಯಥಿತರಾಗಿ ಶೋಕಿಸಿದರು.

12039029a ತತಸ್ತೇ ಬ್ರಾಹ್ಮಣಾಃ ಸರ್ವೇ ಸ ಚ ರಾಜಾ ಯುಧಿಷ್ಠಿರಃ।
12039029c ವ್ರೀಡಿತಾಃ ಪರಮೋದ್ವಿಗ್ನಾಸ್ತೂಷ್ಣೀಮಾಸನ್ವಿಶಾಂ ಪತೇ।।

ವಿಶಾಂಪತೇ! ಆಗ ಆ ಬ್ರಾಹ್ಮಣರೆಲ್ಲರೂ ರಾಜಾ ಯುಧಿಷ್ಠಿರನೂ ಪರಮ ಉದ್ವಿಗ್ನರೂ ಲಜ್ಜಿತರೂ ಆಗಿ ಏನನ್ನೂ ಮಾತನಾಡದೇ ಸುಮ್ಮನಿದ್ದರು.

12039030 ಯುಧಿಷ್ಠಿರ ಉವಾಚ।
12039030a ಪ್ರಸೀದಂತು ಭವಂತೋ ಮೇ ಪ್ರಣತಸ್ಯಾಭಿಯಾಚತಃ।
12039030c ಪ್ರತ್ಯಾಪನ್ನಂ ವ್ಯಸನಿನಂ ನ ಮಾಂ ಧಿಕ್ಕರ್ತುಮರ್ಹಥ।।

ಯುಧಿಷ್ಠಿರನು ಹೇಳಿದನು: “ನಾನು ನಿಮಗೆ ನಮಸ್ಕರಿಸಿ ಕೇಳಿಕೊಳ್ಳುತ್ತಿದ್ದೇನೆ. ನನ್ನ ಮೇಲೆ ಪ್ರಸನ್ನರಾಗಿರಿ! ಎಲ್ಲೆಡೆಯಿಂದ ವ್ಯಸನಭರಿತನಾಗಿರುವ ನನ್ನನ್ನು ನೀವು ಹೀಗೆ ಧಿಕ್ಕರಿಸುವುದು ಉಚಿತವಲ್ಲ!””

12039031 ವೈಶಂಪಾಯನ ಉವಾಚ।
12039031a ತತೋ ರಾಜನ್ಬ್ರಾಹ್ಮಣಾಸ್ತೇ ಸರ್ವ ಏವ ವಿಶಾಂ ಪತೇ।
12039031c ಊಚುರ್ನೈತದ್ವಚೋಽಸ್ಮಾಕಂ ಶ್ರೀರಸ್ತು ತವ ಪಾರ್ಥಿವ।।

ವೈಶಂಪಾಯನನು ಹೇಳಿದನು: “ರಾಜನ್! ವಿಶಾಂಪತೇ! ಆಗ ಆ ಎಲ್ಲ ಬ್ರಾಹ್ಮಣರೂ ಇಂತೆಂದರು: “ಪಾರ್ಥಿವ! ಇವನು ಹೇಳಿದುದು ನಮ್ಮ ಮಾತಲ್ಲ! ಈ ರಾಜ್ಯಶ್ರೀಯು ನಿನ್ನದೇ ಆಗಿರಲಿ!”

12039032a ಜಜ್ಞುಶ್ಚೈವ ಮಹಾತ್ಮಾನಸ್ತತಸ್ತಂ ಜ್ಞಾನಚಕ್ಷುಷಾ।
12039032c ಬ್ರಾಹ್ಮಣಾ ವೇದವಿದ್ವಾಂಸಸ್ತಪೋಭಿರ್ವಿಮಲೀಕೃತಾಃ।।

ಆಗ ವೇದವಿದ್ವಾಂಸರಾದ ಮತ್ತು ತಪಸ್ಸಿನಿಂದ ಪವಿತ್ರರಾಗಿದ್ದ ಆ ಮಹಾತ್ಮ ಬ್ರಾಹ್ಮಣರು ತಮ್ಮ ಜ್ಞಾನದೃಷ್ಟಿಯಿಂದ ಚಾರ್ವಾಕನು ಯಾರೆಂದು ತಿಳಿದುಕೊಂಡರು.

12039033 ಬ್ರಾಹ್ಮಣಾ ಊಚುಃ।
12039033a ಏಷ ದುರ್ಯೋಧನಸಖಾ ಚಾರ್ವಾಕೋ ನಾಮ ರಾಕ್ಷಸಃ।
12039033c ಪರಿವ್ರಾಜಕರೂಪೇಣ ಹಿತಂ ತಸ್ಯ ಚಿಕೀರ್ಷತಿ।।

ಬ್ರಾಹ್ಮಣರು ಹೇಳಿದರು: “ಇವನು ದುರ್ಯೋಧನನ ಮಿತ್ರ. ಚಾರ್ವಾಕ ಎಂಬ ಹೆಸರಿನ ರಾಕ್ಷಸ. ಪರಿವ್ರಾಜಕನ ರೂಪದಲ್ಲಿ ಇವನು ಅವನ ಹಿತಕ್ಕಾಗಿ ಹೀಗೆ ಮಾಡುತ್ತಿದ್ದಾನೆ.

12039034a ನ ವಯಂ ಬ್ರೂಮ ಧರ್ಮಾತ್ಮನ್ವ್ಯೇತು ತೇ ಭಯಮೀದೃಶಮ್।
12039034c ಉಪತಿಷ್ಠತು ಕಲ್ಯಾಣಂ ಭವಂತಂ ಭ್ರಾತೃಭಿಃ ಸಹ।।

ಧರ್ಮಾತ್ಮನ್! ನಾವು ಹೀಗೆ ಹೇಳಲಾರೆವು. ಈ ಭಯವು ನಿನ್ನಿಂದ ದೂರವಾಗಲಿ! ಎದ್ದೇಳು! ಸಹೋದರರೊಂದಿಗೆ ನಿನ್ನ ಕಲ್ಯಾಣವಾಗಲಿ!””

12039035 ವೈಶಂಪಾಯನ ಉವಾಚ।
12039035a ತತಸ್ತೇ ಬ್ರಾಹ್ಮಣಾಃ ಸರ್ವೇ ಹುಂಕಾರೈಃ ಕ್ರೋಧಮೂರ್ಚಿತಾಃ।
12039035c ನಿರ್ಭರ್ತ್ಸಯಂತಃ ಶುಚಯೋ ನಿಜಘ್ನುಃ ಪಾಪರಾಕ್ಷಸಮ್।।

ವೈಶಂಪಾಯನನು ಹೇಳಿದನು: “ಅನಂತರ ಆ ಶುಚಿ ಬ್ರಾಹ್ಮಣರೆಲ್ಲರೂ ಕ್ರೋಧಮೂರ್ಚಿತರಾಗಿ ಹುಂಕಾರಗಳಿಂದ ಆ ಪಾಪರಾಕ್ಷಸನನ್ನು ಬೆದರಿಸಿ ಸಂಹರಿಸಿದರು.

12039036a ಸ ಪಪಾತ ವಿನಿರ್ದಗ್ಧಸ್ತೇಜಸಾ ಬ್ರಹ್ಮವಾದಿನಾಮ್।
12039036c ಮಹೇಂದ್ರಾಶನಿನಿರ್ದಗ್ಧಃ ಪಾದಪೋಽಂಕುರವಾನಿವ।।

ಇಂದ್ರನ ವಜ್ರಾಘಾತದಿಂದ ಚಿಗುರುಗಳೂ ಸೇರಿ ಭಸ್ಮೀಭೂತವಾಗುವ ವೃಕ್ಷದಂತೆ ಆ ಬ್ರಹ್ಮವಾದಿಗಳ ತೇಜಸ್ಸಿನಿಂದ ಚಾರ್ವಾಕನು ಭಸ್ಮೀಭೂತನಾಗಿ ಕೆಳಗೆ ಬಿದ್ದನು.

12039037a ಪೂಜಿತಾಶ್ಚ ಯಯುರ್ವಿಪ್ರಾ ರಾಜಾನಮಭಿನಂದ್ಯ ತಮ್।
12039037c ರಾಜಾ ಚ ಹರ್ಷಮಾಪೇದೇ ಪಾಂಡವಃ ಸಸುಹೃಜ್ಜನಃ।।

ಬಳಿಕ ರಾಜನಿಂದ ಸತ್ಕೃತರಾದ ವಿಪ್ರರು ರಾಜನನ್ನು ಅಭಿನಂದಿಸಿ ತೆರಳಿದರು. ರಾಜಾ ಪಾಂಡವನೂ ಕೂಡ ತನ್ನ ಸುಹೃಜ್ಜನರೊಂದಿಗೆ ಹರ್ಷಿತನಾದನು.

12039038 ವಾಸುದೇವ ಉವಾಚ।
12039038a ಬ್ರಾಹ್ಮಣಾಸ್ತಾತ ಲೋಕೇಽಸ್ಮಿನ್ನರ್ಚನೀಯಾಃ ಸದಾ ಮಮ।
12039038c ಏತೇ ಭೂಮಿಚರಾ ದೇವಾ ವಾಗ್ವಿಷಾಃ ಸುಪ್ರಸಾದಕಾಃ।।

ವಾಸುದೇವನು ಹೇಳಿದನು: “ಅಯ್ಯಾ! ಬ್ರಾಹ್ಮಣರು ಈ ಲೋಕದಲ್ಲಿ ನನಗೆ ಸದಾ ಅರ್ಚನೀಯರಾಗಿದ್ದಾರೆ. ಇವರು ಭೂಮಿಯಲ್ಲಿ ಸಂಚರಿಸುವ ದೇವತೆಗಳು! ಇವರು ಕುಪಿತರಾದರೆ ಇವರ ಮಾತುಗಳು ವಿಷವಾಗಿರುತ್ತವೆ.

12039039a ಪುರಾ ಕೃತಯುಗೇ ತಾತ ಚಾರ್ವಾಕೋ ನಾಮ ರಾಕ್ಷಸಃ।
12039039c ತಪಸ್ತೇಪೇ ಮಹಾಬಾಹೋ ಬದರ್ಯಾಂ ಬಹುವತ್ಸರಮ್।।

ಅಯ್ಯಾ ಮಹಾಬಾಹೋ! ಹಿಂದೆ ಕೃತಯುಗದಲ್ಲಿ ಚಾರ್ವಾಕನೆಂಬ ರಾಕ್ಷಸನು ಬದರಿಯಲ್ಲಿ ಅನೇಕ ವರ್ಷಗಳು ತಪಸ್ಸನ್ನು ಮಾಡಿದನು.

12039040a ಚಂದ್ಯಮಾನೋ ವರೇಣಾಥ ಬ್ರಹ್ಮಣಾ ಸ ಪುನಃ ಪುನಃ।
12039040c ಅಭಯಂ ಸರ್ವಭೂತೇಭ್ಯೋ ವರಯಾಮಾಸ ಭಾರತ।।

ಭಾರತ! ಬ್ರಹ್ಮನು ಅವನಿಗೆ ವರವನ್ನು ಕೇಳಿಕೊಳ್ಳುವಂತೆ ಪುನಃ ಪುನಃ ಒತ್ತಾಯಿಸಲು ಅವನು ಸರ್ವಭೂತಗಳಿಂದಲೂ ಅಭಯವನ್ನು ವರವನ್ನಾಗಿ ಕೇಳಿಕೊಂಡನು.

12039041a ದ್ವಿಜಾವಮಾನಾದನ್ಯತ್ರ ಪ್ರಾದಾದ್ವರಮನುತ್ತಮಮ್।
12039041c ಅಭಯಂ ಸರ್ವಭೂತೇಭ್ಯಸ್ತತಸ್ತಸ್ಮೈ ಜಗತ್ಪ್ರಭುಃ।।

ಆಗ ಜಗತ್ಪಭುವು ದ್ವಿಜರಿಗೆ ಅವಮಾನಮಾಡದೇ ಇದ್ದರೆ ಸರ್ವಭೂತಗಳಿಂದಲೂ ಅಭಯವಾಗಲಿ ಎಂದು ಅವನಿಗೆ ಆ ಉತ್ತಮ ವರವನ್ನು ಇತ್ತನು.

12039042a ಸ ತು ಲಬ್ಧವರಃ ಪಾಪೋ ದೇವಾನಮಿತವಿಕ್ರಮಃ।
12039042c ರಾಕ್ಷಸಸ್ತಾಪಯಾಮಾಸ ತೀವ್ರಕರ್ಮಾ ಮಹಾಬಲಃ।।

ಆ ವರವನ್ನು ಪಡೆದು ಪಾಪಿ ತೀವ್ರಕರ್ಮಿ ಮಹಾಬಲಿ ಅಮಿತವಿಕ್ರಮಿ ರಾಕ್ಷಸನು ದೇವತೆಗಳನ್ನೂ ಪರಿತಪಿಸತೊಡಗಿದನು.

12039043a ತತೋ ದೇವಾಃ ಸಮೇತ್ಯಾಥ ಬ್ರಹ್ಮಾಣಮಿದಮಬ್ರುವನ್।
12039043c ವಧಾಯ ರಕ್ಷಸಸ್ತಸ್ಯ ಬಲವಿಪ್ರಕೃತಾಸ್ತದಾ।।

ಆ ರಾಕ್ಷಸನ ಬಲದಿಂದ ಪೀಡಿತರಾದ ದೇವತೆಗಳು ಒಟ್ಟಾಗಿ ಅವನ ವಧೆಗಾಗಿ ಬ್ರಹ್ಮನಲ್ಲಿ ಕೇಳಿಕೊಂಡರು.

12039044a ತಾನುವಾಚಾವ್ಯಯೋ ದೇವೋ ವಿಹಿತಂ ತತ್ರ ವೈ ಮಯಾ।
12039044c ಯಥಾಸ್ಯ ಭವಿತಾ ಮೃತ್ಯುರಚಿರೇಣೈವ ಭಾರತ।।

ಭಾರತ! ಅವ್ಯವ ದೇವನು ಆಗ ಅವರಿಗೆ ಹೇಳಿದನು: “ಅದರ ಕುರಿತು ನಾನು ಈಗಲೇ ನಿರ್ಧರಿಸಿದ್ದೇನೆ. ಬೇಗನೇ ಇವನ ಮರಣವಾಗಲಿದೆ!

12039045a ರಾಜಾ ದುರ್ಯೋಧನೋ ನಾಮ ಸಖಾಸ್ಯ ಭವಿತಾ ನೃಪ।
12039045c ತಸ್ಯ ಸ್ನೇಹಾವಬದ್ಧೋಽಸೌ ಬ್ರಾಹ್ಮಣಾನವಮಂಸ್ಯತೇ।।

ಇವನು ದುರ್ಯೋಧನನೆಂಬ ರಾಜನ ಸಖನಾಗುವನು. ಅವನ ಸ್ನೇಹಪಾಶದ ಬಂಧನಕ್ಕೊಳಗಾಗಿ ಇವನು ಬ್ರಾಹ್ಮಣರನ್ನು ಅಪಮಾನಿಸುವನು.

12039046a ತತ್ರೈನಂ ರುಷಿತಾ ವಿಪ್ರಾ ವಿಪ್ರಕಾರಪ್ರಧರ್ಷಿತಾಃ।
12039046c ಧಕ್ಷ್ಯಂತಿ ವಾಗ್ಬಲಾಃ ಪಾಪಂ ತತೋ ನಾಶಂ ಗಮಿಷ್ಯತಿ।।

ಇವನ ವಿರುದ್ಧಾಚರಣೆಯ ವಾಕ್ಶಲ್ಯದಿಂದ ಅಪಮಾನಿತರಾದ ಬ್ರಾಹ್ಮಣರು ಕೋಪದಿಂದ ತಮ್ಮ ವಾಗ್ಬಲಗಳಿಂದ ಇವನನ್ನು ಸುಡುತ್ತಾರೆ. ಆಗ ಈ ಪಾಪಿಯು ನಾಶಹೊಂದುತ್ತಾನೆ!”

12039047a ಸ ಏಷ ನಿಹತಃ ಶೇತೇ ಬ್ರಹ್ಮದಂಡೇನ ರಾಕ್ಷಸಃ।
12039047c ಚಾರ್ವಾಕೋ ನೃಪತಿಶ್ರೇಷ್ಠ ಮಾ ಶುಚೋ ಭರತರ್ಷಭ।।

ಭರತಶ್ರೇಷ್ಠ! ಆ ರಾಕ್ಷಸ ಚಾರ್ವಾಕನೇ ಇಂದು ಹೀಗೆ ಬ್ರಹ್ಮದಂಡದಿಂದ ಹತನಾಗಿ ಬಿದ್ದಿದ್ದಾನೆ. ನೃಪತಿಶ್ರೇಷ್ಠ! ಇದಕ್ಕಾಗಿ ಶೋಕಿಸಬೇಡ!

12039048a ಹತಾಸ್ತೇ ಕ್ಷತ್ರಧರ್ಮೇಣ ಜ್ಞಾತಯಸ್ತವ ಪಾರ್ಥಿವ।
12039048c ಸ್ವರ್ಗತಾಶ್ಚ ಮಹಾತ್ಮಾನೋ ವೀರಾಃ ಕ್ಷತ್ರಿಯಪುಂಗವಾಃ।।

ಪಾರ್ಥಿವ! ಕ್ಷತ್ರಿಯಧರ್ಮದಿಂದ ನಿನ್ನ ಜ್ಞಾತಿಬಾಂಧವ ಮಹಾತ್ಮ ವೀರ ಕ್ಷತ್ರಿಯ ಪುಂಗವರು ಸ್ವರ್ಗಸ್ಥರಾಗಿದ್ದಾರೆ.

12039049a ಸ ತ್ವಮಾತಿಷ್ಠ ಕಲ್ಯಾಣಂ ಮಾ ತೇ ಭೂದ್ಗ್ಲಾನಿರಚ್ಯುತ।
12039049c ಶತ್ರೂನ್ಜಹಿ ಪ್ರಜಾ ರಕ್ಷ ದ್ವಿಜಾಂಶ್ಚ ಪ್ರತಿಪಾಲಯ।।

ನೀನು ಈಗ ಕಲ್ಯಾಣಕರ ಕರ್ತವ್ಯಗಳನ್ನು ಮಾಡು. ಅಚ್ಯುತ! ಶೋಕದಿಂದ ದುರ್ಬಲನಾಗಬೇಡ! ಶತ್ರುಗಳನ್ನು ಸಂಹರಿಸು! ಪ್ರಜೆಗಳನ್ನು ರಕ್ಷಿಸು! ಮತ್ತು ದ್ವಿಜರನ್ನು ಪಾಲಿಸು!””

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ಚಾರ್ವಾಕವಧೇ ಏಕೋನಚತ್ವಾರಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಚಾರ್ವಾಕವಧೆ ಎನ್ನುವ ಮೂವತ್ತೊಂಭತ್ತನೇ ಅಧ್ಯಾಯವು.