038 ಯುಧಿಷ್ಠಿರಪ್ರವೇಶಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ರಾಜಧರ್ಮ ಪರ್ವ

ಅಧ್ಯಾಯ 38

ಸಾರ

ಯುಧಿಷ್ಠಿರನ ಹಸ್ತಿನಾಪುರ ಪ್ರವೇಶ (1-49).

12038001 ಯುಧಿಷ್ಠಿರ ಉವಾಚ।
12038001a ಶ್ರೋತುಮಿಚ್ಚಾಮಿ ಭಗವನ್ವಿಸ್ತರೇಣ ಮಹಾಮುನೇ।
12038001c ರಾಜಧರ್ಮಾನ್ದ್ವಿಜಶ್ರೇಷ್ಠ ಚಾತುರ್ವರ್ಣ್ಯಸ್ಯ ಚಾಖಿಲಾನ್।।

ಯುಧಿಷ್ಠಿರನು ಹೇಳಿದನು: “ಭಗವನ್! ಮಹಾಮುನೇ! ದ್ವಿಜಶ್ರೇಷ್ಠ! ರಾಜಧರ್ಮಗಳನ್ನೂ ಚಾತುರ್ವರ್ಣಗಳ ಧರ್ಮಗಳನ್ನೂ ಸಂಪೂರ್ಣವಾಗಿ ವಿಸ್ತಾರವಾಗಿ ಕೇಳ ಬಯಸುತ್ತೇನೆ.

12038002a ಆಪತ್ಸು ಚ ಯಥಾ ನೀತಿರ್ವಿಧಾತವ್ಯಾ ಮಹೀಕ್ಷಿತಾ।
12038002c ಧರ್ಮ್ಯಮಾಲಂಬ್ಯ ಪಂಥಾನಂ ವಿಜಯೇಯಂ ಕಥಂ ಮಹೀಮ್।।

ಮಹೀಕ್ಷಿತನಾಗಿ ನಾನು ಆಪತ್ಕಾಲಗಳಲ್ಲಿ ಯಾವ ನೀತಿಗಳನ್ನು ಬಳಸಬೇಕು? ಧರ್ಮದ ಮಾರ್ಗವನ್ನೇ ಅನುಸರಿಸಿ ನಾನು ಹೇಗೆ ಈ ಭೂಮಿಯನ್ನು ಜಯಿಸಬಲ್ಲೆ?

12038003a ಪ್ರಾಯಶ್ಚಿತ್ತಕಥಾ ಹ್ಯೇಷಾ ಭಕ್ಷ್ಯಾಭಕ್ಷ್ಯವಿವರ್ಧಿತಾ।
12038003c ಕೌತೂಹಲಾನುಪ್ರವಣಾ ಹರ್ಷಂ ಜನಯತೀವ ಮೇ।।

ಭಕ್ಷ್ಯ-ಅಭಕ್ಷ್ಯಗಳಿಂದ ಕೂಡಿದ ಪ್ರಾಯಶ್ಚಿತ್ತ ಪ್ರಕರಣವು ನನ್ನಲ್ಲಿ ಕುತೂಹಲವನ್ನುಂಟುಮಾಡಿದೆ. ಅದನ್ನು ಕೇಳಿ ನನಗೆ ಹರ್ಷವೂ ಆಗುತ್ತಿದೆ.

12038004a ಧರ್ಮಚರ್ಯಾ ಚ ರಾಜ್ಯಂ ಚ ನಿತ್ಯಮೇವ ವಿರುಧ್ಯತೇ।
12038004c ಯೇನ ಮುಹ್ಯತಿ ಮೇ ಚೇತಶ್ಚಿಂತಯಾನಸ್ಯ ನಿತ್ಯಶಃ।।

ಧರ್ಮಾಚರಣೆ ಮತ್ತು ರಾಜ್ಯಾಡಳಿತ ಇವೆರಡೂ ನಿತ್ಯವೂ ಒಂದಕ್ಕೊಂದು ವಿರೋಧವಾಗಿಯೇ ಇರುತ್ತವೆ. ಇದನ್ನೇ ಸದಾ ಚಿಂತಿಸುತ್ತಿರುವ ನಾನು ಒಮ್ಮೊಮ್ಮೆ ಮೋಹಿತನಾಗುತ್ತೇನೆ.””

12038005 ವೈಶಂಪಾಯನ ಉವಾಚ।
12038005a ತಮುವಾಚ ಮಹಾತೇಜಾ ವ್ಯಾಸೋ ವೇದವಿದಾಂ ವರಃ।
12038005c ನಾರದಂ ಸಮಭಿಪ್ರೇಕ್ಷ್ಯ ಸರ್ವಂ ಜಾನನ್ಪುರಾತನಮ್।।

ವೈಶಂಪಾಯನನು ಹೇಳಿದನು: “ಆಗ ಮಹಾತೇಜಸ್ವಿ ವೇದವಿದರಲ್ಲಿ ಶ್ರೇಷ್ಠ ವ್ಯಾಸನು ಸರ್ವಜ್ಞ ಪುರಾತನ ನಾರದನನ್ನು ನೋಡಿ ಯುಧಿಷ್ಠಿರನಿಗೆ ಹೇಳಿದನು:

12038006a ಶ್ರೋತುಮಿಚ್ಚಸಿ ಚೇದ್ಧರ್ಮಾನಖಿಲೇನ ಯುಧಿಷ್ಠಿರ।
12038006c ಪ್ರೈಹಿ ಭೀಷ್ಮಂ ಮಹಾಬಾಹೋ ವೃದ್ಧಂ ಕುರುಪಿತಾಮಹಮ್।।

ಯುಧಿಷ್ಠಿರ! ಮಹಾಬಾಹೋ! ಅಖಿಲ ಧರ್ಮಗಳನ್ನೂ ನೀನು ತಿಳಿಯಬಯಸಿದುದ್ದಾದರೆ ವೃದ್ಧ ಕುರುಪಿತಾಮಹ ಭೀಷ್ಮನ ಬಳಿ ಹೋಗು!

12038007a ಸ ತೇ ಸರ್ವರಹಸ್ಯೇಷು ಸಂಶಯಾನ್ಮನಸಿ ಸ್ಥಿತಾನ್।
12038007c ಚೇತ್ತಾ ಭಾಗೀರಥೀಪುತ್ರಃ ಸರ್ವಜ್ಞಃ ಸರ್ವಧರ್ಮವಿತ್।।

ಆ ಭಾಗೀರಥೀಪುತ್ರ ಸರ್ವಜ್ಞ ಸರ್ವಧರ್ಮಗಳನ್ನೂ ತಿಳಿದುಕೊಂಡಿರುವ ಭೀಷ್ಮನು ನಿನ್ನ ಮನದಲ್ಲಿ ನೆಲೆಸಿರುವ ಸರ್ವ ಸಂಶಯಗಳನ್ನು ನಿವಾರಿಸುತ್ತಾನೆ.

12038008a ಜನಯಾಮಾಸ ಯಂ ದೇವೀ ದಿವ್ಯಾ ತ್ರಿಪಥಗಾ ನದೀ।
12038008c ಸಾಕ್ಷಾದ್ದದರ್ಶ ಯೋ ದೇವಾನ್ಸರ್ವಾನ್ಶಕ್ರಪುರೋಗಮಾನ್।।
12038009a ಬೃಹಸ್ಪತಿಪುರೋಗಾಂಶ್ಚ ದೇವರ್ಷೀನಸಕೃತ್ಪ್ರಭುಃ।
12038009c ತೋಷಯಿತ್ವೋಪಚಾರೇಣ ರಾಜನೀತಿಮಧೀತವಾನ್।।
12038010a ಉಶನಾ ವೇದ ಯಚ್ಚಾಸ್ತ್ರಂ ದೇವಾಸುರಗುರುರ್ದ್ವಿಜಃ।
12038010c ತಚ್ಚ ಸರ್ವಂ ಸವೈಯಾಖ್ಯಂ ಪ್ರಾಪ್ತವಾನ್ಕುರುಸತ್ತಮಃ।।

ಯಾರ ಜನನಿಯು ದೇವೀ ದಿವ್ಯ ತ್ರಿಪಥಗಾ ಗಂಗಾನದಿಯೋ, ಯಾರು ಇಂದ್ರನೇ ಮೊದಲಾದ ಸರ್ವ ದೇವತೆಗಳನ್ನು ಸಾಕ್ಷಾತ್ ಕಂಡಿರುವನೋ, ಆ ಕುರುಸತ್ತಮ ಪ್ರಭುವು ಬೃಹಸ್ಪತಿಯೇ ಮೊದಲಾದ ದೇವರ್ಷಿಗಳನ್ನು ಉಪಚಾರಗಳಿಂದ ತೃಪ್ತಿಪಡಿಸಿ ರಾಜನೀತಿಯನ್ನೂ, ದೇವಾಸುರರ ಗುರುವಾದ ದ್ವಿಜ ಶುಕ್ರನಿಂದ ಸರ್ವ ಶಾಸ್ತ್ರಗಳನ್ನೂ ವ್ಯಾಖ್ಯಾನ ಸಹಿತವಾಗಿ ತಿಳಿದುಕೊಂಡಿದ್ದಾನೆ.

12038011a ಭಾರ್ಗವಾಚ್ಚ್ಯವನಾಚ್ಚಾಪಿ ವೇದಾನಂಗೋಪಬೃಂಹಿತಾನ್।
12038011c ಪ್ರತಿಪೇದೇ ಮಹಾಬುದ್ಧಿರ್ವಸಿಷ್ಠಾಚ್ಚ ಯತವ್ರತಾತ್।।

ಆ ಮಹಾಬುದ್ಧಿಯು ಭಾರ್ಗವ ಚ್ಯವನನಿಂದ ಮತ್ತು ಯತವ್ರತ ವಸಿಷ್ಠನಿಂದ ವೇದಗಳನ್ನು ಅವುಗಳ ಅಂಗಗಳೊಂದಿಗೆ ಪಡೆದಿರುತ್ತಾನೆ.

12038012a ಪಿತಾಮಹಸುತಂ ಜ್ಯೇಷ್ಠಂ ಕುಮಾರಂ ದೀಪ್ತತೇಜಸಮ್।
12038012c ಅಧ್ಯಾತ್ಮಗತಿತತ್ತ್ವಜ್ಞಮುಪಾಶಿಕ್ಷತ ಯಃ ಪುರಾ।।

ಭೀಷ್ಮನು ಪಿತಾಮಹಬ್ರಹ್ಮನ ಜ್ಯೇಷ್ಠ ಪುತ್ರ ದೀಪ್ತತೇಜಸ್ವಿ ಅಧ್ಯಾತ್ಮಗತಿಯ ತತ್ತ್ವಗಳನ್ನು ತಿಳಿದುಕೊಂಡಿರುವ ಸನತ್ಕುಮಾರನಿಂದ ಹಿಂದೆ ಶಿಕ್ಷಣವನ್ನು ಪಡೆದಿದ್ದನು.

12038013a ಮಾರ್ಕಂಡೇಯಮುಖಾತ್ಕೃತ್ಸ್ನಂ ಯತಿಧರ್ಮಮವಾಪ್ತವಾನ್।
12038013c ರಾಮಾದಸ್ತ್ರಾಣಿ ಶಕ್ರಾಚ್ಚ ಪ್ರಾಪ್ತವಾನ್ಭರತರ್ಷಭ।।

ಭರತರ್ಷಭ! ಅವನು ಮಾರ್ಕಂಡೇಯ ಮುಖೇನ ಯತಿಧರ್ಮವನ್ನು ಸಂಪೂರ್ಣವಾಗಿ ತಿಳಿದುಕೊಂಡಿರುವನು. ಪರಶುರಾಮನಿಂದ ಮತ್ತು ಇಂದ್ರನಿಂದ ಅಸ್ತ್ರಗಳನ್ನು ಪಡೆದುಕೊಂಡಿರುವನು.

12038014a ಮೃತ್ಯುರಾತ್ಮೇಚ್ಚಯಾ ಯಸ್ಯ ಜಾತಸ್ಯ ಮನುಜೇಷ್ವಪಿ।
12038014c ತಥಾನಪತ್ಯಸ್ಯ ಸತಃ ಪುಣ್ಯಲೋಕಾ ದಿವಿ ಶ್ರುತಾಃ।।

ಮನುಷ್ಯನಾಗಿ ಹುಟ್ಟಿದ್ದರೂ ಮೃತ್ಯುವು ಅವನ ಇಚ್ಛೆಯಂತೆಯೇ ಬರುತ್ತದೆ. ಮಕ್ಕಳಿಲ್ಲದವನಾಗಿದ್ದರೂ ಅವನಿಗೆ ದಿವಿಯ ಪುಣ್ಯಲೋಕಗಳು ದೊರೆಯುತ್ತವೆ ಎಂದು ಕೇಳಿದ್ದೇವೆ.

12038015a ಯಸ್ಯ ಬ್ರಹ್ಮರ್ಷಯಃ ಪುಣ್ಯಾ ನಿತ್ಯಮಾಸನ್ಸಭಾಸದಃ।
12038015c ಯಸ್ಯ ನಾವಿದಿತಂ ಕಿಂ ಚಿತ್ಜ್ಞಾನಜ್ಞೇಯೇಷು ವಿದ್ಯತೇ।।
12038016a ಸ ತೇ ವಕ್ಷ್ಯತಿ ಧರ್ಮಜ್ಞಃ ಸೂಕ್ಷ್ಮಧರ್ಮಾರ್ಥತತ್ತ್ವವಿತ್।
12038016c ತಮಭ್ಯೇಹಿ ಪುರಾ ಪ್ರಾಣಾನ್ಸ ವಿಮುಂಚತಿ ಧರ್ಮವಿತ್।।

ಪುಣ್ಯ ಬ್ರಹ್ಮರ್ಷಿಗಳು ನಿತ್ಯವೂ ಯಾರ ಸಭಾಸದರಾಗಿ ಉಪಸ್ಥಿತರಾಗಿರುತ್ತಿದ್ದರೋ, ತಿಳಿದುಕೊಂಡಿರಬೇಕಾದ ಜ್ಞಾನಗಳಲ್ಲಿ ಯಾರಿಗೆ ಯಾವುದೂ ತಿಳಿಯದೇ ಇಲ್ಲವೋ, ಆ ಧರ್ಮಜ್ಞ ಧರ್ಮದ ಸೂಕ್ಷ್ಮ ಅರ್ಥಗಳನ್ನು ಯಥಾವತ್ತಾಗಿ ತಿಳಿದುಕೊಂಡಿರುವ ಧರ್ಮವಿದುವು ಪ್ರಾಣಗಳನ್ನು ತೊರೆಯುವ ಮೊದಲು ನೀನು ಅವನ ಬಳಿಗೆ ಹೋಗು.”

12038017a ಏವಮುಕ್ತಸ್ತು ಕೌಂತೇಯೋ ದೀರ್ಘಪ್ರಜ್ಞೋ ಮಹಾದ್ಯುತಿಃ।
12038017c ಉವಾಚ ವದತಾಂ ಶ್ರೇಷ್ಠಂ ವ್ಯಾಸಂ ಸತ್ಯವತೀಸುತಮ್।।

ಇದನ್ನು ಕೇಳಿದ ದೀರ್ಘಪ್ರಜ್ಞ ಮಹಾದ್ಯುತಿ ಕೌಂತೇಯನು ಸತ್ಯವತೀ ಸುತ ಮಾತನಾಡುವವರಲ್ಲಿ ಶ್ರೇಷ್ಠ ವ್ಯಾಸನಿಗೆ ಇಂತೆಂದನು:

12038018a ವೈಶಸಂ ಸುಮಹತ್ಕೃತ್ವಾ ಜ್ಞಾತೀನಾಂ ಲೋಮಹರ್ಷಣಮ್।
12038018c ಆಗಸ್ಕೃತ್ಸರ್ವಲೋಕಸ್ಯ ಪೃಥಿವೀನಾಶಕಾರಕಃ।।
12038019a ಘಾತಯಿತ್ವಾ ತಮೇವಾಜೌ ಚಲೇನಾಜಿಹ್ಮಯೋಧಿನಮ್।
12038019c ಉಪಸಂಪ್ರಷ್ಟುಮರ್ಹಾಮಿ ತಮಹಂ ಕೇನ ಹೇತುನಾ।।

“ರೋಮಾಂಚನಗೊಳ್ಳುವಂಥಹ ಈ ಮಹಾ ಬಂಧುವಧೆಯನ್ನು ನಡೆಸಿ ನಾನು ಸರ್ವಲೋಕಕ್ಕೇ ಪೃಥ್ವೀನಾಶಕಾರಕವಾದ ಅಪರಾಧವನ್ನೆಸಗಿದ್ದೇನೆ. ಋಜುಮಾರ್ಗದಲ್ಲಿಯೇ ಹೋರಾಡುತ್ತಿದ್ದ ಆ ಭೀಷ್ಮನನ್ನು ವಂಚನೆಯಿಂದ ಘಾತಿಗೊಳಿಸಿ ಈಗ ನಾನು ಯಾವ ಮುಖವನ್ನಿಟ್ಟುಕೊಂಡು ಧರ್ಮದ ವಿಷಯವಾಗಿ ಅವನನ್ನು ಪ್ರಶ್ನಿಸಲು ಹೋಗಲಿ? ಅದನ್ನು ಕೇಳುವ ಯೋಗ್ಯತೆಯಾದರೂ ನನಗೆಲ್ಲಿದೆ?”

12038020a ತತಸ್ತಂ ನೃಪತಿಶ್ರೇಷ್ಠಂ ಚಾತುರ್ವರ್ಣ್ಯಹಿತೇಪ್ಸಯಾ।
12038020c ಪುನರಾಹ ಮಹಾಬಾಹುರ್ಯದುಶ್ರೇಷ್ಠೋ ಮಹಾದ್ಯುತಿಃ।।

ಆಗ ಚಾತುರ್ವರ್ಣದವರ ಹಿತವನ್ನೇ ಬಯಸುವ ಮಹಾಬಾಹು ಮಹಾದ್ಯುತಿ ಯದುಶ್ರೇಷ್ಠ ಕೃಷ್ಣನು ಆ ನೃಪತಿಶ್ರೇಷ್ಠನಿಗೆ ಹೇಳಿದನು:

12038021a ನೇದಾನೀಮತಿನಿರ್ಬಂಧಂ ಶೋಕೇ ಕರ್ತುಮಿಹಾರ್ಹಸಿ।
12038021c ಯದಾಹ ಭಗವಾನ್ವ್ಯಾಸಸ್ತತ್ಕುರುಷ್ವ ನೃಪೋತ್ತಮ।।

“ನೃಪೋತ್ತಮ! ನಿರ್ಬಂಧಪೂರ್ವಕವಾಗಿ ಈ ರೀತಿ ಶೋಕಪಡುವುದು ನಿನಗೆ ಸರಿಯಲ್ಲ. ಭಗವಾನ್ ವ್ಯಾಸನು ಹೇಳಿದಂತೆಯೇ ಮಾಡು!

12038022a ಬ್ರಾಹ್ಮಣಾಸ್ತ್ವಾಂ ಮಹಾಬಾಹೋ ಭ್ರಾತರಶ್ಚ ಮಹೌಜಸಃ।
12038022c ಪರ್ಜನ್ಯಮಿವ ಘರ್ಮಾರ್ತಾ ಆಶಂಸಾನಾ ಉಪಾಸತೇ।।

ಮಹಾಬಾಹೋ! ಬೇಸಗೆಯ ಕೊನೆಯಲ್ಲಿ ಜನರು ಮಳೆಗಾಗಿ ಪರ್ಜನ್ಯನನ್ನು ಹೇಗೋ ಹಾಗೆ ಈ ಬ್ರಾಹ್ಮಣರು ಮತ್ತು ಮಹಾತೇಜಸ್ವೀ ಸಹೋದರರು ನಿನ್ನನ್ನೇ ಉಪಾಸಿಸುತ್ತಿದ್ದಾರೆ.

12038023a ಹತಶಿಷ್ಟಾಶ್ಚ ರಾಜಾನಃ ಕೃತ್ಸ್ನಂ ಚೈವ ಸಮಾಗತಮ್।
12038023c ಚಾತುರ್ವರ್ಣ್ಯಂ ಮಹಾರಾಜ ರಾಷ್ಟ್ರಂ ತೇ ಕುರುಜಾಂಗಲಮ್।।

ಮಹಾರಾಜ! ಅಳಿದುಳಿದ ರಾಜರೆಲ್ಲರೂ ಮತ್ತು ನಿನ್ನ ರಾಷ್ಟ್ರ ಕುರುಜಾಂಗಲದ ನಾಲ್ಕೂ ವರ್ಣದವರೂ ಇಲ್ಲಿಗೆ ಬಂದು ಸೇರಿದ್ದಾರೆ.

12038024a ಪ್ರಿಯಾರ್ಥಮಪಿ ಚೈತೇಷಾಂ ಬ್ರಾಹ್ಮಣಾನಾಂ ಮಹಾತ್ಮನಾಮ್।
12038024c ನಿಯೋಗಾದಸ್ಯ ಚ ಗುರೋರ್ವ್ಯಾಸಸ್ಯಾಮಿತತೇಜಸಃ।।
12038025a ಸುಹೃದಾಂ ಚಾಸ್ಮದಾದೀನಾಂ ದ್ರೌಪದ್ಯಾಶ್ಚ ಪರಂತಪ।
12038025c ಕುರು ಪ್ರಿಯಮಮಿತ್ರಘ್ನ ಲೋಕಸ್ಯ ಚ ಹಿತಂ ಕುರು।।

ಪರಂತಪ! ಅಮಿತ್ರಘ್ನ! ಈ ಮಹಾತ್ಮ ಬ್ರಾಹ್ಮಣರ ಸಂತೋಷಕ್ಕಾಗಿ, ಅಮಿತ ತೇಜಸ್ವಿ ಗುರು ವ್ಯಾಸನ ನಿಯೋಗದಂತೆ, ದ್ರೌಪದಿಯೇ ಮೊದಲಾದ ನಮ್ಮ ಸುಹೃದಯರಿಗೆ ಸಂತೋಷವಾಗುವಂತೆ ಮಾಡು. ಲೋಕಕ್ಕೆ ಹಿತವನ್ನುಂಟುಮಾಡು!”

12038026a ಏವಮುಕ್ತಸ್ತು ಕೃಷ್ಣೇನ ರಾಜಾ ರಾಜೀವಲೋಚನಃ।
12038026c ಹಿತಾರ್ಥಂ ಸರ್ವಲೋಕಸ್ಯ ಸಮುತ್ತಸ್ಥೌ ಮಹಾತಪಾಃ।।

ಕೃಷ್ಣನು ಹೀಗೆ ಹೇಳಲು ರಾಜೀವಲೋಚನ ರಾಜಾ ಮಹಾತಪಸ್ವಿ ಯುಧಿಷ್ಠಿರನು ಸರ್ವಲೋಕಗಳ ಹಿತಕ್ಕಾಗಿ ಕುಳಿತಲ್ಲಿಂದ ಮೇಲೆದ್ದನು.

12038027a ಸೋಽನುನೀತೋ ನರವ್ಯಾಘ್ರೋ ವಿಷ್ಟರಶ್ರವಸಾ ಸ್ವಯಮ್।
12038027c ದ್ವೈಪಾಯನೇನ ಚ ತಥಾ ದೇವಸ್ಥಾನೇನ ಜಿಷ್ಣುನಾ।।
12038028a ಏತೈಶ್ಚಾನ್ಯೈಶ್ಚ ಬಹುಭಿರನುನೀತೋ ಯುಧಿಷ್ಠಿರಃ।
12038028c ವ್ಯಜಹಾನ್ಮಾನಸಂ ದುಃಖಂ ಸಂತಾಪಂ ಚ ಮಹಾಮನಾಃ।।

ಹೀಗೆ ಸ್ವಯಂ ಕೃಷ್ಣನಿಂದಲೂ, ದ್ವೈಪಾಯನನಿಂದಲೂ, ದೇವಸ್ಥಾನನಿಂದಲೂ, ಅರ್ಜುನನಿಂದಲೂ ಮತ್ತು ಇತರ ಅನೇಕರಿಂದ ಸಮಾಧಾನಗೊಳಿಸಲ್ಪಟ್ಟ ನರವ್ಯಾಘ್ರ ಯುಧಿಷ್ಠಿರನು ಮಾನಸಿಕ ದುಃಖ-ಸಂತಾಪಗಳನ್ನು ಪರಿತ್ಯಜಿಸಿದನು.

12038029a ಶ್ರುತವಾಕ್ಯಃ ಶ್ರುತನಿಧಿಃ ಶ್ರುತಶ್ರವ್ಯವಿಶಾರದಃ।
12038029c ವ್ಯವಸ್ಯ ಮನಸಃ ಶಾಂತಿಮಗಚ್ಚತ್ಪಾಂಡುನಂದನಃ।।

ಶ್ರುತಿಗಳ ವಾಕ್ಯವನ್ನು ಕೇಳಿ, ಶ್ರುತಿಗಳ ಕುರಿತು ಕೇಳುವುದರಲ್ಲಿ ವಿಶಾರದನಾದ ಆ ಶ್ರುತನಿಧಿ ಪಾಂಡುನಂದನನು ಮನಸ್ಸನ್ನು ಹಿಡಿತದಲ್ಲಿಟ್ಟುಕೊಂಡು ಶಾಂತಿಯುತನಾದನು.

12038030a ಸ ತೈಃ ಪರಿವೃತೋ ರಾಜಾ ನಕ್ಷತ್ರೈರಿವ ಚಂದ್ರಮಾಃ।
12038030c ಧೃತರಾಷ್ಟ್ರಂ ಪುರಸ್ಕೃತ್ಯ ಸ್ವಪುರಂ ಪ್ರವಿವೇಶ ಹ।।

ಅನಂತರ ನಕ್ಷತ್ರಗಳಿಂದ ಸುತ್ತುವರೆಯಲ್ಪಟ್ಟ ಚಂದ್ರಮನಂತೆ ಆ ರಾಜನು ಧೃತರಾಷ್ಟ್ರನನ್ನು ಮುಂದೆಮಾಡಿಕೊಂಡು ತನ್ನ ಪುರವನ್ನು ಪ್ರವೇಶಿಸಿದನು.

12038031a ಪ್ರವಿವಿಕ್ಷುಃ ಸ ಧರ್ಮಜ್ಞಃ ಕುಂತೀಪುತ್ರೋ ಯುಧಿಷ್ಠಿರಃ।
12038031c ಅರ್ಚಯಾಮಾಸ ದೇವಾಂಶ್ಚ ಬ್ರಾಹ್ಮಣಾಂಶ್ಚ ಸಹಸ್ರಶಃ।।

ಪುರ ಪ್ರವೇಶಮಾಡುವಾಗ ಧರ್ಮಜ್ಞ ಕುಂತೀಪುತ್ರ ಯುಧಿಷ್ಠಿರನು ದೇವತೆಗಳನ್ನೂ, ಸಹಸ್ರಾರು ಬ್ರಾಹ್ಮಣರನ್ನೂ ಅರ್ಚಿಸಿದನು.

12038032a ತತೋ ರಥಂ ನವಂ ಶುಭ್ರಂ ಕಂಬಲಾಜಿನಸಂವೃತಮ್।
12038032c ಯುಕ್ತಂ ಷೋಡಶಭಿರ್ಗೋಭಿಃ ಪಾಂಡುರೈಃ ಶುಭಲಕ್ಷಣೈಃ।।
12038033a ಮಂತ್ರೈರಭ್ಯರ್ಚಿತಃ ಪುಣ್ಯೈಃ ಸ್ತೂಯಮಾನೋ ಮಹರ್ಷಿಭಿಃ।
12038033c ಆರುರೋಹ ಯಥಾ ದೇವಃ ಸೋಮೋಽಮೃತಮಯಂ ರಥಮ್।।

ಅನಂತರ ದೇವ ಸೋಮನು ಅಮೃತಮಯ ರಥವನ್ನು ಏರುವಂತೆ ಅವನು ಹೊಸತಾದ, ಶುಭ್ರವಾದ, ಕಂಬಳಿ-ಜಿನಗಳನ್ನು ಹೊದೆಸಿದ್ದ, ಶುಭಲಕ್ಷಣಗಳುಳ್ಳ ಬಿಳಿಯಾದ ಹದಿನಾರು ಎತ್ತುಗಳನ್ನು ಕಟ್ಟಿದ್ದ, ಮಂತ್ರಗಳಿಂದ ಅರ್ಚಿತಗೊಂಡಿದ್ದ, ಪುಣ್ಯ ಮಹರ್ಷಿಗಳಿಂದ ಸ್ತುತಿಸಲ್ಪಡುತ್ತಿದ್ದ ರಥವನ್ನು ಏರಿದನು.

12038034a ಜಗ್ರಾಹ ರಶ್ಮೀನ್ಕೌಂತೇಯೋ ಭೀಮೋ ಭೀಮಪರಾಕ್ರಮಃ।
12038034c ಅರ್ಜುನಃ ಪಾಂಡುರಂ ಚತ್ರಂ ಧಾರಯಾಮಾಸ ಭಾನುಮತ್।।

ಕೌಂತೇಯ ಭೀಮಪರಾಕ್ರಮಿ ಭೀಮನು ಕಡಿವಾಣಗಳನ್ನು ಹಿಡಿದನು. ಅರ್ಜುನನು ಭಾನುವಂತೆ ಬಿಳುಪಾದ ಚತ್ರವನ್ನು ಹಿಡಿದನು.

12038035a ಧ್ರಿಯಮಾಣಂ ತು ತಚ್ಚತ್ರಂ ಪಾಂಡುರಂ ತಸ್ಯ ಮೂರ್ಧನಿ।
12038035c ಶುಶುಭೇ ತಾರಕಾರಾಜಸಿತಮಭ್ರಮಿವಾಂಬರೇ।।

ಅವನ ನೆತ್ತಿಯ ಮೇಲೆ ಹಿಡಿದಿದ್ದ ಆ ಬಿಳುಪಾದ ಕೊಡೆಯು ಆಕಾಶದಲ್ಲಿ ನಕ್ಷತ್ರಗಳಿಂದ ಸಮಾಕುಲವಾದ ಬಿಳಿಯ ಮೋಡದಂತೆ ಪ್ರಕಾಶಿಸುತ್ತಿತ್ತು.

12038036a ಚಾಮರವ್ಯಜನೇ ಚಾಸ್ಯ ವೀರೌ ಜಗೃಹತುಸ್ತದಾ।
12038036c ಚಂದ್ರರಶ್ಮಿಪ್ರಭೇ ಶುಭ್ರೇ ಮಾದ್ರೀಪುತ್ರಾವಲಂಕೃತೇ।।

ವೀರರಾದ ಮಾದ್ರೀಪುತ್ರರಿಬ್ಬರೂ ಚಂದ್ರನ ಕಿರಣಗಳ ಪ್ರಭೆಯುಳ್ಳ ಅಲಂಕೃತವಾದ ಚಾಮರ-ಬೀಸಣಿಗೆಗಳನ್ನು ಹಿಡಿದಿದ್ದರು.

12038037a ತೇ ಪಂಚ ರಥಮಾಸ್ಥಾಯ ಭ್ರಾತರಃ ಸಮಲಂಕೃತಾಃ।
12038037c ಭೂತಾನೀವ ಸಮಸ್ತಾನಿ ರಾಜನ್ದದೃಶಿರೇ ತದಾ।।

ರಾಜನ್! ಹಾಗೆ ಸಮಲಂಕೃತರಾಗಿ ರಥದಲ್ಲಿದ್ದ ಆ ಐವರು ಸಹೋದರರು ಪಂಚಮಹಾಭೂತಗಳಂತೆಯೇ ಕಾಣುತ್ತಿದ್ದರು.

12038038a ಆಸ್ಥಾಯ ತು ರಥಂ ಶುಭ್ರಂ ಯುಕ್ತಮಶ್ವೈರ್ಮಹಾಜವೈಃ।
12038038c ಅನ್ವಯಾತ್ಪೃಷ್ಠತೋ ರಾಜನ್ಯುಯುತ್ಸುಃ ಪಾಂಡವಾಗ್ರಜಮ್।।

ರಾಜನ್! ಯುಯುತ್ಸುವು ಮಹಾವೇಗದ ಕುದುರೆಗಳನ್ನು ಕಟ್ಟಿದ್ದ ಶುಭ್ರ ರಥದಲ್ಲಿ ಕುಳಿತು ಪಾಂಡವಾಗ್ರಜನನ್ನು ಹಿಂಬಾಲಿಸಿ ಹೋದನು.

12038039a ರಥಂ ಹೇಮಮಯಂ ಶುಭ್ರಂ ಸೈನ್ಯಸುಗ್ರೀವಯೋಜಿತಮ್।
12038039c ಸಹ ಸಾತ್ಯಕಿನಾ ಕೃಷ್ಣಃ ಸಮಾಸ್ಥಾಯಾನ್ವಯಾತ್ಕುರೂನ್।।

ಸೈನ್ಯ-ಸುಗ್ರೀವರನ್ನು ಕಟ್ಟಿದ್ದ ಹೇಮಮಯ ರಥದಲ್ಲಿ ಸಾತ್ಯಕಿಯೊಂದಿಗೆ ಕುಳಿತಿದ್ದ ಕೃಷ್ಣನು ಕುರುಗಳನ್ನು ಹಿಂಬಾಲಿಸಿ ಹೋದನು.

12038040a ನರಯಾನೇನ ತು ಜ್ಯೇಷ್ಠಃ ಪಿತಾ ಪಾರ್ಥಸ್ಯ ಭಾರತ।
12038040c ಅಗ್ರತೋ ಧರ್ಮರಾಜಸ್ಯ ಗಾಂಧಾರೀಸಹಿತೋ ಯಯೌ।।

ಭಾರತ! ಪಾರ್ಥನ ಜ್ಯೇಷ್ಠ ಪಿತ ಧೃತರಾಷ್ಟ್ರನು ಗಾಂಧಾರಿಯ ಸಹಿತ ಮನುಷ್ಯರು ಹೊತ್ತಿದ್ದ ಪಲ್ಲಕ್ಕಿಯಲ್ಲಿ ಕುಳಿತು ಧರ್ಮರಾಜನ ರಥದ ಮುಂಭಾಗದಲ್ಲಿ ಹೋಗುತ್ತಿದ್ದನು.

12038041a ಕುರುಸ್ತ್ರಿಯಶ್ಚ ತಾಃ ಸರ್ವಾಃ ಕುಂತೀ ಕೃಷ್ಣಾ ಚ ದ್ರೌಪದೀ।
12038041c ಯಾನೈರುಚ್ಚಾವಚೈರ್ಜಗ್ಮುರ್ವಿದುರೇಣ ಪುರಸ್ಕೃತಾಃ।।

ಕುಂತಿ, ಕೃಷ್ಣೆ ದ್ರೌಪದಿ ಮತ್ತು ಎಲ್ಲ ಕುರುಸ್ತ್ರೀಯರು ವಿದುರನನನ್ನು ಮುಂದಿಟ್ಟುಕೊಂಡು ತಮತಮಗೆ ಯೋಗ್ಯವಾದ ಪಲ್ಲಕ್ಕಿಗಳಲ್ಲಿ ಕುಳಿತು ಹೋದರು.

12038042a ತತೋ ರಥಾಶ್ಚ ಬಹುಲಾ ನಾಗಾಶ್ಚ ಸಮಲಂಕೃತಾಃ।
12038042c ಪಾದಾತಾಶ್ಚ ಹಯಾಶ್ಚೈವ ಪೃಷ್ಠತಃ ಸಮನುವ್ರಜನ್।।

ಅವರ ಹಿಂದೆ ಅನೇಕ ಸಮಲಂಕೃತ ರಥಗಳೂ, ಆನೆಗಳೂ, ಪದಾತಿಗಳೂ ಮತ್ತು ಕುದುರೆಗಳೂ ಸಾಗುತ್ತಿದ್ದವು.

12038043a ತತೋ ವೈತಾಲಿಕೈಃ ಸೂತೈರ್ಮಾಗಧೈಶ್ಚ ಸುಭಾಷಿತೈಃ।
12038043c ಸ್ತೂಯಮಾನೋ ಯಯೌ ರಾಜಾ ನಗರಂ ನಾಗಸಾಹ್ವಯಮ್।।

ಆಗ ವೈತಾಲಿಕರು ಮತ್ತು ಸೂತ-ಮಾಗಧರು ಸುಂದರ ವಾಣಿಯಲ್ಲಿ ಸ್ತುತಿಸುತ್ತಿರುವಾಗ ರಾಜನು ಹಸ್ತಿನಾಪುರ ನಗರಕ್ಕೆ ಪ್ರಯಾಣಿಸಿದನು.

12038044a ತತ್ಪ್ರಯಾಣಂ ಮಹಾಬಾಹೋರ್ಬಭೂವಾಪ್ರತಿಮಂ ಭುವಿ।
12038044c ಆಕುಲಾಕುಲಮುತ್ಸೃಷ್ಟಂ ಹೃಷ್ಟಪುಷ್ಟಜನಾನ್ವಿತಮ್।।

ಹೃಷ್ಟ-ಪುಷ್ಟ ಜನರಿಂದಲೂ ಜಯಘೋಷಮಾಡುತ್ತಿದ್ದ ಜನರಿಂದಲೂ ಸಮಾಕುಲವಾಗಿದ್ದ ಆ ಮಹಾಬಾಹುವಿನ ಪ್ರಯಾಣವು ಭುವಿಯಲ್ಲಿಯೇ ಅಪ್ರತಿಮವಾಗಿತ್ತು.

12038045a ಅಭಿಯಾನೇ ತು ಪಾರ್ಥಸ್ಯ ನರೈರ್ನಗರವಾಸಿಭಿಃ।
12038045c ನಗರಂ ರಾಜಮಾರ್ಗಶ್ಚ ಯಥಾವತ್ಸಮಲಂಕೃತಮ್।।

ಪಾರ್ಥನು ಪ್ರಯಾಣಿಸುತ್ತಿರುವಾಗ ನಗರವಾಸಿಗಳು ನಗರವನ್ನೂ ರಾಜಮಾರ್ಗವನ್ನೂ ಯಥಾವತ್ತಾಗಿ ಅಲಂಕರಿಸಿದ್ದರು.

12038046a ಪಾಂಡುರೇಣ ಚ ಮಾಲ್ಯೇನ ಪತಾಕಾಭಿಶ್ಚ ವೇದಿಭಿಃ।
12038046c ಸಂವೃತೋ ರಾಜಮಾರ್ಗಶ್ಚ ಧೂಪನೈಶ್ಚ ಸುಧೂಪಿತಃ।।

ಬಿಳಿಯ ಹೂಮಾಲೆಗಳಿಂದಲೂ, ಪತಾಕೆಗಳಿಂದಲೂ ಅಲಂಕೃತ ರಾಜಮಾರ್ಗವು ಧೂಪಗಳಿಂದ ಸುಗಂಧಮಯವಾಗಿತ್ತು.

12038047a ಅಥ ಚೂರ್ಣೈಶ್ಚ ಗಂಧಾನಾಂ ನಾನಾಪುಷ್ಪೈಃ ಪ್ರಿಯಂಗುಭಿಃ।
12038047c ಮಾಲ್ಯದಾಮಭಿರಾಸಕ್ತೈ ರಾಜವೇಶ್ಮಾಭಿಸಂವೃತಮ್।।

ಚೂರ್ಣಗಳಿಂದಲೂ, ಗಂಧಗಳಿಂದಲೂ, ನಾನಾ ಪುಷ್ಪಗಳ ಗುಚ್ಚಗಳಿಂದಲೂ, ಮಾಲೆಗಳಿಂದಲೂ ರಾಜನ ಅರಮನೆಯು ಅಲಂಕರಿಸಲ್ಪಟ್ಟಿತ್ತು.

12038048a ಕುಂಭಾಶ್ಚ ನಗರದ್ವಾರಿ ವಾರಿಪೂರ್ಣಾ ದೃಢಾ ನವಾಃ।
12038048c ಕನ್ಯಾಃ ಸುಮನಸಶ್ಚಾಗಾಃ ಸ್ಥಾಪಿತಾಸ್ತತ್ರ ತತ್ರ ಹ।।

ನಗರದ್ವಾರದಲ್ಲಿ ನೀರಿನಿಂದ ತುಂಬಿದ್ದ ಗಟ್ಟಿಯಾದ ಹೊಸ ಕುಂಭಗಳನ್ನಿಟ್ಟಿದ್ದರು ಮತ್ತು ಸುಮನಸರಾದ ಕನ್ಯೆಯರೂ ಅಲ್ಲಲ್ಲಿ ನಿಂತಿದ್ದರು.

12038049a ತಥಾ ಸ್ವಲಂಕೃತದ್ವಾರಂ ನಗರಂ ಪಾಂಡುನಂದನಃ।
12038049c ಸ್ತೂಯಮಾನಃ ಶುಭೈರ್ವಾಕ್ಯೈಃ ಪ್ರವಿವೇಶ ಸುಹೃದ್ವೃತಃ।।

ಹಾಗೆ ಸ್ವಲಂಕೃತವಾದ ನಗರದ್ವಾರವನ್ನು ಸುಹೃದಯರೊಂದಿಗೆ ಪಾಂಡುನಂದನನು ಶುಭವಾಕ್ಯಗಳಿಂದ ಸ್ತುತಿಸಲ್ಪಡುತ್ತಾ ಪ್ರವೇಶಿಸಿದನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ಯುಧಿಷ್ಠಿರಪ್ರವೇಶೇ ಅಷ್ಠಾತ್ರಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಯುಧಿಷ್ಠಿರಪ್ರವೇಶ ಎನ್ನುವ ಮೂವತ್ತೆಂಟನೇ ಅಧ್ಯಾಯವು.