ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ರಾಜಧರ್ಮ ಪರ್ವ
ಅಧ್ಯಾಯ 37
ಸಾರ
12037001 ವೈಶಂಪಾಯನ ಉವಾಚ।
12037001a ಏವಮುಕ್ತೋ ಭಗವತಾ ಧರ್ಮರಾಜೋ ಯುಧಿಷ್ಠಿರಃ।
12037001c ಚಿಂತಯಿತ್ವಾ ಮುಹೂರ್ತಂ ತು ಪ್ರತ್ಯುವಾಚ ತಪೋಧನಮ್।।
ವೈಶಂಪಾಯನನು ಹೇಳಿದನು: “ಭಗವಾನ್ ವ್ಯಾಸನು ಹೀಗೆ ಹೇಳಲು ಧರ್ಮರಾಜ ಯುಧಿಷ್ಠಿರನು ಮುಹೂರ್ತಕಾಲ ಚಿಂತಿಸಿ ಆ ತಪೋಧನನನ್ನು ಪುನಃ ಪ್ರಶ್ನಿಸಿದನು:
12037002a ಕಿಂ ಭಕ್ಷ್ಯಂ ಕಿಮಭಕ್ಷ್ಯಂ ಚ ಕಿಂ ಚ ದೇಯಂ ಪ್ರಶಸ್ಯತೇ।
12037002c ಕಿಂ ಚ ಪಾತ್ರಮಪಾತ್ರಂ ವಾ ತನ್ಮೇ ಬ್ರೂಹಿ ಪಿತಾಮಹ।।
“ಪಿತಾಮಹ! ತಿನ್ನಬಹುದಾದುದು ಯಾವುದು? ತಿನ್ನಬಾರದವುಗಳು ಯಾವುವು? ದಾನಮಾಡಲು ಯಾವುದು ಶ್ರೇಷ್ಠ? ದಾನಮಾಡಲು ಯಾರು ಪಾತ್ರರು ಮತ್ತು ಯಾರು ಅಪಾತ್ರರು ಎನ್ನುವುದನ್ನು ನನಗೆ ಹೇಳು!”
12037003 ವ್ಯಾಸ ಉವಾಚ।
12037003a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್।
12037003c ಸಿದ್ಧಾನಾಂ ಚೈವ ಸಂವಾದಂ ಮನೋಶ್ಚೈವ ಪ್ರಜಾಪತೇಃ।।
ವ್ಯಾಸನು ಹೇಳಿದನು: “ಇದಕ್ಕೆ ಸಂಬಂಧಿಸಿದಂತೆ ಬಹಳ ಹಿಂದೆ ನಡೆದ ಸಿದ್ಧರ ಮತ್ತು ಪ್ರಜಾಪತಿ ಮನುವಿನ ನಡುವೆ ನಡೆದ ಸಂವಾದವನ್ನು ಉದಾಹರಿಸುತ್ತಾರೆ.
12037004a ಸಿದ್ಧಾಸ್ತಪೋವ್ರತಪರಾಃ ಸಮಾಗಮ್ಯ ಪುರಾ ವಿಭುಮ್।
12037004c ಧರ್ಮಂ ಪಪ್ರಚ್ಚುರಾಸೀನಮಾದಿಕಾಲೇ ಪ್ರಜಾಪತಿಮ್।।
ಹಿಂದೆ ಆದಿಕಾಲದಲ್ಲಿ ತಪೋವ್ರತಗಳಲ್ಲಿ ನಿರತರಾಗಿದ್ದ ಸಿದ್ಧರು ಒಂದಾಗಿ ಧರ್ಮದ ಕುರಿತು ಪ್ರಜಾಪತಿಯಲ್ಲಿ ಕೇಳಿದ್ದರು:
12037005a ಕಥಮನ್ನಂ ಕಥಂ ದಾನಂ ಕಥಮಧ್ಯಯನಂ ತಪಃ।
12037005c ಕಾರ್ಯಾಕಾರ್ಯಂ ಚ ನಃ ಸರ್ವಂ ಶಂಸ ವೈ ತ್ವಂ ಪ್ರಜಾಪತೇ।।
“ಪ್ರಜಾಪತೇ! ಅನ್ನವು ಹೇಗಾಗುತ್ತದೆ? ದಾನವು ಹೇಗಾಗುತ್ತದೆ? ಅಧ್ಯಯನ-ತಪಸ್ಸುಗಳು ಹೇಗಾಗುತ್ತವೆ? ಮಾಡಬೇಕಾದ ಕಾರ್ಯಗಳು ಯಾವುವು? ಮಾಡಬಾರದ ಅಕಾರ್ಯಗಳು ಯಾವುವು? ಇವೆಲ್ಲವನ್ನೂ ನಮಗೆ ಹೇಳು!”
12037006a ತೈರೇವಮುಕ್ತೋ ಭಗವಾನ್ಮನುಃ ಸ್ವಾಯಂಭುವೋಽಬ್ರವೀತ್।
12037006c ಶುಶ್ರೂಷಧ್ವಂ ಯಥಾವೃತ್ತಂ ಧರ್ಮಂ ವ್ಯಾಸಸಮಾಸತಃ।।
ಅವರು ಹೀಗೆ ಕೇಳಲು ಭಗವಾನ್ ಸ್ವಾಯಂಭು ಮನುವು ಹೇಳಿದನು: “ಧರ್ಮದ ಕುರಿತು ಸಂಕ್ಷೇಪವಾಗಿಯೂ ವಿಸ್ತಾರವಾಗಿಯೂ ಹೇಗಿರುವುದೋ ಹಾಗೆ ಕೇಳಿರಿ!
12037007a ಅದತ್ತಸ್ಯಾನುಪಾದಾನಂ ದಾನಮಧ್ಯಯನಂ ತಪಃ।
12037007c ಅಹಿಂಸಾ ಸತ್ಯಮಕ್ರೋಧಃ ಕ್ಷಮೇಜ್ಯಾ ಧರ್ಮಲಕ್ಷಣಮ್।।
ಕೊಡದಿರುವುದನ್ನು ತೆಗೆದುಕೊಳ್ಳದಿರುವುದು, ದಾನ, ಅಧ್ಯಯನ, ತಪಸ್ಸು, ಅಹಿಂಸೆ, ಸತ್ಯತೆ, ಕೋಪಮಾಡಿಕೊಳ್ಳದಿರುವುದು, ಕ್ಷಮೆ ಮತ್ತು ಯಜ್ಞ - ಇವು ಧರ್ಮದ ಲಕ್ಷಣಗಳು.
12037008a ಯ ಏವ ಧರ್ಮಃ ಸೋಽಧರ್ಮೋಽದೇಶೇಽಕಾಲೇ ಪ್ರತಿಷ್ಠಿತಃ।
12037008c ಆದಾನಮನೃತಂ ಹಿಂಸಾ ಧರ್ಮೋ ವ್ಯಾವಸ್ಥಿಕಃ ಸ್ಮೃತಃ।।
ದೇಶ-ಕಾಲಗಳನ್ನನುಸರಿಸಿ ಧರ್ಮವೆನಿಸಿದುದು ಅಧರ್ಮವೂ ಆಗಬಲ್ಲದು. ದಾನಮಾಡದೇ ಇರುವುದು, ಸುಳ್ಳುಹೇಳುವುದು, ಹಿಂಸೆ ಇವುಗಳನ್ನು ದೇಶ-ಕಾಲಗಳನ್ನನುಸರಿಸಿ ಧರ್ಮಕಾರ್ಯಗಳೆಂದೇ ಪರಿಗಣಿಸಲೂಬಹುದು.
12037009a ದ್ವಿವಿಧೌ ಚಾಪ್ಯುಭಾವೇತೌ ಧರ್ಮಾಧರ್ಮೌ ವಿಜಾನತಾಮ್।
12037009c ಅಪ್ರವೃತ್ತಿಃ ಪ್ರವೃತ್ತಿಶ್ಚ ದ್ವೈವಿಧ್ಯಂ ಲೋಕವೇದಯೋಃ।।
ದೇಶ-ಕಾಲಗಳನ್ನನುಸರಿಸಿ ಧರ್ಮ ಮತ್ತು ಅಧರ್ಮವೆಂಬ ಎರಡು ವಿಧಗಳನ್ನು ತಿಳಿದುಕೊಳ್ಳಬೇಕು. ಲೋಕಗಳನ್ನು ತಿಳಿದವರು ಅಪ್ರವೃತ್ತಿ ಮತ್ತು ಪ್ರವೃತ್ತಿ64 ಎಂಬ ಎರಡು ಪ್ರಕಾರಗಳ ಕುರಿತು ಹೇಳುತ್ತಾರೆ.
12037010a ಅಪ್ರವೃತ್ತೇರಮರ್ತ್ಯತ್ವಂ ಮರ್ತ್ಯತ್ವಂ ಕರ್ಮಣಃ ಫಲಮ್।
12037010c ಅಶುಭಸ್ಯಾಶುಭಂ ವಿದ್ಯಾಚ್ಚುಭಸ್ಯ ಶುಭಮೇವ ಚ।।
12037011a ಏತಯೋಶ್ಚೋಭಯೋಃ ಸ್ಯಾತಾಂ ಶುಭಾಶುಭತಯಾ ತಥಾ।
ಅಪ್ರವೃತ್ತ ಕರ್ಮಗಳ ಫಲವು ಅಮೃತತ್ವ ಮತ್ತು ಪ್ರವೃತ್ತ ಕರ್ಮಗಳ ಫಲವು ಮರ್ತ್ಯತ್ವ. ಪ್ರವೃತ್ತ ಕರ್ಮಗಳಲ್ಲಿ ಎರಡು ಬಗೆಗಳಿವೆ – ಅಶುಭ ಮತ್ತು ಶುಭ ಕಾರ್ಯಗಳು. ಈ ಎರಡು ಬಗೆಯ ಕರ್ಮಗಳ ಫಲಗಳೂ ಕೂಡ ಶುಭ ಮತ್ತು ಅಶುಭಗಳೆಂದು ವಿಭಾಗಿಸಲ್ಪಟ್ಟಿವೆ.
12037011c ದೈವಂ ಚ ದೈವಯುಕ್ತಂ ಚ ಪ್ರಾಣಶ್ಚ ಪ್ರಲಯಶ್ಚ ಹ।।
12037012a ಅಪ್ರೇಕ್ಷಾಪೂರ್ವಕರಣಾದಶುಭಾನಾಂ ಶುಭಂ ಫಲಮ್।
ದೇವತೆಗಳಿಗೆ ಸಂಬಂಧಿಸಿದ, ದೇವತೆಗಳನ್ನೊಳಗೊಂಡ, ತನ್ನ ಪ್ರಾಣವು ಹೋಗುವಾಗ ಅದನ್ನು ಉಳಿಸಿಕೊಳ್ಳಲು ಮಾಡುವ ಅಶುಭ ಕರ್ಮಗಳೂ ಶುಭ ಫಲಗಳನ್ನೇ ಕೊಡುತ್ತವೆ.
12037012c ಊರ್ಧ್ವಂ ಭವತಿ ಸಂದೇಹಾದಿಹ ದೃಷ್ಟಾರ್ಥಮೇವ ವಾ।।
12037012e ಅಪ್ರೇಕ್ಷಾಪೂರ್ವಕರಣಾತ್ಪ್ರಾಯಶ್ಚಿತ್ತಂ ವಿಧೀಯತೇ।।
ಅಪೇಕ್ಷಪೂರ್ವಕವಾಗಿ ಅಶುಭಕರ್ಮಗಳನ್ನು ಮಾಡಿದವರಿಗೆ, ಮತ್ತು ತಾನು ಮಾಡಿರುವ ಕಾರ್ಯವು ಅಶುಭವಾಗಿರಬಹುದೋ ಎಂದು ಸಂಶಯವಾಗಿರುವ ಕಾರ್ಯವನ್ನು ಮಾಡಿದವರಿಗೆ ಪ್ರಾಯಶ್ಚಿತ್ತಗಳನ್ನು ಹೇಳಲಾಗಿದೆ.
12037013a ಕ್ರೋಧಮೋಹಕೃತೇ ಚೈವ ದೃಷ್ಟಾಂತಾಗಮಹೇತುಭಿಃ।
12037013c ಶರೀರಾಣಾಮುಪಕ್ಲೇಶೋ ಮನಸಶ್ಚ ಪ್ರಿಯಾಪ್ರಿಯೇ।।
12037013e ತದೌಷಧೈಶ್ಚ ಮಂತ್ರೈಶ್ಚ ಪ್ರಾಯಶ್ಚಿತ್ತೈಶ್ಚ ಶಾಮ್ಯತಿ।।
ಕ್ರೋಧ-ಮೋಹಗಳಿಗೆ ವಶನಾಗಿ ಮನಸ್ಸಿಗೆ ಪ್ರಿಯವನ್ನುಂಟುಮಾಡಲು ಅಥವಾ ಮನಸ್ಸಿಗೆ ಅಪ್ರಿಯವಾದುದನ್ನು ವಿನಾಶಗೊಳಿಸಲು ಮತ್ತು ಹಿಂದೆ ಉದಾಹರಿಸಿದ ದೃಷ್ಟಾಂತಗಳ ಪ್ರಕಾರ ಅಶುಭಕಾರ್ಯವನ್ನೆಸಗಿದರೆ ಅವುಗಳ ಪಾಪಗಳನ್ನು ಶರೀರಬಾಧೆಗಳಿಂದ, ಔಷಧಿಗಳಿಂದ ಮತ್ತು ಮಂತ್ರಗಳಿಂದ ಪ್ರಾಯಶ್ಚಿತ್ತ ಮಾಡಿಕೊಂಡು ನಿವಾರಿಸಿಕೊಳ್ಳಬಹುದು.
12037014a ಜಾತಿಶ್ರೇಣ್ಯಧಿವಾಸಾನಾಂ ಕುಲಧರ್ಮಾಂಶ್ಚ ಸರ್ವತಃ।
12037014c ವರ್ಜಯೇನ್ನ ಹಿ ತಂ ಧರ್ಮಂ ಯೇಷಾಂ ಧರ್ಮೋ ನ ವಿದ್ಯತೇ।।
ವರ್ಣ-ಆಶ್ರಮ-ಕುಲಧರ್ಮಗಳನ್ನು ಸಂಪೂರ್ಣವಾಗಿ ವರ್ಜಿಸಿದವರಿಗೆ ಯಾವುದೇ ರೀತಿಯ ಪ್ರಾಯಶ್ಚಿತ್ತಗಳೂ ಇರುವುದಿಲ್ಲ.
12037015a ದಶ ವಾ ವೇದಶಾಸ್ತ್ರಜ್ಞಾಸ್ತ್ರಯೋ ವಾ ಧರ್ಮಪಾಠಕಾಃ।
12037015c ಯದ್ಬ್ರೂಯುಃ ಕಾರ್ಯ ಉತ್ಪನ್ನೇ ಸ ಧರ್ಮೋ ಧರ್ಮಸಂಶಯೇ।।
ಧರ್ಮಸಂಶಯವು ಉತ್ಪನ್ನವಾದಾಗ ಯಾವ ಕಾರ್ಯಗಳನ್ನು ಮಾಡಬೇಕೆನ್ನುವುದನ್ನು ವೇದ-ಶಾಸ್ತ್ರಗಳನ್ನು ತಿಳಿದ ಹತ್ತು ಅಥವಾ ಧರ್ಮಪಾಠಕರಾದ ಮೂರು ಮಂದಿಗಳ ನಿರ್ಣಯದಂತೆ ಮಾಡಬೇಕು.
12037016a ಅರುಣಾ ಮೃತ್ತಿಕಾ ಚೈವ ತಥಾ ಚೈವ ಪಿಪೀಲಕಾಃ।
12037016c ಶ್ಲೇಷ್ಮಾತಕಸ್ತಥಾ ವಿಪ್ರೈರಭಕ್ಷ್ಯಂ ವಿಷಮೇವ ಚ।।
ಬ್ರಾಹ್ಮಣನಾದವನು ಕೆಂಪು ಮಣ್ಣನ್ನೂ, ಇರುವೆಗಳನ್ನೂ, ಚಳ್ಳೆಹಣ್ಣನ್ನೂ, ವಿಷವನ್ನೂ ತಿನ್ನಬಾರದು.
12037017a ಅಭಕ್ಷ್ಯಾ ಬ್ರಾಹ್ಮಣೈರ್ಮತ್ಸ್ಯಾಃ ಶಕಲೈರ್ಯೇ ವಿವರ್ಜಿತಾಃ।
12037017c ಚತುಷ್ಪಾತ್ಕಚ್ಚಪಾದನ್ಯೋ ಮಂಡೂಕಾ ಜಲಜಾಶ್ಚ ಯೇ।।
ಆಮೆಗಳನ್ನು, ಮುಳ್ಳುಗಳಿರದ ಮೀನುಗಳನ್ನು, ಕಪ್ಪೆಗಳನ್ನೂ ಬಿಟ್ಟು ಬೇರೆ ಯಾವ ಜಲಚರ ಪ್ರಾಣಿಗಳನ್ನೂ ಬ್ರಾಹ್ಮಣರು ತಿನ್ನಬಾರದು.
12037018a ಭಾಸಾ ಹಂಸಾಃ ಸುಪರ್ಣಾಶ್ಚ ಚಕ್ರವಾಕಾ ಬಕಾಃ ಪ್ಲವಾಃ।
12037018c ಕಂಕೋ ಮದ್ಗುಶ್ಚ ಗೃಧ್ರಾಶ್ಚ ಕಾಕೋಲೂಕಂ ತಥೈವ ಚ।।
12037019a ಕ್ರವ್ಯಾದಾಃ ಪಕ್ಷಿಣಃ ಸರ್ವೇ ಚತುಷ್ಪಾದಾಶ್ಚ ದಂಷ್ಟ್ರಿಣಃ।
12037019c ಯೇಷಾಂ ಚೋಭಯತೋ ದಂತಾಶ್ಚತುರ್ದಂಷ್ಟ್ರಾಶ್ಚ ಸರ್ವಶಃ।।
ಭಾಸ, ಹಂಸ, ಗರುಡ, ಚಕ್ರವಾಕ, ಬಕಪಕ್ಷಿ, ಕಾಗೆ, ಮದು, ಹದ್ದು, ಗಿಡುಗ, ಗೂಬೆ, ಮಾಂಸವನ್ನು ತಿನ್ನುವ ಎಲ್ಲ ಪಕ್ಷಿಗಳು, ನಾಲ್ಕು ಕಾಲಿನ ಕೋರೆಹಲ್ಲುಗಳಿರುವ ಹಿಂಸಮೃಗಗಳು, ಎರಡೂ ಕಡೆ ಹಲ್ಲಿರುವ ಪ್ರಾಣಿಗಳು, ನಾಲ್ಕು ಕೋರೆದಾಡೆಗಳಿರುವ ಪ್ರಾಣಿಗಳು ಇವೆಲ್ಲವೂ ಬ್ರಾಹ್ಮಣರಿಗೆ ಅಭಕ್ಷ್ಯವಾದವುಗಳು.
12037020a ಏಡಕಾಶ್ವಖರೋಷ್ಟ್ರೀಣಾಂ ಸೂತಿಕಾನಾಂ ಗವಾಮಪಿ।
12037020c ಮಾನುಷೀಣಾಂ ಮೃಗೀಣಾಂ ಚ ನ ಪಿಬೇದ್ಬ್ರಾಹ್ಮಣಃ ಪಯಃ।।
ಕುರಿ, ಕುದುರೆ, ಕತ್ತೆ, ಒಂಟೆ, ಮತ್ತು ಜನನವಾಗಿ ಹತ್ತು ದಿನಗಳ ಒಳಗಿನ ಮನುಷ್ಯ ಸ್ತ್ರೀಯ, ಜಿಂಕೆಯ ಮತ್ತು ಹಸುಗಳ ಹಾಲನ್ನು ಬ್ರಾಹ್ಮಣನು ಕುಡಿಯಬಾರದು.
12037021a ಪ್ರೇತಾನ್ನಂ ಸೂತಿಕಾನ್ನಂ ಚ ಯಚ್ಚ ಕಿಂ ಚಿದನಿರ್ದಶಮ್।
12037021c ಅಭೋಜ್ಯಂ ಚಾಪ್ಯಪೇಯಂ ಚ ಧೇನ್ವಾ ದುಗ್ಧಮನಿರ್ದಶಮ್।।
ಪ್ರೇತಾನ್ನ65 - ಸೂತಿಕಾನ್ನ66 ಗಳು ಬ್ರಾಹ್ಮಣನಿಗೆ ನಿಷಿದ್ಧ. ಹಾಗೆಯೇ ಕರುಹಾಕಿದ ಹಸುವಿನ ಹಾಲನ್ನು ಮೊದಲ ಹತ್ತುದಿನಗಳು ಕುಡಿಯಬಾರದು.
12037022a ತಕ್ಷ್ಣಶ್ಚರ್ಮಾವಕರ್ತುಶ್ಚ ಪುಂಶ್ಚಲ್ಯಾ ರಜಕಸ್ಯ ಚ।
12037022c ಚಿಕಿತ್ಸಕಸ್ಯ ಯಚ್ಚಾನ್ನಮಭೋಜ್ಯಂ ರಕ್ಷಿಣಸ್ತಥಾ।।
ಬಡಗಿ, ಚಮ್ಮಾರ, ವ್ಯಭಿಚಾರಿಣೀ, ಅಗಸ, ವೈದ್ಯ ಮತ್ತು ಗ್ರಾಮರಕ್ಷಕರ ಅನ್ನವನ್ನೂ ತಿನ್ನಬಾರದು.
12037023a ಗಣಗ್ರಾಮಾಭಿಶಸ್ತಾನಾಂ ರಂಗಸ್ತ್ರೀಜೀವಿನಶ್ಚ ಯೇ।
12037023c ಪರಿವಿತ್ತಿನಪುಂಷಾಂ ಚ ಬಂದಿದ್ಯೂತವಿದಾಂ ತಥಾ।।
ಸಮಾಜ-ಗ್ರಾಮಗಳಿಂದ ಬಹಿಷ್ಕೃತನಾದವನ, ನರ್ತಕಿಯರ ಜೀವನವನ್ನು ನಡೆಸುವವರ, ತಮ್ಮನ ವಿವಾಹವಾದ ನಂತರ ವಿವಾಹವಾದವನ, ವಂದಿ-ಮಾಗದರ ಮತ್ತು ಜೂಜಿನಲ್ಲಿ ಆಸಕ್ತನಾಗಿರುವವನ ಅನ್ನವನ್ನೂ ತಿನ್ನಬಾರದು.
12037024a ವಾರ್ಯಮಾಣಾಹೃತಂ ಚಾನ್ನಂ ಶುಕ್ತಂ ಪರ್ಯುಷಿತಂ ಚ ಯತ್।
12037024c ಸುರಾನುಗತಮುಚ್ಚಿಷ್ಟಮಭೋಜ್ಯಂ ಶೇಷಿತಂ ಚ ಯತ್।।
ಎಡಗೈಯಿಂದ ಬಡಿಸಿದ ಅನ್ನ, ಊಟಕ್ಕೆ ಕುಳಿತುಕೊಳ್ಳುವುದಕ್ಕೆ ಮೊದಲೇ ಬಡಿಸಿದ ಅನ್ನ, ಒಂದು ರಾತ್ರಿಯನ್ನು ಕಳೆದಿರುವ ಅನ್ನ, ಮದ್ಯದ ಸಮೀಪದಲ್ಲಿರುವ ಅನ್ನ, ಇನ್ನೊಬ್ಬರಿಗೆ ಬಡಿಸಿ ಉಳಿದ ಅನ್ನ, ಎಲ್ಲರೂ ತಿಂದು ಉಳಿದ ಅನ್ನ ಇವುಗಳನ್ನೂ ತಿನ್ನಬಾರದು.
12037025a ಪಿಷ್ಟಮಾಂಸೇಕ್ಷುಶಾಕಾನಾಂ ವಿಕಾರಾಃ ಪಯಸಸ್ತಥಾ।
12037025c ಸಕ್ತುಧಾನಾಕರಂಭಾಶ್ಚ ನೋಪಭೋಜ್ಯಾಶ್ಚಿರಸ್ಥಿತಾಃ।।
ಹಿಟ್ಟು, ಕಬ್ಬಿನರಸ, ತರಕಾರಿ, ಹಾಲು ಇವುಗಳನ್ನು ವಿಕೃತಗೊಳಿಸಿ ತಯಾರಿಸಿದ ಆಹಾರ, ತಯಾರಿಸಿ ಬಹಳ ಸಮಯವಾದ ತಂಬಿಟ್ಟು, ಹುರಿದಹಿಟ್ಟು ಮತ್ತು ಕಲಸಿದ ಅನ್ನ ಇವುಗಳನ್ನೂ ತಿನ್ನಬಾರದು.
12037026a ಪಾಯಸಂ ಕೃಸರಂ ಮಾಂಸಮಪೂಪಾಶ್ಚ ವೃಥಾ ಕೃತಾಃ।
12037026c ಅಭೋಜ್ಯಾಶ್ಚಾಪ್ಯಭಕ್ಷ್ಯಾಶ್ಚ ಬ್ರಾಹ್ಮಣೈರ್ಗೃಹಮೇಧಿಭಿಃ।।
ದೇವತಾಪ್ರೀತ್ಯರ್ಥವಾಗಿ ಮಾಡದೇ ಇದ್ದ ಪಾಯಸ, ತಿಲಾನ್ನ, ಮಾಂಸ, ಹೋಳಿಗೆ ಇವುಗಳನ್ನು ಗೃಹಸ್ಥ ಬ್ರಾಹ್ಮಣನು ತಿನ್ನಬಾರದು ಮತ್ತು ಕುಡಿಯಬಾರದು.
12037027a ದೇವಾನ್ಪಿತೃನ್ಮನುಷ್ಯಾಂಶ್ಚ ಮುನೀನ್ಗೃಹ್ಯಾಶ್ಚ ದೇವತಾಃ।
12037027c ಪೂಜಯಿತ್ವಾ ತತಃ ಪಶ್ಚಾದ್ಗೃಹಸ್ಥೋ ಭೋಕ್ತುಮರ್ಹತಿ।।
ದೇವತೆಗಳು, ಋಷಿಗಳು, ಪಿತೃಗಳು, ಮನುಷ್ಯ-ಮುನಿಗಳು ಮತ್ತು ಮನೆಯ ದೇವತೆಗಳನ್ನು ಪೂಜಿಸಿದ ನಂತರವೇ ಗೃಹಸ್ಥನಾದವನು ಊಟ ಮಾಡಬೇಕು.
12037028a ಯಥಾ ಪ್ರವ್ರಜಿತೋ ಭಿಕ್ಷುರ್ಗೃಹಸ್ಥಃ ಸ್ವಗೃಹೇ ವಸೇತ್।
12037028c ಏವಂವೃತ್ತಃ ಪ್ರಿಯೈರ್ದಾರೈಃ ಸಂವಸನ್ಧರ್ಮಮಾಪ್ನುಯಾತ್।।
ಪರಿವ್ರಾಜಕ ಭಿಕ್ಷುವಂತೆ ಪತ್ನೀ-ಪುತ್ರರೊಡನೆ ತನ್ನ ಮನೆಯಲ್ಲಿಯೇ ವಾಸಿಸಿರುವ ಗೃಹಸ್ಥನು ಧರ್ಮಫಲಗಳನ್ನು ಪಡೆಯುತ್ತಾನೆ.
12037029a ನ ದದ್ಯಾದ್ಯಶಸೇ ದಾನಂ ನ ಭಯಾನ್ನೋಪಕಾರಿಣೇ।
12037029c ನ ನೃತ್ತಗೀತಶೀಲೇಷು ಹಾಸಕೇಷು ಚ ಧಾರ್ಮಿಕಃ।।
ಧಾರ್ಮಿಕನಾಗಿರುವವನು ಯಶಸ್ಸಿಗಾಗಲೀ, ಭಯದಿಂದಾಗಲೀ, ನೃತ್ಯಗೀತೆಗಳಲ್ಲಿ ಮತ್ತು ಹಾಸ್ಯವೃತ್ತಿಗಳಲ್ಲಿ ತೊಡಗಿರುವವರಿಗೆ ದಾನಮಾಡಬಾರದು.
12037030a ನ ಮತ್ತೇ ನೈವ ಚೋನ್ಮತ್ತೇ ನ ಸ್ತೇನೇ ನ ಚಿಕಿತ್ಸಕೇ।
12037030c ನ ವಾಗ್ಘೀನೇ ವಿವರ್ಣೇ ವಾ ನಾಂಗಹೀನೇ ನ ವಾಮನೇ।।
12037031a ನ ದುರ್ಜನೇ ದೌಷ್ಕುಲೇ ವಾ ವ್ರತೈರ್ವಾ ಯೋ ನ ಸಂಸ್ಕೃತಃ।
12037031c ಅಶ್ರೋತ್ರಿಯೇ ಮೃತಂ ದಾನಂ ಬ್ರಾಹ್ಮಣೇಽಬ್ರಹ್ಮವಾದಿನಿ।।
ಬ್ರಹ್ಮವಾದಿನಿಯಾದ ಬ್ರಾಹ್ಮಣನನ್ನು ಬಿಟ್ಟು ಮತ್ತನಾಗಿರುವವನಿಗೂ, ಹುಚ್ಚನಿಗೂ, ಕಳ್ಳನಿಗೂ, ಪರನಿಂದೆಯನ್ನು ಮಾಡುವವನಿಗೂ, ಮೂಕನಿಗೂ, ಮುಖದಲ್ಲಿ ವರ್ಚಸ್ಸಿಲ್ಲದಿರುವವನಿಗೂ, ಅಂಗವಿಕಲನಿಗೂ, ಗುಳ್ಳನಿಗೂ, ದುಷ್ಟನಿಗೂ, ದುಷ್ಕುಲದಲ್ಲಿ ಹುಟ್ಟಿದವನಿಗೂ, ವ್ರತಗಳನ್ನು ಆಚರಿಸದೇ ಸುಸಂಕೃತನಾಗದೇ ಇರುವವನಿಗೂ, ವೇದದಿಂದ ವಿಹೀನನಾದವನಿಗೂ ದಾನನೀಡಬಾರದು.
12037032a ಅಸಮ್ಯಕ್ಚೈವ ಯದ್ದತ್ತಮಸಮ್ಯಕ್ಚ ಪ್ರತಿಗ್ರಹಃ।
12037032c ಉಭಯೋಃ ಸ್ಯಾದನರ್ಥಾಯ ದಾತುರಾದಾತುರೇವ ಚ।।
ಶ್ರದ್ಧೆಯಿಲ್ಲದೇ ಶಾಸ್ತ್ರವಿಹಿತವಾಗಿ ಅನರ್ಹನಿಗೆ ಕೊಟ್ಟ ದಾನವು ದಾನಕೊಡುವವನಿಗೂ ಮತ್ತು ದಾನವನ್ನು ಸ್ವೀಕರಿಸಿದವನಿಗೂ ಅನರ್ಥಗಳನ್ನುಂಟುಮಾಡುತ್ತದೆ.
12037033a ಯಥಾ ಖದಿರಮಾಲಂಬ್ಯ ಶಿಲಾಂ ವಾಪ್ಯರ್ಣವಂ ತರನ್।
12037033c ಮಜ್ಜತೇ ಮಜ್ಜತೇ ತದ್ವದ್ದಾತಾ ಯಶ್ಚ ಪ್ರತೀಚ್ಚಕಃ।।
ಕಗ್ಗಲೀ ಮರದ ತುಂಡನ್ನೋ ಅಥವಾ ಕಲ್ಲುಗುಂಡನ್ನೋ ಆಶ್ರಯಿಸಿ ಸಮುದ್ರವನ್ನು ದಾಟಲು ಹೋದವನಂತೆ ದಾನಕೊಟ್ಟವನೂ ದಾನವನ್ನು ಪರಿಗ್ರಹಿಸಿದವನೂ ಅಧರ್ಮದಲ್ಲಿ ಮುಳುಗಿಹೋಗುತ್ತಾರೆ.
12037034a ಕಾಷ್ಠೈರಾರ್ದ್ರೈರ್ಯಥಾ ವಹ್ನಿರುಪಸ್ತೀರ್ಣೋ ನ ದೀಪ್ಯತೇ।
12037034c ತಪಃಸ್ವಾಧ್ಯಾಯಚಾರಿತ್ರೈರೇವಂ ಹೀನಃ ಪ್ರತಿಗ್ರಹೀ।।
ಹಸಿಯಾದ ಕಟ್ಟಿಗೆಯನ್ನು ಹಾಕಿದ ಅಗ್ನಿಯು ಹೇಗೆ ಚೆನ್ನಾಗಿ ಉರಿಯುವುದಿಲ್ಲವೋ ಹಾಗೆ ತಪಸ್ಸು-ಸ್ವಾಧ್ಯಾಯ ಮತ್ತು ಚಾರಿತ್ರಹೀನನಾಗಿರವವನು ದಾನವನ್ನು ಸ್ವೀಕರಿಸಿದರೆ ಅಂಥವನು ಶೋಭಿಸುವುದಿಲ್ಲ.
12037035a ಕಪಾಲೇ ಯದ್ವದಾಪಃ ಸ್ಯುಃ ಶ್ವದೃತೌ ವಾ ಯಥಾ ಪಯಃ।
12037035c ಆಶ್ರಯಸ್ಥಾನದೋಷೇಣ ವೃತ್ತಹೀನೇ ತಥಾ ಶ್ರುತಮ್।।
ಆಶ್ರಯಸ್ಥಾನದೋಷಗಳಿಂದ ಶುದ್ಧವಾದ ನೀರನ್ನು ಕಪಾಲದಲ್ಲಿಟ್ಟರೆ ಅಥವಾ ಹಾಲನ್ನು ನಾಯಿಯ ಚರ್ಮದ ಚೀಲದಲ್ಲಿಟ್ಟರೆ ಹೇಗೋ ಹಾಗೆ ಆಚಾರಹೀನನಾದವನಲ್ಲಿರುವ ವೇದಗಳೂ ದೂಷಿತಗೊಳ್ಳುತ್ತವೆ.
12037036a ನಿರ್ಮಂತ್ರೋ ನಿರ್ವ್ರತೋ ಯಃ ಸ್ಯಾದಶಾಸ್ತ್ರಜ್ಞೋಽನಸೂಯಕಃ।
12037036c ಅನುಕ್ರೋಶಾತ್ಪ್ರದಾತವ್ಯಂ ದೀನೇಷ್ವೇವಂ ನರೇಷ್ವಪಿ।।
ನಿರ್ಮಂತ್ರನಾಗಿದ್ದರೂ, ವ್ರತಾದಿಗಳನ್ನು ನಡೆಸದೇ ಇದ್ದರೂ, ಶಾಸ್ತ್ರಜ್ಞಾನಗಳನ್ನು ಹೊಂದಿಲ್ಲದಿದ್ದರೂ, ಅನಸೂಯಕನಾದ ದೀನ ನರನಿಗೆ ಅನುಕ್ರೋಶದಿಂದ ದಾನವನ್ನು ಕೊಡಬಹುದು.
12037037a ನ ವೈ ದೇಯಮನುಕ್ರೋಶಾದ್ದೀನಾಯಾಪ್ಯಪಕಾರಿಣೇ।
12037037c ಆಪ್ತಾಚರಿತಮಿತ್ಯೇವ ಧರ್ಮ ಇತ್ಯೇವ ವಾ ಪುನಃ।।
ಇತರರಿಗೆ ಯಾವಾಗಲೂ ಕೇಡನ್ನೇ ಬಯಸುವವನಿಗೆ, ಅವನು ದರಿದ್ರನೇ ಆಗಿದ್ದರೂ, ದೀನನೇ ಆಗಿದ್ದರೂ, ಅನುಕಂಪದಿಂದ ದಾನಮಾಡಬಾರದು.
12037038a ನಿಷ್ಕಾರಣಂ ಸ್ಮ ತದ್ದತ್ತಂ ಬ್ರಾಹ್ಮಣೇ ಧರ್ಮವರ್ಜಿತೇ।
12037038c ಭವೇದಪಾತ್ರದೋಷೇಣ ನ ಮೇಽತ್ರಾಸ್ತಿ ವಿಚಾರಣಾ।।
ಬ್ರಹ್ಮವರ್ಜಿತ ಬ್ರಾಹ್ಮಣನಿಗೆ ಕೊಟ್ಟ ದಾನವು ಅಪಾತ್ರನಿಗೆ ದಾನಮಾಡಿದ ದೋಷದಿಂದ ಕೂಡಿರುವುದರಿಂದ ನಿಷ್ಫಲವಾಗುತ್ತದೆ ಎನ್ನುವುದರಲ್ಲಿ ವಿಚಾರ ಮಾಡುವುದೇ ಬೇಕಾಗಿಲ್ಲ.
12037039a ಯಥಾ ದಾರುಮಯೋ ಹಸ್ತೀ ಯಥಾ ಚರ್ಮಮಯೋ ಮೃಗಃ।
12037039c ಬ್ರಾಹ್ಮಣಶ್ಚಾನಧೀಯಾನಸ್ತ್ರಯಸ್ತೇ ನಾಮಧಾರಕಾಃ।।
ಮರದಿಂದ ತಯಾರಿಸಿದ ಆನೆ, ಚರ್ಮದಿಂದ ತಯಾರಿಸಿದ ಜಿಂಕೆ ಮತ್ತು ಬ್ರಹ್ಮಜ್ಞಾನವಿಹೀನ ಬ್ರಾಹ್ಮಣ ಈ ಮೂವರೂ ಕೇವಲ ನಾಮಧಾರಕಗಳೇ ಹೊರತು ಅವುಗಳಲ್ಲಿ ನಿಜವಾದ ಸತ್ತ್ವವು ಇರುವುದಿಲ್ಲ.
12037040a ಯಥಾ ಷಂಢೋಽಫಲಃ ಸ್ತ್ರೀಷು ಯಥಾ ಗೌರ್ಗವಿ ಚಾಫಲಾ।
12037040c ಶಕುನಿರ್ವಾಪ್ಯಪಕ್ಷಃ ಸ್ಯಾನ್ನಿರ್ಮಂತ್ರೋ ಬ್ರಾಹ್ಮಣಸ್ತಥಾ।।
ಷಂಡನು ಸ್ತ್ರೀಯರಲ್ಲಿ, ಅಥವಾ ಹಸುವು ಇನ್ನೊಂದು ಹಸುವಿನಲ್ಲಿ ಹೇಗೆ ಫಲವನ್ನು ಹೊಂದಲಾರದೋ ಮತ್ತು ರೆಕ್ಕೆಗಳಿಲ್ಲದ ಪಕ್ಷಿಯು ಹೇಗೋ ಹಾಗೆ ಮಂತ್ರಗಳಿಲ್ಲದ ಬ್ರಾಹ್ಮಣನೂ ನಿಷ್ಪ್ರಯೋಜಕನು.
12037041a ಗ್ರಾಮಧಾನ್ಯಂ ಯಥಾ ಶೂನ್ಯಂ ಯಥಾ ಕೂಪಶ್ಚ ನಿರ್ಜಲಃ।
12037041c ಯಥಾ ಹುತಮನಗ್ನೌ ಚ ತಥೈವ ಸ್ಯಾನ್ನಿರಾಕೃತೌ।।
ಧಾನ್ಯಗಳಿಲ್ಲದ ಗ್ರಾಮ ಮತ್ತು ನೀರಿಲ್ಲದ ಬಾವಿಯಂತೆ ವೇದಗಳಿಲ್ಲದ ಬ್ರಾಹ್ಮಣನಿಗೆ ದಾನವನ್ನಿತ್ತರೆ ಅಗ್ನಿಯಿಲ್ಲದ ಬೂದಿಯಲ್ಲಿ ಹೋಮಮಾಡಿದಷ್ಟೇ ಪ್ರಯೋಜನವಾಗುತ್ತದೆ.
12037042a ದೇವತಾನಾಂ ಪಿತೃಣಾಂ ಚ ಹವ್ಯಕವ್ಯವಿನಾಶನಃ।
12037042c ಶತ್ರುರರ್ಥಹರೋ ಮೂರ್ಖೋ ನ ಲೋಕಾನ್ಪ್ರಾಪ್ತುಮರ್ಹತಿ।।
ವೇದವಿದ್ಯಾವಿಹೀನ ಬ್ರಾಹ್ಮಣನು ದೇವತೆಗಳಿಗೆ ಮತ್ತು ಪಿತೃಗಳಿಗೆ ನೀಡುವ ಹವ್ಯ-ಕವ್ಯಗಳನ್ನು ನಾಶಗೊಳಿಸುತ್ತಾನೆ. ಅಂಥಹ ಮೂರ್ಖನು ಧನಾಪಹಾರೀ ಶತ್ರುವಾಗಿ ಉತ್ತಮ ಲೋಕಗಳನ್ನು ಪಡೆಯಲು ಅರ್ಹನಾಗುವುದಿಲ್ಲ.”
12037043a ಏತತ್ತೇ ಕಥಿತಂ ಸರ್ವಂ ಯಥಾ ವೃತ್ತಂ ಯುಧಿಷ್ಠಿರ।
12037043c ಸಮಾಸೇನ ಮಹದ್ಧ್ಯೇತಚ್ಚ್ರೋತವ್ಯಂ ಭರತರ್ಷಭ।।
ಯುಧಿಷ್ಠಿರ! ಭರತರ್ಷಭ! ಮಹಾ ಅರ್ಥಯುಕ್ತವಾದ ಈ ಎಲ್ಲ ವಿಷಯಗಳನ್ನೂ ಯಥಾವತ್ತಾಗಿ ಸಂಕ್ಷಿಪ್ತವಾಗಿ ನಿನಗೆ ಹೇಳಿದ್ದೇನೆ.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ವ್ಯಾಸವಾಕ್ಯೇ ಸಪ್ತತ್ರಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ವ್ಯಾಸವಾಕ್ಯ ಎನ್ನುವ ಮೂವತ್ತೇಳನೇ ಅಧ್ಯಾಯವು.