ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ರಾಜಧರ್ಮ ಪರ್ವ
ಅಧ್ಯಾಯ 36
ಸಾರ
12036001 ವ್ಯಾಸ ಉವಾಚ।
12036001a ತಪಸಾ ಕರ್ಮಭಿಶ್ಚೈವ ಪ್ರದಾನೇನ ಚ ಭಾರತ।
12036001c ಪುನಾತಿ ಪಾಪಂ ಪುರುಷಃ ಪೂತಶ್ಚೇನ್ನ ಪ್ರವರ್ತತೇ।।
ವ್ಯಾಸನು ಹೇಳಿದನು: “ಭಾರತ! ತಪಸ್ಸಿನಿಂದ, ಕರ್ಮಗಳಿಂದ ಮತ್ತು ದಾನದಿಂದ ಮತ್ತು ಆ ಪಾಪಗಳನ್ನು ಪುನಃ ಮಾಡದೇ ಇರುವುದರಿಂದ ಪುರುಷನು ಪಾಪಗಳನ್ನು ತೊಳೆದುಕೊಂಡು ಪವಿತ್ರನಾಗುತ್ತಾನೆ.
12036002a ಏಕಕಾಲಂ ತು ಭುಂಜಾನಶ್ಚರನ್ಭೈಕ್ಷಂ ಸ್ವಕರ್ಮಕೃತ್।
12036002c ಕಪಾಲಪಾಣಿಃ ಖಟ್ವಾಂಗೀ ಬ್ರಹ್ಮಚಾರೀ ಸದೋತ್ಥಿತಃ।।
12036003a ಅನಸೂಯುರಧಃಶಾಯೀ ಕರ್ಮ ಲೋಕೇ ಪ್ರಕಾಶಯನ್।
12036003c ಪೂರ್ಣೈರ್ದ್ವಾದಶಭಿರ್ವರ್ಷೈರ್ಬ್ರಹ್ಮಹಾ ವಿಪ್ರಮುಚ್ಯತೇ।।
ಬ್ರಹ್ಮಹತ್ಯೆಯನ್ನು ಮಾಡಿದವನು ಭಿಕ್ಷೆಯನ್ನು ಮಾಡಿಕೊಂಡು ಒಂದೇ ಹೊತ್ತು ಊಟಮಾಡಬೇಕು. ತನ್ನ ಎಲ್ಲ ಕೆಲಸಗಳನ್ನೂ ತಾನೇ ಮಾಡಿಕೊಳ್ಳಬೇಕು. ಕಪಾಲವನ್ನೂ ದಂಡವನ್ನೂ ಹಿಡಿದು ಬ್ರಹ್ಮಚಾರಿಯಾಗಿರಬೇಕು. ಸದಾ ಚಟುವಟಿಕೆಯಿಂದಿರಬೇಕು. ಯಾರಲ್ಲಿಯೂ ದೋಷವನ್ನೆಣಿಸಬಾರದು. ನೆಲದ ಮೇಲೆ ಮಲಗಬೇಕು. ತಾನು ಮಾಡಿದ ಪಾಪವನ್ನು ಜನರಲ್ಲಿ ಹೇಳಿಕೊಳ್ಳಬೇಕು. ಈ ನಿಯಮಗಳನ್ನು ಸಂಪೂರ್ಣ ಹನ್ನೆರಡು ವರ್ಷಗಳವರೆಗೆ ಪಾಲಿಸಿದರೆ ಅವನು ಬ್ರಹ್ಮಹತ್ಯಾದೋಷದಿಂದ ಮುಕ್ತನಾಗುತ್ತಾನೆ.
12036004a ಷಡ್ಭಿರ್ವರ್ಷೈಃ ಕೃಚ್ಚ್ರಭೋಜೀ ಬ್ರಹ್ಮಹಾ ಪೂಯತೇ ನರಃ।
12036004c ಮಾಸೇ ಮಾಸೇ ಸಮಶ್ನಂಸ್ತು ತ್ರಿಭಿರ್ವರ್ಷೈಃ ಪ್ರಮುಚ್ಯತೇ।।
ಆರು ವರ್ಷಗಳು ಕೃಚ್ಛ್ರವ್ರತಾನುಸಾರವಾಗಿ ಭೋಜನಮಾಡುತ್ತಿದ್ದರೆ ಅಥವಾ ಮಾಸ-ಮಾಸಗಳಲ್ಲಿಯೂ ಕೃಚ್ಛ್ರವ್ರತಾಚರಣೆ ಮಾಡಿದರೆ ಬ್ರಹ್ಮಹತ್ಯೆಮಾಡಿದ ನರನು ಪವಿತ್ರನಾಗುತ್ತಾನೆ.
12036005a ಸಂವತ್ಸರೇಣ ಮಾಸಾಶೀ ಪೂಯತೇ ನಾತ್ರ ಸಂಶಯಃ।
12036005c ತಥೈವೋಪರಮನ್ರಾಜನ್ಸ್ವಲ್ಪೇನಾಪಿ ಪ್ರಮುಚ್ಯತೇ।।
ರಾಜನ್! ತಿಂಗಳಿಗೊಮ್ಮೆ ಮಾತ್ರ ಊಟಮಾಡಿಕೊಂಡಿದ್ದರೆ ಒಂದೇ ವರ್ಷದಲ್ಲಿ ಬ್ರಹ್ಮಹತ್ಯೆಮಾಡಿದವನು ಪವಿತ್ರನಾಗುತ್ತಾನೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಅದಕ್ಕೂ ಹೆಚ್ಚು ಕಾಲ ಉಪವಾಸದಿಂದಿದ್ದರೆ ಅತ್ಯಲ್ಪಕಾಲದಲ್ಲಿಯೇ ಬ್ರಹ್ಮಹತ್ಯಾದೋಷದ ನಿವಾರಣೆಯಾಗುತ್ತದೆ.
12036006a ಕ್ರತುನಾ ಚಾಶ್ವಮೇಧೇನ ಪೂಯತೇ ನಾತ್ರ ಸಂಶಯಃ।
12036006c ಯ ಚಾಸ್ಯಾವಭೃಥೇ ಸ್ನಾಂತಿ ಕೇ ಚಿದೇವಂವಿಧಾ ನರಾಃ।।
12036007a ತೇ ಸರ್ವೇ ಪೂತಪಾಪ್ಮಾನೋ ಭವಂತೀತಿ ಪರಾ ಶ್ರುತಿಃ।
ಅಶ್ವಮೇಧಯಾಗದಿಂದಲೂ ಬ್ರಹ್ಮಹತ್ಯಾದೋಷದಿಂದ ಮುಕ್ತನಾಗುವನು ಎನ್ನುವುದರಲ್ಲಿ ಸಂಶಯವಿಲ್ಲ. ಅಶ್ವಮೇಧದ ಅವಭೃಥಸ್ನಾನ ಮಾಡಿದ ನರನು ಈ ವಿಧದ ಎಲ್ಲ ಪಾಪಗಳಿಂದಲೂ ಮುಕ್ತನಾಗುತ್ತಾನೆ ಎಂದು ಶ್ರುತಿಗಳು ಹೇಳುತ್ತವೆ.
12036007c ಬ್ರಾಹ್ಮಣಾರ್ಥೇ ಹತೋ ಯುದ್ಧೇ ಮುಚ್ಯತೇ ಬ್ರಹ್ಮಹತ್ಯಯಾ।।
12036008a ಗವಾಂ ಶತಸಹಸ್ರಂ ತು ಪಾತ್ರೇಭ್ಯಃ ಪ್ರತಿಪಾದಯನ್।
12036008c ಬ್ರಹ್ಮಹಾ ವಿಪ್ರಮುಚ್ಯೇತ ಸರ್ವಪಾಪೇಭ್ಯ ಏವ ಚ।।
ಬ್ರಾಹ್ಮಣರಿಗಾಗಿ ಯುದ್ಧದಲ್ಲಿ ಹತನಾದರೆ ಬ್ರಹ್ಮಹತ್ಯಾದೋಷದಿಂದ ಮುಕ್ತನಾಗುತ್ತಾನೆ. ಒಂದು ಲಕ್ಷ ಗೋವುಗಳನ್ನು ಪಾತ್ರನಾದವನಿಗೆ ದಾನಮಾಡಿದರೆ ಬ್ರಹ್ಮಹತ್ಯೆ ಮತ್ತು ಎಲ್ಲ ದೋಷಗಳಿಂದಲೂ ಮುಕ್ತನಾಗುತ್ತಾನೆ.
12036009a ಕಪಿಲಾನಾಂ ಸಹಸ್ರಾಣಿ ಯೋ ದದ್ಯಾತ್ಪಂಚವಿಂಶತಿಮ್।
12036009c ದೋಗ್ಧ್ರೀಣಾಂ ಸ ಚ ಪಾಪೇಭ್ಯಃ ಸರ್ವೇಭ್ಯೋ ವಿಪ್ರಮುಚ್ಯತೇ।।
ಹಾಲುಕೊಡುವ ಇಪ್ಪತ್ತೈದು ಸಾವಿರ ಕಪಿಲ ವರ್ಣದ ಗೋವುಗಳನ್ನು ದಾನಮಾಡಿದರೆ ಸರ್ವ ಪಾಪಗಳಿಂದ ಮುಕ್ತಿದೊರೆಯುತ್ತದೆ.
12036010a ಗೋಸಹಸ್ರಂ ಸವತ್ಸಾನಾಂ ದೋಗ್ಧ್ರೀಣಾಂ ಪ್ರಾಣಸಂಶಯೇ।
12036010c ಸಾಧುಭ್ಯೋ ವೈ ದರಿದ್ರೇಭ್ಯೋ ದತ್ತ್ವಾ ಮುಚ್ಯೇತ ಕಿಲ್ಬಿಷಾತ್।।
ಕರುಗಳಿರುವ ಮತ್ತು ಹಾಲುಕರೆಯುವ ಸಹಸ್ರ ಗೋವುಗಳನ್ನು ಮರಣಕಾಲದಲ್ಲಿ ದರಿದ್ರ ಸತ್ಪುರುಷರಿಗೆ ದಾನಮಾಡಿದರೆ ಎಲ್ಲ ಪಾಪಗಳ ವಿಮೋಚನೆಯಾಗುತ್ತದೆ.
12036011a ಶತಂ ತೈ ಯಸ್ತು ಕಾಂಬೋಜಾನ್ಬ್ರಾಹ್ಮಣೇಭ್ಯಃ ಪ್ರಯಚ್ಚತಿ।
12036011c ನಿಯತೇಭ್ಯೋ ಮಹೀಪಾಲ ಸ ಚ ಪಾಪಾತ್ಪ್ರಮುಚ್ಯತೇ।।
ಮಹೀಪಾಲ! ನಿಯಮಾನುಷ್ಠಾನ ಪರರಾದ ಬ್ರಾಹ್ಮಣರಿಗೆ ನೂರು ಕಾಂಬೋಜ ದೇಶದ ಕುದುರೆಗಳನ್ನು ದಾನಮಾಡುವುದರಿಂದಲೂ ಸರ್ವ ಪಾಪಗಳ ವಿಮೋಚನೆಯಾಗುತ್ತದೆ.
12036012a ಮನೋರಥಂ ತು ಯೋ ದದ್ಯಾದೇಕಸ್ಮಾ ಅಪಿ ಭಾರತ।
12036012c ನ ಕೀರ್ತಯೇತ ದತ್ತ್ವಾ ಯಃ ಸ ಚ ಪಾಪಾತ್ಪ್ರಮುಚ್ಯತೇ।।
ಭಾರತ! ಕೇವಲ ಒಬ್ಬನ ಮನೋರಥವನ್ನು ಪೂರೈಸುವ ಹಾಗೆ ದಾನಮಾಡಿ ಆ ದಾನದ ಕುರಿತು ಬೇರೆಯವರಲ್ಲಿ ಹೇಳಿಕೊಳ್ಳದೇ ಇದ್ದವನೂ ಪಾಪದಿಂದ ಮುಕ್ತನಾಗುತ್ತಾನೆ.
12036013a ಸುರಾಪಾನಂ ಸಕೃತ್ಪೀತ್ವಾ ಯೋಽಗ್ನಿವರ್ಣಾಂ ಪಿಬೇದ್ದ್ವಿಜಃ।
12036013c ಸ ಪಾವಯತ್ಯಥಾತ್ಮಾನಮಿಹ ಲೋಕೇ ಪರತ್ರ ಚ।।
ಸುರಾಪಾನವನ್ನು ಮಾಡಿದ ದ್ವಿಜನು ಕೆಂಪಾಗಿ ಕಾಸಿ ಕುದಿಯುತ್ತಿರುವ ಅಗ್ನಿವರ್ಣದ ಸುರೆಯನ್ನು ಕುಡಿದರೆ ಅವನು ಈ ಲೋಕದಲ್ಲಿ ಮತ್ತು ಪರಲೋಕದಲ್ಲಿ ಶುದ್ಧನಾಗುತ್ತಾನೆ.
12036014a ಮೇರುಪ್ರಪಾತಂ ಪ್ರಪತನ್ಜ್ವಲನಂ ವಾ ಸಮಾವಿಶನ್।
12036014c ಮಹಾಪ್ರಸ್ಥಾನಮಾತಿಷ್ಠನ್ಮುಚ್ಯತೇ ಸರ್ವಕಿಲ್ಬಿಷೈಃ।।
ಪರ್ವತದಿಂದ ಹಾರಿ ಕೆಳಗೆ ಬೀಳುವುದರಿಂದಲೂ, ಅಗ್ನಿಯನ್ನು ಪ್ರವೇಶಿಸುವುದರಿಂದಲೂ ಮತ್ತು ಮರಣದೀಕ್ಷೆಯನ್ನು ಕೈಗೊಂಡು ಉತ್ತರಾಭಿಮುಖವಾಗಿ ಪ್ರಯಾಣಿಸುತ್ತಾ ಹಿಮಾಲಯದಲ್ಲಿ ಪ್ರಾಣತ್ಯಾಗಮಾಡುವುದರಿಂದಲೂ ಮನುಷ್ಯನು ಸರ್ವಪಾಪಗಳಿಂದ ವಿಮುಕ್ತನಾಗುತ್ತಾನೆ.
12036015a ಬೃಹಸ್ಪತಿಸವೇನೇಷ್ಟ್ವಾ ಸುರಾಪೋ ಬ್ರಾಹ್ಮಣಃ ಪುನಃ।
12036015c ಸಮಿತಿಂ ಬ್ರಾಹ್ಮಣೈರ್ಗಚ್ಚೇದಿತಿ ವೈ ಬ್ರಾಹ್ಮಣೀ ಶ್ರುತಿಃ।।
ಸುರಾಪಾನ ಮಾಡಿದ ಬ್ರಾಹ್ಮಣನು ಬೃಹಸ್ಪತಿಸವ ಎನ್ನುವ ಯಾಗವನ್ನು ಮಾಡುವುದರಿಂದ ಬ್ರಾಹ್ಮಣರ ಸಭೆಗೆ ಪುನಃ ಹೋಗಲು ಅರ್ಹನಾಗುತ್ತಾನೆ ಎಂದು ಶ್ರುತಿಗಳು ಸಾರುತ್ತವೆ.
12036016a ಭೂಮಿಪ್ರದಾನಂ ಕುರ್ಯಾದ್ಯಃ ಸುರಾಂ ಪೀತ್ವಾ ವಿಮತ್ಸರಃ।
12036016c ಪುನರ್ನ ಚ ಪಿಬೇದ್ರಾಜನ್ಸಂಸ್ಕೃತಃ ಶುಧ್ಯತೇ ನರಃ।।
ರಾಜನ್! ಸುರಾಪಾನ ಮಾಡಿದ ನರನು ಮಾತ್ಸರ್ಯರಹಿತನಾಗಿ ಭೂದಾನ ಮಾಡುವುದರಿಂದ ಮತ್ತು ಪುನಃ ಸುರಾಪಾನಮಾಡದೇ ಇರುವುದರಿಂದ ಸುಸಂಸ್ಕೃತನೂ ಶುದ್ಧನೂ ಆಗುತ್ತಾನೆ.
12036017a ಗುರುತಲ್ಪೀ ಶಿಲಾಂ ತಪ್ತಾಮಾಯಸೀಮಧಿಸಂವಿಶೇತ್।
12036017c ಪಾಣಾವಾಧಾಯ ವಾ ಶೇಫಂ ಪ್ರವ್ರಜೇದೂರ್ಧ್ವದರ್ಶನಃ।।
12036018a ಶರೀರಸ್ಯ ವಿಮೋಕ್ಷೇಣ ಮುಚ್ಯತೇ ಕರ್ಮಣೋಽಶುಭಾತ್।
12036018c ಕರ್ಮಭ್ಯೋ ವಿಪ್ರಮುಚ್ಯಂತೇ ಯತ್ತಾಃ ಸಂವತ್ಸರಂ ಸ್ತ್ರಿಯಃ।।
ಗುರುಪತ್ನಿಯೊಡನೆ ಸಮಾಗಮ ಮಾಡಿದವನು ಕಾದ ಶಿಲೆಯ ಮೇಲೆ ಮಲಗಬೇಕು ಅಥವಾ ತನ್ನ ಶಿಶ್ನವನ್ನು ಕತ್ತರಿಸಿಕೊಂಡು, ತಲೆಯನ್ನೆತ್ತಿ ಆಕಾಶವನ್ನೇ ನೋಡುತ್ತಾ ಪ್ರಯಾಣಿಸಬೇಕು. ಈ ರೀತಿ ಶರೀರವನ್ನು ತೊರೆಯುವುದರಿಂದಲೇ ಆ ಅಶುಭಕರ್ಮದ ಪಾಪದಿಂದ ಮುಕ್ತನಾಗುತ್ತಾನೆ. ಇಂತಹ ಪಾಪಕರ್ಮವನ್ನು ಮಾಡಿದ ಸ್ತ್ರೀಯರು ಒಂದು ವರ್ಷ ಸಂಯಮದಿಂದ ಇದ್ದರೆ ಪಾಪಮುಕ್ತರಾಗುತ್ತಾರೆ.
12036019a ಮಹಾವ್ರತಂ ಚರೇದ್ಯಸ್ತು ದದ್ಯಾತ್ಸರ್ವಸ್ವಮೇವ ತು।
12036019c ಗುರ್ವರ್ಥೇ ವಾ ಹತೋ ಯುದ್ಧೇ ಸ ಮುಚ್ಯೇತ್ಕರ್ಮಣೋಽಶುಭಾತ್।।
ಮಹಾವ್ರತ60ವನ್ನು ಆಚರಿಸಿದವನು, ಸರ್ವವನ್ನೂ ದಾನಮಾಡಿದವನು ಮತ್ತು ಗುರುವಿನ ಪರವಾಗಿ ಯುದ್ಧದಲ್ಲಿ ಮಡಿದವನು ಈ ಅಶುಭ ಕರ್ಮದಿಂದ ಮುಕ್ತನಾಗುತ್ತಾನೆ.
12036020a ಅನೃತೇನೋಪಚರ್ತಾ ಚ ಪ್ರತಿರೋದ್ಧಾ ಗುರೋಸ್ತಥಾ।
12036020c ಉಪಹೃತ್ಯ ಪ್ರಿಯಂ ತಸ್ಮೈ ತಸ್ಮಾತ್ಪಾಪಾತ್ಪ್ರಮುಚ್ಯತೇ।।
ಗುರುವಿಗೆ ಪ್ರಿಯವಾದುದನ್ನು ತಂದು ಕೊಡುವುದರಿಂದ ಗುರುವಿಗೆ ಸುಳ್ಳುಹೇಳಿದುದರ ಮತ್ತು ಗುರುವಿಗೆ ವಿರುದ್ಧವಾಗಿ ನಡೆದುಕೊಂಡಿದುದರ ಪಾಪದಿಂದ ಮುಕ್ತನಾಗುತ್ತಾನೆ.
12036021a ಅವಕೀರ್ಣಿನಿಮಿತ್ತಂ ತು ಬ್ರಹ್ಮಹತ್ಯಾವ್ರತಂ ಚರೇತ್।
12036021c ಖರಚರ್ಮವಾಸಾಃ ಷಣ್ಮಾಸಂ ತಥಾ ಮುಚ್ಯೇತ ಕಿಲ್ಬಿಷಾತ್।।
ಬ್ರಹ್ಮಚರ್ಯವ್ರತದಿಂದ ಭ್ರಷ್ಟನಾದವನು ಗೋಚರ್ಮವನ್ನು ಹೊದೆದುಕೊಂಡು ಆರು ತಿಂಗಳ ಕಾಲ ಬ್ರಹ್ಮಹತ್ಯಾವ್ರತವನ್ನು ಆಚರಿಸಿದರೆ ಆ ಪಾಪದಿಂದ ಮುಕ್ತನಾಗುತ್ತಾನೆ.
12036022a ಪರದಾರಾಪಹಾರೀ ಚ ಪರಸ್ಯಾಪಹರನ್ ವಸು।
12036022c ಸಂವತ್ಸರಂ ವ್ರತೀ ಭೂತ್ವಾ ತಥಾ ಮುಚ್ಯೇತ ಕಿಲ್ಬಿಷಾತ್।।
ಒಂದು ವರ್ಷ ಕಠೋರ ವ್ರತವನ್ನು ಆಚರಿಸಿದರೆ ಪರಸ್ತ್ರೀಯನ್ನು ಮತ್ತು ಪರರ ಸ್ವತ್ತನ್ನು ಅಪಹರಿಸಿದ ಪಾಪದಿಂದ ಮುಕ್ತನಾಗಬಹುದು.
12036023a ಸ್ತೇಯಂ ತು ಯಸ್ಯಾಪಹರೇತ್ತಸ್ಮೈ ದದ್ಯಾತ್ಸಮಂ ವಸು।
12036023c ವಿವಿಧೇನಾಭ್ಯುಪಾಯೇನ ತೇನ ಮುಚ್ಯೇತ ಕಿಲ್ಬಿಷಾತ್।।
ಪರರ ಸ್ವತ್ತನ್ನು ಅಪಹರಿಸಿದವನು, ಅದಕ್ಕೆ ಸಮನಾದಷ್ಟು ಸಂಪತ್ತನ್ನು ವಿವಿಧ ಉಪಾಯಗಳಿಂದ ಹಿಂದಿರುಗಿಸಿದರೆ ಆ ಪಾಪದಿಂದ ಮುಕ್ತನಾಗುತ್ತಾನೆ.
12036024a ಕೃಚ್ಚ್ರಾದ್ದ್ವಾದಶರಾತ್ರೇಣ ಸ್ವಭ್ಯಸ್ತೇನ ದಶಾವರಮ್।
12036024c ಪರಿವೇತ್ತಾ ಭವೇತ್ಪೂತಃ ಪರಿವಿತ್ತಿಶ್ಚ ಭಾರತ।।
ಭಾರತ! ಪರಿವೇತ್ತ61 ಮತ್ತು ಪರಿವಿತ್ತಿ62 ಇವರಿಬ್ಬರಿಗೂ ಹನ್ನೆರಡು ರಾತ್ರಿಗಳು ಜಿತೇಂದ್ರಿಯರಾಗಿದ್ದು ಕೃಚ್ಛ್ರವ್ರತವನ್ನಾಚರಿಸುವುದೇ ಪ್ರಾಯಶ್ಚಿತ್ತವಾಗಿದೆ.
12036025a ನಿವೇಶ್ಯಂ ತು ಭವೇತ್ತೇನ ಸದಾ ತಾರಯಿತಾ ಪಿತೃನ್।
12036025c ನ ತು ಸ್ತ್ರಿಯಾ ಭವೇದ್ದೋಷೋ ನ ತು ಸಾ ತೇನ ಲಿಪ್ಯತೇ।।
ಪ್ರಾಯಶ್ಚಿತ್ತವನ್ನು ಮಾಡಿಕೊಂಡ ಪರಿವೇತ್ತಿಯು ವಿವಾಹವಾಗಿ ಪಿತೃಕಾರ್ಯಗಳನ್ನು ಮಾಡುತ್ತಾ ಬಂದರೆ ಅವನ ಪತ್ನಿಗೆ ಯಾವ ದೋಷವೂ ಆಗುವುದಿಲ್ಲ. ಅವಳಿಗೆ ಪಾಪಗಳು ಅಂಟಿಕೊಳ್ಳುವುದಿಲ್ಲ.
12036026a ಭಜನೇ ಹ್ಯೃತುನಾ ಶುದ್ಧಂ ಚಾತುರ್ಮಾಸ್ಯಂ ವಿಧೀಯತೇ।
12036026c ಸ್ತ್ರಿಯಸ್ತೇನ ವಿಶುಧ್ಯಂತಿ ಇತಿ ಧರ್ಮವಿದೋ ವಿದುಃ।।
ಚಾತುರ್ಮಾಸ್ಯವ್ರತ63ದ ಮೂಲಕ ಶುದ್ಧಿಮಾಡಿಕೊಳ್ಳುವ ವಿಧಾನವಿದೆ. ಸ್ತ್ರೀಯರು ಈ ವ್ರತದ ಆಚರಣೆಯಿಂದ ಶುದ್ಧರಾಗುತ್ತಾರೆಂದು ಧರ್ಮವಿದರು ಹೇಳುತ್ತಾರೆ.
12036027a ಸ್ತ್ರಿಯಸ್ತ್ವಾಶಂಕಿತಾಃ ಪಾಪೈರ್ನೋಪಗಮ್ಯಾ ಹಿ ಜಾನತಾ।
12036027c ರಜಸಾ ತಾ ವಿಶುಧ್ಯಂತೇ ಭಸ್ಮನಾ ಭಾಜನಂ ಯಥಾ।।
ಪತ್ನಿಯು ಪಾಪಿಯೆಂದು ಶಂಕಿಸಿದರೆ ಅವಳು ಪುನಃ ರಜಸ್ವಲೆಯಾಗುವವರೆಗೆ ಅವಳೊಡನೆ ಕೂಡಬಾರದು. ಭಸ್ಮಲೇಪನದಿಂದ ಪಾತ್ರೆಯು ಶುದ್ಧವಾಗುವಂತೆ ರಜೋದರ್ಶನದಿಂದ ಸ್ತ್ರೀಯರು ಶುದ್ಧರಾಗುತ್ತಾರೆ.
12036028a ಚತುಷ್ಪಾತ್ಸಕಲೋ ಧರ್ಮೋ ಬ್ರಾಹ್ಮಣಾನಾಂ ವಿಧೀಯತೇ।
12036028c ಪಾದಾವಕೃಷ್ಟೋ ರಾಜನ್ಯೇ ತಥಾ ಧರ್ಮೋ ವಿಧೀಯತೇ।।
ಧರ್ಮದ ಎಲ್ಲ ನಾಲ್ಕು ಪಾದಗಳೂ ಬ್ರಾಹ್ಮಣರಿಗೆ ವಿಹಿತವಾಗಿವೆ. ರಾಜನಿಗೆ ಧರ್ಮದ ಮೂರು ಪಾದಗಳು ವಿಹಿತವಾಗಿವೆ.
12036029a ತಥಾ ವೈಶ್ಯೇ ಚ ಶೂದ್ರೇ ಚ ಪಾದಃ ಪಾದೋ ವಿಧೀಯತೇ।
12036029c ವಿದ್ಯಾದೇವಂವಿಧೇನೈಷಾಂ ಗುರುಲಾಘವನಿಶ್ಚಯಮ್।।
ಹಾಗೆಯೇ ವೈಶ್ಯ ಮತ್ತು ಶೂದ್ರರಿಗೆ ಒಂದೊಂದು ಪಾದ ಕಡಿಮೆ ಧರ್ಮವು ವಿಹಿತವಾಗಿದೆ. ಇದರ ಪ್ರಕಾರ ಪಾಪಗಳ ಮಹತ್ತ್ವತೆ ಮತ್ತು ಲಘುತ್ವಗಳು ಮತ್ತು ಅವುಗಳ ಪ್ರಾಯಶ್ಚಿತ್ತಗಳು ನಿಶ್ಚಯಿಸಲ್ಪಟ್ಟಿವೆ.
12036030a ತಿರ್ಯಗ್ಯೋನಿವಧಂ ಕೃತ್ವಾ ದ್ರುಮಾಂಶ್ಚಿತ್ತ್ವೇತರಾನ್ಬಹೂನ್।
12036030c ತ್ರಿರಾತ್ರಂ ವಾಯುಭಕ್ಷಃ ಸ್ಯಾತ್ಕರ್ಮ ಚ ಪ್ರಥಯೇನ್ನರಃ।।
ಪಶು-ಪಕ್ಷಿಗಳನ್ನು ವಧಿಸುವುದರಿಂದ ಮತ್ತು ಅನೇಕ ವೃಕ್ಷಗಳನ್ನು ಕಡಿಯುವುದರಿಂದ ಆದ ಪಾಪವನ್ನು ಮನುಷ್ಯನು ಮೂರುರಾತ್ರಿ ವಾಯುಭಕ್ಷಕನಾಗಿದ್ದು ಉಪವಾಸದಿಂದಿದ್ದರೆ ತೊರೆದುಕೊಳ್ಳುತ್ತಾನೆ.
12036031a ಅಗಮ್ಯಾಗಮನೇ ರಾಜನ್ಪ್ರಾಯಶ್ಚಿತ್ತಂ ವಿಧೀಯತೇ।
12036031c ಆರ್ದ್ರವಸ್ತ್ರೇಣ ಷಣ್ಮಾಸಂ ವಿಹಾರ್ಯಂ ಭಸ್ಮಶಾಯಿನಾ।।
ರಾಜನ್! ಸಂಗಮಾಡಬಾರದೇ ಇದ್ದವರೊಡನೆ ಸಂಗಮಾಡಿದರೆ ಆರು ತಿಂಗಳ ಕಾಲ ಒದ್ದೆ ಬಟ್ಟೆಯನ್ನು ಉಟ್ಟುಕೊಂಡು ಸಂಚರಿಸುತ್ತಿರಬೇಕು ಮತ್ತು ಬೂದಿಯ ಮೇಲೆ ಮಲಗಬೇಕು ಎಂಬ ಪ್ರಾಯಶ್ಚಿತ್ತವಿದೆ.
12036032a ಏಷ ಏವ ತು ಸರ್ವೇಷಾಮಕಾರ್ಯಾಣಾಂ ವಿಧಿರ್ಭವೇತ್।
12036032c ಬ್ರಾಹ್ಮಣೋಕ್ತೇನ ವಿಧಿನಾ ದೃಷ್ಟಾಂತಾಗಮಹೇತುಭಿಃ।।
ಮಾಡಬಾರದ ಎಲ್ಲ ಕರ್ಮಗಳಿಗೂ ಇದನ್ನೇ ಪ್ರಾಯಶ್ಚಿತ್ತವಾಗಿ ಬ್ರಾಹ್ಮಣಗಳಲ್ಲಿ ವಿಧಾನ-ದೃಷ್ಟಾಂತಗಳ ಮೂಲಕ ವಿಹಿಸಲಾಗಿದೆ.
12036033a ಸಾವಿತ್ರೀಮಪ್ಯಧೀಯಾನಃ ಶುಚೌ ದೇಶೇ ಮಿತಾಶನಃ।
12036033c ಅಹಿಂಸ್ರೋಽಮಂದಕೋಽಜಲ್ಪನ್ಮುಚ್ಯತೇ ಸರ್ವಕಿಲ್ಬಿಷೈಃ।।
ಶುಚಿಪ್ರದೇಶದಲ್ಲಿ, ಅಲ್ಪಾಹಾರಗಳನ್ನು ತಿಂದು, ಅಹಿಂಸಾವ್ರತನಿಷ್ಟನಾಗಿ, ರಾಗ-ದ್ವೇಷ-ಮಾನಾಪಮಾನಶೂನ್ಯನಾಗಿ, ಮೌನಿಯಾಗಿ ಗಾಯತ್ರೀ ಮಂತ್ರವನ್ನು ಜಪಿಸುವವನು ಸರ್ವ ಪಾಪಗಳಿಂದಲೂ ವಿಮುಕ್ತನಾಗುತ್ತಾನೆ.
12036034a ಅಹಃಸು ಸತತಂ ತಿಷ್ಠೇದಭ್ಯಾಕಾಶಂ ನಿಶಿ ಸ್ವಪೇತ್।
12036034c ತ್ರಿರಹ್ನಸ್ತ್ರಿರ್ನಿಶಾಯಾಶ್ಚ ಸವಾಸಾ ಜಲಮಾವಿಶೇತ್।।
12036035a ಸ್ತ್ರೀಶೂದ್ರಪತಿತಾಂಶ್ಚಾಪಿ ನಾಭಿಭಾಷೇದ್ವ್ರತಾನ್ವಿತಃ।
12036035c ಪಾಪಾನ್ಯಜ್ಞಾನತಃ ಕೃತ್ವಾ ಮುಚ್ಯೇದೇವಂವ್ರತೋ ದ್ವಿಜಃ।।
ತಿಳಿಯದೇ ಪಾಪಮಾಡಿದ ದ್ವಿಜನು ಪಾಪವಿಮೋಚನೆಗಾಗಿ ಹಗಲಿನಲ್ಲಿ ಯಾವಾಗಲೂ ನಿಂತುಕೊಂಡೇ ಇರಬೇಕು. ರಾತ್ರಿಯಲ್ಲಿ ಆಕಾಶವನ್ನೇ ಹೊದ್ದಿಕೊಂಡು ಬಯಲಿನಲ್ಲಿ ಮಲಗಬೇಕು. ಹಗಲು ಮೂರು ಬಾರಿ ಮತ್ತು ರಾತ್ರಿ ಮೂರು ಬಾರಿ ಉಟ್ಟಬಟ್ಟೆಯಲ್ಲಿಯೇ ನೀರಿನಲ್ಲಿ ಮುಳುಗಿ ಸ್ನಾನಮಾಡಬೇಕು. ಈ ವ್ರತವನ್ನಾಚರಿಸುತ್ತಿರುವಾಗ ಸ್ತ್ರೀ-ಶೂದ್ರ-ಪತಿತರಲ್ಲಿ ಮಾತನಾಡಬಾರದು.
12036036a ಶುಭಾಶುಭಫಲಂ ಪ್ರೇತ್ಯ ಲಭತೇ ಭೂತಸಾಕ್ಷಿಕಃ।
12036036c ಅತಿರಿಚ್ಯೇತ್ತಯೋರ್ಯತ್ತು ತತ್ಕರ್ತಾ ಲಭತೇ ಫಲಮ್।।
ಪಂಚಭೂತಗಳೇ ಸಾಕ್ಷಿಕವಾಗಿರುವ ಶುಭಾಶುಭಫಲಗಳು ಮರಣದ ನಂತರವೇ ದೊರೆಯುತ್ತವೆ. ಅವುಗಳಲ್ಲಿ ಯಾವ ಕರ್ಮಗಳನ್ನು ಹೆಚ್ಚು ಮಾಡಿರುವನೋ ಅವುಗಳ ಫಲವನ್ನು ಹೆಚ್ಚಾಗಿ ಪಡೆಯುತ್ತಾನೆ.
12036037a ತಸ್ಮಾದ್ದಾನೇನ ತಪಸಾ ಕರ್ಮಣಾ ಚ ಶುಭಂ ಫಲಮ್।
12036037c ವರ್ಧಯೇದಶುಭಂ ಕೃತ್ವಾ ಯಥಾ ಸ್ಯಾದತಿರೇಕವಾನ್।।
ಆದುದರಿಂದ ದಾನ, ತಪಸ್ಸು ಮುಂತಾದ ಕರ್ಮಗಳಿಂದ ಶುಭಫಲಗಳು ಹೆಚ್ಚುತ್ತವೆ. ಅಶುಭ ಕರ್ಮಗಳಿಗಿಂತಲೂ ಪುಣ್ಯಕರ್ಮಗಳನ್ನು ಹೆಚ್ಚಾಗಿ ಮಾಡಿದರೆ ಪುಣ್ಯಫಲಗಳೇ ಹೆಚ್ಚು ದೊರೆಯುತ್ತವೆ.
12036038a ಕುರ್ಯಾಚ್ಚುಭಾನಿ ಕರ್ಮಾಣಿ ನಿಮಿತ್ತೇ ಪಾಪಕರ್ಮಣಾಮ್।
12036038c ದದ್ಯಾನ್ನಿತ್ಯಂ ಚ ವಿತ್ತಾನಿ ತಥಾ ಮುಚ್ಯೇತ ಕಿಲ್ಬಿಷಾತ್।।
ಶುಭಕರ್ಮಗಳನ್ನು ಮಾಡುತ್ತಿರಬೇಕು; ಪಾಪಕರ್ಮಗಳನ್ನು ಮಾಡಬಾರದು. ನಿತ್ಯವೂ ಧನವನ್ನು ದಾನಮಾಡುವುದರಿಂದ ಪಾಪವಿಮುಕ್ತನಾಗುತ್ತಾನೆ.
12036039a ಅನುರೂಪಂ ಹಿ ಪಾಪಸ್ಯ ಪ್ರಾಯಶ್ಚಿತ್ತಮುದಾಹೃತಮ್।
12036039c ಮಹಾಪಾತಕವರ್ಜಂ ತು ಪ್ರಾಯಶ್ಚಿತ್ತಂ ವಿಧೀಯತೇ।।
ಪಾಪಗಳಿಗೆ ಅನುರೂಪವಾದ ಪ್ರಾಯಶ್ಚಿತ್ತಗಳನ್ನು ಉದಾಹರಿಸಿದ್ದೇನೆ. ಮಹಾಪಾತಕವನ್ನು ಬಿಟ್ಟು ಉಳಿದವುಗಳಿಗೆ ಪ್ರಾಯಶ್ಚಿತ್ತಗಳನ್ನು ಹೇಳಲಾಗಿದೆ.
12036040a ಭಕ್ಷ್ಯಾಭಕ್ಷ್ಯೇಷು ಸರ್ವೇಷು ವಾಚ್ಯಾವಾಚ್ಯೇ ತಥೈವ ಚ।
12036040c ಅಜ್ಞಾನಜ್ಞಾನಯೋ ರಾಜನ್ವಿಹಿತಾನ್ಯನುಜಾನತೇ।।
ರಾಜನ್! ತಿಳಿದೋ ಅಥವಾ ತಿಳಿಯದೆಯೋ ಅಭಕ್ಷ್ಯವಾದುದನ್ನು ಭಕ್ಷಿಸಿದರೆ, ಮತ್ತು ಅವಾಚ್ಯವಾದವುಗಳನ್ನು ಮಾತನಾಡಿದರೆ ಅವುಗಳಿಗೂ ಪ್ರಾಯಶ್ಚಿತ್ತಗಳನ್ನು ಶಾಸ್ತ್ರಗಳಲ್ಲಿ ಹೇಳಲಾಗಿದೆ.
12036041a ಜಾನತಾ ತು ಕೃತಂ ಪಾಪಂ ಗುರು ಸರ್ವಂ ಭವತ್ಯುತ।
12036041c ಅಜ್ಞಾನಾತ್ಸ್ಖಲಿತೇ ದೋಷೇ ಪ್ರಾಯಶ್ಚಿತ್ತಂ ವಿಧೀಯತೇ।।
ತಿಳಿದು ಮಾಡಿದ ಪಾಪಗಳೆಲ್ಲವೂ ಅಧಿಕ ಪಾಪಗಳಾಗುತ್ತವೆ. ಅಜ್ಞಾನದಿಂದ ಮಾಡಿದ ದೋಷಗಳಿಗೆ ಪ್ರಾಯಶ್ಚಿತ್ತಗಳನ್ನು ಹೇಳಿದ್ದಾರೆ.
12036042a ಶಕ್ಯತೇ ವಿಧಿನಾ ಪಾಪಂ ಯಥೋಕ್ತೇನ ವ್ಯಪೋಹಿತುಮ್।
12036042c ಆಸ್ತಿಕೇ ಶ್ರದ್ದಧಾನೇ ತು ವಿಧಿರೇಷ ವಿಧೀಯತೇ।।
ಈಗ ಹೇಳಿದ ವಿಧಿಗಳಿಂದ ಪಾಪಗಳನ್ನು ಕಳೆದುಕೊಳ್ಳಲು ಶಕ್ಯವಿದೆ. ಆದರೆ ಆಸ್ತಿಕರಿಗೆ ಮತ್ತು ಶ್ರದ್ಧೆಯುಳ್ಳವರಿಗೆ ಮಾತ್ರ ಈ ವಿಧಿಗಳನ್ನು ಹೇಳಲಾಗಿದೆ.
12036043a ನಾಸ್ತಿಕಾಶ್ರದ್ದಧಾನೇಷು ಪುರುಷೇಷು ಕದಾ ಚನ।
12036043c ದಂಭದೋಷಪ್ರಧಾನೇಷು ವಿಧಿರೇಷ ನ ದೃಶ್ಯತೇ।।
ದಂಭದೋಷವೇ ಪ್ರಧಾನವಾಗಿರುವ ನಾಸ್ತಿಕರು ಮತ್ತು ಶ್ರದ್ಧೆಯಿಲ್ಲದ ಪುರುಷರಿಗೆ ಪ್ರಾಯಶ್ಚಿತ್ತವಿಧಿಗಳು ಯಾವುವೂ ಇಲ್ಲ.
12036044a ಶಿಷ್ಟಾಚಾರಶ್ಚ ಶಿಷ್ಟಶ್ಚ ಧರ್ಮೋ ಧರ್ಮಭೃತಾಂ ವರ।
12036044c ಸೇವಿತವ್ಯೋ ನರವ್ಯಾಘ್ರ ಪ್ರೇತ್ಯ ಚೇಹ ಸುಖಾರ್ಥಿನಾ।।
ಧರ್ಮಭೃತರಲ್ಲಿ ಶ್ರೇಷ್ಠನೇ! ನರವ್ಯಾಘ್ರ! ಮರಣಾನಂತರದಲ್ಲಿ ಮತ್ತು ಇಹದಲ್ಲಿ ಸುಖವನ್ನು ಬಯಸುವವರು ಶಿಷ್ಟಾಚಾರಿಗಳಾಗಿರಬೇಕು. ಧರ್ಮವನ್ನು ಅನುಸರಿಸಿ ನಡೆದುಕೊಳ್ಳಬೇಕು.
12036045a ಸ ರಾಜನ್ಮೋಕ್ಷ್ಯಸೇ ಪಾಪಾತ್ತೇನ ಪೂರ್ವೇಣ ಹೇತುನಾ।
12036045c ತ್ರಾಣಾರ್ಥಂ ವಾ ವಧೇನೈಷಾಮಥ ವಾ ನೃಪಕರ್ಮಣಾ।।
ರಾಜನ್! ಈ ಮೊದಲು ಹೇಳಿದ ಕಾರಣಗಳಿಂದಾಗಿ ನೀನು ನಿನ್ನ ಪಾಪದಿಂದ ಮುಕ್ತನಾಗುವೆ.
12036046a ಅಥ ವಾ ತೇ ಘೃಣಾ ಕಾ ಚಿತ್ಪ್ರಾಯಶ್ಚಿತ್ತಂ ಚರಿಷ್ಯಸಿ।
12036046c ಮಾ ತ್ವೇವಾನಾರ್ಯಜುಷ್ಟೇನ ಕರ್ಮಣಾ ನಿಧನಂ ಗಮಃ।।
ಅಥವಾ ಈ ಕರ್ಮಗಳನ್ನು ಮಾಡಿದೆನೆಲ್ಲಾ ಎಂದು ತಪ್ಪಿತಸ್ಥಭಾವವನ್ನು ಹೊಂದಿದ್ದರೆ ಪ್ರಾಯಶ್ಚಿತ್ತಗಳನ್ನು ಮಾಡಿಕೋ! ಅನಾರ್ಯಜುಷ್ಟ ಕಾರ್ಯವನ್ನೆಸಗಿ ಆತ್ಮವಿನಾಶವನ್ನು ಮಾಡಿಕೊಳ್ಳಬೇಡ!””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ಪ್ರಾಯಶ್ಚಿತ್ತೀಯೇ ಷಟ್ ಸ್ತ್ರಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಪ್ರಾಯಶ್ಚಿತ್ತೀಯ ಎನ್ನುವ ಮೂವತ್ತಾರನೇ ಅಧ್ಯಾಯವು.