034 ಪ್ರಾಯಶ್ಚಿತ್ತೀಯೋಪಾಖ್ಯಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ರಾಜಧರ್ಮ ಪರ್ವ

ಅಧ್ಯಾಯ 34

ಸಾರ

12034001 ವೈಶಂಪಾಯನ ಉವಾಚ।
12034001a ಯುಧಿಷ್ಠಿರಸ್ಯ ತದ್ವಾಕ್ಯಂ ಶ್ರುತ್ವಾ ದ್ವೈಪಾಯನಸ್ತದಾ।
12034001c ಸಮೀಕ್ಷ್ಯ ನಿಪುಣಂ ಬುದ್ಧ್ಯಾ ಋಷಿಃ ಪ್ರೋವಾಚ ಪಾಂಡವಮ್।।

ವೈಶಂಪಾಯನನು ಹೇಳಿದನು: “ಯುಧಿಷ್ಠಿರನ ಆ ಮಾತನ್ನು ಕೇಳಿ ಋಷಿ ದ್ವೈಪಾಯನನು ನಿಪುಣ ಬುದ್ಧಿಯಿಂದ ಸಮೀಕ್ಷಿಸಿ ಪಾಂಡವನಿಗೆ ಇಂತೆಂದನು:

12034002a ಮಾ ವಿಷಾದಂ ಕೃಥಾ ರಾಜನ್ಕ್ಷತ್ರಧರ್ಮಮನುಸ್ಮರ।
12034002c ಸ್ವಧರ್ಮೇಣ ಹತಾ ಹ್ಯೇತೇ ಕ್ಷತ್ರಿಯಾಃ ಕ್ಷತ್ರಿಯರ್ಷಭ।।

“ರಾಜನ್! ಕ್ಷತ್ರಿಯರ್ಷಭ! ವಿಷಾದಿಸಬೇಡ! ಕ್ಷತ್ರಿಯ ಧರ್ಮವನ್ನು ಸ್ಮರಿಸಿಕೋ! ಈ ಕ್ಷತ್ರಿಯರೆಲ್ಲರೂ ಸ್ವಧರ್ಮಾನುಸಾರವಾಗಿಯೇ ಹತರಾಗಿದ್ದಾರೆ.

12034003a ಕಾಂಕ್ಷಮಾಣಾಃ ಶ್ರಿಯಂ ಕೃತ್ಸ್ನಾಂ ಪೃಥಿವ್ಯಾಂ ಚ ಮಹದ್ಯಶಃ।
12034003c ಕೃತಾಂತವಿಧಿಸಂಯುಕ್ತಾಃ ಕಾಲೇನ ನಿಧನಂ ಗತಾಃ।।

ಪೃಥ್ವಿಯ ಸಮಗ್ರ ರಾಜ್ಯಲಕ್ಷ್ಮಿಯನ್ನೂ ಮಹಾ ಯಶಸ್ಸನ್ನೂ ಆಕಾಂಕ್ಷಿಸುತ್ತಾ ಇವರು ಯಮನು ವಿಧಿಸಿದ ಕಾಲವು ಸನ್ನಿಹಿತವಾಗುತ್ತಲೇ ನಿಧನ ಹೊಂದಿದರು.

12034004a ನ ತ್ವಂ ಹಂತಾ ನ ಭೀಮೋಽಪಿ ನಾರ್ಜುನೋ ನ ಯಮಾವಪಿ।
12034004c ಕಾಲಃ ಪರ್ಯಾಯಧರ್ಮೇಣ ಪ್ರಾಣಾನಾದತ್ತ ದೇಹಿನಾಮ್।।

ನೀನು ಅವರನ್ನು ಸಂಹರಿಸಲಿಲ್ಲ. ಭೀಮನಾಗಲೀ, ಅರ್ಜುನನಾಗಲೀ ಅಥವಾ ನಕುಲ-ಸಹದೇವರಾಗಲೀ ಅವರನ್ನು ಸಂಹರಿಸಿಲ್ಲ. ಪರ್ಯಾಯಧರ್ಮದ ಪ್ರಕಾರ ಕಾಲನು ಆ ದೇಹಿಗಳ ಪ್ರಾಣಗಳನ್ನು ತೆಗೆದುಕೊಂಡಿದ್ದಾನೆ!

12034005a ನ ಯಸ್ಯ ಮಾತಾಪಿತರೌ ನಾನುಗ್ರಾಹ್ಯೋಽಸ್ತಿ ಕಶ್ಚನ।
12034005c ಕರ್ಮಸಾಕ್ಷೀ ಪ್ರಜಾನಾಂ ಯಸ್ತೇನ ಕಾಲೇನ ಸಂಹೃತಾಃ।।

ಯಾರಿಗೆ ತಾಯಿ-ತಂದೆಯರಿಲ್ಲವೋ, ಯಾರು ಯಾರಿಗೂ ಎಂದೂ ಅನುಗ್ರಹಮಾಡುವುದಿಲ್ಲವೋ ಆ ಪ್ರಜೆಗಳ ಕರ್ಮಸಾಕ್ಷೀ ಕಾಲನಿಂದ ಅವರೆಲ್ಲರೂ ಹತರಾದರು.

12034006a ಹೇತುಮಾತ್ರಮಿದಂ ತಸ್ಯ ಕಾಲಸ್ಯ ಪುರುಷರ್ಷಭ।
12034006c ಯದ್ಧಂತಿ ಭೂತೈರ್ಭೂತಾನಿ ತದಸ್ಮೈ ರೂಪಮೈಶ್ವರಮ್।।

ಪುರುಷರ್ಷಭ! ಪ್ರಾಣಿಗಳನ್ನು ಪ್ರಾಣಿಗಳ ಮೂಲಕವೇ ಸಂಹರಿಸುವ ಈಶ್ವರೀಯ ರೂಪವಿರುವ ಕಾಲನಿಗೆ ಇದೊಂದು ಕೇವಲ ನಿಮಿತ್ತವಾಗಿತ್ತು.

12034007a ಕರ್ಮಮೂರ್ತ್ಯಾತ್ಮಕಂ59 ವಿದ್ಧಿ ಸಾಕ್ಷಿಣಂ ಶುಭಪಾಪಯೋಃ।
12034007c ಸುಖದುಃಖಗುಣೋದರ್ಕಂ ಕಾಲಂ ಕಾಲಫಲಪ್ರದಮ್।।

ಶುಭ-ಪಾಪಕರ್ಮಗಳಿಗೆ ಸಾಕ್ಷಿಯಾಗಿರುವ, ಕರ್ಮಗಳ ಮೂರ್ತಿಮತ್ತಾಗಿರುವ ಆ ಕಾಲನೇ ಕಾಲಾಂತರದಲ್ಲಿ ಪ್ರಾಣಿಗಳಿಗೆ ಸುಖ-ದುಃಖಗಳ ರೂಪದಲ್ಲಿ ಕರ್ಮಫಲಗಳನ್ನು ನೀಡುತ್ತಾನೆ.

12034008a ತೇಷಾಮಪಿ ಮಹಾಬಾಹೋ ಕರ್ಮಾಣಿ ಪರಿಚಿಂತಯ।
12034008c ವಿನಾಶಹೇತುಕಾರಿತ್ವೇ ಯೈಸ್ತೇ ಕಾಲವಶಂ ಗತಾಃ।।

ಮಹಾಬಾಹೋ! ಅವರ ಕರ್ಮಗಳ ಕುರಿತೂ ಆಲೋಚಿಸು! ವಿನಾಶಕಾರ್ಯಗಳನ್ನೇ ಮಾಡಿದ ಅವರು ಕಾಲವಶರಾದರು!

12034009a ಆತ್ಮನಶ್ಚ ವಿಜಾನೀಹಿ ನಿಯಮವ್ರತಶೀಲತಾಮ್।
12034009c ಯದಾ ತ್ವಮೀದೃಶಂ ಕರ್ಮ ವಿಧಿನಾಕ್ರಮ್ಯ ಕಾರಿತಃ।।

ನಿನ್ನ ನಿಯಮ-ವ್ರತಶೀಲತೆಗಳನ್ನಾದರೂ ಗಮನಿಸು. ವಿಧಿಯು ನಿನ್ನಂಥವನನ್ನು ಅಧೀನನನ್ನಾಗಿಸಿ ಅವರ ವಿನಾಶದ ಕರ್ಮವನ್ನು ಮಾಡಿಸಿದೆ!

12034010a ತ್ವಷ್ಟ್ರೇವ ವಿಹಿತಂ ಯಂತ್ರಂ ಯಥಾ ಸ್ಥಾಪಯಿತುರ್ವಶೇ।
12034010c ಕರ್ಮಣಾ ಕಾಲಯುಕ್ತೇನ ತಥೇದಂ ಭ್ರಾಮ್ಯತೇ ಜಗತ್।।

ಬಡಗಿಯು ಮಾಡಿದ ಯಂತ್ರವು ಹೇಗೆ ಆಡಿಸುವವನ ವಶದಲ್ಲಿದ್ದು ಆಡಿಸಿದಂತೆ ಆಡುತ್ತಿರುತ್ತದೆಯೋ ಅದೇ ರೀತಿ ಬ್ರಹ್ಮನಿರ್ಮಿತ ಈ ಜಗತ್ತು ಕಾಲನ ವಶವಾಗಿ ಕಾಲವು ಆಡಿಸಿದಂತೆಯೇ ಆಡುತ್ತಿರುತ್ತದೆ!

12034011a ಪುರುಷಸ್ಯ ಹಿ ದೃಷ್ಟ್ವೇಮಾಮುತ್ಪತ್ತಿಮನಿಮಿತ್ತತಃ।
12034011c ಯದೃಚ್ಚಯಾ ವಿನಾಶಂ ಚ ಶೋಕಹರ್ಷಾವನರ್ಥಕೌ।।

ಕಾರಣವೇನೆಂದು ತಿಳಿಯದ ಪುರುಷನ ಹುಟ್ಟು ಮತ್ತು ಸಾವುಗಳು ಕಾಲದ ವಶದಲ್ಲಿವೆ. ಆದುದರಿಂದ ಅವುಗಳಿಗೆ ಶೋಕ-ಹರ್ಷಗಳನ್ನು ತಾಳುವುದಕ್ಕೆ ಅರ್ಥವಿಲ್ಲ.

12034012a ವ್ಯಲೀಕಂ ಚಾಪಿ ಯತ್ತ್ವತ್ರ ಚಿತ್ತವೈತಂಸಿಕಂ ತವ।
12034012c ತದರ್ಥಮಿಷ್ಯತೇ ರಾಜನ್ಪ್ರಾಯಶ್ಚಿತ್ತಂ ತದಾಚರ।।

ರಾಜನ್! ಆದರೂ ಇವೆಲ್ಲವನ್ನೂ ನೀನೇ ಮಾಡಿರುವೆಯೆಂಬ ಪೀಡೆಯು ನಿನ್ನ ಮನಸ್ಸನ್ನು ಕಲಕಿಸಿ ಪೀಡಿಸುತ್ತಿದೆ. ಅದಕ್ಕಾಗಿ ಪ್ರಾಯಶ್ಚಿತ್ತವಿದೆ. ಅದನ್ನು ಮಾಡಿಕೋ!

12034013a ಇದಂ ಚ ಶ್ರೂಯತೇ ಪಾರ್ಥ ಯುದ್ಧೇ ದೇವಾಸುರೇ ಪುರಾ।
12034013c ಅಸುರಾ ಭ್ರಾತರೋ ಜ್ಯೇಷ್ಠಾ ದೇವಾಶ್ಚಾಪಿ ಯವೀಯಸಃ।।

ಪಾರ್ಥ! ಹಿಂದೆ ದೇವಾಸುರರ ನಡುವೆ ನಡೆದ ಯುದ್ಧದ ಕುರಿತು ಕೇಳು. ಸಹೋದರರಾಗಿದ್ದ ದೇವಾಸುರರಲ್ಲಿ ಅಸುರರು ಹಿರಿಯರೂ ದೇವತೆಗಳು ಕಿರಿಯರೂ ಆಗಿದ್ದರು.

12034014a ತೇಷಾಮಪಿ ಶ್ರೀನಿಮಿತ್ತಂ ಮಹಾನಾಸೀತ್ಸಮುಚ್ಚ್ರಯಃ।
12034014c ಯುದ್ಧಂ ವರ್ಷಸಹಸ್ರಾಣಿ ದ್ವಾತ್ರಿಂಶದಭವತ್ಕಿಲ।।

ಸಂಪತ್ತಿನ ಕಾರಣದಿಂದಾಗಿ ಅವರ ನಡುವೆ ಕೂಡ ಮಹಾ ಯುದ್ಧವೇ ನಡೆಯಿತು. ಆ ಯುದ್ಧವು ಮೂವತ್ತೆರಡು ಸಾವಿರ ವರ್ಷಗಳ ಪರ್ಯಂತ ನಡೆಯಿತಂತೆ!

12034015a ಏಕಾರ್ಣವಾಂ ಮಹೀಂ ಕೃತ್ವಾ ರುಧಿರೇಣ ಪರಿಪ್ಲುತಾಮ್।
12034015c ಜಘ್ನುರ್ದೈತ್ಯಾಂಸ್ತದಾ ದೇವಾಸ್ತ್ರಿದಿವಂ ಚೈವ ಲೇಭಿರೇ।।

ಭೂಮಿಯನ್ನು ರಕ್ತದಲ್ಲಿಯೇ ಮುಳುಗಿಸಿ ದೈತ್ಯರನ್ನು ಸಂಹರಿಸಿ ದೇವತೆಗಳು ಸ್ವರ್ಗವನ್ನು ಪಡೆದರು.

12034016a ತಥೈವ ಪೃಥಿವೀಂ ಲಬ್ಧ್ವಾ ಬ್ರಾಹ್ಮಣಾ ವೇದಪಾರಗಾಃ।
12034016c ಸಂಶ್ರಿತಾ ದಾನವಾನಾಂ ವೈ ಸಾಹ್ಯಾರ್ಥೇ ದರ್ಪಮೋಹಿತಾಃ।।
12034017a ಶಾಲಾವೃಕಾ ಇತಿ ಖ್ಯಾತಾಸ್ತ್ರಿಷು ಲೋಕೇಷು ಭಾರತ।
12034017c ಅಷ್ಟಾಶೀತಿಸಹಸ್ರಾಣಿ ತೇ ಚಾಪಿ ವಿಬುಧೈರ್ಹತಾಃ।।

ಭಾರತ! ವೇದಪಾರಂಗತರಾಗಿದ್ದ ಶಾಲಾವೃಕರೆಂದು ಮೂರೂ ಲೋಕಗಳಲ್ಲಿ ಪ್ರಸಿದ್ಧರಾಗಿದ್ದ ಎಂಬತ್ತೆಂಟು ಸಾವಿರ ಬ್ರಾಹ್ಮಣರೂ ದರ್ಪಮೋಹಿತರಾಗಿ ದಾನವರ ಸಹಾಯಾರ್ಥವಾಗಿ ಅವರ ಪಕ್ಷವನ್ನು ಸೇರಿದ್ದರು. ಅವರನ್ನು ಕೂಡ ಸಂಹರಿಸಿ ದೇವತೆಗಳು ಭೂಮಿಯನ್ನು ಪಡೆದರು.

12034018a ಧರ್ಮವ್ಯುಚ್ಚಿತ್ತಿಮಿಚ್ಚಂತೋ ಯೇಽಧರ್ಮಸ್ಯ ಪ್ರವರ್ತಕಾಃ।
12034018c ಹಂತವ್ಯಾಸ್ತೇ ದುರಾತ್ಮಾನೋ ದೇವೈರ್ದೈತ್ಯಾ ಇವೋಲ್ಬಣಾಃ।।

ಧರ್ಮಮಾರ್ಗವೇ ಸಂಪೂರ್ಣವಾಗಿ ಕಡಿದುಹೋಗಬೇಕೆಂದು ಬಯಸಿ ಯಾರು ಅಧರ್ಮಪ್ರವರ್ತಕರಾಗುತ್ತಾರೋ ಅಂತಹ ದುರಾತ್ಮರನ್ನು ದೇವತೆಗಳು ಉದ್ಧತರಾದ ದೈತ್ಯರನ್ನು ಹೇಗೋ ಹಾಗೆ ಸಂಹರಿಸುತ್ತಾರೆ.

12034019a ಏಕಂ ಹತ್ವಾ ಯದಿ ಕುಲೇ ಶಿಷ್ಟಾನಾಂ ಸ್ಯಾದನಾಮಯಮ್।
12034019c ಕುಲಂ ಹತ್ವಾಥ ರಾಷ್ಟ್ರಂ ವಾ ನ ತದ್ವೃತ್ತೋಪಘಾತಕಮ್।।

ಕುಲದಲ್ಲಿ ಒಬ್ಬನನ್ನು ಸಂಹರಿಸುವುದರಿಂದ ಉಳಿದ ಶಿಷ್ಟರಿಗೆ ಕ್ಷೇಮವುಂಟಾಗುತ್ತದೆ ಎಂದಾದರೆ ಅವನನ್ನು ಸಂಹರಿಸುವುದೇ ಯುಕ್ತವಾದುದು. ಹಾಗೆಯೇ ಒಂದು ಕುಲವನ್ನು ಸಂಹರಿಸಿ ರಾಷ್ಟ್ರವನ್ನು ವಿಪತ್ತಿನಿಂದ ಪಾರುಮಾಡಬಹುದಾದರೆ ಅಂತಹ ಕುಲವನ್ನೇ ವಿನಾಶಗೊಳಿಸಬೇಕು.

12034020a ಅಧರ್ಮರೂಪೋ ಧರ್ಮೋ ಹಿ ಕಶ್ಚಿದಸ್ತಿ ನರಾಧಿಪ।
12034020c ಧರ್ಮಶ್ಚಾಧರ್ಮರೂಪೋಽಸ್ತಿ ತಚ್ಚ ಜ್ಞೇಯಂ ವಿಪಶ್ಚಿತಾ।।

ನರಾಧಿಪ! ಕೆಲವೊಮ್ಮೆ ಅಧರ್ಮವಾಗಿ ಕಾಣುವ ಕಾರ್ಯವು ಧರ್ಮಕಾರ್ಯವೇ ಆಗಿರುತ್ತದೆ. ಹಾಗೆಯೇ ಧರ್ಮಕಾರ್ಯವಾಗಿ ಕಾಣುವ ಕಾರ್ಯವು ಅಧರ್ಮಕಾರ್ಯವೇ ಆಗಿರಬಹುದು. ಅದನ್ನು ವಿಚಾರಿಸಿ ತಿಳಿದುಕೊಳ್ಳಬೇಕಾಗುತ್ತದೆ.

12034021a ತಸ್ಮಾತ್ಸಂಸ್ತಂಭಯಾತ್ಮಾನಂ ಶ್ರುತವಾನಸಿ ಪಾಂಡವ।
12034021c ದೇವೈಃ ಪೂರ್ವಗತಂ ಮಾರ್ಗಮನುಯಾತೋಽಸಿ ಭಾರತ।।

ಪಾಂಡವ! ಭಾರತ! ನೀನು ತಿಳಿದವನು. ಆದುದರಿಂದ ನಿನ್ನನ್ನು ನೀನು ಸ್ಥಿರಗೊಳಿಸಿಕೋ! ಹಿಂದೆ ದೇವತೆಗಳು ಹಿಡಿದ ಮಾರ್ಗವನ್ನೇ ನೀನೂ ಕೂಡ ಅನುಸರಿಸಿವೆ!

12034022a ನ ಹೀದೃಶಾ ಗಮಿಷ್ಯಂತಿ ನರಕಂ ಪಾಂಡವರ್ಷಭ।
12034022c ಭ್ರಾತೃನಾಶ್ವಾಸಯೈತಾಂಸ್ತ್ವಂ ಸುಹೃದಶ್ಚ ಪರಂತಪ।।

ಪಾಂಡವರ್ಷಭ! ಪರಂತಪ! ಹೀಗಿರುವಾಗ ನೀನು ನರಕಕ್ಕೆ ಹೋಗುವುದಿಲ್ಲ. ನಿನ್ನ ಸಹೋದರರನ್ನೂ ಸುಹೃದಯರನ್ನೂ ಸಂತಯಿಸು!

12034023a ಯೋ ಹಿ ಪಾಪಸಮಾರಂಭೇ ಕಾರ್ಯೇ ತದ್ಭಾವಭಾವಿತಃ।
12034023c ಕುರ್ವನ್ನಪಿ ತಥೈವ ಸ್ಯಾತ್ಕೃತ್ವಾ ಚ ನಿರಪತ್ರಪಃ।।
12034024a ತಸ್ಮಿಂಸ್ತತ್ಕಲುಷಂ ಸರ್ವಂ ಸಮಾಪ್ತಮಿತಿ ಶಬ್ದಿತಮ್।
12034024c ಪ್ರಾಯಶ್ಚಿತ್ತಂ ನ ತಸ್ಯಾಸ್ತಿ ಹ್ರಾಸೋ ವಾ ಪಾಪಕರ್ಮಣಃ।।

ಯಾರು ಪಾಪಭಾವದಿಂದ ಕಾರ್ಯವನ್ನು ಪ್ರಾರಂಭಿಸಿ ಅದೇ ಪಾಪಭಾವದಿಂದ ಮುಂದುವರೆದು ಕಾರ್ಯವನ್ನು ಪೂರ್ಣಗೊಳಿಸಿದ ನಂತರವೂ ನಾಚಿಕೆಪಟ್ಟುಕೊಳ್ಳುವುದಿಲ್ಲವೋ ಅಂಥವನಲ್ಲಿ ಆ ಮಹಾಪಾಪವು ಸಂಪೂರ್ಣವಾಗಿ ಪ್ರತಿಷ್ಠಿತವಾಗಿರುತ್ತದೆ ಎಂದು ಹೇಳುತ್ತಾರೆ. ಅಂಥವನಿಗೆ ಯಾವ ಪ್ರಾಯಶ್ಚಿತ್ತವೂ ಇರುವುದಿಲ್ಲ. ಆ ಪಾಪಕರ್ಮಿಯ ಪಾಪವು ಸ್ವಲ್ಪವೂ ಕಡಿಮೆಯಾಗುವುದಿಲ್ಲ.

12034025a ತ್ವಂ ತು ಶುಕ್ಲಾಭಿಜಾತೀಯಃ ಪರದೋಷೇಣ ಕಾರಿತಃ।
12034025c ಅನಿಚ್ಚಮಾನಃ ಕರ್ಮೇದಂ ಕೃತ್ವಾ ಚ ಪರಿತಪ್ಯಸೇ।।

ನೀನಾದರೋ ಹುಟ್ಟಿನಿಂದಲೇ ಶುದ್ಧಸ್ವಭಾವನಾಗಿರುವೆ! ಇತರರು ಮಾಡಿದ ದೋಷಗಳಿಂದಾಗಿ, ನಿನಗಿಷ್ಟವಿಲ್ಲದಿದ್ದರೂ, ಯುದ್ಧವೆಂಬ ಈ ಕರ್ಮವನ್ನು ನಡೆಸಿ, ಈಗ ಪರಿತಪಿಸುತ್ತಿದ್ದೀಯೆ!

12034026a ಅಶ್ವಮೇಧೋ ಮಹಾಯಜ್ಞಃ ಪ್ರಾಯಶ್ಚಿತ್ತಮುದಾಹೃತಮ್।
12034026c ತಮಾಹರ ಮಹಾರಾಜ ವಿಪಾಪ್ಮೈವಂ ಭವಿಷ್ಯಸಿ।।

ಮಹಾರಾಜ! ಇದಕ್ಕೆ ಅಶ್ವಮೇಧ ಮಹಾಯಜ್ಞವು ಪ್ರಾಯಶ್ಚಿತ್ತವೆಂದು ಹೇಳಲ್ಪಟ್ಟಿದೆ. ಅದನ್ನು ಮಾಡು. ಅದರಿಂದ ಪಾಪವನ್ನು ಕಳೆದುಕೊಳ್ಳುವೆ!

12034027a ಮರುದ್ಭಿಃ ಸಹ ಜಿತ್ವಾರೀನ್ಮಘವಾನ್ಪಾಕಶಾಸನಃ।
12034027c ಏಕೈಕಂ ಕ್ರತುಮಾಹೃತ್ಯ ಶತಕೃತ್ವಃ ಶತಕ್ರತುಃ।।

ಮರುತ್ತುಗಳೊಂದಿಗೆ ಶತ್ರುಗಳನ್ನು ಜಯಿಸುತ್ತಾ ಮಘವಾನ್ ಪಾಕಶಾಸನನು, ಗೆದ್ದಾಗಲೆಲ್ಲಾ ಒಂದೊಂದು ಅಶ್ವಮೇಧವನ್ನು – ಹಾಗೆ ನೂರು ಯಾಗಗಳನ್ನು ಮಾಡಿ – ಶತ್ರುಕ್ರತುವೆಂದೆನಿಸಿಕೊಂಡನು.

12034028a ಪೂತಪಾಪ್ಮಾ ಜಿತಸ್ವರ್ಗೋ ಲೋಕಾನ್ಪ್ರಾಪ್ಯ ಸುಖೋದಯಾನ್।
12034028c ಮರುದ್ಗಣವೃತಃ ಶಕ್ರಃ ಶುಶುಭೇ ಭಾಸಯನ್ದಿಶಃ।।

ಪಾಪರಹಿತನಾಗಿ ಸ್ವರ್ಗವನ್ನು ಜಯಿಸಿ ಸುಖೋದಯ ಲೋಕಗಳನ್ನು ಪಡೆದು ಮರುದ್ಗಣಗಳಿಂದ ಆವೃತನಾಗಿ ಶಕ್ರನು ದಿಕ್ಕುಗಳನ್ನು ಬೆಳಗಿಸುತ್ತಾ ಶೋಭಿಸುತ್ತಿದ್ದಾನೆ.

12034029a ಸ್ವರ್ಗಲೋಕೇ ಮಹೀಯಂತಮಪ್ಸರೋಭಿಃ ಶಚೀಪತಿಮ್।
12034029c ಋಷಯಃ ಪರ್ಯುಪಾಸಂತೇ ದೇವಾಶ್ಚ ವಿಬುಧೇಶ್ವರಮ್।।

ಸ್ವರ್ಗಲೋಕದಲ್ಲಿ ಮೆರೆಯುತ್ತಿರುವ ಶಚೀಪತಿ ವಿಬುಧೇಶ್ವರನನ್ನು ಅಪ್ಸರೆಯರೂ, ಋಷಿಗಳೂ ಮತ್ತು ದೇವತೆಗಳೂ ಉಪಾಸನೆಗೈಯುತ್ತಾರೆ.

12034030a ಸೋಽಯಂ ತ್ವಮಿಹ ಸಂಕ್ರಾಂತೋ ವಿಕ್ರಮೇಣ ವಸುಂಧರಾಮ್।
12034030c ನಿರ್ಜಿತಾಶ್ಚ ಮಹೀಪಾಲಾ ವಿಕ್ರಮೇಣ ತ್ವಯಾನಘ।।

ಅನಘ! ನೀನೂ ಕೂಡ ವಿಕ್ರಮದಿಂದ ಮಹೀಪಾಲರನ್ನು ಸೋಲಿಸಿ ಈ ವಸುಂಧರೆಯನ್ನು ವಶಪಡಿಸಿಕೊಂಡಿರುವೆ!

12034031a ತೇಷಾಂ ಪುರಾಣಿ ರಾಷ್ಟ್ರಾಣಿ ಗತ್ವಾ ರಾಜನ್ಸುಹೃದ್ವೃತಃ।
12034031c ಭ್ರಾತೃನ್ಪುತ್ರಾಂಶ್ಚ ಪೌತ್ರಾಂಶ್ಚ ಸ್ವೇ ಸ್ವೇ ರಾಜ್ಯೇಽಭಿಷೇಚಯ।।

ರಾಜನ್! ಸುಹೃದಯರೊಂದಿಗೆ ಕೂಡಿಕೊಂಡು ನಿನ್ನಿಂದ ಹತರಾದವರ ರಾಷ್ಟ್ರ-ಪುರಗಳಿಗೆ ಹೋಗಿ ಅಲ್ಲಿ ಅವರ ಸಹೋದರರನ್ನೋ, ಪುತ್ರರನ್ನೋ, ಪೌತ್ರರನ್ನೋ, ರಾಜ್ಯಾಭಿಷೇಕ ಮಾಡು.

12034032a ಬಾಲಾನಪಿ ಚ ಗರ್ಭಸ್ಥಾನ್ಸಾಂತ್ವಾನಿ ಸಮುದಾಚರನ್।
12034032c ರಂಜಯನ್ಪ್ರಕೃತೀಃ ಸರ್ವಾಃ ಪರಿಪಾಹಿ ವಸುಂಧರಾಮ್।।

ಬಾಲಕರನ್ನಾಗಲೀ ಗರ್ಭದಲ್ಲಿರುವವರನ್ನಾಗಲೀ ರಾಜನನ್ನಾಗಿಸುವುದಾಗಿ ಸಂತವಿಸಿ ಎಲ್ಲ ಪ್ರಜೆಗಳನ್ನೂ ರಂಜಿಸುತ್ತಾ ಈ ವಸುಂಧರೆಯನ್ನು ಪಾಲಿಸು!

12034033a ಕುಮಾರೋ ನಾಸ್ತಿ ಯೇಷಾಂ ಚ ಕನ್ಯಾಸ್ತತ್ರಾಭಿಷೇಚಯ।
12034033c ಕಾಮಾಶಯೋ ಹಿ ಸ್ತ್ರೀವರ್ಗಃ ಶೋಕಮೇವಂ ಪ್ರಹಾಸ್ಯತಿ।।

ಕುಮಾರರ್ಯಾರೂ ಇಲ್ಲದಿದ್ದ ರಾಜವಂಶದಲ್ಲಿ ಕನ್ಯೆಯರಿದ್ದರೆ ಅವರಿಗೇ ಪಟ್ಟಾಭಿಷೇಕವನ್ನು ಮಾಡಿಸು. ಹೀಗೆ ಸ್ತ್ರೀವರ್ಗದ ಕಾಮನೆಗಳನ್ನು ಪೂರೈಸಿ ಅವರ ಶೋಕವನ್ನೂ ದೂರಮಾಡಿದಂತಾಗುತ್ತದೆ.

12034034a ಏವಮಾಶ್ವಾಸನಂ ಕೃತ್ವಾ ಸರ್ವರಾಷ್ಟ್ರೇಷು ಭಾರತ।
12034034c ಯಜಸ್ವ ವಾಜಿಮೇಧೇನ ಯಥೇಂದ್ರೋ ವಿಜಯೀ ಪುರಾ।।

ಭಾರತ! ಹೀಗೆ ಸರ್ವರಾಷ್ಟ್ರಗಳಿಗೂ ಆಶ್ವಾಸನೆಯನ್ನಿತ್ತು ಹಿಂದೆ ವಿಜಯೀ ಇಂದ್ರನಂತೆ ಅಶ್ವಮೇಧಯಾಗವನ್ನು ಮಾಡು!

12034035a ಅಶೋಚ್ಯಾಸ್ತೇ ಮಹಾತ್ಮಾನಃ ಕ್ಷತ್ರಿಯಾಃ ಕ್ಷತ್ರಿಯರ್ಷಭ।
12034035c ಸ್ವಕರ್ಮಭಿರ್ಗತಾ ನಾಶಂ ಕೃತಾಂತಬಲಮೋಹಿತಾಃ।।

ಕ್ಷತ್ರಿಯರ್ಷಭ! ತಮ್ಮದೇ ಕರ್ಮಗಳಿಂದ ಮತ್ತು ಕೃತಾಂತನ ಬಲಕ್ಕೆ ಸಿಲುಕಿ ಮೋಹಿತರಾದ ಮಹಾತ್ಮ ಕ್ಷತ್ರಿಯರ ಕುರಿತು ನೀನು ಶೋಕಿಸಬೇಕಾಗಿಲ್ಲ!

12034036a ಅವಾಪ್ತಃ ಕ್ಷತ್ರಧರ್ಮಸ್ತೇ ರಾಜ್ಯಂ ಪ್ರಾಪ್ತಮಕಲ್ಮಷಮ್।
12034036c ಚರಸ್ವ ಧರ್ಮಂ ಕೌಂತೇಯ ಶ್ರೇಯಾನ್ಯಃ ಪ್ರೇತ್ಯ ಭಾವಿಕಃ।।

ಕೌಂತೇಯ! ಕ್ಷತ್ರಧರ್ಮದ ಪ್ರಕಾರವಾಗಿ ದೊರಕಿರುವ ಈ ಅಕಲ್ಮಷ ರಾಜ್ಯವನ್ನು ಪಡೆದು, ಇಹದಲ್ಲಿ ಮತ್ತು ಪರದಲ್ಲಿ ಶ್ರೇಯಸ್ಕರವಾಗಿರುವ ಧರ್ಮದಲ್ಲಿಯೇ ನಡೆದುಕೋ!”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ಪ್ರಾಯಶ್ಚಿತ್ತೀಯೋಪಾಖ್ಯಾನೇ ಚತುಸ್ತ್ರಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಪ್ರಾಯಶ್ಚಿತ್ತೀಯೋಪಾಖ್ಯಾನ ಎನ್ನುವ ಮೂವತ್ನಾಲ್ಕನೇ ಅಧ್ಯಾಯವು.