ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ರಾಜಧರ್ಮ ಪರ್ವ
ಅಧ್ಯಾಯ 31
ಸಾರ
ಸುವರ್ಣಷ್ಠೀವ್ಯುಪಾಽಖ್ಯಾನ (1-47)
12031001 ವೈಶಂಪಾಯನ ಉವಾಚ।
12031001a ತತೋ ರಾಜಾ ಪಾಂಡುಸುತೋ ನಾರದಂ ಪ್ರತ್ಯಭಾಷತ।
12031001c ಭಗವನ್ಶ್ರೋತುಮಿಚ್ಚಾಮಿ ಸುವರ್ಣಷ್ಠೀವಿಸಂಭವಮ್।।
ವೈಶಂಪಾಯನನು ಹೇಳಿದನು: “ಆಗ ರಾಜಾ ಪಾಂಡುಸುತನು ನಾರದನಿಗೆ “ಭಗವನ್! ಸ್ವರ್ಣಷ್ಠೀವಿಯ ಹುಟ್ಟಿನ ಕುರಿತು ಕೇಳಲು ಬಯಸುತ್ತೇನೆ!” ಎಂದನು.
12031002a ಏವಮುಕ್ತಃ ಸ ಚ ಮುನಿರ್ಧರ್ಮರಾಜೇನ ನಾರದಃ।
12031002c ಆಚಚಕ್ಷೇ ಯಥಾ ವೃತ್ತಂ ಸುವರ್ಣಷ್ಠೀವಿನಂ ಪ್ರತಿ।।
ಧರ್ಮರಾಜನು ಹೀಗೆ ಹೇಳಲು ಮುನಿ ನಾರದನು ಸ್ವರ್ಣಷ್ಠೀವಿಯ ಕುರಿತು ನಡೆದುದೆಲ್ಲವನ್ನೂ ವಿವರಿಸಿ ಹೇಳಿದನು.
12031003a ಏವಮೇತನ್ಮಹಾರಾಜ ಯಥಾಯಂ ಕೇಶವೋಽಬ್ರವೀತ್।
12031003c ಕಾರ್ಯಸ್ಯಾಸ್ಯ ತು ಯಚ್ಚೇಷಂ ತತ್ತೇ ವಕ್ಷ್ಯಾಮಿ ಪೃಚ್ಚತಃ।।
“ಮಹಾರಾಜ! ಕೇಶವನು ಹೇಳಿದಂತೆಯೇ ನಡೆಯಿತು. ಇದರಲ್ಲಿ ಉಳಿದಿರುವ ವಿಷಯಗಳನ್ನು ನೀನು ಕೇಳಿದೆಯೆಂದು ನಾನು ಹೇಳುತ್ತೇನೆ.
12031004a ಅಹಂ ಚ ಪರ್ವತಶ್ಚೈವ ಸ್ವಸ್ರೀಯೋ ಮೇ ಮಹಾಮುನಿಃ।
12031004c ವಸ್ತುಕಾಮಾವಭಿಗತೌ ಸೃಂಜಯಂ ಜಯತಾಂ ವರಮ್।।
ನಾನು ಮತ್ತು ನನ್ನ ಸೋದರಿಯ ಮಗ ಮಹಾಮುನಿ ಪರ್ವತನೂ ವಿಜಯಿಗಳಲ್ಲಿ ಶ್ರೇಷ್ಠ ಸೃಂಜಯನಲ್ಲಿ ಸ್ವಲ್ಪಕಾಲ ಉಳಿಯಲು ಹೋಗಿದ್ದೆವು.
12031005a ತತ್ರ ಸಂಪೂಜಿತೌ ತೇನ ವಿಧಿದೃಷ್ಟೇನ ಕರ್ಮಣಾ।
12031005c ಸರ್ವಕಾಮೈಃ ಸುವಿಹಿತೌ ನಿವಸಾವೋಽಸ್ಯ ವೇಶ್ಮನಿ।।
ಅಲ್ಲಿ ಅವನಿಂದ ವಿಧಿಪೂರ್ವಕ ಕರ್ಮಗಳಿಂದ ಸಂಪೂಜಿತರಾಗಿ, ಸರ್ವಕಾಮನ ವಸ್ತುಗಳಿಂದ ಸುವಿಹಿತರಾಗಿ ಅವನ ಮನೆಯಲ್ಲಿ ಉಳಿದುಕೊಂಡಿದ್ದೆವು.
12031006a ವ್ಯತಿಕ್ರಾಂತಾಸು ವರ್ಷಾಸು ಸಮಯೇ ಗಮನಸ್ಯ ಚ।
12031006c ಪರ್ವತೋ ಮಾಮುವಾಚೇದಂ ಕಾಲೇ ವಚನಮರ್ಥವತ್।।
ಅನೇಕ ವರ್ಷಗಳು ಕಳೆದು ನಾವು ಹೊರಡುವ ಸಮಯ ಬಂದಾಗ ಪರ್ವತನು ನನ್ನೊಡನೆ ಕಾಲಕ್ಕೆ ಉಚಿತವಾದ ಈ ಮಾತನ್ನು ಹೇಳಿದನು:
12031007a ಆವಾಮಸ್ಯ ನರೇಂದ್ರಸ್ಯ ಗೃಹೇ ಪರಮಪೂಜಿತೌ।
12031007c ಉಷಿತೌ ಸಮಯೇ ಬ್ರಹ್ಮಂಶ್ಚಿಂತ್ಯತಾಮತ್ರ ಸಾಂಪ್ರತಮ್।।
“ಬ್ರಹ್ಮನ್! ನಾವಿಬ್ಬರೂ ಪರಮಪೂಜಿತರಾಗಿ ಈ ನರೇಂದ್ರನ ಮನೆಯಲ್ಲಿ ವಾಸಮಾಡಿಕೊಂಡಿದ್ದೇವೆ. ಈಗ ಹೊರಡುವ ಸಮಯದಲ್ಲಿ ಅವನಿಗೆ ಉಪಕಾರವನ್ನೆಸಗುವ ಕುರಿತು ಚಿಂತಿಸಬೇಕು.”
12031008a ತತೋಽಹಮಬ್ರುವಂ ರಾಜನ್ಪರ್ವತಂ ಶುಭದರ್ಶನಮ್।
12031008c ಸರ್ವಮೇತತ್ತ್ವಯಿ ವಿಭೋ ಭಾಗಿನೇಯೋಪಪದ್ಯತೇ।।
12031009a ವರೇಣ ಚಂದ್ಯತಾಂ ರಾಜಾ ಲಭತಾಂ ಯದ್ಯದಿಚ್ಚತಿ।
12031009c ಆವಯೋಸ್ತಪಸಾ ಸಿದ್ಧಿಂ ಪ್ರಾಪ್ನೋತು ಯದಿ ಮನ್ಯಸೇ।।
ರಾಜನ್! ಆಗ ನಾನು ಶುಭದರ್ಶನ ಪರ್ವತನಿಗೆ ಇಂತೆಂದೆನು: “ಅಳಿಯನೇ! ವಿಭೋ! ನೀನೇ ಎಲ್ಲವನ್ನೂ ನಿರ್ಧರಿಸು. ರಾಜನು ಬಯಸಿದ ವರವನ್ನು ನೀಡಿ ಸಂತುಷ್ಟಿಗೊಳಿಸೋಣ! ನಿನಗೆ ಒಪ್ಪಿಗೆಯಿದ್ದರೆ ನಮ್ಮ ತಪಸ್ಸಿನ ಸಿದ್ಧಿಯಿಂದ ಅವನಿಗೆ ಇಷ್ಟವಾದುದನ್ನು ಮಾಡಿಕೊಡೋಣ!”
12031010a ತತ ಆಹೂಯ ರಾಜಾನಂ ಸೃಂಜಯಂ ಶುಭದರ್ಶನಮ್।
12031010c ಪರ್ವತೋಽನುಮತಂ ವಾಕ್ಯಮುವಾಚ ಮುನಿಪುಂಗವಃ।।
ಹೀಗೆ ನನ್ನ ಅನುಮತಿಯನ್ನು ಪಡೆದ ಮುನಿಪುಂಗವ ಪರ್ವತನು ಶುಭದರ್ಶನ ಸೃಂಜಯನನ್ನು ಕರೆಯಿಸಿ ಈ ಮಾತನ್ನಾಡಿದನು:
12031011a ಪ್ರೀತೌ ಸ್ವೋ ನೃಪ ಸತ್ಕಾರೈಸ್ತವ ಹ್ಯಾರ್ಜವಸಂಭೃತೈಃ।
12031011c ಆವಾಭ್ಯಾಮಭ್ಯನುಜ್ಞಾತೋ ವರಂ ನೃವರ ಚಿಂತಯ।।
“ನೃಪ! ಅತ್ಯಂತ ಸರಳತೆಯಿಂದಲೂ ಪ್ರೀತಿ-ವಿಶ್ವಾಸಗಳಿಂದಲೂ ನೀನು ಮಾಡಿದ ಸತ್ಕಾರದಿಂದ ನಾವಿಬ್ಬರೂ ಸಂತೋಷಗೊಂಡಿದ್ದೇವೆ. ನಿನಗೆ ವರವನ್ನು ನೀಡಲು ನಮ್ಮಿಬ್ಬರಲ್ಲೂ ಅನುಮತಿಯಿದೆ. ಯಾವ ವರಬೇಕೆಂದು ಯೋಚಿಸಿ ಹೇಳು!
12031012a ದೇವಾನಾಮವಿಹಿಂಸಾಯಾಂ ಯದ್ಭವೇನ್ಮಾನುಷಕ್ಷಮಮ್।
12031012c ತದ್ಗೃಹಾಣ ಮಹಾರಾಜ ಪೂಜಾರ್ಹೋ ನೌ ಮತೋ ಭವಾನ್।।
ಮಹಾರಾಜ! ದೇವತೆಗಳಿಗೆ ಹಿಂಸೆಯಾಗದಂಥಹ ಮತ್ತು ಮನುಷ್ಯರು ನಾಶವಾಗದಂಥಹ ವರವನ್ನು ಪಡೆ! ನೀನು ಪೂಜಾರ್ಹನೆಂದು ನಮ್ಮಿಬ್ಬರ ಮತ!”
12031013 ಸೃಂಜಯ ಉವಾಚ।
12031013a ಪ್ರೀತೌ ಭವಂತೌ ಯದಿ ಮೇ ಕೃತಮೇತಾವತಾ ಮಮ।
12031013c ಏಷ ಏವ ಪರೋ ಲಾಭೋ ನಿರ್ವೃತ್ತೋ ಮೇ ಮಹಾಫಲಃ।।
ಸೃಂಜಯನು ಹೇಳಿದನು: “ನೀವು ಸುಪ್ರೀತರಾಗಿದ್ದೀರಿ ಎನ್ನುವುದರಿಂದಲೇ ನಾನು ಕೃತಕೃತ್ಯನಾಗಿದ್ದೇನೆ. ಇದೇ ನನಗೆ ದೊರಕಿರುವ ಪರಮ ಮಹಾ ಫಲವಾಗಿದೆ!””
12031014 ನಾರದ ಉವಾಚ।
12031014a ತಮೇವಂವಾದಿನಂ ಭೂಯಃ ಪರ್ವತಃ ಪ್ರತ್ಯಭಾಷತ।
12031014c ವೃಣೀಷ್ವ ರಾಜನ್ಸಂಕಲ್ಪೋ ಯಸ್ತೇ ಹೃದಿ ಚಿರಂ ಸ್ಥಿತಃ।।
ನಾರದನು ಹೇಳಿದನು: “ಇದನ್ನೇ ಮತ್ತೆ ಮತ್ತೆ ಹೇಳುತ್ತಿದ್ದ ಅವನಿಗೆ ಪರ್ವತನು ಪುನಃ ಹೇಳಿದನು: “ರಾಜನ್! ನಿನ್ನ ಹೃದಯದಲ್ಲಿ ಬಹುಕಾಲದಿಂದ ಸಂಕಲ್ಪವೇನಿದೆಯೋ ಅದನ್ನೇ ಕೇಳಿಕೋ!”
12031015 ಸೃಂಜಯ ಉವಾಚ 12031015a ಅಭೀಪ್ಸಾಮಿ ಸುತಂ ವೀರಂ ವೀರ್ಯವಂತಂ ದೃಢವ್ರತಮ್।
12031015c ಆಯುಷ್ಮಂತಂ ಮಹಾಭಾಗಂ ದೇವರಾಜಸಮದ್ಯುತಿಮ್।।
ಸೃಂಜಯನು ಹೇಳಿದನು: “ವೀರನೂ, ವೀರ್ಯವಂತನೂ, ದೃಢವ್ರತನೂ, ಆಯುಷ್ಮಂತನೂ, ದೇವರಾಜನ ಸಮದ್ಯುತಿಯೂ ಆದ ಮಹಾಭಾಗ ಪುತ್ರನನ್ನು ಬಯಸುತ್ತೇನೆ!”
12031016 ಪರ್ವತ ಉವಾಚ 12031016a ಭವಿಷ್ಯತ್ಯೇಷ ತೇ ಕಾಮೋ ನ ತ್ವಾಯುಷ್ಮಾನ್ಭವಿಷ್ಯತಿ।
12031016c ದೇವರಾಜಾಭಿಭೂತ್ಯರ್ಥಂ ಸಂಕಲ್ಪೋ ಹ್ಯೇಷ ತೇ ಹೃದಿ।।
ಪರ್ವತನು ಹೇಳಿದನು: “ನಿನ್ನ ಈ ಕಾಮನೆಯು ಈಡೇರುತ್ತದೆ. ಆದರೆ ಅವನು ಆಯುಷ್ಮಾನನಾಗುವುದಿಲ್ಲ. ಏಕೆಂದರೆ ನಿನ್ನ ಹೃದಯದಲ್ಲಿ ದೇವರಾಜನನ್ನು ಪರಾಭವಗೊಳಿಸುವ ಸಂಕಲ್ಪವಿದೆ!
12031017a ಸುವರ್ಣಷ್ಠೀವನಾಚ್ಚೈವ ಸ್ವರ್ಣಷ್ಠೀವೀ ಭವಿಷ್ಯತಿ।
12031017c ರಕ್ಷ್ಯಶ್ಚ ದೇವರಾಜಾತ್ಸ ದೇವರಾಜಸಮದ್ಯುತಿಃ।।
ಸುವರ್ಣಷ್ಠೀವನಾಗಿರುವುದರಿಂದ ಅವನು ಸ್ವರ್ಣಷ್ಠೀವಿ ಎಂದೆನಿಸಿಕೊಳ್ಳುತ್ತಾನೆ. ದೇವರಾಜ ಸಮದ್ಯುತಿಯಾದ ಅವನನ್ನು ದೇವರಾಜನಿಂದ ರಕ್ಷಿಸಿಕೊಳ್ಳಬೇಕು!””
12031018 ನಾರದ ಉವಾಚ।
12031018a ತಚ್ಚ್ರುತ್ವಾ ಸೃಂಜಯೋ ವಾಕ್ಯಂ ಪರ್ವತಸ್ಯ ಮಹಾತ್ಮನಃ।
12031018c ಪ್ರಸಾದಯಾಮಾಸ ತದಾ ನೈತದೇವಂ ಭವೇದಿತಿ।।
ನಾರದನು ಹೇಳಿದನು: “ಮಹಾತ್ಮ ಪರ್ವತನ ಆ ಮಾತನ್ನು ಕೇಳಿದ ಸೃಂಜಯನು “ಹೀಗಾಗಬಾರದು!” ಎಂದು ಪ್ರಸನ್ನಗೊಳಿಸಲು ಪ್ರಾರ್ಥಿಸಿದನು.
12031019a ಆಯುಷ್ಮಾನ್ಮೇ ಭವೇತ್ಪುತ್ರೋ ಭವತಸ್ತಪಸಾ ಮುನೇ।
12031019c ನ ಚ ತಂ ಪರ್ವತಃ ಕಿಂ ಚಿದುವಾಚೇಂದ್ರವ್ಯಪೇಕ್ಷಯಾ।।
“ಮುನೇ! ನಿಮ್ಮ ತಪಸ್ಸಿನಿಂದ ನನ್ನ ಮಗನು ಆಯುಷ್ಮಂತನಾಗಬೇಕು!” ಆದರೂ ಇಂದ್ರನ ಮೇಲಿನ ಗೌರವದಿಂದ ಪರ್ವತನು ಏನನ್ನೂ ಹೇಳಲಿಲ್ಲ.
12031020a ತಮಹಂ ನೃಪತಿಂ ದೀನಮಬ್ರುವಂ ಪುನರೇವ ತು।
12031020c ಸ್ಮರ್ತವ್ಯೋಽಹಂ ಮಹಾರಾಜ ದರ್ಶಯಿಷ್ಯಾಮಿ ತೇ ಸ್ಮೃತಃ।।
ದೀನನಾಗಿದ್ದ ಆ ನೃಪತಿಗೆ ನಾನು ಪುನಃ ಹೇಳಿದೆನು: “ಮಹಾರಾಜ! ನನ್ನನ್ನು ಸ್ಮರಿಸಿಕೋ! ಸ್ಮರಿಸಿದಾಗಲೆಲ್ಲಾ ನಾನು ನಿನಗೆ ಕಾಣಿಸಿಕೊಳ್ಳುತ್ತೇನೆ!
12031021a ಅಹಂ ತೇ ದಯಿತಂ ಪುತ್ರಂ ಪ್ರೇತರಾಜವಶಂ ಗತಮ್।
12031021c ಪುನರ್ದಾಸ್ಯಾಮಿ ತದ್ರೂಪಂ ಮಾ ಶುಚಃ ಪೃಥಿವೀಪತೇ।।
ಪೃಥಿವೀಪತೇ! ಪ್ರೇತರಾಜನ ವಶನಾಗುವ ನಿನ್ನ ಪ್ರಿಯಪುತ್ರನನ್ನು ಅದೇ ರೂಪದಲ್ಲಿ ಪುನಃ ನಿನಗೆ ದೊರಕಿಸಿಕೊಡುತ್ತೇನೆ. ಶೋಕಿಸದಿರು!”
12031022a ಏವಮುಕ್ತ್ವಾ ತು ನೃಪತಿಂ ಪ್ರಯಾತೌ ಸ್ವೋ ಯಥೇಪ್ಸಿತಮ್।
12031022c ಸೃಂಜಯಶ್ಚ ಯಥಾಕಾಮಂ ಪ್ರವಿವೇಶ ಸ್ವಮಂದಿರಮ್।।
ನೃಪತಿಗೆ ಹೀಗೆ ಹೇಳಿ ನಾವಿಬ್ಬರೂ ಬೇಕಾದಲ್ಲಿಗೆ ಹೊರಟುಹೋದೆವು. ಸೃಂಜಯನೂ ಕೂಡ ಇಚ್ಛಾನುಸಾರವಾಗಿ ತನ್ನ ಅರಮನೆಯನ್ನು ಪ್ರವೇಶಿಸಿದನು.
12031023a ಸೃಂಜಯಸ್ಯಾಥ ರಾಜರ್ಷೇಃ ಕಸ್ಮಿಂಶ್ಚಿತ್ಕಾಲಪರ್ಯಯೇ।
12031023c ಜಜ್ಞೇ ಪುತ್ರೋ ಮಹಾವೀರ್ಯಸ್ತೇಜಸಾ ಪ್ರಜ್ವಲನ್ನಿವ।।
ಕೆಲವು ಸಮಯವು ಕಳೆಯಲು ಆ ರಾಜರ್ಷಿ ಸೃಂಜಯನಿಗೆ ತೇಜಸ್ಸಿನಿಂದ ಪ್ರಜ್ವಲಿಸುತ್ತಿರುವಂಥಹ ಮಹಾವೀರ್ಯ ಪುತ್ರನು ಜನಿಸಿದನು.
12031024a ವವೃಧೇ ಸ ಯಥಾಕಾಲಂ ಸರಸೀವ ಮಹೋತ್ಪಲಮ್।
12031024c ಬಭೂವ ಕಾಂಚನಷ್ಠೀವೀ ಯಥಾರ್ಥಂ ನಾಮ ತಸ್ಯ ತತ್।।
ಸರೋವರದಲ್ಲಿ ನೈದಿಲೆಯು ಹೇಗೋ ಹಾಗೆ ಸಮಯಹೋದಂತೆ ಅವನು ಬೆಳೆಯತೊಡಗಿದನು. ಅವನ ಹೆಸರಿನ ಯಥಾರ್ಥದಂತೆ ಅವನು ಸುವರ್ಣವನ್ನೇ ಉಗುಳುತ್ತಿದ್ದನು.
12031025a ತದದ್ಭುತತಮಂ ಲೋಕೇ ಪಪ್ರಥೇ ಕುರುಸತ್ತಮ।
12031025c ಬುಬುಧೇ ತಚ್ಚ ದೇವೇಂದ್ರೋ ವರದಾನಂ ಮಹಾತ್ಮನೋಃ।।
ಕುರುಸತ್ತಮ! ಆ ಅದ್ಭುತವು ಲೋಕದಲ್ಲಿಯೇ ಪ್ರಚಾರವಾಯಿತು. ಮಹಾತ್ಮರ ವರದಾನದಿಂದ ಅವನು ಹುಟ್ಟಿರುವನೆಂದು ದೇವೇಂದ್ರನೂ ತಿಳಿದುಕೊಂಡನು.
12031026a ತತಸ್ತ್ವಭಿಭವಾದ್ಭೀತೋ ಬೃಹಸ್ಪತಿಮತೇ ಸ್ಥಿತಃ।
12031026c ಕುಮಾರಸ್ಯಾಂತರಪ್ರೇಕ್ಷೀ ಬಭೂವ ಬಲವೃತ್ರಹಾ।।
ಬೃಹಸ್ಪತಿಯ ಸಲಹೆಯಂತೆ ನಡೆದುಕೊಳ್ಳುತ್ತಿದ್ದ ಆ ಬಲವೃತ್ರಹನು ಕುಮಾರ ಸ್ವರ್ಣಷ್ಠೀವಿಯ ಭಯದಿಂದ ಅವನನ್ನು ವಧಿಸಲು ಅವಕಾಶವನ್ನು ಹುಡುಕುತ್ತಿದ್ದನು.
12031027a ಚೋದಯಾಮಾಸ ವಜ್ರಂ ಸ ದಿವ್ಯಾಸ್ತ್ರಂ ಮೂರ್ತಿಸಂಸ್ಥಿತಮ್।
12031027c ವ್ಯಾಘ್ರೋ ಭೂತ್ವಾ ಜಹೀಮಂ ತ್ವಂ ರಾಜಪುತ್ರಮಿತಿ ಪ್ರಭೋ।।
ಪ್ರಭು ಇಂದ್ರನು ಮೂರ್ತಿಮತ್ತಾಗಿ ನಿಂತಿದ್ದ ದಿವ್ಯಾಸ್ತ್ರ ವಜ್ರಕ್ಕೆ “ವ್ಯಾಘ್ರನಾಗಿ ಆ ರಾಜಪುತ್ರನನ್ನು ಸಂಹರಿಸು!” ಎಂದು ಪ್ರಚೋದಿಸಿದನು.
12031028a ವಿವೃದ್ಧಃ ಕಿಲ ವೀರ್ಯೇಣ ಮಾಮೇಷೋಽಭಿಭವಿಷ್ಯತಿ।
12031028c ಸೃಂಜಯಸ್ಯ ಸುತೋ ವಜ್ರ ಯಥೈನಂ ಪರ್ವತೋ ದದೌ।।
“ವಜ್ರ! ವೀರ್ಯದಿಂದ ಪ್ರವೃದ್ಧನಾಗುತ್ತಿರುವ ಸೃಂಜಯನ ಈ ಮಗನು ನನ್ನನ್ನೇ ಪರಾಜಯಗೊಳಿಸುತ್ತಾನೆ. ಹಾಗೆಯೇ ಪರ್ವತನು ವರವನ್ನಿತ್ತಿದ್ದನು!”
12031029a ಏವಮುಕ್ತಸ್ತು ಶಕ್ರೇಣ ವಜ್ರಃ ಪರಪುರಂಜಯಃ।
12031029c ಕುಮಾರಸ್ಯಾಂತರಪ್ರೇಕ್ಷೀ ನಿತ್ಯಮೇವಾನ್ವಪದ್ಯತ।।
ಶಕ್ರನು ಹೀಗೆ ಹೇಳಲು ಪರಪುರಂಜಯ ವಜ್ರವು ಕುಮಾರನನ್ನು ಸಂಹರಿಸುವ ಸಲುವಾಗಿ ಸಮಯವನ್ನೇ ಕಾಯುತ್ತಾ ನಿತ್ಯವೂ ಅವನನ್ನು ಅನುಸರಿಸಿಯೇ ಇರುತ್ತಿತ್ತು.
12031030a ಸೃಂಜಯೋಽಪಿ ಸುತಂ ಪ್ರಾಪ್ಯ ದೇವರಾಜಸಮದ್ಯುತಿಮ್।
12031030c ಹೃಷ್ಟಃ ಸಾಂತಃಪುರೋ ರಾಜಾ ವನನಿತ್ಯೋಽಭವತ್ತದಾ।।
ಸೃಂಜಯನೂ ಕೂಡ ಕಾಂತಿಯಲ್ಲಿ ದೇವರಾಜನ ಸಮನಾಗಿದ್ದ ಪುತ್ರನನ್ನು ಪಡೆದು ಪರಮ ಹೃಷ್ಟನಾಗಿ ಪತ್ನಿಯೊಡನೆ ಯಾವಾಗಲೂ ವನದಲ್ಲಿಯೇ ಇರುತ್ತಿದ್ದನು.
12031031a ತತೋ ಭಾಗೀರಥೀತೀರೇ ಕದಾ ಚಿದ್ವನನಿರ್ಝರೇ।
12031031c ಧಾತ್ರೀದ್ವಿತೀಯೋ ಬಾಲಃ ಸ ಕ್ರೀಡಾರ್ಥಂ ಪರ್ಯಧಾವತ।।
ಹೀಗಿರಲು ಒಮ್ಮೆ ಭಾಗಿರಥೀತೀರದ ನಿರ್ಜನ ಪ್ರದೇಶದಲ್ಲಿ ದಾಯಿಯೊಬ್ಬಳೊಡನಿದ್ದ ಬಾಲಕನು ಅತ್ತಿತ್ತ ಓಡುತ್ತಾ ಆಟವಾಡುತ್ತಿದ್ದನು.
12031032a ಪಂಚವರ್ಷಕದೇಶೀಯೋ ಬಾಲೋ ನಾಗೇಂದ್ರವಿಕ್ರಮಃ।
12031032c ಸಹಸೋತ್ಪತಿತಂ ವ್ಯಾಘ್ರಮಾಸಸಾದ ಮಹಾಬಲಃ।।
ಐದುವರ್ಷದ ಬಾಲಕನಾಗಿದ್ದರೂ ಆನೆಯಂತೆ ವಿಕ್ರಮಿಯಾಗಿದ್ದ ಆ ಮಹಾಬಲಶಾಲಿಯ ಮೇಲೆ ಒಮ್ಮೆಲೇ ಹುಲಿಯೊಂದು ಎರಗಿ ಬಿದ್ದಿತು.
12031033a ತೇನ ಚೈವ ವಿನಿಷ್ಪಿಷ್ಟೋ ವೇಪಮಾನೋ ನೃಪಾತ್ಮಜಃ।
12031033c ವ್ಯಸುಃ ಪಪಾತ ಮೇದಿನ್ಯಾಂ ತತೋ ಧಾತ್ರೀ ವಿಚುಕ್ರುಶೇ।।
ತನ್ನನ್ನು ನೋಡಿ ನಡುಗುತ್ತಿದ್ದ ಆ ರಾಜಕುಮಾರನನ್ನು ಹುಲಿಯು ಅಗೆಯಲು ಪ್ರಾಣಶೂನ್ಯನಾದ ಬಾಲಕನು ನೆಲದ ಮೇಲೆ ಬಿದ್ದನು. ದಾಯಿಯು ಗಟ್ಟಿಯಾಗಿ ಚೀರಿಕೊಂಡಳು.
12031034a ಹತ್ವಾ ತು ರಾಜಪುತ್ರಂ ಸ ತತ್ರೈವಾಂತರಧೀಯತ।
12031034c ಶಾರ್ದೂಲೋ ದೇವರಾಜಸ್ಯ ಮಾಯಯಾಂತರ್ಹಿತಸ್ತದಾ।।
ದೇವರಾಜನ ಮಾಯೆಯಿಂದ ಬಂದಿದ್ದ ಆ ಹುಲಿಯು ರಾಜಪುತ್ರನನ್ನು ಸಂಹರಿಸಿ ಅಲ್ಲಿಯೇ ಅಂತರ್ಧಾನವಾಯಿತು.
12031035a ಧಾತ್ರ್ಯಾಸ್ತು ನಿನದಂ ಶ್ರುತ್ವಾ ರುದತ್ಯಾಃ ಪರಮಾರ್ತವತ್।
12031035c ಅಭ್ಯಧಾವತ ತಂ ದೇಶಂ ಸ್ವಯಮೇವ ಮಹೀಪತಿಃ।।
ಪರಮ ಆರ್ತಳಾಗಿ ರೋದಿಸುತ್ತಿರುವ ದಾಯಿಯ ನಿನಾದವನ್ನು ಕೇಳಿ ಸ್ವಯಂ ಮಹೀಪತಿಯೇ ಆ ಸ್ಥಳಕ್ಕೆ ಧಾವಿಸಿ ಬಂದನು.
12031036a ಸ ದದರ್ಶ ಗತಾಸುಂ ತಂ ಶಯಾನಂ ಪೀತಶೋಣಿತಮ್।
12031036c ಕುಮಾರಂ ವಿಗತಾನಂದಂ ನಿಶಾಕರಮಿವ ಚ್ಯುತಮ್।।
ಅಸುನೀಗಿ ಮಲಗಿದ್ದ, ರಕ್ತವನ್ನು ಕಳೆದುಕೊಂಡಿದ್ದ, ಆಕಾಶದಿಂದ ಕೆಳಬಿದ್ದ ಚಂದ್ರನಂತೆ ಆನಂದವನ್ನು ಕಳೆದುಕೊಂಡಿದ್ದ ಮಗನನ್ನು ರಾಜನು ನೋಡಿದನು.
12031037a ಸ ತಮುತ್ಸಂಗಮಾರೋಪ್ಯ ಪರಿಪೀಡಿತವಕ್ಷಸಮ್।
12031037c ಪುತ್ರಂ ರುಧಿರಸಂಸಿಕ್ತಂ ಪರ್ಯದೇವಯದಾತುರಃ।।
ಪರಿಪೀಡಿತ ಹೃದಯನಾಗಿ ಅವನು ರಕ್ತದಿಂದ ತೋಯ್ದುಹೋಗಿದ್ದ ಪುತ್ರನನ್ನು ತನ್ನ ತೊಡೆಯಮೇಲಿರಿಸಿಕೊಂಡು ಆತುರನಾಗಿ ಪರಿತಪಿಸಿದನು.
12031038a ತತಸ್ತಾ ಮಾತರಸ್ತಸ್ಯ ರುದಂತ್ಯಃ ಶೋಕಕರ್ಶಿತಾಃ।
12031038c ಅಭ್ಯಧಾವಂತ ತಂ ದೇಶಂ ಯತ್ರ ರಾಜಾ ಸ ಸೃಂಜಯಃ।।
ಅವನ ತಾಯಂದಿರೂ ಕೂಡ ಶೋಕಕರ್ಶಿತರಾಗಿ ರೋದಿಸುತ್ತಾ ರಾಜಾ ಸೃಂಜಯನಿದ್ದ ಪ್ರದೇಶಕ್ಕೆ ಓಡಿ ಬಂದರು.
12031039a ತತಃ ಸ ರಾಜಾ ಸಸ್ಮಾರ ಮಾಮಂತರ್ಗತಮಾನಸಃ।
12031039c ತಚ್ಚಾಹಂ ಚಿಂತಿತಂ ಜ್ಞಾತ್ವಾ ಗತವಾಂಸ್ತಸ್ಯ ದರ್ಶನಮ್।।
ಆಗ ಆ ರಾಜನು ತನ್ನ ಮನಸ್ಸಿನಲ್ಲಿಯೇ ನನ್ನನ್ನು ಸ್ಮರಿಸಿದನು. ಅವನು ನನ್ನನ್ನೇ ಧ್ಯಾನಿಸುತ್ತಿದ್ದಾನೆಂದು ತಿಳಿದು ನಾನು ಅಲ್ಲಿಗೆ ಹೋಗಿ ದರ್ಶನ ನೀಡಿದೆನು.
12031040a ಸ ಮಯೈತಾನಿ ವಾಕ್ಯಾನಿ ಶ್ರಾವಿತಃ ಶೋಕಲಾಲಸಃ।
12031040c ಯಾನಿ ತೇ ಯದುವೀರೇಣ ಕಥಿತಾನಿ ಮಹೀಪತೇ।।
ಮಹೀಪತೇ! ಯದುವೀರನು ಈ ಮೊದಲು ನಿನಗೆ ಏನು ಹೇಳಿದ್ದನೋ ಅದನ್ನು ನಾನು ಶೋಕಲಾಲಸನಾದ ಅವನಿಗೆ ಹೇಳಿದೆನು.
12031041a ಸಂಜೀವಿತಶ್ಚಾಪಿ ಮಯಾ ವಾಸವಾನುಮತೇ ತದಾ।
12031041c ಭವಿತವ್ಯಂ ತಥಾ ತಚ್ಚ ನ ತಚ್ಚಕ್ಯಮತೋಽನ್ಯಥಾ।।
ವಾಸವನ ಅನುಮತಿಯನ್ನು ಪಡೆದು ನಾನು ಆ ಮಗುವನ್ನು ಪುನಃ ಬದುಕಿಸಿದೆ ಕೂಡ. ಅದು ಹಾಗೆಯೇ ಆಗಬೇಕಾಗಿದ್ದಿತು. ಇದನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಾಗಿರಲಿಲ್ಲ.
12031042a ಅತ ಊರ್ಧ್ವಂ ಕುಮಾರಃ ಸ ಸ್ವರ್ಣಷ್ಠೀವೀ ಮಹಾಯಶಾಃ।
12031042c ಚಿತ್ತಂ ಪ್ರಸಾದಯಾಮಾಸ ಪಿತುರ್ಮಾತುಶ್ಚ ವೀರ್ಯವಾನ್।।
ಬಳಿಕ ಮಹಾಯಶೋವಂತನೂ ವೀರ್ಯವಂತನೂ ಆದ ಕುಮಾರ ಸ್ವರ್ಣಷ್ಠೀವಿಯು ತನ್ನ ತಂದೆ-ತಾಯಿಗಳ ಚಿತ್ತವನ್ನು ಪ್ರಸನ್ನಗೊಳಿಸಿದನು.
12031043a ಕಾರಯಾಮಾಸ ರಾಜ್ಯಂ ಸ ಪಿತರಿ ಸ್ವರ್ಗತೇ ವಿಭುಃ।
12031043c ವರ್ಷಾಣಾಮೇಕಶತವತ್ಸಹಸ್ರಂ ಭೀಮವಿಕ್ರಮಃ।।
ತನ್ನ ತಂದೆಯು ಸ್ವರ್ಗಗತನಾದ ನಂತರ ಆ ಭೀಮವಿಕ್ರಮಿ ವಿಭುವು ಹನ್ನೊಂದು ಸಾವಿರ ವರ್ಷಗಳ ಪರ್ಯಂತ ರಾಜ್ಯಭಾರವನ್ನು ಮಾಡಿದನು.
12031044a ತತ ಇಷ್ಟ್ವಾ ಮಹಾಯಜ್ಞೈರ್ಬಹುಭಿರ್ಭೂರಿದಕ್ಷಿಣೈಃ।
12031044c ತರ್ಪಯಾಮಾಸ ದೇವಾಂಶ್ಚ ಪಿತೃಂಶ್ಚೈವ ಮಹಾದ್ಯುತಿಃ।।
ಆ ಮಹಾದ್ಯುತಿಯು ಆಗ ಅನೇಕ ಭೂರಿದಕ್ಷಿಣೆಗಳಿಂದ ಕೂಡಿದ ಮಹಾಯಜ್ಞಗಳಿಂದ ದೇವತೆಗಳನ್ನೂ ಪಿತೃಗಳನ್ನೂ ತೃಪ್ತಿಪಡಿಸಿದನು.
12031045a ಉತ್ಪಾದ್ಯ ಚ ಬಹೂನ್ಪುತ್ರಾನ್ಕುಲಸಂತಾನಕಾರಿಣಃ।
12031045c ಕಾಲೇನ ಮಹತಾ ರಾಜನ್ಕಾಲಧರ್ಮಮುಪೇಯಿವಾನ್।।
ರಾಜನ್! ಕುಲದ ಸಂತಾನವನ್ನು ಮುಂದುವರಿಸಿಕೊಂಡು ಹೋಗುವ ಅನೇಕ ಪುತ್ರರನ್ನು ಹುಟ್ಟಿಸಿ ದೀರ್ಘ ಸಮಯದ ನಂತರ ಅವನು ಕಾಲಧರ್ಮಕ್ಕೊಳಗಾದನು.
12031046a ಸ ತ್ವಂ ರಾಜೇಂದ್ರ ಸಂಜಾತಂ ಶೋಕಮೇತನ್ನಿವರ್ತಯ।
12031046c ಯಥಾ ತ್ವಾಂ ಕೇಶವಃ ಪ್ರಾಹ ವ್ಯಾಸಶ್ಚ ಸುಮಹಾತಪಾಃ।।
ರಾಜೇಂದ್ರ! ಕೇಶವ ಮತ್ತು ಮಹಾತಪಸ್ವಿ ವ್ಯಾಸರು ಹೇಳಿದಂತೆ ನೀನೂ ಕೂಡ ನಿನ್ನಲ್ಲಿ ಉಂಟಾಗಿರುವ ಈ ಶೋಕದಿಂದ ಹೊರಟು ಬಾ!
12031047a ಪಿತೃಪೈತಾಮಹಂ ರಾಜ್ಯಮಾಸ್ಥಾಯ ದುರಮುದ್ವಹ।
12031047c ಇಷ್ಟ್ವಾ ಪುಣ್ಯೈರ್ಮಹಾಯಜ್ಞೈರಿಷ್ಟಾಽಲ್ಲೋಕಾನವಾಪ್ಸ್ಯಸಿ।।
ಪಿತೃಪಿತಾಮಹರ ಈ ರಾಜ್ಯದಲ್ಲಿ ಅಭಿಷಿಕ್ತನಾಗಿ ರಾಜ್ಯಭಾರನಡೆಸು. ಪುಣ್ಯಕರವಾದ ಮಹಾ ಯಜ್ಞ-ಇಷ್ಟಿಗಳಿಂದ ನಿನಗಿಷ್ಟವಾದ ಲೋಕಗಳನ್ನು ಪಡೆಯುತ್ತೀಯೆ!””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ಸ್ವರ್ಣಸ್ಠೀವಿಸಂಭವೋಪಾಖ್ಯಾನೇ ಏಕತ್ರಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಸ್ವರ್ಣಸ್ಠೀವಿಸಂಭವೋಪಾಖ್ಯಾನ ಎನ್ನುವ ಮೂವತ್ತೊಂದನೇ ಅಧ್ಯಾಯವು.